036 ಸಂಕುಲಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ಕರ್ಣವಧ ಪರ್ವ

ಅಧ್ಯಾಯ 36

ಸಾರ

ಯುದ್ಧವರ್ಣನೆ (1-40).

08036001 ಸಂಜಯ ಉವಾಚ।
08036001a ಕ್ಷತ್ರಿಯಾಸ್ತೇ ಮಹಾರಾಜ ಪರಸ್ಪರವಧೈಷಿಣಃ।
08036001c ಅನ್ಯೋನ್ಯಂ ಸಮರೇ ಜಘ್ನುಃ ಕೃತವೈರಾಃ ಪರಸ್ಪರಂ।।

ಸಂಜಯನು ಹೇಳಿದನು: “ಮಹಾರಾಜ! ಪರಸ್ಪರರನ್ನು ವಧಿಸಲು ಬಯಸಿದ ಆ ಕ್ಷತ್ರಿಯರು ಸಮರದಲ್ಲಿ ಪರಸ್ಪರರನ್ನು ದ್ವೇಷಿಸುತ್ತಾ ಅನ್ಯೋನ್ಯರನ್ನು ಸಂಹರಿಸತೊಡಗಿದರು.

08036002a ರಥೌಘಾಶ್ಚ ಹಯೌಘಾಶ್ಚ ನರೌಘಾಶ್ಚ ಸಮಂತತಃ।
08036002c ಗಜೌಘಾಶ್ಚ ಮಹಾರಾಜ ಸಂಸಕ್ತಾಃ ಸ್ಮ ಪರಸ್ಪರಂ।।

ಮಹಾರಾಜ! ಎಲ್ಲೆಡೆಯಲ್ಲಿಯೂ ರಥಸಮೂಹಗಳು, ಅಶ್ವಸಮೂಹಗಳು, ಪದಾತಿಸಮೂಹಗಳು ಮತ್ತು ಗಜಸಮೂಹಗಳು ಪರಸ್ಪರರೊಂದಿಗೆ ಕಾದಾಡುತ್ತಿದ್ದವು.

08036003a ಗದಾನಾಂ ಪರಿಘಾಣಾಂ ಚ ಕಣಪಾನಾಂ ಚ ಸರ್ಪತಾಂ।
08036003c ಪ್ರಾಸಾನಾಂ ಭಿಂಡಿಪಾಲಾನಾಂ ಭುಶುಂಡೀನಾಂ ಚ ಸರ್ವಶಃ।।
08036004a ಸಂಪಾತಂ ಚಾನ್ವಪಶ್ಯಾಮ ಸಂಗ್ರಾಮೇ ಭೃಶದಾರುಣೇ।
08036004c ಶಲಭಾ ಇವ ಸಂಪೇತುಃ ಸಮಂತಾಚ್ಚರವೃಷ್ಟಯಃ।।

ಅತ್ಯಂತ ದಾರುಣವಾಗಿದ್ದ ಆ ಸಂಗ್ರಾಮದಲ್ಲಿ ನಾವು ಗದೆಗಳು, ಪರಿಘಗಳು, ಕಣಪಗಳು, ಪ್ರಾಸ, ಭಿಂಡಿಪಾಲ, ಭುಶುಂಡಿಗಳು ಎಲ್ಲಕಡೆ ಬೀಳುತ್ತಿರುವುದನ್ನು ಕಂಡೆವು. ಮಿಡತೆಗಳೋಪಾದಿಯಲ್ಲಿ ಎಲ್ಲಕಡೆ ಶರವೃಷ್ಟಿಗಳಾಗುತ್ತಿದ್ದವು.

08036005a ನಾಗಾ ನಾಗಾನ್ಸಮಾಸಾದ್ಯ ವ್ಯಧಮಂತ ಪರಸ್ಪರಂ।
08036005c ಹಯಾ ಹಯಾಂಶ್ಚ ಸಮರೇ ರಥಿನೋ ರಥಿನಸ್ತಥಾ।
08036005e ಪತ್ತಯಃ ಪತ್ತಿಸಂಘೈಶ್ಚ ಹಯಸಂಘೈರ್ಹಯಾಸ್ತಥಾ।।

ಸಮರದಲ್ಲಿ ಆನೆಗಳು ಆನೆಗಳನ್ನು, ಕುದುರೆಗಳು ಕುದುರೆಗಳನ್ನು, ರಥಿಗಳು ರಥಿಗಳನ್ನು, ಪದಾತಿಗಳು ಪದಾತಿಸಂಘಗಳನ್ನು, ಕುದುರೆಗಳು ಅಶ್ವಸಂಘಗಳನ್ನು ಎದುರಿಸಿ ಪರಸ್ಪರರನ್ನು ವಧಿಸುತ್ತಿದ್ದವು.

