060 ದುಃಶಾಸನಭೀಮಸೇನಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ಕರ್ಣವಧ ಪರ್ವ

ಅಧ್ಯಾಯ 60

ಸಾರ

ಕರ್ಣನು ಪಾಂಚಾಲ ಸೇನಾಪ್ರಮುಖರನ್ನು ಸೋಲಿಸಿದುದು (1-22). ಕರ್ಣ-ಸಾತ್ಯಕಿಯರ ಯುದ್ಧ (23-28). ಭೀಮಸೇನ-ದುಃಶಾಸನರ ಯುದ್ಧ (29-33).

08060001 ಸಂಜಯ ಉವಾಚ।
08060001a ತತಃ ಕರ್ಣಃ ಕುರುಷು ಪ್ರದ್ರುತೇಷು ವರೂಥಿನಾ ಶ್ವೇತಹಯೇನ ರಾಜನ್।
08060001c ಪಾಂಚಾಲಪುತ್ರಾನ್ವ್ಯಧಮತ್ಸೂತಪುತ್ರೋ ಮಹೇಷುಭಿರ್ವಾತ ಇವಾಭ್ರಸಂಘಾನ್।।

ಸಂಜಯನು ಹೇಳಿದನು: “ರಾಜನ್! ಕುರುಗಳು ಪಲಾಯನಮಾಡುತ್ತಿರಲು ಸೂತಪುತ್ರ ಕರ್ಣನು ಶ್ವೇತಹಯಯುಕ್ತ ರಥದಲ್ಲಿ ಕುಳಿತು ದೊಡ್ಡ ದೊಡ್ಡ ಬಾಣಗಳಿಂದ ಚಂಡಮಾರುತವು ಮೋಡಗಳ ಸಮೂಹವನ್ನು ಚೆಲ್ಲಾಪಿಲ್ಲಿಯಾಗಿ ಮಾಡುವಂತೆ ಪಾಂಚಾಲಪುತ್ರರನ್ನು ವಧಿಸಿದನು.

08060002a ಸೂತಂ ರಥಾದಂಜಲಿಕೇನ ಪಾತ್ಯ ಜಘಾನ ಚಾಶ್ವಾಂ ಜನಮೇಜಯಸ್ಯ।
08060002c ಶತಾನೀಕಂ ಸುತಸೋಮಂ ಚ ಭಲ್ಲೈರ್ ಅವಾಕಿರದ್ಧನುಷೀ ಚಾಪ್ಯಕೃಂತತ್।।

ಅಂಜಲಿಕದಿಂದ ಜನಮೇಜಯನ ಕುದುರೆಗಳನ್ನು ಕೊಂದು ಸಾರಥಿಯನ್ನು ಕೆಳಗುರುಳಿಸಿದನು. ಭಲ್ಲಗಳಿಂದ ಶತಾನೀಕ ಮತ್ತು ಸುತಸೋಮರನ್ನು ಮುಚ್ಚಿ, ಅವರ ಧನುಸ್ಸುಗಳನ್ನು ಕತ್ತರಿಸಿದನು.

08060003a ಧೃಷ್ಟದ್ಯುಮ್ನಂ ನಿರ್ಬಿಭೇದಾಥ ಷಡ್ಭಿರ್ ಜಘಾನ ಚಾಶ್ವಂ ದಕ್ಷಿಣಂ ತಸ್ಯ ಸಂಖ್ಯೇ।
08060003c ಹತ್ವಾ ಚಾಶ್ವಾನ್ಸಾತ್ಯಕೇಃ ಸೂತಪುತ್ರಃ ಕೈಕೇಯಪುತ್ರಂ ನ್ಯವಧೀದ್ವಿಶೋಕಂ।।

ಬಳಿಕ ಸೂತಪುತ್ರನು ಆರು ಬಾಣಗಳಿಂದ ಧೃಷ್ಟದ್ಯುಮ್ನನನ್ನು ಪ್ರಹರಿಸಿ, ರಣದಲ್ಲಿ ಅವನ ಬಲಗಡೆಯಿದ್ದ ಸಾತ್ಯಕಿಯ ಕುದುರೆಗಳನ್ನೂ ಸಂಹರಿಸಿ, ಕೈಕೇಯಪುತ್ರ ವಿಶೋಕನನ್ನು ಸಂಹರಿಸಿದನು.

08060004a ತಂ ಅಭ್ಯಧಾವನ್ನಿಹತೇ ಕುಮಾರೇ ಕೈಕೇಯಸೇನಾಪತಿರುಗ್ರಧನ್ವಾ।
08060004c ಶರೈರ್ವಿಭಿನ್ನಂ ಭೃಶಮುಗ್ರವೇಗೈಃ ಕರ್ಣಾತ್ಮಜಂ ಸೋಽಭ್ಯಹನತ್ಸುಷೇಣಂ।।

ಕುಮಾರನು ಹತನಾಗಲು ಕೈಕೇಯಸೇನಾಪತಿ ಉಗ್ರಧನ್ವನು ಮುನ್ನುಗ್ಗಿ ಅತ್ಯಂತ ವೇಗಯುಕ್ತವಾದ ಶರಗಳಿಂದ ಕರ್ಣನ ಮಗ ಸುಷೇಣನನ್ನು ಬಹಳವಾಗಿ ಪೀಡಿಸಿದನು.

