ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 40
ಸಾರ
ನಕುಲ-ಸಹದೇವರು ಮತ್ತು ದುರ್ಯೋಧರರ ನಡುವೆ ಯುದ್ಧ (1-19). ಧೃಷ್ಟದ್ಯುಮ್ನ-ದುರ್ಯೋಧನರ ಯುದ್ಧ; ದುರ್ಯೋಧನನ ಪರಾಜಯ (20-38). ಕರ್ಣನು ಪಾಂಡವ ಸೇನೆಯನ್ನೂ ಭೀಮಸೇನನು ಕೌರವ ಸೇನೆಯನ್ನೂ ಧ್ವಂಸಗೊಳಿಸಿದುದು (39-77). ಅರ್ಜುನನು ಕೌರವಸೇನೆಯನ್ನು ಪ್ರವೇಶಿಸಿ ಯುದ್ಧಮಾಡುತ್ತಾ ಕಾಂಬೋಜದ ಸುದಕ್ಷಿಣನ ತಮ್ಮನನ್ನು ವಧಿಸಿದುದು (78-106). ಅರ್ಜುನ-ಅಶ್ವತ್ಥಾಮರ ಯುದ್ಧ; ಅಶ್ವತ್ಥಾಮನ ಪರಾಜಯ (107-130).
08040001 ಸಂಜಯ ಉವಾಚ।
08040001a ಭೀಮಸೇನಂ ಸಪಾಂಚಾಲ್ಯಂ ಚೇದಿಕೇಕಯಸಂವೃತಂ।
08040001c ವೈಕರ್ತನಃ ಸ್ವಯಂ ರುದ್ಧ್ವಾ ವಾರಯಾಮಾಸ ಸಾಯಕೈಃ।।
ಸಂಜಯನು ಹೇಳಿದನು: “ಪಾಂಚಾಲ್ಯ, ಚೇದಿ-ಕೇಕಯರೊಂದಿಗೆ ಸಂವೃತನಾದ ಭೀಮಸೇನನನ್ನು ಸ್ವಯಂ ವೈಕರ್ತನನು ಸಾಯಕಗಳಿಂದ ಹೊಡೆದು ತಡೆದನು.
08040002a ತತಸ್ತು ಚೇದಿಕಾರೂಷಾನ್ ಸೃಂಜಯಾಂಶ್ಚ ಮಹಾರಥಾನ್।
08040002c ಕರ್ಣೋ ಜಘಾನ ಸಂಕ್ರುದ್ಧೋ ಭೀಮಸೇನಸ್ಯ ಪಶ್ಯತಃ।।
ಭೀಮಸೇನನು ನೋಡುತ್ತಿದ್ದಂತೆಯೇ ಕರ್ಣನು ಸಂಕ್ರುದ್ಧನಾಗಿ ಚೇದಿ-ಕರೂಷರನ್ನೂ ಮಹಾರಥ ಸೃಂಜಯರನ್ನೂ ಸಂಹರಿಸಿದನು.
08040003a ಭೀಮಸೇನಸ್ತತಃ ಕರ್ಣಂ ವಿಹಾಯ ರಥಸತ್ತಮಂ।
08040003c ಪ್ರಯಯೌ ಕೌರವಂ ಸೈನ್ಯಂ ಕಕ್ಷಮಗ್ನಿರಿವ ಜ್ವಲನ್।।
ಆಗ ಭೀಮಸೇನನು ರಥಸತ್ತಮ ಕರ್ಣನನ್ನು ಬಿಟ್ಟು ಪ್ರಜ್ವಲಿಸುತ್ತಿರುವ ಅಗ್ನಿಯು ಹುಲ್ಲುಮೆದೆಯನ್ನು ಹೊಗುವಂತೆ ಕೌರವ ಸೇನೆಯನ್ನು ಹೊಕ್ಕನು.
08040004a ಸೂತಪುತ್ರೋಽಪಿ ಸಮರೇ ಪಾಂಚಾಲಾನ್ಕೇಕಯಾಂಸ್ತಥಾ।
08040004c ಸೃಂಜಯಾಂಶ್ಚ ಮಹೇಷ್ವಾಸಾನ್ನಿಜಘಾನ ಸಹಸ್ರಶಃ।।
ಸೂತಪುತ್ರನಾದರೋ ಸಮರದಲ್ಲಿ ಸಹಸ್ರಾರು ಸಂಖ್ಯೆಗಳಲ್ಲಿ ಮಹೇಷ್ವಾಸ ಪಾಂಚಾಲರನ್ನೂ, ಕೇಕಯರನ್ನೂ, ಸೃಂಜಯರನ್ನೂ ಸಂಹರಿಸಿದನು.
08040005a ಸಂಶಪ್ತಕೇಷು ಪಾರ್ಥಶ್ಚ ಕೌರವೇಷು ವೃಕೋದರಃ।
08040005c ಪಾಂಚಾಲೇಷು ತಥಾ ಕರ್ಣಃ ಕ್ಷಯಂ ಚಕ್ರೂರ್ಮಹಾರಥಾಃ।।
ಮಹಾರಥ ಪಾರ್ಥನು ಸಂಶಪ್ತಕರಲ್ಲಿಯೂ, ವೃಕೋದರನು ಕೌರವರಲ್ಲಿಯೂ ಮತ್ತು ಹಾಗೆಯೇ ಮಹಾರಥ ಕರ್ಣನು ಪಾಂಚಾಲರಲ್ಲಿಯೂ ಅತ್ಯಧಿಕ ಕ್ಷಯವನ್ನುಂಟುಮಾಡಿದರು.
08040006a ತೇ ಕ್ಷತ್ರಿಯಾ ದಹ್ಯಮಾನಾಸ್ತ್ರಿಭಿಸ್ತೈಃ ಪಾವಕೋಪಮೈಃ।
08040006c ಜಗ್ಮುರ್ವಿನಾಶಂ ಸಮರೇ ರಾಜನ್ದುರ್ಮಂತ್ರಿತೇ ತವ।।
ರಾಜನ್ ನಿನ್ನ ದುರ್ಮಂತ್ರದಿಂದ ಪಾವಕನಂತೆ ಸುಡುತ್ತಿದ್ದ ಆ ಮೂವರಿಂದ ಸಮರದಲ್ಲಿ ಕ್ಷತ್ರಿಯರು ವಿನಾಶಹೊಂದಿದರು.
08040007a ತತೋ ದುರ್ಯೋಧನಃ ಕ್ರುದ್ಧೋ ನಕುಲಂ ನವಭಿಃ ಶರೈಃ।
08040007c ವಿವ್ಯಾಧ ಭರತಶ್ರೇಷ್ಠ ಚತುರಶ್ಚಾಸ್ಯ ವಾಜಿನಃ।।
ಭರತಶ್ರೇಷ್ಠ! ಆಗ ಕ್ರುದ್ಧನಾದ ದುರ್ಯೋಧನನು ನಕುಲನನ್ನು ಮತ್ತು ಅವನ ನಾಲ್ಕು ಕುದುರೆಗಳನ್ನು ಒಂಭತ್ತು ಶರಗಳಿಂದ ಹೊಡೆದನು.
08040008a ತತಃ ಪುನರಮೇಯಾತ್ಮಾ ತವ ಪುತ್ರೋ ಜನಾಧಿಪಃ।
08040008c ಕ್ಷುರೇಣ ಸಹದೇವಸ್ಯ ಧ್ವಜಂ ಚಿಚ್ಛೇದ ಕಾಂಚನಂ।।
ಪುನಃ ನಿನ್ನ ಅಮೇಯಾತ್ಮ ಪುತ್ರ ಜನಾಧಿಪನು ಕ್ಷುರದಿಂದ ಸಹದೇವನ ಕಾಂಚನ ಧ್ವಜವನ್ನು ಕತ್ತರಿಸಿದನು.
08040009a ನಕುಲಸ್ತು ತತಃ ಕ್ರುದ್ಧಸ್ತವ ಪುತ್ರಂ ತ್ರಿಸಪ್ತಭಿಃ।
08040009c ಜಘಾನ ಸಮರೇ ರಾಜನ್ಸಹದೇವಶ್ಚ ಪಂಚಭಿಃ।।
ರಾಜನ್! ಆಗ ಸಮರದಲ್ಲಿ ಕ್ರುದ್ಧನಾಗಿ ನಕುಲನು ಮೂರು ಬಾಣಗಳಿಂದ ಮತ್ತು ಸಹದೇವನು ಐದರಿಂದ ನಿನ್ನ ಪುತ್ರನನ್ನು ಹೊಡೆದರು.
08040010a ತಾವುಭೌ ಭರತಶ್ರೇಷ್ಠೌ ಶ್ರೇಷ್ಠೌ ಸರ್ವಧನುಷ್ಮತಾಂ।
08040010c ವಿವ್ಯಾಧೋರಸಿ ಸಂಕ್ರುದ್ಧಃ ಪಂಚಭಿಃ ಪಂಚಭಿಃ ಶರೈಃ।।
ದುರ್ಯೋಧನನು ಸಂಕ್ರುದ್ಧನಾಗಿ ಐದೈದು ಶರಗಳಿಂದ ಸರ್ವಧನುಷ್ಮತರಲ್ಲಿ ಶ್ರೇಷ್ಠ ಆ ಇಬ್ಬರು ಭರತಶ್ರೇಷ್ಠರ ವಕ್ಷಸ್ಥಳಗಳನ್ನು ಪ್ರಹರಿಸಿದನು.
08040011a ತತೋಽಪರಾಭ್ಯಾಂ ಭಲ್ಲಾಭ್ಯಾಂ ಧನುಷೀ ಸಮಕೃಂತತ।
08040011c ಯಮಯೋಃ ಪ್ರಹಸನ್ ರಾಜನ್ವಿವ್ಯಾಧೈವ ಚ ಸಪ್ತಭಿಃ।।
ರಾಜನ್! ಬೇರೆ ಭಲ್ಲಗಳೆರಡರಿಂದ ಆ ಯಮಳರ ಧನುಸ್ಸುಗಳನ್ನು ಕತ್ತರಿಸಿ ನಕ್ಕು ಏಳು ಬಾಣಗಳಿಂದ ಅವರನ್ನು ಹೊಡೆದನು.
08040012a ತಾವನ್ಯೇ ಧನುಷೀ ಶ್ರೇಷ್ಠೇ ಶಕ್ರಚಾಪನಿಭೇ ಶುಭೇ।
08040012c ಪ್ರಗೃಹ್ಯ ರೇಜತುಃ ಶೂರೌ ದೇವಪುತ್ರಸಮೌ ಯುಧಿ।।
ಆಗ ಅವರಿಬ್ಬರು ಶೂರರೂ ಶಕ್ರಚಾಪಗಳಂತೆ ಶೋಭಿಸುತ್ತಿದ್ದ ಬೇರೆ ಶ್ರೇಷ್ಠ ಧನುಸ್ಸುಗಳನ್ನು ತೆಗೆದುಕೊಂಡು ಯುದ್ಧದಲ್ಲಿ ದೇವಪುತ್ರರಂತೆ ಶೋಭಿಸಿದರು.
08040013a ತತಸ್ತೌ ರಭಸೌ ಯುದ್ಧೇ ಭ್ರಾತರೌ ಭ್ರಾತರಂ ನೃಪ।
08040013c ಶರೈರ್ವವರ್ಷತುರ್ಘೋರೈರ್ಮಹಾಮೇಘೌ ಯಥಾಚಲಂ।।
ನೃಪ! ಆಗ ಅವರಿಬ್ಬರು ಸಹೋದರರೂ ಘೋರಮಹಾಮೇಘಗಳು ಪರ್ವತವನ್ನು ಹೇಗೋ ಹಾಗೆ ಯುದ್ಧದಲ್ಲಿ ಅಣ್ಣನನ್ನು ಶರವರ್ಷಗಳಿಂದ ಅಭಿಷೇಚಿಸಿದರು.
08040014a ತತಃ ಕ್ರುದ್ಧೋ ಮಹಾರಾಜ ತವ ಪುತ್ರೋ ಮಹಾರಥಃ।
08040014c ಪಾಂಡುಪುತ್ರೌ ಮಹೇಷ್ವಾಸೌ ವಾರಯಾಮಾಸ ಪತ್ರಿಭಿಃ।।
ಮಹಾರಾಜ! ಆಗ ನಿನ್ನ ಪುತ್ರ ಮಹಾರಥನು ಕ್ರುದ್ಧನಾಗಿ ಪತ್ರಿಗಳಿಂದ ಮಹೇಷ್ವಾಸ ಪಾಂಡುಪುತ್ರರನ್ನು ತಡೆದನು.
08040015a ಧನುರ್ಮಂಡಲಮೇವಾಸ್ಯ ದೃಶ್ಯತೇ ಯುಧಿ ಭಾರತ।
08040015c ಸಾಯಕಾಶ್ಚೈವ ದೃಶ್ಯಂತೇ ನಿಶ್ಚರಂತಃ ಸಮಂತತಃ।।
ಭಾರತ! ಆಗ ಯುದ್ಧದಲ್ಲಿ ಅವನ ಧನುಸ್ಸು ಮಂಡಲಾಕಾರವಾಗಿ ಕಾಣುತ್ತಿತ್ತು. ಅದರಿಂದ ಒಂದೇಸಮನೆ ಹೊರಬರುತ್ತಿದ್ದ ಸಾಯಕಗಳು ಮಾತ್ರ ಕಾಣುತ್ತಿದ್ದವು.
08040016a ತಸ್ಯ ಸಾಯಕಸಂಚನ್ನೌ ಚಕಾಶೇತಾಂ ಚ ಪಾಂಡವೌ।
08040016c ಮೇಘಚ್ಛನ್ನೌ ಯಥಾ ವ್ಯೋಮ್ನಿ ಚಂದ್ರಸೂರ್ಯೌ ಹತಪ್ರಭೌ।।
ಅವನ ಸಾಯಕಗಳ ಗುಂಪುಗಳು ಮೇಘಗಳು ಆಕಾಶವನ್ನು ತುಂಬಿ ಚಂದ್ರ-ಸೂರ್ಯರ ಪ್ರಭೆಗಳನ್ನು ಕುಂದಿಸುವಂತೆ ಆ ಪಾಂಡವರನ್ನು ಕುಂದಿಸಿದವು.
