ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 52
ಸಾರ
ಕೃಷ್ಣನ ಮಾತುಗಳಿಂದ ಉತ್ಸಾಹಿತನಾದ ಅರ್ಜುನನು ಕರ್ಣ ವಧೆಯ ಸಂಕಲ್ಪವನ್ನು ದೃಢೀಕರಿಸುವುದು (1-33).
08052001 ಸಂಜಯ ಉವಾಚ।
08052001a ಸ ಕೇಶವಸ್ಯ ಬೀಭತ್ಸುಃ ಶ್ರುತ್ವಾ ಭಾರತ ಭಾಷಿತಂ।
08052001c ವಿಶೋಕಃ ಸಂಪ್ರಹೃಷ್ಟಶ್ಚ ಕ್ಷಣೇನ ಸಮಪದ್ಯತ।।
ಸಂಜಯನು ಹೇಳಿದನು: “ಭಾರತ! ಕೇಶವನಾಡಿದ ಆ ಮಾತನ್ನು ಕೇಳಿ ಕ್ಷಣದಲ್ಲಿಯೇ ಬೀಭತ್ಸುವು ಶೋಕರಹಿತನೂ, ಸಂಪ್ರಹೃಷ್ಟನೂ, ಉತ್ಸಾಹಿತನೂ ಆದನು.
08052002a ತತೋ ಜ್ಯಾಮನುಮೃಜ್ಯಾಶು ವ್ಯಾಕ್ಷಿಪದ್ಗಾಂಡಿವಂ ಧನುಃ।
08052002c ದಧ್ರೇ ಕರ್ಣವಿನಾಶಾಯ ಕೇಶವಂ ಚಾಭ್ಯಭಾಷತ।।
ಆಗ ಅವನು ಗಾಂಡೀವ ಧನುಸ್ಸನ್ನು ಸೆಳೆದು, ಮೌರ್ವಿಯನ್ನು ತೀಡಿ ಠೇಂಕರಿಸಿ ಕರ್ಣನ ವಿನಾಶಕ್ಕಾಗಿ ನಿಶ್ಚಯಿಸಿ ಕೇಶವನಿಗೆ ಹೇಳಿದನು:
08052003a ತ್ವಯಾ ನಾಥೇನ ಗೋವಿಂದ ಧ್ರುವ ಏಷ ಜಯೋ ಮಮ।
08052003c ಪ್ರಸನ್ನೋ ಯಸ್ಯ ಮೇಽದ್ಯ ತ್ವಂ ಭೂತಭವ್ಯಭವತ್ಪ್ರಭುಃ।।
“ಗೋವಿಂದ! ನೀನು ನಾಥನಾಗಿರುವಾಗ ನನ್ನ ಜಯವು ನಿಶ್ಚಯಿಸಿದ್ದೇ ಆಗಿದೆ. ನನ್ನ ಮೇಲೆ ಇಂದು ಪ್ರಸನ್ನನಾಗಿರುವ ನೀನು ಭೂತ-ಭವ್ಯ-ಭವಗಳ ಪ್ರಭುವು!
08052004a ತ್ವತ್ಸಹಾಯೋ ಹ್ಯಹಂ ಕೃಷ್ಣ ತ್ರೀಽಲ್ಲೋಕಾನ್ವೈ ಸಮಾಗತಾನ್।
08052004c ಪ್ರಾಪಯೇಯಂ ಪರಂ ಲೋಕಂ ಕಿಮು ಕರ್ಣಂ ಮಹಾರಣೇ।।
ಕೃಷ್ಣ! ನಿನ್ನ ಸಹಾಯದಿಂದ ನಾನು ಮೂರು ಲೋಕಗಳನ್ನೂ ಎದುರಿಸಬಲ್ಲೆ. ಪರಮ ಲೋಕವನ್ನೂ ಸೇರಬಲ್ಲೆ. ಇನ್ನು ಮಹಾರಣದಲ್ಲಿ ಕರ್ಣನು ಯಾವ ಲೆಖ್ಕಕ್ಕೆ?
