053 ಸಂಕುಲದ್ವಂದ್ವಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ಕರ್ಣವಧ ಪರ್ವ

ಅಧ್ಯಾಯ 53

ಸಾರ

ಉತ್ತಮೌಜಸನಿಂದ ಕರ್ಣನ ಮಗ ಸುಷೇಣನ ವಧೆ (1-14).

08053001 ಸಂಜಯ ಉವಾಚ।
08053001a ತೇಷಾಮನೀಕಾನಿ ಬೃಹದ್ಧ್ವಜಾನಿ ರಣೇ ಸಮೃದ್ಧಾನಿ ಸಮಾಗತಾನಿ।
08053001c ಗರ್ಜಂತಿ ಭೇರೀನಿನದೋನ್ಮುಖಾನಿ ಮೇಘೈರ್ಯಥಾ ಮೇಘಗಣಾಸ್ತಪಾಂತೇ।।

ಸಂಜಯನು ಹೇಳಿದನು: “ಬೇಸಗೆಯ ಕೊನೆಯಲ್ಲಿ ಮೇಘಗಣಗಳು ಹೇಗೆ ಸೇರಿಕೊಳ್ಳುವವೋ ಹಾಗೆ ದೊಡ್ಡ ದೊಡ್ಡ ಧ್ವಜಗಳನ್ನುಳ್ಳ ಅವರ ಸಮೃದ್ಧ ಸೇನೆಗಳು ಭೇರೀನಿನಾದಗಳನ್ನು ಮಾಡುತ್ತಾ ಗರ್ಜಿಸುತ್ತಾ ರಣದಲ್ಲಿ ಬಂದು ಸೇರಿದವು.

08053002a ಮಹಾಗಜಾಭ್ರಾಕುಲಮಸ್ತ್ರತೋಯಂ ವಾದಿತ್ರನೇಮೀತಲಶಬ್ದವಚ್ಚ।
08053002c ಹಿರಣ್ಯಚಿತ್ರಾಯುಧವೈದ್ಯುತಂ ಚ ಮಹಾರಥೈರಾವೃತಶಬ್ದವಚ್ಚ।।

ಮಹಾಗಜಗಳ ಸಮೂಹಗಳು ಮೇಘಗಳಂತಿದ್ದವು. ರಣವಾದ್ಯಗಳ ಮತ್ತು ರಥಚಕ್ರಗಳ ಶಬ್ಧವು ಗುಡುಗಿನ ಶಬ್ಧಗಳಂತಿದ್ದವು. ಮಹಾರಥರಿಂದ ಪ್ರಯೋಗಿಸಲ್ಪಟ್ಟ ಬಂಗಾರದ ಬಣ್ಣಗಳ ಆಯುಧಗಳು ಶಬ್ಧಮಾಡಿ ಮಿಂಚಿನಂತೆ ಹೊಳೆಯುತ್ತಿದ್ದವು.

08053003a ತದ್ಭೀಮವೇಗಂ ರುಧಿರೌಘವಾಹಿ ಖಡ್ಗಾಕುಲಂ ಕ್ಷತ್ರಿಯಜೀವವಾಹಿ।
08053003c ಅನಾರ್ತವಂ ಕ್ರೂರಮನಿಷ್ಟವರ್ಷಂ ಬಭೂವ ತತ್ಸಂಹರಣಂ ಪ್ರಜಾನಾಂ।।

ಆ ಭೀಮವೇಗದಿಂದ ಬೀಳುತ್ತಿದ್ದ, ರಕ್ತದ ಪ್ರವಾಹವನ್ನೇ ಹರಿಸುತ್ತಿದ್ದ, ಕ್ಷತ್ರಿಯರ ಜೀವವನ್ನು ಹರಿಸುತ್ತಿದ್ದ ಆ ಖಡ್ಗಗಳ ಕ್ರೂರವಾದ ಅನಿಷ್ಟ ವೃಷ್ಟಿಯು ಆರ್ತರಾದ ಪ್ರಜೆಗಳ ಸಂಹಾರಕವಾಗಿತ್ತು.