08036006a ಪತ್ತಯೋ ರಥಮಾತಂಗಾನ್ರಥಾ ಹಸ್ತ್ಯಶ್ವಮೇವ ಚ।
08036006c ನಾಗಾಶ್ಚ ಸಮರೇ ತ್ರ್ಯಂಗಂ ಮಮೃದುಃ ಶೀಘ್ರಗಾ ನೃಪ।।

ನೃಪ! ಸಮರದಲ್ಲಿ ಪದಾತಿಗಳು ಆನೆ-ರಥಗಳನ್ನೂ, ಶೀಘ್ರವಾಗಿ ಚಲಿಸುತ್ತಿದ್ದ ಆನೆಗಳು ಆನೆ-ರಥ-ಕುದುರೆಗಳನ್ನೂ ಮರ್ದನಮಾಡುತ್ತಿದ್ದವು.

08036007a ಪತತಾಂ ತತ್ರ ಶೂರಾಣಾಂ ಕ್ರೋಶತಾಂ ಚ ಪರಸ್ಪರಂ।
08036007c ಘೋರಮಾಯೋಧನಂ ಜಜ್ಞೇ ಪಶೂನಾಂ ವೈಶಸಂ ಯಥಾ।।

ಶೂರರು ಬೀಳುತ್ತಿರುವುದರಿಂದ ಮತ್ತು ಪರಸ್ಪರರನ್ನು ಕೂಗಿ ಕರೆಯುವುದರಿಂದ ಆ ರಣಾಂಗಣವು ಪಶುಗಳ ವಧ್ಯಸ್ಥಾನದಂತೆ ಬಹುಘೋರವಾಗಿ ಕಾಣುತ್ತಿತ್ತು.

08036008a ರುಧಿರೇಣ ಸಮಾಸ್ತೀರ್ಣಾ ಭಾತಿ ಭಾರತ ಮೇದಿನೀ।
08036008c ಶಕ್ರಗೋಪಗಣಾಕೀರ್ಣಾ ಪ್ರಾವೃಷೀವ ಯಥಾ ಧರಾ।।

ಭಾರತ! ರಕ್ತದಿಂದ ವ್ಯಾಪ್ತವಾಗಿದ್ದ ಆ ರಣಭೂಮಿಯು ವರ್ಷಾಕಾಲದ ಕೆಂಪುಬಣ್ಣದ ಶಕ್ರಗೋಪಗಣಗಳಿಂದ ವ್ಯಾಪ್ತ ಭೂಮಿಯಂತೆ ಹೊಳೆಯುತ್ತಿತ್ತು.

08036009a ಯಥಾ ವಾ ವಾಸಸೀ ಶುಕ್ಲೇ ಮಹಾರಜನರಂಜಿತೇ।
08036009c ಬಿಭೃಯಾದ್ಯುವತಿಃ ಶ್ಯಾಮಾ ತದ್ವದಾಸೀದ್ವಸುಂಧರಾ।
08036009e ಮಾಂಸಶೋಣಿತಚಿತ್ರೇವ ಶಾತಕೌಂಭಮಯೀವ ಚ।।

ಶ್ಯಾಮಲವರ್ಣದ ಯುವತಿಯೊಬ್ಬಳು ಕುಂಕುಮದ ಹೂವಿನ ಬಣ್ಣದಿಂದ ರಂಜಿತವಾದ ಬಿಳಿಯ ವಸ್ತ್ರವನ್ನುಟ್ಟಿರುವಂತೆ ರಣರಂಗವು ಪ್ರಕಾಶಿಸುತ್ತಿತ್ತು. ಮಾಂಸ-ರಕ್ತಗಳಿಂದ ಚಿತ್ರಿತವಾದ ಸುವರ್ಣಕುಂಭದಂತೆ ತೋರುತ್ತಿತ್ತು.

