ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 42
ಸಾರ
ಕರ್ಣ-ಧೃಷ್ಟದ್ಯುಮ್ನರ ಯುದ್ಧ (1-12). ಕರ್ಣ-ಸಾತ್ಯಕಿಯರ ಯುದ್ಧ (13-17). ಅಶ್ವತ್ಥಾಮ-ಧೃಷ್ಟದ್ಯುಮ್ನರ ಯುದ್ಧ (18-39). ಧೃಷ್ಟದ್ಯುಮ್ನನನ್ನು ಕೊಲ್ಲಲು ಉದ್ಯುಕ್ತನಾಗಿದ್ದ ಅಶ್ವತ್ಥಾಮನನ್ನು ಅರ್ಜುನನು ಎದುರಿಸಿ, ಮೂರ್ಛೆಗೊಳಿಸಿದುದು (40-57).
08042001 ಸಂಜಯ ಉವಾಚ।
08042001a ತತಃ ಪುನಃ ಸಮಾಜಗ್ಮುರಭೀತಾಃ ಕುರುಸೃಂಜಯಾಃ।
08042001c ಯುಧಿಷ್ಠಿರಮುಖಾಃ ಪಾರ್ಥಾ ವೈಕರ್ತನಮುಖಾ ವಯಂ।।
ಸಂಜಯನು ಹೇಳಿದನು: “ಅನಂತರ ಪುನಃ ಅಭೀತ ಕುರು-ಸೃಂಜಯರು ಯುದ್ಧದಲ್ಲಿ ತೊಡಗಿದರು. ಪಾರ್ಥರು ಯುಧಿಷ್ಠಿರನನ್ನು ಮುಂದೆಮಾಡಿಕೊಂಡು ಮತ್ತು ನಾವು ವೈಕರ್ತನ ಕರ್ಣನನ್ನು ಮುಂದೆಮಾಡಿಕೊಂಡು ಯುದ್ಧಮಾಡುತ್ತಿದ್ದೆವು.
08042002a ತತಃ ಪ್ರವವೃತೇ ಭೀಮಃ ಸಂಗ್ರಾಮೋ ಲೋಮಹರ್ಷಣಃ।
08042002c ಕರ್ಣಸ್ಯ ಪಾಂಡವಾನಾಂ ಚ ಯಮರಾಷ್ಟ್ರವಿವರ್ಧನಃ।।
ಆಗ ಕರ್ಣ ಮತ್ತು ಪಾಂಡವರ ನಡುವೆ ಯಮರಾಷ್ಟ್ರವನ್ನು ವಿವರ್ಧಿಸುವಂತಹ ಭಯಂಕರ ಲೋಮಹರ್ಷಣ ಸಂಗ್ರಾಮವು ಪ್ರಾರಂಭವಾಯಿತು.
08042003a ತಸ್ಮಿನ್ಪ್ರವೃತ್ತೇ ಸಂಗ್ರಾಮೇ ತುಮುಲೇ ಶೋಣಿತೋದಕೇ।
08042003c ಸಂಶಪ್ತಕೇಷು ಶೂರೇಷು ಕಿಂಚಿಚ್ಚಿಷ್ಟೇಷು ಭಾರತ।।
ಭಾರತ! ಆ ತುಮುಲ ಸಂಗ್ರಾಮದಲ್ಲಿ ರಕ್ತವು ನೀರಿನಂತೆ ಹರಿಯುತ್ತಿತ್ತು. ಶೂರ ಸಂಶಪ್ತಕರು ಸ್ವಲ್ಪಮಾತ್ರವೇ ಉಳಿದುಕೊಂಡಿದ್ದರು.
08042004a ಧೃಷ್ಟದ್ಯುಮ್ನೋ ಮಹಾರಾಜ ಸಹಿತಃ ಸರ್ವರಾಜಭಿಃ।
08042004c ಕರ್ಣಮೇವಾಭಿದುದ್ರಾವ ಪಾಂಡವಾಶ್ಚ ಮಹಾರಥಾಃ।।
ಮಹಾರಾಜ! ಆಗ ಮಹಾರಥ ಪಾಂಡವರು ಮತ್ತು ಧೃಷ್ಟದ್ಯುಮ್ನನು ಸರ್ವರಾಜರೊಂದಿಗೆ ಕರ್ಣನನ್ನೇ ಆಕ್ರಮಣಿಸಿದರು.
08042005a ಆಗಚ್ಚಮಾನಾಂಸ್ತಾನ್ಸಂಖ್ಯೇ ಪ್ರಹೃಷ್ಟಾನ್ವಿಜಯೈಷಿಣಃ।
08042005c ದಧಾರೈಕೋ ರಣೇ ಕರ್ಣೋ ಜಲೌಘಾನಿವ ಪರ್ವತಃ।।
ಯುದ್ಧದಲ್ಲಿ ಪ್ರಹೃಷ್ಟರಾಗಿ ಬರುತ್ತಿರುವ ಆ ವಿಜಯಾಕಾಂಕ್ಷಿಗಳನ್ನು ರಣದಲ್ಲಿ ಕರ್ಣನೊಬ್ಬನೇ ಮೋಡಗಳನ್ನು ಪರ್ವತವು ಹೇಗೋ ಹಾಗೆ ಸಹಿಸಿಕೊಂಡನು.
08042006a ತಮಾಸಾದ್ಯ ತು ತೇ ಕರ್ಣಂ ವ್ಯಶೀರ್ಯಂತ ಮಹಾರಥಾಃ।
08042006c ಯಥಾಚಲಂ ಸಮಾಸಾದ್ಯ ಜಲೌಘಾಃ ಸರ್ವತೋದಿಶಂ।
08042006e ತಯೋರಾಸೀನ್ಮಹಾರಾಜ ಸಂಗ್ರಾಮೋ ಲೋಮಹರ್ಷಣಃ।।
ಕರ್ಣನನ್ನು ಎದುರಿಸಿ ಆ ಮಹಾರಥರು ಮೋಡಗಳು ಪರ್ವತವನ್ನು ಸಮೀಪಿಸಿ ಮಳೆಸುರಿಸುವಂತೆ ಅವನ ಮೇಲೆ ಬಾಣಗಳ ಮಳೆಯನ್ನು ಸುರಿಸಿದರು. ಮಹಾರಾಜ! ಆವರ ಮಧ್ಯೆ ಅಲ್ಲಿ ಲೋಮಹರ್ಷಣ ಸಂಗ್ರಾಮವು ನಡೆಯಿತು.
08042007a ಧೃಷ್ಟದ್ಯುಮ್ನಸ್ತು ರಾಧೇಯಂ ಶರೇಣ ನತಪರ್ವಣಾ।
08042007c ತಾಡಯಾಮಾಸ ಸಂಕ್ರುದ್ಧಸ್ತಿಷ್ಠ ತಿಷ್ಠೇತಿ ಚಾಬ್ರವೀತ್।।
ಧೃಷ್ಟದ್ಯುಮ್ನನಾದರೋ ರಾಧೇಯನನ್ನು ನತಪರ್ವಣ ಶರಗಳಿಂದ ಹೊಡೆಯುತ್ತಾ ಸಂಕ್ರುದ್ಧನಾಗಿ ನಿಲ್ಲು ನಿಲ್ಲೆಂದು ಹೇಳಿದನು.
