ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 54
ಸಾರ
ಭೀಮಸೇನನ ಆಕ್ರಮಣದಿಂದ ಕೌರವ ಸೇನೆಯು ದಿಕ್ಕಾಪಾಲಾಗಿ ಹೋದುದು (1-11). ಅರ್ಜುನನ ರಥವನ್ನು ಹುಡುಕುತ್ತಿದ್ದ ಭೀಮಸೇನ ಮತ್ತು ಅವನ ಸಾರಥಿ ವಿಶೋಕರ ಸಂವಾದ (12-29).
08054001 ಸಂಜಯ ಉವಾಚ।
08054001a ಅಥ ತ್ವಿದಾನೀಂ ತುಮುಲೇ ವಿಮರ್ದೇ ದ್ವಿಷದ್ಭಿರೇಕೋ ಬಹುಭಿಃ ಸಮಾವೃತಃ।
08054001c ಮಹಾಭಯೇ ಸಾರಥಿಮಿತ್ಯುವಾಚ ಭೀಮಶ್ಚಮೂಂ ವಾರಯನ್ಧಾರ್ತರಾಷ್ಟ್ರೀಂ।
08054001e ತ್ವಂ ಸಾರಥೇ ಯಾಹಿ ಜವೇನ ವಾಹೈರ್ ನಯಾಮ್ಯೇತಾನ್ಧಾರ್ತರಾಷ್ಟ್ರಾನ್ಯಮಾಯ।।
ಸಂಜಯನು ಹೇಳಿದನು: “ಆಗ ತುಮುಲದಲ್ಲಿ ಅನೇಕ ವೈರಿಗಳಿಂದ ಸಮಾವೃತನಾಗಿ ಏಕಾಂಗಿಯಾಗಿ ಮರ್ದಿಸಲ್ಪಡುತ್ತಿದ್ದ ಭೀಮನು ಧಾರ್ತರಾಷ್ಟ್ರರ ಸೇನೆಯನ್ನು ತಡೆಯುತ್ತಾ ಮಹಾಭಯದಿಂದ32 ಸಾರಥಿಗೆ “ಸಾರಥೇ! ನೀನು ವೇಗದಿಂದ ರಥವನ್ನು ಕೊಂಡೊಯ್ಯಿ! ಈ ಧಾರ್ತರಾಷ್ಟ್ರರನ್ನು ಯಮಲೋಕಕ್ಕೆ ಕಳುಹಿಸೋಣ!” ಎಂದು ಹೇಳಿದನು:
08054002a ಸಂಚೋದಿತೋ ಭೀಮಸೇನೇನ ಚೈವಂ ಸ ಸಾರಥಿಃ ಪುತ್ರಬಲಂ ತ್ವದೀಯಂ।
08054002c ಪ್ರಾಯಾತ್ತತಃ ಸಾರಥಿರುಗ್ರವೇಗೋ ಯತೋ ಭೀಮಸ್ತದ್ಬಲಂ ಗಂತುಮೈಚ್ಚತ್।।
ಉಗ್ರವೇಗದಲ್ಲಿ ರಥವನ್ನು ಕೊಂಡೊಯ್ಯುವ ಸಾರಥಿಯು ಭೀಮಸೇನನಿಂದ ಪ್ರಚೋದಿತನಾಗಿ ಭೀಮನು ಯಾವ ಸೇನೆಯ ಕಡೆ ಹೋಗಲು ಬಯಸಿದ್ದನೋ ಆ ನಿನ್ನ ಪುತ್ರನ ಸೇನೆಯ ಬಳಿ ರಥವನ್ನು ಕೊಂಡೊಯ್ದನು.
08054003a ತತೋಽಪರೇ ನಾಗರಥಾಶ್ವಪತ್ತಿಭಿಃ ಪ್ರತ್ಯುದ್ಯಯುಃ ಕುರವಸ್ತಂ ಸಮಂತಾತ್।
08054003c ಭೀಮಸ್ಯ ವಾಹಾಗ್ರ್ಯಮುದಾರವೇಗಂ ಸಮಂತತೋ ಬಾಣಗಣೈರ್ನಿಜಘ್ನುಃ।।
ಅನಂತರ ಕುರುಗಳು ಆನೆ-ರಥ-ಕುದುರೆ-ಪದಾತಿಗಳೊಂದಿಗೆ ಉದಾರವೇಗದಲ್ಲಿದ್ದ ಭೀಮನ ರಥವನ್ನು ಎಲ್ಲಕಡೆಗಳಿಂದ ಆಕ್ರಮಣಿಸಿ ಬಾಣಗಣಗಳಿಂದ ಸುತ್ತಲೂ ಹೊಡೆದರು.
