ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 55
ಸಾರ
ಕೌರವ ಸೇನೆಯ ಮೇಲೆ ಅರ್ಜುನ (1-22) ಮತ್ತು ಭೀಮಸೇನರ ಆಕ್ರಮಣ, ಅನೇಕ ಸೇನೆಗಳ ನಾಶ (23-45). ಭೀಮಸೇನ-ಶಕುನಿಯರ ಯುದ್ಧ, ಶಕುನಿಯ ಪರಾಜಯ (46-73).
08055001 ಸಂಜಯ ಉವಾಚ।
08055001a ಶ್ರುತ್ವಾ ಚ ರಥನಿರ್ಘೋಷಂ ಸಿಂಹನಾದಂ ಚ ಸಂಯುಗೇ।
08055001c ಅರ್ಜುನಃ ಪ್ರಾಹ ಗೋವಿಂದಂ ಶೀಘ್ರಂ ಚೋದಯ ವಾಜಿನಃ।।
ಸಂಜಯನು ಹೇಳಿದನು: “ರಣರಂಗದಲ್ಲಿ ರಥನಿರ್ಘೋಷವನ್ನೂ ಸಿಂಹನಾದವನ್ನು ಕೇಳಿದ ಅರ್ಜುನನು ಕುದುರೆಗಳನ್ನು ಶೀಘ್ರವಾಗಿ ಓಡಿಸುವಂತೆ ಗೋವಿಂದನಿಗೆ ಹೇಳಿದನು.
08055002a ಅರ್ಜುನಸ್ಯ ವಚಃ ಶ್ರುತ್ವಾ ಗೋವಿಂದೋಽರ್ಜುನಮಬ್ರವೀತ್।
08055002c ಏಷ ಗಚ್ಚಾಮಿ ಸುಕ್ಷಿಪ್ರಂ ಯತ್ರ ಭೀಮೋ ವ್ಯವಸ್ಥಿತಃ।।
ಅರ್ಜುನನ ಮಾತನ್ನು ಕೇಳಿ ಗೋವಿಂದನು “ಇಗೋ ಭೀಮನೆಲ್ಲಿರುವನೋ ಅಲ್ಲಿಗೆ ಕ್ಷಿಪ್ರವಾಗಿ ಹೋಗುತ್ತೇನೆ!” ಎಂದು ಅರ್ಜುನನಿಗೆ ಹೇಳಿದನು.
08055003a ಆಯಾಂತಮಶ್ವೈರ್ಹಿಮಶಂಖವರ್ಣೈಃ ಸುವರ್ಣಮುಕ್ತಾಮಣಿಜಾಲನದ್ಧೈಃ।
08055003c ಜಂಭಂ ಜಿಘಾಂಸುಂ ಪ್ರಗೃಹೀತವಜ್ರಂ ಜಯಾಯ ದೇವೇಂದ್ರಮಿವೋಗ್ರಮನ್ಯುಂ।।
08055004a ರಥಾಶ್ವಮಾತಂಗಪದಾತಿಸಂಘಾ ಬಾಣಸ್ವನೈರ್ನೇಮಿಖುರಸ್ವನೈಶ್ಚ।
08055004c ಸಂನಾದಯಂತೋ ವಸುಧಾಂ ದಿಶಶ್ಚ ಕ್ರುದ್ಧಾ ನೃಸಿಂಹಾ ಜಯಮಭ್ಯುದೀಯುಃ।।
ಹಿಮಶಂಖವರ್ಣದ ಕುದುರೆಗಳನ್ನು ಕಟ್ಟಿದ್ದ, ಸುವರ್ಣ ಮುಕ್ತಾಮಣಿಗಳ ಜಾಲಗಳಿಂದ ಅಲಂಕೃತವಾಗಿದ್ದ ರಥದಲ್ಲಿ ಜಂಭಾಸುರನನನ್ನು ಸಂಹರಿಸಲು ವಜ್ರವನ್ನು ಹಿಡಿದು ಬರುತ್ತಿರುವ ದೇವೇಂದ್ರನಂತೆ ಜಯಕ್ಕಾಗಿ ಉಗ್ರಕೋಪದಿಂದ ಬರುತ್ತಿರುವ ಜಯನನ್ನು ಕ್ರುದ್ಧರಾದ ನರಸಿಂಹರು ರಥ-ಕುದುರೆ-ಮಾತಂಗ-ಪದಾತಿಸಂಘಗಳಿಂದ ಮತ್ತು ಬಾಣಗಳ ಶಬ್ಧ, ರಥಚಕ್ರಗಳ ಶಬ್ಧಗಳೊಂದಿಗೆ ಭೂಮಿ-ದಿಕ್ಕುಗಳನ್ನು ಮೊಳಗಿಸುತ್ತಾ ಆಕ್ರಮಣಿಸಿದರು.
08055005a ತೇಷಾಂ ಚ ಪಾರ್ಥಸ್ಯ ಮಹತ್ತದಾಸೀದ್ ದೇಹಾಸುಪಾಪ್ಮಕ್ಷಪಣಂ ಸುಯುದ್ಧಂ।
08055005c ತ್ರೈಲೋಕ್ಯಹೇತೋರಸುರೈರ್ಯಥಾಸೀದ್ ದೇವಸ್ಯ ವಿಷ್ಣೋರ್ಜಯತಾಂ ವರಸ್ಯ।।
ತ್ರೈಲೋಕ್ಯಕ್ಕಾಗಿ ಅಸುರರಿಗೂ ಮತ್ತು ವಿಜಯಿಗಳಲ್ಲಿ ಶ್ರೇಷ್ಠ ದೇವ ವಿಷ್ಣುವಿಗೂ ಹೇಗೆ ಯುದ್ಧವು ನಡೆಯಿತೋ ಹಾಗೆ ನಿನ್ನವರ ಮತ್ತು ಪಾರ್ಥರ ನಡುವೆ ದೇಹ-ಪ್ರಾಣ-ಪಾಪಗಳ ವಿನಾಶಕಾರಿಯಾದ ಮಹಾ ಯುದ್ಧವು ನಡೆಯಿತು.
08055006a ತೈರಸ್ತಮುಚ್ಚಾವಚಮಾಯುಧೌಘಂ ಏಕಃ ಪ್ರಚಿಚ್ಚೇದ ಕಿರೀಟಮಾಲೀ।
08055006c ಕ್ಷುರಾರ್ಧಚಂದ್ರೈರ್ನಿಶಿತೈಶ್ಚ ಬಾಣೈಃ ಶಿರಾಂಸಿ ತೇಷಾಂ ಬಹುಧಾ ಚ ಬಾಹೂನ್।।
08055007a ಚತ್ರಾಣಿ ವಾಲವ್ಯಜನಾನಿ ಕೇತೂನ್ ಅಶ್ವಾನ್ರಥಾನ್ಪತ್ತಿಗಣಾನ್ದ್ವಿಪಾಂಶ್ಚ।
08055007c ತೇ ಪೇತುರುರ್ವ್ಯಾಂ ಬಹುಧಾ ವಿರೂಪಾ ವಾತಪ್ರಭಗ್ನಾನಿ ಯಥಾ ವನಾನಿ।।
ಅವರು ಬಿಡುತ್ತಿದ್ದ ವಿವಿಧಬಗೆಯ ಆಯುಧಸಂಘಗಳನ್ನು ಕಿರೀಟಮಾಲಿಯೊಬ್ಬನೇ ತುಂಡರಿಸಿದನು. ಅರ್ಧಚಂದ್ರದ ಕ್ಷುರಗಳು ಮತ್ತು ನಿಶಿತ ಬಾಣಗಳಿಂದ ಅವರ ಅನೇಕ ಶಿರಗಳನ್ನೂ ಬಾಹುಗಳನ್ನೂ, ಚತ್ರಗಳನ್ನೂ, ವಾಲವ್ಯಜನಗಳನ್ನೂ, ಧ್ವಜಗಳನ್ನೂ, ಅಶ್ವಗಳನ್ನೂ, ರಥಗಳನ್ನೂ, ಪದಾತಿಗಣಗಳನ್ನೂ, ಆನೆಗಳನ್ನೂ ತುಂಡರಿಸಿದನು. ವನದಲ್ಲಿ ಚಂಡಮಾರುತಕ್ಕೆ ಸಿಲುಕಿದ ಮರಗಳಂತೆ ಅವುಗಳು ಅನೇಕ ಸಂಖ್ಯೆಗಳಲ್ಲಿ ವಿರೂಪಗೊಂಡು ನೆಲದ ಮೇಲೆ ಬಿದ್ದವು.
