ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 35
ಸಾರ
ಭೀಮಸೇನನು ವಿವಿತ್ಸು, ವಿಕಟ, ಸಮ, ನಂದ ಮತ್ತು ಉಪನಂದರೆಂಬ ಧೃತರಾಷ್ಟ್ರನ ಐವರು ಪುತ್ರರನ್ನು ಸಂಹರಿಸಿದುದು (1-18) ಕರ್ಣ-ಭೀಮಸೇನರ ಮತ್ತು ಕರ್ಣ ಸಾತ್ಯಕಿಯರ ನಡುವೆ ಯುದ್ಧ (19-60).
08035001 ಧೃತರಾಷ್ಟ್ರ ಉವಾಚ।
08035001a ಸುದುಷ್ಕರಮಿದಂ ಕರ್ಮ ಕೃತಂ ಭೀಮೇನ ಸಂಜಯ।
08035001c ಯೇನ ಕರ್ಣೋ ಮಹಾಬಾಹೂ ರಥೋಪಸ್ಥೇ ನಿಪಾತಿತಃ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ರಥೋಪಸ್ಥನಾಗಿದ್ದ ಮಹಾಬಾಹು ಕರ್ಣನನ್ನು ಕೆಳಗುರುಳಿಸಿ ಭೀಮನು ತುಂಬಾ ದುಷ್ಕರ ಕರ್ಮವನ್ನೇ ಎಸಗಿದನು!
08035002a ಕರ್ಣೋ ಹ್ಯೇಕೋ ರಣೇ ಹಂತಾ ಸೃಂಜಯಾನ್ಪಾಂಡವೈಃ ಸಹ।
08035002c ಇತಿ ದುರ್ಯೋಧನಃ ಸೂತ ಪ್ರಾಬ್ರವೀನ್ಮಾಂ ಮುಹುರ್ಮುಹುಃ।।
ಸೂತ! “ಕರ್ಣನೊಬ್ಬನೇ ರಣದಲ್ಲಿ ಸೃಂಜಯರೊಂದಿಗೆ ಪಾಂಡವರನ್ನು ಸಂಹರಿಸುತ್ತಾನೆ!” ಎಂದು ದುರ್ಯೋಧನನು ನನಗೆ ಪುನಃ ಪುನಃ ಹೇಳುತ್ತಿದ್ದನು.
08035003a ಪರಾಜಿತಂ ತು ರಾಧೇಯಂ ದೃಷ್ಟ್ವಾ ಭೀಮೇನ ಸಂಯುಗೇ।
08035003c ತತಃ ಪರಂ ಕಿಮಕರೋತ್ಪುತ್ರೋ ದುರ್ಯೋಧನೋ ಮಮ।।
ಸಂಯುಗದಲ್ಲಿ ರಾಧೇಯನು ಭೀಮನಿಂದ ಪರಾಜಿತನಾದುದನ್ನು ಕಂಡು ನನ್ನ ಪುತ್ರ ದುರ್ಯೋಧನನು ಮುಂದೇನು ಮಾಡಿದನು?”
08035004 ಸಂಜಯ ಉವಾಚ।
08035004a ವಿಭ್ರಾಂತಂ ಪ್ರೇಕ್ಷ್ಯ ರಾಧೇಯಂ ಸೂತಪುತ್ರಂ ಮಹಾಹವೇ।
08035004c ಮಹತ್ಯಾ ಸೇನಯಾ ರಾಜನ್ಸೋದರ್ಯಾನ್ಸಮಭಾಷತ।।
ಸಂಜಯನು ಹೇಳಿದನು: “ರಾಜನ್! ಮಹಾಹವದಲ್ಲಿ ಸೂತಪುತ್ರ ರಾಧೇಯನು ವಿಭ್ರಾಂತನಾದುದನ್ನು ನೋಡಿ ದುರ್ಯೋಧನನು ಮಹಾಸೇನೆಗಳೊಂದಿಗಿದ್ದ ಸಹೋದರರಿಗೆ ಹೇಳಿದನು:
08035005a ಶೀಘ್ರಂ ಗಚ್ಚತ ಭದ್ರಂ ವೋ ರಾಧೇಯಂ ಪರಿರಕ್ಷತ।
08035005c ಭೀಮಸೇನಭಯಾಗಾಧೇ ಮಜ್ಜಂತಂ ವ್ಯಸನಾರ್ಣವೇ।।
“ನಿಮಗೆ ಮಂಗಳವಾಗಲಿ! ಭೀಮಸೇನನ ಭಯವೆಂಬ ಅಗಾಧ ವ್ಯಸನ ಸಾಗರದಲ್ಲಿ ಮುಳುಗುತ್ತಿರುವ ರಾಧೇಯನನ್ನು ರಕ್ಷಿಸಲು ಶೀಘ್ರವಾಗಿ ಹೋಗಿ!”
08035006a ತೇ ತು ರಾಜ್ಞಾ ಸಮಾದಿಷ್ಟಾ ಭೀಮಸೇನಜಿಘಾಂಸವಃ।
08035006c ಅಭ್ಯವರ್ತಂತ ಸಂಕ್ರುದ್ಧಾಃ ಪತಂಗಾ ಇವ ಪಾವಕಂ।।
ರಾಜನಿಂದ ಹಾಗೆ ಆಜ್ಞಾಪಿಸಲ್ಪಟ್ಟ ಅವರು ಸಂಕ್ರುದ್ಧರಾಗಿ ಭೀಮಸೇನನನ್ನು ಸಂಹರಿಸಲು ಪತಂಗಗಳು ಬೆಂಕಿಯನ್ನು ಹೇಗೋ ಹಾಗೆ ಅವನನ್ನು ಆಕ್ರಮಣಿಸಿದರು.
