039 ಪಾರ್ಥಾಪಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ಕರ್ಣವಧ ಪರ್ವ

ಅಧ್ಯಾಯ 39

ಸಾರ

ಅಶ್ವತ್ಥಾಮ-ಯುಧಿಷ್ಠಿರರ ಯುದ್ಧ; ಯುಧಿಷ್ಠಿರನ ಪರಾಜಯ (1-38).

08039001 ಸಂಜಯ ಉವಾಚ।
08039001a ದ್ರೌಣಿರ್ಯುಧಿಷ್ಠಿರಂ ದೃಷ್ಟ್ವಾ ಶೈನೇಯೇನಾಭಿರಕ್ಷಿತಂ।
08039001c ದ್ರೌಪದೇಯೈಸ್ತಥಾ ಶೂರೈರಭ್ಯವರ್ತತ ಹೃಷ್ಟವತ್।।

ಸಂಜಯನು ಹೇಳಿದನು: “ಶೈನೇಯ ಮತ್ತು ಶೂರ ದ್ರೌಪದೇಯರಿಂದ ಅಭಿರಕ್ಷಿತ ಯುಧಿಷ್ಠಿರನನ್ನು ನೋಡಿ ದ್ರೌಣಿಯು ಪ್ರಹೃಷ್ಟನಾದನು.

08039002a ಕಿರನ್ನಿಷುಗಣಾನ್ ಘೋರಾನ್ಸ್ವರ್ಣಪುಂಖಾಂ ಶಿಲಾಶಿತಾನ್।
08039002c ದರ್ಶಯನ್ವಿವಿಧಾನ್ಮಾರ್ಗಾಂ ಶಿಕ್ಷಾರ್ಥಂ ಲಘುಹಸ್ತವತ್।।
08039003a ತತಃ ಖಂ ಪೂರಯಾಮಾಸ ಶರೈರ್ದಿವ್ಯಾಸ್ತ್ರಮಂತ್ರಿತೈಃ।
08039003c ಯುಧಿಷ್ಠಿರಂ ಚ ಸಮರೇ ಪರ್ಯವಾರಯದಸ್ತ್ರವಿತ್।।

ಸ್ವರ್ಣಪುಂಖ ಶಿಲಾಶಿತ ಘೋರ ಶರಗಳನ್ನು ಎರಚುತ್ತಾ ಅಸ್ತ್ರಶಿಕ್ಷಣವನ್ನೂ ಹಸ್ತಲಾಘವವನ್ನೂ ವಿವಿಧ ಮಾರ್ಗಗಳನ್ನೂ ಪ್ರದರ್ಶಿಸುತ್ತಾ ದ್ರೌಣಿಯು ದಿವ್ಯಾಸ್ತ್ರಮಂತ್ರಿತ ಶರಗಳಿಂದ ಆಕಾಶವನ್ನೇ ತುಂಬಿಸಿದನು ಮತ್ತು ಆ ಅಸ್ತ್ರವಿದುವು ಸಮರದಲ್ಲಿ ಯುಧಿಷ್ಠಿರನನ್ನು ಸುತ್ತುವರೆದನು.

08039004a ದ್ರೌಣಾಯನಿಶರಚ್ಚನ್ನಂ ನ ಪ್ರಾಜ್ಞಾಯತ ಕಿಂ ಚನ।
08039004c ಬಾಣಭೂತಮಭೂತ್ಸರ್ವಮಾಯೋಧನಶಿರೋ ಹಿ ತತ್।।

ದ್ರೌಣಿಯ ಶರಗಳಿಂದ ತುಂಬಿ ಯಾವುದೂ ತಿಳಿಯದಾಯಿತು. ಆ ಯುದ್ಧಭೂಮಿಯು ಎಲ್ಲಕಡೆ ಬಾಣಮಯವಾಯಿತು.

08039005a ಬಾಣಜಾಲಂ ದಿವಿಷ್ಠಂ ತತ್ಸ್ವರ್ಣಜಾಲವಿಭೂಷಿತಂ।
08039005c ಶುಶುಭೇ ಭರತಶ್ರೇಷ್ಠ ವಿತಾನಮಿವ ವಿಷ್ಠಿತಂ।।

ಭರತಶ್ರೇಷ್ಠ! ಆ ಬಾಣಜಾಲವು ಆಕಾಶದಲ್ಲಿ ನಿರ್ಮಿಸಿದ ಸ್ವರ್ಣಜಾಲವಿಭೂಷಿತ ಚಪ್ಪರದಂತೆ ಶೋಭಿಸಿತು.

