ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 61
ಸಾರ
ಭೀಮಸೇನನು ದುಃಶಾಸನನ ಎದೆಯನ್ನು ಸೀಳಿ ರಕ್ತವನ್ನು ಕುಡಿದು ಅವನನ್ನು ವಧಿಸಿದುದು (1-17).
08061001 ಸಂಜಯ ಉವಾಚ।
08061001a ತತ್ರಾಕರೋದ್ದುಷ್ಕರಂ ರಾಜಪುತ್ರೋ ದುಃಶಾಸನಸ್ತುಮುಲೇ ಯುಧ್ಯಮಾನಃ।
08061001c ಚಿಚ್ಛೇದ ಭೀಮಸ್ಯ ಧನುಃ ಕ್ಷುರೇಣ ಷಡ್ಭಿಃ ಶರೈಃ ಸಾರಥಿಮಪ್ಯವಿಧ್ಯತ್।।
ಸಂಜಯನು ಹೇಳಿದನು: “ತುಮುಲದಲ್ಲಿ ಯುದ್ಧಮಾಡುತ್ತಿದ್ದ ರಾಜಪುತ್ರ ದುಃಶಾಸನನು ದುಷ್ಕರವಾದುದನ್ನು ಮಾಡಿದನು. ಅವನು ಕ್ಷುರದಿಂದ ಭೀಮನ ಧನುಸ್ಸನ್ನು ತುಂಡರಿಸಿದನು ಮತ್ತು ಆರು ಶರಗಳಿಂದ ಸಾರಥಿಯನ್ನು ಕೆಳಗುರುಳಿಸಿದನು.
08061002a ತತೋಽಭಿನದ್ಬಹುಭಿಃ ಕ್ಷಿಪ್ರಮೇವ ವರೇಷುಭಿರ್ಭೀಮಸೇನಂ ಮಹಾತ್ಮಾ।
08061002c ಸ ವಿಕ್ಷರನ್ನಾಗ ಇವ ಪ್ರಭಿನ್ನೋ ಗದಾಮಸ್ಮೈ ತುಮುಲೇ ಪ್ರಾಹಿಣೋದ್ವೈ।।
ಆಗ ಆ ಮಹಾತ್ಮನು ಕ್ಷಿಪ್ರವಾಗಿ ಅನೇಕ ಶ್ರೇಷ್ಠ ಬಾಣಗಳಿಂದ ಭೀಮಸೇನನನ್ನು ಹೊಡೆದನು. ಭೀಮನು ಗಾಯಗೊಂಡ ಮದ್ದಾನೆಯಂತೆ ತುಮುಲದಲ್ಲಿ ಉಕ್ಕಿನ ಗದೆಯನ್ನು ಎಸೆದನು.
08061003a ತಯಾಹರದ್ದಶ ಧನ್ವಂತರಾಣಿ ದುಃಶಾಸನಂ ಭೀಮಸೇನಃ ಪ್ರಸಹ್ಯ।
08061003c ತಯಾ ಹತಃ ಪತಿತೋ ವೇಪಮಾನೋ ದುಃಶಾಸನೋ ಗದಯಾ ವೇಗವತ್ಯಾ।।
ಅದರಿಂದ ದುಃಶಾಸನನನ್ನು ಹತ್ತು ಧನುಸ್ಸುಗಳಷ್ಟು ಹಿಂದೆ ತಳ್ಳಿ ಭೀಮಸೇನನು ಜೋರಾಗಿ ನಕ್ಕನು. ವೇಗವುಳ್ಳ ಆ ಗದೆಯಿಂದ ಪ್ರಹೃತನಾದ ದುಃಶಾಸನನು ನಡುಗುತ್ತಾ ಕೆಳಗೆ ಬಿದ್ದನು.
