062 ವೃಷಸೇನವಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ಕರ್ಣವಧ ಪರ್ವ

ಅಧ್ಯಾಯ 62

ಸಾರ

ತನ್ನನ್ನು ಆಕ್ರಮಣಿಸಿದ ಧೃತರಾಷ್ಟ್ರನ ೧೦ ಮಕ್ಕಳನ್ನು ಭೀಮಸೇನನು ಸಂಹರಿಸಿದುದು (1-8). ಧನಂಜಯನನ್ನು ಎದುರಿಸೆಂದು ಶಲ್ಯನು ಕರ್ಣನಿಗೆ ಸೂಚಿಸುವುದು (9-15). ವೃಷಸೇನನು ಭೀಮಸೇನನನ್ನು ಆಕ್ರಮಣಿಸಲು ನಕುಲನು ಅವನನ್ನು ಎದುರಿಸಿದುದು (16-32). ನಕುಲನು ಪೀಡೆಗೊಳಗಾದುದನ್ನು ನೋಡಿ ಅರ್ಜುನನು ಅವನ ಬೆಂಬಲಕ್ಕೆ ಬಂದು ವೃಷಸೇನನನ್ನು ಸಂಹರಿಸಿದುದು (33-62).

08062001 ಸಂಜಯ ಉವಾಚ।
08062001a ದುಃಶಾಸನೇ ತು ನಿಹತೇ ಪುತ್ರಾಸ್ತವ ಮಹಾರಥಾಃ।
08062001c ಮಹಾಕ್ರೋಧವಿಷಾ ವೀರಾಃ ಸಮರೇಷ್ವಪಲಾಯಿನಃ।
08062001e ದಶ ರಾಜನ್ಮಹಾವೀರ್ಯೋ ಭೀಮಂ ಪ್ರಾಚ್ಚಾದಯಂ ಶರೈಃ।।

ಸಂಜಯನು ಹೇಳಿದನು: “ರಾಜನ್! ದುಃಶಾಸನನು ಹತನಾಗಲು ನಿನ್ನ ಹತ್ತು ಸಮರದಲ್ಲಿ ಪಲಾಯನಗೈಯದ ಮಹಾಕ್ರೋಧವಿಷ ವೀರ ಮಹಾರಥ ಮಕ್ಕಳು ಮಹಾವೀರ್ಯದಿಂದ ಭೀಮಸೇನನನ್ನು ಶರಗಳಿಂದ ಮುಚ್ಚಿದರು.

08062002a ಕವಚೀ ನಿಷಂಗೀ ಪಾಶೀ ದಂಡಧಾರೋ ಧನುರ್ಧರಃ।
08062002c ಅಲೋಲುಪಃ ಶಲಃ ಸಂಧೋ ವಾತವೇಗಸುವರ್ಚಸೌ।।
08062003a ಏತೇ ಸಮೇತ್ಯ ಸಹಿತಾ ಭ್ರಾತೃವ್ಯಸನಕರ್ಶಿತಾಃ।
08062003c ಭೀಮಸೇನಂ ಮಹಾಬಾಹುಂ ಮಾರ್ಗಣೈಃ ಸಮವಾರಯನ್।।

ಭ್ರಾತೃವ್ಯಸನದಿಂದ ಪೀಡಿತರಾಗಿದ್ದ ಕವಚಿ, ನಿಷಂಗಿ, ಪಾಶೀ, ದಂಡಧಾರ, ಧನುರ್ಧರ, ಅಲೋಲುಪ, ಶಲ, ಸಂಧ, ವಾತವೇಗ ಮತ್ತು ಸುವರ್ಚಸ ಇವರು ಒಟ್ಟಾಗಿ ಮಹಾಬಾಹು ಭೀಮಸೇನನನ್ನು ಮಾರ್ಗಣಗಳಿಂದ ಮುತ್ತಿಗೆ ಹಾಕಿದರು.

08062004a ಸ ವಾರ್ಯಮಾಣೋ ವಿಶಿಖೈಃ ಸಮಂತಾತ್ತೈರ್ಮಹಾರಥೈಃ।
08062004c ಭೀಮಃ ಕ್ರೋಧಾಭಿರಕ್ತಾಕ್ಷಃ ಕ್ರುದ್ಧಃ ಕಾಲ ಇವಾಬಭೌ।।

ಮಹಾರಥರ ವಿಶಿಖಗಳಿಂದ ಹೀಗೆ ಎಲ್ಲ ಕಡೆಗಳಿಂದ ತಡೆಯಲ್ಪಟ್ಟ ಭೀಮನು ಕ್ರೋಧದಿಂದ ರಕ್ತಾಕ್ಷನಾಗಿ ಕ್ರುದ್ಧನಾದ ಕಾಲನಂತೆಯೇ ಆದನು.

08062005a ತಾಂಸ್ತು ಭಲ್ಲೈರ್ಮಹಾವೇಗೈರ್ದಶಭಿರ್ದಶಭಿಃ ಶಿತೈಃ।
08062005c ರುಕ್ಮಾಂಗದೋ ರುಕ್ಮಪುಂಖೈಃ ಪಾರ್ಥೋ ನಿನ್ಯೇ ಯಮಕ್ಷಯಂ।।

ರುಕ್ಮಾಂಗದ ರುಕ್ಮಪುಂಖಗಳುಳ್ಳ ಹತ್ತು ಹತ್ತು ಮಹಾವೇಗಗಳುಳ್ಳ ನಿಶಿತ ಭಲ್ಲಗಳಿಂದ ಅವರನ್ನು ಪಾರ್ಥನು ಯಮಕ್ಷಯಕ್ಕೆ ಕಳುಹಿಸಿದನು.

08062006a ಹತೇಷು ತೇಷು ವೀರೇಷು ಪ್ರದುದ್ರಾವ ಬಲಂ ತವ।
08062006c ಪಶ್ಯತಃ ಸೂತಪುತ್ರಸ್ಯ ಪಾಂಡವಸ್ಯ ಭಯಾರ್ದಿತಂ।।

ಆ ವೀರರು ಹತರಾಗಲು ಸೂತಪುತ್ರ ಮತ್ತು ಪಾಂಡವರು ನೋಡುತ್ತಿದ್ದಂತೆಯೇ ಭಯಾರ್ದಿತವಾದ ನಿನ್ನ ಸೇನೆಯು ಪಲಾಯನಗೈಯಿತು.

08062007a ತತಃ ಕರ್ಣೋ ಮಹಾರಾಜ ಪ್ರವಿವೇಶ ಮಹಾರಣಂ।
08062007c ದೃಷ್ಟ್ವಾ ಭೀಮಸ್ಯ ವಿಕ್ರಾಂತಮತಕಸ್ಯ ಪ್ರಜಾಸ್ವಿವ।।

ಮಹಾರಾಜ! ಆಗ ಪ್ರಜೆಗಳ ಅಂತಕನಂತಿದ್ದ ಭೀಮನ ವಿಕ್ರಾಂತವನ್ನು ನೋಡಿ ಕರ್ಣನು ಮಹಾರಣವನ್ನು ಪ್ರವೇಶಿಸಿದನು.

08062008a ತಸ್ಯ ತ್ವಾಕಾರಭಾವಜ್ಞಃ ಶಲ್ಯಃ ಸಮಿತಿಶೋಭನಃ।
08062008c ಉವಾಚ ವಚನಂ ಕರ್ಣಂ ಪ್ರಾಪ್ತಕಾಲಮರಿಂದಮ।
08062008e ಮಾ ವ್ಯಥಾಂ ಕುರು ರಾಧೇಯ ನೈತತ್ತ್ವಯ್ಯುಪಪದ್ಯತೇ।।

ಅರಿಂದಮ! ಅವನ ಆಕಾರಭಾವವನ್ನು ತಿಳಿದ ಸಮಿತಿಶೋಭನ ಶಲ್ಯನು ಇದು ಸರಿಯಾದ ಕಾಲವೆಂದು ತಿಳಿದು ಕರ್ಣನಿಗೆ ಹೇಳಿದನು: “ರಾಧೇಯ! ವ್ಯಥೆಪಡಬೇಡ! ಇದು ನಿನಗೆ ಸರಿಗಾಣುವುದಿಲ್ಲ!

08062009a ಏತೇ ದ್ರವಂತಿ ರಾಜಾನೋ ಭೀಮಸೇನಭಯಾರ್ದಿತಾಃ।
08062009c ದುರ್ಯೋಧನಶ್ಚ ಸಮ್ಮೂಢೋ ಭ್ರಾತೃವ್ಯಸನದುಃಖಿತಃ।।

ಭೀಮಸೇನನಿಂದ ಭಯಾರ್ದಿತ ರಾಜರು ಇಗೋ ಓಡಿಹೋಗುತ್ತಿದ್ದಾರೆ! ಭ್ರಾತೃವ್ಯಸನದಿಂದ ದುಃಖಿತನಾಗಿ ದುರ್ಯೋಧನನಾದರೋ ಸಮ್ಮೂಢನಾಗಿದ್ದಾನೆ!