08036010a ಛಿನ್ನಾನಾಂ ಚೋತ್ತಮಾಂಗಾನಾಂ ಬಾಹೂನಾಂ ಚೋರುಭಿಃ ಸಹ।
08036010c ಕುಂಡಲಾನಾಂ ಪ್ರವಿದ್ಧಾನಾಂ ಭೂಷಣಾನಾಂ ಚ ಭಾರತ।।
08036011a ನಿಷ್ಕಾಣಾಮಧಿಸೂತ್ರಾಣಾಂ ಶರೀರಾಣಾಂ ಚ ಧನ್ವಿನಾಂ।
08036011c ವರ್ಮಣಾಂ ಸಪತಾಕಾನಾಂ ಸಂಘಾಸ್ತತ್ರಾಪತನ್ಭುವಿ।।

ಭಾರತ! ಆ ರಣಭೂಮಿಯಲ್ಲಿ ಒಡೆದುಹೋಗಿದ್ದ ಶಿರಸ್ಸುಗಳೂ, ತೊಡೆಗಳೂ, ಬಾಹುಗಳೂ, ಕುಂಡಲಗಳೂ, ಅಂಗದ-ಕೇಯೂರಗಳು, ಒಡವೆ-ವಸ್ತ್ರಗಳೂ, ಹಾರಗಳೂ, ಧನ್ವಿಗಳ ಶರೀರಗಳೂ, ಕವಚಗಳೂ, ಪತಾಕೆಗಳೂ ರಾಶಿ ರಾಶಿಯಾಗಿ ಬಿದ್ದಿದ್ದವು.

08036012a ಗಜಾನ್ಗಜಾಃ ಸಮಾಸಾದ್ಯ ವಿಷಾಣಾಗ್ರೈರದಾರಯನ್।
08036012c ವಿಷಾಣಾಭಿಹತಾಸ್ತೇ ಚ ಭ್ರಾಜಂತೇ ದ್ವಿರದಾ ಯಥಾ।।
08036013a ರುಧಿರೇಣಾವಸಿಕ್ತಾಂಗಾ ಗೈರಿಕಪ್ರಸ್ರವಾ ಇವ।
08036013c ಯಥಾ ಭ್ರಾಜಂತಿ ಸ್ಯಂದಂತಃ ಪರ್ವತಾ ಧಾತುಮಂಡಿತಾಃ।।

ಆನೆಗಳು ಆನೆಗಳನ್ನು ಆಕ್ರಮಣಿಸಿ ದಂತದ ತುದಿಗಳಿಂದ ಇರಿಯುತ್ತಿದ್ದವು. ದಂತಗಳ ಆಘಾತಕ್ಕೊಳಗಾಗಿ ಆನೆಗಳ ಅಂಗಾಂಗಗಳಿಂದ ರಕ್ತವು ಸೋರಿ ತೋಯಿಸುತ್ತಿರಲು ಅವುಗಳು ಗೈರಿಕಾದ ಧಾತುಗಳಿಂದ ಕೂಡಿದ ಚಿಲುಮೆಗಳನ್ನುಳ್ಳ ಪರ್ವತಗಳಂತೆ ತೋರುತ್ತಿದ್ದವು.

08036014a ತೋಮರಾನ್ಗಜಿಭಿರ್ಮುಕ್ತಾನ್ಪ್ರತೀಪಾನಾಸ್ಥಿತಾನ್ಬಹೂನ್।
08036014c ಹಸ್ತೈರ್ವಿಚೇರುಸ್ತೇ ನಾಗಾ ಬಭಂಜುಶ್ಚಾಪರೇ ತಥಾ।।

ಮಾವಟಿಗರಿಂದ ಪ್ರಹರಿಸಲ್ಪಟ್ಟ ತೋಮರಗಳನ್ನು ಅನೇಕ ಆನೆಗಳು ಸೊಂಡಿಲುಗಳಲ್ಲಿ ಹಿಡಿದು ಅತ್ತಿತ್ತ ಸಂಚರಿಸುತ್ತಿದ್ದವು. ಇನ್ನು ಇತರ ಆನೆಗಳು ಅವುಗಳನ್ನು ಮುರಿದುಹಾಕುತ್ತಿದ್ದವು.

08036015a ನಾರಾಚೈಶ್ಚಿನ್ನವರ್ಮಾಣೋ ಭ್ರಾಜಂತೇ ಸ್ಮ ಗಜೋತ್ತಮಾಃ।
08036015c ಹಿಮಾಗಮೇ ಮಹಾರಾಜ ವ್ಯಭ್ರಾ ಇವ ಮಹೀಧರಾಃ।।

ಮಹಾರಾಜ! ನಾರಾಚಗಳಿಂದ ಕವಚಗಳನ್ನು ಕಳೆದುಕೊಂಡಿದ್ದ ಉತ್ತಮ ಆನೆಗಳು ಹೇಮಂತ‌ಋತುವಿನಲ್ಲಿ ಮೋಡಗಳಿಲ್ಲದ ಪರ್ವತಗಳಂತೆ ಪ್ರಕಾಶಿಸುತ್ತಿದ್ದವು.