08039006a ತೇನ ಚನ್ನೇ ರಣೇ ರಾಜನ್ಬಾಣಜಾಲೇನ ಭಾಸ್ವತಾ।
08039006c ಅಭ್ರಚ್ಚಾಯೇವ ಸಂಜಜ್ಞೇ ಬಾಣರುದ್ಧೇ ನಭಸ್ತಲೇ।।

ರಾಜನ್! ರಣದಲ್ಲಿ ಹೊಳೆಯುತ್ತಿರುವ ಬಾಣಜಾಲಗಳಿಂದ ನೇಯಲ್ಪಟ್ಟ ಅದು ನಭಸ್ತಲದಲ್ಲಿ ಮೇಘಗಳ ಛಾಯೆಯೋ ಎನ್ನುವಂತೆ ಕಾಣುತ್ತಿತ್ತು.

08039007a ತತ್ರಾಶ್ಚರ್ಯಮಪಶ್ಯಾಮ ಬಾಣಭೂತೇ ತಥಾವಿಧೇ।
08039007c ನ ಸ್ಮ ಸಂಪತತೇ ಭೂಮೌ ದೃಷ್ಟ್ವಾ ದ್ರೌಣೇಃ ಪರಾಕ್ರಮಂ।।

ಆ ರೀತಿ ಬಾಣಗಳು ತುಂಬಿರಲು ಆಕಾಶದಿಂದ ಭೂಮಿಯ ಮೇಲೆ ಏನೂ ಬೀಳುತ್ತಿರಲಿಲ್ಲ. ದ್ರೌಣಿಯ ಆ ಪರಾಕ್ರಮವನ್ನು ನೋಡಿ ನಮಗೆ ಆಶ್ಚರ್ಯವುಂಟಾಯಿತು.

08039008a ಲಾಘವಂ ದ್ರೋಣಪುತ್ರಸ್ಯ ದೃಷ್ಟ್ವಾ ತತ್ರ ಮಹಾರಥಾಃ।
08039008c ವ್ಯಸ್ಮಯಂತ ಮಹಾರಾಜ ನ ಚೈನಂ ಪ್ರತಿವೀಕ್ಷಿತುಂ।
08039008e ಶೇಕುಸ್ತೇ ಸರ್ವರಾಜಾನಸ್ತಪಂತಮಿವ ಭಾಸ್ಕರಂ।।

ಮಹಾರಾಜ! ದ್ರೋಣಪುತ್ರನ ಹಸ್ತಲಾಘವವನ್ನು ನೋಡಿ ಅಲ್ಲಿದ್ದ ಮಹಾರಥರು ವಿಸ್ಮಿತರಾದರು. ಉರಿಯುತ್ತಿರುವ ಭಾಸ್ಕರನಂತಿದ್ದ ಅವನನ್ನು ನೋಡಲು ರಾಜರೆಲ್ಲರಿಗೂ ಸಾಧ್ಯವಾಗುತ್ತಿರಲಿಲ್ಲ.

08039009a ಸಾತ್ಯಕಿರ್ಯತಮಾನಸ್ತು ಧರ್ಮರಾಜಶ್ಚ ಪಾಂಡವಃ।
08039009c ತಥೇತರಾಣಿ ಸೈನ್ಯಾನಿ ನ ಸ್ಮ ಚಕ್ರುಃ ಪರಾಕ್ರಮಂ।।

ಆಗ ಪ್ರಯತ್ನಿಸುತ್ತಿದ್ದ ಸಾತ್ಯಕಿಯಾಗಲೀ ಪಾಂಡವ ಧರ್ಮರಾಜನಾಗಲೀ ಇನ್ನೂ ಇತರ ಸೇನೆಗಳಾಗಲೀ ತಮ್ಮ ಪರಾಕ್ರಮವನ್ನು ಅವನ ಮುಂದೆ ತೋರಿಸಲು ಸಾಧ್ಯವಾಗಲಿಲ್ಲ.