08040017a ತೇ ತು ಬಾಣಾ ಮಹಾರಾಜ ಹೇಮಪುಂಖಾಃ ಶಿಲಾಶಿತಾಃ।
08040017c ಆಚ್ಚಾದಯನ್ದಿಶಃ ಸರ್ವಾಃ ಸೂರ್ಯಸ್ಯೇವಾಂಶವಸ್ತದಾ।।
ಮಹಾರಾಜ! ಆ ಹೇಮಪುಂಖ ಶಿಲಾಶಿತ ಬಾಣಗಳು ಸೂರ್ಯನ ಕಿರಣಗಳಂತೆ ಸರ್ವ ದಿಕ್ಕುಗಳನ್ನೂ ಆಚ್ಛಾದಿಸಿದವು.
08040018a ಬಾಣಭೂತೇ ತತಸ್ತಸ್ಮಿನ್ಸಂಛನ್ನೇ ಚ ನಭಸ್ತಲೇ।
08040018c ಯಮಾಭ್ಯಾಂ ದದೃಶೇ ರೂಪಂ ಕಾಲಾಂತಕಯಮೋಪಮಂ।।
ನಭಸ್ತಲವೂ ಬಾಣಮಯವಾಗಿ ಮುಚ್ಚಿಹೋಗಲು ಯಮಳರಿಗೆ ದುರ್ಯೋಧನನ ರೂಪವು ಕಾಲಾಂತಕ ಯಮನಂತೆಯೇ ತೋರಿತು.
08040019a ಪರಾಕ್ರಮಂ ತು ತಂ ದೃಷ್ಟ್ವಾ ತವ ಸೂನೋರ್ಮಹಾರಥಾಃ।
08040019c ಮೃತ್ಯೋರುಪಾಂತಿಕಂ ಪ್ರಾಪ್ತೌ ಮಾದ್ರೀಪುತ್ರೌ ಸ್ಮ ಮೇನಿರೇ।।
ನಿನ್ನ ಮಗನ ಆ ಪರಾಕ್ರಮವನ್ನು ನೋಡಿ ಮಾದ್ರಿಪುತ್ರರಿಗೆ ಮೃತ್ಯುವು ಸಮೀಪವಾಯಿತೆಂದೇ ಮಹಾರಥರು ಭಾವಿಸಿದರು.
08040020a ತತಃ ಸೇನಾಪತೀ ರಾಜನ್ಪಾಂಡವಸ್ಯ ಮಹಾತ್ಮನಃ।
08040020c ಪಾರ್ಷತಃ ಪ್ರಯಯೌ ತತ್ರ ಯತ್ರ ರಾಜಾ ಸುಯೋಧನಃ।।
ರಾಜನ್! ಆಗ ಪಾಂಡವರ ಸೇನಾಪತಿ ಮಹಾತ್ಮ ಪಾರ್ಷತ ಧೃಷ್ಟದ್ಯುಮ್ನನು ರಾಜಾ ಸುಯೋಧನನಿದ್ದಲ್ಲಿಗೆ ಆಗಮಿಸಿದನು.
08040021a ಮಾದ್ರೀಪುತ್ರೌ ತತಃ ಶೂರೌ ವ್ಯತಿಕ್ರಮ್ಯ ಮಹಾರಥೌ।
08040021c ಧೃಷ್ಟದ್ಯುಮ್ನಸ್ತವ ಸುತಂ ತಾಡಯಾಮಾಸ ಸಾಯಕೈಃ।।
ಮಹಾರಥ ಶೂರ ಮಾದ್ರೀಪುತ್ರರೀರ್ವರನ್ನೂ ದಾಟಿ ಮುಂದೆ ಹೋಗಿ ಧೃಷ್ಟದ್ಯುಮ್ನನು ಸಾಯಕಗಳಿಂದ ನಿನ್ನ ಮಗನನ್ನು ಪ್ರಹರಿಸಿದನು.
08040022a ತಮವಿಧ್ಯದಮೇಯಾತ್ಮಾ ತವ ಪುತ್ರೋಽತ್ಯಮರ್ಷಣಃ।
08040022c ಪಾಂಚಾಲ್ಯಂ ಪಂಚವಿಂಶತ್ಯಾ ಪ್ರಹಸ್ಯ ಪುರುಷರ್ಷಭ।।
ಪುರುಷರ್ಷಭ! ನಿನ್ನ ಮಗ ಅಮೇಯಾತ್ಮ ಅಸಹನಶೀಲ ಮಗನು ನಗುತ್ತಲೇ ಪಾಂಚಾಲ್ಯನನ್ನು ಇಪ್ಪತ್ತೈದು ಬಾಣಗಳಿಂದ ಪ್ರಹರಿಸಿದನು.
08040023a ತತಃ ಪುನರಮೇಯಾತ್ಮಾ ಪುತ್ರಸ್ತೇ ಪೃಥಿವೀಪತೇ।
08040023c ವಿದ್ಧ್ವಾ ನನಾದ ಪಾಂಚಾಲ್ಯಂ ಷಷ್ಟ್ಯಾ ಪಂಚಭಿರೇವ ಚ।।
ಪುನಃ ನಿನ್ನ ಪುತ್ರ ಅಮೇಯಾತ್ಮ ಪೃಥಿವೀಪತಿಯು ಪಾಂಚಾಲ್ಯನನ್ನು ಅರವತ್ತೈದು ಬಾಣಗಳಿಂದ ಹೊಡೆದು ಗರ್ಜಿಸಿದನು.
08040024a ಅಥಾಸ್ಯ ಸಶರಂ ಚಾಪಂ ಹಸ್ತಾವಾಪಂ ಚ ಮಾರಿಷ।
08040024c ಕ್ಷುರಪ್ರೇಣ ಸುತೀಕ್ಷ್ಣೇನ ರಾಜಾ ಚಿಚ್ಛೇದ ಸಂಯುಗೇ।।
ಮಾರಿಷ! ಆಗ ಸಂಯುಗದಲ್ಲಿ ರಾಜಾ ದುರ್ಯೋಧನನು ಸುತೀಕ್ಷ್ಣ ಕ್ಷುರಪ್ರದಿಂದ ಶರಯುಕ್ತವಾದ ಅವನ ಧನುಸ್ಸನ್ನೂ ಕೈಚೀಲವನ್ನೂ ಕತ್ತರಿಸಿದನು.
08040025a ತದಪಾಸ್ಯ ಧನುಶ್ಛಿನ್ನಂ ಪಾಂಚಾಲ್ಯಃ ಶತ್ರುಕರ್ಶನಃ।
08040025c ಅನ್ಯದಾದತ್ತ ವೇಗೇನ ಧನುರ್ಭಾರಸಹಂ ನವಂ।।
ತುಂಡಾದ ಧನುಸ್ಸನ್ನು ಬಿಸುಟು ಶತ್ರುಕರ್ಶನ ಪಾಂಚಾಲ್ಯನು ವೇಗದಿಂದ ಇನ್ನೊಂದು ಭಾರವನ್ನು ಸಹಿಸುವ ಹೊಸ ಧನುಸ್ಸನ್ನು ಕೈಗೆತ್ತಿಕೊಂಡನು.
08040026a ಪ್ರಜ್ವಲನ್ನಿವ ವೇಗೇನ ಸಂರಂಭಾದ್ರುಧಿರೇಕ್ಷಣಃ।
08040026c ಅಶೋಭತ ಮಹೇಷ್ವಾಸೋ ಧೃಷ್ಟದ್ಯುಮ್ನಃ ಕೃತವ್ರಣಃ।।
ತುಂಬಾಗಾಯಗೊಂಡಿದ್ದ, ಕೋಪದಿಂದ ಕಣ್ಣುಗಳು ಕೆಂಪಾಗಿದ್ದ ಮಹೇಷ್ವಾಸ ಧೃಷ್ಟದ್ಯುಮ್ನನು ವೇಗದಿಂದ ಪ್ರಜ್ವಲಿಸುತ್ತಿರುವ ಅಗ್ನಿಯಂತೆಯೇ ಶೋಭಿಸಿದನು.
08040027a ಸ ಪಂಚದಶ ನಾರಾಚಾಂ ಶ್ವಸತಃ ಪನ್ನಗಾನಿವ।
08040027c ಜಿಘಾಂಸುರ್ಭರತಶ್ರೇಷ್ಠಂ ಧೃಷ್ಟದ್ಯುಮ್ನೋ ವ್ಯವಾಸೃಜತ್।।
ಭರತಶ್ರೇಷ್ಠ ದುರ್ಯೋಧನನನ್ನು ಸಂಹರಿಸಲೋಸುಗ ಧೃಷ್ಟದ್ಯುಮ್ನನು ಪನ್ನಗಗಳಂತೆ ಭುಸುಗುಡುತ್ತಿರುವ ಹದಿನೈದು ನಾರಾಚಗಳನ್ನು ಪ್ರಯೋಗಿಸಿದನು.
08040028a ತೇ ವರ್ಮ ಹೇಮವಿಕೃತಂ ಭಿತ್ತ್ವಾ ರಾಜ್ಞಃ ಶಿಲಾಶಿತಾಃ।
08040028c ವಿವಿಶುರ್ವಸುಧಾಂ ವೇಗಾತ್ಕಂಕಬರ್ಹಿಣವಾಸಸಃ।।
ರಣಹದ್ದಿನ ರೆಕ್ಕೆಗಳೇ ವಸ್ತ್ರಗಳಾಗಿದ್ದ ಆ ಶಿಲಾಶಿತ ಬಾಣಗಳು ರಾಜನ ಸುವರ್ಣಮಯ ಕವಚವನ್ನು ಭೇದಿಸಿ ವೇಗವಾಗಿ ನೆಲವನ್ನು ಹೊಕ್ಕವು.
08040029a ಸೋಽತಿವಿದ್ಧೋ ಮಹಾರಾಜ ಪುತ್ರಸ್ತೇಽತಿವ್ಯರಾಜತ।
08040029c ವಸಂತೇ ಪುಷ್ಪಶಬಲಃ ಸಪುಷ್ಪ ಇವ ಕಿಂಶುಕಃ।।
ಮಹಾರಾಜ! ಅತಿಯಾಗಿ ಗಾಯಗೊಂಡ ನಿನ್ನ ಮಗನು ವಸಂತದಲ್ಲಿ ಹೂಬಿಟ್ಟ ಮುತ್ತುಗದ ಮರದಂತೆಯೇ ತೋರಿದನು.
08040030a ಸ ಚಿನ್ನವರ್ಮಾ ನಾರಾಚೈಃ ಪ್ರಹಾರೈರ್ಜರ್ಜರಚ್ಚವಿಃ।
08040030c ಧೃಷ್ಟದ್ಯುಮ್ನಸ್ಯ ಭಲ್ಲೇನ ಕ್ರುದ್ಧಶ್ಚಿಚ್ಛೇದ ಕಾರ್ಮುಕಂ।।
ನಾರಾಚಗಳ ಪ್ರಹಾರದಿಂದ ಕವಚವು ಛಿದ್ರವಾಗಲು ದುರ್ಯೋಧನನ ಶರೀರವು ಜರ್ಜರಿತವಾಯಿತು. ಆಗ ಅವನು ಕ್ರುದ್ಧನಾಗಿ ಭಲ್ಲದಿಂದ ಧೃಷ್ಟದ್ಯುಮ್ನನ ಕಾರ್ಮುಕವನ್ನು ತುಂಡರಿಸಿದನು.
08040031a ಅಥೈನಂ ಛಿನ್ನಧನ್ವಾನಂ ತ್ವರಮಾಣೋ ಮಹೀಪತಿಃ।
08040031c ಸಾಯಕೈರ್ದಶಭೀ ರಾಜನ್ ಭ್ರುವೋರ್ಮಧ್ಯೇ ಸಮಾರ್ದಯತ್।।
ರಾಜನ್! ಕೂಡಲೇ ಆ ಮಹೀಪತಿಯು ತ್ವರೆಮಾಡಿ ಧನುಸ್ಸು ತುಂಡಾಗಿದ್ದ ಧೃಷ್ಟದ್ಯುಮ್ನನ ಹುಬ್ಬುಗಳ ಮಧ್ಯೆ ಹತ್ತು ಸಾಯಕಗಳನ್ನು ಪ್ರಹರಿಸಿದನು.
08040032a ತಸ್ಯ ತೇಽಶೋಭಯನ್ವಕ್ತ್ರಂ ಕರ್ಮಾರಪರಿಮಾರ್ಜಿತಾಃ।
08040032c ಪ್ರಫುಲ್ಲಂ ಚಂಪಕಂ ಯದ್ವದ್ಭ್ರಮರಾ ಮಧುಲಿಪ್ಸವಃ।।
ಮಧುವನ್ನಪೇಕ್ಷಿಸುವ ದುಂಬಿಗಳು ಅರಳಿದ ತಾವರೆಯನ್ನು ಹೇಗೋ ಹಾಗೆ ಕಮ್ಮಾರನಿಂದ ಹದಗೊಳಿಸಿದ್ದ ಆ ಬಾಣಗಳು ಧೃಷ್ಟದ್ಯುಮ್ನನ ಮುಖವನ್ನು ಶೋಭೆಗೊಳಿಸಿದವು.
08040033a ತದಪಾಸ್ಯ ಧನುಶ್ಛಿನ್ನಂ ಧೃಷ್ಟದ್ಯುಮ್ನೋ ಮಹಾಮನಾಃ।
08040033c ಅನ್ಯದಾದತ್ತ ವೇಗೇನ ಧನುರ್ಭಲ್ಲಾಂಶ್ಚ ಷೋಡಶ।।
ಆಗ ಮಹಾಮನಸ್ವಿ ಧೃಷ್ಟದ್ಯುಮ್ನನು ತುಂಡಾದ ಧನುಸ್ಸನ್ನು ಬಿಸುಟು ವೇಗದಿಂದ ಇನ್ನೊಂದು ಧನುಸ್ಸನ್ನೂ ಹದಿನಾರು ಭಲ್ಲಗಳನ್ನೂ ಎತ್ತಿಕೊಂಡನು.