08036016a ಶರೈಃ ಕನಕಪುಂಖೈಸ್ತು ಚಿತಾ ರೇಜುರ್ಗಜೋತ್ತಮಾಃ।
08036016c ಉಲ್ಕಾಭಿಃ ಸಂಪ್ರದೀಪ್ತಾಗ್ರಾಃ ಪರ್ವತಾ ಇವ ಮಾರಿಷ।।

ಮಾರಿಷ! ಕನಕಪುಂಖಗಳುಳ್ಳ ಶರಗಳಿಂದ ಚುಚ್ಚಲ್ಪಟ್ಟ ಉತ್ತಮ ಆನೆಗಳು ಕೊಳ್ಳಿಗಳ ಬೆಂಕಿಯಿಂದ ಪ್ರದೀಪ್ತ ಪರ್ವತಗಳಂತೆ ತೋರುತ್ತಿದ್ದವು.

08036017a ಕೇ ಚಿದಭ್ಯಾಹತಾ ನಾಗಾ ನಾಗೈರ್ನಗನಿಭಾ ಭುವಿ।
08036017c ನಿಪೇತುಃ ಸಮರೇ ತಸ್ಮಿನ್ಪಕ್ಷವಂತ ಇವಾದ್ರಯಃ।।

ಇನ್ನು ಕೆಲವು ಆನೆಗಳು ಶತ್ರುಪಕ್ಷದ ಆನೆಗಳಿಂದ ಗಾಯಗೊಂಡು ರೆಕ್ಕೆಗಳುಳ್ಳ ಪರ್ವತಗಳಂತೆ ರಣರಂಗದಲ್ಲಿ ಬಿದ್ದಿದ್ದವು.

08036018a ಅಪರೇ ಪ್ರಾದ್ರವನ್ನಾಗಾಃ ಶಲ್ಯಾರ್ತಾ ವ್ರಣಪೀಡಿತಾಃ।
08036018c ಪ್ರತಿಮಾನೈಶ್ಚ ಕುಂಭೈಶ್ಚ ಪೇತುರುರ್ವ್ಯಾಂ ಮಹಾಹವೇ।।

ಇತರ ಆನೆಗಳು ಶರಪ್ರಹಾರಗಳಿಂದ ಆರ್ತರಾಗಿ, ಗಾಯಗಳಿಂದ ಪೀಡಿತರಾಗಿ ಓಡಿಹೋಗಿ ದಂತಮಧ್ಯವನ್ನೂ ಕುಂಬಸ್ಥಳಗಳನ್ನೂ ಒರೆಗೊಟ್ಟು ಭೂಮಿಯ ಮೇಲೆ ಬೀಳುತ್ತಿದ್ದವು.

08036019a ನಿಷೇದುಃ ಸಿಂಹವಚ್ಚಾನ್ಯೇ ನದಂತೋ ಭೈರವಾನ್ರವಾನ್।
08036019c ಮಮ್ಲುಶ್ಚ ಬಹವೋ ರಾಜಂಶ್ಚುಕೂಜುಶ್ಚಾಪರೇ ತಥಾ।।

ರಾಜನ್! ಇನ್ನೂ ಇತರ ಆನೆಗಳು ಸಿಂಹಗಳಂತೆ ಗರ್ಜಿಸುತ್ತಾ ಭೈರವವಾಗಿ ಕೂಗುತ್ತಿದ್ದವು. ಅನೇಕ ಆನೆಗಳು ಅಲ್ಲಲ್ಲಿ ಓಡಿ ಸುತ್ತುವರೆಯುತ್ತಿದ್ದವು. ಇತರ ಆನೆಗಳು ನರಳುತ್ತಿದ್ದವು.

08036020a ಹಯಾಶ್ಚ ನಿಹತಾ ಬಾಣೈಃ ಸ್ವರ್ಣಭಾಂಡಪರಿಚ್ಚದಾಃ।
08036020c ನಿಷೇದುಶ್ಚೈವ ಮಮ್ಲುಶ್ಚ ಬಭ್ರಮುಶ್ಚ ದಿಶೋ ದಶ।।

ಸ್ವರ್ಣಾಭರಣಗಳಿಂದ ವಿಭೂಷಿತವಾಗಿದ್ದ ಕುದುರೆಗಳು ಬಾಣಗಳಿಂದ ವಧಿಸಲ್ಪಟ್ಟು ಬೀಳುತ್ತಿದ್ದವು. ಕೆಲವು ಹತ್ತು ದಿಕ್ಕುಗಳಲ್ಲಿಯೂ ಮಂಕಾಗಿ ತಿರುಗುತ್ತಿದ್ದವು.