08054004a ತತಃ ಶರಾನಾಪತತೋ ಮಹಾತ್ಮಾ ಚಿಚ್ಛೇದ ಬಾಣೈಸ್ತಪನೀಯಪುಂಖೈಃ।
08054004c ತೇ ವೈ ನಿಪೇತುಸ್ತಪನೀಯಪುಂಖಾ ದ್ವಿಧಾ ತ್ರಿಧಾ ಭೀಮಶರೈರ್ನಿಕೃತ್ತಾಃ।।
ಆಗ ಮೇಲೆ ಬೀಳುತ್ತಿದ್ದ ಬಾಣಗಳನ್ನು ಸುವರ್ಣಮಯಪುಂಖಗಳ ಬಾಣಗಳಿಂದ ಕತ್ತರಿಸಿದನು. ಅವರ ಬಾಣಗಳು ಭೀಮನ ಬಾಣಗಳಿಂದ ಕತ್ತರಿಸಲ್ಪಟ್ಟು ಎರಡು ಅಥವಾ ಮೂರು ಭಾಗಗಳಾಗಿ ಬೀಳುತ್ತಿದ್ದವು.
08054005a ತತೋ ರಾಜನ್ನಾಗರಥಾಶ್ವಯೂನಾಂ ಭೀಮಾಹತಾನಾಂ ತವ ರಾಜಮಧ್ಯೇ।
08054005c ಘೋರೋ ನಿನಾದಃ ಪ್ರಬಭೌ ನರೇಂದ್ರ ವಜ್ರಾಹತಾನಾಮಿವ ಪರ್ವತಾನಾಂ।।
ರಾಜನ್! ನರೇಂದ್ರ! ಆಗ ರಾಜಮಧ್ಯದಲ್ಲಿ ವಜ್ರಗಳಿಂದ ಹತಗೊಂಡ ಪರ್ವತಗಳಂತೆ ಭೀಮನಿಂದ ಹತರಾದ ಗಜಾಶ್ವರಥಪದಾತಿಗಳ ಸೇನೆಗಳ ಘೋರ ನಿನಾದವುಂಟಾಯಿತು.
08054006a ತೇ ವಧ್ಯಮಾನಾಶ್ಚ ನರೇಂದ್ರಮುಖ್ಯಾ ನಿರ್ಭಿನ್ನಾ ವೈ ಭೀಮಸೇನಪ್ರವೇಕೈಃ।
08054006c ಭೀಮಂ ಸಮಂತಾತ್ಸಮರೇಽಧ್ಯರೋಹನ್ ವೃಕ್ಷಂ ಶಕುಂತಾ ಇವ ಪುಷ್ಪಹೇತೋಃ।।
ಭೀಮಸೇನನ ಶ್ರೇಷ್ಠ ಬಾಣಗಳಿಂದ ವಧಿಸಲ್ಪಟ್ಟು ಗಾಯಗೊಂಡಿರುವ ಆ ನರೇಂದ್ರಮುಖ್ಯರು ಸಮರದಲ್ಲಿ ಪಕ್ಷಿಗಳು ಪುಷ್ಪಕ್ಕಾಗಿ ವೃಕ್ಷವನ್ನು ಮುತ್ತಿಗೆ ಹಾಕುವಂತೆ ಎಲ್ಲಕಡೆಗಳಿಂದ ಭೀಮನನ್ನು ಮುತ್ತಿಗೆ ಹಾಕಿದರು.
08054007a ತತೋಽಭಿಪಾತಂ ತವ ಸೈನ್ಯಮಧ್ಯೇ ಪ್ರಾದುಶ್ಚಕ್ರೇ ವೇಗಮಿವಾತ್ತವೇಗಃ।
08054007c ಯಥಾಂತಕಾಲೇ ಕ್ಷಪಯನ್ದಿಧಕ್ಷುರ್ ಭೂತಾಂತಕೃತ್ಕಾಲ ಇವಾತ್ತದಂಡಃ।।
ಹಾಗೆ ಸೈನ್ಯಮಧ್ಯದಲ್ಲಿ ಆಕ್ರಮಣಕ್ಕೊಳಗಾದ ಅತಿವೇಗಶಾಲೀ ಭೀಮನು ಪ್ರಳಯಕಾಲದಲ್ಲಿ ದಂಡಧರ ಕಾಲನು ಪ್ರಪಂಚವನ್ನೇ ದಹಿಸುವ ಇಚ್ಛೆಯಿಂದ ವೇಗವಾಗಿ ಕಾರ್ಯಪ್ರವೃತ್ತನಾಗುವಂತೆ ಆಕ್ರಮಣಿಸಿದನು.