08042008a ವಿಜಯಂ ತು ಧನುಃಶ್ರೇಷ್ಠಂ ವಿಧುನ್ವಾನೋ ಮಹಾರಥಃ।
08042008c ಪಾರ್ಷತಸ್ಯ ಧನುಶ್ಚಿತ್ತ್ವಾ ಶರಾನಾಶೀವಿಷೋಪಮಾನ್।
08042008e ತಾಡಯಾಮಾಸ ಸಂಕ್ರುದ್ಧಃ ಪಾರ್ಷತಂ ನವಭಿಃ ಶರೈಃ।।
ಮಹಾರಥ ಕರ್ಣನಾದರೋ ಶ್ರೇಷ್ಠ ವಿಜಯ ಧನುಸ್ಸನ್ನು ಟೇಂಕರಿಸುತ್ತಾ ಪಾರ್ಷತನ ಧನುಸ್ಸನ್ನು ಸರ್ಪವಿಷಗಳಂತಿದ್ದ ಬಾಣಗಳಿಂದ ತುಂಡರಿಸಿ, ಸಂಕ್ರುದ್ಧನಾಗಿ ಪಾರ್ಷತನನ್ನು ಒಂಭತ್ತು ಶರಗಳಿಂದ ಹೊಡೆದನು.
08042009a ತೇ ವರ್ಮ ಹೇಮವಿಕೃತಂ ಭಿತ್ತ್ವಾ ತಸ್ಯ ಮಹಾತ್ಮನಃ।
08042009c ಶೋಣಿತಾಕ್ತಾ ವ್ಯರಾಜಂತ ಶಕ್ರಗೋಪಾ ಇವಾನಘ।।
ಅನಘ! ಅವುಗಳು ಆ ಮಹಾತ್ಮನ ಹೇಮಮಯ ಕವಚವನ್ನು ಭೇದಿಸಿ ರಕ್ತದಿಂದ ತೋಯ್ದು ಇಂದ್ರಗೋಪಗಳಂತೆ ಹೊಳೆಯುತ್ತಿದ್ದವು.
08042010a ತದಪಾಸ್ಯ ಧನುಶ್ಚಿನ್ನಂ ಧೃಷ್ಟದ್ಯುಮ್ನೋ ಮಹಾರಥಃ।
08042010c ಅನ್ಯದ್ಧನುರುಪಾದಾಯ ಶರಾಂಶ್ಚಾಶೀವಿಷೋಪಮಾನ್।
08042010e ಕರ್ಣಂ ವಿವ್ಯಾಧ ಸಪ್ತತ್ಯಾ ಶರೈಃ ಸಂನತಪರ್ವಭಿಃ।।
ತುಂಡಾದ ಧನುಸ್ಸನ್ನೆಸೆದು ಮಹಾರಥ ಧೃಷ್ಟದ್ಯುಮ್ನನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಸರ್ಪವಿಷದಂತಿದ್ದ ಶರಗಳಿಂದ ಮತ್ತು ಎಪ್ಪತ್ತು ಸನ್ನತಪರ್ವ ಶರಗಳಿಂದ ಕರ್ಣನನ್ನು ಹೊಡೆದನು.
08042011a ತಥೈವ ರಾಜನ್ಕರ್ಣೋಽಪಿ ಪಾರ್ಷತಂ ಶತ್ರುತಾಪನಂ।
08042011c ದ್ರೋಣಶತ್ರುಂ ಮಹೇಷ್ವಾಸೋ ವಿವ್ಯಾಧ ನಿಶಿತೈಃ ಶರೈಃ।।
ರಾಜನ್! ಮಹೇಷ್ವಾಸ ಕರ್ಣನೂ ಕೂಡ ದ್ರೋಣಶತ್ರು ಶತ್ರುತಾಪನ ಪಾರ್ಷತನನ್ನು ನಿಶಿತ ಶರಗಳಿಂದ ಹೊಡೆದನು.
08042012a ತಸ್ಯ ಕರ್ಣೋ ಮಹಾರಾಜ ಶರಂ ಕನಕಭೂಷಣಂ।
08042012c ಪ್ರೇಷಯಾಮಾಸ ಸಂಕ್ರುದ್ಧೋ ಮೃತ್ಯುದಂಡಮಿವಾಪರಂ।।
ಮಹಾರಾಜ! ಅವನ ಮೇಲೆ ಕರ್ಣನು ಸಂಕ್ರುದ್ಧನಾಗಿ ಮೃತ್ಯುದಂಡದಂತಿರುವ ಇನ್ನೊಂದು ಕನಕಭೂಷಣ ಶರವನ್ನು ಪ್ರಯೋಗಿಸಿದನು.
08042013a ತಮಾಪತಂತಂ ಸಹಸಾ ಘೋರರೂಪಂ ವಿಶಾಂ ಪತೇ।
08042013c ಚಿಚ್ಚೇದ ಸಪ್ತಧಾ ರಾಜಂ ಶೈನೇಯಃ ಕೃತಹಸ್ತವತ್।।
ವಿಶಾಂಪತೇ! ರಾಜನ್! ಅತಿವೇಗದಲ್ಲಿ ಅವನ ಮೇಲೆ ಬೀಳುತ್ತಿದ್ದ ಆ ಘೋರರೂಪದ ಶರವನ್ನು ಶೈನೇಯನು ಕೈಚಳಕದಿಂದ ಏಳು ಭಾಗಗಳನ್ನಾಗಿ ತುಂಡರಿಸಿದನು.
08042014a ದೃಷ್ಟ್ವಾ ವಿನಿಹಿತಂ ಬಾಣಂ ಶರೈಃ ಕರ್ಣೋ ವಿಶಾಂ ಪತೇ।
08042014c ಸಾತ್ಯಕಿಂ ಶರವರ್ಷೇಣ ಸಮಂತಾತ್ಪರ್ಯವಾರಯತ್।।
ವಿಶಾಂಪತೇ! ತನ್ನ ಬಾಣವನ್ನು ಶರಗಳಿಂದ ನಿರಸನಗೊಳಿಸಿದುದನ್ನು ನೋಡಿ ಕರ್ಣನು ಸಾತ್ಯಕಿಯನ್ನು ಶರವರ್ಷಗಳಿಂದ ಎಲ್ಲಕಡೆಗಳಿಂದಲೂ ತಡೆದನು.