08062010a ದುಃಶಾಸನಸ್ಯ ರುಧಿರೇ ಪೀಯಮಾನೇ ಮಹಾತ್ಮನಾ।
08062010c ವ್ಯಾಪನ್ನಚೇತಸಶ್ಚೈವ ಶೋಕೋಪಹತಮನ್ಯವಃ।।
08062011a ದುರ್ಯೋಧನಮುಪಾಸಂತೇ ಪರಿವಾರ್ಯ ಸಮಂತತಃ।
08062011c ಕೃಪಪ್ರಭೃತಯಃ ಕರ್ಣ ಹತಶೇಷಾಶ್ಚ ಸೋದರಾಃ।।

ಕರ್ಣ! ಆ ಮಹಾತ್ಮನು ದುಃಶಾಸನನ ರಕ್ತವನ್ನು ಕುಡಿಯಲು ಶೋಕ-ಕೋಪಗಳಿಂದ ಪೀಡಿತನಾಗಿ, ಚೇತನವನ್ನು ಕಳೆದುಕೊಂಡು ನಡುಗುತ್ತಿರುವ ದುರ್ಯೋಧನನನ್ನು ಕೃಪನೇ ಮೊದಲಾದವರು ಮತ್ತು ಅಳಿದುಳಿದ ಸಹೋದರರು ಎಲ್ಲಕಡೆಗಳಿಂದ ಸುತ್ತುವರೆದು ಉಪಚರಿಸುತ್ತಿದ್ದಾರೆ!

08062012a ಪಾಂಡವಾ ಲಬ್ಧಲಕ್ಷಾಶ್ಚ ಧನಂಜಯಪುರೋಗಮಾಃ।
08062012c ತ್ವಾಮೇವಾಭಿಮುಖಾಃ ಶೂರಾ ಯುದ್ಧಾಯ ಸಮುಪಾಸ್ಥಿತಾಃ।।

ಧನಂಜಯನೇ ಮೊದಲಾದ ಲಬ್ಧಲಕ್ಷ್ಯ ಶೂರ ಪಾಂಡವರು ನಿನ್ನನ್ನೇ ಎದುರಿಸಿ ಯುದ್ಧಮಾಡಲು ಸಿದ್ಧರಾಗಿದ್ದಾರೆ!

08062013a ಸ ತ್ವಂ ಪುರುಷಶಾರ್ದೂಲ ಪೌರುಷೇ ಮಹತಿ ಸ್ಥಿತಃ।
08062013c ಕ್ಷತ್ರಧರ್ಮಂ ಪುರಸ್ಕೃತ್ಯ ಪ್ರತ್ಯುದ್ಯಾಹಿ ಧನಂಜಯಂ।।

ಪುರುಷಶಾರ್ದೂಲ! ಕ್ಷತ್ರಧರ್ಮವನ್ನು ಪಾಲಿಸಿ ಮಹಾಪೌರುಷವಿರುವ ನೀನು ಧನಂಜಯನನ್ನು ಎದುರಿಸು!

08062014a ಭಾರೋ ಹಿ ಧಾರ್ತರಾಷ್ಟ್ರೇಣ ತ್ವಯಿ ಸರ್ವಃ ಸಮರ್ಪಿತಃ।
08062014c ತಮುದ್ವಹ ಮಹಾಬಾಹೋ ಯಥಾಶಕ್ತಿ ಯಥಾಬಲಂ।
08062014e ಜಯೇ ಸ್ಯಾದ್ವಿಪುಲಾ ಕೀರ್ತಿರ್ಧ್ರುವಃ ಸ್ವರ್ಗಃ ಪರಾಜಯೇ।।

ಧಾರ್ತರಾಷ್ಟ್ರರ ಸರ್ವ ಭಾರವೂ ನಿನ್ನ ಮೇಲೆ ಸಮರ್ಪಿತಗೊಂಡಿದೆ! ಮಹಾಬಾಹೋ! ನೀನು ಯಥಾಶಕ್ತಿಯಾಗಿ ಯಥಾಬಲವನ್ನುಪಯೋಗಿಸಿ ಯುದ್ಧಮಾಡು! ಜಯವಾದರೆ ವಿಪುಲ ಕೀರ್ತಿಯು ಮತ್ತು ಪರಾಜಿತನಾದರೆ ಸ್ವರ್ಗವು ನಿಶ್ಚಯವಾಗಿದೆ!

08062015a ವೃಷಸೇನಶ್ಚ ರಾಧೇಯ ಸಂಕ್ರುದ್ಧಸ್ತನಯಸ್ತವ।
08062015c ತ್ವಯಿ ಮೋಹಸಮಾಪನ್ನೇ ಪಾಂಡವಾನಭಿಧಾವತಿ।।

ರಾಧೇಯ! ಸಂಕ್ರುದ್ಧನಾದ ನಿನ್ನ ಮಗ ವೃಷಸೇನನಾದರೋ ನೀನು ಮೋಹಸಂಪನ್ನನಾಗಿರುವುದನ್ನು ನೋಡಿ ಪಾಂಡವರನ್ನು ಎದುರಿಸಿ ಯುದ್ಧಮಾಡುತ್ತಿದ್ದಾನೆ!”

08062016a ಏತಚ್ಛೃತ್ವಾ ತು ವಚನಂ ಶಲ್ಯಸ್ಯಾಮಿತತೇಜಸಃ।
08062016c ಹೃದಿ ಮಾನುಷ್ಯಕಂ ಭಾವಂ ಚಕ್ರೇ ಯುದ್ಧಾಯ ಸುಸ್ಥಿರಂ।।

ಅಮಿತತೇಜಸ್ವಿ ಶಲ್ಯನ ಈ ಮಾತನ್ನು ಕೇಳಿ ಕರ್ಣನ ಹೃದಯದಲ್ಲಿ ಯುದ್ಧದಲ್ಲಿ ಸುಸ್ಥಿರವಾದ ಮಾನುಷ್ಯಕ ಭಾವವುಂಟಾಯಿತು.

08062017a ತತಃ ಕ್ರುದ್ಧೋ ವೃಷಸೇನೋಽಭ್ಯಧಾವದ್ ಆತಸ್ಥಿವಾಂಸಂ ಸ್ವರಥಂ ಹತಾರಿಂ।
08062017c ವೃಕೋದರಂ ಕಾಲಮಿವಾತ್ತದಂಡಂ ಗದಾಹಸ್ತಂ ಪೋಥಮಾನಂ ತ್ವದೀಯಾನ್।।

ಅಗ ಕ್ರುದ್ಧನಾದ ವೃಷಸೇನನು ಸ್ವರಥದಲ್ಲಿ ಕುಳಿತು ಶತ್ರುಗಳನ್ನು ಕೊಲ್ಲುತ್ತಿದ್ದ, ದಂಡವನ್ನು ಹಿಡಿದ ಕಾಲನಂತೆ ಕೈಯಲ್ಲಿ ಗದೆಯನ್ನು ಹಿಡಿದು ನಿನ್ನವರನ್ನು ಸದೆಬಡಿಯುತ್ತಿದ್ದ ವೃಕೋದರನನ್ನು ಆಕ್ರಮಣಿಸಿದನು.

08062018a ತಮಭ್ಯಧಾವನ್ನಕುಲಃ ಪ್ರವೀರೋ ರೋಷಾದಮಿತ್ರಂ ಪ್ರತುದನ್ಪೃಷತ್ಕೈಃ।
08062018c ಕರ್ಣಸ್ಯ ಪುತ್ರಂ ಸಮರೇ ಪ್ರಹೃಷ್ಟಂ ಜಿಷ್ಣುರ್ಜಿಘಾಂಸುರ್ಮಘವೇವ ಜಂಭಂ।।

ಸಮರದಲ್ಲಿ ಪ್ರಹೃಷ್ಟನಾಗಿ ಮುನ್ನುಗ್ಗಿ ಬರುತ್ತಿರುವ ಆ ಅಮಿತ್ರ ಕರ್ಣನ ಪುತ್ರನನ್ನು ಪ್ರವೀರ ನಕುಲನು ರೋಷದಿಂದ ಕೊಂದು ಗೆಲ್ಲಲು ಮಘವತನು ಜಂಭನನ್ನು ಹೇಗೋ ಹಾಗೆ ಹರಿತ ಬಾಣಗಳಿಂದ ತಡೆದನು.