08054008a ತಸ್ಯಾತಿವೇಗಸ್ಯ ರಣೇಽತಿವೇಗಂ ನಾಶಕ್ನುವನ್ಧಾರಯಿತುಂ ತ್ವದೀಯಾಃ।
08054008c ವ್ಯಾತ್ತಾನನಸ್ಯಾಪತತೋ ಯಥೈವ ಕಾಲಸ್ಯ ಕಾಲೇ ಹರತಃ ಪ್ರಜಾ ವೈ।।
ಪ್ರಳಯಕಾಲದಲ್ಲಿ ಪ್ರಜೆಗಳ ಪ್ರಾಣಗಳನ್ನು ಅಪಹರಿಸುವ ಬಾಯಿಕಳೆದ ಕಾಲನಿಂದ ಹೇಗೋ ಹಾಗೆ, ರಣದಲ್ಲಿ ಅತಿವೇಗಿಯಾಗಿದ್ದ ಅವನ ಆ ಅತಿವೇಗವನ್ನು ಸಹಿಸಿಕೊಳ್ಳಲು ನಿನ್ನವರಿಗೆ ಸಾಧ್ಯವಾಗಲಿಲ್ಲ.
08054009a ತತೋ ಬಲಂ ಭಾರತ ಭಾರತಾನಾಂ ಪ್ರದಹ್ಯಮಾನಂ ಸಮರೇ ಮಹಾತ್ಮನ್।
08054009c ಭೀತಂ ದಿಶೋಽಕೀರ್ಯತ ಭೀಮನುನ್ನಂ ಮಹಾನಿಲೇನಾಭ್ರಗಣೋ ಯಥೈವ।।
ಭಾರತ! ಮಹಾತ್ಮನ್! ಸಮರದಲ್ಲಿ ಭೀಮನಿಂದ ಹಾಗೆ ಸುಡಲ್ಪಡುತ್ತಿದ್ದ ಭಾರತರ ಸೇನೆಯು ಭೀತಿಗೊಂಡು ಚಂಡಮಾರುತದಿಂದ ಚದುರಿಹೋಗುವ ಮೋಡಗಳ ಗುಂಪುಗಳಂತೆ ದಿಕ್ಕಾಪಾಲಾಗಿ ಓಡಿ ಹೋಯಿತು.
08054010a ತತೋ ಧೀಮಾನ್ಸಾರಥಿಮಬ್ರವೀದ್ಬಲೀ ಸ ಭೀಮಸೇನಃ ಪುನರೇವ ಹೃಷ್ಟಃ।
08054010c ಸೂತಾಭಿಜಾನೀಹಿ ಪರಾನ್ಸ್ವಕಾನ್ವಾ ರಥಾನ್ಧ್ವಜಾಂಶ್ಚಾಪತತಃ ಸಮೇತಾನ್।
08054010e ಯುಧ್ಯನ್ನಹಂ ನಾಭಿಜಾನಾಮಿ ಕಿಂ ಚಿನ್ ಮಾ ಸೈನ್ಯಂ ಸ್ವಂ ಚಾದಯಿಷ್ಯೇ ಪೃಷತ್ಕೈಃ।।
ಆಗ ಧೀಮಾನ್ ಬಲಶಾಲೀ ಭೀಮಸೇನನು ಹೃಷ್ಟನಾಗಿ ಪುನಃ ಸಾರಥಿಗೆ ಹೇಳಿದನು: “ಸೂತ! ಒಟ್ಟಾಗಿ ಮೇಲೆ ಬೀಳುತ್ತಿರುವ ಈ ರಥಧ್ವಜಗಳು ಶತ್ರುಗಳದ್ದೋ ಅಥವಾ ನಮ್ಮವರದ್ದೋ ಎನ್ನುವುದು ತಿಳಿಯದಂತಾಗಿದೆ! ಏಕೆಂದರೆ ಯುದ್ಧದಲ್ಲಿ ತೊಡಗಿರುವಾಗ ನನಗೆ ಏನೊಂದೂ ತಿಳಿಯುತ್ತಿಲ್ಲ! ನಾನು ನನ್ನದೇ ಸೇನೆಯನ್ನು ಬಾಣಗಳಿಂದ ಹೊಡೆಯಬಾರದಲ್ಲ!
08054011a ಅರೀನ್ವಿಶೋಕಾಭಿನಿರೀಕ್ಷ್ಯ ಸರ್ವತೋ ಮನಸ್ತು ಚಿಂತಾ ಪ್ರದುನೋತಿ ಮೇ ಭೃಶಂ।
08054011c ರಾಜಾತುರೋ ನಾಗಮದ್ಯತ್ಕಿರೀಟೀ ಬಹೂನಿ ದುಃಖಾನ್ಯಭಿಜಾತೋಽಸ್ಮಿ ಸೂತ।।
ವಿಶೋಕ! ಸೂತ! ಸುತ್ತಲೂ ನೋಡಿ ಚಿಂತೆಯು ನನ್ನ ಮನಸ್ಸನ್ನು ತುಂಬಾ ಕಾಡುತ್ತಿದೆ. ರಾಜಾ ಯುಧಿಷ್ಠಿರನನ್ನು ನೋಡಲು ಹೋಗಿದ್ದ ಕಿರೀಟಿಯು ಇನ್ನೂ ಬರಲಿಲ್ಲವೆಂದು ಬಹಳ ದುಃಖಿತನಾಗಿದ್ದೇನೆ!
