ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 37
ಸಾರ
ಅರ್ಜುನ-ಸಂಶಪ್ತಕರ ಯುದ್ಧ (1-38).
08037001 ಸಂಜಯ ಉವಾಚ।
08037001a ವರ್ತಮಾನೇ ತದಾ ಯುದ್ಧೇ ಕ್ಷತ್ರಿಯಾಣಾಂ ನಿಮಜ್ಜನೇ।
08037001c ಗಾಂಡೀವಸ್ಯ ಮಹಾನ್ಘೋಷಃ ಶುಶ್ರುವೇ ಯುಧಿ ಮಾರಿಷ।।
ಸಂಜಯನು ಹೇಳಿದನು: “ಮಾರಿಷ! ಕ್ಷತ್ರಿಯರು ಮುಳುಗಿಹೋಗಿದ್ದ ಆ ಯುದ್ಧವು ನಡೆಯುತ್ತಿರಲು ಯುದ್ಧದಲ್ಲಿ ಗಾಂಡೀವದ ಮಹಾಘೋಷವನ್ನು ನಾವು ಕೇಳಿದೆವು.
08037002a ಸಂಶಪ್ತಕಾನಾಂ ಕದನಮಕರೋದ್ಯತ್ರ ಪಾಂಡವಃ।
08037002c ಕೋಸಲಾನಾಂ ತಥಾ ರಾಜನ್ನಾರಾಯಣಬಲಸ್ಯ ಚ।।
ರಾಜನ್! ಆಗ ಪಾಂಡವ ಅರ್ಜುನನು ಸಂಶಪ್ತಕರು, ಕೋಸಲರು ಮತ್ತು ನಾರಾಯಣ ಸೇನೆಗಳೊಂದಿಗೆ ಕದನವಾಡುತ್ತಿದ್ದನು.
08037003a ಸಂಶಪ್ತಕಾಸ್ತು ಸಮರೇ ಶರವೃಷ್ಟಿಂ ಸಮಂತತಃ।
08037003c ಅಪಾತಯನ್ಪಾರ್ಥಮೂರ್ಧ್ನಿ ಜಯಗೃದ್ಧಾಃ ಪ್ರಮನ್ಯವಃ।।
ಜಯವನ್ನು ಬಯಸುತ್ತಿದ್ದ ಸಂಶಪ್ತಕರಾದರೋ ಕ್ರುದ್ಧರಾಗಿ ಸಮರದಲ್ಲಿ ಪಾರ್ಥನ ಮೇಲೆ ಎಲ್ಲಕಡೆಗಳಿಂದ ಶರವೃಷ್ಟಿಯನ್ನು ಸುರಿಸುತ್ತಿದ್ದರು.
08037004a ತಾಂ ವೃಷ್ಟಿಂ ಸಹಸಾ ರಾಜಂಸ್ತರಸಾ ಧಾರಯನ್ಪ್ರಭುಃ।
08037004c ವ್ಯಗಾಹತ ರಣೇ ಪಾರ್ಥೋ ವಿನಿಘ್ನನ್ರಥಿನಾಂ ವರಃ।।
ರಾಜನ್! ಆ ಶರವೃಷ್ಟಿಯನ್ನು ಸಹಿಸಿಕೊಂಡು ರಥಿಗಳಲ್ಲಿ ಶ್ರೇಷ್ಠ ಪ್ರಭು ಪಾರ್ಥನು ಸಂಹರಿಸುತ್ತಾ ಸೇನೆಗಳ ಒಳಹೊಕ್ಕನು.
08037005a ನಿಗೃಹ್ಯ ತು ರಥಾನೀಕಂ ಕಂಕಪತ್ರೈಃ ಶಿಲಾಶಿತೈಃ।
08037005c ಆಸಸಾದ ರಣೇ ಪಾರ್ಥಃ ಸುಶರ್ಮಾಣಂ ಮಹಾರಥಂ।।
ಶಿಲಾಶಿತ ಕಂಕಪತ್ರಗಳಿಂದ ರಥಸೇನೆಯನ್ನು ನಿಗ್ರಹಿಸಿ ಪಾರ್ಥನು ರಣದಲ್ಲಿ ಮಹಾರಥ ಸುಶರ್ಮನ ಬಳಿಸಾರಿದನು.
