ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 56
ಸಾರ
ಧೃತರಾಷ್ಟ್ರನು ಭೀಮಸೇನನ ಪರಾಕ್ರಮದ ಕುರಿತು ಕೇಳಿ ಅವನ ಮಕ್ಕಳು ಕುಶಲರಾಗಿದ್ದರೇ ಎಂದು ಸಂಜಯನನ್ನು ಪ್ರಶ್ನಿಸಿದುದು (1-7). ಭೀಮನ ಆಕ್ರಮಣದಿಂದ ಕೌರವ ಸೇನೆಯು ಪಲಾಯನಗೊಳ್ಳುತ್ತಿದ್ದ ಸಮಯದಲ್ಲಿ ಕರ್ಣನು ತನ್ನ ಪರಾಕ್ರಮದಿಂದ ಪಾಂಡವ ಸೇನೆಯನ್ನು ಧ್ವಂಸಗೊಳಿಸಿ ಅವು ಪಲಾಯನ ಗೊಳ್ಳುವಂತೆ ಮಾಡಿ ಕೌರವಸೇನೆಯು ರಣಕ್ಕೆ ಹಿಂದಿರುಗುವಂತೆ ಮಾಡಿದುದು (8-58).
08056001 ಧೃತರಾಷ್ಟ್ರ ಉವಾಚ।
08056001a ತತೋ ಭಗ್ನೇಷು ಸೈನ್ಯೇಷು ಭೀಮಸೇನೇನ ಸಂಯುಗೇ।
08056001c ದುರ್ಯೋಧನೋಽಬ್ರವೀತ್ಕಿಂ ನು ಸೌಬಲೋ ವಾಪಿ ಸಂಜಯ।।
08056002a ಕರ್ಣೋ ವಾ ಜಯತಾಂ ಶ್ರೇಷ್ಠೋ ಯೋಧಾ ವಾ ಮಾಮಕಾ ಯುಧಿ।
08056002c ಕೃಪೋ ವಾ ಕೃತವರ್ಮಾ ಚ ದ್ರೌಣಿರ್ದುಃಶಾಸನೋಽಪಿ ವಾ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ಯುದ್ಧದಲ್ಲಿ ಭೀಮಸೇನನಿಂದ ಸೇನೆಗಳು ನಾಶಗೊಳ್ಳಲು ದುರ್ಯೋಧನ, ಸೌಬಲ, ಅಥವಾ ವಿಜಯಿಗಳಲ್ಲಿ ಶ್ರೇಷ್ಠ ಕರ್ಣ ಅಥವಾ ಕೃಪ ಅಥವಾ ಕೃತವರ್ಮ, ಅಥವಾ ದ್ರೌಣಿ ಅಥವಾ ದುಃಶಾಸನ ಮತ್ತು ನನ್ನಕಡೆಯ ಯೋಧರು ಏನು ಹೇಳಿದರು?
08056003a ಅತ್ಯದ್ಭುತಮಿದಂ ಮನ್ಯೇ ಪಾಂಡವೇಯಸ್ಯ ವಿಕ್ರಮಂ।
08056003c ಯಥಾಪ್ರತಿಜ್ಞಂ ಯೋಧಾನಾಂ ರಾಧೇಯಃ ಕೃತವಾನಪಿ।।
ಪ್ರತಿಜ್ಞೆಮಾಡಿದಂತೆ ಕರ್ಣನೇನೋ ಯುದ್ಧಮಾಡುತ್ತಿದ್ದನು. ಆದರೂ ನಮ್ಮ ಯೋಧರೊಡನೆ ತೋರಿಸಿದ ಪಾಂಡವೇಯ ಭೀಮನ ವಿಕ್ರಮವು ಅತಿ ಅದ್ಭುತವಾಗಿತ್ತೆಂದೇ ನನಗನ್ನಿಸುತ್ತದೆ.
08056004a ಕುರೂಣಾಮಪಿ ಸರ್ವೇಷಾಂ ಕರ್ಣಃ ಶತ್ರುನಿಷೂದನಃ।
08056004c ಶರ್ಮ ವರ್ಮ ಪ್ರತಿಷ್ಠಾ ಚ ಜೀವಿತಾಶಾ ಚ ಸಂಜಯ।।
ಸಂಜಯ! ಶತ್ರುನಿಷೂದನ ಕರ್ಣನು ಕುರುಗಳೆಲ್ಲರ ಆಶ್ರಯ, ರಕ್ಷಕ, ಪ್ರತಿಷ್ಠಿತ ಯೋಧ ಮತ್ತು ಜೀವಿತಕ್ಕೆ ಆಶಾದಾಯಕನಾಗಿದ್ದನು.
08056005a ತತ್ಪ್ರಭಗ್ನಂ ಬಲಂ ದೃಷ್ಟ್ವಾ ಕೌಂತೇಯೇನಾಮಿತೌಜಸಾ।
08056005c ರಾಧೇಯಾನಾಮಾಧಿರಥಃ ಕರ್ಣಃ ಕಿಮಕರೋದ್ಯುಧಿ।।
ಅಮಿತ ತೇಜಸ್ವಿ ಕೌಂತೇಯನಿಂದ ಸೇನೆಯು ಪ್ರಭಗ್ನವಾದುದನ್ನು ನೋಡಿ ಯುದ್ಧದಲ್ಲಿ ರಾಧೇಯ ಆಧಿರಥ ಕರ್ಣನು ಏನು ಮಾಡಿದನು?
08056006a ಪುತ್ರಾ ವಾ ಮಮ ದುರ್ಧರ್ಷಾ ರಾಜಾನೋ ವಾ ಮಹಾರಥಾಃ।
08056006c ಏತನ್ಮೇ ಸರ್ವಮಾಚಕ್ಷ್ವ ಕುಶಲೋ ಹ್ಯಸಿ ಸಂಜಯ।।
ಸಂಜಯ! ನನ್ನ ಮಹಾರಥ ಪುತ್ರರು ಅಥವಾ ದುರ್ಧರ್ಷ ರಾಜ ಇವರು ಕುಶಲರಾಗಿದ್ದರೋ ಎನ್ನುವ ಎಲ್ಲವನ್ನೂ ನನಗೆ ಹೇಳು!”