08062019a ತತೋ ಧ್ವಜಂ ಸ್ಫಾಟಿಕಚಿತ್ರಕಂಬುಂ ಚಿಚ್ಚೇದ ವೀರೋ ನಕುಲಃ ಕ್ಷುರೇಣ।
08062019c ಕರ್ಣಾತ್ಮಜಸ್ಯೇಷ್ವಸನಂ ಚ ಚಿತ್ರಂ ಭಲ್ಲೇನ ಜಾಂಬೂನದಪಟ್ಟನದ್ಧಂ।।

ಆಗ ವೀರ ನಕುಲನು ಕ್ಷುರಗಳಿಂದ ಅವನ ಬಣ್ಣದ ಸ್ಪಟಿಕದ ಧ್ವಜಕಂಬವನ್ನು ತುಂಡರಿಸಿದನು. ಹಾಗೇಯೇ ಕರ್ಣಾತ್ಮಜನ ಬಣ್ಣದ ಬಂಗಾರದ ಪಟ್ಟಿಯಿಂದ ಅಲಂಕೃತವಾಗಿದ್ದ ಧನುಸ್ಸನ್ನೂ ತುಂಡರಿಸಿದನು.

08062020a ಅಥಾನ್ಯದಾದಾಯ ಧನುಃ ಸುಶೀಘ್ರಂ ಕರ್ಣಾತ್ಮಜಃ ಪಾಂಡವಮಭ್ಯವಿಧ್ಯತ್।
08062020c ದಿವ್ಯೈರ್ಮಹಾಸ್ತ್ರೈರ್ನಕುಲಂ ಮಹಾಸ್ತ್ರೋ ದುಃಶಾಸನಸ್ಯಾಪಚಿತಿಂ ಯಿಯಾಸುಃ।।

ಕೂಡಲೇ ಕರ್ಣಾತ್ಮಜನು ಸುಶೀಘ್ರವಾಗಿ ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಪಾಂಡವನನ್ನು ಆಕ್ರಮಣಿಸಿದನು. ದುಃಶಾಸನನ ಸೇಡನ್ನು ತೀರಿಸಿಕೊಳ್ಳಲು ಮಹಾಸ್ತ್ರಗಳನ್ನು ತಿಳಿದಿದ್ದ ಅವನು ನಕುಲನನ್ನು ದಿವ್ಯ ಮಹಾಸ್ತ್ರಗಳಿಂದ ಪ್ರಹರಿಸಿದನು.

08062021a ತತಃ ಕ್ರುದ್ಧೋ ನಕುಲಸ್ತಂ ಮಹಾತ್ಮಾ ಶರೈರ್ಮಹೋಲ್ಕಾಪ್ರತಿಮೈರವಿಧ್ಯತ್।
08062021c ದಿವ್ಯೈರಸ್ತ್ರೈರಭ್ಯವಿಧ್ಯಚ್ಚ ಸೋಽಪಿ ಕರ್ಣಸ್ಯ ಪುತ್ರೋ ನಕುಲಂ ಕೃತಾಸ್ತ್ರಃ।।

ಆಗ ಕ್ರುದ್ಧನಾದ ಮಹಾತ್ಮ ನಕುಲನು ಮಹಾ ಉಲ್ಕೆಗಳಸಮಾನ ಶರಗಳಿಂದ ಅವನನ್ನು ಪ್ರತಿಯಾಗಿ ಹೊಡೆದನು. ಕೃತಾಸ್ತ್ರನಾದ ಕರ್ಣನ ಮಗನೂ ಕೂಡ ಅವನನ್ನು ದಿವಾಸ್ತ್ರಗಳಿಂದ ಪ್ರತಿಯಾಗಿ ಪ್ರಹರಿಸಿದನು.

08062022a ಕರ್ಣಸ್ಯ ಪುತ್ರೋ ನಕುಲಸ್ಯ ರಾಜನ್ ಸರ್ವಾನಶ್ವಾನಕ್ಷಿಣೋದುತ್ತಮಾಸ್ತ್ರೈಃ।
08062022c ವನಾಯುಜಾನ್ಸುಕುಮಾರಸ್ಯ ಶುಭ್ರಾನ್ ಅಲಂಕೃತಾಂ ಜಾತರೂಪೇಣ ಶೀಘ್ರಾನ್।।

ರಾಜನ್! ಕರ್ಣನ ಪುತ್ರನು ಶೀಘ್ರವಾಗಿ ಉತ್ತಮ ಅಸ್ತ್ರಗಳಿಂದ ವನಾಯುವಿನಲ್ಲಿ ಹುಟ್ಟಿದ್ದ, ಸುವರ್ಣದ ಬಲೆಗಳಿಂದ ಅಲಂಕೃತಗೊಂಡಿದ್ದ ಸುಕುಮಾರ ನಕುಲನ ಶುಭ್ರ ಕುದುರೆಗಳೆಲ್ಲವನ್ನೂ ಸಂಹರಿಸಿದನು.

08062023a ತತೋ ಹತಾಶ್ವಾದವರುಹ್ಯ ಯಾನಾದ್ ಆದಾಯ ಚರ್ಮ ರುಚಿರಂ ಚಾಷ್ಟಚಂದ್ರಂ।
08062023c ಆಕಾಶಸಂಕಾಶಮಸಿಂ ಗೃಹೀತ್ವಾ ಪೋಪ್ಲೂಯಮಾನಃ ಖಗವಚ್ಚಚಾರ।।

ಆಗ ನಕುಲನು ಅಶ್ವಗಳು ಹತಗೊಂಡ ರಥದಿಂದ ಇಳಿದು ಸುಂದರವಾದ ಎಂಟು ಚಂದ್ರಗಳುಳ್ಳ ಗುರಾಣಿಯನ್ನೂ ಆಕಾಶಸಂಕಾಶದ ಖಡ್ಗವನ್ನೂ ಹಿಡಿದು ಪಕ್ಷಿಯಂತೆ ರಣರಂಗದಲ್ಲಿ ಹಾರಾಡತೊಡಗಿದನು.

08062024a ತತೋಽಮ್ತರಿಕ್ಷೇ ನೃವರಾಶ್ವನಾಗಾಂಶ್ ಚಿಚ್ಚೇದ ಮಾರ್ಗಾನ್ವಿಚರನ್ವಿಚಿತ್ರಾನ್।
08062024c ತೇ ಪ್ರಾಪತನ್ನಸಿನಾ ಗಾಂ ವಿಶಸ್ತಾ ಯಥಾಶ್ವಮೇಧೇ ಪಶವಃ ಶಮಿತ್ರಾ।।

ಅಂತರಿಕ್ಷದ ವಿಚಿತ್ರ ಮಾರ್ಗಗಳಲ್ಲಿ ಸಂಚರಿಸುತ್ತಾ ಅವನು ಅನೇಕ ಕುದುರೆ ಆನೆಗಳನ್ನು ತುಂಡರಿಸಿದನು. ಅಶ್ವಮೇಧದಲ್ಲಿ ಶಮಿತ್ರನ ಪ್ರಹಾರದಿಂದ ಪಶುಗಳು ಹೇಗೋ ಹಾಗೆ ಅವನ ಖಡ್ಗಕ್ಕೆ ಸಿಲುಕಿದ ಪ್ರಾಣಿಗಳು ತೊಪತೊಪನೆ ಕೆಳಗೆ ಬಿದ್ದವು.

08062025a ದ್ವಿಸಾಹಸ್ರಾ ವಿದಿತಾ ಯುದ್ಧಶೌಂಡಾ ನಾನಾದೇಶ್ಯಾಃ ಸುಭೃತಾಃ ಸತ್ಯಸಂಧಾಃ।
08062025c ಏಕೇನ ಶೀಘ್ರಂ ನಕುಲೇನ ಕೃತ್ತಾಃ ಸಾರೇಪ್ಸುನೇವೋತ್ತಮಚಂದನಾಸ್ತೇ।।

ನಕುಲನೊಬ್ಬನಿಂದಲೇ ಆಗ ಶೀಘ್ರವಾಗಿ ವಿಜಯೇಚ್ಛುಗಳಾಗಿ ಉತ್ತಮ ಚಂದನಗಳನ್ನು ಲೇಪಿಸಿಕೊಂಡಿದ್ದ ಎರಡುಸಾವಿರ ನಾನಾದೇಶದ ದಷ್ಟಪುಷ್ಟ ಸತ್ಯಸಂಧ ಯುದ್ಧಶೌಂಡರು ಕತ್ತರಿಸಲ್ಪಟ್ಟು ಕೆಳಗುರುಳಿದರು.

08062026a ತಮಾಪತಂತಂ ನಕುಲಂ ಸೋಽಭಿಪತ್ಯ ಸಮಂತತಃ ಸಾಯಕೈರಭ್ಯವಿಧ್ಯತ್।
08062026c ಸ ತುದ್ಯಮಾನೋ ನಕುಲಃ ಪೃಷತ್ಕೈರ್ ವಿವ್ಯಾಧ ವೀರಂ ಸ ಚುಕೋಪ ವಿದ್ಧಃ।।

ಹಾಗೆ ಸೇನೆಯನ್ನು ಕೆಳಗುರುಳಿಸುತ್ತಿದ್ದ ನಕುಲನನ್ನು ವೃಷಸೇನನು ಎಲ್ಲಕಡೆಗಳಿಂದಲೂ ಸಾಯಕಗಳಿಂದ ಹೊಡೆದು ಆಕ್ರಮಣಿಸಿದನು. ಹಾಗೆ ಗಾಯಗೊಂಡ ನಕುಲನು ಕೋಪದಿಂದ ಆ ವೀರನನ್ನು ಪೃಷತ್ಕಗಳಿಂದ ಹೊಡೆದು ಗಾಯಗೊಳಿಸಿದನು.