08036021a ಅಪರೇ ಕೃಷ್ಯಮಾಣಾಶ್ಚ ವಿವೇಷ್ಟಂತೋ ಮಹೀತಲೇ।
08036021c ಭಾವಾನ್ಬಹುವಿಧಾಂಶ್ಚಕ್ರುಸ್ತಾಡಿತಾಃ ಶರತೋಮರೈಃ।।

ಇತರ ಕುದುರೆಗಳು ನೆಲದಮೇಲೆ ಹೊರಳಾಡುತ್ತಾ ಕುಂದಿಹೋಗುತ್ತಿದ್ದವು. ಕೆಲವು ಶರ-ತೋಮರಗಳಿಂದ ಹೊಡೆಯಲ್ಪಟ್ಟು ಬಹುವಿಧದ ಭಾವಗಳೊಂದಿಗೆ ಸುತ್ತಾಡುತ್ತಿದ್ದವು.

08036022a ನರಾಸ್ತು ನಿಹತಾ ಭೂಮೌ ಕೂಜಂತಸ್ತತ್ರ ಮಾರಿಷ।
08036022c ದೃಷ್ಟ್ವಾ ಚ ಬಾಂದವಾನನ್ಯೇ ಪಿತೄನನ್ಯೇ ಪಿತಾಮಹಾನ್।।

ಮಾರಿಷ! ಹತರಾಗಿ ನೆಲದ ಮೇಲೆ ಬಿದ್ದಿದ್ದ ಮನುಷ್ಯರು ಅನ್ಯ ಬಾಂಧವರನ್ನೋ ತಂದೆಯನ್ನೋ ಅಜ್ಜನನ್ನೋ ನೋಡಿ ಕೂಗಿ ಕರೆಯುತ್ತಿದ್ದರು.

08036023a ಧಾವಮಾನಾನ್ಪರಾಂಶ್ಚೈವ ದೃಷ್ಟ್ವಾನ್ಯೇ ತತ್ರ ಭಾರತ।
08036023c ಗೋತ್ರನಾಮಾನಿ ಖ್ಯಾತಾನಿ ಶಶಂಸುರಿತರೇತರಂ।।

ಭಾರತ! ಓಡಿಹೋಗುತ್ತಿರುವ ಶತ್ರುಗಳನ್ನೂ ಇತರರನ್ನೂ ನೋಡಿದವರು ಪರಸ್ಪರರ ಗೋತ್ರ-ನಾಮಧೇಯಗಳನ್ನು ಹೇಳಿಕೊಳ್ಳುತ್ತಿದ್ದರು.

08036024a ತೇಷಾಂ ಛಿನ್ನಾ ಮಹಾರಾಜ ಭುಜಾಃ ಕನಕಭೂಷಣಾಃ।
08036024c ಉದ್ವೇಷ್ಟಂತೇ ವಿವೇಷ್ಟಂತೇ ಪತಂತೇ ಚೋತ್ಪತಂತಿ ಚ।।

ಮಹಾರಾಜ! ಕತ್ತರಿಸಲ್ಪಟ್ಟ ಕನಕಭೂಷಣ ಭುಜಗಳು ಅಲ್ಲಲ್ಲಿಯೇ ಸುತ್ತಿಕೊಳ್ಳುತ್ತಿದ್ದವು. ಕುಣಿಯುತ್ತಿದ್ದವು. ಹಾರುತ್ತಿದ್ದವು ಮತ್ತು ಪುನಃ ಕೆಳಕ್ಕೆ ಬೀಳುತ್ತಿದ್ದವು.

08036025a ನಿಪತಂತಿ ತಥಾ ಭೂಮೌ ಸ್ಫುರಂತಿ ಚ ಸಹಸ್ರಶಃ।
08036025c ವೇಗಾಂಶ್ಚಾನ್ಯೇ ರಣೇ ಚಕ್ರುಃ ಸ್ಫುರಂತ ಇವ ಪನ್ನಗಾಃ।।

ನಡುಗುತ್ತಿದ್ದ ಸಹಸ್ರಾರು ತೋಳುಗಳು ಆ ರಣಾಂಗಣದಲ್ಲಿ ತುಂಬಿಹೋಗಿದ್ದವು. ಕೆಲವು ಭುಜಗಳು ಐದು ಹೆಡೆಗಳ ಸರ್ಪಗಳಂತೆ ಮಹಾವೇಗದಿಂದ ಮುಂದೆ ಹೋಗುತ್ತಿದ್ದವು.