08060005a ತಸ್ಯಾರ್ಧಚಂದ್ರೈಸ್ತ್ರಿಭಿರುಚ್ಚಕರ್ತ ಪ್ರಸಹ್ಯ ಬಾಹೂ ಚ ಶಿರಶ್ಚ ಕರ್ಣಃ।
08060005c ಸ ಸ್ಯಂದನಾದ್ಗಾಮಪತದ್ಗತಾಸುಃ ಪರಶ್ವಧೈಃ ಶಾಲ ಇವಾವರುಗ್ಣಃ।।

ಕರ್ಣನು ಜೋರಾಗಿ ನಗುತ್ತಾ ಮೂರು ಅರ್ಧಚಂದ್ರಬಾಣಗಳಿಂದ ಅವನ ಬಾಹುಗಳನ್ನೂ ಶಿರವನ್ನೂ ಕತ್ತರಿಸಿದನು. ಕೊಡಲಿಯಿಂದ ಕತ್ತರಿಸಲ್ಪಟ್ಟ ಶಾಲವೃಕ್ಷದಂತೆ ಪ್ರಾಣಗಳನ್ನು ತೊರೆದು ಅವನು ರಥದಿಂದ ಕೆಳಕ್ಕೆ ಬಿದ್ದನು.

08060006a ಹತಾಶ್ವಮಂಜೋಗತಿಭಿಃ ಸುಷೇಣಃ ಶಿನಿಪ್ರವೀರಂ ನಿಶಿತೈಃ ಪೃಷತ್ಕೈಃ।
08060006c ಪ್ರಚ್ಚಾದ್ಯ ನೃತ್ಯನ್ನಿವ ಸೌತಿಪುತ್ರಃ ಶೈನೇಯಬಾಣಾಭಿಹತಃ ಪಪಾತ।।

ರಣದಲ್ಲಿ ನರ್ತಿಸುತ್ತಿರುವನೋ ಎನ್ನುವಂತೆ ಸೌತಿಪುತ್ರ ಸುಷೇಣನು ಅಶ್ವಗಳನ್ನು ಕಳೆದುಕೊಂಡಿದ್ದ ಶಿನಿಪ್ರವೀರ ಸಾತ್ಯಕಿಯನ್ನು ಶೀಘ್ರ ನಿಶಿತ ಪೃಷತ್ಕಗಳಿಂದ ಮುಚ್ಚಿದನು. ಆದರೆ ಶೈನೇಯನ ಬಾಣಗಳಿಂದ ಹೊಡೆಯಲ್ಪಟ್ಟು ಕೆಳಗುರುಳಿದನು.

08060007a ಪುತ್ರೇ ಹತೇ ಕ್ರೋಧಪರೀತಚೇತಾಃ ಕರ್ಣಃ ಶಿನೀನಾಂ ಋಷಭಂ ಜಿಘಾಂಸುಃ।
08060007c ಹತೋಽಸಿ ಶೈನೇಯ ಇತಿ ಬ್ರುವನ್ಸ ವ್ಯವಾಸೃಜದ್ಬಾಣಮಮಿತ್ರಸಾಹಂ।।

ಪುತ್ರನು ಹತನಾಗಲು ವಿಪರೀತವಾಗಿ ಕೋಪಗೊಂಡ ಕರ್ಣನು ಶಿನಿಗಳ ವೃಷಭ ಸಾತ್ಯಕಿಯನ್ನು ಕೊಲ್ಲಲು ಬಯಸಿ “ಶೈನೇಯ! ನೀನು ಸತ್ತೆ!” ಎಂದು ಹೇಳುತ್ತ ಅಮಿತ್ರರಿಗೆ ಸಹಿಸಲಾಗದ ಬಾಣವನ್ನು ಪ್ರಯೋಗಿಸಿದನು.

08060008a ಸ ತಸ್ಯ ಚಿಚ್ಚೇದ ಶರಂ ಶಿಖಂಡೀ ತ್ರಿಭಿಸ್ತ್ರಿಭಿಶ್ಚ ಪ್ರತುತೋದ ಕರ್ಣಂ।
08060008c ಶಿಖಂಡಿನಃ ಕಾರ್ಮುಕಂ ಸ ಧ್ವಜಂ ಚ ಚ್ಚಿತ್ತ್ವಾ ಶರಾಭ್ಯಾಮಹನತ್ಸುಜಾತಂ।।

ಅವನ ಆ ಶರವನ್ನು ಶಿಖಂಡಿಯು ಕತ್ತರಿಸಿ ಮೂವತ್ಮೂರು ಬಾಣಗಳಿಂದ ಕರ್ಣನನ್ನು ಪ್ರತಿಯಾಗಿ ಹೊಡೆದನು. ಅದಕ್ಕೆ ಪ್ರತಿಯಾಗಿ ಕರ್ಣನು ಚೆನ್ನಾಗಿ ಪ್ರಯೋಗಿಸಿದ ಎರಡು ಬಾಣಗಳಿಂದ ಶಿಖಂಡಿಯ ಧನುಸ್ಸನ್ನೂ ಧ್ವಜವನ್ನೂ ಕತ್ತರಿಸಿ ಕೆಳಕ್ಕೆ ಬೀಳಿಸಿದನು.

