045 ಧರ್ಮರಾಜಶೋಧನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ಕರ್ಣವಧ ಪರ್ವ

ಅಧ್ಯಾಯ 45

ಸಾರ

ಅರ್ಜುನ-ಅಶ್ವತ್ಥಾಮರ ಯುದ್ಧ; ಅಶ್ವತ್ಥಾಮನ ಪರಾಜಯ (1-21). ಪಲಾಯನ ಮಾಡುತ್ತಿರುವ ಕುರುಸೇನೆಯನ್ನು ರಕ್ಷಿಸುವಂತೆ ದುರ್ಯೋಧನನು ಕರ್ಣನಿಗೆ ಹೇಳಿದುದು (22-30). ಕರ್ಣನು ಪಾಂಡವ ಸೇನೆಯನ್ನು ಧ್ವಂಸಗೊಳಿಸುತ್ತಾ ಭಾರ್ಗವಾಸ್ತ್ರವನ್ನು ಪ್ರಯೋಗಿಸಿದ್ದುದು (31-44). ಅರ್ಜುನನು ಕೃಷ್ಣನಿಗೆ ಕರ್ಣನ ಪರಾಕ್ರಮವನ್ನು ವರ್ಣಿಸಿದುದು (45-49). ಇತರರೊಂದಿಗೆ ಹೋರಾಡಲು ಕರ್ಣನನ್ನು ರಣರಂಗದಲ್ಲಿಯೇ ಬಿಟ್ಟು ಕೃಷ್ಣನು ರಥವನ್ನು ಯುಧಿಷ್ಠಿರನ ಶಬಿರಕ್ಕೆ ಕೊಂಡೊಯ್ದು, ಅಲ್ಲಿ ವಿಶ್ರಮಿಸುತ್ತಿದ್ದ ಯುಧಿಷ್ಠಿರನನ್ನು ಕಂಡಿದುದು (50-73).

08045001 ಸಂಜಯ ಉವಾಚ।
08045001a ದ್ರೌಣಿಸ್ತು ರಥವಂಶೇನ ಮಹತಾ ಪರಿವಾರಿತಃ।
08045001c ಆಪತತ್ಸಹಸಾ ರಾಜನ್ಯತ್ರ ರಾಜಾ ವ್ಯವಸ್ಥಿತಃ।।

ಸಂಜಯನು ಹೇಳಿದನು: “ರಾಜನ್! ದ್ರೌಣಿಯಾದರೋ ಮಹಾ ರಥಸಂಘಗಳಿಂದ ಪರಿವೃತನಾಗಿ ಎಲ್ಲಿ ರಾಜನಿದ್ದನೋ ಅಲ್ಲಿಗೆ ಕೂಡಲೇ ಬಂದೆರಗಿದನು.

08045002a ತಮಾಪತಂತಂ ಸಹಸಾ ಶೂರಃ ಶೌರಿಸಹಾಯವಾನ್।
08045002c ದಧಾರ ಸಹಸಾ ಪಾರ್ಥೋ ವೇಲೇವ ಮಕರಾಲಯಂ।।

ಒಮ್ಮೆಲೇ ಬಂದು ಎರಗಿದ ಅವನನ್ನು ಶೌರಿಯನ್ನೇ ಸಹಾಯಕನನ್ನಾಗಿ ಹೊಂದಿದ್ದ ಶೂರ ಪಾರ್ಥನು ತೀರವು ಸಮುದ್ರವನ್ನು ತಡೆಯುವಂತೆ ತಡೆದು ನಿಲ್ಲಿಸಿದನು.

08045003a ತತಃ ಕ್ರುದ್ಧೋ ಮಹಾರಾಜ ದ್ರೋಣಪುತ್ರಃ ಪ್ರತಾಪವಾನ್।
08045003c ಅರ್ಜುನಂ ವಾಸುದೇವಂ ಚ ಚಾದಯಾಮಾಸ ಪತ್ರಿಭಿಃ।।

ಮಹಾರಾಜ! ಆಗ ಕ್ರುದ್ಧನಾದ ಪ್ರತಾಪವಾನ್ ದ್ರೋಣಪುತ್ರನು ಅರ್ಜುನ-ವಾಸದೇವರನ್ನು ಪತ್ರಿಗಳಿಂದ ಮುಚ್ಚಿಬಿಟ್ಟನು.

08045004a ಅವಚ್ಚನ್ನೌ ತತಃ ಕೃಷ್ಣೌ ದೃಷ್ಟ್ವಾ ತತ್ರ ಮಹಾರಥಾಃ।
08045004c ವಿಸ್ಮಯಂ ಪರಮಂ ಗತ್ವಾ ಪ್ರೈಕ್ಷಂತ ಕುರವಸ್ತದಾ।।

ಮಹಾರಥ ಕೃಷ್ಣರಿಬ್ಬರೂ ಆ ರೀತಿ ಮುಚ್ಚಿಹೋಗಿದುದನ್ನು ನೋಡಿ ಅಲ್ಲಿ ನೋಡುತ್ತಿದ್ದ ಕುರುಗಳು ಪರಮ ವಿಸ್ಮಿತರಾದರು.

08045005a ಅರ್ಜುನಸ್ತು ತತೋ ದಿವ್ಯಮಸ್ತ್ರಂ ಚಕ್ರೇ ಹಸನ್ನಿವ।
08045005c ತದಸ್ತ್ರಂ ಬ್ರಾಹ್ಮಣೋ ಯುದ್ಧೇ ವಾರಯಾಮಾಸ ಭಾರತ।।

ಅರ್ಜುನನಾದರೋ ನಗುತ್ತಿರುವನೋ ಎನ್ನುವಂತೆ ದಿವ್ಯಾಸ್ತ್ರವನ್ನು ಪ್ರಕಟಿಸಿದನು. ಭಾರತ! ಯುದ್ಧದಲ್ಲಿ ಬ್ರಾಹ್ಮಣ ಅಶ್ವತ್ಥಾಮನು ಆ ಅಸ್ತ್ರವನ್ನು ತಡೆದುಬಿಟ್ಟನು.

08045006a ಯದ್ಯದ್ಧಿ ವ್ಯಾಕ್ಷಿಪದ್ಯುದ್ಧೇ ಪಾಂಡವೋಽಸ್ತ್ರಂ ಜಿಘಾಂಸಯಾ।
08045006c ತತ್ತದಸ್ತ್ರಂ ಮಹೇಷ್ವಾಸೋ ದ್ರೋಣಪುತ್ರೋ ವ್ಯಶಾತಯತ್।।

ಯುದ್ಧದಲ್ಲಿ ಅಶ್ವತ್ಥಾಮನನ್ನು ಸಂಹರಿಸಲು ಪಾಂಡವ ಅರ್ಜುನನು ಯಾವ್ಯಾವ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದನೋ ಅವೆಲ್ಲವನ್ನೂ ಮಹೇಷ್ವಾಸ ದ್ರೋಣಪುತ್ರನು ನಾಶಗೊಳಿಸುತ್ತಿದ್ದನು.

08045007a ಅಸ್ತ್ರಯುದ್ಧೇ ತತೋ ರಾಜನ್ವರ್ತಮಾನೇ ಭಯಾವಹೇ।
08045007c ಅಪಶ್ಯಾಮ ರಣೇ ದ್ರೌಣಿಂ ವ್ಯಾತ್ತಾನನಮಿವಾಂತಕಂ।।

ರಾಜನ್! ನಡೆಯುತ್ತಿದ್ದ ಆ ಭಯವನ್ನುಂಟುಮಾಡುವ ಅಸ್ತ್ರಯುದ್ಧದಲ್ಲಿ ನಮಗೆ ದ್ರೌಣಿಯು ಬಾಯಿಕಳೆದ ಅಂತಕನಂತೆ ತೋರುತ್ತಿದ್ದನು.

08045008a ಸ ದಿಶೋ ವಿದಿಶಶ್ಚೈವ ಚಾದಯಿತ್ವಾ ವಿಜಿಹ್ಮಗೈಃ।
08045008c ವಾಸುದೇವಂ ತ್ರಿಭಿರ್ಬಾಣೈರವಿಧ್ಯದ್ದಕ್ಷಿಣೇ ಭುಜೇ।।

ಅವನು ಜಿಹ್ಮಗಗಳಿಂದ ದಿಕ್ಕು-ಉಪದಿಕ್ಕುಗಳನ್ನು ಮುಚ್ಚಿ, ವಾಸುದೇವನ ಬಲಭುಜವನ್ನು ಮೂರು ಬಾಣಗಳಿಂದ ಪ್ರಹರಿಸಿದನು.

