050 ಕೃಷ್ಣಾರ್ಜುನಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ಕರ್ಣವಧ ಪರ್ವ

ಅಧ್ಯಾಯ 50

ಸಾರ

ಕೃಷ್ಣನ ಸೂಚನೆಯಂತೆ ಅರ್ಜುನನು ಯುಧಿಷ್ಠಿರನ ಪಾದಗಳಿಗೆರೆಗಿ ಕ್ಷಮೆಯನ್ನು ಯಾಚಿಸಿದುದು (1-14). ಕರ್ಣನನ್ನು ಸಂಹರಿಸು ಎಂದು ಹೇಳಿ ಯುಧಿಷ್ಠಿರನು ಅರ್ಜುನನನ್ನು ಯುದ್ಧಕ್ಕೆ ಬೀಳ್ಕೊಂಡಿದುದು (15-34). ಕೃಷ್ಣಾರ್ಜುನರು ರಣಭೂಮಿಗೆ ಪ್ರಯಾಣಮಾಡುತ್ತಿದ್ದಾಗ ಆದ ಶಕುನಗಳು (35-47). ಅರ್ಜುನನ ಪರಾಕ್ರಮಗಳನ್ನು ವರ್ಣಿಸುತ್ತಾ ಕೃಷ್ಣನು ಯುದ್ಧದಲ್ಲಿ ಕರ್ಣನನ್ನು ಸಂಹರಿಸಲು ಅರ್ಜುನನಿಗೆ ಹೇಳಿದುದು (48-65).

08050008a ಏತದತ್ರ ಮಹಾಬಾಹೋ ಪ್ರಾಪ್ತಕಾಲಂ ಮತಂ ಮಮ।
08050008c ಏವಂ ಕೃತೇ ಕೃತಂ ಚೈವ ತವ ಕಾರ್ಯಂ ಭವಿಷ್ಯತಿ।।

ಮಹಾಬಾಹೋ! ಇದಕ್ಕೆ ಕಾಲವು ಪ್ರಾಪ್ತವಾಗಿದೆ ಎಂದು ನನಗನ್ನಿಸುತ್ತಿದೆ. ಹೀಗೆ ನೀನು ಮಾಡಿದರೆ ನಿನ್ನ ಕಾರ್ಯವು ಸಿದ್ಧಿಯಾಗುತ್ತದೆ.”

08050009a ತತೋಽರ್ಜುನೋ ಮಹಾರಾಜ ಲಜ್ಜಯಾ ವೈ ಸಮನ್ವಿತಃ।
08050009c ಧರ್ಮರಾಜಸ್ಯ ಚರಣೌ ಪ್ರಪೇದೇ ಶಿರಸಾನಘ।।

ಮಹಾರಾಜ! ಅನಘ! ಆಗ ಅರ್ಜುನನು ಲಜ್ಜಾಸಮನ್ವಿತನಾಗಿ ಧರ್ಮರಾಜನ ಚರಣಗಳಲ್ಲಿ ಶಿರವನ್ನಿಟ್ಟು ನಮಸ್ಕರಿಸಿದನು.

08050010a ಉವಾಚ ಭರತಶ್ರೇಷ್ಠ ಪ್ರಸೀದೇತಿ ಪುನಃ ಪುನಃ।
08050010c ಕ್ಷಮಸ್ವ ರಾಜನ್ಯತ್ಪ್ರೋಕ್ತಂ ಧರ್ಮಕಾಮೇನ ಭೀರುಣಾ।।

ಆ ಭರತಶ್ರೇಷ್ಠನು ಪುನಃ ಪುನಃ “ರಾಜನ್! ಧರ್ಮಕಾಮದಿಂದ ಭೀರುವಾದ ನಾನು ಹೇಳಿದುದನ್ನು ಕ್ಷಮಿಸಿ ಪ್ರಸೀದನಾಗು!” ಎಂದು ಹೇಳಿದನು.

08050011a ಪಾದಯೋಃ ಪತಿತಂ ದೃಷ್ಟ್ವಾ ಧರ್ಮರಾಜೋ ಯುಧಿಷ್ಠಿರಃ।
08050011c ಧನಂಜಯಮಮಿತ್ರಘ್ನಂ ರುದಂತಂ ಭರತರ್ಷಭ।।
08050012a ಉತ್ಥಾಪ್ಯ ಭ್ರಾತರಂ ರಾಜಾ ಧರ್ಮರಾಜೋ ಧನಂಜಯಂ।
08050012c ಸಮಾಶ್ಲಿಷ್ಯ ಚ ಸಸ್ನೇಹಂ ಪ್ರರುರೋದ ಮಹೀಪತಿಃ।।

ಪಾದಗಳಮೇಲೆ ಬಿದ್ದು ಅಳುತ್ತಿದ್ದ ಅಮಿತ್ರಘ್ನ ಧನಂಜಯನನ್ನು ನೋಡಿ ಭರತರ್ಷಭ ಧರ್ಮರಾಜ ಯುಧಿಷ್ಠಿರನು ತಮ್ಮ ಧನಂಜಯನನ್ನು ಮೇಲೆಬ್ಬಿಸಿದನು. ಮಹೀಪತಿ ರಾಜಾ ಧರ್ಮರಾಜನು ಅವನನ್ನು ಸ್ನೇಹಪೂರ್ವಕ ಆಲಂಗಿಸಿ ಅವನೊಡನೆ ರೋದಿಸಿದನು.

08050013a ರುದಿತ್ವಾ ತು ಚಿರಂ ಕಾಲಂ ಭ್ರಾತರೌ ಸುಮಹಾದ್ಯುತೀ।
08050013c ಕೃತಶೌಚೌ ನರವ್ಯಾಘ್ರೌ ಪ್ರೀತಿಮಂತೌ ಬಭೂವತುಃ।।

ಬಹಳ ಹೊತ್ತು ರೋದಿಸಿ ಆ ಇಬ್ಬರು ಮಹಾದ್ಯುತಿ ನರವ್ಯಾಘ್ರ ಸಹೋದರರೂ ಶುಚಿಮಾಡಿಕೊಂಡು ಹರ್ಷಿತರಾದರು.