08037006a ಸ ತಸ್ಯ ಶರವರ್ಷಾಣಿ ವವರ್ಷ ರಥಿನಾಂ ವರಃ।
08037006c ತಥಾ ಸಂಶಪ್ತಕಾಶ್ಚೈವ ಪಾರ್ಥಸ್ಯ ಸಮರೇ ಸ್ಥಿತಾಃ।।
ರಥಿಗಳಲ್ಲಿ ಶ್ರೇಷ್ಠ ಸುಶರ್ಮನು ಅರ್ಜುನನ ಮೇಲೆ ಶರವರ್ಷಗಳನ್ನು ಸುರಿಸಿದನು. ಹಾಗೆಯೇ ಸಂಶಪ್ತಕರೂ ಕೂಡ ಪಾರ್ಥನನ್ನು ಸಮರದಲ್ಲಿ ಎದುರಿಸಿದರು.
08037007a ಸುಶರ್ಮಾ ತು ತತಃ ಪಾರ್ಥಂ ವಿದ್ಧ್ವಾ ನವಭಿರಾಶುಗೈಃ।
08037007c ಜನಾರ್ದನಂ ತ್ರಿಭಿರ್ಬಾಣೈರಭ್ಯಹನ್ದಕ್ಷಿಣೇ ಭುಜೇ।
08037007e ತತೋಽಪರೇಣ ಭಲ್ಲೇನ ಕೇತುಂ ವಿವ್ಯಾಧ ಮಾರಿಷ।।
ಸುಶರ್ಮನಾದರೋ ಪಾರ್ಥನನ್ನು ಒಂಭತ್ತು ಆಶುಗಗಳಿಂದ ಹೊಡೆದು ಮೂರು ಬಾಣಗಳಿಂದ ಜನಾರ್ದನನ ಬಲಭುಜವನ್ನು ಪ್ರಹರಿಸಿದನು. ಮಾರಿಷ! ಅನಂತರ ಇನ್ನೊಂದು ಭಲ್ಲದಿಂದ ಪಾರ್ಥನ ಧ್ವಜಕ್ಕೆ ಹೊಡೆದನು.
08037008a ಸ ವಾನರವರೋ ರಾಜನ್ವಿಶ್ವಕರ್ಮಕೃತೋ ಮಹಾನ್।
08037008c ನನಾದ ಸುಮಹನ್ನಾದಂ ಭೀಷಯನ್ವೈ ನನರ್ದ ಚ।।
ರಾಜನ್! ವಿಶ್ವಕರ್ಮನಿಂದಲೇ ಧ್ವಜದಲ್ಲಿ ನಿರ್ಮಿತನಾಗಿದ್ದ ವಾನರವರ ಹನುಮಂತನು ಎಲ್ಲರನ್ನೂ ಭಯಗೊಳಿಸುತ್ತಾ ಜೋರಾಗಿ ಗರ್ಜಿಸಿದನು.
08037009a ಕಪೇಸ್ತು ನಿನದಂ ಶ್ರುತ್ವಾ ಸಂತ್ರಸ್ತಾ ತವ ವಾಹಿನೀ।
08037009c ಭಯಂ ವಿಪುಲಮಾದಾಯ ನಿಶ್ಚೇಷ್ಟಾ ಸಮಪದ್ಯತ।।
ಕಪಿಯ ಆ ಗರ್ಜನೆಯನ್ನು ಕೇಳಿ ನಿನ್ನ ಸೇನೆಯು ತುಂಬಾ ಭಯಗೊಂದು ತತ್ತರಿಸಿ ಮೂರ್ಛೆಗೊಂಡಿತು.
08037010a ತತಃ ಸಾ ಶುಶುಭೇ ಸೇನಾ ನಿಶ್ಚೇಷ್ಟಾವಸ್ಥಿತಾ ನೃಪ।
08037010c ನಾನಾಪುಷ್ಪಸಮಾಕೀರ್ಣಂ ಯಥಾ ಚೈತ್ರರಥಂ ವನಂ।।
ನೃಪ! ನಿಶ್ಚೇಷ್ಟವಾಗಿ ನಿಂತಿದ್ದ ನಮ್ಮ ಸೇನೆಯು ನಾನಾಪುಷ್ಪಗಳಿಂದ ಸಮೃದ್ಧವಾಗಿದ್ದ ಚೈತ್ರರಥ ವನದಂತೆಯೇ ಶೋಭಿಸಿತು.
