048 ಯುಧಿಷ್ಠಿರಕ್ರೋಧವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ಕರ್ಣವಧ ಪರ್ವ

ಅಧ್ಯಾಯ 48

ಸಾರ

ಕರ್ಣನು ಕುಶಲನಾಗಿರುವನೆಂದು ಕೇಳಿ ಕ್ರುದ್ಧನಾದ ಯುಧಿಷ್ಠಿರನು “ದ್ವೈತವನದಲ್ಲಿಯೇ ನೀನು ಕರ್ಣನೊಡನೆ ಯುದ್ಧಮಾಡಲು ಸಮರ್ಥನಿಲ್ಲ! ಎಂದು ಹೇಳಿದ್ದರೆ ಈ ಯುದ್ಧಕ್ಕೇ ನಾನು ನಿಶ್ಚಯಿಸುತ್ತಿರಲಿಲ್ಲ!” ಎಂದು ಮೊದಲಾಗಿ ಅರ್ಜುನನನ್ನು ನಿಂದಿಸಿ ಅವನ ಗಾಂಡೀವವನ್ನು ಅಪಮಾನಿಸಿದುದು (1-15).

08048001 ಸಂಜಯ ಉವಾಚ।
08048001a ಶ್ರುತ್ವಾ ಕರ್ಣಂ ಕಲ್ಯಮುದಾರವೀರ್ಯಂ ಕ್ರುದ್ಧಃ ಪಾರ್ಥಃ ಫಲ್ಗುನಸ್ಯಾಮಿತೌಜಾಃ।
08048001c ಧನಂಜಯಂ ವಾಕ್ಯಮುವಾಚ ಚೇದಂ ಯುಧಿಷ್ಠಿರಃ ಕರ್ಣಶರಾಭಿತಪ್ತಃ।।

ಸಂಜಯನು ಹೇಳಿದನು: “ಉದಾರವೀರ್ಯ ಕರ್ಣನು ಕುಶಲನಾಗಿರುವನೆಂದು ಕೇಳಿ ಅಮಿತೌಜಸ ಪಾರ್ಥನು ಫಲ್ಗುನನ ಮೇಲೆ ಕ್ರುದ್ಧನಾದನು. ಕರ್ಣನ ಶರಗಳಿಂದ ಅಭಿತಪ್ತನಾಗಿದ್ದ ಯುಧಿಷ್ಠಿರನು ಧನಂಜಯನಿಗೆ ಈ ಮಾತುಗಳನ್ನಾಡಿದನು:

08048002a ಇದಂ ಯದಿ ದ್ವೈತವನೇ ಹ್ಯವಕ್ಷ್ಯಃ ಕರ್ಣಂ ಯೋದ್ಧುಂ ನ ಪ್ರಸಹೇ ನೃಪೇತಿ।
08048002c ವಯಂ ತದಾ ಪ್ರಾಪ್ತಕಾಲಾನಿ ಸರ್ವೇ ವೃತ್ತಾನ್ಯುಪೈಷ್ಯಾಮ ತದೈವ ಪಾರ್ಥ।।

“ಪಾರ್ಥ! “ನೃಪನೇ! ಕರ್ಣನೊಡನೆ ಯುದ್ಧಮಾಡಲು ನಾನು ಸಮರ್ಥನಿಲ್ಲ!” ಎಂದು ನೀನು ದ್ವೈತವನದಲ್ಲಿಯೇ ಹೇಳಿದ್ದಿದ್ದರೆ ಆಗ ನಾವು ಸಮಯೋಚಿತವಾದುದೇನೆಂದು ನಿಶ್ಚಯಿಸಿ ಅದರಂತೆಯೇ ನಡೆದುಕೊಳ್ಳುತ್ತಿದ್ದೆವು!

