ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 47
ಸಾರ
ಅರ್ಜುನನು ಯುಧಿಷ್ಠಿರನಿಗೆ ಉತ್ತರಿಸುತ್ತಾ ಅಶ್ವತ್ಥಾಮನೊಡನೆ ಯುದ್ಧಮಾಡುತ್ತಿದ್ದ ಕಾರಣ ಅವನಿಗೆ ಕರ್ಣನೊಡನೆ ಯುದ್ಧಮಾಡುವ ಅವಕಾಶ ದೊರೆಯಲಿಲ್ಲವೆಂದೂ, ಯುಧಿಷ್ಠಿರನನ್ನು ನೋಡುವ ಆಸೆಯಿಂದ ತ್ವರೆಮಾಡಿ ಶಿಬಿರಕ್ಕೆ ಬಂದನೆಂದೂ, ಇಂದು ಅವನು ಕರ್ಣನನ್ನು ವಧಿಸುತ್ತಾನೆಂದೂ ಹೇಳಿದುದು (1-14).
08047001 ಸಂಜಯ ಉವಾಚ।
08047001a ತದ್ಧರ್ಮಶೀಲಸ್ಯ ವಚೋ ನಿಶಮ್ಯ ರಾಜ್ಞಃ ಕ್ರುದ್ಧಸ್ಯಾಧಿರಥೌ ಮಹಾತ್ಮಾ।
08047001c ಉವಾಚ ದುರ್ಧರ್ಷಮದೀನಸತ್ತ್ವಂ ಯುಧಿಷ್ಠಿರಂ ಜಿಷ್ಣುರನಂತವೀರ್ಯಃ।।
ಸಂಜಯನು ಹೇಳಿದನು: “ಆಧಿರಥಿಯಮೇಲಿನ ಕೋಪದಿಂದ ರಾಜಾ ಮಹಾತ್ಮ ಧರ್ಮಶೀಲನ ಆ ಮಾತನ್ನು ಕೇಳಿದ ಅನಂತವೀರ್ಯ ಜಿಷ್ಣುವು ಅದೀನಸತ್ತ್ವನಾದ ಯುಧಿಷ್ಠಿರನಿಗೆ ಹೇಳಿದನು:
08047002a ಸಂಶಪ್ತಕೈರ್ಯುಧ್ಯಮಾನಸ್ಯ ಮೇಽದ್ಯ ಸೇನಾಗ್ರಯಾಯೀ ಕುರುಸೈನ್ಯಸ್ಯ ರಾಜನ್।
08047002c ಆಶೀವಿಷಾಭಾನ್ಖಗಮಾನ್ಪ್ರಮುಂಚನ್ ದ್ರೌಣಿಃ ಪುರಸ್ತಾತ್ಸಹಸಾ ವ್ಯತಿಷ್ಠತ್।।
“ರಾಜನ್! ಇಂದು ನಾನು ಸಂಶಪ್ತಕರೊಂದಿಗೆ ಯುದ್ಧಮಾಡುತ್ತಿರಲು ಕುರುಸೇನೆಯ ಸೇನಾಗ್ರಯಾಯೀ ದ್ರೌಣಿಯು ಒಮ್ಮೆಲೇ ಹಾವಿನ ವಿಷಗಳಂತೆ ಹಾರಾಡುತ್ತಿದ್ದ ಬಾಣಗಳನ್ನು ಪ್ರಯೋಗಿಸುತ್ತಾ ನನ್ನ ಎದಿರು ಬಂದನು.
08047003a ದೃಷ್ಟ್ವಾ ರಥಂ ಮೇಘನಿಭಂ ಮಮೇಮಂ ಅಂಬಷ್ಠಸೇನಾ ಮರಣೇ ವ್ಯತಿಷ್ಠತ್।
08047003c ತೇಷಾಮಹಂ ಪಂಚ ಶತಾನಿ ಹತ್ವಾ ತತೋ ದ್ರೌಣಿಮಗಮಂ ಪಾರ್ಥಿವಾಗ್ರ್ಯ।।
ಪಾರ್ಥಿವಾಗ್ರ್ಯ! ನನ್ನ ಮೇಘಸನ್ನಿಭ ರಥವನ್ನು ನೋಡಿ ಮರಣವನ್ನೇ ಕಾಯುತ್ತಿದ್ದ ಅಂಬಷ್ಠಸೇನೆಯು ನನ್ನನ್ನು ಆಕ್ರಮಣಿಸಲು ನಾನು ಆ ಐನೂರು ಯೋಧರನ್ನು ಸಂಹರಿಸಿ ದ್ರೌಣಿಯೊಡನೆ ಯುದ್ಧಮಾಡಲು ಹೋದೆನು.