08045009a ತತೋಽರ್ಜುನೋ ಹಯಾನ್ ಹತ್ವಾ ಸರ್ವಾಂಸ್ತಸ್ಯ ಮಹಾತ್ಮನಃ।
08045009c ಚಕಾರ ಸಮರೇ ಭೂಮಿಂ ಶೋಣಿತೌಘತರಂಗಿಣೀಂ।।

ಆಗ ಮಹಾತ್ಮ ಅರ್ಜುನನು ಅಶ್ವತ್ಥಾಮನ ಎಲ್ಲ ಕುದುರೆಗಳನ್ನೂ ಸಂಹರಿಸಿ ಸಮರಭೂಮಿಯನ್ನು ರಕ್ತಪ್ರವಾಹದ ನದಿಯನ್ನಾಗಿಸಿದನು.

08045010a ನಿಹತಾ ರಥಿನಃ ಪೇತುಃ ಪಾರ್ಥಚಾಪಚ್ಯುತೈಃ ಶರೈಃ।
08045010c ಹಯಾಶ್ಚ ಪರ್ಯಧಾವಂತ ಮುಕ್ತಯೋಕ್ತ್ರಾಸ್ತತಸ್ತತಃ।।

ಆಗ ಪಾರ್ಥನ ಧನುಸ್ಸಿನಿಂದ ಹೊರಟ ಶರಗಳಿಂದ ರಥಿಗಳು ಹತರಾಗಿ ಉರುಳಿದರು. ಕಡಿವಾಣಗಳಿಂದ ಮುಕ್ತ ಕುದುರೆಗಳು ಅಲ್ಲಿಂದಿಲ್ಲಿಗೆ ಓಡತೊಡಗಿದವು.

08045011a ತದ್ದೃಷ್ಟ್ವಾ ಕರ್ಮ ಪಾರ್ಥಸ್ಯ ದ್ರೌಣಿರಾಹವಶೋಭಿನಃ।
08045011c ಅವಾಕಿರದ್ರಣೇ ಕೃಷ್ಣಂ ಸಮಂತಾನ್ನಿಶಿತೈಃ ಶರೈಃ।।

ಪಾರ್ಥನ ಆ ಕರ್ಮವನ್ನು ನೋಡಿ ಆಹವಶೋಭೀ ದ್ರೌಣಿಯು ರಣದಲ್ಲಿ ಕೃಷ್ಣನನ್ನು ಎಲ್ಲಕಡೆಗಳಿಂದ ನಿಶಿತ ಶರಗಳಿಂದ ಮುಚ್ಚಿಬಿಟ್ಟನು.

08045012a ತತೋಽರ್ಜುನಂ ಮಹಾರಾಜ ದ್ರೌಣಿರಾಯಮ್ಯ ಪತ್ರಿಣಾ।
08045012c ವಕ್ಷೋದೇಶೇ ಸಮಾಸಾದ್ಯ ತಾಡಯಾಮಾಸ ಸಂಯುಗೇ।।

ಮಹಾರಾಜ! ಅನಂತರ ದ್ರೌಣಿಯು ಸಂಯುಗದಲ್ಲಿ ಪತ್ರಿಗಳನ್ನು ಹೂಡಿ ಅರ್ಜುನನ ಎದೆಗೆ ಗುರಿಯಿಟ್ಟು ಹೊಡೆಯತೊಡಗಿದನು.

08045013a ಸೋಽತಿವಿದ್ಧೋ ರಣೇ ತೇನ ದ್ರೋಣಪುತ್ರೇಣ ಭಾರತ।
08045013c ಆದತ್ತ ಪರಿಘಂ ಘೋರಂ ದ್ರೌಣೇಶ್ಚೈನಮವಾಕ್ಷಿಪತ್।।

ಭಾರತ! ರಣದಲ್ಲಿ ಆ ದ್ರೋಣಪುತ್ರನಿಂದ ಅತಿಯಾಗಿ ಪ್ರಹರಿಸಲ್ಪಟ್ಟ ಅರ್ಜುನನು ಘೋರ ಪರಿಘವನ್ನು ತೆಗೆದುಕೊಂಡು ಅದನ್ನು ದ್ರೌಣಿಯ ಮೇಲೆ ಎಸೆದನು.

08045014a ತಮಾಪತಂತಂ ಪರಿಘಂ ಕಾರ್ತಸ್ವರವಿಭೂಷಿತಂ।
08045014c ದ್ರೌಣಿಶ್ಚಿಚ್ಚೇದ ಸಹಸಾ ತತ ಉಚ್ಚುಕ್ರುಶುರ್ಜನಾಃ।।

ತನ್ನ ಮೇಲೆ ಬೀಳಲು ಬರುತ್ತಿದ್ದ ಆ ಸುವರ್ಣವಿಭೂಷಿತ ಪರಿಘವನ್ನು ದ್ರೌಣಿಯು ಒಮ್ಮೆಲೇ ತುಂಡರಿಸಿದನು. ಆಗ ಜನರು ಕೂಗಿಕೊಂಡರು.

08045015a ಸೋಽನೇಕಧಾಪತದ್ಭೂಮೌ ಭಾರದ್ವಾಜಸ್ಯ ಸಾಯಕೈಃ।
08045015c ವಿಶೀರ್ಣಃ ಪರ್ವತೋ ರಾಜನ್ಯಥಾ ಸ್ಯಾನ್ಮಾತರಿಶ್ವನಾ।।

ರಾಜನ್! ಭಾರದ್ವಾಜನ ಸಾಯಕಗಳಿಂದ ಅನೇಕ ಚೂರುಗಳಾದ ಆ ಪರಿಘವು ವಜ್ರಾಯುಧದಿಂದ ಕತ್ತರಿಸಲ್ಪಟ್ಟ ಪರ್ವತವು ತುಂಡಾಗಿ ಬೀಳುವಂತೆ ಭೂಮಿಯ ಮೇಲೆ ಬಿದ್ದಿತು.

08045016a ತತೋಽರ್ಜುನೋ ರಣೇ ದ್ರೌಣಿಂ ವಿವ್ಯಾಧ ದಶಭಿಃ ಶರೈಃ।
08045016c ಸಾರಥಿಂ ಚಾಸ್ಯ ಭಲ್ಲೇನ ರಥನೀಡಾದಪಾಹರತ್।।

ಆಗ ರಣದಲ್ಲಿ ಅರ್ಜುನನು ಹತ್ತು ಶರಗಳಿಂದ ದ್ರೌಣಿಯನ್ನು ಹೊಡೆದು ಭಲ್ಲದಿಂದ ಅವನ ಸಾರಥಿಯನ್ನು ರಥನೀಡದಿಂದ ಅಪಹರಿಸಿದನು.

08045017a ಸ ಸಂಗೃಹ್ಯ ಸ್ವಯಂ ವಾಹಾನ್ಕೃಷ್ಣೌ ಪ್ರಾಚ್ಚಾದಯಚ್ಚರೈಃ।
08045017c ತತ್ರಾದ್ಭುತಮಪಶ್ಯಾಮ ದ್ರೌಣೇರಾಶು ಪರಾಕ್ರಮಂ।।

ದ್ರೌಣಿಯಾದರೋ ಸಯಂ ತಾನೇ ಕುದುರೆಗಳನ್ನು ಹಿಡಿದು ನಡೆಸುತ್ತಾ ಕೃಷ್ಣರಿಬ್ಬರನ್ನೂ ಶರಗಳಿಂದ ಮುಚ್ಚಿದನು. ಅಲ್ಲಿ ನಾವು ದ್ರೌಣಿಯ ಅದ್ಭುತ ಪರಾಕ್ರಮವನ್ನು ನೋಡಿದೆವು.

08045018a ಅಯಚ್ಚತ್ತುರಗಾನ್ಯಚ್ಚ ಫಲ್ಗುನಂ ಚಾಪ್ಯಯೋಧಯತ್।
08045018c ತದಸ್ಯ ಸಮರೇ ರಾಜನ್ಸರ್ವೇ ಯೋಧಾ ಅಪೂಜಯನ್।।

ಅಶ್ವತ್ಥಾಮನು ಇತ್ತ ನಾಲ್ಕು ಕುದುರೆಗಳನ್ನೂ ನಿಯಂತ್ರಿಸುತ್ತಿದ್ದನು ಮತ್ತು ಅತ್ತ ಫಲ್ಗುನನ್ನೂ ಆಕ್ರಮಣಿಸುತ್ತಿದ್ದನು. ರಾಜನ್! ಅದರಿಂದಾಗಿ ಸಮರದಲ್ಲಿದ್ದ ಸರ್ವ ಯೋಧರೂ ಅವನನ್ನು ಪ್ರಶಂಸಿಸಿದರು.

