033 ಸಂಕುಲಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ಕರ್ಣವಧ ಪರ್ವ

ಅಧ್ಯಾಯ 33

ಸಾರ

ಯುದ್ಧದಲ್ಲಿ ಕರ್ಣನು ಯುಧಿಷ್ಠಿರನನ್ನು ಪರಾಜಯಗೊಳಿಸಿದುದು (1-34). ಪಲಾಯನ ಮಾಡುತ್ತಿದ್ದ ಯುಧಿಷ್ಠಿರನನ್ನು ಹಿಂಬಾಲಿಸಿ ಕರ್ಣನು ಅವನ ಭುಜವನ್ನು ಮುಟ್ಟಿ ಹೀಯಾಳಿಸಿ ಕಳುಹಿಸಿದುದು (35-40). ಯುದ್ಧದ ವರ್ಣನೆ (41-70).

08033001 ಸಂಜಯ ಉವಾಚ।
08033001a ವಿದಾರ್ಯ ಕರ್ಣಸ್ತಾಂ ಸೇನಾಂ ಧರ್ಮರಾಜಮುಪಾದ್ರವತ್।
08033001c ರಥಹಸ್ತ್ಯಶ್ವಪತ್ತೀನಾಂ ಸಹಸ್ರೈಃ ಪರಿವಾರಿತಃ।।

ಸಂಜಯನು ಹೇಳಿದನು: “ಆ ಸೇನೆಯನ್ನು ಭೇದಿಸಿ ಕರ್ಣನು ಸಹಸ್ರಾರು ರಥ-ಆನೆ-ಕುದುರೆ-ಪದಾತಿ ಸೇನೆಗಳಿಂದ ಪರಿವೃತನಾದ ಧರ್ಮರಾಜನನ್ನು ಆಕ್ರಮಣಿಸಿದನು.

08033002a ನಾನಾಯುಧಸಹಸ್ರಾಣಿ ಪ್ರೇಷಿತಾನ್ಯರಿಭಿರ್ವೃಷಃ।
08033002c ಚಿತ್ತ್ವಾ ಬಾಣಶತೈರುಗ್ರೈಸ್ತಾನವಿಧ್ಯದಸಂಭ್ರಮಃ।।

ವೃಷ ಕರ್ಣನು ಸ್ವಲ್ಪವೂ ಗಾಬರಿಗೊಳ್ಳದೇ ಶತ್ರುಗಳು ಸುರಿಸುತ್ತಿದ್ದ ಸಹಸ್ರಾರು ನಾನಾ ಆಯುಧಗಳನ್ನು ನೂರಾರು ಉಗ್ರ ಬಾಣಗಳಿಂದ ತುಂಡರಿಸಿದನು.

08033003a ನಿಚಕರ್ತ ಶಿರಾಂಸ್ಯೇಷಾಂ ಬಾಹೂನೂರೂಂಶ್ಚ ಸರ್ವಶಃ।
08033003c ತೇ ಹತಾ ವಸುಧಾಂ ಪೇತುರ್ಭಗ್ನಾಶ್ಚಾನ್ಯೇ ವಿದುದ್ರುವುಃ।।

ಅವನು ಎಲ್ಲಕಡೆ ಶತ್ರುಗಳ ಶಿರಗಳನ್ನೂ, ಬಾಹುಗಳನ್ನೂ, ತೊಡೆಗಳನ್ನೂ ಕತ್ತರಿಸಿದನು. ಅವರು ಭಗ್ನರಾಗಿ ಭೂಮಿಯ ಮೇಲೆ ಬಿದ್ದರು. ಅನ್ಯರು ಪಲಾಯನಗೈದರು.

08033004a ದ್ರವಿಡಾಂಧ್ರನಿಷಾಧಾಸ್ತು ಪುನಃ ಸಾತ್ಯಕಿಚೋದಿತಾಃ।
08033004c ಅಭ್ಯರ್ದಯಂ ಜಿಘಾಂಸಂತಃ ಪತ್ತಯಃ ಕರ್ಣಮಾಹವೇ।।

ಆಗ ಸಾತ್ಯಕಿಯಿಂದ ಪ್ರಚೋದಿತರಾದ ದ್ರವಿಡ-ಆಂಧ್ರ-ನಿಷಾಧ ಪದಾತಿಗಳು ಯುದ್ಧದಲ್ಲಿ ಕರ್ಣನನ್ನು ಸಂಹರಿಸಲು ಬಯಸಿ ಅವನನ್ನು ಪುನಃ ಆಕ್ರಮಿಸಿದರು.

08033005a ತೇ ವಿಬಾಹುಶಿರಸ್ತ್ರಾಣಾಃ ಪ್ರಹತಾಃ ಕರ್ಣಸಾಯಕೈಃ।
08033005c ಪೇತುಃ ಪೃಥಿವ್ಯಾಂ ಯುಗಪಚ್ಚಿನ್ನಂ ಶಾಲವನಂ ಯಥಾ।।

ಕರ್ಣನ ಸಾಯಕಗಳಿಂದ ಪ್ರಹರಿಸಲ್ಪಟ್ಟ ಅವರು ಬಾಹುಗಳು, ಶಿರಗಳು ಮತ್ತು ಕಿರೀಟಗಳನ್ನು ಕಳೆದುಕೊಂಡು ಕತ್ತರಿಸಲ್ಪಟ್ಟ ಶಾಲವೃಕ್ಷಗಳ ವನದಂತೆ ಭೂಮಿಯ ಮೇಲೆ ಬಿದ್ದರು.

08033006a ಏವಂ ಯೋಧಶತಾನ್ಯಾಜೌ ಸಹಸ್ರಾಣ್ಯಯುತಾನಿ ಚ।
08033006c ಹತಾನೀಯುರ್ಮಹೀಂ ದೇಹೈರ್ಯಶಸಾಪೂರಯನ್ದಿಶಃ।।

ಹೀಗೆ ಹತರಾದ ನೂರಾರು ಸಹಸ್ರಾರು ಲಕ್ಷಗಟ್ಟಲೆ ಯೋಧರು ತಮ್ಮ ದೇಹಗಳಿಂದ ಭೂಮಿಯನ್ನೂ ಯಶಸ್ಸುಗಳಿಂದ ದಿಕ್ಕುಗಳನ್ನೂ ತುಂಬಿಬಿಟ್ಟರು.

08033007a ಅಥ ವೈಕರ್ತನಂ ಕರ್ಣಂ ರಣೇ ಕ್ರುದ್ಧಮಿವಾಂತಕಂ।
08033007c ರುರುಧುಃ ಪಾಂಡುಪಾಂಚಾಲಾ ವ್ಯಾಧಿಂ ಮಂತ್ರೌಷಧೈರಿವ।।

ಆಗ ರಣರಂಗದಲ್ಲಿ ಕ್ರುದ್ಧ ಅಂತಕನಂತಿದ್ದ ವೈಕರ್ತನ ಕರ್ಣನನ್ನು ಪಾಂಡವ-ಪಾಂಚಾಲರು ವ್ಯಾಧಿಯನ್ನು ಮಂತ್ರೌಷಧಿಗಳಿಂದ ಹೇಗೋ ಹಾಗೆ ತಡೆದರು.

08033008a ಸ ತಾನ್ಪ್ರಮೃದ್ಯಾಭ್ಯಪತತ್ಪುನರೇವ ಯುಧಿಷ್ಠಿರಂ।
08033008c ಮಂತ್ರೌಷಧಿಕ್ರಿಯಾತೀತೋ ವ್ಯಾಧಿರತ್ಯುಲ್ಬಣೋ ಯಥಾ।।

ಅತಿಯಾಗಿ ಉಲ್ಬಣಿಸಿದ ವ್ಯಾಧಿಯು ಮಂತ್ರೌಷಧಿಗೂ ನಿಲುಕದಂತೆ ಕರ್ಣನು ಅವರನ್ನು ಸದೆಬಡಿದು ಪುನಃ ಯುಧಿಷ್ಠಿರನನ್ನು ಆಕ್ರಮಣಿಸಿದನು.

