ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 51
ಸಾರ
ಕೃಷ್ಣನು ಅರ್ಜುನನ ಪರಾಕ್ರಮವನ್ನು ಮತ್ತು ಕಳೆದ ಹದಿನಾರು ದಿನಗಳ ಯುದ್ಧವನ್ನು ವರ್ಣಿಸುತ್ತಾ ಕರ್ಣನನ್ನು ಸಂಹರಿಸು ಎಂದು ಅವನ ತೇಜೋವೃದ್ಧಿಕಾರಕ ಮಾತುಗಳನ್ನಾಡಿದುದು (1-110).
08051001 ಸಂಜಯ ಉವಾಚ।
08051001a ತತಃ ಪುನರಮೇಯಾತ್ಮಾ ಕೇಶವೋಽರ್ಜುನಮಬ್ರವೀತ್।
08051001c ಕೃತಸಂಕಲ್ಪಮಾಯಸ್ತಂ ವಧೇ ಕರ್ಣಸ್ಯ ಸರ್ವಶಃ।।
ಸಂಜಯನು ಹೇಳಿದನು: “ಆಗ ಎಲ್ಲರೀತಿಯಲ್ಲಿಯೂ ಕರ್ಣನ ವಧೆಯ ಸಂಕಲ್ಪವನ್ನು ಮಾಡಿದ ಕೇಶವನು ಪುನಃ ಹತ್ತಿರದಲ್ಲಿದ್ದ ಅರ್ಜುನನಿಗೆ ಹೇಳಿದನು:
08051002a ಅದ್ಯ ಸಪ್ತದಶಾಹಾನಿ ವರ್ತಮಾನಸ್ಯ ಭಾರತ।
08051002c ವಿನಾಶಸ್ಯಾತಿಘೋರಸ್ಯ ನರವಾರಣವಾಜಿನಾಂ।।
“ಭಾರತ! ಇಂದು ನರವಾರಣವಾಜಿಗಳ ಅತಿಘೋರ ವಿನಾಶದ ಹದಿನೇಳನೆಯ ದಿನವು ನಡೆಯುತ್ತಿದೆ.
08051003a ಭೂತ್ವಾ ಹಿ ವಿಪುಲಾ ಸೇನಾ ತಾವಕಾನಾಂ ಪರೈಃ ಸಹ।
08051003c ಅನ್ಯೋನ್ಯಂ ಸಮರೇ ಪ್ರಾಪ್ಯ ಕಿಂಚಿಚ್ಛೇಷಾ ವಿಶಾಂ ಪತೇ।।
ವಿಶಾಂಪತೇ! ಸಮರದಲ್ಲಿ ಅನ್ಯೋನ್ಯರನ್ನು ಎದುರಿಸಿ ನಿನ್ನ ಮತ್ತು ಶತ್ರುಸೇನೆಗಳಲ್ಲಿ ಒಟ್ಟಿಗೇ ವಿಪುಲ ಸೇನೆಯು ನಾಶವಾಗಿ ಸ್ವಲ್ಪ ಭಾಗ ಮಾತ್ರ ಉಳಿದುಕೊಂಡಿದೆ.
08051004a ಭೂತ್ವಾ ಹಿ ಕೌರವಾಃ ಪಾರ್ಥ ಪ್ರಭೂತಗಜವಾಜಿನಃ।
08051004c ತ್ವಾಂ ವೈ ಶತ್ರುಂ ಸಮಾಸಾದ್ಯ ವಿನಷ್ಟಾ ರಣಮೂರ್ಧನಿ।।
ಪಾರ್ಥ! ಹಿಂದೆ ಕೌರವರು ಬಹುಸಂಖ್ಯಾತ ಆನೆ-ಕುದುರೆಗಳಿಂದ ಕೂಡಿದ್ದರು. ಆದರೆ ಅವರು ಶತ್ರುವಾದ ನಿನ್ನನ್ನು ಎದುರಿಸಿ ರಣಮೂರ್ಧನಿಯಲ್ಲಿ ವಿನಷ್ಟರಾದರು.
08051005a ಏತೇ ಚ ಸರ್ವೇ ಪಾಂಚಾಲಾಃ ಸೃಂಜಯಾಶ್ಚ ಸಹಾನ್ವಯಾಃ।
08051005c ತ್ವಾಂ ಸಮಾಸಾದ್ಯ ದುರ್ಧರ್ಷಂ ಪಾಂಡವಾಶ್ಚ ವ್ಯವಸ್ಥಿತಾಃ।।
ಈ ಎಲ್ಲ ಪಾಂಚಾಲರೂ ಸೃಂಜಯರೂ ಮತ್ತು ತಮ್ಮ ಅನುಯಾಯಿಗಳೊಂದಿಗೆ ಪಾಂಡವರೂ ದುರ್ಧರ್ಷನಾದ ನಿನ್ನನ್ನು ಪಡೆದು ರಣದಲ್ಲಿ ವ್ಯವಸ್ಥಿತರಾಗಿ ನಿಂತಿದ್ದಾರೆ.
08051006a ಪಾಂಚಾಲೈಃ ಪಾಂಡವೈರ್ಮತ್ಸ್ಯೈಃ ಕಾರೂಷೈಶ್ಚೇದಿಕೇಕಯೈಃ।
08051006c ತ್ವಯಾ ಗುಪ್ತೈರಮಿತ್ರಘ್ನ ಕೃತಃ ಶತ್ರುಗಣಕ್ಷಯಃ।।
ಅಮಿತ್ರಘ್ನ! ನಿನ್ನಿಂದ ರಕ್ಷಿತರಾದ ಪಾಂಚಾಲರು, ಪಾಂಡವರು, ಮತ್ಸ್ಯರು, ಕಾರೂಷರು, ಚೇದಿ-ಕೇಕಯರು ಶತ್ರುಗಣಗಳನ್ನು ನಾಶಪಡಿಸಿರುವರು.
08051007a ಕೋ ಹಿ ಶಕ್ತೋ ರಣೇ ಜೇತುಂ ಕೌರವಾಂಸ್ತಾತ ಸಂಗತಾನ್।
08051007c ಅನ್ಯತ್ರ ಪಾಂಡವಾನ್ಯುದ್ಧೇ ತ್ವಯಾ ಗುಪ್ತಾನ್ಮಹಾರಥಾನ್।।
ಅಯ್ಯಾ! ನಿನ್ನಿಂದ ರಕ್ಷಿತರಾಗಿರುವ ಮಹಾರಥ ಪಾಂಡವರಲ್ಲದೇ ಬೇರೆ ಯಾರಿಗೆ ರಣದಲ್ಲಿ ಕೌರವರನ್ನು ಗೆಲ್ಲಲು ಶಕ್ಯವಾಗಿದ್ದಿತು?
08051008a ತ್ವಂ ಹಿ ಶಕ್ತೋ ರಣೇ ಜೇತುಂ ಸಸುರಾಸುರಮಾನುಷಾನ್।
08051008c ತ್ರೀಽಲ್ಲೋಕಾನ್ಸಮಮುದ್ಯುಕ್ತಾನ್ಕಿಂ ಪುನಃ ಕೌರವಂ ಬಲಂ।।
ರಣದಲ್ಲಿ ಸುರಾಸುರಮನುಷ್ಯರೊಂದಿಗೆ ತ್ರಿಲೋಕಗಳನ್ನೂ ಗೆಲ್ಲಲು ನೀನು ಶಕ್ತನಾಗಿರುವಾಗ ಇನ್ನು ಕೌರವ ಸೇನೆಯು ಯಾವ ಲೆಖ್ಕಕ್ಕೆ?
08051009a ಭಗದತ್ತಂ ಹಿ ರಾಜಾನಂ ಕೋಽನ್ಯಃ ಶಕ್ತಸ್ತ್ವಯಾ ವಿನಾ।
08051009c ಜೇತುಂ ಪುರುಷಶಾರ್ದೂಲ ಯೋಽಪಿ ಸ್ಯಾದ್ವಾಸವೋಪಮಃ।।
ಪುರುಷಶಾರ್ದೂಲ! ವಾಸವನಂತಿದ್ದ ರಾಜ ಭಗದತ್ತನನ್ನು ನಿನ್ನ ಹೊರತು ಬೇರೆ ಯಾರು ಗೆಲ್ಲಲು ಶಕ್ಯರಾಗಿದ್ದರು?
08051010a ತಥೇಮಾಂ ವಿಪುಲಾಂ ಸೇನಾಂ ಗುಪ್ತಾಂ ಪಾರ್ಥ ತ್ವಯಾನಘ।
08051010c ನ ಶೇಕುಃ ಪಾರ್ಥಿವಾಃ ಸರ್ವೇ ಚಕ್ಷುರ್ಭಿರಭಿವೀಕ್ಷಿತುಂ।।
ಪಾರ್ಥ! ಅನಘ! ನಿನ್ನಿಂದ ರಕ್ಷಿಸಲ್ಪಟ್ಟ ಈ ವಿಪುಲ ಸೇನೆಯನ್ನು ಕಣ್ಣುಗಳಿಂದ ನೇರವಾಗಿ ನೋಡಲೂ ಕೂಡ ಈ ಪಾರ್ಥಿವರೆಲ್ಲರಿಗೂ ಸಾಧ್ಯವಿಲ್ಲ.
08051011a ತಥೈವ ಸತತಂ ಪಾರ್ಥ ರಕ್ಷಿತಾಭ್ಯಾಂ ತ್ವಯಾ ರಣೇ।
08051011c ಧೃಷ್ಟದ್ಯುಮ್ನಶಿಖಂಡಿಭ್ಯಾಂ ಭೀಷ್ಮದ್ರೋಣೌ ನಿಪಾತಿತೌ।।
ಪಾರ್ಥ! ಹಾಗೆಯೇ ರಣದಲ್ಲಿ ಸತತವೂ ನಿನ್ನಿಂದ ರಕ್ಷಿಸಲ್ಪಟ್ಟ ಧೃಷ್ಟದ್ಯುಮ್ನ-ಶಿಖಂಡಿಯರು ಭೀಷ್ಮ-ದ್ರೋಣರನ್ನು ಕೆಳಗುರುಳಿಸಿದರು.
08051012a ಕೋ ಹಿ ಶಕ್ತೋ ರಣೇ ಪಾರ್ಥ ಪಾಂಚಾಲಾನಾಂ ಮಹಾರಥೌ।
08051012c ಭೀಷ್ಮದ್ರೋಣೌ ಯುಧಾ ಜೇತುಂ ಶಕ್ರತುಲ್ಯಪರಾಕ್ರಮೌ।।
ಪಾರ್ಥ! ಶಕ್ರನ ಸಮನಾದ ಪರಾಕ್ರಮವುಳ್ಳ ಭೀಷ್ಮ-ದ್ರೋಣರನ್ನು ಯುದ್ಧದಲ್ಲಿ ಜಯಿಸಲು ಮಹಾರಥರಾದ ಪಾಂಚಾಲರಿಗಾದರೋ ಹೇಗೆ ಶಕ್ಯವಾಯಿತು?
