ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 44
ಸಾರ
ಯುದ್ಧವು ಮುಂದುವರೆದುದು (1-16). ಕರ್ಣ-ಶಿಖಂಡಿಯರ ಯುದ್ಧ; ಶಿಖಂಡಿಯ ಪರಾಜಯ (17-24). ದುಃಶಾಸನ-ಧೃಷ್ಟದ್ಯುಮ್ನರ ಯುದ್ಧ (25-33). ವೃಷಸೇನ-ನಕುಲರ ಯುದ್ಧ (34-39). ನಕುಲನು ಉಲೂಕನನ್ನು ಪರಾಜಯಗೊಳಿಸಿದುದು (40-41). ಸಾತ್ಯಕಿ-ಶಕುನಿಯರ ಯುದ್ಧ; ಶಕುನಿಯ ಪರಾಜಯ (42-47). ಭೀಮಸೇನನು ದುರ್ಯೋಧನನನ್ನು ಪರಾಜಯಗೊಳಿಸಿದುದು (48-49). ಕೃಪ-ಯುಧಾಮನ್ಯು ಮತ್ತು ಕೃತವರ್ಮ-ಉತ್ತಮೌಜಸರ ಯುದ್ಧ (50-55).
08044001 ಧೃತರಾಷ್ಟ್ರ ಉವಾಚ।
08044001a ನಿವೃತ್ತೇ ಭೀಮಸೇನೇ ಚ ಪಾಂಡವೇ ಚ ಯುಧಿಷ್ಠಿರೇ।
08044001c ವಧ್ಯಮಾನೇ ಬಲೇ ಚಾಪಿ ಮಾಮಕೇ ಪಾಂಡುಸೃಂಜಯೈಃ।।
08044002a ದ್ರವಮಾಣೇ ಬಲೌಘೇ ಚ ನಿರಾಕ್ರಂದೇ ಮುಹುರ್ಮುಹುಃ।
08044002c ಕಿಮಕುರ್ವಂತ ಕುರವಸ್ತನ್ಮಮಾಚಕ್ಷ್ವ ಸಂಜಯ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ಪಾಂಡವ ಯುಧಿಷ್ಠಿರ ಮತ್ತು ಭೀಮಸೇನರು ಹಿಂದಿರುಗಲು, ಪಾಂಡು-ಸೃಂಜಯರು ನಮ್ಮ ಸೇನೆಯನ್ನು ವಧಿಸುತ್ತಿರಲು, ನಮ್ಮ ಸೇನೆಯು ಪುನಃ ಪುನಃ ನಿರಾಕ್ರಂದರಾಗಿ ಓಡಿಹೋಗುತ್ತಿರಲು ಕುರುಗಳು ಏನು ಮಾಡಿದರು ಎನ್ನುವುದನ್ನು ನನಗೆ ಹೇಳು!” 8044003 ಸಂಜಯ ಉವಾಚ।
08044003a ದೃಷ್ಟ್ವಾ ಭೀಮಂ ಮಹಾಬಾಹುಂ ಸೂತಪುತ್ರಃ ಪ್ರತಾಪವಾನ್।
08044003c ಕ್ರೋಧರಕ್ತೇಕ್ಷಣೋ ರಾಜನ್ಭೀಮಸೇನಮುಪಾದ್ರವತ್।।
ಸಂಜಯನು ಹೇಳಿದನು: “ರಾಜನ್! ಮಹಾಬಾಹು ಭೀಮಸೇನನನ್ನು ನೋಡಿ ಪ್ರತಾಪವಾನ್ ಸೂತಪುತ್ರನು ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ಭೀಮಸೇನನನ್ನು ಆಕ್ರಮಣಿಸಿದನು.
08044004a ತಾವಕಂ ಚ ಬಲಂ ದೃಷ್ಟ್ವಾ ಭೀಮಸೇನಾತ್ಪರಾಙ್ಮುಖಂ।
08044004c ಯತ್ನೇನ ಮಹತಾ ರಾಜನ್ಪರ್ಯವಸ್ಥಾಪಯದ್ಬಲೀ।।
ರಾಜನ್! ನಿನ್ನ ಸೇನೆಯು ಭೀಮಸೇನನಿಂದ ಪರಾಙ್ಮುಖವಾಗುತ್ತಿದ್ದುದನ್ನು ನೋಡಿ ಬಲಶಾಲೀ ಕರ್ಣನು ಮಹಾಪ್ರಯತ್ನದಿಂದ ಅವರನ್ನು ಪುನಃ ಯುದ್ಧಕ್ಕೆ ನಿಲ್ಲಿಸಿದನು.
08044005a ವ್ಯವಸ್ಥಾಪ್ಯ ಮಹಾಬಾಹುಸ್ತವ ಪುತ್ರಸ್ಯ ವಾಹಿನೀಂ।
08044005c ಪ್ರತ್ಯುದ್ಯಯೌ ತದಾ ಕರ್ಣಃ ಪಾಂಡವಾನ್ಯುದ್ಧದುರ್ಮದಾನ್।।
ನಿನ್ನ ಮಗನ ಸೇನೆಯನ್ನು ವ್ಯವಸ್ಥೆಗೊಳಿಸಿ ಮಹಾಬಾಹು ಕರ್ಣನು ಯುದ್ಧದುರ್ಮದ ಪಾಂಡವರೊಡನೆ ಯುದ್ಧಮಾಡಿದನು.
08044006a ಪ್ರತ್ಯುದ್ಯಯುಸ್ತು ರಾಧೇಯಂ ಪಾಂಡವಾನಾಂ ಮಹಾರಥಾಃ।
08044006c ಧುನ್ವಾನಾಃ ಕಾರ್ಮುಕಾಣ್ಯಾಜೌ ವಿಕ್ಷಿಪಂತಶ್ಚ ಸಾಯಕಾನ್।।
ಪಾಂಡವರ ಮಹಾರಥರು ಕಾರ್ಮುಕಗಳನ್ನು ಸೆಳೆಯುತ್ತಾ ಸಾಯಕಗಳನ್ನು ಎರಚುತ್ತಾ ರಾಧೇಯನನ್ನು ಎದುರಿಸಿ ಯುದ್ಧಮಾಡಿದರು.