08052005a ಪಶ್ಯಾಮಿ ದ್ರವತೀಂ ಸೇನಾಂ ಪಾಂಚಾಲಾನಾಂ ಜನಾರ್ದನ।
08052005c ಪಶ್ಯಾಮಿ ಕರ್ಣಂ ಸಮರೇ ವಿಚರಂತಮಭೀತವತ್।।
ಜನಾರ್ದನ! ಓಡಿಹೋಗುತ್ತಿರುವ ಪಾಂಚಾಲರ ಸೇನೆಯನ್ನು ನೋಡುತ್ತಿದ್ದೇನೆ. ಸಮರದಲ್ಲಿ ನಿರ್ಭೀತನಾಗಿ ಸಂಚರಿಸುತ್ತಿರುವ ಕರ್ಣನನ್ನೂ ನೋಡುತ್ತಿದ್ದೇನೆ.
08052006a ಭಾರ್ಗವಾಸ್ತ್ರಂ ಚ ಪಶ್ಯಾಮಿ ವಿಚರಂತಂ ಸಮಂತತಃ।
08052006c ಸೃಷ್ಟಂ ಕರ್ಣೇನ ವಾರ್ಷ್ಣೇಯ ಶಕ್ರೇಣೇವ ಮಹಾಶನಿಂ।।
ವಾರ್ಷ್ಣೇಯ! ಕರ್ಣನಿಂದ ಸೃಷ್ಟಿಸಲ್ಪಟ್ಟ, ಸುತ್ತಲೂ ಹರಡುತ್ತಿರುವ, ಶಕ್ರನ ಮಹಾವಜ್ರದಂತಿರುವ ಭಾರ್ಗವಾಸ್ತ್ರವನ್ನೂ ನಾನು ನೋಡುತ್ತಿದ್ದೇನೆ.
08052007a ಅಯಂ ಖಲು ಸ ಸಂಗ್ರಾಮೋ ಯತ್ರ ಕೃಷ್ಣ ಮಯಾ ಕೃತಂ।
08052007c ಕಥಯಿಷ್ಯಂತಿ ಭೂತಾನಿ ಯಾವದ್ಭೂಮಿರ್ಧರಿಷ್ಯತಿ।।
ಕೃಷ್ಣ! ನಾನು ಇಲ್ಲಿ ಏನು ಸಂಗ್ರಾಮವನ್ನು ನಡೆಸುತ್ತೇನೋ ಅದರ ಕುರಿತು ಭೂತಗಳು ಭೂಮಿಯು ಧರಿಸಿರುವವರೆಗೆ ಮಾತನಾಡಿಕೊಳ್ಳುತ್ತಿರುತ್ತವೆ.
08052008a ಅದ್ಯ ಕೃಷ್ಣ ವಿಕರ್ಣಾ ಮೇ ಕರ್ಣಂ ನೇಷ್ಯಂತಿ ಮೃತ್ಯವೇ।
08052008c ಗಾಂಡೀವಮುಕ್ತಾಃ ಕ್ಷಿಣ್ವಂತೋ ಮಮ ಹಸ್ತಪ್ರಚೋದಿತಾಃ।।
ಕೃಷ್ಣ! ಇಂದು ನನ್ನ ಕೈಯಿಂದ ಪ್ರಜೋದಿತಗೊಂಡು ಗಾಂಡೀವದಿಂದ ಹೊರಡುವ ವಿಕರ್ಣ ಬಾಣಗಳು ಕರ್ಣನನ್ನು ಗಾಯಗೊಳಿಸಿ ಮೃತ್ಯುವಿಗೆ ಒಯ್ಯುವವು!
08052009a ಅದ್ಯ ರಾಜಾ ಧೃತರಾಷ್ಟ್ರಃ ಸ್ವಾಂ ಬುದ್ಧಿಮವಮಂಸ್ಯತೇ।
08052009c ದುರ್ಯೋಧನಮರಾಜ್ಯಾರ್ಹಂ ಯಯಾ ರಾಜ್ಯೇಽಭ್ಯಷೇಚಯತ್।।
ಇಂದು ರಾಜಾ ಧೃತರಾಷ್ಟ್ರನು ರಾಜ್ಯಕ್ಕೆ ಅರ್ಹನಾಗಿರದ ದುರ್ಯೋಧನನನ್ನು ರಾಜ್ಯಾಭೀಷೇಕಮಾಡಿದುದಕ್ಕೆ ತನ್ನದೇ ಬುದ್ಧಿಯನ್ನು ಹಳಿದುಕೊಳ್ಳುತ್ತಾನೆ!
