ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 38
ಸಾರ
ಕೃಪ-ಶಿಖಂಡಿಯರ ನಡುವೆ ಯುದ್ಧ (1-20). ಕೃಪನಿಂದ ಚಿತ್ರಕೇತುವಿನ ಮಗ ಸುಕೇತುವಿನ ವಧೆ (21-30). ಧೃಷ್ಟದ್ಯುಮ್ನ-ಕೃತವರ್ಮರ ಯುದ್ಧ; ಕೃತವರ್ಮನ ಪರಾಜಯ (31-42).
08038001 ಸಂಜಯ ಉವಾಚ।
08038001a ಕೃತವರ್ಮಾ ಕೃಪೋ ದ್ರೌಣಿಃ ಸೂತಪುತ್ರಶ್ಚ ಮಾರಿಷ।
08038001c ಉಲೂಕಃ ಸೌಬಲಶ್ಚೈವ ರಾಜಾ ಚ ಸಹ ಸೋದರೈಃ।।
08038002a ಸೀದಮಾನಾಂ ಚಮೂಂ ದೃಷ್ಟ್ವಾ ಪಾಂಡುಪುತ್ರಭಯಾರ್ದಿತಾಂ।
08038002c ಸಮುಜ್ಜಿಹೀರ್ಷುರ್ವೇಗೇನ ಭಿನ್ನಾಂ ನಾವಮಿವಾರ್ಣವೇ।।
ಸಂಜಯನು ಹೇಳಿದನು: “ಮಾರಿಷ! ಸಮುದ್ರದಲ್ಲಿ ಒಡೆದುಹೋದ ನೌಕೆಯಂತೆ ನಮ್ಮ ಸೈನ್ಯವು ಪಾಂಡುಪುತ್ರರ ಭಯದಿಂದ ಪೀಡಿತರಾಗಿ ನಾಶಗೊಳ್ಳುತ್ತಿರುವುದನ್ನು ನೋಡಿ ಕೃತವರ್ಮ, ಕೃಪ, ದ್ರೌಣಿ, ಸೂತಪುತ್ರ, ಉಲೂಕ, ಸೌಬಲ, ಸಹೋದರರೊಡನೆ ರಾಜಾ ದುರ್ಯೋಧನರು ಶೀಘ್ರವಾಗಿ ಮುಂದೆ ಹೋಗಿ ನಮ್ಮ ಸೈನ್ಯವನ್ನು ಉದ್ಧರಿಸಲು ಪ್ರಯತ್ನಿಸಿದರು.
08038003a ತತೋ ಯುದ್ಧಮತೀವಾಸೀನ್ಮುಹೂರ್ತಮಿವ ಭಾರತ।
08038003c ಭೀರೂಣಾಂ ತ್ರಾಸಜನನಂ ಶೂರಾಣಾಂ ಹರ್ಷವರ್ಧನಂ।।
ಭಾರತ! ಆಗ ಮುಹೂರ್ತಕಾಲ ಹೇಡಿಗಳಿಗೆ ಭಯವನ್ನುಂಟುಮಾಡುವ ಮತ್ತು ಶೂರರ ಹರ್ಷವನ್ನು ಹೆಚ್ಚಿಸುವ ಅತೀವ ಯುದ್ಧವು ನಡೆಯಿತು.
08038004a ಕೃಪೇಣ ಶರವರ್ಷಾಣಿ ವಿಪ್ರಮುಕ್ತಾನಿ ಸಂಯುಗೇ।
08038004c ಸೃಂಜಯಾಃ ಶಾತಯಾಮಾಸುಃ ಶಲಭಾನಾಂ ವ್ರಜಾ ಇವ।।
ಸಂಯುಗದಲ್ಲಿ ಕೃಪನು ಪ್ರಯೋಗಿಸಿದ ಶರವರ್ಷಗಳು ಮಿಡತೆಗಳ ಗುಂಪುಗಳೋಪಾದಿಯಲ್ಲಿ ಸೃಂಜಯರನ್ನು ಸಂಪೂರ್ಣವಾಗಿ ಮುಚ್ಚಿಬಿಟ್ಟಿತು.
08038005a ಶಿಖಂಡೀ ತು ತತಃ ಕ್ರುದ್ಧೋ ಗೌತಮಂ ತ್ವರಿತೋ ಯಯೌ।
08038005c ವವರ್ಷ ಶರವರ್ಷಾಣಿ ಸಮಂತಾದೇವ ಬ್ರಾಹ್ಮಣೇ।।
ಆಗ ಕ್ರುದ್ಧ ಶಿಖಂಡಿಯು ತ್ವರೆಮಾಡಿ ಬಂದು ಬ್ರಾಹ್ಮಣ ಕೃಪನ ಸುತ್ತಲೂ ಶರವರ್ಷಗಳನ್ನು ಸುರಿಸಿದನು.