08056007 ಸಂಜಯ ಉವಾಚ।
08056007a ಅಪರಾಹ್ಣೇ ಮಹಾರಾಜ ಸೂತಪುತ್ರಃ ಪ್ರತಾಪವಾನ್।
08056007c ಜಘಾನ ಸೋಮಕಾನ್ಸರ್ವಾನ್ಭೀಮಸೇನಸ್ಯ ಪಶ್ಯತಃ।
08056007e ಭೀಮೋಽಪ್ಯತಿಬಲಃ ಸೈನ್ಯಂ ಧಾರ್ತರಾಷ್ಟ್ರಂ ವ್ಯಪೋಥಯತ್।।
ಸಂಜಯನು ಹೇಳಿದನು: “ಮಹಾರಾಜ! ಅಪರಾಹ್ಣದಲ್ಲಿ ಪ್ರತಾಪವಾನ್ ಸೂತಪುತ್ರನು ಭೀಮಸೇನನು ನೋಡುತ್ತಿದ್ದಂತೆಯೇ ಸೋಮಕರೆಲ್ಲರನ್ನೂ ಸಂಹರಿಸಿದನು. ಅತಿಬಲಶಾಲೀ ಭೀಮನೂ ಕೂಡ ಧಾರ್ತರಾಷ್ಟ್ರರ ಸೇನೆಯನ್ನು ಸದೆಬಡಿದನು.
08056008a ದ್ರಾವ್ಯಮಾಣಂ ಬಲಂ ದೃಷ್ಟ್ವಾ ಭೀಮಸೇನೇನ ಧೀಮತಾ।
08056008c ಯಂತಾರಮಬ್ರವೀತ್ಕರ್ಣಃ ಪಾಂಚಾಲಾನೇವ ಮಾ ವಹ।।
ಧೀಮತ ಭೀಮಸೇನನಿಂದ ಬಲವು ಪಲಾಯನಗೊಳ್ಳುತ್ತಿರುವುದನ್ನು ನೋಡಿ ಕರ್ಣನು ಸಾರಥಿಗೆ “ಪಾಂಚಾಲರಿರುವಲ್ಲಿಗೆ ನನ್ನನ್ನು ಕೊಂಡೊಯ್ಯಿ!” ಎಂದನು.
08056009a ಮದ್ರರಾಜಸ್ತತಃ ಶಲ್ಯಃ ಶ್ವೇತಾನಶ್ವಾನ್ಮಹಾಜವಾನ್।
08056009c ಪ್ರಾಹಿಣೋಚ್ಚೇದಿಪಾಂಚಾಲಾನ್ಕರೂಷಾಂಶ್ಚ ಮಹಾಬಲಃ।।
ಆಗ ಮಹಾಬಲ ಮದ್ರರಾಜ ಶಲ್ಯನು ಆ ಮಹಾವೇಗವುಳ್ಳ ಶ್ವೇತಾಶ್ವಗಳನ್ನು ಚೇದಿ-ಪಾಂಚಾಲ-ಕರೂಷರಿದ್ದಲ್ಲಿಗೆ ಓಡಿಸಿದನು.
08056010a ಪ್ರವಿಶ್ಯ ಚ ಸ ತಾಂ ಸೇನಾಂ ಶಲ್ಯಃ ಪರಬಲಾರ್ದನಃ।
08056010c ನ್ಯಯಚ್ಚತ್ತುರಗಾನ್ ಹೃಷ್ಟೋ ಯತ್ರ ಯತ್ರೈಚ್ಚದಗ್ರಣೀಃ।।
ಅವರ ಸೇನೆಗಳನ್ನು ಪ್ರವೇಶಿಸಿ ಪರಬಲಾರ್ದನ ಅಗ್ರಣೀ ಶಲ್ಯನು ಹೃಷ್ಟನಾಗಿ ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಕುದುರೆಗಳನ್ನು ಕೊಂಡೊಯ್ದು ನಿಲ್ಲಿಸುತ್ತಿದ್ದನು.
08056011a ತಂ ರಥಂ ಮೇಘಸಂಕಾಶಂ ವೈಯಾಘ್ರಪರಿವಾರಣಂ।
08056011c ಸಂದೃಶ್ಯ ಪಾಂಡುಪಾಂಚಾಲಾಸ್ತ್ರಸ್ತಾ ಆಸನ್ವಿಶಾಂ ಪತೇ।।
ವಿಶಾಂಪತೇ! ವ್ಯಾಘ್ರಚರ್ಮದಿಂದ ಆಚ್ಛಾದಿತವಾಗಿದ್ದ ಮೇಘಸದೃಶ ಆ ರಥವನ್ನು ನೋಡಿ ಪಾಂಡು-ಪಾಂಚಾಲರಲ್ಲಿ ಭಯವುಂಟಾಯಿತು.
08056012a ತತೋ ರಥಸ್ಯ ನಿನದಃ ಪ್ರಾದುರಾಸೀನ್ಮಹಾರಣೇ।
08056012c ಪರ್ಜನ್ಯಸಮನಿರ್ಘೋಷಃ ಪರ್ವತಸ್ಯೇವ ದೀರ್ಯತಃ।।
ಆಗ ಮಹಾರಣದಲ್ಲಿ ಕರ್ಣನ ರಥದ ನಿರ್ಘೋಷವು ಗುಡುಗಿನ ಸಮನಾಗಿತ್ತು ಮತ್ತು ಪರ್ವತವೇ ಸೀಳಿಹೋಗುತ್ತಿವೆಯೋ ಎಂಬಂತಿತ್ತು.
08056013a ತತಃ ಶರಶತೈಸ್ತೀಕ್ಷ್ಣೈಃ ಕರ್ಣೋಽಪ್ಯಾಕರ್ಣನಿಃಸೃತೈಃ।
08056013c ಜಘಾನ ಪಾಂಡವಬಲಂ ಶತಶೋಽಥ ಸಹಸ್ರಶಃ।।
ಆಗ ಕರ್ಣನು ಕಿವಿಯವರೆಗೂ ಸೆಳೆದು ಬಿಟ್ಟ ನೂರಾರು ತೀಕ್ಷ್ಣ ಶರಗಳಿಂದ ಪಾಂಡವ ಸೇನೆಯನ್ನು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಸಂಹರಿಸಿದನು.
08056014a ತಂ ತಥಾ ಸಮರೇ ಕರ್ಮ ಕುರ್ವಾಣಮತಿಮಾನುಷಂ।
08056014c ಪರಿವವ್ರುರ್ಮಹೇಷ್ವಾಸಾಃ ಪಾಂಡವಾನಾಂ ಮಹಾರಥಾಃ।।
ಹಾಗೆ ಸಮರದಲ್ಲಿ ಅತಿ ಅಮಾನುಷ ಕರ್ಮಗಳನ್ನೆಸಗುತ್ತಿದ್ದ ಕರ್ಣನನ್ನು ಮಹಾರಥ ಮಹೇಷ್ವಾಸ ಪಾಂಡವರು ಸುತ್ತುವರೆದರು.
