057 ಸಂಕುಲಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ಕರ್ಣವಧ ಪರ್ವ

ಅಧ್ಯಾಯ 57

ಸಾರ

ಪಾಂಡವ ಸೇನೆಯು ಪಲಾಯನಗೊಳ್ಳುತ್ತಿರುವುದನ್ನು ನೋಡಿದ ಕೃಷ್ಣನು ಕರ್ಣನೊಡನೆ ದ್ವೈರಥಯುದ್ಧಕೆಂದು ಅರ್ಜುನನ ರಥವನ್ನು ಕರ್ಣನಿರುವಲ್ಲಿಗೆ ಕೊಂಡೊಯ್ದುದು (1-12). ಕೃಷ್ಣಾರ್ಜುನರು ತನ್ನ ಕಡೆಗೇ ಬರುತ್ತಿದ್ದಾರೆಂದೂ, ಅರ್ಜುನನನ್ನು ಸಂಹರಿಸಲು ಇದು ಅವಕಾಶವೆಂದೂ ಶಲ್ಯನು ಕರ್ಣನಿಗೆ ಸೂಚಿಸಿದುದು (13-32). ಕರ್ಣನು ಅರ್ಜುನನ ಪರಾಕ್ರಮಗಳನ್ನು ನೆನಪಿಸಿಕೊಳ್ಳುತ್ತಾ ತಾನಲ್ಲದೆ ಬೇರೆ ಯಾರೂ ಅರ್ಜುನನನ್ನು ಎದುರಿಸಲಾರರು ಎಂದು ಹೇಳಿದುದು (33-50). ದುರ್ಯೋಧನನ ಮಾತಿನಂತೆ ಕೃಷ್ಣಾರ್ಜುನರನ್ನು ತಡೆಯಲು ಪ್ರಯತ್ನಿಸುತ್ತಿದ್ದ ಕುರು ಸೇನಾನಾಯಕರನ್ನು ಅರ್ಜುನನು ಪರಾಜಯಗೊಳಿಸುದುದು (51-69).

08057001 ಸಂಜಯ ಉವಾಚ।
08057001a ಅರ್ಜುನಸ್ತು ಮಹಾರಾಜ ಕೃತ್ವಾ ಸೈನ್ಯಂ ಪೃಥಗ್ವಿಧಂ।
08057001c ಸೂತಪುತ್ರಂ ಸುಸಂರಬ್ಧಂ ದೃಷ್ಟ್ವಾ ಚೈವ ಮಹಾರಣೇ।।
08057002a ಶೋಣಿತೋದಾಂ ಮಹೀಂ ಕೃತ್ವಾ ಮಾಂಸಮಜ್ಜಾಸ್ಥಿವಾಹಿನೀಂ।
08057002c ವಾಸುದೇವಮಿದಂ ವಾಕ್ಯಮಬ್ರವೀತ್ಪುರುಷರ್ಷಭ।।

ಸಂಜಯನು ಹೇಳಿದನು: “ಮಹಾರಾಜ! ಪುರುಷರ್ಷಭ ಅರ್ಜುನನಾದರೋ ಸೇನೆಯನ್ನು ಚದುರಿಸಿ, ಮಹಾರಣದಲ್ಲಿ ಅತಿಕ್ರುದ್ಧ ಸೂತಪುತ್ರನನ್ನು ನೋಡಿ, ರಣಭೂಮಿಯಲ್ಲಿ ರಕ್ತವೇ ನೀರಾದ ಮಾಂಸಮಜ್ಜಗಳನ್ನೇ ತೇಲಿಸಿಕೊಂಡು ಹೋಗುತ್ತಿರುವ ನದಿಯನ್ನು ಸೃಷ್ಟಿಸಿ ವಾಸುದೇವನಿಗೆ ಈ ಮಾತನ್ನಾಡಿದನು:

08057003a ಏಷ ಕೇತೂ ರಣೇ ಕೃಷ್ಣ ಸೂತಪುತ್ರಸ್ಯ ದೃಶ್ಯತೇ।
08057003c ಭೀಮಸೇನಾದಯಶ್ಚೈತೇ ಯೋಧಯಂತಿ ಮಹಾರಥಾನ್।
08057003e ಏತೇ ದ್ರವಂತಿ ಪಾಂಚಾಲಾಃ ಕರ್ಣಾತ್ತ್ರಸ್ತಾ ಜನಾರ್ದನ।।

“ಕೃಷ್ಣ! ಜನಾರ್ದನ! ಅಗೋ ರಣದಲ್ಲಿ ಸೂತಪುತ್ರನ ಧ್ವಜವು ಕಾಣುತ್ತಿದೆ! ಭೀಮಸೇನನೇ ಮೊದಲಾದ ಮಹಾರಥರು ಯುದ್ಧಮಾಡುತ್ತಿದ್ದಾರೆ. ಅಗೋ ಕರ್ಣನಿಗೆ ಹೆದರಿ ಪಾಂಚಾಲರು ಓಡಿಹೋಗುತ್ತಿದ್ದಾರೆ!

08057004a ಏಷ ದುರ್ಯೋಧನೋ ರಾಜಾ ಶ್ವೇತಚ್ಚತ್ರೇಣ ಭಾಸ್ವತಾ।
08057004c ಕರ್ಣೇನ ಭಗ್ನಾನ್ಪಾಂಚಾಲಾನ್ದ್ರಾವಯನ್ಬಹು ಶೋಭತೇ।।

ಇಗೋ! ಕರ್ಣನಿಂದ ಭಗ್ನರಾದ ಪಾಂಚಾಲರನ್ನು ಓಡಿಸುತ್ತಿರುವ ರಾಜಾ ದುರ್ಯೋಧನನು ತನ್ನ ಬೆಳಗುತ್ತಿರುವ ಶ್ವೇತಛತ್ರದಡಿಯಲ್ಲಿ ಬಹಳವಾಗಿ ಶೋಭಿಸುತ್ತಿದ್ದಾನೆ!

08057005a ಕೃಪಶ್ಚ ಕೃತವರ್ಮಾ ಚ ದ್ರೌಣಿಶ್ಚೈವ ಮಹಾಬಲಃ।
08057005c ಏತೇ ರಕ್ಷಂತಿ ರಾಜಾನಂ ಸೂತಪುತ್ರೇಣ ರಕ್ಷಿತಾಃ।
08057005e ಅವಧ್ಯಮಾನಾಸ್ತೇಽಸ್ಮಾಭಿರ್ಘಾತಯಿಷ್ಯಂತಿ ಸೋಮಕಾನ್।।

ಕೃಪ, ಕೃತವರ್ಮ ಮತ್ತು ಮಹಾಬಲ ದ್ರೌಣಿಯರು ಸೂತಪುತ್ರನ ರಕ್ಷಣೆಯಡಿಯಲ್ಲಿ ರಾಜನನ್ನು ರಕ್ಷಿಸುತ್ತಿದ್ದಾರೆ. ನಮ್ಮಿಂದ ಅವಧ್ಯರಾದ ಅವರು ಸೋಮಕರನ್ನು ಘಾತಿಗೊಳಿಸುತ್ತಿದ್ದಾರೆ.

08057006a ಏಷ ಶಲ್ಯೋ ರಥೋಪಸ್ಥೇ ರಶ್ಮಿಸಂಚಾರಕೋವಿದಃ।
08057006c ಸೂತಪುತ್ರರಥಂ ಕೃಷ್ಣ ವಾಹಯನ್ಬಹು ಶೋಭತೇ।।

ಕೃಷ್ಣ! ಇಗೋ ಕಡಿವಾಣಗಳ ಸಂಚಾಲನೆಯಲ್ಲಿ ಕೋವಿದನಾಗಿರುವ ಶಲ್ಯನು ರಥದಲ್ಲಿ ಕುಳಿತು ಸೂತಪುತ್ರನ ರಥವನ್ನು ನಡೆಸುತ್ತಾ ಬಹಳವಾಗಿ ಶೋಭಿಸುತ್ತಿದ್ದಾನೆ!

08057007a ತತ್ರ ಮೇ ಬುದ್ಧಿರುತ್ಪನ್ನಾ ವಾಹಯಾತ್ರ ಮಹಾರಥಂ।
08057007c ನಾಹತ್ವಾ ಸಮರೇ ಕರ್ಣಂ ನಿವರ್ತಿಷ್ಯೇ ಕಥಂ ಚನ।।

ಅಲ್ಲಿಗೆ ಹೋಗಲು ನಿಶ್ಚಯಿಸಿದ್ದೇನೆ. ಅಲ್ಲಿಗೆ ಮಹಾರಥವನ್ನು ನಡೆಸು! ಸಮರದಲ್ಲಿ ಕರ್ಣನನ್ನು ಸಂಹರಿಸದೇ ಯಾವುದೇ ಕಾರಣದಿಂದಲೂ ನಾನು ಹಿಂದಿರುಗುವುದಿಲ್ಲ!

08057008a ರಾಧೇಯೋಽಪ್ಯನ್ಯಥಾ ಪಾರ್ಥಾನ್ಸೃಂಜಯಾಂಶ್ಚ ಮಹಾರಥಾನ್।
08057008c ನಿಃಶೇಷಾನ್ಸಮರೇ ಕುರ್ಯಾತ್ಪಶ್ಯತೋರ್ನೌ ಜನಾರ್ದನ।।

ಜನಾರ್ದನ! ಅನ್ಯಥಾ ರಾಧೇಯನು ಮಹಾರಥ ಪಾರ್ಥರನ್ನು ಮತ್ತು ಸೃಂಜಯರನ್ನು ಸಮರದಲ್ಲಿ, ನಾವಿಬ್ಬರೂ ನೋಡುತ್ತಿದ್ದಂತೆಯೇ, ನಿಃಶೇಷರನ್ನಾಗಿ ಮಾಡಿಬಿಡುತ್ತಾನೆ.”