08048003a ಮಯಿ ಪ್ರತಿಶ್ರುತ್ಯ ವಧಂ ಹಿ ತಸ್ಯ ಬಲಸ್ಯ ಚಾಪ್ತಸ್ಯ ತಥೈವ ವೀರ।
08048003c ಆನೀಯ ನಃ ಶತ್ರುಮಧ್ಯಂ ಸ ಕಸ್ಮಾತ್ ಸಮುತ್ಕ್ಷಿಪ್ಯ ಸ್ಥಂಡಿಲೇ ಪ್ರತ್ಯಪಿಂಷ್ಠಾಃ।।

ವೀರ! ಅವನ ಬಲವನ್ನೂ ಆಪ್ತರನ್ನೂ ವಧಿಸುತ್ತೇನೆಂದು ನನಗೆ ಹೇಳಿ ಈಗ ನಮ್ಮನ್ನು ಶತ್ರುಗಳ ಮಧ್ಯದಲ್ಲಿ ತಂದು ಕಠಿಣವಾದ ರಣಾಂಗಣದಲ್ಲಿ ಉರುಳಿಸಿ ಸಮ್ಮರ್ದಿತರಾಗುವಂತೆ ಏಕೆ ಮಾಡಿದೆ?

08048004a ಅನ್ವಾಶಿಷ್ಮ ವಯಮರ್ಜುನ ತ್ವಯಿ ಯಿಯಾಸವೋ ಬಹು ಕಲ್ಯಾಣಮಿಷ್ಟಂ।
08048004c ತನ್ನಃ ಸರ್ವಂ ವಿಫಲಂ ರಾಜಪುತ್ರ ಫಲಾರ್ಥಿನಾಂ ನಿಚುಲ ಇವಾತಿಪುಷ್ಪಃ।।

ಅರ್ಜುನ! ಕಲ್ಯಾಣಕರ ಅನೇಕ ಇಷ್ಟಗಳನ್ನು ಪೂರೈಸುವೆಯೆಂದು ನಾವು ನಿನ್ನಮೇಲೆ ಬಹಳಷ್ಟು ಆಸೆಗಳನ್ನಿಟ್ಟುಕೊಂಡು ಬಂದಿದ್ದೆವು. ರಾಜಪುತ್ರ! ಆದರೆ ಫಲಾರ್ಥಿಗಳಿಗೆ ವೃಕ್ಷವು ಕೇವಲ ಪುಷ್ಪಗಳನ್ನಿತ್ತಂತೆ ಅವೆಲ್ಲವೂ ನಿಷ್ಫಲವಾಗಿಹೋಯಿತು!

08048005a ಪ್ರಚ್ಛಾದಿತಂ ಬಡಿಶಮಿವಾಮಿಷೇಣ ಪ್ರಚ್ಛಾದಿತೋ ಗವಯ ಇವಾಪವಾಚಾ।
08048005c ಅನರ್ಥಕಂ ಮೇ ದರ್ಶಿತವಾನಸಿ ತ್ವಂ ರಾಜ್ಯಾರ್ಥಿನೋ ರಾಜ್ಯರೂಪಂ ವಿನಾಶಂ।।

ಮೀನನ್ನು ಹಿಡಿಯುವ ಗಾಳವು ಮಾಂಸದ ತುಂಡಿನಿಂದ ಆಚ್ಛಾದಿತವಾಗಿರುವಂತೆ, ಘೋರವಿಷವು ಅನ್ನದಿಂದ ಮುಚ್ಚಲ್ಪಟ್ಟಿರುವಂತೆ, ರಾಜ್ಯಾರ್ಥಿಯಾದ ನನಗೆ ರಾಜ್ಯರೂಪದ ಅನರ್ಥಕ ವಿನಾಶವನ್ನು ನೀನು ತೋರಿಸಿಕೊಟ್ಟಿರುವೆ!

08048006a ಯತ್ತತ್ಪೃಥಾಂ ವಾಗುವಾಚಾಂತರಿಕ್ಷೇ ಸಪ್ತಾಹಜಾತೇ ತ್ವಯಿ ಮಂದಬುದ್ಧೌ।
08048006c ಜಾತಃ ಪುತ್ರೋ ವಾಸವವಿಕ್ರಮೋಽಯಂ ಸರ್ವಾಂ ಶೂರಾಂ ಶಾತ್ರವಾಂ ಜೇಷ್ಯತೀತಿ।।

ಮಂದಬುದ್ಧಿಯೇ! ನೀನು ಹುಟ್ಟಿದ ಏಳನೆಯ ದಿನದಂದು ಅಂತರಿಕ್ಷದ ವಾಣಿಯು ಪೃಥೆಗೆ ಇದನ್ನು ಹೇಳಿತ್ತಂತೆ: “ಹುಟ್ಟಿದ ಈ ಮಗನು ವಾಸವನಂತೆ ವಿಕ್ರಮಿಯಾಗುತ್ತಾನೆ. ಎಲ್ಲ ಶೂರರನ್ನೂ ಶತ್ರುಗಳನ್ನೂ ಜಯಿಸುತ್ತಾನೆ!

