ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 43
ಸಾರ
ಕೃಷ್ಣನು ಅರ್ಜುನನಿಗೆ ಯುಧಿಷ್ಠಿರನು ಪಲಾಯನಮಾಡುತ್ತಿರುವುದನ್ನೂ, ಕರ್ಣನು ಪಾಂಡವ ಸೇನೆಯನ್ನು ಮತ್ತು ಭೀಮಸೇನನು ಕೌರವ ಸೇನೆಯನ್ನು ಧ್ವಂಸಮಾಡುತ್ತಿರುವುದನ್ನು ತೋರಿಸುತ್ತಾ ರಣಭೂಮಿಯಲ್ಲಿ ಮುಂದೆ ಸಾಗುವುದು (1-78).
08043001 ಸಂಜಯ ಉವಾಚ।
08043001a ಏತಸ್ಮಿನ್ನಂತರೇ ಕೃಷ್ಣಃ ಪಾರ್ಥಂ ವಚನಮಬ್ರವೀತ್।
08043001c ದರ್ಶಯನ್ನಿವ ಕೌಂತೇಯಂ ಧರ್ಮರಾಜಂ ಯುಧಿಷ್ಠಿರಂ।।
ಸಂಜಯನು ಹೇಳಿದನು: “ಈ ಮಧ್ಯದಲ್ಲಿ ಕೌಂತೇಯ ಧರ್ಮರಾಜ ಯುಧಿಷ್ಠಿರನನ್ನು ತೋರಿಸುತ್ತಿರುವನೋ ಎನ್ನುವಂತೆ ಕೃಷ್ಣನು ಪಾರ್ಥನಿಗೆ ಈ ಮಾತನ್ನಾಡಿದನು:
08043002a ಏಷ ಪಾಂಡವ ತೇ ಭ್ರಾತಾ ಧಾರ್ತರಾಷ್ಟ್ರೈರ್ಮಹಾಬಲೈಃ।
08043002c ಜಿಘಾಂಸುಭಿರ್ಮಹೇಷ್ವಾಸೈರ್ದ್ರುತಂ ಪಾರ್ಥಾನುಸರ್ಯತೇ।।
“ಪಾಂಡವ! ಇಗೋ ನಿನ್ನ ಭ್ರಾತ ಪಾರ್ಥನನ್ನು ಸಂಹರಿಸಲು ಬಯಸಿ ಮಹಾಬಲ ಮಹೇಷ್ವಾಸ ಧಾರ್ತರಾಷ್ಟ್ರರು ವೇಗದಿಂದ ಬೆನ್ನಟ್ಟಿಕೊಂಡು ವೇಗದಿಂದ ಹೋಗುತ್ತಿದ್ದಾರೆ!
08043003a ತಥಾನುಯಾಂತಿ ಸಂರಬ್ಧಾಃ ಪಾಂಚಾಲಾ ಯುದ್ಧದುರ್ಮದಾಃ।
08043003c ಯುಧಿಷ್ಠಿರಂ ಮಹಾತ್ಮಾನಂ ಪರೀಪ್ಸಂತೋ ಮಹಾಜವಾಃ।।
ಹಾಗೆಯೇ ಮಹಾತ್ಮ ಯುಧಿಷ್ಠಿರನನ್ನು ರಕ್ಷಿಸುತ್ತಾ ಮಹಾವೇಗದ ಯುದ್ಧದುರ್ಮದ ಪಾಂಚಾಲರು ಸಂರಬ್ಧರಾಗಿ ಅವನನ್ನು ಅನುಸರಿಸಿ ಹೋಗುತ್ತಿದ್ದಾರೆ!
08043004a ಏಷ ದುರ್ಯೋಧನಃ ಪಾರ್ಥ ರಥಾನೀಕೇನ ದಂಶಿತಃ।
08043004c ರಾಜಾ ಸರ್ವಸ್ಯ ಲೋಕಸ್ಯ ರಾಜಾನಮನುಧಾವತಿ।।
08043005a ಜಿಘಾಂಸುಃ ಪುರುಷವ್ಯಾಘ್ರಂ ಭ್ರಾತೃಭಿಃ ಸಹಿತೋ ಬಲೀ।
08043005c ಆಶೀವಿಷಸಮಸ್ಪರ್ಶೈಃ ಸರ್ವಯುದ್ಧವಿಶಾರದೈಃ।।
ಪಾರ್ಥ! ಇಗೋ ಕವಚಧಾರಿ ಸರ್ವ ಲೋಕದ ರಾಜ ಬಲಶಾಲೀ ದುರ್ಯೋಧನನು ವಿಷಸರ್ಪದ ಸ್ಪರ್ಷಕ್ಕೆ ಸಮಾನ ಸ್ಪರ್ಶವುಳ್ಳ ಯುದ್ಧವಿಶಾರದರಾದ ಸಹೋದರರೆಲ್ಲರನ್ನೊಡಗೂಡಿ ರಥಾನೀಕದೊಂದಿಗೆ ಪುರುಷವ್ಯಾಘ್ರ ರಾಜ ಯುಧಿಷ್ಠಿರನನ್ನು ಸಂಹರಿಸಲು ಬಯಸಿ ಅವನನ್ನೇ ಹಿಂಬಾಲಿಸುತ್ತಿದ್ದಾನೆ!
08043006a ಏತೇ ಜಿಘೃಕ್ಷವೋ ಯಾಂತಿ ದ್ವಿಪಾಶ್ವರಥಪತ್ತಯಃ।
08043006c ಯುಧಿಷ್ಠಿರಂ ಧಾರ್ತರಾಷ್ಟ್ರಾ ರತ್ನೋತ್ತಮಮಿವಾರ್ಥಿನಃ।।
ಇಗೋ! ಯಾಚಕನು ಐಶ್ವರ್ಯವಂತನನ್ನು ಅರಸಿಕೊಂಡು ಹೋಗುವಂತೆ ಧಾರ್ತರಾಷ್ಟ್ರರು ಆನೆ-ಕುದುರೆ-ರಥ-ಪದಾತಿಗಳೊಂದಿಗೆ ಯುಧಿಷ್ಠಿರನನ್ನು ಹಿಡಿಯಲು ಹೋಗುತ್ತಿದ್ದಾರೆ!
08043007a ಪಶ್ಯ ಸಾತ್ವತಭೀಮಾಭ್ಯಾಂ ನಿರುದ್ಧಾಧಿಷ್ಠಿತಃ ಪ್ರಭುಃ।
08043007c ಜಿಹೀರ್ಷವೋಽಮೃತಂ ದೈತ್ಯಾಃ ಶಕ್ರಾಗ್ನಿಭ್ಯಾಮಿವಾವಶಾಃ।।
ಅಮೃತವನ್ನು ಅಪಹರಿಸಲು ಬಯಸಿದ್ದ ದೈತ್ಯರನ್ನು ಶಕ್ರ-ಅಗ್ನಿಯರು ಹೇಗೋ ಹಾಗೆ ಅವರನ್ನು ಸಾತ್ವತ-ಭೀಮ ಇಬ್ಬರೂ ತಡೆಹಿಡಿದು ನಿಲ್ಲಿಸಿದರೂ ಅವರು ಪ್ರಭು ಯುಧಿಷ್ಠಿರನನ್ನು ಹಿಂಬಾಲಿಸಿ ಹೋಗುತ್ತಿದ್ದಾರೆ ನೋಡು!
08043008a ಏತೇ ಬಹುತ್ವಾತ್ತ್ವರಿತಾಃ ಪುನರ್ಗಚ್ಚಂತಿ ಪಾಂಡವಂ।
08043008c ಸಮುದ್ರಮಿವ ವಾರ್ಯೋಘಾಃ ಪ್ರಾವೃಟ್ಕಾಲೇ ಮಹಾರಥಾಃ।।
ವರ್ಷಾಕಾಲದಲ್ಲಿ ತುಂಬಿಹರಿಯುವ ಪ್ರವಾಹಗಳು ತಡೆಯಲ್ಪಟ್ಟರೂ ಸಮುದ್ರವನ್ನು ಸೇರುವಂತೆ ಈ ಮಹಾರಥರು ಬಹಳವಾಗಿ ತಡೆಯಲ್ಪಟ್ಟರೂ ಪುನಃ ಪುನಃ ಪಾಂಡವನಿರುವಲ್ಲಿಗೇ ಹೋಗುತ್ತಿದ್ದಾರೆ.
08043009a ನದಂತಃ ಸಿಂಹನಾದಾಂಶ್ಚ ಧಮಂತಶ್ಚಾಪಿ ವಾರಿಜಾನ್।
08043009c ಬಲವಂತೋ ಮಹೇಷ್ವಾಸಾ ವಿಧುನ್ವಂತೋ ಧನೂಂಷಿ ಚ।।
ಈ ಬಲವಂತ ಮಹೇಷ್ವಾಸರು ಸಿಂಹನಾದಗೈಯುತ್ತಿದ್ದಾರೆ. ಶಂಖಗಳನ್ನು ಊದುತ್ತಾ ಧನುಸ್ಸನ್ನು ಟೇಂಕರಿಸುತ್ತಾ ಹೋಗುತ್ತಿದ್ದಾರೆ!