08062027a ತಂ ಕರ್ಣಪುತ್ರೋ ವಿಧಮಂತಮೇಕಂ ನರಾಶ್ವಮಾತಂಗರಥಪ್ರವೇಕಾನ್।
08062027c ಕ್ರೀಡಂತಮಷ್ಟಾದಶಭಿಃ ಪೃಷತ್ಕೈರ್ ವಿವ್ಯಾಧ ವೀರಂ ಸ ಚುಕೋಪ ವಿದ್ಧಃ।।

ಒಬ್ಬನೇ ಆಟವಾಡುವವನಂತೆ ನಕುಲನು ಅನೇಕ ಪದಾತಿ, ಕುದುರೆ, ಆನೆ ಮತ್ತು ರಥಗಳನ್ನು ಧ್ವಂಸಮಾಡುತ್ತಿರುವುದನ್ನು ನೋಡಿ ಕರ್ಣಪುತ್ರನು ಕೋಪಗೊಂಡು ವೀರ ನಕುಲನನ್ನು ಹದಿನೆಂಟು ಪೃಷತ್ಕಗಳಿಂದ ಪ್ರಹರಿಸಿದನು.

08062028a ತತೋಽಭ್ಯಧಾವತ್ಸಮರೇ ಜಿಘಾಂಸುಃ ಕರ್ಣಾತ್ಮಜಂ ಪಾಂಡುಸುತೋ ನೃವೀರಃ।
08062028c ತಸ್ಯೇಷುಭಿರ್ವ್ಯಧಮತ್ಕರ್ಣಪುತ್ರೋ ಮಹಾರಣೇ ಚರ್ಮ ಸಹಸ್ರತಾರಂ।।

ಆಗ ಸಮರದಲ್ಲಿ ಕರ್ಣಾತ್ಮಜನನ್ನು ಸಂಹರಿಸಲು ನರವೀರ ಪಾಂಡುಸುತನು ಆಕ್ರಮಣಿಸಲು ಕರ್ಣಪುತ್ರನು ಮಹಾರಣದಲ್ಲಿ ನಕುಲನ ಸಹಸ್ರತಾರೆಗಳುಳ್ಳ ಗುರಾಣಿಯನ್ನು ಬಾಣಗಳಿಂದ ಹೊಡೆದನು.

08062029a ತಸ್ಯಾಯಸಂ ನಿಶಿತಂ ತೀಕ್ಷ್ಣಧಾರಂ ಅಸಿಂ ವಿಕೋಶಂ ಗುರುಭಾರಸಾಹಂ।
08062029c ದ್ವಿಷಚ್ಚರೀರಾಪಹರಂ ಸುಘೋರಂ ಆಧುನ್ವತಃ ಸರ್ಪಮಿವೋಗ್ರರೂಪಂ।।
08062030a ಕ್ಷಿಪ್ರಂ ಶರೈಃ ಷಡ್ಭಿರಮಿತ್ರಸಾಹಶ್ ಚಕರ್ತ ಖಡ್ಗಂ ನಿಶಿತೈಃ ಸುಧಾರೈಃ।
08062030c ಪುನಶ್ಚ ಪೀತೈರ್ನಿಶಿತೈಃ ಪೃಷತ್ಕೈಃ ಸ್ತನಾಂತರೇ ಗಾಢಮಥಾಭ್ಯವಿಧ್ಯತ್।।

ಆಗ ವೃಷಸೇನನು ಕ್ಷಿಪ್ರವಾಗಿ ಒಂದೇ ಧಾರೆಯಂತೆ ಹೋಗುತ್ತಿದ್ದ ಆರು ನಿಶಿತ ಕ್ಷಿಪ್ರ ಶರಗಳಿಂದ ನಕುಲನ ಅತಿಯಾದ ಭಾರವನ್ನೂ ಹೊರಬಲ್ಲ, ಉತ್ತಮ ಕೋಶದೊಳಗಿದ್ದ ಶತ್ರುಗಳ ಶರೀರವನ್ನು ಅಪಹರಿಸಬಲ್ಲ ನಿಶಿತ, ತೀಕ್ಷ್ಣ ಅಲಗುಳ್ಳ ಘೋರ ಸರ್ಪದಂತೆ ಉಗ್ರರೂಪದ ಖಡ್ಗವನ್ನು ತುಂಡರಿಸಿದನು. ಪುನಃ ಹಿತ್ತಾಳೆಯ ನಿಶಿತ ಪೃಷತ್ಕಗಳಿಂದ ಅವನ ಎದೆಗೆ ಗಾಢವಾಗಿ ಪ್ರಹರಿಸಿದನು.

08062031a ಸ ಭೀಮಸೇನಸ್ಯ ರಥಂ ಹತಾಶ್ವೋ ಮಾದ್ರೀಸುತಃ ಕರ್ಣಸುತಾಭಿತಪ್ತಃ।
08062031c ಆಪುಪ್ಲುವೇ ಸಿಂಹ ಇವಾಚಲಾಗ್ರಂ ಸಂಪ್ರೇಕ್ಷಮಾಣಸ್ಯ ಧನಂಜಯಸ್ಯ।।

ಕರ್ಣಸುತನಿಂದ ಪೀಡಿತನಾದ, ಅಶ್ವಗಳನ್ನು ಕಳೆದುಕೊಂಡಿದ್ದ ಮಾದ್ರೀಸುತ ನಕುಲನು, ಧನಂಜಯನು ನೋಡುತ್ತಿದ್ದಂತೆಯೇ, ಭೀಮಸೇನನ ರಥಕ್ಕೆ ಸಿಂಹವು ಗಿರಿಶಿಖರವನ್ನು ಏರುವಂತೆ ಹಾರಿ ಏರಿದನು.

08062032a ನಕುಲಮಥ ವಿದಿತ್ವಾ ಚಿನ್ನಬಾಣಾಸನಾಸಿಂ ವಿರಥಮರಿಶರಾರ್ತಂ ಕರ್ಣಪುತ್ರಾಸ್ತ್ರಭಗ್ನಂ।
08062032c ಪವನಧುತಪತಾಕಾ ಹ್ರಾದಿನೋ ವಲ್ಗಿತಾಶ್ವಾ ವರಪುರುಷನಿಯತ್ತಾಸ್ತೇ ರಥಾಃ ಶೀಘ್ರಮೀಯುಃ।।

ನಕುಲನು ಕರ್ಣಪುತ್ರನಿಂದ ಬಾಣ-ಖಡ್ಗಗಳನ್ನು ಕತ್ತರಿಸಿಕೊಂಡು ವಿರಥನಾಗಿ ಅಸ್ತ್ರಭಗ್ನನಾಗಿ ಅರಿಶರಗಳಿಂದ ಆರ್ತನಾಗಿರುವುದನ್ನು ತಿಳಿದು ಅರ್ಜುನನು ಪವನಧುತಪತಾಕೆಯುಳ್ಳ ಮತ್ತು ವರಪುರುಷನು ನಡೆಸುತ್ತಿದ್ದ ರಥದಲ್ಲಿ ಶೀಘ್ರವಾಗಿ ವೃಷಸೇನನಿದ್ದಲ್ಲಿಗೆ ನಡೆದನು.

08062033a ದ್ರುಪದಸುತವರಿಷ್ಠಾಃ ಪಂಚ ಶೈನೇಯಷಷ್ಠಾ ದ್ರುಪದದುಹಿತೃಪುತ್ರಾಃ ಪಂಚ ಚಾಮಿತ್ರಸಾಹಾಃ।
08062033c ದ್ವಿರದರಥನರಾಶ್ವಾನ್ಸೂದಯಂತಸ್ತ್ವದೀಯಾನ್ ಭುಜಗಪತಿನಿಕಾಶೈರ್ಮಾರ್ಗಣೈರಾತ್ತಶಸ್ತ್ರಾಃ।।

ಐವರು ದ್ರುಪದಸುತವರಿಷ್ಠರು, ಆರನೆಯವನು ಶೈನೇಯ ಸಾತ್ಯಕಿ, ಮತ್ತು ಅಮಿತ್ರರನ್ನು ಎದುರಿಸಬಲ್ಲ ಐವರು ದ್ರುಪದನ ಪುತ್ರಿಯ ಪುತ್ರರು ಈ ಹನ್ನೊಂದು ಮಂದಿ ಪದಾತಿ-ರಥ-ಗಜ-ಅಶ್ವ ಸೇನೆಗಳಿಂದ ಭುಜಗಪತಿಸಮಾನ ಮಾರ್ಗಣಗಳಿಂದ ಮತ್ತು ಅಸ್ತ್ರಗಳಿಂದ ನಿನ್ನವರನ್ನು ಸದೆಬಡಿಯುತ್ತಾ ಆಕ್ರಮಣಿಸಿದರು.