08056015a ತಂ ಶಿಖಂಡೀ ಚ ಭೀಮಶ್ಚ ಧೃಷ್ಟದ್ಯುಮ್ನಶ್ಚ ಪಾರ್ಷತಃ।
08056015c ನಕುಲಃ ಸಹದೇವಶ್ಚ ದ್ರೌಪದೇಯಾಃ ಸಸಾತ್ಯಕಾಃ।
08056015e ಪರಿವವ್ರುರ್ಜಿಘಾಂಸಂತೋ ರಾಧೇಯಂ ಶರವೃಷ್ಟಿಭಿಃ।।
ಶಿಖಂಡೀ, ಭೀಮ, ಪಾರ್ಷತ ಧೃಷ್ಟದ್ಯುಮ್ನ, ನಕುಲ, ಸಹದೇವ, ಮತ್ತು ಸಾತ್ಯಕಿಯೊಡನೆ ದ್ರೌಪದೇಯರು ರಾಧೇಯನನ್ನು ಕೊಲ್ಲಲು ಬಯಸಿ ಅವನನ್ನು ಶರವೃಷ್ಟಿಗಳೊಂದಿಗೆ ಸುತ್ತುವರೆದು ಆಕ್ರಮಣಿಸಿದರು.
08056016a ಸಾತ್ಯಕಿಸ್ತು ತತಃ ಕರ್ಣಂ ವಿಂಶತ್ಯಾ ನಿಶಿತೈಃ ಶರೈಃ।
08056016c ಅತಾಡಯದ್ರಣೇ ಶೂರೋ ಜತ್ರುದೇಶೇ ನರೋತ್ತಮಃ।।
ನರೋತ್ತಮ ಶೂರ ಸಾತ್ಯಕಿಯಾದರೋ ರಣದಲ್ಲಿ ಕರ್ಣನನ್ನು ಜತ್ರುದೇಶಕ್ಕೆ ಗುರಿಯಿಟ್ಟು ಇಪ್ಪತ್ತು ನಿಶಿತ ಶರಗಳಿಂದ ಪ್ರಹರಿಸಿದನು.
08056017a ಶಿಖಂಡೀ ಪಂಚವಿಂಶತ್ಯಾ ಧೃಷ್ಟದ್ಯುಮ್ನಶ್ಚ ಪಂಚಭಿಃ।
08056017c ದ್ರೌಪದೇಯಾಶ್ಚತುಃಷಷ್ಟ್ಯಾ ಸಹದೇವಶ್ಚ ಸಪ್ತಭಿಃ।
08056017e ನಕುಲಶ್ಚ ಶತೇನಾಜೌ ಕರ್ಣಂ ವಿವ್ಯಾಧ ಸಾಯಕೈಃ।।
ಶಿಖಂಡಿಯು ಇಪ್ಪತ್ತೈದು, ಧೃಷ್ಟದ್ಯುಮ್ನನು ಐದು, ದ್ರೌಪದೇಯರು ಅರವತ್ನಾಲ್ಕು, ಸಹದೇವನು ಏಳು ಮತ್ತು ನಕುಲನು ನೂರು ಸಾಯಕಗಳಿಂದ ಕರ್ಣನನ್ನು ಹೊಡೆದರು.
08056018a ಭೀಮಸೇನಸ್ತು ರಾಧೇಯಂ ನವತ್ಯಾ ನತಪರ್ವಣಾಂ।
08056018c ವಿವ್ಯಾಧ ಸಮರೇ ಕ್ರುದ್ಧೋ ಜತ್ರುದೇಶೇ ಮಹಾಬಲಃ।।
ಸಮರದಲ್ಲಿ ಮಹಾಬಲ ಭೀಮಸೇನನಾದರೋ ಕ್ರುದ್ಧನಾಗಿ ರಾಧೇಯನ ಜತ್ರುಪ್ರದೇಶಕ್ಕೆ ಗುರಿಯಿಟ್ಟು ತೊಂಭತ್ತು ನತಪರ್ವ ಬಾಣಗಳನ್ನು ಪ್ರಯೋಗಿಸಿದನು.
08056019a ತತಃ ಪ್ರಹಸ್ಯಾಧಿರಥಿರ್ವಿಕ್ಷಿಪನ್ಧನುರುತ್ತಮಂ।
08056019c ಮುಮೋಚ ನಿಶಿತಾನ್ಬಾಣಾನ್ಪೀಡಯನ್ಸುಮಹಾಬಲಃ।
08056019e ತಾನ್ಪ್ರತ್ಯವಿಧ್ಯದ್ರಾಧೇಯಃ ಪಂಚಭಿಃ ಪಂಚಭಿಃ ಶರೈಃ।।
ಆಗ ಸುಮಹಾಬಲ ಆಧಿರಥಿಯು ಜೋರಾಗಿ ನಕ್ಕು ಉತ್ತಮ ಧನುಸ್ಸನ್ನು ಟೇಂಕರಿಸಿ ಅವರನ್ನು ಪೀಡಿಸುತ್ತಾ ನಿಶಿತ ಬಾಣಗಳನ್ನು ಪ್ರಯೋಗಿಸಿದನು. ರಾಧೇಯನು ಪ್ರತಿಯೊಬ್ಬರನ್ನೂ ಐದೈದು ಬಾಣಗಳಿಂದ ತಿರುಗಿ ಹೊಡೆದನು.
08056020a ಸಾತ್ಯಕೇಸ್ತು ಧನುಶ್ಚಿತ್ತ್ವಾ ಧ್ವಜಂ ಚ ಪುರುಷರ್ಷಭಃ।
08056020c ಅಥೈನಂ ನವಭಿರ್ಬಾಣೈರಾಜಘಾನ ಸ್ತನಾಂತರೇ।।
ಆ ಪುರುಷರ್ಷಭನು ಸಾತ್ಯಕಿಯ ಧನುಸ್ಸು-ಧ್ವಜಗಳನ್ನು ತುಂಡರಿಸಿ ಒಂಭತ್ತು ಬಾಣಗಳಿಂದ ಅವನ ವಕ್ಷಸ್ಥಳಕ್ಕೆ ಹೊಡೆದನು.
08056021a ಭೀಮಸೇನಸ್ತು ತಂ ಕ್ರುದ್ಧೋ ವಿವ್ಯಾಧ ತ್ರಿಂಶತಾ ಶರೈಃ।
08056021c ಸಾರಥಿಂ ಚ ತ್ರಿಭಿರ್ಬಾಣೈರಾಜಘಾನ ಪರಂತಪಃ।।
ಅನಂತರ ಪರಂತಪನು ಕ್ರುದ್ಧನಾಗಿ ಭೀಮಸೇನನನ್ನು ಮೂವತ್ತು ಶರಗಳಿಂದ ಹೊಡೆದು ಮೂರು ಬಾಣಗಳಿಂದ ಅವನ ಸಾರಥಿಯನ್ನು ಸಂಹರಿಸಿದನು.