08060009a ಶಿಖಂಡಿನಂ ಷಡ್ಭಿರವಿಧ್ಯದುಗ್ರೋ ದಾಂತೋ ಧಾರ್ಷ್ಟದ್ಯುಮ್ನಶಿರಶ್ಚಕರ್ತ।
08060009c ಅಥಾಭಿನತ್ಸುತಸೋಮಂ ಶರೇಣ ಸ ಸಂಶಿತೇನಾಧಿರಥಿರ್ಮಹಾತ್ಮಾ।।

ಆ ಉಗ್ರ ಕರ್ಣನು ಶಿಖಂಡಿಯನ್ನು ಆರು ಬಾಣಗಳಿಂದ ಹೊಡೆದು ದಾಂತ ಧೃಷ್ಟದ್ಯುಮ್ನನ ಮಗನ ಶಿರವನ್ನು ಕತ್ತರಿಸಿದನು. ಅನಂತರ ಮಹಾತ್ಮ ಆಧಿರಥಿಯು ಶರಗಳಿಂದ ಸುತಸೋಮನನ್ನು ಆಕ್ರಮಣಿಸಿದನು.

08060010a ಅಥಾಕ್ರಂದೇ ತುಮುಲೇ ವರ್ತಮಾನೇ ಧಾರ್ಷ್ಟದ್ಯುಮ್ನೇ ನಿಹತೇ ತತ್ರ ಕೃಷ್ಣಃ।
08060010c ಅಪಾಂಚಾಲ್ಯಂ ಕ್ರಿಯತೇ ಯಾಹಿ ಪಾರ್ಥ ಕರ್ಣಂ ಜಹೀತ್ಯಬ್ರವೀದ್ರಾಜಸಿಂಹ।।

ಧೃಷ್ಟದ್ಯುಮ್ನನ ಮಗನು ಹತನಾಗಿ ತುಮುಲ ಆಕ್ರಂದವು ನಡೆಯುತ್ತಿರಲು ಕೃಷ್ಣನು “ಪಾರ್ಥ! ಕರ್ಣನು ರಣಭೂಮಿಯನ್ನು ಪಾಂಚಾಲ್ಯರಿಲ್ಲದಿರುವಂತೆ ಮಾಡುತ್ತಿದ್ದಾನೆ. ರಾಜಸಿಂಹ! ಹೋಗಿ ಕರ್ಣನನ್ನು ಸಂಹರಿಸು!” ಎಂದು ಹೇಳಿದನು.

08060011a ತತಃ ಪ್ರಹಸ್ಯಾಶು ನರಪ್ರವೀರೋ ರಥಂ ರಥೇನಾಧಿರಥೇರ್ಜಗಾಮ।
08060011c ಭಯೇ ತೇಷಾಂ ತ್ರಾಣಮಿಚ್ಚನ್ಸುಬಾಹುರ್ ಅಭ್ಯಾಹತಾನಾಂ ರಥಯೂಥಪೇನ।।

ಆಗ ರಥಯೂಥಪ ಕರ್ಣನಿಂದ ಪ್ರಹರಿಸಲ್ಪಟ್ಟು ಭಯಗೊಂಡಿರುವ ಅವರನ್ನು ರಕ್ಷಿಸಲು ಬಯಸಿ ಸುಬಾಹು ನರಪ್ರವೀರ ಅರ್ಜುನನು ನಗುತ್ತಾ ತನ್ನ ರಥದಲ್ಲಿ ಕುಳಿತು ಆಧಿರಥನ ರಥದ ಬಳಿ ಬಂದನು.

08060012a ವಿಸ್ಫಾರ್ಯ ಗಾಂಡೀವಮಥೋಗ್ರಘೋಷಂ ಜ್ಯಯಾ ಸಮಾಹತ್ಯ ತಲೇ ಭೃಶಂ ಚ।
08060012c ಬಾಣಾಂದಕಾರಂ ಸಹಸೈವ ಕೃತ್ವಾ ಜಘಾನ ನಾಗಾಶ್ವರಥಾನ್ನರಾಂಶ್ಚ।।

ಉಗ್ರಘೋಷವುಳ್ಳ ಗಾಂಡೀವವನ್ನು ಹಿಡಿದು ಮೌರ್ವಿಯಿಂದ ಎಳೆದು ಟೇಂಕರಿಸಿ, ಅರ್ಜುನನು ಕೂಡಲೇ ಬಾಣಾಂಧಕರವನ್ನು ಸೃಷ್ಟಿಸಿ, ಆನೆ-ಕುದುರೆ-ರಥ-ಪದಾತಿಗಳನ್ನು ಸಂಹರಿಸಿದನು.