08062034a ಅಥ ತವ ರಥಮುಖ್ಯಾಸ್ತಾನ್ಪ್ರತೀಯುಸ್ತ್ವರಂತೋ ಹೃದಿಕಸುತಕೃಪೌ ಚ ದ್ರೌಣಿದುರ್ಯೋಧನೌ ಚ।
08062034c ಶಕುನಿಶುಕವೃಕಾಶ್ಚ ಕ್ರಾಥದೇವಾವೃಧೌ ಚ ದ್ವಿರದಜಲದಘೋಷೈಃ ಸ್ಯಂದನೈಃ ಕಾರ್ಮುಕೈಶ್ಚ।।

ಕೂಡಲೇ ತ್ವರೆಮಾಡಿ ನಿನ್ನ ರಥಮುಖ್ಯರಾದ ಹೃದಿಕಸುತ ಕೃತವರ್ಮ, ಕೃಪ, ದ್ರೌಣಿ, ದುರ್ಯೋಧನ, ಶಕುನಿಯ ಮಗ ಉಲೂಕ, ವೃಕ, ಕ್ರಾಥ, ಮತ್ತು ದೇವಾವೃಧರು ಮೋಡಗಳಂತೆ ಗುಡುಗುವ ರಥಗಳಲ್ಲಿ ಕುಳಿತು ಕಾರ್ಮುಕಗಳನ್ನು ಹಿಡಿದು ಎದುರಾಗಿ ಬಂದರು.

08062035a ತವ ನರವರವರ್ಯಾಸ್ತಾನ್ದಶೈಕಂ ಚ ವೀರಾನ್ ಪ್ರವರಶರವರಾಗ್ರ್ಯೈಸ್ತಾಡಯಂತೋಽಭ್ಯರುಂದನ್।
08062035c ನವಜಲದಸವರ್ಣೈರ್ಹಸ್ತಿಭಿಸ್ತಾನುದೀಯುರ್ ಗಿರಿಶಿಖರನಿಕಾಶೈರ್ಭೀಮವೇಗೈಃ ಕುಣಿಂದಾಃ।।

ನಿನ್ನಕಡೆಯ ಆ ನರವರರು ಅವರ ಕಡೆಯ ಆ ಹನ್ನೊಂದು ವೀರರನ್ನು ಶ್ರೇಷ್ಠ ಶರವರಾಗ್ರಗಳಿಂದ ಹೊಡೆಯುತ್ತಾ ಅವರ ಗಮನವನ್ನು ಪ್ರತಿರೋಧಿಸಲು, ಅವರನ್ನು ಹೊಸಮೋಡದ ಸಮಾನ ಬಣ್ಣಗಳ ಪರ್ವತಶಿಖರಸದೃಶವಾದ ಭಯಂಕರ ವೇಗವುಳ್ಳ ಆನೆಗಳಮೇಲೆ ಕುಳಿತ ಕುಳಿಂದರು ಆಕ್ರಮಣಿಸಿದರು.

08062036a ಸುಕಲ್ಪಿತಾ ಹೈಮವತಾ ಮದೋತ್ಕಟಾ ರಣಾಭಿಕಾಮೈಃ ಕೃತಿಭಿಃ ಸಮಾಸ್ಥಿತಾಃ।
08062036c ಸುವರ್ಣಜಾಲಾವತತಾ ಬಭುರ್ಗಜಾಸ್ ತಥಾ ಯಥಾ ವೈ ಜಲದಾಃ ಸವಿದ್ಯುತಃ।।

ಹಿಮವತ್ಪರ್ವತ ಪ್ರದೇಶದವುಗಳಾಗಿದ್ದ ಆ ಆನೆಗಳು ಸುಂದರವಾಗಿ ಸಜ್ಜಾಗಿದ್ದವು, ಮದೋದಕವನ್ನು ಸುರಿಸುತ್ತಿದ್ದವು, ರಣದಲ್ಲಿ ಹೋರಾಡಲು ಬಯಸುತ್ತಿದ್ದವು ಮತ್ತು ರಣಕುಶಲಯೋಧರು ಅವುಗಳ ಮೇಲೆ ಕುಳಿತಿದ್ದರು. ಸುವರ್ಣಜಾಲಗಳಿಂದ ಅಲಂಕೃತಗೊಂಡಿದ್ದ ಆ ಆನೆಗಳು ಮಿಂಚಿನಿಂದ ಕೂಡಿದ ಮೇಘಗಳಂತೆ ಕಾಣುತ್ತಿದ್ದವು.

08062037a ಕುಣಿಂದಪುತ್ರೋ ದಶಭಿರ್ಮಹಾಯಸೈಃ ಕೃಪಂ ಸಸೂತಾಶ್ವಮಪೀಡಯದ್ಭೃಶಂ।
08062037c ತತಃ ಶರದ್ವತ್ಸುತಸಾಯಕೈರ್ಹತಃ ಸಹೈವ ನಾಗೇನ ಪಪಾತ ಭೂತಲೇ।।

ಕುಣಿಂದಪುತ್ರನು ಹತ್ತು ಮಹಾಯಸಗಳಿಂದ ಕೃಪನನ್ನು ಅವನ ಸಾರಥಿ-ಕುದುರೆಗಳೊಂದಿಗೆ ಬಹಳವಾಗಿ ಪೀಡಿಸಿದನು. ಆಗ ಶರದ್ವತಸುತನು ಸಾಯಕಗಳಿಂದ ಒಮ್ಮೆಲೇ ಅವನನ್ನು ಆನೆಯೊಂದಿಗೆ ಭೂತಲಕ್ಕೆ ಕೆಡವಿದನು.

08062038a ಕುಣಿಂದಪುತ್ರಾವರಜಸ್ತು ತೋಮರೈರ್ ದಿವಾಕರಾಂಶುಪ್ರತಿಮೈರಯಸ್ಮಯೈಃ।
08062038c ರಥಂ ಚ ವಿಕ್ಷೋಭ್ಯ ನನಾದ ನರ್ದತಸ್ ತತೋಽಸ್ಯ ಗಾಂದಾರಪತಿಃ ಶಿರೋಽಹರತ್।।

ಕುಣಿಂದಪುತ್ರಾವರಜನಾದರೋ ತೋಮರಗಳಿಂದ ಮತ್ತು ದಿವಾಕರನ ಕಿರಣಗಳಂತಿದ್ದ ಅಯಸ್ಮಗಳಿಂದ ಗಾಂಧಾರಪತಿಯ ರಥವನ್ನು ವಿಕ್ಷೋಭಗೊಳಿಸಿ ಗರ್ಜಿಸಲು ಗಾಂಧಾರಪತಿಯು ಅವನ ಶಿರವನ್ನು ಕತ್ತರಿಸಿದನು.

08062039a ತತಃ ಕುಣಿಂದೇಷು ಹತೇಷು ತೇಷ್ವಥ ಪ್ರಹೃಷ್ಟರೂಪಾಸ್ತವ ತೇ ಮಹಾರಥಾಃ।
08062039c ಭೃಶಂ ಪ್ರದಧ್ಮುರ್ಲವಣಾಂಬುಸಂಭವಾನ್ ಪರಾಂಶ್ಚ ಬಾಣಾಸನಪಾಣಯೋಽಭ್ಯಯುಃ।।

ಕುಣಿಂದನು ಹಾಗೆ ಹತರಾಗಲು ಪ್ರಹೃಷ್ಟರೂಪರಾದ ನಿನ್ನ ಮಹಾರಥರು ಸಾಗರೋತ್ಪನ್ನಗೊಂಡ ಶಂಖಗಳನ್ನು ಜೋರಾಗಿ ಊದಿದರು ಮತ್ತು ಅನೇಕ ಬಾಣಗಳಿಂದ ಶತ್ರುಗಳನ್ನು ಪುನಃ ಆಕ್ರಮಣಿಸಿದರು.

08062040a ಅಥಾಭವದ್ಯುದ್ಧಮತೀವ ದಾರುಣಂ ಪುನಃ ಕುರೂಣಾಂ ಸಹ ಪಾಂಡುಸೃಂಜಯೈಃ।
08062040c ಶರಾಸಿಶಕ್ತ್ಯೃಷ್ಟಿಗದಾಪರಶ್ವಧೈರ್ ನರಾಶ್ವನಾಗಾಸುಹರಂ ಭೃಶಾಕುಲಂ।।

ಆಗ ಪಾಂಡು-ಸೃಂಜಯರೊಡನೆ ಕುರುಗಳ, ಬಾಣ-ಖಡ್ಗ-ಶಕ್ತಿ-ಋಷ್ಟಿ-ಗದೆ-ಪರಶುಗಳಿಂದ ಪದಾತಿ-ಕುದುರೆ-ಆನೆಗಳ ಅನೇಕ ಗುಂಪುಗಳ ಸಂಹಾರಕ್ರಿಯೆಯ ಅತೀವ ದಾರುಣ ಯುದ್ಧವು ಪುನಃ ಪ್ರಾರಂಭವಾಯಿತು.

