ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 58
ಸಾರ
ಭೀಮಸೇನನಿಗೆ ಬೆಂಬಲಿಗನಾಗಿ ಬಂದ ಅರ್ಜುನನು ಕೌರವ ಸೇನೆಯನ್ನು ಧ್ವಂಸಗೊಳಿಸಿದುದು (1-20). ಭೀಮಸೇನನನ್ನು ಭೇಟಿಯಾಗಿ, ಅವನು ಕುಶಲನಾಗಿರುವುದನ್ನು ತಿಳಿದು, ಅರ್ಜುನನು ಕೌರವ ಸೇನೆಯನ್ನು ನುಗ್ಗಿ ಮುಂದೆ ಹೋದುದು (21-28).
8058001 ಸಂಜಯ ಉವಾಚ।
08058001a ರಾಜನ್ಕುರೂಣಾಂ ಪ್ರವರೈರ್ಬಲೈರ್ಭೀಮಮಭಿದ್ರುತಂ।
08058001c ಮಜ್ಜಂತಮಿವ ಕೌಂತೇಯಮುಜ್ಜಿಹೀರ್ಷುರ್ಧನಂಜಯಃ।।
08058002a ವಿಮೃದ್ಯ ಸೂತಪುತ್ರಸ್ಯ ಸೇನಾಂ ಭಾರತ ಸಾಯಕೈಃ।
08058002c ಪ್ರಾಹಿಣೋನ್ಮೃತ್ಯುಲೋಕಾಯ ಪರವೀರಾನ್ಧನಂಜಯಃ।।
ಸಂಜಯನು ಹೇಳಿದನು: “ರಾಜನ್! ಭಾರತ! ಕುರುಗಳ ಬಲಿಷ್ಠ ಸೇನೆಯ ಆಕ್ರಮಣಕ್ಕೊಳಗಾಗಿ ಮುಳುಗಿಹೋಗುತ್ತಿರುವಂತಿದ್ದ ಭೀಮ ಕೌಂತೇಯನನ್ನು ಮೇಲೆತ್ತಲು ಬಯಸಿದ ಧನಂಜಯನು ಸೂತಪುತ್ರನ ಸೇನೆಯನ್ನು ಸಾಯಕಗಳಿಂದ ಸದೆಬಡಿದು ಪರವೀರರನ್ನು ಮೃತ್ಯುಲೋಕಗಳಿಗೆ ಕಳುಹಿಸಿದನು.
08058003a ತತೋಽಸ್ಯಾಂಬರಮಾವೃತ್ಯ ಶರಜಾಲಾನಿ ಭಾಗಶಃ।
08058003c ಅದೃಶ್ಯಂತ ತಥಾನ್ಯೇ ಚ ನಿಘ್ನಂತಸ್ತವ ವಾಹಿನೀಂ।।
ಆ ಶರಜಾಲಗಳು ಭಾಗಶಃ ಆಕಾಶವನ್ನು ಮುಸುಕಿ ಅದೃಶ್ಯವಾಗಿ ಅನ್ಯ ಭಾಗವು ನಿನ್ನ ಸೇನೆಯನ್ನು ಸಂಹರಿಸುತ್ತಿದ್ದವು.
08058004a ಸ ಪಕ್ಷಿಸಂಘಾಚರಿತಮಾಕಾಶಂ ಪೂರಯಂ ಶರೈಃ।
08058004c ಧನಂಜಯೋ ಮಹಾರಾಜ ಕುರೂಣಾಮಂತಕೋಽಭವತ್।।
ಮಹಾರಾಜ! ಸಾಲುಸಾಲಾಗಿ ಹೋಗುತ್ತಿರುವ ಪಕ್ಷಿಸಮೂಹಗಳಂತಿದ್ದ ಶರಗಳಿಂದ ಆಕಾಶವನ್ನು ಮುಚ್ಚಿ ಧನಂಜಯನು ಕುರುಗಳಿಗೆ ಯಮಪ್ರಾಯನಾದನು.