08051013a ಕೋ ಹಿ ಶಾಂತನವಂ ಸಂಖ್ಯೇ ದ್ರೋಣಂ ವೈಕರ್ತನಂ ಕೃಪಂ।
08051013c ದ್ರೌಣಿಂ ಚ ಸೌಮದತ್ತಿಂ ಚ ಕೃತವರ್ಮಾಣಮೇವ ಚ।
08051013e ಸೈಂದವಂ ಮದ್ರರಾಜಂ ಚ ರಾಜಾನಂ ಚ ಸುಯೋಧನಂ।।
08051014a ವೀರಾನ್ ಕೃತಾಸ್ತ್ರಾನ್ಸಮರೇ ಸರ್ವಾನೇವಾನುವರ್ತಿನಃ।
08051014c ಅಕ್ಷೌಹಿಣೀಪತೀನುಗ್ರಾನ್ಸಂರಬ್ಧಾನ್ಯುದ್ಧದುರ್ಮದಾನ್।।
ಅಕ್ಷೌಹಿಣೀಪತಿಗಳಾದ, ಉಗ್ರರಾದ, ಸಂರಬ್ಧರಾದ, ಯುದ್ಧದುರ್ಮದರಾದ, ವೀರರಾದ, ಕೃತಾಸ್ತ್ರರಾದ, ಸಮರದಿಂದ ಎಂದೂ ಪಲಾಯನಮಾಡದ ಶಾಂತನವ, ದ್ರೋಣ, ವೈಕರ್ತನ, ಕೃಪ, ದ್ರೌಣಿ, ಸೌಮದತ್ತಿ, ಕೃತವರ್ಮ, ಸೈಂದವ, ಮದ್ರರಾಜ, ಮತ್ತು ರಾಜಾ ಸುಯೋಧನರನ್ನು ನೀನಲ್ಲದೇ ಬೇರೆ ಯಾರು ರಣದಲ್ಲಿ ಎದುರಿಸಿಯಾರು?
08051015a ಶ್ರೇಣ್ಯಶ್ಚ ಬಹುಲಾಃ ಕ್ಷೀಣಾಃ ಪ್ರದೀರ್ಣಾಶ್ವರಥದ್ವಿಪಾಃ।
08051015c ನಾನಾಜನಪದಾಶ್ಚೋಗ್ರಾಃ ಕ್ಷತ್ರಿಯಾಣಾಮಮರ್ಷಿಣಾಂ।।
ನಾನಾಜನಪದಗಳಿಂದ ಬಂದಿರುವ ಉಗ್ರರಾದ ಅಮರ್ಷಿ ಕ್ಷತ್ರಿಯರ ಅಶ್ವರಥಾಅನೆಗಳ ಶ್ರೇಣಿಗಳು ಬಹಳವಾಗಿ ಕ್ಷೀಣವಾಗಿವೆ.
08051016a ಗೋವಾಸದಾಸಮೀಯಾನಾಂ ವಸಾತೀನಾಂ ಚ ಭಾರತ।
08051016c ವ್ರಾತ್ಯಾನಾಂ ವಾಟಧಾನಾನಾಂ ಭೋಜಾನಾಂ ಚಾಪಿ ಮಾನಿನಾಂ।।
08051017a ಉದೀರ್ಣಾಶ್ಚ ಮಹಾಸೇನಾ ಬ್ರಹ್ಮಕ್ಷತ್ರಸ್ಯ ಭಾರತ।
08051017c ತ್ವಾಂ ಸಮಾಸಾದ್ಯ ನಿಧನಂ ಗತಾಃ ಸಾಶ್ವರಥದ್ವಿಪಾಃ।।
ಭಾರತ! ಗೋವಾಸರ, ದಾಸಮೀಯರ, ವಸಾತಿಗಳ, ವ್ರಾತ್ಯರ, ವಾಟಧಾನರ, ಮಾನಿನಿ ಭೋಜರ, ಉದೀರ್ಣರ ಮತ್ತು ಬ್ರಹ್ಮಕ್ಷತ್ರರ ಮಹಾಸೇನೆಗಳು ನಿನ್ನನ್ನು ಎದುರಿಸಿ ಅಶ್ವರಥಗಜಗಳೊಂದಿಗೆ ನಿಧನವಾದವು.
08051018a ಉಗ್ರಾಶ್ಚ ಕ್ರೂರಕರ್ಮಾಣಸ್ತುಖಾರಾ ಯವನಾಃ ಖಶಾಃ।
08051018c ದಾರ್ವಾಭಿಸಾರಾ ದರದಾಃ ಶಕಾ ರಮಠತಂಗಣಾಃ।।
08051019a ಅಂದ್ರಕಾಶ್ಚ ಪುಲಿಂದಾಶ್ಚ ಕಿರಾತಾಶ್ಚೋಗ್ರವಿಕ್ರಮಾಃ।
08051019c ಮ್ಲೇಚ್ಚಾಶ್ಚ ಪಾರ್ವತೀಯಾಶ್ಚ ಸಾಗರಾನೂಪವಾಸಿನಃ।
08051019e ಸಂರಂಭಿಣೋ ಯುದ್ಧಶೌಂಡಾ ಬಲಿನೋ ದೃಬ್ಧಪಾಣಯಃ।।
08051020a ಏತೇ ಸುಯೋಧನಸ್ಯಾರ್ಥೇ ಸಂರಬ್ಧಾಃ ಕುರುಭಿಃ ಸಹ।
08051020c ನ ಶಕ್ಯಾ ಯುಧಿ ನಿರ್ಜೇತುಂ ತ್ವದನ್ಯೇನ ಪರಂತಪ।।
ಉಗ್ರರಾದ, ಕೋಪಿಷ್ಟರೂ, ಯುದ್ಧಶೌಂಡರೂ, ಬಲಶಾಲಿಗಳೂ, ದೃಬ್ಧಪಾಣಿಯರೂ, ಕ್ರೂರಕರ್ಮಿಗಳೂ ಆದ ತುಖರರು, ಯವನರು, ಖಶರು, ದಾರ್ವರು, ಅಭಿಸಾರರು, ದರದರು, ಶಕರು, ರಮಠತಂಗಣರು, ಆಂಧ್ರಕರು, ಪುಲಿಂದರು, ಉಗ್ರಕರ್ಮಿಗಳಾದ ಕಿರಾತರು, ಮ್ಲೇಚ್ಛರು, ಪಾರ್ವತೀಯರು, ಮತ್ತು ಸಾಗರಾನೂಪವಾಸಿಗಳು ಸುಯೋಧನನಿಗೋಸ್ಕರವಾಗಿ ಕುರುಗಳನ್ನು ಸೇರಿ ಹೋರಾಡಿದರು. ಪರಂತಪ! ನೀನಲ್ಲದೇ ಬೇರೆ ಯಾರೂ ಯುದ್ಧದಲ್ಲಿ ಅವರನ್ನು ಜಯಿಸಲು ಶಕ್ಯರಾಗಿರಲಿಲ್ಲ.
08051021a ಧಾರ್ತರಾಷ್ಟ್ರಮುದಗ್ರಂ ಹಿ ವ್ಯೂಢಂ ದೃಷ್ಟ್ವಾ ಮಹಾಬಲಂ।
08051021c ಯಸ್ಯ ತ್ವಂ ನ ಭವೇಸ್ತ್ರಾತಾ ಪ್ರತೀಯಾತ್ಕೋ ನು ಮಾನವಃ।।
ವ್ಯೂಹಕ್ರಮದಲ್ಲಿದ್ದ ಧಾರ್ತರಾಷ್ಟ್ರನ ಉಗ್ರ ಮಹಾಸೇನೆಯನ್ನು ನೋಡಿ ನಿನ್ನಿಂದ ರಕ್ಷಿಸಲ್ಪಡದ ಯಾವ ಮನುಷ್ಯನು ತಾನೇ ಎದುರಿಸುತ್ತಿದ್ದನು?
08051022a ತತ್ಸಾಗರಮಿವೋದ್ಧೂತಂ ರಜಸಾ ಸಂವೃತಂ ಬಲಂ।
08051022c ವಿದಾರ್ಯ ಪಾಂಡವೈಃ ಕ್ರುದ್ಧೈಸ್ತ್ವಯಾ ಗುಪ್ತೈರ್ಹತಂ ವಿಭೋ।।
ವಿಭೋ! ಧೂಳಿನಿಂದ ಆವೃತವಾಗಿ ಸಾಗರದಂತೆ ಉಕ್ಕಿ ಬರುತ್ತಿದ್ದ ಆ ಸೇನೆಯನ್ನು ನಿನ್ನಿಂದ ರಕ್ಷಿತರಾದ ಪಾಂಡವರು ನಾಶಗೊಳಿಸಿದರು.
08051023a ಮಾಗಧಾನಾಮಧಿಪತಿರ್ಜಯತ್ಸೇನೋ ಮಹಾಬಲಃ।
08051023c ಅದ್ಯ ಸಪ್ತೈವ ಚಾಹಾನಿ ಹತಃ ಸಂಖ್ಯೇಽಭಿಮನ್ಯುನಾ।।
ಇಂದಿನಿಂದ ಏಳು ದಿನಗಳ ಹಿಂದೆ ಯುದ್ಧದಲ್ಲಿ ಮಾಗಧರ ಅಧಿಪತಿ ಮಹಾಬಲ ಜಯತ್ಸೇನನು ಅಭಿಮನ್ಯುವಿನಿಂದ ಹತನಾದನು.
08051024a ತತೋ ದಶ ಸಹಸ್ರಾಣಿ ಗಜಾನಾಂ ಭೀಮಕರ್ಮಣಾಂ।
08051024c ಜಘಾನ ಗದಯಾ ಭೀಮಸ್ತಸ್ಯ ರಾಜ್ಞಃ ಪರಿಚ್ಚದಂ।
08051024e ತತೋಽನ್ಯೇಽಪಿ ಹತಾ ನಾಗಾ ರಥಾಶ್ಚ ಶತಶೋ ಬಲಾತ್।।
ಅನಂತರ ಆ ರಾಜನಿಂದ ರಕ್ಷಿತಗೊಂಡಿದ್ದ ಭೀಮಕರ್ಮಿ ಹತ್ತು ಸಾವಿರ ಆನೆಗಳನ್ನು ಭೀಮಸೇನನು ಗದೆಯಿಂದ ಸಂಹರಿಸಿದನು. ಅವನ ಸೇನೆಯ ನೂರಾರು ಅನ್ಯ ರಥಗಳೂ ಆನೆಗಳೂ ನಾಶಗೊಂಡವು.
08051025a ತದೇವಂ ಸಮರೇ ತಾತ ವರ್ತಮಾನೇ ಮಹಾಭಯೇ।
08051025c ಭೀಮಸೇನಂ ಸಮಾಸಾದ್ಯ ತ್ವಾಂ ಚ ಪಾಂಡವ ಕೌರವಾಃ।
08051025e ಸವಾಜಿರಥನಾಗಾಶ್ಚ ಮೃತ್ಯುಲೋಕಮಿತೋ ಗತಾಃ।।
ಅಯ್ಯಾ! ಹಾಗೆಯೇ ಮಹಾಭಯಂಕರವಾದ ಸಮರವು ನಡೆಯುತ್ತಿರಲು ಕೌರವರು ಭೀಮಸೇನನನ್ನು ಮತ್ತು ನಿನ್ನನ್ನು ಎದುರಿಸಿ ಕುದುರೆ, ರಥಗಳು ಮತ್ತು ಆನೆಗಳೊಂಡಿಗೆ ಮೃತ್ಯುಲೋಕಕ್ಕೆ ಹೋದರು.
08051026a ತಥಾ ಸೇನಾಮುಖೇ ತತ್ರ ನಿಹತೇ ಪಾರ್ಥ ಪಾಂಡವೈಃ।
08051026c ಭೀಷ್ಮಃ ಪ್ರಾಸೃಜದುಗ್ರಾಣಿ ಶರವರ್ಷಾಣಿ ಮಾರಿಷ।।
ಪಾರ್ಥ! ಮಾರಿಷ! ಹಾಗೆ ಸೇನಾಮುಖದಲ್ಲಿ ಪಾಂಡವರಿಂದ ಅವರು ನಾಶಗೊಳ್ಳುತ್ತಿರಲು ಭೀಷ್ಮನು ಉಗ್ರ ಶರವರ್ಷಗಳನ್ನು ಸುರಿಸಿದನು.
08051027a ಸ ಚೇದಿಕಾಶಿಪಾಂಚಾಲಾನ್ಕರೂಷಾನ್ಮತ್ಸ್ಯಕೇಕಯಾನ್।
08051027c ಶರೈಃ ಪ್ರಚ್ಛಾದ್ಯ ನಿಧನಮನಯತ್ಪರುಷಾಸ್ತ್ರವಿತ್।।
ಮಹಾಸ್ತ್ರಗಳನ್ನು ತಿಳಿದಿದ್ದ ಅವನು ಚೇದಿ, ಕಾಶಿ, ಪಾಂಚಾಲ, ಕರೂಷ, ಮತ್ಸ್ಯ ಕೇಕಯರನ್ನು ಶರಗಳಿಂದ ಮುಚ್ಚಿ ಸಂಹರಿಸಿದನು.