08037011a ಪ್ರತಿಲಭ್ಯ ತತಃ ಸಂಜ್ಞಾಂ ಯೋಧಾಸ್ತೇ ಕುರುಸತ್ತಮ।
08037011c ಅರ್ಜುನಂ ಸಿಷಿಚುರ್ಬಾಣೈಃ ಪರ್ವತಂ ಜಲದಾ ಇವ।
08037011e ಪರಿವವ್ರುಸ್ತದಾ ಸರ್ವೇ ಪಾಂಡವಸ್ಯ ಮಹಾರಥಂ।।
ಕುರುಸತ್ತಮ! ಪುನಃ ಎಚ್ಚೆತ್ತ ನಿನ್ನ ಯೋಧರು ಮೋಡಗಳು ಪರ್ವತವನ್ನು ಹೇಗೋ ಹಾಗೆ ಅರ್ಜುನನನ್ನು ಬಾಣಗಳಿಂದ ಅಭಿಷೇಚಿಸಿದರು. ಎಲ್ಲರೂ ಮಹಾರಥ ಪಾಂಡವನನ್ನು ಸುತ್ತುವರೆದರು.
08037012a ತೇ ಹಯಾನ್ರಥಚಕ್ರೇ ಚ ರಥೇಷಾಶ್ಚಾಪಿ ಭಾರತ।
08037012c ನಿಗೃಹ್ಯ ಬಲವತ್ತೂರ್ಣಂ ಸಿಂಹನಾದಮಥಾನದನ್।।
ಭಾರತ! ಅವರು ಅರ್ಜುನನ ಕುದುರೆಗಳನ್ನೂ, ರಥಚಕ್ರಗಳನ್ನೂ, ರಥದ ಈಷಾದಂಡವನ್ನೂ ಹಿಡಿದು ಬಲವನ್ನುಪಯೋಗಿಸಿ ತಡೆದು ಸಿಂಹನಾದಗೈದರು.
08037013a ಅಪರೇ ಜಗೃಹುಶ್ಚೈವ ಕೇಶವಸ್ಯ ಮಹಾಭುಜೌ।
08037013c ಪಾರ್ಥಮನ್ಯೇ ಮಹಾರಾಜ ರಥಸ್ಥಂ ಜಗೃಹುರ್ಮುದಾ।।
ಮಹಾರಾಜ! ಕೆಲವರು ಕೇಶವನ ಮಹಾಭುಜಗಳೆರಡನ್ನೂ ಹಿಡಿದು ಎಳೆದಾಡುತ್ತಿದ್ದರು. ಅನ್ಯರು ರಥದಲ್ಲಿದ್ದ ಪಾರ್ಥನನ್ನು ಸಂತೋಷದಿಂದ ಹಿಡಿದುಕೊಂಡರು.
08037014a ಕೇಶವಸ್ತು ತದಾ ಬಾಹೂ ವಿಧುನ್ವನ್ರಣಮೂರ್ಧನಿ।
08037014c ಪಾತಯಾಮಾಸ ತಾನ್ಸರ್ವಾನ್ದುಷ್ಟಹಸ್ತೀವ ಹಸ್ತಿನಃ।।
ಆಗ ಕೇಶವನಾದರೋ ದುಷ್ಟ ಆನೆಯು ಮಾವಟಿಗನನ್ನು ಕೆಳಕ್ಕೆ ಹಾಕಿಬಿಡುವಂತೆ ತನ್ನೆರಡು ತೋಳುಗಳನ್ನೂ ಬಲವಾಗಿ ಒದರುತ್ತಾ ಅವರೆಲ್ಲರನ್ನೂ ಕೆಳಕ್ಕೆ ಬೀಳಿಸಿದನು.