08054012a ಏತದ್ದುಃಖಂ ಸಾರಥೇ ಧರ್ಮರಾಜೋ ಯನ್ಮಾಂ ಹಿತ್ವಾ ಯಾತವಾಂ ಶತ್ರುಮಧ್ಯೇ।
08054012c ನೈನಂ ಜೀವನ್ನಾಪಿ ಜಾನಾಮ್ಯಜೀವನ್ ಬೀಭತ್ಸುಂ ವಾ ತನ್ಮಮಾದ್ಯಾತಿದುಃಖಂ।।
ಸಾರಥೇ! ಧರ್ಮರಾಜನು ನನ್ನನ್ನು ಬಿಟ್ಟು ಶತ್ರುಗಳ ಮಧ್ಯದಲ್ಲಿ ಹೋದಾಗಲೇ ನನಗೆ ದುಃಖವಾಗಿತ್ತು. ಈಗ ಅವನು ಅಥವಾ ಬೀಭತ್ಸುವು ಬದುಕಿರುವನೋ ಇಲ್ಲವೋ ಎನ್ನುವುದನ್ನೂ ನಾನು ತಿಳಿಯದಂತಾಗಿದ್ದೇನೆ.
08054013a ಸೋಽಹಂ ದ್ವಿಷತ್ಸೈನ್ಯಮುದಗ್ರಕಲ್ಪಂ ವಿನಾಶಯಿಷ್ಯೇ ಪರಮಪ್ರತೀತಃ।
08054013c ಏತಾನ್ನಿಹತ್ಯಾಜಿಮಧ್ಯೇ ಸಮೇತಾನ್ ಪ್ರೀತೋ ಭವಿಷ್ಯಾಮಿ ಸಹ ತ್ವಯಾದ್ಯ।।
ಏನೇ ಆದರೂ ನಾನು ಪರಮಪ್ರೀತನಾಗಿ ಶತ್ರುಗಳ ಈ ಉಗ್ರಕಲ್ಪ ಸೇನೆಯನ್ನು ವಿನಾಶಗೊಳಿಸುತ್ತೇನೆ. ರಣಮಧ್ಯದಲ್ಲಿ ಸೇರಿರುವ ಇವರನ್ನು ಇಂದು ನಿನ್ನ ಸಹಾಯದಿಂದ ಸಂಹರಿಸಿ ಪ್ರೀತನಾಗುತ್ತೇನೆ.
08054014a ಸರ್ವಾಂಸ್ತೂಣೀರಾನ್ಮಾರ್ಗಣಾನ್ವಾನ್ವವೇಕ್ಷ್ಯ ಕಿಂ ಶಿಷ್ಟಂ ಸ್ಯಾತ್ಸಾಯಕಾನಾಂ ರಥೇ ಮೇ।
08054014c ಕಾ ವಾ ಜಾತಿಃ ಕಿಂ ಪ್ರಮಾಣಂ ಚ ತೇಷಾಂ ಜ್ಞಾತ್ವಾ ವ್ಯಕ್ತಂ ತನ್ಮಮಾಚಕ್ಷ್ವ ಸೂತ।।
ಸೂತ! ನನ್ನ ರಥದಲ್ಲಿರುವ ತೂಣೀರಗಳನ್ನೂ ಮಾರ್ಗಣಗಳನ್ನೂ ಸಾಯಕಗಳನ್ನೂ ನೋಡಿ ಯಾವ ಯಾವ ಜಾತಿಯ ಬಾಣಗಳು ಎಷ್ಟು ಪ್ರಮಾಣಗಳಲ್ಲಿವೆಯೆನ್ನುವುದನ್ನು ತಿಳಿದುಕೊಂಡು ನನಗೆ ಹೇಳು!”