08057009a ತತಃ ಪ್ರಾಯಾದ್ರಥೇನಾಶು ಕೇಶವಸ್ತವ ವಾಹಿನೀಂ।
08057009c ಕರ್ಣಂ ಪ್ರತಿ ಮಹೇಷ್ವಾಸಂ ದ್ವೈರಥೇ ಸವ್ಯಸಾಚಿನಾ।।

ಆಗ ಕೇಶವನು ಮಹೇಷ್ವಾಸ ಕರ್ಣನೊಡನೆ ದ್ವೈರಥಕ್ಕೆಂದು ಸವ್ಯಸಾಚಿಯನ್ನು ನಿನ್ನ ಸೇನೆಯ ಕಡೆ ಕರೆದುಕೊಂಡುಹೋದನು.

08057010a ಪ್ರಯಾತಶ್ಚ ಮಹಾಬಾಹುಃ ಪಾಂಡವಾನುಜ್ಞಯಾ ಹರಿಃ।
08057010c ಆಶ್ವಾಸಯನ್ರಥೇನೈವ ಪಾಂಡುಸೈನ್ಯಾನಿ ಸರ್ವಶಃ।।

ಪಾಂಡವನ ಅನುಜ್ಞೆಯಂತೆ ಹೋಗುತ್ತಿದ್ದ ಹರಿಯು ರಥದಿಂದಲೇ ಎಲ್ಲಕಡೆ ಪಾಂಡುಸೇನೆಗಳಿಗೆ ಆಶ್ವಾಸನೆಯನ್ನು ನೀಡುತ್ತಿದ್ದನು.

08057011a ರಥಘೋಷಃ ಸ ಸಂಗ್ರಾಮೇ ಪಾಂಡವೇಯಸ್ಯ ಸಂಬಭೌ।
08057011c ವಾಸವಾಶನಿತುಲ್ಯಸ್ಯ ಮಹೌಘಸ್ಯೇವ ಮಾರಿಷ।।

ಮಾರಿಷ! ಸಂಗ್ರಾಮದಲ್ಲಿ ಪಾಂಡವೇಯನ ರಥಘೋಷವು ವಾಸವನ ವಜ್ರಾಯುಧದ ಧ್ವನಿಗೆ ಸಮನಾಗಿತ್ತು ಮತ್ತು ಮಹಾಮೇಘದ ಗರ್ಜನೆಯನ್ನು ಅನುಕರಿಸುತ್ತಿತ್ತು.

08057012a ಮಹತಾ ರಥಘೋಷೇಣ ಪಾಂಡವಃ ಸತ್ಯವಿಕ್ರಮಃ।
08057012c ಅಭ್ಯಯಾದಪ್ರಮೇಯಾತ್ಮಾ ವಿಜಯಸ್ತವ ವಾಹಿನೀಂ।।

ಮಹಾ ರಥಘೋಷದೊಂದಿಗೆ ಸತ್ಯವಿಕ್ರಮ ಅಪ್ರಮೇಯಾತ್ಮ ಪಾಂಡವನು ನಿನ್ನ ಸೇನೆಯನ್ನು ಗೆಲ್ಲಲು ಆಗಮಿಸಿದನು.

08057013a ತಮಾಯಾಂತಂ ಸಮೀಕ್ಷ್ಯೈವ ಶ್ವೇತಾಶ್ವಂ ಕೃಷ್ಣಸಾರಥಿಂ।
08057013c ಮದ್ರರಾಜೋಽಬ್ರವೀತ್ಕರ್ಣಂ ಕೇತುಂ ದೃಷ್ಟ್ವಾ ಮಹಾತ್ಮನಃ।।

ಶ್ವೇತಾಶ್ವ ಕೃಷ್ಣಸಾರಥಿಯು ಬರುತ್ತಿರುವುದನ್ನು ಮತ್ತು ಅವನ ಧ್ವಜವನ್ನು ನೋಡಿದೊಡನೆಯೇ ಮಹಾತ್ಮ ಮದ್ರರಾಜನು ಕರ್ಣನಿಗೆ ಹೇಳಿದನು:

08057014a ಅಯಂ ಸ ರಥ ಆಯಾತಿ ಶ್ವೇತಾಶ್ವಃ ಕೃಷ್ಣಸಾರಥಿಃ।
08057014c ನಿಘ್ನನ್ನಮಿತ್ರಾನ್ಸಮರೇ ಯಂ ಕರ್ಣ ಪರಿಪೃಚ್ಚಸಿ।।

“ಕರ್ಣ! ಸಮರದಲ್ಲಿ ಯಾರ ಕುರಿತು ಕೇಳುತ್ತಿದ್ದೆಯೋ ಆ ಶ್ವೇತಾಶ್ವ ಕೃಷ್ಣಸಾರಥಿಯ ರಥವು, ಶತ್ರುಗಳನ್ನು ಸಂಹರಿಸುತ್ತಾ, ಇಗೋ ಬರುತ್ತಿದೆ!

08057015a ಏಷ ತಿಷ್ಠತಿ ಕೌಂತೇಯಃ ಸಂಸ್ಪೃಶನ್ಗಾಂಡಿವಂ ಧನುಃ।
08057015c ತಂ ಹನಿಷ್ಯಸಿ ಚೇದದ್ಯ ತನ್ನಃ ಶ್ರೇಯೋ ಭವಿಷ್ಯತಿ।।

ಇಗೋ! ಕೌಂತೇಯನು ಗಾಂಡೀವ ಧನುಸ್ಸನ್ನು ಹಿಡಿದು ನಿಂತಿದ್ದಾನೆ! ಇಂದು ನೀನು ಅವನನ್ನು ಸಂಹರಿಸಿದ್ದೇ ಆದರೆ ನಿನಗೆ ಶ್ರೇಯಸ್ಸುಂಟಾಗುತ್ತದೆ!

08057016a ಏಷಾ ವಿದೀರ್ಯತೇ ಸೇನಾ ಧಾರ್ತರಾಷ್ಟ್ರೀ ಸಮಂತತಃ।
08057016c ಅರ್ಜುನಸ್ಯ ಭಯಾತ್ತೂರ್ಣಂ ನಿಘ್ನತಃ ಶಾತ್ರವಾನ್ಬಹೂನ್।।

ಅನೇಕ ಶತ್ರುಗಳನ್ನು ಸಂಹರಿಸುತ್ತಿರುವ ಅರ್ಜುನನ ಭಯದಿಂದ ಧಾರ್ತರಾಷ್ಟ್ರೀ ಸೇನೆಯು ಬೇಗನೆ ಚದುರಿ ಎಲ್ಲ ಕಡೆ ಓಡಿಹೋಗುತ್ತಿದೆ!

08057017a ವರ್ಜಯನ್ಸರ್ವಸೈನ್ಯಾನಿ ತ್ವರತೇ ಹಿ ಧನಂಜಯಃ।
08057017c ತ್ವದರ್ಥಮಿತಿ ಮನ್ಯೇಽಹಂ ಯಥಾಸ್ಯೋದೀರ್ಯತೇ ವಪುಃ।।

ಅವನ ಶರೀರವು ಉಬ್ಬಿರುವುದನ್ನು ನೋಡಿದರೆ ಧನಂಜಯನು ಎಲ್ಲ ಸೇನೆಗಳನ್ನೂ ಬಿಟ್ಟು ನಿನಗೋಸ್ಕರವಾಗಿ ಇಲ್ಲಿಗೆ ತ್ವರೆಮಾಡಿ ಬರುತ್ತಿದ್ದಾನೆ ಎಂದು ನನಗನ್ನಿಸುತ್ತಿದೆ.

08057018a ನ ಹ್ಯವಸ್ಥಾಪ್ಯತೇ ಪಾರ್ಥೋ ಯುಯುತ್ಸುಃ ಕೇನ ಚಿತ್ಸಹ।
08057018c ತ್ವಾಂ ಋತೇ ಕ್ರೋಧದೀಪ್ತೋ ಹಿ ಪೀಡ್ಯಮಾನೇ ವೃಕೋದರೇ।।

ವೃಕೋದರನು ನಿನ್ನಿಂದ ಪೀಡೆಗೊಳಗಾಗಿರಲು ಕ್ರೋಧದಿಂದ ಉರಿಯುತ್ತಿರುವ ಪಾರ್ಥನು ನಿನ್ನನ್ನಲ್ಲದೇ ಬೇರೆ ಯಾರೊಡನೆಯೋ ಯುದ್ಧಕ್ಕೆ ನಿಲ್ಲುವವನಲ್ಲ.