08052010a ಅದ್ಯ ರಾಜ್ಯಾತ್ಸುಖಾಚ್ಚೈವ ಶ್ರಿಯೋ ರಾಷ್ಟ್ರಾತ್ತಥಾ ಪುರಾತ್।
08052010c ಪುತ್ರೇಭ್ಯಶ್ಚ ಮಹಾಬಾಹೋ ಧೃತರಾಷ್ಟ್ರೋ ವಿಯೋಕ್ಷ್ಯತೇ।।
ಮಹಾಬಾಹೋ! ಇಂದು ಧೃತರಾಷ್ಟ್ರನು ರಾಜ್ಯ, ಸುಖ, ಸಂಪತ್ತು, ರಾಷ್ಟ್ರ, ಮತ್ತು ನಂತರ ಪುತ್ರರಿಂದಲೂ ವಿಯೋಗಹೊಂದುತ್ತಾನೆ!
08052011a ಅದ್ಯ ದುರ್ಯೋಧನೋ ರಾಜಾ ಜೀವಿತಾಚ್ಚ ನಿರಾಶಕಃ।
08052011c ಭವಿಷ್ಯತಿ ಹತೇ ಕರ್ಣೇ ಕೃಷ್ಣ ಸತ್ಯಂ ಬ್ರವೀಮಿ ತೇ।।
ಕೃಷ್ಣ! ಕರ್ಣನು ಹತನಾಗಲು ಇಂದು ರಾಜಾ ದುರ್ಯೋಧನನು ಜೀವದಲ್ಲಿಯೇ ನಿರಾಶನಾಗುತ್ತಾನೆ. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ!
08052012a ಅದ್ಯ ದೃಷ್ಟ್ವಾ ಮಯಾ ಕರ್ಣಂ ಶರೈರ್ವಿಶಕಲೀಕೃತಂ।
08052012c ಸ್ಮರತಾಂ ತವ ವಾಕ್ಯಾನಿ ಶಮಂ ಪ್ರತಿ ಜನೇಶ್ವರಃ।।
ಇಂದು ನನ್ನ ಶರಗಳಿಂದ ಚೂರು ಚೂರುಗಳಾಗಿ ತುಂಡಾದನಂತರ ಜನೇಶ್ವರನು ಸಂಧಿಯಕುರಿತು ನೀನು ಹೇಳಿದ ಮಾತುಗಳನ್ನು ಸ್ಮರಿಸಿಕೊಳ್ಳುತ್ತಾನೆ!
08052013a ಅದ್ಯಾಸೌ ಸೌಬಲಃ ಕೃಷ್ಣ ಗ್ಲಹಂ ಜಾನಾತು ವೈ ಶರಾನ್।
08052013c ದುರೋದರಂ ಚ ಗಾಂಡೀವಂ ಮಂಡಲಂ ಚ ರಥಂ ಮಮ।।
ಕೃಷ್ಣ! ಇಂದು ಸೌಬಲನು ನನ್ನ ಶರಗಳನ್ನೇ ದಾಳಗಳೆಂದೂ, ಗಾಂಡೀವವೇ ಜೂಜುಗಾರ ಮತ್ತು ರಥವೇ ಜೂಜಾಡುವ ಕಟ್ಟೆ ಎಂದು ತಿಳಿದುಕೊಳ್ಳುತ್ತಾನೆ!