08062041a ರಥಾಶ್ವಮಾತಂಗಪದಾತಿಭಿಸ್ತತಃ ಪರಸ್ಪರಂ ವಿಪ್ರಹತಾಪತನ್ ಕ್ಷಿತೌ।
08062041c ಯಥಾ ಸವಿದ್ಯುತ್ಸ್ತನಿತಾ ಬಲಾಹಕಾಃ ಸಮಾಸ್ಥಿತಾ ದಿಗ್ಭ್ಯ ಇವೋಗ್ರಮಾರುತೈಃ।।

ಉಗ್ರ ಚಂಡಮಾರುತಕ್ಕೆ ಸಿಲುಕಿದ ಮೋಡಗಳು ದಿಕ್ಕುದಿಕ್ಕುಗಳಿಗೆ ಚದುರಿ ಹೋಗುವಂತೆ ಪರಸ್ಪರರನ್ನು ಪ್ರಹರಿಸುತ್ತಿದ್ದ ಪದಾತಿ-ಆನೆ-ಕುದುರೆ-ರಥಗಳು ಅಸುಗಳನ್ನು ತೊರೆದು ತಂಡ ತಂಡವಾಗಿ ರಣದಲ್ಲಿ ಬೀಳುತ್ತಿದ್ದವು.

08062042a ತತಃ ಶತಾನೀಕಹತಾನ್ಮಹಾಗಜಾಂಸ್ ತಥಾ ರಥಾನ್ಪತ್ತಿಗಣಾಂಶ್ಚ ತಾವಕಾನ್।
08062042c ಜಘಾನ ಭೋಜಶ್ಚ ಹಯಾನಥಾಪತನ್ ವಿಶಸ್ತ್ರಕೃತ್ತಾಃ ಕೃತವರ್ಮಣಾ ದ್ವಿಪಾಃ।।

ಆಗ ಶತಾನೀಕನು ನಿನ್ನಕಡೆಯ ಮಹಾಗಜಗಳನ್ನೂ, ಹಾಗೆಯೇ ರಥಗಳನ್ನೂ ಪದಾತಿಗಣಗಳನ್ನೂ ನಾಶಗೊಳಿಸಲು ಭೋಜ ಕೃತವರ್ಮನು ಆನೆ ಕುದುರೆಗಳನ್ನು ಶಸ್ತ್ರದಿಂದ ಕತ್ತರಿಸಿ ಕೆಳಗುರುಳಿಸಿದನು.

08062043a ಅಥಾಪರೇ ದ್ರೌಣಿಶರಾಹತಾ ದ್ವಿಪಾಸ್ ತ್ರಯಃ ಸಸರ್ವಾಯುಧಯೋಧಕೇತವಃ।
08062043c ನಿಪೇತುರುರ್ವ್ಯಾಂ ವ್ಯಸವಃ ಪ್ರಪಾತಿತಾಸ್ ತಥಾ ಯಥಾ ವಜ್ರಹತಾ ಮಹಾಚಲಾಃ।।

ಇನ್ನೊಂದು ಕಡೆ ದ್ರೌಣಿಯು ಆಯುಧ, ಯೋಧ ಮತ್ತು ಧ್ವಜ ಈ ಎಲ್ಲವನ್ನೂ ಸೇರಿಸಿ ಮೂರು ಆನೆಗಳನ್ನು ಶರಗಳಿಂದ ಸಂಹರಿಸಿ ವಜ್ರದಿಂದ ಹತವಾದ ಮಹಾಗಿರಿಗಳಂತೆ ಭೂಮಿಯಮೇಲೆ ಅಲ್ಲಲ್ಲಿ ಬೀಳಿಸಿ ಹರಡಿದನು.

08062044a ಕುಣಿಂದರಾಜಾವರಜಾದನಂತರಃ ಸ್ತನಾಂತರೇ ಪತ್ರಿವರೈರತಾಡಯತ್।
08062044c ತವಾತ್ಮಜಂ ತಸ್ಯ ತವಾತ್ಮಜಃ ಶರೈಃ ಶಿತೈಃ ಶರೀರಂ ಬಿಭಿದೇ ದ್ವಿಪಂ ಚ ತಂ।।

ಅನಂತರ ಕುಣಿಂದರಾಜನ ತಮ್ಮನು ನಿನ್ನ ಮಗನ ವಕ್ಷಃಸ್ಥಳಕ್ಕೆ ಗುರಿಯಿಟ್ಟು ಶ್ರೇಷ್ಠ ಪತ್ರಿಗಳಿಂದ ಹೊಡೆದನು. ಅದಕ್ಕೆ ಪ್ರತಿಯಾಗಿ ನಿನ್ನ ಮಗನು ನಿಶಿತ ಶರಗಳಿಂದ ಅವನ ಶರೀರವನ್ನು ಮತ್ತು ಅವನ ಆನೆಯನ್ನು ಭೀದಿಸಿದನು.

08062045a ಸ ನಾಗರಾಜಃ ಸಹ ರಾಜಸೂನುನಾ ಪಪಾತ ರಕ್ತಂ ಬಹು ಸರ್ವತಃ ಕ್ಷರನ್।
08062045c ಶಚೀಶವಜ್ರಪ್ರಹತೋಽಮ್ಬುದಾಗಮೇ ಯಥಾ ಜಲಂ ಗೈರಿಕಪರ್ವತಸ್ತಥಾ।।

ವರ್ಷಾಕಾಲದಲ್ಲಿ ಇಂದ್ರನ ವಜ್ರಾಯುಧದಿಂದ ಪ್ರಹೃತವಾದ ಗೈರಿಕಪರ್ವತವು ಕೆಂಪುಬಣ್ಣದ ನೀರನ್ನು ಸುರಿಸುವಂತೆ ಆ ಮಹಾಗಜವು ರಾಜಪುತ್ರನೊಂದಿಗೆ ಎಲ್ಲ ಕಡೆ ಗಾಯಗೊಂಡು ರಕ್ತವನ್ನು ಸುರಿಸುತ್ತಾ ಕೆಳಗೆ ಬಿದ್ದಿತು.

08062046a ಕುಣಿಂದಪುತ್ರಪ್ರಹಿತೋಽಪರದ್ವಿಪಃ ಶುಕಂ ಸಸೂತಾಶ್ವರಥಂ ವ್ಯಪೋಥಯತ್।
08062046c ತತೋಽಪತತ್ಕ್ರಾಥಶರಾಭಿದಾರಿತಃ ಸಹೇಶ್ವರೋ ವಜ್ರಹತೋ ಯಥಾ ಗಿರಿಃ।।

ಕುಣಿಂದಪುತ್ರನಿಂದ ಕಳುಹಿಸಲ್ಪಟ್ಟ ಇನ್ನೊಂದು ಆನೆಯು ಸಾರಥಿ-ಕುದುರೆಗಳೊಂದಿಗೆ ಶುಕನ ರಥವನ್ನು ನಾಶಪಡಿಸಿತು. ಆಗ ಕ್ರಾಥನ ಶರಗಳಿಂದ ಪ್ರಹರಿಸಲ್ಪಟ್ಟ ಆ ಆನೆಯು ಒಡೆಯನೊಂದಿಗೆ ವಜ್ರದಿಂದ ಹತವಾದ ಗಿರಿಯಂತೆ ಕೆಳಗೆ ಉರುಳಿ ಬಿದ್ದಿತು.

08062047a ರಥೀ ದ್ವಿಪಸ್ಥೇನ ಹತೋಽಪತಚ್ಚರೈಃ ಕ್ರಾಥಾಧಿಪಃ ಪರ್ವತಜೇನ ದುರ್ಜಯಃ।
08062047c ಸವಾಜಿಸೂತೇಷ್ವಸನಸ್ತಥಾಪತದ್ ಯಥಾ ಮಹಾವಾತಹತೋ ಮಹಾದ್ರುಮಃ।।

ಆದರೆ ಆನೆಯ ಮೇಲೆ ಕುಳಿತಿದ್ದ ಪರ್ವತಪ್ರದೇಶದ ರಥಿಯ ಶರಗಳಿಂದ ಪ್ರಹೃತನಾಗಿ ದುರ್ಜಯ ಕ್ರಾಥಾಧಿಪನು ಕುದುರೆ-ಸಾರಥಿ-ಧನುಸ್ಸು-ಧ್ವಜಗಳೊಡನೆ ಚಂಡಮಾರುತಕ್ಕೆ ಸಿಲುಕಿದ ಮಹಾವೃಕ್ಷದಂತೆ ಕೆಳಗುರುಳಿ ಬಿದ್ದನು.