08042015a ವಿವ್ಯಾಧ ಚೈನಂ ಸಮರೇ ನಾರಾಚೈಸ್ತತ್ರ ಸಪ್ತಭಿಃ।
08042015c ತಂ ಪ್ರತ್ಯವಿಧ್ಯಚ್ಚೈನೇಯಃ ಶರೈರ್ಹೇಮವಿಭೂಷಿತೈಃ।।
ಬಳಿಕ ಸಮರದಲ್ಲಿ ಏಳು ನಾರಾಚಗಳಿಂದ ಅವನನ್ನು ಹೊಡೆಯಲು ಅದಕ್ಕೆ ಪ್ರತಿಯಾಗಿ ಶೈನೇಯನು ಹೇಮಭೂಷಿತ ಶರಗಳಿಂದ ಕರ್ಣನನ್ನು ಪ್ರಹರಿಸಿದನು.
08042016a ತತೋ ಯುದ್ಧಮತೀವಾಸೀಚ್ಚಕ್ಷುಃಶ್ರೋತ್ರಭಯಾವಹಂ।
08042016c ರಾಜನ್ಘೋರಂ ಚ ಚಿತ್ರಂ ಚ ಪ್ರೇಕ್ಷಣೀಯಂ ಸಮಂತತಃ।।
ರಾಜನ್! ಆಗ ಕಣ್ಣುಗಳಿಂದ ನೋಡಲೂ ಕಿವಿಗಳಿಂದ ಕೇಳಲೂ ಭಯಂಕರವಾದ ಯುದ್ಧವು ಪ್ರಾರಂಭವಾಯಿತು. ಅದು ಘೋರವೂ ವಿಚಿತ್ರವೂ ಎಲ್ಲರೀತಿಗಳಲ್ಲಿ ಪ್ರೇಕ್ಷಣೀಯವೂ ಆಗಿತ್ತು.
08042017a ಸರ್ವೇಷಾಂ ತತ್ರ ಭೂತಾನಾಂ ಲೋಮಹರ್ಷೋ ವ್ಯಜಾಯತ।
08042017c ತದ್ದೃಷ್ಟ್ವಾ ಸಮರೇ ಕರ್ಮ ಕರ್ಣಶೈನೇಯಯೋರ್ನೃಪ।।
ನೃಪ! ಸಮರದಲ್ಲಿ ಕರ್ಣ-ಶೈನೇಯರ ಆ ಕರ್ಮಗಳನ್ನು ನೋಡಿ ಅಲ್ಲಿದ್ದ ಸರ್ವ ಭೂತಗಳಲ್ಲಿಯೂ ಲೋಮಹರ್ಷವುಂಟಾಯಿತು.
08042018a ಏತಸ್ಮಿನ್ನಂತರೇ ದ್ರೌಣಿರಭ್ಯಯಾತ್ಸುಮಹಾಬಲಂ।
08042018c ಪಾರ್ಷತಂ ಶತ್ರುದಮನಂ ಶತ್ರುವೀರ್ಯಾಸುನಾಶನಂ।।
ಇದರ ಮಧ್ಯದಲ್ಲಿ ದ್ರೌಣಿಯು ಸುಮಹಾಬಲ ಶತ್ರುದಮನ ಶತ್ರುವೀರ್ಯಸುನಾಶನ ಪಾರ್ಷತನನ್ನು ಆಕ್ರಮಣಿಸಿದನು.
08042019a ಅಭ್ಯಭಾಷತ ಸಂಕ್ರುದ್ಧೋ ದ್ರೌಣಿರ್ದೂರೇ ಧನಂಜಯೇ।
08042019c ತಿಷ್ಠ ತಿಷ್ಠಾದ್ಯ ಬ್ರಹ್ಮಘ್ನ ನ ಮೇ ಜೀವನ್ವಿಮೋಕ್ಷ್ಯಸೇ।।
ಸಂಕ್ರುದ್ಧನಾದ ದ್ರೌಣಿಯು ಧನಂಜಯ ಧೃಷ್ಟದ್ಯುಮ್ನನನ್ನು ದೂರದಿಂದಲೇ ಸಂಬೋಧಿಸಿ “ಬ್ರಹ್ಮಘ್ನ! ನಿಲ್ಲು! ನಿಲ್ಲು! ಇಂದು ನೀನು ನನ್ನಿಂದ ಜೀವಸಹಿತವಾಗಿ ಹೋಗುವುದಿಲ್ಲ!” ಎಂದನು.
08042020a ಇತ್ಯುಕ್ತ್ವಾ ಸುಭೃಶಂ ವೀರಃ ಶೀಘ್ರಕೃನ್ನಿಶಿತೈಃ ಶರೈಃ।
08042020c ಪಾರ್ಷತಂ ಚಾದಯಾಮಾಸ ಘೋರರೂಪೈಃ ಸುತೇಜನೈಃ।
08042020e ಯತಮಾನಂ ಪರಂ ಶಕ್ತ್ಯಾ ಯತಮಾನೋ ಮಹಾರಥಃ।।
ಹೀಗೆ ಹೇಳಿ ವೀರ ಶೀಘ್ರಕರ್ಮಿ ಮಹಾರಥ ಅಶ್ವತ್ಥಾಮನು ಪ್ರಯತ್ನಪಡುತ್ತಿದ್ದ ಪಾರ್ಷತನನ್ನು ಘೋರರೂಪದ ತೇಜಸ್ಸುಳ್ಳ ನಿಶಿತ ಶರಗಳಿಂದ ಪರಮ ಶಕ್ತಿಯನ್ನುಪಯೋಗಿಸಿ ಪ್ರಯತ್ನಪಟ್ಟು ಪ್ರಹರಿಸಿದನು.
08042021a ಯಥಾ ಹಿ ಸಮರೇ ದ್ರೌಣಿಃ ಪಾರ್ಷತಂ ವೀಕ್ಷ್ಯ ಮಾರಿಷ।
08042021c ತಥಾ ದ್ರೌಣಿಂ ರಣೇ ದೃಷ್ಟ್ವಾ ಪಾರ್ಷತಃ ಪರವೀರಹಾ।
08042021e ನಾತಿಹೃಷ್ಟಮನಾ ಭೂತ್ವಾ ಮನ್ಯತೇ ಮೃತ್ಯುಮಾತ್ಮನಃ।।
ಮಾರಿಷ! ಸಮರದಲ್ಲಿ ಹೇಗೆ ದ್ರೌಣಿಯು ಪಾರ್ಷತನನ್ನು ನೋಡಿ ಅವನೇ ತನ್ನ ಮೃತ್ಯುವೆಂದು ತಿಳಿದು ಖಿನ್ನಮನಸ್ಕನಾದನೋ ಹಾಗೆ ರಣದಲ್ಲಿ ದ್ರೌಣಿಯನ್ನು ನೋಡಿದ ಪರವೀರಹ ಪಾರ್ಶತನೂ ಖಿನ್ನಮನಸ್ಕನಾದನು.