08057019a ವಿರಥಂ ಧರ್ಮರಾಜಂ ಚ ದೃಷ್ಟ್ವಾ ಸುದೃಢವಿಕ್ಷತಂ।
08057019c ಶಿಖಂಡಿನಂ ಸಾತ್ಯಕಿಂ ಚ ಧೃಷ್ಟದ್ಯುಮ್ನಂ ಚ ಪಾರ್ಷತಂ।।
08057020a ದ್ರೌಪದೇಯಾನ್ಯುಧಾಮನ್ಯುಮುತ್ತಮೌಜಸಮೇವ ಚ।
08057020c ನಕುಲಂ ಸಹದೇವಂ ಚ ಭ್ರಾತರೌ ದ್ವೌ ಸಮೀಕ್ಷ್ಯ ಚ।।
08057021a ಸಹಸೈಕರಥಃ ಪಾರ್ಥಸ್ತ್ವಾಮಭ್ಯೇತಿ ಪರಂತಪ।
08057021c ಕ್ರೋಧರಕ್ತೇಕ್ಷಣಃ ಕ್ರುದ್ಧೋ ಜಿಘಾಂಸುಃ ಸರ್ವಧನ್ವಿನಾಂ।।

ಪರಂತಪ! ನಿನ್ನಿಂದ ಧರ್ಮರಾಜ, ಶಿಖಂಡಿ, ಸಾತ್ಯಕಿ, ಪಾರ್ಷತ ಧೃಷ್ಟದ್ಯುಮ್ನ, ದ್ರೌಪದೇಯರು, ಯುಧಾಮನ್ಯು, ಉತ್ತಮೌಜಸ, ಸಹೋದರರಾದ ನಕುಲ ಸಹದೇವರಿಬ್ಬರೂ ವಿರಥರಾಗಿದ್ದುದನ್ನು ಮತ್ತು ಅತಿಯಾಗಿ ಗಾಯಗೊಂಡಿರುವುದನ್ನು ನೋಡಿ ಕ್ರುದ್ಧನಾಗಿ ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ಪಾರ್ಥನು ಒಂದೇರಥದ ಸಹಾಯದಿಂದ ಸರ್ವಧನ್ವಿಗಳನ್ನು ಸಂಹರಿಸಲು ಇಚ್ಛಿಸಿ ನಿನ್ನಕಡೆಯೇ ಬರುತ್ತಿದ್ದಾನೆ!

08057022a ತ್ವರಿತೋಽಭಿಪತತ್ಯಸ್ಮಾಂಸ್ತ್ಯಕ್ತ್ವಾ ಸೈನ್ಯಾನ್ಯಸಂಶಯಂ।
08057022c ತ್ವಂ ಕರ್ಣ ಪ್ರತಿಯಾಹ್ಯೇನಂ ನಾಸ್ತ್ಯನ್ಯೋ ಹಿ ಧನುರ್ಧರಃ।।

ಕರ್ಣ! ನಿಸ್ಸಂಶಯವಾಗಿಯೂ ಆ ಧನುರ್ಧರನು ಅನ್ಯ ಸೇನೆಗಳನ್ನು ಬಿಟ್ಟು ಅತ್ಯಂತ ವೇಗವಾಗಿ ಬಂದು ನಿನ್ನಮೇಲೆಯೇ ಎರಗುತ್ತಿದ್ದಾನೆ.

08057023a ನ ತಂ ಪಶ್ಯಾಮಿ ಲೋಕೇಽಸ್ಮಿಂಸ್ತ್ವತ್ತೋಽಪ್ಯನ್ಯಂ ಧನುರ್ಧರಂ।
08057023c ಅರ್ಜುನಂ ಸಮರೇ ಕ್ರುದ್ಧಂ ಯೋ ವೇಲಾಮಿವ ಧಾರಯೇತ್।।

ಈ ಲೋಕದಲ್ಲಿ ನಿನ್ನ ಹೊರತಾಗಿ ಉಕ್ಕಿಬರುತ್ತಿರುವ ಸಮುದ್ರವನ್ನು ತಡೆದು ನಿಲ್ಲಿಸುವ ತೀರಪ್ರದೇಶದಂತೆ ಸಮರದಲ್ಲಿ ಕ್ರುದ್ಧನಾಗಿರುವ ಅರ್ಜುನನನ್ನು ಎದುರಿಸುವ ಬೇರೆ ಯಾವ ಧನುರ್ಧರನನ್ನೂ ನಾನು ಕಾಣೆ!

08057024a ನ ಚಾಸ್ಯ ರಕ್ಷಾಂ ಪಶ್ಯಾಮಿ ಪೃಷ್ಠತೋ ನ ಚ ಪಾರ್ಶ್ವತಃ।
08057024c ಏಕ ಏವಾಭಿಯಾತಿ ತ್ವಾಂ ಪಶ್ಯ ಸಾಫಲ್ಯಮಾತ್ಮನಃ।।

ಅವನ ಪಾರ್ಶ್ವಗಳಲ್ಲಿಯೂ ಹಿಂದೆಯೂ ರಕ್ಷಕರನ್ನು ನಾನು ಕಾಣುತ್ತಿಲ್ಲ. ಅವನೊಬ್ಬನೇ ಬರುತ್ತಿದ್ದಾನೆ. ನೋಡು! ನಿನ್ನ ಆತ್ಮಸಾಫಲ್ಯವಾಗಲಿಕ್ಕಿದೆ!

08057025a ತ್ವಂ ಹಿ ಕೃಷ್ಣೌ ರಣೇ ಶಕ್ತಃ ಸಂಸಾಧಯಿತುಮಾಹವೇ।
08057025c ತವೈಷ ಭಾರೋ ರಾಧೇಯ ಪ್ರತ್ಯುದ್ಯಾಹಿ ಧನಂಜಯಂ।।

ರಾಧೇಯ! ರಣದಲ್ಲಿ ಆ ಕೃಷ್ಣರಿಬ್ಬರನ್ನೂ ಎದುರಿಸಲು ನೀನೊಬ್ಬನೇ ಶಕ್ಯನಾಗಿರುವೆ. ನಿನ್ನ ಮೇಲೆಯೇ ಇದರ ಭಾರವಿದೆ! ಧನಂಜಯನನ್ನು ಎದುರಿಸಿ ಯುದ್ಧಮಾಡು!

08057026a ತ್ವಂ ಕೃತೋ ಹ್ಯೇವ ಭೀಷ್ಮೇಣ ದ್ರೋಣದ್ರೌಣಿಕೃಪೈರಪಿ।
08057026c ಸವ್ಯಸಾಚಿಪ್ರತಿರಥಸ್ತಂ ನಿವರ್ತಯ ಪಾಂಡವಂ।।

ಭೀಷ್ಮ, ದ್ರೋಣ, ದ್ರೌಣಿ, ಕೃಪರಿಗಿಂತ ನೀನು ಸಮರ್ಥನಾಗಿರುವೆ! ಆದುದರಿಂದ ಪಾಂಡವ ಸವ್ಯಸಾಚಿಯ ರಥದ ಕಡೆ ಹೊರಡು!

08057027a ಲೇಲಿಹಾನಂ ಯಥಾ ಸರ್ಪಂ ಗರ್ಜಂತಂ ಋಷಭಂ ಯಥಾ।
08057027c ಲಯಸ್ಥಿತಂ ಯಥಾ ವ್ಯಾಘ್ರಂ ಜಹಿ ಕರ್ಣ ಧನಂಜಯಂ।।

ಕರ್ಣ! ಸರ್ಪದಂತೆ ಕಟವಾಯಿಯನ್ನು ನೆಕ್ಕಿಕೊಳ್ಳುತ್ತಿರುವ, ಗೂಳಿಯಂತೆ ಗರ್ಜಿಸುತ್ತಿರುವ, ಅರಣ್ಯದಲ್ಲಿರುವ ವ್ಯಾಘ್ರದಂತಿರುವ ಧನಂಜಯನನ್ನು ಸಂಹರಿಸು!

08057028a ಏತೇ ದ್ರವಂತಿ ಸಮರೇ ಧಾರ್ತರಾಷ್ಟ್ರಾ ಮಹಾರಥಾಃ।
08057028c ಅರ್ಜುನಸ್ಯ ಭಯಾತ್ತೂರ್ಣಂ ನಿರಪೇಕ್ಷಾ ಜನಾಧಿಪಾಃ।।

ಇಗೋ ಸಮರದಲ್ಲಿ ಅರ್ಜುನನ ಭಯದಿಂದ ಧಾರ್ತರಾಷ್ಟ್ರರ ಮಹಾರಥ ಜನಾಧಿಪರು ನಿರಪೇಕ್ಷರಾಗಿ ಬೇಗನೇ ಓಡಿಹೋಗುತ್ತಿದ್ದಾರೆ.

08057029a ದ್ರವತಾಮಥ ತೇಷಾಂ ತು ಯುಧಿ ನಾನ್ಯೋಽಸ್ತಿ ಮಾನವಃ।
08057029c ಭಯಹಾ ಯೋ ಭವೇದ್ವೀರ ತ್ವಾಂ ಋತೇ ಸೂತನಂದನ।।

ವೀರ ಸೂತನಂದನ! ನಿನ್ನನ್ನು ಬಿಟ್ಟರೆ ಬೇರೆ ಯಾವ ಮಾನವನೂ ಹೀಗೆ ಓಡಿಹೋಗುತ್ತಿರುವವರ ಭಯವನ್ನು ಹೋಗಲಾಡಿಸಬಲ್ಲನು!

08057030a ಏತೇ ತ್ವಾಂ ಕುರವಃ ಸರ್ವೇ ದ್ವೀಪಮಾಸಾದ್ಯ ಸಂಯುಗೇ।
08057030c ವಿಷ್ಠಿತಾಃ ಪುರುಷವ್ಯಾಘ್ರ ತ್ವತ್ತಃ ಶರಣಕಾಂಕ್ಷಿಣಃ।।

ಪುರುಷವ್ಯಾಘ್ರ! ಈ ಎಲ್ಲ ಕುರುಗಳೂ ಯುದ್ಧದಲ್ಲಿ ದ್ವೀಪದಂತಿರುವ ನಿನ್ನ ಆಶ್ರಯವನ್ನು ಪಡೆಯಲು ಬಯಸಿ ನಿಂತಿದ್ದಾರೆ!