08039010a ವಧ್ಯಮಾನೇ ತತಃ ಸೈನ್ಯೇ ದ್ರೌಪದೇಯಾ ಮಹಾರಥಾಃ।
08039010c ಸಾತ್ಯಕಿರ್ಧರ್ಮರಾಜಶ್ಚ ಪಾಂಚಾಲಾಶ್ಚಾಪಿ ಸಂಗತಾಃ।
08039010e ತ್ಯಕ್ತ್ವಾ ಮೃತ್ಯುಭಯಂ ಘೋರಂ ದ್ರೌಣಾಯನಿಮುಪಾದ್ರವನ್।।

ಸೇನೆಗಳು ಹಾಗೆ ವಧಿಸಲ್ಪಡುತ್ತಿರುವಾಗ ಮಹಾರಥ ದ್ರೌಪದೇಯರು, ಸಾತ್ಯಕಿ, ಧರ್ಮರಾಜ ಮತ್ತು ಪಾಂಚಾಲರು ಒಟ್ಟಾಗಿ ಮೃತ್ಯುಭಯವನ್ನು ತೊರೆದು ಘೋರ ದ್ರೌಣಿಯನ್ನು ಆಕ್ರಮಣಿಸಿದರು.

08039011a ಸಾತ್ಯಕಿಃ ಪಂಚವಿಂಶತ್ಯಾ ದ್ರೌಣಿಂ ವಿದ್ಧ್ವಾ ಶಿಲಾಮುಖೈಃ।
08039011c ಪುನರ್ವಿವ್ಯಾಧ ನಾರಾಚೈಃ ಸಪ್ತಭಿಃ ಸ್ವರ್ಣಭೂಷಿತೈಃ।।

ಸಾತ್ಯಕಿಯು ದ್ರೌಣಿಯನ್ನು ಇಪ್ಪತ್ತೈದು ಶಿಲಾಮುಖಿಗಳಿಂದ ಹೊಡೆದು ಪುನಃ ಏಳು ಸ್ವರ್ಣಭೂಷಿತ ನಾರಾಚಗಳಿಂದ ಹೊಡೆದನು.

08039012a ಯುಧಿಷ್ಠಿರಸ್ತ್ರಿಸಪ್ತತ್ಯಾ ಪ್ರತಿವಿಂದ್ಯಶ್ಚ ಸಪ್ತಭಿಃ।
08039012c ಶ್ರುತಕರ್ಮಾ ತ್ರಿಭಿರ್ಬಾಣೈಃ ಶ್ರುತಕೀರ್ತಿಸ್ತು ಸಪ್ತಭಿಃ।।
08039013a ಸುತಸೋಮಶ್ಚ ನವಭಿಃ ಶತಾನೀಕಶ್ಚ ಸಪ್ತಭಿಃ।
08039013c ಅನ್ಯೇ ಚ ಬಹವಃ ಶೂರಾ ವಿವ್ಯಧುಸ್ತಂ ಸಮಂತತಃ।।

ಯುಧಿಷ್ಠಿರನು ಎಪ್ಪತ್ಮೂರು ಬಾಣಗಳಿಂದ, ಪ್ರತಿವಿಂದ್ಯನು ಏಳು, ಶ್ರುತಕರ್ಮನು ಮೂರು, ಶ್ರುತಕೀರ್ತಿಯು ಏಳು, ಸುತಸೋಮನು ಒಂಭತ್ತು ಮತ್ತು ಶತಾನೀಕನು ಏಳು ಬಾಣಗಳಿಂದ ಹಾಗೂ ಅನ್ಯ ಅನೇಕ ಶೂರರು ಎಲ್ಲಕಡೆಗಳಿಂದ ಅವನನ್ನು ಹೊಡೆದರು.

08039014a ಸೋಽತಿಕ್ರುದ್ಧಸ್ತತೋ ರಾಜನ್ನಾಶೀವಿಷ ಇವ ಶ್ವಸನ್।
08039014c ಸಾತ್ಯಕಿಂ ಪಂಚವಿಂಶತ್ಯಾ ಪ್ರಾವಿಧ್ಯತ ಶಿಲಾಶಿತೈಃ।।
08039015a ಶ್ರುತಕೀರ್ತಿಂ ಚ ನವಭಿಃ ಸುತಸೋಮಂ ಚ ಪಂಚಭಿಃ।
08039015c ಅಷ್ಟಭಿಃ ಶ್ರುತಕರ್ಮಾಣಂ ಪ್ರತಿವಿಂದ್ಯಂ ತ್ರಿಭಿಃ ಶರೈಃ।
08039015e ಶತಾನೀಕಂ ಚ ನವಭಿರ್ಧರ್ಮಪುತ್ರಂ ಚ ಸಪ್ತಭಿಃ।।