08044007a ಭೀಮಸೇನಃ ಶಿನೇರ್ನಪ್ತಾ ಶಿಖಂಡೀ ಜನಮೇಜಯಃ।
08044007c ಧೃಷ್ಟದ್ಯುಮ್ನಶ್ಚ ಬಲವಾನ್ಸರ್ವೇ ಚಾಪಿ ಪ್ರಭದ್ರಕಾಃ।।
08044008a ಪಾಂಚಾಲಾಶ್ಚ ನರವ್ಯಾಘ್ರಾಃ ಸಮಂತಾತ್ತವ ವಾಹಿನೀಂ।
08044008c ಅಭ್ಯದ್ರವಂತ ಸಂಕ್ರುದ್ಧಾಃ ಸಮರೇ ಜಿತಕಾಶಿನಃ।।
ಸಮರದಲ್ಲಿ ವಿಜಯೇಚ್ಛಿಗಳಾದ ಭೀಮಸೇನ, ಸಾತ್ಯಕಿ, ಶಿಖಂಡೀ, ಜನಮೇಜಯ, ಬಲವಾನ್ ಧೃಷ್ಟದ್ಯುಮ್ನ, ಎಲ್ಲ ಪ್ರಭದ್ರಕರೂ, ಪಾಂಚಾಲ ನರವ್ಯಾಘ್ರರೂ ಕ್ರುದ್ಧರಾಗಿ ಎಲ್ಲಕಡೆಗಳಿಂದ ನಿನ್ನ ವಾಹಿನಿಯನ್ನು ಆಕ್ರಮಣಿಸಿದರು.
08044009a ತಥೈವ ತಾವಕಾ ರಾಜನ್ಪಾಂಡವಾನಾಮನೀಕಿನೀಂ।
08044009c ಅಭ್ಯದ್ರವಂತ ತ್ವರಿತಾ ಜಿಘಾಂಸಂತೋ ಮಹಾರಥಾಃ।।
ರಾಜನ್! ಹಾಗೆಯೇ ನಿನ್ನಕಡೆಯ ಮಹಾರಥರೂ ತ್ವರೆಮಾಡಿ ಪಾಂಡವರ ಸೇನೆಗಳನ್ನು ವಧಿಸಲು ಬಯಸಿ ಅವರನ್ನು ಆಕ್ರಮಣಿಸಿದರು.
08044010a ರಥನಾಗಾಶ್ವಕಲಿಲಂ ಪತ್ತಿಧ್ವಜಸಮಾಕುಲಂ।
08044010c ಬಭೂವ ಪುರುಷವ್ಯಾಘ್ರ ಸೈನ್ಯಮದ್ಭುತದರ್ಶನಂ।।
ಪುರುಷವ್ಯಾಘ್ರ! ರಥ-ಆನೆ-ಕುದುರೆಗಳಿಂದ ಮಿಶ್ರಿತವಾಗಿ ಪದಾತಿ-ಧ್ವಜ ಸಮಾಕುಲಗಳ ಸೇನೆಗಳು ಅದ್ಭುತವಾಗಿ ಕಾಣುತ್ತಿದ್ದವು.
08044011a ಶಿಖಂಡೀ ಚ ಯಯೌ ಕರ್ಣಂ ಧೃಷ್ಟದ್ಯುಮ್ನಃ ಸುತಂ ತವ।
08044011c ದುಃಶಾಸನಂ ಮಹಾರಾಜ ಮಹತ್ಯಾ ಸೇನಯಾ ವೃತಂ।।
ಮಹಾರಾಜ! ಶಿಖಂಡಿಯು ಕರ್ಣನನ್ನೂ, ಧೃಷ್ತದ್ಯುಮ್ನನು ನಿನ್ನ ಮಗ ದುಃಶಾಸನನನ್ನೂ ಮಹಾ ಸೇನೆಯಿಂದ ಸುತ್ತುವರೆದು ಯುದ್ಧಮಾಡಿದರು.
08044012a ನಕುಲೋ ವೃಷಸೇನಂ ಚ ಚಿತ್ರಸೇನಂ ಯುಧಿಷ್ಠಿರಃ।
08044012c ಉಲೂಕಂ ಸಮರೇ ರಾಜನ್ಸಹದೇವಃ ಸಮಭ್ಯಯಾತ್।।
ರಾಜನ್! ಸಮರದಲ್ಲಿ ನಕುಲನು ವೃಷಸೇನನನ್ನೂ, ಯುಧಿಷ್ಠಿರನು ಚಿತ್ರಸೇನನನ್ನೂ, ಸಹದೇವನು ಉಲೂಕನನ್ನೂ ಎದುರಿಸಿ ಯುದ್ಧಮಾಡಿದರು.
08044013a ಸಾತ್ಯಕಿಃ ಶಕುನಿಂ ಚಾಪಿ ಭೀಮಸೇನಶ್ಚ ಕೌರವಾನ್।
08044013c ಅರ್ಜುನಂ ಚ ರಣೇ ಯತ್ತಂ ದ್ರೋಣಪುತ್ರೋ ಮಹಾರಥಃ।।
ಸಾತ್ಯಕಿಯು ಶಕುನಿಯನ್ನೂ, ಭೀಮಸೇನು ಕೌರವರನ್ನೂ ಮತ್ತು ರಣದಲ್ಲಿ ಅರ್ಜುನನು ಮಹಾರಥ ದ್ರೋಣಪುತ್ರನನ್ನೂ ಆಕ್ರಮಣಿಸಿದರು.
08044014a ಯುಧಾಮನ್ಯುಂ ಮಹೇಷ್ವಾಸಂ ಗೌತಮೋಽಭ್ಯಪತದ್ರಣೇ।
08044014c ಕೃತವರ್ಮಾ ಚ ಬಲವಾನುತ್ತಮೌಜಸಮಾದ್ರವತ್।।
ರಣದಲ್ಲಿ ಮಹೇಷ್ವಾಸ ಯುಧಾಮನ್ಯುವನ್ನು ಗೌತಮನೂ ಉತ್ತಮೌಜಸನನ್ನು ಬಲವಾನ್ ಕೃತವರ್ಮನೂ ಆಕ್ರಮಣಿಸಿದರು.