08038006a ಕೃಪಸ್ತು ಶರವರ್ಷಂ ತದ್ವಿನಿಹತ್ಯ ಮಹಾಸ್ತ್ರವಿತ್।
08038006c ಶಿಖಂಡಿನಂ ರಣೇ ಕ್ರುದ್ಧೋ ವಿವ್ಯಾಧ ದಶಭಿಃ ಶರೈಃ।।
ಮಹಾಸ್ತ್ರವಿದು ಕೃಪನು ಆ ಶರವರ್ಷವನ್ನು ನಿರಸನಗೊಳಿಸಿ ಕ್ರುದ್ಧನಾಗಿ ಹತ್ತು ಶರಗಳಿಂದ ಶಿಖಂಡಿಯನ್ನು ಪ್ರಹರಿಸಿದನು.
08038007a ತತಃ ಶಿಖಂಡೀ ಕುಪೀತಃ ಶರೈಃ ಸಪ್ತಭಿರಾಹವೇ।
08038007c ಕೃಪಂ ವಿವ್ಯಾಧ ಸುಭೃಶಂ ಕಂಕಪತ್ರೈರಜಿಹ್ಮಗೈಃ।।
ಆಗ ಕುಪಿತ ಶಿಖಂಡಿಯು ಯುದ್ಧದಲ್ಲಿ ಕಂಕಪತ್ರಗಳಿದ್ದ ಏಳು ಜಿಹ್ಮಗ ಶರಗಳಿಂದ ಕೃಪನನ್ನು ಹೊಡೆದನು.
08038008a ತತಃ ಕೃಪಃ ಶರೈಸ್ತೀಕ್ಷ್ಣೈಃ ಸೋಽತಿವಿದ್ಧೋ ಮಹಾರಥಃ।
08038008c ವ್ಯಶ್ವಸೂತರಥಂ ಚಕ್ರೇ ಪಾರ್ಷತಂ ತು ದ್ವಿಜೋತ್ತಮಃ।।
ಆಗ ತೀಕ್ಷ್ಣ ಶರಗಳಿಂದ ಅತಿಯಾಗಿ ಗಾಯಗೊಂಡ ಮಹಾರಥ ದ್ವಿಜೋತ್ತಮ ಕೃಪನು ಪಾರ್ಷತ ಶಿಖಂಡಿಯನ್ನು ಅಶ್ವ-ಸೂತ-ರಥಗಳಿಂದ ವಿಹೀನನ್ನಾಗಿ ಮಾಡಿದನು.
08038009a ಹತಾಶ್ವಾತ್ತು ತತೋ ಯಾನಾದವಪ್ಲುತ್ಯ ಮಹಾರಥಃ।
08038009c ಚರ್ಮಖಡ್ಗೇ ಚ ಸಂಗೃಹ್ಯ ಸತ್ವರಂ ಬ್ರಾಹ್ಮಣಂ ಯಯೌ।।
ಕುದುರೆಗಳು ವಧಿಸಲ್ಪಡಲು ಮಹಾರಥ ಶಿಖಂಡಿಯು ರಥದಿಂದ ಕೆಳಕ್ಕೆ ಧುಮುಕಿ ಬಲವತ್ತಾದ ಖಡ್ಗ ಗುರಾಣಿಗಳನ್ನು ಹಿಡಿದು ಬ್ರಾಹ್ಮಣ ಕೃಪನ ಬಳಿ ನುಗ್ಗಿದನು.
08038010a ತಮಾಪತಂತಂ ಸಹಸಾ ಶರೈಃ ಸನ್ನತಪರ್ವಭಿಃ।
08038010c ಚಾದಯಾಮಾಸ ಸಮರೇ ತದದ್ಭುತಮಿವಾಭವತ್।।
ಸಮರದಲ್ಲಿ ಹಾಗೆ ನುಗ್ಗಿಬರುತ್ತಿದ್ದ ಶಿಖಂಡಿಯನ್ನು ಕೂಡಲೇ ಕೃಪನು ಸನ್ನತಪರ್ವ ಶರಗಳಿಂದ ಮುಚ್ಚಿಬಿಟ್ಟನು. ಅದೊಂದು ಅದ್ಭುತವಾಗಿತ್ತು.