08060013a ತಂ ಭೀಮಸೇನೋಽನು ಯಯೌ ರಥೇನ ಪೃಷ್ಠೇ ರಕ್ಷನ್ಪಾಂಡವಮೇಕವೀರಂ।
08060013c ತೌ ರಾಜಪುತ್ರೌ ತ್ವರಿತೌ ರಥಾಭ್ಯಾಂ ಕರ್ಣಾಯ ಯಾತಾವರಿಭಿರ್ವಿಮುಕ್ತೌ।।

ಆ ಪಾಂಡವ ಏಕವೀರನನ್ನು ಹಿಂದಿನಿಂದ ರಕ್ಷಿಸುತ್ತಾ ಭೀಮಸೇನನು ರಥದಿಂದ ಹಿಂಬಾಲಿಸಿ ಬಂದನು. ಆ ಇಬ್ಬರು ರಾಜಪುತ್ರರೂ ತ್ವರೆಮಾಡಿ ರಥಗಳಿಂದ ಕರ್ಣನ ರಥದ ಕಡೆ ಧಾವಿಸಿ ಆಕ್ರಮಣಿಸಿದರು.

08060014a ಅತ್ರಾಂತರೇ ಸುಮಹತ್ಸೂತಪುತ್ರಶ್ ಚಕ್ರೇ ಯುದ್ಧಂ ಸೋಮಕಾನ್ಸಂಪ್ರಮೃದ್ನನ್।
08060014c ರಥಾಶ್ವಮಾತಂಗಗಣಾಂ ಜಘಾನ ಪ್ರಚ್ಚಾದಯಾಮಾಸ ದಿಶಃ ಶರೈಶ್ಚ।।

ಅದರ ಮಧ್ಯದಲ್ಲಿ ಸೂತಪುತ್ರನು ಸೋಮಕರನ್ನು ಮರ್ದಿಸುತ್ತಾ ಜೋರಾಗಿ ಯುದ್ಧಮಾಡುತ್ತಿದ್ದನು. ಅವನು ರಥ-ಅಶ್ವ-ಮಾತಂಗ ಗಣಗಳನ್ನು ಸಂಹರಿಸಿ, ಶರಗಳಿಂದ ದಿಕ್ಕುಗಳನ್ನು ಆಚ್ಛಾದಿಸಿದನು.

08060015a ತಮುತ್ತಮೌಜಾ ಜನಮೇಜಯಶ್ಚ ಕ್ರುದ್ಧೌ ಯುಧಾಮನ್ಯುಶಿಖಂಡಿನೌ ಚ।
08060015c ಕರ್ಣಂ ವಿನೇದುಃ ಸಹಿತಾಃ ಪೃಷತ್ಕೈಃ ಸಮ್ಮರ್ದಮಾನಾಃ ಸಹ ಪಾರ್ಷತೇನ।।

ಅದಕ್ಕೆ ಪ್ರತಿಯಾಗಿ ಉತ್ತಮೌಜಸ, ಜನಮೇಜಯ, ಕ್ರುದ್ಧರಾದ ಯುಧಾಮನ್ಯು-ಶಿಖಂಡಿಯರು ಪಾರ್ಷತ ಧೃಷ್ಟದ್ಯುಮ್ನನನ್ನೊಡಗೂಡಿ ಪೃಷತ್ಕಗಳಿಂದ ಕರ್ಣನನ್ನು ಮರ್ದಿಸುತ್ತಾ ಸಿಂಹನಾದಗೈದರು.

08060016a ತೇ ಪಂಚ ಪಾಂಚಾಲರಥಾಃ ಸುರೂಪೈರ್ ವೈಕರ್ತನಂ ಕರ್ಣಮಭಿದ್ರವಂತಃ।
08060016c ತಸ್ಮಾದ್ರಥಾಚ್ಚ್ಯಾವಯಿತುಂ ನ ಶೇಕುರ್ ಧೈರ್ಯಾತ್ಕೃತಾತ್ಮಾನಮಿವೇಂದ್ರಿಯಾಣಿ।।

ವೈಕರ್ತನ ಕರ್ಣನನ್ನು ಆಕ್ರಮಣಿಸುತ್ತಿದ್ದ ಆ ಐವರು ಸುರೂಪೀ ಪಾಂಚಾಲಮಹಾರಥರು ಜಿತೇಂದ್ರಿಯನನ್ನು ಸ್ಥೈರ್ಯದಿಂದ ಕದಲಿಸಲು ಶಕ್ಯವಲ್ಲದ ಪಂಚೇಂದ್ರಿಯಗಳಂತೆ ಕರ್ಣನನ್ನು ರಥದಿಂದ ಕದಲಿಸಲು ಶಕ್ಯರಾಗಲಿಲ್ಲ.