08033009a ಸ ರಾಜಗೃದ್ಧಿಭೀ ರುದ್ಧಃ ಪಾಂಡುಪಾಂಚಾಲಕೇಕಯೈಃ।
08033009c ನಾಶಕತ್ತಾನತಿಕ್ರಾಂತುಂ ಮೃತ್ಯುರ್ಬ್ರಹ್ಮವಿದೋ ಯಥಾ।।

ಆದರೆ ರಾಜನನ್ನು ರಕ್ಷಿಸುವ ಛಲದಿಂದ ತಡೆಯುತ್ತಿರುವ ಪಾಂಡವ-ಪಾಂಚಾಲ-ಕೇಕಯರನ್ನು ಮೃತ್ಯುವು ಬ್ರಹ್ಮವಿದನನ್ನು ಹೇಗೋ ಹಾಗೆ ಅತಿಕ್ರಮಿಸಲು ಅವನು ಶಕ್ತನಾಗಲಿಲ್ಲ.

08033010a ತತೋ ಯುಧಿಷ್ಠಿರಃ ಕರ್ಣಮದೂರಸ್ಥಂ ನಿವಾರಿತಂ।
08033010c ಅಬ್ರವೀತ್ಪರವೀರಘ್ನಃ ಕ್ರೋಧಸಂರಕ್ತಲೋಚನಃ।।

ಆಗ ಅನತಿದೂರದಲ್ಲಿಯೇ ತಡೆಯಲ್ಪಟ್ಟು ನಿಂತಿದ್ದ ಕರ್ಣನಿಗೆ ಕ್ರೋಧಸಂರಕ್ತಲೋಚನ ಪರವೀರಘ್ನ ಯುಧಿಷ್ಠಿರನು ಇಂತೆಂದನು:

08033011a ಕರ್ಣ ಕರ್ಣ ವೃಥಾದೃಷ್ಟೇ ಸೂತಪುತ್ರ ವಚಃ ಶೃಣು।
08033011c ಸದಾ ಸ್ಪರ್ಧಸಿ ಸಂಗ್ರಾಮೇ ಫಲ್ಗುನೇನ ಯಶಸ್ವಿನಾ।
08033011e ತಥಾಸ್ಮಾನ್ಬಾಧಸೇ ನಿತ್ಯಂ ಧಾರ್ತರಾಷ್ಟ್ರಮತೇ ಸ್ಥಿತಃ।।

“ಕರ್ಣ! ಕರ್ಣ! ಶೂನ್ಯದೃಷ್ಟಿಯವನೇ! ಸೂತಪುತ್ರ! ನನ್ನ ಮಾತನ್ನು ಕೇಳು! ಧಾರ್ತರಾಷ್ಟ್ರನ ಅಭಿಪ್ರಾಯದಂತೆ ನಡೆದುಕೊಳ್ಳುವ ನೀನು ಸದಾ ಸಂಗ್ರಾಮದಲ್ಲಿ ಯಶಸ್ವಿ ಫಲ್ಗುನನೊಂದಿಗೆ ಸ್ಪರ್ಧಿಸುತ್ತೀಯೆ ಮತ್ತು ನಿತ್ಯವೂ ನಮ್ಮನ್ನು ಬಾಧಿಸುತ್ತಿದ್ದೀಯೆ!

08033012a ಯದ್ಬಲಂ ಯಚ್ಚ ತೇ ವೀರ್ಯಂ ಪ್ರದ್ವೇಷೋ ಯಶ್ಚ ಪಾಂಡುಷು।
08033012c ತತ್ಸರ್ವಂ ದರ್ಶಯಸ್ವಾದ್ಯ ಪೌರುಷಂ ಮಹದಾಸ್ಥಿತಃ।
08033012e ಯುದ್ಧಶ್ರದ್ಧಾಂ ಸ ತೇಽದ್ಯಾಹಂ ವಿನೇಷ್ಯಾಮಿ ಮಹಾಹವೇ।।

ನಿನ್ನಲ್ಲಿ ಎಷ್ಟು ಬಲವಿದೆಯೋ, ಎಷ್ಟು ವೀರ್ಯವಿದೆಯೋ, ಪಾಂಡವರ ಮೇಲೆ ಎಷ್ಟು ದ್ವೇಷವಿದೆಯೋ ಅವೆಲ್ಲವನ್ನೂ ಇಂದು ಮಹಾಪೌರುಷವನ್ನಾಶ್ರಯಿಸಿ ತೋರಿಸು!”

08033013a ಏವಮುಕ್ತ್ವಾ ಮಹಾರಾಜ ಕರ್ಣಂ ಪಾಂಡುಸುತಸ್ತದಾ।
08033013c ಸುವರ್ಣಪುಂಖೈರ್ದಶಭಿರ್ವಿವ್ಯಾಧಾಯಸ್ಮಯೈಃ ಶಿತೈಃ।।

ಮಹಾರಾಜ! ಹೀಗೆ ಹೇಳಿ ಪಾಂಡುಸುತ ಯುಧಿಷ್ಠಿರನು ಹತ್ತು ಸುವರ್ಣಪುಂಖಗಳುಳ್ಳ ಲೋಹಮಯ ಬಾಣಗಳಿಂದ ಕರ್ಣನನ್ನು ಪ್ರಹರಿಸಿದನು.

08033014a ತಂ ಸೂತಪುತ್ರೋ ನವಭಿಃ ಪ್ರತ್ಯವಿಧ್ಯದರಿಂದಮಃ।
08033014c ವತ್ಸದಂತೈರ್ಮಹೇಷ್ವಾಸಃ ಪ್ರಹಸನ್ನಿವ ಭಾರತ।।

ಭಾರತ! ಅವನನ್ನು ಪ್ರತಿಯಾಗಿ ಮಹೇಷ್ವಾಸ ಅರಿಂದಮ ಸೂತಪುತ್ರನು ನಗುತ್ತಿರುವನೋ ಎನ್ನುವಂತೆ ಒಂಭತ್ತು ವತ್ಸದಂತಗಳಿಂದ ಹೊಡೆದನು.

08033015a ತತಃ ಕ್ಷುರಾಭ್ಯಾಂ ಪಾಂಚಾಲ್ಯೌ ಚಕ್ರರಕ್ಷೌ ಮಹಾತ್ಮನಃ।
08033015c ಜಘಾನ ಸಮರೇ ಶೂರಃ ಶರೈಃ ಸನ್ನತಪರ್ವಭಿಃ।।

ಅನಂತರ ಆ ಶೂರ ಮಹಾತ್ಮನು ಸಮರದಲ್ಲಿ ಯುಧಿಷ್ಠಿರನ ಚಕ್ರರಕ್ಷಕರಾಗಿದ್ದ ಇಬ್ಬರು ಪಾಂಚಾಲರನ್ನು31 ಸನ್ನತಪರ್ವ ಕ್ಷುರಗಳಿಂದ ಸಂಹರಿಸಿದನು.

08033016a ತಾವುಭೌ ಧರ್ಮರಾಜಸ್ಯ ಪ್ರವೀರೌ ಪರಿಪಾರ್ಶ್ವತಃ।
08033016c ರಥಾಭ್ಯಾಶೇ ಚಕಾಶೇತೇ ಚಂದ್ರಸ್ಯೇವ ಪುನರ್ವಸೂ।।

ಧರ್ಮರಾಜನ ರಥದ ಪಕ್ಕಗಳಲ್ಲಿ ಬಿದ್ದಿದ್ದ ಆ ಇಬ್ಬರು ಪ್ರವೀರರೂ ಚಂದ್ರನ ಬಳಿಯಲ್ಲಿದ್ದ ಪುನರ್ವಸು ನಕ್ಷತ್ರಗಳಂತೆ ಶೋಭಿಸುತ್ತಿದ್ದರು.

08033017a ಯುಧಿಷ್ಠಿರಃ ಪುನಃ ಕರ್ಣಮವಿಧ್ಯತ್ತ್ರಿಂಶತಾ ಶರೈಃ।
08033017c ಸುಷೇಣಂ ಸತ್ಯಸೇನಂ ಚ ತ್ರಿಭಿಸ್ತ್ರಿಭಿರತಾಡಯತ್।।

ಪುನಃ ಯುಧಿಷ್ಠಿರನು ಕರ್ಣನನ್ನು ಮೂವತ್ತು ಬಾಣಗಳಿಂದ ಪ್ರಹರಿಸಿ, ಸುಷೇಣ-ಸತ್ಯಸೇನರನ್ನು ಮೂರು ಮೂರು ಬಾಣಗಳಿಂದ ಹೊಡೆದನು.