08045019a ಯದಾ ತ್ವಗ್ರಸ್ಯತ ರಣೇ ದ್ರೋಣಪುತ್ರೇಣ ಫಲ್ಗುನಃ।
08045019c ತತೋ ರಶ್ಮೀನ್ರಥಾಶ್ವಾನಾಂ ಕ್ಷುರಪ್ರೈಶ್ಚಿಚ್ಚಿದೇ ಜಯಃ।।

ರಣದಲ್ಲಿ ದ್ರೋಣಪುತ್ರನು ಫಲ್ಗುನನನ್ನು ಮೀರಿಸುವಂತಿರುವಾಗ ಜಯ ಅರ್ಜುನನು ಕ್ಷುರಪ್ರದಿಂದ ರಥದ ಕುದುರೆಗಳ ಕಡಿವಾಣಗಳನ್ನು ಕತ್ತರಿಸಿದನು.

08045020a ಪ್ರಾದ್ರವಂಸ್ತುರಗಾಸ್ತೇ ತು ಶರವೇಗಪ್ರಬಾಧಿತಾಃ।
08045020c ತತೋಽಭೂನ್ನಿನದೋ ಭೂಯಸ್ತವ ಸೈನ್ಯಸ್ಯ ಭಾರತ।।

ಶರವೇಗದಿಂದ ಬಾಧಿತರಾದ ಆ ಕುದುರೆಗಳು ಓಡಿಹೋದವು. ಆಗ ನಿನ್ನ ಸೈನ್ಯದಲ್ಲಿ ಪುನಃ ನಿನಾದಗಳಾದವು.

08045021a ಪಾಂಡವಾಸ್ತು ಜಯಂ ಲಬ್ಧ್ವಾ ತವ ಸೈನ್ಯಮುಪಾದ್ರವನ್।
08045021c ಸಮಂತಾನ್ನಿಶಿತಾನ್ಬಾಣಾನ್ವಿಮುಂಚಂತೋ ಜಯೈಷಿಣಃ।।

ಜಯೈಷಿಣಿ ಪಾಂಡವರಾದರೋ ಜಯವನ್ನು ಪಡೆದು ಎಲ್ಲಕಡೆ ನಿಶಿತ ಬಾಣಗಳನ್ನು ಎರಚುತ್ತಾ ನಿನ್ನ ಸೇನೆಯನ್ನು ಆಕ್ರಮಣಿಸಿದರು.

08045022a ಪಾಂಡವೈಸ್ತು ಮಹಾರಾಜ ಧಾರ್ತರಾಷ್ಟ್ರೀ ಮಹಾಚಮೂಃ।
08045022c ಪುನಃ ಪುನರಥೋ ವೀರೈರಭಜ್ಯತ ಜಯೋದ್ಧತೈಃ।।
08045023a ಪಶ್ಯತಾಂ ತೇ ಮಹಾರಾಜ ಪುತ್ರಾಣಾಂ ಚಿತ್ರಯೋಧಿನಾಂ।
08045023c ಶಕುನೇಃ ಸೌಬಲೇಯಸ್ಯ ಕರ್ಣಸ್ಯ ಚ ಮಹಾತ್ಮನಃ।।

ಮಹಾರಾಜ! ಧಾರ್ತರಾಷ್ಟ್ರರ ಮಹಾಸೇನೆಯನ್ನು ವಿಜಯೋಲ್ಲಾಸೀ ಪಾಂಡವ ವೀರರು ಪುನಃ ಪುನಃ ನಿನ್ನ ಚಿತ್ರಯೋಧೀ ಪುತ್ರರು, ಸೌಬಲ ಶಕುನಿ ಮತ್ತು ಮಹಾತ್ಮ ಕರ್ಣರು ನೋಡುತ್ತಿದ್ದಂತೆಯೇ ಸದೆಬಡಿಯುತ್ತಿದ್ದರು.

08045024a ವಾರ್ಯಮಾಣಾ ಮಹಾಸೇನಾ ಪುತ್ರೈಸ್ತವ ಜನೇಶ್ವರ।
08045024c ನಾವತಿಷ್ಠತ ಸಂಗ್ರಾಮೇ ತಾಡ್ಯಮಾನಾ ಸಮಂತತಃ।।

ಜನೇಶ್ವರ! ಸಂಗ್ರಾಮದಲ್ಲಿ ಎಲ್ಲ ಕಡೆಗಳಿಂದ ಪ್ರಹರಿಸಲ್ಪಡುತ್ತಿದ್ದ ಮಹಾಸೇನೆಯು ನಿನ್ನ ಪುತ್ರರು ತಡೆದರೂ ನಿಲ್ಲಲಿಲ್ಲ.

08045025a ತತೋ ಯೋಧೈರ್ಮಹಾರಾಜ ಪಲಾಯದ್ಭಿಸ್ತತಸ್ತತಃ।
08045025c ಅಭವದ್ವ್ಯಾಕುಲಂ ಭೀತೈಃ ಪುತ್ರಾಣಾಂ ತೇ ಮಹದ್ಬಲಂ।।

ಮಹಾರಾಜ! ಯೋಧರು ಎಲ್ಲಕಡೆ ಪಲಾಯನ ಮಾಡುತ್ತಿರಲು ನಿನ್ನ ಮಕ್ಕಳ ಮಹಾಸೇನೆಯಲ್ಲಿ ಭೀತಿ ವ್ಯಾಕುಲಗಳುಂಟಾದವು.

08045026a ತಿಷ್ಠ ತಿಷ್ಠೇತಿ ಸತತಂ ಸೂತಪುತ್ರಸ್ಯ ಜಲ್ಪತಃ।
08045026c ನಾವತಿಷ್ಠತ ಸಾ ಸೇನಾ ವಧ್ಯಮಾನಾ ಮಹಾತ್ಮಭಿಃ।।

ಮಹಾತ್ಮರಿಂದ ವಧಿಸಲ್ಪಡುತ್ತಿರುವ ಆ ಸೇನೆಯು ಸೂತಪುತ್ರನು ಸತತವೂ “ನಿಲ್ಲಿ! ನಿಲ್ಲಿ!” ಎಂದು ಕೂಗಿಕೊಳ್ಳುತ್ತಿದ್ದರೂ ನಿಲ್ಲಲಿಲ್ಲ.

08045027a ಅಥೋತ್ಕ್ರುಷ್ಟಂ ಮಹಾರಾಜ ಪಾಂಡವೈರ್ಜಿತಕಾಶಿಭಿಃ।
08045027c ಧಾರ್ತರಾಷ್ಟ್ರಬಲಂ ದೃಷ್ಟ್ವಾ ದ್ರವಮಾಣಂ ಸಮಂತತಃ।।

ಮಹಾರಾಜ! ಧಾರ್ತರಾಷ್ಟ್ರರ ಸೇನೆಯು ಎಲ್ಲಕಡೆ ಓಡಿಹೋಗುತ್ತಿರುವುದನ್ನು ನೋಡಿ ವಿಜಯೋತ್ಸಾಹೀ ಪಾಂಡವರು ಜೋರಾಗಿ ಸಿಂಹನಾದಗೈದರು.

08045028a ತತೋ ದುರ್ಯೋಧನಃ ಕರ್ಣಮಬ್ರವೀತ್ಪ್ರಣಯಾದಿವ।
08045028c ಪಶ್ಯ ಕರ್ಣ ಯಥಾ ಸೇನಾ ಪಾಂಡವೈರರ್ದಿತಾ ಭೃಶಂ।।

ಆಗ ದುರ್ಯೋಧನನು ಕರ್ಣನಿಗೆ ಪ್ರೀತಿಪೂರ್ವಕವಾಗಿ ಇಂತೆಂದನು: “ಕರ್ಣ! ಪಾಂಡವರಿಂದ ತುಂಬಾ ಪೀಡೆಗೊಳಗಾದ ನಮ್ಮ ಸೇನೆಯನ್ನು ನೋಡು!

08045029a ತ್ವಯಿ ತಿಷ್ಠತಿ ಸಂತ್ರಾಸಾತ್ಪಲಾಯತಿ ಸಮಂತತಃ।
08045029c ಏತಜ್ಞಾತ್ವಾ ಮಹಾಬಾಹೋ ಕುರು ಪ್ರಾಪ್ತಮರಿಂದಮ।।

ನೀನು ಯುದ್ಧದಲ್ಲಿರುವಾಗಲೇ ಅವರು ಭಯಗೊಂಡು ಎಲ್ಲಕಡೆ ಪಲಾಯನಮಾಡುತ್ತಿದ್ದಾರೆ! ಮಹಾಬಾಹೋ! ಅರಿಂದಮ! ಇದನ್ನು ತಿಳಿದು ಮಾಡಬೇಕಾದುದನ್ನು ಮಾಡು!