08058005a ತತೋ ಭಲ್ಲೈಃ ಕ್ಷುರಪ್ರೈಶ್ಚ ನಾರಾಚೈರ್ನಿರ್ಮಲೈರಪಿ।
08058005c ಗಾತ್ರಾಣಿ ಪ್ರಾಕ್ಷಿಣೋತ್ಪಾರ್ಥಃ ಶಿರಾಂಸಿ ಚ ಚಕರ್ತ ಹ।।
ಪಾರ್ಥನು ಆಗ ಭಲ್ಲ-ಕ್ಷುರಪ್ರ-ನಿರ್ಮಲ ನಾರಾಚಗಳಿಂದ ಅವರ ಶರೀರಗಳನ್ನು ಗಾಯಗೊಳಿಸಿ ಶಿರಗಳನ್ನು ಕತ್ತರಿಸುತ್ತಿದ್ದನು.
08058006a ಚಿನ್ನಗಾತ್ರೈರ್ವಿಕವಚೈರ್ವಿಶಿರಸ್ಕೈಃ ಸಮಂತತಃ।
08058006c ಪತಿತೈಶ್ಚ ಪತದ್ಭಿಶ್ಚ ಯೋಧೈರಾಸೀತ್ ್ಸಮಾವೃತಂ।।
ತುಂಡಾದ ಕವಚ-ಶಿರಗಳಿಲ್ಲದ ಶರೀರಗಳಿಂದ, ಬೀಳುತ್ತಿರುವ ಮತ್ತು ಬಿದ್ದಿರುವ ಯೋಧರಿಂದ ರಣಭೂಮಿಯು ತುಂಬಿಹೋಯಿತು.
08058007a ಧನಂಜಯಶರಾಭ್ಯಸ್ತೈಃ ಸ್ಯಂದನಾಶ್ವನರದ್ವಿಪೈಃ।
08058007c ರಣಭೂಮಿರಭೂದ್ರಾಜನ್ಮಹಾವೈತರಣೀ ಯಥಾ।।
ರಾಜನ್! ಧನಂಜಯನ ಶರಗಳಿಂದ ಬಿದ್ದ ರಥ-ಅಶ್ವ-ಪದಾತಿ-ಆನೆಗಳಿಂದ ರಣಭೂಮಿಯು ಮಹಾ ವೈತರಣೀ ನದಿಯಂತೆ ದಾಟಲಸಾಧ್ಯವಾಗಿತ್ತು.
08058008a ಈಷಾಚಕ್ರಾಕ್ಷಭಂಗೈಶ್ಚ ವ್ಯಶ್ವೈಃ ಸಾಶ್ವೈಶ್ಚ ಯುಧ್ಯತಾಂ।
08058008c ಸಸೂತೈರ್ಹತಸೂತೈಶ್ಚ ರಥೈಃ ಸ್ತೀರ್ಣಾಭವನ್ಮಹೀ।।
ಈಷಾದಂಡ-ಚಕ್ರ-ಅಚ್ಚುಮರಗಳು ಮುರಿದುಹೋಗಿದ್ದ, ಕುದುರೆಗಳಿದ್ದ, ಕುದುರೆಗಳಿಲ್ಲದ, ಸೂತರಿದ್ದ, ಸೂತರಿಲ್ಲದ, ರಥಗಳಿಂದ ರಣಭೂಮಿಯು ತುಂಬಿಹೋಯಿತು.
08058009a ಸುವರ್ಣವರ್ಮಸಂನಾಹೈರ್ಯೋಧೈಃ ಕನಕಭೂಷಣೈಃ।
08058009c ಆಸ್ಥಿತಾಃ ಕೃತವರ್ಮಾಣೋ ಭದ್ರಾ ನಿತ್ಯಮದಾ ದ್ವಿಪಾಃ।
08058009e ಕ್ರುದ್ಧಾಃ ಕ್ರುದ್ಧೈರ್ಮಹಾಮಾತ್ರೈಃ ಪ್ರೇಷಿತಾರ್ಜುನಮಭ್ಯಯುಃ।।
ಮಹಾಗಾತ್ರದ ನಿತ್ಯವೂ ಮದಿಸಿದ್ದ ಕ್ರುದ್ಧ ಆನೆಗಳು ಸುವರ್ಣಮಯ ಕವಚಗಳನ್ನು ಧರಿಸಿ ಕನಕಭೂಷಣಗಳಿಂದ ಅಲಂಕೃತ ಮಾವಟಿಗ ಯೋಧರ ರಕ್ಷಣೆಗೊಳಗಾಗಿ ಕ್ರೋಧದಿಂದ ಅರ್ಜುನನ ಮೇಲೆ ಬೀಳುತ್ತಿದ್ದವು.