08050014a ತತ ಆಶ್ಲಿಷ್ಯ ಸ ಪ್ರೇಮ್ಣಾ ಮೂರ್ಧ್ನಿ ಚಾಘ್ರಾಯ ಪಾಂಡವಂ।
08050014c ಪ್ರೀತ್ಯಾ ಪರಮಯಾ ಯುಕ್ತಃ ಪ್ರಸ್ಮಯಂಶ್ಚಾಬ್ರವೀಜ್ಜಯಂ।।

ಅನಂತರ ಪಾಂಡವನನ್ನು ಪ್ರೀತಿಯಿಂದ ಆಲಂಗಿಸಿ ನೆತ್ತಿಯನ್ನು ಆಘ್ರಾಣಿಸಿ ಪರಮ ಸಂತೋಷಯುಕ್ತನಾಗಿ ಮತ್ತು ವಿಸ್ಮಯನಾಗಿ ಜಯನಿಗೆ ಹೇಳಿದನು:

08050015a ಕರ್ಣೇನ ಮೇ ಮಹಾಬಾಹೋ ಸರ್ವಸೈನ್ಯಸ್ಯ ಪಶ್ಯತಃ।
08050015c ಕವಚಂ ಚ ಧ್ವಜಶ್ಚೈವ ಧನುಃ ಶಕ್ತಿರ್ಹಯಾ ಗದಾ।
08050015e ಶರೈಃ ಕೃತ್ತಾ ಮಹೇಷ್ವಾಸ ಯತಮಾನಸ್ಯ ಸಂಯುಗೇ।।

“ಮಹಾಬಾಹೋ! ಸರ್ವಸೈನ್ಯವೂ ನೋಡುತ್ತಿದ್ದಂತೆಯೇ ರಣದಲ್ಲಿ ಪ್ರಯತ್ನಪಟ್ಟು ಯುದ್ಧಮಾಡುತ್ತಿದ್ದ ಮಹೇಷ್ವಾಸ ಕರ್ಣನು ಶರಗಳಿಂದ ನನ್ನ ಕವಚ, ಧ್ವಜ, ಧನುಸ್ಸು, ಶಕ್ತಿ, ಕುದುರೆ, ಮತ್ತು ಗದೆಗಳನ್ನು ಕತ್ತರಿಸಿದನು.

08050016a ಸೋಽಹಂ ಜ್ಞಾತ್ವಾ ರಣೇ ತಸ್ಯ ಕರ್ಮ ದೃಷ್ಟ್ವಾ ಚ ಫಲ್ಗುನ।
08050016c ವ್ಯವಸೀದಾಮಿ ದುಃಖೇನ ನ ಚ ಮೇ ಜೀವಿತಂ ಪ್ರಿಯಂ।।

ಫಲ್ಗುನ! ಅವನನ್ನು ಮನಗಂಡು ಮತ್ತು ರಣದಲ್ಲಿ ಅವನ ಕರ್ಮವನ್ನು ನೋಡಿ ನಾನು ದುಃಖದಿಂದ ಕೃಶನಾಗುತ್ತಿದ್ದೇನೆ. ಜೀವಿತವಾಗಿರಲೂ ಇಷ್ಟವಾಗುತ್ತಿಲ್ಲ!

08050017a ತಮದ್ಯ ಯದಿ ವೈ ವೀರ ನ ಹನಿಷ್ಯಸಿ ಸೂತಜಂ।
08050017c ಪ್ರಾಣಾನೇವ ಪರಿತ್ಯಕ್ಷ್ಯೇ ಜೀವಿತಾರ್ಥೋ ಹಿ ಕೋ ಮಮ।।

ವೀರ! ಒಂದು ವೇಳೆ ಇಂದು ನೀನು ಸೂತಜನನ್ನು ಸಂಹರಿಸದೇ ಇದ್ದರೆ ನಾನು ನನ್ನ ಪ್ರಾಣಗಳನ್ನೇ ಪರಿತ್ಯಜಿಸುತ್ತೇನೆ. ಮುಂದೆ ನಾನು ಜೀವಂತವಾಗಿರುವುದರ ಅರ್ಥವಾದರೂ ಏನಿದೆ?”

08050018a ಏವಮುಕ್ತಃ ಪ್ರತ್ಯುವಾಚ ವಿಜಯೋ ಭರತರ್ಷಭ।
08050018c ಸತ್ಯೇನ ತೇ ಶಪೇ ರಾಜನ್ಪ್ರಸಾದೇನ ತವೈವ ಚ।
08050018e ಭೀಮೇನ ಚ ನರಶ್ರೇಷ್ಠ ಯಮಾಭ್ಯಾಂ ಚ ಮಹೀಪತೇ।।

ಭರತರ್ಷಭ! ಹೀಗೆ ಹೇಳಲು ವಿಜಯನು ಉತ್ತರಿಸಿದನು: “ರಾಜನ್! ನರಶ್ರೇಷ್ಠ! ಮಹೀಪತೇ! ಸತ್ಯ, ನಿನ್ನ ಪ್ರಸಾದ, ಭೀಮ ಮತ್ತು ಯಮಳರ ಮೇಲೆ ಆಣೆಯಿಟ್ಟು ಶಪಥಮಾಡುತ್ತಿದ್ದೇನೆ!

08050019a ಯಥಾದ್ಯ ಸಮರೇ ಕರ್ಣಂ ಹನಿಷ್ಯಾಮಿ ಹತೋಽಥ ವಾ।
08050019c ಮಹೀತಲೇ ಪತಿಷ್ಯಾಮಿ ಸತ್ಯೇನಾಯುಧಮಾಲಭೇ।।

ಆಯುಧದ ಮೇಲೆ ಆಣೆಯಿಟ್ಟು ಹೇಳುತ್ತೇನೆ! ಇಂದು ಸಮರದಲ್ಲಿ ಕರ್ಣನನ್ನು ಕೊಲ್ಲುತ್ತೇನೆ ಅಥವಾ ಹತನಾಗಿ ಮಹೀತಲದಲ್ಲಿ ಬೀಳುತ್ತೇನೆ!”

08050020a ಏವಮಾಭಾಷ್ಯ ರಾಜಾನಮಬ್ರವೀನ್ಮಾಧವಂ ವಚಃ।
08050020c ಅದ್ಯ ಕರ್ಣಂ ರಣೇ ಕೃಷ್ಣ ಸೂದಯಿಷ್ಯೇ ನ ಸಂಶಯಃ।
08050020e ತದನುಧ್ಯಾಹಿ ಭದ್ರಂ ತೇ ವಧಂ ತಸ್ಯ ದುರಾತ್ಮನಃ।।

ರಾಜನಿಗೆ ಹೀಗೆ ಹೇಳಿ ಅವನು ಮಾಧವನಿಗೆ ಈ ಮಾತನ್ನಾಡಿದನು: “ಕೃಷ್ಣ! ಇಂದು ರಣದಲ್ಲಿ ಕರ್ಣನನ್ನು ಸಂಹರಿಸುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ. ನಿನಗೆ ಮಂಗಳವಾಗಲಿ! ಆ ದುರಾತ್ಮನ ವಧೆಯನ್ನು ನೀನೂ ಕೂಡ ನಿರ್ಧರಿಸಿರುವಂತಿದೆ!”

