ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 46
ಸಾರ
ಕೃಷ್ಣಾರ್ಜುನರು ಒಟ್ಟಿಗೇ ಬಂದುದನ್ನು ನೋಡಿ ಕರ್ಣನು ಹತನಾದನೆಂದೇ ಭಾವಿಸಿ ಯುಧಿಷ್ಠಿರನು ಅವರಿಬ್ಬರಿಗೂ ಅಭಿನಂದನಾಪೂರ್ವಕವಾಗಿ ಮಾತನಾಡಿದುದು (1-48).
08046001 ಸಂಜಯ ಉವಾಚ।
08046001a ಮಹಾಸತ್ತ್ವೌ ತು ತೌ ದೃಷ್ಟ್ವಾ ಸಹಿತೌ ಕೇಶವಾರ್ಜುನೌ।
08046001c ಹತಮಾಧಿರಥಿಂ ಮೇನೇ ಸಂಖ್ಯೇ ಗಾಂಡೀವಧನ್ವನಾ।।
08046002a ತಾವಭ್ಯನಂದತ್ಕೌಂತೇಯಃ ಸಾಮ್ನಾ ಪರಮವಲ್ಗುನಾ।
08046002c ಸ್ಮಿತಪೂರ್ವಂ ಅಮಿತ್ರಘ್ನಃ ಪೂಜಯನ್ಭರತರ್ಷಭ।।
ಸಂಜಯನು ಹೇಳಿದನು: “ಭರತರ್ಷಭ! ಆ ಮಹಾಸತ್ತ್ವರಾದ ಕೇಶವ ಅರ್ಜುನರನ್ನು ಒಟ್ಟಿಗೇ ನೋಡಿ ಅಮಿತ್ರಘ್ನ ಕೌಂತೇಯ ಯುಧಿಷ್ಠಿರನು ಗಾಂಡೀವಧನ್ವಿಯಿಂದ ಆಧಿರಥಿಯು ಯುದ್ಧದಲ್ಲಿ ಹತನಾದನೆಂದು ಭಾವಿಸಿ, ಮುಗುಳ್ನಗುತ್ತಾ ಅತ್ಯಂತ ಸಾಂತ್ವನಪೂರ್ವಕ ಮಧುರ ಮಾತುಗಳಿಂದ ಅವರಿಬ್ಬರನ್ನೂ ಅಭಿನಂದಿಸಿದನು.
08046003 ಯುಧಿಷ್ಠಿರ ಉವಾಚ।
08046003a ಸ್ವಾಗತಂ ದೇವಕೀಪುತ್ರ ಸ್ವಾಗತಂ ತೇ ಧನಂಜಯ।
08046003c ಪ್ರಿಯಂ ಮೇ ದರ್ಶನಂ ಬಾಢಂ ಯುವಯೋರಚ್ಯುತಾರ್ಜುನೌ।।
ಯುಧಿಷ್ಠಿರನು ಹೇಳಿದನು: “ಸ್ವಾಗತ ದೇವಕೀಪುತ್ರ! ಧನಂಜಯ! ನಿನಗೆ ಸ್ವಾಗತ! ಯುವಕರಾದ ಅಚ್ಯುತ-ಅರ್ಜುನರನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ.
08046004a ಅಕ್ಷತಾಭ್ಯಾಂ ಅರಿಷ್ಟಾಭ್ಯಾಂ ಕಥಂ ಯುಧ್ಯ ಮಹಾರಥಂ।
08046004c ಆಶೀವಿಷಸಮಂ ಯುದ್ಧೇ ಸರ್ವಶಸ್ತ್ರವಿಶಾರದಂ।।
ಗಾಯಗಳನ್ನು ಹೊಂದದೇ ಕುಶಲವಾಗಿದ್ದುಕೊಂಡೇ ಯುದ್ಧದಲ್ಲಿ ಸರ್ವಶಸ್ತ್ರವಿಶಾರದನಾದ, ಸರ್ಪದ ವಿಷಕ್ಕೆ ಸಮಾನನಾದ ಆ ಮಹಾರಥನೊಡನೆ ಹೇಗೆ ಯುದ್ಧಮಾಡಿದಿರಿ?
08046005a ಅಗ್ರಗಂ ಧಾರ್ತರಾಷ್ಟ್ರಾಣಾಂ ಸರ್ವೇಷಾಂ ಶರ್ಮ ವರ್ಮ ಚ।
08046005c ರಕ್ಷಿತಂ ವೃಷಸೇನೇನ ಸುಷೇಣೇನ ಚ ಧನ್ವಿನಾ।।
08046006a ಅನುಜ್ಞಾತಂ ಮಹಾವೀರ್ಯಂ ರಮೇಣಾಸ್ತ್ರೇಷು ದುರ್ಜಯಂ।
08046006c ತ್ರಾತಾರಂ ಧಾರ್ತರಾಷ್ಟ್ರಾಣಾಂ ಗಂತಾರಂ ವಾಹಿನೀಮುಖೇ।।
08046007a ಹಂತಾರಂ ಅರಿಸೈನ್ಯಾನಾಮಮಿತ್ರಗಣಮರ್ದನಂ।
08046007c ದುರ್ಯೋಧನಹಿತೇ ಯುಕ್ತಮಸ್ಮದ್ಯುದ್ಧಾಯ ಚೋದ್ಯತಂ।।
08046008a ಅಪ್ರಧೃಷ್ಯಂ ಮಹಾಯುದ್ಧೇ ದೇವೈರಪಿ ಸವಾಸವೈಃ।
08046008c ಅನಲಾನಿಲಯೋಸ್ತುಲ್ಯಂ ತೇಜಸಾ ಚ ಬಲೇನ ಚ।।