08058010a ಚತುಃಶತಾಃ ಶರವರ್ಷೈರ್ಹತಾಃ ಪೇತುಃ ಕಿರೀಟಿನಾ।
08058010c ಪರ್ಯಸ್ತಾನೀವ ಶೃಂಗಾಣಿ ಸಸತ್ತ್ವಾನಿ ಮಹಾಗಿರೇಃ।।
ಅಂತಹ ನಾಲ್ಕು ನೂರು ಆನೆಗಳನ್ನು ಕಿರೀಟಿಯು ಶರವರ್ಷಗಳಿಂದ ಕೆಳಗುರುಳಿಸಿದನು. ಅವುಗಳು ಜೀವಜಂತುಗಳೊಡನೆ ಕೆಳಗುರುಳಿದ ಮಹಾಗಿರಿ ಶೃಂಗಗಳಂತೆ ತೋರುತ್ತಿದ್ದವು.
08058011a ಧನಂಜಯಶರಾಭ್ಯಸ್ತೈಃ ಸ್ತೀರ್ಣಾ ಭೂರ್ವರವಾರಣೈಃ।
08058011c ಅಭಿಪೇದೇಽರ್ಜುನರಥೋ ಘನಾನ್ಭಿಂದನ್ನಿವಾಂಶುಮಾನ್।।
ಕವಿದ ಮೋಡಗಳನ್ನು ಸೀಳಿ ಹೊರಬರುವ ಅಂಶುಮಾನ್ ಸೂರ್ಯನಂತೆ ಧನಂಜಯನು ಶರಗಳಿಂದ ಶ್ರೇಷ್ಠ ಆನೆಗಳ ಆ ಸೇನೆಯನ್ನು ಭೇದಿಸಿ ರಥದಲ್ಲಿ ಮುಂದುವರೆದನು.
08058012a ಹತೈರ್ಗಜಮನುಷ್ಯಾಶ್ವೈರ್ಭಗ್ನೈಶ್ಚ ಬಹುಧಾ ರಥೈಃ।
08058012c ವಿಶಸ್ತ್ರಪತ್ರಕವಚೈರ್ಯುದ್ಧಶೌಂಡೈರ್ಗತಾಸುಭಿಃ।
08058012e ಅಪವಿದ್ಧಾಯುಧೈರ್ಮಾರ್ಗಃ ಸ್ತೀರ್ಣೋಽಭೂತ್ಫಲ್ಗುನೇನ ವೈ।।
ಹತರಾದ ಅನೇಕ ಆನೆ-ಮನುಷ್ಯ-ಅಶ್ವಗಳಿಂದ ಮತ್ತು ಭಗ್ನವಾದ ರಥಗಳಿಂದ, ಶಸ್ತ್ರ-ಕವಚ-ಯಂತ್ರಗಳಿಂದ ವಿಹೀನರಾಗಿ ಅಸುನೀಗಿದ್ದ ಯುದ್ಧಶೌಂಡರಿಂದಲೂ, ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಆಯುಧಗಳಿಂದಲೂ ಫಲ್ಗುನನ ಆ ಮಾರ್ಗವು ಮುಚ್ಚಿಹೋಗಿತ್ತು.
08058013a ವ್ಯಸ್ಫೂರ್ಜಯಚ್ಚ ಗಾಂಡೀವಂ ಸುಮಹದ್ಭೈರವಸ್ವನಂ।
08058013c ಘೋರೋ ವಜ್ರವಿನಿಷ್ಪೇಷಃ ಸ್ತನಯಿತ್ನೋರಿವಾಂಬರೇ।।
ಮೋಡಗಳು ಆಕಾಶದಲ್ಲಿ ಸಿಡಿಲಿನ ಶಬ್ಧವುಂಟುಮಾಡುವಂತೆ ಅರ್ಜುನನು ತನ್ನ ಗಾಂಡೀವವನ್ನು ಟೇಂಕರಿಸಿ ಮಹಾ ಭೈರವ ಘೋರ ನಿನಾದವನ್ನುಂಟುಮಾಡಿದನು.