08035007a ಶ್ರುತಾಯುರ್ದುರ್ಧರಃ ಕ್ರಾಥೋ ವಿವಿತ್ಸುರ್ವಿಕಟಃ ಸಮಃ।
08035007c ನಿಷಂಗೀ ಕವಚೀ ಪಾಶೀ ತಥಾ ನಂದೋಪನಂದಕೌ।।
08035008a ದುಷ್ಪ್ರಧರ್ಷಃ ಸುಬಾಹುಶ್ಚ ವಾತವೇಗಸುವರ್ಚಸೌ।
08035008c ಧನುರ್ಗ್ರಾಹೋ ದುರ್ಮದಶ್ಚ ತಥಾ ಸತ್ತ್ವಸಮಃ ಸಹಃ।।
08035009a ಏತೇ ರಥೈಃ ಪರಿವೃತಾ ವೀರ್ಯವಂತೋ ಮಹಾಬಲಾಃ।
08035009c ಭೀಮಸೇನಂ ಸಮಾಸಾದ್ಯ ಸಮಂತಾತ್ಪರ್ಯವಾರಯನ್।
08035009e ತೇ ವ್ಯಮುಂಚಂ ಶರವ್ರಾತಾನ್ನಾನಾಲಿಂಗಾನ್ಸಮಂತತಃ।।
ಶ್ರುತಾಯು, ದುರ್ಧರ, ಕ್ರಾಥ, ವಿವಿತ್ಸು, ವಿಕಟ, ಸಮ, ನಿಷಂಗೀ, ಕವಚೀ, ಪಾಶೀ, ನಂದ, ಉಪನಂದ, ದುಷ್ಪ್ರಧರ್ಷ, ಸುಬಾಹು, ವಾತವೇಗ, ಸುವರ್ಚಸ, ಧನುರ್ಗ್ರಾಹ, ಸುಬಾಹು, ವಾತವೇಗ, ಸುವರ್ಚಸ – ಈ ವೀರ್ಯವಂತ ಮಹಾಬಲರು ರಥಗಳಿಂದ ಪರಿವೃತರಾಗಿ ಭೀಮಸೇನನನ್ನು ಸಂಧಿಸಿ ಅವನನ್ನು ಎಲ್ಲಕಡೆಗಳಿಂದ ಮುತ್ತಿದರು. ಅವರು ನಾನಾ ವಿಧದ ಶರವ್ರಾತಗಳನ್ನು ಎಲ್ಲಕಡೆಗಳಿಂದಲೂ ಪ್ರಯೋಗಿಸಿದರು.
08035010a ಸ ತೈರಭ್ಯರ್ದ್ಯಮಾನಸ್ತು ಭೀಮಸೇನೋ ಮಹಾಬಲಃ।
08035010c ತೇಷಾಮಾಪತತಾಂ ಕ್ಷಿಪ್ರಂ ಸುತಾನಾಂ ತೇ ನರಾಧಿಪ।
08035010e ರಥೈಃ ಪಂಚಾಶತಾ ಸಾರ್ಧಂ ಪಂಚಾಶನ್ನ್ಯಹನದ್ರಥಾನ್।।
ನರಾಧಿಪ! ಅವರಿಂದ ಪೀಡಿಸಲ್ಪಟ್ಟ ಮಹಾಬಲ ಭೀಮಸೇನನು ತನ್ನ ಮೇಲೆ ಎರಗುತ್ತಿದ್ದ ನಿನ್ನ ಸುತರ ಬೆಂಬಲಿಗರಾಗಿದ್ದ ಐವತ್ತು ರಥಗಳಲ್ಲಿ ಉಪಸ್ಥಿತರಾಗಿದ್ದ ಐವತ್ತು ರಥಿಗಳನ್ನು ಕ್ಷಣಮಾತ್ರದಲ್ಲಿ ಧ್ವಂಸಗೊಳಿಸಿದನು.
08035011a ವಿವಿತ್ಸೋಸ್ತು ತತಃ ಕ್ರುದ್ಧೋ ಭಲ್ಲೇನಾಪಾಹರಚ್ಚಿರಃ।
08035011c ಸಕುಂಡಲಶಿರಸ್ತ್ರಾಣಂ ಪೂರ್ಣಚಂದ್ರೋಪಮಂ ತದಾ।
08035011e ಭೀಮೇನ ಚ ಮಹಾರಾಜ ಸ ಪಪಾತ ಹತೋ ಭುವಿ।।
ಮಹಾರಾಜ! ಅನಂತರ ಭೀಮನು ಕ್ರುದ್ಧನಾಗಿ ಭಲ್ಲದಿಂದ ಕುಂಡಲ ಕಿರೀಟಗಳೊಂದಿಗೆ ವಿವಿತ್ಸುವಿನ ಚಂದ್ರೋಪಮ ಶಿರವನ್ನು ಅಪಹರಿಸಿದನು. ಭೀಮನಿಂದ ಹತನಾಗಿ ಅವನು ಭೂಮಿಯ ಮೇಲೆ ಬಿದ್ದನು.
08035012a ತಂ ದೃಷ್ಟ್ವಾ ನಿಹತಂ ಶೂರಂ ಭ್ರಾತರಃ ಸರ್ವತಃ ಪ್ರಭೋ।
08035012c ಅಭ್ಯದ್ರವಂತ ಸಮರೇ ಭೀಮಂ ಭೀಮಪರಾಕ್ರಮಂ।।
ಪ್ರಭೋ! ಸಮರದಲ್ಲಿ ಶೂರ ಭ್ರಾತರನು ಹತನಾದುದನ್ನು ನೋಡಿ ಅವರು ಭೀಮಪರಾಕ್ರಮಿ ಭೀಮನನ್ನು ಎಲ್ಲ ಕಡೆಗಳಿಂದ ಆಕ್ರಮಣಿಸಿದರು.
08035013a ತತೋಽಪರಾಭ್ಯಾಂ ಭಲ್ಲಾಭ್ಯಾಂ ಪುತ್ರಯೋಸ್ತೇ ಮಹಾಹವೇ।
08035013c ಜಹಾರ ಸಮರೇ ಪ್ರಾಣಾನ್ಭೀಮೋ ಭೀಮಪರಾಕ್ರಮಃ।।
ಆಗ ಸಮರದಲ್ಲಿ ಭೀಮಪರಾಕ್ರಮಿ ಭೀಮನು ಮಹಾಹವದಲ್ಲಿ ಇನ್ನೆರಡು ಭಲ್ಲಗಳಿಂದ ನಿನ್ನ ಇನ್ನಿಬ್ಬರು ಪುತ್ರರ ಪ್ರಾಣಗಳನ್ನು ಅಪಹರಿಸಿದನು.
08035014a ತೌ ಧರಾಮನ್ವಪದ್ಯೇತಾಂ ವಾತರುಗ್ಣಾವಿವ ದ್ರುಮೌ।
08035014c ವಿಕಟಶ್ಚ ಸಮಶ್ಚೋಭೌ ದೇವಗರ್ಭಸಮೌ ನೃಪ।।
ನೃಪ! ಆಗ ಭಿರುಗಾಳಿಯಿಂದ ಹೊಡೆಯಲ್ಪಟ್ಟ ಮರಗಳಂತೆ ದೇವಗರ್ಭಸಮಾನ ವಿಕಟ ಮತ್ತು ಸಮರಿಬ್ಬರೂ ಧರೆಯ ಮೇಲೆ ಬಿದ್ದರು.