08056022a ವಿರಥಾನ್ದ್ರೌಪದೇಯಾಂಶ್ಚ ಚಕಾರ ಪುರುಷರ್ಷಭಃ।
08056022c ಅಕ್ಷ್ಣೋರ್ನಿಮೇಷಮಾತ್ರೇಣ ತದದ್ಭುತಮಿವಾಭವತ್।।
ಆ ಪುರುಷರ್ಷಭನು ದ್ರೌಪದೇಯರನ್ನೂ ವಿರಥರನ್ನಾಗಿ ಮಾಡಿದನು. ಇವೆಲ್ಲವನ್ನೂ ಅವನು ನಿಮಿಷಮಾತ್ರದಲ್ಲಿ ಮಾಡಲು ಅದೊಂದು ಅದ್ಭುತವಾಗಿತ್ತು!
08056023a ವಿಮುಖೀಕೃತ್ಯ ತಾನ್ಸರ್ವಾಂ ಶರೈಃ ಸಂನತಪರ್ವಭಿಃ।
08056023c ಪಾಂಚಾಲಾನಹನಚ್ಚೂರಶ್ಚೇದೀನಾಂ ಚ ಮಹಾರಥಾನ್।।
ಅವರೆಲ್ಲರನ್ನೂ ಸನ್ನತಪರ್ವ ಶರಗಳಿಂದ ವಿಮುಖರನ್ನಾಗಿ ಮಾಡಿ ಶೂರ ಕರ್ಣನು ಪಾಂಚಾಲ-ಚೇದಿಗಳ ಮಹಾರಥರನ್ನು ಸಂಹರಿಸಿದನು.
08056024a ತೇ ವಧ್ಯಮಾನಾಃ ಸಮರೇ ಚೇದಿಮತ್ಸ್ಯಾ ವಿಶಾಂ ಪತೇ।
08056024c ಕರ್ಣಮೇಕಮಭಿದ್ರುತ್ಯ ಶರಸಂಘೈಃ ಸಮಾರ್ದಯನ್।
08056024e ತಾಂ ಜಘಾನ ಶಿತೈರ್ಬಾಣೈಃ ಸೂತಪುತ್ರೋ ಮಹಾರಥಃ।।
ವಿಶಾಂಪತೇ! ಸಮರದಲ್ಲಿ ಅವನಿಂದ ವಧಿಸಲ್ಪಡುತ್ತಿರುವ ಚೇದಿ-ಮತ್ಸ್ಯರು ಕರ್ಣನೊಬ್ಬನನ್ನೇ ಶರಸಂಘಗಳಿಂದ ಮರ್ದಿಸುತ್ತಾ ಮುತ್ತಿಗೆ ಹಾಕಿದರು. ಮಹಾರಥ ಸೂತಪುತ್ರನು ಅವರನ್ನು ನಿಶಿತ ಬಾಣಗಳಿಂದ ಸಂಹರಿಸಿದನು.
08056025a ಏತದತ್ಯದ್ಭುತಂ ಕರ್ಣೇ ದೃಷ್ಟವಾನಸ್ಮಿ ಭಾರತ।
08056025c ಯದೇಕಃ ಸಮರೇ ಶೂರಾನ್ಸೂತಪುತ್ರಃ ಪ್ರತಾಪವಾನ್।।
08056026a ಯತಮಾನಾನ್ಪರಂ ಶಕ್ತ್ಯಾಯೋಧಯತ್ತಾಂಶ್ಚ ಧನ್ವಿನಃ।
08056026c ಪಾಂಡವೇಯಾನ್ಮಹಾರಾಜ ಶರೈರ್ವಾರಿತವಾನ್ರಣೇ।।
ಮಹಾರಾಜ! ಭಾರತ! ಸಮರದಲ್ಲಿ ತುಂಬಾ ಪ್ರಯತ್ನಪಡುತ್ತಾ ಶಕ್ತಿಯುತವಾಗಿ ಹೋರಾಡುತ್ತಿದ್ದ ಶೂರ ಪಾಂಡವರನ್ನು ರಣದಲ್ಲಿ ಏಕಾಂಗಿಯಾಗಿ ತಡೆಹಿಡಿದ ಆ ಪ್ರತಾಪವಾನ್ ಧನ್ವಿ ಸೂತಪುತ್ರ ಕರ್ಣನ ಅದ್ಭುತ ಕರ್ಮವನ್ನು ನಾನು ನೋಡಿದೆನು!
08056027a ತತ್ರ ಭಾರತ ಕರ್ಣಸ್ಯ ಲಾಘವೇನ ಮಹಾತ್ಮನಃ।
08056027c ತುತುಷುರ್ದೇವತಾಃ ಸರ್ವಾಃ ಸಿದ್ಧಾಶ್ಚ ಪರಮರ್ಷಯಃ।।
ಭಾರತ! ಅಲ್ಲಿ ಮಹಾತ್ಮ ಕರ್ಣನ ಹಸ್ತಲಾಘವದಿಂದ ದೇವತೆಗಳೆಲ್ಲರೂ, ಸಿದ್ಧ-ಪರಮ ಋಷಿಗಳೂ ಸಂತುಷ್ಟರಾದರು.
08056028a ಅಪೂಜಯನ್ಮಹೇಷ್ವಾಸಾ ಧಾರ್ತರಾಷ್ಟ್ರಾ ನರೋತ್ತಮಂ।
08056028c ಕರ್ಣಂ ರಥವರಶ್ರೇಷ್ಠಂ ಶ್ರೇಷ್ಠಂ ಸರ್ವಧನುಷ್ಮತಾಂ।।
ಮಹೇಷ್ವಾಸ ಧಾರ್ತರಾಷ್ಟ್ರರೂ ಆ ನರೋತ್ತಮ ರಥವರಶ್ರೇಷ್ಠ ಸರ್ವಧನುಷ್ಮತ ಶ್ರೇಷ್ಠ ಕರ್ಣನನ್ನು ಗೌರವಿಸಿದರು.