08055008a ಸುವರ್ಣಜಾಲಾವತತಾ ಮಹಾಗಜಾಃ ಸವೈಜಯಂತೀಧ್ವಜಯೋಧಕಲ್ಪಿತಾಃ।
08055008c ಸುವರ್ಣಪುಂಖೈರಿಷುಭಿಃ ಸಮಾಚಿತಾಶ್ ಚಕಾಶಿರೇ ಪ್ರಜ್ವಲಿತಾ ಯಥಾಚಲಾಃ।।
ಸುವರ್ಣಜಾಲಗಳಿಂದ ಮತ್ತು ವೈಜಯಂತೀ ಧ್ವಜಗಳಿಂದ ಅಲಂಕೃತಗೊಂಡು ಯೋಧರಿಂದ ಸಜ್ಜುಗೊಳಿಸಿದ್ದ ಮಹಾ ಗಜಗಳು ಅರ್ಜುನನ ಸುವರ್ಣಪುಂಖಗಳ ಬಾಣಗಳಿಂದ ಚುಚ್ಚಲ್ಪಟ್ಟು ಪ್ರಜ್ವಲಿಸುವ ಪರ್ವತಗಳಂತೆ ಕಾಣುತ್ತಿದ್ದವು.
08055009a ವಿದಾರ್ಯ ನಾಗಾಂಶ್ಚ ರಥಾಂಶ್ಚ ವಾಜಿನಃ ಶರೋತ್ತಮೈರ್ವಾಸವವಜ್ರಸಂನಿಭೈಃ।
08055009c ದ್ರುತಂ ಯಯೌ ಕರ್ಣಜಿಘಾಂಸಯಾ ತಥಾ ಯಥಾ ಮರುತ್ವಾನ್ಬಲಭೇದನೇ ಪುರಾ।।
ಹಿಂದೆ ಬಲಭೇದನೆಗೆ ಮರುತ್ವಾನನು ಬರುವಂತೆ ವಾಸವನ ವಜ್ರಸನ್ನಿಭ ಉತ್ತಮ ಶರಗಳಿಂದ ಆನೆ-ರಥ-ಕುದುರೆಗಳನ್ನು ಸೀಳುತ್ತಾ ಅರ್ಜುನನು ಕರ್ಣನನ್ನು ಸಂಹರಿಸಲು ಉತ್ಸುಕನಾಗಿ ಬಹುಬೇಗ ಬಂದನು.
08055010a ತತಃ ಸ ಪುರುಷವ್ಯಾಘ್ರಃ ಸೂತಸೈನ್ಯಮರಿಂದಮ।
08055010c ಪ್ರವಿವೇಶ ಮಹಾಬಾಹುರ್ಮಕರಃ ಸಾಗರಂ ಯಥಾ।।
ಅರಿಂದಮ! ಆಗ ಆ ಪುರುಷವ್ಯಾಘ್ರ ಮಹಾಬಾಹುವು ಮೊಸಳೆಯು ಸಾಗರವನ್ನು ಹೇಗೋ ಹಾಗೆ ಸೂತ ಕರ್ಣನ ಸೈನ್ಯವನ್ನು ಪ್ರವೇಶಿಸಿದನು.
08055011a ತಂ ದೃಷ್ಟ್ವಾ ತಾವಕಾ ರಾಜನ್ರಥಪತ್ತಿಸಮನ್ವಿತಾಃ।
08055011c ಗಜಾಶ್ವಸಾದಿಬಹುಲಾಃ ಪಾಂಡವಂ ಸಮುಪಾದ್ರವನ್।।
ರಾಜನ್! ಅವನನ್ನು ನೋಡಿ ನಿನ್ನವರು ಅನೇಕ ರಥ-ಪದಾತಿ-ಆನೆ-ಕುದುರೆಗಳ ಸವಾರರೊಂದಿಗೆ ಪಾಂಡವನನ್ನು ಆಕ್ರಮಣಿಸಿದರು.
08055012a ತತ್ರಾಭಿದ್ರವತಾಂ ಪಾರ್ಥಮಾರಾವಃ ಸುಮಹಾನಭೂತ್।
08055012c ಸಾಗರಸ್ಯೇವ ಮತ್ತಸ್ಯ ಯಥಾ ಸ್ಯಾತ್ಸಲಿಲಸ್ವನಃ।।
ಉಕ್ಕಿ ಬರುತ್ತಿರುವ ಸಾಗರದ ಅಲೆಗಳ ಭೋರ್ಗರೆತದಂತೆ ಪಾರ್ಥನ ಮೇಲೆ ಬೀಳುತ್ತಿದ್ದ ಆ ಸೇನೆಗಳ ಕೋಲಾಹಲ ಶಬ್ಧವು ಸರ್ವತ್ರ ವ್ಯಾಪ್ತವಾಯಿತು.
08055013a ತೇ ತು ತಂ ಪುರುಷವ್ಯಾಘ್ರಂ ವ್ಯಾಘ್ರಾ ಇವ ಮಹಾರಥಾಃ।
08055013c ಅಭ್ಯದ್ರವಂತ ಸಂಗ್ರಾಮೇ ತ್ಯಕ್ತ್ವಾ ಪ್ರಾಣಕೃತಂ ಭಯಂ।।
ಸಂಗ್ರಾಮದಲ್ಲಿ ಪ್ರಾಣಬಯವನ್ನೂ ತೊರೆದು ಆ ಮಹಾರಥರು ಹುಲಿಗಳಂತೆ ಪುರುಷವ್ಯಾಘ್ರ ಅರ್ಜುನನನ್ನು ಆಕ್ರಮಣಿಸಿದರು.
08055014a ತೇಷಾಮಾಪತತಾಂ ತತ್ರ ಶರವರ್ಷಾಣಿ ಮುಂಚತಾಂ।
08055014c ಅರ್ಜುನೋ ವ್ಯಧಮತ್ಸೈನ್ಯಂ ಮಹಾವಾತೋ ಘನಾನಿವ।।
ಮೇಲೆ ಬೀಳುತ್ತಿರುವ ಆ ಸೇನೆಯನ್ನು ಅರ್ಜುನನು ಶರವರ್ಷಗಳಿಂದ ಮುಚ್ಚಿ ಚಂಡಮಾರುತವು ಮೋಡಗಳನ್ನು ಹೇಗೋ ಹಾಗೆ ವಧಿಸಿದನು.
08055015a ತೇಽರ್ಜುನಂ ಸಹಿತಾ ಭೂತ್ವಾ ರಥವಂಶೈಃ ಪ್ರಹಾರಿಣಃ।
08055015c ಅಭಿಯಾಯ ಮಹೇಷ್ವಾಸಾ ವಿವ್ಯಧುರ್ನಿಶಿತೈಃ ಶರೈಃ।।
ಆ ಪ್ರಹಾರಿಗಳು ರಥಸಮೂಹಗಳೊಡನೆ ಸಂಘಟಿತರಾಗಿ ನಿಶಿತ ಶರಗಳಿಂದ ಅರ್ಜುನನನ್ನು ಪ್ರಹರಿಸಿದರು.
08055016a ತತೋಽರ್ಜುನಃ ಸಹಸ್ರಾಣಿ ರಥವಾರಣವಾಜಿನಾಂ।
08055016c ಪ್ರೇಷಯಾಮಾಸ ವಿಶಿಖೈರ್ಯಮಸ್ಯ ಸದನಂ ಪ್ರತಿ।।
ಆಗ ವಿಶಿಖಗಳಿಂದ ಅರ್ಜುನನು ಸಹಸ್ರಾರು ರಥ-ಆನೆ-ಕುದುರೆಗಳನ್ನು ಯಮಸದನಕ್ಕೆ ಕಳುಹಿಸಿದನು.