08048007a ಅಯಂ ಜೇತಾ ಖಾಂಡವೇ ದೇವಸಂಘಾನ್ ಸರ್ವಾಣಿ ಭೂತಾನ್ಯಪಿ ಚೋತ್ತಮೌಜಾಃ।
08048007c ಅಯಂ ಜೇತಾ ಮದ್ರಕಲಿಂಗಕೇಕಯಾನ್ ಅಯಂ ಕುರೂನ್ ಹಂತಿ ಚ ರಾಜಮಧ್ಯೇ।।

ಇವನು ಖಾಂಡವದಲ್ಲಿ ದೇವಸಂಘಗಳನ್ನೂ ಉತ್ತಮೌಜಸ ಎಲ್ಲ ಭೂತಗಳನ್ನೂ ಜಯಿಸುತ್ತಾನೆ! ಇವನು ರಾಜಮಧ್ಯದಲ್ಲಿ ಮದ್ರ-ಕಲಿಂಗ-ಕೇಕಯರನ್ನೂ ಕುರುಗಳನ್ನೂ ಸಂಹರಿಸುತ್ತಾನೆ!

08048008a ಅಸ್ಮಾತ್ಪರೋ ನ ಭವಿತಾ ಧನುರ್ಧರೋ ನ ವೈ ಭೂತಃ ಕಶ್ಚನ ಜಾತು ಜೇತಾ।
08048008c ಇಚ್ಚನ್ನಾರ್ಯಃ ಸರ್ವಭೂತಾನಿ ಕುರ್ಯಾದ್ ವಶೇ ವಶೀ ಸರ್ವಸಮಾಪ್ತವಿದ್ಯಃ।।

ಇವನಿಗಿಂತ ಹೆಚ್ಚಿನ ಧನುರ್ಧರನು ಯಾರೂ ಮುಂದೆ ಇರುವುದಿಲ್ಲ! ಹಿಂದೆ ಇರಲಿಲ್ಲ! ಹುಟ್ಟಿದ ಯಾರೂ ಇವನನ್ನು ಜಯಿಸಲಾರರು! ಸರ್ವವಿದ್ಯೆಗಳನ್ನೂ ಸಮಾಪ್ತಿಗೊಳಿಸಿದ ಈ ಆರ್ಯನು ಬಯಸಿದರೆ ಸರ್ವಭೂತಗಳನ್ನೂ ತನ್ನ ವಶದಲ್ಲಿರಿಸಿಕೊಳ್ಳಬಹುದು!

08048009a ಕಾಂತ್ಯಾ ಶಶಾಂಕಸ್ಯ ಜವೇನ ವಾಯೋಃ ಸ್ಥೈರ್ಯೇಣ ಮೇರೋಃ ಕ್ಷಮಯಾ ಪೃಥಿವ್ಯಾಃ।
08048009c ಸೂರ್ಯಸ್ಯ ಭಾಸಾ ಧನದಸ್ಯ ಲಕ್ಷ್ಮ್ಯಾ ಶೌರ್ಯೇಣ ಶಕ್ರಸ್ಯ ಬಲೇನ ವಿಷ್ಣೋಃ।।

ಇವನು ಕಾಂತಿಯಲ್ಲಿ ಶಶಾಂಕನಂತೆ, ವೇಗದಲ್ಲಿ ವಾಯುವಿನಂತೆ, ಸ್ಥೈರ್ಯದಲ್ಲಿ ಮೇರುವಿನಂತೆ, ಕ್ಷಮೆಯಲ್ಲಿ ಪೃಥ್ವಿಯಂತೆ, ಪ್ರಕಾಶದಲ್ಲಿ ಸೂರ್ಯನಂತೆ, ಸಂಪತ್ತಿನಲ್ಲಿ ಕುಬೇರನಂತೆ, ಶೌರ್ಯದಲ್ಲಿ ಶಕ್ರನಂತೆ ಮತ್ತು ಬಲದಲ್ಲಿ ವಿಷ್ಣುವಿನಂತೆ.