08035015a ತತಸ್ತು ತ್ವರಿತೋ ಭೀಮಃ ಕ್ರಾಥಂ ನಿನ್ಯೇ ಯಮಕ್ಷಯಂ।
08035015c ನಾರಾಚೇನ ಸುತೀಕ್ಷ್ಣೇನ ಸ ಹತೋ ನ್ಯಪತದ್ಭುವಿ।।
ಅನಂತರ ತ್ವರೆಮಾಡಿ ಭೀಮನು ತೀಕ್ಷ್ಣ ನಾರಾಚದಿಂದ ಕ್ರಾಥನನ್ನು ಸಂಹರಿಸಿ ಭೂಮಿಯ ಮೇಲೆ ಕೆಡವಿ ಯಮಕ್ಷಯಕ್ಕೆ ಕಳುಹಿಸಿದನು.
08035016a ಹಾಹಾಕಾರಸ್ತತಸ್ತೀವ್ರಃ ಸಂಬಭೂವ ಜನೇಶ್ವರ।
08035016c ವಧ್ಯಮಾನೇಷು ತೇ ರಾಜಂಸ್ತದಾ ಪುತ್ರೇಷು ಧನ್ವಿಷು।।
ಜನೇಶ್ವರ! ರಾಜನ್! ನಿನ್ನ ಧನ್ವಿ ಪುತ್ರರು ವಧಿಸಲ್ಪಡಲು ಅಲ್ಲಿ ತೀವ್ರ ಹಾಹಾಕಾರವುಂಟಾಯಿತು.
08035017a ತೇಷಾಂ ಸಂಲುಲಿತೇ ಸೈನ್ಯೇ ಭೀಮಸೇನೋ ಮಹಾಬಲಃ।
08035017c ನಂದೋಪನಂದೌ ಸಮರೇ ಪ್ರಾಪಯದ್ಯಮಸಾದನಂ।।
ಹೀಗೆ ಆ ಸೈನ್ಯವು ಕ್ಷೋಭೆಗೊಳ್ಳಲು ಮಹಾಬಲ ಭೀಮಸೇನನು ಸಮರದಲ್ಲಿ ನಂದ-ಉಪನಂದರನ್ನು ಯಮಸಾದನಕ್ಕೆ ಕಳುಹಿಸಿದನು.
08035018a ತತಸ್ತೇ ಪ್ರಾದ್ರವನ್ಭೀತಾಃ ಪುತ್ರಾಸ್ತೇ ವಿಹ್ವಲೀಕೃತಾಃ।
08035018c ಭೀಮಸೇನಂ ರಣೇ ದೃಷ್ಟ್ವಾ ಕಾಲಾಂತಕಯಮೋಪಮಂ।।
ಕಾಲಾಂತಕ ಯಮನಂತಿರುವ ಭೀಮಸೇನನನ್ನು ರಣದಲ್ಲಿ ನೋಡಿ ಭೀತರೂ ವಿಹ್ವಲರೂ ಆಗಿದ್ದ ನಿನ್ನ ಪುತ್ರರು ಪಲಾಯನಗೈದರು.
08035019a ಪುತ್ರಾಂಸ್ತೇ ನಿಹತಾನ್ದೃಷ್ಟ್ವಾ ಸೂತಪುತ್ರೋ ಮಹಾಮನಾಃ।
08035019c ಹಂಸವರ್ಣಾನ್ ಹಯಾನ್ಭೂಯಃ ಪ್ರಾಹಿಣೋದ್ಯತ್ರ ಪಾಂಡವಃ।।
ನಿನ್ನ ಪುತ್ರರು ಹತರಾದುದನ್ನು ನೋಡಿ ಮಹಾಮನಸ್ವಿ ಸೂತಪುತ್ರನು ತನ್ನ ಹಂಸವರ್ಣದ ಕುದುರೆಗಳನ್ನು ಪುನಃ ಪಾಂಡವನಿದ್ದಲ್ಲಿಗೆ ಓಡಿಸಿದನು.
08035020a ತೇ ಪ್ರೇಷಿತಾ ಮಹಾರಾಜ ಮದ್ರರಾಜೇನ ವಾಜಿನಃ।
08035020c ಭೀಮಸೇನರಥಂ ಪ್ರಾಪ್ಯ ಸಮಸಜ್ಜಂತ ವೇಗಿತಾಃ।।
ಮಹಾರಾಜ! ಮದ್ರರಾಜನಿಂದ ಪ್ರೇರಿತ ಆ ಕುದುರೆಗಳು ವೇಗವಾಗಿ ಭೀಮಸೇನನ ರಥದ ಬಳಿಸಾರಿ ಸಜ್ಜಾಗಿ ನಿಂತವು.
08035021a ಸ ಸನ್ನಿಪಾತಸ್ತುಮುಲೋ ಘೋರರೂಪೋ ವಿಶಾಂ ಪತೇ।
08035021c ಆಸೀದ್ರೌದ್ರೋ ಮಹಾರಾಜ ಕರ್ಣಪಾಂಡವಯೋರ್ಮೃಧೇ।।
ವಿಶಾಂಪತೇ! ಮಹಾರಾಜ! ಆಗ ಕರ್ಣ-ಪಾಂಡವರ ನಡುವೆ ಘೋರರೂಪದ ರೌದ್ರ ತುಮುಲ ಯುದ್ಧವು ನಡೆಯಿತು.
08035022a ದೃಷ್ಟ್ವಾ ಮಮ ಮಹಾರಾಜ ತೌ ಸಮೇತೌ ಮಹಾರಥೌ।
08035022c ಆಸೀದ್ಬುದ್ಧಿಃ ಕಥಂ ನೂನಮೇತದದ್ಯ ಭವಿಷ್ಯತಿ।।
ಮಹಾರಾಜ! ಆ ಇಬ್ಬರು ಮಹಾರಥರೂ ಸಂಘರ್ಷಿಸುತ್ತಿರುವುದನ್ನು ನೋಡಿ ಇಂದು ಯುದ್ಧವು ಯಾವರೀತಿಯಲ್ಲಿ ನಡೆಯುವುದೆಂದು ನನ್ನ ಬುದ್ಧಿಯು ಚಿಂತಿಸತೊಡಗಿತು.
08035023a ತತೋ ಮುಹೂರ್ತಾದ್ರಾಜೇಂದ್ರ ನಾತಿಕೃಚ್ಚ್ಸ್ರಾದ್ಧಸನ್ನಿವ।
08035023c ವಿರಥಂ ಭೀಮಕರ್ಮಾಣಂ ಭೀಮಂ ಕರ್ಣಶ್ಚಕಾರ ಹ।।
ರಾಜೇಂದ್ರ! ಆಗ ಮುಹೂರ್ತಮಾತ್ರದಲ್ಲಿ ಕರ್ಣನು ಅತಿಕಷ್ಟಪಡದೇ ನಗುತ್ತಿರುವನೋ ಎನ್ನುವಂತೆ ಭೀಮಕರ್ಮಿ ಭೀಮನನ್ನು ವಿರಥನನ್ನಾಗಿಸಿದನು.