08051028a ತಸ್ಯ ಚಾಪಚ್ಯುತೈರ್ಬಾಣೈಃ ಪರದೇಹವಿದಾರಣೈಃ।
08051028c ಪೂರ್ಣಮಾಕಾಶಮಭವದ್ರುಕ್ಮಪುಂಖೈರಜಿಹ್ಮಗೈಃ।।
ಅವನ ಚಾಪದಿಂದ ಹೊರಟ ಶತ್ರುದೇಹಗಳನ್ನು ಕೊರೆಯುವಂತಹ, ರುಕ್ಮಪುಂಖಗಳ ಜಿಹ್ಮಗ ಬಾಣಗಳಿಂದ ಆಕಾಶವೇ ತುಂಬಿಹೋಗಿತ್ತು.
08051029a ಗತ್ಯಾ ದಶಮ್ಯಾ ತೇ ಗತ್ವಾ ಜಘ್ನುರ್ವಾಜಿರಥದ್ವಿಪಾನ್।
08051029c ಹಿತ್ವಾ ನವ ಗತೀರ್ದುಷ್ಟಾಃ ಸ ಬಾಣಾನ್ವ್ಯಾಯತೋಽಮುಚತ್।।
ಅವನು ಒಂಭತ್ತು ಬಗೆಯ ದುಷ್ಟಬಾಣಪ್ರಯೋಗಗಳ ಮಾರ್ಗಗಳನ್ನು ತ್ಯಜಿಸಿ ಹತ್ತನೆಯ ಮಾರ್ಗವನ್ನು ಬಳಸಿ ಕುದುರೆ-ಆನೆ-ರಥಗಳನ್ನು ಸಂಹರಿಸಿದನು.
08051030a ದಿನಾನಿ ದಶ ಭೀಷ್ಮೇಣ ನಿಘ್ನತಾ ತಾವಕಂ ಬಲಂ।
08051030c ಶೂನ್ಯಾಃ ಕೃತಾ ರಥೋಪಸ್ಥಾ ಹತಾಶ್ಚ ಗಜವಾಜಿನಃ।।
ಹತ್ತುದಿನಗಳ ಪರ್ಯಂತವಾಗಿ ಭೀಷ್ಮನು ನಿನ್ನ ಸೇನೆಯಲ್ಲಿ ರಥಾರೂಡರನ್ನು ಶೂನ್ಯರನ್ನಾಗಿ ಮಾಡಿದನು ಮತ್ತು ಆನೆ-ಕುದುರೆಗಳನ್ನು ಸಂಹರಿಸಿದನು.
08051031a ದರ್ಶಯಿತ್ವಾತ್ಮನೋ ರೂಪಂ ರುದ್ರೋಪೇಂದ್ರಸಮಂ ಯುಧಿ।
08051031c ಪಾಂಡವಾನಾಮನೀಕಾನಿ ಪ್ರವಿಗಾಹ್ಯ ವ್ಯಶಾತಯತ್।।
ಯುದ್ಧದಲ್ಲಿ ರುದ್ರ ಮತ್ತು ಉಪೇಂದ್ರರ ಸಮನಾದ ತನ್ನ ರೂಪವನ್ನು ತೋರಿಸುತ್ತಾ ಅವನು ಪಾಂಡವರ ಸೇನೆಯಲ್ಲಿ ಆರಿಸಿ ನಾಶಗೊಳಿಸುತ್ತಿದ್ದನು.
08051032a ವಿನಿಘ್ನನ್ಪೃಥಿವೀಪಾಲಾಂಶ್ಚೇದಿಪಾಂಚಾಲಕೇಕಯಾನ್।
08051032c ವ್ಯದಹತ್ಪಾಂಡವೀಂ ಸೇನಾಂ ನರಾಶ್ವಗಜಸಂಕುಲಾಂ।।
ಚೇದಿ-ಪಾಂಚಾಲ-ಕೇಕಯ ಪೃಥ್ವೀಪಾಲರನ್ನು ಸಂಹರಿಸಿ ಪಾಂಡವೀ ಸೇನೆಯ ನರ-ಅಶ್ವ-ಗಜ ಸಂಕುಲಗಳನ್ನು ದಹಿಸಿದನು.
08051033a ಮಜ್ಜಂತಮಾಪ್ಲವೇ ಮಂದಮುಜ್ಜಿಹೀರ್ಷುಃ ಸುಯೋಧನಂ।
08051033c ತಥಾ ಚರಂತಂ ಸಮರೇ ತಪಂತಮಿವ ಭಾಸ್ಕರಂ।
08051033e ನ ಶೇಕುಃ ಸೃಂಜಯಾ ದ್ರಷ್ಟುಂ ತಥೈವಾನ್ಯೇ ಮಹೀಕ್ಷಿತಃ।।
ಸುಳಿಯಲ್ಲಿ ಮುಳುಗಿಹೋಗುವವನಂತಿದ್ದ ಮಂದ ಸುಯೋಧನನನ್ನು ಗೆಲ್ಲಿಸಲು ಬಯಸಿ ಸಮರದಲ್ಲಿ ಸುಡುತ್ತಿರುವ ಸೂರ್ಯನಂತೆ ಸಂಚರಿಸುತ್ತಿದ್ದ ಅವನನ್ನು ಸೃಂಜಯರೂ ಅನ್ಯ ಮಹೀಕ್ಷಿತರೂ ನೋಡಲೂ ಕೂಡ ಶಕ್ಯರಾಗುತ್ತಿರಲಿಲ್ಲ.
08051034a ವಿಚರಂತಂ ತಥಾ ತಂ ತು ಸಂಗ್ರಾಮೇ ಜಿತಕಾಶಿನಂ।
08051034c ಸರ್ವೋದ್ಯೋಗೇನ ಸಹಸಾ ಪಾಂಡವಾಃ ಸಮುಪಾದ್ರವನ್।।
ಸಂಗ್ರಾಮದಲ್ಲಿ ಜಯವನ್ನು ಬಯಸಿ ಹಾಗೆ ಸಂಚರಿಸುತ್ತಿರುವ ಅವನನ್ನು ಪಾಂಡವರು ಸರ್ವ ಪ್ರಯತ್ನದಿಂದ ಆಕ್ರಮಣಿಸಿದರು.
08051035a ಸ ತು ವಿದ್ರಾವ್ಯ ಸಮರೇ ಪಾಂಡವಾನ್ಸೃಂಜಯಾನಪಿ।
08051035c ಏಕ ಏವ ರಣೇ ಭೀಷ್ಮ ಏಕವೀರತ್ವಮಾಗತಃ।।
ಆದರೆ ಭೀಷ್ಮನು ಸಮರದಲ್ಲಿ ಪಾಂಡವರನ್ನೂ ಸೃಂಜಯರನ್ನೂ ಪಲಾಯನಗೊಳಿಸಿ ಅವನೊಬ್ಬನೇ ರಣದಲ್ಲಿ ಏಕವೀರತ್ವವನ್ನು ಪಡೆದನು.
08051036a ತಂ ಶಿಖಂಡೀ ಸಮಾಸಾದ್ಯ ತ್ವಯಾ ಗುಪ್ತೋ ಮಹಾರಥಂ।
08051036c ಜಘಾನ ಪುರುಷವ್ಯಾಘ್ರಂ ಶರೈಃ ಸಂನತಪರ್ವಭಿಃ।।
ಆಗ ಆ ಮಹಾರಥ ಪುರುಷವ್ಯಾಘ್ರನನ್ನು ನಿನ್ನಿಂದ ರಕ್ಷಿತನಾದ ಶಿಖಂಡಿಯು ಎದುರಿಸಿ ಸನ್ನತಪರ್ವ ಶರಗಳಿಂದ ಕೆಳಗುರುಳಿಸಿದನು.
08051037a ಸ ಏಷ ಪತಿತಃ ಶೇತೇ ಶರತಲ್ಪೇ ಪಿತಾಮಹಃ।
08051037c ತ್ವಾಂ ಪ್ರಾಪ್ಯ ಪುರುಷವ್ಯಾಘ್ರ ಗೃಧ್ರಃ ಪ್ರಾಪ್ಯೇವ ವಾಯಸಂ।।
ಪುರುಷವ್ಯಾಘ್ರ! ನಿನ್ನನ್ನು ಶತ್ರುವನ್ನಾಗಿ ಪಡೆದ ಪಿತಾಮಹನು ಈಗ ಶರತಲ್ಪದ ಮೇಲೆ ಮಲಗಿದ್ದಾನೆ!
08051038a ದ್ರೋಣಃ ಪಂಚ ದಿನಾನ್ಯುಗ್ರೋ ವಿಧಮ್ಯ ರಿಪುವಾಹಿನೀಃ।
08051038c ಕೃತ್ವಾ ವ್ಯೂಹಂ ಮಹಾಯುದ್ಧೇ ಪಾತಯಿತ್ವಾ ಮಹಾರಥಾನ್।।
ಉಗ್ರ ದ್ರೋಣನು ವ್ಯೂಹವನ್ನು ರಚಿಸಿ ಮಹಾರಥರನ್ನು ಉರುಳಿಸುತ್ತಾ ಶತ್ರುಸೇನೆಯನ್ನು ಭೇದಿಸಿ ಐದು ದಿನಗಳ ಮಹಾಯುದ್ಧವನ್ನು ನಡೆಸಿದನು.
08051039a ಜಯದ್ರಥಸ್ಯ ಸಮರೇ ಕೃತ್ವಾ ರಕ್ಷಾಂ ಮಹಾರಥಃ।
08051039c ಅಂತಕಪ್ರತಿಮಶ್ಚೋಗ್ರಾಂ ರಾತ್ರಿಂ ಯುದ್ಧ್ವಾದಹತ್ಪ್ರಜಾಃ।।
ಆ ಮಹಾರಥನು ಸಮರದಲ್ಲಿ ಜಯದ್ರಥನ ರಕ್ಷಣೆಯನ್ನು ಮಾಡಿ ಉಗ್ರವಾದ ರಾತ್ರಿಯಲ್ಲಿ ಅಂತಕನಂತೆ ಯುದ್ಧಮಾಡಿ ಸೇನೆಗಳನ್ನು ದಹಿಸಿದನು.
08051040a ಅದ್ಯೇತಿ ದ್ವೇ ದಿನೇ ವೀರೋ ಭಾರದ್ವಾಜಃ ಪ್ರತಾಪವಾನ್।
08051040c ಧೃಷ್ಟದ್ಯುಮ್ನಂ ಸಮಾಸಾದ್ಯ ಸ ಗತಃ ಪರಮಾಂ ಗತಿಂ।।
ಇಂದಿನಿಂದ ಎರಡು ದಿನಗಳ ಹಿಂದೆ ವೀರ ಪ್ರತಾಪವಾನ್ ಭಾರದ್ವಾಜನು ಧೃಷ್ಟದ್ಯುಮ್ನನನ್ನು ಎದುರಿಸಿ ಪರಮಗತಿಯನ್ನು ಪಡೆದನು.
08051041a ಯದಿ ಚೈವ ಪರಾನ್ಯುದ್ಧೇ ಸೂತಪುತ್ರಮುಖಾನ್ರಥಾನ್।
08051041c ನಾವಾರಯಿಷ್ಯಃ ಸಂಗ್ರಾಮೇ ನ ಸ್ಮ ದ್ರೋಣೋ ವ್ಯನಂಕ್ಷ್ಯತ।।
ಆಗ ನೀನು ಯುದ್ಧದಲ್ಲಿ ಸೂತಪುತ್ರನೇ ಮೊದಲಾದ ಶತ್ರುಪಕ್ಷದ ರಥರನ್ನು ತಡೆಯದೇ ಇದ್ದಿದ್ದರೆ ಸಂಗ್ರಾಮದಲ್ಲಿ ನಾವು ದ್ರೋಣನನ್ನು ನಾಶಪಡಿಸಲು ಸಾಧ್ಯವಾಗುತ್ತಿರಲಿಲ್ಲ.