ರಾಜನ್! ಆಗ ಅತಿಕ್ರುದ್ಧ ಅಶ್ವತ್ಥಾಮನು ವಿಷಭರಿತ ಸರ್ಪದಂತೆ ನಿಟ್ಟುಸಿರು ಬಿಡುತ್ತಾ ಸಾತ್ಯಕಿಯನ್ನು ಇಪ್ಪತ್ತೈದು ಶಿಲಾಶಿತಗಳಿಂದ, ಶ್ರುತಕೀರ್ತಿಯನ್ನು ಒಂಭತ್ತು, ಸುತಸೋಮನನ್ನು ಐದು, ಶ್ರುತಕರ್ಮನನ್ನು ಎಂಟು, ಪ್ರತಿವಿಂದ್ಯನನ್ನು ಮೂರು, ಶತಾನೀಕನನ್ನು ಒಂಭತ್ತು ಮತ್ತು ಧರ್ಮಪುತ್ರನನ್ನು ಏಳು ಶರಗಳಿಂದ ಹೊಡೆದನು.

08039016a ಅಥೇತರಾಂಸ್ತತಃ ಶೂರಾನ್ದ್ವಾಭ್ಯಾಂ ದ್ವಾಭ್ಯಾಮತಾಡಯತ್।
08039016c ಶ್ರುತಕೀರ್ತೇಸ್ತಥಾ ಚಾಪಂ ಚಿಚ್ಚೇದ ನಿಶಿತೈಃ ಶರೈಃ।।

ಅನಂತರ ಇತರ ಶೂರರನ್ನು ಎರಡೆರಡು ಬಾಣಗಳಿಂದ ಹೊಡೆದು ನಿಶಿತ ಶರಗಳಿಂದ ಶ್ರುತಕೀರ್ತಿಯ ಧನುಸ್ಸನ್ನು ತುಂಡರಿಸಿದನು.

08039017a ಅಥಾನ್ಯದ್ಧನುರಾದಾಯ ಶ್ರುತಕೀರ್ತಿರ್ಮಹಾರಥಃ।
08039017c ದ್ರೌಣಾಯನಿಂ ತ್ರಿಭಿರ್ವಿದ್ಧ್ವಾ ವಿವ್ಯಾಧಾನ್ಯೈಃ ಶಿತೈಃ ಶರೈಃ।।

ಕೂಡಲೇ ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಮಹಾರಥ ಶ್ರುತಕೀರ್ತಿಯು ದ್ರೌಣಾಯನಿಯನ್ನು ಮೂರರಿಂದ ಮತ್ತು ಅನ್ಯ ನಿಶಿತ ಶರಗಳಿಂದ ಗಾಯಗೊಳಿಸಿದನು.

08039018a ತತೋ ದ್ರೌಣಿರ್ಮಹಾರಾಜ ಶರವರ್ಷೇಣ ಭಾರತ।
08039018c ಚಾದಯಾಮಾಸ ತತ್ಸೈನ್ಯಂ ಸಮಂತಾಚ್ಚ ಶರೈರ್ನೃಪಾನ್।।

ಮಹಾರಾಜ! ಭಾರತ! ಆಗ ದ್ರೌಣಿಯು ಶರವರ್ಷದಿಂದ ಆ ಸೇನೆಯನ್ನು ಮತ್ತು ಶರಗಳಿಂದ ನೃಪರನ್ನು ಎಲ್ಲಕಡೆಗಳಲ್ಲಿ ಮುಚ್ಚಿಬಿಟ್ಟನು.

08039019a ತತಃ ಪುನರಮೇಯಾತ್ಮಾ ಧರ್ಮರಾಜಸ್ಯ ಕಾರ್ಮುಕಂ।
08039019c ದ್ರೌಣಿಶ್ಚಿಚ್ಚೇದ ವಿಹಸನ್ವಿವ್ಯಾಧ ಚ ಶರೈಸ್ತ್ರಿಭಿಃ।।

ಅನಂತರ ಆ ಅಮೇಯಾತ್ಮ ದ್ರೌಣಿಯು ಪುನಃ ಧರ್ಮರಾಜನ ಧನುಸ್ಸನ್ನು ಕತ್ತರಿಸಿ ನಗುತ್ತಾ ಅವನನ್ನು ಮೂರು ಶರಗಳಿಂದ ಹೊಡೆದನು.