08042022a ದ್ರೌಣಿಸ್ತು ದೃಷ್ಟ್ವಾ ರಾಜೇಂದ್ರ ಧೃಷ್ಟದ್ಯುಮ್ನಂ ರಣೇ ಸ್ಥಿತಂ।
08042022c ಕ್ರೋಧೇನ ನಿಃಶ್ವಸನ್ವೀರಃ ಪಾರ್ಷತಂ ಸಮುಪಾದ್ರವತ್।
ರಾಜೇಂದ್ರ! ರಣದಲ್ಲಿ ನಿಂತಿದ್ದ ಧೃಷ್ಟದ್ಯುಮ್ನನನ್ನು ನೋಡಿ ವೀರ ದ್ರೌಣಿಯು ಕ್ರೋಧದಿಂದ ಭುಸುಗುಟ್ಟುತ್ತಾ ಪಾರ್ಷತನನ್ನು ಆಕ್ರಮಣಿಸಿದನು.
08042022e ತಾವನ್ಯೋನ್ಯಂ ತು ದೃಷ್ಟ್ವೈವ ಸಂರಂಭಂ ಜಗ್ಮತುಃ ಪರಂ।।
08042023a ಅಥಾಬ್ರವೀನ್ಮಹಾರಾಜ ದ್ರೋಣಪುತ್ರಃ ಪ್ರತಾಪವಾನ್।
08042023c ಧೃಷ್ಟದ್ಯುಮ್ನಂ ಸಮೀಪಸ್ಥಂ ತ್ವರಮಾಣೋ ವಿಶಾಂ ಪತೇ।
08042023e ಪಾಂಚಾಲಾಪಸದಾದ್ಯ ತ್ವಾಂ ಪ್ರೇಷಯಿಷ್ಯಾಮಿ ಮೃತ್ಯವೇ।।
ಅನ್ಯೋನ್ಯರನ್ನು ಕಂಡೊಡನೆಯೇ ಅವರಿಬ್ಬರೂ ಪರಮ ಕ್ರುದ್ಧರಾದರು. ಮಹಾರಾಜ! ವಿಶಾಂಪತೇ! ಆಗ ಪ್ರತಾಪವಾನ್ ದ್ರೋಣಪುತ್ರನು ತ್ವರೆಮಾಡಿ ಸಮೀಪದಲ್ಲಿದ್ದ ಧೃಷ್ಟದ್ಯುಮ್ನನನಿಗೆ ಹೇಳಿದನು: “ಪಾಂಚಾಲಕುಲಕಳಂಕನೇ! ಇಂದು ನಾನು ನಿನ್ನನ್ನು ಮೃತ್ಯುವಿಗೆ ಒಪ್ಪಿಸುತ್ತೇನೆ!
08042024a ಪಾಪಂ ಹಿ ಯತ್ತ್ವಯಾ ಕರ್ಮ ಘ್ನತಾ ದ್ರೋಣಂ ಪುರಾ ಕೃತಂ।
08042024c ಅದ್ಯ ತ್ವಾ ಪತ್ಸ್ಯತೇ ತದ್ವೈ ಯಥಾ ಹ್ಯಕುಶಲಂ ತಥಾ।।
ಹಿಂದೆ ನೀನು ಎಸಗಿದ ದ್ರೋಣವಧೆಯು ಪಾಪ ಕರ್ಮವಾಗಿತ್ತು. ಅದೇ ಇಂದು ನಿನ್ನನ್ನು, ಎಷ್ಟು ಪಾಪಿಷ್ಟವಾಗಿತ್ತೋ ಅಷ್ಟು ಸಂತಾಪಗೊಳಿಸುತ್ತದೆ!
08042025a ಅರಕ್ಷ್ಯಮಾಣಃ ಪಾರ್ಥೇನ ಯದಿ ತಿಷ್ಠಸಿ ಸಂಯುಗೇ।
08042025c ನಾಪಕ್ರಮಸಿ ವಾ ಮೂಢ ಸತ್ಯಮೇತದ್ಬ್ರವೀಮಿ ತೇ।।
ಮೂಢ! ಯುದ್ಧದಲ್ಲಿ ಪಾರ್ಥನು ನಿನ್ನನ್ನು ರಕ್ಷಿಸಲು ನಿಲ್ಲದಿದ್ದರೆ ಅಥವಾ ನೀನು ಪಲಾಯನ ಮಾಡದಿದ್ದರೆ ನಿನ್ನನ್ನು ಸಂಹರಿಸುತ್ತೇನೆ. ಸತ್ಯವನ್ನೇ ಹೇಳುತ್ತಿದ್ದೇನೆ!”
08042026a ಏವಮುಕ್ತಃ ಪ್ರತ್ಯುವಾಚ ಧೃಷ್ಟದ್ಯುಮ್ನಃ ಪ್ರತಾಪವಾನ್।
08042026c ಪ್ರತಿವಾಕ್ಯಂ ಸ ಏವಾಸಿರ್ಮಾಮಕೋ ದಾಸ್ಯತೇ ತವ।
08042026e ಯೇನೈವ ತೇ ಪಿತುರ್ದತ್ತಂ ಯತಮಾನಸ್ಯ ಸಂಯುಗೇ।।
ಇದನ್ನು ಕೇಳಿ ಪ್ರತಾಪವಾನ್ ಧೃಷ್ಟದ್ಯುಮ್ನನು ಉತ್ತರಿಸಿದನು: “ನಿನಗೆ ಸರಿಯಾದ ಉತ್ತರವನ್ನು ನನ್ನ ಈ ಖಡ್ಗವೇ ಕೊಡಲಿದೆ! ಯುದ್ಧದಲ್ಲಿ ಪ್ರಯತ್ನಪಡುತ್ತಿದ್ದ ನಿನ್ನ ತಂದೆಗೂ ಇದೇ ಉತ್ತರವನ್ನು ಕೊಟ್ಟಿತ್ತು!
08042027a ಯದಿ ತಾವನ್ಮಯಾ ದ್ರೋಣೋ ನಿಹತೋ ಬ್ರಾಹ್ಮಣಬ್ರುವಃ।
08042027c ತ್ವಾಮಿದಾನೀಂ ಕಥಂ ಯುದ್ಧೇ ನ ಹನಿಷ್ಯಾಮಿ ವಿಕ್ರಮಾತ್।।
ಬ್ರಾಹ್ಮಣನೆಂದು ಕೇವಲ ಕರೆಯಿಸಿಕೊಳ್ಳುತ್ತಿದ್ದ ನಿನ್ನ ಆ ದ್ರೋಣನನ್ನು ನಾನು ಸಂಹರಿಸಿರುವಾಗ ಈ ಯುದ್ಧದಲ್ಲಿ ನಿನ್ನನ್ನು ನಾನು ವಿಕ್ರಮದಿಂದ ಏಕೆ ಕೊಲ್ಲಬಾರದು?”
08042028a ಏವಮುಕ್ತ್ವಾ ಮಹಾರಾಜ ಸೇನಾಪತಿರಮರ್ಷಣಃ।
08042028c ನಿಶಿತೇನಾಥ ಬಾಣೇನ ದ್ರೌಣಿಂ ವಿವ್ಯಾಧ ಪಾರ್ಷತಃ।।
ಮಹಾರಾಜ! ಹೀಗೆ ಹೇಳಿ ಅಮರ್ಷಣ ಸೇನಾಪತಿ ಪಾರ್ಷತನು ನಿಶಿತ ಬಾಣಗಳಿಂದ ದ್ರೌಣಿಯನ್ನು ಪ್ರಹರಿಸಿದನು.