08056029a ತತಃ ಕರ್ಣೋ ಮಹಾರಾಜ ದದಾಹ ರಿಪುವಾಹಿನೀಂ।
08056029c ಕಕ್ಷಮಿದ್ಧೋ ಯಥಾ ವರ್ಹ್ನಿದಾಘೇ ಜ್ವಲಿತೋ ಮಹಾನ್।।
ಮಹಾರಾಜ! ಆಗ ಬೇಸಿಗೆಯಲ್ಲಿ ಹುಲ್ಲುಮೆದೆಗೆ ಹೊತ್ತಿಕೊಂಡ ಬೆಂಕಿಯು ಕ್ಷಣಮಾತ್ರದಲ್ಲಿ ಪ್ರಜ್ಚಲಿಸಿ ಎಲ್ಲವನ್ನೂ ಭಸ್ಮಮಾಡುವಂತೆ ಕರ್ಣನು ರಿಪುವಾಹಿನಿಯನ್ನು ಸುಟ್ಟುಹಾಕಿದನು.
08056030a ತೇ ವಧ್ಯಮಾನಾಃ ಕರ್ಣೇನ ಪಾಂಡವೇಯಾಸ್ತತಸ್ತತಃ।
08056030c ಪ್ರಾದ್ರವಂತ ರಣೇ ಭೀತಾಃ ಕರ್ಣಂ ದೃಷ್ಟ್ವಾ ಮಹಾಬಲಂ।।
ಕರ್ಣನಿಂದ ವಧಿಸಲ್ಪಡುತ್ತಿದ್ದ ಪಾಂಡವೇಯರು ರಣದಲ್ಲಿ ಮಹಾಬಲ ಕರ್ಣನನ್ನು ನೋಡಿ ಭೀತರಾಗಿ ಎಲ್ಲೆಲ್ಲೋ ಓಡ ತೊಡಗಿದರು.
08056031a ತತ್ರಾಕ್ರಂದೋ ಮಹಾನಾಸೀತ್ಪಾಂಚಾಲಾನಾಂ ಮಹಾರಣೇ।
08056031c ವಧ್ಯತಾಂ ಸಾಯಕೈಸ್ತೀಕ್ಷ್ಣೈಃ ಕರ್ಣಚಾಪವರಚ್ಯುತೈಃ।।
ಮಹಾರಣದಲ್ಲಿ ಕರ್ಣನ ಶ್ರೇಷ್ಠಧನುಸ್ಸಿನಿಂದ ಹೊರಟ ತೀಕ್ಷ್ಣ ಸಾಯಕಗಳಿಂದ ವಧಿಸಲ್ಪಡುತ್ತಿದ್ದ ಪಾಂಚಾಲರ ಆಕ್ರಂದವು ಜೋರಾಗಿತ್ತು.
08056032a ತೇನ ಶಬ್ಧೇನ ವಿತ್ರಸ್ತಾ ಪಾಂಡವಾನಾಂ ಮಹಾಚಮೂಃ।
08056032c ಕರ್ಣಮೇಕಂ ರಣೇ ಯೋಧಂ ಮೇನಿರೇ ತತ್ರ ಶಾತ್ರವಾಃ।।
ಆ ಶಬ್ಧದಿಂದ ಪಾಂಡವರ ಮಹಾಸೇನೆಯು ಭಯದಿಂದ ನಡುಗಿತು. ಆ ರಣದಲ್ಲಿ ಕರ್ಣನೊಬ್ಬನೇ ಯೋಧನೆಂದು ಶತ್ರುಗಳು ಭಾವಿಸಿದರು.
08056033a ತತ್ರಾದ್ಭುತಂ ಪರಂ ಚಕ್ರೇ ರಾಧೇಯಃ ಶತ್ರುಕರ್ಶನಃ।
08056033c ಯದೇಕಂ ಪಾಂಡವಾಃ ಸರ್ವೇ ನ ಶೇಕುರಭಿವೀಕ್ಷಿತುಂ।।
ಪಾಂಡವರೆಲ್ಲರಲ್ಲಿ ಒಬ್ಬನೂ ಕರ್ಣನನ್ನು ತಲೆಯೆತ್ತಿ ನೋಡಲು ಸಮರ್ಥನಾಗಿರಲಿಲ್ಲ. ಅಂಥಹ ಪರಮ ಅದ್ಭುತವನ್ನು ಶತ್ರುಕರ್ತನ ರಾಧೇಯನು ತೋರಿಸಿದನು.
08056034a ಯಥೌಘಃ ಪರ್ವತಶ್ರೇಷ್ಠಮಾಸಾದ್ಯಾಭಿಪ್ರದೀರ್ಯತೇ।
08056034c ತಥಾ ತತ್ಪಾಂಡವಂ ಸೈನ್ಯಂ ಕರ್ಣಮಾಸಾದ್ಯ ದೀರ್ಯತೇ।।
ಪ್ರವಾಹವು ಶ್ರೇಷ್ಠ ಪರ್ವತದ ಬಳಿಬಂದು ಅದರಿಂದ ತಡೆಯಲ್ಪಟ್ಟು ಅನೇಕ ಕವಲುಗಳಾಗಿ ಹೇಗಿ ಒಡೆದುಹೋಗುತ್ತದೆಯೋ ಹಾಗೆ ಪಾಂಡವರ ಸೇನೆಯು ಕರ್ಣನನ್ನು ಸಂಧಿಸಿ ಕವಲುಗಳಾಗಿ ಒಡೆದು ಹೋಯಿತು.
08056035a ಕರ್ಣೋಽಪಿ ಸಮರೇ ರಾಜನ್ವಿಧೂಮೋಽಗ್ನಿರಿವ ಜ್ವಲನ್।
08056035c ದಹಂಸ್ತಸ್ಥೌ ಮಹಾಬಾಹುಃ ಪಾಂಡವಾನಾಂ ಮಹಾಚಮೂಂ।।
ರಾಜನ್! ಸಮರದಲ್ಲಿ ಮಹಾಬಾಹು ಕರ್ಣನೂ ಕೂಡ ಹೊಗೆಯಿಲ್ಲದ ಅಗ್ನಿಯಂತೆ ಪ್ರಜ್ವಲಿಸುತ್ತಾ ಪಾಂಡವರ ಮಹಾಸೇನೆಯನ್ನು ಸುಡುತ್ತಿದ್ದನು.
08056036a ಶಿರಾಂಸಿ ಚ ಮಹಾರಾಜ ಕರ್ಣಾಂಶ್ಚಂಚಲಕುಂಡಲಾನ್।
08056036c ಬಾಹೂಂಶ್ಚ ವೀರೋ ವೀರಾಣಾಂ ಚಿಚ್ಚೇದ ಲಘು ಚೇಷುಭಿಃ।।
ಮಹಾರಾಜ! ವೀರ ಕರ್ಣನು ವೀರರ ಶಿರಗಳನ್ನೂ, ಚಂಚಲ ಕುಂಡಲಗಳನ್ನೂ, ಮತ್ತು ಬಾಹುಗಳನ್ನೂ ಬಾಣಗಳಿಂದ ಬೇಗ ತುಂಡರಿಸುತ್ತಿದ್ದನು.