08062048a ವೃಕೋ ದ್ವಿಪಸ್ಥಂ ಗಿರಿರಾಜವಾಸಿನಂ ಭೃಶಂ ಶರೈರ್ದ್ವಾದಶಭಿಃ ಪರಾಭಿನತ್।
08062048c ತತೋ ವೃಕಂ ಸಾಶ್ವರಥಂ ಮಹಾಜವಂ ತ್ವರಂಶ್ಚತುರ್ಭಿಶ್ಚರಣೇ ವ್ಯಪೋಥಯತ್।।

ಆಗ ವೃಕನು ಆ ಆನೆಯ ಮೇಲೆ ಕುಳಿತಿದ್ದ ಗಿರಿರಾಜವಾಸಿಯನ್ನು ಹನ್ನೆರಡು ಬಾಣಗಳಿಂದ ಜೋರಾಗಿ ಪ್ರಹರಿಸಿದನು. ಆದರೆ ಆ ಅನೆಯು ತನ್ನ ನಾಲ್ಕೂ ಕಾಲುಗಳಿಂದ ಮಹಾವೇಗವುಳ್ಳ ಕುದುರೆ-ರಥಗಳೊಡನೆ ವೃಕನನ್ನು ತುಳಿದು ಧ್ವಂಸಮಾಡಿತು.

08062049a ಸ ನಾಗರಾಜಃ ಸನಿಯಂತೃಕೋಽಪತತ್ ಪರಾಹತೋ ಬಭ್ರುಸುತೇಷುಭಿರ್ಭೃಶಂ।
08062049c ಸ ಚಾಪಿ ದೇವಾವೃಧಸೂನುರರ್ದಿತಃ ಪಪಾತ ನುನ್ನಃ ಸಹದೇವಸೂನುನಾ।।

ಆ ಮಹಾಗಜವು ತನ್ನ ನಿಯಂತ್ರಕನೊಡನೆ ಬಭ್ರುಸುತನ ಬಾಣಗಳಿಂದ ಜೋರಾಗಿ ಹೊಡೆಯಲ್ಪಟ್ಟು ಕೆಳಗುರುಳಿತು. ಮತ್ತು ದೇವಾವೃಧನ ಮಗನು ಸಹದೇವನ ಮಗನಿಂದ ಪ್ರಹರಿಸಲ್ಪಟ್ಟು ಕೆಳಗುರುಳಿದನು.

08062050a ವಿಷಾಣಪೋತ್ರಾಪರಗಾತ್ರಘಾತಿನಾ ಗಜೇನ ಹಂತುಂ ಶಕುನೇಃ ಕುಣಿಂದಜಃ।
08062050c ಜಗಾಮ ವೇಗೇನ ಭೃಶಾರ್ದಯಂಶ್ಚ ತಂ ತತೋಽಸ್ಯ ಗಾಂದಾರಪತಿಃ ಶಿರೋಽಹರತ್।।

ತನ್ನ ದಂತಗಳಿಂದಲೇ ಶತ್ರುಗಳ ಶರೀರಗಳನ್ನು ಸಂಹರಿಸಬಲ್ಲ ಆನೆಯೊಂದಿಗೆ ಕುಣಿಂದನ ಮಗನು ಶಕುನಿಯನ್ನು ಸಂಹರಿಸಲು ವೇಗದಿಂದ ಮುಂದಾಗಿ ಅವನನ್ನು ಬಹಳವಾಗಿ ಪೀಡಿಸಿದನು. ಆಗ ಗಾಂಧಾರಪತಿಯು ಅವನ ಶಿರವನ್ನೇ ಅಪಹರಿಸಿದನು.

08062051a ತತಃ ಶತಾನೀಕಹತಾ ಮಹಾಗಜಾ ಹಯಾ ರಥಾಃ ಪತ್ತಿಗಣಾಶ್ಚ ತಾವಕಾಃ।
08062051c ಸುಪರ್ಣವಾತಪ್ರಹತಾ ಯಥಾ ನಗಾಸ್ ತಥಾ ಗತಾ ಗಾಮವಶಾ ವಿಚೂರ್ಣಿತಾಃ।।

ಆಗ ಶತಾನೀಕನಿಂದ ಹತಗೊಂಡ ನಿನ್ನ ಕಡೆಯ ಮಹಾಗಜಗಳು, ಕುದುರೆ-ರಥ-ಪದಾತಿಗಣಗಳು ಗರುಡನ ರೆಕ್ಕೆಗಳ ರಭಸದಿಂದುಂಟಾದ ಚಂಡಮಾರುತಕ್ಕೆ ಸಿಲುಕಿದ ನಾಗಗಳಂತೆ ಪ್ರಾಣಗಳನ್ನು ತೊರೆದು ತುಂಡು-ತುಂಡಾಗಿ ನೆಲದಮೇಲೆ ಬೀಳುತ್ತಿದ್ದವು.

08062052a ತತೋಽಭ್ಯವಿಧ್ಯದ್ಬಹುಭಿಃ ಶಿತೈಃ ಶರೈಃ ಕುಣಿಂದಪುತ್ರೋ35 ನಕುಲಾತ್ಮಜಂ ಸ್ಮಯನ್।
08062052c ತತೋಽಸ್ಯ ಕಾಯಾನ್ನಿಚಕರ್ತ ನಾಕುಲಿಃ ಶಿರಃ ಕ್ಷುರೇಣಾಂಬುಜಸಂನಿಭಾನನಂ।।

ಆಗ ಕುಣಿಂದಪುತ್ರನು ನಸುನಗುತ್ತಾ ನಕುಲಾತ್ಮಜನನ್ನು ಅನೇಕ ನಿಶಿತ ಶರಗಳಿಂದ ಬಹಳವಾಗಿ ಗಾಯಗೊಳಿಸಿದನು. ಆಗ ನಾಕುಲಿಯು ಕ್ಷುರದಿಂದ ಕಮಲದಂತಿದ್ದ ಅವನ ಮುಖವನ್ನು ಶರೀರದಿಂದ ಬೇರ್ಪಡಿಸಿದನು.

08062053a ತತಃ ಶತಾನೀಕಮವಿಧ್ಯದಾಶುಗೈಸ್ ತ್ರಿಭಿಃ ಶಿತೈಃ ಕರ್ಣಸುತೋಽರ್ಜುನಂ ತ್ರಿಭಿಃ।
08062053c ತ್ರಿಭಿಶ್ಚ ಭೀಮಂ ನಕುಲಂ ಚ ಸಪ್ತಭಿರ್ ಜನಾರ್ದನಂ ದ್ವಾದಶಭಿಶ್ಚ ಸಾಯಕೈಃ।।

ಆಗ ಕರ್ಣಸುತನು ಶತಾನೀಕನನ್ನು ಮೂರು ಆಶುಗಗಳಿಂದ, ಅರ್ಜುನನನ್ನು ಮೂರರಿಂದ, ಭೀಮನನ್ನು ಮೂರರಿಂದ, ನಕುಲನನ್ನು ಏಳರಿಂದ ಮತ್ತು ಜನಾರ್ದನನನ್ನು ಹನ್ನೆರಡು ಸಾಯಕಗಳಿಂದ ಹೊಡೆದನು.

08062054a ತದಸ್ಯ ಕರ್ಮಾತಿಮನುಷ್ಯಕರ್ಮಣಃ ಸಮೀಕ್ಷ್ಯ ಹೃಷ್ಟಾಃ ಕುರವೋಽಭ್ಯಪೂಜಯನ್।
08062054c ಪರಾಕ್ರಮಜ್ಞಾಸ್ತು ಧನಂಜಯಸ್ಯ ತೇ ಹುತೋಽಯಮಗ್ನಾವಿತಿ ತಂ ತು ಮೇನಿರೇ।।

ಅವನ ಆ ಅತಿಮನುಷ್ಯಕರ್ಮವನ್ನು ನೋಡಿ ಹೃಷ್ಟರಾದ ಕುರುಗಳು ಅವನನ್ನು ಗೌರವಿಸಿದರು. ಆದರೆ ಧನಂಜಯನ ಪರಾಕ್ರಮವನ್ನು ತಿಳಿದಿದ್ದವರು ಇವನು ಈಗ ಅಗ್ನಿಯಲ್ಲಿ ಹುತನಾಗಿಹೋದನೆಂದೇ ಭಾವಿಸಿದರು.