08051042a ಭವತಾ ತು ಬಲಂ ಸರ್ವಂ ಧಾರ್ತರಾಷ್ಟ್ರಸ್ಯ ವಾರಿತಂ।
08051042c ತತೋ ದ್ರೋಣೋ ಹತೋ ಯುದ್ಧೇ ಪಾರ್ಷತೇನ ಧನಂಜಯ।।
ಧನಂಜಯ! ನೀನು ಧಾರ್ತರಾಷ್ಟ್ರನ ಸರ್ವ ಸೇನೆಯನ್ನು ತಡೆದುದರಿಂದಲೇ ಯುದ್ಧದಲ್ಲಿ ದ್ರೋಣನು ಪಾರ್ಷತನಿಂದ ಹತನಾದನು.
08051043a ಕ ಇವಾನ್ಯೋ ರಣೇ ಕುರ್ಯಾತ್ತ್ವದನ್ಯಃ ಕ್ಷತ್ರಿಯೋ ಯುಧಿ।
08051043c ಯಾದೃಶಂ ತೇ ಕೃತಂ ಪಾರ್ಥ ಜಯದ್ರಥವಧಂ ಪ್ರತಿ।।
ಪಾರ್ಥ! ಜಯದ್ರಥನ ವಧೆಗಾಗಿ ನೀನು ರಣದಲ್ಲಿ ಮಾಡಿದಂತೆ ಯುದ್ಧದಲ್ಲಿ ಮಾಡಬಲ್ಲ ಬೇರೆ ಯಾವ ಕ್ಷತ್ರಿಯನು ಇದ್ದಾನೆ?
08051044a ನಿವಾರ್ಯ ಸೇನಾಂ ಮಹತೀಂ ಹತ್ವಾ ಶೂರಾಂಶ್ಚ ಪಾರ್ಥಿವಾನ್।
08051044c ನಿಹತಃ ಸೈಂದವೋ ರಾಜಾ ತ್ವಯಾಸ್ತ್ರಬಲತೇಜಸಾ।।
ಅಸ್ತ್ರಬಲತೇಜಸ್ಸಿನಿಂದ ನೀನು ಶೂರ ಪಾರ್ಥಿವವನ್ನು ಸಂಹರಿಸಿ, ಮಹಾಸೇನೆಯನ್ನು ತಡೆದು ನಿಲ್ಲಿಸಿ, ರಾಜಾ ಸೈಂಧವನನ್ನು ಸಂಹರಿಸಿದೆ.
08051045a ಆಶ್ಚರ್ಯಂ ಸಿಂದುರಾಜಸ್ಯ ವಧಂ ಜಾನಂತಿ ಪಾರ್ಥಿವಾಃ।
08051045c ಅನಾಶ್ಚರ್ಯಂ ಹಿ ತತ್ತ್ವತ್ತಸ್ತ್ವಂ ಹಿ ಪಾರ್ಥ ಮಹಾರಥಃ।।
ಸಿಂಧುರಾಜನ ವಧೆಯನ್ನು ಒಂದು ಆಶ್ಚರ್ಯವೆಂದೇ ಪಾರ್ಥಿವರು ತಿಳಿದುಕೊಂಡಿದ್ದಾರೆ. ಆದರೆ ಪಾರ್ಥ! ಮಹಾರಥನಾದ ನಿನಗೆ ಇದೊಂದು ಆಶ್ಚರ್ಯಕರವಾದುದೇನಲ್ಲ!
08051046a ತ್ವಾಂ ಹಿ ಪ್ರಾಪ್ಯ ರಣೇ ಕ್ಷತ್ರಮೇಕಾಹಾದಿತಿ ಭಾರತ।
08051046c ತಪ್ಯಮಾನಮಸಂಯುಕ್ತಂ ನ ಭವೇದಿತಿ ಮೇ ಮತಿಃ।।
ಭಾರತ! ಕ್ಷತ್ರಿಯರೆಲ್ಲರೂ ಒಟ್ಟಾಗಿ ರಣದಲ್ಲಿ ನಿನ್ನನ್ನು ಎದುರಿಸಿದರೆ ಒಂದೇ ಹಗಲಿನಲ್ಲಿ ಸುಟ್ಟುಹೋಗುತ್ತಾರೆ ಎಂದು ನನ್ನ ಅಭಿಪ್ರಾಯ!
08051047a ಸೇಯಂ ಪಾರ್ಥ ಚಮೂರ್ಘೋರಾ ಧಾರ್ತರಾಷ್ಟ್ರಸ್ಯ ಸಂಯುಗೇ।
08051047c ಹತಾ ಸಸರ್ವವೀರಾ ಹಿ ಭೀಷ್ಮದ್ರೋಣೌ ಯದಾ ಹತೌ।।
ಪಾರ್ಥ! ಯುದ್ಧದಲ್ಲಿ ಭೀಷ್ಮದ್ರೋಣರು ಹತರಾದಾಗಲೇ ಸರ್ವವೀರರೊಂದಿಗೆ ಧಾರ್ತರಾಷ್ಟ್ರನ ಘೋರ ಸೇನೆಯು ನಾಶವಾಗಿ ಹೋಯಿತು.
08051048a ಶೀರ್ಣಪ್ರವರಯೋಧಾದ್ಯ ಹತವಾಜಿನರದ್ವಿಪಾ।
08051048c ಹೀನಾ ಸೂರ್ಯೇಂದುನಕ್ಷತ್ರೈರ್ದ್ಯೌರಿವಾಭಾತಿ ಭಾರತೀ।।
ಯೋಧಪ್ರವರರಿಂದ ಕ್ಷೀಣವಾಗಿರುವ, ಕುದುರೆ-ಸೈನಿಕ-ಆನೆಗಳು ಹತವಾಗಿರುವ ಭಾರತೀ ಸೇನೆಯು ಸೂರ್ಯ-ಚಂದ್ರ-ನಕ್ಷತ್ರಗಳ ಬೆಳಕಿನಿಂದ ಹೀನವಾಗಿರುವ ಆಕಾಶದಂತೆ ತೋರುತ್ತಿದೆ.
08051049a ವಿಧ್ವಸ್ತಾ ಹಿ ರಣೇ ಪಾರ್ಥ ಸೇನೇಯಂ ಭೀಮವಿಕ್ರಮಾತ್।
08051049c ಆಸುರೀವ ಪುರಾ ಸೇನಾ ಶಕ್ರಸ್ಯೇವ ಪರಾಕ್ರಮೈಃ।।
ಪಾರ್ಥ! ಹಿಂದೆ ಪರಾಕ್ರಮದಿಂದ ಶಕ್ರನು ಅಸುರ ಸೇನೆಯನ್ನು ಮಾಡಿದಂತೆ ನೀನೂ ಕೂಡ ರಣದಲ್ಲಿ ಭೀಮವಿಕ್ರಮದಿಂದ ಈ ಸೇನೆಯನ್ನು ಧ್ವಂಸಗೊಳಿಸು!
08051050a ತೇಷಾಂ ಹತಾವಶಿಷ್ಟಾಸ್ತು ಪಂಚ ಸಂತಿ ಮಹಾರಥಾಃ।
08051050c ಅಶ್ವತ್ಥಾಮಾ ಕೃತವರ್ಮಾ ಕರ್ಣೋ ಮದ್ರಾಧಿಪಃ ಕೃಪಃ।।
ಅವರಲ್ಲಿ ಅಳಿದುಳಿದವರು ಐವರು ಮಹಾರಥರಿದ್ದಾರೆ: ಅಶ್ವತ್ಥಾಮ, ಕೃತವರ್ಮ, ಕರ್ಣ, ಮದ್ರಾಧಿಪ ಮತ್ತು ಕೃಪ.
08051051a ತಾಂಸ್ತ್ವಮದ್ಯ ನರವ್ಯಾಘ್ರ ಹತ್ವಾ ಪಂಚ ಮಹಾರಥಾನ್।
08051051c ಹತಾಮಿತ್ರಃ ಪ್ರಯಚ್ಚೋರ್ವೀಂ ರಾಜ್ಞಃ ಸದ್ವೀಪಪತ್ತನಾಂ।।
ನರವ್ಯಾಘ್ರ! ಆ ಐವರು ಮಹಾರಥರನ್ನು ಇಂದು ಸಂಹರಿಸಿ ಶತ್ರುಗಳಿಲ್ಲದ ದ್ವೀಪ-ಪಟ್ಟಣಗಳಿಂದೊಡಗೂಡಿದ ಈ ಪೃಥ್ವಿಯನ್ನು ರಾಜನಿಗೊಪ್ಪಿಸು!
08051052a ಸಾಕಾಶಜಲಪಾತಾಲಾಂ ಸಪರ್ವತಮಹಾವನಾಂ।
08051052c ಪ್ರಾಪ್ನೋತ್ವಮಿತವೀರ್ಯಶ್ರೀರದ್ಯ ಪಾರ್ಥೋ ವಸುಂಧರಾಂ।।
ಆ ಅಮಿತವೀರ್ಯಪಾರ್ಥನು ಇಂದು ಆಕಾಶ-ಜಲ-ಪಾತಾಳಗಳೊಂದಿಗೆ ಮತ್ತು ಪರ್ವತ-ಮಹಾವನಗಳೊಂದಿಗೆ ಈ ವಸುಂಧರೆಯನ್ನೂ ಶ್ರೀಯನ್ನು ಪಡೆಯಲಿ!
08051053a ಏತಾಂ ಪುರಾ ವಿಷ್ಣುರಿವ ಹತ್ವಾ ದೈತೇಯದಾನವಾನ್।
08051053c ಪ್ರಯಚ್ಚ ಮೇದಿನೀಂ ರಾಜ್ಞೇ ಶಕ್ರಾಯೇವ ಯಥಾ ಹರಿಃ।।
ಹಿಂದೆ ವಿಷ್ಣು ಹರಿಯು ದೈತ್ಯ-ದಾನವರನ್ನು ಸಂಹರಿಸಿ ಮೇದಿನಿಯನ್ನು ರಾಜ ಶಕ್ರನಿಗೆ ಇತ್ತಂತೆಯೇ ಆಗಲಿ.
08051054a ಅದ್ಯ ಮೋದಂತು ಪಾಂಚಾಲಾ ನಿಹತೇಷ್ವರಿಷು ತ್ವಯಾ।
08051054c ವಿಷ್ಣುನಾ ನಿಹತೇಷ್ವೇವ ದಾನವೇಯೇಷು ದೇವತಾಃ।।
ವಿಷ್ಣುವಿನಿಂದ ದಾನವೇಯರು ಹತರಾದಾಗ ದೇವತೆಗಳು ಹೇಗೋ ಹಾಗೆ ನಿನ್ನಿಂದ ಶತ್ರುಗಳು ಹತರಾಗಲು ಇಂದು ಪಾಂಚಾಲರು ಮೋದಿಸುತ್ತಾರೆ.
08051055a ಯದಿ ವಾ ದ್ವಿಪದಾಂ ಶ್ರೇಷ್ಠ ದ್ರೋಣಂ ಮಾನಯತೋ ಗುರುಂ।
08051055c ಅಶ್ವತ್ಥಾಮ್ನಿ ಕೃಪಾ ತೇಽಸ್ತಿ ಕೃಪೇ ಚಾಚಾರ್ಯಗೌರವಾತ್।।
ಒಂದುವೇಳೆ ನೀನು ದ್ವಿಪದರಲ್ಲಿ ಶ್ರೇಷ್ಠ ಗುರು ದ್ರೋಣನನ್ನು ಗೌರವಿಸಿ ಅಶ್ವತ್ಥಾಮನನ್ನು ಸಂಹರಿಸದಿರಬಹುದು. ಮತ್ತು ಆಚಾರ್ಯ ಗೌರವದಿಂದ ಕೃಪನನ್ನು ಸಂಹರಿಸದಿರಬಹುದು.