08038011a ತತ್ರಾದ್ಭುತಮಪಶ್ಯಾಮ ಶಿಲಾನಾಂ ಪ್ಲವನಂ ಯಥಾ।
08038011c ನಿಶ್ಚೇಷ್ಟೋ ಯದ್ರಣೇ ರಾಜಂ ಶಿಖಂಡೀ ಸಮತಿಷ್ಠತ।।
ರಾಜನ್! ಆಗ ರಣದಲ್ಲಿ ಶಿಖಂಡಿಯು ನಿಶ್ಚೇಷ್ಟನಾಗಿ ನಿಂತುಬಿಟ್ಟನು. ಕಲ್ಲುಗಳು ನೀರಿನಲ್ಲಿ ತೇಲಿದಂಥಹ ಆ ಅದ್ಭುತವನ್ನು ನಾವು ನೋಡಿದೆವು.
08038012a ಕೃಪೇಣ ಚಾದಿತಂ ದೃಷ್ಟ್ವಾ ನೃಪೋತ್ತಮ ಶಿಖಂಡಿನಂ।
08038012c ಪ್ರತ್ಯುದ್ಯಯೌ ಕೃಪಂ ತೂರ್ಣಂ ಧೃಷ್ಟದ್ಯುಮ್ನೋ ಮಹಾರಥಃ।।
ನೃಪೋತ್ತಮ! ಕೃಪನಿಂದ ಶಿಖಂಡಿಯು ಮುಚ್ಚಿಹೋದುದನ್ನು ನೋಡಿ ಮಹಾರಥ ಧೃಷ್ಟದ್ಯುಮ್ನನು ಬೇಗನೇ ಕೃಪನಲ್ಲಿಗೆ ಆಗಮಿಸಿದನು.
08038013a ಧೃಷ್ಟದ್ಯುಮ್ನಂ ತತೋ ಯಾಂತಂ ಶಾರದ್ವತರಥಂ ಪ್ರತಿ।
08038013c ಪ್ರತಿಜಗ್ರಾಹ ವೇಗೇನ ಕೃತವರ್ಮಾ ಮಹಾರಥಃ।।
ಶಾರದ್ವತನ ರಥದ ಬಳಿಬರುತ್ತಿದ್ದ ಧೃಷ್ಟದ್ಯುಮ್ನನನ್ನು ಮಹಾರಥ ಕೃತವರ್ಮನು ವೇಗದಿಂದ ಮುಂದೆಬಂದು ತಡೆದನು.
08038014a ಯುಧಿಷ್ಠಿರಮಥಾಯಾಂತಂ ಶಾರದ್ವತರಥಂ ಪ್ರತಿ।
08038014c ಸಪುತ್ರಂ ಸಹಸೇನಂ ಚ ದ್ರೋಣಪುತ್ರೋ ನ್ಯವಾರಯತ್।।
ಆಗ ತನ್ನ ಮಗ ಮತ್ತು ಸೇನೆಗಳೊಂದಿಗೆ ಶಾರದ್ವತನ ರಥದ ಬಳಿಬರುತ್ತಿದ್ದ ಯುಧಿಷ್ಠಿರನನ್ನು ದ್ರೋಣಪುತ್ರನು ತಡೆದನು.
08038015a ನಕುಲಂ ಸಹದೇವಂ ಚ ತ್ವರಮಾಣೌ ಮಹಾರಥೌ।
08038015c ಪ್ರತಿಜಗ್ರಾಹ ತೇ ಪುತ್ರಃ ಶರವರ್ಷೇಣ ವಾರಯನ್।।
ತ್ವರೆಮಾಡಿ ಬರುತ್ತಿದ್ದ ಮಹಾರಥ ನಕುಲ-ಸಹದೇವರನ್ನು ನಿನ್ನ ಪುತ್ರನು ಶರವರ್ಷಗಳಿಂದ ತಡೆದು ನಿಲ್ಲಿಸಿದನು.
08038016a ಭೀಮಸೇನಂ ಕರೂಷಾಂಶ್ಚ ಕೇಕಯಾನ್ಸಹಸೃಂಜಯಾನ್।
08038016c ಕರ್ಣೋ ವೈಕರ್ತನೋ ಯುದ್ಧೇ ವಾರಯಾಮಾಸ ಭಾರತ।।
ಭಾರತ! ವೈಕರ್ತನ ಕರ್ಣನು ಯುದ್ಧದಲ್ಲಿ ಬೀಮಸೇನನನ್ನು ಕರುಷ-ಕೇಕಯ-ಸೃಂಜಯರೊಂದಿಗೆ ತಡೆದನು.