08043010a ಮೃತ್ಯೋರ್ಮುಖಗತಂ ಮನ್ಯೇ ಕುಂತೀಪುತ್ರಂ ಯುಧಿಷ್ಠಿರಂ।
08043010c ಹುತಮಗ್ನೌ ಚ ಭದ್ರಂ ತೇ ದುರ್ಯೋಧನವಶಂ ಗತಂ।।
ನಿನಗೆ ಮಂಗಳವಾಗಲಿ! ಕುಂತೀಪುತ್ರ ಯುಧಿಷ್ಠಿರನು ಮೃತ್ಯುವಿನ ಬಾಯಿಗೆ ಸಿಲುಕಿದನೋ ಎಂದು ನನಗನ್ನಿಸುತ್ತಿದೆ. ಆಗ್ನಿಯಲ್ಲಿನ ಆಹುತಿಯಂತೆ ದುರ್ಯೋಧನನ ವಶವಾಗಿರಬಹುದು!
08043011a ಯಥಾಯುಕ್ತಮನೀಕಂ ಹಿ ಧಾರ್ತರಾಷ್ಟ್ರಸ್ಯ ಪಾಂಡವ।
08043011c ನಾಸ್ಯ ಶಕ್ರೋಽಪಿ ಮುಚ್ಯೇತ ಸಂಪ್ರಾಪ್ತೋ ಬಾಣಗೋಚರಂ।।
ಪಾಂಡವ! ಧಾರ್ತರಾಷ್ಟ್ರನ ಸೇನೆಯು ಯಾವರೀತಿಯಲ್ಲಿದೆಯೆಂದರೆ ಬಾಣಗಳಿಗೆ ಸಿಲುಕಿದವನು ಶಕ್ರನೇ ಆದರೂ ಅವನಿಗೆ ಬಿಡುಗಡೆಯಿರಲಿಕ್ಕಿಲ್ಲ.
08043012a ದುರ್ಯೋಧನಸ್ಯ ಶೂರಸ್ಯ ದ್ರೌಣೇಃ ಶಾರದ್ವತಸ್ಯ ಚ।
08043012c ಕರ್ಣಸ್ಯ ಚೇಷುವೇಗೋ ವೈ ಪರ್ವತಾನಪಿ ದಾರಯೇತ್।।
ಶೂರ ದುರ್ಯೋಧನ, ದ್ರೌಣಿ, ಶಾರದ್ವತ ಕೃಪ, ಮತ್ತು ಕರ್ಣರ ಬಾಣವೇಗಗಳು ಪರ್ವತಗಳನ್ನೂ ಸೀಳಬಲ್ಲವು!
08043013a ದುರ್ಯೋಧನಸ್ಯ ಶೂರಸ್ಯ ಶರೌಘಾಂ ಶೀಘ್ರಮಸ್ಯತಃ।
08043013c ಸಂಕ್ರುದ್ಧಸ್ಯಾಂತಕಸ್ಯೇವ ಕೋ ವೇಗಂ ಸಂಸಹೇದ್ರಣೇ।।
ಸಂಕ್ರುದ್ಧನಾದ ಅಂತಕನಂತಿರುವ ಶೂರ ದುರ್ಯೋಧನನು ಶೀಘ್ರಾತಿಶೀಘ್ರವಾಗಿ ಬಿಡುವ ಶರಸಮೂಹಗಳ ವೇಗವನ್ನು ರಣದಲ್ಲಿ ಯಾರು ತಾನೇ ಸಹಿಸಿಕೊಂಡಾರು?
08043014a ಕರ್ಣೇನ ಚ ಕೃತೋ ರಾಜಾ ವಿಮುಖಃ ಶತ್ರುತಾಪನಃ।
08043014c ಬಲವಾಽಲ್ಲಘುಹಸ್ತಶ್ಚ ಕೃತೀ ಯುದ್ಧವಿಶಾರದಃ।।
ಬಲವಾನ್ ಲಘುಹಸ್ತ ಯುದ್ಧವಿಶಾರದ ಶತ್ರುತಾಪನ ರಾಜಾ ಯುಧಿಷ್ಠಿರನು ಕರ್ಣನಿಂದ ವಿಮುಖನಾಗಿದ್ದಾನೆ.
08043015a ರಾಧೇಯಃ ಪಾಂಡವಶ್ರೇಷ್ಠಂ ಶಕ್ತಃ ಪೀಡಯಿತುಂ ರಣೇ।
08043015c ಸಹಿತೋ ಧೃತರಾಷ್ಟ್ರಸ್ಯ ಪುತ್ರೈಃ ಶೂರೋ ಮಹಾತ್ಮಭಿಃ।।
ಶೂರರಾದ ಮಹಾತ್ಮ ಧೃತರಾಷ್ಟ್ರ ಪುತ್ರರೊಂದಿಗೆ ರಾಧೇಯನು ರಣದಲ್ಲಿ ಪಾಂಡವಶ್ರೇಷ್ಠನನ್ನು ಪೀಡಿಸಲು ಸಮರ್ಥನಿದ್ದಾನೆ.
08043016a ತಸ್ಯೈವಂ ಯುಧ್ಯಮಾನಸ್ಯ ಸಂಗ್ರಾಮೇ ಸಂಯತಾತ್ಮನಃ।
08043016c ಅನ್ಯೈರಪಿ ಚ ಪಾರ್ಥಸ್ಯ ಹೃತಂ ವರ್ಮ ಮಹಾರಥೈಃ।।
ಅವರೊಂದಿಗೆ ಮತ್ತು ಇತರರೊಂದಿಗೆ ಸಂಗ್ರಾಮದಲ್ಲಿ ಆ ಸಂಯತಾತ್ಮ ಪಾರ್ಥನು ಹೋರಾಡುತ್ತಿರಲು ಇಗೋ ಅವನ ಕವಚವನ್ನು ಆ ಮಹಾರಥರು ಕತ್ತರಿಸಿದರು!
08043017a ಉಪವಾಸಕೃಶೋ ರಾಜಾ ಭೃಶಂ ಭರತಸತ್ತಮ।
08043017c ಬ್ರಾಹ್ಮೇ ಬಲೇ ಸ್ಥಿತೋ ಹ್ಯೇಷ ನ ಕ್ಷತ್ರೇಽತಿಬಲೇ ವಿಭೋ।।
ಭರತಸತ್ತಮ! ಉಪವಾಸಗಳಿಂದ ಕೃಶನಾಗಿರುವ ರಾಜಾ ವಿಭುವಲ್ಲಿ ಕೇವಲ ಬ್ರಹ್ಮಬಲವಿದೆಯೇ ಹೊರತು ಕ್ಷತ್ರಿಯನ ಅತಿಬಲವು ಇಲ್ಲವಾಗಿದೆ.
08043018a ನ ಜೀವತಿ ಮಹಾರಾಜೋ ಮನ್ಯೇ ಪಾರ್ಥ ಯುಧಿಷ್ಠಿರಃ।
08043018c ಯದ್ಭೀಮಸೇನಃ ಸಹತೇ ಸಿಂಹನಾದಮಮರ್ಷಣಃ।।
ಪಾರ್ಥ! ಕೌರವರ ಸಿಂಹನಾದವನ್ನು ಅಮರ್ಷಣ ಭೀಮಸೇನನು ಸಹಿಸಿಕೊಂಡಿದ್ದಾನಾದರೆ ಮಹಾರಾಜ ಯುಧಿಷ್ಠಿರನು ಇನ್ನು ಜೀವಿಸಿಲ್ಲ ಎಂದೇ ನನಗನ್ನಿಸುತ್ತದೆ.
08043019a ನರ್ದತಾಂ ಧಾರ್ತರಾಷ್ಟ್ರಾಣಾಂ ಪುನಃ ಪುನರರಿಂದಮ।
08043019c ಧಮತಾಂ ಚ ಮಹಾಶಂಖಾನ್ಸಂಗ್ರಾಮೇ ಜಿತಕಾಶಿನಾಂ।।
ಅರಿಂದಮ! ಧಾರ್ತರಾಷ್ಟ್ರರು ಪುನಃ ಪುನಃ ಗರ್ಜಿಸುತ್ತಿದ್ದಾರೆ. ಸಂಗ್ರಾಮದಲ್ಲಿ ಜಯವನ್ನು ಬಯಸಿದ ಅವರು ಮಹಾಶಂಖಗಳನ್ನು ಮೊಳಗಿಸುತ್ತಿದ್ದಾರೆ.