08033018a ಶಲ್ಯಂ ನವತ್ಯಾ ವಿವ್ಯಾಧ ತ್ರಿಸಪ್ತತ್ಯಾ ಚ ಸೂತಜಂ।
08033018c ತಾಂಶ್ಚಾಸ್ಯ ಗೋಪ್ತೄನ್ವಿವ್ಯಾಧ ತ್ರಿಭಿಸ್ತ್ರಿಭಿರಜಿಹ್ಮಗೈಃ।।

ಶಲ್ಯನನ್ನು ತೊಂಭತ್ತು ಮತ್ತು ಸೂತಜನನ್ನು ಎಪ್ಪತ್ಮೂರು ಬಾಣಗಳಿಂದ ಹೊಡೆದು ಯುಧಿಷ್ಠಿರನು ಚಕ್ರರಕ್ಷಕರನ್ನು ಮೂರು ಮೂರು ಜಿಹ್ಮಗಗಳಿಂದ ಪ್ರಹರಿಸಿದನು.

08033019a ತತಃ ಪ್ರಹಸ್ಯಾಧಿರಥಿರ್ವಿಧುನ್ವಾನಃ ಸ ಕಾರ್ಮುಕಂ।
08033019c ಭಿತ್ತ್ವಾ ಭಲ್ಲೇನ ರಾಜಾನಂ ವಿದ್ಧ್ವಾ ಷಷ್ಟ್ಯಾನದನ್ಮುದಾ।।

ಆಗ ಆಧಿರಥಿ ಕರ್ಣನು ಗಹಗಹಿಸಿ ನಗುತ್ತಾ ಧನುಸ್ಸನ್ನು ಜಗ್ಗಿಸುತ್ತಾ ಭಲ್ಲದಿಂದ ರಾಜ ಯುಧಿಷ್ಠಿರನನ್ನು ಹೊಡೆದು, ಪುನಃ ಅರವತ್ತರಿಂದ ಪ್ರಹರಿಸಿ ಸಿಂಹಗರ್ಜನೆ ಮಾಡಿದನು.

08033020a ತತಃ ಪ್ರವೀರಾಃ ಪಾಂಡೂನಾಮಭ್ಯಧಾವನ್ಯುಧಿಷ್ಠಿರಂ।
08033020c ಸೂತಪುತ್ರಾತ್ಪರೀಪ್ಸಂತಃ ಕರ್ಣಮಭ್ಯರ್ದಯಂ ಶರೈಃ।।

ಆಗ ಪಾಂಡವ ಪ್ರವೀರರು ಸೂತಪುತ್ರನ ಪೀಡೆಗೊಳಗಾಗಿದ್ದ ಯುಧಿಷ್ಠಿರನನ್ನು ಸಮೀಪಿಸಿ ಶರಗಳಿಂದ ಕರ್ಣನನ್ನು ಆಕ್ರಮಣಿಸಿದರು.

08033021a ಸಾತ್ಯಕಿಶ್ಚೇಕಿತಾನಶ್ಚ ಯುಯುತ್ಸುಃ ಪಾಂಡ್ಯ ಏವ ಚ।
08033021c ಧೃಷ್ಟದ್ಯುಮ್ನಃ ಶಿಖಂಡೀ ಚ ದ್ರೌಪದೇಯಾಃ ಪ್ರಭದ್ರಕಾಃ।।
08033022a ಯಮೌ ಚ ಭೀಮಸೇನಶ್ಚ ಶಿಶುಪಾಲಸ್ಯ ಚಾತ್ಮಜಃ।
08033022c ಕಾರೂಷಾ ಮತ್ಸ್ಯಶೇಷಾಶ್ಚ ಕೇಕಯಾಃ ಕಾಶಿಕೋಸಲಾಃ।
08033022e ಏತೇ ಚ ತ್ವರಿತಾ ವೀರಾ ವಸುಷೇಣಮವಾರಯನ್।।

ಸಾತ್ಯಕಿ, ಚೇಕಿತಾನ, ಯುಯುತ್ಸು, ಪಾಂಡ್ಯ, ಧೃಷ್ಟದ್ಯುಮ್ನ, ಶಿಖಂಡೀ, ದ್ರೌಪದೇಯರು, ಪ್ರಭದ್ರಕರು, ಯಮಳರು, ಭೀಮಸೇನ, ಶಿಶುಪಾಲನ ಮಗ, ಕಾರೂಷರು, ಅಳಿದುಳಿದ ಮತ್ಸ್ಯರು, ಕೇಕಯರು, ಕಾಶಿ-ಕೋಸಲರು – ಈ ವೀರರು ತ್ವರೆಮಾಡಿ ವಸುಷೇಣ ಕರ್ಣನನ್ನು ತಡೆದರು.

08033023a ಜನಮೇಜಯಶ್ಚ ಪಾಂಚಾಲ್ಯಃ ಕರ್ಣಂ ವಿವ್ಯಾಧ ಸಾಯಕೈಃ।
08033023c ವರಾಹಕರ್ಣೈರ್ನಾರಾಚೈರ್ನಾಲೀಕೈರ್ನಿಶಿತೈಃ ಶರೈಃ।
08033023e ವತ್ಸದಂತೈರ್ವಿಪಾಠೈಶ್ಚ ಕ್ಷುರಪ್ರೈಶ್ಚಟಕಾಮುಖೈಃ।।

ಪಾಂಚಾಲ್ಯ ಜನಮೇಜಯನು ಕರ್ಣನನ್ನು ಸಾಯಕ, ವರಾಹಕರ್ಣ, ನಾರಾಚ, ನಾಲೀಕ, ವತ್ಸದಂತ, ವಿಪಾಠ, ಕ್ಷುರಪ್ರ, ಮತ್ತು ಚಟಕಾಮುಖಗಳೇ ಮೊದಲಾದ ನಿಶಿತ ಶರಗಳಿಂದ ಪ್ರಹರಿಸಿದನು.

08033024a ನಾನಾಪ್ರಹರಣೈಶ್ಚೋಗ್ರೈ ರಥಹಸ್ತ್ಯಶ್ವಸಾದಿನಃ।
08033024c ಸರ್ವತೋಽಭ್ಯಾದ್ರವನ್ಕರ್ಣಂ ಪರಿವಾರ್ಯ ಜಿಘಾಂಸಯಾ।।

ಕರ್ಣನನ್ನು ಸಂಹರಿಸಲು ಬಯಸಿ ನಾನಾ ಉಗ್ರ ಪ್ರಹರಣಗಳಿಂದ, ರಥ-ಆನೆ-ಕುದುರೆ-ಪದಾತಿಗಣಗಳೊಂದಿಗೆ ಅವರು ಕರ್ಣನನ್ನು ಎಲ್ಲಕಡೆಗಳಿಂದ ಸುತ್ತುವರೆದು ಆಕ್ರಮಣಿಸಿದರು.

08033025a ಸ ಪಾಂಡವಾನಾಂ ಪ್ರವರೈಃ ಸರ್ವತಃ ಸಮಭಿದ್ರುತಃ।
08033025c ಉದೈರಯದ್ಬ್ರಾಹ್ಮಮಸ್ತ್ರಂ ಶರೈಃ ಸಂಪೂರಯನ್ದಿಶಃ।।

ಪಾಂಡವ ಪ್ರವರರಿಂದ ಸುತ್ತಲೂ ಮುತ್ತಲ್ಪಟ್ಟ ಕರ್ಣನು ಬ್ರಹ್ಮಾಸ್ತ್ರವನ್ನು ಪ್ರಯೋಗಿಸುತ್ತಾ ಸರ್ವದಿಕ್ಕುಗಳನ್ನೂ ಶರಗಳಿಂದ ಮುಚ್ಚಿಬಿಟ್ಟನು.

08033026a ತತಃ ಶರಮಹಾಜ್ವಾಲೋ ವೀರ್ಯೋಷ್ಮಾ ಕರ್ಣಪಾವಕಃ।
08033026c ನಿರ್ದಹನ್ಪಾಂಡವವನಂ ಚಾರು ಪರ್ಯಚರದ್ರಣೇ।।

ಆಗ ಶರಗಳೆಂಬ ಮಹಾಜ್ವಾಲೆಗಳಿಂದಲೂ, ವೀರ್ಯವೆಂಬ ತಾಪದಿಂದಲೂ ಕರ್ಣನೆಂಬ ಪಾವಕನು ಪಾಂಡವರೆಂಬ ವನವನ್ನು ದಹಿಸುತ್ತಾ ರಣದಲ್ಲಿ ಸಂಚರಿಸುತ್ತಿದ್ದನು.