08044015a ಭೀಮಸೇನಃ ಕುರೂನ್ಸರ್ವಾನ್ಪುತ್ರಾಂಶ್ಚ ತವ ಮಾರಿಷ।
08044015c ಸಹಾನೀಕಾನ್ಮಹಾಬಾಹುರೇಕ ಏವಾಭ್ಯವಾರಯತ್।।
ಮಾರಿಷ! ಮಹಾಬಾಹು ಭೀಮಸೇನನು ಒಬ್ಬನೇ ಕುರುಗಳನ್ನೂ, ನಿನ್ನ ಪುತ್ರರೆಲ್ಲರನ್ನೂ ಅವರ ಸೇನೆಗಳೊಂದಿಗೆ ಆಕ್ರಮಣಿಸಿ ಯುದ್ಧಮಾಡಿದನು.
08044016a ಶಿಖಂಡೀ ಚ ತತಃ ಕರ್ಣಂ ವಿಚರಂತಮಭೀತವತ್।
08044016c ಭೀಷ್ಮಹಂತಾ ಮಹಾರಾಜ ವಾರಯಾಮಾಸ ಪತ್ರಿಭಿಃ।।
ಮಹಾರಾಜ! ಆಗ ಭೀಷ್ಮಹಂತಕ ಶಿಖಂಡಿಯು ನಿರ್ಭೀತನಾಗಿ ಸಂಚರಿಸುತ್ತಾ ಕರ್ಣನನ್ನು ಪತ್ರಿಗಳಿಂದ ತಡೆದನು.
08044017a ಪ್ರತಿರಬ್ಧಸ್ತತಃ ಕರ್ಣೋ ರೋಷಾತ್ಪ್ರಸ್ಫುರಿತಾಧರಃ।
08044017c ಶಿಖಂಡಿನಂ ತ್ರಿಭಿರ್ಬಾಣೈರ್ಭ್ರುವೋರ್ಮಧ್ಯೇ ವ್ಯತಾಡಯತ್।।
ಆಗ ರೋಷದಿಂದ ಕರ್ಣನು ತುಟಿಗಳನ್ನು ಅದುರಿಸುತ್ತಾ ಶಿಖಂಡಿಯನ್ನು ಮೂರು ಬಾಣಗಳಿಂದ ಅವನ ಹುಬ್ಬುಗಳ ಮಧ್ಯದಲ್ಲಿ ಪ್ರಹರಿಸಿದನು.
08044018a ಧಾರಯಂಸ್ತು ಸ ತಾನ್ಬಾಣಾಂ ಶಿಖಂಡೀ ಬಹ್ವಶೋಭತ।
08044018c ರಾಜತಃ ಪರ್ವತೋ ಯದ್ವತ್ತ್ರಿಭಿಃ ಶೃಂಗೈಃ ಸಮನ್ವಿತಃ।।
ಆ ಬಾಣಗಳನ್ನು ಧರಿಸಿದ ಶಿಖಂಡಿಯು ಮೂರು ಶೃಂಗಗಳಿಂದ ಸಮನ್ವಿತವಾದ ರಜತ ಪರ್ವತದಂತೆಯೇ ಬಹಳವಾಗಿ ಶೋಭಿಸಿದನು.
08044019a ಸೋಽತಿವಿದ್ಧೋ ಮಹೇಷ್ವಾಸಃ ಸೂತಪುತ್ರೇಣ ಸಂಯುಗೇ।
08044019c ಕರ್ಣಂ ವಿವ್ಯಾಧ ಸಮರೇ ನವತ್ಯಾ ನಿಶಿತೈಃ ಶರೈಃ।।
ಸಮರದಲ್ಲಿ ಸೂತಪುತ್ರನಿಂದ ಅತಿಯಾಗಿ ಗಾಯಗೊಂಡ ಮಹೇಷ್ವಾಸ ಶಿಖಂಡಿಯು ಕರ್ಣನನ್ನು ಸಮರದಲ್ಲಿ ತೊಂಭತ್ತು ನಿಶಿತ ಬಾಣಗಳಿಂದ ಪ್ರಹರಿಸಿದನು.
08044020a ತಸ್ಯ ಕರ್ಣೋ ಹಯಾನ್ ಹತ್ವಾ ಸಾರಥಿಂ ಚ ತ್ರಿಭಿಃ ಶರೈಃ।
08044020c ಉನ್ಮಮಾಥ ಧ್ವಜಂ ಚಾಸ್ಯ ಕ್ಷುರಪ್ರೇಣ ಮಹಾರಥಃ।।
ಮಹಾರಥ ಕರ್ಣನು ಮೂರು ಶರಗಳಿಂದ ಅವನ ಸಾರಥಿಯನ್ನು ಸಂಹರಿಸಿ ಕ್ಷುರಪ್ರದಿಂದ ಅವನ ಧ್ವಜವನ್ನೂ ಕಿತ್ತು ಹಾಕಿದನು.
08044021a ಹತಾಶ್ವಾತ್ತು ತತೋ ಯಾನಾದವಪ್ಲುತ್ಯ ಮಹಾರಥಃ।
08044021c ಶಕ್ತಿಂ ಚಿಕ್ಷೇಪ ಕರ್ಣಾಯ ಸಂಕ್ರುದ್ಧಃ ಶತ್ರುತಾಪನಃ।।
ಕುದುರೆಗಳು ಹತಗೊಳ್ಳಲು ಶತ್ರುತಾಪನ ಮಹಾರಥ ಶಿಖಂಡಿಯು ರಥದಿಂದ ಕೆಳಕ್ಕೆ ಹಾರಿ ಸಂಕ್ರುದ್ಧನಾಗಿ ಕರ್ಣನ ಮೇಲೆ ಶಕ್ತಿಯನ್ನು ಎಸೆದನು.