08035024a ವಿರಥೋ ಭರತಶ್ರೇಷ್ಠಃ ಪ್ರಹಸನ್ನನಿಲೋಪಮಃ।
08035024c ಗದಾಹಸ್ತೋ ಮಹಾಬಾಹುರಪತತ್ಸ್ಯಂದನೋತ್ತಮಾತ್।।
ಅನಿಲೋಪಮ ಮಹಾಬಾಹು ಭರತಶ್ರೇಷ್ಠನು ನಗುತ್ತಿರುವನೋ ಎನ್ನುವಂತೆ ಗದೆಯನ್ನು ಹಿಡಿದು ತನ್ನ ಉತ್ತಮ ರಥದಿಂದ ಧುಮುಕಿದನು.
08035025a ನಾಗಾನ್ಸಪ್ತಶತಾನ್ರಾಜನ್ನೀಷಾದಂತಾನ್ಪ್ರಹಾರಿಣಃ।
08035025c ವ್ಯಧಮತ್ಸಹಸಾ ಭೀಮಃ ಕ್ರುದ್ಧರೂಪಃ ಪರಂತಪಃ।।
ರಾಜನ್! ಕೂಡಲೇ ಕ್ರುದ್ಧರೂಪ ಪರಂತಪ ಭೀಮನು ಈಷಾದಂಡ ಸಮಾನ ದಂತಗಳಿಂದ ಪ್ರಹರಿಸುತ್ತಿದ್ದ ಏಳುನೂರು ಆನೆಗಳನ್ನು ವಧಿಸಿದನು.
08035026a ದಂತವೇಷ್ಟೇಷು ನೇತ್ರೇಷು ಕಂಭೇಷು ಸ ಕಟೇಷು ಚ।
08035026c ಮರ್ಮಸ್ವಪಿ ಚ ಮರ್ಮಜ್ಞೋ ನಿನದನ್ವ್ಯಧಮದ್ಭೃಶಂ।।
ಆನೆಗಳ ಮರ್ಮಸ್ಥಾನಗಳನ್ನು ತಿಳಿದಿದ್ದ ಭೀಮಸೇನನು ಜೋರಾಗಿ ಗರ್ಜಿಸುತ್ತಾ ಆನೆಗಳ ಮರ್ಮಸ್ಥಳಗಳನ್ನೂ, ತುಟಿಗಳನ್ನೂ, ಕಣ್ಣುಗಳನ್ನೂ, ಕುಂಭಸ್ಥಳಗಳನ್ನೂ, ಕಪೋಲಗಳನ್ನೂ ಪ್ರಹರಿಸಿ ವಧಿಸುತ್ತಿದ್ದನು.
08035027a ತತಸ್ತೇ ಪ್ರಾದ್ರವನ್ಭೀತಾಃ ಪ್ರತೀಪಂ ಪ್ರಹಿತಾಃ ಪುನಃ।
08035027c ಮಹಾಮಾತ್ರೈಸ್ತಮಾವವ್ರುರ್ಮೇಘಾ ಇವ ದಿವಾಕರಂ।।
ಭಯಗೊಂಡ ಆ ಆನೆಗಳು ಓಡಿಹೋಗಲು ಮಾವುತರು ಅವುಗಳನ್ನು ಪುನಃ ಯುದ್ಧಕ್ಕೆ ಎಳೆತಂದರು. ಆ ಮಹಾಕಾಯದ ಆನೆಗಳು ಮೇಘಗಳು ದಿವಾಕರನನ್ನು ಹೇಗೋ ಹಾಗೆ ಭೀಮಸೇನನನ್ನು ಸುತ್ತುವರೆದವು.
08035028a ತಾನ್ಸ ಸಪ್ತಶತಾನ್ನಾಗಾನ್ಸಾರೋಹಾಯುಧಕೇತನಾನ್।
08035028c ಭೂಮಿಷ್ಠೋ ಗದಯಾ ಜಘ್ನೇ ಶರನ್ಮೇಘಾನಿವಾನಿಲಃ।।
ಮಾವುತ-ಆಯುಧ-ಕೇತುಗಳಿಂದ ಯುಕ್ತವಾಗಿದ್ದ ಆ ಏಳುನೂರು ಆನೆಗಳನ್ನು ಭೀಮಸೇನನು ಭೂಮಿಯ ಮೇಲೆ ನಿಂತುಕೊಂಡೇ ಗದೆಯಿಂದ – ಭಿರುಗಾಳಿಯು ಶರತ್ಕಾಲದ ಮೋಡಗಳನ್ನು ಹೇಗೋ ಹಾಗೆ – ನಾಶಗೊಳಿಸಿದನು.
08035029a ತತಃ ಸುಬಲಪುತ್ರಸ್ಯ ನಾಗಾನತಿಬಲಾನ್ಪುನಃ।
08035029c ಪೋಥಯಾಮಾಸ ಕೌಂತೇಯೋ ದ್ವಾಪಂಚಾಶತಮಾಹವೇ।।
ಅನಂತರ ಕೌಂತೇಯನು ಯುದ್ಧದಲ್ಲಿ ಪುನಃ ಸುಬಲಪುತ್ರ ಶಕುನಿಯ ಐವತ್ತೆರಡು ಅತಿಬಲಶಾಲೀ ಆನೆಗಳನ್ನು ಸದೆಬಡಿದನು.
08035030a ತಥಾ ರಥಶತಂ ಸಾಗ್ರಂ ಪತ್ತೀಂಶ್ಚ ಶತಶೋಽಪರಾನ್।
08035030c ನ್ಯಹನತ್ಪಾಂಡವೋ ಯುದ್ಧೇ ತಾಪಯಂಸ್ತವ ವಾಹಿನೀಂ।।
ಹಾಗೆಯೇ ಪಾಂಡವ ಭೀಮಸೇನನು ನೂರಕ್ಕೂ ಹೆಚ್ಚು ರಥಗಳನ್ನೂ ಪದಾತಿಗಳನ್ನೂ ಸಂಹರಿಸಿ ಯುದ್ಧದಲ್ಲಿ ನಿನ್ನ ಸೇನೆಯನ್ನು ಸಂತಾಪಗೊಳಿಸಿದನು.