08033027a ಸ ಸಂವಾರ್ಯ ಮಹಾಸ್ತ್ರಾಣಿ ಮಹೇಷ್ವಾಸೋ ಮಹಾತ್ಮನಾಂ।
08033027c ಪ್ರಹಸ್ಯ ಪುರುಷೇಂದ್ರಸ್ಯ ಶರೈಶ್ಚಿಚ್ಚೇದ ಕಾರ್ಮುಕಂ।।

ಮಹೇಷ್ವಾಸ ಮಹಾತ್ಮ ಕರ್ಣನು ಜೋರಾಗಿ ನಕ್ಕು ಮಹಾಸ್ತ್ರಗಳನ್ನು ಸಂಧಾನಮಾಡಿ ಶರಗಳಿಂದ ಪುರುಷೇಂದ್ರ ಯುಧಿಷ್ಠಿರನ ಕಾರ್ಮುಕವನ್ನು ಕತ್ತರಿಸಿದನು.

08033028a ತತಃ ಸಂಧಾಯ ನವತಿಂ ನಿಮೇಷಾನ್ನತಪರ್ವಣಾಂ।
08033028c ಬಿಭೇದ ಕವಚಂ ರಾಜ್ಞೋ ರಣೇ ಕರ್ಣಃ ಶಿತೈಃ ಶರೈಃ।।

ನಂತರ ಕರ್ಣನು ರಣದಲ್ಲಿ ನಿಮಿಷಮಾತ್ರದಲ್ಲಿ ಹೊಸ ಸನ್ನತಪರ್ವ ಶರಗಳನ್ನು ಹೂಡಿ ಆ ನಿಶಿತ ಶರಗಳಿಂದ ರಾಜನ ಕವಚವನ್ನೂ ಕತ್ತರಿಸಿದನು.

08033029a ತದ್ವರ್ಮ ಹೇಮವಿಕೃತಂ ರರಾಜ ನಿಪತತ್ತದಾ।
08033029c ಸವಿದ್ಯುದಭ್ರಂ ಸವಿತುಃ ಶಿಷ್ಟಂ ವಾತಹತಂ ಯಥಾ।।

ಹೇಮವಿಕೃತ ಆ ಕವಚವು ಬೀಳುವಾಗ ಸೂರ್ಯನೊಡನಿದ್ದ ಮೋಡವು ಭಿರುಗಾಳಿಗೆ ಸಿಲುಕಿ ಮಿಂಚಿನೊಂದಿಗೆ ಕೆಳಗೆ ಬೀಳುತ್ತಿರುವಂತೆ ರಾರಾಜಿಸಿತು.

08033030a ತದಂಗಂ ಪುರುಷೇಂದ್ರಸ್ಯ ಭ್ರಷ್ಟವರ್ಮ ವ್ಯರೋಚತ।
08033030c ರತ್ನೈರಲಂಕೃತಂ ದಿವ್ಯೈರ್ವ್ಯಭ್ರಂ ನಿಶಿ ಯಥಾ ನಭಃ।।

ಪುರುಷೇಂದ್ರನ ದೇಹದಿಂದ ಕಳಚಿ ಬಿದ್ದ ರತ್ನಾಲಂಕೃತ ಆ ಕವಚವು ನಕ್ಷತ್ರಮಂಡಲದಿಂದ ಶೋಭಾಯಮಾನವಾದ ರಾತ್ರಿಯ ಆಕಾಶದಂತೆ ತೋರುತ್ತಿತ್ತು.

08033031a ಸ ವಿವರ್ಮಾ ಶರೈಃ ಪಾರ್ಥೋ ರುಧಿರೇಣ ಸಮುಕ್ಷಿತಃ।
08033031c ಕ್ರುದ್ಧಃ ಸರ್ವಾಯಸೀಂ ಶಕ್ತಿಂ ಚಿಕ್ಷೇಪಾಧಿರಥಿಂ ಪ್ರತಿ।।

ಕವಚನ್ನು ಕಳೆದುಕೊಂಡ ಆ ಪಾರ್ಥನು ಶರಪ್ರಹಾರಗಳಿಂದ ರಕ್ತವನ್ನು ಸೋರಿಸುತ್ತಾ ಕ್ರುದ್ಧನಾಗಿ ಸರ್ವವೂ ಲೋಹಮಯವಾಗಿದ್ದ ಶಕ್ತಿಯನ್ನು ಆಧಿರಥಿಯ ಮೇಲೆ ಪ್ರಯೋಗಿಸಿದನು.

08033032a ತಾಂ ಜ್ವಲಂತೀಮಿವಾಕಾಶೇ ಶರೈಶ್ಚಿಚ್ಚೇದ ಸಪ್ತಭಿಃ।
08033032c ಸಾ ಚಿನ್ನಾ ಭೂಮಿಮಪತನ್ಮಹೇಷ್ವಾಸಸ್ಯ ಸಾಯಕೈಃ।।

ಆಕಾಶದಲ್ಲಿ ಪ್ರಜ್ವಲಿಸುತ್ತಿರುವ ಆ ಶಕ್ತಿಯನ್ನು ಮಹೇಷ್ವಾಸ ಕರ್ಣನು ಏಳು ಸಾಯಕ ಶರಗಳಿಂದ ಕತ್ತರಿಸಿ ಭೂಮಿಯ ಮೇಲೆ ಕೆಡವಿದನು.

08033033a ತತೋ ಬಾಹ್ವೋರ್ಲಲಾಟೇ ಚ ಹೃದಿ ಚೈವ ಯುಧಿಷ್ಠಿರಃ।
08033033c ಚತುರ್ಭಿಸ್ತೋಮರೈಃ ಕರ್ಣಂ ತಾಡಯಿತ್ವಾ ಮುದಾನದತ್।।

ಆಗ ಯುಧಿಷ್ಠಿರನು ಕರ್ಣನ ಬಾಹುಗಳು, ಹಣೆ ಮತ್ತು ಎದೆಗಳನ್ನು ನಾಲ್ಕು ತೋಮರಗಳಿಂದ ಹೊಡೆದು ಜೋರಾಗಿ ಗರ್ಜಿಸಿದನು.

08033034a ಉದ್ಭಿನ್ನರುಧಿರಃ ಕರ್ಣಃ ಕ್ರುದ್ಧಃ ಸರ್ಪ ಇವ ಶ್ವಸನ್।
08033034c ಧ್ವಜಂ ಚಿಚ್ಚೇದ ಭಲ್ಲೇನ ತ್ರಿಭಿರ್ವಿವ್ಯಾಧ ಪಾಂಡವಂ।
08033034e ಇಷುಧೀ ಚಾಸ್ಯ ಚಿಚ್ಚೇದ ರಥಂ ಚ ತಿಲಶೋಽಚ್ಚಿನತ್।।

ಉಕ್ಕಿಬರುತ್ತಿರುವ ರಕ್ತಪ್ರವಾಹದಿಂದ ಕ್ರುದ್ಧನಾದ ಕರ್ಣನು ಸರ್ಪದಂತೆ ಭುಸುಗುಟ್ಟುತ್ತಾ ಭಲ್ಲದಿಂದ ಅವನ ಧ್ವಜವನ್ನು ತುಂಡರಿಸಿದನು ಮತ್ತು ಮೂರರಿಂದ ಪಾಂಡವ ಯುಧಷ್ಠಿರನನ್ನು ಹೊಡೆದನು. ಬಾಣಗಳಿಂದ ಅವನ ರಥವನ್ನು ಕೂಡ ಎಳ್ಳಿನ ಕಾಳುಗಳಷ್ಟು ಸಣ್ಣ ಸಣ್ಣ ಚೂರುಗಳನ್ನಾಗಿಸಿ ತುಂಡರಿಸಿದನು.

08033035a ಏವಂ ಪಾರ್ಥೋ ವ್ಯಪಾಯಾತ್ಸ ನಿಹತಪ್ರಾರ್ಷ್ಟಿಸಾರಥಿಃ।
08033035c ಅಶಕ್ನುವನ್ಪ್ರಮುಖತಃ ಸ್ಥಾತುಂ ಕರ್ಣಸ್ಯ ದುರ್ಮನಾಃ।।

ತನ್ನ ಪಾರ್ಷ್ಣಿಸಾರಥಿಗಳನ್ನೂ ಕಳೆದುಕೊಂಡಿದ್ದ ಪಾರ್ಥನು ಕರ್ಣನನ್ನು ಎದುರಿಸಲಾಗದೇ ದುರ್ಮನಸ್ಕನಾಗಿ ಪಲಾಯನಗೈದನು.