08040034a ತತೋ ದುರ್ಯೋಧನಸ್ಯಾಶ್ವಾನ್ ಹತ್ವಾ ಸೂತಂ ಚ ಪಂಚಭಿಃ।
08040034c ಧನುಶ್ಚಿಚ್ಛೇದ ಭಲ್ಲೇನ ಜಾತರೂಪಪರಿಷ್ಕೃತಂ।।
ಆಗ ಅವನು ಐದು ಭಲ್ಲಗಳಿಂದ ದುರ್ಯೋಧನನ ಕುದುರೆಗಳನ್ನೂ ಸಾರಥಿಯನ್ನು ಸಂಹರಿಸಿ ಆರನೆಯದರಿಂದ ಅವನ ಸುವರ್ಣಪರಿಷ್ಕೃತ ಧನುಸ್ಸನ್ನು ತುಂಡರಿಸಿದನು.
08040035a ರಥಂ ಸೋಪಸ್ಕರಂ ಚತ್ರಂ ಶಕ್ತಿಂ ಖಡ್ಗಂ ಗದಾಂ ಧ್ವಜಂ।
08040035c ಭಲ್ಲೈಶ್ಚಿಚ್ಚೇದ ನವಭಿಃ ಪುತ್ರಸ್ಯ ತವ ಪಾರ್ಷತಃ।।
ಪಾರ್ಷತನು ಉಳಿದ ಒಂಭತ್ತು ಭಲ್ಲಗಳಿಂದ ಯುದ್ಧಸಾಮಗ್ರಿಗಳಿಂದ ಯುಕ್ತವಾಗಿದ್ದ ನಿನ್ನ ಮಗನ ರಥ, ಚತ್ರ, ಶಕ್ತಿ, ಖಡ್ಗ, ಗದೆ ಮತ್ತು ಧ್ವಜಗಳನ್ನು ತುಂಡರಿಸಿದನು.
08040036a ತಪನೀಯಾಂಗದಂ ಚಿತ್ರಂ ನಾಗಂ ಮಣಿಮಯಂ ಶುಭಂ।
08040036c ಧ್ವಜಂ ಕುರುಪತೇಶ್ಛಿನ್ನಂ ದದೃಶುಃ ಸರ್ವಪಾರ್ಥಿವಾಃ।।
ಚಿನ್ನದ ಅಂಗದಗಳಿಂದ ಶೋಭಿಸುತ್ತಿದ್ದ ಆ ಮಣಿಮಯ, ನಾಗದ ಚಿಹ್ನೆಯುಳ್ಳ ಕುರುಪತಿಯ ಧ್ವಜವು ತುಂಡಾಗಿದ್ದುದನ್ನು ಸರ್ವ ಪಾರ್ಥಿವರೂ ನೋಡಿದರು.
08040037a ದುರ್ಯೋಧನಂ ತು ವಿರಥಂ ಛಿನ್ನಸರ್ವಾಯುಧಂ ರಣೇ।
08040037c ಭ್ರಾತರಃ ಪರ್ಯರಕ್ಷಂತ ಸೋದರ್ಯಾ ಭರತರ್ಷಭ।।
ಭರತರ್ಷಭ! ರಣದಲ್ಲಿ ವಿರಥನಾಗಿದ್ದ, ಸರ್ವಾಯುಧಗಳನ್ನೂ ಕಳೆದುಕೊಂಡಿದ್ದ ಆಣ್ಣ ದುರ್ಯೋಧನನನ್ನು ಸಹೋದರರು ಪರಿರಕ್ಷಿಸುತ್ತಿದ್ದರು.
08040038a ತಮಾರೋಪ್ಯ ರಥೇ ರಾಜನ್ದಂಡಧಾರೋ ಜನಾಧಿಪಂ।
08040038c ಅಪೋವಾಹ ಚ ಸಂಭ್ರಾಂತೋ ಧೃಷ್ಟದ್ಯುಮ್ನಸ್ಯ ಪಶ್ಯತಃ।।
ರಾಜನ್! ಧೃಷ್ಟದ್ಯುಮ್ನನು ನೋಡುತ್ತಿದ್ದಂತೆಯೇ ಸಂಭ್ರಾಂತನಾಗಿದ್ದ ಜನಾಧಿಪ ದುರ್ಯೋಧನನನ್ನು ದಂಡಧಾರನು ತನ್ನ ರಥದಲ್ಲಿ ಏರಿಸಿಕೊಂಡನು.
08040039a ಕರ್ಣಸ್ತು ಸಾತ್ಯಕಿಂ ಜಿತ್ವಾ ರಾಜಗೃದ್ಧೀ ಮಹಾಬಲಃ।
08040039c ದ್ರೋಣಹಂತಾರಮುಗ್ರೇಷುಂ ಸಸಾರಾಭಿಮುಖಂ ರಣೇ।।
ರಾಜನ ಹಿತಾಕಾಂಕ್ಷೀ ಮಹಾಬಲ ಕರ್ಣನಾದರೋ ಸಾತ್ಯಕಿಯನ್ನು ಗೆದ್ದು ರಣದಲ್ಲಿ ಉಗ್ರ ದ್ರೋಣಹಂತಾರ ಧೃಷ್ಟದ್ಯುಮ್ನನನ್ನು ಎದುರಿಸಿ ಹೋದನು.
08040040a ತಂ ಪೃಷ್ಠತೋಽಭ್ಯಯಾತ್ತೂರ್ಣಂ ಶೈನೇಯೋ ವಿತುದಂ ಶರೈಃ।
08040040c ವಾರಣಂ ಜಘನೋಪಾಂತೇ ವಿಷಾಣಾಭ್ಯಾಮಿವ ದ್ವಿಪಃ।।
ಒಂದು ಆನೆಯು ಇನ್ನೊಂದು ಆನೆಯ ಹಿಂಭಾಗವನ್ನು ದಂತಗಳಿಂದ ತಿವಿಯುವಂತೆ ಶೈನೇಯನು ವೇಗವಾಗಿ ಶರಗಳಿಂದ ಕರ್ಣನನ್ನು ಪೀಡಿಸುತ್ತಾ ಅವನ ಹಿಂದೆಯೇ ಹೋದನು.
08040041a ಸ ಭಾರತ ಮಹಾನಾಸೀದ್ಯೋಧಾನಾಂ ಸುಮಹಾತ್ಮನಾಂ।
08040041c ಕರ್ಣಪಾರ್ಷತಯೋರ್ಮಧ್ಯೇ ತ್ವದೀಯಾನಾಂ ಮಹಾರಣಃ।।
ಭಾರತ! ಆಗ ಮಹಾರಣದಲ್ಲಿ ಕರ್ಣ-ಪಾರ್ಷತರ ಮಧ್ಯೆ ಮತ್ತು ನಿನ್ನಕಡೆಯ ಮಹಾತ್ಮ ಯೋಧರ ಮಹಾಯುದ್ಧವು ನಡೆಯಿತು.
08040042a ನ ಪಾಂಡವಾನಾಮಸ್ಮಾಕಂ ಯೋಧಃ ಕಶ್ಚಿತ್ಪರಾಙ್ಮುಖಃ।
08040042c ಪ್ರತ್ಯದೃಶ್ಯತ ಯತ್ಕರ್ಣಃ ಪಾಂಚಾಲಾಂಸ್ತ್ವರಿತೋ ಯಯೌ।।
ಪಾಂಡವರ ಮತ್ತು ನಮ್ಮವರ ಯಾವ ಯೋಧನೂ ಪರಾಂಙ್ಮುಖನಾದುದು ತೋರಲಿಲ್ಲ. ಆಗ ಕರ್ಣನು ತ್ವರೆಮಾಡಿ ಪಾಂಚಾಲರನ್ನು ಆಕ್ರಮಣಿಸಿದನು.
08040043a ತಸ್ಮಿನ್ ಕ್ಷಣೇ ನರಶ್ರೇಷ್ಠ ಗಜವಾಜಿನರಕ್ಷಯಃ।
08040043c ಪ್ರಾದುರಾಸೀದುಭಯತೋ ರಾಜನ್ಮಧ್ಯಂಗತೇಽಹನಿ।।
ನರಶ್ರೇಷ್ಠ! ರಾಜನ್! ಮಧ್ಯಾಹ್ನದ ಆ ಸಮಯದಲ್ಲಿ ಎರಡೂ ಪಕ್ಷಗಳಲ್ಲಿ ಆನೆ-ಕುದುರೆ-ಮನುಷ್ಯರ ವಿನಾಶವು ನಡೆಯಿತು.
08040044a ಪಾಂಚಾಲಾಸ್ತು ಮಹಾರಾಜ ತ್ವರಿತಾ ವಿಜಿಗೀಷವಃ।
08040044c ಸರ್ವತೋಽಭ್ಯದ್ರವನ್ಕರ್ಣಂ ಪತತ್ರಿಣ ಇವ ದ್ರುಮಂ।।
ಮಹಾರಾಜ! ಜಯವನ್ನು ಬಯಸಿದ ಪಾಂಚಾಲರಾದರೋ ತ್ವರೆಮಾಡಿ ಪಕ್ಷಿಗಳು ವೃಕ್ಷವನ್ನು ಹೇಗೋ ಹಾಗೆ ಕರ್ಣನನ್ನು ಎಲ್ಲಕಡೆಗಳಿಂದ ಆಕ್ರಮಣಿಸಿದರು.
08040045a ತೇಷಾಮಾಧಿರಥಿಃ ಕ್ರುದ್ಧೋ ಯತಮಾನಾನ್ಮನಸ್ವಿನಃ।
08040045c ವಿಛಿನ್ವನ್ನೇವ ಬಾಣಾಗ್ರೈಃ ಸಮಾಸಾದಯದಗ್ರತಃ।।
ಕ್ರುದ್ಧನಾದ ಆಧಿರಥಿಯು ಪ್ರಯತ್ನಪಡುತ್ತಿದ್ದ ಆ ಮನಸ್ವಿಗಳನ್ನು ಅಯ್ದಾಯ್ದುಕೊಂಡು ಬಾಣಾಗ್ರಗಳಿಂದ ಸಂಹರಿಸಲು ಉಪಕ್ರಮಿಸಿದನು.
08040046a ವ್ಯಾಘ್ರಕೇತುಂ ಸುಶರ್ಮಾಣಂ ಶಂಕುಂ ಚೋಗ್ರಂ ಧನಂಜಯಂ।
08040046c ಶುಕ್ಲಂ ಚ ರೋಚಮಾನಂ ಚ ಸಿಂಹಸೇನಂ ಚ ದುರ್ಜಯಂ।।
08040047a ತೇ ವೀರಾ ರಥವೇಗೇನ ಪರಿವವ್ರುರ್ನರೋತ್ತಮಂ।
08040047c ಸೃಜಂತಂ ಸಾಯಕಾನ್ಕ್ರುದ್ಧಂ ಕರ್ಣಮಾಹವಶೋಭಿನಂ।।
ವ್ಯಾಘ್ರಕೇತು, ಸುಶರ್ಮ, ಶಂಕು, ಉಗ್ರ, ಧನಂಜಯ, ಶುಕ್ಲ, ರೋಚಮಾನ, ಸಿಂಹಸೇನ ಮತ್ತು ದುರ್ಜಯ – ಈ ವೀರರು ರಥವೇಗದಿಂದ ಕ್ರುದ್ಧನಾಗಿ ಸಾಯಕಗಳನ್ನು ಪ್ರಯೋಗಿಸುತ್ತಿದ್ದ ಆಹವಶೋಭೀ ನರೋತ್ತಮ ಕರ್ಣನನ್ನು ಸುತ್ತುವರೆದರು.
08040048a ಯುಧ್ಯಮಾನಾಂಸ್ತು ತಾನ್ ಶೂರಾನ್ಮನುಜೇಂದ್ರಃ ಪ್ರತಾಪವಾನ್।
08040048c ಅಷ್ಟಾಭಿರಷ್ಟೌ ರಾಧೇಯೋ ನ್ಯಹನನ್ನಿಶಿತೈಃ ಶರೈಃ।।
ಯುದ್ಧಮಾಡುತ್ತಿದ್ದ ಆ ಎಂಟು ಶೂರರನ್ನು ಮನುಜೇಂದ್ರ ಪ್ರತಾಪವಾನ್ ರಾಧೇಯನು ಎಂಟು ನಿಶಿತ ಶರಗಳಿಂದ ಸಂಹರಿಸಿದನು.
08040049a ಅಥಾಪರಾನ್ಮಹಾರಾಜ ಸೂತಪುತ್ರಃ ಪ್ರತಾಪವಾನ್।
08040049c ಜಘಾನ ಬಹುಸಾಹಸ್ರಾನ್ಯೋಧಾನ್ಯುದ್ಧವಿಶಾರದಃ।।
ಮಹಾರಾಜ! ಪ್ರತಾಪವಾನ್ ಯುದ್ಧವಿಶಾರದ ಸೂತಪುತ್ರನು ಇನ್ನೂ ಅನೇಕ ಸಹಸ್ರಾರು ಯೋಧರನ್ನು ಸಂಹರಿಸಿದನು.
08040050a ವಿಷ್ಣುಂ ಚ ವಿಷ್ಣುಕರ್ಮಾಣಂ ದೇವಾಪಿಂ ಭದ್ರಮೇವ ಚ।
08040050c ದಂಡಂ ಚ ಸಮರೇ ರಾಜಂಶ್ಚಿತ್ರಂ ಚಿತ್ರಾಯುಧಂ ಹರಿಂ।।
08040051a ಸಿಂಹಕೇತುಂ ರೋಚಮಾನಂ ಶಲಭಂ ಚ ಮಹಾರಥಂ।
08040051c ನಿಜಘಾನ ಸುಸಂಕ್ರುದ್ಧಶ್ಚೇದೀನಾಂ ಚ ಮಹಾರಥಾನ್।।
ರಾಜನ್! ಸಂಕ್ರುದ್ಧನಾಗಿದ್ದ ಅವನು ಸಮರದಲ್ಲಿ ಚೇದಿದೇಶದ ವಿಷ್ಣು, ವಿಷ್ಣುಕರ್ಮ, ದೇವಾಪಿ, ಭದ್ರ, ದಂಡ, ಚಿತ್ರ, ಚಿತ್ರಾಯುಧ, ಹರಿ, ಸಿಂಹಕೇತು, ರೋಚಮಾನ, ಮತ್ತು ಮಹಾರಥ ಶಲಭರನ್ನೂ ಸಂಹರಿಸಿದನು.