08055017a ತೇ ವಧ್ಯಮಾನಾಃ ಸಮರೇ ಪಾರ್ಥಚಾಪಚ್ಯುತೈಃ ಶರೈಃ।
08055017c ತತ್ರ ತತ್ರ ಸ್ಮ ಲೀಯಂತೇ ಭಯೇ ಜಾತೇ ಮಹಾರಥಾಃ।।
ಪಾರ್ಥನ ಚಾಪದಿಂದ ಬಿಡಲ್ಪಟ್ಟ ಬಾಣಗಳಿಂದ ವಧಿಸಲ್ಪಡುತ್ತಿದ್ದ ಆ ಮಹಾರಥರು ಸಮರದಲ್ಲಿ ಭಯಗೊಂಡು ಅಲ್ಲಲ್ಲಿಯೇ ಅಡಗಿಕೊಳ್ಳುತ್ತಿದ್ದರು.
08055018a ತೇಷಾಂ ಚತುಃಶತಾನ್ವೀರಾನ್ಯತಮಾನಾನ್ಮಹಾರಥಾನ್।
08055018c ಅರ್ಜುನೋ ನಿಶಿತೈರ್ಬಾಣೈರನಯದ್ಯಮಸಾದನಂ।।
ಪ್ರಯತ್ನಪಡುತ್ತಿದ್ದ ಆ ನಾಲ್ಕು ನೂರು ವೀರ ಮಹಾರಥರನ್ನು ಅರ್ಜುನನು ನಿಶಿತ ಬಾಣಗಳಿಂದ ಯಮಸದನಕ್ಕೆ ಕಳುಹಿಸಿದನು.
08055019a ತೇ ವಧ್ಯಮಾನಾಃ ಸಮರೇ ನಾನಾಲಿಂಗೈಃ ಶಿತೈಃ ಶರೈಃ।
08055019c ಅರ್ಜುನಂ ಸಮಭಿತ್ಯಜ್ಯ ದುದ್ರುವುರ್ವೈ ದಿಶೋ ಭಯಾತ್।।
ಸಮರದಲ್ಲಿ ನಾನಾ ರೀತಿಯ ನಿಶಿತ ಶರಗಳಿಂದ ವಧಿಸಲ್ಪಡುತ್ತಿದ್ದ ಅವರು ಭಯದಿಂದ ಅರ್ಜುನನನ್ನು ಬಿಟ್ಟುಬಿಟ್ಟು ದಿಕ್ಕಾಪಾಲಾಗಿ ಓಡಿ ಹೋದರು.
08055020a ತೇಷಾಂ ಶಬ್ಧೋ ಮಹಾನಾಸೀದ್ದ್ರವತಾಂ ವಾಹಿನೀಮುಖೇ।
08055020c ಮಹೌಘಸ್ಯೇವ ಭದ್ರಂ ತೇ ಗಿರಿಮಾಸಾದ್ಯ ದೀರ್ಯತಃ।।
ನಿನಗೆ ಮಂಗಳವಾಗಲಿ! ವಾಹಿನೀಮುಖದಲ್ಲಿ ಓಡಿ ಹೋಗುತ್ತಿದ್ದ ಅವರ ಶಬ್ಧವು ಮಹಾಪ್ರವಾಹದೊಂದಿಗೆ ಗಿರಿಯನ್ನು ಅಪ್ಪಳಿಸಿ ಮುಂದೆ ಹೋಗಲಾರದೇ ಭಾಗಗಳಾಗಿ ಹರಿದುಹೋಗುವ ನದಿಯಂತೆ ಮಹತ್ತರವಾಗಿತ್ತು.
08055021a ತಾಂ ತು ಸೇನಾಂ ಭೃಶಂ ವಿದ್ಧ್ವಾ ದ್ರಾವಯಿತ್ವಾರ್ಜುನಃ ಶರೈಃ।
08055021c ಪ್ರಾಯಾದಭಿಮುಖಃ ಪಾರ್ಥಃ ಸೂತಾನೀಕಾನಿ ಮಾರಿಷ।।
ಮಾರಿಷ! ಆ ಸೇನೆಯನ್ನು ಶರಗಳಿಂದ ಚೆನ್ನಾಗಿ ಹೊಡೆದು ಓಡಿಸಿ ಪಾರ್ಥ ಅರ್ಜುನನು ಸೂತ ಕರ್ಣನ ಸೇನೆಗೆ ಅಭಿಮುಖವಾಗಿ ಮುಂದುವರೆದನು.
08055022a ತಸ್ಯ ಶಬ್ದೋ ಮಹಾನಾಸೀತ್ಪರಾನಭಿಮುಖಸ್ಯ ವೈ।
08055022c ಗರುಡಸ್ಯೇವ ಪತತಃ ಪನ್ನಗಾರ್ಥೇ ಯಥಾ ಪುರಾ।।
ಶತ್ರುಗಳನ್ನು ಎದುರಿಸಿ ಹೋಗುತ್ತಿದ್ದ ಅವನ ಶಬ್ಧವು ಹಿಂದೆ ಪನ್ನಗಗಳಿಗಾಗಿ ಗರುಡನು ಎರಗಿ ಬಿದ್ದಂತೆ ಅತಿ ಭಯಂಕರವಾಗಿತ್ತು.
08055023a ತಂ ತು ಶಬ್ಧಮಭಿಶ್ರುತ್ಯ ಭೀಮಸೇನೋ ಮಹಾಬಲಃ।
08055023c ಬಭೂವ ಪರಮಪ್ರೀತಃ ಪಾರ್ಥದರ್ಶನಲಾಲಸಃ।।
ಪಾರ್ಥನನ್ನು ನೋಡಲು ಲಾಲಸನಾಗಿದ್ದ ಮಹಾಬಲ ಭೀಮಸೇನನು ಆ ಶಬ್ಧವನ್ನು ಕೇಳಿ ಅತ್ಯಂತ ಹರ್ಷಗೊಂಡನು.
08055024a ಶ್ರುತ್ವೈವ ಪಾರ್ಥಮಾಯಾಂತಂ ಭೀಮಸೇನಃ ಪ್ರತಾಪವಾನ್।
08055024c ತ್ಯಕ್ತ್ವಾ ಪ್ರಾಣಾನ್ಮಹಾರಾಜ ಸೇನಾಂ ತವ ಮಮರ್ದ ಹ।।
ಮಹಾರಾಜ! ಪಾರ್ಥನು ಬರುತ್ತಿರುವುದನ್ನು ಕೇಳಿಯೇ ಪ್ರತಾಪವಾನ್ ಭೀಮಸೇನನು ಪ್ರಾಣಗಳನ್ನೂ ತ್ಯಜಿಸಿ ನಿನ್ನ ಸೇನೆಯನ್ನು ಮರ್ದಿಸಿದನು.
08055025a ಸ ವಾಯುವೇಗಪ್ರತಿಮೋ33 ವಾಯುವೇಗಸಮೋ ಜವೇ।
08055025c ವಾಯುವದ್ವ್ಯಚರದ್ಭೀಮೋ ವಾಯುಪುತ್ರಃ ಪ್ರತಾಪವಾನ್।।
ವೇಗದಲ್ಲಿ ವಾಯುವೇಗಸಮನಾದ ಆ ವಾಯುವೇಗಪ್ರತಿಮ ಪ್ರತಾಪವಾನ್ ವಾಯುಪುತ್ರ ಭೀಮನು ವಾಯುವಿನಂತೆಯೇ ಸಂಚರಿಸುತ್ತಿದ್ದನು.
08055026a ತೇನಾರ್ದ್ಯಮಾನಾ ರಾಜೇಂದ್ರ ಸೇನಾ ತವ ವಿಶಾಂ ಪತೇ।
08055026c ವ್ಯಭ್ರಾಂಯತ ಮಹಾರಾಜ ಭಿನ್ನಾ ನೌರಿವ ಸಾಗರೇ।।
ರಾಜೇಂದ್ರ! ವಿಶಾಂಪತೇ! ಮಹಾರಾಜ! ಅವನಿಂದ ಮರ್ದಿಸಲ್ಪಡುತ್ತಿದ್ದ ನಿನ್ನ ಸೈನ್ಯವು ಸಾಗರಮಧ್ಯದಲ್ಲಿ ಒಡೆದು ಹೋಗುವ ನೌಕೆಯಂತೆ ಒಡೆದುಹೋಯಿತು.