08060017a ತೇಷಾಂ ಧನೂಂಷಿ ಧ್ವಜವಾಜಿಸೂತಾಂಸ್ ತೂಣಂ ಪತಾಕಾಶ್ಚ ನಿಕೃತ್ಯ ಬಾಣೈಃ।
08060017c ತಾನ್ಪಂಚಭಿಃ ಸ ತ್ವಹನತ್ಪೃಷತ್ಕೈಃ ಕರ್ಣಸ್ತತಃ ಸಿಂಹ ಇವೋನ್ನನಾದ।।

ಅವರ ಧನುಸ್ಸು, ಧ್ವಜ, ಕುದುರೆಗಳು, ಸಾರಥಿಗಳು, ಪತಾಕೆಗಳನ್ನು ಬಾಣಗಳಿಂದ ಕತ್ತರಿಸಿ ಕರ್ಣನು ಆ ಐವರನ್ನೂ ಪೃಷತ್ಕಗಳಿಂದ ಪ್ರಹರಿಸಿ ಸಿಂಹದಂತೆ ಗರ್ಜಿಸಿದನು.

08060018a ತಸ್ಯಾಸ್ಯತಸ್ತಾನಭಿನಿಘ್ನತಶ್ಚ ಜ್ಯಾಬಾಣಹಸ್ತಸ್ಯ ಧನುಃಸ್ವನೇನ।
08060018c ಸಾದ್ರಿದ್ರುಮಾ ಸ್ಯಾತ್ಪೃಥಿವೀ ವಿಶೀರ್ಣಾ ಇತ್ಯೇವ ಮತ್ವಾ ಜನತಾ ವ್ಯಷೀದತ್।।

ಮೌರ್ವಿ-ಬಾಣಗಳನ್ನು ಹಿಡಿದು ನಿರಂತರವಾಗಿ ಬಾಣಗಳನ್ನು ಪ್ರಯೋಗಿಸಿ ಶತ್ರುಗಳನ್ನು ಸಂಹರಿಸುತ್ತಿದ್ದ ಅವನ ಧನುಸ್ಸಿನ ಟೇಂಕಾರ ಶಬ್ಧದಿಂದ ಗಿರಿವೃಕ್ಷಗಳೊಂದಿಗೆ ಭೂಮಿಯು ಸೀಳಿಹೋಗುತ್ತಿದೆಯೋ ಎಂದು ತಿಳಿದು ಜನರು ಖಿನ್ನರಾದರು.

08060019a ಸ ಶಕ್ರಚಾಪಪ್ರತಿಮೇನ ಧನ್ವನಾ ಭೃಶಾತತೇನಾಧಿರಥಿಃ ಶರಾನ್ಸೃಜನ್।
08060019c ಬಭೌ ರಣೇ ದೀಪ್ತಮರೀಚಿಮಂಡಲೋ ಯಥಾಂಶುಮಾಲೀ ಪರಿವೇಷವಾಂಸ್ತಥಾ।।

ಆಧಿರಥಿಯು ಶಕ್ರಚಾಪದಂತಿರುವ ಧನುಸ್ಸಿನಿಂದ ಅನವರತವಾಗಿ ಅನೇಕ ಶರಗಳನ್ನು ಸೃಷ್ಟಿಸುತ್ತಾ ಮರೀಚಿಮಂಡಲದಲ್ಲಿ ಉರಿಯುತ್ತಿರುವ ಅಂಶುಮಾಲೀ ಸೂರ್ಯನಂತೆಯೇ ರಣದಲ್ಲಿ ಪ್ರಕಾಶಿಸುತ್ತಿದ್ದನು.

08060020a ಶಿಖಂಡಿನಂ ದ್ವಾದಶಭಿಃ ಪರಾಭಿನಚ್ ಚಿತೈಃ ಶರೈಃ ಷಡ್ಭಿರಥೋತ್ತಮೌಜಸಂ।
08060020c ತ್ರಿಭಿರ್ಯುಧಾಮನ್ಯುಮವಿಧ್ಯದಾಶುಗೈಸ್ ತ್ರಿಭಿಸ್ತ್ರಿಭಿಃ ಸೋಮಕಪಾರ್ಷತಾತ್ಮಜೌ।।

ಅವನು ಶಿಖಂಡಿಯನ್ನು ಹನ್ನೆರಡು ಶರಗಳಿಂದ, ಉತ್ತಮೌಜಸನನ್ನು ಆರು ನಿಶಿತ ಬಾಣಗಳಿಂದಲೂ, ಯುಧಾಮನ್ಯುವನ್ನು ಮೂರು ಬಾಣಗಳಿಂದ ಹೊಡೆದು ಮೂರು ಮೂರರಿಂದ ಜನಮೇಜಯ-ಧೃಷ್ಟದ್ಯುಮ್ನರನ್ನು ಪ್ರಹರಿಸಿದನು.

08060021a ಪರಾಜಿತಾಃ ಪಂಚ ಮಹಾರಥಾಸ್ತು ತೇ ಮಹಾಹವೇ ಸೂತಸುತೇನ ಮಾರಿಷ।
08060021c ನಿರುದ್ಯಮಾಸ್ತಸ್ಥುರಮಿತ್ರಮರ್ದನಾ ಯಥೇಂದ್ರಿಯಾರ್ಥಾತ್ಮವತಾ ಪರಾಜಿತಾಃ।।

ಮಾರಿಷ! ಜಿತೇಂದ್ರಿಯ ಆತ್ಮವತನಿಂದ ಇಂದ್ರಿಯಗಳು ಹೇಗೋ ಹಾಗೆ ಮಹಾಹವದಲ್ಲಿ ಸೂತಸುತನಿಂದ ಪರಾಜಿತರಾದ ಆ ಐವರು ಅಮಿತ್ರಮರ್ದನ ಮಹಾರಥರು ನಿಶ್ಚೇಷ್ಟರಾಗಿ ನಿಂತಿದ್ದರು.