08048010a ತುಲ್ಯೋ ಮಹಾತ್ಮಾ ತವ ಕುಂತಿ ಪುತ್ರೋ ಜಾತೋಽದಿತೇರ್ವಿಷ್ಣುರಿವಾರಿಹಂತಾ।
08048010c ಸ್ವೇಷಾಂ ಜಯಾಯ ದ್ವಿಷತಾಂ ವಧಾಯ ಖ್ಯಾತೋಽಮಿತೌಜಾಃ ಕುಲತಂತುಕರ್ತಾ।।

ಕುಂತೀ! ನಿನ್ನ ಈ ಮಹಾತ್ಮ ಮಗನು ಅದಿತಿಯಲ್ಲಿ ಹುಟ್ಟಿದ ಅರಿಹಂತ ವಿಷ್ಣುವಿನ ಸಮನಾಗಿದ್ದಾನೆ! ತನ್ನವರಿಗೆ ಜಯವನ್ನು ತರಲು ಮತ್ತು ಶತ್ರುಗಳನ್ನು ವಧಿಸಲು ಇವನು ಹುಟ್ಟಿದ್ದಾನೆ. ಅಮಿತೌಜಸನೆಂದು ವಿಖ್ಯಾತನಾಗುತ್ತಾನೆ. ಕುಲವನ್ನು ಉದ್ಧರಿಸುತ್ತಾನೆ!”

08048011a ಇತ್ಯಂತರಿಕ್ಷೇ ಶತಶೃಂಗಮೂರ್ಧ್ನಿ ತಪಸ್ವಿನಾಂ ಶೃಣ್ವತಾಂ ವಾಗುವಾಚ।
08048011c ಏವಂವಿಧಂ ತ್ವಾಂ ತಚ್ಚ ನಾಭೂತ್ತವಾದ್ಯ ದೇವಾ ಹಿ ನೂನಮನೃತಂ ವದಂತಿ।।

ಹೀಗೆ ಶತಶೃಂಗದ ಶಿಖರದಲ್ಲಿರುವ ತಪಸ್ವಿಗಳಿಗೆ ಕೇಳುವಂತೆ ಅಂತರಿಕ್ಷದ ವಾಣಿಯು ಹೇಳಿತ್ತು. ಆದರೆ ಅದು ಹೇಳಿದಂತೆ ನೀನು ನಡೆಸಿಕೊಡಲಿಲ್ಲ! ದೇವತೆಗಳೂ ನಿಶ್ಚಿತವಾಗಿ ಸುಳ್ಳುಹೇಳಿರಬಹುದು!

08048012a ತಥಾಪರೇಷಾಂ ಋಷಿಸತ್ತಮಾನಾಂ ಶ್ರುತ್ವಾ ಗಿರಂ ಪೂಜಯತಾಂ ಸದೈವ।
08048012c ನ ಸನ್ನತಿಂ ಪ್ರೈಮಿ ಸುಯೋಧನಸ್ಯ ನ ತ್ವಾ ಜಾನಾಮ್ಯಾಧಿರಥೇರ್ಭಯಾರ್ತಂ।।

ಈ ಮಾತುಗಳನ್ನು ಕೇಳಿ ಇತರ ಋಷಿಸತ್ತಮರೂ ಸದೈವ ನಿನ್ನನ್ನು ಗೌರವಿಸುತ್ತಿದ್ದರು. ಆದುದರಿಂದ ನಾನು ಸುಯೋಧನನೊಡನೆ ಪ್ರೇಮದಿಂದ ಸಂಧಿಮಾಡಿಕೊಳ್ಳಲಿಲ್ಲ! ನೀನು ಆಧಿರಥನಿಗೆ ಹೆದರುತ್ತೀಯೆಂದು ನನಗೆ ತಿಳಿದಿರಲಿಲ್ಲ!

08048013a ತ್ವಷ್ಟ್ರಾ ಕೃತಂ ವಾಹಮಕೂಜನಾಕ್ಷಂ ಶುಭಂ ಸಮಾಸ್ಥಾಯ ಕಪಿಧ್ವಜಂ ತ್ವಂ।
08048013c ಖಡ್ಗಂ ಗೃಹೀತ್ವಾ ಹೇಮಚಿತ್ರಂ ಸಮಿದ್ಧಂ ಧನುಶ್ಚೇದಂ ಗಾಂಡಿವಂ ತಾಲಮಾತ್ರಂ।
08048013e ಸ ಕೇಶವೇನೋಃಯಮಾನಃ ಕಥಂ ನು ಕರ್ಣಾದ್ಭೀತೋ ವ್ಯಪಯಾತೋಽಸಿ ಪಾರ್ಥ।।