08046009a ಪಾತಾಲಮಿವ ಗಂಭೀರಂ ಸುಹೃದಾನಂದವರ್ಧನಂ।
08046009c ಅಂತಕಾಭಮಮಿತ್ರಾಣಾಂ ಕರ್ಣಂ ಹತ್ವಾ ಮಹಾಹವೇ।
08046009e ದಿಷ್ಟ್ಯಾ ಯುವಾಮನುಪ್ರಾಪ್ತೌ ಜಿತ್ವಾಸುರಮಿವಾಮರೌ।।
ಧಾರ್ತರಾಷ್ಟ್ರರ ನಾಯಕನಾಗಿದ್ದ, ಎಲ್ಲರ ಸಲಹೆಗಾರ ಮತ್ತು ರಕ್ಷಕನಾಗಿದ್ದ, ಧನ್ವಿಗಳಾದ ವೃಷಸೇನ ಮತ್ತು ಸುಷೇಣರಿಂದ ರಕ್ಷಿಸಲ್ಪಡುತ್ತಿದ್ದ, ಅನುಜ್ಞಾತ, ಮಹಾವೀರ್ಯ, ಅಸ್ತ್ರಗಳಲ್ಲಿ ಪರಿಣಿತ, ದುರ್ಜಯ, ಧಾರ್ತರಾಷ್ಟ್ರರ ತ್ರಾತಾರ, ಅವರ ಸೇನೆಗಳನ್ನು ನಡೆಸುವ, ಅರಿಸೈನ್ಯಗಳನ್ನು ಸಂಹರಿಸುವ, ಅಮಿತ್ರರ ಗಣಗಳನ್ನು ಮರ್ದಿಸುವ, ದುರ್ಯೋಧನನ ಹಿತದಲ್ಲಿಯೇ ನಿರತನಾಗಿರುವ, ನಮ್ಮೊಡನೆ ಯುದ್ಧಮಾಡುವಂತೆ ಪ್ರಚೋದಿಸಿದ, ಮಹಾಯುದ್ಧದಲ್ಲಿ ವಾಸವನೊಡನೆ ದೇವತೆಗಳಿಗೂ ಗೆಲ್ಲಲಸಾಧ್ಯನಾದ, ತೇಜಸ್ಸು ಮತ್ತು ಬಲಗಳಲ್ಲಿ ಅಗ್ನಿ-ವಾಯುವಿನ ಸಮಾನನಾದ, ಪಾತಾಲದಂತೆ ಗಂಭೀರನಾದ, ಸುಹೃದಯರ ಆನಂದವನ್ನು ವರ್ಧಿಸುವ, ಅಮಿತ್ರರರಿಗೆ ಅಂತಕನಂತೆ ತೋರುವ ಕರ್ಣನನ್ನು ಮಹಾಹವದಲ್ಲಿ ಸಂಹರಿಸಿ ನೀವು ಅದೃಷ್ಟವಶಾತ್ ಅಸುರರನ್ನು ಗೆದ್ದ ಅಮರರಂತೆ ಯೌವನವನ್ನು ಗಳಿಸಿರುವಿರಿ!
08046010a ತೇನ ಯುದ್ಧಂ ಅದೀನೇನ ಮಯಾ ಹ್ಯದ್ಯಾಚ್ಯುತಾರ್ಜುನೌ।
08046010c ಕುಪಿತೇನಾಂತಕೇನೇವ ಪ್ರಜಾಃ ಸರ್ವಾ ಜಿಘಾಂಸತಾ।।
ಅಚ್ಯುತಾರ್ಜುನರೇ! ಎಲ್ಲ ಪ್ರಜೆಗಳನ್ನೂ ಕೊಲ್ಲಲು ಬಯಸಿದ ಕುಪಿತ ಅಂತಕನಂತಿರುವ ಅವನೊಡನೆ ನಾನು ಇಂದು ಧೈರ್ಯಗೆಡದೇ ಯುದ್ಧಮಾಡಿದೆನು.
08046011a ತೇನ ಕೇತುಶ್ಚ ಮೇ ಚಿನ್ನೋ ಹತೌ ಚ ಪಾರ್ಷ್ಣಿಸಾರಥೀ।
08046011c ಹತವಾಹಃ ಕೃತಶ್ಚಾಸ್ಮಿ ಯುಯುಧಾನಸ್ಯ ಪಶ್ಯತಃ।।
08046012a ಧೃಷ್ಟದ್ಯುಮ್ನಸ್ಯ ಯಮಯೋರ್ವೀರಸ್ಯ ಚ ಶಿಖಂಡಿನಃ।
08046012c ಪಶ್ಯತಾಂ ದ್ರೌಪದೇಯಾನಾಂ ಪಾಂಚಾಲಾನಾಂ ಚ ಸರ್ವಶಃ।।
ಯುಯುಧಾನ, ಧೃಷ್ಟದ್ಯುಮ್ನ, ಯಮಳರು, ವೀರ ಶಿಖಂಡಿ ಮತ್ತು ಐವರು ದ್ರೌಪದೇಯರು ಮತ್ತು ಪಾಂಚಾಲರು ಎಲ್ಲಕಡೆಗಳಿಂದಲೂ ನೋಡುತ್ತಿರಲು ಅವನು ನನ್ನ ಧ್ವಜವನ್ನು ಕತ್ತರಿಸಿ ಇಬ್ಬರು ಪಾರ್ಷ್ಣಿಸಾರಥಿಗಳನ್ನೂ ಸಂಹರಿಸಿದನು.
08046013a ಏತಾಂ ಜಿತ್ವಾ ಮಹಾವೀರ್ಯಾನ್ಕರ್ಣಃ ಶತ್ರುಗಣಾನ್ಬಹೂನ್।
08046013c ಜಿತವಾನ್ಮಾಂ ಮಹಾಬಾಹೋ ಯತಮಾನಂ ಮಹಾರಣೇ।।
ಮಹಾರಣದಲ್ಲಿ ಪ್ರಯತ್ನಿಸುತ್ತಿದ್ದ ಆ ಮಹಾಬಾಹುವು ಶತ್ರುಗಣಗಳ ಅನೇಕ ಮಹಾವೀರ್ಯರನ್ನು ಗೆದ್ದು ನನ್ನನ್ನೂ ಗೆದ್ದನು.