08052014a ಯೋಽಸೌ ರಣೇ ನರಂ ನಾನ್ಯಂ ಪೃಥಿವ್ಯಾಂ ಅಭಿಮನ್ಯತೇ।
08052014c ತಸ್ಯಾದ್ಯ ಸೂತಪುತ್ರಸ್ಯ ಭೂಮಿಃ ಪಾಸ್ಯತಿ ಶೋಣಿತಂ।
08052014e ಗಾಂಡೀವಸೃಷ್ಟಾ ದಾಸ್ಯಂತಿ ಕರ್ಣಸ್ಯ ಪರಮಾಂ ಗತಿಂ।।
ರಣದಲ್ಲಿ ಪೃಥ್ವಿಯ ಬೇರೆ ಯಾವ ನರನನ್ನೂ ಮನ್ನಿಸದಿದ್ದ ಸೂತಪುತ್ರನ ರಕ್ತವನ್ನು ಭೂಮಿಯು ಕುಡಿಯಲಿದೆ! ಗಾಂಡೀವದಿಂದ ಸೃಷ್ಟಿಸಲ್ಪಟ್ಟ ಶರಗಳು ಕರ್ಣನಿಗೆ ಪರಮಗತಿಯನ್ನು ನೀಡುತ್ತವೆ!
08052015a ಅದ್ಯ ತಪ್ಸ್ಯತಿ ರಾಧೇಯಃ ಪಾಂಚಾಲೀಂ ಯತ್ತದಾಬ್ರವೀತ್।
08052015c ಸಭಾಮಧ್ಯೇ ವಚಃ ಕ್ರೂರಂ ಕುತ್ಸಯನ್ಪಾಂಡವಾನ್ಪ್ರತಿ।।
ಅಂದು ಸಭಾಮಧ್ಯದಲ್ಲಿ ಪಾಂಡವರ ಕುರಿತು ತಿರಸ್ಕಾರಪೂರ್ವಕವಾಗಿ ಮಾತನಾಡುತ್ತ ಪಾಂಚಾಲಿಗೆ ಯಾವ ಕ್ರೂರ ಮಾತುಗಳನ್ನಾಡಿದ್ದನೋ ಅದಕ್ಕೆ ಇಂದು ರಾಧೇಯನು ಪಶ್ಚಾತ್ತಾಪಪಡುತ್ತಾನೆ.
08052016a ಯೇ ವೈ ಷಂಢತಿಲಾಸ್ತತ್ರ ಭವಿತಾರೋಽದ್ಯ ತೇ ತಿಲಾಃ।
08052016c ಹತೇ ವೈಕರ್ತನೇ ಕರ್ಣೇ ಸೂತಪುತ್ರೇ ದುರಾತ್ಮನಿ।।
ಅಂದು ಎಣ್ಣೆಯನ್ನು ತೆಗೆದ ಪೊಳ್ಳು ಎಳ್ಳಿನಂತಿರುವರೆಂದು ಕರೆಯಲ್ಪಟ್ಟವರು ಇಂದು ದುರಾತ್ಮ ಸೂತಪುತ್ರ ವೈಕರ್ತನ ಕರ್ಣನು ಹತನಾದನಂತರ ಎಣ್ಣೆಯಿಂದ ಕೂಡಿದ ಎಳ್ಳಿನಂತೆಯೇ ಆಗುತ್ತಾರೆ!
08052017a ಅಹಂ ವಃ ಪಾಂಡುಪುತ್ರೇಭ್ಯಸ್ತ್ರಾಸ್ಯಾಮೀತಿ ಯದಬ್ರವೀತ್।
08052017c ಅನೃತಂ ತತ್ಕರಿಷ್ಯಂತಿ ಮಾಮಕಾ ನಿಶಿತಾಃ ಶರಾಃ।।
“ನಾನು ನಿಮ್ಮನ್ನು ಪಾಂಡುಪುತ್ರರಿಂದ ಸಂರಕ್ಷಿಸುತ್ತೇನೆ!” ಎಂದು ಹೇಳಿದ ಅವನ ಮಾತುಗಳನ್ನು ನನ್ನ ನಿಶಿತ ಶರಗಳು ಸುಳ್ಳಾಗಿಸುತ್ತವೆ!
08052018a ಹಂತಾಹಂ ಪಾಂಡವಾನ್ಸರ್ವಾನ್ಸಪುತ್ರಾನಿತಿ ಯೋಽಬ್ರವೀತ್।
08052018c ತಮದ್ಯ ಕರ್ಣಂ ಹಂತಾಸ್ಮಿ ಮಿಷತಾಂ ಸರ್ವಧನ್ವಿನಾಂ।।
“ಪುತ್ರರೊಂದಿಗೆ ಸರ್ವ ಪಾಂಡವರನ್ನೂ ನಾನು ಸಂಹರಿಸುತ್ತೇನೆ!” ಎಂದು ಯಾರು ಹೇಳಿದ್ದನೋ ಆ ಕರ್ಣನನ್ನು ನಾನು ಇಂದು ಸರ್ವಧನ್ವಿಗಳೂ ನೋಡುತ್ತಿದ್ದಂತೆ ಸಂಹರಿಸುತ್ತೇನೆ!