08050021a ಏವಮುಕ್ತೋಽಬ್ರವೀತ್್ಪಾರ್ಥಂ ಕೇಶವೋ ರಾಜಸತ್ತಮ।
08050021c ಶಕ್ತೋಽಸ್ಮಿ ಭರತಶ್ರೇಷ್ಠ ಯತ್ನಂ ಕರ್ತುಂ ಯಥಾಬಲಂ।।

ರಾಜಸತ್ತಮ! ಇದನ್ನು ಕೇಳಿದ ಕೇಶವನು ಪಾರ್ಥನಿಗೆ ಹೇಳಿದನು: “ಭರತಶ್ರೇಷ್ಠ! ಯಥಾಬಲ ಪ್ರಯತ್ನ ಮಾಡಲು ನೀನು ಶಕ್ತನಾಗಿರುವೆ!

08050022a ಏವಂ ಚಾಪಿ ಹಿ ಮೇ ಕಾಮೋ ನಿತ್ಯಮೇವ ಮಹಾರಥ।
08050022c ಕಥಂ ಭವಾನ್ರಣೇ ಕರ್ಣಂ ನಿಹನ್ಯಾದಿತಿ ಮೇ ಮತಿಃ।।

ಮಹಾರಥ! ಇದೇ ನನ್ನ ನಿತ್ಯದ ಮನೋಕಾಮನೆಯೂ ಆಗಿದೆ. ನೀನು ರಣದಲ್ಲಿ ಹೇಗೆ ಕರ್ಣನನ್ನು ಕೊಲ್ಲುತ್ತೀಯೆ ಎನ್ನುವುದೂ ನನ್ನ ಅನುದಿನದ ಚಿಂತೆಯಾಗಿದೆ.”

08050023a ಭೂಯಶ್ಚೋವಾಚ ಮತಿಮಾನ್ಮಾಧವೋ ಧರ್ಮನಂದನಂ।
08050023c ಯುಧಿಷ್ಠಿರೇಮಂ ಬೀಭತ್ಸುಂ ತ್ವಂ ಸಾಂತ್ವಯಿತುಮರ್ಹಸಿ।
08050023e ಅನುಜ್ಞಾತುಂ ಚ ಕರ್ಣಸ್ಯ ವಧಾಯಾದ್ಯ ದುರಾತ್ಮನಃ।।

ಮತಿಮಾನ್ ಮಾಧವನು ಧರ್ಮನಂದನನಿಗೆ ಪುನಃ ಇದನ್ನು ಹೇಳಿದನು: “ಯುಧಿಷ್ಠಿರ! ಈ ಬೀಭತ್ಸುವನ್ನು ನೀನು ಸಂತವಿಸಬೇಕಾಗಿದೆ. ದುರಾತ್ಮ ಕರ್ಣನ ವಧೆಗೆ ಇಂದು ಆಜ್ಞೆಯನ್ನೂ ನೀಡಬೇಕು!

08050024a ಶ್ರುತ್ವಾ ಹ್ಯಯಮಹಂ ಚೈವ ತ್ವಾಂ ಕರ್ಣಶರಪೀಡಿತಂ।
08050024c ಪ್ರವೃತ್ತಿಂ ಜ್ಞಾತುಮಾಯಾತಾವಿಹ ಪಾಂಡವನಂದನ।।

ಪಾಂಡವನಂದನ! ನೀನು ಕರ್ಣನ ಶರಗಳಿಂದ ಪೀಡಿತನಾದೆ ಎಂದು ಕೇಳಿದ ಇವನು ಮತ್ತು ನಾನು ನೀನು ಹೇಗಿರುವೆಯೆಂದು ತಿಳಿದುಕೊಳ್ಳಲು ಇಲ್ಲಿಗೆ ಬಂದಿದ್ದೆವು.

08050025a ದಿಷ್ಟ್ಯಾಸಿ ರಾಜನ್ನಿರುಜೋ ದಿಷ್ಟ್ಯಾ ನ ಗ್ರಹಣಂ ಗತಃ।
08050025c ಪರಿಸಾಂತ್ವಯ ಬೀಭತ್ಸುಂ ಜಯಮಾಶಾಧಿ ಚಾನಘ।।

ರಾಜನ್! ಅದೃಷ್ಟವಶಾತ್ ನೀನು ಅವನಿಂದ ಹತನಾಗಲಿಲ್ಲ. ಅದೃಷ್ಟವಶಾತ್ ನೀನು ಅವನ ಬಂಧಿಯಾಗಲಿಲ್ಲ. ಅನಘ! ಬೀಭತ್ಸುವನ್ನು ಸಂತವಿಸು ಮತ್ತು ಜಯದ ಆಶೀರ್ವಾದವನ್ನು ನೀಡು!”

08050026 ಯುಧಿಷ್ಠಿರ ಉವಾಚ।
08050026a ಏಹ್ಯೇಹಿ ಪಾರ್ಥ ಬೀಭತ್ಸೋ ಮಾಂ ಪರಿಷ್ವಜ ಪಾಂಡವ।
08050026c ವಕ್ತವ್ಯಮುಕ್ತೋಽಸ್ಮ್ಯಹಿತಂ ತ್ವಯಾ ಕ್ಷಾಂತಂ ಚ ತನ್ಮಯಾ।।

ಯುಧಿಷ್ಠಿರನು ಹೇಳಿದನು: “ಬಾ ಪಾರ್ಥ ಬಾ! ಬೀಭತ್ಸೋ ಪಾಂಡವ! ನನ್ನನ್ನು ತಬ್ಬಿಕೋ! ನಿಂದ್ಯವಾದರೂ ಹಿತಕರವಾದ ಮಾತನ್ನೇ ನೀನು ಆಡಿರುವೆ. ನಾನು ಅವೆಲ್ಲವನ್ನೂ ಕ್ಷಮಿಸಿದ್ದೇನೆ!

08050027a ಅಹಂ ತ್ವಾಮನುಜಾನಾಮಿ ಜಹಿ ಕರ್ಣಂ ಧನಂಜಯ।
08050027c ಮನ್ಯುಂ ಚ ಮಾ ಕೃಥಾಃ ಪಾರ್ಥ ಯನ್ಮಯೋಕ್ತೋಽಸಿ ದಾರುಣಂ।।

ನಾನು ನಿನಗೆ ಆಜ್ಞೆಮಾಡುತ್ತಿದ್ದೇನೆ! ಧನಂಜಯ! ಕರ್ಣನನ್ನು ಸಂಹರಿಸು! ಪಾರ್ಥ! ನಾನು ಹೇಳಿದ ದಾರುಣ ಮಾತುಗಳಿಂದ ಕೋಪಿಸಿಕೊಳ್ಳಬೇಡ!””