08051056a ಅತ್ಯಂತೋಪಚಿತಾನ್ವಾ ತ್ವಂ ಮಾನಯನ್ಭ್ರಾತೃಬಾಂದವಾನ್।
08051056c ಕೃತವರ್ಮಾಣಮಾಸಾದ್ಯ ನ ನೇಷ್ಯಸಿ ಯಮಕ್ಷಯಂ।।
ಅಥವಾ ಅತ್ಯಂತ ಅನುಪಚಿತವೆಂದು ನೀನು ಭ್ರಾತೃಬಾಂಧವರನ್ನು ಮನ್ನಿಸಿ ಕೃತವರ್ಮನನ್ನು ಯಮಕ್ಷಯಕ್ಕೆ ಕಳುಹಿಸುವುದು ಅಸಾಧ್ಯವೆಂದು ತಿಳಿದಿರಬಹುದು.
08051057a ಭ್ರಾತರಂ ಮಾತುರಾಸಾದ್ಯ ಶಲ್ಯಂ ಮದ್ರಜನಾಧಿಪಂ।
08051057c ಯದಿ ತ್ವಮರವಿಂದಾಕ್ಷ ದಯಾವಾನ್ನ ಜಿಘಾಂಸಸಿ।।
ಅರವಿಂದಾಕ್ಷ! ತಾಯಿಯ ಅಣ್ಣ ಮದ್ರಜನಾಧಿಪ ಶಲ್ಯನನ್ನು ಎದುರಿಸಿ ದಯೆಯಿಂದ ಕೊಲ್ಲಲು ನೀನು ಇಷ್ಟಪಡದಿರಬಹುದು.
08051058a ಇಮಂ ಪಾಪಮತಿಂ ಕ್ಷುದ್ರಮತ್ಯಂತಂ ಪಾಂಡವಾನ್ಪ್ರತಿ।
08051058c ಕರ್ಣಮದ್ಯ ನರಶ್ರೇಷ್ಠ ಜಹ್ಯಾಶು ನಿಶಿತೈಃ ಶರೈಃ।।
ಆದರೆ ನರಶ್ರೇಷ್ಠ! ಇಂದು ಈ ಪಾಪಮತಿ, ಪಾಂಡವರ ಪ್ರತಿ ಅತ್ಯಂತ ಕ್ಷುದ್ರನಾಗಿರುವ ಕರ್ಣನನ್ನು ಮಾತ್ರ ನಿಶಿತ ಶರಗಳಿಂದ ಸಂಹರಿಸಬೇಕು!
08051059a ಏತತ್ತೇ ಸುಕೃತಂ ಕರ್ಮ ನಾತ್ರ ಕಿಂ ಚಿನ್ನ ಯುಜ್ಯತೇ।
08051059c ವಯಮಪ್ಯತ್ರ ಜಾನೀಮೋ ನಾತ್ರ ದೋಷೋಽಸ್ತಿ ಕಶ್ಚನ।।
ಇದೇ ನಿನ್ನ ಸುಕೃತ ಕರ್ಮ. ಅಲ್ಲಿ ಯೋಚಿಸಬೇಕಾದುದು ಏನೂ ಇಲ್ಲ. ನಾನೂ ಕೂಡ ನಿನಗೆ ಅನುಜ್ಞೆನೀಡುತ್ತಿದ್ದೇನೆ. ಅದರಲ್ಲಿ ಯಾವ ದೋಷವೂ ಇಲ್ಲ.
08051060a ದಹನೇ ಯತ್ಸಪುತ್ರಾಯಾ ನಿಶಿ ಮಾತುಸ್ತವಾನಘ।
08051060c ದ್ಯೂತಾರ್ಥೇ ಯಚ್ಚ ಯುಷ್ಮಾಸು ಪ್ರಾವರ್ತತ ಸುಯೋಧನಃ।
08051060e ತತ್ರ ಸರ್ವತ್ರ ದುಷ್ಟಾತ್ಮಾ ಕರ್ಣೋ ಮೂಲಮಿಹಾರ್ಜುನ।।
ಅರ್ಜುನ! ಅನಘ! ಪುತ್ರರೊಂದಿಗೆ ನಿನ್ನ ತಾಯಿಯನ್ನು ರಾತ್ರಿವೇಳೆಯಲ್ಲಿ ಸುಯೋಧನನು ಸುಡಲು ಪ್ರಯತ್ನಿಸಿದುದು ಮತ್ತು ನಿಮ್ಮನ್ನು ದ್ಯೂತದಲ್ಲಿ ತೊಡಗಿಸಿದುದು ಇವೆಲ್ಲದರ ಮೂಲವು ದುಷ್ಟಾತ್ಮ ಕರ್ಣನೇ ಆಗಿದ್ದಾನೆ.
08051061a ಕರ್ಣಾದ್ಧಿ ಮನ್ಯತೇ ತ್ರಾಣಂ ನಿತ್ಯಮೇವ ಸುಯೋಧನಃ।
08051061c ತತೋ ಮಾಮಪಿ ಸಂರಬ್ಧೋ ನಿಗ್ರಹೀತುಂ ಪ್ರಚಕ್ರಮೇ।।
ಕರ್ಣನೇ ತನ್ನ ತ್ರಾಣವೆಂದು ನಿತ್ಯವೂ ಸುಯೋಧನನು ತಿಳಿದುಕೊಂಡಿದ್ದಾನೆ. ಆದುದರಿಂದಲೇ ಅವನು ಸಂರಬ್ಧನಾಗಿ ನನ್ನನ್ನು ಕೂಡ ಬಂಧಿಸಲು ಪ್ರಯತ್ನಿಸಿದನು.
08051062a ಸ್ಥಿರಾ ಬುದ್ಧಿರ್ನರೇಂದ್ರಸ್ಯ ಧಾರ್ತರಾಷ್ಟ್ರಸ್ಯ ಮಾನದ।
08051062c ಕರ್ಣಃ ಪಾರ್ಥಾನ್ರಣೇ ಸರ್ವಾನ್ವಿಜೇಷ್ಯತಿ ನ ಸಂಶಯಃ।।
ಮಾನದ! ನರೇಂದ್ರ ಧಾರ್ತರಾಷ್ಟ್ರನ ಸ್ಥಿರ ಬುದ್ಧಿಯಾಗಿರುವ ಕರ್ಣನು ರಣದಲ್ಲಿ ಪಾರ್ಥರೆಲ್ಲರನ್ನೂ ಜಯಿಸುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.
08051063a ಕರ್ಣಮಾಶ್ರಿತ್ಯ ಕೌಂತೇಯ ಧಾರ್ತರಾಷ್ಟ್ರೇಣ ವಿಗ್ರಹಃ।
08051063c ರೋಚಿತೋ ಭವತಾ ಸಾರ್ಧಂ ಜಾನತಾಪಿ ಬಲಂ ತವ।।
ಕೌಂತೇಯ! ಕರ್ಣನನ್ನು ಆಶ್ರಯಿಸಿ ಧಾರ್ತರಾಷ್ಟ್ರನು ನಿನ್ನ ಬಲವನ್ನು ತಿಳಿದೂ ಕೂಡ ನಿಮ್ಮೊಂದಿಗೆ ಯುದ್ಧಮಾಡಲು ಬಯಸಿದನು.
08051064a ಕರ್ಣೋ ಹಿ ಭಾಷತೇ ನಿತ್ಯಮಹಂ ಪಾರ್ಥಾನ್ಸಮಾಗತಾನ್।
08051064c ವಾಸುದೇವಂ ಸರಾಜಾನಂ ವಿಜೇಷ್ಯಾಮಿ ಮಹಾರಣೇ।।
ಏಕೆಂದರೆ “ನಾನು ಪಾರ್ಥರನ್ನೂ ವಾಸುದೇವನನ್ನೂ ಅವರೊಡನೆ ಸೇರಿರುವ ರಾಜರೊಂದಿಗೆ ಮಹಾರಣದಲ್ಲಿ ಜಯಿಸುತ್ತೇನೆ!” ಎಂದು ಕರ್ಣನು ನಿತ್ಯವೂ ಹೇಳುತ್ತಿರುತ್ತಾನೆ.
08051065a ಪ್ರೋತ್ಸಾಹಯನ್ದುರಾತ್ಮಾನಂ ಧಾರ್ತರಾಷ್ಟ್ರಂ ಸುದುರ್ಮತಿಃ।
08051065c ಸಮಿತೌ ಗರ್ಜತೇ ಕರ್ಣಸ್ತಮದ್ಯ ಜಹಿ ಭಾರತ।।
ಭಾರತ! ದುರಾತ್ಮ ಧಾರ್ತರಾಷ್ಟ್ರನನ್ನು ಪ್ರೋತ್ಸಾಹಿಸುತ್ತಾ ಇಬ್ಬರೂ ಒಂದಾಗಿ ಗರ್ಜಿಸುತ್ತಿರುವ ಸುದುರ್ಮತಿ ಕರ್ಣನನ್ನು ನೀನು ಇಂದು ಸಂಹರಿಸು!
08051066a ಯಚ್ಚ ಯುಷ್ಮಾಸು ಪಾಪಂ ವೈ ಧಾರ್ತರಾಷ್ಟ್ರಃ ಪ್ರಯುಕ್ತವಾನ್।
08051066c ತತ್ರ ಸರ್ವತ್ರ ದುಷ್ಟಾತ್ಮಾ ಕರ್ಣಃ ಪಾಪಮತಿರ್ಮುಖಂ।।
ನಿಮ್ಮೊಡನೆ ಧಾರ್ತರಾಷ್ಟ್ರನು ಏನೆಲ್ಲ ಪಾಪವನ್ನೆಸಗಿದ್ದಾನೋ ಅವೆಲ್ಲದರ ಮುಖವಾಗಿ ದುಷ್ಟಾತ್ಮಾ ಪಾಪಮತಿ ಕರ್ಣನಿದ್ದನು.
08051067a ಯಚ್ಚ ತದ್ಧಾರ್ತರಾಷ್ಟ್ರಾಣಾಂ ಕ್ರೂರೈಃ ಷಡ್ಭಿರ್ಮಹಾರಥೈಃ।
08051067c ಅಪಶ್ಯಂ ನಿಹತಂ ವೀರಂ ಸೌಭದ್ರಂ ಋಷಭೇಕ್ಷಣಂ।।
08051068a ದ್ರೋಣದ್ರೌಣಿಕೃಪಾನ್ವೀರಾನ್ಕಂಪಯಂತೋ ಮಹಾರಥಾನ್।
08051068c ನಿರ್ಮನುಷ್ಯಾಂಶ್ಚ ಮಾತಂಗಾನ್ವಿರಥಾಂಶ್ಚ ಮಹಾರಥಾನ್।।
08051069a ವ್ಯಶ್ವಾರೋಹಾಂಶ್ಚ ತುರಗಾನ್ಪತ್ತೀನ್ವ್ಯಾಯುಧಜೀವಿತಾನ್।
08051069c ಕುರ್ವಂತಂ ಋಷಭಸ್ಕಂದಂ ಕುರುವೃಷ್ಣಿಯಶಸ್ಕರಂ।।
ಮಹಾರಥರಾದ ವೀರ ದ್ರೋಣ, ದ್ರೌಣಿ ಮತ್ತು ಕೃಪರನ್ನು ಕಂಪಿಸುತ್ತಾ, ಮಾತಂಗಗಳನ್ನು ನಿರ್ಮನುಷ್ಯರನ್ನಾಗಿಸುತ್ತಾ, ಮಹಾರಥರನ್ನು ವಿರಥರನ್ನಾಗಿಸುತ್ತಾ, ಕುದುರೆಗಳನ್ನು ಅಶ್ವಾರೋಹಿಗಳಿಂದ ವಿಹೀನರನ್ನಾಗಿಸುತ್ತಾ, ಪದಾತಿಗಳ ಆಯುಧ ಮತ್ತು ಜೀವಗಳನ್ನು ತೆಗೆಯುತ್ತಿದ್ದ ಆ ಋಷಭಸ್ಕಂಧ, ಕುರು-ವೃಷ್ಣಿ ಯಶಸ್ಕರ ಋಷಭೇಕ್ಷಣ ವೀರ ಸೌಭದ್ರನು ಧಾರ್ತರಾಷ್ಟ್ರರ ಆ ಕ್ರೂರ ಷಢ್ಮಹಾರಥರಿಂದ ಹತನಾದುದನ್ನು ನಾವು ನೋಡಿದೆವು.