08039020a ತತೋ ಧರ್ಮಸುತೋ ರಾಜನ್ ಪ್ರಗೃಹ್ಯಾನ್ಯನ್ಮಹದ್ಧನುಃ।
08039020c ದ್ರೌಣಿಂ ವಿವ್ಯಾಧ ಸಪ್ತತ್ಯಾ ಬಾಹ್ವೋರುರಸಿ ಚಾರ್ದಯತ್।।

ಆಗ ರಾಜನ್! ಧರ್ಮಸುತನು ಇನ್ನೊಂದು ಮಹಾಧನುಸ್ಸನ್ನು ಹಿಡಿದು ಏಳು ಬಾಣಗಳಿಂದ ದ್ರೌಣಿಯ ಎದೆ-ಬಾಹುಗಳಿಗೆ ಹೊಡೆದನು.

08039021a ಸಾತ್ಯಕಿಸ್ತು ತತಃ ಕ್ರುದ್ಧೋ ದ್ರೌಣೇಃ ಪ್ರಹರತೋ ರಣೇ।
08039021c ಅರ್ಧಚಂದ್ರೇಣ ತೀಕ್ಷ್ಣೇನ ಧನುಶ್ಚಿತ್ತ್ವಾನದದ್ಭೃಶಂ।।

ಆಗ ರಣದಲ್ಲಿ ದ್ರೌಣಿಯ ಪ್ರಹರಗಳಿಂದ ಕ್ರುದ್ಧನಾದ ಸಾತ್ಯಕಿಯು ತೀಕ್ಷ್ಣ ಅರ್ಧಚಂದ್ರದಿಂದ ಅವನ ಧನುಸ್ಸನ್ನು ಕತ್ತರಿಸಿ ತುಂಬಾ ಗಾಯಗೊಳಿಸಿದನು.

08039022a ಛಿನ್ನಧನ್ವಾ ತತೋ ದ್ರೌಣಿಃ ಶಕ್ತ್ಯಾ ಶಕ್ತಿಮತಾಂ ವರಃ।
08039022c ಸಾರಥಿಂ ಪಾತಯಾಮಾಸ ಶೈನೇಯಸ್ಯ ರಥಾದ್ದ್ರುತಂ।।

ಧನುಸ್ಸು ತುಂಡಾದ ಶಕ್ತಿಮತರಲ್ಲಿ ಶ್ರೇಷ್ಠ ದ್ರೌಣಿಯು ಕೂಡಲೇ ಶಕ್ತ್ಯಾಯುಧವನ್ನುಪಯೋಗಿಸಿ ಶೈನೇಯನ ಸಾರಥಿಯನ್ನು ಕೆಳಗುರುಳಿಸಿದನು.

08039023a ಅಥಾನ್ಯದ್ಧನುರಾದಾಯ ದ್ರೋಣಪುತ್ರಃ ಪ್ರತಾಪವಾನ್।
08039023c ಶೈನೇಯಂ ಶರವರ್ಷೇಣ ಚಾದಯಾಮಾಸ ಭಾರತ।।

ಭಾರತ! ಕೂಡಲೇ ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಪ್ರತಾಪವಾನ್ ದ್ರೋಣಪುತ್ರನು ಶರವರ್ಷದಿಂದ ಶೈನೇಯನನ್ನು ಮುಚ್ಚಿಬಿಟ್ಟನು.

08039024a ತಸ್ಯಾಶ್ವಾಃ ಪ್ರದ್ರುತಾಃ ಸಂಖ್ಯೇ ಪತಿತೇ ರಥಸಾರಥೌ।
08039024c ತತ್ರ ತತ್ರೈವ ಧಾವಂತಃ ಸಮದೃಶ್ಯಂತ ಭಾರತ।।

ರಥಸಾರಥಿಯು ಬೀಳಲು ರಣದಲ್ಲಿ ಸಾತ್ಯಕಿಯ ಕುದುರೆಗಳು ದಿಕ್ಕಾಪಾಲಾಗಿ ಓಡಿ ಹೋಗುತ್ತಿರುವುದನ್ನು ನಾವು ನೋಡಿದೆವು.