08055027a ತಾಂ ತು ಸೇನಾಂ ತದಾ ಭೀಮೋ ದರ್ಶಯನ್ಪಾಣಿಲಾಘವಂ।
08055027c ಶರೈರವಚಕರ್ತೋಗ್ರೈಃ ಪ್ರೇಷಯಿಷ್ಯನ್ಯಮಕ್ಷಯಂ।।
ಆಗ ಭೀಮನು ತನ್ನ ಹಸ್ತಲಾಘವವನ್ನು ತೋರಿಸುತ್ತಾ ಉಗ್ರಶರಗಳಿಂದ ಆ ಸೇನೆಯನ್ನು ತುಂಡರಿಸಿ ಯಮಕ್ಷಯಕ್ಕೆ ಕಳುಹಿಸಿದನು.
08055028a ತತ್ರ ಭಾರತ ಭೀಮಸ್ಯ ಬಲಂ ದೃಷ್ಟ್ವಾತಿಮಾನುಷಂ।
08055028c ವ್ಯತ್ರಸ್ಯಂತ ರಣೇ ಯೋಧಾಃ ಕಾಲಸ್ಯೇವ ಯುಗಕ್ಷಯೇ।।
ಭಾರತ! ಅಲ್ಲಿ ಭೀಮನ ಅತಿಮಾನುಷ ಬಲವನ್ನು ಕಂಡು ಯೋಧರು ಯುಗಕ್ಷಯದಲ್ಲಿ ಕಾಲನಿಂದ ಓಡಿಹೋಗುವಂತೆ ರಣದಲ್ಲಿ ಓಡತೊಡಗಿದರು.
08055029a ತಥಾರ್ದಿತಾನ್ಭೀಮಬಲಾನ್ಭೀಮಸೇನೇನ ಭಾರತ।
08055029c ದೃಷ್ಟ್ವಾ ದುರ್ಯೋಧನೋ ರಾಜಾ ಇದಂ ವಚನಮಬ್ರವೀತ್।।
08055030a ಸೈನಿಕಾನ್ಸ ಮಹೇಷ್ವಾಸೋ ಯೋಧಾಂಶ್ಚ ಭರತರ್ಷಭ।
08055030c ಸಮಾದಿಶದ್ರಣೇ ಸರ್ವಾನ್ ಹತ ಭೀಮಮಿತಿ ಸ್ಮ ಹ।
08055030e ತಸ್ಮಿನ್ ಹತೇ ಹತಂ ಮನ್ಯೇ ಸರ್ವಸೈನ್ಯಮಶೇಷತಃ।।
ಭಾರತ! ಭರತರ್ಷಭ! ಭೀಮಬಲ ಭೀಮಸೇನನಿಂದ ಹಾಗೆ ಆರ್ದಿತರಾದವರನ್ನು ನೋಡಿ ಮಹೇಷ್ವಾಸ ರಾಜಾ ದುರ್ಯೋಧನನು ಸೈನಿಕ ಯೋಧರನ್ನು ಆಹ್ವಾನಿಸುತ್ತಾ ಈ ಮಾತನ್ನಾಡಿದನು: “ನೀವೆಲ್ಲರೂ ಸಂಘಟಿತರಾಗಿ ಭೀಮನನ್ನು ಸಂಹರಿಸಿರಿ! ಅವನೊಬ್ಬನು ಹತನಾದರೆ ಪಾಂಡವರ ಸರ್ವಸೈನ್ಯವೂ ಹತವಾದಂತೆ ಎಂದು ತಿಳಿಯಿರಿ!”
08055031a ಪ್ರತಿಗೃಹ್ಯ ಚ ತಾಮಾಜ್ಞಾಂ ತವ ಪುತ್ರಸ್ಯ ಪಾರ್ಥಿವಾಃ।
08055031c ಭೀಮಂ ಪ್ರಚ್ಚಾದಯಾಮಾಸುಃ ಶರವರ್ಷೈಃ ಸಮಂತತಃ।।
ನಿನ್ನ ಮಗನ ಆಜ್ಞೆಯನ್ನು ಸ್ವೀಕರಿಸಿ ಪಾರ್ಥಿವರು ಭೀಮನನ್ನು ಶರವರ್ಷಗಳಿಂದ ಸುತ್ತಲೂ ಮುತ್ತಿಗೆ ಹಾಕಿದರು.
08055032a ಗಜಾಶ್ಚ ಬಹುಲಾ ರಾಜನ್ನರಾಶ್ಚ ಜಯಗೃದ್ಧಿನಃ।
08055032c ರಥಾ ಹಯಾಶ್ಚ ರಾಜೇಂದ್ರ ಪರಿವವ್ರುರ್ವೃಕೋದರಂ।।
ರಾಜನ್! ರಾಜೇಂದ್ರ! ಜಯವನ್ನು ಬಯಸಿದ್ದ ಅನೇಕ ನರರು, ರಥರು ಮತ್ತು ಕುದುರೆಗಳು ವೃಕೋದರನನ್ನು ಸುತ್ತುವರೆದರು.
08055033a ಸ ತೈಃ ಪರಿವೃತಃ ಶೂರೈಃ ಶೂರೋ ರಾಜನ್ಸಮಂತತಃ।
08055033c ಶುಶುಭೇ ಭರತಶ್ರೇಷ್ಠ ನಕ್ಷತ್ರೈರಿವ ಚಂದ್ರಮಾಃ।।
ರಾಜನ್! ಭರತಶ್ರೇಷ್ಠ! ಶೂರರಿಂದ ಪರಿವೃತನಾಗಿದ್ದ ಆ ಶೂರ ಭೀಮಸೇನನು ನಕ್ಷತ್ರಗಳಿಂದ ಸುತ್ತುವರೆಯಲ್ಪಟ್ಟ ಚಂದ್ರಮನಂತೆ ಶೋಭಿಸಿದನು.
08055034a ಸ ರರಾಜ ತಥಾ ಸಂಖ್ಯೇ ದರ್ಶನೀಯೋ ನರೋತ್ತಮಃ।
08055034c ನಿರ್ವಿಶೇಷಂ ಮಹಾರಾಜ ಯಥಾ ಹಿ ವಿಜಯಸ್ತಥಾ।।
ಮಹಾರಾಜ! ಹಾಗೆ ರಣದಲ್ಲಿ ಆ ನರೋತ್ತಮನು, ವಿಜಯ ಅರ್ಜುನನಂತೆಯೇ, ನೋಡಲು ಸುಂದರನಾಗಿ ಕಾಣುತ್ತಿದ್ದನು. ಅವರಿಬ್ಬರಲ್ಲಿ ವ್ಯತ್ಯಾಸವೇ ಕಾಣುತ್ತಿರಲಿಲ್ಲ.
08055035a ತತ್ರ ತೇ ಪಾರ್ಥಿವಾಃ ಸರ್ವೇ ಶರವೃಷ್ಟೀಃ ಸಮಾಸೃಜನ್।
08055035c ಕ್ರೋಧರಕ್ತೇಕ್ಷಣಾಃ ಕ್ರೂರಾ ಹಂತುಕಾಮಾ ವೃಕೋದರಂ।।
ಅಲ್ಲಿ ಕ್ರೋಧದಿಂದ ರಕ್ತೇಕ್ಷಣರಾಗಿದ್ದ ಕ್ರೂರ ಪಾರ್ಥಿವರೆಲ್ಲರೂ ವೃಕೋದರನನ್ನು ಕೊಲ್ಲಲು ಬಯಸಿ ಶರವೃಷ್ಟಿಗಳನ್ನು ಸೃಷ್ಟಿಸಿದರು.
08055036a ಸ ವಿದಾರ್ಯ ಮಹಾಸೇನಾಂ ಶರೈಃ ಸಂನತಪರ್ವಭಿಃ।
08055036c ನಿಶ್ಚಕ್ರಾಮ ರಣಾದ್ಭೀಮೋ ಮತ್ಸ್ಯೋ ಜಾಲಾದಿವಾಂಭಸಿ।।
ಆದರೆ ನೀರಿನಲ್ಲಿ ಮೀನು ಬಲೆಯಿಂದ ಹೊರಬರುವಂತೆ ಭೀಮನು ಸನ್ನತಪರ್ವ ಶರಗಳಿಂದ ಮಹಾಸೇನೆಯನ್ನು ಸೀಳಿ ರಣದಿಂದ ಹೊರಬಂದನು.