08036026a ತೇ ಭುಜಾ ಭೋಗಿಭೋಗಾಭಾಶ್ಚಂದನಾಕ್ತಾ ವಿಶಾಂ ಪತೇ।
08036026c ಲೋಹಿತಾರ್ದ್ರಾ ಭೃಶಂ ರೇಜುಸ್ತಪನೀಯಧ್ವಜಾ ಇವ।।

ವಿಶಾಂಪತೇ! ಸರ್ಪ ಶರೀರಗಳಂತಿದ್ದ ಚಂದನ ಚರ್ಚಿತ ರಕ್ತದಿಂದ ನೆನೆದುಹೋಗಿದ್ದ ತೋಳುಗಳು ಸುವರ್ಣಮಯ ಧ್ವಜಗಳಂತೆ ಕಾಣುತ್ತಿದ್ದವು.

08036027a ವರ್ತಮಾನೇ ತಥಾ ಘೋರೇ ಸಂಕುಲೇ ಸರ್ವತೋದಿಶಂ।
08036027c ಅವಿಜ್ಞಾತಾಃ ಸ್ಮ ಯುಧ್ಯಂತೇ ವಿನಿಘ್ನಂತಃ ಪರಸ್ಪರಂ।।

ಎಲ್ಲ ದಿಕ್ಕುಗಳಲ್ಲಿ ಈ ರೀತಿ ಘೋರ ಸಂಕುಲ ಯುದ್ಧವು ನಡೆಯುತ್ತಿರಲು ಯಾರು ಯಾರೆಂದು ತಿಳಿಯಲಾರದೇ ನಮ್ಮವರು ಪರಸ್ಪರರನ್ನೇ ಕೊಲ್ಲುತ್ತಿದ್ದರು.

08036028a ಭೌಮೇನ ರಜಸಾ ಕೀರ್ಣೇ ಶಸ್ತ್ರಸಂಪಾತಸಂಕುಲೇ।
08036028c ನೈವ ಸ್ವೇ ನ ಪರೇ ರಾಜನ್ವ್ಯಜ್ಞಾಯಂತ ತಮೋವೃತೇ।।

ರಾಜನ್! ಶಸ್ತ್ರಗಳು ಬೀಳುತ್ತಿದ್ದ ಆ ಸಂಕುಲಯುದ್ಧದಿಂದ ರಣಭೂಮಿಯ ಮೇಲೆದ್ದ ಧೂಳಿನಿಂದಾಗಿ ಕತ್ತಲೆಯು ಆವರಿಸಲು ನಮ್ಮವರ್ಯಾರು ಶತ್ರುಗಳ್ಯಾರು ಎನ್ನುವುದು ತಿಳಿಯುತ್ತಲೇ ಇರಲಿಲ್ಲ.

08036029a ತಥಾ ತದಭವದ್ಯುದ್ಧಂ ಘೋರರೂಪಂ ಭಯಾನಕಂ।
08036029c ಶೋಣಿತೋದಾ ಮಹಾನದ್ಯಃ ಪ್ರಸಸ್ರುಸ್ತತ್ರ ಚಾಸಕೃತ್।।

ಘೋರರೂಪೀ ಭಯಾನಕ ಆ ಯುದ್ಧವು ಹಾಗೆ ನಡೆಯುತ್ತಿರಲು ರಕ್ತವೇ ನೀರಾಗಿ ಹರಿಯುತ್ತಿದ್ದ ಮಹಾನದಿಗಳು ಹುಟ್ಟಿ ಹರಿಯತೊಡಗಿದವು.

08036030a ಶೀರ್ಷಪಾಷಾಣಸಂಚನ್ನಾಃ ಕೇಶಶೈವಲಶಾದ್ವಲಾಃ।
08036030c ಅಸ್ಥಿಸಂಘಾತಸಂಕೀರ್ಣಾ ಧನುಃಶರವರೋತ್ತಮಾಃ।।

ತಲೆಗಳೇ ಕಲ್ಲುಬಂಡೆಗಳಾಗಿದ್ದವು. ತಲೆಗೂದಲುಗಳೇ ಪಾಚೀ ಹುಲ್ಲುಗಳಾಗಿದ್ದವು. ಎಲುಬುಗಳೇ ಮೀನಿನಂತಿದ್ದವು. ಮತ್ತು ಧನುಸ್ಸು-ಬಾಣಗಳೇ ಅದರ ಉತ್ತಮ ದೋಣಿಗಳಂತಿದ್ದವು.