08040052a ತೇಷಾಮಾದದತಃ ಪ್ರಾಣಾನಾಸೀದಾಧಿರಥೇರ್ವಪುಃ।
08040052c ಶೋಣಿತಾಭ್ಯುಕ್ಷಿತಾಂಗಸ್ಯ ರುದ್ರಸ್ಯೇವೋರ್ಜಿತಂ ಮಹತ್।।
ಅವರ ಪ್ರಾಣಗಳನ್ನು ಹೀರಿಕೊಳ್ಳುತ್ತಿದ್ದ ಮತ್ತು ಅಂಗಾಂಗಗಳು ರಕ್ತಸಿಕ್ತವಾಗಿದ್ದ ಆ ರಾಧೇಯನ ಶರೀರವು ರುದ್ರನ ವಿಶಾಲ ಶರೀರದಂತೆ ಕಾಣುತ್ತಿತ್ತು.
08040053a ತತ್ರ ಭಾರತ ಕರ್ಣೇನ ಮಾತಂಗಾಸ್ತಾಡಿತಾಃ ಶರೈಃ।
08040053c ಸರ್ವತೋಽಭ್ಯದ್ರವನ್ಭೀತಾಃ ಕುರ್ವಂತೋ ಮಹದಾಕುಲಂ।।
ಭಾರತ! ಅಲ್ಲಿ ಕರ್ಣನ ಶರಗಳಿಂದ ಪ್ರಹರಿಸಲ್ಪಟ್ಟ ಆನೆಗಳು ಭಯಗೊಂಡು ಎಲ್ಲಕಡೆ ಓಡಿಹೋಗುತ್ತಾ ಮಹಾ ವ್ಯಾಕುಲವನ್ನುಂಟುಮಾಡುತ್ತಿದ್ದವು.
08040054a ನಿಪೇತುರುರ್ವ್ಯಾಂ ಸಮರೇ ಕರ್ಣಸಾಯಕಪೀಡಿತಾಃ।
08040054c ಕುರ್ವಂತೋ ವಿವಿಧಾನ್ನಾದಾನ್ವಜ್ರನುನ್ನಾ ಇವಾಚಲಾಃ।।
ಸಮರದಲ್ಲಿ ಕರ್ಣನ ಸಾಯಕಗಳಿಂದ ಪೀಡಿತ ಆನೆಗಳು ವಿವಿಧ ಕೂಗುಗಳನ್ನು ಕೂಗುತ್ತಾ ವಜ್ರಾಹತ ಪರ್ವತಗಳಂತೆ ಭೂಮಿಯ ಮೇಲೆ ಬೀಳುತ್ತಿದ್ದವು.
08040055a ಗಜವಾಜಿಮನುಷ್ಯೈಶ್ಚ ನಿಪತದ್ಭಿಃ ಸಮಂತತಃ।
08040055c ರಥೈಶ್ಚಾವಗತೈರ್ಮಾರ್ಗೇ ಪರ್ಯಸ್ತೀರ್ಯತ ಮೇದಿನೀ।।
ಕರ್ಣನು ಹೋಗುತ್ತಿದ್ದ ಮಾರ್ಗಗಳಲ್ಲಿ ಎಲ್ಲಕಡೆಗಳಲ್ಲಿ ಆನೆ-ಕುದುರೆ-ಮನುಷ್ಯರು ಮತ್ತು ರಥಗಳು ಬಿದ್ದು ರಣಭೂಮಿಯನ್ನು ತುಂಬುತ್ತಿದ್ದವು.
08040056a ನೈವ ಭೀಷ್ಮೋ ನ ಚ ದ್ರೋಣೋ ನಾಪ್ಯನ್ಯೇ ಯುಧಿ ತಾವಕಾಃ।
08040056c ಚಕ್ರುಃ ಸ್ಮ ತಾದೃಶಂ ಕರ್ಮ ಯಾದೃಶಂ ವೈ ಕೃತಂ ರಣೇ।।
ಕರ್ಣನು ರಣದಲ್ಲಿ ಮಾಡಿದಂಥ ಸಾಹಸಕರ್ಮವನ್ನು ನಿನ್ನಕಡೆಯ ಯಾರೂ – ಭೀಷ್ಮನಾಗಲೀ, ದ್ರೋಣನಾಗಲೀ ಅಥವಾ ಇನ್ಯಾರೇ ಆಗಲೀ – ಯುದ್ಧದಲ್ಲಿ ಮಾಡಿದುದನ್ನು ನಾನು ನೋಡಿರಲಿಲ್ಲ.
08040057a ಸೂತಪುತ್ರೇಣ ನಾಗೇಷು ರಥೇಷು ಚ ಹಯೇಷು ಚ।
08040057c ನರೇಷು ಚ ನರವ್ಯಾಘ್ರ ಕೃತಂ ಸ್ಮ ಕದನಂ ಮಹತ್।।
ನರವ್ಯಾಘ್ರ ಸೂತಪುತ್ರನು ಆನೆಗಳು, ರಥಗಳು, ಕುದುರೆಗಳು ಮತ್ತು ಮನುಷ್ಯರೊಂದಿಗೆ ಮಹಾಕದನವಾಡಿದನು.
08040058a ಮೃಗಮಧ್ಯೇ ಯಥಾ ಸಿಂಹೋ ದೃಶ್ಯತೇ ನಿರ್ಭಯಶ್ಚರನ್।
08040058c ಪಾಂಚಾಲಾನಾಂ ತಥಾ ಮಧ್ಯೇ ಕರ್ಣೋಽಚರದಭೀತವತ್।।
ಮೃಗಗಳ ಮಧ್ಯದಲ್ಲಿ ಸಿಂಹವು ನಿರ್ಭಯವಾಗಿ ಸಂಚರಿಸುವಂತೆ ಪಾಂಚಾಲರ ಮಧ್ಯದಲ್ಲಿ ಕರ್ಣನು ಭೀತಿಯಿಲ್ಲದೇ ಸಂಚರಿಸುತ್ತಿದ್ದನು.
08040059a ಯಥಾ ಮೃಗಗಣಾಂಸ್ತ್ರಸ್ತಾನ್ಸಿಂಹೋ ದ್ರಾವಯತೇ ದಿಶಃ।
08040059c ಪಾಂಚಾಲಾನಾಂ ರಥವ್ರಾತಾನ್ಕರ್ಣೋ ದ್ರಾವಯತೇ ತಥಾ।।
ಭಯಗೊಂಡ ಮೃಗಗಣಗಳನ್ನು ಸಿಂಹವು ಹೇಗೆ ದಿಕ್ಕಾಪಾಲಾಗಿ ಓಡಿಸುವುದೋ ಹಾಗೆ ಕರ್ಣನು ಪಾಂಚಾಲರ ರಥಸಮೂಹಗಳನ್ನು ಓಡಿಸುತ್ತಿದ್ದನು.
08040060a ಸಿಂಹಾಸ್ಯಂ ಚ ಯಥಾ ಪ್ರಾಪ್ಯ ನ ಜೀವಂತಿ ಮೃಗಾಃ ಕ್ವ ಚಿತ್।
08040060c ತಥಾ ಕರ್ಣಮನುಪ್ರಾಪ್ಯ ನ ಜೀವಂತಿ ಮಹಾರಥಾಃ।।
ಸಿಂಹನಿಗೆ ಸಿಲುಕಿದ ಮೃಗಗಳು ಹೇಗೆ ಜೀವಂತವಾಗಿರುವುದಿಲ್ಲವೋ ಹಾಗೆ ಕರ್ಣನಿಗೆ ಸಿಲುಕಿದ ಮಹಾರಥರು ಜೀವದಿಂದಿರುತ್ತಿರಲಿಲ್ಲ.
08040061a ವೈಶ್ವಾನರಂ ಯಥಾ ದೀಪ್ತಂ ದಹ್ಯಂತೇ ಪ್ರಾಪ್ಯ ವೈ ಜನಾಃ।
08040061c ಕರ್ಣಾಗ್ನಿನಾ ರಣೇ ತದ್ವದ್ದಗ್ಧಾ ಭಾರತ ಸೃಂಜಯಾಃ।।
ಭಾರತ! ಪ್ರಜ್ವಲಿಸುತ್ತಿರುವ ವೈಶ್ವಾನರನಿಗೆ ಸಿಲುಕಿದ ಜನರು ಹೇಗೆ ಸುಟ್ಟುಹೋಗುವರೋ ಹಾಗೆ ರಣದಲ್ಲಿ ಕರ್ಣಾಗ್ನಿಯಿಂದ ಸೃಂಜಯರು ದಹಿಸಿಹೋಗುತ್ತಿದ್ದರು.
08040062a ಕರ್ಣೇನ ಚೇದಿಷ್ವೇಕೇನ ಪಾಂಚಾಲೇಷು ಚ ಭಾರತ।
08040062c ವಿಶ್ರಾವ್ಯ ನಾಮ ನಿಹತಾ ಬಹವಃ ಶೂರಸಮ್ಮತಾಃ।।
ಭಾರತ! ಕರ್ಣನು ತನ್ನ ಹೆಸರನ್ನು ಹೇಳಿಕೊಂಡು ಅನೇಕ ಶೂರಸಮ್ಮತ ಚೇದಿ-ಕೇಕಯ-ಪಾಂಚಾಲರನ್ನು ಸಂಹರಿಸಿದನು.
08040063a ಮಮ ಚಾಸೀನ್ಮನುಷ್ಯೇಂದ್ರ ದೃಷ್ಟ್ವಾ ಕರ್ಣಸ್ಯ ವಿಕ್ರಮಂ।
08040063c ನೈಕೋಽಪ್ಯಾಧಿರಥೇರ್ಜೀವನ್ಪಾಂಚಾಲ್ಯೋ ಮೋಕ್ಷ್ಯತೇ ಯುಧಿ।।
ಮನುಷ್ಯೇಂದ್ರ! ಕರ್ಣನ ವಿಕ್ರಮವನ್ನು ನೋಡಿ ಒಬ್ಬ ಪಾಂಚಲ್ಯನೂ ಯುದ್ಧದಲ್ಲಿ ಆಧಿರಥಿಯಿಂದ ಜೀವಸಹಿತ ಉಳಿಯಲಾರನು ಎಂದು ಭಾವಿಸಿದೆನು.
08040064a ಪಾಂಚಾಲಾನ್ವಿಧಮನ್ಸಂಖ್ಯೇ ಸೂತಪುತ್ರಃ ಪ್ರತಾಪವಾನ್।
08040064c ಅಭ್ಯಧಾವತ ಸಂಕ್ರುದ್ಧೋ ಧರ್ಮಪುತ್ರಂ ಯುಧಿಷ್ಠಿರಂ।।
ಯುದ್ಧದಲ್ಲಿ ಪಾಂಚಾಲರನ್ನು ಸದೆಬಡಿದು ಪ್ರತಾಪವಾನ್ ಸೂತಪುತ್ರನು ಸಂಕ್ರುದ್ಧನಾಗಿ ಧರ್ಮಪುತ್ರ ಯುಧಿಷ್ಠಿರನನ್ನು ಆಕ್ರಮಣಿಸಿದನು.
08040065a ಧೃಷ್ಟದ್ಯುಮ್ನಶ್ಚ ರಾಜಾನಂ ದ್ರೌಪದೇಯಾಶ್ಚ ಮಾರಿಷ।
08040065c ಪರಿವವ್ರುರಮಿತ್ರಘ್ನಂ ಶತಶಶ್ಚಾಪರೇ ಜನಾಃ।।
ಮಾರಿಷ! ಆಗ ಧೃಷ್ಟದ್ಯುಮ್ನ, ದ್ರೌಪದೇಯರು ಮತ್ತು ನೂರಾರು ಇತರರು ಅಮಿತ್ರಘ್ನ ರಾಜ ಯುಧಿಷ್ಠಿರನನ್ನು ಸುತ್ತುವರೆದರು.
08040066a ಶಿಖಂಡೀ ಸಹದೇವಶ್ಚ ನಕುಲೋ ನಾಕುಲಿಸ್ತಥಾ।
08040066c ಜನಮೇಜಯಃ ಶಿನೇರ್ನಪ್ತಾ ಬಹವಶ್ಚ ಪ್ರಭದ್ರಕಾಃ।।
08040067a ಏತೇ ಪುರೋಗಮಾ ಭೂತ್ವಾ ಧೃಷ್ಟದ್ಯುಮ್ನಸ್ಯ ಸಂಯುಗೇ।
08040067c ಕರ್ಣಮಸ್ಯಂತಮಿಷ್ವಸ್ತ್ರೈರ್ವಿಚೇರುರಮಿತೌಜಸಃ।।
ಶಿಖಂಡೀ, ಸಹದೇವ, ನಕುಲ, ಶತಾನೀಕ, ಜನಮೇಜಯ, ಸಾತ್ಯಕಿ ಮತ್ತು ಅನೇಕ ಪ್ರಭದ್ರಕರು ಧೃಷ್ಟದ್ಯುಮ್ನನನ್ನು ಮುಂದಿರಿಸಿಕೊಂಡು ಯುದ್ಧದಲ್ಲಿ ಅಮಿತೌಜಸ ಕರ್ಣನನ್ನು ಅಸ್ತ್ರ-ಶಸ್ತ್ರಗಳಿಂದ ಪ್ರಹರಿಸುತ್ತಾ ಸಂಚರಿಸುತ್ತಿದ್ದರು.