08033036a ತಮಭಿದ್ರುತ್ಯ ರಾಧೇಯಃ ಸ್ಕಂದಂ ಸಂಸ್ಪೃಶ್ಯ ಪಾಣಿನಾ।
08033036c ಅಬ್ರವೀತ್ಪ್ರಹಸನ್ರಾಜನ್ಕುತ್ಸಯನ್ನಿವ ಪಾಂಡವಂ।।

ರಾಜನ್! ಯುಧಿಷ್ಠಿರನನ್ನು ಹಿಂಬಾಲಿಸಿ ಹೋಗಿ ರಾಧೇಯನು ಕೈಯಿಂದ ಅವನ ಭುಜವನ್ನು ಮುಟ್ಟಿ ಪಾಂಡವನನ್ನು ಹೀಯಾಳಿಸುವಂತೆ ನಗುತ್ತಾ ಹೇಳಿದನು:

08033037a ಕಥಂ ನಾಮ ಕುಲೇ ಜಾತಃ ಕ್ಷತ್ರಧರ್ಮೇ ವ್ಯವಸ್ಥಿತಃ।
08033037c ಪ್ರಜಹ್ಯಾತ್ಸಮರೇ ಶತ್ರೂನ್ಪ್ರಾಣಾನ್ರಕ್ಷನ್ಮಹಾಹವೇ।।

“ಶ್ರೇಷ್ಠ ಕುಲದಲ್ಲಿ ಹುಟ್ಟಿ ಕ್ಷತ್ರಧರ್ಮದಲ್ಲಿ ವ್ಯವಸ್ಥಿತನಾಗಿದ್ದುಕೊಂಡು ಈ ಮಹಾಸಮರದಲ್ಲಿ ಪ್ರಾಣಗಳನ್ನು ರಕ್ಷಿಸಿಕೊಳ್ಳಲೋಸುಗ ಏಕೆ ಪಲಾಯನಮಾಡುತ್ತಿರುವೆ?

08033038a ನ ಭವಾನ್ ಕ್ಷತ್ರಧರ್ಮೇಷು ಕುಶಲೋಽಸೀತಿ ಮೇ ಮತಿಃ।
08033038c ಬ್ರಾಹ್ಮೇ ಬಲೇ ಭವಾನ್ ಯುಕ್ತಃ ಸ್ವಾಧ್ಯಾಯೇ ಯಜ್ಞಕರ್ಮಣಿ।।

ನೀನು ಕ್ಷತ್ರಧರ್ಮದಲ್ಲಿ ಕುಶಲನಲ್ಲವೆಂದು ನನಗನ್ನಿಸುತ್ತಿದೆ. ನೀನು ಸ್ವಾಧ್ಯಾಯ ಮತ್ತು ಯಜ್ಞಕರ್ಮಯುಕ್ತವಾದ ಬ್ರಹ್ಮಬಲದಿಂದ ಕೂಡಿರುವೆ.

08033039a ಮಾ ಸ್ಮ ಯುಧ್ಯಸ್ವ ಕೌಂತೇಯ ಮಾ ಚ ವೀರಾನ್ಸಮಾಸದಃ।
08033039c ಮಾ ಚೈನಾನಪ್ರಿಯಂ ಬ್ರೂಹಿ ಮಾ ಚ ವ್ರಜ ಮಹಾರಣಂ।।

ಆದುದರಿಂದ ಕೌಂತೇಯ! ಯುದ್ಧಮಾಡಬೇಡ! ವೀರರೊಂದಿಗೆ ಸೆಣೆಸಬೇಡ! ವೀರರೊಂದಿಗೆ ಅಪ್ರಿಯ ಮಾತುಗಳನ್ನಾಡಬೇಡ. ಯುದ್ಧಭೂಮಿಗೆ ಇನ್ನೊಮ್ಮೆ ಕಾಲನ್ನೇ ಇಡಬೇಡ!”

08033040a ಏವಮುಕ್ತ್ವಾ ತತಃ ಪಾರ್ಥಂ ವಿಸೃಜ್ಯ ಚ ಮಹಾಬಲಃ।
08033040c ನ್ಯಹನತ್ಪಾಂಡವೀಂ ಸೇನಾಂ ವಜ್ರಹಸ್ತ ಇವಾಸುರೀಂ।
08033040e ತತಃ ಪ್ರಾಯಾದ್ದ್ರುತಂ ರಾಜನ್ ವ್ರೀಡನ್ನಿವ ಜನೇಶ್ವರಃ।।

ಹೀಗೆ ಹೇಳಿ ಪಾರ್ಥನನ್ನು ಅಲ್ಲಿಯೇ ಬಿಟ್ಟು ವಜ್ರಪಾಣಿ ಇಂದ್ರನು ಅಸುರೀ ಸೇನೆಯನ್ನು ಹೇಗೋ ಹಾಗೆ ಪಾಂಡವೀ ಸೇನೆಯನ್ನು ಸಂಹರಿಸಿದನು. ರಾಜನ್! ಆಗ ಜನೇಶ್ವರ ಯುಧಿಷ್ಠಿರನು ನಾಚಿಕೊಂಡವನಂತೆ ಶೀಘ್ರವಾಗಿ ರಣದಿಂದ ಹೊರಟುಹೋದನು.

08033041a ಅಥ ಪ್ರಯಾಂತಂ ರಾಜಾನಮನ್ವಯುಸ್ತೇ ತದಾಚ್ಯುತಂ।
08033041c ಚೇದಿಪಾಂಡವಪಾಂಚಾಲಾಃ ಸಾತ್ಯಕಿಶ್ಚ ಮಹಾರಥಃ।
08033041e ದ್ರೌಪದೇಯಾಸ್ತಥಾ ಶೂರಾ ಮಾದ್ರೀಪುತ್ರೌ ಚ ಪಾಂಡವೌ।।

ಆಗ ಹಿಂದಿರುಗುತ್ತಿದ್ದ ಆ ಅಚ್ಯುತ ಯುಧಿಷ್ಠಿರನನ್ನು ಅನುಸರಿಸಿ ಚೇದಿ-ಪಾಂಡವ-ಪಾಂಚಾಲರೂ, ಮಹಾರಥ ಸಾತ್ಯಕಿಯೂ, ಶೂರ ದ್ರೌಪದೇಯರೂ, ಪಾಂಡವ ಮಾದ್ರೀಪುತ್ರರಿಬ್ಬರೂ ಹೊರಟುಹೋದರು.

08033042a ತತೋ ಯುಧಿಷ್ಠಿರಾನೀಕಂ ದೃಷ್ಟ್ವಾ ಕರ್ಣಃ ಪರಾಙ್ಮುಖಂ।
08033042c ಕುರುಭಿಃ ಸಹಿತೋ ವೀರೈಃ ಪೃಷ್ಠಗೈಃ ಪೃಷ್ಠಮನ್ವಯಾತ್।।

ಯುಧಿಷ್ಠಿರನ ಸೇನೆಯು ಪರಾಙ್ಮುಖವಾದುದನ್ನು ನೋಡಿ ಕರ್ಣನು ಕುರುವೀರರನ್ನೊಡಗೂಡಿ ಅವನ ಸೇನೆಯನ್ನು ಹಿಂಬಾಲಿಸಿ ಹೋದನು.

08033043a ಶಂಖಭೇರೀನಿನಾದೈಶ್ಚ ಕಾರ್ಮುಕಾಣಾಂ ಚ ನಿಸ್ವನೈಃ।
08033043c ಬಭೂವ ಧಾರ್ತರಾಷ್ಟ್ರಾಣಾಂ ಸಿಂಹನಾದರವಸ್ತದಾ।।

ಆಗ ಧಾರ್ತರಾಷ್ಟ್ರರ ಕಡೆಯಲ್ಲಿ ಶಂಖ-ಭೇರಿ ನಿನಾದಗಳೂ, ಬಿಲ್ಲುಗಳ ಟೇಂಕಾರ ಶಬ್ಧವೂ, ಮತ್ತು ಜೋರಾದ ಸಿಂಹಗರ್ಜನೆಗಳೂ ಕೇಳಿಬಂದವು.

08033044a ಯುಧಿಷ್ಠಿರಸ್ತು ಕೌರವ್ಯ ರಥಮಾರುಹ್ಯ ಸತ್ವರಃ।
08033044c ಶ್ರುತಕೀರ್ತೇರ್ಮಹಾರಾಜ ದೃಷ್ಟವಾನ್ಕರ್ಣವಿಕ್ರಮಂ।।

ಕೌರವ್ಯ! ಮಹಾರಾಜ! ಯುಧಿಷ್ಠಿರನಾದರೋ ಬಹುಬೇಗ ಶ್ರುತಕೀರ್ತಿಯ ರಥವನ್ನೇರಿ ಕರ್ಣನ ವಿಕ್ರಮವನ್ನು ನೋಡುತ್ತಿದ್ದನು.