08051070a ವಿಧಮಂತಮನೀಕಾನಿ ವ್ಯಥಯಂತಂ ಮಹಾರಥಾನ್।
08051070c ಮನುಷ್ಯವಾಜಿಮಾತಂಗಾನ್ಪ್ರಹಿಣ್ವಂತಂ ಯಮಕ್ಷಯಂ।।
08051071a ಶರೈಃ ಸೌಭದ್ರಮಾಯಸ್ತಂ ದಹಂತಮಿವ ವಾಹಿನೀಂ।
08051071c ತನ್ಮೇ ದಹತಿ ಗಾತ್ರಾಣಿ ಸಖೇ ಸತ್ಯೇನ ತೇ ಶಪೇ।।
ಸೇನೆಗಳನ್ನು ಧ್ವಂಸಗೊಳಿಸುತ್ತಾ, ಮಹಾರಥರನ್ನು ವ್ಯಥೆಗೊಳಿಸುತ್ತಾ, ಮನುಷ್ಯ-ಕುದುರೆ-ಮಾತಂಗಗಳನ್ನು ಯಮಕ್ಷಯಕ್ಕೆ ಕಳುಹಿಸುತ್ತಾ ಸೌಭದ್ರನು ಶರಗಳಿಂದ ವಾಹಿನಿಗಳನ್ನು ಸುಡುತ್ತಿದ್ದನು. ಸಖಾ! ನಿನ್ನ ಮೇಲೆ ಆಣೆಯನ್ನಿಟ್ಟು ಹೇಳುತ್ತಿದ್ದೇನೆ: ಅದನ್ನು ನೆನಪಿಸಿಕೊಂಡು ನನ್ನ ದೇಹವು ಸುಡುತ್ತಿದೆ!
08051072a ಯತ್ತತ್ರಾಪಿ ಚ ದುಷ್ಟಾತ್ಮಾ ಕರ್ಣೋಽಭ್ಯದ್ರುಹ್ಯತ ಪ್ರಭೋ।
08051072c ಅಶಕ್ನುವಂಶ್ಚಾಭಿಮನ್ಯೋಃ ಕರ್ಣಃ ಸ್ಥಾತುಂ ರಣೇಽಗ್ರತಃ।।
ಪ್ರಭೋ! ಅಲ್ಲಿ ಕೂಡ ದುಷ್ಟಾತ್ಮ ಕರ್ಣನ ದ್ರೋಹವಿತ್ತು. ರಣದ ಮುಂದಿದ್ದ ಅಭಿಮನ್ಯುವನ್ನು ತಡೆಯಲು ಕರ್ಣನೂ ಕೂಡ ಅಶಕ್ಯನಾಗಿದ್ದನು.
08051073a ಸೌಭದ್ರಶರನಿರ್ಭಿನ್ನೋ ವಿಸಂಜ್ಞಃ ಶೋಣಿತೋಕ್ಷಿತಃ।
08051073c ನಿಃಶ್ವಸನ್ಕ್ರೋಧಸಂದೀಪ್ತೋ ವಿಮುಖಃ ಸಾಯಕಾರ್ದಿತಃ।।
ಸೌಭದ್ರನ ಶರಗಳಿಂದ ಗಾಯಗೊಂಡು ರಕ್ತಸುರಿಸುತ್ತಿದ್ದ ಅವನು ಮೂರ್ಛೆಗೊಂಡು ಸಾಯಕಗಳಿಂದ ಪೀಡಿತನಾಗಿ ಕ್ರೋಧದಿಂದ ಉರಿದೆದ್ದು ನಿಟ್ಟುಸಿರುಬಿಡುತ್ತಾ ವಿಮುಖನಾಗಿದ್ದನು.
08051074a ಅಪಯಾನಕೃತೋತ್ಸಾಹೋ ನಿರಾಶಶ್ಚಾಪಿ ಜೀವಿತೇ।
08051074c ತಸ್ಥೌ ಸುವಿಹ್ವಲಃ ಸಂಖ್ಯೇ ಪ್ರಹಾರಜನಿತಶ್ರಮಃ।।
ಪ್ರಹಾರಗಳಿಂದ ಬಳಲಿ ಜೀವಿತದಲ್ಲಿ ನಿರಾಶನಾಗಿ ಪಲಾಯನಮಾಡಲು ಬಯಸಿ ಇವನು ರಣದಲ್ಲಿ ವಿಹ್ವಲನಾಗಿ ನಿಂತಿದ್ದನು.
08051075a ಅಥ ದ್ರೋಣಸ್ಯ ಸಮರೇ ತತ್ಕಾಲಸದೃಶಂ ತದಾ।
08051075c ಶ್ರುತ್ವಾ ಕರ್ಣೋ ವಚಃ ಕ್ರೂರಂ ತತಶ್ಚಿಚ್ಚೇದ ಕಾರ್ಮುಕಂ।।
ಆಗ ದ್ರೋಣನ ಸಮಯೋಚಿತ ಕ್ರೂರ ಸಮರೋಪಾಯವನ್ನು ಕೇಳಿ ಕರ್ಣನು ಅಭಿಮನ್ಯುವಿನ ಕಾರ್ಮುಕವನ್ನು ತುಂಡರಿಸಿದನು.
08051076a ತತಶ್ಚಿನ್ನಾಯುಧಂ ತೇನ ರಣೇ ಪಂಚ ಮಹಾರಥಾಃ।
08051076c ಸ ಚೈವ ನಿಕೃತಿಪ್ರಜ್ಞಃ ಪ್ರಾವಧೀಚ್ಚರವೃಷ್ಟಿಭಿಃ।।
ಆಯುಧವು ಭಗ್ನವಾಗಲು ರಣದಲ್ಲಿ ಅಭಿಮನ್ಯುವನ್ನು ಮೋಸಗಾರರಾದ ಆ ಐವರು ಮಹಾರಥರು ಶರವೃಷ್ಟಿಗಳಿಂದ ಮುಚ್ಚಿಬಿಟ್ಟರು.
08051077a ಯಚ್ಚ ಕರ್ಣೋಽಬ್ರವೀತ್ ಕೃಷ್ಣಾಂ ಸಭಾಯಾಂ ಪರುಷಂ ವಚಃ।
08051077c ಪ್ರಮುಖೇ ಪಾಂಡವೇಯಾನಾಂ ಕುರೂಣಾಂ ಚ ನೃಶಂಸವತ್।।
08051078a ವಿನಷ್ಟಾಃ ಪಾಂಡವಾಃ ಕೃಷ್ಣೇ ಶಾಶ್ವತಂ ನರಕಂ ಗತಾಃ।
08051078c ಪತಿಮನ್ಯಂ ಪೃಥುಶ್ರೋಣಿ ವೃಣೀಷ್ವ ಮಿತಭಾಷಿಣಿ।।
08051079a ಲೇಖಾಭ್ರು ಧೃತರಾಷ್ಟ್ರಸ್ಯ ದಾಸೀ ಭೂತ್ವಾ ನಿವೇಶನಂ।
08051079c ಪ್ರವಿಶಾರಾಲಪಕ್ಷ್ಮಾಕ್ಷಿ ನ ಸಂತಿ ಪತಯಸ್ತವ।।
ಸಭೆಯಲ್ಲಿ ಕರ್ಣನು ಕೃಷ್ಣೆಗೆ ಪಾಂಡವೇಯರ ಮತ್ತು ಕುರುಗಳ ಪ್ರಮುಖವೇ ಕರುಣೆಯಿಲ್ಲದವನಂತೆ ಈ ಕಠೋರ ಮಾತುಗಳನ್ನಾಡಿರಲಿಲ್ಲವೇ? “ಕೃಷ್ಣೇ! ಪಾಂಡವರು ವಿನಷ್ಟರಾಗಿ ಶಾಶ್ವತ ನರಕಕ್ಕೆ ಹೋಗಿಬಿಟ್ಟಿದ್ದಾರೆ! ಪೃಥುಶ್ರೋಣೀ! ಮಿತಭಾಷಿಣೀ! ಬೇರೆ ಯಾರನ್ನಾದರೂ ಪತಿಯನ್ನಾಗಿ ಆರಿಸಿಕೋ! ಲೇಖಾಭ್ರು! ಅರಾಲಪಕ್ಷ್ಮಾಕ್ಷೀ! ಧೃತರಾಷ್ಟ್ರನ ದಾಸಿಯಾಗಿ ಅವನ ಮನೆಯನ್ನು ಪ್ರವೇಶಿಸು! ನಿನ್ನ ಪತಿಗಳು ಇನ್ನು ಇಲ್ಲವಾಗಿದ್ದಾರೆ!”
08051080a ಇತ್ಯುಕ್ತವಾನಧರ್ಮಜ್ಞಸ್ತದಾ ಪರಮದುರ್ಮತಿಃ।
08051080c ಪಾಪಃ ಪಾಪಂ ವಚಃ ಕರ್ಣಃ ಶೃಣ್ವತಸ್ತವ ಭಾರತ।।
ಭಾರತ! ಆಗ ಆ ಅಧರ್ಮಜ್ಞ ಪರಮದುರ್ಮತಿ ಪಾಪಿ ಕರ್ಣನು ನಿನಗೆ ಕೇಳುವಂತೆ ಈ ಪಾಪದ ಮಾತುಗಳನ್ನಾಡಿದ್ದನು.
08051081a ತಸ್ಯ ಪಾಪಸ್ಯ ತದ್ವಾಕ್ಯಂ ಸುವರ್ಣವಿಕೃತಾಃ ಶರಾಃ।
08051081c ಶಮಯಂತು ಶಿಲಾಧೌತಾಸ್ತ್ವಯಾಸ್ತಾ ಜೀವಿತಚ್ಚಿದಃ।।
ಪಾಪಿಯ ಆ ಮಾತುಗಳನ್ನು ಜೀವಹಾರಿಸುವ ಸುವರ್ಣದಿಂದ ಕೊರೆಯಲ್ಪಟ್ಟ ಶಿಲಾಧೌತ ಬಾಣಗಳನ್ನು ಪ್ರಯೋಗಿಸಿ ಉಪಶಮನಗೊಳಿಸು!
08051082a ಯಾನಿ ಚಾನ್ಯಾನಿ ದುಷ್ಟಾತ್ಮಾ ಪಾಪಾನಿ ಕೃತವಾಂಸ್ತ್ವಯಿ।
08051082c ತಾನ್ಯದ್ಯ ಜೀವಿತಂ ಚಾಸ್ಯ ಶಮಯಂತು ಶರಾಸ್ತವ।।
ಇನ್ನೂ ಏನೆಲ್ಲ ಪಾಪಗಳನ್ನು ನಿನ್ನಕುರಿತು ಈ ದುಷ್ಟಾತ್ಮನು ಮಾಡಿರುವನೋ ಅವೆಲ್ಲವನ್ನೂ ಮತ್ತು ಅವನ ಜೀವವನ್ನೂ ನಿನ್ನ ಶರಗಳು ಇಂದು ಉಪಶಮನಗೊಳಿಸಲಿ!