08055037a ಹತ್ವಾ ದಶ ಸಹಸ್ರಾಣಿ ಗಜಾನಾಮನಿವರ್ತಿನಾಂ।
08055037c ನೃಣಾಂ ಶತಸಹಸ್ರೇ ದ್ವೇ ದ್ವೇ ಶತೇ ಚೈವ ಭಾರತ।।
08055038a ಪಂಚ ಚಾಶ್ವಸಹಸ್ರಾಣಿ ರಥಾನಾಂ ಶತಮೇವ ಚ।
08055038c ಹತ್ವಾ ಪ್ರಾಸ್ಯಂದಯದ್ಭೀಮೋ ನದೀಂ ಶೋಣಿತಕರ್ದಮಾಂ।।
ಭಾರತ! ಭೀಮನು ಯುದ್ಧದಿಂದ ಹಿಂದಿರುಗದೇ ಇದ್ದ ಹತ್ತು ಸಾವಿರ ಆನೆಗಳನ್ನೂ, ಎರಡು ಲಕ್ಷದ ಎರಡು ನೂರು ಪದಾತಿಗಳನ್ನೂ, ಐದುಸಾವಿರ ಕುದುರೆಗಳನ್ನೂ ಮತ್ತು ಒಂದು ನೂರು ರಥಿಗಳನ್ನೂ ಸಂಹರಿಸಿ ರಕ್ತ ಮಾಂಸಗಳ ನದಿಯನ್ನೇ ಹರಿಸಿದನು.
08055039a ಶೋಣಿತೋದಾಂ ರಥಾವರ್ತಾಂ ಹಸ್ತಿಗ್ರಾಹಸಮಾಕುಲಾಂ।
08055039c ನರಮೀನಾಮಶ್ವನಕ್ರಾಂ ಕೇಶಶೈವಲಶಾದ್ವಲಾಂ।।
08055040a ಸಂಚಿನ್ನಭುಜನಾಗೇಂದ್ರಾಂ ಬಹುರತ್ನಾಪಹಾರಿಣೀಂ।
08055040c ಊರುಗ್ರಾಹಾಂ ಮಜ್ಜಪಂಕಾಂ ಶೀರ್ಷೋಪಲಸಮಾಕುಲಾಂ।।
08055041a ಧನುಷ್ಕಾಶಾಂ ಶರಾವಾಪಾಂ ಗದಾಪರಿಘಕೇತನಾಂ।
08055041c ಯೋಧವ್ರಾತವತೀಂ ಸಂಖ್ಯೇ ವಹಂತೀಂ ಯಮಸಾದನಂ।।
ಯುದ್ಧದಲ್ಲಿ ಯೋಧರನ್ನು ಯಮಸಾದನದ ಕಡೆ ಕೊಂಡೊಯ್ದು ಹರಿಯುತ್ತಿದ್ದ ಆ ನದಿಯಲ್ಲಿ ರಕ್ತವೇ ನೀರಾಗಿತ್ತು. ರಥಗಳು ಸುಳಿಗಳಾಗಿದ್ದವು. ಆನೆಗಳು ದೊಡ್ಡ ಮೊಸಳೆಗಳಂತಿದ್ದವು. ಪದಾತಿಗಳು ಮೀನುಗಳಂತಿದ್ದರು. ಕುದುರೆಗಳು ನಕ್ರಗಳಂತಿದ್ದವು. ಕೂದಲುಗಳು ಪಾಚಿಯಂತಿದ್ದವು. ತುಂಡಾದ ಭುಜಗಳು ಸರ್ಪಗಳಂತಿದ್ದವು. ಅನೇಕ ರತ್ನಗಳನ್ನು ನದಿಯು ಕೊಚ್ಚಿಕೊಂಡು ಹೋಗುತ್ತಿತ್ತು. ತೊಡೆಗಳು ಮೊಸಳೆಗಳಂತಿದ್ದವು. ಮಾಂಸವೇ ಕೆಸರಾಗಿತ್ತು. ಶಿರಗಳು ಕಲ್ಲುಬಂಡೆಗಳಂತಿದ್ದವು. ಧನುಸ್ಸುಗಳು ಜೊಂಡುಹುಲ್ಲುಗಳಂತಿದ್ದವು. ಬಾಣಗಳು ಜೊಂಡುಹುಲ್ಲಿನ ಚಿಗುರುಗಳಂತಿದ್ದವು. ಗದೆ-ಪರಿಘಗಳು ನಾಗರಹಾವುಗಳಂತಿದ್ದವು.
08055042a ಕ್ಷಣೇನ ಪುರುಷವ್ಯಾಘ್ರಃ ಪ್ರಾವರ್ತಯತ ನಿಮ್ನಗಾಂ।
08055042c ಯಥಾ ವೈತರಣೀಮುಗ್ರಾಂ ದುಸ್ತರಾಮಕೃತಾತ್ಮಭಿಃ।।
ಆ ಪುರುಷವ್ಯಾಘ್ರನು ಕ್ಷಣದಲ್ಲಿಯೇ ಉಗ್ರವಾದ, ಅಕೃತಾತ್ಮರಿಗೆ ದುಸ್ತರವಾದ ವೈತರಣಿಯಂತಿದ್ದ ನದಿಯನ್ನು ಸೃಷ್ಟಿಸಿದನು.
08055043a ಯತೋ ಯತಃ ಪಾಂಡವೇಯಃ ಪ್ರವೃತ್ತೋ ರಥಸತ್ತಮಃ।
08055043c ತತಸ್ತತೋಽಪಾತಯತ ಯೋಧಾಂ ಶತಸಹಸ್ರಶಃ।।
ರಥಸತ್ತಮ ಪಾಂಡವೇಯನು ಎಲ್ಲೆಲ್ಲಿ ಹೋಗುತ್ತಿದ್ದನೋ ಅಲ್ಲಲ್ಲಿ ನೂರಾರು ಸಹಸ್ರಾರು ಯೋಧರನ್ನು ಕೆಳಗುರುಳಿಸುತ್ತಿದ್ದನು.
08055044a ಏವಂ ದೃಷ್ಟ್ವಾ ಕೃತಂ ಕರ್ಮ ಭೀಮಸೇನೇನ ಸಂಯುಗೇ।
08055044c ದುರ್ಯೋಧನೋ ಮಹಾರಾಜ ಶಕುನಿಂ ವಾಕ್ಯಮಬ್ರವೀತ್।।
ಮಹಾರಾಜ! ಭೀಮಸೇನನು ಯುದ್ಧದಲ್ಲಿ ಮಾಡುತ್ತಿದ್ದ ಈ ಕರ್ಮಗಳನ್ನು ನೋಡಿ ದುರ್ಯೋಧನನು ಶಕುನಿಗೆ ಹೇಳಿದನು:
08055045a ಜಯ ಮಾತುಲ ಸಂಗ್ರಾಮೇ ಭೀಮಸೇನಂ ಮಹಾಬಲಂ।
08055045c ಅಸ್ಮಿಂ ಜಿತೇ ಜಿತಂ ಮನ್ಯೇ ಪಾಂಡವೇಯಂ ಮಹಾಬಲಂ।।
“ಮಾವ! ಸಂಗ್ರಾಮದಲ್ಲಿ ಮಹಾಬಲ ಭೀಮಸೇನನನ್ನು ಜಯಿಸು. ಈ ಮಹಾಬಲ ಪಾಂಡವೇಯನನ್ನು ಗೆದ್ದರೆ ನಾವು ಗೆದ್ದಂತೆಯೇ!”
08055046a ತತಃ ಪ್ರಾಯಾನ್ಮಹಾರಾಜ ಸೌಬಲೇಯಃ ಪ್ರತಾಪವಾನ್।
08055046c ರಣಾಯ ಮಹತೇ ಯುಕ್ತೋ ಭ್ರಾತೃಭಿಃ ಪರಿವಾರಿತಃ।।
ಮಹಾರಾಜ! ಆಗ ಪ್ರತಾಪವಾನ್ ಸೌಬಲೇಯನು ಸಹೋದರರಿಂದ ಪರಿವಾರಿತನಾಗಿ ಮಹಾ ಸೇನೆಯೊಂದಿಗೆ ಯುದ್ಧಕ್ಕೆ ಹೊರಟನು.