08046014a ಅನುಸೃತ್ಯ ಚ ಮಾಂ ಯುದ್ಧೇ ಪರುಷಾಣ್ಯುಕ್ತವಾನ್ಬಹು।
08046014c ತತ್ರ ತತ್ರ ಯುಧಾಂ ಶ್ರೇಷ್ಠಃ ಪರಿಭೂಯ ನ ಸಂಶಯಃ।।
ಯುದ್ಧದಲ್ಲಿ ನನ್ನನ್ನು ಅನುಸರಿಸಿ ಬಂದು ನನಗೆ ಕಠೋರವಾದ ಅನೇಕ ಮಾತುಗಳನ್ನು ಕೂಡ ಆಡಿದನು. ಅಲ್ಲಿ ಆ ಯೋಧಶ್ರೇಷ್ಠನು ಹೇಳಿದುದನ್ನು ನಾನಿನ್ನೂ ಮರೆತಿಲ್ಲ. ಅದರಲ್ಲಿ ಸಂಶಯವೇ ಇಲ್ಲ!
08046015a ಭೀಮಸೇನಪ್ರಭಾವಾತ್ತು ಯಜ್ಜೀವಾಮಿ ಧನಂಜಯ।
08046015c ಬಹುನಾತ್ರ ಕಿಮುಕ್ತೇನ ನಾಹಂ ತತ್ಸೋಢುಮುತ್ಸಹೇ।।
ಧನಂಜಯ! ಭೀಮಸೇನನ ಪ್ರಭಾವದಿಂದಾಗಿ ನಾನು ಜೀವಿಸುತ್ತಿದ್ದೇನೆ! ಇದರಲ್ಲಿ ಹೆಚ್ಚು ಹೇಳುವುದಾದರೂ ಏನಿದೆ? ನನಗೆ ಅದನ್ನು ಸಹಿಸಿಕೊಳ್ಳಲು ಖಂಡಿತವಾಗಿಯೂ ಸಾಧ್ಯವಾಗಲಿಲ್ಲ!
08046016a ತ್ರಯೋದಶಾಹಂ ವರ್ಷಾಣಿ ಯಸ್ಮಾದ್ಭೀತೋ ಧನಂಜಯ।
08046016c ನ ಸ್ಮ ನಿದ್ರಾಂ ಲಭೇ ರಾತ್ರೌ ನ ಚಾಹನಿ ಸುಖಂ ಕ್ವ ಚಿತ್।।
ಧನಂಜಯ! ಅವನ ಭೀತಿಯಲ್ಲಿಯೇ ನಾನು ಹದಿಮೂರು ವರ್ಷಗಳನ್ನು ಕಳೆದಿದ್ದೇನೆ. ರಾತ್ರಿ ನನಗೆ ನಿದ್ದೆಯೂ ಬರಲಿಲ್ಲ; ಹಗಲಲ್ಲಿ ಯಾವುದೇ ರೀತಿಯ ಸುಖವೂ ದೊರೆಯಲಿಲ್ಲ!
08046017a ತಸ್ಯ ದ್ವೇಷೇಣ ಸಂಯುಕ್ತಃ ಪರಿದಃಯೇ ಧನಂಜಯ।
08046017c ಆತ್ಮನೋ ಮರಣಂ ಜಾನನ್ವಾಧ್ರೀಣಸ ಇವ ದ್ವಿಪಃ।।
ಧನಂಜಯ! ಅವನ ದ್ವೇಷದಿಂದ ಪರಿತಪಿಸುತ್ತಿದ್ದ ನಾನು ನನ್ನ ಅವಸಾನವು ಸಮೀಪಿಸಿತೆಂದು ತಿಳಿದು ವಾದ್ರೀಣಸವೆಂಬ ಪ್ರಾಣಿಯಂತೆ ಪಲಾಯನಗೈದೆನು!
08046018a ಯಸ್ಯಾಯಮಗಮತ್ಕಾಲಶ್ಚಿಂತಯಾನಸ್ಯ ಮೇ ವಿಭೋ।
08046018c ಕಥಂ ಶಕ್ಯೋ ಮಯಾ ಕರ್ಣೋ ಯುದ್ಧೇ ಕ್ಷಪಯಿತುಂ ಭವೇತ್।।
ವಿಭೋ! ಯುದ್ಧದಲ್ಲಿ ಕರ್ಣನನ್ನು ನಾನು ಹೇಗೆ ಸಂಹರಿಸಬಲ್ಲೆ ಎಂದು ಚಿಂತಿಸುತ್ತಲೇ ಬಹಳ ಕಾಲವು ಕಳೆದುಹೋಯಿತು!
08046019a ಜಾಗ್ರತ್ಸ್ವಪಂಶ್ಚ ಕೌಂತೇಯ ಕರ್ಣಮೇವ ಸದಾ ಹ್ಯಹಂ।
08046019c ಪಶ್ಯಾಮಿ ತತ್ರ ತತ್ರೈವ ಕರ್ಣಭೂತಮಿದಂ ಜಗತ್।।
ಕೌಂತೇಯ! ಜಾಗ್ರತನಾಗಿರುವಾಗ ಮತ್ತು ಸ್ವಪ್ನದಲ್ಲಿ ಕೂಡ ಕೇವಲ ಕರ್ಣನನ್ನೇ ನಾನು ಸದಾ ಕಾಣುತ್ತಿದ್ದೆ. ಈ ಜಗತ್ತೆಲ್ಲವೂ ಕರ್ಣಮಯವಾಗಿರುವಂತೆ ಕಾಣುತ್ತಿತ್ತು!
08046020a ಯತ್ರ ಯತ್ರ ಹಿ ಗಚ್ಚಾಮಿ ಕರ್ಣಾದ್ಭೀತೋ ಧನಂಜಯ।
08046020c ತತ್ರ ತತ್ರ ಹಿ ಪಶ್ಯಾಮಿ ಕರ್ಣಂ ಏವಾಗ್ರತಃ ಸ್ಥಿತಂ।।
ಧನಂಜಯ! ಕರ್ಣನ ಭಯದಿಂದ ಎಲ್ಲೆಲ್ಲಿ ಹೋಗುತ್ತಿದ್ದೆನೋ ಆಲ್ಲಲ್ಲಿ ಕರ್ಣನೇ ಎದಿರು ನಿಂತಿರುವಂತೆ ಕಾಣುತ್ತಿದ್ದನು.