08051083a ಗಾಂಡೀವಪ್ರಹಿತಾನ್ಘೋರಾನದ್ಯ ಗಾತ್ರೈಃ ಸ್ಪೃಶಂ ಶರಾನ್।
08051083c ಕರ್ಣಃ ಸ್ಮರತು ದುಷ್ಟಾತ್ಮಾ ವಚನಂ ದ್ರೋಣಭೀಷ್ಮಯೋಃ।।
ಗಾಂಡೀವದಿಂದ ಪ್ರಯೋಗಿಸಲ್ಪಟ್ಟ ಘೋರಶರಗಳು ಇಂದು ಅವನ ಶರೀರಗಳನ್ನು ಹೊಗಲು ದುಷ್ಟಾತ್ಮ ಕರ್ಣನು ದ್ರೋಣ-ಭೀಷ್ಮರ ಮಾತುಗಳನ್ನು ಸ್ಮರಿಸಿಕೊಳ್ಳುತ್ತಾನೆ!
08051084a ಸುವರ್ಣಪುಂಖಾ ನಾರಾಚಾಃ ಶತ್ರುಘ್ನಾ ವೈದ್ಯುತಪ್ರಭಾಃ।
08051084c ತ್ವಯಾಸ್ತಾಸ್ತಸ್ಯ ಮರ್ಮಾಣಿ ಭಿತ್ತ್ವಾ ಪಾಸ್ಯಂತಿ ಶೋಣಿತಂ।।
ನೀನು ಬಿಡುವ ಶತ್ರುಗಳನ್ನು ಸಂಹರಿಸಬಲ್ಲ ವಿದ್ಯುತ್ತಿನ ಪ್ರಭೆಯುಳ್ಳ ಸುವರ್ಣಪುಂಖಗಳ ನಾರಾಚಗಳು ಅವನ ಕವಚವನ್ನು ಭೇದಿಸಿ ರಕ್ತವನ್ನು ಕುಡಿಯುತ್ತವೆ!
08051085a ಉಗ್ರಾಸ್ತ್ವದ್ಭುಜನಿರ್ಮುಕ್ತಾ ಮರ್ಮ ಭಿತ್ತ್ವಾ ಶಿತಾಃ ಶರಾಃ।
08051085c ಅದ್ಯ ಕರ್ಣಂ ಮಹಾವೇಗಾಃ ಪ್ರೇಷಯಂತು ಯಮಕ್ಷಯಂ।।
ಇಂದು ನಿನ್ನ ಭುಜಗಳಿಂದ ಪ್ರಯೋಗಿಸಲ್ಪಟ್ಟ ಮಹಾವೇಗದ ಉಗ್ರ ನಿಶಿತ ಶರಗಳು ಕವಚಗಳನ್ನು ಭೇದಿಸಿ ಕರ್ಣನನ್ನು ಯಮಕ್ಷಯಕ್ಕೆ ಕಳುಹಿಸುತ್ತವೆ!
08051086a ಅದ್ಯ ಹಾಹಾಕೃತಾ ದೀನಾ ವಿಷಣ್ಣಾಸ್ತ್ವಚ್ಚರಾರ್ದಿತಾಃ।
08051086c ಪ್ರಪತಂತಂ ರಥಾತ್ಕರ್ಣಂ ಪಶ್ಯಂತು ವಸುಧಾಧಿಪಾಃ।।
ಇಂದು ನಿನ್ನ ಶರಗಳಿಂದ ಪೀಡಿತನಾಗಿ ದೀನನಾಗಿ ದುಃಖದಿಂದ ಹಾಹಾಕಾರಮಾಡುತ್ತಾ ಕರ್ಣನು ರಥದಿಂದ ಬೀಳುವುದನ್ನು ವಸುಧಾಧಿಪರು ನೋಡಲಿದ್ದಾರೆ!
08051087a ಅದ್ಯ ಸ್ವಶೋಣಿತೇ ಮಗ್ನಂ ಶಯಾನಂ ಪತಿತಂ ಭುವಿ।
08051087c ಅಪವಿದ್ಧಾಯುಧಂ ಕರ್ಣಂ ಪಶ್ಯಂತು ಸುಹೃದೋ ನಿಜಾಃ।।
ಇಂದು ಆಯುಧವನ್ನು ಎಸೆದು ಭೂಮಿಯ ಮೇಲೆ ಬಿದ್ದು ತನ್ನದೇ ರಕ್ತದಲ್ಲಿ ಮುಳುಗಿ ಮಲಗಿರುವ ಕರ್ಣನನ್ನು ಅವನ ಸುಹೃದಯರು ನೋಡಲಿದ್ದಾರೆ!
08051088a ಹಸ್ತಿಕಕ್ಷ್ಯೋ ಮಹಾನಸ್ಯ ಭಲ್ಲೇನೋನ್ಮಥಿತಸ್ತ್ವಯಾ।
08051088c ಪ್ರಕಂಪಮಾನಃ ಪತತು ಭೂಮಾವಾಧಿರಥೇರ್ಧ್ವಜಃ।।
ಹಸ್ತಿಕಕ್ಷದ ಚಿಹ್ನೆಯುಳ್ಳ ಈ ಆಧಿರಥನ ಮಹಾ ಧ್ವಜವು ನಿನ್ನ ಭಲ್ಲಗಳಿಂದ ಮಥಿಸಲ್ಪಟ್ಟು ಅಲುಗಾಡುತ್ತಾ ಭೂಮಿಯಮೇಲೆ ಬೀಳಲಿದೆ!
08051089a ತ್ವಯಾ ಶರಶತೈಶ್ಚಿನ್ನಂ ರಥಂ ಹೇಮವಿಭೂಷಿತಂ।
08051089c ಹತಯೋಧಂ ಸಮುತ್ಸೃಜ್ಯ ಭೀತಃ ಶಲ್ಯಃ ಪಲಾಯತಾಂ।।
ಯೋಧನು ಹತನಾಗಿ, ನಿನ್ನ ನೂರಾರು ಶರಗಳಿಂದ ಛಿನ್ನವಾಗಿರುವ ಹೇಮವಿಭೂಷಿತ ರಥವನ್ನು ಬಿಟ್ಟು ಭೀತನಾಗಿ ಶಲ್ಯನು ಪಲಾಯನ ಮಾಡುವನು!
08051090a ತತಃ ಸುಯೋಧನೋ ದೃಷ್ಟ್ವಾ ಹತಮಾಧಿರಥಿಂ ತ್ವಯಾ।
08051090c ನಿರಾಶೋ ಜೀವಿತೇ ತ್ವದ್ಯ ರಾಜ್ಯೇ ಚೈವ ಧನಂಜಯ।।
ಧನಂಜಯ! ನಿನ್ನಿಂದ ಹತನಾದ ಆಧಿರಥನನ್ನು ನೋಡಿ ಸುಯೋಧನನು ಇಂದು ಜೀವಿತದಲ್ಲಿ ಮತ್ತು ರಾಜ್ಯದಲ್ಲಿ ನಿರಾಶನಾಗಲಿದ್ದಾನೆ!
08051091a ಏತೇ ದ್ರವಂತಿ ಪಾಂಚಾಲಾ ವಧ್ಯಮಾನಾಃ ಶಿತೈಃ ಶರೈಃ।
08051091c ಕರ್ಣೇನ ಭರತಶ್ರೇಷ್ಠ ಪಾಂಡವಾನುಜ್ಜಿಹೀರ್ಷವಃ।।
ಭರತಶ್ರೇಷ್ಠ! ಪಾಂಡವರ ಜಯವನ್ನು ಬಯಸುವ ಪಾಂಚಾಲರು ಇಗೋ ಕರ್ಣನ ನಿಶಿತ ಶರಗಳಿಂದ ಪ್ರಹರಿಸಲ್ಪಟ್ಟು ಓಡುಹೋಗುತ್ತಿದ್ದಾರೆ!
08051092a ಪಾಂಚಾಲಾನ್ದ್ರೌಪದೇಯಾಂಶ್ಚ ಧೃಷ್ಟದ್ಯುಮ್ನಶಿಖಂಡಿನೌ।
08051092c ಧೃಷ್ಟದ್ಯುಮ್ನತನೂಜಾಂಶ್ಚ ಶತಾನೀಕಂ ಚ ನಾಕುಲಿಂ।।
08051093a ನಕುಲಂ ಸಹದೇವಂ ಚ ದುರ್ಮುಖಂ ಜನಮೇಜಯಂ।
08051093c ಸುವರ್ಮಾಣಂ ಸಾತ್ಯಕಿಂ ಚ ವಿದ್ಧಿ ಕರ್ಣವಶಂ ಗತಾನ್।।
ಪಾಂಚಾಲರು, ದ್ರೌಪದೇಯರು, ಧೃಷ್ಟದ್ಯುಮ್ನ-ಶಿಖಂಡಿಯರು, ಧೃಷ್ಟದ್ಯುಮ್ನನ ಮಕ್ಕಳು, ನಾಕುಲಿ ಶತಾನೀಕ, ನಕುಲ, ಸಹದೇವ, ದುರ್ಮುಖ, ಜನಮೇಜಯ ಮತ್ತು ಸುಂದರ ಕವಚಧಾರೀ ಸಾತ್ಯಕಿಯರು ಕರ್ಣನ ವಶದಲ್ಲಿ ಸಿಲುಕಿರುವುದನ್ನು ನೋಡು!
08051094a ಅಭ್ಯಾಹತಾನಾಂ ಕರ್ಣೇನ ಪಾಂಚಾಲಾನಾಂ ಮಹಾರಣೇ।
08051094c ಶ್ರೂಯತೇ ನಿನದೋ ಘೋರಸ್ತ್ವದ್ಬಂಧೂನಾಂ ಪರಂತಪ।।
ಪರಂತಪ! ಮಹಾರಣದಲ್ಲಿ ಕರ್ಣನಿಂದ ಅಭ್ಯಾಹತರಾಗುತ್ತಿರುವ ನಿನ್ನ ಬಂಧು ಪಾಂಚಾಲರ ಘೋರ ನಿನಾದವು ಕೇಳಿಬರುತ್ತಿದೆ!
08051095a ನ ತ್ವೇವ ಭೀತಾಃ ಪಾಂಚಾಲಾಃ ಕಥಂ ಚಿತ್ಸ್ಯುಃ ಪರಾಙ್ಮುಖಾಃ।
08051095c ನ ಹಿ ಮೃತ್ಯುಂ ಮಹೇಷ್ವಾಸಾ ಗಣಯಂತಿ ಮಹಾರಥಾಃ।।
ಮಹೇಷ್ವಾಸ! ಈ ಪಾಂಚಾಲರು ಭೀತರಾಗುವವರಲ್ಲ. ಎಂದೂ ಇವರು ಯುದ್ಧದಿಂದ ಪರಾಙ್ಮುಖರಾಗುವವರಲ್ಲ. ಏಕೆಂದರೆ ಈ ಮಹಾರಥರು ಮೃತ್ಯುವನ್ನೇ ಎಣಿಸುತ್ತಿದ್ದಾರೆ!
08051096a ಯ ಏಕಃ ಪಾಂಡವೀಂ ಸೇನಾಂ ಶರೌಘೈಃ ಸಮವೇಷ್ಟಯತ್।
08051096c ತಂ ಸಮಾಸಾದ್ಯ ಪಾಂಚಾಲಾ ಭೀಷ್ಮಂ ನಾಸನ್ಪರಾಙ್ಮುಖಾಃ।।
ಭೀಷ್ಮನೊಬ್ಬನೇ ಪಾಂಡವೀ ಸೇನೆಯನ್ನು ಶರೌಘಗಳಿಂದ ಮುಚ್ಚಿಬಿಟ್ಟಿರಲು ಪಾಂಚಾಲರು ಅವನನ್ನು ಎದುರಿಸಿದರೇ ಹೊರತು ಪರಾಙ್ಮುಖರಾಗಲಿಲ್ಲ!