08038017a ಶಿಖಂಡಿನಸ್ತತೋ ಬಾಣಾನ್ಕೃಪಃ ಶಾರದ್ವತೋ ಯುಧಿ।
08038017c ಪ್ರಾಹಿಣೋತ್ತ್ವರಯಾ ಯುಕ್ತೋ ದಿಧಕ್ಷುರಿವ ಮಾರಿಷ।।
ಮಾರಿಷ! ಆಗ ಯುದ್ಧದಲ್ಲಿ ಶಾರದ್ವತ ಕೃಪನು ಶಿಖಂಡಿಯನ್ನು ದಹಿಸಿಬಿಡುವನೋ ಎನ್ನುವಂತೆ ತ್ವರೆಮಾಡಿ ಬಾಣಗಳನ್ನು ಪ್ರಯೋಗಿಸುತ್ತಿದ್ದನು.
08038018a ತಾಂ ಶರಾನ್ಪ್ರೇಷಿತಾಂಸ್ತೇನ ಸಮಂತಾದ್ಧೇಮಭೂಷಣಾನ್।
08038018c ಚಿಚ್ಚೇದ ಖಡ್ಗಮಾವಿಧ್ಯ ಭ್ರಾಮಯಂಶ್ಚ ಪುನಃ ಪುನಃ।।
ಎಲ್ಲಕಡೆಗಳಿಂದ ಕೃಪನು ಪ್ರಯೋಗಿಸುತ್ತಿದ್ದ ಹೇಮಭೂಷಿತ ಬಾಣಗಳನ್ನು ಶಿಖಂಡಿಯು ಕತ್ತಿಯನ್ನು ಪುನಃ ಪುನಃ ತಿರುಗಿಸುತ್ತಾ ಕತ್ತರಿಸಿ ಹಾಕುತ್ತಿದ್ದನು.
08038019a ಶತಚಂದ್ರಂ ತತಶ್ಚರ್ಮ ಗೌತಮಃ ಪಾರ್ಷತಸ್ಯ ಹ।
08038019c ವ್ಯಧಮತ್ಸಾಯಕೈಸ್ತೂರ್ಣಂ ತತ ಉಚ್ಚುಕ್ರುಶುರ್ಜನಾಃ।।
ಆಗ ಗೌತಮನು ಪಾರ್ಷತನ ಶತಚಂದ್ರ ಗುರಾಣಿಯನ್ನು ಬೇಗನೇ ಸಾಯಕಗಳಿಂದ ಧ್ವಂಸಗೊಳಿಸಿದನು. ಆಗ ಅಲ್ಲಿದ್ದ ಜನರು ಗಟ್ಟಿಯಾಗಿ ಕೂಗಿಕೊಂಡರು.
08038020a ಸ ವಿಚರ್ಮಾ ಮಹಾರಾಜ ಖಡ್ಗಪಾಣಿರುಪಾದ್ರವತ್।
08038020c ಕೃಪಸ್ಯ ವಶಮಾಪನ್ನೋ ಮೃತ್ಯೋರಾಸ್ಯಮಿವಾತುರಃ।।
ಮಹಾರಾಜ! ಗುರಾಣಿಯನ್ನು ಕಳೆದುಕೊಂಡು ರೋಗಿಯು ಮೃತ್ಯುಮುಖನಾಗುವಂತೆ ಕೃಪನ ವಶನಾಗಿದ್ದ ಶಿಖಂಡಿಯು ಖಡ್ಗಹಸ್ತನಾಗಿಯೇ ಅವನ ಕಡೆ ನುಗ್ಗಿ ಹೋದನು.
08038021a ಶಾರದ್ವತಶರೈರ್ಗ್ರಸ್ತಂ ಕ್ಲಿಶ್ಯಮಾನಂ ಮಹಾಬಲಂ।
08038021c ಚಿತ್ರಕೇತುಸುತೋ ರಾಜನ್ಸುಕೇತುಸ್ತ್ವರಿತೋ ಯಯೌ।।
ರಾಜನ್! ಶಾರದ್ವತ ಶರಗಳಿಗೆ ಸಿಲುಕಿ ಸಂಕಟಪಡುತ್ತಿದ್ದ ಮಹಾಬಲ ಶಿಖಂಡಿಯನ್ನು ನೋಡಿ ಚಿತ್ರಕೇತುವಿನ ಮಗ ಸುಕೇತುವು ತ್ವರೆಮಾಡಿ ಅಲ್ಲಿಗೆ ಬಂದನು.