08044022a ತಾಂ ಚಿತ್ತ್ವಾ ಸಮರೇ ಕರ್ಣಸ್ತ್ರಿಭಿರ್ಭಾರತ ಸಾಯಕೈಃ।
08044022c ಶಿಖಂಡಿನಮಥಾವಿಧ್ಯನ್ನವಭಿರ್ನಿಶಿತೈಃ ಶರೈಃ।।
ಭಾರತ! ಸಮರದಲ್ಲಿ ಕರ್ಣನು ಸಾಯಕಗಳಿಂದ ಆ ಶಕ್ತಿಯನ್ನು ಮೂರು ಭಾಗಗಳನ್ನಾಗಿಸಿ ಒಂಭತ್ತು ನಿಶಿತ ಶರಗಳಿಂದ ಶಿಖಂಡಿಯನ್ನು ಹೊಡೆದನು.
08044023a ಕರ್ಣಚಾಪಚ್ಯುತಾನ್ಬಾಣಾನ್ವರ್ಜಯಂಸ್ತು ನರೋತ್ತಮಃ।
08044023c ಅಪಯಾತಸ್ತತಸ್ತೂರ್ಣಂ ಶಿಖಂಡೀ ಜಯತಾಂ ವರಃ।।
ವಿಜಯಿಗಳಲ್ಲಿ ಶ್ರೇಷ್ಠ ನರೋತ್ತಮ ಶಿಖಂಡಿಯು ಕರ್ಣನ ಬಾಣಗಳಿಂದ ತಪ್ಪಿಸಿಕೊಳ್ಳಲು ಕೂಡಲೇ ಯುದ್ಧವನ್ನು ಬಿಟ್ಟು ಹೊರಟುಹೋದನು.
08044024a ತತಃ ಕರ್ಣೋ ಮಹಾರಾಜ ಪಾಂಡುಸೈನ್ಯಾನ್ಯಶಾತಯತ್।
08044024c ತೂಲರಾಶಿಂ ಸಮಾಸಾದ್ಯ ಯಥಾ ವಾಯುರ್ಮಹಾಜವಃ।।
ಮಹಾರಾಜ! ಆಗ ಕರ್ಣನು ಮಹಾವೇಗದ ಭಿರುಗಾಳಿಯು ಹತ್ತಿಯ ರಾಶಿಯನ್ನು ಹೇಗೋ ಹಾಗೆ ಪಾಂಡುಸೇನೆಯನ್ನು ನಾಶಗೊಳಿಸತೊಡಗಿದನು.
08044025a ಧೃಷ್ಟದ್ಯುಮ್ನೋ ಮಹಾರಾಜ ತವ ಪುತ್ರೇಣ ಪೀಡಿತಃ।
08044025c ದುಃಶಾಸನಂ ತ್ರಿಭಿರ್ಬಾಣೈರಭ್ಯವಿಧ್ಯತ್ಸ್ತನಾಂತರೇ।।
ಮಹಾರಾಜ! ನಿನ್ನ ಪುತ್ರನಿಂದ ಪೀಡಿತನಾದ ಧೃಷ್ಟದ್ಯುಮ್ನನು ದುಃಶಾಸನನನ್ನು ಮೂರು ಬಾಣಗಳಿಂದ ವಕ್ಷಸ್ಥಳಕ್ಕೆ ಹೊಡೆದನು.
08044026a ತಸ್ಯ ದುಃಶಾಸನೋ ಬಾಹುಂ ಸವ್ಯಂ ವಿವ್ಯಾಧ ಮಾರಿಷ।
08044026c ಶಿತೇನ ರುಕ್ಮಪುಂಖೇನ ಭಲ್ಲೇನ ನತಪರ್ವಣಾ।।
ಮಾರಿಷ! ಆಗ ದುಃಶಾಸನನು ರುಕ್ಮಪುಂಖಗಳುಳ್ಳ ನಿಶಿತ ನತಪರ್ವಣ ಭಲ್ಲದಿಂದ ಧೃಷ್ಟದ್ಯುಮ್ನನ ಎಡತೋಲನ್ನು ಪ್ರಹರಿಸಿದನು.
08044027a ಧೃಷ್ಟದ್ಯುಮ್ನಸ್ತು ನಿರ್ವಿದ್ಧಃ ಶರಂ ಘೋರಮಮರ್ಷಣಃ।
08044027c ದುಃಶಾಸನಾಯ ಸಂಕ್ರುದ್ಧಃ ಪ್ರೇಷಯಾಮಾಸ ಭಾರತ।।
ಭಾರತ! ಶರದಿಂದ ಗಾಯಗೊಂಡ ಅಮರ್ಷಣ ಧೃಷ್ಟದ್ಯುಮ್ನನಾದರೋ ಕ್ರುದ್ಧನಾಗಿ ದುಃಶಾಸನನ ಮೇಲೆ ಘೋರ ಶರವನ್ನು ಪ್ರಯೋಗಿಸಿದನು.
08044028a ಆಪತಂತಂ ಮಹಾವೇಗಂ ಧೃಷ್ಟದ್ಯುಮ್ನಸಮೀರಿತಂ।
08044028c ಶರೈಶ್ಚಿಚ್ಚೇದ ಪುತ್ರಸ್ತೇ ತ್ರಿಭಿರೇವ ವಿಶಾಂ ಪತೇ।।
ವಿಶಾಂಪತೇ! ಮಹಾವೇಗದಲ್ಲಿ ಬಂದು ಬೀಳುತ್ತಿದ್ದ ಧೃಷ್ಟದ್ಯುಮ್ನನು ಪ್ರಯೋಗಿಸಿದ್ದ ಆ ಶರವನ್ನು ನಿನ್ನ ಪುತ್ರನು ಮೂರು ಭಾಗಗಳನ್ನಾಗಿ ತುಂಡರಿಸಿದನು.