08043020a ಯುಧಿಷ್ಠಿರಂ ಪಾಂಡವೇಯಂ ಹತೇತಿ ಭರತರ್ಷಭ।
08043020c ಸಂಚೋದಯತ್ಯಸೌ ಕರ್ಣೋ ಧಾರ್ತರಾಷ್ಟ್ರಾನ್ಮಹಾಬಲಾನ್।।
ಭರತರ್ಷಭ! ಪಾಂಡವೇಯ ಯುಧಿಷ್ಠಿರನನ್ನು ಸಂಹರಿಸಿ ಎಂದು ಕರ್ಣನು ಧಾರ್ತರಾಷ್ಟ್ರ ಮಹಾಬಲರನ್ನು ಪ್ರಚೋದಿಸುತ್ತಲೇ ಇದ್ದಾನೆ!
08043021a ಸ್ಥೂಣಾಕರ್ಣೇಂದ್ರಜಾಲೇನ ಪಾರ್ಥ ಪಾಶುಪತೇನ ಚ।
08043021c ಪ್ರಚ್ಚಾದಯಂತೋ ರಾಜಾನಮನುಯಾಂತಿ ಮಹಾರಥಾಃ।
08043021e ಆತುರೋ ಮೇ ಮತೋ ರಾಜಾ ಸಂನಿಷೇವ್ಯಶ್ಚ ಭಾರತ।।
ಪಾರ್ಥ! ಸ್ಥೂಣಕರ್ಣ, ಇಂದ್ರಜಾಲ, ಮತ್ತು ಪಾಶುಪತಾಸ್ತ್ರಗಳಿಂದ ರಾಜನನ್ನು ಮುಸುಕುಹಾಕುತ್ತಾ ಮಹಾರಥರು ಹಿಂಬಾಲಿಸುತ್ತಿದ್ದಾರೆ. ಭಾರತ! ಈ ಸಮಯದಲ್ಲಿ ನಾವು ಅವನನ್ನು ರಕ್ಷಿಸಬೇಕು ಎಂದು ನನಗನ್ನಿಸುತ್ತದೆ.
08043022a ಯಥೈನಮನುವರ್ತಂತೇ ಪಾಂಚಾಲಾಃ ಸಹ ಪಾಂಡವೈಃ।
08043022c ತ್ವರಮಾಣಾಸ್ತ್ವರಾಕಾಲೇ ಸರ್ವಶಸ್ತ್ರಭೃತಾಂ ವರಾಃ।
08043022e ಮಜ್ಜಂತಮಿವ ಪಾತಾಲೇ ಬಲಿನೋಽಪ್ಯುಜ್ಜಿಹೀರ್ಷವಃ।।
ಪಾತಾಲದಲ್ಲಿ ಮುಳುಗುತ್ತಿರುವವನನ್ನು ಮೇಲಕ್ಕೆ ತರುವಂತೆ ತ್ವರೆಮಾಡಬೇಕಾದ ಕಾಲದಲ್ಲಿ ತ್ವರೆಮಾಡುತ್ತಿರುವ ಸರ್ವಶಸ್ತ್ರಭೃತರಲ್ಲಿ ಶ್ರೇಷ್ಠ ಪಾಂಚಾಲರು ಪಾಂಡವರೊಂದಿಗೆ ಅವನನ್ನು ಅನುಸರಿಸಿ ಹೋಗುತ್ತಿದ್ದಾರೆ.
08043023a ನ ಕೇತುರ್ದೃಶ್ಯತೇ ರಾಜ್ಞಃ ಕರ್ಣೇನ ನಿಹತಃ ಶರೈಃ।
08043023c ಪಶ್ಯತೋರ್ಯಮಯೋಃ ಪಾರ್ಥ ಸಾತ್ಯಕೇಶ್ಚ ಶಿಖಂಡಿನಃ।।
08043024a ಧೃಷ್ಟದ್ಯುಮ್ನಸ್ಯ ಭೀಮಸ್ಯ ಶತಾನೀಕಸ್ಯ ವಾ ವಿಭೋ।
08043024c ಪಾಂಚಾಲಾನಾಂ ಚ ಸರ್ವೇಷಾಂ ಚೇದೀನಾಂ ಚೈವ ಭಾರತ।।
ರಾಜನ ಧ್ವಜವು ಕಾಣುತ್ತಿಲ್ಲ! ಭಾರತ! ಪಾರ್ಥ! ವಿಭೋ! ನಕುಲ-ಸಹದೇವರು, ಸಾತ್ಯಕಿ, ಶಿಖಂಡಿ, ಧೃಷ್ಟದ್ಯುಮ್ನ, ಭೀಮ, ಶತಾನೀಕ, ಸರ್ವ ಪಾಂಚಾಲರು ಮತ್ತು ಚೇದಿಗಳು ನೋಡುತ್ತಿದ್ದಂತೆಯೇ ಕರ್ಣನು ಶರಗಳಿಂದ ಯುಧಿಷ್ಠಿರನ ಧ್ವಜವನ್ನು ಕತ್ತರಿಸಿದ್ದಾನೆ!
08043025a ಏಷ ಕರ್ಣೋ ರಣೇ ಪಾರ್ಥ ಪಾಂಡವಾನಾಮನೀಕಿನೀಂ।
08043025c ಶರೈರ್ವಿಧ್ವಂಸಯತಿ ವೈ ನಲಿನೀಮಿವ ಕುಂಜರಃ।।
ಪಾರ್ಥ! ಕಮಲಗಳಿರುವ ಸರೋವರವನ್ನು ಆನೆಯು ಹೇಗೋ ಹಾಗೆ ರಣದಲ್ಲಿ ಕರ್ಣನು ಇಗೋ ಶರಗಳಿಂದ ಪಾಂಡವರ ಸೇನೆಯನ್ನು ಧ್ವಂಸಗೊಳಿಸುತ್ತಿದ್ದಾನೆ!
08043026a ಏತೇ ದ್ರವಂತಿ ರಥಿನಸ್ತ್ವದೀಯಾಃ ಪಾಂಡುನಂದನ।
08043026c ಪಶ್ಯ ಪಶ್ಯ ಯಥಾ ಪಾರ್ಥ ಗಚ್ಚಂತ್ಯೇತೇ ಮಹಾರಥಾಃ।।
ಪಾಂಡುನಂದನ! ಇಗೋ ನಿನ್ನಕಡೆಯ ರಥಿಗಳು ಓಡಿಹೋಗುತ್ತಿದ್ದಾರೆ! ಈ ಮಹಾರಥರು ಹೇಗೆ ಓಡಿಹೋಗುತ್ತಿದ್ದಾರೆನ್ನುವುದನ್ನು ನೋಡು!
08043027a ಏತೇ ಭಾರತ ಮಾತಂಗಾಃ ಕರ್ಣೇನಾಭಿಹತಾ ರಣೇ।
08043027c ಆರ್ತನಾದಾನ್ವಿಕುರ್ವಾಣಾ ವಿದ್ರವಂತಿ ದಿಶೋ ದಶ।।
ಭಾರತ! ಇಗೋ! ಕರ್ಣನಿಂದ ಗಾಯಗೊಳಿಸಲ್ಪಟ್ಟ ಈ ಆನೆಗಳು ರಣದಲ್ಲಿ ಆರ್ತನಾದಗೈಯುತ್ತಾ ಹತ್ತೂ ದಿಕ್ಕುಗಳಲ್ಲಿ ಓಡಿ ಹೋಗುತ್ತಿವೆ!
08043028a ರಥಾನಾಂ ದ್ರವತಾಂ ವೃಂದಂ ಪಶ್ಯ ಪಾರ್ಥ ಸಮಂತತಃ।
08043028c ದ್ರಾವ್ಯಮಾಣಂ ರಣೇ ಚೈವ ಕರ್ಣೇನಾಮಿತ್ರಕರ್ಶಿನಾ।।
ಪಾರ್ಥ! ಎಲ್ಲಕಡೆಗಳಲ್ಲಿ ಓಡಿ ಹೋಗುತ್ತಿರುವ ರಥಗಳ ಗುಂಪುಗಳನ್ನು ನೋಡು. ರಣದಲ್ಲಿ ಅಮಿತ್ರಕರ್ಶನ ಕರ್ಣನಿಂದ ಅವು ಪಲಾಯನಗೊಳ್ಳುತ್ತಿವೆ!
08043029a ಹಸ್ತಿಕಕ್ಷ್ಯಾಂ ರಣೇ ಪಶ್ಯ ಚರಂತೀಂ ತತ್ರ ತತ್ರ ಹ।
08043029c ರಥಸ್ಥಂ ಸೂತಪುತ್ರಸ್ಯ ಕೇತುಂ ಕೇತುಮತಾಂ ವರ।।
ಧ್ವಜಿಗಳಲ್ಲಿ ಶ್ರೇಷ್ಠನಾದವನೇ! ರಥಸ್ಥನಾಗಿರುವ ಸೂತಪುತ್ರನ ಆನೆಯ ಹಗ್ಗವನ್ನು ಚಿಹ್ನೆಯಾಗುಳ್ಳ ಧ್ವಜವು ರಣದಲ್ಲಿ ಅಲ್ಲಿಂದಿಲ್ಲಿಗೆ ಸಂಚರಿಸುತ್ತಿರುವುದನ್ನು ನೋಡು!