08045030a ಸಹಸ್ರಾಣಿ ಚ ಯೋಧಾನಾಂ ತ್ವಾಮೇವ ಪುರುಷರ್ಷಭ।
08045030c ಕ್ರೋಶಂತಿ ಸಮರೇ ವೀರ ದ್ರಾವ್ಯಮಾಣಾನಿ ಪಾಂಡವೈಃ।।

ಪುರುಷರ್ಷಭ! ವೀರ! ಸಮರದಲ್ಲಿ ಪಾಂಡವರಿಂದ ಓಡಿಸಲ್ಪಡುತ್ತಿರುವ ಆ ಸಹಸ್ರಾರು ಯೋಧರು ನಿನ್ನನ್ನೇ ಕೂಗಿ ಕರೆಯುತ್ತಿದ್ದಾರೆ!”

08045031a ಏತಚ್ಛೃತ್ವಾ ತು ರಾಧೇಯೋ ದುರ್ಯೋಧನವಚೋ ಮಹತ್।
08045031c ಮದ್ರರಾಜಮಿದಂ ವಾಕ್ಯಮಬ್ರವೀತ್ಸೂತನಂದನಃ।।

ದುರ್ಯೋಧನನ ಆ ಮಹಾ ಮಾತನ್ನು ಕೇಳಿದ ರಾಧೇಯ ಸೂತನಂದನನು ಮದ್ರರಾಜನಿಗೆ ಈ ಮಾತನ್ನಾಡಿದನು:

08045032a ಪಶ್ಯ ಮೇ ಭುಜಯೋರ್ವೀರ್ಯಮಸ್ತ್ರಾಣಾಂ ಚ ಜನೇಶ್ವರ।
08045032c ಅದ್ಯ ಹನ್ಮಿ ರಣೇ ಸರ್ವಾನ್ಪಾಂಚಾಲಾನ್ಪಾಂಡುಭಿಃ ಸಹ।
08045032e ವಾಹಯಾಶ್ವಾನ್ನರವ್ಯಾಘ್ರ ಭದ್ರೇಣೈವ ಜನೇಶ್ವರ।।

“ಜನೇಶ್ವರ! ನನ್ನ ಈ ಭುಜಗಳ ಮತ್ತು ಅಸ್ತ್ರಗಳ ವೀರ್ಯವನ್ನು ನೋಡು! ಇಂದು ರಣದಲ್ಲಿ ಪಾಂಡವರ ಸಹಿತ ಎಲ್ಲ ಪಾಂಚಾಲರನ್ನು ಸಂಹರಿಸುತ್ತೇನೆ! ನರವ್ಯಾಘ್ರ! ಜನೇಶ್ವರ! ಮಂಗಳಮಯ ಮನಸ್ಸಿನಿಂದ ಕುದುರೆಗಳನ್ನು ಓಡಿಸು!”

08045033a ಏವಮುಕ್ತ್ವಾ ಮಹಾರಾಜ ಸೂತಪುತ್ರಃ ಪ್ರತಾಪವಾನ್।
08045033c ಪ್ರಗೃಹ್ಯ ವಿಜಯಂ ವೀರೋ ಧನುಃಶ್ರೇಷ್ಠಂ ಪುರಾತನಂ।
08045033e ಸಜ್ಯಂ ಕೃತ್ವಾ ಮಹಾರಾಜ ಸಮ್ಮೃಜ್ಯ ಚ ಪುನಃ ಪುನಃ।।
08045034a ಸಂನಿವಾರ್ಯ ಚ ಯೋಧಾನ್ಸ್ವಾನ್ಸತ್ಯೇನ ಶಪಥೇನ ಚ।

ಮಹಾರಾಜ! ಹೀಗೆ ಹೇಳಿ ಪ್ರತಾಪವಾನ್ ವೀರ ಸೂತಪುತ್ರನು ಪುರಾತನವಾದ ಶ್ರೇಷ್ಠ ಧನುಸ್ಸು ವಿಜಯವನ್ನು ಹಿಡಿದುಕೊಂಡನು. ಮಹಾರಾಜ! ಅದನ್ನು ಹೆದೆಯೇರಿಸಿ ಬಾರಿ ಬಾರಿಗೂ ಶಿಂಜಿನಿಯನ್ನು ತೀಡುತ್ತಾ ಸತ್ಯ ಶಪಥಗಳಿಂದ ತನ್ನಕಡೆಯ ಯೋಧರನ್ನು ತಡೆದನು.

08045034c ಪ್ರಾಯೋಜಯದಮೇಯಾತ್ಮಾ ಭಾರ್ಗವಾಸ್ತ್ರಂ ಮಹಾಬಲಃ।।
08045035a ತತೋ ರಾಜನ್ಸಹಸ್ರಾಣಿ ಪ್ರಯುತಾನ್ಯರ್ಬುದಾನಿ ಚ।
08045035c ಕೋಟಿಶಶ್ಚ ಶರಾಸ್ತೀಕ್ಷ್ಣಾ ನಿರಗಚ್ಚನ್ಮಹಾಮೃಧೇ।।
08045036a ಜ್ವಲಿತೈಸ್ತೈರ್ಮಹಾಘೋರೈಃ ಕಂಕಬರ್ಹಿಣವಾಜಿತೈಃ।
08045036c ಸಂಚನ್ನಾ ಪಾಂಡವೀ ಸೇನಾ ನ ಪ್ರಾಜ್ಞಾಯತ ಕಿಂ ಚನ।।

ಮಹಾಬಲ ಅಮೇಯಾತ್ಮ ಕರ್ಣನು ಭಾರ್ಗವಾಸ್ತ್ರವನ್ನು ಪ್ರಕಟಿಸಿದನು. ರಾಜನ್! ಆಗ ಸಹಸ್ರಾರು ಲಕ್ಷೋಪಲಕ್ಷ, ಕೋಟ್ಯಾನುಕೋಟಿ ತಿಕ್ಷ್ಣ ಶರಗಳು ಮಹಾಮೃಧದಲ್ಲಿ ಹೊರಬಂದವು. ಪ್ರಜ್ವಲಿಸುತ್ತಿದ್ದ ಆ ಮಹಾಘೋರ ಕಂಕಬರ್ಹಿಣವಾಜಿಗಳು ಪಾಂಡವೀ ಸೇನೆಯನ್ನು ಮುಸುಕಿ ಏನೂ ತಿಳಿಯದಂತಾಯಿತು.

08045037a ಹಾಹಾಕಾರೋ ಮಹಾನಾಸೀತ್ಪಾಂಚಾಲಾನಾಂ ವಿಶಾಂ ಪತೇ।
08045037c ಪೀಡಿತಾನಾಂ ಬಲವತಾ ಭಾರ್ಗವಾಸ್ತ್ರೇಣ ಸಂಯುಗೇ।।

ವಿಶಾಂಪತೇ! ಸಂಯುಗದಲ್ಲಿ ಬಲವತ್ತಾದ ಭಾರ್ಗವಾಸ್ತ್ರದಿಂದ ಪೀಡಿತ ಪಾಂಚಾಲರಲ್ಲಿ ಮಹಾ ಹಾಹಾಕಾರವುಂಟಾಯಿತು.

08045038a ನಿಪತದ್ಭಿರ್ಗಜೈ ರಾಜನ್ನರೈಶ್ಚಾಪಿ ಸಹಸ್ರಶಃ।
08045038c ರಥೈಶ್ಚಾಪಿ ನರವ್ಯಾಘ್ರ ಹಯೈಶ್ಚಾಪಿ ಸಮಂತತಃ।।

ರಾಜನ್! ನರವ್ಯಾಘ್ರ! ಸಹಸ್ರಾರು ಸಂಖ್ಯೆಗಳಲ್ಲಿ ಆನೆಗಳೂ, ಮನುಷ್ಯರೂ, ರಥಗಳೂ, ಕುದುರೆಗಳೂ ಎಲ್ಲ ಕಡೆ ಬೀಳತೊಡಗಿದವು.

08045039a ಪ್ರಾಕಂಪತ ಮಹೀ ರಾಜನ್ನಿಹತೈಸ್ತೈಸ್ತತಸ್ತತಃ।
08045039c ವ್ಯಾಕುಲಂ ಸರ್ವಮಭವತ್ಪಾಂಡವಾನಾಂ ಮಹದ್ಬಲಂ।।

ರಾಜನ್! ಹತರಾಗಿ ಬೀಳುತ್ತಿದ್ದವರಿಂದ ಭೂಮಿಯೇ ನಡುಗಿತು. ಪಾಂಡವರ ಮಹಾಸೇನೆಯಲ್ಲಿ ಎಲ್ಲರೂ ವ್ಯಾಕುಲಗೊಂಡರು.