08051097a ತಥಾ ಜ್ವಲಂತಮಸ್ತ್ರಾಗ್ನಿಂ ಗುರುಂ ಸರ್ವಧನುಷ್ಮತಾಂ।
08051097c ನಿರ್ದಹಂತಂ ಸಮಾರೋಹನ್ದುರ್ಧರ್ಷಂ ದ್ರೋಣಮೋಜಸಾ।।
ಹಾಗೆಯೇ ಅವರು ತನ್ನ ಓಜಸ್ಸಿನಿಂದ ಅಸ್ತ್ರಾಗ್ನಿಯನ್ನು ಉರಿಯಿಸುತ್ತಾ ಸುಡುತ್ತಿದ್ದ ಸರ್ವಧನುಷ್ಮತರ ಗುರು ದುರ್ಧರ್ಷ ದ್ರೋಣನನ್ನು ಆಕ್ರಮಣಿಸುತ್ತಿದ್ದರು.
08051098a ತೇ ನಿತ್ಯಮುದಿತಾ ಜೇತುಂ ಯುದ್ಧೇ ಶತ್ರೂನರಿಂದಮಾಃ।
08051098c ನ ಜಾತ್ವಾಧಿರಥೇರ್ಭೀತಾಃ ಪಾಂಚಾಲಾಃ ಸ್ಯುಃ ಪರಾಙ್ಮುಖಾಃ।।
ಯುದ್ಧದಲ್ಲಿ ಶತ್ರುಗಳನ್ನು ಗೆಲ್ಲಲು ನಿತ್ಯವೂ ಸಿದ್ಧರಾಗಿರುವ ಆ ಅರಿಂದಮ ಪಾಂಚಾಲರು ಆಧಿರಥಿಯ ಭಯದಿಂದ ಪರಾಙ್ಮುಖರಾಗುವುದಿಲ್ಲ!
08051099a ತೇಷಾಮಾಪತತಾಂ ಶೂರಃ ಪಾಂಚಾಲಾನಾಂ ತರಸ್ವಿನಾಂ।
08051099c ಆದತ್ತೇಽಸೂಂ ಶರೈಃ ಕರ್ಣಃ ಪತಂಗಾನಾಮಿವಾನಲಃ।।
ತನ್ನ ಮೇಲೆ ಬೀಳುತ್ತಿರುವ ಆ ತರಸ್ವೀ ಶೂರ ಪಾಂಚಾಲರನ್ನು ಪತಂಗಗಳನ್ನು ಬೆಂಕಿಯು ಹೇಗೋ ಹಾಗೆ ಕರ್ಣನು ಶರಗಳಿಂದ ಸುಟ್ಟುಹಾಕಿಬಿಡುತ್ತಿದ್ದಾನೆ.
08051100a ತಾಂಸ್ತಥಾಭಿಮುಖಾನ್ವೀರಾನ್ಮಿತ್ರಾರ್ಥೇ ತ್ಯಕ್ತಜೀವಿತಾನ್।
08051100c ಕ್ಷಯಂ ನಯತಿ ರಾಧೇಯಃ ಪಾಂಚಾಲಾಂ ಶತಶೋ ರಣೇ।।
ಮಿತ್ರನಿಗಾಗಿ ಜೀವವನ್ನೇ ತೊರೆದು ಎದುರಿಸಿರುವ ಆ ವೀರ ಪಾಂಚಾಲರನ್ನು ರಣದಲ್ಲಿ ನೂರಾರು ಸಂಖ್ಯೆಗಳಲ್ಲಿ ರಾಧೇಯನು ನಾಶಗೊಳಿಸುತ್ತಿದ್ದಾನೆ.
08051101a ಅಸ್ತ್ರಂ ಹಿ ರಾಮಾತ್ಕರ್ಣೇನ ಭಾರ್ಗವಾದೃಷಿಸತ್ತಮಾತ್।
08051101c ಯದುಪಾತ್ತಂ ಪುರಾ ಘೋರಂ ತಸ್ಯ ರೂಪಮುದೀರ್ಯತೇ।।
ಹಿಂದೆ ಋಷಿಸತ್ತಮ ಭಾರ್ಗವ ರಾಮನಿಂದ ಪಡೆದ ಘೋರರೂಪೀ ಅಸ್ತ್ರವನ್ನೇ ಇಂದು ಕರ್ಣನು ಪ್ರಯೋಗಿಸಿದ್ದಾನೆ.
08051102a ತಾಪನಂ ಸರ್ವಸೈನ್ಯಾನಾಂ ಘೋರರೂಪಂ ಸುದಾರುಣಂ।
08051102c ಸಮಾವೃತ್ಯ ಮಹಾಸೇನಾಂ ಜ್ವಲತಿ ಸ್ವೇನ ತೇಜಸಾ।।
ಸರ್ವಸೇನೆಗಳನ್ನು ಸುಡಬಲ್ಲ ಘೋರರೂಪಿಯಾದ ಸುದಾರುಣವಾದ ಆ ಅಸ್ತ್ರವು ತನ್ನ ತೇಜಸ್ಸಿನಿಂದ ಉರಿಯುತ್ತಾ ಮಹಾಸೇನೆಯನ್ನು ಆವರಿಸಿದೆ!
08051103a ಏತೇ ಚರಂತಿ ಸಂಗ್ರಾಮೇ ಕರ್ಣಚಾಪಚ್ಯುತಾಃ ಶರಾಃ।
08051103c ಭ್ರಮರಾಣಾಮಿವ ವ್ರಾತಾಸ್ತಾಪಯಂತಃ ಸ್ಮ ತಾವಕಾನ್।।
ಇಗೋ ಸಂಗ್ರಾಮದಲ್ಲಿ ಕರ್ಣನ ಚಾಪದಿಂದ ಹೊರಟ ಶರಗಳು ಭ್ರಮರಗಳಂತೆ ಹಾರಿಬಂದು ನಿನ್ನವರನ್ನು ಸುಡುತ್ತಿವೆ!
08051104a ಏತೇ ಚರಂತಿ ಪಾಂಚಾಲಾ ದಿಕ್ಷು ಸರ್ವಾಸು ಭಾರತ।
08051104c ಕರ್ಣಾಸ್ತ್ರಂ ಸಮರೇ ಪ್ರಾಪ್ಯ ದುರ್ನಿವಾರಮನಾತ್ಮಭಿಃ।।
ಭಾರತ! ಇಗೋ ಪಾಂಚಾಲರು, ಸಮರದಲ್ಲಿ ಕರ್ಣನ ಅಸ್ತ್ರಕ್ಕೆ ಸಿಲುಕಿ ತಮ್ಮನ್ನು ತಾವು ತಡೆಯಲಾರದೇ ಸರ್ವ ದಿಕ್ಕುಗಳಲ್ಲಿಯೂ ಚದುರಿ ಹೋಗುತ್ತಿದ್ದಾರೆ!
08051105a ಏಷ ಭೀಮೋ ದೃಢಕ್ರೋಧೋ ವೃತಃ ಪಾರ್ಥ ಸಮಂತತಃ।
08051105c ಸೃಂಜಯೈರ್ಯೋಧಯನ್ಕರ್ಣಂ ಪೀಡ್ಯತೇ ಸ್ಮ ಶಿತೈಃ ಶರೈಃ।।
ಪಾರ್ಥ! ಇಗೋ ದೃಢಕ್ರೋಧನಾದ ಭೀಮನು ಎಲ್ಲಕಡೆಗಳಿಂದ ಸೃಂಜಯರಿಂದ ಸುತ್ತುವರೆಯಲ್ಪಟ್ಟು ಕರ್ಣನನ್ನು ನಿಶಿತ ಶರಗಳಿಂದ ಪೀಡಿಸಿ ಹೋರಾಡುತ್ತಿದ್ದಾನೆ!
08051106a ಪಾಂಡವಾನ್ಸೃಂಜಯಾಂಶ್ಚೈವ ಪಾಂಚಾಲಾಂಶ್ಚೈವ ಭಾರತ।
08051106c ಹನ್ಯಾದುಪೇಕ್ಷಿತಃ ಕರ್ಣೋ ರೋಗೋ ದೇಹಮಿವಾತತಃ।।
ಭಾರತ! ರೋಗವು ದೇಹವನ್ನು ಹೇಗೋ ಹಾಗೆ ಕರ್ಣನು ಪಾಂಡವರನ್ನೂ, ಸೃಂಜಯರನ್ನೂ, ಪಾಂಚಾಲರನ್ನೂ ಸಂಹರಿಸಲು ನೋಡುತ್ತಿದ್ದಾನೆ.
08051107a ನಾನ್ಯಂ ತ್ವತ್ತೋಽಭಿಪಶ್ಯಾಮಿ ಯೋಧಂ ಯೌಧಿಷ್ಠಿರೇ ಬಲೇ।
08051107c ಯಃ ಸಮಾಸಾದ್ಯ ರಾಧೇಯಂ ಸ್ವಸ್ತಿಮಾನಾವ್ರಜೇದ್ಗೃಹಂ।।
ನೀನಲ್ಲದೇ - ರಾಧೇಯನನ್ನು ಎದುರಿಸಿ ಕುಶಲನಾಗಿ ಮನೆಗೆ ತೆರಳುವ - ಬೇರೆ ಯಾವ ಯೋಧನನ್ನೂ ನಾನು ಯುಧಿಷ್ಠಿರನ ಸೇನೆಯಲ್ಲಿ ಕಾಣೆ!
08051108a ತಮದ್ಯ ನಿಶಿತೈರ್ಬಾಣೈರ್ನಿಹತ್ಯ ಭರತರ್ಷಭ।
08051108c ಯಥಾಪ್ರತಿಜ್ಞಂ ಪಾರ್ಥ ತ್ವಂ ಕೃತ್ವಾ ಕೀರ್ತಿಮವಾಪ್ನುಹಿ।।
ಭರತರ್ಷಭ! ಪಾರ್ಥ! ಪ್ರತಿಜ್ಞೆಮಾಡಿದಂತೆ ಮಾಡಿ ಇಂದು ನೀನು ನಿಶಿತಬಾಣಗಳಿಂದ ಅವನನ್ನು ಸಂಹರಿಸಿ ಕೀರ್ತಿಯನ್ನು ಹೊಂದುವೆ!
08051109a ತ್ವಂ ಹಿ ಶಕ್ತೋ ರಣೇ ಜೇತುಂ ಸಕರ್ಣಾನಪಿ ಕೌರವಾನ್।
08051109c ನಾನ್ಯೋ ಯುಧಿ ಯುಧಾಂ ಶ್ರೇಷ್ಠ ಸತ್ಯಮೇತದ್ಬ್ರವೀಮಿ ತೇ।।
ನೀನು ಮಾತ್ರ ಕರ್ಣನಿರುವ ಕೌರವರನ್ನು ರಣದಲ್ಲಿ ಗೆಲ್ಲಲು ಶಕ್ತ. ಯೋಧರಲ್ಲಿ ಶ್ರೇಷ್ಠ! ಬೇರೆ ಯಾವ ಯೋಧನಿಗೂ ಇದು ಶಕ್ಯವಿಲ್ಲ. ನಾನು ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ.
08051110a ಏತತ್ಕೃತ್ವಾ ಮಹತ್ಕರ್ಮ ಹತ್ವಾ ಕರ್ಣಂ ಮಹಾರಥಂ।
08051110c ಕೃತಾರ್ಥಃ ಸಫಲಃ ಪಾರ್ಥ ಸುಖೀ ಭವ ನರೋತ್ತಮ।।
ಮಹಾರಥ ಕರ್ಣನನ್ನು ಕೊಲ್ಲುವ ಈ ಮಹಾಕಾರ್ಯವನ್ನು ಮಾಡಿ ಪಾರ್ಥ! ನರೋತ್ತಮ! ಕೃತಾರ್ಥನೂ, ಸಫಲನೂ ಮತ್ತು ಸುಖಿಯೂ ಆಗು!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಶ್ರೀಕೃಷ್ಣವಾಕ್ಯೇ ಏಕಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಶ್ರೀಕೃಷ್ಣವಾಕ್ಯ ಎನ್ನುವ ಐವತ್ತೊಂದನೇ ಅಧ್ಯಾಯವು.