08038022a ವಿಕಿರನ್ಬ್ರಾಹ್ಮಣಂ ಯುದ್ಧೇ ಬಹುಭಿರ್ನಿಶಿತೈಃ ಶರೈಃ।
08038022c ಅಭ್ಯಾಪತದಮೇಯಾತ್ಮಾ ಗೌತಮಸ್ಯ ರಥಂ ಪ್ರತಿ।।
ಅಮೇಯಾತ್ಮ ಸುಕೇತುವು ಯುದ್ಧದಲ್ಲಿ ಗೌತಮನ ರಥದ ಬಳಿ ಬಂದು ಅನೇಕ ನಿಶಿತ ಶರಗಳಿಂದ ಬ್ರಾಹ್ಮಣನ ಮೇಲೆ ಎರಗಿದನು.
08038023a ದೃಷ್ಟ್ವಾವಿಷಹ್ಯಂ ತಂ ಯುದ್ಧೇ ಬ್ರಾಹ್ಮಣಂ ಚರಿತವ್ರತಂ।
08038023c ಅಪಯಾತಸ್ತತಸ್ತೂರ್ಣಂ ಶಿಖಂಡೀ ರಾಜಸತ್ತಮ।।
ರಾಜಸತ್ತಮ! ಚರಿತವ್ರತ ಬ್ರಾಹ್ಮಣ ಕೃಪನು ಸುಕೇತುವಿನೊಡನೆ ಯುದ್ಧದಲ್ಲಿ ನಿರತನಾಗಿರುವುದನ್ನು ನೋಡಿ ಶಿಖಂಡಿಯು ಬೇಗನೇ ಅಲ್ಲಿಂದ ಹೊರಟುಹೋದನು.
08038024a ಸುಕೇತುಸ್ತು ತತೋ ರಾಜನ್ಗೌತಮಂ ನವಭಿಃ ಶರೈಃ।
08038024c ವಿದ್ಧ್ವಾ ವಿವ್ಯಾಧ ಸಪ್ತತ್ಯಾ ಪುನಶ್ಚೈನಂ ತ್ರಿಭಿಃ ಶರೈಃ।।
ರಾಜನ್! ಆಗ ಸುಕೇತುವಾದರೋ ಗೌತಮನನ್ನು ಒಂಭತ್ತು ಶರಗಳಿಂದ ಹೊಡೆದು ಎಪ್ಪತ್ಮೂರು ಬಾಣಗಳಿಂದ ಪುನಃ ಪ್ರಹರಿಸಿದನು.
08038025a ಅಥಾಸ್ಯ ಸಶರಂ ಚಾಪಂ ಪುನಶ್ಚಿಚ್ಚೇದ ಮಾರಿಷ।
08038025c ಸಾರಥಿಂ ಚ ಶರೇಣಾಸ್ಯ ಭೃಶಂ ಮರ್ಮಣ್ಯತಾಡಯತ್।।
ಮಾರಿಷ! ಪುನಃ ಅವನು ಬಾಣಗಳಿಂದ ಯುಕ್ತವಾಗಿದ್ದ ಕೃಪನ ಧನುಸ್ಸನ್ನು ಕತ್ತರಿಸಿ, ಶರದಿಂದ ಸಾರಥಿಯ ಮರ್ಮಸ್ಥಳಗಳನ್ನು ಗಾಢವಾಗಿ ಪ್ರಹರಿಸಿದನು.
08038026a ಗೌತಮಸ್ತು ತತಃ ಕ್ರುದ್ಧೋ ಧನುರ್ಗೃಹ್ಯ ನವಂ ದೃಢಂ।
08038026c ಸುಕೇತುಂ ತ್ರಿಂಶತಾ ಬಾಣೈಃ ಸರ್ವಮರ್ಮಸ್ವತಾಡಯತ್।।
ಆಗ ಕ್ರುದ್ಧ ಗೌತಮನಾದರೋ ದೃಢವಾದ ಹೊಸ ಧನುಸ್ಸನ್ನು ಹಿಡಿದು ಮೂವತ್ತು ಬಾಣಗಳಿಂದ ಸುಕೇತುವಿನ ಮರ್ಮಸ್ಥಾನಗಳಿಗೆ ಪ್ರಹರಿಸಿದನು.