08035031a ಪ್ರತಾಪ್ಯಮಾನಂ ಸೂರ್ಯೇಣ ಭೀಮೇನ ಚ ಮಹಾತ್ಮನಾ।
08035031c ತವ ಸೈನ್ಯಂ ಸಂಚುಕೋಚ ಚರ್ಮ ವಹ್ನಿಗತಂ ಯಥಾ।।
ಪ್ರಜ್ವಲಿಸುತ್ತಿದ್ದ ಸೂರ್ಯನಿಂದ ಮತ್ತು ಮಹಾತ್ಮ ಭೀಮನಿಂದ ದಹಿಸಲ್ಪಡುತ್ತಿದ್ದ ನಿನ್ನ ಸೇನೆಯು ಬೆಂಕಿಯಲ್ಲಿ ಹಾಕಿದ ಚರ್ಮದಂತೆ ಕುಗ್ಗಿಹೋಯಿತು.
08035032a ತೇ ಭೀಮಭಯಸಂತ್ರಸ್ತಾಸ್ತಾವಕಾ ಭರತರ್ಷಭ।
08035032c ವಿಹಾಯ ಸಮರೇ ಭೀಮಂ ದುದ್ರುವುರ್ವೈ ದಿಶೋ ದಶ।।
ಭರತರ್ಷಭ! ಭೀಮನ ಭಯದಿಂದ ನಡುಗುತ್ತಿದ್ದ ನಿನ್ನವರು ಭೀಮನೊಡನೆ ಯುದ್ಧಮಾಡುವುದನ್ನು ಬಿಟ್ಟು ಹತ್ತು ದಿಕ್ಕುಗಳಲ್ಲಿಯೂ ಪಲಾಯನಮಾಡತೊಡಗಿದರು.
08035033a ರಥಾಃ ಪಂಚಶತಾಶ್ಚಾನ್ಯೇ ಹ್ರಾದಿನಶ್ಚರ್ಮವರ್ಮಿಣಃ।
08035033c ಭೀಮಮಭ್ಯದ್ರವಂಸ್ತೂರ್ಣಂ ಶರಪೂಗೈಃ ಸಮಂತತಃ।।
ಒಡನೆಯೇ ಚರ್ಮದ ಕವಚಗಳನ್ನು ಧರಿಸಿದ್ದ ಐದು ನೂರು ಅನ್ಯರು ಗಂಭೀರವಾಗಿ ಶಬ್ಧಮಾಡುತ್ತಿದ್ದ ರಥಗಳಲ್ಲಿ ಕುಳಿತು ಎಲ್ಲಕಡೆಗಳಿಂದ ಶರವೃಷ್ಟಿಗಳನ್ನು ಸುರಿಸುತ್ತಾ ಭೀಮನನ್ನು ಆಕ್ರಮಣಿಸಿದರು.
08035034a ತಾನ್ಸಸೂತರಥಾನ್ಸರ್ವಾನ್ಸಪತಾಕಾಧ್ವಜಾಯುಧಾನ್।
08035034c ಪೋಥಯಾಮಾಸ ಗದಯಾ ಭೀಮೋ ವಿಷ್ಣುರಿವಾಸುರಾನ್।।
ವಿಷ್ಣುವು ಅಸುರರನ್ನು ಹೇಗೋ ಹಾಗೆ ಭೀಮನು ಗದೆಯಿಂದ ಅವರೆಲ್ಲರನ್ನು ಸಾರಥಿ, ರಥ, ಪತಾಕೆ, ಧ್ವಜ ಮತ್ತು ಆಯುಧಗಳ ಸಹಿತ ಪುಡಿಪುಡಿಮಾಡಿದನು.
08035035a ತತಃ ಶಕುನಿನಿರ್ದಿಷ್ಟಾಃ ಸಾದಿನಃ ಶೂರಸಮ್ಮತಾಃ।
08035035c ತ್ರಿಸಾಹಸ್ರಾ ಯಯುರ್ಭೀಮಂ ಶಕ್ತ್ಯೃಷ್ಟಿಪ್ರಾಸಪಾಣಯಃ।।
ಅನಂತರ ಶಕುನಿಯಿಂದ ನಿರ್ದೇಶಿಸಲ್ಪಟ್ಟ ಮೂರುಸಾವಿರ ಶೂರಸಮ್ಮತ ಕುದುರೆಸವಾರರು ಶಕ್ತಿ-ಋಷ್ಟಿ-ಪ್ರಾಸಗಳನ್ನು ಹಿಡಿದು ಭೀಮನ ಮೇಲೆ ಎರಗಿದರು.
08035036a ತಾನ್ಪ್ರತ್ಯುದ್ಗಮ್ಯ ಯವನಾನಶ್ವಾರೋಹಾನ್ವರಾರಿಹಾ।
08035036c ವಿಚರನ್ವಿವಿಧಾನ್ಮಾರ್ಗಾನ್ಘಾತಯಾಮಾಸ ಪೋಥಯನ್।।
ಆ ಅಶ್ವಾರೋಹೀ ಯವನರನ್ನು ವರಾರಿಹ ಭೀಮನು ಹಾರುತ್ತಾ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಾ ಹೊಡೆದು ಸಂಹರಿಸಿದನು.
08035037a ತೇಷಾಮಾಸೀನ್ಮಹಾಂ ಶಬ್ಧಸ್ತಾಡಿತಾನಾಂ ಚ ಸಾರ್ವಶಃ।
08035037c ಅಸಿಭಿಶ್ಚಿದ್ಯಮಾನಾನಾಂ ನಡಾನಾಮಿವ ಭಾರತ।।
ಭಾರತ! ಖಡ್ಗದಿಂದ ವೃಕ್ಷಗಳನ್ನು ತುಂಡರಿಸುವಾಗ ಹೇಗೆ ಟಪಾ ಟಪಾ ಶಬ್ಧವುಂಟಾಗುವುದೋ ಹಾಗೆ ಗದೆಯ ಪ್ರಹಾರದಿಂದ ಎಲ್ಲಕಡೆ ಜೋರಾಗಿ ಶಬ್ಧವು ಕೇಳತೊಡಗಿತು.
08035038a ಏವಂ ಸುಬಲಪುತ್ರಸ್ಯ ತ್ರಿಸಾಹಸ್ರಾನ್ ಹಯೋತ್ತಮಾನ್।
08035038c ಹತ್ವಾನ್ಯಂ ರಥಮಾಸ್ಥಾಯ ಕ್ರುದ್ಧೋ ರಾಧೇಯಮಭ್ಯಯಾತ್।।
ಹೀಗೆ ಸುಬಲಪುತ್ರನ ಮೂರುಸಾವಿರ ಉತ್ತಮ ಕುದುರೆಗಳನ್ನು ಸಂಹರಿಸಿ ಭೀಮಸೇನನು ಕ್ರುದ್ಧನಾಗಿ ಇನ್ನೊಂದು ರಥವನ್ನೇರಿ ರಾಧೇಯನನ್ನು ಆಕ್ರಮಣಿಸಿದನು.