08046021a ಸೋಽಹಂ ತೇನೈವ ವೀರೇಣ ಸಮರೇಷ್ವಪಲಾಯಿನಾ।
08046021c ಸಹಯಃ ಸರಥಃ ಪಾರ್ಥ ಜಿತ್ವಾ ಜೀವನ್ವಿಸರ್ಜಿತಃ।।
ಪಾರ್ಥ! ಸಮರದಲ್ಲಿ ಪಲಾಯನಮಾಡದಿರುವ ಆ ವೀರನೇ ನನ್ನ ಕುದುರೆಗಳು ಮತ್ತು ರಥಗಳನ್ನು ಗೆದ್ದು ನನ್ನನ್ನು ಜೀವಸಹಿತನಾಗಿ ವಿಸರ್ಜಿಸಿದ್ದಾನೆ!
08046022a ಕೋ ನು ಮೇ ಜೀವಿತೇನಾರ್ಥೋ ರಾಜ್ಯೇನಾರ್ಥೋಽಥ ವಾ ಪುನಃ।
08046022c ಮಮೈವಂ ಧಿಕ್ಕೃತಸ್ಯೇಹ ಕರ್ಣೇನಾಹವಶೋಭಿನಾ।।
ಆಹವಶೋಭೀ ಕರ್ಣನಿಂದ ಹೀಗೆ ಧಿಕ್ಕರಿಸಲ್ಪಟ್ಟ ನನಗೆ ಈ ಜೀವದಿಂದ ಮತ್ತೆ ಈ ರಾಜ್ಯದಿಂದ ಅರ್ಥವಾದರೂ ಏನಿದೆ?
08046023a ನ ಪ್ರಾಪ್ತಪೂರ್ವಂ ಯದ್ಭೀಷ್ಮಾತ್ಕೃಪಾದ್ದ್ರೋಣಾಚ್ಚ ಸಂಯುಗೇ।
08046023c ತತ್ಪ್ರಾಪ್ತಮದ್ಯ ಮೇ ಯುದ್ಧೇ ಸೂತಪುತ್ರಾನ್ಮಹಾರಥಾತ್।।
ಈ ಹಿಂದೆ ಸಂಯುಗದಲ್ಲಿ ನಾನು ಏನನ್ನು ಭೀಷ್ಮ, ಕೃಪ ಮತ್ತು ದ್ರೋಣರಿಂದ ಪಡೆದಿರಲಿಲ್ಲವೋ ಅದನ್ನು ಇಂದು ನಾನು ಯುದ್ಧದಲ್ಲಿ ಮಹಾರಥ ಸೂತಪುತ್ರನಿಂದ ಪಡೆದಿದ್ದೇನೆ!
08046024a ತತ್ತ್ವಾ ಪೃಚ್ಚಾಮಿ ಕೌಂತೇಯ ಯಥಾ ಹ್ಯಕುಶಲಸ್ತಥಾ।
08046024c ತನ್ಮಮಾಚಕ್ಷ್ವ ಕಾರ್ತ್ಸ್ನ್ಯೆನ ಯಥಾ ಕರ್ಣಸ್ತ್ವಯಾ ಹತಃ।।
ಕೌಂತೇಯ! ಆದುದರಿಂದ ನಾನು ನಿನ್ನನ್ನು ಕೇಳುತ್ತಿದ್ದೇನೆ. ಕುಶಲನಾಗಿದ್ದುಕೊಂಡೇ ನೀನು ಹೇಗೆ ಕರ್ಣನನ್ನು ಸಂಹರಿಸಿದೆ? ಅದನ್ನು ನನಗೆ ಹೇಳು!
08046025a ಶಕ್ರವೀರ್ಯಸಮೋ ಯುದ್ಧೇ ಯಮತುಲ್ಯಪರಾಕ್ರಮಃ।
08046025c ರಾಮತುಲ್ಯಸ್ತಥಾಸ್ತ್ರೇ ಯಃ ಸ ಕಥಂ ವೈ ನಿಷೂದಿತಃ।।
ಯುದ್ಧದಲ್ಲಿ ಶಕ್ರನ ವೀರ್ಯನ ಸಮನಾಗಿರುವ, ಪರಾಕ್ರಮದಲ್ಲಿ ಯಮನ ಸಮಾನನಾಗಿರುವ, ಹಾಗೆಯೇ ಅಸ್ತ್ರದಲ್ಲಿ ರಾಮನಿಗೆ ಸಮನಾಗಿರುವ ಅವನನ್ನು ನೀನು ಹೇಗೆ ಸಂಹರಿಸಿದೆ?
08046026a ಮಹಾರಥಃ ಸಮಾಖ್ಯಾತಃ ಸರ್ವಯುದ್ಧವಿಶಾರದಃ।
08046026c ಧನುರ್ಧರಾಣಾಂ ಪ್ರವರಃ ಸರ್ವೇಷಾಂ ಏಕಪೂರುಷಃ।।
08046027a ಪೂಜಿತೋ ಧೃತರಾಷ್ಟ್ರೇಣ ಸಪುತ್ರೇಣ ವಿಶಾಂ ಪತೇ।
08046027c ಸದಾ ತ್ವದರ್ಥಂ ರಾಧೇಯಃ ಸ ಕಥಂ ನಿಹತಸ್ತ್ವಯಾ।।
ಮಹಾರಥನೆಂದು ಸಮಾಖ್ಯಾತನಾದ, ಸರ್ವಯುದ್ಧವಿಶಾರದನಾದ, ಧನುರ್ಧಾರಿಗಳಲ್ಲಿ ಶ್ರೇಷ್ಠ, ಎಲ್ಲರ ಏಕಪುರುಷ, ಸದಾ ನಿನಗೋಸ್ಕರವಾಗಿ ಪುತ್ರರೊಡನೆ ವಿಶಾಂಪತಿ ಧೃತರಾಷ್ಟ್ರನು ಗೌರವಿಸುತ್ತಿದ್ದ ಆ ರಾಧೇಯನನ್ನು ನೀನು ಹೇಗೆ ಸಂಹರಿಸಿದೆ?
08046028a ಧೃತರಾಷ್ಟ್ರೋ ಹಿ ಯೋಧೇಷು ಸರ್ವೇಷ್ವೇವ ಸದಾರ್ಜುನ।
08046028c ತವ ಮೃತ್ಯುಂ ರಣೇ ಕರ್ಣಂ ಮನ್ಯತೇ ಪುರುಷರ್ಷಭಃ।।
ಅರ್ಜುನ! ಪುರುಷರ್ಷಭ ಧೃತರಾಷ್ಟ್ರನಾದರೋ ರಣದಲ್ಲಿ ನಿನ್ನ ಮೃತ್ಯುವು ಸರ್ವ ಯೋಧರಲ್ಲಿ ಕರ್ಣನೆಂದೇ ಭಾವಿಸಿದ್ದನು.