08040068a ತಾಂಸ್ತತ್ರಾಧಿರಥಿಃ ಸಂಖ್ಯೇ ಚೇದಿಪಾಂಚಾಲಪಾಂಡವಾನ್।
08040068c ಏಕೋ ಬಹೂನಭ್ಯಪತದ್ಗರುತ್ಮನ್ಪನ್ನಗಾನಿವ।।
ಗರುಡನು ಸರ್ಪಗಳ ಮೇಲೆ ಬೀಳುವಂತೆ ಯುದ್ಧದಲ್ಲಿ ಆಧಿರಥಿ ಕರ್ಣನು ಒಬ್ಬನೇ ಅನೇಕ ಚೇದಿ-ಪಾಂಚಾಲ-ಪಾಂಡವರ ಮೇಲೆ ಎರಗಿದನು.
08040069a ಭೀಮಸೇನಸ್ತು ಸಂಕ್ರುದ್ಧಃ ಕುರೂನ್ಮದ್ರಾನ್ಸಕೇಕಯಾನ್।
08040069c ಏಕಃ ಸಂಖ್ಯೇ ಮಹೇಷ್ವಾಸೋ ಯೋಧಯನ್ಬಹ್ವಶೋಭತ।।
ಸಂಕ್ರುದ್ಧನಾಗಿದ್ದ ಮಹೇಷ್ವಾಸ ಭೀಮಸೇನನಾದರೋ ಒಂಟಿಯಾಗಿ ಕೇಕಯರೊಂದಿಗೆ ಯುದ್ಧದಲ್ಲಿ ಕುರು-ಮದ್ರರನ್ನು ಎದುರಿಸುತ್ತಾ ಬಹಳವಾಗಿ ಶೋಭಿಸಿದನು.
08040070a ತತ್ರ ಮರ್ಮಸು ಭೀಮೇನ ನಾರಾಚೈಸ್ತಾಡಿತಾ ಗಜಾಃ।
08040070c ಪ್ರಪತಂತೋ ಹತಾರೋಹಾಃ ಕಂಪಯಂತಿ ಸ್ಮ ಮೇದಿನೀಂ।।
ಭೀಮನ ನಾರಾಚಗಳಿಂದ ಮರ್ಮಗಳು ಭೇದಿಸಲ್ಪಟ್ಟ ಆನೆಗಳು ಹತರಾದ ಗಜಾರೋಹಿಗಳೊಡನೆ ಮೇದಿನಿಯನ್ನೇ ನಡುಗಿಸುತ್ತಾ ಕೆಳಗೆ ಬೀಳುತ್ತಿದ್ದವು.
08040071a ವಾಜಿನಶ್ಚ ಹತಾರೋಹಾಃ ಪತ್ತಯಶ್ಚ ಗತಾಸವಃ।
08040071c ಶೇರತೇ ಯುಧಿ ನಿರ್ಭಿನ್ನಾ ವಮಂತೋ ರುಧಿರಂ ಬಹು।।
ಹತಗೊಂಡ ಕುದುರೆಗಳೂ, ಕುದುರೆ ಸವಾರರೂ, ಜೀವತೊರೆದ ಪದಾತಿಗಳು ಯುದ್ಧದಲ್ಲಿ ನಿರ್ಭಿನ್ನರಾಗಿ ಬಹಳ ರಕ್ತವನ್ನು ಕಾರುತ್ತಾ ಮಲಗಿದ್ದರು.
08040072a ಸಹಸ್ರಶಶ್ಚ ರಥಿನಃ ಪತಿತಾಃ ಪತಿತಾಯುಧಾಃ।
08040072c ಅಕ್ಷತಾಃ ಸಮದೃಶ್ಯಂತ ಭೀಮಾದ್ಭೀತಾ ಗತಾಸವಃ।।
ಸಹಸ್ರಾರು ರಥಿಗಳು ಬಿದ್ದಿದ್ದರು. ಅವರ ಆಯುಧಗಳೂ ಬಿದ್ದಿದ್ದವು. ಕ್ಷತ-ವಿಕ್ಷತರಾದ ಅವರು ಭೀಮನ ಭಯದಿಂದಲೇ ಪ್ರಾಣಗಳನ್ನು ತೊರೆದಂತೆ ತೋರುತ್ತಿದ್ದರು.
08040073a ರಥಿಭಿರ್ವಾಜಿಭಿಃ ಸೂತೈಃ ಪತ್ತಿಭಿಶ್ಚ ತಥಾ ಗಜೈಃ।
08040073c ಭೀಮಸೇನಶರಚ್ಚಿನ್ನೈರಾಸ್ತೀರ್ಣಾ ವಸುಧಾಭವತ್।।
ಭೀಮಸೇನನ ಶರಗಳಿಂದ ನಾಶಗೊಂಡ ರಥಿಗಳು, ಕುದುರೆಗಳು, ಸಾರಥಿಗಳು, ಪದಾತಿಗಳು ಮತ್ತು ಆನೆಗಳಿಂದ ಯುದ್ಧಭೂಮಿಯು ತುಂಬಿಹೋಗಿತ್ತು.
08040074a ತತ್ಸ್ತಂಭಿತಮಿವಾತಿಷ್ಠದ್ಭೀಮಸೇನಬಲಾರ್ದಿತಂ।
08040074c ದುರ್ಯೋಧನಬಲಂ ರಾಜನ್ನಿರುತ್ಸಾಹಂ ಕೃತವ್ರಣಂ।।
ರಾಜನ್! ಭೀಮಸೇನನ ಬಲದಿಂದ ಪೀಡಿತಗೊಂಡು ಗಾಯಗೊಂಡಿದ್ದ ದುರ್ಯೋಧನನ ಸೇನೆಯು ನಿರುತ್ಸಾಹಗೊಂಡು ಸ್ತಬ್ಧವಾಗಿ ನಿಂತುಬಿಟ್ಟಿತ್ತು.
08040075a ನಿಶ್ಚೇಷ್ಟಂ ತುಮುಲೇ ದೀನಂ ಬಭೌ ತಸ್ಮಿನ್ಮಹಾರಣೇ।
08040075c ಪ್ರಸನ್ನಸಲಿಲಃ ಕಾಲೇ ಯಥಾ ಸ್ಯಾತ್ಸಾಗರೋ ನೃಪ।।
ನೃಪ! ಭರತವಿಲ್ಲದ ಸಮಯದಲ್ಲಿ ಸಮುದ್ರವು ಪ್ರಶಾಂತವಾಗಿರುವಂತೆ ಆ ತುಮುಲ ಮಹಾರಣವು ದೀನವೂ ನಿಶ್ಚೇಷ್ಟವೂ ಆಗಿದ್ದಿತು.
08040076a ಮನ್ಯುವೀರ್ಯಬಲೋಪೇತಂ ಬಲಾತ್ಪರ್ಯವರೋಪಿತಂ।
08040076c ಅಭವತ್ತವ ಪುತ್ರಸ್ಯ ತತ್ಸೈನ್ಯಮಿಷುಭಿಸ್ತದಾ।
08040076e ರುಧಿರೌಘಪರಿಕ್ಲಿನ್ನಂ ರುಧಿರಾರ್ದ್ರಂ ಬಭೂವ ಹ।।
ಆ ಸಮಯದಲ್ಲಿ ಕೂಡ ನಿನ್ನ ಮಗನ ಸೇನೆಯು ಕೋಪ, ವೀರ್ಯ, ಬಲಗಳಿಂದ ಕೂಡಿತ್ತು. ಆದರೆ ಅದರ ದರ್ಪವು ಉಡುಗಿಹೋಗಿತ್ತು. ರಕ್ತವು ಸೋರಿ ಅದೇ ರಕ್ತದಿಂದಲೇ ಸೇನೆಯು ತೋಯ್ದುಹೋಯಿತು.
08040077a ಸೂತಪುತ್ರೋ ರಣೇ ಕ್ರುದ್ಧಃ ಪಾಂಡವಾನಾಮನೀಕಿನೀಂ।
08040077c ಭೀಮಸೇನಃ ಕುರೂಂಶ್ಚಾಪಿ ದ್ರಾವಯನ್ಬಹ್ವಶೋಭತ।।
ರಣದಲ್ಲಿ ಕ್ರುದ್ಧನಾದ ಸೂತಪುತ್ರನು ಪಾಂಡವ ಸೇನೆಯನ್ನು ಮತ್ತು ಭೀಮಸೇನನು ಕುರುಸೇನೆಯನ್ನು ಪಲಾಯನಗೊಳಿಸುತ್ತಾ ಬಹಳವಾಗಿ ಶೋಭಿಸಿದರು.
08040078a ವರ್ತಮಾನೇ ತಥಾ ರೌದ್ರೇ ಸಂಗ್ರಾಮೇಽದ್ಭುತದರ್ಶನೇ।
08040078c ನಿಹತ್ಯ ಪೃತನಾಮಧ್ಯೇ ಸಂಶಪ್ತಕಗಣಾನ್ ಬಹೂನ್।।
08040079a ಅರ್ಜುನೋ ಜಯತಾಂ ಶ್ರೇಷ್ಠೋ ವಾಸುದೇವಮಥಾಬ್ರವೀತ್।
ಹಾಗೆ ನೋಡಲು ಅದ್ಭುತವಾಗಿದ್ದ ಆ ರೌದ್ರ ಸಂಗ್ರಾಮವು ನಡೆಯುತ್ತಿರಲು ಸೇನಾಮಧ್ಯದಲ್ಲಿ ಅನೇಕ ಸಂಶಪ್ತಕಗಣಗಳನ್ನು ಸಂಹರಿಸಿ ಜಯಿಗಳಲ್ಲಿ ಶ್ರೇಷ್ಠ ಅರ್ಜುನನು ವಾಸುದೇವನಿಗೆ ಹೇಳಿದನು:
08040079c ಪ್ರಭಗ್ನಂ ಬಲಮೇತದ್ಧಿ ಯೋತ್ಸ್ಯಮಾನಂ ಜನಾರ್ದನ।।
08040080a ಏತೇ ಧಾವಂತಿ ಸಗಣಾಃ ಸಂಶಪ್ತಕಮಹಾರಥಾಃ।
08040080c ಅಪಾರಯಂತೋ ಮದ್ಬಾಣಾನ್ಸಿಂಹಶಬ್ದಾನ್ಮೃಗಾ ಇವ।।
“ಜನಾರ್ದನ! ಯುದ್ಧಮಾಡುತ್ತಿರುವವರ ಸೇನೆಯು ಭಗ್ನವಾಯಿತೆಂದೇ ತಿಳಿ! ಇಗೋ! ಸಿಂಹಗರ್ಜನೆಯನ್ನು ಜಿಂಕೆಗಳು ಹೇಗೋ ಹಾಗೆ ನನ್ನ ಬಾಣಗಳನ್ನು ಸಹಿಸಲಾರದೇ ಸಂಶಪ್ತಕ ಮಹಾರಥರು ಸೇನೆಗಳೊಡನೆ ಓಡಿ ಹೋಗುತ್ತಿದ್ದಾರೆ!
08040081a ದೀರ್ಯತೇ ಚ ಮಹತ್ಸೈನ್ಯಂ ಸೃಂಜಯಾನಾಂ ಮಹಾರಣೇ।
08040081c ಹಸ್ತಿಕಕ್ಷ್ಯೋ ಹ್ಯಸೌ ಕೃಷ್ಣ ಕೇತುಃ ಕರ್ಣಸ್ಯ ಧೀಮತಃ।
08040081e ದೃಶ್ಯತೇ ರಾಜಸೈನ್ಯಸ್ಯ ಮಧ್ಯೇ ವಿಚರತೋ ಮುಹುಃ।।
ಕೃಷ್ಣ! ಆನೆಯನ್ನು ಕಟ್ಟುವ ಹಗ್ಗದ ಚಿಹ್ನೆಯುಳ್ಳ ಧೀಮತ ಕರ್ಣನು ಮಹಾರಣದಲ್ಲಿ ಸೃಂಜಯರ ಮಹಾಸೇನೆಯನ್ನು ಸೀಳುತ್ತಾ ರಾಜಸೈನ್ಯದ ಮಧ್ಯೆ ಅತ್ತಿತ್ತ ಸಂಚರಿಸುತ್ತಿರುವುದು ಕಾಣುತ್ತಿದೆ.
08040082a ನ ಚ ಕರ್ಣಂ ರಣೇ ಶಕ್ತಾ ಜೇತುಮನ್ಯೇ ಮಹಾರಥಾಃ।
08040082c ಜಾನೀತೇ ಹಿ ಭವಾನ್ಕರ್ಣಂ ವೀರ್ಯವಂತಂ ಪರಾಕ್ರಮೇ।।
ರಣದಲ್ಲಿ ಕರ್ಣನನ್ನು ಗೆಲ್ಲಲು ಅನ್ಯ ಮಹಾರಥರು ಶಕ್ತರಿಲ್ಲ. ವೀರ್ಯವಂತ ಕರ್ಣನ ಪರಾಕ್ರಮವನ್ನು ನೀನು ತಿಳಿದುಕೊಂಡಿರುವೆ!
08040083a ತತ್ರ ಯಾಹಿ ಯತಃ ಕರ್ಣೋ ದ್ರಾವಯತ್ಯೇಷ ನೋ ಬಲಂ।
08040084a ವರ್ಜಯಿತ್ವಾ ರಣೇ ಯಾಹಿ ಸೂತಪುತ್ರಂ ಮಹಾರಥಂ।
08040084c ಶ್ರಮೋ ಮಾ ಬಾಧತೇ ಕೃಷ್ಣ ಯಥಾ ವಾ ತವ ರೋಚತೇ।।
ಕೃಷ್ಣ! ನಮ್ಮ ಸೇನೆಗಳನ್ನು ಎಲ್ಲಿ ಕರ್ಣನು ಓಡಿಸುತ್ತಿರುವನೋ ಅಲ್ಲಿಗೆ ಕೊಂಡೊಯ್ಯಿ! ನಿನಗೆ ಶ್ರಮವಾಗದಿದ್ದರೆ ಅಥವಾ ನಿನಗೆ ಇಷ್ಟವಾದರೆ ಈ ರಣರಂಗವನ್ನು ಬಿಟ್ಟು ಮಹಾರಥ ಸೂತಪುತ್ರನಿರುವಲ್ಲಿಗೆ ಕರೆದೊಯ್ಯಿ!”