08035039a ಕರ್ಣೋಽಪಿ ಸಮರೇ ರಾಜನ್ಧರ್ಮಪುತ್ರಮರಿಂದಮಂ।
08035039c ಶರೈಃ ಪ್ರಚ್ಚಾದಯಾಮಾಸ ಸಾರಥಿಂ ಚಾಪ್ಯಪಾತಯತ್।।
ರಾಜನ್! ಕರ್ಣನಾದರೋ ಸಮರದಲ್ಲಿ ಅರಿಂದಮ ಧರ್ಮಪುತ್ರನನ್ನು ಶರಗಳಿಂದ ಮುಸುಕಿ, ಸಾರಥಿಯನ್ನು ಕೆಳಗುರುಳಿಸಿದನು.
08035040a ತತಃ ಸಂಪ್ರದ್ರುತಂ ಸಂಖ್ಯೇ ರಥಂ ದೃಷ್ಟ್ವಾ ಮಹಾರಥಃ।
08035040c ಅನ್ವಧಾವತ್ಕಿರನ್ಬಾಣೈಃ ಕಂಕಪತ್ರೈರಜಿಹ್ಮಗೈಃ।।
ಯುದ್ಧದಲ್ಲಿ ಆ ರಥವು ಪಲಾಯನಮಾಡುತ್ತಿರುವುದನ್ನು ನೋಡಿ ಮಹಾರಥ ಕರ್ಣನು ಕಂಕಪತ್ರಿ ಜಿಹ್ಮಗ ಬಾಣಗಳನ್ನು ಸುರಿಸುತ್ತಾ ಅನುಸರಿಸಿ ಹೋದನು.
08035041a ರಾಜಾನಮಭಿ ಧಾವಂತಂ ಶರೈರಾವೃತ್ಯ ರೋದಸೀ।
08035041c ಕ್ರುದ್ಧಃ ಪ್ರಚ್ಚಾದಯಾಮಾಸ ಶರಜಾಲೇನ ಮಾರುತಿಃ।।
ರಾಜನನ್ನು ಶರಗಳಿಂದ ಮುಚ್ಚಿ ಬೆನ್ನಟ್ಟಿ ಹೋಗುತ್ತಿದ್ದ ಕರ್ಣನನ್ನು ನೋಡಿ ಮಾರುತಿ ಭೀಮನು ಕ್ರುದ್ಧನಾಗಿ ಅವನನ್ನು ಶರಜಾಲಗಳಿಂದ ಮುಚ್ಚಿಬಿಟ್ಟನು.
08035042a ಸನ್ನಿವೃತ್ತಸ್ತತಸ್ತೂರ್ಣಂ ರಾಧೇಯಃ ಶತ್ರುಕರ್ಶನಃ।
08035042c ಭೀಮಂ ಪ್ರಚ್ಚಾದಯಾಮಾಸ ಸಮಂತಾನ್ನಿಶಿತೈಃ ಶರೈಃ।।
ಕೂಡಲೆ ಶತ್ರುಕರ್ಶನ ರಾಧೇಯನು ಹಿಂದಿರುಗಿ ನಿಶಿತ ಶರಗಳಿಂದ ಭೀಮನನ್ನು ಎಲ್ಲಕಡೆಗಳಿಂದ ಮುಚ್ಚಿಬಿಟ್ಟನು.
08035043a ಭೀಮಸೇನರಥವ್ಯಗ್ರಂ ಕರ್ಣಂ ಭಾರತ ಸಾತ್ಯಕಿಃ।
08035043c ಅಭ್ಯರ್ದಯದಮೇಯಾತ್ಮಾ ಪಾರ್ಷ್ಣಿಗ್ರಹಣಕಾರಣಾತ್।
08035043e ಅಭ್ಯವರ್ತತ ಕರ್ಣಸ್ತಮರ್ದಿತೋಽಪಿ ಶರೈರ್ಭೃಶಂ।।
ಭಾರತ! ಭೀಮಸೇನನ ರಥದ ಕಡೆ ತಿರುಗಿದ ಕರ್ಣನನ್ನು ಅಮೇಯಾತ್ಮ ಸಾತ್ಯಕಿಯು ಭೀಮಸೇನನ ಪಾರ್ಷ್ಣಿಗ್ರಹಣ ಕಾರ್ಯವನ್ನು ಮಾಡುತ್ತಿದ್ದುದರಿಂದ ಆಕ್ರಮಣಿಸಿದನು. ಅವನ ಶರಗಳಿಂದ ಚೆನ್ನಾಗಿ ಪ್ರಹರಿಸಲ್ಪಟ್ಟ ಕರ್ಣನು ಸಾತ್ಯಕಿಯನ್ನೇ ಆಕ್ರಮಣಿಸಿದನು.
08035044a ತಾವನ್ಯೋನ್ಯಂ ಸಮಾಸಾದ್ಯ ವೃಷಭೌ ಸರ್ವಧನ್ವಿನಾಂ।
08035044c ವಿಸೃಜಂತೌ ಶರಾಂಶ್ಚಿತ್ರಾನ್ವಿಭ್ರಾಜೇತಾಂ ಮನಸ್ವಿನೌ।।
ಸರ್ವಧನ್ವಿಗಳಲ್ಲಿ ಶ್ರೇಷ್ಠರಾಗಿದ್ದ ಅವರಿಬ್ಬರು ಮನಸ್ವಿಗಳೂ ಅನ್ಯೋನ್ಯರನ್ನು ಎದುರಿಸಿ ವಿಚಿತ್ರ ಶರಗಳನ್ನು ಪ್ರಯೋಗಿಸುತ್ತಾ ಪ್ರಕಾಶಿಸುತ್ತಿದ್ದರು.
08035045a ತಾಭ್ಯಾಂ ವಿಯತಿ ರಾಜೇಂದ್ರ ವಿತತಂ ಭೀಮದರ್ಶನಂ।
08035045c ಕ್ರೌಂಚಪೃಷ್ಠಾರುಣಂ ರೌದ್ರಂ ಬಾಣಜಾಲಂ ವ್ಯದೃಶ್ಯತ।।
ರಾಜೇಂದ್ರ! ಇಬ್ಬರೂ ಬಿಡುತ್ತಿದ್ದ ಬಾಣಜಾಲಗಳು ಕ್ರೌಂಚಪಕ್ಷಿಯ ಪುಚ್ಚದಂತೆ ಎಣ್ಣೆಗೆಂಪಾಗಿಯೂ, ರೌದ್ರವಾಗಿಯೂ, ಭಯಂಕರವಾಗಿಯೂ ಕಾಣುತ್ತಿದ್ದವು.