08055047a ಸ ಸಮಾಸಾದ್ಯ ಸಂಗ್ರಾಮೇ ಭೀಮಂ ಭೀಮಪರಾಕ್ರಮಂ।
08055047c ವಾರಯಾಮಾಸ ತಂ ವೀರೋ ವೇಲೇವ ಮಕರಾಲಯಂ।
08055047e ಸ ನ್ಯವರ್ತತ ತಂ ಭೀಮೋ ವಾರ್ಯಮಾಣಃ ಶಿತೈಃ ಶರೈಃ।।
ಸಂಗ್ರಾಮದಲ್ಲಿ ಅವನು ಭೀಮಪರಾಕ್ರಮಿ ಭೀಮನನ್ನು ಎದುರಿಸಿ ಆ ವೀರನನ್ನು ದಡವು ಸಮುದ್ರವನ್ನು ತಡೆಯುವಂತೆ ತಡೆದು ನಿಲ್ಲಿಸಿದನು. ನಿಶಿತ ಶರಗಳಿಂದ ತಡೆಯಲ್ಪಟ್ಟ ಭೀಮನು ಅವನನ್ನು ಎದುರಿಸಿದನು.
08055048a ಶಕುನಿಸ್ತಸ್ಯ ರಾಜೇಂದ್ರ ವಾಮೇ ಪಾರ್ಶ್ವೇ ಸ್ತನಾಂತರೇ।
08055048c ಪ್ರೇಷಯಾಮಾಸ ನಾರಾಚಾನ್ರುಕ್ಮಪುಂಖಾಂ ಶಿಲಾಶಿತಾನ್।।
ರಾಜೇಂದ್ರ! ಶಕುನಿಯು ರುಕ್ಮಪುಂಖಗಳುಳ್ಳ ಶಿಲಾಶಿತ ನಾರಾಚಗಳನ್ನು ಅವನ ವಕ್ಷಃಸ್ಥಳದ ಎಡಭಾಗಕ್ಕೆ ಪ್ರಯೋಗಿಸಿದನು.
08055049a ವರ್ಮ ಭಿತ್ತ್ವಾ ತು ಸೌವರ್ಣಂ ಬಾಣಾಸ್ತಸ್ಯ ಮಹಾತ್ಮನಃ।
08055049c ನ್ಯಮಜ್ಜಂತ ಮಹಾರಾಜ ಕಂಕಬರ್ಹಿಣವಾಸಸಃ।।
ಮಹಾರಾಜ! ಆ ಬಾಣಗಳು ಮಹಾತ್ಮನ ಸುವರ್ಣ ಕವಚವನ್ನು ಭೇದಿಸಿ ಶರೀರದೊಳಗೆ ನಾಟಿಕೊಂಡವು.
08055050a ಸೋಽತಿವಿದ್ಧೋ ರಣೇ ಭೀಮಃ ಶರಂ ಹೇಮವಿಭೂಷಿತಂ।
08055050c ಪ್ರೇಷಯಾಮಾಸ ಸಹಸಾ ಸೌಬಲಂ ಪ್ರತಿ ಭಾರತ।।
ಭಾರತ! ಹಾಗೆ ರಣದಲ್ಲಿ ಅತಿಯಾಗಿ ಗಾಯಗೊಂಡ ಭೀಮನು ತಕ್ಷಣವೇ ಹೇಮವಿಭೂಷಿತ ಶರವನ್ನು ಸೌಬಲನ ಮೇಲೆ ಪ್ರಯೋಗಿಸಿದನು.
08055051a ತಮಾಯಾಂತಂ ಶರಂ ಘೋರಂ ಶಕುನಿಃ ಶತ್ರುತಾಪನಃ।
08055051c ಚಿಚ್ಛೇದ ಶತಧಾ ರಾಜನ್ಕೃತಹಸ್ತೋ ಮಹಾಬಲಃ।।
ರಾಜನ್! ತನ್ನ ಮೇಲೆ ಬೀಳುತ್ತಿದ್ದ ಆ ಘೋರ ಶರವನ್ನು ಶತ್ರುತಾಪನ ಕೃತಹಸ್ತ ಮಹಾಬಲ ಶಕುನಿಯು ನೂರುಭಾಗಗಳಾಗಿ ತುಂಡರಿಸಿದನು.
08055052a ತಸ್ಮಿನ್ನಿಪತಿತೇ ಭೂಮೌ ಭೀಮಃ ಕ್ರುದ್ಧೋ ವಿಶಾಂ ಪತೇ।
08055052c ಧನುಶ್ಚಿಚ್ಛೇದ ಭಲ್ಲೇನ ಸೌಬಲಸ್ಯ ಹಸನ್ನಿವ।।
ವಿಶಾಂಪತೇ! ಅದು ಭೂಮಿಯ ಮೇಲೆ ಬೀಳಲು ಕ್ರುದ್ಧನಾದ ಭೀಮನು ನಗುತ್ತಾ ಭಲ್ಲದಿಂದ ಸೌಬಲನ ಧನುಸ್ಸನ್ನು ತುಂಡರಿಸಿದನು.
08055053a ತದಪಾಸ್ಯ ಧನುಶ್ಚಿನ್ನಂ ಸೌಬಲೇಯಃ ಪ್ರತಾಪವಾನ್।
08055053c ಅನ್ಯದಾದತ್ತ ವೇಗೇನ ಧನುರ್ಭಲ್ಲಾಂಶ್ಚ ಷೋಡಶ।।
ತುಂಡಾದ ಧನುಸ್ಸನ್ನು ಎಸೆದು ಪ್ರತಾಪವಾನ್ ಸೌಬಲೇಯನು ವೇಗದಿಂದ ಇನ್ನೊಂದು ಧನುಸ್ಸನ್ನೂ ಹದಿನಾರು ಭಲ್ಲಗಳನ್ನೂ ಕೈಗೆತ್ತಿಕೊಂಡನು.
08055054a ತೈಸ್ತಸ್ಯ ತು ಮಹಾರಾಜ ಭಲ್ಲೈಃ ಸಂನತಪರ್ವಭಿಃ।
08055054c ಚತುರ್ಭಿಃ ಸಾರಥಿಂ ಹ್ಯಾರ್ಚ್ಚದ್ಭೀಮಂ ಪಂಚಭಿರೇವ ಚ।।
08055055a ಧ್ವಜಮೇಕೇನ ಚಿಚ್ಛೇದ ಚತ್ರಂ ದ್ವಾಭ್ಯಾಂ ವಿಶಾಂ ಪತೇ।
08055055c ಚತುರ್ಭಿಶ್ಚತುರೋ ವಾಹನ್ವಿವ್ಯಾಧ ಸುಬಲಾತ್ಮಜಃ।।
ಮಹಾರಾಜ! ಆ ಸನ್ನತಪರ್ವಗಳಲ್ಲಿ ನಾಲ್ಕರಿಂದ ಭೀಮನ ಸಾರಥಿಯನ್ನೂ, ಐದರಿಂದ ಭೀಮನನ್ನೂ ಹೊಡೆದನು. ವಿಶಾಂಪತೇ! ಸುಬಲಾತ್ಮಜನು ಒಂದರಿಂದ ಧ್ವಜವನ್ನೂ, ಎರಡರಿಂದ ಚತ್ರವನ್ನೂ, ನಾಲ್ಕರಿಂದ ನಾಲ್ಕು ಕುದುರೆಗಳನ್ನೂ ಹೊಡೆದನು.
08055056a ತತಃ ಕ್ರುದ್ಧೋ ಮಹಾರಾಜ ಭೀಮಸೇನಃ ಪ್ರತಾಪವಾನ್।
08055056c ಶಕ್ತಿಂ ಚಿಕ್ಷೇಪ ಸಮರೇ ರುಕ್ಮದಂಡಾಮಯಸ್ಮಯೀಂ।।
ಮಹಾರಾಜ! ಆಗ ಕ್ರುದ್ಧನಾದ ಪ್ರತಾಪವಾನ್ ಭೀಮಸೇನನು ಸಮರದಲ್ಲಿ ಬಂಗಾರದ ದಂಡವನ್ನು ಹೊಂದಿದ್ದ ಲೋಹಮಯ ಶಕ್ತಿಯನ್ನು ಶಕುನಿಯಮೇಲೆ ಎಸೆದನು.