08057031a ವೈದೇಹಾಂಬಷ್ಠಕಾಂಬೋಜಾಸ್ತಥಾ ನಗ್ನಜಿತಸ್ತ್ವಯಾ।
08057031c ಗಾಂಧಾರಾಶ್ಚ ಯಯಾ ಧೃತ್ಯಾ ಜಿತಾಃ ಸಂಖ್ಯೇ ಸುದುರ್ಜಯಾಃ।।
08057032a ತಾಂ ಧೃತಿಂ ಕುರು ರಾಧೇಯ ತತಃ ಪ್ರತ್ಯೇಹಿ ಪಾಂಡವಂ।
08057032c ವಾಸುದೇವಂ ಚ ವಾರ್ಷ್ಣೇಯಂ ಪ್ರೀಯಮಾಣಂ ಕಿರೀಟಿನಾ।।

ರಾಧೇಯ! ಯುದ್ಧದಲ್ಲಿ ಹಿಂದೆ ನೀನು ಯಾವ ಧೈರ್ಯದಿಂದ ದುರ್ಜಯ ವೈದೇಹ-ಅಂಬಷ್ಟ-ಕಾಂಬೋಜ-ನಗ್ನಜಿತ-ಗಾಂಧಾರರನ್ನು ಗೆದ್ದಿದ್ದೆಯೋ ಅದೇ ಧೃತಿಯಿಂದ ಪಾಂಡವನನ್ನು ಮತ್ತು ಕಿರೀಟಿಗೆ ಪ್ರಿಯಕರನಾದ ವಾರ್ಷ್ಣೇಯ ವಾಸುದೇವನನ್ನು ಸಂಹರಿಸು!” 8057033 ಕರ್ಣ ಉವಾಚ।

08057033a ಪ್ರಕೃತಿಸ್ಥೋ ಹಿ ಮೇ ಶಲ್ಯ ಇದಾನೀಂ ಸಮ್ಮತಸ್ತಥಾ।
08057033c ಪ್ರತಿಭಾಸಿ ಮಹಾಬಾಹೋ ವಿಭೀಶ್ಚೈವ ಧನಂಜಯಾತ್।।

ಕರ್ಣನು ಹೇಳಿದನು: “ಶಲ್ಯ! ಈಗ ನೀನು ನಿನ್ನ ಸ್ವಭಾವಕ್ಕೆ ಸಮ್ಮತನಾಗಿದ್ದು ಪ್ರಕಾಶಿಸುತ್ತಿರುವೆ! ಮಹಾಬಾಹೋ! ಧನಂಜಯನಿಗೆ ಭಯಪಡುವ ಕಾರಣವಿಲ್ಲ!

08057034a ಪಶ್ಯ ಬಾಹ್ವೋರ್ಬಲಂ ಮೇಽದ್ಯ ಶಿಕ್ಷಿತಸ್ಯ ಚ ಪಶ್ಯ ಮೇ।
08057034c ಏಕೋಽದ್ಯ ನಿಹನಿಷ್ಯಾಮಿ ಪಾಂಡವಾನಾಂ ಮಹಾಚಮೂಂ।।

ನನ್ನ ಈ ಬಾಹುಗಳ ಬಲವನ್ನು ನೋಡು! ಇಂದು ನನ್ನ ಶಿಕ್ಷಣದ ಶಕ್ತಿಯನ್ನು ನೋಡು! ನಾನೊಬ್ಬನೇ ಪಾಂಡವರ ಮಹಾಸೇನೆಯನ್ನು ವಿನಾಶಗೊಳಿಸುತ್ತೇನೆ!

08057035a ಕೃಷ್ಣೌ ಚ ಪುರುಷವ್ಯಾಘ್ರೌ ತಚ್ಚ ಸತ್ಯಂ ಬ್ರವೀಮಿ ತೇ।
08057035c ನಾಹತ್ವಾ ಯುಧಿ ತೌ ವೀರಾವಪಯಾಸ್ಯೇ ಕಥಂ ಚನ।।

ಆ ಇಬ್ಬರು ಕೃಷ್ಣರೂ ಪುರುಷವ್ಯಾಘ್ರರು. ಯುದ್ಧದಲ್ಲಿ ಆ ಇಬ್ಬರು ವೀರರನ್ನೂ ಸಂಹರಿಸದೇ ನಾನು ಯುದ್ಧದಿಂದ ಹಿಂದಿರುಗುವುದಿಲ್ಲ!

08057036a ಸ್ವಪ್ಸ್ಯೇ ವಾ ನಿಹತಸ್ತಾಭ್ಯಾಮಸತ್ಯೋ ಹಿ ರಣೇ ಜಯಃ।
08057036c ಕೃತಾರ್ಥೋ ವಾ ಭವಿಷ್ಯಾಮಿ ಹತ್ವಾ ತಾವಥ ವಾ ಹತಃ।।

ಅಥವಾ ಅವರಿಬ್ಬರಿಂದ ಹತನಾಗಿ ರಣದಲ್ಲಿ ಮಲಗುತ್ತೇನೆ! ರಣದಲ್ಲಿ ಜಯವು ಅಸತ್ಯವಾದುದು. ಅವರನ್ನು ಸಂಹರಿಸಿಯಾದರೂ ಅಥವಾ ಅವರಿಂದ ಹತನಾಗಿಯಾದರೂ ನಾನು ಕೃತಾರ್ಥನಾಗುತ್ತೇನೆ!

08057037a ನೈತಾದೃಶೋ ಜಾತು ಬಭೂವ ಲೋಕೇ ರಥೋತ್ತಮೋ ಯಾವದನುಶ್ರುತಂ ನಃ।
08057037c ತಮೀದೃಶಂ ಪ್ರತಿಯೋತ್ಸ್ಯಾಮಿ ಪಾರ್ಥಂ ಮಹಾಹವೇ ಪಶ್ಯ ಚ ಪೌರುಷಂ ಮೇ।।

ಇವನಂತಹ ರಥೋತ್ತಮನು ಲೋಕದಲ್ಲಿ ಹುಟ್ಟಿರಲಿಲ್ಲ ಮತ್ತು ಇಂಥವನಿದ್ದನೆಂದು ನಾನು ಕೇಳಿಯೂ ಇಲ್ಲ. ಅಂತಹ ಪಾರ್ಥನನ್ನು ಎದುರಿಸಿ ಯುದ್ಧಮಾಡುತ್ತೇನೆ! ಮಹಾರಣದಲ್ಲಿ ನನ್ನ ಪೌರುಷವನ್ನು ನೋಡು!

08057038a ರಥೇ ಚರತ್ಯೇಷ ರಥಪ್ರವೀರಃ ಶೀಘ್ರೈರ್ಹಯೈಃ ಕೌರವರಾಜಪುತ್ರಃ।
08057038c ಸ ವಾದ್ಯ ಮಾಂ ನೇಷ್ಯತಿ ಕೃಚ್ಚ್ರಮೇತತ್ ಕರ್ಣಸ್ಯಾಂತಾದೇತದಂತಾಃ ಸ್ಥ ಸರ್ವೇ।।

ಈ ರಥಪ್ರವೀರ ಕೌರವರಾಜಪುತ್ರನು ಶೀಘ್ರ ಹಯಗಳಿಂದ ಯುಕ್ತನಾಗಿ ರಥದಲ್ಲಿ ಸಂಚರಿಸುತ್ತಾನೆ. ಇಂದು ಅವನು ಅಥವಾ ನಾನು ಅವನನ್ನು ಸಂಕಟಕ್ಕೀಡುಮಾಡುವವರಿದ್ದೇವೆ. ಕರ್ಣನ ಅಂತ್ಯವಾಯಿತೆಂದರೆ ಎಲ್ಲರ ಅಂತ್ಯವಾದಂತೆಯೇ!

08057039a ಅಸ್ವೇದಿನೌ ರಾಜಪುತ್ರಸ್ಯ ಹಸ್ತಾವ್ ಅವೇಪಿನೌ ಜಾತಕಿಣೌ ಬೃಹಂತೌ।
08057039c ದೃಢಾಯುಧಃ ಕೃತಿಮಾನ್ ಕ್ಷಿಪ್ರಹಸ್ತೋ ನ ಪಾಂಡವೇಯೇನ ಸಮೋಽಸ್ತಿ ಯೋಧಃ।।

ಆ ರಾಜಪುತ್ರನ ಕೈಗಳು ಬೆವರುವುದಿಲ್ಲ ಮತ್ತು ನಡುಗುವುದಿಲ್ಲ. ಅವನ ತೋಳುಗಳು ದೀರ್ಘವಾಗಿಯೂ ದಷ್ಟಪುಷ್ಟವಾಗಿಯೂ ಇವೆ. ದೃಢಾಯುಧ, ಅಸ್ತ್ರಶಾಸ್ತ್ರನಿಪುಣ ಮತ್ತು ಕ್ಷಿಪ್ರಹಸ್ತನಾದ ಪಾಂಡವೇಯನಿಗೆ ಸಮನಾದ ಯೋಧನಿಲ್ಲ!