08054015 ವಿಶೋಕ ಉವಾಚ।
08054015a ಷಣ್ಮಾರ್ಗಣಾನಾಮಯುತಾನಿ ವೀರ ಕ್ಷುರಾಶ್ಚ ಭಲ್ಲಾಶ್ಚ ತಥಾಯುತಾಖ್ಯಾಃ।
08054015c ನಾರಾಚಾನಾಂ ದ್ವೇ ಸಹಸ್ರೇ ತು ವೀರ ತ್ರೀಣ್ಯೇವ ಚ ಪ್ರದರಾಣಾಂ ಚ ಪಾರ್ಥ।।
ವಿಶೋಕನು ಹೇಳಿದನು: “ವೀರ! ನಿನ್ನಲ್ಲಿ ಅರುವತ್ತು ಸಾವಿರ ಮಾರ್ಗಣಗಳೂ, ಹತ್ತು ಸಾವಿರ ಕ್ಷುರಗಳೂ, ಹತ್ತುಸಾವಿರ ಭಲ್ಲಗಳೂ, ಎರಡು ಸಾವಿರ ನಾರಾಚಗಳೂ ಮತ್ತು ಮೂರು ಸಾವಿರ ಪ್ರದರಗಳೂ ಇವೆ.
08054016a ಅಸ್ತ್ಯಾಯುಧಂ ಪಾಂಡವೇಯಾವಶಿಷ್ಟಂ ನ ಯದ್ವಹೇಚ್ಚಕಟಂ ಷಡ್ಗವೀಯಂ।
08054016c ಏತದ್ವಿದ್ವನ್ಮುಂಚ ಸಹಸ್ರಶೋಽಪಿ ಗದಾಸಿಬಾಹುದ್ರವಿಣಂ ಚ ತೇಽಸ್ತಿ।।
ಪಾಂಡವೇಯ! ನಿನ್ನಲ್ಲಿ ಎಷ್ಟು ಆಯುಧಗಳು ಉಳಿದಿವೆಯೆಂದರೆ ಅವುಗಳನ್ನು ಒಂದು ಗಾಡಿಯಲ್ಲಿ ತುಂಬಿಸಿದರೆ ಆರು ಎತ್ತುಗಳಿಗೂ ಆ ಗಾಡಿಯನ್ನು ಎಳೆದುಕೊಂಡು ಹೋಗಲಾವುದಿಲ್ಲ! ಇದಕ್ಕೆ ಹೊರತಾಗಿ ನಿನ್ನಲ್ಲಿ ಗದೆ, ಖಡ್ಗ ಮತ್ತು ಬಾಹುಬಲವೂ ಇದೆಯೆಂದು ತಿಳಿದು ಸಹಸ್ರಸಂಖ್ಯೆಗಳಲ್ಲಿ ಬಾಣಗಳನ್ನು ಪ್ರಯೋಗಿಸು!”
08054017 ಭೀಮ ಉವಾಚ।
08054017a ಸೂತಾದ್ಯೇಮಂ ಪಶ್ಯ ಭೀಮಪ್ರಮುಕ್ತೈಃ ಸಂಭಿಂದದ್ಭಿಃ ಪಾರ್ಥಿವಾನಾಶುವೇಗೈಃ।
08054017c ಉಗ್ರೈರ್ಬಾಣೈರಾಹವಂ ಘೋರರೂಪಂ ನಷ್ಟಾದಿತ್ಯಂ ಮೃತ್ಯುಲೋಕೇನ ತುಲ್ಯಂ।।
ಭೀಮನು ಹೇಳಿದನು: “ಸೂತ! ನೀನು ಇಂದು ಭೀಮಪ್ರಮುಕ್ತ ವೇಗಯುಕ್ತ ಆಶುಗಗಳಿಂದ ಚಿಂದಿಚಿಂದಿಗೊಳ್ಳುವ ಪಾರ್ಥಿವರನ್ನೂ, ಉಗ್ರ ಬಾಣಗಳಿಂದ ಸೂರ್ಯನನ್ನೂ ಮುಚ್ಚಿ ಆಕಾಶವನ್ನು ಘೋರರೂಪದ ಮೃತ್ಯುಲೋಕಕ್ಕೆ ಸಮನಾಗಿ ಮಾಡುವುದನ್ನು ನೋಡು!
08054018a ಅದ್ಯೈವ ತದ್ವಿದಿತಂ ಪಾರ್ಥಿವಾನಾಂ ಭವಿಷ್ಯತಿ ಆಕುಮಾರಂ ಚ ಸೂತ।
08054018c ನಿಮಗ್ನೋ ವಾ ಸಮರೇ ಭೀಮಸೇನ ಏಕಃ ಕುರೂನ್ವಾ ಸಮರೇ ವಿಜೇತಾ।।
ಸೂತ! ಇಂದು ಭೀಮಸೇನನು ಸಮರದಲ್ಲಿ ಮುಳುಗಿಹೋದನು ಅಥವಾ ಸಮರದಲ್ಲಿ ಒಬ್ಬನೇ ಕುರುಗಳನ್ನು ಜಯಿಸಿದನು ಎನ್ನುವ ಈ ವಾರ್ತೆಯು ಬಾಲಕರಿಂದ ಹಿಡಿದು ವೃದ್ಧರವರೆಗಿನ ಎಲ್ಲ ರಾಜರಿಗೂ ತಿಳಿಯುತ್ತದೆ!