08052019a ಯಸ್ಯ ವೀರ್ಯೇ ಸಮಾಶ್ವಸ್ಯ ಧಾರ್ತರಾಷ್ಟ್ರೋ ಬೃಹನ್ಮನಾಃ।
08052019c ಅವಾಮನ್ಯತ ದುರ್ಬುದ್ಧಿರ್ನಿತ್ಯಮಸ್ಮಾನ್ದುರಾತ್ಮವಾನ್।
08052019e ತಮದ್ಯ ಕರ್ಣಂ ರಾಧೇಯಂ ಹಂತಾಸ್ಮಿ ಮಧುಸೂದನ।।
ಮಧುಸೂದನ! ಯಾರ ವೀರ್ಯದಮೇಲೆ ವಿಶ್ವಾಸವನ್ನಿಟ್ಟು ದೊಡ್ಡಮನಸ್ಸಿನ ದುರ್ಬುದ್ಧಿ ದುರಾತ್ಮವಾನ್ ಧಾರ್ತರಾಷ್ಟ್ರನು ನಿತ್ಯವೂ ನಮ್ಮನ್ನು ಅಪಮಾನಿಸುತ್ತಾ ಬಂದನೋ ಆ ರಾಧೇಯ ಕರ್ಣನನ್ನು ನಾನು ಇಂದು ಸಂಹರಿಸುತ್ತೇನೆ.
08052020a ಅದ್ಯ ಕರ್ಣೇ ಹತೇ ಕೃಷ್ಣ ಧಾರ್ತರಾಷ್ಟ್ರಾಃ ಸರಾಜಕಾಃ।
08052020c ವಿದ್ರವಂತು ದಿಶೋ ಭೀತಾಃ ಸಿಂಹತ್ರಸ್ತಾ ಮೃಗಾ ಇವ।।
ಕೃಷ್ಣ! ಇಂದು ಕರ್ಣನು ಹತರಾಗಲು ರಾಜರೊಂದಿಗೆ ಧಾರ್ತರಾಷ್ಟ್ರರು ಸಿಂಹಕ್ಕೆ ಹೆದರಿದ ಮೃಗಗಳಂತೆ ದಿಕ್ಕಾಪಾಲಾಗಿ ಓಡಿ ಹೋಗುವರು!
08052021a ಅದ್ಯ ದುರ್ಯೋಧನೋ ರಾಜಾ ಪೃಥಿವೀಮನ್ವವೇಕ್ಷತಾಂ।
08052021c ಹತೇ ಕರ್ಣೇ ಮಯಾ ಸಂಖ್ಯೇ ಸಪುತ್ರೇ ಸಸುಹೃಜ್ಜನೇ।।
ಮಕ್ಕಳು ಮತ್ತು ಸುಹೃಜ್ಜನರೊಂದಿಗೆ ಕರ್ಣನು ರಣದಲ್ಲಿ ಇಂದು ನನ್ನಿಂದ ಹತನಾದಾಗ ರಾಜಾ ದುರ್ಯೋಧನನು ಭೂಮಿಯಲ್ಲಿಯೇ ನಿರಾಶೆಹೊಂದುತ್ತಾನೆ!
08052022a ಅದ್ಯ ಕರ್ಣಂ ಹತಂ ದೃಷ್ಟ್ವಾ ಧಾರ್ತರಾಷ್ಟ್ರೋಽತ್ಯಮರ್ಷಣಃ।
08052022c ಜಾನಾತು ಮಾಂ ರಣೇ ಕೃಷ್ಣ ಪ್ರವರಂ ಸರ್ವಧನ್ವಿನಾಂ।।
ಕೃಷ್ಣ! ಇಂದು ಕರ್ಣನು ಹತನಾದುದನ್ನು ನೋಡಿ ಅಮರ್ಷಣ ಧಾರ್ತರಾಷ್ಟನು ರಣದಲ್ಲಿ ನಾನೇ ಸರ್ವಧನ್ವಿಗಳಲ್ಲಿ ಶ್ರೇಷ್ಠ ಎನ್ನುವುದನ್ನು ತಿಳಿದುಕೊಳ್ಳುತ್ತಾನೆ!