08038027a ಸ ವಿಹ್ವಲಿತಸರ್ವಾಂಗಃ ಪ್ರಚಚಾಲ ರಥೋತ್ತಮೇ।
08038027c ಭೂಮಿಚಾಲೇ ಯಥಾ ವೃಕ್ಷಶ್ಚಲತ್ಯಾಕಂಪಿತೋ ಭೃಶಂ।।
ಸುಕೇತುವು ಸರ್ವಾಂಗಗಳಲ್ಲಿ ವಿಹ್ವಲಿತನಾಗಿ ಭೂಕಂಪದ ಸಮಯದಲ್ಲಿ ವೃಕ್ಷಗಳು ಅಳ್ಳಾಡುವಂತೆ ತನ್ನ ಉತ್ತಮ ರಥದಲ್ಲಿ ತರತರನೆ ನಡುಗಿದನು.
08038028a ಚಲತಸ್ತಸ್ಯ ಕಾಯಾತ್ತು ಶಿರೋ ಜ್ವಲಿತಕುಂಡಲಂ।
08038028c ಸೋಷ್ಣೀಷಂ ಸಶಿರಸ್ತ್ರಾಣಂ ಕ್ಷುರಪ್ರೇಣಾನ್ವಪಾತಯತ್।।
ಹೀಗೆ ನಡುಗುತ್ತಿದ್ದ ಅವನ ಕಾಯದಿಂದ ಪ್ರಜ್ವಲಿತ ಕುಂಡಲಗಳನ್ನುಳ್ಳ ಮತ್ತು ಕಿರೀಟದಿಂದ ಶೋಭಿಸುತ್ತಿದ್ದ ಶಿರವನ್ನು ಕೃಪನು ಕ್ಷುರಪ್ರದಿಂದ ಕೆಡವಿದನು.
08038029a ತಚ್ಚಿರಃ ಪ್ರಾಪತದ್ಭೂಮೌ ಶ್ಯೇನಾಹೃತಮಿವಾಮಿಷಂ।
08038029c ತತೋಽಸ್ಯ ಕಾಯೋ ವಸುಧಾಂ ಪಶ್ಚಾತ್ಪ್ರಾಪ ತದಾ ಚ್ಯುತಃ।।
ಗಿಡುಗವು ಕೊಂಡೊಯ್ಯುತ್ತಿದ್ದ ಮಾಂಸದತುಂಡು ಕೆಳಕ್ಕೆ ಬೀಳುವಂತೆ ಶೀಘ್ರವಾಗಿ ಸುಕೇತುವಿನ ಶಿರವು ಭೂಮಿಯ ಮೇಲೆ ಬೀಳಲು, ಅವನ ಕಾಯವು ಕೆಳಗೆ ಬಿದ್ದಿತು.
08038030a ತಸ್ಮಿನ್ ಹತೇ ಮಹಾರಾಜ ತ್ರಸ್ತಾಸ್ತಸ್ಯ ಪದಾನುಗಾಃ।
08038030c ಗೌತಮಂ ಸಮರೇ ತ್ಯಕ್ತ್ವಾ ದುದ್ರುವುಸ್ತೇ ದಿಶೋ ದಶ।।
ಮಹಾರಾಜ! ಸುಕೇತುವು ಹತನಾಗಲು ಅವನ ಪದಾನುಗರು ಭಯಗೊಂಡು ಗೌತಮನನ್ನು ಸಮರದಲ್ಲಿ ಬಿಟ್ಟು ಹತ್ತು ದಿಕ್ಕುಗಳಲ್ಲಿಯೂ ಓಡಿ ಹೋದರು.
08038031a ಧೃಷ್ಟದ್ಯುಮ್ನಂ ತು ಸಮರೇ ಸನ್ನಿವಾರ್ಯ ಮಹಾಬಲಃ।
08038031c ಕೃತವರ್ಮಾಬ್ರವೀದ್ಧೃಷ್ಟಸ್ತಿಷ್ಠ ತಿಷ್ಠೇತಿ ಪಾರ್ಷತಂ।।
ಮಹಾಬಲ ಕೃತವರ್ಮನಾದರೋ ಸಮರದಲ್ಲಿ ಪಾರ್ಷತ ಧೃಷ್ಟದ್ಯುಮ್ನನನ್ನು ತಡೆದು “ನಿಲ್ಲು! ನಿಲ್ಲು!” ಎಂದು ಹೇಳಿದನು.