08046029a ಸ ತ್ವಯಾ ಪುರುಷವ್ಯಾಘ್ರ ಕಥಂ ಯುದ್ಧೇ ನಿಷೂದಿತಃ।
08046029c ತಂ ಮಮಾಚಕ್ಷ್ವ ಬೀಭತ್ಸೋ ಯಥಾ ಕರ್ಣೋ ಹತಸ್ತ್ವಯಾ।।
ಪುರುಷವ್ಯಾಘ್ರ! ಯುದ್ಧದಲ್ಲಿ ನೀನು ಅವನನ್ನು ಹೇಗೆ ಸಂಹರಿಸಿದೆ? ಬೀಭತ್ಸೋ! ನಿನ್ನಿಂದ ಕರ್ಣನು ಹತನಾದುದನ್ನು ನನಗೆ ಹೇಳು!
08046030a ಸೋತ್ಸೇಧಮಸ್ಯ ಚ ಶಿರಃ ಪಶ್ಯತಾಂ ಸುಹೃದಾಂ ಹೃತಂ।
08046030c ತ್ವಯಾ ಪುರುಷಶಾರ್ದೂಲ ಶಾರ್ದೂಲೇನ ಯಥಾ ರುರೋಃ।।
ಪುರುಷಶಾರ್ದೂಲ! ರುರುವಿನ ಶಿರವನ್ನು ಶಾರ್ದೂಲವು ಅಪಹರಿಸುವಂತೆ ಎಲ್ಲರೂ ನೋಡುತ್ತಿರಲು ನೀನು ಅವನ ಶಿರವನ್ನು ಅಪಹರಿಸಿದುದರ ಕುರಿತು ಹೇಳು!
08046031a ಯಃ ಪರ್ಯುಪಾಸೀತ್ಪ್ರದಿಶೋ ದಿಶಶ್ಚ ತ್ವಾಂ ಸೂತಪುತ್ರಃ ಸಮರೇ ಪರೀಪ್ಸನ್।
08046031c ದಿತ್ಸುಃ ಕರ್ಣಃ ಸಮರೇ ಹಸ್ತಿಪೂಗಂ ಸ ಹೀದಾನೀಂ ಕಂಕಪತ್ರೈಃ ಸುತೀಕ್ಷ್ಣೈಃ।।
ಸೂತಪುತ್ರನು ಸಮರದಲ್ಲಿ ನಿನ್ನನ್ನು ದಿಕ್ಕು ಉಪದಿಕ್ಕುಗಳಲ್ಲಿ ಹುಡುಕುತ್ತಾ ಸುತಾಡುತ್ತಿದ್ದನು. ಸಮರದಲ್ಲಿ ನಿನ್ನನ್ನು ಹುಡುಕಿಕೊಟ್ಟವನಿಗೆ ಕರ್ಣನು ಆನೆಗಳನ್ನು ಬಹುಮಾನವಾಗಿ ಕೊಡುವವನಿದ್ದನು. ಅವನು ಈಗ ಸುತೀಕ್ಶ್ಣವಾದ ಕಂಕಪತ್ರಗಳಿಂದ ಹತನಾಗಿರುವನಲ್ಲವೇ?
08046032a ತ್ವಯಾ ರಣೇ ನಿಹತಃ ಸೂತಪುತ್ರಹ್ ಕಚ್ಚಿಚ್ಛೇತೇ ಭೂಮಿತಲೇ ದುರಾತ್ಮಾ।
08046032c ಕಚ್ಚಿತ್ಪ್ರಿಯಂ ಮೇ ಪರಮಂ ತ್ವಯಾದ್ಯ ಕೃತಂ ರಣೇ ಸೂತಪುತ್ರಂ ನಿಹತ್ಯ।।
ದುರಾತ್ಮ ಸೂತಪುತ್ರನು ರಣದಲ್ಲಿ ನಿನ್ನಿಂದ ನಿಹತನಾಗಿ ಭೂಮಿಯಮೇಲೆ ಮಲಗಿರುವನಲ್ಲವೇ? ರಣದಲ್ಲಿ ಸೂತಪುತ್ರನನ್ನು ಸಂಹರಿಸಿ ನೀನು ಇಂದು ನನಗೆ ಪರಮ ಪ್ರಿಯವಾದುದನ್ನು ಮಾಡಿರುವೆಯಲ್ಲವೇ?
08046033a ಯಃ ಸರ್ವತಃ ಪರ್ಯಪತತ್ತ್ವದರ್ಥೇ ಮದಾನ್ವಿತೋ ಗರ್ವಿತಃ ಸೂತಪುತ್ರಃ।
08046033c ಸ ಶೂರಮಾನೀ ಸಮರೇ ಸಮೇತ್ಯ ಕಚ್ಚಿತ್ತ್ವಯಾ ನಿಹತಃ ಸಂಯುಗೇಽದ್ಯ।।
ನಿನಗೋಸ್ಕರವಾಗಿ ಎಲ್ಲಕಡೆಗಳಿಂದ ನಮ್ಮ ಮೇಲೆ ಆಕ್ರಮಣಮಾಡುತ್ತಿದ್ದ ಆ ಶೂರಮಾನೀ ಮದಾನ್ವಿತ ಸೂತಪುತ್ರನು ಸಮರದಲ್ಲಿ ಇಂದು ಸೇನಾಸಮೇತನಾಗಿ ನಿನ್ನಿಂದ ಹತನಾದ ತಾನೇ?