08036031a ಮಾಂಸಕರ್ದಮಪಂಕಾಶ್ಚ ಶೋಣಿತೌಘಾಃ ಸುದಾರುಣಾಃ।
08036031c ನದೀಃ ಪ್ರವರ್ತಯಾಮಾಸುರ್ಯಮರಾಷ್ಟ್ರವಿವರ್ಧನೀಃ।।

ಯಮರಾಷ್ಟ್ರವನ್ನು ವರ್ಧಿಸುವ ಆ ನದಿಗಳು ಸುದಾರುಣವಾದ ರಕ್ತವೇ ನೀರಾಗಿ ಮಾಂಸ-ಮಜ್ಜೆಗಳೇ ಕೆಸರಾಗಿ ಹರಿಯುತ್ತಿದ್ದವು.

08036032a ತಾ ನದ್ಯೋ ಘೋರರೂಪಾಶ್ಚ ನಯಂತ್ಯೋ ಯಮಸಾದನಂ।
08036032c ಅವಗಾಢಾ ಮಜ್ಜಯಂತ್ಯಃ ಕ್ಷತ್ರಸ್ಯಾಜನಯನ್ಭಯಂ।।

ಯಮಸಾದನಕ್ಕೆ ಕೊಂಡೊಯ್ಯುತ್ತಿದ್ದ ಆ ಘೋರರೂಪೀ ನದಿಗಳು ಅದರಲ್ಲಿ ಬಿದ್ದವರನ್ನು ಮುಳುಗಿಸಿಬಿಡುತ್ತಿದ್ದವು ಮತ್ತು ಕ್ಷತ್ರಿಯರಲ್ಲಿ ಭಯವನ್ನುಂಟುಮಾಡುತ್ತಿದ್ದವು.

08036033a ಕ್ರವ್ಯಾದಾನಾಂ ನರವ್ಯಾಘ್ರ ನರ್ದತಾಂ ತತ್ರ ತತ್ರ ಹ।
08036033c ಘೋರಮಾಯೋಧನಂ ಜಜ್ಞೇ ಪ್ರೇತರಾಜಪುರೋಪಮಂ।।

ನರವ್ಯಾಘ್ರ! ಅಲ್ಲಲ್ಲಿ ಮಾಂಸಾಶೀ ಪ್ರಾಣಿಗಳ ಕೂಗುವಿಕೆಯಿಂದ ಪ್ರೇತರಾಜನ ಪಟ್ಟಣಕ್ಕೆ ಸಮಾನವಾಗಿದ್ದು ಘೋರವಾಗಿ ಕಾಣುತ್ತಿತ್ತು.

08036034a ಉತ್ಥಿತಾನ್ಯಗಣೇಯಾನಿ ಕಬಂದಾನಿ ಸಮಂತತಃ।
08036034c ನೃತ್ಯಂತಿ ವೈ ಭೂತಗಣಾಃ ಸಂತೃಪ್ತಾ ಮಾಂಸಶೋಣಿತೈಃ।।

ಸುತ್ತಲೂ ಅಗಣಿತ ಮುಂಡಗಳು ಮೇಲೆದ್ದು ಕುಣಿಯುತ್ತಿದ್ದವು. ಅವುಗಳೊಂದಿಗೆ ಮಾಂಸ-ರಕ್ತಗಳಿಂದ ಸಂತೃಪ್ತರಾದ ಭೂತಗಣಗಳೂ ಕುಣಿಯುತ್ತಿದ್ದವು.

08036035a ಪೀತ್ವಾ ಚ ಶೋಣಿತಂ ತತ್ರ ವಸಾಂ ಪೀತ್ವಾ ಚ ಭಾರತ।
08036035c ಮೇದೋಮಜ್ಜಾವಸಾತೃಪ್ತಾಸ್ತೃಪ್ತಾ ಮಾಂಸಸ್ಯ ಚೈವ ಹಿ।
08036035e ಧಾವಮಾನಾಶ್ಚ ದೃಶ್ಯಂತೇ ಕಾಕಗೃಧ್ರಬಲಾಸ್ತಥಾ।।

ಭಾರತ! ರಕ್ತವನ್ನು ಕುಡಿದು ವಸೆಯನ್ನು ತಿಂದು, ಮೇದ-ಮಜ್ಜೆ-ವಸೆ-ಮಾಂಸಗಳಿಂದ ತ್ರುಪ್ತರಾಗಿದ್ದ ಮದಿಸಿದ ಕಾಗೆ ಹದ್ದುಗಳೂ ಸುತ್ತಲೂ ಹಾರಾಡುತ್ತಿರುವುದು ಕಾಣುತ್ತಿತ್ತು.