08056037a ಹಸ್ತಿದಂತಾನ್ತ್ಸರೂನ್ಖಡ್ಗಾನ್ಧ್ವಜಾಂ ಶಕ್ತೀರ್ಹಯಾನ್ಗಜಾನ್।
08056037c ರಥಾಂಶ್ಚ ವಿವಿಧಾನ್ರಾಜನ್ಪತಾಕಾ ವ್ಯಜನಾನಿ ಚ।।
08056038a ಅಕ್ಷೇಷಾಯುಗಯೋಕ್ತ್ರಾಣಿ ಚಕ್ರಾಣಿ ವಿವಿಧಾನಿ ಚ।
08056038c ಚಿಚ್ಚೇದ ಶತಧಾ ಕರ್ಣೋ ಯೋಧವ್ರತಮನುಷ್ಠಿತಃ।।
ರಾಜನ್! ಯೋಧವ್ರತ ನಿರತನಾಗಿದ್ದ ಕರ್ಣನು ಆನೆಯದಂತಗಳ ಹಿಡಿಯಿದ್ದ ಖಡ್ಗಗಳನ್ನೂ, ಧ್ವಜಗಳನ್ನೂ, ಶಕ್ತಿಗಳನ್ನು, ಕುದುರೆ-ಆನೆಗಳನ್ನು, ವಿವಿಧ ರಥಗಳನ್ನು, ಪತಾಕೆ-ವ್ಯಜನಗಳನ್ನು, ಅಚ್ಚುಮರಗಳನ್ನೂ, ರಥಮೂಕಿಗಳನ್ನೂ, ವಿವಿಧ ಚಕ್ರಗಳನ್ನೂ ನೂರಾರು ತುಂಡುಗಳನ್ನಾಗಿ ಕತ್ತರಿಸಿದನು.
08056039a ತತ್ರ ಭಾರತ ಕರ್ಣೇನ ನಿಹತೈರ್ಗಜವಾಜಿಭಿಃ।
08056039c ಅಗಮ್ಯರೂಪಾ ಪೃಥಿವೀ ಮಾಂಸಶೋಣಿತಕರ್ದಮಾ।।
ಭಾರತ! ಕರ್ಣನಿಂದ ಆನೆ-ಕುದುರೆಗಳು ಹತಗೊಳ್ಳುತ್ತಿರಲು ಮಾಂಸ-ರಕ್ತಗಳಿಂದ ಕೆಸರಾಗಿದ್ದ ರಣಭೂಮಿಯು ಅಗಮ್ಯವಾಗಿ ತೋರುತ್ತಿತ್ತು.
08056040a ವಿಷಮಂ ಚ ಸಮಂ ಚೈವ ಹತೈರಶ್ವಪದಾತಿಭಿಃ।
08056040c ರಥೈಶ್ಚ ಕುಂಜರೈಶ್ಚೈವ ನ ಪ್ರಾಜ್ಞಾಯತ ಕಿಂ ಚನ।।
ಹತರಾದ ಆನೆ-ರಥ-ಕುದುರೆ-ಪದಾತಿಗಳಿಂದ ತುಂಬಿದ ರಣಭೂಮಿಯಲ್ಲಿ ಹಳ್ಳ-ತಿಟ್ಟುಗಳೊಂದೂ ಕಾಣುತ್ತಲೇ ಇರಲಿಲ್ಲ.
08056041a ನಾಪಿ ಸ್ವೇ ನ ಪರೇ ಯೋಧಾಃ ಪ್ರಾಜ್ಞಾಯಂತ ಪರಸ್ಪರಂ।
08056041c ಘೋರೇ ಶರಾಂಧಕಾರೇ ತು ಕರ್ಣಾಸ್ತ್ರೇ ಚ ವಿಜೃಂಭಿತೇ।।
ಕರ್ಣಾಸ್ತ್ರವು ವಿಜೃಂಭಿಸುತ್ತಿರಲು ಬಾಣಗಳಿಂದ ಘೋರ ಅಂಧಕಾರವು ಮುಸುಕಿ ನಮ್ಮವರು ಮತ್ತು ಶತ್ರುಗಳು ಪರಸ್ಪರರನ್ನು ಗುರಿತಿಸಲೂ ಸಾಧ್ಯವಾಗುತ್ತಿರಲಿಲ್ಲ.
08056042a ರಾಧೇಯಚಾಪನಿರ್ಮುಕ್ತೈಃ ಶರೈಃ ಕಾಂಚನಭೂಷಿತೈಃ।
08056042c ಸಂಚಾದಿತಾ ಮಹಾರಾಜ ಯತಮಾನಾ ಮಹಾರಥಾಃ।।
ಮಹಾರಾಜ! ಪ್ರಯತ್ನಪಡುತ್ತಿದ್ದ ಮಹಾರಥರು ರಾಧೇಯನ ಧನುಸ್ಸಿನಿಂತ ಹೊರಟ ಕಾಂಚನ ಭೂಷಿತ ಶರಗಳಿಂದ ಮುಚ್ಚಿಹೋಗಿದ್ದರು.
08056043a ತೇ ಪಾಂಡವೇಯಾಃ ಸಮರೇ ಕರ್ಣೇನ ಸ್ಮ ಪುನಃ ಪುನಃ।
08056043c ಅಭಜ್ಯಂತ ಮಹಾರಾಜ ಯತಮಾನಾ ಮಹಾರಥಾಃ।।
ಮಹಾರಾಜ! ಸಮರದಲ್ಲಿ ಪ್ರಯತ್ನಪಡುತ್ತಿದ್ದ ಮಹಾರಥ ಪಾಂಡವೇಯರನ್ನು ಕರ್ಣನು ಪುನಃ ಪುನಃ ಭಗ್ನಗೊಳಿಸುತ್ತಿದ್ದನು.
08056044a ಮೃಗಸಂಘಾನ್ಯಥಾ ಕ್ರುದ್ಧಃ ಸಿಂಹೋ ದ್ರಾವಯತೇ ವನೇ।
08056044c ಕರ್ಣಸ್ತು ಸಮರೇ ಯೋಧಾಂಸ್ತತ್ರ ತತ್ರ ಮಹಾಯಶಾಃ।
08056044e ಕಾಲಯಾಮಾಸ ತತ್ಸೈನ್ಯಂ ಯಥಾ ಪಶುಗಣಾನ್ವೃಕಃ।।
ವನದಲ್ಲಿ ಕ್ರುದ್ಧಸಿಂಹವು ಮೃಗಗುಂಪುಗಳನ್ನು ಓಡಿಸುವಂತೆ ಸಮರದಲ್ಲಿ ಮಹಾಯಶಸ್ವಿ ಕರ್ಣನು ಯೋಧರನ್ನು ಎಲ್ಲಕಡೆ ಓಡಿಸುತ್ತಿದ್ದನು. ತೋಳವು ಪಶುಸಮೂಹವನ್ನು ಹೇಗೋ ಹಾಗೆ ಪಾಂಡವ ಸೇನೆಯನ್ನು ಕದಡಿಬಿಟ್ಟನು.