08046034a ರೌಕ್ಮಂ ರಥಂ ಹಸ್ತಿವರೈಶ್ಚ ಯುಕ್ತಂ ರಥಂ ದಿತ್ಸುರ್ಯಃ ಪರೇಭ್ಯಸ್ತ್ವದರ್ಥೇ।
08046034c ಸದಾ ರಣೇ ಸ್ಪರ್ಧತೇ ಯಃ ಸ ಪಾಪಃ ಕಚ್ಚಿತ್ತ್ವಯಾ ನಿಹತಸ್ತಾತ ಯುದ್ಧೇ।।
ಅಯ್ಯಾ! ನಿನಗೋಸ್ಕರವಾಗಿ ಅವನು ಇತರರಿಗೆ ಚಿನ್ನ, ರಥ ಮತ್ತು ಶ್ರೇಷ್ಠ ಕುದುರೆಗಳಿಂದ ಯುಕ್ತವಾದ ರಥವನ್ನು ಕೊಡುವವನಿದ್ದನು. ಆ ಪಾಪಿಯು ಸದಾ ರಣದಲ್ಲಿ ನಿನ್ನೊಡನೆ ಸ್ಪರ್ಧಿಸುತ್ತಿದ್ದನು. ಅವನು ಯುದ್ಧದಲ್ಲಿ ನಿನ್ನಿಂದ ಹತನಾದ ತಾನೇ?
08046035a ಯೋಽಸೌ ನಿತ್ಯಂ ಶೂರಮದೇನ ಮತ್ತೋ ವಿಕತ್ಥತೇ ಸಂಸದಿ ಕೌರವಾಣಾಂ।
08046035c ಪ್ರಿಯೋಽತ್ಯರ್ಥಂ ತಸ್ಯ ಸುಯೋಧನಸ್ಯ ಕಚ್ಚಿತ್ಸ ಪಾಪೋ ನಿಹತಸ್ತ್ವಯಾದ್ಯ।।
ನಿತ್ಯವೂ ಶೂರಮದದಿಂದ ಮತ್ತನಾಗಿ, ಸುಯೋಧನನಿಗೆ ಅತಿಪ್ರಿಯವಾದುದನ್ನು ಮಾಡಲೋಸುಗ ಕೌರವರ ಸಂಸದಿಯಲ್ಲಿ ಕೊಚ್ಚಿಕೊಳ್ಳುತ್ತಿದ್ದ ಆ ಪಾಪಿಯನ್ನು ಇಂದು ನೀನು ಸಂಹರಿಸಿದ್ದೀಯೆ ತಾನೇ?
08046036a ಕಚ್ಚಿತ್ಸಮಾಗಮ್ಯ ಧನುಹ್ಪ್ರಮುಕ್ತೈಃ ತ್ವತ್ಪ್ರೇಷಿತೈರ್ಲೋಹಿತಾರ್ಥೈರ್ವಿಹಂಗೈಃ।
08046036c ಶೇತೇಽದ್ಯ ಪಾಪಃ ಸ ವಿಭಿನ್ನಗಾತ್ರಃ ಕಚ್ಚಿದ್ಭಗ್ನೋ ಧಾರ್ತರಾಷ್ಟ್ರಸ್ಯ ಬಾಹುಃ।।
ಧನುಸ್ಸಿನಿಂದ ಹೊರಟು ನಿನ್ನಿಂದ ಕಳುಹಿಸಲ್ಪಟ್ಟ ಕೆಂಪುಬಣ್ಣದ ವಿಹಂಗಗಳಿಗೆ ಸಿಲುಕಿ ಆ ಪಾಪಿಯ ಶರೀರವು ಭಗ್ನವಾಗಿ ಮಲಗಿದ್ದಾನೆ ತಾನೇ? ಧಾರ್ತರಾಷ್ಟ್ರನ ಬಾಹುವು ತುಂಡಾಗಿದೆ ತಾನೇ?
08046037a ಯೋಽಸೌ ಸದಾ ಶ್ಲಾಘತೇ ರಾಜಮಧ್ಯೇ ದುರ್ಯೋಧನಂ ಹರ್ಷಯನ್ದರ್ಪಪೂರ್ಣಃ।
08046037c ಅಹಂ ಹಂತಾ ಫಲ್ಗುನಸ್ಯೇತಿ ಮೋಹಾತ್ ಕಚ್ಚಿದ್ಧತಸ್ತಸ್ಯ ನ ವೈ ತಥಾ ರಥಃ।।
ರಾಜಮಧ್ಯದಲ್ಲಿ ಸದಾ ದರ್ಪಪೂರ್ಣನಾಗಿ “ನಾನು ಫಲ್ಗುನನನ್ನು ಕೊಲ್ಲುತ್ತೇನೆ!” ಎಂದು ಮೋಹದಿಂದ ಹೊಗಳಿಕೊಂಡು ದುರ್ಯೋಧನನನ್ನು ಹರ್ಷಗೊಳಿಸುತ್ತಿದ್ದ ಆ ಮಹಾರಥನು ಇಂದು ನಿನ್ನಿಂದ ಹತನಾಗಿದ್ದಾನಲ್ಲವೇ?
08046038a ನಾಹಂ ಪಾದೌ ಧಾವಯಿಷ್ಯೇ ಕದಾ ಚಿದ್ ಯಾವತ್ಸ್ಥಿತಃ ಪಾರ್ಥ ಇತ್ಯಲ್ಪಬುದ್ಧಿಃ।
08046038c ವ್ರತಂ ತಸ್ಯೈತತ್ಸರ್ವದಾ ಶಕ್ರಸೂನೋ ಕಚ್ಚಿತ್ತ್ವಯಾ ನಿಹತಃ ಸೋಽದ್ಯ ಕರ್ಣಃ।।
“ಎಲ್ಲಿಯವರೆಗೆ ಪಾರ್ಥನಿರುವನೋ ಅಲ್ಲಿಯವರೆಗೆ ಪಾದಗಳನ್ನು ತೊಳೆಯಿಸಿಕೊಳ್ಳುವುದಿಲ್ಲ!” ಎನ್ನುವುದು ಸರ್ವದಾ ಆ ಅಲ್ಪಬುದ್ಧಿಯ ವ್ರತವಾಗಿತ್ತು. ಶಕ್ರಸೂನೋ! ಆ ಕರ್ಣನು ಇಂದು ನಿನ್ನಿಂದ ಹತನಾಗಿದ್ದಾನೆ ತಾನೇ?