08045040a ಕರ್ಣಸ್ತ್ವೇಕೋ ಯುಧಾಂ ಶ್ರೇಷ್ಠೋ ವಿಧೂಮ ಇವ ಪಾವಕಃ।
08045040c ದಹಂ ಶತ್ರೂನ್ನರವ್ಯಾಘ್ರ ಶುಶುಭೇ ಸ ಪರಂತಪಃ।।

ನರವ್ಯಾಘ್ರ! ಯೋಧರಲ್ಲಿ ಶ್ರೇಷ್ಠ ಪರಂತಪ ಕರ್ಣನೊಬ್ಬನೇ ಹೊಗೆಯಿಲ್ಲದ ಪಾವಕನಂತೆ ಶತ್ರುಗಳನ್ನು ದಹಿಸುತ್ತಾ ಶೋಭಿಸಿದನು.

08045041a ತೇ ವಧ್ಯಮಾನಾಃ ಕರ್ಣೇನ ಪಾಂಚಾಲಾಶ್ಚೇದಿಭಿಃ ಸಹ।
08045041c ತತ್ರ ತತ್ರ ವ್ಯಮುಹ್ಯಂತ ವನದಾಹೇ ಯಥಾ ದ್ವಿಪಾಃ।
08045041e ಚುಕ್ರುಶುಸ್ತೇ ನರವ್ಯಾಘ್ರ ಯಥಾಪ್ರಾಗ್ವಾ ನರೋತ್ತಮಾಃ।।

ಕರ್ಣನಿಂದ ವಧಿಸಲ್ಪಡುತ್ತಿದ್ದ ಚೇದಿಗಳೊಡನೆ ಆ ಪಾಂಚಾಲರು ಕಾಡ್ಗಿಚ್ಚಿನಲ್ಲಿ ಆನೆಗಳು ಮುದುಡಿ ಬೀಳುವಂತೆ ಬೀಳುತ್ತಿದ್ದರು. ನರವ್ಯಾಘ್ರ! ಆ ನರೋತ್ತಮರು ವ್ಯಾಘ್ರಗಳಂತೆ ಚೀತ್ಕರಿಸುತ್ತಿದ್ದರು.

08045042a ತೇಷಾಂ ತು ಕ್ರೋಶತಾಂ ಶ್ರುತ್ವಾ ಭೀತಾನಾಂ ರಣಮೂರ್ಧನಿ।
08045042c ಧಾವತಾಂ ಚ ದಿಶೋ ರಾಜನ್ವಿತ್ರಸ್ತಾನಾಂ ಸಮಂತತಃ।
08045042e ಆರ್ತನಾದೋ ಮಹಾಂಸ್ತತ್ರ ಪ್ರೇತಾನಾಮಿವ ಸಂಪ್ಲವೇ।।

ರಾಜನ್! ರಣಮೂರ್ಧನಿಯಲ್ಲಿ ಭಯಗೊಂಡು ದಿಕ್ಕುದಿಕ್ಕುಗಳಲ್ಲಿ ಓಡುತ್ತಿದ್ದ ಅವರ ಭಯದ ಕೂಗುಗಳು ಪ್ರಳಯಕಾಲದಲ್ಲಿ ಪ್ರಾಣಿಗಳ ಆರ್ತನಾದದಂತೆ ಜೋರಾಗಿ ಕೇಳಿಬರುತ್ತಿತ್ತು.

08045043a ವಧ್ಯಮಾನಾಂಸ್ತು ತಾನ್ದೃಷ್ಟ್ವಾ ಸೂತಪುತ್ರೇಣ ಮಾರಿಷ।
08045043c ವಿತ್ರೇಸುಃ ಸರ್ವಭೂತಾನಿ ತಿರ್ಯಗ್ಯೋನಿಗತಾನ್ಯಪಿ।।

ಮಾರಿಷ! ಸೂತಪುತ್ರನಿಂದ ವಧಿಸಲ್ಪಡುತ್ತಿರುವ ಅವರನ್ನು ನೋಡಿ ಸಮಸ್ತ ಪ್ರಾಣಿಗಳೂ, ಪಶುಪಕ್ಷಿಗಳೂ ಭಯಗೊಂಡವು.

08045044a ತೇ ವಧ್ಯಮಾನಾಃ ಸಮರೇ ಸೂತಪುತ್ರೇಣ ಸೃಂಜಯಾಃ।
08045044c ಅರ್ಜುನಂ ವಾಸುದೇವಂ ಚ ವ್ಯಾಕ್ರೋಶಂತ ಮುಹುರ್ಮುಹುಃ।
08045044e ಪ್ರೇತರಾಜಪುರೇ ಯದ್ವತ್ಪ್ರೇತರಾಜಂ ವಿಚೇತಸಃ।।

ಸಮರದಲ್ಲಿ ಸೂತಪುತ್ರನಿಂದ ವಧಿಸಲ್ಪಡುತ್ತಿರುವ ಸೃಂಜಯರು ಪ್ರೇತರಾಜನ ಪಟ್ಟಣಕ್ಕೆ ಹೋಗಿ ವಿಚೇತಸರಾಗಿ ಪ್ರೇತರಾಜನನ್ನು ಕೂಗಿಕೊಳ್ಳುವಂತೆ ಅರ್ಜುನ-ವಾಸುದೇವರನ್ನು ಪುನಃ ಪುನಃ ಕೂಗಿ ಕರೆಯುತ್ತಿದ್ದರು.

08045045a ಅಥಾಬ್ರವೀದ್ವಾಸುದೇವಂ ಕುಂತೀಪುತ್ರೋ ಧನಂಜಯಃ।
08045045c ಭಾರ್ಗವಾಸ್ತ್ರಂ ಮಹಾಘೋರಂ ದೃಷ್ಟ್ವಾ ತತ್ರ ಸಭೀರಿತಂ।।

ಭಯವನ್ನುಂಟುಮಾಡಿದ ಆ ಮಹಾಘೋರ ಭಾರ್ಗವಾಸ್ತ್ರವನ್ನು ನೋಡಿ ಕುಂತೀಪುತ್ರ ಧನಂಜಯನು ವಾಸುದೇವನಿಗೆ ಇಂತೆಂದನು:

08045046a ಪಶ್ಯ ಕೃಷ್ಣ ಮಹಾಬಾಹೋ ಭಾರ್ಗವಾಸ್ತ್ರಸ್ಯ ವಿಕ್ರಮಂ।
08045046c ನೈತದಸ್ತ್ರಂ ಹಿ ಸಮರೇ ಶಕ್ಯಂ ಹಂತುಂ ಕಥಂ ಚನ।।

“ಮಹಾಬಾಹೋ! ಕೃಷ್ಣ! ಭಾರ್ಗವಾಸ್ತ್ರದ ವಿಕ್ರಮವನ್ನು ನೋಡು! ಸಮರದಲ್ಲಿ ಈ ಮಹಾಸ್ತ್ರವನ್ನು ಉಪಶಮನಗೊಳಿಸಲು ಯಾರಿಗೂ ಸಾಧ್ಯವಿಲ್ಲ!

08045047a ಸೂತಪುತ್ರಂ ಚ ಸಂರಬ್ಧಂ ಪಶ್ಯ ಕೃಷ್ಣ ಮಹಾರಣೇ।
08045047c ಅಂತಕಪ್ರತಿಮಂ ವೀರಂ ಕುರ್ವಾಣಂ ಕರ್ಮ ದಾರುಣಂ।।

ಕೃಷ್ಣ! ಮಹಾರಣದಲ್ಲಿ ಸಂರಬ್ಧನಾಗಿ ದಾರುಣ ಕರ್ಮವನ್ನೆಸಗುತ್ತಿರುವ ಅಂತಕಪ್ರತಿಮ ವೀರ ಸೂತಪುತ್ರನನ್ನು ನೋಡು!

08045048a ಸುತೀಕ್ಷ್ಣಂ ಚೋದಯನ್ನಶ್ವಾನ್ಪ್ರೇಕ್ಷತೇ ಮಾಂ ಮುಹುರ್ಮುಹುಃ।
08045048c ನ ಚ ಪಶ್ಯಾಮಿ ಸಮರೇ ಕರ್ಣಸ್ಯ ಪ್ರಪಲಾಯಿತಂ।।

ಕುದುರೆಗಳನ್ನು ತೀಕ್ಷ್ಣವಾಗಿ ಪ್ರಚೋದಿಸುತ್ತಾ ಅವನು ನನ್ನನ್ನೇ ಪುನಃ ಪುನಃ ನೋಡುತ್ತಿದ್ದಾನೆ. ಸಮರದಲ್ಲಿ ಕರ್ಣನನ್ನು ಪಲಾಯನಗೊಳಿಸುವನನ್ನು ನಾನು ಕಾಣೆ!

