ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 49
ಸಾರ
ಯುಧಿಷ್ಠಿರನ ಮಾತನ್ನು ಕೇಳಿ ಕ್ರುದ್ಧನಾದ ಅರ್ಜುನನು ಅವನನ್ನು ಸಂಹರಿಸಲು ಖಡ್ಗವನ್ನು ಎಳೆದು ತೆಗಿಯಲು, ಕೃಷ್ಣನು ಅವನನ್ನು ತಡೆದುದು (1-7). ಗಾಂಡೀವವನ್ನು ಅಪಮಾನಿಸಿದವನನ್ನು ಸಂಹರಿಸುತ್ತೇನೆ ಎನ್ನುವುದು ತನ್ನ ಅಂತರಂಗದ ವ್ರತವೆಂದು ಅರ್ಜುನನು ಕೃಷ್ಣನಿಗೆ ಹೇಳಿದುದು (8-13). ಸತ್ಯವನ್ನಾಡುವುದೇ ಒಳ್ಳೆಯದು. “ಸತ್ಯಕ್ಕಿಂತಲೂ ಶ್ರೇಷ್ಠವಾದುದು ಇಲ್ಲ. ಆದರೆ ಸತ್ಯವನ್ನು ಅನುಷ್ಠಾನಮಾಡುವ ತತ್ತ್ವವನ್ನು ತಿಳಿದುಕೊಳ್ಳುವುದು ಕಷ್ಟ.” ಎಂದು ಕೃಷ್ಣನು ತನ್ನ ಪ್ರತಿಜ್ಞೆಯನ್ನು ಪಾಲಿಸಲು ಯುಧಿಷ್ಠಿರನನ್ನು ಕೊಲ್ಲಲು ಮುಂದಾದ ಅರ್ಜುನನನ್ನು ತಡೆಯುವುದು (14-32). ಬಲಾಕ-ಕೌಶಿಕರ ಕಥೆ (33-56). ಮುಂದೆ ಏನುಮಾಡಬೇಕೆಂದು ಅರ್ಜುನನು ಕೇಳಲು (57-63), ಕೃಷ್ಣನು ಯುಧಿಷ್ಠಿರನನ್ನು ಅಪಮಾನಿಸುವುದರಿಂದ ನೀನು ನಿನ್ನ ಪ್ರತಿಜ್ಞೆಯನ್ನು ಸತ್ಯವಾಗಿಸುವೆ ಎಂದು ಅರ್ಜುನನಿಗೆ ಸಲಹೆನೀಡಿದುದು (64-71). ಆಗ ಅರ್ಜುನನು ತನಗಿಷ್ಟವಿಲ್ಲದಿದ್ದರೂ ಅತ್ಯಂತ ನಿಷ್ಠುರ ಮಾತುಗಳಿಂದ ಯುಧಿಷ್ಠಿರನನ್ನು ಅಪಮಾನಿಸಿದುದು (72-82). ಅಣ್ಣನಿಗೆ ಅಪಮಾನಿಸಿದುದರಿಂದ ಪರಿತಪಿಸಿದ ಅರ್ಜುನನು ಆತ್ಮಹತ್ಯೆಗೆ ತೊಡಗಲು ಕೃಷ್ಣನು ಆತ್ಮಶ್ಲಾಘನೆಯು ಆತ್ಮಹತ್ಯೆಗೆ ಸಮನಾದುದೆಂದು ಹೇಳಿದುದು (83-92). ಅರ್ಜುನನ ಆತ್ಮಶ್ಲಾಘನೆ (93-100). ದುಃಖಿತನಾದ ಯುಧಿಷ್ಠಿರನು ವನಕ್ಕೆ ತೆರಳಲು ಸಿದ್ಧನಾಗಲು ಕೃಷ್ಣನು ಅವನನ್ನು ತಡೆದುದು (101-116).
08049001 ಸಂಜಯ ಉವಾಚ।
08049001a ಯುಧಿಷ್ಠಿರೇಣೈವಮುಕ್ತಃ ಕೌಂತೇಯಃ ಶ್ವೇತವಾಹನಃ।
08049001c ಅಸಿಂ ಜಗ್ರಾಹ ಸಂಕ್ರುದ್ಧೋ ಜಿಘಾಂಸುರ್ಭರತರ್ಷಭಂ।।
ಸಂಜಯನು ಹೇಳಿದನು: “ಯುಧಿಷ್ಠಿರನು ಹೀಗೆ ಹೇಳಲು ಕೌಂತೇಯ ಶ್ವೇತವಾಹನನು ಸಂಕ್ರುದ್ಧನಾಗಿ ಭರತರ್ಷಭನನ್ನು ಸಂಹರಿಸಲು ಖಡ್ಗವನ್ನು ಎಳೆದು ತೆಗೆದನು.
08049002a ತಸ್ಯ ಕೋಪಂ ಸಮುದ್ವೀಕ್ಷ್ಯ ಚಿತ್ತಜ್ಞಃ ಕೇಶವಸ್ತದಾ।
08049002c ಉವಾಚ ಕಿಮಿದಂ ಪಾರ್ಥ ಗೃಹೀತಃ ಖಡ್ಗ ಇತ್ಯುತ।।
ಅವನ ಕೋಪವನ್ನು ನೋಡಿ ಚಿತ್ತಜ್ಞನಾದ ಕೇಶವನು “ಪಾರ್ಥ! ಇದೇನು? ಖಡ್ಗವನ್ನು ಹಿಡಿದಿರುವೆ?” ಎಂದು ಕೇಳಿದನು.
08049003a ನೇಹ ಪಶ್ಯಾಮಿ ಯೋದ್ಧವ್ಯಂ ತವ ಕಿಂ ಚಿದ್ಧನಂಜಯ।
08049003c ತೇ ಧ್ವಸ್ತಾ ಧಾರ್ತರಾಷ್ಟ್ರಾ ಹಿ ಸರ್ವೇ ಭೀಮೇನ ಧೀಮತಾ।।
“ಧನಂಜಯ! ಇಲ್ಲಿ ಯಾರೊಡನೆಯೂ ಯುದ್ಧಮಾಡಬೇಕಾಗಿರುವುದು ನನಗೆ ಕಾಣುವುದಿಲ್ಲ! ಏಕೆಂದರೆ ಧಾರ್ತರಾಷ್ಟ್ರರೆಲ್ಲರೂ ಧೀಮತ ಭೀಮನಿಂದ ಧ್ವಂಸವಾಗುತ್ತಿದ್ದಾರೆ!
08049004a ಅಪಯಾತೋಽಸಿ ಕೌಂತೇಯ ರಾಜಾ ದ್ರಷ್ಟವ್ಯ ಇತ್ಯಪಿ।
08049004c ಸ ರಾಜಾ ಭವತಾ ದೃಷ್ಟಃ ಕುಶಲೀ ಚ ಯುಧಿಷ್ಠಿರಃ।।
ಕೌಂತೇಯ! ರಾಜನನ್ನು ನೋಡಬೇಕೆಂದು ನೀನು ಇಲ್ಲಿಗೆ ಬಂದಿರುವೆ! ರಾಜನನ್ನು ನೀನು ನೋಡಿದ್ದಾಯಿತು! ಯುಧಿಷ್ಠಿರನು ಕುಶಲನಾಗಿಯೇ ಇದ್ದಾನೆ!
08049005a ತಂ ದೃಷ್ಟ್ವಾ ನೃಪಶಾರ್ದೂಲಂ ಶಾರ್ದೂಲಸಮವಿಕ್ರಮಂ।
08049005c ಹರ್ಷಕಾಲೇ ತು ಸಂಪ್ರಾಪ್ತೇ ಕಸ್ಮಾತ್ತ್ವಾ ಮನ್ಯುರಾವಿಶತ್।।
ಶಾರ್ದೂಲಸಮವಿಕ್ರಮಿಯಾಗಿರುವ ನೃಪಶಾರ್ದೂಲನನ್ನು ನೋಡಿ ಹರ್ಷಪಡಬೇಕಾಗಿರುವ ಸಮಯದಲ್ಲಿ ನಿನಗೇಕೆ ಕೋಪವು ಆವರಿಸಿಕೊಂಡಿದೆ?
08049006a ನ ತಂ ಪಶ್ಯಾಮಿ ಕೌಂತೇಯ ಯಸ್ತೇ ವಧ್ಯೋ ಭವೇದಿಹ।
08049006c ಕಸ್ಮಾದ್ಭವಾನ್ಮಹಾಖಡ್ಗಂ ಪರಿಗೃಹ್ಣಾತಿ ಸತ್ವರಂ।।
ಕೌಂತೇಯ! ನಿನ್ನಿಂದ ವಧಿಸಲ್ಪಡಬೇಕಾಗಿರುವ ಯಾರನ್ನೂ ಇಲ್ಲಿ ನಾನು ಕಾಣುತ್ತಿಲ್ಲ! ನೀನು ಏಕೆ ತ್ವರೆಮಾಡಿ ಮಹಾಖಡ್ಗವನ್ನು ಹಿಡಿದಿರುವೆ?
08049007a ತತ್ತ್ವಾ ಪೃಚ್ಚಾಮಿ ಕೌಂತೇಯ ಕಿಮಿದಂ ತೇ ಚಿಕೀರ್ಷಿತಂ।
08049007c ಪರಾಮೃಶಸಿ ಯತ್ಕ್ರುದ್ಧಃ ಖಡ್ಗಮದ್ಭುತವಿಕ್ರಮ।।
ಕೌಂತೇಯ! ನಿನ್ನನ್ನೇ ಪ್ರಶ್ನಿಸುತ್ತಿದ್ದೇನೆ. ನೀನೇನು ಮಾಡುತ್ತಿರುವೆ? ಅದ್ಭುತವಿಕ್ರಮಿ! ಕ್ರುದ್ಧನಾಗಿ ಏಕೆ ಖಡ್ಗವನ್ನು ಎಳೆದಿರುವೆ? ಉತ್ತರಿಸು!”
08049008a ಏವಮುಕ್ತಸ್ತು ಕೃಷ್ಣೇನ ಪ್ರೇಕ್ಷಮಾಣೋ ಯುಧಿಷ್ಠಿರಂ।
08049008c ಅರ್ಜುನಃ ಪ್ರಾಹ ಗೋವಿಂದಂ ಕ್ರುದ್ಧಃ ಸರ್ಪ ಇವ ಶ್ವಸನ್।।
ಕೃಷ್ಣನು ಹೀಗೆ ಹೇಳಲು ಅರ್ಜುನನು ಯುಧಿಷ್ಠಿರನನ್ನೇ ದುರುಗುಟ್ಟಿ ನೋಡುತ್ತಾ, ಕ್ರುದ್ಧಸರ್ಪದಂತೆ ಭುಸುಗುಟ್ಟುತ್ತಾ ಗೋವಿಂದನಿಗೆ ಹೇಳಿದನು:
08049009a ದದ ಗಾಂಡೀವಮನ್ಯಸ್ಮಾ ಇತಿ ಮಾಂ ಯೋಽಭಿಚೋದಯೇತ್।
08049009c ಚಿಂದ್ಯಾಮಹಂ ಶಿರಸ್ತಸ್ಯ ಇತ್ಯುಪಾಂಶುವ್ರತಂ ಮಮ।।
““ಇತರನಿಗೆ ಗಾಂಡೀವವನ್ನು ಕೊಟ್ಟುಬಿಡು!” ಎಂದು ಯಾರು ನನಗೆ ಹೇಳುತ್ತಾರೋ ಅವರ ಶಿರಸ್ಸನ್ನು ತುಂಡರಿಸುತ್ತೇನೆ ಎನ್ನುವುದು ನನ್ನ ಅಂತರಂಗದ ವ್ರತ!
08049010a ತದುಕ್ತೋಽಹಮದೀನಾತ್ಮನ್ರಾಜ್ಞಾಮಿತಪರಾಕ್ರಮ।
08049010c ಸಮಕ್ಷಂ ತವ ಗೋವಿಂದ ನ ತತ್ ಕ್ಷಂತುಮಿಹೋತ್ಸಹೇ।।
ಅಮಿತಪರಾಕ್ರಮ! ಅದೀನಾತ್ಮನ್! ಗೋವಿಂದ! ನಿನ್ನ ಸಮಕ್ಷಮದಲ್ಲಿಯೇ ರಾಜನು ನನಗೆ ಇದನ್ನು ಹೇಳಿದನು. ಅದನ್ನು ನಾನು ಕ್ಷಮಿಸಲಾರೆನು!
08049011a ತಸ್ಮಾದೇನಂ ವಧಿಷ್ಯಾಮಿ ರಾಜಾನಂ ಧರ್ಮಭೀರುಕಂ।
08049011c ಪ್ರತಿಜ್ಞಾಂ ಪಾಲಯಿಷ್ಯಾಮಿ ಹತ್ವೇಮಂ ನರಸತ್ತಮಂ।
08049011e ಏತದರ್ಥಂ ಮಯಾ ಖಡ್ಗೋ ಗೃಹೀತೋ ಯದುನಂದನ।।
ಆದುದರಿಂದ ನಾನು ಧರ್ಮಭೀರುಕನಾದ ಈ ರಾಜನನ್ನು ವಧಿಸುತ್ತೇನೆ! ಈ ನರಸತ್ತಮನನ್ನು ಸಂಹರಿಸಿ ಪ್ರತಿಜ್ಞೆಯನ್ನು ಪಾಲಿಸುತ್ತೇನೆ! ಯದುನಂದನ! ಇದಕ್ಕಾಗಿಯೇ ನಾನು ಖಡ್ಗವನ್ನು ಹಿಡಿದಿದ್ದೇನೆ!
08049012a ಸೋಽಹಂ ಯುಧಿಷ್ಠಿರಂ ಹತ್ವಾ ಸತ್ಯೇಽಪ್ಯಾನೃಣ್ಯತಾಂ ಗತಃ।
08049012c ವಿಶೋಕೋ ವಿಜ್ವರಶ್ಚಾಪಿ ಭವಿಷ್ಯಾಮಿ ಜನಾರ್ದನ।।
ಜನಾರ್ದನ! ಯುಧಿಷ್ಠಿರನನ್ನು ಸಂಹರಿಸಿ ನಾನು ಸತ್ಯಕ್ಕೆ ಅನೃಣಿಯಾಗುತ್ತೇನೆ. ಮತ್ತು ಶೋಕರಹಿತನೂ, ಚಿಂತಾರಹಿತನೂ ಆಗುತ್ತೇನೆ!
08049013a ಕಿಂ ವಾ ತ್ವಂ ಮನ್ಯಸೇ ಪ್ರಾಪ್ತಂ ಅಸ್ಮಿನ್ಕಾಲೇ ಸಮುತ್ಥಿತೇ।
08049013c ತ್ವಮಸ್ಯ ಜಗತಸ್ತಾತ ವೇತ್ಥ ಸರ್ವಂ ಗತಾಗತಂ।
08049013e ತತ್ತಥಾ ಪ್ರಕರಿಷ್ಯಾಮಿ ಯಥಾ ಮಾಂ ವಕ್ಷ್ಯತೇ ಭವಾನ್।।
ಅಯ್ಯಾ! ಈ ಸಮಯವು ಬಂದೊದಗಿರುವಾಗ ಬೇರೆ ಏನನ್ನಾದರೂ ಮಾಡಬೇಕೆಂದು ನಿನಗನ್ನಿಸುತ್ತದೆಯೇ? ನಿನಗೆ ಜಗತ್ತಿನಲ್ಲಿ ನಡೆದಿರುವ ಮತ್ತು ನಡೆಯಲಿರುವ ಎಲ್ಲವೂ ತಿಳಿದಿದೆ. ಆದುದರಿಂದ ನೀನು ನನಗೇನು ಹೇಳುತ್ತೀಯೋ ಅದರಂತೆಯೇ ಮಾಡುತ್ತೇನೆ!”