08060022a ನಿಮಜ್ಜತಸ್ತಾನಥ ಕರ್ಣಸಾಗರೇ ವಿಪನ್ನನಾವೋ ವಣಿಜೋ ಯಥಾರ್ಣವೇ।
08060022c ಉದ್ದಧ್ರಿರೇ ನೌಭಿರಿವಾರ್ಣವಾದ್ರಥೈಃ ಸುಕಲ್ಪಿತೈರ್ದ್ರೌಪದಿಜಾಃ ಸ್ವಮಾತುಲಾನ್।।

ಸಮುದ್ರದಲ್ಲಿ ಒಡೆದುಹೋದ ನಾವೆಯಲ್ಲಿರುವ ವಣಿಜರಂತೆ ಕರ್ಣಸಾಗರದಲ್ಲಿ ಮುಳುಗಿಹೋಗುತ್ತಿರುವ ತಮ್ಮ ಸೋದರ ಮಾವಂದಿರನ್ನು ದ್ರೌಪದಿಯ ಐವರು ಮಕ್ಕಳು ಸಾಗರದಲ್ಲಿ ಹೊಸ ನಾವೆಗಳಂತಿರುವ ಸುಸಜ್ಜಿತ ರಥಗಳಿಂದ ಉದ್ಧರಿಸಿದರು.

08060023a ತತಃ ಶಿನೀನಾಂ ಋಷಭಃ ಶಿತೈಃ ಶರೈರ್ ನಿಕೃತ್ಯ ಕರ್ಣಪ್ರಹಿತಾನಿಷೂನ್ಬಹೂನ್।
08060023c ವಿದಾರ್ಯ ಕರ್ಣಂ ನಿಶಿತೈರಯಸ್ಮಯೈಸ್ ತವಾತ್ಮಜಂ ಜ್ಯೇಷ್ಠಮವಿಧ್ಯದಷ್ಟಭಿಃ।।

ಆಗ ಶಿನಿಪ್ರವೀರ ಸಾತ್ಯಕಿಯು ಕರ್ಣನು ಪ್ರಯೋಗಿಸಿದ ಅನೇಕ ಬಾಣಗಳನ್ನು ಕತ್ತರಿಸಿ, ಕರ್ಣನನ್ನು ನಿಶಿತ ಆಯಸಗಳಿಂದ ಗಾಯಗೊಳಿಸಿ, ನಿನ್ನ ಹಿರಿಯ ಮಗನನ್ನು ಎಂಟು ಬಾಣಗಳಿಂದ ಹೊಡೆದನು.

08060024a ಕೃಪೋಽಥ ಭೋಜಶ್ಚ ತವಾತ್ಮಜಸ್ತಥಾ ಸ್ವಯಂ ಚ ಕರ್ಣೋ ನಿಶಿತೈರತಾಡಯತ್।
08060024c ಸ ತೈಶ್ಚತುರ್ಭಿರ್ಯುಯುಧೇ ಯದೂತ್ತಮೋ ದಿಗೀಶ್ವರೈರ್ದೈತ್ಯಪತಿರ್ಯಥಾ ತಥಾ।।

ಕೂಡಲೇ ಕೃಪ, ಭೋಜ, ನಿನ್ನ ಮಗ ಮತ್ತು ಸ್ವಯಂ ಕರ್ಣರು ಅವನನ್ನು ನಿಶಿತ ಬಾಣಗಳಿಂದ ಹೊಡೆದರು. ಆ ಯದೂತ್ತಮನಾದರೋ ಹಿಂದೆ ದೈತ್ಯಪತಿಯು ದಿಕ್ಪಾಲಕರನ್ನು ಎದುರಿಸಿದಂತೆ ಆ ನಾಲ್ವರನ್ನು ಎದುರಿಸಿ ಯುದ್ಧಮಾಡಿದನು.

08060025a ಸಮಾನತೇನೇಷ್ವಸನೇನ ಕೂಜತಾ ಭೃಶಾತತೇನಾಮಿತಬಾಣವರ್ಷಿಣಾ।
08060025c ಬಭೂವ ದುರ್ಧರ್ಷತರಃ ಸ ಸಾತ್ಯಕಿಃ ಶರನ್ನಭೋಮಧ್ಯಗತೋ ಯಥಾ ರವಿಃ।।

ಸಮಾನ ನಿಸ್ವನದಿಂದ ಟೇಂಕರಿಸುತ್ತಿರುವ ಅಮಿತ ಬಾಣಗಳ ಮಳೆಗರೆಯುತ್ತಿರುವ ಆ ಧನುಸ್ಸನ್ನು ಹಿಡಿದ ಸಾತ್ಯಕಿಯು ಶರತ್ಕಾಲದಲ್ಲಿ ಆಕಾಶದ ಮಧ್ಯಗತನಾಗಿದ್ದ ರವಿಯಂತೆ ದುರ್ಧರ್ಷನಾದನು.