08033045a ಕಾಲ್ಯಮಾನಂ ಬಲಂ ದೃಷ್ಟ್ವಾ ಧರ್ಮರಾಜೋ ಯುಧಿಷ್ಠಿರಃ।
08033045c ತಾನ್ಯೋಧಾನಬ್ರವೀತ್ ಕ್ರುದ್ಧೋ ಹತೈನಂ ವೈ ಸಹಸ್ರಶಃ।।

ತನ್ನ ಸೇನೆಯು ಕದಡಿಹೋಗುತ್ತಿರುವುದನ್ನು ನೋಡಿ ಧರ್ಮರಾಜ ಯುಧಿಷ್ಠಿರನು ಕ್ರುದ್ಧನಾಗಿ ತನ್ನ ಯೋಧರಿಗೆ “ಸಹಸ್ರಾರು ಸಂಖ್ಯೆಗಳಲ್ಲಿ ಅವರನ್ನು ಕೊಲ್ಲಿರಿ!” ಎಂದು ಹೇಳಿದನು.

08033046a ತತೋ ರಾಜ್ಞಾಭ್ಯನುಜ್ಞಾತಾಃ ಪಾಂಡವಾನಾಂ ಮಹಾರಥಾಃ।
08033046c ಭೀಮಸೇನಮುಖಾಃ ಸರ್ವೇ ಪುತ್ರಾಂಸ್ತೇ ಪ್ರತ್ಯುಪಾದ್ರವನ್।।

ಆಗ ರಾಜನಿಂದ ಆಜ್ಞಾಪಿತರಾದ ಪಾಂಡವ ಮಹಾರಥರೆಲ್ಲರೂ ಭೀಮಸೇನನನ್ನು ಮುಂದಾಗಿಸಿಕೊಂಡು ನಿನ್ನ ಪುತ್ರರನ್ನು ಎದುರಿಸಿ ಆಕ್ರಮಣಿಸಿದರು.

08033047a ಅಭವತ್ತುಮುಲಃ ಶಬ್ದೋ ಯೋಧಾನಾಂ ತತ್ರ ಭಾರತ।
08033047c ಹಸ್ತ್ಯಶ್ವರಥಪತ್ತೀನಾಂ ಶಸ್ತ್ರಾಣಾಂ ಚ ತತಸ್ತತಃ।।

ಭಾರತ! ಆಗ ಅಲ್ಲಲ್ಲಿ ಆನೆ-ಕುದುರೆ-ರಥ-ಪದಾತಿಗಳ ಮತ್ತು ಯೋಧರ ಶಸ್ತ್ರಗಳ ತುಮುಲ ಶಬ್ಧವು ಕೇಳಿ ಬಂದಿತು.

08033048a ಉತ್ತಿಷ್ಠತ ಪ್ರಹರತ ಪ್ರೈತಾಭಿಪತತೇತಿ ಚ।
08033048c ಇತಿ ಬ್ರುವಾಣಾ ಅನ್ಯೋನ್ಯಂ ಜಘ್ನುರ್ಯೋಧಾ ರಣಾಜಿರೇ।।

“ಮೇಲೇಳಿರಿ! ಪ್ರಹರಿಸಿರಿ! ಮುಂದೆ ಹೋಗಿರಿ! ಶತ್ರುವಿನ ಮೇಲೆ ಬೀಳಿರಿ!” ಹೀಗೆ ಹೇಳುತ್ತಾ ಯೋಧರು ರಣರಂಗದಲ್ಲಿ ಅನ್ಯೋನ್ಯರನ್ನು ಸಂಹರಿಸಿದರು.

08033049a ಅಭ್ರಚ್ಚಾಯೇವ ತತ್ರಾಸೀಚ್ಚರವೃಷ್ಟಿಭಿರಂಬರೇ।
08033049c ಸಮಾವೃತ್ತೈರ್ನರವರೈರ್ನಿಘ್ನದ್ಭಿರಿತರೇತರಂ।।

ಇತರೇತರರನ್ನು ಸಂಹರಿಸುತ್ತಿದ್ದ ನರವರರು ಪ್ರಯೋಗಿಸುತ್ತಿದ್ದ ಶರವೃಷ್ಟಿಗಳು ಆಕಾಶವನ್ನು ತುಂಬಿ ಮೋಡಗಳಂತೆಯೇ ನೆರಳನ್ನು ನೀಡುತ್ತಿದ್ದವು.

08033050a ವಿಪತಾಕಾಧ್ವಜಚ್ಚತ್ರಾ ವ್ಯಶ್ವಸೂತಾಯುಧಾ ರಣೇ।
08033050c ವ್ಯಂಗಾಂಗಾವಯವಾಃ ಪೇತುಃ ಕ್ಷಿತೌ ಕ್ಷೀಣಾ ಹತೇಶ್ವರಾಃ।।

ರಣದಲ್ಲಿ ಹತರಾದ ಭೂಪಾಲಕರು ಪತಾಕೆ-ಧ್ವಜ-ಚತ್ರ-ಅಶ್ವ-ಸೂತ-ಆಯುಧಗಳನ್ನು ಕಳೆದುಕೊಂಡು ಅಂಗ-ಅವಯವಗಳಿಂದ ವಿಹೀನರಾಗಿ ಭೂಮಿಯ ಮೇಲೆ ಬೀಳುತ್ತಿದ್ದರು.

08033051a ಪ್ರವರಾಣೀವ ಶೈಲಾನಾಂ ಶಿಖರಾಣಿ ದ್ವಿಪೋತ್ತಮಾಃ।
08033051c ಸಾರೋಹಾ ನಿಹತಾಃ ಪೇತುರ್ವಜ್ರಭಿನ್ನಾ ಇವಾದ್ರಯಃ।।

ವಜ್ರದಿಂದ ಒಡೆದು ಹೋದ ಗಿರಿಗಳಂತೆ ಶೈಲಶಿಖರಗಳಂತಿದ್ದ ಉತ್ತಮ ಆನೆಗಳು ಸವಾರರೊಂದಿಗೆ ಹತರಾಗಿ ಕೆಳಗುರುಳುತ್ತಿದ್ದವು.

08033052a ಚಿನ್ನಭಿನ್ನವಿಪರ್ಯಸ್ತೈರ್ವರ್ಮಾಲಂಕಾರವಿಗ್ರಹೈಃ।
08033052c ಸಾರೋಹಾಸ್ತುರಗಾಃ ಪೇತುರ್ಹತವೀರಾಃ ಸಹಸ್ರಶಃ।।

ಛಿನ್ನ-ಭಿನ್ನವಾದ ಮತ್ತು ಅಸ್ತವ್ಯಸ್ಥವಾದ ಅಲಂಕಾರ ಶರೀರಗಳಿಂದ ಕೂಡಿದ ಸಹಸ್ರಾರು ಕುದುರೆಗಳು ವೀರ ಆರೋಹಿಗಳೊಂದಿಗೆ ಹತಗೊಂಡು ಬೀಳುತ್ತಿದ್ದವು.

08033053a ವಿಪ್ರವಿದ್ಧಾಯುಧಾಂಗಾಶ್ಚ ದ್ವಿರದಾಶ್ವರಥೈರ್ಹತಾಃ।
08033053c ಪ್ರತಿವೀರೈಶ್ಚ ಸಮ್ಮರ್ದೇ ಪತ್ತಿಸಂಘಾಃ ಸಹಸ್ರಶಃ।।

ಆನೆ-ಕುದುರೆ-ರಥಗಳಿಂದ ಹತರಾಗಿ, ಎದುರಿದ್ದ ವೀರರಿಂದ ಸದೆಬಡೆಯಲ್ಪಟ್ಟು ಗಾಯಗೊಂಡ ಮತ್ತು ಕಳೆದುಕೊಂಡ ಅಂಗಾಂಗಗಳಿಂದ ಯುಕ್ತವಾಗಿದ್ದ ಸಹಸ್ರಾರು ಪದಾತಿಸಂಘಗಳು ಬೀಳುತ್ತಿದ್ದವು.