08044029a ಅಥಾಪರೈಃ ಸಪ್ತದಶೈರ್ಭಲ್ಲೈಃ ಕನಕಭೂಷಣೈಃ।
08044029c ಧೃಷ್ಟದ್ಯುಮ್ನಂ ಸಮಾಸಾದ್ಯ ಬಾಹ್ವೋರುರಸಿ ಚಾರ್ದಯತ್।।
ಆಗ ಅನ್ಯ ಕನಕಬೂಷಣ ಹದಿನೇಳು ಭಲ್ಲಗಳಿಂದ ದುಃಶಾಸನನು ಧೃಷ್ಟದ್ಯುಮ್ನನನ್ನು ಸಮೀಪಿಸಿ ಅವನ ಬಾಹುಗಳು ಮತ್ತು ಎದೆಗೆ ಗುರಿಯಿಟ್ಟು ಹೊಡೆದನು.
08044030a ತತಃ ಸ ಪಾರ್ಷತಃ ಕ್ರುದ್ಧೋ ಧನುಶ್ಚಿಚ್ಚೇದ ಮಾರಿಷ।
08044030c ಕ್ಷುರಪ್ರೇಣ ಸುತೀಕ್ಷ್ಣೇನ ತತ ಉಚ್ಚುಕ್ರುಶುರ್ಜನಾಃ।।
ಮಾರಿಷ! ಆಗ ಕ್ರುದ್ಧನಾದ ಪಾರ್ಷತನು ತೀಕ್ಷ್ಣ ಕ್ಷುರಪ್ರದಿಂದ ಅವನ ಧನುಸ್ಸನ್ನು ತುಂಡರಿಸಿದನು. ಆಗ ಜನರು ಜೋರಾಗಿ ಕೂಗಿಕೊಂಡರು.
08044031a ಅಥಾನ್ಯದ್ಧನುರಾದಾಯ ಪುತ್ರಸ್ತೇ ಭರತರ್ಷಭ।
08044031c ಧೃಷ್ಟದ್ಯುಮ್ನಂ ಶರವ್ರಾತೈಃ ಸಮಂತಾತ್ಪರ್ಯವಾರಯತ್।।
ಭರತರ್ಷಭ! ಆಗ ನಿನ್ನ ಮಗನು ಅನ್ಯ ಧನುಸ್ಸನ್ನು ಎತ್ತಿಕೊಂಡು ಶರವ್ರಾತಗಳಿಂದ ಧೃಷ್ಟದ್ಯುಮ್ನನನ್ನು ಎಲ್ಲಕಡೆಗಳಿಂದ ಸುತ್ತುವರೆದನು.
08044032a ತವ ಪುತ್ರಸ್ಯ ತೇ ದೃಷ್ಟ್ವಾ ವಿಕ್ರಮಂ ತಂ ಮಹಾತ್ಮನಃ।
08044032c ವ್ಯಹಸಂತ ರಣೇ ಯೋಧಾಃ ಸಿದ್ಧಾಶ್ಚಾಪ್ಸರಸಾಂ ಗಣಾಃ।।
ನಿನ್ನ ಪುತ್ರ ಮಹಾತ್ಮನ ಆ ವಿಕ್ರಮವನ್ನು ನೋಡಿ ರಣದಲ್ಲಿದ್ದ ಯೋಧರೂ, ಸಿದ್ಧ-ಅಪ್ಸರ ಗಣಗಳೂ ವಿಸ್ಮಿತರಾದರು.
08044033a ತತಃ ಪ್ರವವೃತೇ ಯುದ್ಧಂ ತಾವಕಾನಾಂ ಪರೈಃ ಸಹ।
08044033c ಘೋರಂ ಪ್ರಾಣಭೃತಾಂ ಕಾಲೇ ಘೋರರೂಪಂ ಪರಂತಪ।।
ಪರಂತಪ! ಆಗ ನಿನ್ನವರ ಮತ್ತು ಶತ್ರುಗಳ ನಡುವೆ ಘೋರವಾದ, ಸಮಸ್ತಪ್ರಾಣಿಗಳಿಗೂ ಘೋರರೂಪೀ ಯುದ್ಧವು ನಡೆಯಿತು.
08044034a ನಕುಲಂ ವೃಷಸೇನಸ್ತು ವಿದ್ಧ್ವಾ ಪಂಚಭಿರಾಯಸೈಃ।
08044034c ಪಿತುಃ ಸಮೀಪೇ ತಿಷ್ಠಂತಂ ತ್ರಿಭಿರನ್ಯೈರವಿಧ್ಯತ।।
ವೃಷಸೇನನಾದರೋ ತಂದೆಯ ಸಮೀಪದಲ್ಲಿ ನಿಂತಿದ್ದ ನಕುಲನನ್ನು ಐದು ಆಯಸಗಳಿಂದ ಹೊಡೆದು ಅನ್ಯ ಮೂರು ಶರಗಳಿಂದ ಹೊಡೆದನು.
08044035a ನಕುಲಸ್ತು ತತಃ ಕ್ರುದ್ಧೋ ವೃಷಸೇನಂ ಸ್ಮಯನ್ನಿವ।
08044035c ನಾರಾಚೇನ ಸುತೀಕ್ಷ್ಣೇನ ವಿವ್ಯಾಧ ಹೃದಯೇ ದೃಢಂ।।
ಆಗ ನಕುಲನಾದರೋ ಕ್ರುದ್ಧನಾಗಿ ನಗುತ್ತಿರುವನೋ ಎನ್ನುವಂತೆ ತೀಕ್ಷ್ಣ ನಾರಾಚದಿಂದ ವೃಷಸೇನನ ಹೃದಯಕ್ಕೆ ದೃಢವಾಗಿ ಹೊಡೆದನು.
08044036a ಸೋಽತಿವಿದ್ಧೋ ಬಲವತಾ ಶತ್ರುಣಾ ಶತ್ರುಕರ್ಶನಃ।
08044036c ಶತ್ರುಂ ವಿವ್ಯಾಧ ವಿಂಶತ್ಯಾ ಸ ಚ ತಂ ಪಂಚಭಿಃ ಶರೈಃ।।
ಶತ್ರುವಿನಿಂದ ಅತಿ ಬಲವತ್ತಾಗಿ ಪ್ರಹರಿಸಲ್ಪಟ್ಟ ಶತ್ರುಕರ್ಶನ ವೃಷಸೇನನು ಶತ್ರು ನಕುಲನನ್ನು ಇಪ್ಪತ್ತು ಬಾಣಗಳಿಂದ ಪ್ರಹರಿಸಲು ನಕುಲನೂ ಅವನನ್ನು ಐದು ಶರಗಳಿಂದ ಪ್ರಹರಿಸಿದನು.