08058014a ತತಃ ಪ್ರಾದೀರ್ಯತ ಚಮೂರ್ಧನಂಜಯಶರಾಹತಾ।
08058014c ಮಹಾವಾತಸಮಾವಿದ್ಧಾ ಮಹಾನೌರಿವ ಸಾಗರೇ।।
ಆಗ ಧನಂಜಯನ ಶರಗಳಿಂದ ಹತಗೊಂಡ ಸೇನೆಯು ಮಹಾ ಚಂಡಮಾರುತಕ್ಕೆ ಸಿಲುಕಿದ ಸಾಗರದಲ್ಲಿದ್ದ ಮಹಾನೌಕೆಯಂತೆ ಒಡೆದು ಹೋಯಿತು.
08058015a ನಾನಾರೂಪಾಃ ಪ್ರಹರಣಾಃ ಶರಾ ಗಾಂಡೀವಚೋದಿತಾಃ।
08058015c ಅಲಾತೋಲ್ಕಾಶನಿಪ್ರಖ್ಯಾಸ್ತವ ಸೈನ್ಯಂ ವಿನಿರ್ದಹನ್।।
ಗಾಂಡೀವದಿಂದ ಹೊರಟ ಕೊಳ್ಳಿ, ಧೂಮಕೇತು ಮತ್ತು ಮಿಂಚುಗಳಿಗೆ ಸಮಾನ ಶರಗಳ ಪ್ರಹಾರಗಳಿಂದ ನಿನ್ನ ಸೇನೆಯು ಸುಟ್ಟುಹೋಯಿತು.
08058016a ಮಹಾಗಿರೌ ವೇಣುವನಂ ನಿಶಿ ಪ್ರಜ್ವಲಿತಂ ಯಥಾ।
08058016c ತಥಾ ತವ ಮಹತ್ಸೈನ್ಯಂ ಪ್ರಾಸ್ಫುರಚ್ಚರಪೀಡಿತಂ।।
ರಾತ್ರಿಯ ಹೊತ್ತಿನಲ್ಲಿ ಮಹಾಗಿರಿಯಲ್ಲಿರುವ ಬಿದಿರಿನ ವನವು ಹತ್ತಿಕೊಂಡು ಉರಿಯುವಂತೆ ನಿನ್ನ ಮಹಾಸೇನೆಯು ಅರ್ಜುನನ ಶರಗಳಿಂದ ಪೀಡಿತವಾಗಿ ಉರಿದುಹೋಗುತ್ತಿತ್ತು.
08058017a ಸಂಪಿಷ್ಟದಗ್ಧವಿಧ್ವಸ್ತಂ ತವ ಸೈನ್ಯಂ ಕಿರೀಟಿನಾ।
08058017c ಹತಂ ಪ್ರವಿಹತಂ ಬಾಣೈಃ ಸರ್ವತಃ ಪ್ರದ್ರುತಂ ದಿಶಃ।।
ಕಿರೀಟಿಯಿಂದ ನಿನ್ನ ಸೇನೆಯು ಮುದ್ದೆಮುದ್ದೆಯಾಯಿತು, ಸುಟ್ಟುಹೋಯಿತು ಮತ್ತು ಧ್ವಂಸಗೊಂಡಿತು. ಬಾಣಗಳ ಪ್ರಹಾರದಿಂದ ಅಳಿದುಳಿದ ನಿನ್ನ ಸೇನೆಯು ದಿಕ್ಕಾಪಾಲಾಗಿ ಓಡತೊಡಗಿತು.
08058018a ಮಹಾವನೇ ಮೃಗಗಣಾ ದಾವಾಗ್ನಿಗ್ರಸಿತಾ ಯಥಾ।
08058018c ಕುರವಃ ಪರ್ಯವರ್ತಂತ ನಿರ್ದಗ್ಧಾಃ ಸವ್ಯಸಾಚಿನಾ।।
ಮಹಾವನದಲ್ಲಿ ಕಾಡ್ಗಿಚ್ಚಿಗೆ ಸಿಲುಕಿದ ಮೃಗಗಣಗಳಂತೆ ಸವ್ಯಸಾಚಿಯಿಂದ ಸುಡದೇ ಇದ್ದ ಕುರುಗಳು ದಿಕ್ಕುಕಾಣದೇ ಓಡುತ್ತಿದ್ದರು.