08055057a ಸಾ ಭೀಮಭುಜನಿರ್ಮುಕ್ತಾ ನಾಗಜಿಹ್ವೇವ ಚಂಚಲಾ।
08055057c ನಿಪಪಾತ ರಥೇ ತೂರ್ಣಂ ಸೌಬಲಸ್ಯ ಮಹಾತ್ಮನಃ।।
ಭೀಮನ ಭುಜದಿಂದ ಹೊರಟ ಹಾವಿನ ನಾಲಿಗೆಯಂತೆ ಚಂಚಲವಾಗಿದ್ದ ಆ ಶಕ್ತಿಯು ತಕ್ಷಣವೇ ಮಹಾತ್ಮ ಸೌಬಲನ ರಥದ ಮೇಲೆ ಬಿದ್ದಿತು.
08055058a ತತಸ್ತಾಮೇವ ಸಂಗೃಹ್ಯ ಶಕ್ತಿಂ ಕನಕಭೂಷಣಾಂ।
08055058c ಭೀಮಸೇನಾಯ ಚಿಕ್ಷೇಪ ಕ್ರುದ್ಧರೂಪೋ ವಿಶಾಂ ಪತೇ।।
ವಿಶಾಂಪತೇ! ಕ್ರುದ್ಧರೂಪ ಶಕುನಿಯು ಕನಕಭೂಷಣವಾಗಿದ್ದ ಅದೇ ಶಕ್ತಿಯನ್ನು ಹಿಡಿದು ಭೀಮಸೇನನ ಮೇಲೆ ಎಸೆದನು.
08055059a ಸಾ ನಿರ್ಭಿದ್ಯ ಭುಜಂ ಸವ್ಯಂ ಪಾಂಡವಸ್ಯ ಮಹಾತ್ಮನಃ।
08055059c ಪಪಾತ ಚ ತತೋ ಭೂಮೌ ಯಥಾ ವಿದ್ಯುನ್ನಭಶ್ಚ್ಯುತಾ।।
ಅದು ಮಹಾತ್ಮ ಪಾಂಡವನ ಎಡಭುಜವನ್ನು ಭೇದಿಸಿ ಆಕಾಶದಿಂದ ಬಿದ್ದ ಸಿಡಿಲಿನಂತೆ ನೆಲದಮೇಲೆ ಬಿದ್ದಿತು.
08055060a ಅಥೋತ್ಕ್ರುಷ್ಟಂ ಮಹಾರಾಜ ಧಾರ್ತರಾಷ್ಟ್ರೈಃ ಸಮಂತತಃ।
08055060c ನ ತು ತಂ ಮಮೃಷೇ ಭೀಮಃ ಸಿಂಹನಾದಂ ತರಸ್ವಿನಾಂ।।
ಮಹಾರಾಜ! ಆಗ ಸುತ್ತುವರೆದಿದ್ದ ತರಸ್ವಿ ಧಾರ್ತಷ್ಟ್ರರ ಉತ್ಕೃಷ್ಟ ಸಿಂಹನಾದವನ್ನು ಭೀಮನು ಸಹಿಸಿಕೊಳ್ಳಲಿಲ್ಲ.
08055061a ಸ ಸಂಗೃಹ್ಯ ಧನುಃ ಸಜ್ಯಂ ತ್ವರಮಾಣೋ ಮಹಾರಥಃ।
08055061c ಮುಹೂರ್ತಾದಿವ ರಾಜೇಂದ್ರ ಚಾದಯಾಮಾಸ ಸಾಯಕೈಃ।
08055061e ಸೌಬಲಸ್ಯ ಬಲಂ ಸಂಖ್ಯೇ ತ್ಯಕ್ತ್ವಾತ್ಮಾನಂ ಮಹಾಬಲಃ।।
ರಾಜೇಂದ್ರ! ಆಗ ಆ ಮಹಾರಥ ಮಹಾಬಲನು ತ್ವರೆಮಾಡಿ ಪ್ರಾಣದ ಹಂಗನ್ನೇ ತೊರೆದು ಸಜ್ಜಾಗಿದ್ದ ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಮುಹೂರ್ತಮಾತ್ರದಲ್ಲಿ ಸೌಬಲನ ಸೇನೆಗಳನ್ನು ಸಾಯಕಗಳಿಂದ ಮುಚ್ಚಿಬಿಟ್ಟನು.
08055062a ತಸ್ಯಾಶ್ವಾಂಶ್ಚತುರೋ ಹತ್ವಾ ಸೂತಂ ಚೈವ ವಿಶಾಂ ಪತೇ।
08055062c ಧ್ವಜಂ ಚಿಚ್ಚೇದ ಭಲ್ಲೇನ ತ್ವರಮಾಣಃ ಪರಾಕ್ರಮೀ।।
ವಿಶಾಂಪತೇ! ತ್ವರೆಮಾಡಿ ಆ ಪರಾಕ್ರಮಿಯು ಶಕುನಿಯ ನಾಲ್ಕೂ ಕುದುರೆಗಳನ್ನು ಮತ್ತು ಸೂತನನ್ನು ಸಂಹರಿಸಿ ಭಲ್ಲದಿಂದ ಅವನ ಧ್ವಜವನ್ನೂ ತುಂಡರಿಸಿದನು.
08055063a ಹತಾಶ್ವಂ ರಥಮುತ್ಸೃಜ್ಯ ತ್ವರಮಾಣೋ ನರೋತ್ತಮಃ।
08055063c ತಸ್ಥೌ ವಿಸ್ಫಾರಯಂಶ್ಚಾಪಂ ಕ್ರೋಧರಕ್ತೇಕ್ಷಣಃ ಶ್ವಸನ್।
08055063e ಶರೈಶ್ಚ ಬಹುಧಾ ರಾಜನ್ಭೀಮಮಾರ್ಚ್ಚತ್ಸಮಂತತಃ।।
ರಾಜನ್! ಕ್ರೋಧದಿಂದ ರಕ್ತಾಕ್ಷನಾಗಿದ್ದ ನರೋತ್ತಮ ಶಕುನಿಯು ಕುದುರೆಗಳನ್ನು ಕಳೆದುಕೊಂಡ ರಥವನ್ನು ಬಿಟ್ಟು ಅವಸರದಿಂದ ಕೆಳಗಿಳಿದು ನಿಟ್ಟುಸಿರುಬಿಡುತ್ತಾ ಧನುಸ್ಸನ್ನು ಟೇಂಕರಿಸಿ ನಿಂತುಕೊಂಡೇ ಅನೇಕ ಶರಗಳಿಂದ ಭೀಮನನ್ನು ಎಲ್ಲಕಡೆ ಮುಚ್ಚಿದನು.
08055064a ಪ್ರತಿಹತ್ಯ ತು ವೇಗೇನ ಭೀಮಸೇನಃ ಪ್ರತಾಪವಾನ್।
08055064c ಧನುಶ್ಚಿಚ್ಚೇದ ಸಂಕ್ರುದ್ಧೋ ವಿವ್ಯಾಧ ಚ ಶಿತೈಃ ಶರೈಃ।।
ಪ್ರತಾಪವಾನ್ ಭೀಮಸೇನನು ವೇಗದಿಂದ ಅವುಗಳನ್ನು ನಾಶಗೊಳಿಸಿ ಸಂಕ್ರುದ್ಧನಾಗಿ ಅವನ ಧನುಸ್ಸನ್ನು ತುಂಡರಿಸಿದನು ಮತ್ತು ನಿಶಿತ ಶರಗಳಿಂದ ಪ್ರಹರಿಸಿದನು.
08055065a ಸೋಽತಿವಿದ್ಧೋ ಬಲವತಾ ಶತ್ರುಣಾ ಶತ್ರುಕರ್ಶನಃ।
08055065c ನಿಪಪಾತ ತತೋ ಭೂಮೌ ಕಿಂ ಚಿತ್ಪ್ರಾಣೋ ನರಾಧಿಪ।।
ನರಾಧಿಪ! ಶತ್ರುಕರ್ಶನ ಶಕುನಿಯು ಶತ್ರುವಿನಿಂದ ಹಾಗೆ ಬಲವಾಗಿ ಗಾಯಗೊಂಡು ಅಲ್ಪಪ್ರಾಣನಾಗಿ ಭೂಮಿಯ ಮೇಲೆ ಬಿದ್ದನು.