08038032a ತದಭೂತ್ತುಮುಲಂ ಯುದ್ಧಂ ವೃಷ್ಣಿಪಾರ್ಷತಯೋ ರಣೇ।
08038032c ಆಮಿಷಾರ್ಥೇ ಯಥಾ ಯುದ್ಧಂ ಶ್ಯೇನಯೋರ್ಗೃದ್ಧಯೋರ್ನೃಪ।।
ನೃಪ! ಆಗ ಮಾಂಸದತುಂಡಿಗೆ ಎರಡು ಗಿಡುಗಗಳು ಕಾಳಗವಾಡುವಂತೆ ವೃಷ್ಣಿ-ಪಾರ್ಷತರ ನಡುವೆ ರಣದಲ್ಲಿ ತುಮುಲ ಯುದ್ಧವು ನಡೆಯಿತು.
08038033a ಧೃಷ್ಟದ್ಯುಮ್ನಸ್ತು ಸಮರೇ ಹಾರ್ದಿಕ್ಯಂ ನವಭಿಃ ಶರೈಃ।
08038033c ಆಜಘಾನೋರಸಿ ಕ್ರುದ್ಧಃ ಪೀಡಯನ್ ಹೃದಿಕಾತ್ಮಜಂ।।
ಧೃಷ್ಟದ್ಯುಮ್ನನಾದರೋ ಸಮರದಲ್ಲಿ ಹಾರ್ದಿಕ್ಯನನ್ನು ಒಂಭತ್ತು ಶರಗಳಿಂದ ವಕ್ಷಃಸ್ಥಳದಲ್ಲಿ ಪ್ರಹರಿಸಿ ಕ್ರುದ್ಧನಾಗಿ ಹೃದಿಕಾತ್ಮಜನನ್ನು ಪೀಡಿಸಿದನು.
08038034a ಕೃತವರ್ಮಾ ತು ಸಮರೇ ಪಾರ್ಷತೇನ ದೃಢಾಹತಃ।
08038034c ಪಾರ್ಷತಂ ಸರಥಂ ಸಾಶ್ವಂ ಚಾದಯಾಮಾಸ ಸಾಯಕೈಃ।।
ಕೃತವರ್ಮನಾದರೋ ಸಮರದಲ್ಲಿ ಪಾರ್ಷತನಿಂದ ದೃಢವಾಗಿ ಪ್ರಹರಿಸಲ್ಪಟ್ಟು ಸಾಯಕಗಳಿಂದ ಪಾರ್ಷತನನ್ನು – ಅವನ ರಥ, ಕುದುರೆಗಳೊಂದಿಗೆ – ಮುಚ್ಚಿಬಿಟ್ಟನು.
08038035a ಸರಥಶ್ಚಾದಿತೋ ರಾಜನ್ ಧೃಷ್ಟದ್ಯುಮ್ನೋ ನ ದೃಶ್ಯತೇ।
08038035c ಮೇಘೈರಿವ ಪರಿಚ್ಚನ್ನೋ ಭಾಸ್ಕರೋ ಜಲದಾಗಮೇ।।
ರಾಜನ್! ರಥದೊಡನೆ ಮುಚ್ಚಿಹೋಗಿದ್ದ ಧೃಷ್ಟದ್ಯುಮ್ನನು ಮಳೆಗಾಲದ ಪ್ರಾರಂಭದಲ್ಲಿ ಮೇಘಗಳಿಂದ ಪರಿಚ್ಚನ್ನ ಭಾಸ್ಕರನಂತೆ ಕಾಣದಂತಾದನು.
08038036a ವಿಧೂಯ ತಂ ಬಾಣಗಣಂ ಶರೈಃ ಕನಕಭೂಷಣೈಃ।
08038036c ವ್ಯರೋಚತ ರಣೇ ರಾಜನ್ ಧೃಷ್ಟದ್ಯುಮ್ನಃ ಕೃತವ್ರಣಃ।।
ರಾಜನ್! ಗಾಯಗೊಂಡಿದ್ದ ಧೃಷ್ಟದ್ಯುಮ್ನನು ಕನಕಭೂಷಣ ಶರಗಳಿಂದ ಕೃತವರ್ಮನ ಬಾಣಗಣಗಳನ್ನು ನಿರಸನಗೊಳಿಸಿ ಪುನಃ ಕಾಣಿಸಿಕೊಂಡನು.
08038037a ತತಸ್ತು ಪಾರ್ಷತಃ ಕ್ರುದ್ಧಃ ಶಸ್ತ್ರವೃಷ್ಟಿಂ ಸುದಾರುಣಾಂ।
08038037c ಕೃತವರ್ಮಾಣಮಾಸಾದ್ಯ ವ್ಯಸೃಜತ್ ಪೃತನಾಪತಿಃ।।
ಆಗ ಸೇನಾನಾಯಕ ಧೃಷ್ಟದ್ಯುಮ್ನನು ಕ್ರುದ್ಧನಾಗಿ ಕೃತವರ್ಮನ ಬಳಿಸಾರಿ ಅವನ ಮೇಲೆ ದಾರುಣ ಶಸ್ತ್ರವೃಷ್ಟಿಯನ್ನು ಸುರಿಸಿದನು.