08047004a ತತೋಽಪರಾನ್ಬಾಣಸಂಘಾನನೇಕಾನ್ ಆಕರ್ಣಪೂರ್ಣಾಯತವಿಪ್ರಮುಕ್ತಾನ್।
08047004c ಸಸರ್ಜ ಶಿಕ್ಷಾಸ್ತ್ರಬಲಪ್ರಯತ್ನೈಸ್ ತಥಾ ಯಥಾ ಪ್ರಾವೃಷಿ ಕಾಲಮೇಘಃ।।
ಕಾಲಮೇಘವು ಮಳೆಸುರಿಸುವಂತೆ ಅವನು ಶಿಕ್ಷೆ-ಬಲ-ಪ್ರಯತ್ನಗಳಿಂದ ಆಕರ್ಣಪರ್ಯಂತವಾಗಿ ಧನುಸ್ಸನ್ನು ಸೆಳೆದು ಅನೇಕ ಬಾಣಸಂಘಗಳನ್ನು ಸೃಷ್ಟಿಸಿ ನನ್ನ ಮೇಲೆ ಪ್ರಯೋಗಿಸಿದನು.
08047005a ನೈವಾದಧಾನಂ ನ ಚ ಸಂಧಧಾನಂ ಜಾನೀಮಹೇ ಕತರೇಣಾಸ್ಯತೀತಿ।
08047005c ವಾಮೇನ ವಾ ಯದಿ ವಾ ದಕ್ಷಿಣೇನ ಸ ದ್ರೋಣಪುತ್ರಃ ಸಮರೇ ಪರ್ಯವರ್ತತ್।।
ಅವನು ಯಾವಾಗ ಬತ್ತಳಿಕೆಯಿಂದ ಬಾಣಗಳನ್ನು ತೆಗೆದುಕೊಳ್ಳುತ್ತಿದ್ದಾನೆ, ಯಾವಾಗ ಅವುಗಳನ್ನು ಹೂಡುತ್ತಿದ್ದಾನೆ ಎನ್ನುವುದು ನಮಗೆ ತಿಳಿಯುತ್ತಲೇ ಇರಲಿಲ್ಲ. ಮತ್ತು ಅವನು ಎಡಗೈಯಿಂದ ಅಥವಾ ಬಲಗೈಯಿಂದ ಬಾಣಪ್ರಯೋಗ ಮಾಡುತ್ತಿದ್ದಾನೆಯೋ ಎನ್ನುವುದೂ ತಿಳಿಯದಂತೆ ಸಮರದಲ್ಲಿ ಆ ದ್ರೋಣಪುತ್ರನು ವರ್ತಿಸುತ್ತಿದ್ದನು.
08047006a ಅವಿಧ್ಯನ್ಮಾಂ ಪಂಚಭಿರ್ದ್ರೋಣಪುತ್ರಃ ಶಿತೈಃ ಶರೈಃ ಪಂಚಭಿರ್ವಾಸುದೇವಂ।
08047006c ಅಹಂ ತು ತಂ ತ್ರಿಂಶತಾ ವಜ್ರಕಲ್ಪೈಃ ಸಮಾರ್ದಯಂ ನಿಮಿಷಸ್ಯಾಂತರೇಣ।।
ಐದರಿಂದ ನನ್ನನ್ನು ಹೊಡೆದು ದ್ರೋಣಪುತ್ರನು ಐದು ನಿಶಿತ ಶರಗಳಿಂದ ವಾಸುದೇವನನ್ನೂ ಹೊಡೆದನು. ನಾನಾದರೋ ನಿಮಿಷಮಾತ್ರದಲ್ಲಿ ಅವನನ್ನು ಮೂವತ್ತು ವಜ್ರಸದೃಶ ಬಾಣಗಳಿಂದ ಮರ್ದಿಸಿದೆನು.
08047007a ಸ ವಿಕ್ಷರನ್ರುಧಿರಂ ಸರ್ವಗಾತ್ರೈ ರಥಾನೀಕಂ ಸೂತಸೂನೋರ್ವಿವೇಶ।
08047007c ಮಯಾಭಿಭೂತಃ ಸೈನಿಕಾನಾಂ ಪ್ರಬರ್ಹಾನ್ ಅಸಾವಪಶ್ಯನ್ರುಧಿರೇಣ ಪ್ರದಿಗ್ಧಾನ್।।
ದೇಹದಲ್ಲೆಲ್ಲಾ ಗಾಯಗೊಂಡು ರಕ್ತವನ್ನು ಸುರಿಸುತ್ತಾ ಅವನು, ನನ್ನಿಂದ ಗಾಯಗೊಂಡು ರಕ್ತದಲ್ಲಿ ತೋಯ್ದುಹೋಗಿರುವ ಸೈನಿಕರನ್ನು ನೋಡುತ್ತಾ, ಸೂತಪುತ್ರ ಕರ್ಣನ ರಥಸೇನೆಯನ್ನು ಸೇರಿಕೊಂಡನು.