08052023a ಅದ್ಯಾಹಮನೃಣಃ ಕೃಷ್ಣ ಭವಿಷ್ಯಾಮಿ ಧನುರ್ಭೃತಾಂ।
08052023c ಕ್ರೋಧಸ್ಯ ಚ ಕುರೂಣಾಂ ಚ ಶರಾಣಾಂ ಗಾಂಡಿವಸ್ಯ ಚ।।
ಕೃಷ್ಣ! ಇಂದು ನಾನು ಧನುರ್ಧಾರಿಗಳ, ಕುರುಗಳ ಕ್ರೋಧದ ಮತ್ತು ಗಾಂಡಿವದ ಶರಗಳ ಅನೃಣನಾಗುತ್ತೇನೆ!
08052024a ಅದ್ಯ ದುಃಖಮಹಂ ಮೋಕ್ಷ್ಯೇ ತ್ರಯೋದಶಸಮಾರ್ಜಿತಂ।
08052024c ಹತ್ವಾ ಕರ್ಣಂ ರಣೇ ಕೃಷ್ಣ ಶಂಬರಂ ಮಘವಾನಿವ।।
ಮಘವಾನನು ಶಂಬರನನ್ನು ಹೇಗೋ ಹಾಗೆ ಇಂದು ರಣದಲ್ಲಿ ಕರ್ಣನನ್ನು ಸಂಹರಿಸಿ ನಾನು ಹದಿಮೂರುವರ್ಷಗಳಿಂದ ಬೆಳೆಯುತ್ತಿರುವ ಈ ದುಃಖದಿಂದ ಮುಕ್ತಿಹೊಂದುತ್ತೇನೆ!
08052025a ಅದ್ಯ ಕರ್ಣೇ ಹತೇ ಯುದ್ಧೇ ಸೋಮಕಾನಾಂ ಮಹಾರಥಾಃ।
08052025c ಕೃತಂ ಕಾರ್ಯಂ ಚ ಮನ್ಯಂತಾಂ ಮಿತ್ರಕಾರ್ಯೇಪ್ಸವೋ ಯುಧಿ।।
ಇಂದು ಯುದ್ಧದಲ್ಲಿ ಕರ್ಣನು ಹತನಾಗಲು ಯುದ್ಧದಲ್ಲಿ ಮಿತ್ರಕಾರ್ಯವನ್ನೇ ಬಯಸಿ ಮಾಡುತ್ತಿದ್ದ ಸೋಮಕ ಮಹಾರಥರು ಕಾರ್ಯವು ಮುಗಿಯಿತೆಂದು ಅಭಿಪ್ರಾಯಪಡುತ್ತಾರೆ.
08052026a ನ ಜಾನೇ ಚ ಕಥಂ ಪ್ರೀತಿಃ ಶೈನೇಯಸ್ಯಾದ್ಯ ಮಾಧವ।
08052026c ಭವಿಷ್ಯತಿ ಹತೇ ಕರ್ಣೇ ಮಯಿ ಚಾಪಿ ಜಯಾಧಿಕೇ।।
ಮಾಧವ! ಇಂದು ನನ್ನಿಂದ ಕರ್ಣನು ಹತನಾಗಿ ಜಯವು ಅಧಿಕವಾಗಲು ಶೈನೇಯನು ಎಷ್ಟು ಸಂತೋಷಪಡುತ್ತಾನೋ ಅದನ್ನು ತಿಳಿಯಲು ಅಸಾಧ್ಯ!