08043030a ಅಸೌ ಧಾವತಿ ರಾಧೇಯೋ ಭೀಮಸೇನರಥಂ ಪ್ರತಿ।
08043030c ಕಿರಂ ಶರಶತಾನೀವ ವಿನಿಘ್ನಂಸ್ತವ ವಾಹಿನೀಂ।।
ಈಗ ನಿನ್ನ ಸೇನೆಯನ್ನು ಅಸ್ತವ್ಯಸ್ತಗೊಳಿಸುತ್ತಾ ನೂರಾರು ಶರಗಳನ್ನು ಎರಚುತ್ತಾ ಇಗೋ ರಾಧೇಯನು ಭೀಮಸೇನನ ರಥದ ಬಳಿ ವೇಗದಿಂದ ಹೋಗುತ್ತಿದ್ದಾನೆ!
08043031a ಏತಾನ್ಪಶ್ಯ ಚ ಪಾಂಚಾಲಾನ್ದ್ರಾವ್ಯಮಾಣಾನ್ಮಹಾತ್ಮನಾ।
08043031c ಶಕ್ರೇಣೇವ ಯಥಾ ದೈತ್ಯಾನ್ ಹನ್ಯಮಾನಾನ್ಮಹಾಹವೇ।।
ಮಹಾಹವದಲ್ಲಿ ಶಕ್ರನಿಂದ ವಧಿಸಲ್ಪಡುವ ದೈತ್ಯರಂತೆ ಮಹಾತ್ಮ ಪಾಂಚಾಲರು ಓಡಿಹೋಗುತ್ತಿರುವುದನ್ನು ನೋಡು!
08043032a ಏಷ ಕರ್ಣೋ ರಣೇ ಜಿತ್ವಾ ಪಾಂಚಾಲಾನ್ಪಾಂಡುಸೃಂಜಯಾನ್।
08043032c ದಿಶೋ ವಿಪ್ರೇಕ್ಷತೇ ಸರ್ವಾಸ್ತ್ವದರ್ಥಮಿತಿ ಮೇ ಮತಿಃ।।
ಇಗೋ! ರಣದಲ್ಲಿ ಕರ್ಣನು ಪಾಂಚಾಲ-ಪಾಂಡು-ಸೃಂಜಯರನ್ನು ಗೆದ್ದು ಎಲ್ಲ ದಿಕ್ಕುಗಳಲ್ಲಿ ನಿನಗಾಗಿಯೇ ನೋಡುತ್ತಿದ್ದಾನೆಂದು ನನಗನ್ನಿಸುತ್ತಿದೆ.
08043033a ಪಶ್ಯ ಪಾರ್ಥ ಧನುಃ ಶ್ರೇಷ್ಠಂ ವಿಕರ್ಷನ್ಸಾಧು ಶೋಭತೇ।
08043033c ಶತ್ರೂಂ ಜಿತ್ವಾ ಯಥಾ ಶಕ್ರೋ ದೇವಸಂಘೈಃ ಸಮಾವೃತಃ।।
ಪಾರ್ಥ! ಶತ್ರುಗಳನ್ನು ಗೆದ್ದು ದೇವಸಂಘಗಳಿಂದ ಸುತ್ತುವರೆಯಲ್ಪಟ್ಟ ಶಕ್ರನಂತೆ ಶ್ರೇಷ್ಠ ಧನುಸ್ಸನ್ನು ಸೆಳೆದು ಚೆನ್ನಾಗಿ ಶೋಭಿಸುತ್ತಿರುವ ಕರ್ಣನನ್ನು ನೋಡು!
08043034a ಏತೇ ನದಂತಿ ಕೌರವ್ಯಾ ದೃಷ್ಟ್ವಾ ಕರ್ಣಸ್ಯ ವಿಕ್ರಮಂ।
08043034c ತ್ರಾಸಯಂತೋ ರಣೇ ಪಾರ್ಥಾನ್ಸೃಂಜಯಾಂಶ್ಚ ಸಹಸ್ರಶಃ।।
ರಣದಲ್ಲಿ ಸಹಸ್ರಾರು ಪಾರ್ಥರನ್ನೂ ಸೃಂಜಯರನ್ನೂ ಪೀಡಿಸುತ್ತಿರುವ ಕರ್ಣನ ವಿಕ್ರಮವನ್ನು ನೋಡಿ ಇಗೋ ಕೌರವರು ವಿನೋದಿಸುತ್ತಿದ್ದಾರೆ!
08043035a ಏಷ ಸರ್ವಾತ್ಮನಾ ಪಾಂಡೂಂಸ್ತ್ರಾಸಯಿತ್ವಾ ಮಹಾರಣೇ।
08043035c ಅಭಿಭಾಷತಿ ರಾಧೇಯಃ ಸರ್ವಸೈನ್ಯಾನಿ ಮಾನದಃ।।
ಇಗೋ ಮಹಾರಣದಲ್ಲಿ ಪಾಂಡವರನ್ನು ಸರ್ವಾತ್ಮನಾಗಿ ಭಯಗೊಳಿಸಿ ಇಗೋ ಮಾನದ ರಾಧೇಯನು ಸರ್ವಸೇನೆಗಳಿಗೆ ಹೇಳುತ್ತಿದ್ದಾನೆ!
08043036a ಅಭಿದ್ರವತ ಗಚ್ಚಧ್ವಂ ದ್ರುತಂ ದ್ರವತ ಕೌರವಾಃ।
08043036c ಯಥಾ ಜೀವನ್ನ ವಃ ಕಶ್ಚಿನ್ಮುಚ್ಯತೇ ಯುಧಿ ಸೃಂಜಯಃ।।
“ಕೌರವರೇ! ಹೋಗಿ! ಓಡಿ ಹೋಗುತ್ತಿರುವವರ ಬೆನ್ನಟ್ಟಿ ಹೋಗಿ! ಯುದ್ಧದಿಂದ ಇಂದು ಒಬ್ಬನೇ ಒಬ್ಬ ಸೃಂಜಯನೂ ಪ್ರಾಣಸಹಿತ ನಮ್ಮಿಂದ ತಪ್ಪಿಸಿಕೊಂಡು ಹೋಗಬಾರದು!
08043037a ತಥಾ ಕುರುತ ಸಂಯತ್ತಾ ವಯಂ ಯಾಸ್ಯಾಮ ಪೃಷ್ಠತಃ।
08043037c ಏವಮುಕ್ತ್ವಾ ಯಯಾವೇಷ ಪೃಷ್ಠತೋ ವಿಕಿರಂ ಶರೈಃ।।
ಹಾಗೆಯೇ ಮಾಡಲು ಪ್ರಯತ್ನಪಡಿ! ನಾವು ನಿಮ್ಮ ಹಿಂದೆಯೇ ಬರುತ್ತೇವೆ!” ಹೀಗೆ ಹೇಳುತ್ತಾ ಶರಗಳನ್ನು ಎರಚುತ್ತಾ ಅವರನ್ನು ಹಿಂಬಾಲಿಸಿ ಹೋಗುತ್ತಿದ್ದಾನೆ!
08043038a ಪಶ್ಯ ಕರ್ಣಂ ರಣೇ ಪಾರ್ಥ ಶ್ವೇತಚ್ಚವಿವಿರಾಜಿತಂ।
08043038c ಉದಯಂ ಪರ್ವತಂ ಯದ್ವಚ್ಚೋಭಯನ್ವೈ ದಿವಾಕರಃ।।
ಪಾರ್ಥ! ದಿವಾಕರನಿಂದ ಶೋಭಾಯಮಾನಗೊಂಡಿರುವ ಉದಯಪರ್ವತದಂತೆ ರಣದಲ್ಲಿ ಶ್ವೇತಚ್ಛತ್ರದಿಂದ ವಿರಾಜಿತನಾಗಿರುವ ಕರ್ಣನನ್ನು ನೋಡು!
08043039a ಪೂರ್ಣಚಂದ್ರನಿಕಾಶೇನ ಮೂರ್ಧ್ನಿ ಚತ್ರೇಣ ಭಾರತ।
08043039c ಧ್ರಿಯಮಾಣೇನ ಸಮರೇ ತಥಾ ಶತಶಲಾಕಿನಾ।।
ಭಾರತ! ನೆತ್ತಿಯ ಮೇಲೆ ನೂರು ಶಲಾಕೆಗಳುಳ್ಳ ಪೂರ್ಣಚಂದ್ರನ ಕಾಂತಿಯ ಛತ್ರಿಯು ಹೊಳೆಯುತ್ತಿರುವ ಅವನು ಸಮರದಲ್ಲಿ ಬೆಳಗುತ್ತಿದ್ದಾನೆ.