08047008a ತತೋಽಭಿಭೂತಂ ಯುಧಿ ವೀಕ್ಷ್ಯ ಸೈನ್ಯಂ ವಿಧ್ವಸ್ತಯೋಧಂ ದ್ರುತವಾಜಿನಾಗಂ।
08047008c ಪಂಚಾಶತಾ ರಥಮುಖ್ಯೈಃ ಸಮೇತಃ ಕರ್ಣಸ್ತ್ವರನ್ಮಾಮುಪಾಯಾತ್ಪ್ರಮಾಥೀ।।
ಯುದ್ಧದಲ್ಲಿ ಸೈನ್ಯವು ಭಯಗೊಂಡು ವಿಧ್ವಸ್ತವಾಗಿ ಯೋಧರು, ಆನೆ-ಕುದುರೆಗಳು ಪಲಾಯನಮಾಡುತ್ತಿರುವುದನ್ನು ನೋಡಿ ಪ್ರಮಾಥೀ ಕರ್ಣನು ತ್ವರೆಮಾಡಿ ಐದುನೂರು ರಥಪ್ರಮುಖರನ್ನೊಡಗೂಡಿಕೊಂಡು ನನ್ನನ್ನು ಆಕ್ರಮಣಿಸಿದನು.
08047009a ತಾನ್ಸೂದಯಿತ್ವಾಹಮಪಾಸ್ಯ ಕರ್ಣಂ ದ್ರಷ್ಟುಂ ಭವಂತಂ ತ್ವರಯಾಭಿಯಾತಃ।
08047009c ಸರ್ವೇ ಪಾಂಚಾಲಾ ಹ್ಯುದ್ವಿಜಂತೇ ಸ್ಮ ಕರ್ಣಾದ್ ಗಂಧಾದ್ಗಾವಃ ಕೇಸರಿಣೋ ಯಥೈವ।।
ಕರ್ಣನ ಆ ಸೇನೆಯನ್ನು ನಾಶಗೊಳಿಸಿ ನಾನು ನಿನ್ನನ್ನು ನೋಡುವ ಸಲುವಾಗಿ ಅವಸರದಿಂದ ಇಲ್ಲಿಗೆ ಬಂದೆನು. ಸಿಂಹದ ವಾಸನೆಯನ್ನು ಮೂಸಿ ಹಸುಗಳು ಭಯಪಡುವಂತೆ ಕರ್ಣನಿಂದ ಪಾಂಚಾಲರೆಲ್ಲರೂ ಉದ್ವಿಗ್ನರಾಗಿದ್ದರು.
08047010a ಮಹಾಝಷಸ್ಯೇವ ಮುಖಂ ಪ್ರಪನ್ನಾಃ ಪ್ರಭದ್ರಕಾಃ ಕರ್ಣಮಭಿ ದ್ರವಂತಿ।
08047010c ಮೃತ್ಯೋರಾಸ್ಯಂ ವ್ಯಾತ್ತಮಿವಾನ್ವಪದ್ಯನ್ ಪ್ರಭದ್ರಕಾಃ ಕರ್ಣಮಾಸಾದ್ಯ ರಾಜನ್।।
ಮಹಾರೋಷದಿಂದ ಪ್ರಭದ್ರಕರು ಕರ್ಣನನ್ನು ಎದುರಿಸಿ ಯುದ್ಧಮಾಡುತ್ತಿದ್ದಾರೆ. ರಾಜನ್! ಮೃತ್ಯುವಿನ ತೆರೆದ ಬಾಯಿಯೊಳಗೆ ಪ್ರವೇಶಿಸುವಂತೆ ಪ್ರಭದ್ರಕರು ಕರ್ಣನನ್ನು ಎದುರಿಸಿ ಸಂಕಟಕ್ಕೊಳಗಾಗಿದ್ದಾರೆ.