08042029a ತತೋ ದ್ರೌಣಿಃ ಸುಸಂಕ್ರುದ್ಧಃ ಶರೈಃ ಸಂನತಪರ್ವಭಿಃ।
08042029c ಪ್ರಾಚ್ಚಾದಯದ್ದಿಶೋ ರಾಜನ್ ಧೃಷ್ಟದ್ಯುಮ್ನಸ್ಯ ಸಂಯುಗೇ।।
ರಾಜನ್! ಆಗ ಸಂಕ್ರುದ್ಧನಾದ ದ್ರೌಣಿಯು ಸನ್ನತಪರ್ವ ಶರಗಳಿಂದ ರಣದಲ್ಲಿ ಎಲ್ಲಕಡೆಗಳಿಂದ ಧೃಷ್ಟದ್ಯುಮ್ನನನ್ನು ಮುಚ್ಚಿಬಿಟ್ಟನು.
08042030a ನೈವಾಂತರಿಕ್ಷಂ ನ ದಿಶೋ ನೈವ ಯೋಧಾಃ ಸಮಂತತಃ।
08042030c ದೃಶ್ಯಂತೇ ವೈ ಮಹಾರಾಜ ಶರೈಶ್ಚನ್ನಾಃ ಸಹಸ್ರಶಃ।।
ಮಹಾರಾಜ! ಸಹಸ್ರಾರು ಶರಗಳಿಂದ ಮುಚ್ಚಿಹೋಗಿದ್ದುದರಿಂದ ಯೋಧರಿಗೆ ಸುತ್ತಲೂ ಅಂತರಿಕ್ಷವಾಗಲೀ ದಿಕ್ಕುಗಳಾಗಲೀ ಕಾಣದಂತಾಯಿತು.
08042031a ತಥೈವ ಪಾರ್ಷತೋ ರಾಜನ್ದ್ರೌಣಿಮಾಹವಶೋಭಿನಂ।
08042031c ಶರೈಃ ಸಂಚಾದಯಾಮಾಸ ಸೂತಪುತ್ರಸ್ಯ ಪಶ್ಯತಃ।।
ರಾಜನ್! ಹಾಗೆ ಪಾರ್ಷತನೂ ಕೂಡ ಸೂತಪುತ್ರನು ನೋಡುತ್ತಿದ್ದಂತೆಯೇ ಯುದ್ಧಶೋಭೀ ದ್ರೌಣಿಯನ್ನು ಶರಗಳಿಂದ ಮುಚ್ಚಿಬಿಟ್ಟನು.
08042032a ರಾಧೇಯೋಽಪಿ ಮಹಾರಾಜ ಪಾಂಚಾಲಾನ್ಸಹ ಪಾಂಡವೈಃ।
08042032c ದ್ರೌಪದೇಯಾನ್ಯುಧಾಮನ್ಯುಂ ಸಾತ್ಯಕಿಂ ಚ ಮಹಾರಥಂ।
08042032e ಏಕಃ ಸ ವಾರಯಾಮಾಸ ಪ್ರೇಕ್ಷಣೀಯಃ ಸಮಂತತಃ।।
ಮಹಾರಾಜ! ಎಲ್ಲಕಡೆಗಳಿಂದಲೂ ಪ್ರೇಕ್ಷಣೀಯನಾಗಿದ್ದ ರಾಧೇಯನಾದರೋ ಒಬ್ಬನೇ ಪಾಂಡವರೊಂದಿಗೆ ಪಾಂಚಾಲರನ್ನೂ, ದ್ರೌಪದೇಯರನ್ನೂ, ಮಹಾರಥ ಯುಧಾಮನ್ಯು ಸಾತ್ಯಕಿಯನ್ನೂ ತಡೆಯುತ್ತಿದ್ದನು.
08042033a ಧೃಷ್ಟದ್ಯುಮ್ನೋಽಪಿ ಸಮರೇ ದ್ರೌಣೇಶ್ಚಿಚ್ಚೇದ ಕಾರ್ಮುಕಂ।
08042033c ತದಪಾಸ್ಯ ಧನುಶ್ಚಿನ್ನಮನ್ಯದಾದತ್ತ ಕಾರ್ಮುಕಂ।
08042033e ವೇಗವತ್ಸಮರೇ ಘೋರಂ ಶರಾಂಶ್ಚಾಶೀವಿಷೋಪಮಾನ್।।
ಧೃಷ್ಟದ್ಯುಮ್ನನಾದರೋ ಸಮರದಲ್ಲಿ ದ್ರೌಣಿಯ ಬಿಲ್ಲನ್ನು ತುಂಡರಿಸಿದನು. ಆಗ ಸಮರದಲ್ಲಿ ವೇಗವಂತ ಅಶ್ವತ್ಥಾಮನು ತುಂಡಾದ ಬಿಲ್ಲನ್ನು ಎಸೆದು ಇನ್ನೊಂದು ಬಿಲ್ಲನ್ನು ತೆಗೆದುಕೊಂಡು ಸರ್ಪವಿಷಗಳಂತಿದ್ದ ಘೋರ ಬಾಣಗಳನ್ನು ಹೂಡಿದನು.
08042034a ಸ ಪಾರ್ಷತಸ್ಯ ರಾಜೇಂದ್ರ ಧನುಃ ಶಕ್ತಿಂ ಗದಾಂ ಧ್ವಜಂ।
08042034c ಹಯಾನ್ಸೂತಂ ರಥಂ ಚೈವ ನಿಮೇಷಾದ್ವ್ಯಧಮಚ್ಚರೈಃ।।
ರಾಜೇಂದ್ರ! ಅವನು ನಿಮಿಷಮಾತ್ರದಲ್ಲಿ ಆ ಶರಗಳಿಂದ ಪಾರ್ಷತನ ಧನುಸ್ಸು-ಶಕ್ತಿ-ಗದೆ-ಧ್ವಜ-ಕುದುರೆಗಳು-ಸಾರಥಿ ಮತ್ತು ರಥವನ್ನೂ ನಾಶಗೊಳಿಸಿದನು.
08042035a ಸ ಚಿನ್ನಧನ್ವಾ ವಿರಥೋ ಹತಾಶ್ವೋ ಹತಸಾರಥಿಃ।
08042035c ಖಡ್ಗಮಾದತ್ತ ವಿಪುಲಂ ಶತಚಂದ್ರಂ ಚ ಭಾನುಮತ್।।
ಧನುಸ್ಸು ತುಂಡಾಗಿದ್ದ ವಿರಥನೂ, ಹತಾಶ್ವನೂ, ಹತಸಾರಥಿಯೂ ಆಗಿದ್ದ ಧೃಷ್ಟದ್ಯುಮ್ನನು ಶತಚಂದ್ರಗಳಂತೆ ಹೊಳೆಯುತ್ತಿದ್ದ ವಿಪುಲ ಖಡ್ಗವನ್ನು ತೆಗೆದುಕೊಂಡನು.