08058019a ಉತ್ಸೃಜ್ಯ ಹಿ ಮಹಾಬಾಹುಂ ಭೀಮಸೇನಂ ತದಾ ರಣೇ।
08058019c ಬಲಂ ಕುರೂಣಾಮುದ್ವಿಗ್ನಂ ಸರ್ವಮಾಸೀತ್ಪರಾಙ್ಮುಖಂ।।
ಮಹಾಬಾಹು ಭೀಮಸೇನನನ್ನು ರಣದಲ್ಲಿಯೇ ಬಿಟ್ಟು ಕುರುಗಳ ಸೇನೆಯೆಲ್ಲವೂ ಉದ್ವಿಗ್ನಗೊಂಡು ಪರಾಙ್ಮುಖವಾಯಿತು.
08058020a ತತಃ ಕುರುಷು ಭಗ್ನೇಷು ಬೀಭತ್ಸುರಪರಾಜಿತಃ।
08058020c ಭೀಮಸೇನಂ ಸಮಾಸಾದ್ಯ ಮುಹೂರ್ತಂ ಸೋಽಭ್ಯವರ್ತತ।।
ಕುರುಗಳು ಭಗ್ನರಾಗಿಹೋಗಲು ಅಪರಾಜಿತ ಬೀಭತ್ಸುವು ಭೀಮಸೇನನ ಬಳಿಸಾರಿ ಸ್ವಲ್ಪಹೊತ್ತು ಅಲ್ಲಿಯೇ ಇದ್ದನು.
08058021a ಸಮಾಗಮ್ಯ ಸ ಭೀಮೇನ ಮಂತ್ರಯಿತ್ವಾ ಚ ಫಲ್ಗುನಃ।
08058021c ವಿಶಲ್ಯಮರುಜಂ ಚಾಸ್ಮೈ ಕಥಯಿತ್ವಾ ಯುಧಿಷ್ಠಿರಂ।।
ಫಲ್ಗುನನು ಭೀಮನನ್ನು ಸಂಧಿಸಿ ಸಮಾಲೋಚನೆಗೈದು ಯುಧಿಷ್ಠಿರನ ಶರೀರದಿಂದ ಬಾಣಗಳನ್ನು ತೆಗೆದುದರ ಮತ್ತು ಅವನು ಕುಶಲನಾಗಿರುವುದರ ಕುರಿತು ಹೇಳಿದನು.
08058022a ಭೀಮಸೇನಾಭ್ಯನುಜ್ಞಾತಸ್ತತಃ ಪ್ರಾಯಾದ್ಧನಂಜಯಃ।
08058022c ನಾದಯನ್ರಥಘೋಷೇಣ ಪೃಥಿವೀಂ ದ್ಯಾಂ ಚ ಭಾರತ।।
ಭಾರತ! ಅನಂತರ ಭೀಮಸೇನನ ಅನುಜ್ಞೆಯನ್ನು ಪಡೆದು ಧನಂಜಯನು ರಥಘೋಷದಿಂದ ಪೃಥ್ವಿ-ಆಕಾಶಗಳನ್ನು ಮೊಳಗಿಸುತ್ತಾ ಮುಂದೆ ನಡೆದನು.
08058023a ತತಃ ಪರಿವೃತೋ ಭೀಮೈರ್ದಶಭಿಃ ಶತ್ರುಪುಂಗವೈಃ।
08058023c ದುಃಶಾಸನಾದವರಜೈಸ್ತವ ಪುತ್ರೈರ್ಧನಂಜಯಃ।।
ಆಗ ಧನಂಜಯನು ಭಯಂಕರವಾಗಿದ್ದ ಶತ್ರುಪುಂಗವರಿಂದ - ನಿನ್ನ ಹತ್ತು ಮಕ್ಕಳು - ದುಃಶಾಸನನ ಅನುಜರಿಂದ- ಸುತ್ತುವರೆಯಲ್ಪಟ್ಟನು.
08058024a ತೇ ತಮಭ್ಯರ್ದಯನ್ಬಾಣೈರುಲ್ಕಾಭಿರಿವ ಕುಂಜರಂ।
08058024c ಆತತೇಷ್ವಸನಾಃ ಕ್ರೂರಾ ನೃತ್ಯಂತ ಇವ ಭಾರತ।।
ಭಾರತ! ಕ್ರೂರವಾಗಿ ನರ್ತಿಸುತ್ತಾ ಪಂಜುಗಳಿಂದ ಆನೆಯನ್ನು ಪೀಡಿಸುವಂತೆ ಅವರು ಸೆಳೆದ ಧನುಸ್ಸುಗಳಿಂದ ಹೊರಟ ಶರಗಳಿಂದ ಅವನನ್ನು ಪೀಡಿಸಿದರು.