08035046a ನೈವ ಸೂರ್ಯಪ್ರಭಾಂ ಖಂ ವಾ ನ ದಿಶಃ ಪ್ರದಿಶಃ ಕುತಃ।
08035046c ಪ್ರಾಜ್ಞಾಸಿಷ್ಮ ವಯಂ ತಾಭ್ಯಾಂ ಶರೈರ್ಮುಕ್ತೈಃ ಸಹಸ್ರಶಃ।।
ಅವರಿಬ್ಬರು ಪ್ರಯೋಗಿಸುತ್ತಿದ್ದ ಸಹಸ್ರಾರು ಶರಗಳಿಂದಾಗಿ ನಮಗೆ ಸೂರ್ಯನ ಪ್ರಭೆಯಾಗಲೀ, ಆಕಾಶವಾಗಲೀ, ದಿಕ್ಕು-ಉಪದಿಕ್ಕುಗಳಾಗಲೀ ತಿಳಿಯುತ್ತಿರಲಿಲ್ಲ.
08035047a ಮಧ್ಯಾಹ್ನೇ ತಪತೋ ರಾಜನ್ಭಾಸ್ಕರಸ್ಯ ಮಹಾಪ್ರಭಾಃ।
08035047c ಹೃತಾಃ ಸರ್ವಾಃ ಶರೌಘೈಸ್ತೈಃ ಕರ್ಣಮಾಧವಯೋಸ್ತದಾ।।
ರಾಜನ್! ಮಧ್ಯಾಹ್ನದಲ್ಲಿ ಉರಿಯುತ್ತಿದ್ದ ಭಾಸ್ಕರನ ಮಹಾಪ್ರಭೆಯೆಲ್ಲವೂ ಕರ್ಣ-ಮಾಧವರ ಶರೌಘಗಳಿಂದ ಕುಂದಿಹೋಗಿತ್ತು.
08035048a ಸೌಬಲಂ ಕೃತವರ್ಮಾಣಂ ದ್ರೌಣಿಮಾಧಿರಥಿಂ ಕೃಪಂ।
08035048c ಸಂಸಕ್ತಾನ್ಪಾಂಡವೈರ್ದೃಷ್ಟ್ವಾ ನಿವೃತ್ತಾಃ ಕುರವಃ ಪುನಃ।।
ಸೌಬಲ ಶಕುನಿ, ಕೃತವರ್ಮ, ದ್ರೌಣಿ, ಆಧಿರಥ ಕರ್ಣ ಮತ್ತು ಕೃಪರು ಪಾಂಡವರೊಂದಿಗೆ ಯುದ್ಧಮಾಡುತ್ತಿರುವುದನ್ನು ನೋಡಿ ಕುರುಸೈನಿಕರು ಪುನಃ ಹಿಂದಿರುಗಿದರು.
08035049a ತೇಷಾಮಾಪತತಾಂ ಶಬ್ಧಸ್ತೀವ್ರ ಆಸೀದ್ವಿಶಾಂ ಪತೇ।
08035049c ಉದ್ಧೂತಾನಾಂ ಯಥಾ ವೃಷ್ಟ್ಯಾ ಸಾಗರಾಣಾಂ ಭಯಾವಹಃ।।
ವಿಶಾಂಪತೇ! ಆಕ್ರಮಣ ಮಾಡುತ್ತಿದ್ದ ಅವರ ಶಬ್ಧವು – ಮಳೆಯಿಂದ ಉಕ್ಕಿಬರುತ್ತಿರುವ ಸಾಗರದಂತೆ - ತೀವ್ರವಾಗಿ ಭಯವನ್ನುಂಟುಮಾಡುತ್ತಿತ್ತು.
08035050a ತೇ ಸೇನೇ ಭೃಶಸಂವಿಗ್ನೇ ದೃಷ್ಟ್ವಾನ್ಯೋನ್ಯಂ ಮಹಾರಣೇ।
08035050c ಹರ್ಷೇಣ ಮಹತಾ ಯುಕ್ತೇ ಪರಿಗೃಹ್ಯ ಪರಸ್ಪರಂ।।
ಮಹಾರಣದಲ್ಲಿ ಅನ್ಯೋನ್ಯರನ್ನು ನೋಡಿ ಹರ್ಷ-ಉತ್ಸಾಹಗಳಿಂದ ಪರಸ್ಪರರನ್ನು ಹಿಡಿದು ಆ ಸೇನೆಗಳು ಯುದ್ಧಮಾಡತೊಡಗಿದವು.
08035051a ತತಃ ಪ್ರವವೃತೇ ಯುದ್ಧಂ ಮಧ್ಯಂ ಪ್ರಾಪ್ತೇ ದಿವಾಕರೇ।
08035051c ಯಾದೃಶಂ ನ ಕದಾ ಚಿದ್ಧಿ ದೃಷ್ಟಪೂರ್ವಂ ನ ಚ ಶ್ರುತಂ।।
ದಿವಾಕರನು ಆಕಾಶಮಧ್ಯದಲ್ಲಿ ಬರಲು ಹಿಂದೆಂದೂ ನೋಡಿರದ ಮತ್ತು ಕೇಳಿರದ ರೀತಿಯ ಯುದ್ಧವು ಪ್ರಾರಂಭವಾಯಿತು.
08035052a ಬಲೌಘಸ್ತು ಸಮಾಸಾದ್ಯ ಬಲೌಘಂ ಸಹಸಾ ರಣೇ।
08035052c ಉಪಾಸರ್ಪತ ವೇಗೇನ ಜಲೌಘ ಇವ ಸಾಗರಂ।।
ಜಲಪ್ರವಾಹವು ವೇಗವಾಗಿ ಹರಿದು ಸಾಗರವನ್ನು ಸೇರುವಂತೆ ರಣದಲ್ಲಿ ಒಂದು ಸೇನಾಸಾಗರವು ಇನ್ನೊಂದು ಸೇನಾಸಾಗರವನ್ನು ಸೇರಿ ಯುದ್ಧದಲ್ಲಿ ತೊಡಗಿತು.