08052027a ಅಹಂ ಹತ್ವಾ ರಣೇ ಕರ್ಣಂ ಪುತ್ರಂ ಚಾಸ್ಯ ಮಹಾರಥಂ।
08052027c ಪ್ರೀತಿಂ ದಾಸ್ಯಾಮಿ ಭೀಮಸ್ಯ ಯಮಯೋಃ ಸಾತ್ಯಕೇರಪಿ।।
ಇಂದು ನಾನು ರಣದಲ್ಲಿ ಮಹಾರಥ ಕರ್ಣ ಮತ್ತು ಅವನ ಮಗನನ್ನು ಕೊಂದು ಭೀಮ, ಯಮಳರು ಮತ್ತು ಸಾತ್ಯಕಿಯರ ಪ್ರೀತಿಪಾತ್ರನಾಗುತ್ತೇನೆ.
08052028a ಧೃಷ್ಟದ್ಯುಮ್ನಶಿಖಂಡಿಭ್ಯಾಂ ಪಾಂಚಾಲಾನಾಂ ಚ ಮಾಧವ।
08052028c ಅಧ್ಯಾನೃಣ್ಯಂ ಗಮಿಷ್ಯಾಮಿ ಹತ್ವಾ ಕರ್ಣಂ ಮಹಾರಣೇ।।
ಮಾಧವ! ಇಂದು ಮಹಾರಣದಲ್ಲಿ ಕರ್ಣನನ್ನು ಕೊಂದು ನಾನು ಧೃಷ್ಟದ್ಯುಮ್ನ ಮತ್ತು ಶಿಖಂಡಿ ಈ ಇಬ್ಬರೂ ಪಾಂಚಾಲರ ಋಣಮುಕ್ತನಾಗುತ್ತೇನೆ!
08052029a ಅದ್ಯ ಪಶ್ಯಂತು ಸಂಗ್ರಾಮೇ ಧನಂಜಯಮಮರ್ಷಣಂ।
08052029c ಯುಧ್ಯಂತಂ ಕೌರವಾನ್ಸಂಖ್ಯೇ ಪಾತಯಂತಂ ಚ ಸೂತಜಂ।
08052029e ಭವತ್ಸಕಾಶೇ ವಕ್ಷ್ಯೇ ಚ ಪುನರೇವಾತ್ಮಸಂಸ್ತವಂ।।
ಇಂದಿನ ಸಂಗ್ರಾಮದಲ್ಲಿ ಕುಪಿತನಾದ ಧನಂಜಯನು ಕೌರವರೊಡನೆ ಯುದ್ಧಮಾಡಿ ಸೂತಜನನ್ನು ರಣದಲ್ಲಿ ಬೀಳಿಸುವುದನ್ನು ನೋಡಲಿದ್ದಾರೆ! ಕೃಷ್ಣ! ನಿನ್ನ ಸಮ್ಮುಖದಲ್ಲಿ ಮಾತ್ರ ನಾನು ಈ ಆತ್ಮಸಂಸ್ತುತಿಯನ್ನು ಮಾಡಿಕೊಳ್ಳುತ್ತಿದ್ದೇನೆ!
08052030a ಧನುರ್ವೇದೇ ಮತ್ಸಮೋ ನಾಸ್ತಿ ಲೋಕೇ ಪರಾಕ್ರಮೇ ವಾ ಮಮ ಕೋಽಸ್ತಿ ತುಲ್ಯಃ।
08052030c ಕೋ ವಾಪ್ಯನ್ಯೋ ಮತ್ಸಮೋಽಸ್ತಿ ಕ್ಷಮಾಯಾಂ ತಥಾ ಕ್ರೋಧೇ ಸದೃಶೋಽನ್ಯೋ ನ ಮೇಽಸ್ತಿ।।
ಧನುರ್ವೇದದಲ್ಲಿ ನನ್ನ ಸಮನಾದವನು ಲೋಕದಲ್ಲಿ ಇಲ್ಲ. ಪರಾಕ್ರಮದಲ್ಲಿ ನನ್ನ ತುಲ್ಯನಾದವನು ಯಾರೂ ಇಲ್ಲ. ಕ್ಷಮೆಯಲ್ಲಿಯೂ ನನ್ನಂತಹ ಬೇರೊಬ್ಬನು ಇಲ್ಲ. ಹಾಗೆಯೇ ಕ್ರೋಧದಲ್ಲಿಯೂ ನನ್ನ ಸದೃಶನಾದ ಇನ್ನೊಬ್ಬನಿಲ್ಲ!