08033054a ವಿಶಾಲಾಯತತಾಮ್ರಾಕ್ಷೈಃ ಪದ್ಮೇಂದುಸದೃಶಾನನೈಃ।
08033054c ಶಿರೋಭಿರ್ಯುದ್ಧಶೌಂಡಾನಾಂ ಸರ್ವತಃ ಸಂಸ್ತೃತಾ ಮಹೀ।।

ವಿಶಾಲವೂ, ಅಗಲವೂ, ಕೆಂಪಾಗಿಯೂ ಇದ್ದ ಕಣ್ಣುಗಳಿಂದ ಮತ್ತು ಪದ್ಮ-ಚಂದ್ರರಂತಿದ್ದ ಮುಖಗಳಿಂದಲೂ ಕೂಡಿದ ಯುದ್ಧಶೌಂಡರ ಶಿರಗಳಿಂದ ಭೂಮಿಯು ಎಲ್ಲೆಲ್ಲಿಯೂ ತುಂಬಿಹೋಗಿತ್ತು.

08033055a ತಥಾ ತು ವಿತತೇ ವ್ಯೋಮ್ನಿ ನಿಸ್ವನಂ ಶುಶ್ರುವುರ್ಜನಾಃ।
08033055c ವಿಮಾನೈರಪ್ಸರಃಸಂಘೈರ್ಗೀತವಾದಿತ್ರನಿಸ್ವನೈಃ।।

ಭೂಮಿಯಲ್ಲಿ ಹೇಗೋ ಹಾಗೆ ಆಕಾಶದಲ್ಲಿಯೂ ವಿಮಾನಗಳಲ್ಲಿದ್ದ ಅಪ್ಸರ ಸಂಘಗಳು ಗೀತ-ವಾದ್ಯಗಳ ಧ್ವನಿಯನ್ನು ಜನರು ಕೇಳುತ್ತಿದ್ದರು.

08033056a ಹತಾನ್ಕೃತ್ತಾನಭಿಮುಖಾನ್ವೀರಾನ್ವೀರೈಃ ಸಹಸ್ರಶಃ।
08033056c ಆರೋಪ್ಯಾರೋಪ್ಯ ಗಚ್ಚಂತಿ ವಿಮಾನೇಷ್ವಪ್ಸರೋಗಣಾಃ।।

ಯುದ್ಧಾಭಿಮುಖರಾಗಿ ವೀರರಿಂದ ಹತರಾದ ಸಹಸ್ರಾರು ವೀರರನ್ನು ಅಪ್ಸರಗಣಗಳು ವಿಮಾನಗಳಲ್ಲಿ ಏರಿಸಿಕೊಂಡು ಹೋಗುತ್ತಿದ್ದವು.

08033057a ತದ್ದೃಷ್ಟ್ವಾ ಮಹದಾಶ್ಚರ್ಯಂ ಪ್ರತ್ಯಕ್ಷಂ ಸ್ವರ್ಗಲಿಪ್ಸಯಾ।
08033057c ಪ್ರಹೃಷ್ಟಮನಸಃ ಶೂರಾಃ ಕ್ಷಿಪ್ರಂ ಜಗ್ಮುಃ ಪರಸ್ಪರಂ।।

ಪ್ರತ್ಯಕ್ಷವಾಗಿ ಆ ಮಹದಾಶ್ಚರ್ಯವನ್ನು ನೋಡಿ ಸ್ವರ್ಗವನ್ನು ಬಯಸಿ ಪ್ರಹೃಷ್ಟಮನಸ್ಕರಾಗಿ ಶೂರರು ಬೇಗಬೇಗನೆ ಪರಸ್ಪರರನ್ನು ಕೊಲ್ಲುತ್ತಿದ್ದರು.

08033058a ರಥಿನೋ ರಥಿಭಿಃ ಸಾರ್ಧಂ ಚಿತ್ರಂ ಯುಯುಧುರಾಹವೇ।
08033058c ಪತ್ತಯಃ ಪತ್ತಿಭಿರ್ನಾಗಾ ನಾಗೈಃ ಸಹ ಹಯೈರ್ಹಯಾಃ।।

ಯುದ್ಧದಲ್ಲಿ ರಥಿಗಳು ರಥಿಗಳೊಂದಿಗೆ, ಪದಾತಿಗಳು ಪದಾತಿಗಳೊಂದಿಗೆ, ಆನೆಗಳು ಆನೆಗಳೊಂದಿಗೆ ಮತ್ತು ಕುದುರೆಗಳು ಕುದುರೆಗಳೊಂದಿಗೆ ವಿಚಿತ್ರವಾಗಿ ಹೋರಾಡಿದರು.

08033059a ಏವಂ ಪ್ರವೃತ್ತೇ ಸಂಗ್ರಾಮೇ ಗಜವಾಜಿಜನಕ್ಷಯೇ।
08033059c ಸೈನ್ಯೇ ಚ ರಜಸಾ ವ್ಯಾಪ್ತೇ ಸ್ವೇ ಸ್ವಾಂ ಜಘ್ನುಃ ಪರೇ ಪರಾನ್।।

ಈ ರೀತಿ ಸಂಗ್ರಾಮದಲ್ಲಿ ಆನೆ-ಕುದುರೆ-ಜನರ ಕ್ಷಯವಾಗುತ್ತಿರಲು ಸೇನೆಯು ಧೂಳಿನಿಂದ ಆವೃತವಾಗಿ ದಿಕ್ಕುಕಾಣದೇ ನಮ್ಮವರು ನಮ್ಮವರನ್ನೇ ಮತ್ತು ಶತ್ರುಗಳು ಶತ್ರುಗಳನ್ನೇ ಕೊಲ್ಲತೊಡಗಿದರು.

08033060a ಕಚಾಕಚಿ ಬಭೌ ಯುದ್ಧಂ ದಂತಾದಂತಿ ನಖಾನಖಿ।
08033060c ಮುಷ್ಟಿಯುದ್ಧಂ ನಿಯುದ್ಧಂ ಚ ದೇಹಪಾಪ್ಮವಿನಾಶನಂ।।

ದೇಹ-ಪಾಪಗಳನ್ನು ವಿನಾಶಿಸುವ ಆ ಯುದ್ಧದಲ್ಲಿ ಪರಸ್ಪರರ ಕೂದಲನ್ನು ಜಗ್ಗಾಡುತ್ತಿದ್ದರು. ಹಲ್ಲುಗಳಿಂದ ಕಚ್ಚುತ್ತಿದ್ದರು. ಉಗುರುಗಳಿಂದ ಪರೆದಾಡುತ್ತಿದ್ದರು. ಮುಷ್ಟಿಯುದ್ಧ ಮಾಡುತ್ತಿದ್ದರು.

08033061a ತಥಾ ವರ್ತತಿ ಸಂಗ್ರಾಮೇ ಗಜವಾಜಿಜನಕ್ಷಯೇ।
08033061c ನರಾಶ್ವಗಜದೇಹೇಭ್ಯಃ ಪ್ರಸೃತಾ ಲೋಹಿತಾಪಗಾ।
08033061e ನರಾಶ್ವಗಜದೇಹಾನ್ಸಾ ವ್ಯುವಾಹ ಪತಿತಾನ್ಬಹೂನ್।।

ಆ ರೀತಿ ಆನೆ-ಕುದುರೆ-ಜನ ಕ್ಷಯವು ನಡೆಯುತ್ತಿರಲು ಸಂಗ್ರಾಮದಲ್ಲಿ ನರರು, ಆನೆಗಳು ಮತ್ತು ಕುದುರೆಗಳ ದೇಹದಿಂದ ಸುರಿಯುತ್ತಿದ್ದ ರಕ್ತವು ಪ್ರವಾಹವಾಗಿ ಹರಿದು ಕೆಳಗೆ ಬಿದ್ದಿದ್ದ ಅನೇಕ ನರರ, ಆನೆಗಳ ಮತ್ತು ಕುದುರೆಗಳ ದೇಹಗಳನ್ನೇ ಕೊಚ್ಚಿಕೊಂಡು ಹೋಗುತ್ತಿತ್ತು.

08033062a ನರಾಶ್ವಗಜಸಂಬಾಧೇ ನರಾಶ್ವಗಜಸಾದಿನಾಂ।
08033062c ಲೋಹಿತೋದಾ ಮಹಾಘೋರಾ ನದೀ ಲೋಹಿತಕರ್ದಮಾ।
08033062e ನರಾಶ್ವಗಜದೇಹಾನ್ಸಾ ವಹಂತೀ ಭೀರುಭೀಷಣೀ।।

ನರಾಶ್ವಗಜ ಸಂಪನ್ನವಾಗಿದ್ದ ಆ ಮಹಾಘೋರ ನದಿಯಲ್ಲಿ ನರಾಶ್ವಗಜಸವಾರರ ರಕ್ತವೇ ನೀರಾಗಿದ್ದಿತು. ಮಾಂಸವೇ ಕೆಸರಾಗಿದ್ದಿತು. ನರಾಶ್ವಗಜದೇಹಗಳು ತೇಲುತ್ತಿದ್ದ ಆ ರಕ್ತದ ನದಿಯು ಹೇಡಿಗಳಿಗೆ ಭಯವನ್ನುಂಟುಮಾಡುತ್ತಿತ್ತು.