08050028 ಸಂಜಯ ಉವಾಚ।
08050028a ತತೋ ಧನಂಜಯೋ ರಾಜಂ ಶಿರಸಾ ಪ್ರಣತಸ್ತದಾ।
08050028c ಪಾದೌ ಜಗ್ರಾಹ ಪಾಣಿಭ್ಯಾಂ ಭ್ರಾತುರ್ಜ್ಯೇಷ್ಠಸ್ಯ ಮಾರಿಷ।।

ಸಂಜಯನು ಹೇಳಿದನು: “ರಾಜನ್! ಮಾರಿಷ! ಆಗ ಧನಂಜಯನು ಜ್ಯೇಷ್ಠ ಭ್ರಾತನ ಪಾದಗಳನ್ನು ಕೈಗಳಿಂದ ಹಿಡಿದು ಶಿರಸಾ ಸಮಸ್ಕರಿಸಿದನು.

08050029a ಸಮುತ್ಥಾಪ್ಯ ತತೋ ರಾಜಾ ಪರಿಷ್ವಜ್ಯ ಚ ಪೀಡಿತಂ।
08050029c ಮೂರ್ಧ್ನ್ಯುಪಾಘ್ರಾಯ ಚೈವೈನಮಿದಂ ಪುನರುವಾಚ ಹ।।

ಆಗ ರಾಜನು ಪೀಡಿತನಾಗಿದ್ದ ಅರ್ಜುನನನ್ನು ಮೇಲೆತ್ತಿ ನೆತ್ತಿಯನ್ನು ಆಘ್ರಾಣಿಸಿ ಪುನಃ ಇದನ್ನು ಹೇಳಿದನು:

08050030a ಧನಂಜಯ ಮಹಾಬಾಹೋ ಮಾನಿತೋಽಸ್ಮಿ ದೃಢಂ ತ್ವಯಾ।
08050030c ಮಾಹಾತ್ಮ್ಯಂ ವಿಜಯಂ ಚೈವ ಭೂಯಃ ಪ್ರಾಪ್ನುಹಿ ಶಾಶ್ವತಂ।।

“ಧನಂಜಯ! ಮಹಾಬಾಹೋ! ನಿನ್ನ ದೃಢತೆಯಿಂದ ನನ್ನನ್ನು ಗೌರವಿಸಿರುವೆ! ಶಾಶ್ವತವಾದ ಮಹಾತ್ಮೆಯನ್ನೂ ವಿಜಯನ್ನೂ ಪಡೆಯುತ್ತೀಯೆ!”

08050031 ಅರ್ಜುನ ಉವಾಚ।
08050031a ಅದ್ಯ ತಂ ಪಾಪಕರ್ಮಾಣಂ ಸಾನುಬಂದಂ ರಣೇ ಶರೈಃ।
08050031c ನಯಾಂಯಂತಂ ಸಮಾಸಾದ್ಯ ರಾಧೇಯಂ ಬಲಗರ್ವಿತಂ।।

ಅರ್ಜುನನು ಹೇಳಿದನು: “ಇಂದು ಆ ಪಾಪಕರ್ಮಿ ಬಲಗರ್ವಿತ ರಾಧೇಯನನ್ನು ರಣದಲ್ಲಿ ಎದುರಿಸಿ ಶರಗಳಿಂದ ಅವನನ್ನೂ ಅನುಯಾಯಿಗಳನ್ನೂ ಕಡೆಗಾಣಿಸುತ್ತೇನೆ!

08050032a ಯೇನ ತ್ವಂ ಪೀಡಿತೋ ಬಾಣೈರ್ದೃಢಮಾಯಮ್ಯ ಕಾರ್ಮುಕಂ।
08050032c ತಸ್ಯಾದ್ಯ ಕರ್ಮಣಃ ಕರ್ಣಃ ಫಲಂ ಪ್ರಾಪ್ಸ್ಯತಿ ದಾರುಣಂ।।

ಕಾರ್ಮುಕವನ್ನು ದೃಢವಾಗಿ ಬಗ್ಗಿಸಿ ಬಾಣಗಳಿಂದ ನಿನ್ನನ್ನು ಪೀಡಿಸಿದ ಆ ಕರ್ಣನು ತನ್ನ ಕರ್ಮಗಳ ಧಾರುಣ ಫಲವನ್ನು ಇಂದು ಪಡೆಯುತ್ತಾನೆ.

08050033a ಅದ್ಯ ತ್ವಾಮಹಮೇಷ್ಯಾಮಿ ಕರ್ಣಂ ಹತ್ವಾ ಮಹೀಪತೇ।
08050033c ಸಭಾಜಯಿತುಮಾಕ್ರಂದಾದಿತಿ ಸತ್ಯಂ ಬ್ರವೀಮಿ ತೇ।।

ಮಹೀಪತೇ! ಇಂದು ನಾನು ಕರ್ಣನನ್ನು ಕೊಂದೇ ನಿನ್ನ ಬಳಿ ಬರುತ್ತೇನೆ! ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ!

08050034a ನಾಹತ್ವಾ ವಿನಿವರ್ತೇಽಹಂ ಕರ್ಣಮದ್ಯ ರಣಾಜಿರಾತ್।
08050034c ಇತಿ ಸತ್ಯೇನ ತೇ ಪಾದೌ ಸ್ಪೃಶಾಮಿ ಜಗತೀಪತೇ।।

ಜಗತೀಪತೇ! ಇಂದು ಕರ್ಣನನ್ನು ಸಂಹರಿಸದೇ ನಾನು ರಣರಂಗದಿಂದ ಹಿಂದಿರುಗುವುದಿಲ್ಲ. ನಿನ್ನ ಪಾದಗಳನ್ನು ಸ್ಪರ್ಷಿಸಿ ಆಣೆಯಿಟ್ಟು ಹೇಳುತ್ತೇನೆ!””

08050035 ಸಂಜಯ ಉವಾಚ।
08050035a ಪ್ರಸಾದ್ಯ ಧರ್ಮರಾಜಾನಂ ಪ್ರಹೃಷ್ಟೇನಾಂತರಾತ್ಮನಾ।
08050035c ಪಾರ್ಥಃ ಪ್ರೋವಾಚ ಗೋವಿಂದಂ ಸೂತಪುತ್ರವಧೋದ್ಯತಃ।।

ಸಂಜಯನು ಹೇಳಿದನು: “ಧರ್ಮರಾಜನನ್ನು ಹೀಗೆ ಪ್ರಸನ್ನಗೊಳಿಸಿ ಒಳಗಿಂದೊಳಗೇ ಪ್ರಹೃಷ್ಟನಾಗಿ ಸೂತಪುತ್ರನ ವಧೆಗೆ ಸಿದ್ಧನಾದ ಪಾರ್ಥನು ಗೋವಿಂದನಿಗೆ ಹೇಳಿದನು:

08050036a ಕಲ್ಪ್ಯತಾಂ ಚ ರಥೋ ಭೂಯೋ ಯುಜ್ಯಂತಾಂ ಚ ಹಯೋತ್ತಮಾಃ।
08050036c ಆಯುಧಾನಿ ಚ ಸರ್ವಾಣಿ ಸಜ್ಜ್ಯಂತಾಂ ವೈ ಮಹಾರಥೇ।।

“ಪುನಃ ರಥವು ಸಿದ್ಧವಾಗಲಿ. ಉತ್ತಮ ಹಯಗಳನ್ನು ಹೂಡಲಿ. ಸರ್ವ ಆಯುಧಗಳೂ ಮಹಾರಥದಲ್ಲಿ ಸಜ್ಜಾಗಿ ಇಡಲ್ಪಡಲಿ!