08060026a ಪುನಃ ಸಮಾಸಾದ್ಯ ರಥಾನ್ಸುದಂಶಿತಾಃ ಶಿನಿಪ್ರವೀರಂ ಜುಗುಪುಃ ಪರಂತಪಾಃ।
08060026c ಸಮೇತ್ಯ ಪಾಂಚಾಲರಥಾ ಮಹಾರಣೇ ಮರುದ್ಗಣಾಃ ಶಕ್ರಮಿವಾರಿನಿಗ್ರಹೇ।।

ಅರಿನಿಗ್ರಹದಲ್ಲಿ ಶಕ್ರನನ್ನು ಮರುದ್ಗಣಗಳು ಹೇಗೋ ಹಾಗೆ ಪುನಃ ಉತ್ತಮ ರಕ್ಷಣೆಯುಳ್ಳ ರಥಗಳನ್ನು ಪಡೆದು ಪರಂತಪ ಪಾಂಚಾಲರಥರು ಒಂದಾಗಿ ಮಹಾರಣದಲ್ಲಿ ಶಿನಿಪ್ರವೀರನನ್ನು ರಕ್ಷಿಸಲು ಬಂದರು.

08060027a ತತೋಽಭವದ್ಯುದ್ಧಮತೀವ ದಾರುಣಂ ತವಾಹಿತಾನಾಂ ತವ ಸೈನಿಕೈಃ ಸಹ।
08060027c ರಥಾಶ್ವಮಾತಂಗವಿನಾಶನಂ ತಥಾ ಯಥಾ ಸುರಾಣಾಮಸುರೈಃ ಪುರಾಭವತ್।।

ಆಗ ನಿನ್ನ ಅಹಿತರು ಮತ್ತು ನಿನ್ನ ಸೈನಿಕರ ನಡುವೆ ಹಿಂದೆ ಸುರಾಸುರರ ನಡುವೆ ನಡೆದಂತೆ ರಥ-ಅಶ್ವ-ಮಾತಂಗ ವಿನಾಶಕಾರಕ ಅತೀವ ದಾರುಣ ಯುದ್ಧವು ನಡೆಯಿತು.

08060028a ರಥದ್ವಿಪಾ ವಾಜಿಪದಾತಯೋಽಪಿ ವಾ ಭ್ರಮಂತಿ ನಾನಾವಿಧಶಸ್ತ್ರವೇಷ್ಟಿತಾಃ।
08060028c ಪರಸ್ಪರೇಣಾಭಿಹತಾಶ್ಚ ಚಸ್ಖಲುರ್ ವಿನೇದುರಾರ್ತಾ ವ್ಯಸವೋಽಪತಂತ ಚ।।

ರಥಗಳು, ಆನೆಗಳು, ಕುದುರೆಗಳು, ಮತ್ತು ಪದಾತಿಗಳು ನಾನಾವಿಧದ ಶಸ್ತ್ರಗಳಿಂದ ಪ್ರಹರಿಸಲ್ಪಟ್ಟು ತಿರುಗುತ್ತಿದ್ದು, ಪರಸ್ಪರರಿಂದ ಅಭಿಹತರಾಗಿ ಭಯಪಟ್ಟು, ಆರ್ತರಾಗಿ ಕೂಗುತ್ತಾ ದುಃಖಿತರಾಗಿ ಕೆಳಗೆ ಬೀಳುತ್ತಿದ್ದವು.

08060029a ತಥಾ ಗತೇ ಭೀಮಮಭೀಸ್ತವಾತ್ಮಜಃ ಸಸಾರ ರಾಜಾವರಜಃ ಕಿರಂ ಶರೈಃ।
08060029c ತಮಭ್ಯಧಾವತ್ತ್ವರಿತೋ ವೃಕೋದರೋ ಮಹಾರುರುಂ ಸಿಂಹ ಇವಾಭಿಪೇತಿವಾನ್।।

ಹೀಗೆ ಯುದ್ಧವು ನಡೆಯುತ್ತಿರಲು ರಾಜನ ತಮ್ಮ ನಿನ್ನ ಮಗ ದುಃಶಾಸನನು ಭಯರಹಿತನಾಗಿ ಬಾಣಗಳನ್ನು ಎರಚುತ್ತಾ ಭೀಮಸೇನನನ್ನು ಸಮೀಪಿಸಿದನು. ಮಹಾರುರುವಿನ ಮೇಲೆ ಸಿಂಹವು ಹೇಗೋ ಹಾಗೆ ತ್ವರೆಮಾಡಿ ಬರುತ್ತಿದ್ದ ಅವನ ಮೇಲೆ ವೃಕೋದರನು ಎರಗಿದನು.