08044037a ತತಃ ಶರಸಹಸ್ರೇಣ ತಾವುಭೌ ಪುರುಷರ್ಷಭೌ।
08044037c ಅನ್ಯೋನ್ಯಮಾಚ್ಚಾದಯತಾಮಥಾಭಜ್ಯತ ವಾಹಿನೀ।।
ಆಗ ಆ ಇಬ್ಬರು ಪುರುಷರ್ಷಭರೂ ಅನ್ಯೋನ್ಯರನ್ನು ಸಹಸ್ರ ಶರಗಳಿಂದ ಮುಚ್ಚಿಬಿಟ್ಟರು. ಆಗ ಕುರುಸೇನೆಯು ಭಗ್ನವಾಗಿ ಹೋಯಿತು.
08044038a ದೃಷ್ಟ್ವಾ ತು ಪ್ರದ್ರುತಾಂ ಸೇನಾಂ ಧಾರ್ತರಾಷ್ಟ್ರಸ್ಯ ಸೂತಜಃ।
08044038c ನಿವಾರಯಾಮಾಸ ಬಲಾದನುಪತ್ಯ ವಿಶಾಂ ಪತೇ।
08044038e ನಿವೃತ್ತೇ ತು ತತಃ ಕರ್ಣೇ ನಕುಲಃ ಕೌರವಾನ್ ಯಯೌ।।
ವಿಶಾಂಪತೇ! ಧಾರ್ತರಾಷ್ಟ್ರರ ಸೇನೆಯು ಓಡಿಹೋಗುತ್ತಿರುವುದನ್ನು ನೋಡಿ ಸೂತಜನು ಬಲವನ್ನುಪಯೋಗಿಸಿ ತಡೆದನು. ಕರ್ಣನು ಹೊರಟುಹೋಗಲು ನಕುಲನು ಕೌರವಸೇನೆಯೆಡೆಗೆ ನುಗ್ಗಿದನು.
08044039a ಕರ್ಣಪುತ್ರಸ್ತು ಸಮರೇ ಹಿತ್ವಾ ನಕುಲಮೇವ ತು।
08044039c ಜುಗೋಪ ಚಕ್ರಂ ತ್ವರಿತಂ ರಾಧೇಯಸ್ಯೈವ ಮಾರಿಷ।।
ಮಾರಿಷ! ಕರ್ಣಪುತ್ರನಾದರೋ ನಕುಲನನ್ನು ಸಮರದಲ್ಲಿ ಬಿಟ್ಟುಬಿಟ್ಟು ತ್ವರೆಮಾಡಿ ರಾಧೇಯನನ್ನು ಹಿಂಬಾಲಿಸಿ ಹೋಗಿ ಅವನ ಚಕ್ರರಕ್ಷಣೆಯಲ್ಲಿ ತೊಡಗಿದನು.
08044040a ಉಲೂಕಸ್ತು ರಣೇ ಕ್ರುದ್ಧಃ ಸಹದೇವೇನ ವಾರಿತಃ।
08044040c ತಸ್ಯಾಶ್ವಾಂಶ್ಚತುರೋ ಹತ್ವಾ ಸಹದೇವಃ ಪ್ರತಾಪವಾನ್।
08044040e ಸಾರಥಿಂ ಪ್ರೇಷಯಾಮಾಸ ಯಮಸ್ಯ ಸದನಂ ಪ್ರತಿ।।
ಉಲೂಕನಾದರೋ ರಣದಲ್ಲಿ ಸಹದೇವನಿಂದ ತಡೆಯಲ್ಪಟ್ಟು ಕ್ರುದ್ಧನಾದನು. ಪ್ರತಾಪವಾನ್ ಸಹದೇವನು ಅವನ ನಾಲ್ಕು ಕುದುರೆಗಳನ್ನು ಸಂಹರಿಸಿ ಸಾರಥಿಯನ್ನು ಯಮನ ಸದನದ ಕಡೆ ಕಳುಹಿಸಿದನು.
08044041a ಉಲೂಕಸ್ತು ತತೋ ಯಾನಾದವಪ್ಲುತ್ಯ ವಿಶಾಂ ಪತೇ।
08044041c ತ್ರಿಗರ್ತಾನಾಂ ಬಲಂ ಪೂರ್ಣಂ ಜಗಾಮ ಪಿತೃನಂದನಃ।।
ವಿಶಾಂಪತೇ! ಆಗ ಪಿತೃನಂದನ ಉಲೂಕನಾದರೋ ರಥದಿಂದ ಕೆಳಕ್ಕೆ ಹಾರಿ ತ್ರಿಗರ್ತರ ಮಹಾಸೇನೆಯೊಳಗೆ ನುಸುಳಿಕೊಂಡನು.
08044042a ಸಾತ್ಯಕಿಃ ಶಕುನಿಂ ವಿದ್ಧ್ವಾ ವಿಂಶತ್ಯಾ ನಿಶಿತೈಃ ಶರೈಃ।
08044042c ಧ್ವಜಂ ಚಿಚ್ಚೇದ ಭಲ್ಲೇನ ಸೌಬಲಸ್ಯ ಹಸನ್ನಿವ।।
ಸಾತ್ಯಕಿಯು ಶಕುನಿಯನ್ನು ಇಪ್ಪತ್ತು ನಿಶಿತ ಶರಗಳಿಂದ ಹೊಡೆದು ನಗುತ್ತಿರುವನ್ನೋ ಎನ್ನುವಂತೆ ಭಲ್ಲದಿಂದ ಸೌಬಲನ ಧ್ವಜವನ್ನು ತುಂಡರಿಸಿದನು.