08061004a ಹಯಾಃ ಸಸೂತಾಶ್ಚ ಹತಾ ನರೇಂದ್ರ ಚೂರ್ಣೀಕೃತಶ್ಚಾಸ್ಯ ರಥಃ ಪತಂತ್ಯಾ।
08061004c ವಿಧ್ವಸ್ತವರ್ಮಾಭರಣಾಂಬರಸ್ರಗ್ ವಿಚೇಷ್ಟಮಾನೋ ಭೃಶವೇದನಾರ್ತಃ।।
ನರೇಂದ್ರ! ಮೇಲೆಬಿದ್ದ ಗದೆಯು ಅವನ ಕುದುರೆಗಳನ್ನೂ, ಸಾರಥಿಯನ್ನೂ, ರಥವನ್ನೂ ನುಚ್ಚುನೂರಾಗಿಸಿತು. ಕವಚ ವಸ್ತ್ರಾಭರಣಗಳು ಚದುರಿಹೋಗಿದ್ದ ದುಃಶಾಸನನು ಅತ್ಯಂತ ವೇದನೆಯಿಂದ ಆರ್ತನಾಗಿ ಉರುಳತೊಡಗಿದನು.
08061005a ತತಃ ಸ್ಮೃತ್ವಾ ಭೀಮಸೇನಸ್ತರಸ್ವೀ ಸಾಪತ್ನಕಂ ಯತ್ಪ್ರಯುಕ್ತಂ ಸುತೈಸ್ತೇ।
08061005c ರಥಾದವಪ್ಲುತ್ಯ ಗತಃ ಸ ಭೂಮೌ ಯತ್ನೇನ ತಸ್ಮಿನ್ಪ್ರಣಿಧಾಯ ಚಕ್ಷುಃ।।
ಆಗ ತರಸ್ವೀ ಭೀಮಸೇನನು ತನ್ನ ಪತ್ನಿಯ ಕುರಿತು ನಿನ್ನ ಮಗನು ಮಾಡಿದುದನ್ನು ಸ್ಮರಿಸಿಕೊಂಡು ರಥದಿಂದ ನೆಲಕ್ಕೆ ಹಾರಿ ಪ್ರಯತ್ನಪಟ್ಟು ಅವನ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿದನು.
08061006a ಅಸಿಂ ಸಮುದ್ಧೃತ್ಯ ಶಿತಂ ಸುಧಾರಂ ಕಂಟೇ ಸಮಾಕ್ರಮ್ಯ ಚ ವೇಪಮಾನಂ।
08061006c ಉತ್ಕೃತ್ಯ ವಕ್ಷಃ ಪತಿತಸ್ಯ ಭೂಮಾವ್ ಅಥಾಪಿಬಚ್ಚೋಣಿತಮಸ್ಯ ಕೋಷ್ಣಂ।
08061006e ಆಸ್ವಾದ್ಯ ಚಾಸ್ವಾದ್ಯ ಚ ವೀಕ್ಷಮಾಣಃ ಕ್ರುದ್ಧೋಽತಿವೇಲಂ ಪ್ರಜಗಾದ ವಾಕ್ಯಂ।
ಹರಿತ ಶುದ್ಧ ಖಡ್ಗವನ್ನು ಮೇಲೆತ್ತಿ ಉರುಳಾಡುತ್ತಿದ್ದ ಅವನ ಕುತ್ತಿಗೆಯನ್ನು ಮೆಟ್ಟಿ ಕತ್ತರಿಸಿ ಭೂಮಿಯಮೇಲೆ ಬಿದ್ದವನ ಎದೆಯನ್ನು ಮೇಲೆತ್ತಿ ಸುರಿಯುತ್ತಿದ್ದ ಅವನ ರಕ್ತವನ್ನು ಕುಡಿದನು. ರಕ್ತದ ರುಚಿಯನ್ನು ಪುನಃ ಪುನಃ ಆಸ್ವಾದಿಸುತ್ತಾ ದುಃಶಾಸನನನ್ನೇ ನೋಡುತ್ತಾ ಪರಮ ಕ್ರುದ್ಧನಾಗಿ ಹೇಳಿದನು:
08061007a ಸ್ತನ್ಯಸ್ಯ ಮಾತುರ್ಮಧುಸರ್ಪಿಷೋ ವಾ ಮಾಧ್ವೀಕಪಾನಸ್ಯ ಚ ಸತ್ಕೃತಸ್ಯ।
08061007c ದಿವ್ಯಸ್ಯ ವಾ ತೋಯರಸಸ್ಯ ಪಾನಾತ್ ಪಯೋದಧಿಭ್ಯಾಂ ಮಥಿತಾಚ್ಚ ಮುಖ್ಯಾತ್।
08061007e ಸರ್ವೇಭ್ಯ ಏವಾಭ್ಯಧಿಕೋ ರಸೋಽಯಂ ಮತೋ ಮಮಾದ್ಯಾಹಿತಲೋಹಿತಸ್ಯ।।
“ತಾಯಿಯ ಮೊಲೆಹಾಲಿಗಿಂತಲೂ, ತುಪ್ಪ-ಜೇನುತುಪ್ಪಗಳ ಮಿಶ್ರಣಕ್ಕಿಂತಲೂ, ಚೆನ್ನಾಗಿ ಮಾಡಲ್ಪಟ್ಟ ದ್ರಾಕ್ಷಾರಸದ ಪಾನೀಯಕ್ಕಿಂತಲೂ, ದಿವ್ಯವಾದ ತೋಯರಸದ ಪಾನೀಯಕ್ಕಿಂತಲೂ, ಹಾಲು-ಮೊಸರನ್ನು ಕಡೆದು ಮಾಡಿದ ಮಜ್ಜಿಗೆಗಿಂತಲೂ ಮತ್ತು ಎಲ್ಲ ಪಾನೀಯಗಳಿಗಿಂತಲೂ ನನ್ನ ಶತ್ರುವಿನ ರಕ್ತವು ಅಧಿಕ ರುಚಿಯನ್ನು ಹೊಂದಿದೆಯೆಂದು ನನಗನ್ನಿಸುತ್ತಿದೆ!”
08061008a ಏವಂ ಬ್ರುವಾಣಂ ಪುನರಾದ್ರವಂತಂ ಆಸ್ವಾದ್ಯ ವಲ್ಗಂತಮತಿಪ್ರಹೃಷ್ಟಂ।
08061008c ಯೇ ಭೀಮಸೇನಂ ದದೃಶುಸ್ತದಾನೀಂ ಭಯೇನ ತೇಽಪಿ ವ್ಯಥಿತಾ ನಿಪೇತುಃ।।
ಹೀಗೆ ಹೇಳುತ್ತಾ ರಕ್ತವನ್ನು ಕುಡಿತು ಅತಿಪ್ರಹೃಷ್ಟನಾಗಿ ಪುನಃ ಪುನಃ ಕೂಗಿ ಕುಣಿದು ಕುಪ್ಪಳಿಸುತ್ತಿದ್ದ ಆ ಭೀಮಸೇನನನ್ನು ನೋಡಿದವರೆಲ್ಲರೂ ವ್ಯಥಿತರಾಗಿ ಕುಸಿದುಬಿದ್ದರು.
08061009a ಯೇ ಚಾಪಿ ತತ್ರಾಪತಿತಾ ಮನುಷ್ಯಾಸ್ ತೇಷಾಂ ಕರೇಭ್ಯಃ ಪತಿತಂ ಚ ಶಸ್ತ್ರಂ।
08061009c ಭಯಾಚ್ಚ ಸಂಚುಕ್ರುಶುರುಚ್ಚಕೈಸ್ತೇ ನಿಮೀಲಿತಾಕ್ಷಾ ದದೃಶುಶ್ಚ ತನ್ನ।।
ಅಲ್ಲಿ ಭಯದಿಂದ ನಡುಗುತ್ತಿದ್ದ ಮನುಷ್ಯರ ಕೈಗಳಿಂದ ಶಸ್ತ್ರಗಳು ಕೆಳಗೆ ಬಿದ್ದವು. ಭಯದಿಂದ ವಿಕಾರಸ್ವರದಲ್ಲಿ ಸಹಾಯಕ್ಕೆಂದು ಕೂಗಿಕೊಳ್ಳುತ್ತಿದ್ದರು. ಕೆಲವರು ಅವನನ್ನು ನೋಡಲಿಕ್ಕಾಗದೇ ಕಣ್ಣುಗಳನ್ನೇ ಮುಚ್ಚಿಕೊಂಡರು.