08033063a ತಸ್ಯಾಃ ಪರಮಪಾರಂ ಚ ವ್ರಜಂತಿ ವಿಜಯೈಷಿಣಃ।
08033063c ಗಾಧೇನ ಚ ಪ್ಲವಂತಶ್ಚ ನಿಮಜ್ಜ್ಯೋನ್ಮಜ್ಜ್ಯ ಚಾಪರೇ।।

ವಿಜಯೈಷಿಣಿಗಳು ಆಳವಿಲ್ಲದ ಸ್ಥಳದಲ್ಲಿ ದಾಟಿಕೊಂಡು ಹೋಗುತ್ತಿದ್ದರು. ಆಳವಿದ್ದಲ್ಲಿ ಹಾರಿಕೊಂಡು ಹೋಗುತ್ತಿದ್ದರು ಮತ್ತು ಇನ್ನು ಕೆಲವರು ಆ ರಕ್ತಕೋಡಿಯಲ್ಲಿ ಮುಳುಗಿಹೋಗುತ್ತಿದ್ದರು.

08033064a ತೇ ತು ಲೋಹಿತದಿಗ್ಧಾಂಗಾ ರಕ್ತವರ್ಮಾಯುಧಾಂಬರಾಃ।
08033064c ಸಸ್ನುಸ್ತಸ್ಯಾಂ ಪಪುಶ್ಚಾಸೃಂ ಮಮ್ಲುಶ್ಚ ಭರತರ್ಷಭ।।

ಭರತರ್ಷಭ! ರಕ್ತದಿಂದ ತೋಯ್ದು ಹೋಗಿದ್ದ ಅವರ ದೇಹಗಳು, ಕವಚಗಳು ಮತ್ತು ವಸ್ತ್ರಗಳು ರಕ್ತದಂತೆ ಕೆಂಪಾಗಿ ಕಾಣುತ್ತಿದ್ದವು. ಆ ರಕ್ತನದಿಯಲ್ಲಿ ಕೆಲವರು ಗುಟುಕುಹಾಕುತ್ತಿದ್ದರು, ಸ್ನಾನಮಾಡುತ್ತಿದ್ದರು ಮತ್ತು ಮೂರ್ಛೆಹೋಗುತ್ತಿದ್ದರು.

08033065a ರಥಾನಶ್ವಾನ್ನರಾನ್ನಾಗಾನಾಯುಧಾಭರಣಾನಿ ಚ।
08033065c ವಸನಾನ್ಯಥ ವರ್ಮಾಣಿ ಹನ್ಯಮಾನಾನ್ ಹತಾನಪಿ।
08033065e ಭೂಮಿಂ ಖಂ ದ್ಯಾಂ ದಿಶಶ್ಚೈವ ಪ್ರಾಯಃ ಪಶ್ಯಾಮ ಲೋಹಿತಂ।।

ರಥ-ಕುದುರೆ-ಆನೆಗಳು, ಆಯುಧ-ಆಭರಣಗಳು, ವಸ್ತ್ರ-ಕವಚಗಳು, ಕೊಲ್ಲಲ್ಪಡುತ್ತಿದ್ದವರು ಮತ್ತು ಸತ್ತುಹೋದವರು, ಭೂಮಿ, ಆಕಾಶ, ಸ್ವರ್ಗ, ದಿಕ್ಕುಗಳು ಪ್ರಾಯಶಃ ಇವೆಲ್ಲವೂ ಕೆಂಪಾಗಿಯೇ ತೋರುತ್ತಿದ್ದವು.

08033066a ಲೋಹಿತಸ್ಯ ತು ಗಂದೇನ ಸ್ಪರ್ಶೇನ ಚ ರಸೇನ ಚ।
08033066c ರೂಪೇಣ ಚಾತಿರಿಕ್ತೇನ ಶಬ್ದೇನ ಚ ವಿಸರ್ಪತಾ।
08033066e ವಿಷಾದಃ ಸುಮಹಾನಾಸೀತ್ಪ್ರಾಯಃ ಸೈನ್ಯಸ್ಯ ಭಾರತ।।

ಭಾರತ! ಆ ಕೆಂಪುನದಿಯ ವಾಸನೆ, ಸ್ಪರ್ಷ, ರುಚಿ, ರೂಪ, ಜೋರಾಗಿ ಹರಿದುಹೋಗುತ್ತಿದ್ದುದರ ಶಬ್ಧ, ಇವುಗಳಿಂದ ಪ್ರಾಯಶಃ ಸೇನೆಗಳು ಮಹಾ ವಿಷಾದಕ್ಕೊಳಗಾಗಿದ್ದರು.

08033067a ತತ್ತು ವಿಪ್ರಹತಂ ಸೈನ್ಯಂ ಭೀಮಸೇನಮುಖೈಸ್ತವ।
08033067c ಭೂಯಃ ಸಮಾದ್ರವನ್ವೀರಾಃ ಸಾತ್ಯಕಿಪ್ರಮುಖಾ ರಥಾಃ।।

ಆಗಲೇ ನಾಶವಾಗಿಹೋಗಿದ್ದ ನಿನ್ನ ಸೇನೆಯನ್ನು ಭೀಮಸೇನನ ನಾಯಕತ್ವದಲ್ಲಿ ಸಾತ್ಯಕಿ ಮತ್ತು ಇತರ ಪ್ರಮುಖ ಮಹಾರಥರು ಪುನಃ ಆಕ್ರಮಣಿಸಿದರು.

08033068a ತೇಷಾಮಾಪತತಾಂ ವೇಗಮವಿಷಹ್ಯ ಮಹಾತ್ಮನಾಂ।
08033068c ಪುತ್ರಾಣಾಂ ತೇ ಮಹತ್ಸೈನ್ಯಮಾಸೀದ್ರಾಜನ್ಪರಾಙ್ಮುಖಂ।।

ರಾಜನ್! ವೇಗವಾಗಿ ಆಕ್ರಮಣಿಸುತ್ತಿದ್ದ ಆ ಮಹಾತ್ಮರನ್ನು ಸಹಿಸಿಕೊಳ್ಳಲಾಗದೇ ನಿನ್ನ ಮಕ್ಕಳ ಆ ಮಹಾಸೇನೆಯು ಪರಾಙ್ಮುಖವಾಯಿತು.

08033069a ತತ್ಪ್ರಕೀರ್ಣರಥಾಶ್ವೇಭಂ ನರವಾಜಿಸಮಾಕುಲಂ।
08033069c ವಿಧ್ವಸ್ತಚರ್ಮಕವಚಂ ಪ್ರವಿದ್ಧಾಯುಧಕಾರ್ಮುಕಂ।।

ರಥಾಶ್ವಗಜಪದಾತಿಗಣಗಳು ಚೆಲ್ಲಾಪಿಲ್ಲಿಯಾಗಿ ಹೋದವು. ಯೋಧರ ಕವಚ-ಆಭರಣಗಳು ವಿಧ್ವಸ್ತವಾದವು. ಆಯುಧ-ಧನುಸ್ಸುಗಳು ತುಂಡಾಗಿ ಭೂಮಿಯ ಮೇಲೆ ಬಿದ್ದವು.

08033070a ವ್ಯದ್ರವತ್ತಾವಕಂ ಸೈನ್ಯಂ ಲೋಡ್ಯಮಾನಂ ಸಮಂತತಃ।
08033070c ಸಿಂಹಾರ್ದಿತಂ ಮಹಾರಣ್ಯೇ ಯಥಾ ಗಜಕುಲಂ ತಥಾ।।

ಮಹಾರಣ್ಯದಲ್ಲಿ ಸಿಂಹದಿಂದ ಆಕ್ರಮಣಿಸಲ್ಪಟ್ಟ ಗಜಸಂಕುಲವು ಹೇಗೋ ಹಾಗೆ ವಧಿಸಲ್ಪಡುತ್ತಿರುವ ನಿನ್ನ ಸೇನೆಯು ಎಲ್ಲ ಕಡೆಗಳಿಗೆ ಪಲಾಯನಗೈದಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ತ್ರ್ಯಾತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಮೂವತ್ಮೂರನೇ ಅಧ್ಯಾಯವು.