08035053a ಆಸೀನ್ನಿನಾದಃ ಸುಮಹಾನ್ಬಲೌಘಾನಾಂ ಪರಸ್ಪರಂ।
08035053c ಗರ್ಜತಾಂ ಸಾಗರೌಘಾಣಾಂ ಯಥಾ ಸ್ಯಾನ್ನಿಸ್ವನೋ ಮಹಾನ್।।
ಭೋರ್ಗರೆಯುವ ಮಹಾಸಾಗರಗಳಂತೆ ಪರಸ್ಪರರ ಮೇಲೆ ಪ್ರಯೋಗಿಸುತ್ತಿದ್ದ ಬಲಪ್ರಹಾರಗಳ ಶಬ್ಧವು ಘೋರವಾಗಿ ಕೇಳಿಸುತ್ತಿತ್ತು.
08035054a ತೇ ತು ಸೇನೇ ಸಮಾಸಾದ್ಯ ವೇಗವತ್ಯೌ ಪರಸ್ಪರಂ।
08035054c ಏಕೀಭಾವಮನುಪ್ರಾಪ್ತೇ ನದ್ಯಾವಿವ ಸಮಾಗಮೇ।।
ನದಿಗಳ ಸಂಗಮದಲ್ಲಿ ಹೇಗೋ ಹಾಗೆ ವೇಗವತ್ತಾಗಿ ಪರಸ್ಪರರನ್ನು ಸೇರಿದ ಆ ಸೇನೆಗಳು ಒಂದೇ ಸೇನಾಸಮೂಹವೋ ಎನ್ನುವಂತೆ ತೋರುತ್ತಿದ್ದವು.
08035055a ತತಃ ಪ್ರವವೃತೇ ಯುದ್ಧಂ ಘೋರರೂಪಂ ವಿಶಾಂ ಪತೇ।
08035055c ಕುರೂಣಾಂ ಪಾಂಡವಾನಾಂ ಚ ಲಿಪ್ಸತಾಂ ಸುಮಹದ್ಯಶಃ।।
ವಿಶಾಂಪತೇ! ಆಗ ಮಹಾಯಶಸ್ಸನ್ನು ಬಯಸುತ್ತಿದ್ದ ಆ ಕುರು-ಪಾಂಡವರ ನಡುವೆ ಘೋರರೂಪದ ಯುದ್ಧವು ನಡೆಯಿತು.
08035056a ಕುರೂಣಾಂ ಗರ್ಜತಾಂ ತತ್ರ ಅವಿಚ್ಚೇದಕೃತಾ ಗಿರಃ।
08035056c ಶ್ರೂಯಂತೇ ವಿವಿಧಾ ರಾಜನ್ನಾಮಾನ್ಯುದ್ದಿಶ್ಯ ಭಾರತ।।
ರಾಜನ್! ಭಾರತ! ಹೆಸರುಗಳನ್ನು ಹೇಳಿಕೊಂಡು ಗರ್ಜಿಸುತ್ತಿದ್ದ ಕುರುಗಳ ವಿವಿಧ ಸ್ವರಗಳು ಅವಿಚ್ಛನ್ನವಾಗಿ ಕೇಳಿಬರುತ್ತಿದ್ದವು.
08035057a ಯಸ್ಯ ಯದ್ಧಿ ರಣೇ ನ್ಯಂಗಂ ಪಿತೃತೋ ಮಾತೃತೋಽಪಿ ವಾ।
08035057c ಕರ್ಮತಃ ಶೀಲತೋ ವಾಪಿ ಸ ತಚ್ಚ್ರಾವಯತೇ ಯುಧಿ।।
ರಣದಲ್ಲಿ ಯಾರ ತಂದೆ ಅಥವಾ ತಾಯಿಯಲ್ಲಿ ಯಾವುದಾದರೂ ದೋಷವಿದ್ದಿದ್ದರೆ ಅಥವಾ ಕರ್ಮ-ಶೀಲಗಳಲ್ಲಿ ದೋಷವಿದ್ದಿದ್ದರೆ ಯುದ್ಧದಲ್ಲಿ ಅವುಗಳೇ ಕೇಳಿಬರುತ್ತಿದ್ದವು.
08035058a ತಾನ್ದೃಷ್ಟ್ವಾ ಸಮರೇ ಶೂರಾಂಸ್ತರ್ಜಯಾನಾನ್ಪರಸ್ಪರಂ।
08035058c ಅಭವನ್ಮೇ ಮತೀ ರಾಜನ್ನೈಷಾಮಸ್ತೀತಿ ಜೀವಿತಂ।।
ರಾಜನ್! ಸಮರದಲ್ಲಿ ಆ ಶೂರರು ಪರಸ್ಪರರನ್ನು ಈ ರೀತಿ ನಿಂದಿಸುತ್ತಿರುವುದನ್ನು ಕೇಳಿ ನಾನು ಇವರ ಜೀವಗಳು ಉಳಿಯಲಾರವೆಂದು ನಿಶ್ಚಯಿಸಿಬಿಟ್ಟೆನು.
08035059a ತೇಷಾಂ ದೃಷ್ಟ್ವಾ ತು ಕ್ರುದ್ಧಾನಾಂ ವಪೂಂಷ್ಯಮಿತತೇಜಸಾಂ।
08035059c ಅಭವನ್ಮೇ ಭಯಂ ತೀವ್ರಂ ಕಥಮೇತದ್ಭವಿಷ್ಯತಿ।।
ಕ್ರುದ್ಧರಾಗಿದ್ದ ಆ ಅಮಿತತೇಜಸ್ವಿಗಳ ಶರೀರಗಳನ್ನು ನೋಡಿ ಮುಂದೇನಾಗುವುದೋ ಎಂಬ ತೀವ್ರ ಭಯವು ನನ್ನನ್ನು ಆವರಿಸಿತು.
08035060a ತತಸ್ತೇ ಪಾಂಡವಾ ರಾಜನ್ಕೌರವಾಶ್ಚ ಮಹಾರಥಾಃ।
08035060c ತತಕ್ಷುಃ ಸಾಯಕೈಸ್ತೀಕ್ಷ್ಣೈರ್ನಿಘ್ನಂತೋ ಹಿ ಪರಸ್ಪರಂ।।
ರಾಜನ್! ಆಗ ಮಹಾರಥ ಪಾಂಡವರು ಮತ್ತು ಕೌರವರು ತೀಕ್ಷ್ಣ ಸಾಯಕಗಳಿಂದ ಪರಸ್ಪರರನ್ನು ಪ್ರಹರಿಸುತ್ತಾ ಕ್ಷತ-ವಿಕ್ಷತಗೊಳಿಸಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಪಂಚತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಮೂವತ್ತೈದನೇ ಅಧ್ಯಾಯವು.