08053004a ರಥಾನ್ಸಸೂತಾನ್ಸಹಯಾನ್ಗಜಾಂಶ್ಚ ಸರ್ವಾನರೀನ್ಮೃತ್ಯುವಶಂ ಶರೌಘೈಃ।
08053004c ನಿನ್ಯೇ ಹಯಾಂಶ್ಚೈವ ತಥಾ ಸಸಾದೀನ್ ಪದಾತಿಸಂಘಾಂಶ್ಚ ತಥೈವ ಪಾರ್ಥಃ।।

ಅಲ್ಲಿ ಪಾರ್ಥನು ಶರೌಘಗಳಿಂದ ಸಾರಥಿಗಳೊಂದಿಗೆ ರಥಗಳನ್ನೂ, ಸವಾರಿಗಳೊಂದಿಗೆ ಆನೆಗಳನ್ನೂ, ಸವಾರರೊಂದಿಗೆ ಕುದುರೆಗಳನ್ನೂ ಮತ್ತು ಪದಾತಿ ಸಂಘಗಳನ್ನೂ ಮೃತ್ಯುವಶರನ್ನಾಗಿ ಮಾಡಿದನು.

08053005a ಕೃಪಃ ಶಿಖಂಡೀ ಚ ರಣೇ ಸಮೇತೌ ದುರ್ಯೋಧನಂ ಸಾತ್ಯಕಿರಭ್ಯಗಚ್ಚತ।
08053005c ಶ್ರುತಶ್ರವಾ ದ್ರೋಣಸುತೇನ ಸಾರ್ಧಂ ಯುಧಾಮನ್ಯುಶ್ಚಿತ್ರಸೇನೇನ ಚಾಪಿ।।

ರಣದಲ್ಲಿ ಕೃಪನು ಶಿಖಂಡಿಯೊಡನೆಯೂ, ದುರ್ಯೋಧನನು ಸಾತ್ಯಕಿಯೊಡನೆಯೂ, ಶ್ರುತಶ್ರವನು ದ್ರೋಣಸುತನೊಡನೆಯೂ ಮತ್ತು ಯುಧಾಮನ್ಯುವು ಚಿತ್ರಸೇನನೊಡನೆಯೂ ಯುದ್ಧಮಾಡುತ್ತಿದ್ದರು.

08053006a ಕರ್ಣಸ್ಯ ಪುತ್ರಸ್ತು ರಥೀ ಸುಷೇಣಂ ಸಮಾಗತಃ ಸೃಂಜಯಾಂಶ್ಚೋತ್ತಮೌಜಾಃ।
08053006c ಗಾಂದಾರರಾಜಂ ಸಹದೇವಃ ಕ್ಷುಧಾರ್ತೋ ಮಹರ್ಷಭಂ ಸಿಂಹ ಇವಾಭ್ಯಧಾವತ್।।

ಕರ್ಣನ ಪುತ್ರ ರಥೀ ಸುಷೇಣನನ್ನು ಸೃಂಜಯ ಉತ್ತಮೌಜಸನು ಎದುರಾದನು. ಹಸಿದ ಸಿಂಹವು ಮಹಾ ಹೋರಿಯನ್ನು ಹೇಗೋ ಹಾಗೆ ಸಹದೇವನು ಗಾಂಧಾರರಾಜನನ್ನು ಆಕ್ರಮಣಿಸಿದನು.

08053007a ಶತಾನೀಕೋ ನಾಕುಲಿಃ ಕರ್ಣಪುತ್ರಂ ಯುವಾ ಯುವಾನಂ ವೃಷಸೇನಂ ಶರೌಘೈಃ।
08053007c ಸಮಾರ್ದಯತ ಕರ್ಣಸುತಶ್ಚ ವೀರಃ ಪಾಂಚಾಲೇಯಂ ಶರವರ್ಷೈರನೇಕೈಃ।।

ನಾಕುಲಿ ಯುವ ಶತಾನೀಕನು ಕರ್ಣಪುತ್ರ ಯುವ ವೃಷಸೇನನನ್ನು ಶರೌಘಗಳಿಂದ ಪ್ರಹರಿಸಿದನು. ವೀರ ಕರ್ಣಸುತನೂ ಕೂಡ ಪಾಂಚಾಲಿಯ ಆ ಮಗನನ್ನು ಅನೇಕ ಶರವರ್ಷಗಳಿಂದ ಪ್ರಹರಿಸಿದನು.