08049014 ಕೃಷ್ಣ ಉವಾಚ।
08049014a ಇದಾನೀಂ ಪಾರ್ಥ ಜಾನಾಮಿ ನ ವೃದ್ಧಾಃ ಸೇವಿತಾಸ್ತ್ವಯಾ।
08049014c ಅಕಾಲೇ ಪುರುಷವ್ಯಾಘ್ರ ಸಂರಂಭಕ್ರಿಯಯಾನಯಾ।
08049014e ನ ಹಿ ಧರ್ಮವಿಭಾಗಜ್ಞಃ ಕುರ್ಯಾದೇವಂ ಧನಂಜಯ।।
ಕೃಷ್ಣನು ಹೇಳಿದನು: “ಪಾರ್ಥ! ನೀನು ವೃದ್ಧರ ಸೇವೆಯನ್ನು ಮಾಡಲಿಲ್ಲವೆಂದು ಇದರಿಂದ ನನಗೆ ತಿಳಿಯುತ್ತಿದೆ. ಪುರುಷವ್ಯಾಘ್ರ! ಕಾಲವಲ್ಲದ ಕಾಲದಲ್ಲಿ ನೀನು ದುಡುಕಿ ಇದನ್ನು ಮಾಡಲು ಹೊರಟಿರುವೆಯಲ್ಲ! ಧನಂಜಯ! ಧರ್ಮವಿಭಾಗಗಳನ್ನು ತಿಳಿದಿರುವವನು ಈ ರೀತಿ ಮಾಡುವುದಿಲ್ಲ!
08049015a ಅಕಾರ್ಯಾಣಾಂ ಚ ಕಾರ್ಯಾಣಾಂ ಸಂಯೋಗಂ ಯಃ ಕರೋತಿ ವೈ।
08049015c ಕಾರ್ಯಾಣಾಮಕ್ರಿಯಾಣಾಂ ಚ ಸ ಪಾರ್ಥ ಪುರುಷಾಧಮಃ।
ಪಾರ್ಥ! ಮಾಡಬಾರದುದನ್ನು ಮಾಡಬೇಕಾದುದರೊಡನೆ ಮತ್ತು ಮಾಡಬೇಕಾದುದನ್ನು ಮಾಡದಿರುವುದರೊಡನೆ ಸೇರಿಸಿಕೊಂಡು ಗೊಂದಲಕ್ಕೀಡಾಗುವವನು ಪುರುಷಾಧಮ.
08049016a ಅನುಸೃತ್ಯ ತು ಯೇ ಧರ್ಮಂ ಕವಯಃ ಸಮುಪಸ್ಥಿತಾಃ।
08049016c ಸಮಾಸವಿಸ್ತರವಿದಾಂ ನ ತೇಷಾಂ ವೇತ್ಥ ನಿಶ್ಚಯಂ।।
ಧರ್ಮವನ್ನು ಅನುಸರಿಸುತ್ತಾ ಅದರಲ್ಲಿಯೇ ಸಮುಪಸ್ಥಿತರಾಗಿರುವ ಗುರುಗಳು ಅವುಗಳನ್ನು ಸಂಕ್ಷಿಪ್ತವಾಗಿಯೂ ವಿಸ್ತಾರವಾಗಿಯೂ ತಿಳಿಸಿದ್ದಾರೆ. ನಿಶ್ಚಯವಾಗಿಯೂ ಅದು ನಿನಗೆ ತಿಳಿದಿಲ್ಲ!
08049017a ಅನಿಶ್ಚಯಜ್ಞೋ ಹಿ ನರಃ ಕಾರ್ಯಾಕಾರ್ಯವಿನಿಶ್ಚಯೇ।
08049017c ಅವಶೋ ಮುಹ್ಯತೇ ಪಾರ್ಥ ಯಥಾ ತ್ವಂ ಮೂಢ ಏವ ತು।।
ಪಾರ್ಥ! ಕಾರ್ಯ-ಅಕಾರ್ಯಗಳ ಕುರಿತು ನಿರ್ಣಯಿಸುವುದರಲ್ಲಿ ನಿಶ್ಚಯಜ್ಞಾನವಿಲ್ಲದವನು ಅವಶನಾಗಿ ನಿನ್ನಂತೆ ಮೂಢನಾಗಿ ಭ್ರಾಂತನಾಗುತ್ತಾನೆ.
08049018a ನ ಹಿ ಕಾರ್ಯಮಕಾರ್ಯಂ ವಾ ಸುಖಂ ಜ್ಞಾತುಂ ಕಥಂ ಚನ।
08049018c ಶ್ರುತೇನ ಜ್ಞಾಯತೇ ಸರ್ವಂ ತಚ್ಚ ತ್ವಂ ನಾವಬುಧ್ಯಸೇ।।
ಕಾರ್ಯ-ಅಕಾರ್ಯಗಳ ಕುರಿತು ತಿಳಿದುಕೊಳ್ಳುವುದು ಎಂದಿಗೂ ಸುಲಭಸಾಧ್ಯವಲ್ಲ. ಇವೆಲ್ಲವುಗಳೂ ಶ್ರುತಿಗಳಿಂದ ತಿಳಿಯುತ್ತವೆ. ಆದರೆ ಇವುಗಳು ನಿನಗೆ ತಿಳಿದಿಲ್ಲ.
08049019a ಅವಿಜ್ಞಾನಾದ್ಭವಾನ್ಯಚ್ಚ ಧರ್ಮಂ ರಕ್ಷತಿ ಧರ್ಮವಿತ್।।
08049019c ಪ್ರಾಣಿನಾಂ ಹಿ ವಧಂ ಪಾರ್ಥ ಧಾರ್ಮಿಕೋ ನಾವಬುಧ್ಯತೇ।
ಪಾರ್ಥ! ನೀನು ಅಜ್ಞಾನದಿಂದ ಧರ್ಮವನ್ನು ತಿಳಿದುಕೊಂಡಿರುವೆಯೆಂದೂ ಧರ್ಮವನ್ನು ರಕ್ಷಿಸುತ್ತಿರುವೆಯೆಂದೂ ಭಾವಿಸಿ ಪ್ರಾಣಿವಧೆಗೆ ತೊಡಗಿರುವೆ! ಧಾರ್ಮಿಕನಾದ ನಿನಗೆ ಇದು ತಿಳಿಯುತ್ತಿಲ್ಲ!
08049020a ಪ್ರಾಣಿನಾಮವಧಸ್ತಾತ ಸರ್ವಜ್ಯಾಯಾನ್ಮತೋ ಮಮ।
08049020c ಅನೃತಂ ತು ಭವೇದ್ವಾಚ್ಯಂ ನ ಚ ಹಿಂಸ್ಯಾತ್ಕಥಂ ಚನ।।
ಪ್ರಾಣಿಗಳನ್ನು ವಧಿಸದೇ ಇರುವುದು ಎಲ್ಲಕ್ಕಿಂತ ಪರಮವಾದುದೆಂದು ನನ್ನ ಮತ. ಸುಳ್ಳನ್ನಾದರೂ ಆಡಬಹುದು. ಆದರೆ ಹಿಂಸೆಯನ್ನು ಎಂದೂ ಮಾಡಬಾರದು!
08049021a ಸ ಕಥಂ ಭ್ರಾತರಂ ಜ್ಯೇಷ್ಠಂ ರಾಜಾನಂ ಧರ್ಮಕೋವಿದಂ।
08049021c ಹನ್ಯಾದ್ಭವಾನ್ನರಶ್ರೇಷ್ಠ ಪ್ರಾಕೃತೋಽನ್ಯಃ ಪುಮಾನಿವ।।
ನರಶ್ರೇಷ್ಠ! ಅನ್ಯ ಸಾಮಾನ್ಯ ಪುರುಷನಂತೆ ನೀನು ಹೇಗೆ ನಿನ್ನ ಜ್ಯೇಷ್ಠ ಭ್ರಾತು ಧರ್ಮಕೋವಿದ ರಾಜನನ್ನು ಕೊಲ್ಲುತ್ತೀಯೆ?
08049022a ಅಯುಧ್ಯಮಾನಸ್ಯ ವಧಸ್ತಥಾಶಸ್ತ್ರಸ್ಯ ಭಾರತ।
08049022c ಪರಾಙ್ಮುಖಸ್ಯ ದ್ರವತಃ ಶರಣಂ ವಾಭಿಗಚ್ಚತಃ।
08049022e ಕೃತಾಂಜಲೇಃ ಪ್ರಪನ್ನಸ್ಯ ನ ವಧಃ ಪೂಜ್ಯತೇ ಬುಧೈಃ।।
ಭಾರತ! ಯುದ್ಧಮಾಡದೇ ಇರುವವನ, ಶಸ್ತ್ರಗಳನ್ನು ಹಿಡಿಯದೇ ಇರುವವನ, ಪರಾಙ್ಮುಖನಾಗಿ ಓಡಿಹೋಗುತ್ತಿರುವವನ, ಶರಣುಬಂದಿರುವವನ, ಕೈಮುಗಿದು ಬೇಡಿಕೊಳ್ಳುತ್ತಿರುವವನ ವಧೆಯು ತಿಳಿದವರ ಗೌರವಪಾತ್ರವಲ್ಲ!
08049023a ತ್ವಯಾ ಚೈವ ವ್ರತಂ ಪಾರ್ಥ ಬಾಲೇನೈವ ಕೃತಂ ಪುರಾ।
08049023c ತಸ್ಮಾದಧರ್ಮಸಂಯುಕ್ತಂ ಮೌಢ್ಯಾತ್ಕರ್ಮ ವ್ಯವಸ್ಯಸಿ।।
ಪಾರ್ಥ! ನೀನು ಹಿಂದೆ ಬಾಲಕನಾಗಿರುವಾಗಲೇ ಈ ವ್ರತವನ್ನು ಕೈಗೊಂಡಿರುವೆ. ಆದುದರಿಂದ ಮೌಢ್ಯತನದಿಂದ ಈ ಅಧರ್ಮಸಂಯುಕ್ತವಾದ ಕಾರ್ಯದಲ್ಲಿ ತೊಡಗಿರುವೆ!
08049024a ಸ ಗುರುಂ ಪಾರ್ಥ ಕಸ್ಮಾತ್ತ್ವಂ ಹನ್ಯಾ ಧರ್ಮಮನುಸ್ಮರನ್।
08049024c ಅಸಂಪ್ರಧಾರ್ಯ ಧರ್ಮಾಣಾಂ ಗತಿಂ ಸೂಕ್ಷ್ಮಾಂ ದುರನ್ವಯಾಂ।।
ಪಾರ್ಥ! ತಿಳಿಯಲು ಅಸಾಧ್ಯವಾದ, ಅನುಸರಿಸಲು ಕಷ್ಟಕರವಾದ ಧರ್ಮದ ಸೂಕ್ಷ್ಮಗತಿಯನ್ನು ತಿಳಿಯದೇ ನೀನು ಗುರುವಾದ ಇವನನ್ನು ಕೊಂದು ಹೇಗೆ ಧರ್ಮವನ್ನು ಅನುಸರಿಸುತ್ತಿರುವೆಯೆಂದು ತಿಳಿದುಕೊಂಡಿದ್ದೀಯೆ?
08049025a ಇದಂ ಧರ್ಮರಹಸ್ಯಂ ಚ ವಕ್ಷ್ಯಾಮಿ ಭರತರ್ಷಭ।
08049025c ಯದ್ಬ್ರೂಯಾತ್ತವ ಭೀಷ್ಮೋ ವಾ ಧರ್ಮಜ್ಞೋ ವಾ ಯುಧಿಷ್ಠಿರಃ।।
08049026a ವಿದುರೋ ವಾ ತಥಾ ಕ್ಷತ್ತಾ ಕುಂತೀ ವಾಪಿ ಯಶಸ್ವಿನೀ।
08049026c ತತ್ತೇ ವಕ್ಷ್ಯಾಮಿ ತತ್ತ್ವೇನ ತನ್ನಿಬೋಧ ಧನಂಜಯ।।
ಭರತರ್ಷಭ! ಇಗೋ ಈ ಧರ್ಮರಹಸ್ಯವನ್ನು ಹೇಳುತ್ತೇನೆ. ಧರ್ಮಜ್ಞನಾದ ಭೀಷ್ಮ ಅಥವಾ ಯುಧಿಷ್ಠಿರ, ವಿದುರ, ಅಥವಾ ಯಶಸ್ವಿನೀ ಕುಂತೀ ಇವರು ಏನನ್ನು ಹೇಳುತ್ತಾರೋ ಅದನ್ನೇ ನಾನು ನಿನಗೆ ಹೇಳುತ್ತೇನೆ. ಧನಂಜಯ! ಇದನ್ನು ಏಕಾಗ್ರತೆಯಿಂದ ಕೇಳು!
08049027a ಸತ್ಯಸ್ಯ ವಚನಂ ಸಾಧು ನ ಸತ್ಯಾದ್ವಿದ್ಯತೇ ಪರಂ।
08049027c ತತ್ತ್ವೇನೈತತ್ಸುದುರ್ಜ್ಞೇಯಂ ಯಸ್ಯ ಸತ್ಯಮನುಷ್ಠಿತಂ।।
ಸತ್ಯವನ್ನಾಡುವುದೇ ಒಳ್ಳೆಯದು. ಸತ್ಯಕ್ಕಿಂತಲೂ ಶ್ರೇಷ್ಠವಾದುದು ಇಲ್ಲ. ಆದರೆ ಸತ್ಯವನ್ನು ಅನುಷ್ಠಾನಮಾಡುವ ತತ್ತ್ವವನ್ನು ತಿಳಿದುಕೊಳ್ಳುವುದು ಕಷ್ಟ.
08049028a ಭವೇತ್ಸತ್ಯಮವಕ್ತವ್ಯಂ ವಕ್ತವ್ಯಮನೃತಂ ಭವೇತ್।
08049028c ಸರ್ವಸ್ವಸ್ಯಾಪಹಾರೇ ತು ವಕ್ತವ್ಯಮನೃತಂ ಭವೇತ್।।
ಯಾವಾಗ ಸುಳ್ಳು ಸತ್ಯದ ಪರಿಣಾಮವನ್ನು ನೀಡುತ್ತದೆಯೋ ಆಗ ಸುಳ್ಳನ್ನು ಹೇಳಬೇಕಾಗುತ್ತದೆ. ಹಾಗೆಯೇ ಯಾವಾಗ ಸತ್ಯವು ಸುಳ್ಳಿನ ಪರಿಣಾಮವನ್ನು ನೀಡುತ್ತದೆಯೋ ಆಗ ಸತ್ಯವನ್ನು ಹೇಳಬಾರದು.
08049029a ಪ್ರಾಣಾತ್ಯಯೇ ವಿವಾಹೇ ಚ ವಕ್ತವ್ಯಮನೃತಂ ಭವೇತ್।
08049029c ಯತ್ರಾನೃತಂ ಭವೇತ್ಸತ್ಯಂ ಸತ್ಯಂ ಚಾಪ್ಯನೃತಂ ಭವೇತ್।।
ಪ್ರಾಣಹೋಗುವ ಮತ್ತು ವಿವಾಹಗಳ ಸಮಯದಲ್ಲಿ – ಯಾವಾಗ ಸುಳ್ಳು ಸತ್ಯದ ಪರಿಣಾಮವನ್ನು ಮತ್ತು ಸತ್ಯವು ಸುಳ್ಳಿನ ಪರಿಣಾಮವನ್ನು ನೀಡುತ್ತದೆಯೋ ಆಗ - ಸುಳ್ಳನ್ನು ಹೇಳಬಹುದು.
08049030a ತಾದೃಶಂ ಪಶ್ಯತೇ ಬಾಲೋ ಯಸ್ಯ ಸತ್ಯಮನುಷ್ಠಿತಂ।
08049030c ಸತ್ಯಾನೃತೇ ವಿನಿಶ್ಚಿತ್ಯ ತತೋ ಭವತಿ ಧರ್ಮವಿತ್।।
ಸತ್ಯದಲ್ಲಿ ಅನುಷ್ಠಿತನಾಗಿರುವ ಬಾಲಕನು ಅದನ್ನು ಇದೇರೀತಿ ಕಾಣುತ್ತಾನೆ. ಸತ್ಯ ಮತ್ತು ಸುಳ್ಳುಗಳನ್ನು ಹಾಗೆ ನಿರ್ಧರಿಸುವವನು ಧರ್ಮವಿದುವೆನಿಸಿಕೊಳ್ಳುತ್ತಾನೆ.