08043040a ಏಷ ತ್ವಾಂ ಪ್ರೇಕ್ಷತೇ ಕರ್ಣಃ ಸಕಟಾಕ್ಷೋ ವಿಶಾಂ ಪತೇ।
08043040c ಉತ್ತಮಂ ಯತ್ನಮಾಸ್ಥಾಯ ಧ್ರುವಮೇಷ್ಯತಿ ಸಂಯುಗೇ।।
ವಿಶಾಂಪತೇ! ಇಗೋ ಕರ್ಣನು ನಿನ್ನನ್ನು ಓರೆಗಣ್ಣಿನಿಂದ ನೋಡುತ್ತಿದ್ದಾನೆ! ಉತ್ತಮ ಪ್ರಯತ್ನವನ್ನು ಮಾಡಿ ಅವನು ಯುದ್ಧದಲ್ಲಿ ಇಲ್ಲಿಗೇ ನಿಶ್ಚಯವಾಗಿಯೂ ಬರುತ್ತಿದ್ದಾನೆ!
08043041a ಪಶ್ಯ ಹ್ಯೇನಂ ಮಹಾಬಾಹೋ ವಿಧುನ್ವಾನಂ ಮಹದ್ಧನುಃ।
08043041c ಶರಾಂಶ್ಚಾಶೀವಿಷಾಕಾರಾನ್ವಿಸೃಜಂತಂ ಮಹಾಬಲಂ।।
ಮಹಾಬಾಹೋ! ಮಹಾಧನುಸ್ಸನ್ನು ಟೇಂಕರಿಸುತ್ತಾ ಸರ್ಪವಿಷವನ್ನು ಕಾರುವ ಶರಗಳನ್ನು ಪ್ರಯೋಗಿಸುತ್ತಿರುವ ಈ ಮಹಾಬಲನನ್ನು ನೋಡು!
08043042a ಅಸೌ ನಿವೃತ್ತೋ ರಾಧೇಯೋ ದೃಶ್ಯತೇ ವಾನರಧ್ವಜ।
08043042c ವಧಾಯ ಚಾತ್ಮನೋಽಭ್ಯೇತಿ ದೀಪಸ್ಯ ಶಲಭೋ ಯಥಾ।।
ವಾನರಧ್ವಜ! ಪತಂಗವು ಆತ್ಮನಾಶಕ್ಕಾಗಿಯೇ ದೀಪದ ಬಳಿ ಹೋಗುವಂತೆ ಇಗೋ ರಾಧೇಯನು ಇಲ್ಲಿಗೇ ಬರುತ್ತಿರುವಂತೆ ಕಾಣುತ್ತಿದೆ!
08043043a ಕರ್ಣಮೇಕಾಕಿನಂ ದೃಷ್ಟ್ವಾ ರಥಾನೀಕೇನ ಭಾರತ।
08043043c ರಿರಕ್ಷಿಷುಃ ಸುಸಂಯತ್ತೋ ಧಾರ್ತರಾಷ್ಟ್ರೋಽಭಿವರ್ತತೇ।।
ಭಾರತ! ಕರ್ಣನು ಒಬ್ಬನೇ ಇರುವುದನ್ನು ನೋಡಿ ಅವನನ್ನು ರಕ್ಷಿಸಲು ಪ್ರಯತ್ನಪಡುತ್ತಿರುವ ಧಾರ್ತರಾಷ್ಟ್ರನೂ ಅವನನ್ನು ಹಿಂಬಾಲಿಸಿ ಬರುತ್ತಿದ್ದಾನೆ!
08043044a ಸಾರ್ವೈಃ ಸಹೈಭಿರ್ದುಷ್ಟಾತ್ಮಾ ವಧ್ಯ ಏಷ ಪ್ರಯತ್ನತಃ।
08043044c ತ್ವಯಾ ಯಶಶ್ಚ ರಾಜ್ಯಂ ಚ ಸುಖಂ ಚೋತ್ತಮಮಿಚ್ಚತಾ।।
ಯಶಸ್ಸು, ರಾಜ್ಯ, ಮತ್ತು ಉತ್ತಮ ಸುಖವನ್ನು ಇಚ್ಛಿಸುವ ನೀನು ಪ್ರಯತ್ನಪಟ್ಟು ಇವರೆಲ್ಲರೊಡನೆ ಆ ದುಷ್ಟಾತ್ಮ ಕರ್ಣನನ್ನು ವಧಿಸು!
08043045a ಆತ್ಮಾನಂ ಚ ಕೃತಾತ್ಮಾನಂ ಸಮೀಕ್ಷ್ಯ ಭರತರ್ಷಭ।
08043045c ಕೃತಾಗಸಂ ಚ ರಾಧೇಯಂ ಧರ್ಮಾತ್ಮನಿ ಯುಧಿಷ್ಠಿರೇ।।
ಭರತರ್ಷಭ! ನಿನ್ನನ್ನು ನೀನು ಕೃತಾತ್ಮನೆಂದೂ, ರಾಧೇಯನು ಧರ್ಮಾತ್ಮ ಯುಧಷ್ಠಿರನಿಗೆ ಅಪರಾಧವೆಸಗಿರುವನೆಂದೂ ತಿಳಿದುಕೊಳ್ಳಬೇಕು.
08043046a ಪ್ರತಿಪದ್ಯಸ್ವ ರಾಧೇಯಂ ಪ್ರಾಪ್ತಕಾಲಮನಂತರಂ।
08043046c ಆರ್ಯಾಂ ಯುದ್ಧೇ ಮತಿಂ ಕೃತ್ವಾ ಪ್ರತ್ಯೇಹಿ ರಥಯೂಥಪಂ।।
ಅನಂತರ ಸರಿಯಾದ ಕಾಲಬಂದಾಗ ರಾಧೇಯನನ್ನು ಎದುರಿಸಿ ಯುದ್ಧಮಾಡು! ಯುದ್ಧದಲ್ಲಿ ಆರ್ಯಬುದ್ಧಿಯನ್ನಿಟ್ಟುಕೊಂಡು ಆ ರಥಯೂಥಪನನ್ನು ಸಂಹರಿಸು!
08043047a ಪಂಚ ಹ್ಯೇತಾನಿ ಮುಖ್ಯಾನಾಂ ರಥಾನಾಂ ರಥಸತ್ತಮ।
08043047c ಶತಾನ್ಯಾಯಾಂತಿ ವೇಗೇನ ಬಲಿನಾಂ ಭೀಮತೇಜಸಾಂ।।
ರಥಸತ್ತಮ! ಇಗೋ ಭೀಮತೇಜಸ್ಸಿನ ಬಲಶಾಲೀ ಐದುನೂರು ರಥಮುಖ್ಯರು ವೇಗದಿಂದ ಇಲ್ಲಿಗೆ ಬರುತ್ತಿದ್ದಾರೆ!
08043048a ಪಂಚ ನಾಗಸಹಸ್ರಾಣಿ ದ್ವಿಗುಣಾ ವಾಜಿನಸ್ತಥಾ।
08043048c ಅಭಿಸಂಹತ್ಯ ಕೌಂತೇಯ ಪದಾತಿಪ್ರಯುತಾನಿ ಚ।।
08043048E ಅನ್ಯೋನ್ಯರಕ್ಷಿತಂ ವೀರ ಬಲಂ ತ್ವಾಮಭಿವರ್ತತೇ।
ಕೌಂತೇಯ! ಐದುಸಾವಿರ ಆನೆಗಳೂ, ಅದರ ಎರಡುಪಟ್ಟು ಕುದುರೆಗಳೂ, ಹತ್ತು ಲಕ್ಷ ಪದಾತಿಗಳನ್ನೂ ಸಂಘಟಿತಗೊಂಡಿರುವ ಸೇನೆಯು ಅನ್ಯೋನ್ಯರನ್ನು ರಕ್ಷಿಸಿಕೊಳ್ಳುತ್ತಾ ನಿನ್ನ ಕಡೆಯೇ ಬರುತ್ತಿದೆ.
08043049a ಸೂತಪುತ್ರೇ ಮಹೇಷ್ವಾಸೇ ದರ್ಶಯಾತ್ಮಾನಮಾತ್ಮನಾ।।
08043049c ಉತ್ತಮಂ ಯತ್ನಮಾಸ್ಥಾಯ ಪ್ರತ್ಯೇಹಿ ಭರತರ್ಷಭ।
ಭರತರ್ಷಭ! ಮಹೇಷ್ವಾಸ ಸೂತಪುತ್ರನು ತನ್ನನ್ನು ತಾನು ಕಾಣಿಸಿಕೊಂಡಾಗ ಉತ್ತಮ ಪ್ರಯತ್ನವನ್ನು ಮಾಡಿ ಅವನೊಡನೆ ಹೋರಾಡು!