08042036a ದ್ರೌಣಿಸ್ತದಪಿ ರಾಜೇಂದ್ರ ಭಲ್ಲೈಃ ಕ್ಷಿಪ್ರಂ ಮಹಾರಥಃ।
08042036c ಚಿಚ್ಛೇದ ಸಮರೇ ವೀರಃ ಕ್ಷಿಪ್ರಹಸ್ತೋ ದೃಢಾಯುಧಃ।
08042036e ರಥಾದನವರೂಢಸ್ಯ ತದದ್ಭುತಮಿವಾಭವತ್।।
ರಾಜೇಂದ್ರ! ಸಮರದಲ್ಲಿ ಅವನು ರಥದಿಂದ ಕೆಳಗಿಳಿಯುವುದರೊಳಗೇ ದೃಢಾಯುಧ ಕ್ಷಿಪ್ರಹಸ್ತ ವೀರ ಮಹಾರಥ ದ್ರೌಣಿಯು ಬೇಗನೇ ಭಲ್ಲಗಳಿಂದ ಖಡ್ಗವನ್ನು ಕತ್ತರಿಸಿದನು. ಅದೊಂದು ಅದ್ಭುತವೇ ಆಗಿತ್ತು!
08042037a ಧೃಷ್ಟದ್ಯುಮ್ನಂ ತು ವಿರಥಂ ಹತಾಶ್ವಂ ಚಿನ್ನಕಾರ್ಮುಕಂ।
08042037c ಶರೈಶ್ಚ ಬಹುಧಾ ವಿದ್ಧಮಸ್ತ್ರೈಶ್ಚ ಶಕಲೀಕೃತಂ।
08042037e ನಾತರದ್ಭರತಶ್ರೇಷ್ಠ ಯತಮಾನೋ ಮಹಾರಥಃ।।
ಭರತಶ್ರೇಷ್ಠ! ವಿರಥನಾಗಿದ್ದ, ಅಶ್ವಗಳನ್ನು ಕಳೆದುಕೊಂಡಿದ್ದ, ಧನುಸ್ಸುತುಂಡಾಗಿದ್ದ ಧೃಷ್ಟದ್ಯುಮ್ನನನ್ನು ಅಶ್ವತ್ಥಾಮನು ಅನೇಕ ಶರಸಮೂಹಗಳಿಂದ ಗಾಯಗೊಳಿಸಿದನು. ಆದರೆ ಮಹಾರಥ ದ್ರೌಣಿಯು ಎಷ್ಟು ಪ್ರಯತ್ನಪಟ್ಟರೂ ಬಾಣಗಳಿಂದ ಧೃಷ್ಟದ್ಯುಮ್ನನನ್ನು ಸಂಹರಿಸಲು ಆಗಲಿಲ್ಲ.
08042038a ತಸ್ಯಾಂತಮಿಷುಭೀ ರಾಜನ್ಯದಾ ದ್ರೌಣಿರ್ನ ಜಗ್ಮಿವಾನ್।
08042038c ಅಥ ತ್ಯಕ್ತ್ವಾ ಧನುರ್ವೀರಃ ಪಾರ್ಷತಂ ತ್ವರಿತೋಽನ್ವಗಾತ್।।
ರಾಜನ್! ಅವನನ್ನು ಬಾಣಗಳಿಂದ ಸಂಹರಿಸಲು ಆಗದಿರಲು ಧನುರ್ವೀರ ದ್ರೌಣಿಯು ಬಿಲ್ಲ-ಬಾಣಗಳನ್ನು ಬಿಸುಟು ತ್ವರೆಮಾಡಿ ಪಾರ್ಷತನ ಕಡೆ ನುಗ್ಗಿದನು.
08042039a ಆಸೀದಾದ್ರವತೋ ರಾಜನ್ವೇಗಸ್ತಸ್ಯ ಮಹಾತ್ಮನಃ।
08042039c ಗರುಡಸ್ಯೇವ ಪತತೋ ಜಿಘೃಕ್ಷೋಃ ಪನ್ನಗೋತ್ತಮಂ।।
ರಾಜನ್! ಓಡಿ ಬರುತ್ತಿದ್ದ ಅವನ ವೇಗವು ಹರಿದಾಡುವ ಸರ್ಪಗಳನ್ನು ಭಕ್ಷಿಸಲು ಅಂತರಿಕ್ಷದಿಂದ ಕೆಳಕ್ಕೆ ಎರಗುವ ಗರುಡಪಕ್ಷಿಯ ವೇಗಕ್ಕೆ ಸಮನಾಗಿತ್ತು.
08042040a ಏತಸ್ಮಿನ್ನೇವ ಕಾಲೇ ತು ಮಾಧವೋಽರ್ಜುನಮಬ್ರವೀತ್।
08042040c ಪಶ್ಯ ಪಾರ್ಥ ಯಥಾ ದ್ರೌಣಿಃ ಪಾರ್ಷತಸ್ಯ ವಧಂ ಪ್ರತಿ।
08042040e ಯತ್ನಂ ಕರೋತಿ ವಿಪುಲಂ ಹನ್ಯಾಚ್ಚೈನಮಸಂಶಯಂ।।
ಇದೇ ಸಮಯದಲ್ಲಿ ಮಾಧವನು ಅರ್ಜುನನಿಗೆ ಇಂತೆಂದನು: “ಪಾರ್ಥ! ನೋಡು! ದ್ರೌಣಿಯು ಪಾರ್ಷತನ ವಧೆಗೆ ವಿಪುಲ ಪ್ರಯತ್ನಪಡುತ್ತಿರುವುದನ್ನು ನೋಡು. ನಿಸ್ಸಂಶಯವಾಗಿಯೂ ಅವನನ್ನು ಕೊಂದೇಬಿಡುತ್ತಾನೆ!
08042041a ತಂ ಮೋಚಯ ಮಹಾಬಾಹೋ ಪಾರ್ಷತಂ ಶತ್ರುತಾಪನಂ।
08042041c ದ್ರೌಣೇರಾಸ್ಯಮನುಪ್ರಾಪ್ತಂ ಮೃತ್ಯೋರಾಸ್ಯಗತಂ ಯಥಾ।।
ಮಹಾಬಾಹೋ! ಸಾವಿನ ದವಡೆಯಂತಿರುವ ದ್ರೌಣಿಯ ಕೈಯಲ್ಲಿ ಸಿಲುಕಿರುವ ಶತ್ರುತಾಪನ ಪಾರ್ಷತನನ್ನು ವಿಮೋಚಿಸು!”
08042042a ಏವಮುಕ್ತ್ವಾ ಮಹಾರಾಜ ವಾಸುದೇವಃ ಪ್ರತಾಪವಾನ್।
08042042c ಪ್ರೈಷಯತ್ತತ್ರ ತುರಗಾನ್ಯತ್ರ ದ್ರೌಣಿರ್ವ್ಯವಸ್ಥಿತಃ।।
ಮಹಾರಾಜ! ಹೀಗೆ ಹೇಳಿ ಪ್ರತಾಪವಾನ್ ವಾಸುದೇವನು ದ್ರೌಣಿಯಿದ್ದಲ್ಲಿಗೆ ಕುದುರೆಗಳನ್ನು ಓಡಿಸಿದನು.