08037015a ತತಃ ಕ್ರುದ್ಧೋ ರಣೇ ಪಾರ್ಥಃ ಸಂವೃತಸ್ತೈರ್ಮಹಾರಥೈಃ।
08037015c ನಿಗೃಹೀತಂ ರಥಂ ದೃಷ್ಟ್ವಾ ಕೇಶವಂ ಚಾಪ್ಯಭಿದ್ರುತಂ।
08037015e ರಥಾರೂಢಾಂಶ್ಚ ಸುಬಹೂನ್ಪದಾತೀಂಶ್ಚಾಪ್ಯಪಾತಯತ್।।
ಆಗ ರಣದಲ್ಲಿ ಆ ಮಹಾರಥರು ಸುತ್ತುವರೆದು ರಥವನ್ನು ಹಿಡಿದುಕೊಂಡಿದುದನ್ನೂ ಕೇಶವನನ್ನು ಆಕ್ರಮಣಿಸಿದುದನ್ನೂ ನೋಡಿ ಕ್ರುದ್ಧನಾದ ಪಾರ್ಥನು ಅನೇಕ ರಥಾರೂಢರನ್ನೂ ಪದಾತಿಗಳನ್ನೂ ಸಂಹರಿಸಿ ಕೆಳಗುರುಳಿಸಿದನು.
08037016a ಆಸನ್ನಾಂಶ್ಚ ತತೋ ಯೋಧಾಂ ಶರೈರಾಸನ್ನಯೋಧಿಭಿಃ।
08037016c ಚ್ಯಾವಯಾಮಾಸ ಸಮರೇ ಕೇಶವಂ ಚೇದಮಬ್ರವೀತ್।।
ಅನತಿದೂರದಲ್ಲಿಯೇ ಇದ್ದ ಯೋಧರನ್ನು ಹತ್ತಿರದಿಂದಲೇ ಪ್ರಹರಿಸಬಹುದಾದ ಬಾಣಗಳಿಂದ ಅಚ್ಛಾದಿಸುತ್ತಾ ಸಮರದಲ್ಲಿ ಅರ್ಜುನನು ಕೇಶವನಿಗೆ ಇಂತೆಂದನು:
08037017a ಪಶ್ಯ ಕೃಷ್ಣ ಮಹಾಬಾಹೋ ಸಂಶಪ್ತಕಗಣಾನ್ಮಯಾ।
08037017c ಕುರ್ವಾಣಾನ್ದಾರುಣಂ ಕರ್ಮ ವಧ್ಯಮಾನಾನ್ಸಹಸ್ರಶಃ।
“ಮಹಾಬಾಹೋ! ಕೃಷ್ಣ! ಈ ಸಂಶಪ್ತಕಗಣಗಳನ್ನು ನೋಡು! ನನ್ನಿಂದ ಸಹಸ್ರಾರು ಸಂಖ್ಯೆಗಳಲ್ಲಿ ವಧಿಸಲ್ಪಡುತ್ತಿದ್ದರೂ ಇಂತಹ ದಾರುಣ ಕರ್ಮವನ್ನೆಸಗುತ್ತಿದ್ದಾರೆ!
08037018a ರಥಬಂಧಮಿಮಂ ಘೋರಂ ಪೃಥಿವ್ಯಾಂ ನಾಸ್ತಿ ಕಶ್ಚನ।
08037018c ಯಃ ಸಹೇತ ಪುಮಾಽಲ್ಲೋಕೇ ಮದನ್ಯೋ ಯದುಪುಂಗವ।।
ಯದುಪುಂಗವ! ಈ ಘೋರ ರಥಬಂಧವನ್ನು ನಾನಲ್ಲದೇ ಪೃಥ್ವಿಯ ಬೇರಾವ ಪುರುಷನಿಗೂ ಸಹಿಸಿಕೊಳ್ಳಲಾಗುತ್ತಿರಲಿಲ್ಲ.”
08037019a ಇತ್ಯೇವಮುಕ್ತ್ವಾ ಬೀಭತ್ಸುರ್ದೇವದತ್ತಮಥಾಧಮತ್।
08037019c ಪಾಂಚಜನ್ಯಂ ಚ ಕೃಷ್ಣೋಽಪಿ ಪೂರಯನ್ನಿವ ರೋದಸೀ।।
ಹೀಗೆ ಹೇಳಿ ಬೀಭತ್ಸುವು ದೇವದತ್ತಶಂಖವನ್ನೂದಿದನು. ಅದಕ್ಕೆ ಪೂರಕವಾಗಿ ಕೃಷ್ಣನೂ ಕೂಡ ಪಾಂಚಜನ್ಯವನ್ನು ಮೊಳಗಿಸಿದನು.