08057040a ಗೃಹ್ಣಾತ್ಯನೇಕಾನಪಿ ಕಂಕಪತ್ರಾನ್ ಏಕಂ ಯಥಾ ತಾನ್ ಕ್ಷಿತಿಪಾನ್ಪ್ರಮಥ್ಯ।
08057040c ತೇ ಕ್ರೋಶಮಾತ್ರಂ ನಿಪತಂತ್ಯಮೋಘಾಃ ಕಸ್ತೇನ ಯೋಧೋಽಸ್ತಿ ಸಮಃ ಪೃಥಿವ್ಯಾಂ।।

ಅವನು ಅನೇಕ ಕಂಕಪತ್ರ ಶರಗಳನ್ನು ಹಿಡಿದು ಅವು ಒಂದೇ ಬಾಣವೋ ಎಂಬಂತೆ ಧನುಸ್ಸಿಗೆ ಜೋಡಿಸಿ, ಸೆಳೆದು ಬಿಟ್ಟ ಬಾಣಗಳು ಒಂದು ಕ್ರೋಶದವರೆಗೂ ಹೋಗಿ ವಿಫಲವಾಗದೇ ಗುರಿಗಳ ಮೇಲೆ ಬೀಳುತ್ತವೆ. ಅಂಥಹ ಅವನಿಗೆ ಸಮನಾದ ಯೋಧನು ಭೂಮಿಯಲ್ಲಿಯೇ ಯಾರಿದ್ದಾನೆ?

08057041a ಅತೋಷಯತ್ಪಾಂಡವೇಯೋ ಹುತಾಶಂ ಕೃಷ್ಣದ್ವಿತೀಯೋಽತಿರಥಸ್ತರಸ್ವೀ।
08057041c ಲೇಭೇ ಚಕ್ರಂ ಯತ್ರ ಕೃಷ್ಣೋ ಮಹಾತ್ಮಾ ಧನುರ್ಗಾಂಡೀವಂ ಪಾಂಡವಃ ಸವ್ಯಸಾಚೀ।।

ಆ ಅತಿರಥ ತರಸ್ವೀ ಪಾಂಡವೇಯನು ಎರಡನೆ ಕೃಷ್ಣನನ್ನೊಡಗೂಡಿ ಹುತಾಶನನನ್ನು ತೃಪ್ತಿಪಡಿಸಿದನು. ಅಲ್ಲಿ ಮಹಾತ್ಮ ಕೃಷ್ಣನು ಚಕ್ರವನ್ನೂ ಪಾಂಡವ ಸವ್ಯಸಾಚಿಯು ಗಾಂಡಿವ ಧನುಸ್ಸನ್ನೂ ಪಡೆದರು.

08057042a ಶ್ವೇತಾಶ್ವಯುಕ್ತಂ ಚ ಸುಘೋಷಮಗ್ರ್ಯಂ ರಥಂ ಮಹಾಬಾಹುರದೀನಸತ್ತ್ವಃ।
08057042c ಮಹೇಷುಧೀ ಚಾಕ್ಷಯೌ ದಿವ್ಯರೂಪೌ ಶಸ್ತ್ರಾಣಿ ದಿವ್ಯಾನಿ ಚ ಹವ್ಯವಾಹಾತ್।।

ಆ ಮಹಾಬಾಹು ಅದೀನಸತ್ತ್ವನು ಶ್ವೇತಾಶ್ವಗಳಿಂದ ಯುಕ್ತವಾದ, ಉತ್ತಮ ಧ್ವನಿಯನ್ನುಂಟುಮಾಡುವ, ಅಗ್ರಣೀಯ ರಥವನ್ನೂ, ದಿವ್ಯರೂಪದ ಎರಡು ಅಕ್ಷಯ ಬತ್ತಳಿಕೆಗಳನ್ನೂ, ದಿವ್ಯ ಶಸ್ತ್ರಗಳನ್ನೂ ಹವ್ಯವಾಹನನಿಂದ ಪಡೆದನು.

08057043a ತಥೇಂದ್ರಲೋಕೇ ನಿಜಘಾನ ದೈತ್ಯಾನ್ ಅಸಂಖ್ಯೇಯಾನ್ ಕಾಲಕೇಯಾಂಶ್ಚ ಸರ್ವಾನ್।
08057043c ಲೇಭೇ ಶಂಖಂ ದೇವದತ್ತಂ ಸ್ಮ ತತ್ರ ಕೋ ನಾಮ ತೇನಾಭ್ಯಧಿಕಃ ಪೃಥಿವ್ಯಾಂ।।

ಹಾಗೆಯೇ ಅವನು ಇಂದ್ರಲೋಕದಲ್ಲಿ ಅಸಂಖ್ಯ ಕಾಲಕೇಯ ದೈತ್ಯರೆಲ್ಲರನ್ನೂ ಸಂಹರಿಸಿದನು. ಅಲ್ಲಿ ಅವನು ದೇವದತ್ತ ಶಂಖವನ್ನು ಪಡೆದನು. ಅವನಿಗಿಂಥ ಅಧಿಕನಾಗಿರುವವನು ಈ ಭೂಮಿಯಲ್ಲಿ ಯಾರಿದ್ದಾರೆ?

08057044a ಮಹಾದೇವಂ ತೋಷಯಾಮಾಸ ಚೈವ ಸಾಕ್ಷಾತ್ಸುಯುದ್ಧೇನ ಮಹಾನುಭಾವಃ।
08057044c ಲೇಭೇ ತತಃ ಪಾಶುಪತಂ ಸುಘೋರಂ ತ್ರೈಲೋಕ್ಯಸಂಹಾರಕರಂ ಮಹಾಸ್ತ್ರಂ।।

ಆ ಮಹಾನುಭಾವನು ಉತ್ತಮ ಯುದ್ಧದಿಂದ ಸಾಕ್ಷಾತ್ ಮಹಾದೇವನನ್ನು ತೃಪ್ತಿಗೊಳಿಸಿದನು. ಅನಂತರ ಸುಘೋರವೂ ತ್ರೈಲೋಕ್ಯ ಸಂಹಾರಕವೂ ಆದ ಮಹಾ ಪಾಶುಪತಾಸ್ತ್ರವನ್ನು ಪಡೆದುಕೊಂಡನು.

08057045a ಪೃಥಕ್ ಪೃಥಗ್ಲೋಕಪಾಲಾಃ ಸಮೇತಾ ದದುರ್ಹ್ಯಸ್ತ್ರಾಣ್ಯಪ್ರಮೇಯಾಣಿ ಯಸ್ಯ।
08057045c ಯೈಸ್ತಾಂ ಜಘಾನಾಶು ರಣೇ ನೃಸಿಂಹಾನ್ ಸ ಕಾಲಖಂಜಾನಸುರಾನ್ಸಮೇತಾನ್।।

ಜೊತೆಗೆ ಲೋಕಪಾಲಕರು ಪ್ರತ್ಯೇಕ ಪ್ರತ್ಯೇಕವಾಗಿ ಅಪ್ರಮೇಯ ಅಸ್ತ್ರಗಳನ್ನು ದಯಪಾಲಿಸಿದರು. ಅವುಗಳಿಂದಲೇ ಅರ್ಜನನು ರಣದಲ್ಲಿ ಕಾಲಖಂಜ ಅಸುರ ನರಸಿಂಹರನ್ನು ಒಟ್ಟಿಗೇ ಸಂಹರಿಸಿದನು.

08057046a ತಥಾ ವಿರಾಟಸ್ಯ ಪುರೇ ಸಮೇತಾನ್ ಸರ್ವಾನಸ್ಮಾನೇಕರಥೇನ ಜಿತ್ವಾ।
08057046c ಜಹಾರ ತದ್ಗೋಧನಮಾಜಿಮಧ್ಯೇ ವಸ್ತ್ರಾಣಿ ಚಾದತ್ತ ಮಹಾರಥೇಭ್ಯಃ।।

ಹಾಗೆಯೇ ವಿರಾಟ ಪುರದಲ್ಲಿ ಒಟ್ಟಾಗಿದ್ದ ನಮ್ಮೆಲ್ಲರನ್ನೂ ಒಂದೇ ರಥದಿಂದ ಗೆದ್ದು ಅವನು ರಣಮಧ್ಯದಲ್ಲಿ ಆ ಗೋಧನವನ್ನು ಬಿಡಿಸಿಕೊಂಡು ಹೋದನು ಮತ್ತು ಮಹಾರಥರ ವಸ್ತ್ರಗಳನ್ನೂ ಕೊಂಡೊಯ್ದನು.

08057047a ತಮೀದೃಶಂ ವೀರ್ಯಗುಣೋಪಪನ್ನಂ ಕೃಷ್ಣದ್ವಿತೀಯಂ ವರಯೇ ರಣಾಯ।
08057047c ಅನಂತವೀರ್ಯೇಣ ಚ ಕೇಶವೇನ ನಾರಾಯಣೇನಾಪ್ರತಿಮೇನ ಗುಪ್ತಂ।।
08057048a ವರ್ಷಾಯುತೈರ್ಯಸ್ಯ ಗುಣಾ ನ ಶಕ್ಯಾ ವಕ್ತುಂ ಸಮೇತೈರಪಿ ಸರ್ವಲೋಕೈಃ।
08057048c ಮಹಾತ್ಮನಃ ಶಂಖಚಕ್ರಾಸಿಪಾಣೇರ್ ವಿಷ್ಣೋರ್ಜಿಷ್ಣೋರ್ವಸುದೇವಾತ್ಮಜಸ್ಯ।।

ಇಂತಹ ವೀರ್ಯಗುಣಸಂಪನ್ನನಾದ ಈ ಎರಡನೆಯ ಕೃಷ್ಣನನ್ನು ರಣದಲ್ಲಿ ಯುದ್ಧಕ್ಕೆ ಆರಿಸಿಕೋ! ಹತ್ತು ಸಾವಿರ ವರ್ಷಗಳ ಪರ್ಯಂತವಾಗಿ ಎಲ್ಲ ಲೋಕಗಳ ಎಲ್ಲ ಜನರೂ ಒಟ್ಟಾಗಿ ಸೇರಿಕೊಂಡು ಹೇಳಿದರೂ ಯಾವನ ಅನಂತ ವೀರ್ಯಗಳನ್ನು ಪೂರ್ಣವಾಗಿ ಹೇಳಿ ಮುಗಿಸಲು ಸಾಧ್ಯವಾಗುವುದಿಲ್ಲವೋ ಅಂತಹ ಮಹಾತ್ಮ, ಶಂಖ-ಚಕ್ರ-ಖಡ್ಗಗಳನ್ನು ಹಿಡಿದಿರುವ ವಿಷ್ಣು ಜಿಷ್ಣು ವಸುದೇವಾತ್ಮಜ ನಾರಾಯಣನಿಂದ ಅವನು ರಕ್ಷಿತನಾಗಿದ್ದಾನೆ!