08042043a ತೇ ಹಯಾಶ್ಚಂದ್ರಸಂಕಾಶಾಃ ಕೇಶವೇನ ಪ್ರಚೋದಿತಾಃ।
08042043c ಪಿಬಂತ ಇವ ತದ್ವ್ಯೋಮ ಜಗ್ಮುರ್ದ್ರೌಣಿರಥಂ ಪ್ರತಿ।।
ಚಂದ್ರಸಂಕಾಶ ಆ ಕುದುರೆಗಳು ಕೇಶವನಿಂದ ಪ್ರಚೋದಿತಗೊಂಡು ಆಕಾಶವನ್ನೇ ಕುಡಿದುಬಿಡುವವೋ ಎನ್ನುವಂತೆ ವೇಗವಾಗಿ ದ್ರೌಣಿರಥದ ಬಳಿ ಬಂದವು.
08042044a ದೃಷ್ಟ್ವಾಯಾಂತೌ ಮಹಾವೀರ್ಯಾವುಭೌ ಕೃಷ್ಣಧನಂಜಯೌ।
08042044c ಧೃಷ್ಟದ್ಯುಮ್ನವಧೇ ರಾಜಂಶ್ಚಕ್ರೇ ಯತ್ನಂ ಮಹಾಬಲಃ।।
ರಾಜನ್! ಮಹಾವೀರ್ಯರಾದ ಕೃಷ್ಣ-ಧನಂಜಯರಿಬ್ಬರೂ ಬಂದಮೇಲೂ ಮಹಾಬಲ ದ್ರೌಣಿಯು ಧೃಷ್ಟದ್ಯುಮ್ನನ ವಧೆಯ ಪ್ರಯತ್ನವನ್ನು ಮಾಡುತ್ತಲೇ ಇದ್ದನು.
08042045a ವಿಕೃಷ್ಯಮಾಣಂ ದೃಷ್ಟ್ವೈವ ಧೃಷ್ಟದ್ಯುಮ್ನಂ ಜನೇಶ್ವರ।
08042045c ಶರಾಂಶ್ಚಿಕ್ಷೇಪ ವೈ ಪಾರ್ಥೋ ದ್ರೌಣಿಂ ಪ್ರತಿ ಮಹಾಬಲಃ।।
ಜನೇಶ್ವರ! ಧೃಷ್ಟದ್ಯುಮ್ನನನ್ನು ಎಳೆದಾಡುತ್ತಿರುವುದನ್ನು ನೋಡಿ ಮಹಾಬಲ ಪಾರ್ಥನು ದ್ರೌಣಿಯ ಮೇಲೆ ಶರಗಳನ್ನು ಪ್ರಯೋಗಿಸಿದನು.
08042046a ತೇ ಶರಾ ಹೇಮವಿಕೃತಾ ಗಾಂಡೀವಪ್ರೇಷಿತಾ ಭೃಶಂ।
08042046c ದ್ರೌಣಿಮಾಸಾದ್ಯ ವಿವಿಶುರ್ವಲ್ಮೀಕಮಿವ ಪನ್ನಗಾಃ।।
ಗಾಂಡೀವದಿಂದ ಪ್ರಹರಿಸಲ್ಪಟ್ಟ ಆ ಹೇಮವಿಕೃತ ಶರಗಳು – ಹಾವುಗಳು ಬಿಲವನ್ನು ಹೊಗುವಂತೆ – ದ್ರೌಣಿಯ ಶರೀರವನ್ನು ಹೊಕ್ಕವು.
08042047a ಸ ವಿಧ್ವಸ್ತೈಃ ಶರೈರ್ಘೋರೈರ್ದ್ರೋಣಪುತ್ರಃ ಪ್ರತಾಪವಾನ್।
08042047c ರಥಮಾರುರುಹೇ ವೀರೋ ಧನಂಜಯಶರಾರ್ದಿತಃ।
08042047e ಪ್ರಗೃಹ್ಯ ಚ ಧನುಃ ಶ್ರೇಷ್ಠಂ ಪಾರ್ಥಂ ವಿವ್ಯಾಧ ಸಾಯಕೈಃ।।
ಆ ಘೋರ ಶರಗಳಿಂದ ಗಾಯಗೊಂಡ ಪ್ರತಾಪವಾನ್ ವೀರ ದ್ರೋಣಪುತ್ರನು ತನ್ನ ರಥವನ್ನೇರಿದನು. ಧನಂಜಯನ ಶರಗಳಿಂದ ಪೀಡಿತನಾದ ಅವನು ಶ್ರೇಷ್ಠ ಧನುಸ್ಸನ್ನು ಹಿಡಿದು ಪಾರ್ಥನನ್ನು ಸಾಯಕಗಳಿಂದ ಹೊಡೆದನು.
08042048a ಏತಸ್ಮಿನ್ನಂತರೇ ವೀರಃ ಸಹದೇವೋ ಜನಾಧಿಪ।
08042048c ಅಪೋವಾಹ ರಥೇನಾಜೌ ಪಾರ್ಷತಂ ಶತ್ರುತಾಪನಂ।।
ಜನಾಧಿಪ! ಇದರ ಮಧ್ಯದಲ್ಲಿ ವೀರ ಸಹದೇವನು ಶತ್ರುತಾಪನ ಪಾರ್ಷತನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ದೂರಕರೆದುಕೊಂಡು ಹೋದನು.
08042049a ಅರ್ಜುನೋಽಪಿ ಮಹಾರಾಜ ದ್ರೌಣಿಂ ವಿವ್ಯಾಧ ಪತ್ರಿಭಿಃ।
08042049c ತಂ ದ್ರೋಣಪುತ್ರಃ ಸಂಕ್ರುದ್ಧೋ ಬಾಹ್ವೋರುರಸಿ ಚಾರ್ದಯತ್।।
ಮಹಾರಾಜ! ಅರ್ಜುನನೂ ಕೂಡ ದ್ರೌಣಿಯನ್ನು ಪತ್ರಿಗಳಿಂದ ಹೊಡೆದನು. ಅವನನ್ನು ಸಂಕ್ರುದ್ಧನಾದ ದ್ರೋಣಪುತ್ರನು ಬಾಹುಗಳು ಮತ್ತು ಎದೆಗೆ ಹೊಡೆದನು.