08049031a ಕಿಮಾಶ್ಚರ್ಯಂ ಕೃತಪ್ರಜ್ಞಃ ಪುರುಷೋಽಪಿ ಸುದಾರುಣಃ।
08049031c ಸುಮಹತ್ ಪ್ರಾಪ್ನುಯಾತ್ಪುಣ್ಯಂ ಬಲಾಕೋಽಮ್ದವಧಾದಿವ।।
ಅಂಧಪ್ರಾಣಿಯನ್ನು ವಧಿಸಿದ ಬಲಾಕದಂತೆ ಸುದಾರುಣ ಪುರುಷನಾಗಿದ್ದರೂ ಕೃತಪ್ರಜ್ಞನಾಗಿದ್ದರೆ ಮಹಾಪುಣ್ಯವನ್ನು ಪಡೆಯಬಲ್ಲ ಎನ್ನುವುದರಲ್ಲಿ ಆಶ್ಚರ್ಯವಾದರೂ ಏನಿದೆ?
08049032a ಕಿಮಾಶ್ಚರ್ಯಂ ಪುನರ್ಮೂಢೋ ಧರ್ಮಕಾಮೋಽಪ್ಯಪಂಡಿತಃ।
08049032c ಸುಮಹತ್ಪ್ರಾಪ್ನುಯಾತ್ಪಾಪಮಾಪಗಾಮಿವ ಕೌಶಿಕಃ।।
ನದೀತೀರದ್ದಲ್ಲಿರುವ ಕೌಶಿಕನಂತೆ ಧರ್ಮವನ್ನು ಮಾಡಲು ಬಯಸುತ್ತಿದ್ದರೂ ಕೌಶಿಕನಂತೆ ಮೂಢನೂ ಅಪಂಡಿತನೂ ಆಗಿದ್ದರೆ ಮಹಾ ಪಾಪವನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಆಶ್ಚರ್ಯವೇನಿದೆ?”
08049033 ಅರ್ಜುನ ಉವಾಚ।
08049033a ಆಚಕ್ಷ್ವ ಭಗವನ್ನೇತದ್ಯಥಾ ವಿದ್ಯಾಮಹಂ ತಥಾ।
08049033c ಬಲಾಕಾಂದಾಭಿಸಂಬದ್ಧಂ ನದೀನಾಂ ಕೌಶಿಕಸ್ಯ ಚ।।
ಅರ್ಜುನನು ಹೇಳಿದನು: “ಭಗವನ್! ನನಗೆ ತಿಳಿಯುವಂತೆ ಬಲಾಕ-ಅಂಧ ಮತ್ತು ನದೀತೀರದ ಕೌಶಿಕನಿಗೆ ಸಂಬಂಧಿಸಿದ ಕಥೆಯನ್ನು ಹೇಳು!”
08049034 ಕೃಷ್ಣ ಉವಾಚ।
08049034a ಮೃಗವ್ಯಾಧೋಽಭವತ್ಕಶ್ಚಿದ್ಬಲಾಕೋ ನಾಮ ಭಾರತ।
08049034c ಯಾತ್ರಾರ್ಥಂ ಪುತ್ರದಾರಸ್ಯ ಮೃಗಾನ್ ಹಂತಿ ನ ಕಾಮತಃ।।
ಕೃಷ್ಣನು ಹೇಳಿದನು: “ಭಾರತ! ಒಂದು ಕಾಲದಲ್ಲಿ ಬಲಾಕ ಎಂಬ ಹೆಸರಿನ ಮೃಗವ್ಯಾಧನಿದ್ದನು. ಅವನು ಪತ್ನಿ-ಪುತ್ರರಿಗೋಸ್ಕರ ಮೃಗಗಳನ್ನು ಸಂಹರಿಸುತ್ತಿದ್ದನೇ ಹೊರತು ಕೊಲ್ಲಬೇಕೆಂಬ ಕಾಮನೆಯಿಂದ ಬೇಟೆಯಾಡುತ್ತಿರಲಿಲ್ಲ.
08049035a ಸೋಽಮ್ದೌ ಚ ಮಾತಾಪಿತರೌ ಬಿಭರ್ತ್ಯನ್ಯಾಂಶ್ಚ ಸಂಶ್ರಿತಾನ್।
08049035c ಸ್ವಧರ್ಮನಿರತೋ ನಿತ್ಯಂ ಸತ್ಯವಾಗನಸೂಯಕಃ।।
ಅಂಧರಾದ ಅವನ ತಾಯಿ-ತಂದೆ ಮತ್ತು ಅನ್ಯ ಸೇವಕರು ಅವನ ಆಶ್ರಯದಲ್ಲಿದ್ದರು. ನಿತ್ಯವೂ ಸ್ವಧರ್ಮನಿರತನಾಗಿದ್ದ ಅವನು ಸತ್ಯಭಾಷಿಯೂ ಅನಸೂಯಕನೂ ಆಗಿದ್ದನು.
08049036a ಸ ಕದಾ ಚಿನ್ಮೃಗಾಽಲ್ಲಿಪ್ಸುರ್ನಾನ್ವವಿಂದತ್ ಪ್ರಯತ್ನವಾನ್।
08049036c ಅಥಾಪಶ್ಯತ್ಸ ಪೀತೋದಂ ಶ್ವಾಪದಂ ಘ್ರಾಣಚಕ್ಷುಷಂ।।
ಒಂದು ದಿನ ಅವನು ಮೃಗಗಳಿಗಾಗಿ ಅಲೆದಾಡುತ್ತಿರುವಾಗ ಕುರುಡು ಮಾಂಸಾಹಾರೀ ಪ್ರಾಣಿಯನ್ನು ಕಂಡನು.
08049037a ಅದೃಷ್ಟಪೂರ್ವಮಪಿ ತತ್ಸತ್ತ್ವಂ ತೇನ ಹತಂ ತದಾ।
08049037c ಅನ್ವೇವ ಚ ತತೋ ವ್ಯೋಮ್ನಃ ಪುಷ್ಪವರ್ಷಮವಾಪತತ್।।
ಹಿಂದೆಂದೂ ನೋಡಿರದ ಆ ಪ್ರಾಣಿಯನ್ನು ಅವನು ಸಂಹರಿಸಿದನು. ಕೂಡಲೇ ಆಕಾಶದಿಂದ ಪುಷ್ಪವೃಷ್ಟಿಯಾಯಿತು.
08049038a ಅಪ್ಸರೋಗೀತವಾದಿತ್ರೈರ್ನಾದಿತಂ ಚ ಮನೋರಮಂ।
08049038c ವಿಮಾನಮಾಗಮತ್ಸ್ವರ್ಗಾನ್ಮೃಗವ್ಯಾಧನಿನೀಷಯಾ।।
ಮನೋರಮೆಯರಾದ ಅಪ್ಸರೆಯರು ಗೀತವಾದ್ಯಗಳ ನಾದದೊಂದಿಗೆ ವಿಮಾನದಿಂದ ಆಗಮಿಸಿ ಮೃಗವ್ಯಾಧನನ್ನು ಸ್ವರ್ಗಕ್ಕೆ ಕೊಂಡೊಯ್ದರು.
08049039a ತದ್ಭೂತಂ ಸರ್ವಭೂತಾನಾಮಭಾವಾಯ ಕಿಲಾರ್ಜುನ।
08049039c ತಪಸ್ತಪ್ತ್ವಾ ವರಂ ಪ್ರಾಪ್ತಂ ಕೃತಮಂಧಂ ಸ್ವಯಂಭುವಾ।।
ಅರ್ಜುನ! ಆ ಪ್ರಾಣಿಯು ಹಿಂದೆ ಸರ್ವಭೂತಗಳ ವಿನಾಶಕ್ಕಾಗಿ ತಪಸ್ಸನ್ನು ತಪಿಸಿ ವರವನ್ನು ಪಡೆದಿತ್ತು. ಆಗ ಸ್ವಯಂಭುವು ಅದನ್ನು ಅಂಧನನ್ನಾಗಿ ಮಾಡಿದ್ದನು.
08049040a ತದ್ಧತ್ವಾ ಸರ್ವಭೂತಾನಾಮಭಾವಕೃತನಿಶ್ಚಯಂ।
08049040c ತತೋ ಬಲಾಕಃ ಸ್ವರಗಾದೇವಂ ಧರ್ಮಃ ಸುದುರ್ವಿದಃ।।
ಸರ್ವಭೂತಗಳ ವಿನಾಶಕಾರ್ಯವನ್ನು ನಿಶ್ಚಯಿಸಿದ್ದ ಅದನ್ನು ಸಂಹರಿಸಿ ಬಲಾಕನು ಸ್ವರ್ಗಕ್ಕೆ ಹೋದನು. ಹೀಗೆ ಧರ್ಮವನ್ನು ತಿಳಿಯುವುದು ಕಷ್ಟ!
08049041a ಕೌಶಿಕೋಽಪ್ಯಭವದ್ವಿಪ್ರಸ್ತಪಸ್ವೀ ನ ಬಹುಶ್ರುತಃ।
08049041c ನದೀನಾಂ ಸಂಗಮೇ ಗ್ರಾಮಾದದೂರೇ ಸ ಕಿಲಾವಸತ್।।
ಬಹುಶ್ರುತನಲ್ಲದ ಕೌಶಿಕನೆಂಬ ವಿಪ್ರತಪಸ್ವಿಯು ನದಿಗಳ ಸಂಗಮಗ್ರಾಮದ ಹತ್ತಿರದಲ್ಲಿಯೇ ವಾಸಿಸುತ್ತಿದ್ದನು.
08049042a ಸತ್ಯಂ ಮಯಾ ಸದಾ ವಾಚ್ಯಮಿತಿ ತಸ್ಯಾಭವದ್ವ್ರತಂ।
08049042c ಸತ್ಯವಾದೀತಿ ವಿಖ್ಯಾತಃ ಸ ತದಾಸೀದ್ಧನಂಜಯ।।
ಧನಂಜಯ! ಸದಾ ನಾನು ಸತ್ಯವನ್ನೇ ಹೇಳುತ್ತೇನೆ ಎನ್ನುವುದು ಅವನ ವ್ರತವಾಗಿತ್ತು. ಅದರಿಂದ ಅವನು ಸತ್ಯವಾದಿಯೆಂದು ವಿಖ್ಯಾತನಾಗಿದ್ದನು.
08049043a ಅಥ ದಸ್ಯುಭಯಾತ್ಕೇ ಚಿತ್ತದಾ ತದ್ವನಮಾವಿಶನ್।
08049043c ದಸ್ಯವೋಽಪಿ ಗತಾಃ ಕ್ರೂರಾ ವ್ಯಮಾರ್ಗಂತ ಪ್ರಯತ್ನತಃ।।
ಒಮ್ಮೆ ಕಳ್ಳರ ಭಯದಿಂದ ಕೆಲವರು ಆ ವನವನ್ನು ಪ್ರವೇಶಿಸಿದರು. ಕ್ರೂರ ಕಳ್ಳರೂ ಕೂಡ ಅವರನ್ನು ಹುಡುಕುತ್ತಾ ಅಲ್ಲಿಗೆ ಬಂದರು.
08049044a ಅಥ ಕೌಶಿಕಮಭ್ಯೇತ್ಯ ಪ್ರಾಹುಸ್ತಂ ಸತ್ಯವಾದಿನಂ।
08049044c ಕತಮೇನ ಪಥಾ ಯಾತಾ ಭಗವನ್ಬಹವೋ ಜನಾಃ।
08049044e ಸತ್ಯೇನ ಪೃಷ್ಟಃ ಪ್ರಬ್ರೂಹಿ ಯದಿ ತಾನ್ವೇತ್ಥ ಶಂಸ ನಃ।।
ಕಳ್ಳರು ಸತ್ಯವಾದೀ ಕೌಶಿಕನಲ್ಲಿಗೆ ಬಂದು ಕೇಳಿದರು: “ಭಗವನ್! ಈ ಮಾರ್ಗದಲ್ಲಿ ಬಂದಿದ್ದ ಅನೇಕ ಜನರು ಯಾವ ಮಾರ್ಗದಲ್ಲಿ ಹೋದರು? ಸತ್ಯದಿಂದ ನಿನ್ನನ್ನು ಕೇಳುತ್ತಿದ್ದೇವೆ. ಒಂದುವೇಳೆ ಇದು ತಿಳಿದಿದ್ದರೆ ನಮಗೆ ಹೇಳು!”
08049045a ಸ ಪೃಷ್ಟಃ ಕೌಶಿಕಃ ಸತ್ಯಂ ವಚನಂ ತಾನುವಾಚ ಹ।
08049045c ಬಹುವೃಕ್ಷಲತಾಗುಲ್ಮಮೇತದ್ವನಮುಪಾಶ್ರಿತಾಃ।
08049045e ತತಸ್ತೇ ತಾನ್ಸಮಾಸಾದ್ಯ ಕ್ರೂರಾ ಜಘ್ನುರಿತಿ ಶ್ರುತಿಃ।।
ಹಾಗೆ ಕೇಳಿದ ಅವರಿಗೆ ಕೌಶಿಕನು ಸತ್ಯವಚನವನ್ನೇ ನುಡಿಯುತ್ತಾ “ಅನೇಕ ವೃಕ್ಷ-ಲತೆ-ಪೊದರುಗಳಿಂದ ಕೂಡಿರುವ ಇದೇ ವನದಲ್ಲಿ ಅವರು ಅಡಗಿದ್ದಾರೆ!” ಎಂದನು. ಆಗ ಆ ಕ್ರೂರರು ಅವರನ್ನು ಹುಡುಕಿ ಕೊಂದರು ಎಂದು ಕೇಳುತ್ತೇವೆ.
08049046a ತೇನಾಧರ್ಮೇಣ ಮಹತಾ ವಾಗ್ದುರುಕ್ತೇನ ಕೌಶಿಕಃ।
08049046c ಗತಃ ಸುಕಷ್ಟಂ ನರಕಂ ಸೂಕ್ಷ್ಮಧರ್ಮೇಷ್ವಕೋವಿದಃ।।
ಅವನ ಆ ಅಧರ್ಮದ ಮಹಾಮಾತಿನಿಂದಾಗಿ ಸೂಕ್ಷ್ಮಧರ್ಮವನ್ನು ತಿಳಿಯದಿದ್ದ ಕೌಶಿಕನು ಸುಕಷ್ಟಕರವಾದ ನರಕಕ್ಕೆ ಹೋದನು.
08049046e ಅಪ್ರಭೂತಶ್ರುತೋ ಮೂಢೋ ಧರ್ಮಾಣಾಮವಿಭಾಗವಿತ್।
08049047a ವೃದ್ಧಾನಪೃಷ್ಟ್ವಾ ಸಂದೇಹಂ ಮಹಚ್ಚ್ವಭ್ರಮಿತೋಽರ್ಹತಿ।।
ಹೆಚ್ಚು ಶಾಸ್ತ್ರಜ್ಞಾನವಿಲ್ಲದವನು ಧರ್ಮಗಳ ವಿಭಾಗಗಳನ್ನು ತಿಳಿಯದ ಮೂಢನು ವೃದ್ಧರ ಸೇವೆಮಾಡಿ ಸಂದೇಹವನ್ನು ನಿವಾರಿಸಿಕೊಳ್ಳದೇ ಇದ್ದರೆ ಮಹಾ ಕಷ್ಟಗಳಿಗೆ ಪಾತ್ರನಾಗುತ್ತಾನೆ.