08037020a ತಂ ತು ಶಂಖಸ್ವನಂ ಶ್ರುತ್ವಾ ಸಂಶಪ್ತಕವರೂಥಿನೀ।
08037020c ಸಂಚಚಾಲ ಮಹಾರಾಜ ವಿತ್ರಸ್ತಾ ಚಾಭವದ್ಭೃಶಂ।।
ಮಹಾರಾಜ! ಆ ಶಂಖಸ್ವನವನ್ನು ಕೇಳಿ ಸಂಶಪ್ತಕ ವರೂಥಿನಿಯು ಅತ್ಯಂತ ಭಯಗೊಂಡು ಓಡತೊಡಗಿತು.
08037021a ಪದಬಂಧಂ ತತಶ್ಚಕ್ರೇ ಪಾಂಡವಃ ಪರವೀರಹಾ।
08037021c ನಾಗಮಸ್ತ್ರಂ ಮಹಾರಾಜ ಸಂಪ್ರೋದೀರ್ಯ ಮುಹುರ್ಮುಹುಃ।।
ಮಹಾರಾಜ! ಆಗ ಪರವೀರಹ ಪಾಂಡವನು ಪುನಃ ಪುನಃ ನಾಗಾಸ್ತ್ರವನ್ನು ಪ್ರಯೋಗಿಸುತ್ತಾ ಅವರ ಪಾದಗಳನ್ನು ಬಂಧಿಸಿಬಿಟ್ಟನು.
08037022a ಯಾನುದ್ದಿಶ್ಯ ರಣೇ ಪಾರ್ಥಃ ಪದಬಂದಂ ಚಕಾರ ಹ।
08037022c ತೇ ಬದ್ಧಾಃ ಪದಬಂದೇನ ಪಾಂಡವೇನ ಮಹಾತ್ಮನಾ।
08037022e ನಿಶ್ಚೇಷ್ಟಾ ಅಭವನ್ರಾಜನ್ನಶ್ಮಸಾರಮಯಾ ಇವ।।
ರಾಜನ್! ರಣದಲ್ಲಿ ಪಾರ್ಥನು ಶತ್ರುಗಳ ಪದಬಂಧಗೈದನು. ಮಹಾತ್ಮ ಪಾಂಡವನಿಂದ ಪದಬಂಧದಿಂದ ಕಟ್ಟಲ್ಪಟ್ಟ ಅವರು ಲೋಹದ ಮೂರ್ತಿಗಳೋಪಾದಿಯಲ್ಲಿ ನಿಶ್ಚೇಷ್ಟರಾಗಿ ನಿಂತುಬಿಟ್ಟರು.
08037023a ನಿಶ್ಚೇಷ್ಟಾಂಸ್ತು ತತೋ ಯೋಧಾನವಧೀತ್ಪಾಂಡುನಂದನಃ।
08037023c ಯಥೇಂದ್ರಃ ಸಮರೇ ದೈತ್ಯಾಂಸ್ತಾರಕಸ್ಯ ವಧೇ ಪುರಾ।।
ನಿಶ್ಚೇಷ್ಟರಾಗಿರುವ ಯೋಧರನ್ನು ಪಾಂಡುನಂದನನು ಹಿಂದೆ ಇಂದ್ರನು ದೈತ್ಯ ತಾರಕನ ವಧೆಯ ಸಮರದಲ್ಲಿ ಹೇಗೋ ಹಾಗೆ ವಧಿಸಿದನು.
08037024a ತೇ ವಧ್ಯಮಾನಾಃ ಸಮರೇ ಮುಮುಚುಸ್ತಂ ರಥೋತ್ತಮಂ।
08037024c ಆಯುಧಾನಿ ಚ ಸರ್ವಾಣಿ ವಿಸ್ರಷ್ಟುಮುಪಚಕ್ರಮುಃ।।
ಸಮರದಲ್ಲಿ ವಧಿಸಲ್ಪಡುತ್ತಿರುವ ಅವರು ಆ ಉತ್ತಮ ರಥವನ್ನು ಬಿಟ್ಟು ತಮ್ಮಲ್ಲಿದ್ದ ಸರ್ವ ಆಯುಧಗಳನ್ನು ಅರ್ಜುನನ ಮೇಲೆ ಪ್ರಯೋಗಿಸಲು ತೊಡಗಿದರು.