08061010a ಯೇ ತತ್ರ ಭೀಮಂ ದದೃಶುಃ ಸಮಂತಾದ್ ದೌಃಶಾಸನಂ ತದ್ರುಧಿರಂ ಪಿಬಂತಂ।
08061010c ಸರ್ವೇ ಪಲಾಯಂತ ಭಯಾಭಿಪನ್ನಾ ನಾಯಂ ಮನುಷ್ಯ ಇತಿ ಭಾಷಮಾಣಾಃ।।
ದುಃಶಾಸನನ ರಕ್ತವನ್ನು ಕುಡಿಯುತ್ತಿದ್ದ ಭೀಮಸೇನನನ್ನು ಎಲ್ಲಕಡೆಗಳಿಂದ ನೋಡುತ್ತಿದ್ದವರು ಎಲ್ಲರೂ “ಇವನು ಮನುಷ್ಯನಲ್ಲ!” ಎಂದು ಮಾತನಾಡಿಕೊಳ್ಳುತ್ತಾ ಭಯಾರ್ದಿತರಾಗಿ ಪಲಾಯನಗೈದರು.
08061011a ಶೃಣ್ವತಾಂ ಲೋಕವೀರಾಣಾಮಿದಂ ವಚನಮಬ್ರವೀತ್।
08061011c ಏಷ ತೇ ರುಧಿರಂ ಕಂಟಾತ್ಪಿಬಾಮಿ ಪುರುಷಾಧಮ।
08061011e ಬ್ರೂಹೀದಾನೀಂ ಸುಸಂರಬ್ಧಃ ಪುನರ್ಗೌರಿತಿ ಗೌರಿತಿ।।
ಲೋಕವೀರರಿಗೆ ಕೇಳುವಂತೆ ಭೀಮಸೇನನು ಈ ಮಾತನ್ನಾಡಿದನು: “ಪುರುಷಾಧಮ! ನಿನ್ನ ಈ ರಕ್ತವನ್ನು ಕಂಠದಿಂದ ಕುಡಿಯುತ್ತಿದ್ದೇನೆ. ಈಗ ಸಂರಬ್ಧನಾಗಿ “ಗೌಃ ಗೌಃ” ಎಂದು ಪುನಃ ಹೇಳು ನೋಡೋಣ!
08061012a ಪ್ರಮಾಣಕೋಟ್ಯಾಂ ಶಯನಂ ಕಾಲಕೂಟಸ್ಯ ಭೋಜನಂ।
08061012c ದಶನಂ ಚಾಹಿಭಿಃ ಕಷ್ಟಂ ದಾಹಂ ಚ ಜತುವೇಶ್ಮನಿ।।
08061013a ದ್ಯೂತೇನ ರಾಜ್ಯಹರಣಮರಣ್ಯೇ ವಸತಿಶ್ಚ ಯಾ।
08061013c ಇಷ್ವಸ್ತ್ರಾಣಿ ಚ ಸಂಗ್ರಾಮೇಷ್ವಸುಖಾನಿ ಚ ವೇಶ್ಮನಿ।।
08061014a ದುಃಖಾನ್ಯೇತಾನಿ ಜಾನೀಮೋ ನ ಸುಖಾನಿ ಕದಾ ಚನ।
08061014c ಧೃತರಾಷ್ಟ್ರಸ್ಯ ದೌರಾತ್ಮ್ಯಾತ್ಸಪುತ್ರಸ್ಯ ಸದಾ ವಯಂ।।
ತನ್ನ ಮಕ್ಕಳೂಸೇರಿ ಧೃತರಾಷ್ಟ್ರನು ನಮ್ಮ ಮೇಲೆ ಸದಾ ಇಟ್ಟಿರುವ ದುರಾತ್ಮತೆಯಿಂದ ಪ್ರಮಾಣಕೋಟಿಯಲ್ಲಿ ಕಾಲಕೂಟವನ್ನು ಉಣಿಸಿ ಮಲಗಿಸಿ ಸರ್ಪಗಳಿಂದ ಕಚ್ಚಿಸಿ ಕಷ್ಟವನ್ನಿತ್ತುದುದು, ಜತುಗೃಹದಲ್ಲಿ ಸುಟ್ಟಿದ್ದುದು, ದ್ಯೂತದಲ್ಲಿ ರಾಜ್ಯವನ್ನು ಅಪಹರಿಸಿದುದು, ಅರಣ್ಯದಲ್ಲಿ ವಸತಿಮಾಡಿಸಿದುದು, ಸಂಗ್ರಾಮದಲ್ಲಿ ಬಾಣ-ಅಸ್ತ್ರಗಳನ್ನು ಪ್ರಯೋಗಿಸಿದುದು, ಅರಮನೆಯಲ್ಲಿ ಸುಖವಾಗಿರಲು ಅವಕಾಶಕೊಡದೇ ಇದ್ದುದು, ಈ ಇಲ್ಲ ದುಃಖವನ್ನೇ ತಿಳಿದಿದ್ದೇವೆಯೇ ಹೊರತು ಎಂದೂ ಸುಖವೇನೆಂಬುದನ್ನು ತಿಳಿಯಲಿಲ್ಲ!”