08049047c ತತ್ರ ತೇ ಲಕ್ಷಣೋದ್ದೇಶಃ ಕಶ್ಚಿದೇವ ಭವಿಷ್ಯತಿ।
08049048a ದುಷ್ಕರಂ ಪರಮಜ್ಞಾನಂ ತರ್ಕೇಣಾತ್ರ ವ್ಯವಸ್ಯತಿ।
08049048c ಶ್ರುತಿರ್ಧರ್ಮ ಇತಿ ಹ್ಯೇಕೇ ವದಂತಿ ಬಹವೋ ಜನಾಃ।।
ಧರ್ಮದ ಲಕ್ಷಣ-ಉದ್ದೇಶಗಳು ಏನೂ ಆಗಬಹುದು. ಅದರ ಪರಮಜ್ಞಾನವು ದುಷ್ಕರವಾದುದು. ಕೆಲವರು ಇದನ್ನು ತರ್ಕವೆಂದೂ ಮತ್ತು ಇನ್ನು ಹಲವರು ಇದು ಶೃತಿಧರ್ಮವೆಂದು ಹೇಳುತ್ತಾರೆ.
08049049a ನ ತ್ವೇತತ್ಪ್ರತಿಸೂಯಾಮಿ ನ ಹಿ ಸರ್ವಂ ವಿಧೀಯತೇ।
08049049c ಪ್ರಭವಾರ್ಥಾಯ ಭೂತಾನಾಂ ಧರ್ಮಪ್ರವಚನಂ ಕೃತಂ।।
ಇರುವವುಗಳ ಏಳ್ಗೆಗಾಗಿ ಮಾಡಲ್ಪಟ್ಟ ಧರ್ಮಪ್ರವಚನವನ್ನಷ್ಟನ್ನೇ ನಿನಗೆ ಹೇಳುತ್ತೇನೆ. ಏಕೆಂದರೆ ಎಲ್ಲವನ್ನೂ ತಿಳಿಯಲು ಅಸಾಧ್ಯವು.
08049050a ಧಾರಣಾದ್ಧರ್ಮಮಿತ್ಯಾಹುರ್ಧರ್ಮೋ ಧಾರಯತಿ ಪ್ರಜಾಃ।
08049050c ಯಃ ಸ್ಯಾದ್ಧಾರಣಸಂಯುಕ್ತಃ ಸ ಧರ್ಮ ಇತಿ ನಿಶ್ಚಯಃ।।
ಧಾರಣೆಮಾಡುವುದರಿಂದ ಧರ್ಮವೆನ್ನುತ್ತಾರೆ. ಧರ್ಮವು ಪ್ರಜೆಗಳನ್ನು ಉದ್ಧರಿಸುತ್ತದೆ. ಯಾವುದು ಧಾರಣಸಂಯುಕ್ತವಾದುದೋ ಅದೇ ಧರ್ಮವೆಂದು ನಿಶ್ಚಯಿಸಲ್ಪಡುತ್ತದೆ.
08049051a ಯೇಽನ್ಯಾಯೇನ ಜಿಹೀರ್ಷಂತೋ ಜನಾ ಇಚ್ಚಂತಿ ಕರ್ಹಿ ಚಿತ್।
08049051c ಅಕೂಜನೇನ ಚೇನ್ಮೋಕ್ಷೋ ನಾತ್ರ ಕೂಜೇತ್ಕಥಂ ಚನ।।
ಯಾರು ಅನ್ಯಾಯದಿಂದ ಇತರರದ್ದನ್ನು ಅಪಹರಿಸಲು ಬಯಸುತ್ತಾರೋ ಅವರೊಂದಿಗೆ ಏನನ್ನೂ ಮಾತನಾಡದೇ ಬಿಡುಗಡೆಹೊಂದಬೇಕು. ಅವರೊಂದಿಗೆ ಎಂದೂ ಮಾತನಾಡಬಾರದು.
08049052a ಅವಶ್ಯಂ ಕೂಜಿತವ್ಯಂ ವಾ ಶಂಕೇರನ್ವಾಪ್ಯಕೂಜತಃ।
08049052c ಶ್ರೇಯಸ್ತತ್ರಾನೃತಂ ವಕ್ತುಂ ಸತ್ಯಾದಿತಿ ವಿಚಾರಿತಂ।।
ಆದರೆ ಮಾತನಾಡಲೇಬೇಕಾಗಿಬಂದರೆ ಅಥವಾ ಮಾತನಾಡದೇ ಇದ್ದರೆ ಶಂಕೆಗೊಳಗಾಗುವುದಾದರೆ ಅಲ್ಲಿ ಸುಳ್ಳನ್ನು ಹೇಳುವುದೇ ಶ್ರೇಯಸ್ಕರವಾದುದು. ಅಲ್ಲಿ ಸುಳ್ಳನ್ನೂ ಸತ್ಯವೆಂದು ವಿಚಾರಿಸಲಾಗುತ್ತದೆ.
08049053a ಪ್ರಾಣಾತ್ಯಯೇ ವಿವಾಹೇ ವಾ ಸರ್ವಜ್ಞಾತಿಧನಕ್ಷಯೇ।
08049053c ನರ್ಮಣ್ಯಭಿಪ್ರವೃತ್ತೇ ವಾ ಪ್ರವಕ್ತವ್ಯಂ ಮೃಷಾ ಭವೇತ್।
08049053e ಅಧರ್ಮಂ ನಾತ್ರ ಪಶ್ಯಂತಿ ಧರ್ಮತತ್ತ್ವಾರ್ಥದರ್ಶಿನಃ।।
ಪ್ರಾಣಹೋಗುವ ಸಂದರ್ಭದಲ್ಲಿ ಅಥವಾ ವಿವಾಹ ಸಂದರ್ಭದಲ್ಲಿ ಅಥವಾ ಸರ್ವ ಬಾಂಧವರ ಅಥವಾ ಧನಕ್ಷಯದ ಸಮಯದಲ್ಲಿ, ಮತ್ತು ಪರಿಹಾಸ-ವಿನೋದಗಳ ಸಂದರ್ಭದಲ್ಲಿ ಹೇಳಿದ ಸುಳ್ಳು ಸುಳ್ಳಾಗಿರುವುದಿಲ್ಲ. ಧರ್ಮತತ್ವಾರ್ಥದರ್ಶಿಗಳು ಇದರಲ್ಲಿ ಅಧರ್ಮವನ್ನು ಕಾಣುವುದಿಲ್ಲ.
08049054a ಯಃ ಸ್ತೇನೈಃ ಸಹ ಸಂಬಂದಾನ್ಮುಚ್ಯತೇ ಶಪಥೈರಪಿ।
08049054c ಶ್ರೇಯಸ್ತತ್ರಾನೃತಂ ವಕ್ತುಂ ತತ್ಸತ್ಯಮವಿಚಾರಿತಂ।।
ಇನ್ನೊಬ್ಬರ ಬಂಧನದಲ್ಲಿರುವಾಗ ನೂರು ಸುಳ್ಳನ್ನು ಹೇಳಿಯಾದರೂ ಬಿಡಿಸಿಕೊಳ್ಳಬೇಕು. ಅಲ್ಲಿ ಸುಳ್ಳನ್ನು ಹೇಳುವುದು ಶ್ರೇಯಸ್ಕರವಾಗುತ್ತದೆ. ಸತ್ಯವನ್ನು ಹೇಳುವುದು ಅವಿಚಾರಿತವೆನಿಸಿಕೊಳ್ಳುತ್ತದೆ.
08049055a ನ ಚ ತೇಭ್ಯೋ ಧನಂ ದೇಯಂ ಶಕ್ಯೇ ಸತಿ ಕಥಂ ಚನ।
08049055c ಪಾಪೇಭ್ಯೋ ಹಿ ಧನಂ ದತ್ತಂ ದಾತಾರಮಪಿ ಪೀಡಯೇತ್।
08049055e ತಸ್ಮಾದ್ಧರ್ಮಾರ್ಥಮನೃತಮುಕ್ತ್ವಾ ನಾನೃತವಾಗ್ಭವೇತ್।।
ಅವರಿಗೆ ಹಣವನ್ನಿತ್ತು ಮುಕ್ತಿಹೊಂದಲು ಸಾಧ್ಯವಿದ್ದರೂ ಹಣವನ್ನು ಎಂದೂ ನೀಡಬಾರದು. ಏಕೆಂದರೆ ಪಾಪಿಗಳಿಗೆ ಧನವನ್ನಿತ್ತರೆ ಅದು ಕೊಡುವವನನ್ನೂ ಪೀಡಿಸುತ್ತದೆ. ಆದುದರಿಂದ ಧರ್ಮಕ್ಕೋಸ್ಕರವಾಗಿ ಅನೃತವನ್ನು ಹೇಳಿದರೂ ಅದು ಅನೃತವೆಂದೆನಿಸಿಕೊಳ್ಳುವುದಿಲ್ಲ.
08049056a ಏಷ ತೇ ಲಕ್ಷಣೋದ್ದೇಶಃ ಸಮುದ್ದಿಷ್ಟೋ ಯಥಾವಿಧಿ।
08049056c ಏತಚ್ಛೃತ್ವಾ ಬ್ರೂಹಿ ಪಾರ್ಥ ಯದಿ ವಧ್ಯೋ ಯುಧಿಷ್ಠಿರಃ।।
ಹೀಗೆ ಯಥಾವಿಧಿಯಾಗಿ ಧರ್ಮದ ಲಕ್ಷಣೋದ್ದೇಶಗಳನ್ನು ಸಂಕ್ಷಿಪ್ತವಾಗಿ ಹೇಳಿದ್ದೇನೆ. ಪಾರ್ಥ! ಇದನ್ನು ಕೇಳಿ ಯುಧಿಷ್ಠಿರನು ವಧ್ಯನೇ ಎನ್ನುವುದನ್ನು ಹೇಳು!”
08049057 ಅರ್ಜುನ ಉವಾಚ।
08049057a ಯಥಾ ಬ್ರೂಯಾನ್ಮಹಾಪ್ರಾಜ್ಞೋ ಯಥಾ ಬ್ರೂಯಾನ್ಮಹಾಮತಿಃ।
08049057c ಹಿತಂ ಚೈವ ಯಥಾಸ್ಮಾಕಂ ತಥೈತದ್ವಚನಂ ತವ।।
ಅರ್ಜುನನು ಹೇಳಿದನು: “ನಮಗೆ ನೀನು ಹೇಳಿದ ಈ ಹಿತವಚನವು ಮಹಾಪ್ರಾಜ್ಞರು ಹೇಳುವಂತೆಯೇ ಇದೆ. ಮಹಾಮತಿಯು ಹೇಳುವಂತೆಯೇ ಇದೆ.
08049058a ಭವಾನ್ಮಾತೃಸಮೋಽಸ್ಮಾಕಂ ತಥಾ ಪಿತೃಸಮೋಽಪಿ ಚ।
08049058c ಗತಿಶ್ಚ ಪರಮಾ ಕೃಷ್ಣ ತೇನ ತೇ ವಾಕ್ಯಮದ್ಭುತಂ।।
ಕೃಷ್ಣ! ನೀನು ನಮ್ಮ ತಾಯಿಯ ಸಮನಾಗಿರುವೆ. ತಂದೆಯ ಸಮನೂ ಆಗಿರುವೆ. ನಮ್ಮ ಪರಮ ಗತಿಯೂ ಆಗಿರುವೆ. ನಿನ್ನ ಈ ಮಾತು ಅದ್ಭುತವಾದುದು!
08049059a ನ ಹಿ ತೇ ತ್ರಿಷು ಲೋಕೇಷು ವಿದ್ಯತೇಽವಿದಿತಂ ಕ್ವ ಚಿತ್।
08049059c ತಸ್ಮಾದ್ಭವಾನ್ಪರಂ ಧರ್ಮಂ ವೇದ ಸರ್ವಂ ಯಥಾತಥಂ।।
ನಿನಗೆ ತಿಳಿಯದೇ ಇರುವುದು ಈ ಮೂರು ಲೋಕಗಳಲ್ಲಿಯೂ ಯಾವುದೂ ಇಲ್ಲ. ಆದುದರಿಂದ ನಿನಗೆ ಸರ್ವ ಪರಮ ಧರ್ಮವೂ ಯಥಾತಥವಾಗಿ ತಿಳಿದಿದೆ.
08049060a ಅವಧ್ಯಂ ಪಾಂಡವಂ ಮನ್ಯೇ ಧರ್ಮರಾಜಂ ಯುಧಿಷ್ಠಿರಂ।
08049060c ತಸ್ಮಿನ್ಸಮಯಸಂಯೋಗೇ ಬ್ರೂಹಿ ಕಿಂ ಚಿದನುಗ್ರಹಂ।
08049060e ಇದಂ ಚಾಪರಮತ್ರೈವ ಶೃಣು ಹೃತ್ಸ್ಥಂ ವಿವಕ್ಷಿತಂ।।
ಪಾಂಡವ ಧರ್ಮರಾಜ ಯುಧಿಷ್ಠಿರನು ಅವಧ್ಯನೆಂದು ಮನ್ನಿಸುತ್ತೇನೆ. ಆದರೆ ಈಗ ಬಂದೊದಗಿರುವ ಸಂದರ್ಭದಲ್ಲಿ ಏನನ್ನಾದರೂ ಅನುಗ್ರಹಿಸಿ ಹೇಳು. ನನ್ನ ಹೃದಯದಲ್ಲಿ ನೆಲಸಿರುವ ಈ ಸಂದೇಹವನ್ನು ಕೇಳು.
08049061a ಜಾನಾಸಿ ದಾಶಾರ್ಹ ಮಮ ವ್ರತಂ ತ್ವಂ ಯೋ ಮಾಂ ಬ್ರೂಯಾತ್ಕಶ್ಚನ ಮಾನುಷೇಷು।।
08049061c ಅನ್ಯಸ್ಮೈ ತ್ವಂ ಗಾಂಡಿವಂ ದೇಹಿ ಪಾರ್ಥ ಯಸ್ತ್ವತ್ತೋಽಸ್ತ್ರೈರ್ಭವಿತಾ ವಾ ವಿಶಿಷ್ಟಃ।
08049062a ಹನ್ಯಾಮಹಂ ಕೇಶವ ತಂ ಪ್ರಸಹ್ಯ ಭೀಮೋ ಹನ್ಯಾತ್ತೂಬರಕೇತಿ ಚೋಕ್ತಃ।
08049062c ತನ್ಮೇ ರಾಜಾ ಪ್ರೋಕ್ತವಾಂಸ್ತೇ ಸಮಕ್ಷಂ ಧನುರ್ದೇಹೀತ್ಯಸಕೃದ್ವೃಷ್ಣಿಸಿಂಹ।।
ದಾಶಾರ್ಹ! ನನ್ನ ಈ ವ್ರತವು ನಿನಗೆ ತಿಳಿದೇ ಇದೆ. ಮನುಷ್ಯರಲ್ಲಿ ಯಾರಾದರೂ ನನಗೆ “ಪಾರ್ಥ! ನಿನಗಿಂತಲೂ ಅಸ್ತ್ರವಿದ್ಯೆಯಲ್ಲಿ ಮತ್ತು ಪ್ರಯತ್ನದಲ್ಲಿ ವಿಶಿಷ್ಟನಾಗಿರುವ ಇನ್ನೊಬ್ಬನಿಗೆ ನಿನ್ನ ಗಾಂಡೀವವನ್ನು ಕೊಟ್ಟುಬಿಡು!” ಎನ್ನುವವನನ್ನು ನಾನು ಕೊಲ್ಲುತ್ತೇನೆ ಎನ್ನುವುದು ನನ್ನ ಪ್ರತಿಜ್ಞೆ. ಕೇಶವ! ಭೀಮನೂ ಕೂಡ ತನ್ನನ್ನು ಕೂಬರನೆಂದು ಕರೆಯುವವನನ್ನು ಕೊಲ್ಲುತ್ತೇನೆ ಎಂದು ಹೇಳಿಕೊಂಡಿದ್ದಾನೆ. ವೃಷ್ಣಿಸಿಂಹ! ನಿನ್ನ ಸಮಕ್ಷಮದಲ್ಲಿಯೇ ರಾಜನು ನನಗೆ ನಿನಗಿಂತಲೂ ಉತ್ತಮ ಕಾರ್ಯಮಾಡುವವನಿಗೆ ಧನುಸ್ಸನ್ನು ಕೊಟ್ಟುಬಿಡು ಎಂದು ಹೇಳಿದ್ದಾನೆ.