08055066a ತತಸ್ತಂ ವಿಹ್ವಲಂ ಜ್ಞಾತ್ವಾ ಪುತ್ರಸ್ತವ ವಿಶಾಂ ಪತೇ।
08055066c ಅಪೋವಾಹ ರಥೇನಾಜೌ ಭೀಮಸೇನಸ್ಯ ಪಶ್ಯತಃ।।
ವಿಶಾಂಪತೇ! ಶಕುನಿಯು ವಿಹ್ವಲನಾಗಿರುವುದನ್ನು ತಿಳಿದು ನಿನ್ನ ಮಗನು ಭೀಮಸೇನನು ನೋಡುತ್ತಿರುವಂತೆಯೇ ಅವನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ಹೊರಟುಹೋದನು.
08055067a ರಥಸ್ಥೇ ತು ನರವ್ಯಾಘ್ರೇ ಧಾರ್ತರಾಷ್ಟ್ರಾಃ ಪರಾಙ್ಮುಖಾಃ।
08055067c ಪ್ರದುದ್ರುವುರ್ದಿಶೋ ಭೀತಾ ಭೀಮಾಜ್ಜಾತೇ ಮಹಾಭಯೇ।।
ನರವ್ಯಾಘ್ರ ಭೀಮಸೇನನು ರಥದಲ್ಲಿಯೇ ಕುಳಿತಿರಲು ಭೀಮನಿಂದ ಉಂಟಾದ ಮಹಾಭಯದಿಂದಾಗಿ ಧಾರ್ತರಾಷ್ಟ್ರರು ಪರಾಙ್ಮುಖರಾಗಿ ದಿಕ್ಕಾಪಾಲಾಗಿ ಓಡಿ ಹೋದರು.
08055068a ಸೌಬಲೇ ನಿರ್ಜಿತೇ ರಾಜನ್ಭೀಮಸೇನೇನ ಧನ್ವಿನಾ।
08055068c ಭಯೇನ ಮಹತಾ ಭಗ್ನಃ ಪುತ್ರೋ ದುರ್ಯೋಧನಸ್ತವ।
08055068e ಅಪಾಯಾಜ್ಜವನೈರಶ್ವೈಃ ಸಾಪೇಕ್ಷೋ ಮಾತುಲಂ ಪ್ರತಿ।।
ರಾಜನ್! ಧನ್ವಿ ಭೀಮಸೇನನಿಂದ ಸೌಬಲನು ಸೋತುಹೋಗಲು ಮಹಾಭಯದಿಂದ ನಿನ್ನ ಮಗ ದುರ್ಯೋಧನನು ಭಗ್ನನಾಗಿಹೋದನು. ವೇಗದ ಕುದುರೆಗಳೊಂದಿಗೆ ಅವನು ಸೋದರಮಾವನನ್ನು ಉಳಿಸಿಕೊಳ್ಳುವ ಸಲುವಾಗಿ ಅಲ್ಲಿಂದ ಹೊರಟುಹೋದನು.
08055069a ಪರಾಙ್ಮುಖಂ ತು ರಾಜಾನಂ ದೃಷ್ಟ್ವಾ ಸೈನ್ಯಾನಿ ಭಾರತ।
08055069c ವಿಪ್ರಜಗ್ಮುಃ ಸಮುತ್ಸೃಜ್ಯ ದ್ವೈರಥಾನಿ ಸಮಂತತಃ।।
ಭಾರತ! ರಾಜನು ಪರಾಙ್ಮುಖನಾದುದನ್ನು ಕಂಡು ಎಲ್ಲ ಸೈನಿಕರೂ ದ್ವೈರಥಯುದ್ಧವನ್ನು ಬಿಟ್ಟು ಎಲ್ಲ ಕಡೆ ಓಡಿಹೋದರು.
08055070a ತಾನ್ದೃಷ್ಟ್ವಾತಿರಥಾನ್ಸರ್ವಾನ್ಧಾರ್ತರಾಷ್ಟ್ರಾನ್ಪರಾಙ್ಮುಖಾನ್।
08055070c ಜವೇನಾಭ್ಯಪತದ್ಭೀಮಃ ಕಿರಂ ಶರಶತಾನ್ಬಹೂನ್।।
ಆ ಎಲ್ಲ ಧಾರ್ತರಾಷ್ಟ್ರ ಅತಿರಥರೂ ಪರಾಙ್ಮುಖರಾದುದನ್ನು ನೋಡಿ ಭೀಮನು ಅನೇಕ ನೂರು ಬಾಣಗಳನ್ನು ಎರಚುತ್ತಾ ವೇಗದಿಂದ ಅವರನ್ನು ಹಿಂಬಾಲಿಸಿ ಹೋದನು.
08055071a ತೇ ವಧ್ಯಮಾನಾ ಭೀಮೇನ ಧಾರ್ತರಾಷ್ಟ್ರಾಃ ಪರಾಙ್ಮುಖಾಃ।
08055071c ಕರ್ಣಮಾಸಾದ್ಯ ಸಮರೇ ಸ್ಥಿತಾ ರಾಜನ್ಸಮಂತತಃ।
08055071e ಸ ಹಿ ತೇಷಾಂ ಮಹಾವೀರ್ಯೋ ದ್ವೀಪೋಽಭೂತ್ಸುಮಹಾಬಲಃ।।
ರಾಜನ್! ಭೀಮನಿಂದ ವಧಿಸಲ್ಪಡುತ್ತಿದ್ದ ಆ ಧಾರ್ತರಾಷ್ಟ್ರರು ಪರಾಙ್ಮುಖರಾಗಿ ಕರ್ಣನನ್ನು ಸೇರಿ ರಣದಲ್ಲಿ ಅವನನ್ನು ಸುತ್ತುವರೆದು ನಿಂತರು. ಆ ಮಹಾವೀರ್ಯ ಮಹಾಬಲನೇ ಅವರ ದ್ವೀಪದಂತಿದ್ದನು.
08055072a ಭಿನ್ನನೌಕಾ ಯಥಾ ರಾಜನ್ದ್ವೀಪಮಾಸಾದ್ಯ ನಿರ್ವೃತಾಃ।
08055072c ಭವಂತಿ ಪುರುಷವ್ಯಾಘ್ರ ನಾವಿಕಾಃ ಕಾಲಪರ್ಯಯೇ।।
08055073a ತಥಾ ಕರ್ಣಂ ಸಮಾಸಾದ್ಯ ತಾವಕಾ ಭರತರ್ಷಭ।
08055073c ಸಮಾಶ್ವಸ್ತಾಃ ಸ್ಥಿತಾ ರಾಜನ್ಸಂಪ್ರಹೃಷ್ಟಾಃ ಪರಸ್ಪರಂ।
08055073e ಸಮಾಜಗ್ಮುಶ್ಚ ಯುದ್ಧಾಯ ಮೃತ್ಯುಂ ಕೃತ್ವಾ ನಿವರ್ತನಂ।।
ರಾಜನ್! ಪುರುಷವ್ಯಾಘ್ರ! ಭರತರ್ಷಭ! ನೌಕೆಯು ಒಡೆದುಹೋಗಲು ನಾವಿಕರು ದ್ವೀಪವನ್ನು ಸೇರಿ ಸಂತುಷ್ಟರಾಗುವಂತೆ ನಿನ್ನವರು ಕರ್ಣನನ್ನು ಸೇರಿ ಪರಸ್ಪರರಿಗೆ ಆಶ್ವಾಸನೆಗಳನ್ನು ನೀಡುತ್ತಾ ಸಂಪ್ರಹೃಷ್ಟರಾದರು. ಮೃತ್ಯುವನ್ನೇ ಹಿಂದಿರುಗುವ ಗುರಿಯನ್ನಾಗಿರಿಸಿಕೊಂಡ ಅವರು ಯುದ್ಧಕ್ಕೆ ಪುನಃ ಮುಂದಾದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಶಕುನಿಪರಾಜಯೇ ಪಂಚಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಶಕುನಿಪರಾಜಯ ಎನ್ನುವ ಐವತ್ತೈದನೇ ಅಧ್ಯಾಯವು.