08061015a ಇತ್ಯುಕ್ತ್ವಾ ವಚನಂ ರಾಜಂ ಜಯಂ ಪ್ರಾಪ್ಯ ವೃಕೋದರಃ।
08061015c ಪುನರಾಹ ಮಹಾರಾಜ ಸ್ಮಯಂಸ್ತೌ ಕೇಶವಾರ್ಜುನೌ।।
ರಾಜನ್! ಹೀಗೆ ಹೇಳಿ ವೃಕೋದರನು ಜಯವನ್ನು ಹೊಂದಿದನು. ಮಹಾರಾಜ! ಪುನಃ ನಗುತ್ತಾ ಕೇಶವಾರ್ಜುನರಿಗೆ ಹೇಳಿದನು:
08061016a ದುಃಶಾಸನೇ ಯದ್ರಣೇ ಸಂಶ್ರುತಂ ಮೇ ತದ್ವೈ ಸರ್ವಂ ಕೃತಮದ್ಯೇಹ ವೀರೌ।
08061016c ಅದ್ಯೈವ ದಾಸ್ಯಾಮ್ಯಪರಂ ದ್ವಿತೀಯಂ ದುರ್ಯೋಧನಂ ಯಜ್ಞಪಶುಂ ವಿಶಸ್ಯ।
08061016e ಶಿರೋ ಮೃದಿತ್ವಾ ಚ ಪದಾ ದುರಾತ್ಮನಃ ಶಾಂತಿಂ ಲಪ್ಸ್ಯೇ ಕೌರವಾಣಾಂ ಸಮಕ್ಷಂ।।
“ವೀರರೇ! ದುಃಶಾಸನನ ಕುರಿತು ನಾನು ಏನೆಲ್ಲ ಪ್ರತಿಜ್ಞೆ ಮಾಡಿದ್ದೆನೋ ಅವೆಲ್ಲವನ್ನೂ ಇಂದು ರಣದಲ್ಲಿ ಮಾಡಿ ತೋರಿಸಿದ್ದೇನೆ! ಎರಡನೆಯ ಯಜ್ಞಪಶುವಾದ ದುರ್ಯೋಧನನನ್ನು ಕೂಡ ಇಲ್ಲಿಯೇ ಹಿಸುಕಿ ಬಲಿಕೊಡುತ್ತೇನೆ! ಕೌರವರ ಸಮಕ್ಷಮದಲ್ಲಿ ಆ ದುರಾತ್ಮನ ಶಿರವನ್ನು ತುಳಿದೇ ಶಾಂತಿಯನ್ನು ಪಡೆಯುತ್ತೇನೆ!”
08061017a ಏತಾವದುಕ್ತ್ವಾ ವಚನಂ ಪ್ರಹೃಷ್ಟೋ ನನಾದ ಚೋಚ್ಛೈ ರುಧಿರಾರ್ದ್ರಗಾತ್ರಃ।
08061017c ನನರ್ತ ಚೈವಾತಿಬಲೋ ಮಹಾತ್ಮಾ ವೃತ್ರಂ ನಿಹತ್ಯೇವ ಸಹಸ್ರನೇತ್ರಃ।।
ಪ್ರಹೃಷ್ಟನಾಗಿ ಹೀಗೆ ಹೇಳಿ ರಕ್ತದಿಂದ ತೋಯ್ದುಹೋಗಿದ್ದ ಮಹಾತ್ಮ ಅತಿಬಲ ಭೀಮಸೇನನು ವೃತ್ರನನ್ನು ಸಂಹರಿಸಿದ ಸಹಸ್ರನೇತ್ರನಂತೆ ಜೋರಾಗಿ ಕೂಗಿ ನರ್ತಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ದುಃಶಾಸನವಧೇ ಏಕಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ದುಃಶಾಸನವಧ ಎನ್ನುವ ಅರವತ್ತೊಂದನೇ ಅಧ್ಯಾಯವು.