08054019a ಸರ್ವೇ ಸಂಖ್ಯೇ ಕುರವೋ ನಿಷ್ಪತಂತು ಮಾಂ ವಾ ಲೋಕಾಃ ಕೀರ್ತಯಂತ್ವಾಕುಮಾರಂ।
08054019c ಸರ್ವಾನೇಕಸ್ತಾನಹಂ ಪಾತಯಿಷ್ಯೇ ತೇ ವಾ ಸರ್ವೇ ಭೀಮಸೇನಂ ತುದಂತು।।
ಸರ್ವಕುರುಗಳೂ ಯುದ್ಧದಲ್ಲಿ ಬಿದ್ದರು ಅಥವಾ ಎಲ್ಲರೂ ಒಂದಾಗಿ ನನ್ನನ್ನು ಕೆಳಗೆ ಬೀಳಿಸಿದರು ಅಥವಾ ಎಲ್ಲರೂ ಭೀಮಸೇನನನ್ನು ಪೀಡಿಸಿದರು ಎಂದು ಬಾಲಕರಿಂದ ಹಿಡಿದು ವೃದ್ಧರವರೆಗಿನ ಜನರು ಮಾತನಾಡಿಕೊಳ್ಳಲಿ!
08054020a ಆಶಾಸ್ತಾರಃ ಕರ್ಮ ಚಾಪ್ಯುತ್ತಮಂ ವಾ ತನ್ಮೇ ದೇವಾಃ ಕೇವಲಂ ಸಾಧಯಂತು।
08054020c ಆಯಾತ್ವಿಹಾದ್ಯಾರ್ಜುನಃ ಶತ್ರುಘಾತೀ ಶಕ್ರಸ್ತೂರ್ಣಂ ಯಜ್ಞ ಇವೋಪಹೂತಃ।।
ಉತ್ತಮ ಕರ್ಮಗಳನ್ನು ಆಶಿಸುವ ದೇವತೆಗಳು ನನ್ನ ಕೇವಲ ಈ ಇಚ್ಛೆಯನ್ನು ಸಾಧಿಸಿಕೊಡಲಿ! ಯಜ್ಞದಲ್ಲಿ ಆಹ್ವಾನಿಸಲ್ಪಟ್ಟೊಡನೆಯೇ ಇಂದ್ರನು ಬಹಳ ಬೇಗ ಬರುವಂತೆ ಶತ್ರುಘಾತೀ ಅರ್ಜುನನು ಇಲ್ಲಿಗೆ ಕೂಡಲೇ ಬರಲಿ!
08054021a ಈಕ್ಷಸ್ವೈತಾಂ ಭಾರತೀಂ ದೀರ್ಯಮಾಣಾಂ ಏತೇ ಕಸ್ಮಾದ್ವಿದ್ರವಂತೇ ನರೇಂದ್ರಾಃ।
08054021c ವ್ಯಕ್ತಂ ಧೀಮಾನ್ಸವ್ಯಸಾಚೀ ನರಾಗ್ರ್ಯಃ ಸೈನ್ಯಂ ಹ್ಯೇತಚ್ಛಾದಯತ್ಯಾಶು ಬಾಣೈಃ।।
ಅಲ್ಲಿ ನೋಡು! ಭಾರತೀ ಸೇನೆಯು ಒಡೆದು ಹೀಗೆ ಏಕೆ ನರೇಂದ್ರರು ಪಲಾಯನಮಾಡುತ್ತಿದ್ದಾರೆ? ಧೀಮಾನ್ ನರಾಗ್ರ್ಯ ಸವ್ಯಸಾಚಿಯು ಇವರ ಸೈನ್ಯವನ್ನು ಆಶುಗ ಬಾಣಗಳಿಂದ ಮುಸುಕಿದ್ದಾನೆಂದು ವ್ಯಕ್ತವಾಗುತ್ತಿದೆ!
08054022a ಪಶ್ಯ ಧ್ವಜಾಂಶ್ಚ ದ್ರವತೋ ವಿಶೋಕ ನಾಗಾನ್ ಹಯಾನ್ಪತ್ತಿಸಂಘಾಂಶ್ಚ ಸಂಖ್ಯೇ।
08054022c ರಥಾನ್ವಿಶೀರ್ಣಾಂ ಶರಶಕ್ತಿತಾಡಿತಾನ್ ಪಶ್ಯಸ್ವೈತಾನ್ರಥಿನಶ್ಚೈವ ಸೂತ।।
ಸೂತ! ವಿಶೋಕ! ರಣದಲ್ಲಿ ಓಡಿಹೋಗುತ್ತಿರುವ ಧ್ವಜಗಳನ್ನೂ, ಆನೆಗಳನ್ನೂ, ಕುದುರೆಗಳನ್ನೂ, ಪದಾತಿಸಂಘಗಳನ್ನೂ ನೋಡು! ಶರ-ಶಕ್ತಿಗಳಿಂದ ಪೀಡಿತವಾಗಿ ಒಡೆದು ಹೋದ ರಥಗಳನ್ನೂ ರಥಿಗಳನ್ನೂ ನೋಡು!