08056045a ದೃಷ್ಟ್ವಾ ತು ಪಾಂಡವೀಂ ಸೇನಾಂ ಧಾರ್ತರಾಷ್ಟ್ರಾಃ ಪರಾಙ್ಮುಖೀಂ।
08056045c ಅಭಿಜಗ್ಮುರ್ಮಹೇಷ್ವಾಸಾ ರುವಂತೋ ಭೈರವಾನ್ರವಾನ್।।
ಪಾಂಡವೀ ಸೇನೆಯು ಪರಾಙ್ಮುಖವಾಗುತ್ತಿದ್ದುದನ್ನು ನೋಡಿ ಮಹೇಷ್ವಾಸ ಧಾರ್ತರಾಷ್ಟ್ರರು ಭೈರವ ಕೂಗುಗಳನ್ನು ಕೂಗುತ್ತಾ ಕರ್ಣನಿದ್ದಲ್ಲಿಗೆ ಬಂದರು.
08056046a ದುರ್ಯೋಧನೋ ಹಿ ರಾಜೇಂದ್ರ ಮುದಾ ಪರಮಯಾ ಯುತಃ।
08056046c ವಾದಯಾಮಾಸ ಸಂಹೃಷ್ಟೋ ನಾನಾವಾದ್ಯಾನಿ ಸರ್ವಶಃ।।
ರಾಜೇಂದ್ರ! ದುರ್ಯೋಧನನು ಪರಮ ಹರ್ಷದಿಂದ ಸಂಹೃಷ್ಟನಾಗಿ ನಾನಾ ವಾದ್ಯಗಳನ್ನು ಎಲ್ಲಕಡೆ ಮೊಳಗಿಸಿದನು.
08056047a ಪಾಂಚಾಲಾಪಿ ಮಹೇಷ್ವಾಸಾ ಭಗ್ನಾ ಭಗ್ನಾ ನರೋತ್ತಮಾಃ।
08056047c ನ್ಯವರ್ತಂತ ಯಥಾ ಶೂರಾ ಮೃತ್ಯುಂ ಕೃತ್ವಾ ನಿವರ್ತನಂ।।
ಪುನಃ ಪುನಃ ಭಗ್ನರಾದ ಮಹೇಷ್ವಾಸ ನರೋತ್ತಮ ಶೂರ ಪಾಂಚಾಲರೂ ಕೂಡ ಮೃತ್ಯುವನ್ನೇ ಹಿಂದಿರುಗುವ ತಾಣವನ್ನಾಗಿರಿಕೊಂಡು ಯುದ್ಧಕ್ಕೆ ಹಿಂದಿರುಗಿದರು.
08056048a ತಾನ್ನಿವೃತ್ತಾನ್ರಣೇ ಶೂರಾನ್ರಾಧೇಯಃ ಶತ್ರುತಾಪನಃ।
08056048c ಅನೇಕಶೋ ಮಹಾರಾಜ ಬಭಂಜ ಪುರುಷರ್ಷಭಃ।।
ಮಹಾರಾಜ! ಹಾಗೆ ರಣಕ್ಕೆ ಹಿಂದಿರುಗಿ ಬಂದ ಶೂರರನ್ನು ಶತ್ರುತಾಪನ ಪುರುಷರ್ಷಭ ರಾಧೇಯನು ಹಲವು ಬಾರಿ ಭೇದಿಸಿದನು.
08056049a ತತ್ರ ಭಾರತ ಕರ್ಣೇನ ಪಾಂಚಾಲಾ ವಿಂಶತೀ ರಥಾಃ।
08056049c ನಿಹತಾಃ ಸಾದಯಃ ಕ್ರೋಧಾಚ್ಚೇದಯಶ್ಚ ಪರಃಶತಾಃ।।
ಭಾರತ! ಅಲ್ಲಿ ಕರ್ಣನು ಕ್ರೋಧಗೊಂಡು ಇಪ್ಪತ್ತು ಪಾಂಚಾಲ ರಥರನ್ನೂ, ನೂರಕ್ಕೂ ಹೆಚ್ಚು ಚೇದಿಯೋಧರನ್ನೂ ಮತ್ತು ಕುದುರೆ ಸವಾರರನ್ನೂ ಸಂಹರಿಸಿದನು.
08056050a ಕೃತ್ವಾ ಶೂನ್ಯಾನ್ರಥೋಪಸ್ಥಾನ್ವಾಜಿಪೃಷ್ಠಾಂಶ್ಚ ಭಾರತ।
08056050c ನಿರ್ಮನುಷ್ಯಾನ್ಗಜಸ್ಕಂದಾನ್ಪಾದಾತಾಂಶ್ಚೈವ ವಿದ್ರುತಾನ್।।
ಭಾರತ! ರಥಗಳನ್ನು, ಕುದುರೆಯ ಬೆನ್ನುಗಳನ್ನು ಕುಳಿತುಕೊಳ್ಳುವವರು ಇಲ್ಲದಂತೆ ಶೂನ್ಯಮಾಡಿದನು. ಆನೆಯ ಬೆನ್ನುಗಳ ಮೇಲೆ ಮನುಷ್ಯರಿಲ್ಲದಿರುವಂತೆ ಮಾಡಿದನು ಮತ್ತು ಓಡಿಹೋಗುತ್ತಿರುವ ಪದಾತಿಗಳನ್ನು ಸಂಹರಿಸಿದನು.
08056051a ಆದಿತ್ಯ ಇವ ಮಧ್ಯಾಹ್ನೇ ದುರ್ನಿರೀಕ್ಷ್ಯಃ ಪರಂತಪಃ।
08056051c ಕಾಲಾಂತಕವಪುಃ ಕ್ರೂರಃ ಸೂತಪುತ್ರಶ್ಚಚಾರ ಹ।।
ಮಧ್ಯಾಹ್ನದ ಸೂರ್ಯನಂತಿದ್ದ ಆ ಪರಂತಪನನ್ನು ನೋಡಲೂ ಆಗುತ್ತಿರಲಿಲ್ಲ. ಕಾಲಾಂತಕನ ರೂಪವನ್ನು ಧರಿಸಿ ಕ್ರೂರ ಸೂತಪುತ್ರನು ಸಂಚರಿಸುತ್ತಿದ್ದನು.