08039025a ಯುಧಿಷ್ಠಿರಪುರೋಗಾಸ್ತೇ ದ್ರೌಣಿಂ ಶಸ್ತ್ರಭೃತಾಂ ವರಂ।
08039025c ಅಭ್ಯವರ್ಷಂತ ವೇಗೇನ ವಿಸೃಜಂತಃ ಶಿತಾಂ ಶರಾನ್।।

ಆಗ ಯುಧಿಷ್ಠಿರನ ನಾಯಕತ್ವದಲ್ಲಿದ್ದ ಅವರ ಸೇನೆಯು ವೇಗವಾಗಿ ನಿಶಿತ ಬಾಣಗಳನ್ನು ಶಸ್ತ್ರಭೃತರಲ್ಲಿ ಶ್ರೇಷ್ಠ ದ್ರೌಣಿಯ ಮೇಲೆ ಸುರಿಸಿತು.

08039026a ಆಗಚ್ಚಮಾನಾಂಸ್ತಾನ್ ದೃಷ್ಟ್ವಾ ರೌದ್ರರೂಪಾನ್ಪರಂತಪಃ।
08039026c ಪ್ರಹಸನ್ ಪ್ರತಿಜಗ್ರಾಹ ದ್ರೋಣಪುತ್ರೋ ಮಹಾರಣೇ।।

ಮಹಾರಣದಲ್ಲಿ ರೌದ್ರರೂಪದ ಅವರು ಆಕ್ರಮಣಿಸುತ್ತಿರುವುದನ್ನು ನೋಡಿ ಪರಂತಪ ದ್ರೋಣಪುತ್ರನು ನಗುತ್ತಲೇ ಅವರನ್ನು ಎದುರಿಸಿದನು.

08039027a ತತಃ ಶರಶತಜ್ವಾಲಃ ಸೇನಾಕಕ್ಷಂ ಮಹಾರಥಃ।
08039027c ದ್ರೌಣಿರ್ದದಾಹ ಸಮರೇ ಕಕ್ಷಮಗ್ನಿರ್ಯಥಾ ವನೇ।।

ಆಗ ಮಹಾರಥ ದ್ರೌಣಿಯು ಜ್ವಾಲಾರೂಪದ ನೂರಾರು ಬಾಣಗಳಿಂದ ವನದಲ್ಲಿ ಪೊದೆಯನ್ನು ಅಗ್ನಿಯು ಹೇಗೋ ಹಾಗೆ ಯುಧಿಷ್ಠಿರನ ಸೇನೆಯನ್ನು ಸುಟ್ಟುಹಾಕಿದನು.

08039028a ತದ್ಬಲಂ ಪಾಂಡುಪುತ್ರಸ್ಯ ದ್ರೋಣಪುತ್ರಪ್ರತಾಪಿತಂ।
08039028c ಚುಕ್ಷುಭೇ ಭರತಶ್ರೇಷ್ಠ ತಿಮಿನೇವ ನದೀಮುಖಂ।।

ಭರತಶ್ರೇಷ್ಠ! ದ್ರೋಣಪುತ್ರನಿಂದ ಸಂತಾಪಕ್ಕೊಳಗಾದ ಪಾಂಡುಪುತ್ರನ ಆ ಸೈನ್ಯವು ಸಾಗರವನ್ನು ಸೇರುವಾಗ ನದಿಯು ತಿಮಿಂಗಿಲದಿಂದ ಹೇಗೋ ಹಾಗೆ ಕ್ಷೋಭೆಗೊಂಡಿತು.

08039029a ದೃಷ್ಟ್ವಾ ತೇ ಚ ಮಹಾರಾಜ ದ್ರೋಣಪುತ್ರಪರಾಕ್ರಮಂ।
08039029c ನಿಹತಾನ್ಮೇನಿರೇ ಸರ್ವಾನ್ಪಾಂಡೂನ್ದ್ರೋಣಸುತೇನ ವೈ।।

ಮಹಾರಾಜ! ದ್ರೋಣಪುತ್ರನ ಪರಾಕ್ರಮವನ್ನು ನೋಡಿ ದ್ರೋಣಸುತನಿಂದ ಪಾಂಡವರೆಲ್ಲರೂ ಹತರಾದರೆಂದೇ ಭಾವಿಸಿದರು.