08060030a ತತಸ್ತಯೋರ್ಯುದ್ಧಮತೀತಮಾನುಷಂ ಪ್ರದೀವ್ಯತೋಃ ಪ್ರಾಣದುರೋದರೇಽಭವತ್।
08060030c ಪರಸ್ಪರೇಣಾಭಿನಿವಿಷ್ಟರೋಷಯೋರ್ ಉದಗ್ರಯೋಃ ಶಂಬರಶಕ್ರಯೋರ್ಯಥಾ।।

ಆಗ ಪ್ರಾಣಗಳನ್ನೇ ಪಣವನ್ನಾಗಿಟ್ಟ ಪರಸ್ಪರರ ಮೇಲೆದ್ದ ರೋಷದಿಂದ ತುಂಬಿಹೋಗಿದ್ದ ಅವರಿಬ್ಬರ ನಡುವೆ ಹಿಂದೆ ಶಂಬರ-ಶಕ್ರರ ನಡುವೆ ನಡೆದ ಮಹಾಸಂಗ್ರಾಮದಂತೆ ಅತೀವ ಅಮಾನುಷ ಯುದ್ಧವು ನಡೆಯಿತು.

08060031a ಶರೈಃ ಶರೀರಾಂತಕರೈಃ ಸುತೇಜನೈರ್ ನಿಜಘ್ನತುಸ್ತಾವಿತರೇತರಂ ಭೃಶಂ।
08060031c ಸಕೃತ್ಪ್ರಭಿನ್ನಾವಿವ ವಾಶಿತಾಂತರೇ ಮಹಾಗಜೌ ಮನ್ಮಥಸಕ್ತಚೇತಸೌ।।

ಮದೋದಕಗಳನ್ನು ಸುರಿಸುತ್ತಿರುವ ಮನ್ಮಥಸಕ್ತಚೇತಸ ಮಹಾಗಜಗಳೆರಡು ರತಿಸುಖವನ್ನಪೇಕ್ಷಿಸಿ ನಿಂತಿರುವ ಹೆಣ್ಣಾನೆಯ ಸಮೀಪದಲ್ಲಿ ಹೋರಾಡುವಂತೆ ಅವರಿಬ್ಬರೂ ಶರೀರಗಳಿಗೆ ನೋವನ್ನುಂಟು ಮಾಡುವ ಹರಿತ ಶರಗಳಿಂದ ಅನ್ಯೋನ್ಯರನ್ನು ಬಹಳವಾಗಿ ಗಾಯಗೊಳಿಸುತ್ತಿದ್ದರು.

08060032a ತವಾತ್ಮಜಸ್ಯಾಥ ವೃಕೋದರಸ್ತ್ವರನ್ ಧನುಃ ಕ್ಷುರಾಭ್ಯಾಂ ಧ್ವಜಮೇವ ಚಾಚ್ಛಿನತ್।
08060032c ಲಲಾಟಮಪ್ಯಸ್ಯ ಬಿಭೇದ ಪತ್ರಿಣಾ ಶಿರಶ್ಚ ಕಾಯಾತ್ಪ್ರಜಹಾರ ಸಾರಥೇಃ।।

ಆಗ ವೃಕೋದರನು ತ್ವರೆಮಾಡಿ ಕ್ಷುರಗಳೆರಡರಿಂದ ನಿನ್ನ ಮಗನ ಧನುಸ್ಸನ್ನೂ ಧ್ವಜವನ್ನೂ ಕತ್ತರಿಸಿದನು. ಪತ್ರಿಯಿಂದ ಅವನ ಹಣೆಗೂ ಹೊಡೆದು ಅವನ ಸಾರಥಿಯ ಶಿರವನ್ನು ಶರೀರದಿಂದ ಬೇರ್ಪಡಿಸಿದನು.

08060033a ಸ ರಾಜಪುತ್ರೋಽನ್ಯದವಾಪ್ಯ ಕಾರ್ಮುಕಂ ವೃಕೋದರಂ ದ್ವಾದಶಭಿಃ ಪರಾಭಿನತ್।
08060033c ಸ್ವಯಂ ನಿಯಚ್ಚಂಸ್ತುರಗಾನಜಿಹ್ಮಗೈಃ ಶರೈಶ್ಚ ಭೀಮಂ ಪುನರಭ್ಯವೀವೃಷತ್।।

ಆ ರಾಜಪುತ್ರನು ಅನ್ಯ ಧನುಸ್ಸನ್ನು ತೆಗೆದುಕೊಂಡು ವೃಕೋದರನನ್ನು ಹನ್ನೆರಡು ಬಾಣಗಳಿಂದ ಪ್ರಹರಿಸಿದನು. ತಾನೇ ಸ್ವತಃ ಕುದುರೆಗಳನ್ನು ನಿಯಂತ್ರಿಸುತ್ತಾ ಜಿಹ್ಮಗ ಶರಗಳನ್ನು ಭೀಮನ ಮೇಲೆ ಪುನಃ ಸುರಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ದುಃಶಾಸನಭೀಮಸೇನಯುದ್ಧೇ ಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ದುಃಶಾಸನಭೀಮಸೇನಯುದ್ಧ ಎನ್ನುವ ಅರವತ್ತನೇ ಅಧ್ಯಾಯವು.