08043050a ಅಸೌ ಕರ್ಣಃ ಸುಸಂರಬ್ಧಃ ಪಾಂಚಾಲಾನಭಿಧಾವತಿ।।
08043050c ಕೇತುಮಸ್ಯ ಹಿ ಪಶ್ಯಾಮಿ ಧೃಷ್ಟದ್ಯುಮ್ನರಥಂ ಪ್ರತಿ।
08043050e ಸಮುಚ್ಚೇತ್ಸ್ಯತಿ ಪಾಂಚಾಲಾನಿತಿ ಮನ್ಯೇ ಪರಂತಪ।।
ಇಗೋ! ಕರ್ಣನು ಸಂರಬ್ಧನಾಗಿ ಪಾಂಚಾಲರನ್ನು ಆಕ್ರಮಣಿಸುತ್ತಿದ್ದಾನೆ. ಅವನ ಧ್ವಜವು ಧೃಷ್ಟದ್ಯುಮ್ನನ ರಥದ ಬಳಿ ನಾನು ಕಾಣುತ್ತಿದ್ದೇನೆ! ಪರಂತಪ! ಅವನು ಪಾಂಚಾಲರೊಡನೆ ಯುದ್ಧಮಾಡುತ್ತಿದ್ದಾನೆಂದು ನನಗನ್ನಿಸುತ್ತಿದೆ!
08043051a ಆಚಕ್ಷೇ ತೇ ಪ್ರಿಯಂ ಪಾರ್ಥ ತದೇವಂ ಭರತರ್ಷಭ।
08043051c ರಾಜಾ ಜೀವತಿ ಕೌರವ್ಯೋ ಧರ್ಮಪುತ್ರೋ ಯುಧಿಷ್ಠಿರಃ।।
ಪಾರ್ಥ! ಭರತರ್ಷಭ! ನಿನಗೆ ಪ್ರಿಯವಾದುದನ್ನು ಹೇಳುತ್ತಿದ್ದೇನೆ. ರಾಜಾ ಕೌರವ್ಯ ಧರ್ಮಪುತ್ರ ಯುಧಿಷ್ಠಿರನು ಜೀವಿಸಿದ್ದಾನೆ!
08043052a ಅಸೌ ಭಿಮೋ ಮಹಾಬಾಹುಃ ಸಂನಿವೃತ್ತಶ್ಚಮೂಮುಖೇ।
08043052c ವೃತಃ ಸೃಂಜಯಸೈನ್ಯೇನ ಸಾತ್ಯಕೇನ ಚ ಭಾರತ।।
ಭಾರತ! ಇಗೋ! ಮಹಾಬಾಹು ಬೀಮಸೇನನು ಸೃಂಜಯರು ಮತ್ತು ಸಾತ್ಯಕಿಯರಿಂದ ಪರಿವೃತನಾಗಿ ಸೇನಾಮುಖದಲ್ಲಿ ಹಿಂದಿರುಗಿದ್ದಾನೆ!
08043053a ವಧ್ಯಂತ ಏತೇ ಸಮರೇ ಕೌರವಾ ನಿಶಿತೈಃ ಶರೈಃ।
08043053c ಭೀಮಸೇನೇನ ಕೌಂತೇಯ ಪಾಂಚಾಲೈಶ್ಚ ಮಹಾತ್ಮಭಿಃ।।
ಕೌಂತೇಯ! ಭೀಮಸೇನ ಮತ್ತು ಮಹಾತ್ಮ ಪಾಂಚಾಲರ ನಿಶಿತ ಶರಗಳಿಂದ ಸಮರದಲ್ಲಿ ಕೌರವರು ವಧಿಸಲ್ಪಡುತ್ತಿದ್ದಾರೆ!
08043054a ಸೇನಾ ಹಿ ಧಾರ್ತರಾಷ್ಟ್ರಸ್ಯ ವಿಮುಖಾ ಚಾಭವದ್ರಣಾತ್।
08043054c ವಿಪ್ರಧಾವತಿ ವೇಗೇನ ಭೀಮಸ್ಯ ನಿಹತಾ ಶರೈಃ।।
ಭೀಮನ ಶರಗಳಿಂದ ಹತರಾದ ಧಾರ್ತರಾಷ್ಟ್ರನ ಸೇನೆಯು ಗಾಯಗೊಂಡು ವೇಗವಾಗಿ ರಣದಿಂದ ಓಡಿ ವಿಮುಖವಾಗುತ್ತಿದೆ!
08043055a ವಿಪನ್ನಸಸ್ಯೇವ ಮಹೀ ರುಧಿರೇಣ ಸಮುಕ್ಷಿತಾ।
08043055c ಭಾರತೀ ಭರತಶ್ರೇಷ್ಠ ಸೇನಾ ಕೃಪಣದರ್ಶನಾ।।
ಭರತಶ್ರೇಷ್ಠ! ರಕ್ತದಿಂದ ತೋಯ್ದುಹೋಗಿರುವ ಭಾರತೀ ಸೇನೆಯು ಪೈರುಗಳಿಲ್ಲಿದ ಗದ್ದೆಯಂತೆ ನಿಸ್ತೇಜವಾಗಿ ಕಾಣುತ್ತಿದೆ.
08043056a ನಿವೃತ್ತಂ ಪಶ್ಯ ಕೌಂತೇಯ ಭೀಮಸೇನಂ ಯುಧಾಂ ಪತಿಂ।
08043056c ಆಶೀವಿಷಮಿವ ಕ್ರುದ್ಧಂ ತಸ್ಮಾದ್ದ್ರವತಿ ವಾಹಿನೀ।।
ಕೌಂತೇಯ! ಸರ್ಪವಿಷದಂತೆ ಕ್ರುದ್ಧನಾಗಿರುವ ಯುಧಾಂಪತಿ ಭೀಮಸೇನನು ಯುದ್ಧಕ್ಕೆ ಹಿಂದಿರುಗಿ ಕೌರವ ಸೇನೆಯನ್ನು ಓಡಿಸುತ್ತಿರುವುದನ್ನು ನೋಡು!
08043057a ಪೀತರಕ್ತಾಸಿತಸಿತಾಸ್ತಾರಾಚಂದ್ರಾರ್ಕಮಂಡಿತಾಃ।
08043057c ಪತಾಕಾ ವಿಪ್ರಕೀರ್ಯಂತೇ ಚತ್ರಾಣ್ಯೇತಾನಿ ಚಾರ್ಜುನ।।
ಅರ್ಜುನ! ಹಳದಿ-ಕೆಂಪು-ಕಪ್ಪು ಮತ್ತು ಬಿಳಿಯಬಣ್ಣದ ನಕ್ಷತ್ರ-ಚಂದ್ರ-ಸೂರ್ಯರ ಚಿತ್ರಗಳುಳ್ಳ ಪತಾಕೆಗಳು ಮತ್ತು ಚತ್ರಗಳು ಬೀಳುತ್ತಿರುವುದನ್ನು ನೋಡು!
08043058a ಸೌವರ್ಣಾ ರಾಜತಾಶ್ಚೈವ ತೈಜಸಾಶ್ಚ ಪೃಥಗ್ವಿಧಾಃ।
08043058c ಕೇತವೋ ವಿನಿಪಾತ್ಯಂತೇ ಹಸ್ತ್ಯಶ್ವಂ ವಿಪ್ರಕೀರ್ಯತೇ।।
ಸುವರ್ಣ-ರಜತ-ಲೋಹಮಯವಾದ ನಾನಾವಿಧದ ಧ್ವಜಗಳು ಬೀಳುತ್ತಿವೆ. ಆನೆ-ಕುದುರೆಗಳೂ ದಿಕ್ಕಾಪಾಲಾಗಿ ಓಡಿಹೋಗುತ್ತಿವೆ!
08043059a ರಥೇಭ್ಯಃ ಪ್ರಪತಂತ್ಯೇತೇ ರಥಿನೋ ವಿಗತಾಸವಃ।
08043059c ನಾನಾವರ್ಣೈರ್ಹತಾ ಬಾಣೈಃ ಪಾಂಚಾಲೈರಪಲಾಯಿಭಿಃ।।
ಯುದ್ಧದಿಂದ ಪಲಾಯನ ಮಾಡದಿರುವ ಪಾಂಚಾಲರ ನಾನಾ ವರ್ಣದ ಬಾಣಗಳಿಂದ ಹತರಾಗಿ ರಥಿಗಳು ಅಸುನೀಗಿ ರಥಗಳಿಂದ ಬೀಳುತ್ತಿದ್ದಾರೆ!