08049063a ತಂ ಹತ್ವಾ ಚೇತ್ಕೇಶವ ಜೀವಲೋಕೇ ಸ್ಥಾತಾ ಕಾಲಂ ನಾಹಮಪ್ಯಲ್ಪಮಾತ್ರಂ।
08049063c ಸಾ ಚ ಪ್ರತಿಜ್ಞಾ ಮಮ ಲೋಕಪ್ರಬುದ್ಧಾ ಭವೇತ್ಸತ್ಯಾ ಧರ್ಮಭೃತಾಂ ವರಿಷ್ಠ।
08049063e ಯಥಾ ಜೀವೇತ್ಪಾಂಡವೋಽಹಂ ಚ ಕೃಷ್ಣ ತಥಾ ಬುದ್ಧಿಂ ದಾತುಮದ್ಯಾರ್ಹಸಿ ತ್ವಂ।।
ಕೇಶವ! ಇವನನ್ನು ಸಂಹರಿಸಿ ನಾನು ಅಲ್ಪಕಾಲವೂ ಕೂಡ ಇರಲಾರೆನು. ಧರ್ಮಭೃತರಲ್ಲಿ ಶ್ರೇಷ್ಠ! ಲೋಕಗಳಿಗೇ ತಿಳಿದಿರುವ ನನ್ನ ಈ ಪ್ರತಿಜ್ಞೆಯು ಸತ್ಯವಾಗುವಂತೆ ಮತ್ತು ಈ ಪಾಂಡವನನ್ನು ನಾನು ಜೀವಂತವುಳಿಸುವಂತೆ ನೀನು ನನಗೆ ಬುದ್ಧಿಯನ್ನು ನೀಡಬೇಕು!”
08049064 ವಾಸುದೇವ ಉವಾಚ।
08049064a ರಾಜಾ ಶ್ರಾಂತೋ ಜಗತೋ ವಿಕ್ಷತಶ್ಚ ಕರ್ಣೇನ ಸಂಖ್ಯೇ ನಿಶಿತೈರ್ಬಾಣಸಂಘೈಃ।
08049064c ತಸ್ಮಾತ್ಪಾರ್ಥ ತ್ವಾಂ ಪರುಷಾಣ್ಯವೋಚತ್ ಕರ್ಣೇ ದ್ಯೂತಂ ಹ್ಯದ್ಯ ರಣೇ ನಿಬದ್ಧಂ।।
ವಾಸುದೇವನು ಹೇಳಿದನು: “ರಣದಲ್ಲಿ ಕರ್ಣನ ನಿಶಿತ ಬಾಣಸಂಘಗಳಿಂದ ಗಾಯಗೊಂಡು ರಾಜನು ಬಳಲಿದ್ದಾನೆ. ಪಾರ್ಥ! ಇಂದು ರಣದಲ್ಲಿ ಕರ್ಣನು ದ್ಯೂತದ ಪಣವಾಗಿರುವುದರಿಂದ ನಿನ್ನಲ್ಲಿ ಅವನು ಕಠೋರವಾಗಿ ಮಾತನ್ನಾಡಿದ್ದಾನೆ.
08049065a ತಸ್ಮಿನ್ ಹತೇ ಕುರವೋ ನಿರ್ಜಿತಾಃ ಸ್ಯುರ್ ಏವಂಬುದ್ಧಿಃ ಪಾರ್ಥಿವೋ ಧರ್ಮಪುತ್ರಃ।
08049065c ಯದಾವಮಾನಂ ಲಭತೇ ಮಹಾಂತಂ ತದಾ ಜೀವನ್ಮೃತ ಇತ್ಯುಚ್ಯತೇ ಸಃ।।
ಕರ್ಣನು ಹತನಾದನೆಂದರೆ ಕುರುಗಳು ಸೋತಂತೆ ಎಂದು ಪಾರ್ಥಿವ ಧರ್ಮಪುತ್ರನು ಯೋಚಿಸಿರುವನು. ಯಾರಿಗೆ ಮಹಾ ಅಪಮಾನವುಂಟಾಗುತ್ತದೆಯೋ ಅವನು ಜೀವಂತವಿದ್ದರೂ ಮೃತನಾದಂತೆ ಎಂದು ಹೇಳುತ್ತಾರೆ.
08049066a ತನ್ಮಾನಿತಃ ಪಾರ್ಥಿವೋಽಯಂ ಸದೈವ ತ್ವಯಾ ಸಭೀಮೇನ ತಥಾ ಯಮಾಭ್ಯಾಂ।
08049066c ವೃದ್ಧೈಶ್ಚ ಲೋಕೇ ಪುರುಷಪ್ರವೀರೈಸ್ ತಸ್ಯಾವಮಾನಂ ಕಲಯಾ ತ್ವಂ ಪ್ರಯುಂಕ್ಷ್ವ।।
ನಿನ್ನಿಂದ, ಭೀಮಸೇನನಿಂದ, ಹಾಗೆಯೇ ಯಮಳರಿಂದ, ಲೋಕದ ವೃದ್ಧರಿಂದ ಮತ್ತು ಪುರುಷಪ್ರವೀರರಿಂದ ಸದೈವ ಮಾನಿತನಾಗಿರುವ ಈ ಪಾರ್ಥಿವನನ್ನು ನೀನು ಮಾತಿನಿಂದ ಅವಹೇಳನೆ ಮಾಡು.
08049067a ತ್ವಮಿತ್ಯತ್ರಭವಂತಂ ತ್ವಂ ಬ್ರೂಹಿ ಪಾರ್ಥ ಯುಧಿಷ್ಠಿರಂ।
08049067c ತ್ವಮಿತ್ಯುಕ್ತೋ ಹಿ ನಿಹತೋ ಗುರುರ್ಭವತಿ ಭಾರತ।।
ಭಾರತ! ಪಾರ್ಥ! “ಭವಂತಂ” ಎನ್ನುವುದರ ಬದಲಾಗಿ ನೀನು ಯುಧಿಷ್ಠಿರನನ್ನು “ತ್ವಂ” ಎಂದು ಸಂಬೋಧಿಸು. ಹಿರಿಯವನಿಗೆ “ತ್ವಂ” ಎಂದು ಹೇಳಿದರೂ ಅವನು ಹತನಾದಂತೆ!
08049068a ಏವಮಾಚರ ಕೌಂತೇಯ ಧರ್ಮರಾಜೇ ಯುಧಿಷ್ಠಿರೇ।
08049068c ಅಧರ್ಮಯುಕ್ತಂ ಸಂಯೋಗಂ ಕುರುಷ್ವೈವಂ ಕುರೂದ್ವಹ।।
ಕೌಂತೇಯ! ಧರ್ಮರಾಜ ಯುಧಿಷ್ಠಿರನ ಕುರಿತು ಹೀಗೆ ನಡೆದುಕೋ! ಕುರೂದ್ವಹ! ಅವನನ್ನು ಅಧರ್ಮಯುಕ್ತವಾಗಿ ಸಂಬೋಧಿಸು!
08049069a ಅಥರ್ವಾಂಗಿರಸೀ ಹ್ಯೇಷಾ ಶ್ರುತೀನಾಮುತ್ತಮಾ ಶ್ರುತಿಃ।
08049069c ಅವಿಚಾರ್ಯೈವ ಕಾರ್ಯೈಷಾ ಶ್ರೇಯಃಕಾಮೈರ್ನರೈಃ ಸದಾ।।
ಅಥರ್ವಾಂಗೀರಸೀ ಎಂಬ ಈ ಶ್ರುತಿಯು ಶ್ರುತಿಗಳಲ್ಲಿಯೇ ಉತ್ತಮವಾದುದು. ಶ್ರೇಯಸ್ಸನ್ನು ಬಯಸುವ ನರರು ಸದಾ ವಿಚಾರವನ್ನೇನೂ ಮಾಡದೇ ಹೀಗೆಯೇ ನಡೆದುಕೊಳ್ಳಬೇಕು.
08049070a ವಧೋ ಹ್ಯಯಂ ಪಾಂಡವ ಧರ್ಮರಾಜ್ಞಸ್ ತ್ವತ್ತೋ ಯುಕ್ತೋ ವೇತ್ಸ್ಯತೇ ಚೈವಂ ಏಷಃ।
08049070c ತತೋಽಸ್ಯ ಪಾದಾವಭಿವಾದ್ಯ ಪಶ್ಚಾಚ್ ಚಮಂ ಬ್ರೂಯಾಃ ಸಾಂತ್ವಪೂರ್ವಂ ಚ ಪಾರ್ಥಂ।।
ಪಾಂಡವ! ನೀನು ಎಂಬ ಸಂಬೋಧಯುಕ್ತವಾಗಿ ಮಾತನಾಡಿ ಧರ್ಮರಾಜನನ್ನು ವಧಿಸು. ಅನಂತರ ಪಾರ್ಥನ ಪಾದಗಳಿಗೆ ನಮಸ್ಕರಿಸಿ ಕ್ಷಮೆಯನ್ನು ಕೇಳು ಮತ್ತು ಅವನೊಡನೆ ಸಾಂತ್ವಪೂರ್ವಕವಾಗಿ ಮಾತನಾಡು!
08049071a ಭ್ರಾತಾ ಪ್ರಾಜ್ಞಸ್ತವ ಕೋಪಂ ನ ಜಾತು ಕುರ್ಯಾದ್ರಾಜಾ ಕಂ ಚನ ಪಾಂಡವೇಯಃ।
08049071c ಮುಕ್ತೋಽನೃತಾದ್ಭ್ರಾತೃವಧಾಚ್ಚ ಪಾರ್ಥ ಹೃಷ್ಟಃ ಕರ್ಣಂ ತ್ವಂ ಜಹಿ ಸೂತಪುತ್ರಂ।।
ಪ್ರಾಜ್ಞನಾದ ನಿನ್ನ ಭ್ರಾತಾ ಪಾಂಡವೇಯ ರಾಜನು ನಿನ್ನ ಮೇಲೆ ಎಂದೂ ಕುಪಿತನಾಗುವುದಿಲ್ಲ. ಪಾರ್ಥ! ಹೀಗೆ ಪ್ರತಿಜ್ಞೆಯನ್ನು ಸುಳ್ಳಾಗಿಸುವ ಮತ್ತು ಅಣ್ಣನ ವಧೆಯ ಕಷ್ಟದಿಂದ ಮುಕ್ತನಾಗಿ ಹೃಷ್ಟನಾಗಿ ಸೂತಪುತ್ರ ಕರ್ಣನನ್ನು ಸಂಹರಿಸು!””
08049072 ಸಂಜಯ ಉವಾಚ।
08049072a ಇತ್ಯೇವಮುಕ್ತಸ್ತು ಜನಾರ್ದನೇನ ಪಾರ್ಥಃ ಪ್ರಶಸ್ಯಾಥ ಸುಹೃದ್ವಧಂ ತಂ।
08049072c ತತೋಽಬ್ರವೀದರ್ಜುನೋ ಧರ್ಮರಾಜಂ ಅನುಕ್ತಪೂರ್ವಂ ಪರುಷಂ ಪ್ರಸಹ್ಯ।।
ಸಂಜಯನು ಹೇಳಿದನು: “ಜನಾರ್ದನನು ಹೀಗೆ ಹೇಳಲು ಪಾರ್ಥನು ತನ್ನ ಸುಹೃದನನ್ನು ಪ್ರಶಂಸಿದನು. ಅನಂತರ ಅರ್ಜುನನು ಹಿಂದೆಂದೂ ಹೇಳದೇ ಇದ್ದ ಅತ್ಯಂತ ನಿಷ್ಠುರವಾದ ಮಾತುಗಳನ್ನು, ತನಗಿಷ್ಟವಿಲ್ಲದಿದ್ದರೂ ಬಲವಂತದಿಂದ, ನಗುತ್ತಾ ಆಡಿದನು:
08049073a ಮಾ ತ್ವಂ ರಾಜನ್ವ್ಯಾಹರ ವ್ಯಾಹರತ್ಸು ನ ತಿಷ್ಠಸೇ ಕ್ರೋಶಮಾತ್ರೇ ರಣಾರ್ಧೇ।
08049073c ಭೀಮಸ್ತು ಮಾಮರ್ಹತಿ ಗರ್ಹಣಾಯ ಯೋ ಯುಧ್ಯತೇ ಸರ್ವಯೋಧಪ್ರವೀರಃ।।
“ರಾಜನ್! ತುಂಬಾಮಾತನಾಡುತ್ತಿರುವೆ! ಮಾತನಾಡಬೇಡ! ರಣಭೂಮಿಯಿಂದ ಅರ್ಧಕ್ರೋಶಮಾತ್ರ ದೂರದಲ್ಲಿಯೂ ನೀನು ನಿಲ್ಲಲಾರೆ! ಸರ್ವಯೋಧಪ್ರವೀರರೊಡನೆಯೂ ಯುದ್ಧಮಾಡುತ್ತಿರುವ ಭೀಮನು ಮಾತ್ರ ನನ್ನನ್ನು ನಿಂದಿಸಲು ಅರ್ಹನಾಗಿರುತ್ತಾನೆ!
08049074a ಕಾಲೇ ಹಿ ಶತ್ರೂನ್ಪ್ರತಿಪೀಡ್ಯ ಸಂಖ್ಯೇ ಹತ್ವಾ ಚ ಶೂರಾನ್ಪೃಥಿವೀಪತೀಂಸ್ತಾನ್।
08049074c ಯಃ ಕುಂಜರಾಣಾಮಧಿಕಂ ಸಹಸ್ರಂ ಹತ್ವಾನದತ್ತುಮುಲಂ ಸಿಂಹನಾದಂ।।
08049075a ಸುದುಷ್ಕರಂ ಕರ್ಮ ಕರೋತಿ ವೀರಃ ಕರ್ತುಂ ಯಥಾ ನಾರ್ಹಸಿ ತ್ವಂ ಕದಾ ಚಿತ್।
08049075c ರಥಾದವಪ್ಲುತ್ಯ ಗದಾಂ ಪರಾಮೃಶಂಸ್ ತಯಾ ನಿಹಂತ್ಯಶ್ವನರದ್ವಿಪಾನ್ರಣೇ।।
ಸಮಯಸಿಕ್ಕಾಗಲೆಲ್ಲಾ ರಣದಲ್ಲಿ ಶತ್ರುಗಳನ್ನು ಬಹಳವಾಗಿ ಪೀಡಿಸಿ, ಶೂರ ಪೃಥಿವೀಪತಿಗಳನ್ನು ಸಂಹರಿಸಿ, ಸಾವಿರಕ್ಕೂ ಅಧಿಕ ಸಂಖ್ಯೆಗಳಲ್ಲಿ ಆನೆಗಳನ್ನು ಸಂಹರಿಸಿ ತುಮುಲ ಸಿಂಹನಾದವನ್ನು ಮಾಡಿ ಆ ವೀರನು ಯಾವ ಸುದುಷ್ಕರ ಕರ್ಮಗಳನ್ನು ಮಾಡುತ್ತಾನೋ ಅಂಥಹ ಕರ್ಮಗಳನ್ನು ನೀನು ಎಂದೂ ಮಾಡಲು ಸಮರ್ಥನಿಲ್ಲ! ರಣದಲ್ಲಿ ಅವನು ರಥದಿಂದ ಹಾರಿ ತನ್ನ ಗದೆಯಿಂದ ಪರಮಹಿಂಸೆಯನ್ನಿತ್ತು ಕುದುರೆ-ಮನುಷ್ಯ-ಆನೆಗಳನ್ನು ಸಂಹರಿಸುತ್ತಿದ್ದಾನೆ!