08056052a ಏವಮೇತಾನ್ಮಹಾರಾಜ ನರವಾಜಿರಥದ್ವಿಪಾನ್।
08056052c ಹತ್ವಾ ತಸ್ಥೌ ಮಹೇಷ್ವಾಸಃ ಕರ್ಣೋಽರಿಗಣಸೂದನಃ।।
ಮಹಾರಾಜ! ಹೀಗೆ ಆನೆ-ರಥ-ಕುದುರೆ-ಪದಾತಿಗಳನ್ನು ಸಂಹರಿಸುತ್ತಾ ಮಹೇಷ್ವಾಸ ಅರಿಗಣಸೂದನ ಕರ್ಣನು ರಣದಲ್ಲಿ ನಿಂತಿದ್ದನು.
08056053a ಯಥಾ ಭೂತಗಣಾನ್ ಹತ್ವಾ ಕಾಲಸ್ತಿಷ್ಠೇನ್ಮಹಾಬಲಃ।
08056053c ತಥಾ ಸ ಸೋಮಕಾನ್ ಹತ್ವಾ ತಸ್ಥಾವೇಕೋ ಮಹಾರಥಃ।।
ಮಹಾಬಲ ಕಾಲನು ಹೇಗೆ ಭೂತಗಣಗಳನ್ನು ಸಂಹರಿಸಿ ನಿಲ್ಲುತ್ತಾನೋ ಹಾಗೆ ಮಹಾರಥ ಕರ್ಣನು ಒಬ್ಬನೇ ಸೋಮಕರನ್ನು ಸಂಹರಿಸಿ ನಿಂತಿದ್ದನು.
08056054a ತತ್ರಾದ್ಭುತಮಪಶ್ಯಾಮ ಪಾಂಚಾಲಾನಾಂ ಪರಾಕ್ರಮಂ।
08056054c ವಧ್ಯಮಾನಾಪಿ ಕರ್ಣೇನ ನಾಜಹೂ ರಣಮೂರ್ಧನಿ।।
ಅಲ್ಲಿ ಪಾಂಚಾಲರ ಅದ್ಭುತ ಪರಾಕ್ರಮವನ್ನು ನೋಡಿದೆವು. ಕರ್ಣನಿಂದ ವಧಿಸಲ್ಪಡುತ್ತಿದ್ದರೂ ಅವರು ರಣರಂಗವನ್ನು ಮಾತ್ರ ಬಿಟ್ಟು ಹೋಗಲಿಲ್ಲ.
08056055a ರಾಜಾ ದುಃಶಾಸನಶ್ಚೈವ ಕೃಪಃ ಶಾರದ್ವತಸ್ತಥಾ।
08056055c ಅಶ್ವತ್ಥಾಮಾ ಕೃತವರ್ಮಾ ಶಕುನಿಶ್ಚಾಪಿ ಸೌಬಲಃ।
08056055e ನ್ಯಹನನ್ಪಾಂಡವೀಂ ಸೇನಾಂ ಶತಶೋಽಥ ಸಹಸ್ರಶಃ।।
ರಾಜ ದುರ್ಯೋಧನ, ದುಃಶಾಸನ, ಕೃಪ ಶಾರದ್ವತ, ಅಶ್ವತ್ಥಾಮ, ಕೃತವರ್ಮ, ಮತ್ತು ಸೌಬಲ ಶಕುನಿ ಇವರು ಪಾಂಡವೀ ಸೇನೆಯನ್ನು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ವಧಿಸಿದರು.
08056056a ಕರ್ಣಪುತ್ರೌ ಚ ರಾಜೇಂದ್ರ ಭ್ರಾತರೌ ಸತ್ಯವಿಕ್ರಮೌ।
08056056c ಅನಾಶಯೇತಾಂ ಬಲಿನಃ ಪಾಂಚಾಲಾನ್ವೈ ತತಸ್ತತಃ।
08056056e ತತ್ರ ಯುದ್ಧಂ ತದಾ ಹ್ಯಾಸೀತ್ಕ್ರೂರಂ ವಿಶಸನಂ ಮಹತ್।।
ರಾಜೇಂದ್ರ! ಸತ್ಯವಿಕ್ರಮಿಗಳಾಗಿದ್ದ ಬಲಶಾಲೀ ಕರ್ಣಪುತ್ರ ಸಹೋದರರಿಬ್ಬರೂ ಅಲ್ಲಲ್ಲಿ ಪಾಂಚಾಲರನ್ನು ಸಂಹರಿಸುತ್ತಿದ್ದರು. ಆಗ ಅಲ್ಲಿ ಮಹಾ ವಿನಾಶಕಾರೀ ಯುದ್ಧವು ನಡೆಯಿತು.
08056057a ತಥೈವ ಪಾಂಡವಾಃ ಶೂರಾ ಧೃಷ್ಟದ್ಯುಮ್ನಶಿಖಂಡಿನೌ।
08056057c ದ್ರೌಪದೇಯಾಶ್ಚ ಸಂಕ್ರುದ್ಧಾ ಅಭ್ಯಘ್ನಂಸ್ತಾವಕಂ ಬಲಂ।।
ಹಾಗೆಯೇ ಪಾಂಡವ ಶೂರರೂ, ಧೃಷ್ಟದ್ಯುಮ್ನ-ಶಿಖಂಡಿಯರೂ, ದ್ರೌಪದೇಯರೂ ಸಂಕ್ರುದ್ಧರಾಗಿ ನಿನ್ನ ಸೇನೆಯನ್ನು ಆಕ್ರಮಣಿಸುತ್ತಿದ್ದರು.
08056058a ಏವಮೇಷ ಕ್ಷಯೋ ವೃತ್ತಃ ಪಾಂಡವಾನಾಂ ತತಸ್ತತಃ।
08056058c ತಾವಕಾನಾಮಪಿ ರಣೇ ಭೀಮಂ ಪ್ರಾಪ್ಯ ಮಹಾಬಲಂ।।
ಹೀಗೆ ಪಾಂಡವರ ವಿನಾಶವು ನಡೆಯುತ್ತಿರಲು ಆ ರಣಕ್ಕೆ ಮಹಾಬಲ ಭೀಮನು ಬಂದು ನಿನ್ನವರನ್ನೂ ನಾಶಗೊಳಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಷಟ್ಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಐವತ್ತಾರನೇ ಅಧ್ಯಾಯವು.