08047011a ಆಯಾಹಿ ಪಶ್ಯಾದ್ಯ ಯುಯುತ್ಸಮಾನಂ ಮಾಂ ಸೂತಪುತ್ರಂ ಚ ವೃತೌ ಜಯಾಯ।
08047011c ಷಟ್ಸಾಹಸ್ರಾ ಭಾರತ ರಾಜಪುತ್ರಾಃ ಸ್ವರ್ಗಾಯ ಲೋಕಾಯ ರಥಾ ನಿಮಗ್ನಾಃ।।
ಭಾರತ! ರಣಾಂಗಣಕ್ಕೆ ಆಗಮಿಸು! ಇಂದು ನಾನು ಸೂತಪುತ್ರನೊಡನೆ ವಿಜಯಿಯಾಗುವಂತೆ ಯುದ್ಧಮಾಡುವುದನ್ನು ನೋಡು! ಆರುಸಾವಿರ ಮಹಾರಥ ರಾಜಪುತ್ರರು ಸ್ವರ್ಗಲೋಕದ ಸಲುವಾಗಿ ರಣದಲ್ಲಿ ಮುಳುಗಿದ್ದಾರೆ!
08047012a ಸಮೇತ್ಯಾಹಂ ಸೂತಪುತ್ರೇಣ ಸಂಖ್ಯೇ ವೃತ್ರೇಣ ವಜ್ರೀವ ನರೇಂದ್ರಮುಖ್ಯ।
08047012c ಯೋತ್ಸ್ಯೇ ಭೃಶಂ ಭಾರತ ಸೂತಪುತ್ರಂ ಅಸ್ಮಿನ್ಸಂಗ್ರಾಮೇ ಯದಿ ವೈ ದೃಶ್ಯತೇಽದ್ಯ।।
ನರೇಂದ್ರಮುಖ್ಯ! ರಣದಲ್ಲಿ ಸೂತಪುತ್ರನನ್ನು, ವಜ್ರಿಯು ವೃತ್ರನನ್ನು ಹೇಗೋ ಹಾಗೆ, ನಾನು ಎದುರಿಸುತ್ತೇನೆ. ಭಾರತ! ಇಂದು ನೀನು ನೋಡಿದರೆ ನಾನು ಈ ಸಂಗ್ರಾಮದಲ್ಲಿ ಸೂತಪುತ್ರನೊಡನೆ ಚೆನ್ನಾಗಿ ಹೋರಾಡುತ್ತೇನೆ.
08047013a ಕರ್ಣಂ ನ ಚೇದದ್ಯ ನಿಹನ್ಮಿ ರಾಜನ್ ಸಬಾಂದವಂ ಯುಧ್ಯಮಾನಂ ಪ್ರಸಹ್ಯ।
08047013c ಪ್ರತಿಶ್ರುತ್ಯಾಕುರ್ವತಾಂ ವೈ ಗತಿರ್ಯಾ ಕಷ್ಟಾಂ ಗಚ್ಚೇಯಂ ತಾಮಹಂ ರಾಜಸಿಂಹ।।
ರಾಜನ್! ರಾಜಸಿಂಹ! ಪ್ರತಿಜ್ಞೆಯಂತೆ ಇಂದು ನಾನು ಯುದ್ಧಮಾಡುತ್ತಿರುವ ಕರ್ಣನನ್ನು ಅವನ ಬಾಂಧವರೊಡನ್ ಸಂಹರಿಸದೇ ಇದ್ದರೆ, ಪ್ರತಿಜ್ಞೆಮಾಡಿದಂತೆ ಮಾಡದೇ ಇರುವವನಿಗೆ ದೊರೆಯುವ ಕಷ್ಟಗಳು ನನಗೆ ದೊರೆಯಲಿ!
08047014a ಆಮಂತ್ರಯೇ ತ್ವಾಂ ಬ್ರೂಹಿ ಜಯಂ ರಣೇ ಮೇ ಪುರಾ ಭೀಮಂ ಧಾರ್ತರಾಷ್ಟ್ರಾ ಗ್ರಸಂತೇ।
08047014c ಸೌತಿಂ ಹನಿಷ್ಯಾಮಿ ನರೇಂದ್ರಸಿಂಹ ಸೈನ್ಯಂ ತಥಾ ಶತ್ರುಗಣಾಂಶ್ಚ ಸರ್ವಾನ್।।
ನರೇಂದ್ರಸಿಂಹ! ಧಾರ್ತರಾಷ್ಟ್ರರು ಭೀಮನನ್ನು ನುಂಗಿಹಾಕುವ ಮೊದಲು ರಣದಲ್ಲಿ ನನಗೆ ಜಯವಾಗಲೆಂದು ಆಶೀರ್ವದಿಸು. ಸೌತಿಯನ್ನು ಮತ್ತು ಹಾಗೆಯೇ ಎಲ್ಲ ಶತ್ರುಗಣಗಳನ್ನೂ ಸಂಹರಿಸುತ್ತೇನೆ!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಅರ್ಜುನವಾಕ್ಯೇ ಸಪ್ತಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಅರ್ಜುನವಾಕ್ಯ ಎನ್ನುವ ನಲ್ವತ್ತೇಳನೇ ಅಧ್ಯಾಯವು.