08045049a ಜೀವನ್ಪ್ರಾಪ್ನೋತಿ ಪುರುಷಃ ಸಂಖ್ಯೇ ಜಯಪರಾಜಯೌ।
08045049c ಜಿತಸ್ಯ ತು ಹೃಷೀಕೇಶ ವಧ ಏವ ಕುತೋ ಜಯಃ।।

ಹೃಷೀಕೇಶ! ಪುರುಷನು ಜೀವಿಸಿದ್ದರೆ ಯುದ್ಧದಲ್ಲಿ ಜಯವನ್ನೋ ಪರಾಜಯವನ್ನೋ ಪಡೆಯುತ್ತಾನೆ. ಆದರೆ ಗೆದ್ದವನ ವಧೆಯಾದರೆ ಜಯವು ಎಲ್ಲಿಂದ?”

08045050a ತತೋ ಜನಾರ್ದನಃ ಪ್ರಾಯಾದ್ದ್ರಷ್ಟುಮಿಚ್ಚನ್ಯುಧಿಷ್ಠಿರಂ।
08045050c ಶ್ರಮೇಣ ಗ್ರಾಹಯಿಷ್ಯಂಶ್ಚ ಕರ್ಣಂ ಯುದ್ಧೇನ ಮಾರಿಷ।।

ಮಾರಿಷ! ಆಗ ಜನಾರ್ದನನು ಯುಧಿಷ್ಠಿರನನ್ನು ನೋಡಲು ಇಚ್ಛಿಸಿ, ಕರ್ಣನನ್ನು ಶ್ರಮಪಟ್ಟು ಇತರರೊಂದಿಗೆ ಯುದ್ಧಮಾಡಲು ಬಿಟ್ಟು ಅಲ್ಲಿಂದ ರಥವನ್ನು ಓಡಿಸಿದನು.

08045051a ಅರ್ಜುನಂ ಚಾಬ್ರವೀತ್ಕೃಷ್ಣೋ ಭೃಶಂ ರಾಜಾ ಪರಿಕ್ಷತಃ।
08045051c ತಮಾಶ್ವಾಸ್ಯ ಕುರುಶ್ರೇಷ್ಠ ತತಃ ಕರ್ಣಂ ಹನಿಷ್ಯಸಿ।।

ಕೃಷ್ಣನು ಅರ್ಜುನನಿಗೆ ಹೇಳಿದನು: “ರಾಜಾ ಯುಧಿಷ್ಠಿರನು ಕ್ಷತವಿಕ್ಷತನಾಗಿದ್ದಾನೆ. ಕುರುಶ್ರೇಷ್ಠ! ಅವನನ್ನು ಸಮಾಧಾನಗೊಳಿಸಿದ ನಂತರ ನೀನು ಕರ್ಣನನ್ನು ವಧಿಸುವೆಯಂತೆ!”

08045052a ತತೋ ಧನಂಜಯೋ ದ್ರಷ್ಟುಂ ರಾಜಾನಂ ಬಾಣಪೀಡಿತಂ।
08045052c ರಥೇನ ಪ್ರಯಯೌ ಕ್ಷಿಪ್ರಂ ಸಂಗ್ರಾಮೇ ಕೇಶವಾಜ್ಞಯಾ।।

ಆಗ ಕೇಶವನ ಆಜ್ಞೆಯಂತೆ ಸಂಗ್ರಾಮವನ್ನು ಬಿಟ್ಟು ಬಾಣಪೀಡಿತ ರಾಜ ಯುಧಿಷ್ಠಿರನನ್ನು ಕಾಣಲು ಬೇಗನೆ ರಥದಲ್ಲಿ ಕುಳಿತು ಹೋದನು.

08045053a ಗಚ್ಚನ್ನೇವ ತು ಕೌಂತೇಯೋ ಧರ್ಮರಾಜದಿದೃಕ್ಷಯಾ।
08045053c ಸೈನ್ಯಮಾಲೋಕಯಾಮಾಸ ನಾಪಶ್ಯತ್ತತ್ರ ಚಾಗ್ರಜಂ।।
08045054a ಯುದ್ಧಂ ಕೃತ್ವಾ ತು ಕೌಂತೇಯೋ ದ್ರೋಣಪುತ್ರೇಣ ಭಾರತ।
08045054c ದುಃಸಹಂ ವಜ್ರಿಣಾ ಸಂಖ್ಯೇ ಪರಾಜಿಗ್ಯೇ ಭೃಗೋಃ ಸುತಂ।।

ಭಾರತ! ಕೌಂತೇಯನು ಯುದ್ಧದಲ್ಲಿ ವಜ್ರಿಣಿ ಇಂದ್ರನಿಂದಲೂ ಪರಾಜಯಗೊಳಿಸಲು ದುಃಸಾಧ್ಯನಾದ ಭೃಗುಸುತನೊಡನೆ ಯುದ್ಧಮಾಡಿ ಧರ್ಮರಾಜನನ್ನು ನೋಡಲು ಹೊರಟ ಕೌಂತೇಯನು ಸೈನ್ಯದಲ್ಲಿ ಹುಡುಕಲು ಅಲ್ಲಿ ತನ್ನ ಅಗ್ರಜನನ್ನು ಕಾಣಲಿಲ್ಲ.

08045055a ದ್ರೌಣಿಂ ಪರಾಜಿತ್ಯ ತತೋಗ್ರಧನ್ವಾ ಕೃತ್ವಾ ಮಹದ್ದುಷ್ಕರಮಾರ್ಯಕರ್ಮ।
08045055c ಆಲೋಕಯಾಮಾಸ ತತಃ ಸ್ವಸೈನ್ಯಂ ಧನಂಜಯಃ ಶತ್ರುಭಿರಪ್ರಧೃಷ್ಯಃ।।

ದ್ರೌಣಿಯನ್ನು ಪರಾಜಯಗೊಳಿಸುವ ಆ ಮಹಾ ದುಷ್ಕರ ಆರ್ಯಕರ್ಮವನ್ನೆಸಗಿದ ನಂತರ ಶತ್ರುಗಳಿಂದ ಎದುರಿಸಲು ಅಸಾಧ್ಯನಾದ ಉಗ್ರಧನ್ವಿ ಧನಂಜಯನು ತನ್ನ ಸೇನೆಯನ್ನು ಅವಲೋಕಿಸಿದನು.

08045056a ಸ ಯುಧ್ಯಮಾನಃ ಪೃತನಾಮುಖಸ್ಥಾಂ ಶೂರಾಂ ಶೂರೋ ಹರ್ಷಯನ್ಸವ್ಯಸಾಚೀ।
08045056c ಪೂರ್ವಾಪದಾನೈಃ ಪ್ರಥಿತೈಃ ಪ್ರಶಂಸನ್ ಸ್ಥಿರಾಂಶ್ಚಕಾರಾತ್ಮರಥಾನನೀಕೇ।।

ಶೂರ ಸವ್ಯಸಾಚಿಯು ಸೇನೆಯ ಅಗ್ರಭಾಗದಲ್ಲಿ ಯುದ್ಧಮಾಡುತ್ತಿದ್ದ ಶೂರರನ್ನು ಪ್ರಶಂಸೆಮಾಡಿ ಹರ್ಷಗೊಳಿಸುತ್ತಾ ಸೇನೆಯ ಹಿಂದಿರುವವರನ್ನೂ ಪ್ರಶಂಸಿಸುತ್ತಾ ಅವರೆಲ್ಲರನ್ನೂ ರಥಾನೀಕದಲ್ಲಿ ಸ್ಥಿರರಾಗಿ ನಿಲ್ಲುವಂತೆ ಪ್ರಚೋದಿಸಿದನು.