08043060a ನಿರ್ಮನುಷ್ಯಾನ್ಗಜಾನಶ್ವಾನ್ರಥಾಂಶ್ಚೈವ ಧನಂಜಯ।
08043060c ಸಮಾದ್ರವಂತಿ ಪಾಂಚಾಲಾ ಧಾರ್ತರಾಷ್ಟ್ರಾಂಸ್ತರಸ್ವಿನಃ।।
ಧನಂಜಯ! ತರಸ್ವಿ ಪಾಂಚಾಲರು ಆನೆ-ಕುದುರೆ-ರಥಗಳನ್ನು ನಿರ್ಮನುಷ್ಯರನ್ನಾಗಿ ಮಾಡಿ ಧಾರ್ತರಾಷ್ಟ್ರರನ್ನು ಓಡಿಸುತ್ತಿದ್ದಾರೆ!
08043061a ಮೃದ್ನಂತಿ ಚ ನರವ್ಯಾಘ್ರಾ ಭೀಮಸೇನವ್ಯಪಾಶ್ರಯಾತ್।
08043061c ಬಲಂ ಪರೇಷಾಂ ದುರ್ಧರ್ಷಂ ತ್ಯಕ್ತ್ವಾ ಪ್ರಾಣಾನರಿಂದಮ।।
ಅರಿಂದಮ! ಪ್ರಾಣಗಳನ್ನೇ ತೊರೆದು ನರವ್ಯಾಘ್ರ ಪಾಂಚಾಲರು ಭೀಮಸೇನನನ್ನು ಆಶ್ರಯಿಸಿ ದುರ್ಧರ್ಷ ಶತ್ರುಬಲವನ್ನು ಮರ್ದಿಸುತ್ತಿದ್ದಾರೆ!
08043062a ಏತೇ ನದಂತಿ ಪಾಂಚಾಲಾ ಧಮಂತ್ಯಪಿ ಚ ವಾರಿಜಾನ್।
08043062c ಅಭಿದ್ರವಂತಿ ಚ ರಣೇ ನಿಘ್ನಂತಃ ಸಾಯಕೈಃ ಪರಾನ್।।
ಇಗೋ! ಪಾಂಚಾಲರು ಶಂಖಗಳನ್ನು ಊದುತ್ತಿದ್ದಾರೆ! ಸಿಂಹನಾದಗೈಯುತ್ತಿದ್ದಾರೆ! ಮತ್ತು ರಣದಲ್ಲಿ ಸಾಯಕಗಳಿಂದ ಶತ್ರುಗಳನ್ನು ಸಂಹರಿಸುತ್ತಾ ಅವರನ್ನು ಓಡಿಸುತ್ತಿದ್ದಾರೆ!
08043063a ಪಶ್ಯ ಸ್ವರ್ಗಸ್ಯ ಮಾಹಾತ್ಮ್ಯಂ ಪಾಂಚಾಲಾ ಹಿ ಪರಂತಪ।
08043063c ಧಾರ್ತರಾಷ್ಟ್ರಾನ್ವಿನಿಘ್ನಂತಿ ಕ್ರುದ್ಧಾಃ ಸಿಂಹಾ ಇವ ದ್ವಿಪಾನ್।।
ಪರಂತಪ! ಸ್ವರ್ಗದ ಮಹಾತ್ಮೆಯನ್ನಾದರೂ ನೋಡು! ಪಾಂಚಾಲರೇ ಧಾರ್ತರಾಷ್ಟ್ರರನ್ನು ಕ್ರುದ್ಧ ಸಿಂಹಗಳು ಆನೆಗಳನ್ನು ಹೇಗೋ ಹಾಗೆ ಸಂಹರಿಸುತ್ತಿದ್ದಾರೆ!
08043064a ಸರ್ವತಶ್ಚಾಭಿಪನ್ನೈಷಾ ಧಾರ್ತರಾಷ್ಟ್ರೀ ಮಹಾಚಮೂಃ।
08043064c ಪಾಂಚಾಲೈರ್ಮಾನಸಾದೇತ್ಯ ಹಂಸೈರ್ಗಂಗೇವ ವೇಗಿತೈಃ।।
ಮಾನಸಸರೋವರದಿಂದ ಹೊರಟ ಹಂಸಗಳು ವೇಗವಾಗಿ ಗಂಗೆಯನ್ನು ಸೇರುವಂತೆ ಪಾಂಚಾಲರು ಎಲ್ಲ ಕಡೆಗಳಿಂದಲೂ ಧಾರ್ತರಾಷ್ಟ್ರರ ಮಹಾಸೇನೆಯನ್ನು ಆಕ್ರಮಣಿಸುತ್ತಿದ್ದಾರೆ!
08043065a ಸುಭೃಶಂ ಚ ಪರಾಕ್ರಾಂತಾಃ ಪಾಂಚಾಲಾನಾಂ ನಿವಾರಣೇ।
08043065c ಕೃಪಕರ್ಣಾದಯೋ ವೀರಾ ಋಷಭಾಣಾಮಿವರ್ಷಭಾಃ।।
ಗೂಳಿಗಳನ್ನು ಗೂಳಿಗಳು ಹೇಗೋ ಹಾಗೆ ಕೃಪ-ಕರ್ಣ ಮೊದಲಾದ ವೀರರು ಪಾಂಚಾಲರನ್ನು ತಡೆಯುವಲ್ಲಿ ತಮ್ಮ ಪರಮ ವಿಕ್ರಮವನ್ನು ತೋರಿಸುತ್ತಿದ್ದಾರೆ!
08043066a ಸುನಿಮಗ್ನಾಂಶ್ಚ ಭೀಮಾಸ್ತ್ರೈರ್ಧಾರ್ತರಾಷ್ಟ್ರಾನ್ಮಹಾರಥಾನ್।
08043066c ಧೃಷ್ಟದ್ಯುಮ್ನಮುಖಾ ವೀರಾ ಘ್ನಂತಿ ಶತ್ರೂನ್ಸಹಸ್ರಶಃ।
08043066e ವಿಷಣ್ಣಭೂಯಿಷ್ಠರಥಾ ಧಾರ್ತರಾಷ್ಟ್ರೀ ಮಹಾಚಮೂಃ।।
ಭೀಮನ ಅಸ್ತ್ರಗಳಿಂದ ಉತ್ಸಾಹವನ್ನು ಕಳೆದುಕೊಂಡ ಮಹಾರಥ ಧಾರ್ತರಾಷ್ಟ್ರ ಶತ್ರುಗಳನ್ನು ಧೃಷ್ಟದ್ಯುಮ್ನನೇ ಮೊದಲಾದ ವೀರರು ಸಹಸ್ರಾರು ಸಂಖ್ಯೆಗಳಲ್ಲಿ ಸಂಹರಿಸುತ್ತಿದ್ದಾರೆ! ಈಗ ಧಾರ್ತರಾಷ್ಟ್ರರ ಮಹಾ ಸೇನೆಯು ವಿಷಣ್ಣವಾಗಿ ಹೋಗಿದೆ!
08043067a ಪಶ್ಯ ಭೀಮೇನ ನಾರಾಚೈಶ್ಚಿನ್ನಾ ನಾಗಾಃ ಪತಂತ್ಯಮೀ।
08043067c ವಜ್ರಿವಜ್ರಾಹತಾನೀವ ಶಿಖರಾಣಿ ಮಹೀಭೃತಾಂ।।
ನೋಡು! ಭೀಮನ ನಾರಾಚಗಳಿಂದ ಕಡಿಯಲ್ಪಟ್ಟ ಆನೆಗಳು ವಜ್ರಿಯ ವಜ್ರದಿಂದ ಹತವಾಗಿ ಭೂಮಿಯ ಮೇಲೆ ಬೀಳುವ ಶಿಖರಗಳಂತೆ ಬೀಳುತ್ತಿವೆ!
08043068a ಭೀಮಸೇನಸ್ಯ ನಿರ್ವಿದ್ಧಾ ಬಾಣೈಃ ಸಂನತಪರ್ವಭಿಃ।
08043068c ಸ್ವಾನ್ಯನೀಕಾನಿ ಮೃದ್ನಂತೋ ದ್ರವಂತ್ಯೇತೇ ಮಹಾಗಜಾಃ।।
ಭೀಮಸೇನನ ಸನ್ನತಪರ್ವ ಬಾಣಗಳಿಂದ ಗಾಯಗೊಂಡ ಮಹಾ ಆನೆಗಳು ನಮ್ಮ ಸೈನಿಕರನ್ನೇ ತುಳಿಯುತ್ತಾ ಓಡಿಹೋಗುತ್ತಿವೆ!
08043069a ನಾಭಿಜಾನಾಸಿ ಭೀಮಸ್ಯ ಸಿಂಹನಾದಂ ದುರುತ್ಸಹಂ।
08043069c ನದತೋಽರ್ಜುನ ಸಂಗ್ರಾಮೇ ವೀರಸ್ಯ ಜಿತಕಾಶಿನಃ।।
ಅರ್ಜುನ! ಸಂಗ್ರಾಮದಲ್ಲಿ ವಿಜಯೋತ್ಸಾಹದಿಂದ ಕೇಳಿಬರುತ್ತಿರುವ ಸಹಿಸಲಸಾಧ್ಯವಾದ ಈ ಸಿಂಹನಾದವು ಭೀಮನದ್ದು ಎಂದು ತಿಳಿ!