08052031a ಅಹಂ ಧನುಷ್ಮಾನಸುರಾನ್ಸುರಾಂಶ್ಚ ಸರ್ವಾಣಿ ಭೂತಾನಿ ಚ ಸಂಗತಾನಿ।
08052031c ಸ್ವಬಾಹುವೀರ್ಯಾದ್ಗಮಯೇ ಪರಾಭವಂ ಮತ್ಪೌರುಷಂ ವಿದ್ಧಿ ಪರಃ ಪರೇಭ್ಯಃ।।
ಧನುಷ್ಮಂತನಾದ ನಾನು ಒಟ್ಟಾಗಿ ಬಂದ ಅಸುರರನ್ನೂ, ಸುರರನ್ನೂ ಮತ್ತು ಸರ್ವ ಭೂತಗಳನ್ನೂ ಸ್ವಬಾಹುವೀರ್ಯದಿಂದ ಪರಾಭವಗೊಳಿಸಬಲ್ಲೆನು. ಎಲ್ಲರ ಪೌರುಷಕ್ಕಿಂತ ನನ್ನ ಪೌರುಷವು ಹೆಚ್ಚಿನದೆಂದು ತಿಳಿ.
08052032a ಶರಾರ್ಚಿಷಾ ಗಾಂಡಿವೇನಾಹಂ ಏಕಃ ಸರ್ವಾನ್ಕುರೂನಬಾಹ್ಲಿಕಾಂಶ್ಚಾಭಿಪತ್ಯ।
08052032c ಹಿಮಾತ್ಯಯೇ ಕಕ್ಷಗತೋ ಯಥಾಗ್ನಿಸ್ ತಹಾ ದಹೇಯಂ ಸಗಣಾನ್ಪ್ರಸಹ್ಯ।।
ಬಾಣಗಳೇ ಜ್ವಾಲೆಗಳಾಗಿರುವ ಈ ಗಾಂಡೀವದಿಂದ ನಾನೊಬ್ಬನೇ ಸರ್ವ ಕುರುಗಳನ್ನೂ, ಬಾಹ್ಲೀಕರನ್ನೂ ಸಂಹರಿಸಿ ಗ್ರೀಷ್ಮಋತುವಿನಲ್ಲಿ ಒಣಪೊದೆಗಳನ್ನು ಅಗ್ನಿಯು ದಹಿಸಿಬಿಡುವಂತೆ ಬಲಪೂರ್ವಕವಾಗಿ ದಹಿಸಿಬಿಡುತ್ತೇನೆ!
08052033a ಪಾಣೌ ಪೃಷತ್ಕಾ ಲಿಖಿತಾ ಮಮೈತೇ ಧನುಶ್ಚ ಸವ್ಯೇ ನಿಹಿತಂ ಸಬಾಣಂ।
08052033c ಪಾದೌ ಚ ಮೇ ಸರಥೌ ಸಧ್ವಜೌ ಚ ನ ಮಾದೃಶಂ ಯುದ್ಧಗತಂ ಜಯಂತಿ।।
ನನ್ನ ಒಂದು ಕೈಯಲ್ಲಿ ಬಾಣಗಳ ಚಿಹ್ನೆಗಳಿವೆ. ಮತ್ತೊಂದರಲ್ಲಿ ಬಾಣವನ್ನು ಹೂಡಿರುವ ಧನುಸ್ಸಿನ ಚಿಹ್ನೆಯಿದೆ. ನನ್ನ ಎರಡೂ ಪಾದಗಳಲ್ಲಿ ರಥ-ಧ್ವಜಗಳ ಚಿಹ್ನೆಗಳಿವೆ. ಯುದ್ಧಗತನಾಗಿರುವ ನನ್ನಂತಹವನನ್ನು ಯಾರೂ ಜಯಿಸಲಾರರು!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಅರ್ಜುನವಾಕ್ಯೇ ದ್ವಿಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಅರ್ಜುನವಾಕ್ಯ ಎನ್ನುವ ಐವತ್ತೆರಡನೇ ಅಧ್ಯಾಯವು.