08053008a ರಥರ್ಷಭಃ ಕೃತವರ್ಮಾಣಮಾರ್ಚ್ಚನ್ ಮಾದ್ರೀಪುತ್ರೋ ನಕುಲಶ್ಚಿತ್ರಯೋಧೀ।
08053008c ಪಾಂಚಾಲಾನಾಮಧಿಪೋ ಯಾಜ್ಞಸೇನಿಃ ಸೇನಾಪತಿಂ ಕರ್ಣಮಾರ್ಚ್ಚತ್ಸಸೈನ್ಯಂ।।

ಚಿತ್ರಯೋಧೀ ಮಾದ್ರೀಪುತ್ರ ನಕುಲನು ರಥರ್ಷಭ ಕೃತವರ್ಮನನ್ನು ಆಕ್ರಮಣಿಸಿದನು. ಪಾಂಚಾಲರ ಅಧಿಪ ಯಾಜ್ಞಸೇನಿ ಧೃಷ್ಟದ್ಯುಮ್ನನು ಸೇನೆಯೊಡನೆ ಸೇನಾಪತಿ ಕರ್ಣನನ್ನು ಆಕ್ರಮಣಿಸಿದನು.

08053009a ದುಃಶಾಸನೋ ಭಾರತ ಭಾರತೀ ಚ ಸಂಶಪ್ತಕಾನಾಂ ಪೃತನಾ ಸಮೃದ್ಧಾ।
08053009c ಭೀಮಂ ರಣೇ ಶಸ್ತ್ರಭೃತಾಂ ವರಿಷ್ಠಂ ತದಾ ಸಮಾರ್ಚ್ಚತ್ತಮಸಹ್ಯವೇಗಂ।।

ಭಾರತ! ದುಃಶಾಸನನು ಬಾರತೀ ಮತ್ತು ಸಂಶಪ್ತಕರ ಸಮೃದ್ಧ ಸೇನೆಗಳೊಂದಿಗೆ ರಣದಲ್ಲಿ ಅಸಹ್ಯವೇಗಿ ಶಸ್ತ್ರಭೃತರಲ್ಲಿ ವರಿಷ್ಠ ಭೀಮನನ್ನು ಆಕ್ರಮಣಿಸಿದನು.

08053010a ಕರ್ಣಾತ್ಮಜಂ ತತ್ರ ಜಘಾನ ಶೂರಸ್ ತಥಾಚ್ಚಿನಚ್ಚೋತ್ತಮೌಜಾಃ ಪ್ರಸಃಯ।
08053010c ತಸ್ಯೋತ್ತಮಾಂಗಂ ನಿಪಪಾತ ಭೂಮೌ ನಿನಾದಯದ್ಗಾಂ ನಿನದೇನ ಖಂ ಚ।।

ಆಗ ಶೂರ ಉತ್ತಮೌಜಸನು ಬಲವನ್ನುಪಯೋಗಿಸಿ ಕರ್ಣಾತ್ಮಜನ ಶಿರವನ್ನು ಭೂಮಿಗೆ ಕೆಡವಿ ಜೋರಾಗಿ ಗರ್ಜಿಸಿ ಭೂಮ್ಯಾಕಾಶಗಳನ್ನು ಮೊಳಗಿಸಿದನು.

08053011a ಸುಷೇಣಶೀರ್ಷಂ ಪತಿತಂ ಪೃಥಿವ್ಯಾಂ ವಿಲೋಕ್ಯ ಕರ್ಣೋಽಥ ತದಾರ್ತರೂಪಃ।
08053011c ಕ್ರೋಧಾದ್ಧಯಾಂಸ್ತಸ್ಯ ರಥಂ ಧ್ವಜಂ ಚ ಬಾಣೈಃ ಸುಧಾರೈರ್ನಿಶಿತೈರ್ನ್ಯಕೃಂತತ್।।

ಸುಷೇಣನ ಶಿರವು ಭೂಮಿಯ ಮೇಲೆ ಬಿದ್ದುದನ್ನು ನೋಡಿ ಆರ್ತರೂಪನಾದ ಕರ್ಣನು ಕ್ರೋಧದಿಂದ ಉತ್ತಮೌಜಸನ ಕುದುರೆಗಳನ್ನೂ, ರಥವನ್ನೂ, ಧ್ವಜವನ್ನೂ ಹರಿತ ಮೊಲಗುಗಳುಳ್ಳ ನಿಶಿತ ಬಾಣಗಳಿಂದ ಕತ್ತರಿಸಿದನು.