08050037a ಉಪಾವೃತ್ತಾಶ್ಚ ತುರಗಾಃ ಶಿಕ್ಷಿತಾಶ್ಚಾಶ್ವಸಾದಿನಃ।
08050037c ರಥೋಪಕರಣೈಃ ಸರ್ವೈರುಪಾಯಾಂತು ತ್ವರಾನ್ವಿತಾಃ।।

ಕುದುರೆಸವಾರರಿಂದ ಪಳಗಿಸಲ್ಪಟ್ಟ ಮತ್ತು ತಿರುಗಾಡಿಸಲ್ಪಟ್ಟ ಕುದುರೆಗಳು ಸರ್ವ ರಥೋಪಕರಣಗಳೊಡನೆ ಬೇಗನೇ ಸಜ್ಜಾಗಲಿ!”

08050038a ಏವಮುಕ್ತೇ ಮಹಾರಾಜ ಫಲ್ಗುನೇನ ಮಹಾತ್ಮನಾ।
08050038c ಉವಾಚ ದಾರುಕಂ ಕೃಷ್ಣಃ ಕುರು ಸರ್ವಂ ಯಥಾಬ್ರವೀತ್।
08050038e ಅರ್ಜುನೋ ಭರತಶ್ರೇಷ್ಠಃ ಶ್ರೇಷ್ಠಃ ಸರ್ವಧನುಷ್ಮತಾಂ।।

ಮಹಾರಾಜ! ಮಹಾತ್ಮ ಫಲ್ಗುನನು ಹೀಗೆ ಹೇಳಲು ಕೃಷ್ಣನು ದಾರುಕನಿಗೆ “ಸರ್ವಧನುಷ್ಮತರಲ್ಲಿ ಶ್ರೇಷ್ಠ ಭರತಶ್ರೇಷ್ಠ ಅರ್ಜುನನು ಹೇಳಿದಂತೆ ಎಲ್ಲವನ್ನೂ ಮಾಡು!” ಎಂದನು.

08050039a ಆಜ್ಞಪ್ತಸ್ತ್ವಥ ಕೃಷ್ಣೇನ ದಾರುಕೋ ರಾಜಸತ್ತಮ।
08050039c ಯೋಜಯಾಮಾಸ ಸ ರಥಂ ವೈಯಾಘ್ರಂ ಶತ್ರುತಾಪನಂ।।

ರಾಜಸತ್ತಮ! ಕೃಷ್ಣನಿಂದ ಆಜ್ಞಾಪಿತನಾದ ದಾರುಕನು ವ್ಯಾಘ್ರಚರ್ಮದಿಂದ ಆಚ್ಛಾದಿತವಾದ ಮತ್ತು ಶತ್ರುಗಳನ್ನು ಸುಡಬಲ್ಲ ಆ ರಥವನ್ನು ಸಜ್ಜುಗೊಳಿಸಿದನು.

08050040a ಯುಕ್ತಂ ತು ರಥಮಾಸ್ಥಾಯ ದಾರುಕೇಣ ಮಹಾತ್ಮನಾ।
08050040c ಆಪೃಚ್ಚ್ಯ ಧರ್ಮರಾಜಾನಂ ಬ್ರಾಹ್ಮಣಾನ್ಸ್ವಸ್ತಿ ವಾಚ್ಯ ಚ।
08050040e ಸಮಂಗಲಸ್ವಸ್ತ್ಯಯನಮಾರುರೋಹ ರಥೋತ್ತಮಂ।।

ಮಹಾತ್ಮ ದಾರುಕನಿಂದ ಸಿದ್ಧಗೊಳಿಸಲ್ಪಟ್ಟ ರಥವನ್ನು ನೋಡಿ ಅರ್ಜುನನು ಧರ್ಮರಾಜನ ಆಶೀರ್ವಾದ ಮತ್ತು ಬ್ರಾಹ್ಮಣರ ಸ್ವಸ್ತಿವಾಚನವನ್ನು ಕೇಳಿಸಿಕೊಂಡು ಸುಮಂಗಲಯುಕ್ತವಾದ ಆ ಉತ್ತಮ ರಥವನ್ನೇರಿದನು.

08050041a ತಸ್ಯ ರಾಜಾ ಮಹಾಪ್ರಾಜ್ಞೋ ಧರ್ಮರಾಜೋ ಯುಧಿಷ್ಠಿರಃ।
08050041c ಆಶಿಷೋಽಯುಂಕ್ತ ಪರಮಾ ಯುಕ್ತಾಃ ಕರ್ಣವಧಂ ಪ್ರತಿ।।

ಮಹಾಪ್ರಾಜ್ಞ ಧರ್ಮರಾಜ ಯುಧಿಷ್ಠಿರನು ಅವನಿಗೆ ಕರ್ಣವಧೆಯ ಕುರಿತು ಪರಮ ಆಶೀರ್ವಚನಗಳನ್ನಿತ್ತನು.

08050042a ತಂ ಪ್ರಯಾಂತಂ ಮಹೇಷ್ವಾಸಂ ದೃಷ್ಟ್ವಾ ಭೂತಾನಿ ಭಾರತ।
08050042c ನಿಹತಂ ಮೇನಿರೇ ಕರ್ಣಂ ಪಾಂಡವೇನ ಮಹಾತ್ಮನಾ।।

ಭಾರತ! ಆ ಮಹೇಷ್ವಾಸನು ಹೋಗುತ್ತಿರುವುದನ್ನು ನೋಡಿ ಭೂತಗಳು ಮಹಾತ್ಮ ಪಾಂಡವನಿಂದ ಕರ್ಣನು ಹತನಾದನೆಂದೇ ಭಾವಿಸಿದವು.

08050043a ಬಭೂವುರ್ವಿಮಲಾಃ ಸರ್ವಾ ದಿಶೋ ರಾಜನ್ಸಮಂತತಃ।
08050043c ಚಾಷಾಶ್ಚ ಶತಪತ್ರಾಶ್ಚ ಕ್ರೌಂಚಾಶ್ಚೈವ ಜನೇಶ್ವರ।
08050043e ಪ್ರದಕ್ಷಿಣಮಕುರ್ವಂತ ತದಾ ವೈ ಪಾಂಡುನಂದನಂ।।

ರಾಜನ್! ಸುತ್ತಲೂ ಎಲ್ಲ ದಿಕ್ಕುಗಳೂ ವಿಮಲವಾದವು. ಜನೇಶ್ವರ! ನವಿಲುಗಳೂ, ಸಾರಸಗಳೂ ಮತ್ತು ಕ್ರೌಂಚಪಕ್ಷಿಗಳೂ ಪಾಂಡುನಂದನನ್ನು ಪ್ರದಕ್ಷಿಣೆ ಮಾಡಿ ಹಾರುತ್ತಿದ್ದವು.