08036036a ಶೂರಾಸ್ತು ಸಮರೇ ರಾಜನ್ಭಯಂ ತ್ಯಕ್ತ್ವಾ ಸುದುಸ್ತ್ಯಜಂ।
08036036c ಯೋಧವ್ರತಸಮಾಖ್ಯಾತಾಶ್ಚಕ್ರುಃ ಕರ್ಮಾಣ್ಯಭೀತವತ್।।

ರಾಜನ್! ಸಮರದಲ್ಲಿ ಶೂರರು ತೊರೆಯಲು ಅಸಾಧ್ಯ ಭಯವನ್ನು ಬಿಟ್ಟು ಯೋಧವ್ರತನಿರತರಾಗಿ ಯುದ್ಧಕರ್ಮವನ್ನು ಭಯವಿಲ್ಲದೇ ನಿರ್ವಹಿಸುತ್ತಿದ್ದರು.

08036037a ಶರಶಕ್ತಿಸಮಾಕೀರ್ಣೇ ಕ್ರವ್ಯಾದಗಣಸಂಕುಲೇ।
08036037c ವ್ಯಚರಂತ ಗಣೈಃ ಶೂರಾಃ ಖ್ಯಾಪಯಂತಃ ಸ್ವಪೌರುಷಂ।।

ಶರ-ಶಕ್ತಿಗಳ ಸಮಾಕೀರ್ಣವಾಗಿದ್ದ, ಮಾಂಸಾಶಿ ಪ್ರಾಣಿಗಳಿಂದ ತುಂಬಿಹೋಗಿದ್ದ ಆ ರಣಭೂಮಿಯಲ್ಲಿ ಶೂರರು ತಮ್ಮ ಪೌರುಷಗಳನ್ನು ವಿಖ್ಯಾತಗೊಳಿಸುತ್ತಾ ಸಂಚರಿಸುತ್ತಿದ್ದರು.

08036038a ಅನ್ಯೋನ್ಯಂ ಶ್ರಾವಯಂತಿ ಸ್ಮ ನಾಮಗೋತ್ರಾಣಿ ಭಾರತ।
08036038c ಪಿತೃನಾಮಾನಿ ಚ ರಣೇ ಗೋತ್ರನಾಮಾನಿ ಚಾಭಿತಃ।।

ಭಾರತ! ಅನ್ಯೋನ್ಯರ ನಾಮಗೋತ್ರಗಳನ್ನು ಹೇಳುತ್ತಾ ರಣದಲ್ಲಿ ಪಿತೃಗಳ ಹೆಸರನ್ನೂ ಗೋತ್ರಗಳನ್ನೂ ಹೇಳಿಕೊಳ್ಳುತ್ತಿದ್ದರು.

08036039a ಶ್ರಾವಯಂತೋ ಹಿ ಬಹವಸ್ತತ್ರ ಯೋಧಾ ವಿಶಾಂ ಪತೇ।
08036039c ಅನ್ಯೋನ್ಯಮವಮೃದ್ನಂತಃ ಶಕ್ತಿತೋಮರಪಟ್ಟಿಶೈಃ।।

ವಿಶಾಂಪತೇ! ಹೀಗೆ ಹೇಳಿಕೊಳ್ಳುತ್ತಾ ಅಲ್ಲಿ ಅನೇಕ ಯೋಧರು ಶಕ್ತಿ-ತೋಮರ-ಪಟ್ಟಿಶಗಳಿಂದ ಪರಸ್ಪರರನ್ನು ಸಂಹರಿಸುತ್ತಿದ್ದರು.

08036040a ವರ್ತಮಾನೇ ತದಾ ಯುದ್ಧೇ ಘೋರರೂಪೇ ಸುದಾರುಣೇ।
08036040c ವ್ಯಷೀದತ್ಕೌರವೀ ಸೇನಾ ಭಿನ್ನಾ ನೌರಿವ ಸಾಗರೇ।।

ಹಾಗೆ ಸುದಾರುಣ ಘೋರರೂಪೀ ಯುದ್ಧವು ನಡೆಯುತ್ತಿರಲು ಕೌರವೀ ಸೇನೆಯು ಸಾಗರದಲ್ಲಿ ಒಡೆದು ಹೋದ ನೌಕೆಯಂತೆ ವ್ಯಾಕುಲಗೊಂಡಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಷಟ್ತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಮೂವತ್ತಾರನೇ ಅಧ್ಯಾಯವು.