08044043a ಸೌಬಲಸ್ತಸ್ಯ ಸಮರೇ ಕ್ರುದ್ಧೋ ರಾಜನ್ಪ್ರತಾಪವಾನ್।
08044043c ವಿದಾರ್ಯ ಕವಚಂ ಭೂಯೋ ಧ್ವಜಂ ಚಿಚ್ಚೇದ ಕಾಂಚನಂ।।
ರಾಜನ್! ಸಮರದಲ್ಲಿ ಕ್ರುದ್ಧನಾದ ಪ್ರತಾಪವಾನ್ ಸೌಬಲನು ಅವನ ಕವಚವನ್ನು ಸೀಳಿ ಪುನಃ ಅವನ ಕಾಂಚನ ಧ್ವಜವನ್ನು ತುಂಡರಿಸಿದನು.
08044044a ಅಥೈನಂ ನಿಶಿತೈರ್ಬಾಣೈಃ ಸಾತ್ಯಕಿಃ ಪ್ರತ್ಯವಿಧ್ಯತ।
08044044c ಸಾರಥಿಂ ಚ ಮಹಾರಾಜ ತ್ರಿಭಿರೇವ ಸಮಾರ್ದಯತ್।
08044044e ಅಥಾಸ್ಯ ವಾಹಾಂಸ್ತ್ವರಿತಃ ಶರೈರ್ನಿನ್ಯೇ ಯಮಕ್ಷಯಂ।।
ಮಹಾರಾಜ! ಕೂಡಲೇ ಸಾತ್ಯಕಿಯು ನಿಶಿತ ಬಾಣಗಳಿಂದ ಅವನನ್ನು ಹೊಡೆದು ಮೂರು ಬಾಣಗಳಿಂದ ಅವನ ಸಾರಥಿಯನ್ನು ಹೊಡೆದನು. ಕೂಡಲೇ ತ್ವರೆಮಾಡಿ ಶರಗಳಿಂದ ಅವನ ಕುದುರೆಗಳನ್ನು ಸಂಹರಿಸಿದನು.
08044045a ತತೋಽವಪ್ಲುತ್ಯ ಸಹಸಾ ಶಕುನಿರ್ಭರತರ್ಷಭ।
08044045c ಆರುರೋಹ ರಥಂ ತೂರ್ಣಮುಲೂಕಸ್ಯ ಮಹಾರಥಃ।
08044045e ಅಪೋವಾಹಾಥ ಶೀಘ್ರಂ ಸ ಶೈನೇಯಾದ್ಯುದ್ಧಶಾಲಿನಃ।।
ಭರತರ್ಷಭ! ಅನಂತರ ಬೇಗನೇ ಕೆಳಕ್ಕೆ ಹಾರಿ ಮಹಾರಥ ಶಕುನಿಯು ಉಲೂಕನ ರಥವನ್ನೇರಿದನು. ಆ ಯುದ್ಧಶಾಲಿನಿಯು ಶೈನೇಯನಿಂದ ಬಹುದೂರ ಹೊರಟುಹೋದನು.
08044046a ಸಾತ್ಯಕಿಸ್ತು ರಣೇ ರಾಜಂಸ್ತಾವಕಾನಾಮನೀಕಿನೀಂ।
08044046c ಅಭಿದುದ್ರಾವ ವೇಗೇನ ತತೋಽನೀಕಂ ಅಭಿದ್ಯತ।।
ರಾಜನ್! ಸಾತ್ಯಕಿಯಾದರೋ ರಣದಲ್ಲಿ ನಿನ್ನ ಸೇನೆಯನ್ನು ವೇಗದಿಂದ ಆಕ್ರಮಣಿಸಿದನು. ಆಗ ನಿನ್ನ ಸೇನೆಯು ಭಗ್ನವಾಯಿತು.
08044047a ಶೈನೇಯಶರನುನ್ನಂ ತು ತತಃ ಸೈನ್ಯಂ ವಿಶಾಂ ಪತೇ।
08044047c ಭೇಜೇ ದಶ ದಿಶಸ್ತೂರ್ಣಂ ನ್ಯಪತಚ್ಚ ಗತಾಸುವತ್।।
ವಿಶಾಂಪತೇ! ಶೈನೇಯನ ಶರದಿಂದ ಗಾಯಗೊಂಡ ಸೈನ್ಯವು ಬೇಗನೇ ಹತ್ತುದಿಕ್ಕುಗಳಲ್ಲಿಯೂ ಓಡಿಹೋಯಿತು ಮತ್ತು ಪ್ರಾಣಗಳನ್ನು ಕಳೆದುಕೊಂಡವರಂತೆ ಮುಗ್ಗರಿಸಿ ಬೀಳುತ್ತಿತ್ತು.
08044048a ಭೀಮಸೇನಂ ತವ ಸುತೋ ವಾರಯಾಮಾಸ ಸಂಯುಗೇ।
08044048c ತಂ ತು ಭೀಮೋ ಮುಹೂರ್ತೇನ ವ್ಯಶ್ವಸೂತರಥಧ್ವಜಂ।
08044048e ಚಕ್ರೇ ಲೋಕೇಶ್ವರಂ ತತ್ರ ತೇನಾತುಷ್ಯಂತ ಚಾರಣಾಃ।।
ನಿನ್ನ ಮಗನು ಸಂಯುಗದಲ್ಲಿ ಭೀಮಸೇನನನ್ನು ತಡೆಯುತ್ತಿದ್ದನು. ಮುಹೂರ್ತಮಾತ್ರದಲ್ಲಿ ಭೀಮನು ಲೋಕೇಶ್ವರ ದುರ್ಯೋಧನನನ್ನು ಅಶ್ವ-ಸೂತ-ರಥಗಳಿಂದ ವಿಹೀನನನ್ನಾಗಿ ಮಾಡಿದನು. ಅದರಿಂದ ಚಾರಣರು ಸಂತುಷ್ಟರಾದರು.