08040085a ಏತಚ್ಛೃತ್ವಾ ಮಹಾರಾಜ ಗೋವಿಂದಃ ಪ್ರಹಸನ್ನಿವ।
08040085c ಅಬ್ರವೀದರ್ಜುನಂ ತೂರ್ಣಂ ಕೌರವಾಂ ಜಹಿ ಪಾಂಡವ।।
ಮಹಾರಾಜ! ಇದನ್ನು ಕೇಳಿ ಗೋವಿಂದನು ನಸುನಗುತ್ತಾ “ಪಾಂಡವ! ಬೇಗನೇ ಕೌರವರನ್ನು ಸಂಹರಿಸು!” ಎಂದು ಅರ್ಜುನನಿಗೆ ಹೇಳಿದನು.
08040086a ತತಸ್ತವ ಮಹತ್ಸೈನ್ಯಂ ಗೋವಿಂದಪ್ರೇರಿತಾ ಹಯಾಃ।
08040086c ಹಂಸವರ್ಣಾಃ ಪ್ರವಿವಿಶುರ್ವಹಂತಃ ಕೃಷ್ಣಪಾಂಡವೌ।।
ಅನಂತರ ಗೋವಿಂದಪ್ರೇರಿತ ಹಂಸವರ್ಣದ ಕುದುರೆಗಳು ಕೃಷ್ಣ-ಪಾಂಡವರನ್ನು ಹೊತ್ತು ನಿನ್ನ ಮಹಾ ಸೇನೆಯನ್ನು ಪ್ರವೇಶಿಸಿದವು.
08040087a ಕೇಶವಪ್ರಹಿತೈರಶ್ವೈಃ ಶ್ವೇತೈಃ ಕಾಂಚನಭೂಷಣೈಃ।
08040087c ಪ್ರವಿಶದ್ಭಿಸ್ತವ ಬಲಂ ಚತುರ್ದಿಶಮಭಿದ್ಯತ।।
ಕೇಶವನಿಂದ ನಡೆಸಲ್ಪಟ್ಟ ಕಾಂಚನಭೂಷಿತ ಶ್ವೇತಹಯಗಳು ಪ್ರವೇಶಿಸುತ್ತಿದ್ದಂತೆಯೇ ನಿನ್ನ ಸೇನೆಯು ನಾಲ್ಕು ದಿಕ್ಕುಗಳಿಗೂ ಚದುರಿತು.
08040088a ತೌ ವಿದಾರ್ಯ ಮಹಾಸೇನಾಂ ಪ್ರವಿಷ್ಟೌ ಕೇಶವಾರ್ಜುನೌ।
08040088c ಕ್ರುದ್ಧೌ ಸಂರಂಭರಕ್ತಾಕ್ಷೌ ವ್ಯಭ್ರಾಜೇತಾಂ ಮಹಾದ್ಯುತೀ।।
ಕ್ರುದ್ಧರಾಗಿದ್ದ, ಕೋಪದಿಂದ ಕಣ್ಣುಗಳು ಕೆಂಪಾಗಿದ್ದ ಮಹಾದ್ಯುತೀ ಕೇಶವಾರ್ಜುನರು ಆ ಮಹಾಸೇನೆಯನ್ನು ಸೀಳಿ ಪ್ರವೇಶಿಸಿ ಬಹಳವಾಗಿ ರಾರಾಜಿಸಿದರು.
08040089a ಯುದ್ಧಶೌಂಡೌ ಸಮಾಹೂತಾವರಿಭಿಸ್ತೌ ರಣಾಧ್ವರಂ।
08040089c ಯಜ್ವಭಿರ್ವಿಧಿನಾಹೂತೌ ಮಖೇ ದೇವಾವಿವಾಶ್ವಿನೌ।।
ಋತ್ವಿಜರಿಂದ ವಿಧಿವತ್ತಾಗಿ ಅಹ್ವಾನಿಸಲ್ಪಟ್ಟ ಅಶ್ವಿನೀ ದೇವತೆಗಳಂತೆ ಯುದ್ಧಕ್ಕೆ ಆಹ್ವಾನಿಸಲ್ಪಟ್ಟ ಆ ಇಬ್ಬರು ಯುದ್ಧಶೌಂಡರೂ ರಣಾಧ್ವರವನ್ನು ಪ್ರವೇಶಿಸಿದರು.
08040090a ಕ್ರುದ್ಧೌ ತೌ ತು ನರವ್ಯಾಘ್ರೌ ವೇಗವಂತೌ ಬಭೂವತುಃ।
08040090c ತಲಶಬ್ಧೇನ ರುಷಿತೌ ಯಥಾ ನಾಗೌ ಮಹಾಹವೇ।।
ಮಹಾಹವದಲ್ಲಿ ಚಪ್ಪಾಳೆ ಶಬ್ಧಗಳನ್ನು ಕೇಳಿ ರೋಷಗೊಂಡ ಮದ್ದಾನೆಗಳಂತೆ ಆ ಇಬ್ಬರು ನರವ್ಯಾಘ್ರರೂ ಕ್ರುದ್ಧರಾಗಿ ವೇಗವಾಗಿ ಕುರುಸೇನೆಯನ್ನು ಪ್ರವೇಶಿಸಿದರು.
08040091a ವಿಗಾಹನ್ಸ ರಥಾನೀಕಮಶ್ವಸಂಘಾಂಶ್ಚ ಫಲ್ಗುನಃ।
08040091c ವ್ಯಚರತ್ಪೃತನಾಮಧ್ಯೇ ಪಾಶಹಸ್ತ ಇವಾಂತಕಃ।।
ಮಹಾರಾಜ! ಫಲ್ಗುನನು ಆ ರಥಸೇನೆ-ಅಶ್ವಸೇನೆಗಳನ್ನು ಭೇದಿಸಿ ಒಳನುಗ್ಗಿ ಪಾಶಹಸ್ತ ಅಂತಕನಂತೆ ಸೇನಾಮಧ್ಯದಲ್ಲಿ ಸಂಚರಿಸುತ್ತಿದ್ದನು.
08040092a ತಂ ದೃಷ್ಟ್ವಾ ಯುಧಿ ವಿಕ್ರಾಂತಂ ಸೇನಾಯಾಂ ತವ ಭಾರತ।
08040092c ಸಂಶಪ್ತಕಗಣಾನ್ಭೂಯಃ ಪುತ್ರಸ್ತೇ ಸಮಚೋದಯತ್।।
ಭಾರತ! ನಿನ್ನ ಸೇನೆಗಳ ಮಧ್ಯದಲ್ಲಿ ಅವನ ಯುದ್ಧವಿಕ್ರಮವನ್ನು ಕಂಡು ನಿನ್ನ ಮಗನು ಸಂಶಪ್ತಕಗಣಗಳನ್ನು ಪುನಃ ಪ್ರಚೋದಿಸಿದನು.
08040093a ತತೋ ರಥಸಹಸ್ರೇಣ ದ್ವಿರದಾನಾಂ ತ್ರಿಭಿಃ ಶತೈಃ।
08040093c ಚತುರ್ದಶಸಹಸ್ರೈಶ್ಚ ತುರಗಾಣಾಂ ಮಹಾಹವೇ।।
08040094a ದ್ವಾಭ್ಯಾಂ ಶತಸಹಸ್ರಾಭ್ಯಾಂ ಪದಾತೀನಾಂ ಚ ಧನ್ವಿನಾಂ।
08040094c ಶೂರಾಣಾಂ ನಾಮಲಬ್ಧಾನಾಂ ವಿದಿತಾನಾಂ ಸಮಂತತಃ।
08040094e ಅಭ್ಯವರ್ತಂತ ತೌ ವೀರೌ ಚಾದಯಂತೋ ಮಹಾರಥಾಃ।।
ಆಗ ಮಹಾಹವದಲ್ಲಿ ಆ ಮಹಾರಥ ಸಂಶಪ್ತಕರು ಸಾವಿರ ರಥಗಳು, ಮೂರು ನೂರು ಆನೆಗಳು, ಹದಿನಾಲ್ಕು ಸಾವಿರ ಕುದುರೆಗಳು ಮತ್ತು ಎರಡು ಲಕ್ಷ ಶೂರ ಧನ್ವಿ ಯುದ್ಧನಿಪುಣ ಪದಾತಿಗಳೊಂದಿಗೆ ಗರ್ಜಿಸುತ್ತಾ ಆ ಇಬ್ಬರು ವೀರರನ್ನು ಮುತ್ತಿಗೆ ಹಾಕಿ ಆಕ್ರಮಣಿಸಿದರು.
08040095a ಸ ಛಾದ್ಯಮಾನಃ ಸಮರೇ ಶರೈಃ ಪರಬಲಾರ್ದನಃ।
08040095c ದರ್ಶಯನ್ರೌದ್ರಮಾತ್ಮಾನಂ ಪಾಶಹಸ್ತ ಇವಾಂತಕಃ।
08040095e ನಿಘ್ನನ್ಸಂಶಪ್ತಕಾನ್ಪಾರ್ಥಃ ಪ್ರೇಕ್ಷಣೀಯತರೋಽಭವತ್।।
ಹಾಗೆ ಸಮರದಲ್ಲಿ ಶರಗಳಿಂದ ಆಚ್ಛಾದಿತನಾದ ಪರಬಲಾರ್ದನ ಪಾರ್ಥನು ಪಾಶಹಸ್ತ ಅಂತಕನಂತೆ ರೌದ್ರರೂಪವನ್ನು ತಾಳಿ ಸಂಶಪ್ತಕರನ್ನು ಸಂಹರಿಸುತ್ತಾ ಪ್ರೇಕ್ಷಣೀಯನಾದನು.
08040096a ತತೋ ವಿದ್ಯುತ್ಪ್ರಭೈರ್ಬಾಣೈಃ ಕಾರ್ತಸ್ವರವಿಭೂಷಿತೈಃ।
08040096c ನಿರಂತರಮಿವಾಕಾಶಮಾಸೀನ್ನುನ್ನೈಃ ಕಿರೀಟಿನಾ।।
ಆಗ ಕಿರೀಟಿಯಿಂದ ನಿರಂತರವಾಗಿ ಪ್ರಯೋಗಿಸಲ್ಪಟ್ಟ ಸುವರ್ಣವಿಭೂಷಿತ ವಿದ್ಯುತ್ ಪ್ರಭೆಯ ಬಾಣಗಳಿಂದ ಸ್ವಲ್ಪವೂ ಸ್ಥಳವಿಲ್ಲದಂತೆ ಆಕಾಶವು ತುಂಬಿಹೋಯಿತು.
08040097a ಕಿರೀಟಿಭುಜನಿರ್ಮುಕ್ತೈಃ ಸಂಪತದ್ಭಿರ್ಮಹಾಶರೈಃ।
08040097c ಸಮಾಚ್ಛನ್ನಂ ಬಭೌ ಸರ್ವಂ ಕಾದ್ರವೇಯೈರಿವ ಪ್ರಭೋ।।
ಪ್ರಭೋ! ಕಿರೀಟಿಯ ಭುಜಗಳಿಂದ ಹೊರಟ ಆ ಮಹಾಶರಗಳಿಂದ ತುಂಬಿಹೋಗಿದ್ದ ಆ ಪ್ರದೇಶವು ಸರ್ಪಗಳಿಂದ ತುಂಬಿರುವುದೋ ಎನ್ನುವಂತೆ ಕಾಣುತ್ತಿತ್ತು.
08040098a ರುಕ್ಮಪುಂಖನ್ಪ್ರಸನ್ನಾಗ್ರಾಂ ಶರಾನ್ಸನ್ನತಪರ್ವಣಃ।
08040098c ಅದರ್ಶಯದಮೇಯಾತ್ಮಾ ದಿಕ್ಷು ಸರ್ವಾಸು ಪಾಂಡವಃ।।
ಅಮೇಯಾತ್ಮ ಪಾಂಡವನು ರುಕ್ಮಪುಂಖಗಳ ಪ್ರಸನ್ನಾಗ್ರ ಸನ್ನತಪರ್ವ ಶರಗಳನ್ನು ಎಲ್ಲದಿಕ್ಕುಗಳಲ್ಲಿಯೂ ಸುರಿಸಿದನು.
08040099a ಹತ್ವಾ ದಶ ಸಹಸ್ರಾಣಿ ಪಾರ್ಥಿವಾನಾಂ ಮಹಾರಥಃ।
08040099c ಸಂಶಪ್ತಕಾನಾಂ ಕೌಂತೇಯಃ ಪ್ರಪಕ್ಷಂ ತ್ವರಿತೋಽಭ್ಯಯಾತ್।।
ಹತ್ತು ಸಾವಿರ ಸಂಶಪ್ತಕ ಪಾರ್ಥಿವರನ್ನು ಸಂಹರಿಸಿ ಮಹಾರಥ ಕೌಂತೇಯನು ತ್ವರೆಮಾಡಿ ಶತ್ರುಸೇನೆಯ ಕಡೆ ಧಾವಿಸಿದನು.
08040100a ಪ್ರಪಕ್ಷಂ ಸ ಸಮಾಸಾದ್ಯ ಪಾರ್ಥಃ ಕಾಂಬೋಜರಕ್ಷಿತಂ।
08040100c ಪ್ರಮಮಾಥ ಬಲಾದ್ಬಾಣೈರ್ದಾನವಾನಿವ ವಾಸವಃ।।
ಶತ್ರುಪಕ್ಷವನ್ನು ಹೊಕ್ಕು ಪಾರ್ಥನು ವಾಸವನು ದಾನವ ಸೇನೆಯನ್ನು ಹೇಗೋ ಹಾಗೆ ಬಾಣಗಳಿಂದ ಕಾಂಬೋಜರಕ್ಷಿತ ಸೇನೆಯನ್ನು ಮಥಿಸಿದನು.