08049076a ವರಾಸಿನಾ ವಾಜಿರಥಾಶ್ವಕುಂಜರಾಂಸ್ ತಥಾ ರಥಾಂಗೈರ್ಧನುಷಾ ಚ ಹಂತ್ಯರೀನ್।
08049076c ಪ್ರಮೃದ್ಯ ಪದ್ಭ್ಯಾಮಹಿತಾನ್ನಿಹಂತಿ ಯಃ ಪುನಶ್ಚ ದೋರ್ಭ್ಯಾಂ ಶತಮನ್ಯುವಿಕ್ರಮಃ।।
08049077a ಮಹಾಬಲೋ ವೈಶ್ರವಣಾಂತಕೋಪಮಃ ಪ್ರಸಹ್ಯ ಹಂತಾ ದ್ವಿಷತಾಂ ಯಥಾರ್ಹಂ।
08049077c ಸ ಭೀಮಸೇನೋಽರ್ಹತಿ ಗರ್ಹಣಾಂ ಮೇ ನ ತ್ವಂ ನಿತ್ಯಂ ರಕ್ಷ್ಯಸೇ ಯಃ ಸುಹೃದ್ಭಿಃ।।
ಶ್ರೇಷ್ಠ ಖಡ್ಗದಿಂದ ರಥ-ಅಶ್ವ-ಕುಂಜರಗಳನ್ನು ಮತ್ತು ಹಾಗೆಯೇ ಧನುಸ್ಸಿನಿಂದ ರಥಾಂಗಗಳನ್ನೂ ಅರಿಗಳನ್ನೂ ಸಂಹರಿಸಿ ಆ ಶತಮನ್ಯು ಮಿಕ್ರಮನು ಪುನಃ ಎರಡೂ ಪಾದಗಳಿಂದ ತುಳಿದು ಅಹಿತರನ್ನು ಸಂಹರಿಸುತ್ತಿದ್ದಾನೆ. ಮಹಾಬಲ ವೈಶ್ರವಣ ಮತ್ತು ಅಂತಕನಂತಿರುವ ಅವನು ಪ್ರಯತ್ನಪಟ್ಟು ಯಥಾರ್ಹ ಶತ್ರುಗಳನ್ನು ಸಂಹರಿಸುತ್ತಿದ್ದಾನೆ. ಅಂತಹ ಭೀಮಸೇನನು ನನ್ನನ್ನು ನಿಂದಿಸಲು ಅರ್ಹನಾಗಿದ್ದಾನೆ. ನಿತ್ಯವೂ ಸುಹೃದಯರ ರಕ್ಷಣೆಯಲ್ಲಿರುವ ನಿನಗೆ ಆ ಅರ್ಹತೆಯಿಲ್ಲ!
08049078a ಮಹಾರಥಾನ್ನಾಗವರಾನ್ ಹಯಾಂಶ್ಚ ಪದಾತಿಮುಖ್ಯಾನಪಿ ಚ ಪ್ರಮಥ್ಯ।
08049078c ಏಕೋ ಭೀಮೋ ಧಾರ್ತರಾಷ್ಟ್ರೇಷು ಮಗ್ನಃ ಸ ಮಾಮುಪಾಲಬ್ಧುಮರಿಂದಮೋಽರ್ಹತಿ।।
ಮಹಾರಥಗಳನ್ನೂ, ಶ್ರೇಷ್ಠ ಸಲಗಗಳನ್ನೂ, ಕುದುರೆಗಳನ್ನೂ, ಮತ್ತು ಪದಾತಿಮುಖ್ಯರನ್ನೂ ತುಳಿದು ಧಾರ್ತರಾಷ್ಟ್ರರಲ್ಲಿ ಮಗ್ನನಾಗಿರುವ ಅರಿಂದಮ ಭೀಮನೊಬ್ಬನೇ ನನ್ನನ್ನು ನಿಂದಿಸಲು ಅರ್ಹನಾಗಿದ್ದಾನೆ!
08049079a ಕಲಿಂಗವಂಗಾಂಗನಿಷಾದಮಾಗಧಾನ್ ಸದಾಮದಾನ್ನೀಲಬಲಾಹಕೋಪಮಾನ್।
08049079c ನಿಹಂತಿ ಯಃ ಶತ್ರುಗಣಾನನೇಕಶಃ ಸ ಮಾಭಿವಕ್ತುಂ ಪ್ರಭವತ್ಯನಾಗಸಂ।।
ಸದಾ ಮದೋನ್ಮತ್ತರಾದ ಕಪ್ಪುಮೋಡಗಳಿಂತಿರುವ ಕಲಿಂಗ- ವಂಗ-ಅಂಗ-ನಿಷಾದ-ಮಾಗಧರ ಅನೇಕ ಶತ್ರುಗಳನ್ನು ಯಾರು ಸಂಹರಿಸುತ್ತಿರುವನೋ ಆ ಅನಾಗಸ ಭೀಮಸೇನನು ಮಾತ್ರ ನನ್ನನ್ನು ಹೀಯಾಳಿಸಲು ಸಮರ್ಥ!
08049080a ಸುಯುಕ್ತಮಾಸ್ಥಾಯ ರಥಂ ಹಿ ಕಾಲೇ ಧನುರ್ವಿಕರ್ಷಂ ಶರಪೂರ್ಣಮುಷ್ಟಿಃ।
08049080c ಸೃಜತ್ಯಸೌ ಶರವರ್ಷಾಣಿ ವೀರೋ ಮಹಾಹವೇ ಮೇಘ ಇವಾಂಬುಧಾರಾಃ।।
ಸಮಯದಲ್ಲಿ ಸುಯುಕ್ತ ರಥದಲ್ಲಿ ಕುಳಿತು ಧನುಸ್ಸನ್ನು ಎಳೆಯುತ್ತಾ, ಮುಷ್ಟಿ ತುಂಬಾ ಶರಗಳನ್ನು ಹಿಡಿದು ಆ ವೀರನು ಮಹಾಹವದಲ್ಲಿ ಮೇಘವು ಮಳೆಯನ್ನು ಸುರಿಸುವಂತೆ ಶರವರ್ಷಗಳನ್ನು ಸೃಷ್ಟಿಸುತ್ತಾನೆ!
08049081a ಬಲಂ ತು ವಾಚಿ ದ್ವಿಜಸತ್ತಮಾನಾಂ ಕ್ಷಾತ್ರಂ ಬುಧಾ ಬಾಹುಬಲಂ ವದಂತಿ।
08049081c ತ್ವಂ ವಾಗ್ಬಲೋ ಭಾರತ ನಿಷ್ಠುರಶ್ಚ ತ್ವಂ ಏವ ಮಾಂ ವೇತ್ಸಿ ಯಥಾವಿಧೋಽಹಂ।।
ದ್ವಿಜಸತ್ತಮರಿಗೆ ಮಾತೇ ಬಲವೆಂದೂ ಕ್ಷತ್ರಿಯರಿಗೆ ಬಾಹುವೇ ಬಲವೆಂದು ತಿಳಿದವರು ಹೇಳುತ್ತಾರೆ. ಭಾರತ! ನಿಷ್ಠುರ ಮಾತುಗಳೇ ನಿನ್ನ ಬಲವಾಗಿದೆ! ನಾನು ಹೇಗಿದ್ದೇನೆಂಬುದು ನಿನಗೆ ತಿಳಿದೇ ಇದೆ!
08049082a ಯತಾಮಿ ನಿತ್ಯಂ ತವ ಕರ್ತುಮಿಷ್ಟಂ ದಾರೈಃ ಸುತೈರ್ಜೀವಿತೇನಾತ್ಮನಾ ಚ।
08049082c ಏವಂ ಚ ಮಾಂ ವಾಗ್ವಿಶಿಖೈರ್ನಿಹಂಸಿ ತ್ವತ್ತಃ ಸುಖಂ ನ ವಯಂ ವಿದ್ಮ ಕಿಂ ಚಿತ್।।
ಪತ್ನಿಯರು, ಮಕ್ಕಳು ಮತ್ತು ನನ್ನ ಜೀವಾತ್ಮಗಳಿಂದ ನಿತ್ಯವೂ ನಿನಗೆ ಇಷ್ಟವಾದುದನ್ನೇ ಮಾಡಲು ಪ್ರಯತ್ನಿಸುತ್ತಾ ಬಂದಿದ್ದೇನೆ. ಹಾಗಿದ್ದರೂ ನೀನು ನನ್ನನ್ನು ಮಾತಿನ ಬಾಣಗಳಿಂದ ಹಿಂಸಿಸುತ್ತಿರುವೆ! ನಿನ್ನಿಂದಾಗಿ ನಾವು ಸುಖವೇನೆಂಬುದನ್ನೇ ತಿಳಿಯದವರಾಗಿದ್ದೇವೆ!
08049083a ಅವಾಮಂಸ್ಥಾ ಮಾಂ ದ್ರೌಪದೀತಲ್ಪಸಂಸ್ಥೋ ಮಹಾರಥಾನ್ಪ್ರತಿಹನ್ಮಿ ತ್ವದರ್ಥೇ।
08049083c ತೇನಾತಿಶಂಕೀ ಭಾರತ ನಿಷ್ಠುರೋಽಸಿ ತ್ವತ್ತಃ ಸುಖಂ ನಾಭಿಜಾನಾಮಿ ಕಿಂ ಚಿತ್।।
ದ್ರೌಪದಿಯ ಹಾಸಿಗೆಯ ಮೇಲೆ ಸುಖವಾಗಿ ಪವಡಿಸುವ ನೀನು ನಿನಗಾಗಿ ಪ್ರತಿದಿನವೂ ಮಹಾರಥರನ್ನು ಸಂಹರಿಸುವ ನನ್ನನ್ನು ಅಪಮಾನಿಸಬೇಡ! ಭಾರತ! ಅತಿಶಂಕಿಯಾದ ನೀನು ನಿಷ್ಠುರನಾಗಿರುವೆ! ನಿನ್ನಿಂದಾಗಿ ನಾನು ಸುಖವೇನೆನ್ನುವುದನ್ನು ಸ್ವಲ್ಪವೂ ತಿಳಿದಿಲ್ಲ!
08049084a ಪ್ರೋಕ್ತಃ ಸ್ವಯಂ ಸತ್ಯಸಂಧೇನ ಮೃತ್ಯುಸ್ ತವ ಪ್ರಿಯಾರ್ಥಂ ನರದೇವ ಯುದ್ಧೇ।
08049084c ವೀರಃ ಶಿಖಂಡೀ ದ್ರೌಪದೋಽಸೌ ಮಹಾತ್ಮಾ ಮಯಾಭಿಗುಪ್ತೇನ ಹತಶ್ಚ ತೇನ।।
ನರದೇವ! ನಿನಗೆ ಪ್ರಿಯವನ್ನುಂಟುಮಾಡಲೆಂದು ಯುದ್ಧದಲ್ಲಿ ಸ್ವಯಂ ಸತ್ಯಸಂಧ ಭೀಷ್ಮನು ತನ್ನ ಮೃತ್ಯುವು ಹೇಗೆ ಸಾಧ್ಯವೆನ್ನುವುದನ್ನು ಹೇಳಿದನು. ನನ್ನಿಂದ ರಕ್ಷಿಸಲ್ಪಟ್ಟ ಮಹಾತ್ಮ ವೀರ ಶಿಖಂಡೀ ದ್ರೌಪದನು ಅವನನ್ನು ಸಂಹರಿಸಿದನು.
08049085a ನ ಚಾಭಿನಂದಾಮಿ ತವಾಧಿರಾಜ್ಯಂ ಯತಸ್ತ್ವಮಕ್ಷೇಷ್ವಹಿತಾಯ ಸಕ್ತಃ।
08049085c ಸ್ವಯಂ ಕೃತ್ವಾ ಪಾಪಮನಾರ್ಯಜುಷ್ಟಂ ಏಭಿರ್ಯುದ್ಧೇ ತರ್ತುಮಿಚ್ಚಸ್ಯರೀಂಸ್ತು।।
ಅಹಿತಕರವಾದ ಜೂಜಿನಲ್ಲಿ ನಿರತನಾಗಿದ್ದ ನಿನ್ನ ರಾಜ್ಯಾಧಿಕಾರವನ್ನೂ ನಾನು ಪ್ರಶಂಸಿಸುವುದಿಲ್ಲ. ಅನಾರ್ಯರು ಮಾಡುವಂಥಹ ಪಾಪವನ್ನು ಸ್ವಯಂ ಮಾಡಿ ಅರಿಗಳೊಂದಿಗಿನ ಈ ಯುದ್ಧವನ್ನು ನಮ್ಮಿಂದ ಗೆಲ್ಲಲು ಬಯಸುತ್ತಿರುವೆ!
08049086a ಅಕ್ಷೇಷು ದೋಷಾ ಬಹವೋ ವಿಧರ್ಮಾಹಃ ಶ್ರುತಾಸ್ತ್ವಯಾ ಸಹದೇವೋಽಬ್ರವೀದ್ಯಾನ್।
08049086c ತಾನ್ನೈಷಿ ಸಂತರ್ತುಮಸಾಧುಜುಷ್ಟಾನ್ ಯೇನ ಸ್ಮ ಸರ್ವೇ ನಿರಯಂ ಪ್ರಪನ್ನಾಃ।।
ಅಧರ್ಮವಾದ ಜೂಜಿನಲ್ಲಿ ಅನೇಕ ದೋಷಗಳಿವೆಯೆಂದು ಸಹದೇಹನು ನಿನಗೆ ತಿಳಿಸಿ ಹೇಳಿದ್ದನು. ಆದರೂ ನೀನು ಅಸಾಧುಗಳಿಗೆ ಸರಿಯಾದ ಅದರಲ್ಲಿ ತೊಡಗಿ ನಮ್ಮೆಲ್ಲರನ್ನೂ ಕಷ್ಟಗಳಲ್ಲಿ ಮುಳುಗಿಸಿದ್ದೀಯೆ!
08049087a ತ್ವಂ ದೇವಿತಾ ತ್ವತ್ಕೃತೇ ರಾಜ್ಯನಾಶಸ್ ತ್ವತ್ಸಂಭವಂ ವ್ಯಸನಂ ನೋ ನರೇಂದ್ರ।
08049087c ಮಾಸ್ಮಾನ್ಕ್ರೂರೈರ್ವಾಕ್ಪ್ರತೋದೈಸ್ತುದ ತ್ವಂ ಭೂಯೋ ರಾಜನ್ಕೋಪಯನ್ನಲ್ಪಭಾಗ್ಯಾನ್।।
ನರೇಂದ್ರ! ನೀನು ಜೂಜಾಡಿದುದರಿಂದಲೇ ರಾಜ್ಯನಾಶವಾಯಿತು. ನಿನ್ನಿಂದಲೇ ನಮ್ಮ ಈ ವ್ಯಸನವು ಹುಟ್ಟಿಕೊಂಡಿರುವುದು. ರಾಜನ್! ಅಲ್ಪಭಾಗ್ಯರಾದ ನಮ್ಮನ್ನು ಪುನಃ ಕ್ರೂರಮಾತುಗಳೆಂಬ ಚಾವಟಿಯಿಂದ ಹೊಡೆದು ಕುಪಿತರನ್ನಾಗಿಸಬೇಡ!”
08049088a ಏತಾ ವಾಚಃ ಪರುಷಾಃ ಸವ್ಯಸಾಚೀ ಸ್ಥಿರಪ್ರಜ್ಞಂ ಶ್ರಾವಯಿತ್ವಾ ತತಕ್ಷ।
08049088c ತದಾನುತೇಪೇ ಸುರರಾಜಪುತ್ರೋ ವಿನಿಃಶ್ವಸಂಶ್ಚಾಪ್ಯಸಿಮುದ್ಬಬರ್ಹ।।
ಸ್ಥಿತಪ್ರಜ್ಞನಿಗೆ ಈ ರೀತಿಯ ಕಠೋರ ಮಾತುಗಳನ್ನಾಡಿ ಸುರರಾಜಪುತ್ರ ಸವ್ಯಸಾಚಿಯು ಪರಿತಪಿಸಿದನು ಮತ್ತು ನಿಟ್ಟುಸಿರು ಬಿಡುತ್ತಾ ಪುನಃ ಖಡ್ಗವನ್ನು ಒರೆಯಿಂದ ಹೊರತೆಗೆದನು.