08053012a ಸ ತೂತ್ತಮೌಜಾ ನಿಶಿತೈಃ ಪೃಷತ್ಕೈರ್ ವಿವ್ಯಾಧ ಖಡ್ಗೇನ ಚ ಭಾಸ್ವರೇಣ।
08053012c ಪಾರ್ಷ್ಣಿಂ ಹಯಾಂಶ್ಚೈವ ಕೃಪಸ್ಯ ಹತ್ವಾ ಶಿಖಂಡಿವಾಹಂ ಸ ತತೋಽಭ್ಯರೋಹತ್।।

ಆ ಉತ್ತಮೌಜಸನಾದರೋ ನಿಶಿತ ಪೃಷತ್ಕಗಳಿಂದ ಮತ್ತು ಹೊಳೆಯುತ್ತಿರುವ ಖಡ್ಗದಿಂದ ಕೃಪನ ಪಾರ್ಷ್ಣಿಯನ್ನೂ ಕುದುರೆಗಳನ್ನೂ ಸಂಹರಿಸಿ ಶಿಖಂಡಿಯ ರಥವನ್ನೇರಿದನು.

08053013a ಕೃಪಂ ತು ದೃಷ್ಟ್ವಾ ವಿರಥಂ ರಥಸ್ಥೋ ನೈಚ್ಚಚ್ಚರೈಸ್ತಾಡಯಿತುಂ ಶಿಖಂಡೀ।
08053013c ತಂ ದ್ರೌಣಿರಾವಾರ್ಯ ರಥಂ ಕೃಪಂ ಸ್ಮ ಸಮುಜ್ಜಹ್ರೇ ಪಂಕಗತಾಂ ಯಥಾ ಗಾಂ।।

ಕೃಪನು ವಿರಥನಾಗಿರುವುದನ್ನು ನೋಡಿ ರಥಸ್ಥನಾಗಿದ್ದ ಶಿಖಂಡಿಯು ಶರಗಳಿಂದ ಅವನನ್ನು ಪ್ರಹರಿಸಲು ಇಚ್ಛಿಸಲಿಲ್ಲ. ಆಗ ದ್ರೌಣಿಯು ಕೆಸರಿನಲ್ಲಿ ಸಿಲುಕಿಕೊಂಡಿರುವ ಹಸುವನ್ನು ಹೇಗೋ ಹಾಗೆ ಕೃಪನ ರಥವನ್ನು ಎತ್ತಿ ಉದ್ಧರಿಸಿದನು.

08053014a ಹಿರಣ್ಯವರ್ಮಾ ನಿಶಿತೈಃ ಪೃಷತ್ಕೈಸ್ ತವಾತ್ಮಜಾನಾಮನಿಲಾತ್ಮಜೋ ವೈ।
08053014c ಅತಾಪಯತ್ಸೈನ್ಯಮತೀವ ಭೀಮಃ ಕಾಲೇ ಶುಚೌ ಮಧ್ಯಗತೋ ಯಥಾರ್ಕಃ।।

ಆಗ ಬಂಗಾರದ ಕವಚವನ್ನು ಧರಿಸಿದ್ದ ಅನಿಲಾತ್ಮಜ ಭೀಮನು ಮಧ್ಯಾಹ್ನದಲ್ಲಿಶುಚಿ ಆಗಸದಲ್ಲಿರುವ ಸೂರ್ಯನಂತೆ ನಿಶಿತ ಬಾಣಗಳಿಂದ ನಿನ್ನ ಮಕ್ಕಳನ್ನು ಸಂಕಟಕ್ಕೀಡುಮಾಡಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲದ್ವಂದ್ವಯುದ್ಧೇ ತ್ರಿಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲದ್ವಂದ್ವಯುದ್ಧ ಎನ್ನುವ ಐವತ್ಮೂರನೇ ಅಧ್ಯಾಯವು.