ತ್ವಷ್ಟನಿಂದ ನಿನ್ನ ರಥವು ನಿರ್ಮಿಸಲ್ಪಟ್ಟಿದೆ ಮತ್ತು ಅದರ ಚಕ್ರಗಳು ಸ್ವಲ್ಪವೂ ಶಬ್ಧಮಾಡುವುದಿಲ್ಲ! ನಿನ್ನ ಧ್ವಜದಲ್ಲಿ ಶುಭ ಕಪಿಯು ನೆಲೆಸಿದ್ದಾನೆ! ಹೇಮಚಿತ್ರಗಳಿರುವ ಖಡ್ಗವನ್ನೂ ನಾಲ್ಕು ಮೊಳ ಉದ್ದದ ಗಾಂಡೀವಧನುಸ್ಸನ್ನೂ ನೀನು ಹಿಡಿದು ಸನ್ನದ್ಧನಾಗಿರುವೆ! ಈ ಕೇಶವನೇ ನಿನ್ನ ಸಾರಥಿಯಾಗಿರುವಾಗ ಪಾರ್ಥ! ನೀನೇಕೆ ಕರ್ಣನಿಗೆ ಹೆದರಿ ಹೊರಟು ಬಂದೆ?

08048014a ಧನುಶ್ಚೈತತ್ಕೇಶವಾಯ ಪ್ರದಾಯ ಯಂತಾಭವಿಷ್ಯಸ್ತ್ವಂ ರಣೇ ಚೇದ್ದುರಾತ್ಮನ್।
08048014c ತತೋಽಹನಿಷ್ಯತ್ಕೇಶವಃ ಕರ್ಣಮುಗ್ರಂ ಮರುತ್ಪತಿರ್ವೃತ್ರಮಿವಾತ್ತವಜ್ರಃ।।

ದುರಾತ್ಮನ್! ಈ ಧನುಸ್ಸನ್ನು ಕೇಶವನಿಗೆ ಕೊಟ್ಟುಬಿಡು! ರಣದಲ್ಲಿ ನೀನು ಅವನ ಸಾರಥಿಯಾಗು! ಆಗ ಕೇಶವನು ಇಂದ್ರನು ವಜ್ರಾಯುಧವನ್ನು ಹಿಡಿದು ವೃತ್ರನನ್ನು ಸಂಹರಿಸಿದಂತೆ ಉಗ್ರನಾದ ಕರ್ಣನನ್ನು ಸಂಹರಿಸುತ್ತಾನೆ!

08048015a ಮಾಸೇಽಪತಿಷ್ಯಃ ಪಂಚಮೇ ತ್ವಂ ಪ್ರಕೃಚ್ಚ್ರೇ ನ ವಾ ಗರ್ಭೋಽಪ್ಯಭವಿಷ್ಯಃ ಪೃಥಾಯಾಃ।
08048015c ತತ್ತೇ ಶ್ರಮೋ ರಾಜಪುತ್ರಾಭವಿಷ್ಯನ್ ನ ಸಂಗ್ರಾಮಾದಪಯಾತುಂ ದುರಾತ್ಮನ್।।

ನೀನು ಗರ್ಭದ ಐದನೆಯ ತಿಂಗಳಿನಲ್ಲಿಯೇ ಗರ್ಭಪಾತವಾಗಿ ಹೋಗಬೇಕಾಗಿದ್ದಿತು! ಅಥವಾ ಪೃಥೆಯ ಗರ್ಭದಲ್ಲಿಯೇ ಇರಬಾರದಾಗಿತ್ತು! ದುರಾತ್ಮನ್! ರಾಜಪುತ್ರ! ಆಗ ನೀನು ಸಂಗ್ರಾಮದಿಂದ ಓಡಿಬರುವ ಶ್ರಮವನ್ನು ಪಡಬೇಕಾಗುತ್ತಿರಲಿಲ್ಲ!””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಯುಧಿಷ್ಠಿರಕ್ರೋಧವಾಕ್ಯೇ ಅಷ್ಠಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಯುಧಿಷ್ಠಿರಕ್ರೋಧವಾಕ್ಯ ಎನ್ನುವ ನಲ್ವತ್ತೆಂಟನೇ ಅಧ್ಯಾಯವು.