08049089a ತಮಾಹ ಕೃಷ್ಣಃ ಕಿಮಿದಂ ಪುನರ್ಭವಾನ್ ವಿಕೋಶಮಾಕಾಶನಿಭಂ ಕರೋತ್ಯಸಿಂ।
08049089c ಪ್ರಬ್ರೂಹಿ ಸತ್ಯಂ ಪುನರುತ್ತರಂ ವಿಧೇರ್ ವಚಃ ಪ್ರವಕ್ಷ್ಯಾಂಯಹಮರ್ಥಸಿದ್ಧಯೇ।।
ಅವನಿಗೆ ಕೃಷ್ಣನು ಹೇಳಿದನು: “ಇದೇನಿದು? ಪುನಃ ನೀನು ಆಕಾಶಸನ್ನಿಭ ಖಡ್ಗವನ್ನು ಒರೆಯಿಂದ ಹೊರಗೆಳೆಯುತ್ತಿರುವೆ? ಸತ್ಯವೇನೆನ್ನುವುದನ್ನು ಹೇಳು. ನಂತರ ನಾನು ನಿನಗೆ ಉದ್ದೇಶಸಿದ್ಧಿಯಾಗುವಂತಹ ಉಪಾಯವನ್ನು ಹೇಳಿಕೊಡುತ್ತೇನೆ!”
08049090a ಇತ್ಯೇವ ಪೃಷ್ಟಃ ಪುರುಷೋತ್ತಮೇನ ಸುದುಃಖಿತಃ ಕೇಶವಮಾಹ ವಾಕ್ಯಂ।
08049090c ಅಹಂ ಹನಿಷ್ಯೇ ಸ್ವಶರೀರಮೇವ ಪ್ರಸಹ್ಯ ಯೇನಾಹಿತಮಾಚರಂ ವೈ।।
ಪುರುಷೋತ್ತಮನು ಹೀಗೆ ಕೇಳಲು ಸುದುಃಖಿತನಾದ ಅರ್ಜುನನು ಕೇಶವನಿಗೆ ಈ ಮಾತನ್ನಾಡಿದನು: “ಮನಸ್ಸಿಲ್ಲದಿದ್ದರೂ ಈ ಅಹಿತ ಮಾತುಗಳನ್ನಾಡಿದುದಕ್ಕೆ ನಾನು ನನ್ನ ಶರೀರವನ್ನೇ ಸಂಹರಿಸಿಕೊಳ್ಳುತ್ತೇನೆ!”
08049091a ನಿಶಂಯ ತತ್ಪಾರ್ಥವಚೋಽಬ್ರವೀದಿದಂ ಧನಂಜಯಂ ಧರ್ಮಭೃತಾಂ ವರಿಷ್ಠಃ।
08049091c ಪ್ರಬ್ರೂಹಿ ಪಾರ್ಥ ಸ್ವಗುಣಾಮಿಹಾತ್ಮನಸ್ ತಥಾ ಸ್ವಹಾರ್ದಂ ಭವತೀಹ ಸದ್ಯಃ।।
ಪಾರ್ಥ ಧನಂಜಯನ ಆ ಮಾತುಗಳನ್ನು ಕೇಳಿದ ಧರ್ಮಭೃತರಲ್ಲಿ ವರಿಷ್ಠ ಕೃಷ್ಣನು ಹೇಳಿದನು: “ಪಾರ್ಥ! ನಿನ್ನ ಮನಃಪೂರ್ವಕವಾಗಿ ನಿನ್ನದೇ ಗುಣಗಳನ್ನು ಹೊಗಳಿಕೋ! ಇದರಿಂದಾಗಿ ನಿನ್ನನ್ನು ನೀನೇ ಕೊಂದುಕೊಂಡಂತೆ ಆಗುತ್ತದೆ!”
08049092a ತಥಾಸ್ತು ಕೃಷ್ಣೇತ್ಯಭಿನಂದ್ಯ ವಾಕ್ಯಂ ಧನಂಜಯಃ ಪ್ರಾಹ ಧನುರ್ವಿನಾಂಯ।
08049092c ಯುಧಿಷ್ಠಿರಂ ಧರ್ಮಭೃತಾಂ ವರಿಷ್ಠಂ ಶೃಣುಷ್ವ ರಾಜನ್ನಿತಿ ಶಕ್ರಸೂನುಃ।।
“ಹಾಗೆಯೇ ಆಗಲಿ ಕೃಷ್ಣ!” ಎಂದು ಹೇಳಿ ಅವನ ಮಾತನ್ನು ಅಭಿನಂದಿಸಿ ಶಕ್ರಸೂನು ಧನಂಜಯನು ಧನುಸ್ಸನ್ನು ಬಗ್ಗಿಸುತ್ತಾ ಧರ್ಮಭೃತರಲ್ಲಿ ವರಿಷ್ಠನಾದ ಯುಧಿಷ್ಠಿರನಿಗೆ “ರಾಜನ್! ಕೇಳು!” ಎಂದು ಹೇಳಿದನು.
08049093a ನ ಮಾದೃಶೋಽನ್ಯೋ ನರದೇವ ವಿದ್ಯತೇ ಧನುರ್ಧರೋ ದೇವಂ ಋತೇ ಪಿನಾಕಿನಂ।
08049093c ಅಹಂ ಹಿ ತೇನಾನುಮತೋ ಮಹಾತ್ಮನಾ ಕ್ಷಣೇನ ಹನ್ಯಾಂ ಸಚರಾಚರಂ ಜಗತ್।।
“ನರದೇವ! ದೇವ ಪಿನಾಕಿಯನ್ನು ಬಿಟ್ಟು ನನ್ನಂತಹ ಧನುರ್ಧರನು ಬೇರೆ ಯಾರೂ ಇಲ್ಲ! ಮಹಾತ್ಮನಾದ ನೀನು ಅನುಮತಿಯನ್ನಿತ್ತರೆ ನಾನು ಸಚರಾಚರ ಜಗತ್ತನೂ ಕ್ಷಣದಲ್ಲಿ ಸಂಹರಿಸಿಯೇನು!
08049094a ಮಯಾ ಹಿ ರಾಜನ್ಸದಿಗೀಶ್ವರಾ ದಿಶೋ ವಿಜಿತ್ಯ ಸರ್ವಾ ಭವತಃ ಕೃತಾ ವಶೇ।
08049094c ಸ ರಾಜಸೂಯಶ್ಚ ಸಮಾಪ್ತದಕ್ಷಿಣಃ ಸಭಾ ಚ ದಿವ್ಯಾ ಭವತೋ ಮಮೌಜಸಾ।।
ರಾಜನ್! ಜಗತ್ತಿನ ದಿಕ್ಕುಗಳನ್ನು ಗೆದ್ದು ನಾನೇ ನಿನಗೆ ಸರ್ವವನ್ನೂ ನಿನ್ನ ವಶವನ್ನಾಗಿ ಮಾಡಿದೆ. ದಕ್ಷಿಣೆಗಳಿಂದ ಸಮಾಪ್ತವಾದ ರಾಜಸೂಯವೂ ಮತ್ತು ದಿವ್ಯ ಸಭಾಭವನವೂ ನನ್ನ ಓಜಸ್ಸಿನಿಂದಲೇ ಆಯಿತು!
08049095a ಪಾಣೌ ಪೃಷತ್ಕಾ ಲಿಖಿತಾ ಮಮೇಮೇ ಧನುಶ್ಚ ಸಂಖ್ಯೇ ವಿತತಂ ಸಬಾಣಂ।
08049095c ಪಾದೌ ಚ ಮೇ ಸಶರೌ ಸಹಧ್ವಜೌ ನ ಮಾದೃಶಂ ಯುದ್ಧಗತಂ ಜಯಂತಿ।।
ನನ್ನ ಅಂಗೈಯಲ್ಲಿ ಪೃಷತ್ಕಗಳೂ ಬಾಣದೊಂದಿಗೆ ಧನುಸ್ಸಿನ ಚಿಹ್ನೆಗಳು ಮತ್ತು ನನ್ನ ಪಾದಗಳಲ್ಲಿ ಶರ ಮತ್ತು ಧ್ವಜಗಳ ಚಿಹ್ನೆಗಳಿವೆ. ಅಥಹ ನಾನು ಯುದ್ಧಕ್ಕೆ ಹೋದರೆ ಯಾರೂ ಅವನನ್ನು ಗೆಲ್ಲಲಾರರು!
08049096a ಹತಾ ಉದೀಚ್ಯಾ ನಿಹತಾಃ ಪ್ರತೀಚ್ಯಾಃ ಪ್ರಾಚ್ಯಾ ನಿರಸ್ತಾ ದಾಕ್ಷಿಣಾತ್ಯಾ ವಿಶಸ್ತಾಃ।
08049096c ಸಂಶಪ್ತಕಾನಾಂ ಕಿಂ ಚಿದೇವಾವಶಿಷ್ಟಂ ಸರ್ವಸ್ಯ ಸೈನ್ಯಸ್ಯ ಹತಂ ಮಯಾರ್ಧಂ।।
ಉತ್ತರದವರು ಹತರಾದರು. ಪಶ್ಚಿಮದವರು ಹತರಾದರು. ಪೂರ್ವದವರು ನಿರಸ್ತರಾದರು. ದಾಕ್ಷಿಣಾತ್ಯರು ವಿಶಸ್ತರಾದರು. ಸಂಶಪ್ತಕರಲ್ಲಿ ಸ್ವಲ್ಪವೇ ಉಳಿದುಕೊಂಡಿದ್ದಾರೆ. ಸರ್ವ ಸೇನೆಗಳ ಅರ್ಧವೇ ನನ್ನಿಂದ ನಾಶವಾಗಿದೆ!
08049097a ಶೇತೇ ಮಯಾ ನಿಹತಾ ಭಾರತೀ ಚ ಚಮೂ ರಾಜನ್ದೇವಚಮೂಪ್ರಕಾಶಾ।
08049097c ಯೇ ನಾಸ್ತ್ರಜ್ಞಾಸ್ತಾನಹಂ ಹನ್ಮಿ ಶಸ್ತ್ರೈಸ್ ತಸ್ಮಾಲ್ಲೋಕಂ ನೇಹ ಕರೋಮಿ ಭಸ್ಮಸಾತ್।।
ರಾಜನ್! ದೇವಸೇನೆಗಳಂತೆ ಪ್ರಕಾಶಿಸುತ್ತಿದ್ದ ಭಾರತೀ ಸೇನೆಯು ನನ್ನಿಂದ ಹತವಾಗಿ ಮಲಗಿದೆ! ಅಸ್ತ್ರಜ್ಞಾನವುಳ್ಳವರನ್ನು ನಾನು ಶಸ್ತ್ರಗಳಿಂದಲೇ ಸಂಹರಿಸುತ್ತೇನೆ. ಆದುದರಿಂದ ನಾನು ಲೋಕವನ್ನೇ ಭಸ್ಮಮಾಡಿಬಿಡಲು ಬಯಸುವುದಿಲ್ಲ.”
08049098a ಇತ್ಯೇವಮುಕ್ತ್ವಾ ಪುನರಾಹ ಪಾರ್ಥೋ ಯುಧಿಷ್ಠಿರಂ ಧರ್ಮಭೃತಾಂ ವರಿಷ್ಠಂ।
08049098c ಅಪ್ಯಪುತ್ರಾ ತೇನ ರಾಧಾ ಭವಿತ್ರೀ ಕುಂತೀ ಮಯಾ ವಾ ತದೃತಂ ವಿದ್ಧಿ ರಾಜನ್।
08049098e ಪ್ರಸೀದ ರಾಜನ್ ಕ್ಷಮ ಯನ್ಮಯೋಕ್ತಂ ಕಾಲೇ ಭವಾನ್ವೇತ್ಸ್ಯತಿ ತನ್ನಮಸ್ತೇ।।
ಇದನ್ನು ಹೇಳಿ ಪಾರ್ಥನು ಧರ್ಮಭೃತರಲ್ಲಿ ವರಿಷ್ಠ ಯುಧಿಷ್ಠಿರನಿಗೆ ಪುನಃ ಹೇಳಿದನು: “ರಾಜನ್! ನಿನ್ನಿಂದಾಗಿ ರಾಧೆಯು ಪುತ್ರನಿಲ್ಲದವಳಾಗುತ್ತಾಳೆ ಅಥವಾ ಕುಂತಿಯು ನಾನಿಲ್ಲದವಳಾಗುತ್ತಾಳೆಂದು ತಿಳಿದುಕೋ! ರಾಜನ್! ಶಾಂತನಾಗು! ನಾನು ಹೇಳಿದುದನ್ನು ಕ್ಷಮಿಸು! ಕಾಲಬಂದಾಗ ನಿನಗೆ ಎಲ್ಲವೂ ತಿಳಿಯುತ್ತದೆ! ನಿನಗೆ ನಮಸ್ಕಾರ!”
08049099a ಪ್ರಸಾದ್ಯ ರಾಜಾನಮಮಿತ್ರಸಾಹಂ ಸ್ಥಿತೋಽಬ್ರವೀಚ್ಚೈನಮಭಿಪ್ರಪನ್ನಃ।
08049099c ಯಾಮ್ಯೇಷ ಭೀಮಂ ಸಮರಾತ್ಪ್ರಮೋಕ್ತುಂ ಸರ್ವಾತ್ಮನಾ ಸೂತಪುತ್ರಂ ಚ ಹಂತುಂ।।
ಅಮಿತ್ರಸಾಹು ಯುಧಿಷ್ಠಿರನನ್ನು ಪ್ರಸನ್ನಗೊಳಿಸುತ್ತಾ ನಿಂತಿದ್ದ ಅವನು ಪುನಃ ಸಮಾಧಾನಗೊಳಿಸುತ್ತಾ ಹೇಳಿದನು: “ಸಮರದ ಇಕ್ಕಟ್ಟಿನಿಂದ ಭೀಮನನ್ನು ಬಿಡುಗಡೆಗೊಳಿಸಲು ಮತ್ತು ಸರ್ವಪ್ರಯತ್ನದಿಂದ ಸೂತಪುತ್ರನನ್ನು ಸಂಹರಿಸಲು ಹೊರಡುತ್ತಿದ್ದೇನೆ.
08049100a ತವ ಪ್ರಿಯಾರ್ಥಂ ಮಮ ಜೀವಿತಂ ಹಿ ಬ್ರವೀಮಿ ಸತ್ಯಂ ತದವೇಹಿ ರಾಜನ್।
08049100c ಇತಿ ಪ್ರಾಯಾದುಪಸಂಗೃಹ್ಯ ಪಾದೌ ಸಮುತ್ಥಿತೋ ದೀಪ್ತತೇಜಾಃ ಕಿರೀಟೀ।
08049100e ನೇದಂ ಚಿರಾತ್ ಕ್ಷಿಪ್ರಮಿದಂ ಭವಿಷ್ಯತ್ಯ್ ಆವರ್ತತೇಽಸಾವಭಿಯಾಮಿ ಚೈನಂ।।
ರಾಜನ್! ನಿನಗೆ ಪ್ರಿಯವನ್ನುಂಟುಮಾಡಲೆಂದೇ ನನ್ನ ಈ ಜೀವವಿದೆ. ಸತ್ಯವನ್ನೇ ಹೇಳುತ್ತಿದ್ದೇನೆ. ಇದನ್ನು ತಿಳಿದುಕೋ! ಇನ್ನು ತಡವಾಗುವುದಿಲ್ಲ! ಬಹುಬೇಗ ಇದು ಆಗಿಹೋಗುತ್ತದೆ! ಈಗಲೇ ನಾನು ಅವನನ್ನು ಆಕ್ರಮಣಿಸುತ್ತೇನೆ!” ಎಂದು ಹೇಳಿ ದೀಪ್ತತೇಜಸ್ವಿ ಕಿರೀಟಿಯು ಅವನ ಎರಡೂ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಹೊರಟುನಿಂತನು.
08049101a ಏತಚ್ಛೃತ್ವಾ ಪಾಂಡವೋ ಧರ್ಮರಾಜೋ ಭ್ರಾತುರ್ವಾಕ್ಯಂ ಪರುಷಂ ಫಲ್ಗುನಸ್ಯ।
08049101c ಉತ್ಥಾಯ ತಸ್ಮಾಚ್ಚಯನಾದುವಾಚ ಪಾರ್ಥಂ ತತೋ ದುಃಖಪರೀತಚೇತಾಃ।।
ಭ್ರಾತಾ ಫಲ್ಗುನನ ಈ ಕಠೋರಮಾತುಗಳನ್ನು ಕೇಳಿದ ಪಾಂಡವ ಧರ್ಮರಾಜನು ಹಾಸಿಗೆಯಿಂದ ಮೇಲೆದ್ದು ದುಃಖದಿಂದ ವ್ಯಾಕುಲಚಿತ್ತನಾಗಿ ಪಾರ್ಥನಿಗೆ ಹೇಳಿದನು:
08049102a ಕೃತಂ ಮಯಾ ಪಾರ್ಥ ಯಥಾ ನ ಸಾಧು ಯೇನ ಪ್ರಾಪ್ತಂ ವ್ಯಸನಂ ವಃ ಸುಘೋರಂ।
08049102c ತಸ್ಮಾಚ್ಛಿರಶ್ಛಿಂದಿ ಮಮೇದಮದ್ಯ ಕುಲಾಂತಕಸ್ಯಾಧಮಪೂರುಷಸ್ಯ।।
“ಪಾರ್ಥ! ನಾನು ಮಾಡಿದುದು ಒಳ್ಳೆಯದಲ್ಲ! ಇದರಿಂದಾಗಿ ನಿಮಗೆ ಸುಘೋರ ವ್ಯಸನವು ಪ್ರಾಪ್ತವಾಯಿತು! ಆದುದರಿಂದ ಕುಲಾಂತಕನಾದ ಮತ್ತು ಅಧಮ ಪುರುಷನಾದ ನನ್ನ ಈ ಶಿರಸ್ಸನ್ನು ಕತ್ತರಿಸು!
08049103a ಪಾಪಸ್ಯ ಪಾಪವ್ಯಸನಾನ್ವಿತಸ್ಯ ವಿಮೂಢಬುದ್ಧೇರಲಸಸ್ಯ ಭೀರೋಃ।
08049103c ವೃದ್ಧಾವಮಂತುಃ ಪರುಷಸ್ಯ ಚೈವ ಕಿಂ ತೇ ಚಿರಂ ಮಾಮನುವೃತ್ಯ ರೂಕ್ಷಂ।।
ಈ ಪಾಪಿಯ, ಪಾಪವ್ಯಸನದಲ್ಲಿ ಆಸಕ್ತನಾಗಿರುವ, ವಿಮೂಢಬುದ್ಧಿಯ, ಆಲಸಿಯ, ನಾಚಿಕೆಯುಳ್ಳವನ, ವೃದ್ಧರನ್ನು ಅನಾದರಣೆಮಾಡುವ, ಕ್ರೂರಿಯ ಕಠಿಣವಾಕ್ಯಗಳನ್ನು ನೀನು ಸದಾ ಅನುಸರಣೆಯನ್ನು ಎಲ್ಲಿಯವರೆಗೆ ಮಾಡುತ್ತೀಯೆ?
08049104a ಗಚ್ಛಾಮ್ಯಹಂ ವನಂ ಏವಾದ್ಯ ಪಾಪಃ ಸುಖಂ ಭವಾನ್ವರ್ತತಾಂ ಮದ್ವಿಹೀನಃ।
08049104c ಯೋಗ್ಯೋ ರಾಜಾ ಭೀಮಸೇನೋ ಮಹಾತ್ಮಾ ಕ್ಲೀಬಸ್ಯ ವಾ ಮಮ ಕಿಂ ರಾಜ್ಯಕೃತ್ಯಂ।।
ಪಾಪಿಯಾದ ನಾನು ಇಂದೇ ವನಕ್ಕೆ ಹೋಗುತ್ತೇನೆ. ನಾನಿಲ್ಲದೇ ನೀವು ಸುಖದಿಂದಿರುವಿರಿ! ಮಹಾತ್ಮ ಭೀಮಸೇನನೇ ರಾಜನಾಗಲು ಯೋಗ್ಯ. ನಪುಂಸಕನಂತಿರುವ ನನಗೆ ರಾಜ್ಯಭಾರದ ಗೊಡವೆಯೇಕೆ?
08049105a ನ ಚಾಸ್ಮಿ ಶಕ್ತಃ ಪರುಷಾಣಿ ಸೋಢುಂ ಪುನಸ್ತವೇಮಾನಿ ರುಷಾನ್ವಿತಸ್ಯ।
08049105c ಭೀಮೋಽಸ್ತು ರಾಜಾ ಮಮ ಜೀವಿತೇನ ಕಿಂ ಕಾರ್ಯಮದ್ಯಾವಮತಸ್ಯ ವೀರ।।
ರೋಷಾನ್ವಿತನಾದ ನಿನ್ನ ಈ ಕಠೋರಮಾತುಗಳನ್ನು ಪುನಃ ಸಹಿಸಿಕೊಳ್ಳಲು ನಾನು ಶಕ್ತನಿಲ್ಲ. ಭೀಮನು ರಾಜನಾಗಲಿ! ಇಷ್ಟೊಂದು ಅಪಮಾನಿತನಾದ ನಂತರವೂ ಜೀವಂತವಾಗಿರುವ ಅವಶ್ಯಕತೆಯು ನನಗಿಲ್ಲ!”
08049106a ಇತ್ಯೇವಮುಕ್ತ್ವಾ ಸಹಸೋತ್ಪಪಾತ ರಾಜಾ ತತಸ್ತಚ್ಚಯನಂ ವಿಹಾಯ।
08049106c ಇಯೇಷ ನಿರ್ಗಂತುಮಥೋ ವನಾಯ ತಂ ವಾಸುದೇವಃ ಪ್ರಣತೋಽಭ್ಯುವಾಚ।।
ಹೀಗೆ ಹೇಳಿ ತಕ್ಷಣವೇ ಹಾಸಿಗೆಯಿಂದ ಕೆಳಕ್ಕಿಳಿದು ವನಕ್ಕೆ ಹೊರಡಲು ಅನುವಾದ ರಾಜನಿಗೆ ವಾಸುದೇವನು ಪ್ರಣಯದಿಂದ ಹೇಳಿದನು:
08049107a ರಾಜನ್ವಿದಿತಮೇತತ್ತೇ ಯಥಾ ಗಾಂಡೀವಧನ್ವನಃ।
08049107c ಪ್ರತಿಜ್ಞಾ ಸತ್ಯಸಂಧಸ್ಯ ಗಾಂಡೀವಂ ಪ್ರತಿ ವಿಶ್ರುತಾ।।
“ರಾಜನ್! ಸತ್ಯಸಂಧ ಗಾಂಡೀವಧನ್ವಿಯು ಗಾಂಡೀವದ ಕುರಿತಾಗಿ ಮಾಡಿದ್ದ ಲೋಕದಲ್ಲಿ ವಿಶ್ರುತವಾದ ಪ್ರತಿಜ್ಞೆಯು ನಿನಗೆ ತಿಳಿದೇ ಇತ್ತು.
08049108a ಬ್ರೂಯಾದ್ಯ ಏವಂ ಗಾಂಡೀವಂ ದೇಹ್ಯನ್ಯಸ್ಮೈ ತ್ವಮಿತ್ಯುತ।
08049108c ಸ ವಧ್ಯೋಽಸ್ಯ ಪುಮಾಽಲ್ಲೋಕೇ ತ್ವಯಾ ಚೋಕ್ತೋಽಯಮೀದೃಶಂ।।
“ಗಾಂಡೀವವನ್ನು ನಿನಗಿಂತಲೂ ಹೆಚ್ಚಿನವನಿಗೆ ಕೊಟ್ಟುಬಿಡು!” ಎಂದು ಹೇಳಿದ ಲೋಕದ ಯಾವ ಪುರುಷನೂ ಇವನಿಗೆ ವಧ್ಯನು. ಅಂತಹ ಮಾತನ್ನು ನೀನೇ ಆಡಿದೆ!
08049109a ಅತಃ ಸತ್ಯಾಂ ಪ್ರತಿಜ್ಞಾಂ ತಾಂ ಪಾರ್ಥೇನ ಪರಿರಕ್ಷತಾ।
08049109c ಮಚ್ಚಂದಾದವಮಾನೋಽಯಂ ಕೃತಸ್ತವ ಮಹೀಪತೇ।
08049109e ಗುರೂಣಾಮವಮಾನೋ ಹಿ ವಧ ಇತ್ಯಭಿಧೀಯತೇ।।
ಮಹೀಪತೇ! ಅವನ ಪ್ರತಿಜ್ಞೆಯನ್ನು ಸತ್ಯವಾಗಿಸಲು ಮತ್ತು ನಿನ್ನನ್ನು ಪಾರ್ಥನಿಂದ ರಕ್ಷಿಸಲು ನಾನು ಹೇಳಿಕೊಟ್ಟಂತೆ ಅವನು ನಿನ್ನನ್ನು ಅಪಮಾನಿಸಿದ್ದಾನೆ. ಏಕೆಂದರೆ ಹಿರಿಯರ ಅಪಮಾನವೇ ಅವರ ವಧೆಯೆಂದು ಹೇಳುತ್ತಾರೆ.
08049110a ತಸ್ಮಾತ್ತ್ವಂ ವೈ ಮಹಾಬಾಹೋ ಮಮ ಪಾರ್ಥಸ್ಯ ಚೋಭಯೋಃ।
08049110c ವ್ಯತಿಕ್ರಮಮಿಮಂ ರಾಜನ್ಸಂಕ್ಷಮಸ್ವಾರ್ಜುನಂ ಪ್ರತಿ।।
ಆದುದರಿಂದ ಮಹಾಬಾಹೋ! ರಾಜನ್! ಪಾರ್ಥ ಮತ್ತು ನಾನು ಇಬ್ಬರೂ ಮಾಡಿದ ಈ ಅಪರಾಧವನ್ನು ಕ್ಷಮಿಸು!
08049111a ಶರಣಂ ತ್ವಾಂ ಮಹಾರಾಜ ಪ್ರಪನ್ನೌ ಸ್ವ ಉಭಾವಪಿ।
08049111c ಕ್ಷಂತುಮರ್ಹಸಿ ಮೇ ರಾಜನ್ಪ್ರಣತಸ್ಯಾಭಿಯಾಚತಃ।।
ಮಹಾರಾಜ! ನಾವಿಬ್ಬರೂ ನಿನಗೆ ಶರಣಾಗತರಾಗಿದ್ದೇವೆ! ರಾಜನ್! ಪ್ರೀತಿಯನ್ನು ಯಾಚಿಸುವ ನಮ್ಮನ್ನು ನೀನು ಕ್ಷಮಿಸಬೇಕು!
08049112a ರಾಧೇಯಸ್ಯಾದ್ಯ ಪಾಪಸ್ಯ ಭೂಮಿಃ ಪಾಸ್ಯತಿ ಶೋಣಿತಂ।
08049112c ಸತ್ಯಂ ತೇ ಪ್ರತಿಜಾನಾಮಿ ಹತಂ ವಿದ್ಧ್ಯದ್ಯ ಸೂತಜಂ।
08049112e ಯಸ್ಯೇಚ್ಚಸಿ ವಧಂ ತಸ್ಯ ಗತಮೇವಾದ್ಯ ಜೀವಿತಂ।।
ಇಂದು ಭೂಮಿಯು ಪಾಪಿ ರಾಧೇಯನ ರಕ್ತವನ್ನು ಕುಡಿಯುತ್ತದೆ! ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ಇಂದು ಸೂತಜನು ಹತನಾದನೆಂದೇ ತಿಳಿ! ಯಾರವಧೆಯನ್ನು ನೀನು ಇಚ್ಛಿಸುತ್ತಿರುವೆಯೋ ಅವನ ಜೀವವು ಇಂದು ಹೋದಂತೆಯೇ!”
08049113a ಇತಿ ಕೃಷ್ಣವಚಃ ಶ್ರುತ್ವಾ ಧರ್ಮರಾಜೋ ಯುಧಿಷ್ಠಿರಃ।
08049113c ಸಸಂಭ್ರಮಂ ಹೃಷೀಕೇಶಮುತ್ಥಾಪ್ಯ ಪ್ರಣತಂ ತದಾ।
08049113e ಕೃತಾಂಜಲಿಮಿದಂ ವಾಕ್ಯಮುವಾಚಾನಂತರಂ ವಚಃ।।
ಹೀಗೆ ಹೇಳಿದ ಕೃಷ್ಣನನ್ನು ಕೇಳಿ ಧರ್ಮರಾಜ ಯುಧಿಷ್ಠಿರನು ಸಂಭ್ರಮದಿಂದ ನಮಸ್ಕರಿಸುತ್ತಿದ್ದ ಹೃಷೀಕೇಶನನ್ನು ಎಬ್ಬಿಸಿ ಅನಂತರ ಕೈಗಳನ್ನು ಮುಗಿದು ಈ ಮಾತನ್ನಾಡಿದನು:
08049114a ಏವಮೇತದ್ಯಥಾತ್ಥ ತ್ವಂ ಅಸ್ತ್ಯೇಷೋಽತಿಕ್ರಮೋ ಮಮ।
08049114c ಅನುನೀತೋಽಸ್ಮಿ ಗೋವಿಂದ ತಾರಿತಶ್ಚಾದ್ಯ ಮಾಧವ।
08049114e ಮೋಕ್ಷಿತಾ ವ್ಯಸನಾದ್ಘೋರಾದ್ವಯಮದ್ಯ ತ್ವಯಾಚ್ಯುತ।।
“ಗೋವಿಂದ! ಮಾಧವ! ನೀನು ಹೇಳಿದುದು ಸರಿ! ನಾನೇ ಎಡವಿದೆನು! ನಾನು ಸಮಾಧಾನಗೊಂಡಿದ್ದೇನೆ. ಇಂದು ನನ್ನನ್ನು ಉದ್ಧರಿಸಿದೆ! ಅಚ್ಯುತ! ನಮ್ಮೆಲ್ಲರನ್ನೂ ಇಂದು ನೀನು ಈ ಘೋರ ವ್ಯಸನದಿಂದ ಬಿಡುಗಡೆಮಾಡಿದೆ!
08049115a ಭವಂತಂ ನಾಥಮಾಸಾದ್ಯ ಆವಾಂ ವ್ಯಸನಸಾಗರಾತ್।
08049115c ಘೋರಾದದ್ಯ ಸಮುತ್ತೀರ್ಣಾವುಭಾವಜ್ಞಾನಮೋಹಿತೌ।।
ಅಜ್ಞಾನಮೋಹಿತರಾದ ನಾವಿಬ್ಬರೂ ಇಂದು ನಿನ್ನನ್ನು ನಾಥನನ್ನಾಗಿ ಪಡೆದು ಘೋರ ವ್ಯಸನಸಾಗರದಿಂದ ಸಮುತ್ತೀರ್ಣರಾಗಿದ್ದೇವೆ!
08049116a ತ್ವದ್ಬುದ್ಧಿಪ್ಲವಮಾಸಾದ್ಯ ದುಃಖಶೋಕಾರ್ಣವಾದ್ವಯಂ।
08049116c ಸಮುತ್ತೀರ್ಣಾಃ ಸಹಾಮಾತ್ಯಾಃ ಸನಾಥಾಃ ಸ್ಮ ತ್ವಯಾಚ್ಯುತ।।
ಅಚ್ಯುತ! ನಿನ್ನ ಬುದ್ಧಿಯನ್ನೇ ನಾವೆಯನ್ನಾಗಿಸಿಕೊಂಡು ನಾವಿಬ್ಬರೂ ಅಮಾತ್ಯರೊಂದಿಗೆ ಸನಾಥರಾಗಿ ದುಃಖಶೋಕದ ಈ ಮಹಾಸಾಗರದಿಂದ ಮೇಲೆದ್ದಿದ್ದೇವೆ!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಯುಧಿಷ್ಠಿರಸಮಾಶ್ವಾಸನೇ ಏಕೋನಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಯುಧಿಷ್ಠಿರಸಮಾಶ್ವಾಸನ ಎನ್ನುವ ನಲ್ವತ್ತೊಂಭತ್ತನೇ ಅಧ್ಯಾಯವು.