08039030a ಯುಧಿಷ್ಠಿರಸ್ತು ತ್ವರಿತೋ ದ್ರೌಣಿಂ ಶ್ಲಿಷ್ಯ ಮಹಾರಥಂ।
08039030c ಅಬ್ರವೀದ್ದ್ರೋಣಪುತ್ರಂ ತು ರೋಷಾಮರ್ಷಸಮನ್ವಿತಃ।।

ರೋಷ-ಕೋಪಸಮನ್ವಿತ ಯುಧಿಷ್ಠಿರನಾದರೋ ತ್ವರೆಮಾಡಿ ಮಹಾರಥ ದ್ರೌಣಿ ದ್ರೋಣಪುತ್ರನಿಗೆ ಹೇಳಿದನು:

08039031a ನೈವ ನಾಮ ತವ ಪ್ರೀತಿರ್ನೈವ ನಾಮ ಕೃತಜ್ಞತಾ।
08039031c ಯತಸ್ತ್ವಂ ಪುರುಷವ್ಯಾಘ್ರ ಮಾಮೇವಾದ್ಯ ಜಿಘಾಂಸಸಿ।।

“ಪುರುಷವ್ಯಾಘ್ರ! ಇಂದು ನೀನು ನನ್ನನ್ನು ಸಂಹರಿಸಲು ಇಚ್ಛಿಸಿರುವುದು ನಿನಗೆ ನಮ್ಮ ಮೇಲಿರುವ ಪ್ರೀತಿಯ ದ್ಯೋತಕವೂ ಅಲ್ಲ! ಕೃತಜ್ಞತೆಯ ದ್ಯೋತಕವೂ ಅಲ್ಲ!

08039032a ಬ್ರಾಹ್ಮಣೇನ ತಪಃ ಕಾರ್ಯಂ ದಾನಮಧ್ಯಯನಂ ತಥಾ।
08039032c ಕ್ಷತ್ರಿಯೇಣ ಧನುರ್ನಾಮ್ಯಂ ಸ ಭವಾನ್ಬ್ರಾಹ್ಮಣಬ್ರುವಃ।।

ತಪಸ್ಸು, ದಾನ, ಮತ್ತು ಅಧ್ಯಯನಗಳು ಬ್ರಾಹ್ಮಣನು ಮಾಡುವ ಕಾರ್ಯಗಳು. ಧನುಸ್ಸನ್ನು ಬಗ್ಗಿಸುವುದು ಕ್ಷತ್ರಿಯನ ಕಾರ್ಯ. ಆದರೆ ನೀನು ಮಾತ್ರ ಕರೆಯಿಸಿಕೊಳ್ಳುವುದಕ್ಕೆ ಬ್ರಾಹ್ಮಣನಾಗಿರುವೆ!

08039033a ಮಿಷತಸ್ತೇ ಮಹಾಬಾಹೋ ಜೇಷ್ಯಾಮಿ ಯುಧಿ ಕೌರವಾನ್।
08039033c ಕುರುಷ್ವ ಸಮರೇ ಕರ್ಮ ಬ್ರಹ್ಮಬಂಧುರಸಿ ಧ್ರುವಂ।।

ಮಹಾಬಾಹೋ! ನೀನು ನಿಶ್ಚಯವಾಗಿಯೂ ಧರ್ಮಭ್ರಷ್ಟ ಬ್ರಾಹ್ಮಣನಾಗಿರುವೆ! ಸಮರದಲ್ಲಿ ನಿನ್ನ ಕರ್ಮವನ್ನು ಮಾಡು! ನೀನು ನೋಡುತ್ತಿರುವಂತೆಯೇ ಯುದ್ಧದಲ್ಲಿ ನಾನು ಕೌರವರನ್ನು ಜಯಿಸುತ್ತೇನೆ!”