08058025a ಅಪಸವ್ಯಾಂಸ್ತು ತಾಂಶ್ಚಕ್ರೇ ರಥೇನ ಮಧುಸೂದನಃ।
08058025c ತತಸ್ತೇ ಪ್ರಾದ್ರವಂ ಶೂರಾಃ ಪರಾಙ್ಮುಖರಥೇಽರ್ಜುನೇ।।
ಮಧುಸೂದನನು ರಥವನ್ನು ಅವರ ಎಡಭಾಗದಿಂದ ಮುಂದೆ ಕೊಂಡೊಯ್ಯಲು ಆ ಶೂರರು34 ಪರಾಙ್ಮುಖನಾಗುತ್ತಿದ್ದ ಅರ್ಜುನನನ್ನು ಆಕ್ರಮಣಿಸಿದರು.
08058026a ತೇಷಾಮಾಪತತಾಂ ಕೇತೂನ್ರಥಾಂಶ್ಚಾಪಾನಿ ಸಾಯಕಾನ್।
08058026c ನಾರಾಚೈರರ್ಧಚಂದ್ರೈಶ್ಚ ಕ್ಷಿಪ್ರಂ ಪಾರ್ಥೋ ನ್ಯಪಾತಯತ್।।
ಮೇಲೆ ಬೀಳುತ್ತಿದ್ದ ಅವರ ಧ್ವಜಗಳನ್ನೂ, ರಥಗಳನ್ನೂ, ಧನುಸ್ಸು-ಸಾಯಕಗಳನ್ನೂ ಪಾರ್ಥನು ಕ್ಷಿಪ್ರವಾಗಿ ಅರ್ಧಚಂದ್ರ ನಾರಾಚಗಳಿಂದ ಕೆಳಗುರುಳಿಸಿದನು.
08058027a ಅಥಾನ್ಯೈರ್ದಶಭಿರ್ಭಲ್ಲೈಃ ಶಿರಾಂಸ್ಯೇಷಾಂ ನ್ಯಪಾತಯತ್।
08058027c ರೋಷಸಂರಕ್ತನೇತ್ರಾಣಿ ಸಂದಷ್ಟೌಷ್ಠಾನಿ ಭೂತಲೇ।
08058027e ತಾನಿ ವಕ್ತ್ರಾಣಿ ವಿಬಭುರ್ವ್ಯೋಮ್ನಿ ತಾರಾಗಣಾ ಇವ।।
ಕೂಡಲೇ ಅನ್ಯ ಹತ್ತು ಭಲ್ಲಗಳಿಂದ ಅವರ ಶಿರಗಳನ್ನು ಕೆಳಗುರುಳಿಸಿದನು. ಕ್ರೋಧದಿಂದ ಕೆಂಪಾಗಿದ್ದ ಕಣ್ಣುಗಳಿದ್ದ, ಅವುಡುಗಚ್ಚಿದ ತುಟಿಗಳಿದ್ದ ಅವರ ಮುಖಗಳು ಭೂಮಿಯ ಮೇಲೆ ಬಿದ್ದು ಆಕಾಶದಲ್ಲಿರುವ ತಾರಾಗಣಗಳಂತೆ ಪ್ರಕಾಶಿಸುತ್ತಿದ್ದವು.
08058028a ತಾಂಸ್ತು ಭಲ್ಲೈರ್ಮಹಾವೇಗೈರ್ದಶಭಿರ್ದಶ ಕೌರವಾನ್।
08058028c ರುಕ್ಮಾಂಗದಾನ್ರುಕ್ಮಪುಂಖೈರ್ವಿದ್ಧ್ವಾ ಪ್ರಾಯಾದಮಿತ್ರಹಾ।।
ಹೀಗೆ ಶತ್ರುಹಂತಕ ಅರ್ಜುನನು ಸುವರ್ಣಮಯ ಸುವರ್ಣಪುಂಖಗಳಿದ್ದ ಮಹಾವೇಗದ ಹತ್ತು ಭಲ್ಲಗಳಿಂದ ಆ ಕೌರವರನ್ನು ಗಾಯಗೊಳಿಸಿ ಮುನ್ನಡೆದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಅಷ್ಠಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಐವತ್ತೆಂಟನೇ ಅಧ್ಯಾಯವು.