08044049a ತತೋಽಪಾಯಾನ್ನೃಪಸ್ತತ್ರ ಭೀಮಸೇನಸ್ಯ ಗೋಚರಾತ್।
08044049c ಕುರುಸೈನ್ಯಂ ತತಃ ಸರ್ವಂ ಭೀಮಸೇನಮುಪಾದ್ರವತ್।
08044049e ತತ್ರ ರಾವೋ ಮಹಾನಾಸೀದ್ಭೀಮಮೇಕಂ ಜಿಘಾಂಸತಾಂ।।
ಆಗ ನೃಪನು ಭೀಮಸೇನನ ದೃಷ್ಟಿಯಿಂದ ಪಲಾಯನಗೈದನು. ಆಗ ಭೀಮಸೇನನು ಕುರುಸೈನ್ಯ ಸರ್ವವನ್ನೂ ಆಕ್ರಮಣಿಸಿದನು. ಭೀಮನೊಬ್ಬನಿಂದಲೇ ವಧಿಸಲ್ಪಡುತ್ತಿದ್ದ ಅಲ್ಲಿ ಮಹಾ ಕೂಗು ಕೇಳಿಬಂದಿತು.
08044050a ಯುಧಾಮನ್ಯುಃ ಕೃಪಂ ವಿದ್ಧ್ವಾ ಧನುರಸ್ಯಾಶು ಚಿಚ್ಚಿದೇ।
08044050c ಅಥಾನ್ಯದ್ಧನುರಾದಾಯ ಕೃಪಃ ಶಸ್ತ್ರಭೃತಾಂ ವರಃ।।
ಯುಧಾಮನ್ಯುವು ಕೃಪನನ್ನು ಪ್ರಹರಿಸಿ ಅವನ ಧನುಸ್ಸನ್ನೂ ಕತ್ತರಿಸಿದನು. ಕೂಡಲೇ ಶಸ್ತ್ರಭೃತರಲ್ಲಿ ಶ್ರೇಷ್ಠ ಕೃಪನು ಅನ್ಯ ಧನುಸ್ಸನ್ನು ಎತ್ತಿಕೊಂಡನು.
08044051a ಯುಧಾಮನ್ಯೋರ್ಧ್ವಜಂ ಸೂತಂ ಚತ್ರಂ ಚಾಪಾತಯತ್ ಕ್ಷಿತೌ।
08044051c ತತೋಽಪಾಯಾದ್ರಥೇನೈವ ಯುಧಾಮನ್ಯುರ್ಮಹಾರಥಃ।।
ಕೃಪನು ಯುಧಾಮನ್ಯುವಿನ ಧ್ವಜವನ್ನೂ ಸೂತನನ್ನೂ ಚತ್ರವನ್ನೂ ಭೂಮಿಯ ಮೇಲೆ ಉರುಳಿಸಿದನು. ಆಗ ಮಹಾರಥ ಯುಧಾಮನ್ಯುವು ಅದೇ ರಥದಲ್ಲಿಯೇ ಪಲಾಯನಗೈದನು.
08044052a ಉತ್ತಮೌಜಾಸ್ತು ಹಾರ್ದಿಕ್ಯಂ ಶರೈರ್ಭೀಮಪರಾಕ್ರಮಂ।
08044052c ಚಾದಯಾಮಾಸ ಸಹಸಾ ಮೇಘೋ ವೃಷ್ಟ್ಯಾ ಯಥಾಚಲಂ।।
ಉತ್ತಮೌಜಸನಾದರೋ ಕೂಡಲೇ ಭೀಮಪರಾಕ್ರಮಿ ಹಾರ್ದಿಕ್ಯನನ್ನು ಶರಗಳಿಂದ ಮೇಘಗಳು ಪರ್ವತವನ್ನು ಮಳೆಯಿಂದ ಮುಚ್ಚುವಂತೆ ಮುಚ್ಚಿಬಿಟ್ಟನು.
08044053a ತದ್ಯುದ್ಧಂ ಸುಮಹಚ್ಚಾಸೀದ್ಘೋರರೂಪಂ ಪರಂತಪ।
08044053c ಯಾದೃಶಂ ನ ಮಯಾ ಯುದ್ಧಂ ದೃಷ್ಟಪೂರ್ವಂ ವಿಶಾಂ ಪತೇ।।
ಪರಂತಪ! ವಿಶಾಂಪತೇ! ಆ ಮಹಾಯುದ್ಧವು ಘೋರರೂಪದ್ದಾಗಿತ್ತು. ಅಂತಹ ಯುದ್ಧವನ್ನು ನಾನು ಇದರ ಮೊದಲು ನೋಡಿರಲಿಲ್ಲ.
08044054a ಕೃತವರ್ಮಾ ತತೋ ರಾಜನ್ನುತ್ತಮೌಜಸಮಾಹವೇ।
08044054c ಹೃದಿ ವಿವ್ಯಾಧ ಸ ತದಾ ರಥೋಪಸ್ಥ ಉಪಾವಿಶತ್।।
ರಾಜನ್! ಆಗ ಯುದ್ಧದಲ್ಲಿ ಕೃತವರ್ಮನು ಉತ್ತಮೌಜಸನ ಹೃದಯಕ್ಕೆ ಹೊಡೆಯಲು ಅವನು ರಥದಲ್ಲಿಯೇ ಕುಳಿತುಕೊಂಡನು.
08044055a ಸಾರಥಿಸ್ತಮಪೋವಾಹ ರಥೇನ ರಥಿನಾಂ ವರಂ।
08044055c ತತಸ್ತು ಸತ್ವರಂ ರಾಜನ್ಪಾಂಡುಸೈನ್ಯಮುಪಾದ್ರವತ್।।
ರಾಜನ್! ಅವನ ಸಾರಥಿಯು ಆ ರಥಿಗಳಲ್ಲಿ ಶ್ರೇಷ್ಠನನ್ನು ಅಲ್ಲಿಂದ ಒಯ್ದುಬಿಟ್ಟನು. ಆಗ ಕೃತವರ್ಮನು ಬಲಶಾಲೀ ಪಾಂಡುಸೇನೆಯನ್ನು ಆಕ್ರಮಣಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಚತುಶ್ಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ನಲ್ವತ್ನಾಲ್ಕನೇ ಅಧ್ಯಾಯವು.