08039034a ಏವಮುಕ್ತೋ ಮಹಾರಾಜ ದ್ರೋಣಪುತ್ರಃ ಸ್ಮಯನ್ನಿವ।
08039034c ಯುಕ್ತತ್ವಂ ತಚ್ಚ ಸಂಚಿಂತ್ಯ ನೋತ್ತರಂ ಕಿಂ ಚಿದಬ್ರವೀತ್।।

ಮಹಾರಾಜ! ಇದನ್ನು ಕೇಳಿ ದ್ರೋಣಪುತ್ರನು ನಸುನಕ್ಕನು. ಹೇಳಿದುದು ತತ್ವಯುಕ್ತವಾಗಿಯೇ ಇದೆ ಎಂದು ಯೋಚಿಸಿ ಅದಕ್ಕೆ ಯಾವ ಉತ್ತರವನ್ನೂ ಕೊಡಲಿಲ್ಲ.

08039035a ಅನುಕ್ತ್ವಾ ಚ ತತಃ ಕಿಂ ಚಿಚ್ಚರವರ್ಷೇಣ ಪಾಂಡವಂ।
08039035c ಚಾದಯಾಮಾಸ ಸಮರೇ ಕ್ರುದ್ಧೋಽಮ್ತಕ ಇವ ಪ್ರಜಾಃ।।

ಏನನ್ನೂ ಹೇಳದೇ ಅವನು ಕ್ರುದ್ಧ ಅಂತಕನು ಪ್ರಜೆಗಳನ್ನು ಹೇಗೋ ಹಾಗೆ ಸಮರದಲ್ಲಿ ಶರವರ್ಷದಿಂದ ಪಾಂಡವ ಯುಧಿಷ್ಠಿರನನ್ನು ಮುಚ್ಚಿಬಿಟ್ಟನು.

08039036a ಸಂಚಾದ್ಯಮಾನಸ್ತು ತದಾ ದ್ರೋಣಪುತ್ರೇಣ ಮಾರಿಷ।
08039036c ಪಾರ್ಥೋಽಪಯಾತಃ ಶೀಘ್ರಂ ವೈ ವಿಹಾಯ ಮಹತೀಂ ಚಮೂಂ।।

ಮಾರಿಷ! ದ್ರೋಣಪುತ್ರನಿಂದ ಮುಚ್ಚಲ್ಪಟ್ಟ ಪಾರ್ಥ ಯುಧಿಷ್ಠಿರನು ಮಹಾ ಸೇನೆಯನ್ನು ಬಿಟ್ಟು ಶೀಘ್ರವಾಗಿ ಹೊರಟುಹೋದನು.

08039037a ಅಪಯಾತೇ ತತಸ್ತಸ್ಮಿನ್ಧರ್ಮಪುತ್ರೇ ಯುಧಿಷ್ಠಿರೇ।
08039037c ದ್ರೋಣಪುತ್ರಃ ಸ್ಥಿತೋ ರಾಜನ್ ಪ್ರತ್ಯಾದೇಶಾನ್ಮಹಾತ್ಮನಃ।।

ರಾಜನ್! ಧರ್ಮಪುತ್ರ ಯುಧಿಷ್ಠಿರನು ಅಲ್ಲಿಂದ ಪಲಾಯನ ಮಾಡಲು ಮಹಾತ್ಮ ದ್ರೋಣಪುತ್ರನು ಇನ್ನೊಂದು ಮಾರ್ಗವನ್ನು ಹಿಡಿದು ಹೊರಟುಹೋದನು.

08039038a ತತೋ ಯುಧಿಷ್ಠಿರೋ ರಾಜಾ ತ್ಯಕ್ತ್ವಾ ದ್ರೌಣಿಂ ಮಹಾಹವೇ।
08039038c ಪ್ರಯಯೌ ತಾವಕಂ ಸೈನ್ಯಂ ಯುಕ್ತಃ ಕ್ರೂರಾಯ ಕರ್ಮಣೇ।।

ಮಹಾಯುದ್ಧದಲ್ಲಿ ದ್ರೌಣಿಯನ್ನು ತೊರೆದು ರಾಜಾ ಯುಧಿಷ್ಠಿರನು ಕ್ರೂರಕರ್ಮದಲ್ಲಿಯೇ ನಿರತನಾಗಿ ನಿನ್ನ ಸೇನೆಯ ಕಡೆ ಧಾವಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಪಾರ್ಥಾಪಯಾನೇ ಏಕೋನಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಪಾರ್ಥಾಪಯಾನ ಎನ್ನುವ ಮೂವತ್ತೊಂಭತ್ತನೇ ಅಧ್ಯಾಯವು.