08042050a ಕ್ರೋಧಿತಸ್ತು ರಣೇ ಪಾರ್ಥೋ ನಾರಾಚಂ ಕಾಲಸಮ್ಮಿತಂ।
08042050c ದ್ರೋಣಪುತ್ರಾಯ ಚಿಕ್ಷೇಪ ಕಾಲದಂಡಮಿವಾಪರಂ।
08042050e ಸ ಬ್ರಾಹ್ಮಣಸ್ಯಾಂಸದೇಶೇ ನಿಪಪಾತ ಮಹಾದ್ಯುತಿಃ।।
ರಣದಲ್ಲಿ ಕ್ರೋಧಿತನಾದ ಪಾರ್ಥನು ಇನ್ನೊಂದು ಕಾಲದಂಡದಂತಿರುವ ಕಾಲಸಮ್ಮಿತ ನಾರಾಚವನ್ನು ದ್ರೋಣಪುತ್ರನ ಮೇಲೆ ಪ್ರಯೋಗಿಸಿದನು. ಆ ಮಹಾದ್ಯುತಿ ಬಾಣವು ಬ್ರಾಹ್ಮಣನ ಹೆಗಲಿನ ಮೇಲೆ ಬಿದ್ದಿತು.
08042051a ಸ ವಿಹ್ವಲೋ ಮಹಾರಾಜ ಶರವೇಗೇನ ಸಂಯುಗೇ।
08042051c ನಿಷಸಾದ ರಥೋಪಸ್ಥೇ ವೈಕ್ಲವ್ಯಂ ಚ ಪರಂ ಯಯೌ।।
ಮಹಾರಾಜ! ಸಂಯುಗದಲ್ಲಿ ಶರವೇಗದಿಂದ ವಿಹ್ವಲನಾದ ಅಶ್ವತ್ಥಾಮನು ಪೀಠಕ್ಕೆ ಒರಗಿ ಮೂರ್ಛಿತನಾದನು.
08042052a ತತಃ ಕರ್ಣೋ ಮಹಾರಾಜ ವ್ಯಾಕ್ಷಿಪದ್ವಿಜಯಂ ಧನುಃ।
08042052c ಅರ್ಜುನಂ ಸಮರೇ ಕ್ರುದ್ಧಃ ಪ್ರೇಕ್ಷಮಾಣೋ ಮುಹುರ್ಮುಹುಃ।
08042052e ದ್ವೈರಥಂ ಚಾಪಿ ಪಾರ್ಥೇನ ಕಾಮಯಾನೋ ಮಹಾರಣೇ।।
ಮಹಾರಾಜ! ಆಗ ಮಹಾರಣದಲ್ಲಿ ಪಾರ್ಥನೊಂದಿಗೆ ದ್ವೈರಥ ಯುದ್ಧವನ್ನು ಬಯಸುತ್ತಿದ್ದ ಕರ್ಣನು ಕ್ರುದ್ಧನಾಗಿ ಸಮರದಲ್ಲಿ ವಿಜಯ ಧನುಸ್ಸನ್ನು ಸೆಳೆಯುತ್ತಾ ಅರ್ಜುನನನ್ನು ಬಾರಿ ಬಾರಿಗೂ ನೋಡುತ್ತಿದ್ದನು.
08042053a ತಂ ತು ಹಿತ್ವಾ ಹತಂ ವೀರಂ ಸಾರಥಿಃ ಶತ್ರುಕರ್ಶನಂ।
08042053c ಅಪೋವಾಹ ರಥೇನಾಜೌ ತ್ವರಮಾಣೋ ರಣಾಜಿರಾತ್।।
ಅಶ್ವತ್ಥಾಮನು ಮೂರ್ಛೆಹೋದುದನ್ನು ನೋಡಿದ ಸಾರಥಿಯು ತ್ವರೆಮಾಡಿ ಆ ಶತ್ರುಕರ್ಶನ ವೀರನನ್ನು ರಣರಂಗದಿಂದ ಕೊಂಡೊಯ್ದನು.
08042054a ಅಥೋತ್ಕ್ರುಷ್ಟಂ ಮಹಾರಾಜ ಪಾಂಚಾಲೈರ್ಜಿತಕಾಶಿಭಿಃ।
08042054c ಮೋಕ್ಷಿತಂ ಪಾರ್ಷತಂ ದೃಷ್ಟ್ವಾ ದ್ರೋಣಪುತ್ರಂ ಚ ಪೀಡಿತಂ।।
ಮಹಾರಾಜ! ಪಾರ್ಷತನು ಬಿಡುಗಡೆ ಹೊಂದಿದುದನ್ನೂ ದ್ರೋಣಪುತ್ರನು ಪೀಡಿತನಾದುದನ್ನೂ ನೋಡಿ ವಿಜಯೋತ್ಸಾಹೀ ಪಾಂಚಾಲರು ಜೋರಾಗಿ ಗರ್ಜಿಸಿದರು.
08042055a ವಾದಿತ್ರಾಣಿ ಚ ದಿವ್ಯಾನಿ ಪ್ರಾವಾದ್ಯಂತ ಸಹಸ್ರಶಃ।
08042055c ಸಿಂಹನಾದಶ್ಚ ಸಂಜಜ್ಞೇ ದೃಷ್ಟ್ವಾ ಘೋರಂ ಮಹಾದ್ಭುತಂ।।
ಸಾವಿರಾರು ದಿವ್ಯ ವಾದ್ಯಗಳು ಮೊಳಗಿದವು. ಆ ಘೋರ ಮಹಾದ್ಭುತವನ್ನು ನೋಡಿ ಸಿಂಹನಾದಗಳಾದವು.
08042056a ಏವಂ ಕೃತ್ವಾಬ್ರವೀತ್ಪಾರ್ಥೋ ವಾಸುದೇವಂ ಧನಂಜಯಃ।
08042056c ಯಾಹಿ ಸಂಶಪ್ತಕಾನ್ ಕೃಷ್ಣ ಕಾರ್ಯಮೇತತ್ಪರಂ ಮಮ।।
ಹೀಗೆ ಮಾಡಿ ಪಾರ್ಥ ಧನಂಜಯನು ವಾಸುದೇವನಿಗೆ “ಕೃಷ್ಣ! ಸಂಶಪ್ತಕರಲ್ಲಿಗೆ ಕೊಂಡೊಯ್ಯಿ! ಅದೊಂದು ನನ್ನ ಪರಮ ಕಾರ್ಯವುಳಿದಿದೆ!” ಎಂದನು.
08042057a ತತಃ ಪ್ರಯಾತೋ ದಾಶಾರ್ಹಃ ಶ್ರುತ್ವಾ ಪಾಂಡವಭಾಷಿತಂ।
08042057c ರಥೇನಾತಿಪತಾಕೇನ ಮನೋಮಾರುತರಂಹಸಾ।।
ಪಾಂಡವನಾಡಿದ ಮಾತನ್ನು ಕೇಳಿ ದಾಶಾರ್ಹನು ಎತ್ತರ ಪತಾಕೆಯುಳ್ಳ ಮನೋವೇಗ ರಥವನ್ನು ನಡೆಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ದ್ರೌಣ್ಯಪಯಾನೇ ದ್ವಾಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ದ್ರೌಣ್ಯಪಯಾನ ಎನ್ನುವ ನಲ್ವತ್ತೆರಡನೇ ಅಧ್ಯಾಯವು.