08050044a ಬಹವಃ ಪಕ್ಷಿಣೋ ರಾಜನ್ಪುಂನಾಮಾನಃ ಶುಭಾಃ ಶಿವಾಃ।
08050044c ತ್ವರಯಂತೋಽರ್ಜುನಂ ಯುದ್ಧೇ ಹೃಷ್ಟರೂಪಾ ವವಾಶಿರೇ।।

ರಾಜನ್! ಅನೇಕ ಶುಭವಾದ ಮಂಗಳಕರ ಗಂಡುಪಕ್ಷಿಗಳು ಅರ್ಜುನನನ್ನು ಯುದ್ಧಕ್ಕೆ ತ್ವರೆಮಾಡುತ್ತಿರುವವೋ ಎನ್ನುವಂತೆ ಸಂತೋಷದಿಂದ ಕೂಗುತ್ತಿದ್ದವು.

08050045a ಕಂಕಾ ಗೃಧ್ರಾ ವಡಾಶ್ಚೈವ ವಾಯಸಾಶ್ಚ ವಿಶಾಂ ಪತೇ।
08050045c ಅಗ್ರತಸ್ತಸ್ಯ ಗಚ್ಚಂತಿ ಭಕ್ಷ್ಯಹೇತೋರ್ಭಯಾನಕಾಃ।।

ವಿಶಾಂಪತೇ! ಭಯಾನಕ ಹದ್ದುಗಳೂ, ರಣಹದ್ದುಗಳೂ, ಗಿಡುಗಗಳೂ ಮತ್ತು ಕಾಗೆಗಳು ಮಾಂಸದ ಸಲುವಾಗಿ ಅವನ ಮುಂದೆ ಮುಂದೆ ಹೋಗುತ್ತಿದ್ದವು.

08050046a ನಿಮಿತ್ತಾನಿ ಚ ಧನ್ಯಾನಿ ಪಾರ್ಥಸ್ಯ ಪ್ರಶಶಂಸಿರೇ।
08050046c ವಿನಾಶಮರಿಸೈನ್ಯಾನಾಂ ಕರ್ಣಸ್ಯ ಚ ವಧಂ ತಥಾ।।

ಧನ್ಯ ನಿಮಿತ್ತಗಳು ಪಾರ್ಥನನ್ನು ಪ್ರಶಂಶಿಸಿದವು ಮತ್ತು ಹಾಗೆಯೇ ಅರಿಸೇನೆಗಳ ವಿನಾಶವನ್ನೂ ಕರ್ಣನ ವಧೆಯನ್ನೂ ಸೂಚಿಸಿದವು.

08050047a ಪ್ರಯಾತಸ್ಯಾಥ ಪಾರ್ಥಸ್ಯ ಮಹಾನ್ಸ್ವೇದೋ ವ್ಯಜಾಯತ।
08050047c ಚಿಂತಾ ಚ ವಿಪುಲಾ ಜಜ್ಞೇ ಕಥಂ ನ್ವೇತದ್ಭವಿಷ್ಯತಿ।।

ಹಾಗೆ ಪಾರ್ಥನು ಪ್ರಯಾಣಿಸುತ್ತಿರುವಾಗ ಅವನಿಗೆ ಅತಿಯಾದ ಬೆವರುಂಟಾಯಿತು. ಇದು ಏಕೆ ಹೀಗಾಗುತ್ತಿದೆ ಎಂಬ ವಿಪುಲ ಚಿಂತೆಯೂ ಅವನಿಗುಂಟಾಯಿತು.

08050048a ತತೋ ಗಾಂಡೀವಧನ್ವಾನಮಬ್ರವೀನ್ಮಧುಸೂದನಃ।
08050048c ದೃಷ್ಟ್ವಾ ಪಾರ್ಥಂ ತದಾಯಸ್ತಂ ಚಿಂತಾಪರಿಗತಂ ತದಾ।।

ಹಾಗೆ ಚಿಂತಾಪರನಾಗಿದ್ದ ಪಾರ್ಥನನ್ನು ನೋಡಿ ಮಧುಸೂದನನು ಗಾಂಡೀವಧನ್ವಿಗೆ ಹೀಗೆ ಹೇಳಿದನು:

08050049a ಗಾಂಡೀವಧನ್ವನ್ಸಂಗ್ರಾಮೇ ಯೇ ತ್ವಯಾ ಧನುಷಾ ಜಿತಾಃ।
08050049c ನ ತೇಷಾಂ ಮಾನುಷೋ ಜೇತಾ ತ್ವದನ್ಯ ಇಹ ವಿದ್ಯತೇ।।

“ಗಾಂಡೀವಧನ್ವಿಯೇ! ನಿನ್ನ ಧನುಸ್ಸಿನಿಂದ ನೀನು ಸಂಗ್ರಾಮದಲ್ಲಿ ಯಾರನ್ನು ಜಯಿಸಿದ್ದೀಯೋ ಅವರನ್ನು ಅನ್ಯ ಮಾನವರು ಜಯಿಸಲು ಸಾಧ್ಯವಾಗುತ್ತಿರಲಿಲ್ಲ.

08050050a ದೃಷ್ಟಾ ಹಿ ಬಹವಃ ಶೂರಾಃ ಶಕ್ರತುಲ್ಯಪರಾಕ್ರಮಾಃ।
08050050c ತ್ವಾಂ ಪ್ರಾಪ್ಯ ಸಮರೇ ವೀರಂ ಯೇ ಗತಾಃ ಪರಮಾಂ ಗತಿಂ।।

ಶಕ್ರತುಲ್ಯಪರಾಕ್ರಮವುಳ್ಳ ಅನೇಕ ಶೂರರು ಸಮರದಲ್ಲಿ ನಿನ್ನನ್ನು ಎದುರಿಸಿ ವೀರರ ಪರಮ ಗತಿಯನ್ನು ಹೊಂದಿರುವುದನ್ನು ನೋಡಿದ್ದೇವೆ!