08038038a ತಾಮಾಪತಂತೀಂ ಸಹಸಾ ಶಸ್ತ್ರವೃಷ್ಟಿಂ ನಿರಂತರಾಂ।
08038038c ಶರೈರನೇಕಸಾಹಸ್ರೈರ್ಹಾರ್ದಿಕ್ಯೋ ವ್ಯಧಮದ್ಯುಧಿ।।
ಯುದ್ಧದಲ್ಲಿ ತನ್ನ ಮೇಲೆ ನಿರಂತರವಾಗಿ ಬೀಳುತ್ತಿದ್ದ ಆ ಶಸ್ತ್ರವೃಷ್ಟಿಯನ್ನು ಹಾರ್ದಿಕ್ಯನು ಅನೇಕ ಸಹಸ್ರ ಶರಗಳಿಂದ ಕೂಡಲೇ ನಾಶಗೊಳಿಸಿದನು.
08038039a ದೃಷ್ಟ್ವಾ ತು ದಾರಿತಾಂ ಯುದ್ಧೇ ಶಸ್ತ್ರವೃಷ್ಟಿಂ ದುರುತ್ತರಾಂ।
08038039c ಕೃತವರ್ಮಾಣಮಭ್ಯೇತ್ಯ ವಾರಯಾಮಾಸ ಪಾರ್ಷತಃ।।
ಯುದ್ಧದಲ್ಲಿ ಎದುರಿಸಲಸಾಧ್ಯ ಶಸ್ತ್ರವೃಷ್ಟಿಯನ್ನು ನಾಶಗೊಳಿಸಿದುದನ್ನು ಕಂಡು ಪಾರ್ಷತನು ಕೃತವರ್ಮನನ್ನು ಪ್ರಹರಿಸಿ ನಿಲ್ಲಿಸಿದನು.
08038040a ಸಾರಥಿಂ ಚಾಸ್ಯ ತರಸಾ ಪ್ರಾಹಿಣೋದ್ಯಮಸಾದನಂ।
08038040c ಭಲ್ಲೇನ ಶಿತಧಾರೇಣ ಸ ಹತಃ ಪ್ರಾಪತದ್ರಥಾತ್।।
ಮತ್ತು ಕೂಡಲೇ ಅವನ ಸಾರಥಿಯನ್ನು ಯಮಸಾದನಕ್ಕೆ ಕಳುಹಿಸಿದನು. ತೀಕ್ಷ್ಣ ಭಲ್ಲದಿಂದ ಅವನು ಹತನಾಗಿ ರಥದಿಂದ ಕೆಳಕ್ಕೆ ಬಿದ್ದನು.
08038041a ಧೃಷ್ಟದ್ಯುಮ್ನಸ್ತು ಬಲವಾನ್ ಜಿತ್ವಾ ಶತ್ರುಂ ಮಹಾರಥಂ।
08038041c ಕೌರವಾನ್ಸಮರೇ ತೂರ್ಣಂ ವಾರಯಾಮಾಸ ಸಾಯಕೈಃ।।
ಬಲವಾನ್ ಧೃಷ್ಟದ್ಯುಮ್ನನಾದರೋ ಮಹಾರಥ ಶತ್ರುವನ್ನು ಸಮರದಲ್ಲಿ ಗೆದ್ದು ಕೂಡಲೇ ಸಾಯಕಗಳಿಂದ ಕೌರವರನ್ನು ತಡೆದನು.
08038042a ತತಸ್ತೇ ತಾವಕಾ ಯೋಧಾ ಧೃಷ್ಟದ್ಯುಮ್ನಮುಪಾದ್ರವನ್।
08038042c ಸಿಂಹನಾದರವಂ ಕೃತ್ವಾ ತತೋ ಯುದ್ಧಮವರ್ತತ।।
ಆಗ ನಿನ್ನ ಕಡೆಯ ಯೋಧರು ಸಿಂಹನಾದಗೈಯುತ್ತಾ ಧೃಷ್ಟದ್ಯುಮ್ನನನ್ನು ಆಕ್ರಮಿಸಿದರು. ಯುದ್ಧವು ಮುಂದುವರೆಯಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಅಷ್ಠತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಮೂವತ್ತೆಂಟನೇ ಅಧ್ಯಾಯವು.