08054023a ಆಪೂರ್ಯತೇ ಕೌರವೀ ಚಾಪ್ಯಭೀಕ್ಷ್ಣಂ ಸೇನಾ ಹ್ಯಸೌ ಸುಭೃಶಂ ಹನ್ಯಮಾನಾ।
08054023c ಧನಂಜಯಸ್ಯಾಶನಿತುಲ್ಯವೇಗೈರ್ ಗ್ರಸ್ತಾ ಶರೈರ್ಬರ್ಹಿಸುವರ್ಣವಾಜೈಃ।।
ಈ ಕೌರವೀ ಸೇನೆಯು ಮಿಂಚಿನವೇಗವುಳ್ಳ ಧನಂಜಯನ ಸುವರ್ಣಮಯ ನವಿಲಿನ ರೆಕ್ಕೆಗಳನ್ನುಳ್ಳ ಶರಗಳಪ್ರಹಾರದಿಂದ ಬಹಳವಾಗಿ ಗಾಯಗೊಂಡಿದೆ.
08054024a ಏತೇ ದ್ರವಂತಿ ಸ್ಮ ರಥಾಶ್ವನಾಗಾಃ ಪದಾತಿಸಂಘಾನವಮರ್ದಯಂತಃ।
08054024c ಸಮ್ಮುಹ್ಯಮಾನಾಃ ಕೌರವಾಃ ಸರ್ವ ಏವ ದ್ರವಂತಿ ನಾಗಾ ಇವ ದಾವಭೀತಾಃ।
08054024e ಹಾಹಾಕೃತಾಶ್ಚೈವ ರಣೇ ವಿಶೋಕ ಮುಂಚಂತಿ ನಾದಾನ್ವಿಪುಲಾನ್ಗಜೇಂದ್ರಾಃ।।
ವಿಶೋಕ! ರಥ-ಕುದುರೆ-ಆನೆಗಳು ಮತ್ತು ಪದಾತಿಸಂಘಗಳು ಮರ್ದಿಸಲ್ಪಟ್ಟು ಓಡಿ ಹೋಗುತ್ತಿವೆ. ಸರ್ವ ಕೌರವರೂ ಬುದ್ಧಿಗೆಟ್ಟವರಂತಾಗಿದ್ದಾರೆ. ಆನೆಗಳು ರಣದಲ್ಲಿ ಭಯಭೀತರಾಗಿ ಹಾಹಾಕಾರಗೈಯುತ್ತಾ ಓಡಿಹೋಗುತ್ತಿವೆ. ಗಜೇಂದ್ರಗಳು ಜೋರಾಗಿ ಘೀಳಿಡುತ್ತಿವೆ!”
08054025 ವಿಶೋಕ ಉವಾಚ।
08054025a ಸರ್ವೇ ಕಾಮಾಃ ಪಾಂಡವ ತೇ ಸಮೃದ್ಧಾಃ ಕಪಿಧ್ವಜೋ ದೃಶ್ಯತೇ ಹಸ್ತಿಸೈನ್ಯೇ।
08054025c ನೀಲಾದ್ಧನಾದ್ವಿದ್ಯುತಮುಚ್ಚರಂತೀಂ ತಥಾಪಶ್ಯಂ ವಿಸ್ಫುರದ್ವೈ ಧನುಸ್ತತ್।।
ವಿಶೋಕನು ಹೇಳಿದನು: “ಪಾಂಡವ! ನಿನ್ನ ಸರ್ವಕಾಮಗಳನ್ನೂ ಪೂರೈಸಲು ಹಸ್ತಿಸೇನೆಯಲ್ಲಿ ಕಪಿಧ್ವಜನು ಕಾಣಿಸಿಕೊಂಡಿದ್ದಾನೆ. ಮೇಘದಂತಿರುವ ಧನುಸ್ಸಿನಲ್ಲಿ ಮಿಂಚಿನಂತಿರುವ ಅವನ ಮೌರ್ವಿಯನ್ನು ನೋಡು. ಧನುಸ್ಸಿನ ಠೇಂಕಾರವನ್ನು ಕೇಳು!