08037025a ತತಃ ಸುಶರ್ಮಾ ರಾಜೇಂದ್ರ ಗೃಹೀತಾಂ ವೀಕ್ಷ್ಯ ವಾಹಿನೀಂ।
08037025c ಸೌಪರ್ಣಮಸ್ತ್ರಂ ತ್ವರಿತಃ ಪ್ರಾದುಶ್ಚಕ್ರೇ ಮಹಾರಥಃ।।
ರಾಜೇಂದ್ರ! ಆಗ ಸೇನೆಯು ಬಂಧಿಸಲ್ಪಟ್ಟಿರುವುದನ್ನು ನೋಡಿದ ಮಹಾರಥ ಸುಶರ್ಮನು ತ್ವರೆಮಾಡಿ ಸೌಪರ್ಣಾಸ್ತ್ರವನ್ನು ಪ್ರಯೋಗಿಸಿದನು.
08037026a ತತಃ ಸುಪರ್ಣಾಃ ಸಂಪೇತುರ್ಭಕ್ಷಯಂತೋ ಭುಜಂಗಮಾನ್।
08037026c ತೇ ವೈ ವಿದುದ್ರುವುರ್ನಾಗಾ ದೃಷ್ಟ್ವಾ ತಾನ್ಖಚರಾನ್ನೃಪ।।
ನೃಪ! ಆಗ ಗರುಡಗಳು ಮೇಲೆರಗಿ ಭುಜಂಗಗಳನ್ನು ಭಕ್ಷಿಸತೊಡಗಿದವು. ಆ ಗರುಡರನ್ನು ಕಂಡ ನಾಗಗಳು ಪಲಾಯನಗೈದವು.
08037027a ಬಭೌ ಬಲಂ ತದ್ವಿಮುಕ್ತಂ ಪದಬಂಧಾದ್ವಿಶಾಂ ಪತೇ।
08037027c ಮೇಘವೃಂದಾದ್ಯಥಾ ಮುಕ್ತೋ ಭಾಸ್ಕರಸ್ತಾಪಯನ್ಪ್ರಜಾಃ।।
ವಿಶಾಂಪತೇ! ಮೋಡಗಳಿಂದ ವಿಮುಕ್ತನಾಗಿ ಭಾಸ್ಕರನು ಪ್ರಜೆಗಳನ್ನು ತಾಪಗೊಳಿಸುವಂತೆ ಅವನ ಸೇನೆಯು ಪದಬಂಧದಿಂದ ವಿಮುಕ್ತವಾಯಿತು.
08037028a ವಿಪ್ರಮುಕ್ತಾಸ್ತು ತೇ ಯೋಧಾಃ ಫಲ್ಗುನಸ್ಯ ರಥಂ ಪ್ರತಿ।
08037028c ಸಸೃಜುರ್ಬಾಣಸಂಘಾಂಶ್ಚ ಶಸ್ತ್ರಸಂಘಾಂಶ್ಚ ಮಾರಿಷ।।
ಮಾರಿಷ! ವಿಮುಕ್ತರಾದ ಆ ಯೋಧರು ಫಲ್ಗುನನ ರಥದ ಮೇಲೆ ಬಾಣಸಂಘಗಳನ್ನೂ ಶಸ್ತ್ರಸಂಘಗಳನ್ನೂ ಪ್ರಯೋಗಿಸಿದರು.
08037029a ತಾಂ ಮಹಾಸ್ತ್ರಮಯೀಂ ವೃಷ್ಟಿಂ ಸಂಚಿದ್ಯ ಶರವೃಷ್ಟಿಭಿಃ।
08037029c ವ್ಯವಾತಿಷ್ಠತ್ತತೋ ಯೋಧಾನ್ವಾಸವಿಃ ಪರವೀರಹಾ।।
ಆ ಮಹಾಸ್ತ್ರಮಯೀ ವೃಷ್ಟಿಯನ್ನು ಶರವೃಷ್ಟಿಗಳಿಂದ ನಿರಸನಗೊಳಿಸಿ ಪರವೀರಹ ವಾಸವೀ ಅರ್ಜುನನು ಯೋಧರನ್ನು ಸಂಹರಿಸತೊಡಗಿದನು.