08062055a ತತಃ ಕಿರೀಟೀ ಪರವೀರಘಾತೀ ಹತಾಶ್ವಮಾಲೋಕ್ಯ ನರಪ್ರವೀರಂ।
08062055c ತಮಭ್ಯಧಾವದ್ವೃಷಸೇನಮಾಹವೇ ಸ ಸೂತಜಸ್ಯ ಪ್ರಮುಖೇ ಸ್ಥಿತಂ ತದಾ।।

ಆಗ ಪರವೀರಘಾತೀ ಕಿರೀಟಿಯು ಕುದುರೆಗಳನ್ನು ಸಂಹರಿಸಿದ್ದ ಆ ನರಪ್ರವೀರನನ್ನು ನೋಡಿ ವೃಷಸೇನನನ್ನು ಯುದ್ಧದಲ್ಲಿ ಆಕ್ರಮಣಿಸಿದನು. ಆಗ ಅವನು ಸೂತಜ ಕರ್ಣನ ಎದುರಿಗಿದ್ದನು.

08062056a ತಮಾಪತಂತಂ ನರವೀರಮುಗ್ರಂ ಮಹಾಹವೇ ಬಾಣಸಹಸ್ರಧಾರಿಣಂ।
08062056c ಅಭ್ಯಾಪತತ್ಕರ್ಣಸುತೋ ಮಹಾರಥೋ ಯಥೈವ ಚೇಂದ್ರಂ ನಮುಚಿಃ ಪುರಾತನೇ।।

ಮಹಾಹವದಲ್ಲಿ ಆಕ್ರಮಣಿಸುತ್ತಿದ್ದ ಆ ಉಗ್ರನರವೀರ, ಸಹಸ್ರಬಾಣಧಾರಿ ಅರ್ಜುನನನ್ನು ಮಹಾರಥ ಕರ್ಣಸುತನು ಹಿಂದೆ ನಮುಚಿಯು ಇಂದ್ರನನ್ನು ಹೇಗೋ ಹಾಗೆ ಎದುರಿಸಿದನು.

08062057a ತತೋಽದ್ಭುತೇನೈಕಶತೇನ ಪಾರ್ಥಂ ಶರೈರ್ವಿದ್ಧ್ವಾ ಸೂತಪುತ್ರಸ್ಯ ಪುತ್ರಃ।
08062057c ನನಾದ ನಾದಂ ಸುಮಹಾನುಭಾವೋ ವಿದ್ಧ್ವೇವ ಶಕ್ರಂ ನಮುಚಿಃ ಪುರಾ ವೈ।।

ಆಗ ಸೂತಪುತ್ರನ ಆ ಮಹಾನುಭಾವ ಪುತ್ರನು ಅದ್ಭುತವಾಗಿ ಪಾರ್ಥನನ್ನು ಒಂದು ನೂರು ಬಾಣಗಳಿಂದ ಹೊಡೆದು ಹಿಂದೆ ಶಕ್ರನನ್ನು ಹೊಡೆದ ನಮುಚಿಯಂತೆ ಸಿಂಹನಾದಗೈದನು.

08062058a ಪುನಃ ಸ ಪಾರ್ಥಂ ವೃಷಸೇನ ಉಗ್ರೈರ್ ಬಾಣೈರವಿಧ್ಯದ್ಭುಜಮೂಲಮಧ್ಯೇ।
08062058c ತಥೈವ ಕೃಷ್ಣಂ ನವಭಿಃ ಸಮಾರ್ದಯತ್ ಪುನಶ್ಚ ಪಾರ್ಥಂ ದಶಭಿಃ ಶಿತಾಗ್ರೈಃ।।

ವೃಷಸೇನನು ಪುನಃ ಉಗ್ರ ಬಾಣಗಳಿಂದ ಪಾರ್ಥನ ಭುಜಮೂಲದ ಮಧ್ಯಕ್ಕೆ ಹೊಡೆದು ಹಾಗೆಯೇ ಒಂಭತ್ತು ಶಿತಾಗ್ರ ಬಾಣಗಳಿಂದ ಕೃಷ್ಣನನ್ನೂ ಪುನಃ ಹತ್ತರಿಂದ ಪಾರ್ಥನನ್ನೂ ಹೊಡೆದನು.

08062059a ತತಃ ಕಿರೀಟೀ ರಣಮೂರ್ಧ್ನಿ ಕೋಪಾತ್ ಕೃತ್ವಾ ತ್ರಿಶಾಖಾಂ ಭ್ರುಕುಟಿಂ ಲಲಾಟೇ।
08062059c ಮುಮೋಚ ಬಾಣಾನ್ವಿಶಿಖಾನ್ಮಹಾತ್ಮಾ ವಧಾಯ ರಾಜನ್ಸೂತಪುತ್ರಸ್ಯ ಸಂಖ್ಯೇ।।

ರಾಜನ್! ಆಗ ರಣಮೂರ್ಧನಿಯಲ್ಲಿ ಮಹಾತ್ಮ ಕಿರೀಟಿಯು ಕೋಪದಿಂದ ಹಣೆಯಲ್ಲಿ ಮೂರು ಗೆರೆಗಳುಂಟಾಗುವಂತೆ ಹುಬ್ಬನ್ನು ಗಂಟಿಕ್ಕಿ ಯುದ್ಧದಲ್ಲಿ ಸೂತಪುತ್ರನನ್ನು ವಧಿಸಲು ವಿಶಿಖ ಬಾಣಗಳನ್ನು ಪ್ರಯೋಗಿಸಿದನು.

08062060a ವಿವ್ಯಾಧ ಚೈನಂ ದಶಭಿಃ ಪೃಷತ್ಕೈರ್ ಮರ್ಮಸ್ವಸಕ್ತಂ ಪ್ರಸಭಂ ಕಿರೀಟೀ।
08062060c ಚಿಚ್ಚೇದ ಚಾಸ್ಯೇಷ್ವಸನಂ ಭುಜೌ ಚ ಕ್ಷುರೈಶ್ಚತುರ್ಭಿಃ ಶಿರ ಏವ ಚೋಗ್ರೈಃ।।

ಕಿರೀಟಿಯು ಹತ್ತು ಪೃಷತ್ಕಗಳಿಂದ ವೃಷಸೇನನ ಮರ್ಮಸ್ಥಳಕ್ಕೆ ಜೋರಾಗಿ ಹೊಡೆದು, ನಾಲ್ಕು ಉಗ್ರ ಕ್ಷುರಗಳಿಂದ ಅವನ ಧನುಸ್ಸನ್ನೂ, ಎರಡು ಭುಜಗಳನ್ನೂ ಮತ್ತು ಶಿರಸ್ಸನ್ನೂ ಕತ್ತರಿಸಿದನು.

08062061a ಸ ಪಾರ್ಥಬಾಣಾಭಿಹತಃ ಪಪಾತ ರಥಾದ್ವಿಬಾಹುರ್ವಿಶಿರಾ ಧರಾಯಾಂ।
08062061c ಸುಪುಷ್ಪಿತಃ ಪರ್ಣಧರೋಽತಿಕಾಯೋ ವಾತೇರಿತಃ ಶಾಲ ಇವಾದ್ರಿಶೃಂಗಾತ್।।

ಪಾರ್ಥನ ಬಾಣಗಳಿಂದ ಹೊಡೆಯಲ್ಪಟ್ಟ ವೃಷಸೇನನು ಹೂಬಿಟ್ಟ ಎಲೆಗಳಿಂದ ತುಂಬಿ ವಿಶಾಲವಾಗಿದ್ದ ಶಾಲವೃಕ್ಷವು ಭಿರುಗಾಳಿಗೆ ಸಿಲುಕಿ ಪರ್ವತಶಿಖರದ ಮೇಲಿಂದ ಬೀಳುವಂತೆ ರಥದಿಂದ ಬಾಹು-ಶಿರಗಳನ್ನು ಕಳೆದುಕೊಂಡು ಭೂಮಿಯಮೇಲೆ ಬಿದ್ದನು.

08062062a ತಂ ಪ್ರೇಕ್ಷ್ಯ ಬಾಣಾಭಿಹತಂ ಪತಂತಂ ರಥಾತ್ಸುತಂ ಸೂತಜಃ ಕ್ಷಿಪ್ರಕಾರೀ।
08062062c ರಥಂ ರಥೇನಾಶು ಜಗಾಮ ವೇಗಾತ್ ಕಿರೀಟಿನಃ ಪುತ್ರವಧಾಭಿತಪ್ತಃ।।

ಬಾಣದಿಂದ ಹತನಾಗಿ ರಥದಿಂದ ಕೆಳಕ್ಕೆ ಬಿದ್ದ ಮಗನನ್ನು ನೋಡಿ ಕ್ಷಿಪ್ರಕಾರೀ ಸೂತಜ ಕರ್ಣನು ಪುತ್ರವಧೆಯಿಂದ ಪರಿತಪಿಸುತ್ತಾ ವೇಗದಿಂದ ತನ್ನ ರಥದಲ್ಲಿ ಕಿರೀಟಿಯ ರಥದ ಬಳಿ ಧಾವಿಸಿದನು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ವೃಷಸೇನವಧೇ ದ್ವಾಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ವೃಷಸೇನವಧ ಎನ್ನುವ ಅರವತ್ತೆರಡನೇ ಅಧ್ಯಾಯವು.