08057048e ಭಯಂ ಮೇ ವೈ ಜಾಯತೇ ಸಾಧ್ವಸಂ ಚ ದೃಷ್ಟ್ವಾ ಕೃಷ್ಣಾವೇಕರಥೇ ಸಮೇತೌ।।
08057049a ಉಭೌ ಹಿ ಶೂರೌ ಕೃತಿನೌ ದೃಢಾಸ್ತ್ರೌ ಮಹಾರಥೌ ಸಂಹನನೋಪಪನ್ನೌ।
08057049c ಏತಾದೃಶೌ ಫಲ್ಗುನವಾಸುದೇವೌ ಕೋಽನ್ಯಃ ಪ್ರತೀಯಾನ್ಮದೃತೇ ನು ಶಲ್ಯ।।

ಶಲ್ಯ! ಕೃಷ್ಣರಿಬ್ಬರೂ ಒಂದೇ ರಥದಲ್ಲಿ ಒಟ್ಟಾಗಿರುವುದನ್ನು ನೋಡಿದೊಡನೆಯೇ ನನಗೆ ಭಯವುಂಟಾಗುತ್ತದೆ! ಇಬ್ಬರೂ ಶೂರರೂ, ಬಲಿಷ್ಟರೂ, ದೃಢಾಯುಧರೂ, ಮಹಾರಥರೂ, ಒಳ್ಳೆಯ ಮೈಕಟ್ಟುಳ್ಳವರೂ ಆಗಿದ್ದಾರೆ. ಇಂಥಹ ಫಲ್ಗುನ-ವಾಸುದೇವರನ್ನು ನನ್ನನ್ನು ಬಿಟ್ಟು ಬೇರೆ ಯಾರು ತಾನೇ ಎದುರಿಸಬಲ್ಲರು?

08057050a ಏತಾವಹಂ ಯುಧಿ ವಾ ಪಾತಯಿಷ್ಯೇ ಮಾಂ ವಾ ಕೃಷ್ಣೌ ನಿಹನಿಷ್ಯತೋಽದ್ಯ।
08057050c ಇತಿ ಬ್ರುವಂ ಶಲ್ಯಮಮಿತ್ರಹಂತಾ ಕರ್ಣೋ ರಣೇ ಮೇಘ ಇವೋನ್ನನಾದ।।

ಇಂದಿನ ಯುದ್ಧದಲ್ಲಿ ನಾನು ಆ ಕೃಷ್ಣರಿಬ್ಬರನ್ನೂ ಕೆಡವುತ್ತೇನೆ ಅಥವಾ ಅವರು ನನ್ನನ್ನು ಸಂಹರಿಸುತ್ತಾರೆ!” ಶಲ್ಯನಿಗೆ ಹೀಗೆ ಹೇಳಿ ಅಮಿತ್ರಹಂತ ಕರ್ಣನು ರಣದಲ್ಲಿ ಮೇಘದಂತೆ ಗರ್ಜಿಸಿದನು.

08057051a ಅಭ್ಯೇತ್ಯ ಪುತ್ರೇಣ ತವಾಭಿನಂದಿತಃ ಸಮೇತ್ಯ ಚೋವಾಚ ಕುರುಪ್ರವೀರಾನ್।
08057051c ಕೃಪಂ ಚ ಭೋಜಂ ಚ ಮಹಾಭುಜಾವುಭೌ ತಥೈವ ಗಾಂಧಾರನೃಪಂ ಸಹಾನುಜಂ।
08057051e ಗುರೋಃ ಸುತಂ ಚಾವರಜಂ ತಥಾತ್ಮನಃ ಪದಾತಿನೋಽಥ ದ್ವಿಪಸಾದಿನೋಽನ್ಯಾನ್।।

ಆಗ ನಿನ್ನ ಪುತ್ರನು ಅವನ ಬಳಿ ಬಂದು ಅಭಿನಂದಿಸಿದನು. ಅನಂತರ ಅವನು ಕುರುಪ್ರವೀರ ಮಹಾಭುಜ ಕೃಪ-ಭೋಜರನ್ನೂ, ಹಾಗೆಯೇ ಅನುಜರೊಂದಿಗೆ ಗಾಂಧಾರನೃಪನನ್ನೂ, ಗುರುಸುತ ಅಶ್ವತ್ಥಾಮನನ್ನೂ, ತನ್ನ ತಮ್ಮ ದುಃಶಾಸನನ್ನೂ, ಇತರ ಪದಾತಿ-ಗಜಸೇನೆ-ಅಶ್ವಸೇನೆಗಳನ್ನು ಒಟ್ಟಾಗಿ ಸೇರಿಸಿ ಹೇಳಿದನು:

08057052a ನಿರುಂದತಾಭಿದ್ರವತಾಚ್ಯುತಾರ್ಜುನೌ ಶ್ರಮೇಣ ಸಂಯೋಜಯತಾಶು ಸರ್ವತಃ।
08057052c ಯಥಾ ಭವದ್ಭಿರ್ಭೃಶವಿಕ್ಷತಾವುಭೌ ಸುಖೇನ ಹನ್ಯಾಮಹಮದ್ಯ ಭೂಮಿಪಾಃ।।

“ಭೂಮಿಪರೇ! ಅಚ್ಯುತ-ಅರ್ಜುನರನ್ನು ತಡೆಯಿರಿ. ಎಲ್ಲಕಡೆಗಳಿಂದ ಬಾಣಗಳ ಮಳೆಗರೆಯುತ್ತಾ ಅವರ ಮೇಲೆ ಆಕ್ರಮಣಮಾಡಿರಿ! ನಿಮ್ಮಿಂದ ಕ್ಷತವಿಕ್ಷತರಾದ ಅವರಿಬ್ಬರನ್ನೂ ಸುಲಭವಾಗಿ ಇಂದು ಸಂಹರಿಸಬಹುದು!”

08057053a ತಥೇತಿ ಚೋಕ್ತ್ವಾ ತ್ವರಿತಾಃ ಸ್ಮ ತೇಽರ್ಜುನಂ ಜಿಘಾಂಸವೋ ವೀರತಮಾಃ ಸಮಭ್ಯಯುಃ।
08057053c ನದೀನದಾನ್ಭೂರಿಜಲೋ ಮಹಾರ್ಣವೋ ಯಥಾ ತಥಾ ತಾನ್ಸಮರೇಽರ್ಜುನೋಽಗ್ರಸತ್।।

ಹಾಗೆಯೇ ಆಗಲೆಂದು ಹೇಳಿ ತ್ವರೆಮಾಡಿ ಅರ್ಜುನನನ್ನು ಸಂಹರಿಸಲಿಚ್ಛಿಸಿ ಆ ಮಹಾವೀರರು ಹೊರಟರು. ಆದರೆ ಅಪಾರ ಜಲರಾಶಿಯುಳ್ಳ ಸಮುದ್ರವು ನದೀನದಗಳನ್ನು ನುಂಗಿಹಾಕುವಂತೆ ಸಮರದಲ್ಲಿ ಅರ್ಜುನನು ಅವರೆಲ್ಲರನ್ನೂ ನುಂಗಿಬಿಟ್ಟನು.

08057054a ನ ಸಂದಧಾನೋ ನ ತಥಾ ಶರೋತ್ತಮಾನ್ ಪ್ರಮುಂಚಮಾನೋ ರಿಪುಭಿಃ ಪ್ರದೃಶ್ಯತೇ।
08057054c ಧನಂಜಯಸ್ತಸ್ಯ ಶರೈಶ್ಚ ದಾರಿತಾ ಹತಾಶ್ಚ ಪೇತುರ್ನರವಾಜಿಕುಂಜರಾಃ।।

ಅವನು ಶರಗಳನ್ನು ಸಂಧಾನಮಾಡುತ್ತಿರುವುದಾಗಲೀ ಬಿಡುತ್ತಿರುವುದಾಗಲೀ ಶತ್ರುಗಳಿಗೆ ಕಾಣಿಸುತ್ತಿರಲಿಲ್ಲ. ಆದರೆ ಧನಂಜಯನ ಶರಗಳಿಂದ ಸೀಳಲ್ಪಟ್ಟು ಹತರಾದ ಮನುಷ್ಯ-ಕುದುರೆ-ಆನೆಗಳು ಮಾತ್ರ ಕೆಳಕ್ಕೆ ಬೀಳುತ್ತಿದ್ದವು.