08037030a ಸುಶರ್ಮಾ ತು ತತೋ ರಾಜನ್ಬಾಣೇನಾನತಪರ್ವಣಾ।
08037030c ಅರ್ಜುನಂ ಹೃದಯೇ ವಿದ್ಧ್ವಾ ವಿವ್ಯಾಧಾನ್ಯೈಸ್ತ್ರಿಭಿಃ ಶರೈಃ।
08037030e ಸ ಗಾಢವಿದ್ಧೋ ವ್ಯಥಿತೋ ರಥೋಪಸ್ಥ ಉಪಾವಿಶತ್।।
ರಾಜನ್! ಆಗ ಸುಶರ್ಮನು ಆನತಪರ್ವ ಬಾಣದಿಂದ ಅರ್ಜುನನ ಹೃದಯವನ್ನು ಪ್ರಹರಿಸಿ ಅನ್ಯ ಮೂರು ಶರಗಳಿಂದ ಅವನನ್ನು ಹೊಡೆದನು. ಗಾಢವಾಗಿ ಪ್ರಹರಿಸಲ್ಪಟ್ಟ ಅರ್ಜುನನು ವ್ಯಥಿತನಾಗಿ ರಥದಲ್ಲಿಯೇ ಕುಸಿದು ಕುಳಿತುಕೊಂಡನು.
08037031a ಪ್ರತಿಲಭ್ಯ ತತಃ ಸಂಜ್ಞಾಂ ಶ್ವೇತಾಶ್ವಃ ಕೃಷ್ಣಸಾರಥಿಃ।
08037031c ಐಂದ್ರಮಸ್ತ್ರಮಮೇಯಾತ್ಮಾ ಪ್ರಾದುಶ್ಚಕ್ರೇ ತ್ವರಾನ್ವಿತಃ।
08037031e ತತೋ ಬಾಣಸಹಸ್ರಾಣಿ ಸಮುತ್ಪನ್ನಾನಿ ಮಾರಿಷ।।
ಅನಂತರ ಪುನಃ ಎಚ್ಚೆತ್ತ ಕೃಷ್ಣಸಾರಥಿ ಅಮೇಯಾತ್ಮ ಶ್ವೇತಾಶ್ವನು ತ್ವರೆಮಾಡಿ ಐಂದ್ರಾಸ್ತ್ರವನ್ನು ಪ್ರಕಟಿಸಿದನು. ಮಾರಿಷ! ಆಗ ಸಹಸ್ರಾರು ಬಾಣಗಳು ಪ್ರಾದುರ್ಭವಿಸಿದವು.
08037032a ಸರ್ವದಿಕ್ಷು ವ್ಯದೃಶ್ಯಂತ ಸೂದಯಂತೋ ನೃಪ ದ್ವಿಪಾನ್।
08037032c ಹಯಾನ್ರಥಾಂಶ್ಚ ಸಮರೇ ಶಸ್ತ್ರೈಃ ಶತಸಹಸ್ರಶಃ।।
ನೃಪ! ಸರ್ವದಿಕ್ಕುಗಳಲ್ಲಿಯೂ ಪ್ರಕಟವಾದ ಶಸ್ತ್ರಗಳು ಸಮರದಲ್ಲಿ ನೂರಾರು ಸಹಸ್ರಾರು ಆನೆಗಳನ್ನೂ, ಕುದುರೆಗಳನ್ನೂ ರಥಗಳನ್ನೂ ನಾಶಗೊಳಿಸಿದವು.
08037033a ವಧ್ಯಮಾನೇ ತತಃ ಸೈನ್ಯೇ ವಿಪುಲಾ ಭೀಃ ಸಮಾವಿಶತ್।
08037033c ಸಂಶಪ್ತಕಗಣಾನಾಂ ಚ ಗೋಪಾಲಾನಾಂ ಚ ಭಾರತ।
08037033e ನ ಹಿ ಕಶ್ಚಿತ್ಪುಮಾಂಸ್ತತ್ರ ಯೋಽರ್ಜುನಂ ಪ್ರತ್ಯಯುಧ್ಯತ।।
ಭಾರತ! ಸೈನ್ಯದಲ್ಲಿ ವಿಪುಲ ವಧೆಯು ನಡೆಯುತ್ತಿರಲು ಸಂಶಪ್ತಕಗಣ ಮತ್ತು ಗೋಪಾಲರನ್ನು ಅತ್ಯಂತ ಭಯವು ಸಮಾವೇಶಗೊಂಡಿತು. ಅಲ್ಲಿ ಅರ್ಜುನನೊಡನೆ ಪ್ರತಿಯಾಗಿ ಯುದ್ಧಮಾಡುವ ಯಾವ ಪುರುಷನೂ ಇರಲಿಲ್ಲ.