08046039a ಯೋಽಸೌ ಕೃಷ್ಣಾಮಬ್ರವೀದ್ದುಷ್ಟಬುದ್ಧಿಃ ಕರ್ಣಃ ಸಭಾಯಾಂ ಕುರುವೀರಮಧ್ಯೇ।
08046039c ಕಿಂ ಪಾಂಡವಾಂಸ್ತ್ವಂ ನ ಜಹಾಸಿ ಕೃಷ್ಣೇ ಸುದುರ್ಬಲಾನ್ ಪತಿತಾನ್ ಹೀನಸತ್ತ್ವಾನ್।।
“ಕೃಷ್ಣೇ! ಸುದುರ್ಬಲರಾಗಿರುವ, ಪತಿತರಾಗಿರುವ ಮತ್ತು ಹೀನಸತ್ತ್ವರಾಗಿರುವ ಪಾಂಡವರನ್ನು ನೀನು ಏಕೆ ಪರಿತ್ಯಜಿಸುವುದಿಲ್ಲ?” ಎಂದು ಆ ದುಷ್ಟಬುದ್ಧಿ ಕರ್ಣನು ಕುರುವೀರರ ಮಧ್ಯದಲ್ಲಿ ಸಭೆಯಲ್ಲಿ ಕೃಶ್ಣೆಯನ್ನು ಪ್ರಶ್ನಿಸಿದ್ದನು.
08046040a ಯತ್ತತ್ಕರ್ಣಃ ಪ್ರತ್ಯಜಾನಾತ್ತ್ವದರ್ಥೇ ನಾಹತ್ವಾಹಂ ಸಹ ಕೃಷ್ಣೇನ ಪಾರ್ಥಂ।
08046040c ಇಹೋಪಯಾತೇತಿ ಸ ಪಾಪಬುದ್ಧಿಃ ಕಚ್ಚಿಚ್ಚೇತೇ ಶರಸಂಭಿನ್ನಗಾತ್ರಃ।।
“ಕೃಷ್ಣನೊಡನೆ ಪಾರ್ಥನನ್ನು ಸಂಹರಿಸದೇ ನಾನು ಹಿಂದಿರುಗುವುದಿಲ್ಲ!” ಎಂದು ಆ ಪಾಪಬುದ್ಧಿ ಕರ್ಣನು ನಿನಗೋಸ್ಕರವಾಗಿ ಪ್ರತಿಜ್ಞೆಮಾಡಿ ಹೊರಟಿದ್ದನು. ಅವನು ಬಾಣಗಳಿಂದ ಭಗ್ನಶರೀರವುಳ್ಳವನಾಗಿ ಮಲಗಿದ್ದಾನೆ ತಾನೇ?
08046041a ಕಚ್ಚಿತ್ಸಂಗ್ರಾಮೇ ವಿದಿತೋ ವಾ ತದಾಯಂ ಸಮಾಗಮಃ ಸೃಂಜಯಕೌರವಾಣಾಂ।
08046041c ಯತ್ರಾವಸ್ಥಾಮೀದೃಶೀಂ ಪ್ರಾಪಿತೋಽಹಂ ಕಚ್ಚಿತ್ತ್ವಯಾ ಸೋಽದ್ಯ ಹತಃ ಸಮೇತ್ಯ।।
ಸಂಗ್ರಾಮದಲ್ಲಿ ಸೃಂಜಯ-ಕೌರವರ ಸಮಾಗಮದಲ್ಲಿ ನಡೆದುದುದು ನಿನಗೆ ತಿಳಿದಿದೆ ತಾನೇ? ನನ್ನನ್ನು ಈ ದುರವಸ್ಥೆಗೆ ಗುರಿಮಾಡಿದ ಅವನು ನಿನ್ನಿಂದ ಇಂದು ಹತನಾಗಿದ್ದಾನೆ ತಾನೇ?
08046042a ಕಚ್ಚಿತ್ತ್ವಯಾ ತಸ್ಯ ಸುಮಂದಬುದ್ಧೇರ್ ಗಾಂಡೀವಮುಕ್ತೈರ್ವಿಶಿಖೈರ್ಜ್ವಲದ್ಭಿಃ।
08046042c ಸಕುಂಡಲಂ ಭಾನುಮದುತ್ತಮಾಂಗಂ ಕಾಯಾತ್ಪ್ರಕೃತ್ತಂ ಯುಧಿ ಸವ್ಯಸಾಚಿನ್।।
ಸವ್ಯಸಾಚಿನ್! ಯುದ್ಧದಲ್ಲಿ ನಿನ್ನ ಗಾಂಡೀವದಿಂದ ಮುಕ್ತವಾದ ಉರಿಯುತ್ತಿದ್ದ ವಿಶಿಖಗಳು ಆ ಮಂದಬುದ್ಧಿಯ ಕುಂಡಲಗಳೊಂದಿಗೆ ಹೊಳೆಯುತ್ತಿದ್ದ ಶಿರಸ್ಸನ್ನು ಅವನ ಕಾಯದಿಂದ ಕತ್ತರಿಸಿವೆ ತಾನೇ?
08046043a ಯತ್ತನ್ಮಯಾ ಬಾಣಸಮರ್ಪಿತೇನ ಧ್ಯಾತೋಽಸಿ ಕರ್ಣಸ್ಯ ವಧಾಯ ವೀರ।
08046043c ತನ್ಮೇ ತ್ವಯಾ ಕಚ್ಚಿದಮೋಘಮದ್ಯ ಧ್ಯಾತಂ ಕೃತಂ ಕರ್ಣನಿಪಾತನೇನ।।
ವೀರ! ಅವನ ಬಾಣಗಳು ನನಗೆ ನಾಟಿದಾಗಲೆಲ್ಲ ಅವನ ವಧೆಗಾಗಿ ನಿನ್ನನ್ನೇ ನಾನು ಸ್ಮರಿಸಿಕೊಳ್ಳುತ್ತಿದ್ದೆ. ಕರ್ಣನನ್ನು ಕೆಳಗುರುಳಿಸಿ ಇಂದು ನೀನು ನನ್ನ ಆ ಸ್ಮರಣೆಗಳನ್ನು ಸಾರ್ಥಕಮಾಡಿದ್ದೀಯೆ ತಾನೇ?