08050051a ಕೋ ಹಿ ದ್ರೋಣಂ ಚ ಭೀಷ್ಮಂ ಚ ಭಗದತ್ತಂ ಚ ಮಾರಿಷ।
08050051c ವಿಂದಾನುವಿಂದಾವಾವಂತ್ಯೌ ಕಾಂಬೋಜಂ ಚ ಸುದಕ್ಷಿಣಂ।।
08050052a ಶ್ರುತಾಯುಷಂ ಮಹಾವೀರ್ಯಮಚ್ಯುತಾಯುಷಮೇವ ಚ।
08050052c ಪ್ರತ್ಯುದ್ಗಮ್ಯ ಭವೇತ್ ಕ್ಷೇಮೀ ಯೋ ನ ಸ್ಯಾತ್ತ್ವಮಿವ ಕ್ಷಮೀ।।

ಮಾರಿಷ! ದ್ರೋಣ, ಭೀಷ್ಮ, ಭಗದತ್ತ, ಅವಂತಿಯ ವಿಂದಾನುವಿಂದರು, ಕಾಂಬೋಜದ ಸುದಕ್ಷಿಣ, ಮಯಾವೀರ್ಯ ಶ್ರುತಾಯುಷ ಮತ್ತು ಅಚ್ಯುತಾಯುಷರನ್ನು ಎದುರಿಸಿ ನೀನಲ್ಲದೇ ಬೇರೆ ಯಾರಿಗೆ ತಾನೇ ಕ್ಷೇಮದಿಂದ ಇರಲು ಸಾಧ್ಯವಾಗುತ್ತಿತ್ತು?

08050053a ತವ ಹ್ಯಸ್ತ್ರಾಣಿ ದಿವ್ಯಾನಿ ಲಾಘವಂ ಬಲಂ ಏವ ಚ।
08050053c ವೇಧಃ ಪಾತಶ್ಚ ಲಕ್ಷಶ್ಚ ಯೋಗಶ್ಚೈವ ತವಾರ್ಜುನ।
08050053e ಅಸಮ್ಮೋಹಶ್ಚ ಯುದ್ಧೇಷು ವಿಜ್ಞಾನಸ್ಯ ಚ ಸಂನತಿಃ।।

ನಿನ್ನಲ್ಲಿ ದಿವ್ಯಾಸ್ತ್ರಗಳು, ಲಾಘವವೂ, ಬಲವೂ ಇವೆ. ಅರ್ಜುನ! ಲಕ್ಷ್ಯಭೇದನ ಪಾತನಗಳು ನಿನಗೆ ಚೆನ್ನಾಗಿ ತಿಳಿದಿವೆ. ಯುದ್ಧದಲ್ಲಿ ನೀನು ಸಮ್ಮೋಹನನಾಗುವುದಿಲ್ಲ. ಮತ್ತು ನಿನ್ನಲ್ಲಿ ವಿಶೇಷ ಜ್ಞಾನವಿದೆ.

08050054a ಭವಾನ್ದೇವಾಸುರಾನ್ಸರ್ವಾನ್ ಹನ್ಯಾತ್ಸಹಚರಾಚರಾನ್।
08050054c ಪೃಥಿವ್ಯಾಂ ಹಿ ರಣೇ ಪಾರ್ಥ ನ ಯೋದ್ಧಾ ತ್ವತ್ಸಮಃ ಪುಮಾನ್।।

ಪಾರ್ಥ! ನೀನು ದೇವಾಸುರರನ್ನೂ ಸಚರಾಚರ ಸರ್ವವನ್ನೂ ಪೃಥ್ವಿಯನ್ನೂ ನಾಶಗೊಳಿಸಬಲ್ಲೆ. ರಣದಲ್ಲಿ ನಿನ್ನ ಸಮನಾದ ಪುರುಷ ಯೋಧನು ಇಲ್ಲ!

08050055a ಧನುರ್ಗ್ರಹಾ ಹಿ ಯೇ ಕೇ ಚಿತ್ ಕ್ಷತ್ರಿಯಾ ಯುದ್ಧದುರ್ಮದಾಃ।
08050055c ಆ ದೇವಾತ್ತ್ವತ್ಸಮಂ ತೇಷಾಂ ನ ಪಶ್ಯಾಮಿ ಶೃಣೋಮಿ ವಾ।।

ದೇವತೆಗಳ ಪರ್ಯಂತವಾಗಿ ಯುದ್ಧದುರ್ಮದರಾದ ಧನುಸ್ಸನ್ನು ಹಿಡಿದಿರುವ ಕ್ಷತ್ರಿಯರೇನೋ ಇದ್ದಾರೆ. ಆದರೆ ಅವರಲ್ಲಿ ನಿನ್ನ ಸಮನಾಗಿರುವವರನ್ನು ನಾನು ನೋಡಿಲ್ಲ. ಕೇಳಿಯೂ ಇಲ್ಲ.

08050056a ಬ್ರಹ್ಮಣಾ ಚ ಪ್ರಜಾಃ ಸೃಷ್ಟಾ ಗಾಂಡೀವಂ ಚ ಮಹಾದ್ಭುತಂ।
08050056c ಯೇನ ತ್ವಂ ಯುಧ್ಯಸೇ ಪಾರ್ಥ ತಸ್ಮಾನ್ನಾಸ್ತಿ ತ್ವಯಾ ಸಮಃ।।

ಬ್ರಹ್ಮನಿಂದ ಪ್ರಜೆಗಳೂ ಮತ್ತು ಈ ಮಹಾದ್ಭುತವಾದ ಗಾಂಡೀವವೂ ಸೃಷ್ಟಿಸಲ್ಪಟ್ಟವು. ಪಾರ್ಥ! ಅದರಿಂದ ನೀನು ಯುದ್ಧಮಾಡುತ್ತಿರುವೆ! ನಿನ್ನ ಸಮನಾಗಿರುವವರು ಯಾರೂ ಇಲ್ಲ!

08050057a ಅವಶ್ಯಂ ತು ಮಯಾ ವಾಚ್ಯಂ ಯತ್ಪಥ್ಯಂ ತವ ಪಾಂಡವ।
08050057c ಮಾವಮಂಸ್ಥಾ ಮಹಾಬಾಹೋ ಕರ್ಣಮಾಹವಶೋಭಿನಂ।।

ಆದರೂ ಪಾಂಡವ! ನಿನ್ನ ಹಿತದಲ್ಲಿ ನಾನು ಈ ಮಾತನ್ನು ಹೇಳುವುದು ಅವಶ್ಯಕವಾಗಿದೆ. ಮಹಾಬಾಹೋ! ಆಹವಶೋಭೀ ಕರ್ಣನನ್ನು ಅವಗಣಿಸಬೇಡ!

08050058a ಕರ್ಣೋ ಹಿ ಬಲವಾನ್ ಧೃಷ್ಟಃ ಕೃತಾಸ್ತ್ರಶ್ಚ ಮಹಾರಥಃ।
08050058c ಕೃತೀ ಚ ಚಿತ್ರಯೋಧೀ ಚ ದೇಶೇ ಕಾಲೇ ಚ ಕೋವಿದಃ।।

ಏಕೆಂದರೆ ಕರ್ಣನು ಬಲವಾನನು. ಅಭಿಮಾನಿಯು. ಅಸ್ತ್ರವಿದನು. ಮಹಾರಥನು. ಯುದ್ಧಕುಶಲನು. ವಿತ್ರಯೋಧಿಯು. ಮತ್ತು ದೇಶ-ಕಾಲಗಳ ಕೋವಿದನು.