08043070a ಏಷ ನೈಷಾದಿರಭ್ಯೇತಿ ದ್ವಿಪಮುಖ್ಯೇನ ಪಾಂಡವಂ।
08043070c ಜಿಘಾಂಸುಸ್ತೋಮರೈಃ ಕ್ರುದ್ಧೋ ದಂಡಪಾಣಿರಿವಾಂತಕಃ।।
ಇಗೋ ಅಲ್ಲಿ ಪಾಂಡವ ಭೀಮನನ್ನು ಸಂಹರಿಸಲೋಸುಗ ಕ್ರುದ್ಧನಾದ ನೈಷಾದನು ಆನೆಯಮೇಲೆ ಕುಳಿತು ದಂಡಪಾಣಿ ಅಂತಕನಂತೆ ತೋಮರವನ್ನು ಹಿಡಿದು ಬರುತ್ತಿದ್ದಾನೆ!
08043071a ಸತೋಮರಾವಸ್ಯ ಭುಜೌ ಚಿನ್ನೌ ಭೀಮೇನ ಗರ್ಜತಃ।
08043071c ತೀಕ್ಷ್ಣೈರಗ್ನಿಶಿಖಾಪ್ರಖ್ಯೈರ್ನಾರಾಚೈರ್ದಶಭಿರ್ಹತಃ।।
ಗರ್ಜಿಸುತ್ತಿರುವ ಭೀಮನು ಅಗ್ನಿಶಿಖೆಗಳಂತಿರುವ ತೀಕ್ಷ್ಣ ನಾರಾಚಗಳಿಂದ ತೋಮರವನ್ನು ಹಿಡಿದಿರುವ ಅವನ ಎರಡೂ ಭುಜಗಳನ್ನು ತುಂಡರಿಸಿ ಹತ್ತರಿಂದ ಅವನನ್ನೂ ಸಂಹರಿಸಿಬಿಟ್ಟನು!
08043072a ಹತ್ವೈನಂ ಪುನರಾಯಾತಿ ನಾಗಾನನ್ಯಾನ್ಪ್ರಹಾರಿಣಃ।
08043072c ಪಶ್ಯ ನೀಲಾಂಬುದನಿಭಾನ್ಮಹಾಮಾತ್ರೈರಧಿಷ್ಠಿತಾನ್।
08043072e ಶಕ್ತಿತೋಮರಸಂಕಾಶೈರ್ವಿನಿಘ್ನಂತಂ ವೃಕೋದರಂ।।
ಇವನನ್ನು ಸಂಹರಿಸಿ ಪುನಃ ಬರುತ್ತಿರುವ ನೀಲಮೋಡಗಳಂತೆ ಹೊಳೆಯುತ್ತಿರುವ ಮಹಾಗಾತ್ರದ ಅನ್ಯ ಆನೆಗಳನ್ನು ಶಕ್ತಿತೋಮರ ಸಮೂಹಗಳಿಂದ ಸಂಹರಿಸುತ್ತಿರುವ ಪ್ರಹಾರಿ ವೃಕೋದರನನ್ನು ನೋಡು!
08043073a ಸಪ್ತ ಸಪ್ತ ಚ ನಾಗಾಂಸ್ತಾನ್ವೈಜಯಂತೀಶ್ಚ ಸಧ್ವಜಾಃ।
08043073c ನಿಹತ್ಯ ನಿಶಿತೈರ್ಬಾಣೈಶ್ಚಿನ್ನಾಃ ಪಾರ್ಥಾಗ್ರಜೇನ ತೇ।
08043073e ದಶಭಿರ್ದಶಭಿಶ್ಚೈಕೋ ನಾರಾಚೈರ್ನಿಹತೋ ಗಜಃ।।
ವೈಜಯಂತೀ ಮತ್ತು ಧ್ವಜಗಳೊಡನೆ ನಲವತ್ತೊಂಭತ್ತು ಆನೆಗಳನ್ನು ನಿಶಿತ ಬಾಣಗಳಿಂದ ಭೇದಿಸಿ ಸಂಹರಿಸಿ ನಿನ್ನ ಅಣ್ಣ ಪಾರ್ಥನು ಹತ್ತು ಹತ್ತು ನಾರಾಚಗಳಿಂದ ಒಂದೊಂದು ಆನೆಯನ್ನೂ ಸಂಹರಿಸುತ್ತಿದ್ದಾನೆ!
08043074a ನ ಚಾಸೌ ಧಾರ್ತರಾಷ್ಟ್ರಾಣಾಂ ಶ್ರೂಯತೇ ನಿನದಸ್ತಥಾ।
08043074c ಪುರಂದರಸಮೇ ಕ್ರುದ್ಧೇ ನಿವೃತ್ತೇ ಭರತರ್ಷಭೇ।।
ಪುರಂದರ ಸಮನಾಗಿರುವ ಕ್ರುದ್ಧ ಭರತರ್ಷಭ ಭೀಮನು ಯುದ್ಧಕ್ಕೆ ಹಿಂದಿರುಗಿದ ನಂತರ ಧಾರ್ತರಾಷ್ಟ್ರರ ಸಿಂಹನಾದಗಳು ಈಗ ಕೇಳಿಬರುತ್ತಿಲ್ಲ!
08043075a ಅಕ್ಷೌಹಿಣ್ಯಸ್ತಥಾ ತಿಸ್ರೋ ಧಾರ್ತರಾಷ್ಟ್ರಸ್ಯ ಸಂಹತಾಃ।
08043075c ಕ್ರುದ್ಧೇನ ನರಸಿಂಹೇನ ಭೀಮಸೇನೇನ ವಾರಿತಾಃ।।
ಕ್ರುದ್ಧ ನರಸಿಂಹ ಭೀಮಸೇನನು ಧಾರ್ತರಾಷ್ಟ್ರನು ಸಂಗ್ರಹಿಸಿದ್ದ ಮೂರು ಅಕ್ಷೌಹಿಣೀ ಸೇನೆಯನ್ನು ತಡೆದು ಸಂಹರಿಸಿದ್ದಾನೆ!””
08043076 ಸಂಜಯ ಉವಾಚ।
08043076a ಭೀಮಸೇನೇನ ತತ್ಕರ್ಮ ಕೃತಂ ದೃಷ್ಟ್ವಾ ಸುದುಷ್ಕರಂ।
08043076c ಅರ್ಜುನೋ ವ್ಯಧಮಚ್ಚಿಷ್ಟಾನಹಿತಾನ್ನಿಶಿತೈಃ ಶರೈಃ।।
ಸಂಜಯನು ಹೇಳಿದನು: “ಭೀಮಸೇನನು ಸುದುಷ್ಕರವಾದ ಆ ಕರ್ಮವನ್ನೆಸಗಿದುದನ್ನು ಕಂಡು ಅರ್ಜುನನು ಅಳಿದುಳಿದವರನ್ನು ನಿಶಿತ ಶರಗಳಿಂದ ಸಂಹರಿಸಿದನು.
08043077a ತೇ ವಧ್ಯಮಾನಾಃ ಸಮರೇ ಸಂಶಪ್ತಕಗಣಾಃ ಪ್ರಭೋ।
08043077c ಶಕ್ರಸ್ಯಾತಿಥಿತಾಂ ಗತ್ವಾ ವಿಶೋಕಾ ಹ್ಯಭವನ್ಮುದಾ।।
ಪ್ರಭೋ! ಸಮರದಲ್ಲಿ ವಧಿಸಲ್ಪಡುತ್ತಿರುವ ಸಂಶಪ್ತಕ ಗಣಗಳು ಶಕ್ರನ ಅತಿಥಿಗಳಾಗಿ ಹೋಗಿ ವಿಶೋಕರಾಗಿ ಮುದಿಸಿದರು.
08043078a ಪಾರ್ಥಶ್ಚ ಪುರುಷವ್ಯಾಘ್ರಃ ಶರೈಃ ಸಂನತಪರ್ವಭಿಃ।
08043078c ಜಘಾನ ಧಾರ್ತರಾಷ್ಟ್ರಸ್ಯ ಚತುರ್ವಿಧಬಲಾಂ ಚಮೂಂ।।
ಪುರುಷವ್ಯಾಘ್ರ ಪಾರ್ಥನಾದರೋ ಸನ್ನತಪರ್ವ ಶರಗಳಿಂದ ಧಾರ್ತರಾಷ್ಟ್ರನ ಚತುರ್ವಿಧ ಸೇನೆಯನ್ನು ಸಂಹರಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಕೃಷ್ಣಾರ್ಜುನಸಂವಾದೇ ತ್ರಿಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಕೃಷ್ಣಾರ್ಜುನಸಂವಾದ ಎನ್ನುವ ನಲ್ವತ್ಮೂರನೇ ಅಧ್ಯಾಯವು.