08046044a ಯದ್ದರ್ಪಪೂರ್ಣಃ ಸ ಸುಯೋಧನೋಽಸ್ಮಾನ್ ಅವೇಕ್ಷತೇ ಕರ್ಣಸಮಾಶ್ರಯೇಣ।
08046044c ಕಚ್ಚಿತ್ತ್ವಯಾ ಸೋಽದ್ಯ ಸಮಾಶ್ರಯೋಽಸ್ಯ ಭಗ್ನಃ ಪರಾಕ್ರಮ್ಯ ಸುಯೋಧನಸ್ಯ।।
ಕರ್ಣನ ಸಮಾಶ್ರಯದಿಂದಾಗಿ ಸುಯೋಧನನು ನಮ್ಮನ್ನು ದರ್ಪಪೂರ್ಣನಾಗಿ ನೋಡುತ್ತಿದ್ದನು. ಇಂದು ನಿನ್ನ ಪರಾಕ್ರಮದಿಂದ ಸುಯೋಧನನ ಆ ಸಮಾಶ್ರಯವನ್ನು ಭಗ್ನಗೊಳಿಸಿದ್ದೀಯೆ ತಾನೇ?
08046045a ಯೋ ನಃ ಪುರಾ ಷಂಢತಿಲಾನವೋಚತ್ ಸಭಾಮಧ್ಯೇ ಪಾರ್ಥಿವಾನಾಂ ಸಮಕ್ಷಂ।
08046045c ಸ ದುರ್ಮತಿಃ ಕಚ್ಚಿದುಪೇತ್ಯ ಸಂಖ್ಯೇ ತ್ವಯಾ ಹತಃ ಸೂತಪುತ್ರೋಽತ್ಯಮರ್ಷೀ।।
ಹಿಂದೆ ಸಭಾಮಧ್ಯದಲ್ಲಿ ಪಾರ್ಥಿವರ ಸಮಕ್ಷಮದಲ್ಲಿ ಅವನು ನಮ್ಮನ್ನು ಎಣ್ಣೆಯನ್ನು ಕಳೆದುಕೊಂಡ ಎಳ್ಳೆಂದು ಕರೆದಿದ್ದನು. ಆ ದುರ್ಮತಿ ಅತಿಕೋಪೀ ಸೂತಪುತ್ರನು ರಣದಲ್ಲಿ ನಿನ್ನನ್ನು ಎದುರಿಸಿ ನಿನ್ನಿಂದ ಹತನಾದ ತಾನೇ?
08046046a ಯಃ ಸೂತಪುತ್ರಃ ಪ್ರಹಸನ್ದುರಾತ್ಮಾ ಪುರಾಬ್ರವೀನ್ನಿರ್ಜಿತಾಂ ಸೌಬಲೇನ।
08046046c ಸ್ವಯಂ ಪ್ರಸಹ್ಯಾನಯ ಯಾಜ್ಞಸೇನೀಂ ಅಪೀಹ ಕಚ್ಚಿತ್ಸ ಹತಸ್ತ್ವಯಾದ್ಯ।।
ಹಿಂದೆ ದುರಾತ್ಮಾ ಸೂತಪುತ್ರನು “ಸೌಬಲನಿಂದ ಗೆಲ್ಲಲ್ಪಟ್ಟ ಯಾಜ್ಞಸೇನಿಯನ್ನು ಸ್ವಯಂ ನೀನೇ ಎಳೆದು ತಾ!” ಎಂದು ದುಃಶಾಸನನಿಗೆ ಹೇಳಿದ್ದನು. ಅವನು ಇಂದು ನಿನ್ನಿಂದ ಹತನಾಗಿದ್ದಾನೆ ತಾನೇ?
08046047a ಯಃ ಶಸ್ತ್ರಭೃಚ್ಚ್ರೇಷ್ಠತಮಂ ಪೃಥಿವ್ಯಾಂ ಪಿತಾಮಹಂ ವ್ಯಾಕ್ಷಿಪದಲ್ಪಚೇತಾಃ।
08046047c ಸಂಖ್ಯಾಯಮಾನೋಽರ್ಧರಥಃ ಸ ಕಚ್ಚಿತ್ ತ್ವಯಾ ಹತೋಽದ್ಯಾಧಿರಥಿರ್ದುರಾತ್ಮಾ।।
ಪೃಥ್ವಿಯ ಶಸ್ತ್ರಭೃತರಲ್ಲಿಯೇ ಶ್ರೇಷ್ಠತಮನೆಂದು ತಿಳಿದುಕೊಂಡಿದ್ದ ಆ ಅಲ್ಪಚೇತನನನ್ನು ಪಿತಾಮಹನು ಅರ್ಧರಥನೆಂದು ಎಣಿಸಿದ್ದನು. ಆ ದುರಾತ್ಮ ಆಧಿರಥನು ಇಂದು ನಿನ್ನಿಂದ ಹತನಾಗಿದ್ದಾನೆ ತಾನೇ?
08046048a ಅಮರ್ಷಣಂ ನಿಕೃತಿಸಮೀರಣೇರಿತಂ ಹೃದಿ ಶ್ರಿತಂ ಜ್ವಲನಮಿಮಂ ಸದಾ ಮಮ।
08046048c ಹತೋ ಮಯಾ ಸೋಽದ್ಯ ಸಮೇತ್ಯ ಪಾಪಧೀರ್ ಇತಿ ಬ್ರುವನ್ಪ್ರಶಮಯ ಮೇಽದ್ಯ ಫಲ್ಗುನ।।
ಅವನ ಅವಹೇಳನೆಯೆಂಬ ಗಾಳಿಯಿಂದ ಉರಿಯುತ್ತಿರುವ ಈ ಅಗ್ನಿಯು ಸದಾ ನನ್ನ ಹೃದಯದಲ್ಲಿದೆ. “ಇಂದು ಎದುರಿಸಿ ಆ ಪಾಪಿಯು ನನ್ನಿಂದ ಹತನಾದನು!” ಎಂದು ಹೇಳಿ ನನ್ನ ಈ ಅಗ್ನಿಯನ್ನು ಶಾಂತಗೊಳಿಸು ಫಲ್ಗುನ!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಯುಧಿಷ್ಠಿರವಾಕ್ಯೇ ಷಟ್ಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಯುಧಿಷ್ಠಿರವಾಕ್ಯ ಎನ್ನುವ ನಲ್ವತ್ತಾರನೇ ಅಧ್ಯಾಯವು.