08057055a ಶರಾರ್ಚಿಷಂ ಗಾಂಡಿವಚಾರುಮಂಡಲಂ ಯುಗಾಂತಸೂರ್ಯಪ್ರತಿಮಾನತೇಜಸಂ।
08057055c ನ ಕೌರವಾಃ ಶೇಕುರುದೀಕ್ಷಿತುಂ ಜಯಂ ಯಥಾ ರವಿಂ ವ್ಯಾಧಿತಚಕ್ಷುಷೋ ಜನಾಃ।।

ಗಾಂಡೀವವನ್ನು ಮಂಡಲಾಕಾರದಲ್ಲಿ ಸೆಳೆದು ಬಾಣಗಳನ್ನು ಬಿಡುತ್ತಿದ್ದ ಅರ್ಜುನನು ಯುಗಾಂತದ ಸೂರ್ಯನಂತೆ ಅಪ್ರತಿಮ ತೇಜಸ್ವಿಯಾಗಿದ್ದನು. ಕಣ್ಣುಬೇನೆಯಿರುವ ಜನರು ರವಿಯನ್ನು ನೋಡಲು ಶಕ್ಯರಾಗದಂತೆ ಜಯ ಅರ್ಜುನನನ್ನು ನೋಡಲು ಕೌರವರಿಗೆ ಸಾಧ್ಯವಾಗುತ್ತಿರಲಿಲ್ಲ.

08057056a ತಮಭ್ಯಧಾವದ್ವಿಸೃಜಂ ಶರಾನ್ ಕೃಪಸ್ ತಥೈವ ಭೋಜಸ್ತವ ಚಾತ್ಮಜಃ ಸ್ವಯಂ।
08057056c ಜಿಘಾಂಸುಭಿಸ್ತಾನ್ಕುಶಲೈಃ ಶರೋತ್ತಮಾನ್ ಮಹಾಹವೇ ಸಂಜವಿತಾನ್ಪ್ರಯತ್ನತಃ।
08057056e ಶರೈಃ ಪ್ರಚಿಚ್ಛೇದ ಚ ಪಾಂಡವಸ್ತ್ವರನ್ ಪರಾಭಿನದ್ವಕ್ಷಸಿ ಚ ತ್ರಿಭಿಸ್ತ್ರಿಭಿಃ।।

ಆಗ ಕೃಪ, ಭೋಜ, ಮತ್ತು ಸ್ವಯಂ ನಿನ್ನ ಮಗ ಇವರು ಬಾಣಗಳನ್ನು ಪ್ರಯೋಗಿಸುತ್ತಾ ಅವನನ್ನು ಆಕ್ರಮಣಿಸಿದರು. ಸಂಹರಿಸಲು ಬಯಸಿ ಪ್ರಯತ್ನಪಟ್ಟು ಕುಶಲವಾಗಿ ಬಿಡುತ್ತಿದ್ದ ಅವರ ಉತ್ತಮ ಶರಗಳನ್ನು ಪಾಂಡವನು ತ್ವರೆಮಾಡಿ ಶರಗಳಿಂದಲೇ ತುಂಡರಿಸಿ ತನ್ನ ಶತ್ರುಗಳನ್ನು ಮೂರು ಮೂರು ಬಾಣಗಳಿಂದ ಗಾಯಗೊಳಿಸಿದನು.

08057057a ಸ ಗಾಂಡಿವಾಭ್ಯಾಯತಪೂರ್ಣಮಂಡಲಸ್ ತಪನ್ರಿಪೂನರ್ಜುನಭಾಸ್ಕರೋ ಬಭೌ।।
08057057c ಶರೋಗ್ರರಶ್ಮಿಃ ಶುಚಿಶುಕ್ರಮಧ್ಯಗೋ ಯಥೈವ ಸೂರ್ಯಃ ಪರಿವೇಷಗಸ್ತಥಾ।

ಗಾಂಡೀವವನ್ನು ಪೂರ್ಣಮಂಡಲಾಕಾರದಲ್ಲಿ ಸೆಳೆದು ಶತ್ರುಗಳನ್ನು ಸುಡುತ್ತಿದ್ದ ಅರ್ಜುನನು ಜ್ಯೇಷ್ಠ-ಆಷಾಢ ಮಾಸಗಳ ಮಧ್ಯೆ ವರ್ತುಲಾಕರದ ಪ್ರಭೆಯಿಂದ ಕೂಡಿದ ಭಾಸ್ಕರ ಸೂರ್ಯನಂತೆಯೇ ಕಾಣುತ್ತಿದ್ದನು.

08057058a ಅಥಾಗ್ರ್ಯಬಾಣೈರ್ದಶಭಿರ್ಧನಂಜಯಂ ಪರಾಭಿನದ್ದ್ರೋಣಸುತೋಽಚ್ಯುತಂ ತ್ರಿಭಿಃ।
08057058c ಚತುರ್ಭಿರಶ್ವಾಂಶ್ಚತುರಃ ಕಪಿಂ ತಥಾ ಶರೈಃ ಸ ನಾರಾಚವರೈರವಾಕಿರತ್।।

ಆಗ ದ್ರೋಣಸುತನು ಧನಂಜಯನನ್ನು ಹತ್ತು ಬಾಣಗಳಿಂದ ಹೊಡೆದು ಅಚ್ಯುತನನ್ನು ಮೂರುಗಳಿಂದಲೂ, ನಾಲ್ಕು ಬಾಣಗಳಿಂದ ನಾಲ್ಕು ಕುದುರೆಗಳನ್ನೂ ಪ್ರಹರಿಸಿ ನಾರಾಚ ಶರಗಳಿಂದ ಕಪಿಯನ್ನು ಮುಸುಕಿದನು.

08057059a ತಥಾ ತು ತತ್ತತ್ ಸ್ಫುರದಾತ್ತಕಾರ್ಮುಕಂ ತ್ರಿಭಿಃ ಶರೈರ್ಯಂತೃಶಿರಃ ಕ್ಷುರೇಣ।
08057059c ಹಯಾಂಶ್ಚತುರ್ಭಿಶ್ಚತುರಸ್ತ್ರಿಭಿರ್ಧ್ವಜಂ ಧನಂಜಯೋ ದ್ರೌಣಿರಥಾನ್ನ್ಯಪಾತಯತ್।।

ಅದಕ್ಕೆ ಪ್ರತಿಯಾಗಿ ಧನಂಜಯನು ಮೂರು ಶರಗಳಿಂದ ದ್ರೌಣಿಯ ಧನುಸ್ಸನ್ನು ತುಂಡರಿಸಿ, ಕ್ಷುರದಿಂದ ಅವನ ಸಾರಥಿಯ ಶಿರವನ್ನು ತುಂಡರಿಸಿ, ನಾಲ್ಕು ಬಾಣಗಳಿಂದ ಅವನ ನಾಲ್ಕು ಕುದುರೆಗಳನ್ನು ಸಂಹರಿಸಿ ಮೂರರಿಂದ ಅವನ ಧ್ವಜವನ್ನು ರಥದಿಂದ ಕೆಳಕ್ಕೆ ಬೀಳಿಸಿದನು.

08057060a ಸ ರೋಷಪೂರ್ಣೋಽಶನಿವಜ್ರಹಾಟಕೈರ್ ಅಲಂಕೃತಂ ತಕ್ಷಕಭೋಗವರ್ಚಸಂ।
08057060c ಸುಬಂಧನಂ ಕಾರ್ಮುಕಮನ್ಯದಾದದೇ ಯಥಾ ಮಹಾಹಿಪ್ರವರಂ ಗಿರೇಸ್ತಥಾ।

ಅದರಿಂದ ರೋಷಪೂರ್ಣನಾದ ಅಶ್ವತ್ಥಾಮನು ಮಣಿ-ವಜ್ರ-ಸುವರ್ಣಗಳಿಂದ ಅಲಂಕೃತವಾದ ತಕ್ಷಕನ ಹೆಡೆಯಂತೆ ಪ್ರಕಾಶಿಸುತ್ತಿದ್ದ, ಬಹುಮೂಲ್ಯವಾದ ಮತ್ತೊಂದು ಧನುಸ್ಸನು ಪರ್ವತದ ತಪ್ಪಲಿನಲ್ಲಿದ್ದ ಮಹಾಸರ್ಪವನ್ನು ಕೈಗೆತ್ತಿಕೊಳ್ಳುವಂತೆ ಕೈಗೆತ್ತಿಕೊಂಡನು.

08057061a ಸ್ವಮಾಯುಧಂ ಚೋಪವಿಕೀರ್ಯ ಭೂತಲೇ ಧನುಶ್ಚ ಕೃತ್ವಾ ಸಗುಣಂ ಗುಣಾಧಿಕಃ।
08057061c ಸಮಾನಯಾನಾವಜಿತೌ ನರೋತ್ತಮೌ ಶರೋತ್ತಮೈರ್ದ್ರೌಣಿರವಿಧ್ಯದಂತಿಕಾತ್।।

ತನ್ನ ಆಯುಧವನ್ನು ಭೂಮಿಯ ಮೇಲೆ ಬಿಸುಟು ಹೊಸಧನುಸ್ಸನ್ನು ಸಿದ್ಧಗೊಳಿಸಿ ಅಧಿಕ ಗುಣವುಳ್ಳ ದ್ರೌಣಿಯು ಉತ್ತಮ ಶರಗಳಿಂದ ಹತ್ತಿರದಿಂದಲೇ ಒಂದೇ ರಥದಲ್ಲಿ ಕುಳಿತಿದ್ದ ನರೋತ್ತಮರೀರ್ವರನ್ನೂ ಪ್ರಹರಿಸಿದನು.