08040101a ಪ್ರಚಿಚ್ಛೇದಾಶು ಭಲ್ಲೈಶ್ಚ ದ್ವಿಷತಾಮಾತತಾಯಿನಾಂ।
08040101c ಶಸ್ತ್ರಪಾಣೀಂಸ್ತಥಾ ಬಾಹೂಂಸ್ತಥಾಪಿ ಚ ಶಿರಾಂಸ್ಯುತ।।
ಆ ದ್ವೇಷೀ ಆತತಾಯಿನರ ಶಸ್ತ್ರಗಳನ್ನೂ, ಕೈಗಳನ್ನೂ, ಬಾಹುಗಳನ್ನೂ ಮತ್ತು ಶಿರಗಳನ್ನೂ ಅರ್ಜುನನು ಭಲ್ಲಗಳಿಂದ ತುಂಡರಿಸಿದನು.
08040102a ಅಂಗಾಂಗಾವಯವೈಶ್ಛಿನ್ನೈರ್ವ್ಯಾಯುಧಾಸ್ತೇಽಪತನ್ ಕ್ಷಿತೌ।।
08040102c ವಿಷ್ವಗ್ವಾತಾಭಿಸಂಭಗ್ನಾ ಬಹುಶಾಖಾ ಇವ ದ್ರುಮಾಃ।
ಭಿರುಗಾಳಿಗೆ ಸಿಲುಕಿ ಉರುಳಿದ ಬಹುಶಾಖೆಗಳುಳ್ಳ ವೃಕ್ಷಗಳಂತೆ ಶತ್ರು ಯೋಧರು ಅಂಗಾಗಗಳು ತುಂಡಾಗಿ ನಿರಾಯುಧರಾಗಿ ಭೂಮಿಯ ಮೇಲೆ ಬಿದ್ದರು.
08040103a ಹಸ್ತ್ಯಶ್ವರಥಪತ್ತೀನಾಂ ವ್ರಾತಾನ್ನಿಘ್ನಂತಮರ್ಜುನಂ।
08040103c ಸುದಕ್ಷಿಣಾದವರಜಃ ಶರವೃಷ್ಟ್ಯಾಭ್ಯವೀವೃಷತ್।।
ಆನೆ-ಕುದುರೆ-ರಥ-ಪದಾತಿಗಳನ್ನು ಭಿರುಗಾಳಿಯಂತೆ ಸಂಹರಿಸುತ್ತಿದ್ದ ಅರ್ಜುನನನ್ನು ಕಾಂಬೋಜರಾಜ ಸುದಕ್ಷಿಣನ ತಮ್ಮನು ಶರವೃಷ್ಟಿಯಿಂದ ಅಭಿಷೇಚಿಸಿದನು.
08040104a ಅಸ್ಯಾಸ್ಯತೋಽರ್ಧಚಂದ್ರಾಭ್ಯಾಂ ಸ ಬಾಹೂ ಪರಿಘೋಪಮೌ।
08040104c ಪೂರ್ಣಚಂದ್ರಾಭವಕ್ತ್ರಂ ಚ ಕ್ಷುರೇಣಾಭ್ಯಹನಚ್ಛಿರಃ।।
ಅರ್ಜುನನು ಅವನ ಪರಿಘೋಪಮ ಬಾಹುಗಳನ್ನು ಎರಡು ಅರ್ಧಚಂದ್ರಗಳಿಂದ ತುಂಡರಿಸಿ ಕ್ಷುರದಿಂದ ಪೂರ್ಣಚಂದ್ರನಂತಿರುವ ಮುಖವುಳ್ಳ ಅವನ ಶಿರವನ್ನು ಅಪಹರಿಸಿದನು.
08040105a ಸ ಪಪಾತ ತತೋ ವಾಹಾತ್ಸ್ವಲೋಹಿತಪರಿಸ್ರವಃ।
08040105c ಮನಃಶಿಲಾಗಿರೇಃ ಶೃಂಗಂ ವಜ್ರೇಣೇವಾವದಾರಿತಂ।।
ಆಗ ವಜ್ರಾಯುಧಪ್ರಹಾರದಿಂದ ಒಡೆದು ಕೆಳಗೆ ಬಿದ್ದ ಮನಃಶಿಲ ಗಿರಿಯ ಶಿಖರದಂತೆ ಅವನು ತನ್ನದೇ ರಕ್ತದಲ್ಲಿ ತೋಯ್ದು ರಥದಿಂದ ಕೆಳಕ್ಕೆ ಬಿದ್ದನು.
08040106a ಸುದಕ್ಷಿಣಾದವರಜಂ ಕಾಂಬೋಜಂ ದದೃಶುರ್ಹತಂ।
08040106c ಪ್ರಾಂಶುಂ ಕಮಲಪತ್ರಾಕ್ಷಮತ್ಯರ್ಥಂ ಪ್ರಿಯದರ್ಶನಂ।
08040106e ಕಾಂಚನಸ್ತಂಭಸಂಕಾಶಂ ಭಿನ್ನಂ ಹೇಮಗಿರಿಂ ಯಥಾ।।
ಕಮಲಪತ್ರಾಕ್ಷ ಪ್ರಿಯದರ್ಶನ ಕಾಂಚನ ಸ್ಥಂಭದಂತೆ ಉನ್ನತನಾಗಿದ್ದ ಕಾಂಬೋಜ ಸುದಕ್ಷಿಣನ ಕಡೆಯ ತಮ್ಮನು ಹತನಾದುದನ್ನು ಎಲ್ಲರೂ ನೋಡಿದರು.
08040107a ತತೋಽಭವತ್ಪುನರ್ಯುದ್ಧಂ ಘೋರಮದ್ಭುತದರ್ಶನಂ।
08040107c ನಾನಾವಸ್ಥಾಶ್ಚ ಯೋಧಾನಾಂ ಬಭೂವುಸ್ತತ್ರ ಯುಧ್ಯತಾಂ।।
ಆಗ ಪುನಃ ನೋಡಲು ಅದ್ಭುತವಾಗಿದ್ದ ಘೋರ ಯುದ್ಧವು ಪ್ರಾರಂಭವಾಯಿತು. ಅಲ್ಲಿ ಯುದ್ಧಮಾಡುತ್ತಿದ್ದ ಯೋಧರು ನಾನಾವಸ್ಥೆಗಳಿಗೀಡಾದರು.
08040108a ಏತೇಷ್ವಾವರ್ಜಿತೈರಶ್ವೈಃ ಕಾಂಬೋಜೈರ್ಯವನೈಃ ಶಕೈಃ।
08040108c ಶೋಣಿತಾಕ್ತೈಸ್ತದಾ ರಕ್ತಂ ಸರ್ವಮಾಸೀದ್ವಿಶಾಂ ಪತೇ।।
ವಿಶಾಂಪತೇ! ಒಂದೊಂದೇ ಬಾಣದಿಂದ ಹತರಾಗಿ ರಕ್ತಸಿಕ್ತ ಕಾಂಬೋಜ, ಯವನ ಮತ್ತು ಶಕರಿಂದ ಹಾಗೂ ಕುದುರೆಗಳಿಂದ ಸರ್ವವೂ ರಕ್ತಮಯವಾಯಿತು.
08040109a ರಥೈ ರಥಾಶ್ವಸೂತೈಶ್ಚ ಹತಾರೋಹೈಶ್ಚ ವಾಜಿಭಿಃ।
08040109c ದ್ವಿರದೈಶ್ಚ ಹತಾರೋಹೈರ್ಮಹಾಮಾತ್ರೈರ್ಹತದ್ವಿಪೈಃ।
08040109e ಅನ್ಯೋನ್ಯೇನ ಮಹಾರಾಜ ಕೃತೋ ಘೋರೋ ಜನಕ್ಷಯಃ।।
ಮಹಾರಾಜ! ಕುದುರೆ-ಸಾರಥಿಗಳು ಹತರಾದ ರಥಗಳಿಂದಲೂ, ಸವಾರರು ಹತರಾದ ಕುದುರೆಗಳಿಂದಲೂ, ಮಾವುತರು ಹತರಾದ ಆನೆಗಳಿಂದಲೂ ಅನ್ಯೋನ್ಯರಿಂದ ಹತಗೊಂಡ ಮಹಾಕಾಯದ ಆನೆಗಳಿಂದಲೂ ಘೋರ ಜನಕ್ಷಯವು ನಡೆಯಿತು.
08040110a ತಸ್ಮಿನ್ಪ್ರಪಕ್ಷೇ ಪಕ್ಷೇ ಚ ವಧ್ಯಮಾನೇ ಮಹಾತ್ಮನಾ।
08040110c ಅರ್ಜುನಂ ಜಯತಾಂ ಶ್ರೇಷ್ಠಂ ತ್ವರಿತೋ ದ್ರೌಣಿರಾಯಯೌ।।
ಸೇನೆಯ ಪಕ್ಷ-ಪ್ರಪಕ್ಷಗಳೆರಡನ್ನೂ ವಧಿಸುತ್ತಿದ್ದ ವಿಜಯಿಗಳಲ್ಲಿ ಶ್ರೇಷ್ಠ ಮಹಾತ್ಮ ಅರ್ಜುನನನ್ನು ದ್ರೌಣಿಯು ತ್ವರೆಮಾಡಿ ಆಕ್ರಮಣಿಸಿದನು.
08040111a ವಿಧುನ್ವಾನೋ ಮಹಚ್ಛಾಪಂ ಕಾರ್ತಸ್ವರವಿಭೂಷಿತಂ।
08040111c ಆದದಾನಃ ಶರಾನ್ಘೋರಾನ್ಸ್ವರಶ್ಮೀನಿವ ಭಾಸ್ಕರಃ।।
ಸುವರ್ಣ ವಿಭೂಷಿತ ಮಹಾಧನುಸ್ಸನ್ನು ಟೇಂಕರಿಸುತ್ತಾ ಅವನು ಭಾಸ್ಕರನು ತನ್ನ ಕಿರಣಗಳನ್ನು ಹೇಗೋ ಹಾಗೆ ಘೋರ ಶರಗಳನ್ನು ಪುಂಖಾನುಪುಂಖವಾಗಿ ಪ್ರಯೋಗಿಸಿದನು.
08040112a ತೈಃ ಪತದ್ಭಿರ್ಮಹಾರಾಜ ದ್ರೌಣಿಮುಕ್ತೈಃ ಸಮಂತತಃ।
08040112c ಸಂಚಾದಿತೌ ರಥಸ್ಥೌ ತಾವುಭೌ ಕೃಷ್ಣಧನಂಜಯೌ।।
ಮಹಾರಾಜ! ದ್ರೌಣಿಯಿಂದ ಬಿಡಲ್ಪಟ್ಟ ಆ ಶರಗಳು ರಥದಲ್ಲಿದ್ದ ಕೃಷ್ಣ-ಧನಂಜಯರಿಬ್ಬರನ್ನೂ ಎಲ್ಲಕಡೆಗಳಿಂದ ಮುಚ್ಚಿಬಿಟ್ಟವು.
08040113a ತತಃ ಶರಶತೈಸ್ತೀಕ್ಷ್ಣೈರ್ಭಾರದ್ವಾಜಃ ಪ್ರತಾಪವಾನ್।
08040113c ನಿಶ್ಚೇಷ್ಟೌ ತಾವುಭೌ ಚಕ್ರೇ ಯುದ್ಧೇ ಮಾಧವಪಾಂಡವೌ।।
ಆಗ ಪ್ರತಾಪವಾನ್ ಭಾರದ್ವಾಜನು ಯುದ್ಧದಲ್ಲಿ ನೂರು ತೀಕ್ಷ್ಣ ಶರಗಳಿಂದ ಮಾಧವ-ಪಾಂಡವರಿಬ್ಬರನ್ನೂ ನಿಶ್ಚೇಷ್ಟರನ್ನಾಗಿ ಮಾಡಿದನು.
08040114a ಹಾಹಾಕೃತಮಭೂತ್ಸರ್ವಂ ಜಂಗಮಂ ಸ್ಥಾವರಂ ತಥಾ।
08040114c ಚರಾಚರಸ್ಯ ಗೋಪ್ತಾರೌ ದೃಷ್ಟ್ವಾ ಸಂಚಾದಿತೌ ಶರೈಃ।।
ಚರಾಚರಗಳೆಲ್ಲವನ್ನೂ ರಕ್ಷಿಸುವ ಅವರಿಬ್ಬರೂ ಶರಗಳಿಂದ ಮುಚ್ಚಿಹೋದುದನ್ನು ನೋಡಿ ಸ್ಥಾವರ-ಜಂಗಮಗಳಲ್ಲಿ ಹಾಹಾಕಾರವುಂಟಾಯಿತು.
08040115a ಸಿದ್ಧಚಾರಣಸಂಘಾಶ್ಚ ಸಂಪೇತುರ್ವೈ ಸಮಂತತಃ।
08040115c ಚಿಂತಯಂತೋ ಭವೇದದ್ಯ ಲೋಕಾನಾಂ ಸ್ವಸ್ತ್ಯಪೀತ್ಯಹ।।
“ಇಂದು ಲೋಕಗಳು ಉಳಿಯುವವೇ?” ಎಂದು ಚಿಂತಿಸುತ್ತಾ ಸಿದ್ಧ-ಚಾರಣ ಸಂಘಗಳು ಎಲ್ಲಕಡೆಗಳಿಂದ ಬಂದು ಅಲ್ಲಿ ಸೇರಿದವು.
08040116a ನ ಮಯಾ ತಾದೃಶೋ ರಾಜನ್ದೃಷ್ಟಪೂರ್ವಃ ಪರಾಕ್ರಮಃ।
08040116c ಸಂಜಜ್ಞೇ ಯಾದೃಶೋ ದ್ರೌಣೇಃ ಕೃಷ್ಣೌ ಸಂಚಾದಯಿಷ್ಯತಃ।।
ರಾಜನ್! ಯುದ್ಧದಲ್ಲಿ ಕೃಷ್ಣಾರ್ಜುನರನ್ನು ಆ ರೀತಿ ಆಚ್ಛಾದಿಸಿದ ದ್ರೌಣಿಯ ಪರಾಕ್ರಮವನ್ನು ನಾನು ಇದರ ಹಿಂದೆ ಎಂದೂ ನೋಡಿರಲಿಲ್ಲ.