08045057a ಅಪಶ್ಯಮಾನಸ್ತು ಕಿರೀಟಮಾಲೀ ಯುಧಿ ಜ್ಯೇಷ್ಠಂ ಭ್ರಾತರಮಾಜಮೀಢಂ।
08045057c ಉವಾಚ ಭೀಮಂ ತರಸಾಭ್ಯುಪೇತ್ಯ ರಾಜ್ಞಃ ಪ್ರವೃತ್ತಿಸ್ತ್ವಿಹ ಕೇತಿ ರಾಜನ್।।

ಯುದ್ಧದಲ್ಲಿ ಜ್ಯೇಷ್ಠ ಭ್ರಾತರ ಆಜಮೀಢ ಬೀಮನನ್ನು ನೋಡಿ ಕಿರೀಟಮಾಲೀ ಅರ್ಜುನನು ಬೇಗನೆ ಅವನ ಬಳಿಸಾರಿ ರಾಜನ ವೃತ್ತಾಂತವನ್ನು ತಿಳಿಯಲು ರಾಜನೆಲ್ಲಿ ಎಂದು ಕೇಳಿದನು. 8045058 ಭೀಮ ಉವಾಚ।

08045058a ಅಪಯಾತ ಇತೋ ರಾಜಾ ಧರ್ಮಪುತ್ರೋ ಯುಧಿಷ್ಠಿರಃ।
08045058c ಕರ್ಣಬಾಣವಿಭುಗ್ನಾಂಗೋ ಯದಿ ಜೀವೇತ್ಕಥಂ ಚನ।।

ಭೀಮನು ಹೇಳಿದನು: “ಕರ್ಣನ ಬಾಣಗಳಿಂದ ಗಾಯಗೊಂಡಿರುವ ರಾಜಾ ಧರ್ಮಪುತ್ರ ಯುಧಿಷ್ಠಿರನು ಇಲ್ಲಿಂದ ಹೊರಟುಹೋಗಿದ್ದಾನೆ. ಹೇಗೋ ಅವನಿನ್ನೂ ಜೀವಿಸಿರಬಹುದು!” 8045059 ಅರ್ಜುನ ಉವಾಚ।

08045059a ತಸ್ಮಾದ್ಭವಾಂ ಶೀಘ್ರಮಿತಃ ಪ್ರಯಾತು ರಾಜ್ಞಃ ಪ್ರವೃತ್ತ್ಯೈ ಕುರುಸತ್ತಮಸ್ಯ।
08045059c ನೂನಂ ಹಿ ವಿದ್ಧೋಽತಿಭೃಶಂ ಪೃಷತ್ಕೈಹ್ ಕರ್ಣೇನ ರಾಜಾ ಶಿಬಿರಂ ಗತೋಽಸೌ।।

ಅರ್ಜುನನು ಹೇಳಿದನು: “ಇಲ್ಲಿಂದ ನೀನು ಶೀಘ್ರವಾಗಿ ಹೋಗಿ ಕುರುಸತ್ತಮ ರಾಜನ ಸಮಾಚಾರವನ್ನು ತಿಳಿದುಕೋ! ಕರ್ಣನ ಬಾಣಗಳಿಂದ ಅತಿಯಾಗಿ ಗಾಯಗೊಂಡಿರುವ ರಾಜನು ಶಿಬಿರಕ್ಕೆ ಹೋಗಿರಬಹುದು!

08045060a ಯಃ ಸಂಪ್ರಹಾರೇ ನಿಶಿ ಸಂಪ್ರವೃತ್ತೇ ದ್ರೋಣೇನ ವಿದ್ಧೋಽತಿಭೃಶಂ ತರಸ್ವೀ।
08045060c ತಸ್ಥೌ ಚ ತತ್ರಾಪಿ ಜಯಪ್ರತೀಕ್ಷೋ ದ್ರೋಣೇನ ಯಾವನ್ನ ಹತಃ ಕಿಲಾಸೀತ್।।

ರಾತ್ರಿಯುದ್ಧದಲ್ಲಿ ಕೂಡ ಆ ತರಸ್ವಿಯು ದ್ರೋಣನ ಪ್ರಹಾರಗಳಿಂದ ಅತಿಯಾಗಿ ಗಾಯಗೊಂಡಿದ್ದನು. ಆದರೆ ಜಯವನ್ನು ಪ್ರತೀಕ್ಷಿಸುತ್ತಿದ್ದ ಅವನು ದ್ರೋಣನು ಹತನಾಗುವವರೆಗೂ ರಣದಲ್ಲಿಯೇ ನಿಂತಿದ್ದನು.

08045061a ಸ ಸಂಶಯಂ ಗಮಿತಃ ಪಾಂಡವಾಗ್ರ್ಯಃ ಸಂಖ್ಯೇಽದ್ಯ ಕರ್ಣೇನ ಮಹಾನುಭಾವಃ।
08045061c ಜ್ಞಾತುಂ ಪ್ರಯಾಃಯಾಶು ತಮದ್ಯ ಭೀಮ ಸ್ಥಾಸ್ಯಾಮ್ಯಹಂ ಶತ್ರುಗಣಾನ್ನಿರುಧ್ಯ।।

ಆದರೆ ಇಂದು ಕರ್ಣನಿಂದ ಪೀಡಿತನಾದ ಮಹಾನುಭಾವ ಪಾಂಡವಾಗ್ರ್ಯನು ಶಿಬಿರಕ್ಕೆ ಹೊರಟುಹೋಗಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ. ಭೀಮ! ಇಂದು ಅವನ ಬಗ್ಗೆ ತಿಳಿಯಲು ನೀನು ಹೊರಟುಹೋಗು. ನಾನು ಶತ್ರುಗಣಗಳನ್ನು ವಿರೋಧಿಸಿ ಇಲ್ಲಿಯೇ ನಿಲ್ಲುತ್ತೇನೆ!” 8045062 ಭೀಮ ಉವಾಚ।

08045062a ತ್ವಮೇವ ಜಾನೀಹಿ ಮಹಾನುಭಾವ ರಾಜ್ಞಃ ಪ್ರವೃತ್ತಿಂ ಭರತರ್ಷಭಸ್ಯ।
08045062c ಅಹಂ ಹಿ ಯದ್ಯರ್ಜುನ ಯಾಮಿ ತತ್ರ ವಕ್ಷ್ಯಂತಿ ಮಾಂ ಭೀತ ಇತಿ ಪ್ರವೀರಾಃ।।

ಭೀಮನು ಹೇಳಿದನು: “ಮಹಾನುಭಾವ! ನೀನೇ ಹೋಗಿ ಭರತರ್ಷಭ ರಾಜನ ವಿಚಾರವನ್ನು ತಿಳಿದುಕೊಂಡು ಬಾ! ಅರ್ಜುನ! ಒಂದುವೇಳೆ ನಾನೇ ಅಲ್ಲಿಗೆ ಹೋದರೆ ಯುದ್ಧ ಪ್ರವೀರರು ಭಯದಿಂದ ನಾನು ಹೊರಟುಹೋದನೆಂದು ಮಾತನಾಡಿಕೊಳ್ಳುತ್ತಾರೆ!”

08045063a ತತೋಽಬ್ರವೀದರ್ಜುನೋ ಭೀಮಸೇನಂ ಸಂಶಪ್ತಕಾಃ ಪ್ರತ್ಯನೀಕಂ ಸ್ಥಿತಾ ಮೇ।
08045063c ಏತಾನಹತ್ವಾ ನ ಮಯಾ ತು ಶಕ್ಯಂ ಇತೋಽಪಯಾತುಂ ರಿಪುಸಂಘಗೋಷ್ಠಾತ್।।

ಆಗ ಅರ್ಜುನನು ಭೀಮಸೇನನಿಗೆ ಇಂತೆಂದನು: “ಸಂಶಪ್ತಕರು ನನ್ನ ಎದುರಾಗಿ ನಿಂತಿದ್ದಾರೆ. ಇವರನ್ನು ಸಂಹರಿಸದೆ ಶತ್ರುಸೇನೆಗಳನ್ನು ಬಿಟ್ಟು ಇಲ್ಲಿಂದ ಹೋಗಲು ನನಗೆ ಶಕ್ಯವಾಗುತ್ತಿಲ್ಲ!”

08045064a ಅಥಾಬ್ರವೀದರ್ಜುನಂ ಭೀಮಸೇನಹಃ ಸ್ವವೀರ್ಯಮಾಶ್ರಿತ್ಯ ಕುರುಪ್ರವೀರ।
08045064c ಸಂಶಪ್ತಕಾನ್ಪ್ರತಿಯೋತ್ಸ್ಯಾಮಿ ಸಂಖ್ಯೇ ಸರ್ವಾನಹಂ ಯಾಹಿ ಧನಂಜಯೇತಿ।।

ಆಗ ತನ್ನ ವೀರ್ಯವನ್ನೇ ಆಶ್ರಯಿಸಿದ್ದ ಭೀಮಸೇನನು ಅರ್ಜುನನಿಗೆ ಹೇಳಿದನು: “ಕುರುಪ್ರವೀರ! ಧನಂಜಯ! ಯುದ್ಧದಲ್ಲಿ ಸಂಶಪ್ತಕರೊಡನೆ ನಾನು ಹೋರಾಡುತ್ತೇನೆ. ಸರ್ವರನ್ನೂ ನಾನು ಸಂಹರಿಸುತ್ತೇನೆ. ನೀನು ಹೋಗು!”