08037034a ಪಶ್ಯತಾಂ ತತ್ರ ವೀರಾಣಾಮಹನ್ಯತ ಮಹದ್ಬಲಂ।
08037034c ಹನ್ಯಮಾನಮಪಶ್ಯಂಶ್ಚ ನಿಶ್ಚೇಷ್ಟಾಃ ಸ್ಮ ಪರಾಕ್ರಮೇ।।
ಅಲ್ಲಿ ವೀರರು ನೋಡುತ್ತಿದ್ದಂತೆಯೇ ಅವನು ಮಹಾಸೇನೆಯನ್ನು ಸಂಹರಿಸಿದನು. ನಿಶ್ಚೇಷ್ಟವಾಗಿರುವ ಮತ್ತು ಪರಾಕ್ರಮವು ಕುಂದಿಹೋಗಿರುವ ಸೇನೆಗಳನ್ನು ವಧಿಸುತ್ತಿರುವುದನ್ನು ನಾವು ನೋಡಿದೆವು.
08037035a ಅಯುತಂ ತತ್ರ ಯೋಧಾನಾಂ ಹತ್ವಾ ಪಾಂಡುಸುತೋ ರಣೇ।
08037035c ವ್ಯಭ್ರಾಜತ ರಣೇ ರಾಜನ್ವಿಧೂಮೋಽಗ್ನಿರಿವ ಜ್ವಲನ್।।
ರಾಜನ್! ರಣದಲ್ಲಿ ಹತ್ತುಸಾವಿರ ಯೋಧರನ್ನು ಸಂಹರಿಸಿ ಪಾಂಡುಸುತನು ಧೂಮವಿಲ್ಲದ ಅಗ್ನಿಯಂತೆ ಪ್ರಜ್ವಲಿಸುತ್ತ ಪ್ರಕಾಶಿಸಿದನು.
08037036a ಚತುರ್ದಶ ಸಹಸ್ರಾಣಿ ಯಾನಿ ಶಿಷ್ಟಾನಿ ಭಾರತ।
08037036c ರಥಾನಾಮಾಯುತಂ ಚೈವ ತ್ರಿಸಾಹಸ್ರಾಶ್ಚ ದಂತಿನಃ।।
ಆಗ ಅಲ್ಲಿ ಹದಿನಾಲ್ಕು ಸಾವಿರ ಪದಾತಿಗಳು, ಹತ್ತುಸಾವಿರ ರಥಿಗಳು ಮತ್ತು ಮೂರುಸಾವಿರ ಆನೆಗಳು ಮಾತ್ರ ಅಳಿದುಳಿದಿದ್ದವು.
08037037a ತತಃ ಸಂಶಪ್ತಕಾ ಭೂಯಃ ಪರಿವವ್ರುರ್ಧನಂಜಯಂ।
08037037c ಮರ್ತವ್ಯಮಿತಿ ನಿಶ್ಚಿತ್ಯ ಜಯಂ ವಾಪಿ ನಿವರ್ತನಂ।।
ಅನಂತರ ಸಾಯಬೇಕು ಅಥವಾ ಜಯಗಳಿಸಿ ಹಿಂದಿರುಗಬೇಕೆಂದು ನಿಶ್ಚಯಿಸಿ ಸಂಶಪ್ತಕರು ಪುನಃ ಧನಂಜಯನ್ನು ಸುತ್ತುವರೆದರು.
08037038a ತತ್ರ ಯುದ್ಧಂ ಮಹದ್ಧ್ಯಾಸೀತ್ತಾವಕಾನಾಂ ವಿಶಾಂ ಪತೇ।
08037038c ಶೂರೇಣ ಬಲಿನಾ ಸಾರ್ಧಂ ಪಾಂಡವೇನ ಕಿರೀಟಿನಾ।।
ವಿಶಾಂಪತೇ! ಅಲ್ಲಿ ನಿನ್ನವರ ಮತ್ತು ಶೂರ ಬಲಶಾಲಿ ಪಾಂಡವ ಕಿರೀಟಿಯ ನಡುವೆ ಮಹಾ ಯುದ್ಧವು ನಡೆಯಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಸಪ್ತತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಮೂವತ್ತೇಳನೇ ಅಧ್ಯಾಯವು.