08057062a ಕೃಪಶ್ಚ ಭೋಜಶ್ಚ ತಥಾತ್ಮಜಶ್ಚ ತೇ ತಮೋನುದಂ ವಾರಿಧರಾ ಇವಾಪತನ್।
08057062c ಕೃಪಸ್ಯ ಪಾರ್ಥಃ ಸಶರಂ ಶರಾಸನಂ ಹಯಾನ್ಧ್ವಜಂ ಸಾರಥಿಮೇವ ಪತ್ರಿಭಿಃ।।

ಕೃಪ, ಭೋಜ ಮತ್ತು ನಿನ್ನ ಮಗ ಇವರು ಮೋಡಗಳು ಮಳೆಸುರಿಸುವಂತೆ ಅರ್ಜುನನ ಮೇಲೆ ಎರಗಿದರು. ಪಾರ್ಥನು ಪತ್ರಿಗಳಿಂದ ಕೃಪನ ಧನುಸ್ಸನ್ನೂ, ಕುದುರೆಗಳನ್ನೂ, ಧ್ವಜವನ್ನೂ, ಸಾರಥಿಯನ್ನೂ ನಾಶಗೊಳಿಸಿದನು.

08057063a ಶರೈಃ ಪ್ರಚಿಚ್ಛೇದ ತವಾತ್ಮಜಸ್ಯ ಧ್ವಜಂ ಧನುಶ್ಚ ಪ್ರಚಕರ್ತ ನರ್ದತಃ।
08057063c ಜಘಾನ ಚಾಶ್ವಾನ್ಕೃತವರ್ಮಣಃ ಶುಭಾನ್ ಧ್ವಜಂ ಚ ಚಿಚ್ಚೇದ ತತಃ ಪ್ರತಾಪವಾನ್।।

ಪ್ರತಾಪವಾನ್ ಅರ್ಜುನನು ನಿನ್ನ ಮಗನ ಧ್ವಜ ಮತ್ತು ಧನುಸ್ಸುಗಳನ್ನು ಕತ್ತರಿಸಿ ಗರ್ಜಿಸಿದನು. ಕೃತವರ್ಮನ ಶುಭ ಕುದುರೆಗಳನ್ನು ಸಂಹರಿಸಿ ಅವನ ಧ್ವಜವನ್ನೂ ತುಂಡರಿಸಿದನು.

08057064a ಸವಾಜಿಸೂತೇಷ್ವಸನಾನ್ಸಕೇತನಾಂ ಜಘಾನ ನಾಗಾಶ್ವರಥಾಂಸ್ತ್ವರಂಶ್ಚ ಸಃ।
08057064c ತತಃ ಪ್ರಕೀರ್ಣಂ ಸುಮಹದ್ಬಲಂ ತವ ಪ್ರದಾರಿತಂ ಸೇತುರಿವಾಂಭಸಾ ಯಥಾ।
08057064e ತತೋಽರ್ಜುನಸ್ಯಾಶು ರಥೇನ ಕೇಶವಃ ಚಕಾರ ಶತ್ರೂನಪಸವ್ಯಮಾತುರಾನ್।।

ಅನಂತರ ಅವನು ಸಾರಥಿ-ಅಶ್ವ-ಧನುಸ್ಸು-ಧ್ವಜಗಳಿಂದ ಕೂಡಿದ ರಥಗಳನ್ನೂ, ಗಜಾಶ್ವರಥಗಳನ್ನೂ ಸಂಹರಿಸಿದನು. ಅಣೆಕಟ್ಟು ಒಡೆದುಹೋಗಲು ನೀರಿನ ಪ್ರವಾಹವು ಹರಿಯುವಂತೆ ನಿನ್ನ ಸೇನೆಯು ಚೆಲ್ಲಾಪಿಲ್ಲಿಯಾಯಿತು. ಆಗ ಕೇಶವನು ಅರ್ಜುನನ ರಥವನ್ನು ಆತುರ ಶತ್ರುಗಳನ್ನು ಬಲಭಾಗಕ್ಕೆ ಮಾಡಿಕೊಂಡು ಕೊಂಡೊಯ್ದನು.

08057065a ತತಃ ಪ್ರಯಾಂತಂ ತ್ವರಿತಂ ಧನಂಜಯಂ ಶತಕ್ರತುಂ ವೃತ್ರನಿಜಘ್ನುಷಂ ಯಥಾ।
08057065c ಸಮನ್ವಧಾವನ್ಪುನರುಚ್ಚ್ರಿತೈರ್ಧ್ವಜೈ ರಥೈಃ ಸುಯುಕ್ತೈರಪರೇ ಯುಯುತ್ಸವಃ।।

ಹಾಗೆ ತ್ವರೆಮಾಡಿ ಹೋಗುತ್ತಿರುವ ಧನಂಜಯನನ್ನು ವೃತ್ರನನ್ನು ಸಂಹರಿಸಲು ಹೊರಟಿರುವ ಶತಕ್ರತುವನ್ನು ಹೇಗೋ ಹಾಗೆ ಇತರ ಯುದ್ಧಾಕಾಂಕ್ಷೀ ಯೋಧರು ಏರಿಸಲ್ಪಟ್ಟ ಧ್ವಜಗಳಿಂದ ಕೂಡಿದ್ದ ಸುಸಜ್ಜಿತ ರಥಗಳಲ್ಲಿ ಕುಳಿತು ಪುನಃ ಆಕ್ರಮಣಿಸಿದರು.

08057066a ಅಥಾಭಿಸೃತ್ಯ ಪ್ರತಿವಾರ್ಯ ತಾನರೀನ್ ಧನಂಜಯಸ್ಯಾಭಿ ರಥಂ ಮಹಾರಥಾಃ।
08057066c ಶಿಖಂಡಿಶೈನೇಯಯಮಾಃ ಶಿತೈಃ ಶರೈರ್ ವಿದಾರಯಂತೋ ವ್ಯನದನ್ಸುಭೈರವಂ।।

ಧನಂಜಯನ ರಥದ ಮೇಲೆ ಪುನಃ ಧಾಳಿಯಿಡುತ್ತಿದ್ದ ಆ ಶತ್ರುಗಳನ್ನು ಮಹಾರಥರಾದ ಶಿಖಂಡಿ-ಶೈನೇಯ-ನಕುಲ-ಸಹದೇವರು ನಿಶಿತ ಶರಗಳಿಂದ ಹೊಡೆದು ತಡೆದರು ಮತ್ತು ಭೈರವವಾಗಿ ಗರ್ಜಿಸಿದರು.

08057067a ತತೋಽಭಿಜಘ್ನುಃ ಕುಪಿತಾಃ ಪರಸ್ಪರಂ ಶರೈಸ್ತದಾಂಜೋಗತಿಭಿಃ ಸುತೇಜನೈಃ।
08057067c ಕುರುಪ್ರವೀರಾಃ ಸಹ ಸೃಂಜಯೈರ್ಯಥಾ ಸುರಾಃ ಪುರಾ ದೇವವರೈರಯೋಧಯನ್।।

ಆಗ ಕುಪಿತ ಕುರುಪ್ರವೀರರು ಸೃಂಜಯರನ್ನು ವೇಗಯುಕ್ತ ನಿಶಿತ ಬಾಣಗಳಿಂದ ಹಿಂದೆ ಅಸುರರು ದೇವತೆಗಳೊಂದಿಗೆ ಹೇಗೋ ಹಾಗೆ ಪರಸ್ಪರರನ್ನು ಪ್ರಹರಿಸುತ್ತಾ ಯುದ್ಧಮಾಡಿದರು.

08057068a ಜಯೇಪ್ಸವಃ ಸ್ವರ್ಗಮನಾಯ ಚೋತ್ಸುಕಾಃ ಪತಂತಿ ನಾಗಾಶ್ವರಥಾಃ ಪರಂತಪ।
08057068c ಜಗರ್ಜುರುಚ್ಚೈರ್ಬಲವಚ್ಚ ವಿವ್ಯಧುಃ ಶರೈಃ ಸುಮುಕ್ತೈರಿತರೇತರಂ ಪೃಥಕ್।।

ಪರಂತಪ! ವಿಜಯವನ್ನು ಬಯಸಿದ್ದ, ಸ್ವರ್ಗಗಮನಕ್ಕೆ ಉತ್ಸುಕರಾಗಿದ್ದ ಆನೆ-ಅಶ್ವ-ರಥಗಳು ಉಚ್ಛಬಲಗಳಿಂದ ಪರಸ್ಪರರನ್ನು ಪ್ರತ್ಯೇಕವಾದ ಶರಗಳಿಂದ ಹೊಡೆದು ಆಕ್ರಮಣಿಸುತ್ತಿದ್ದರು.

08057069a ಶರಾಂಧಕಾರೇ ತು ಮಹಾತ್ಮಭಿಃ ಕೃತೇ ಮಹಾಮೃಧೇ ಯೋಧವರೈಃ ಪರಸ್ಪರಂ।
08057069c ಬಭುರ್ದಶಾಶಾ ನ ದಿವಂ ಚ ಪಾರ್ಥಿವ ಪ್ರಭಾ ಚ ಸೂರ್ಯಸ್ಯ ತಮೋವೃತಾಭವತ್।।

ಪಾರ್ಥಿವ! ಮಹಾಯುದ್ಧದಲ್ಲಿ ಪರಸ್ಪರ ಹೋರಾಡುತ್ತಿರುವ ಮಹಾತ್ಮ ಯೋಧಶ್ರೇಷ್ಠರ ಶರಗಳಿಂದ ಅಂಧಕಾರವೇ ಕವಿಯಿತು. ದಿಕ್ಕು-ಉಪದಿಕ್ಕುಗಳೂ, ಸೂರ್ಯನ ಪ್ರಭೆಯೂ ಶರಾಂಧಕಾರದಿಂದ ಮುಚ್ಚಿಹೋದವು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಸಪ್ತಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಐವತ್ತೇಳನೇ ಅಧ್ಯಾಯವು.