08040117a ದ್ರೌಣೇಸ್ತು ಧನುಷಃ ಶಬ್ದಮಹಿತತ್ರಾಸನಂ ರಣೇ।
08040117c ಅಶ್ರೌಷಂ ಬಹುಶೋ ರಾಜನ್ಸಿಂಹಸ್ಯ ನದತೋ ಯಥಾ।।
ರಾಜನ್! ಸಿಂಹದ ಗರ್ಜನೆಯಂತೆ ರಣದಲ್ಲಿ ಶತ್ರುಗಳನ್ನು ಭಯಗೊಳಿಸುತ್ತಿದ್ದ ದ್ರೌಣಿಯ ಧನುಸ್ಸಿನ ಟೇಂಕಾರ ಶಬ್ಧವನ್ನು ಬಹುಷಃ ಯಾರೂ ಕೇಳಿರಲಿಲ್ಲ.
08040118a ಜ್ಯಾ ಚಾಸ್ಯ ಚರತೋ ಯುದ್ಧೇ ಸವ್ಯದಕ್ಷಿಣಮಸ್ಯತಃ।
08040118c ವಿದ್ಯುದಂಬುದಮಧ್ಯಸ್ಥಾ ಭ್ರಾಜಮಾನೇವ ಸಾಭವತ್।।
ಮೋಡಗಳ ಮಧ್ಯೆ ಪ್ರಕಾಶಿಸುವ ಮಿಂಚಿನಂತೆ ಯುದ್ಧದಲ್ಲಿ ಎಡ-ಬಲಗಳಲ್ಲಿ ಬಾಣಗಳನ್ನು ಹೊರಹಾಕುತ್ತಿದ್ದ ಅವನ ಶಿಂಜನಿಯು ಪ್ರಕಾಶಿಸುತ್ತಿತ್ತು.
08040119a ಸ ತಥಾ ಕ್ಷಿಪ್ರಕಾರೀ ಚ ದೃಢಹಸ್ತಶ್ಚ ಪಾಂಡವಃ।
08040119c ಸಮ್ಮೋಹಂ ಪರಮಂ ಗತ್ವಾ ಪ್ರೈಕ್ಷತ ದ್ರೋಣಜಂ ತತಃ।।
ಅಗ ದ್ರೋಣಜನನ್ನು ನೋಡಿ ಕ್ಷಿಪ್ರಕಾರೀ ದೃಢಹಸ್ತ ಪಾಂಡವ ಅರ್ಜುನನೂ ಕೂಡ ಪರಮ ವಿಮೂಢನಾದನು.
08040120a ಸ ವಿಕ್ರಮಂ ಹೃತಂ ಮೇನೇ ಆತ್ಮನಃ ಸುಮಹಾತ್ಮನಾ।
08040120c ತಥಾಸ್ಯ ಸಮರೇ ರಾಜನ್ವಪುರಾಸೀತ್ಸುದುರ್ದೃಶಂ।।
ಮಹಾತ್ಮ ಅಶ್ವತ್ಥಾಮನಿಂದ ತನ್ನ ವಿಕ್ರಮವು ಕುಂದುಗೊಂಡಿತೆಂದೇ ಅವನು ತಿಳಿದುಕೊಂಡನು. ರಾಜನ್! ಆಗ ಸಮರದಲ್ಲಿ ಅಶ್ವತ್ಥಾಮನ ಭಯಂಕರ ಮುಖವನ್ನು ನೋಡಲೂ ಸಾಧ್ಯವಾಗುತ್ತಿರಲಿಲ್ಲ.
08040121a ದ್ರೌಣಿಪಾಂಡವಯೋರೇವಂ ವರ್ತಮಾನೇ ಮಹಾರಣೇ।
08040121c ವರ್ಧಮಾನೇ ಚ ರಾಜೇಂದ್ರ ದ್ರೋಣಪುತ್ರೇ ಮಹಾಬಲೇ।
08040121e ಹೀಯಮಾನೇ ಚ ಕೌಂತೇಯೇ ಕೃಷ್ಣಂ ರೋಷಃ ಸಮಭ್ಯಯಾತ್।।
ರಾಜೇಂದ್ರ! ಮಹಾರಣದಲ್ಲಿ ದ್ರೌಣಿ ಮತ್ತು ಪಾಂಡವ ಇಬ್ಬರೂ ಈ ರೀತಿ ವರ್ತಿಸುತ್ತಿರುವುದನ್ನು, ಮಹಾಬಲ ದ್ರೋಣಪುತ್ರನು ವರ್ಧಿಸುತ್ತಿರುವುದನ್ನೂ ಮತ್ತು ಕೌಂತೇಯನು ಕ್ಷೀಣನಾಗುತ್ತಿರುವುದನ್ನು ನೋಡಿ ಕೃಷ್ಣನಿಗೆ ಮಹಾರೋಷವುಂಟಾಯಿತು.
08040122a ಸ ರೋಷಾನ್ನಿಃಶ್ವಸನ್ರಾಜನ್ನಿರ್ದಹನ್ನಿವ ಚಕ್ಷುಷಾ।
08040122c ದ್ರೌಣಿಂ ಹ್ಯಪಶ್ಯತ್ಸಂಗ್ರಾಮೇ ಫಲ್ಗುನಂ ಚ ಮುಹುರ್ಮುಹುಃ।।
ರಾಜನ್! ರೋಷದಿಂದ ಭುಸುಗುಟ್ಟುತ್ತಾ, ಕಣ್ಣಿನಿಂದಲೇ ಸುಟ್ಟುಬಿಡುವನೋ ಎನ್ನುವಂತೆ ಅವನು ಸಂಗ್ರಾಮದಲ್ಲಿ ದ್ರೌಣಿಯನ್ನು ಮತ್ತು ಫಲ್ಗುನನನ್ನು ಪದೇ ಪದೇ ನೋಡುತ್ತಿದ್ದನು.
08040123a ತತಃ ಕ್ರುದ್ಧೋಽಬ್ರವೀತ್ಕೃಷ್ಣಃ ಪಾರ್ಥಂ ಸಪ್ರಣಯಂ ತದಾ।
08040123c ಅತ್ಯದ್ಭುತಮಿದಂ ಪಾರ್ಥ ತವ ಪಶ್ಯಾಮಿ ಸಂಯುಗೇ।
08040123e ಅತಿಶೇತೇ ಹಿ ಯತ್ರ ತ್ವಾ ದ್ರೋಣಪುತ್ರೋಽದ್ಯ ಭಾರತ।।
ಆಗ ಕ್ರುದ್ಧನಾಗಿದ್ದರೂ ಕೃಷ್ಣನು ಪ್ರೀತಿಯಿಂದ ಪಾರ್ಥನಿಗೆ ಹೇಳಿದನು: “ಪಾರ್ಥ! ಈ ಯುದ್ಧದಲ್ಲಿ ನಿನ್ನ ಅತಿ ಅದ್ಭುತವರ್ತನೆಯನ್ನು ನೋಡುತ್ತಿದ್ದೇನೆ! ಭಾರತ! ಇಂದು ದ್ರೋಣಪುತ್ರನು ನಿನ್ನನ್ನು ಮೀರಿ ಯುದ್ಧಮಾಡುತ್ತಿದ್ದಾನೆ!
08040124a ಕಚ್ಚಿತ್ತೇ ಗಾಂಡಿವಂ ಹಸ್ತೇ ರಥೇ ತಿಷ್ಠಸಿ ಚಾರ್ಜುನ।
08040124c ಕಚ್ಚಿತ್ಕುಶಲಿನೌ ಬಾಹೂ ಕಚ್ಚಿದ್ವೀರ್ಯಂ ತದೇವ ತೇ।।
ಅರ್ಜುನ! ಗಾಂಡೀವವನ್ನು ಕೈಯಲ್ಲಿ ಹಿಡಿದೇ ರಥದಲ್ಲಿ ನಿಂತಿರುವೆಯಲ್ಲವೇ? ನಿನ್ನ ಬಾಹುಗಳು ಕುಶಲವಾಗಿವೆ ತಾನೇ? ನಿನ್ನ ಶರೀರದಲ್ಲಿ ವೀರ್ಯವಿದೆ ತಾನೇ?”
08040125a ಏವಮುಕ್ತಸ್ತು ಕೃಷ್ಣೇನ ಕ್ಷಿಪ್ತ್ವಾ ಭಲ್ಲಾಂಶ್ಚತುರ್ದಶ।
08040125c ತ್ವರಮಾಣಸ್ತ್ವರಾಕಾಲೇ ದ್ರೌಣೇರ್ಧನುರಥಾಚ್ಚಿನತ್।
08040125e ಧ್ವಜಂ ಚತ್ರಂ ಪತಾಕಾಂ ಚ ರಥಂ ಶಕ್ತಿಂ ಗದಾಂ ತಥಾ।।
ಕೃಷ್ಣನು ಹೀಗೆ ಹೇಳಿದೊಡನೆಯೇ ಅರ್ಜುನನು ಹದಿನಾಲ್ಕು ಭಲ್ಲಗಳನ್ನು ಕೈಗೆತ್ತಿಕೊಂಡು ಅವಸರದ ಸಮಯದಲ್ಲಿ ತ್ವರೆಮಾಡಿ ದ್ರೌಣಿಯ ರಥ, ಧ್ವಜ, ಚತ್ರ, ಪತಾಕ, ಶಕ್ತಿ ಮತ್ತು ಗದೆಗಳನ್ನು ಕತ್ತರಿಸಿದನು.
08040126a ಜತ್ರುದೇಶೇ ಚ ಸುಭೃಶಂ ವತ್ಸದಂತೈರತಾಡಯತ್।
08040126c ಸ ಮೂರ್ಚ್ಚಾಂ ಪರಮಾಂ ಗತ್ವಾ ಧ್ವಜಯಷ್ಟಿಂ ಸಮಾಶ್ರಿತಃ।।
ಅವನ ಜತ್ರುದೇಶ – ಕುತ್ತಿಗೆಯ ಎಲುಬುಪ್ರದೇಶ – ವನ್ನು ವತ್ಸದಂತಗಳಿಂದ ಜೋರಾಗಿ ಹೊಡೆಯಲು ಅಶ್ವತ್ಥಾಮನು ಪರಮ ಮೂರ್ಛಿತನಾಗಿ ಧ್ವಜಸ್ತಂಭವನ್ನು ಹಿಡಿದು ಕುಳಿತುಬಿಟ್ಟನು.
08040127a ತಂ ವಿಸಂಜ್ಞಂ ಮಹಾರಾಜ ಕಿರೀಟಿಭಯಪೀಡಿತಂ।
08040127c ಅಪೋವಾಹ ರಣಾತ್ಸೂತೋ ರಕ್ಷಮಾಣೋ ಧನಂಜಯಾತ್।।
ಮಹಾರಾಜ! ಕಿರೀಟಿಯ ಭಯದಿಂದ ಪೀಡಿತನಾಗಿ ಮೂರ್ಛಿತನಾದ ಅವನನ್ನು ರಕ್ಷಿಸಲೋಸುಗ ಅವನ ಸಾರಥಿಯು ಧನಂಜಯನಿರುವ ರಣಭೂಮಿಯಿಂದ ಕರೆದುಕೊಂಡು ಹೋದನು.
08040128a ಏತಸ್ಮಿನ್ನೇವ ಕಾಲೇ ತು ವಿಜಯಃ ಶತ್ರುತಾಪನಃ।
08040128c ನ್ಯವಧೀತ್ತಾವಕಂ ಸೈನ್ಯಂ ಶತಶೋಽಥ ಸಹಸ್ರಶಃ।
08040128e ಪಶ್ಯತಸ್ತವ ಪುತ್ರಸ್ಯ ತಸ್ಯ ವೀರಸ್ಯ ಭಾರತ।।
ಭಾರತ! ಇದೇ ಸಮಯದಲ್ಲಿ ಶತ್ರುತಾಪನ ವಿಜಯ ಅರ್ಜುನನು ನಿನ್ನ ವೀರ ಪುತ್ರನು ನೋಡುತ್ತಿದ್ದಂತೆಯೇ ನಿನ್ನ ಸೇನೆಯನ್ನು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ವಧಿಸಿದನು.
08040129a ಏವಮೇಷ ಕ್ಷಯೋ ವೃತ್ತಸ್ತಾವಕಾನಾಂ ಪರೈಃ ಸಹ।
08040129c ಕ್ರೂರೋ ವಿಶಸನೋ ಘೋರೋ ರಾಜನ್ದುರ್ಮಂತ್ರಿತೇ ತವ।।
ರಾಜನ್! ಹೀಗೆ ನಿನ್ನ ದುರಾಲೋಚನೆಗಳಿಂದಾಗಿ ಶತ್ರುಗಳಿಂದ ನಿನ್ನವರ ಕ್ರೂರ, ಘೋರ ವಿನಾಶಕರ ಕ್ಷಯವು ನಡೆಯಿತು.
08040130a ಸಂಶಪ್ತಕಾಂಶ್ಚ ಕೌಂತೇಯಃ ಕುರೂಂಶ್ಚಾಪಿ ವೃಕೋದರಃ।
08040130c ವಸುಷೇಣಂ ಚ ಪಾಂಚಾಲಃ ಕೃತ್ಸ್ನೇನ ವ್ಯಧಮದ್ರಣೇ।।
ಕೌಂತೇಯನು ಸಂಶಪ್ತಕರನ್ನೂ, ವೃಕೋದರನು ಕುರುಗಳನ್ನೂ, ಪಾಂಚಾಲ್ಯನು ವಸುಷೇಣನನ್ನೂ ರಣದಲ್ಲಿ ಸಂಹರಿಸತೊಡಗಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ನಲ್ವತ್ತನೇ ಅಧ್ಯಾಯವು.