08045065a ತದ್ಭೀಮಸೇನಸ್ಯ ವಚೋ ನಿಶಂಯ ಸುದುರ್ವಚಂ ಭ್ರಾತುರಮಿತ್ರಮಧ್ಯೇ।
08045065c ದ್ರಷ್ಟುಂ ಕುರುಶ್ರೇಷ್ಠಮಭಿಪ್ರಯಾತುಂ ಪ್ರೋವಾಚ ವೃಷ್ಣಿಪ್ರವರಂ ತದಾನೀಂ।।

ಶತ್ರುಗಳ ಮಧ್ಯದಲ್ಲಿ ಅಣ್ಣ ಭೀಮಸೇನನ ಆ ಸುದುಷ್ಕರ ಮಾತನ್ನು ಆಲಿಸಿ ಅರ್ಜುನನು ಕುರುಶ್ರೇಷ್ಠ ಯುಧಿಷ್ಠಿರನನ್ನು ನೋಡಲು ಮುಂದೆ ಹೋಗುತ್ತಾ ವೃಷ್ಣಿಪ್ರವರ ಕೃಷ್ಣನಿಗೆ ಇಂತೆಂದನು:

08045066a ಚೋದಯಾಶ್ವಾನ್ ಹೃಷೀಕೇಶ ವಿಗಾಹ್ಯೈತಂ ರಥಾರ್ಣವಂ।
08045066c ಅಜಾತಶತ್ರುಂ ರಾಜಾನಂ ದ್ರಷ್ಟುಮಿಚ್ಚಾಮಿ ಕೇಶವ।।

“ಹೃಷೀಕೇಶ! ಕೇಶವ! ಸಮುದ್ರರೂಪದ ಈ ರಣವನ್ನು ದಾಟಿ ಕುದುರೆಗಳನ್ನು ಓಡಿಸು! ಅಜಾತಶತ್ರು ರಾಜನನ್ನು ನೋಡಲು ಬಯಸುತ್ತೇನೆ!”

08045067a ತತೋ ಹಯಾನ್ಸರ್ವದಾಶಾರ್ಹಮುಖ್ಯಃ ಪ್ರಾಚೋದಯದ್ಭೀಮಮುವಾಚ ಚೇದಂ।
08045067c ನೈತಚ್ಚಿತ್ರಂ ತವ ಕರ್ಮಾದ್ಯ ವೀರ ಯಾಸ್ಯಾಮಹೇ ಜಹಿ ಭೀಮಾರಿಸಂಘಾನ್।।

ಆಗ ಸರ್ವದಾಶಾರ್ಹರ ಪ್ರಮುಖ ಕೇಶವನು ಕುದುರೆಗಳನ್ನು ಓಡಿಸುತ್ತಾ ಭೀಮನಿಗೆ ಇಂತೆಂದನು: “ಭೀಮ! ವೀರ! ನಿನ್ನ ಕರ್ಮದಲ್ಲಿ ಆಶ್ಚರ್ಯವೇನೂ ಇಲ್ಲ. ಅರಿಸಂಘಗಳನ್ನು ನೀನು ಸಂಹರಿಸಲು ಶಕ್ತನಾಗಿರುವೆ!”

08045068a ತತೋ ಯಯೌ ಹೃಷೀಕೇಶೋ ಯತ್ರ ರಾಜಾ ಯುಧಿಷ್ಠಿರಃ।
08045068c ಶೀಘ್ರಾಚ್ಚೀಘ್ರತರಂ ರಾಜನ್ವಾಜಿಭಿರ್ಗರುಡೋಪಮೈಃ।।

ರಾಜನ್! ಆಗ ಗರುಡನಂತಿರುವ ಕುದುರೆಗಳ ಮೂಲಕ ಶೀಘ್ರಾತಿಶೀಘ್ರವಾಗಿ ರಾಜಾ ಯುಧಿಷ್ಠಿರನಿರುವಲ್ಲಿಗೆ ಹೃಷೀಕೇಶ ಮತ್ತು ಅರ್ಜುನರು ಬಂದರು.

08045069a ಪ್ರತ್ಯನೀಕೇ ವ್ಯವಸ್ಥಾಪ್ಯ ಭೀಮಸೇನಂ ಅರಿಂದಮಂ।
08045069c ಸಂದಿಶ್ಯ ಚೈವ ರಾಜೇಂದ್ರ ಯುದ್ಧಂ ಪ್ರತಿ ವೃಕೋದರಂ।।

ರಾಜೇಂದ್ರ! ಅವರು ಶತ್ರುಸೇನೆಗಳನ್ನು ಎದುರಿಸಲು ಅರಿಂದಮ ಭೀಮನನ್ನಿರಿಸಿ ವೃಕೋದರನಿಗೆ ಯುದ್ಧದ ಕುರಿತಾಗಿ ಸಲಹೆಗಳನ್ನೂ ನೀಡಿದ್ದರು.

08045070a ತತಸ್ತು ಗತ್ವಾ ಪುರುಷಪ್ರವೀರೌ ರಾಜಾನಮಾಸಾದ್ಯ ಶಯಾನಂ ಏಕಂ।
08045070c ರಥಾದುಭೌ ಪ್ರತ್ಯವರುಃಯ ತಸ್ಮಾದ್ ವವಂದತುರ್ಧರ್ಮರಾಜಸ್ಯ ಪಾದೌ।।

ಆಗ ಆ ಇಬ್ಬರು ಪುರುಷಪ್ರವೀರರೂ ಹೊರಟು ಒಬ್ಬನೇ ಮಲಗಿದ್ದ ರಾಜಾ ಯುಧಿಷ್ಠಿರನನ್ನು ತಲುಪಿ ರಥದಿಂದ ಇಬ್ಬರೂ ಕೆಳಕ್ಕಿಳಿದು ಧರ್ಮರಾಜನ ಪಾದಗಳಿಗೆ ವಂದಿಸಿದರು.

08045071a ತೌ ದೃಷ್ಟ್ವಾ ಪುರುಷವ್ಯಾಘ್ರೌ ಕ್ಷೇಮಿಣೌ ಪುರುಷರ್ಷಭ।
08045071c ಮುದಾಭ್ಯುಪಗತೌ ಕೃಷ್ಣಾವಶ್ವಿನಾವಿವ ವಾಸವಂ।।
08045072a ತಾವಭ್ಯನಂದದ್ರಾಜಾ ಹಿ ವಿವಸ್ವಾನಶ್ವಿನಾವಿವ।
08045072c ಹತೇ ಮಹಾಸುರೇ ಜಂಭೇ ಶಕ್ರವಿಷ್ಣೂ ಯಥಾ ಗುರುಃ।।

ಪುರುಷರ್ಷಭ! ಅಶ್ವಿನೀ ದೇವತೆಗಳು ವಾಸವನನ್ನು ಹೇಗೋ ಹಾಗೆ ಅಭಿನಂದಿಸಿದ ಆ ಇಬ್ಬರು ಪುರುಷವ್ಯಾಘ್ರ ಕುಶಲಿ ಕೃಷ್ಣಾರ್ಜುನರನ್ನು ನೋಡಿ ರಾಜಾ ಯುಧಿಷ್ಠಿರನು ವಿವಸ್ವತನು ಅಶ್ವಿನೀ ದೇವತೆಗಳನ್ನು ಹೇಗೋ ಹಾಗೆ ಮತ್ತು ಮಹಾಸುರ ಜಂಭನು ಹತನಾಗಲು ಗುರು ಬೃಹಸ್ಪತಿಯು ಶಕ್ರ-ವಿಷ್ಣು ಇಬ್ಬರನ್ನೂ ಹೇಗೋ ಹಾಗೆ ಸಂತೋಷದಿಂದ ಅಭಿನಂದಿಸಿದನು.

08045073a ಮನ್ಯಮಾನೋ ಹತಂ ಕರ್ಣಂ ಧರ್ಮರಾಜೋ ಯುಧಿಷ್ಠಿರಃ।
08045073c ಹರ್ಷಗದ್ಗದಯಾ ವಾಚಾ ಪ್ರೀತಃ ಪ್ರಾಹ ಪರಂತಪೌ।।

ಕರ್ಣನು ಹತನಾದನೆಂದೇ ಭಾವಿಸಿ ಧರ್ಮರಾಜ ಯುಧಿಷ್ಠಿರನು ಆ ಪರಂತಪರಿಬ್ಬರಿಗೆ ಪ್ರೀತಿಯಿಂದ ಹರ್ಷಗದ್ಗದನಾಗಿ ಈ ಮಾತುಗಳನ್ನಾಡಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಧರ್ಮರಾಜಶೋಧನೇ ಪಂಚಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಧರ್ಮರಾಜಶೋಧನ ಎನ್ನುವ ನಲ್ವತ್ತೈದನೇ ಅಧ್ಯಾಯವು.