08050059a ತೇಜಸಾ ವಹ್ನಿಸದೃಶೋ ವಾಯುವೇಗಸಮೋ ಜವೇ।
08050059c ಅಂತಕಪ್ರತಿಮಃ ಕ್ರೋಧೇ ಸಿಂಹಸಂಹನನೋ ಬಲೀ।।

ತೇಜಸ್ಸಿನಲ್ಲಿ ವಹ್ನಿಸದೃಶನು. ವೇಗದಲ್ಲಿ ವಾಯುವಿನ ವೇಗಸಮನು. ಕ್ರೋಧದಲ್ಲಿ ಅಂತಕನಂತೆ ಮತ್ತು ಬಲದಲ್ಲಿ ಸಿಂಹದಂತೆ.

08050060a ಅಯೋರತ್ನಿರ್ಮಹಾಬಾಹುರ್ವ್ಯೂಢೋರಸ್ಕಃ ಸುದುರ್ಜಯಃ।
08050060c ಅತಿಮಾನೀ ಚ ಶೂರಶ್ಚ ಪ್ರವೀರಃ ಪ್ರಿಯದರ್ಶನಃ।।

ಎತ್ತರವಾಗಿರುವನು. ಮಾಹಾಬಾಹು. ವಿಶಾಲ ಎದೆಯುಳ್ಳವನು. ಜಯಿಸಲು ಕಷ್ಟಕರನಾದವನು. ಅತಿಮಾನಿನಿಯು. ಶೂರ, ಪ್ರವೀರ ಮತ್ತು ನೋಡಲು ಸುಂದರನು.

08050061a ಸರ್ವೈರ್ಯೋಧಗುಣೈರ್ಯುಕ್ತೋ ಮಿತ್ರಾಣಾಮಭಯಂಕರಃ।
08050061c ಸತತಂ ಪಾಂಡವದ್ವೇಷೀ ಧಾರ್ತರಾಷ್ಟ್ರಹಿತೇ ರತಃ।।

ಯೋಧನ ಸರ್ವ ಗುಣಗಳಿಂದಲೂ ಕೂಡಿದವನು. ಮಿತ್ರರಿಗೆ ಅಭಯವನ್ನುಂಟುಮಾಡುವವನು. ಸತತವೂ ಪಾಂಡವದ್ವೇಷಿಯಾಗಿರುವನು ಮತ್ತು ಧಾರ್ತರಾಷ್ಟ್ರರ ಹಿತದಲ್ಲಿ ನಿರತನಾಗಿರುವವನು.

08050062a ಸರ್ವೈರವಧ್ಯೋ ರಾಧೇಯೋ ದೇವೈರಪಿ ಸವಾಸವೈಃ।
08050062c ಋತೇ ತ್ವಾಮಿತಿ ಮೇ ಬುದ್ಧಿಸ್ತ್ವಮದ್ಯ ಜಹಿ ಸೂತಜಂ।।

ರಾಧೇಯನು ನಿನ್ನನ್ನು ಮಾತ್ರ ಬಿಟ್ಟು ಎಲ್ಲರಿಂದಲೂ, ವಾಸವನೊಂದಿಗೆ ದೇವತೆಗಳಿಂದಲೂ, ಅವಧ್ಯನು ಎಂದು ನನ್ನ ಯೋಚನೆ. ಇಂದು ಸೂತಜನನ್ನು ಕೊಲ್ಲು!

08050063a ದೇವೈರಪಿ ಹಿ ಸಂಯತ್ತೈರ್ಬಿಭ್ರದ್ಭಿರ್ಮಾಂಸಶೋಣಿತಂ।
08050063c ಅಶಕ್ಯಃ ಸಮರೇ ಜೇತುಂ ಸರ್ವೈರಪಿ ಯುಯುತ್ಸುಭಿಃ।।

ಮಾಂಸಶೋಣಿತಯುಕ್ತವಾದ ಶರೀರಗಳನ್ನು ಧರಿಸಿ ದೇವತೆಗಳು ಯುದ್ಧೋತ್ಸುಕರಾಗಿ ಬಂದರೂ ಸಮರದಲ್ಲಿ ಅವರೆಲ್ಲರಿಂದ ಇವನನ್ನು ಜಯಿಸಲು ಶಕ್ಯವಾಗುವುದಿಲ್ಲ.

08050064a ದುರಾತ್ಮಾನಂ ಪಾಪಮತಿಂ ನೃಶಂಸಂ ದುಷ್ಟಪ್ರಜ್ಞಂ ಪಾಂಡವೇಯೇಷು ನಿತ್ಯಂ।
08050064c ಹೀನಸ್ವಾರ್ಥಂ ಪಾಂಡವೇಯೈರ್ವಿರೋಧೇ ಹತ್ವಾ ಕರ್ಣಂ ಧಿಷ್ಠಿತಾರ್ಥೋ ಭವಾದ್ಯ।।

ಇಂದು ಆ ದುರಾತ್ಮನನ್ನೂ, ಪಾಪಮತಿಯನ್ನೂ, ನೃಶಂಸನನ್ನೂ, ನಿತ್ಯವೂ ಪಾಂಡವರೊಡನೆ ದುಷ್ಟನಾಗಿ ನಡೆದುಕೊಂಡುಬಂದಿರುವ, ಹೀನಸ್ವಾರ್ಥಿ, ಪಾಂಡವೇಯರ ವಿರೋಧೀ ಕರ್ಣನನ್ನು ಸಂಹರಿಸಿ ನಿನ್ನ ಮನೋರಥವನ್ನು ಪೂರೈಸಿಕೋ!

08050065a ವೀರಂ ಮನ್ಯತ ಆತ್ಮಾನಂ ಯೇನ ಪಾಪಃ ಸುಯೋಧನಃ।
08050065c ತಮದ್ಯ ಮೂಲಂ ಪಾಪಾನಾಂ ಜಯ ಸೌತಿಂ ಧನಂಜಯ।।

ಧನಂಜಯ! ಯಾರಿಂದಾಗಿ ಸುಯೋಧನನು ತನ್ನನ್ನು ವೀರನೆಂದು ತಿಳಿದುಕೊಂಡಿದ್ದಾನೋ ಅವನ ಪಾಪಗಳ ಮೂಲ ಸೌತಿಯನ್ನು ಇಂದು ಜಯಿಸು!””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಕೃಷ್ಣಾರ್ಜುನಸಂವಾದೇ ಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಕರ್ಣಾರ್ಜುನಸಂವಾದ ಎನ್ನುವ ಐವತ್ತನೇ ಅಧ್ಯಾಯವು.