08054026a ಕಪಿರ್ಹ್ಯಸೌ ವೀಕ್ಷ್ಯತೇ ಸರ್ವತೋ ವೈ ಧ್ವಜಾಗ್ರಮಾರುಹ್ಯ ಧನಂಜಯಸ್ಯ।
08054026c ದಿವಾಕರಾಭೋ ಮಣಿರೇಷ ದಿವ್ಯೋ ವಿಭ್ರಾಜತೇ ಚೈವ ಕಿರೀಟಸಂಸ್ಥಃ।।
ಧನಂಜಯನ ಧ್ವಜವನ್ನೇರಿದ ಕಪಿಯು ಸುತ್ತಲೂ ನೋಡುತ್ತಿದ್ದಾನೆ. ಅರ್ಜುನನ ಕಿರೀಟದ ಮೇಲಿರುವ ದಿವ್ಯ ಮಣಿಯು ದಿವಾಕರನ ಪ್ರಕಾಶದಿಂದ ಹೊಳೆಯುತ್ತಿದೆ!
08054027a ಪಾರ್ಶ್ವೇ ಭೀಮಂ ಪಾಂಡುರಾಭ್ರಪ್ರಕಾಶಂ ಪಶ್ಯೇಮಂ ತ್ವಂ ದೇವದತ್ತಂ ಸುಘೋಷಂ।
08054027c ಅಭೀಶುಹಸ್ತಸ್ಯ ಜನಾರ್ದನಸ್ಯ ವಿಗಾಹಮಾನಸ್ಯ ಚಮೂಂ ಪರೇಷಾಂ।।
ಅವನ ಪಕ್ಕದಲ್ಲಿ ಬಿಳಿಯ ಮೋಡದ ಪ್ರಕಾಶವುಳ್ಳ ಸುಘೋಷವುಳ್ಳ ದೇವದತ್ತವನ್ನು ನೋಡುತ್ತಿದ್ದೇವೆ. ಜನಾರ್ದನನ ಕೈಯಲ್ಲಿ ಶತ್ರುಗಳ ಸೇನೆಯನ್ನು ನುಗ್ಗಿಹೋಗುವ ಕುದುರೆಗಳ ಲಗಾಮಿರುವುದನ್ನು ನೋಡು!
08054028a ರವಿಪ್ರಭಂ ವಜ್ರನಾಭಂ ಕ್ಷುರಾಂತಂ ಪಾರ್ಶ್ವೇ ಸ್ಥಿತಂ ಪಶ್ಯ ಜನಾರ್ದನಸ್ಯ।
08054028c ಚಕ್ರಂ ಯಶೋ ವರ್ಧಯತ್ಕೇಶವಸ್ಯ ಸದಾರ್ಚಿತಂ ಯದುಭಿಃ ಪಶ್ಯ ವೀರ।।
ವೀರ! ಜನಾರ್ದನನ ಪಕ್ಕದಲ್ಲಿ ನಿಂತಿರುವ, ಯದುಗಳು ಸದಾ ಅರ್ಚಿಸುವ, ಕೇಶವನ ಯಶಸ್ಸನ್ನು ವರ್ಧಿಸುವ, ರವಿಪ್ರಭೆಯುಳ್ಳ, ವಜ್ರನಾಭೀ, ಕ್ಷುರಾಂತ ಚಕ್ರವನ್ನು ನೋಡು!”
08054029 ಭೀಮ ಉವಾಚ।
08054029a ದದಾಮಿ ತೇ ಗ್ರಾಮವರಾಂಶ್ಚತುರ್ದಶ ಪ್ರಿಯಾಖ್ಯಾನೇ ಸಾರಥೇ ಸುಪ್ರಸನ್ನಃ।
08054029c ದಸೀಶತಂ ಚಾಪಿ ರಥಾಂಶ್ಚ ವಿಂಶತಿಂ ಯದರ್ಜುನಂ ವೇದಯಸೇ ವಿಶೋಕ।।
ಭೀಮನು ಹೇಳಿದನು: “ಸಾರಥೇ! ಪ್ರಿಯವಾರ್ತೆಯನ್ನು ಹೇಳಿದುದಕ್ಕೆ ಸುಪ್ರಸನ್ನನಾಗಿ ನಿನಗೆ ಹದಿನಾಲ್ಕು ಶ್ರೇಷ್ಠ ಗ್ರಾಮಗಳನ್ನು ನೀಡುತ್ತೇನೆ! ವಿಶೋಕ! ಅರ್ಜುನನು ಬಂದಿರುವುದನ್ನು ತಿಳಿಸಿದುದಕ್ಕೆ ನಿನಗೆ ನೂರು ದಾಸಿಯರನ್ನೂ ಇಪ್ಪತ್ತು ರಥಗಳನ್ನೂ ಕೊಡುತ್ತೇನೆ!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಭೀಮಸೇನವಿಶೋಕಸಂವಾದೇ ಚತುಷ್ಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಭೀಮಸೇನವಿಶೋಕಸಂವಾದ ಎನ್ನುವ ಐವತ್ನಾಲ್ಕನೇ ಅಧ್ಯಾಯವು.