032 ಸಂಕುಲಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ಕರ್ಣವಧ ಪರ್ವ

ಅಧ್ಯಾಯ 32

ಸಾರ

ಪಾಂಡವ ಸೇನಾವ್ಯೂಹದ ವರ್ಣನೆ (1-7). ಸಂಶಪ್ತಕರೊಡನೆ ಅರ್ಜುನನ ಯುದ್ಧ (8-14). ಪಾಂಡವಸೇನೆಯೊಡನೆ ಕರ್ಣನ ಯುದ್ಧ (15-45). ಭೀಮಸೇನನಿಂದ ಕರ್ಣಪುತ್ರ ಸತ್ಯಸೇನನ ವಧೆ (46-50). ಸಂಕುಲ ಯುದ್ಧದ ವರ್ಣನೆ (51-84).

08032001 ಧೃತರಾಷ್ಟ್ರ ಉವಾಚ।
08032001a ತಥಾ ವ್ಯೂಢೇಷ್ವನೀಕೇಷು ಸಂಸಕ್ತೇಷು ಚ ಸಂಜಯ।
08032001c ಸಂಶಪ್ತಕಾನ್ಕಥಂ ಪಾರ್ಥೋ ಗತಃ ಕರ್ಣಶ್ಚ ಪಾಂಡವಾನ್।।

ಧೃತರಾಷ್ಟ್ರನು ಹೇಳಿದನು: “ಸಂಜಯ! ಹಾಗೆ ವ್ಯೂಹಗಳು ಸಂಘರ್ಷಿಸಲು ಪಾರ್ಥನು ಸಂಶಪ್ತಕರೊಡನೆ ಮತ್ತು ಅವನು ಇಲ್ಲದಾಗ ಕರ್ಣನು ಪಾಂಡವರೊಡನೆ ಹೇಗೆ ಯುದ್ಧಮಾಡಿದರು?

08032002a ಏತದ್ವಿಸ್ತರತೋ ಯುದ್ಧಂ ಪ್ರಬ್ರೂಹಿ ಕುಶಲೋ ಹ್ಯಸಿ।
08032002c ನ ಹಿ ತೃಪ್ಯಾಮಿ ವೀರಾಣಾಂ ಶೃಣ್ವಾನೋ ವಿಕ್ರಮಾನ್ರಣೇ।।

ಯುದ್ಧವನ್ನು ವಿಸ್ತಾರವಾಗಿ ವರ್ಣಿಸುವುದರಲ್ಲಿ ನೀನು ಕುಶಲನಾಗಿದ್ದೀಯೆ. ರಣದಲ್ಲಿ ವೀರರ ವಿಕ್ರಮವನ್ನು ಕೇಳುವುದರಲ್ಲಿ ನನಗೆ ತೃಪ್ತಿಯೆಂಬುದೇ ಇಲ್ಲದಾಗಿದೆ!”

08032003 ಸಂಜಯ ಉವಾಚ।
08032003a ತತ್ ಸ್ಥಾನೇ ಸಮವಸ್ಥಾಪ್ಯ ಪ್ರತ್ಯಮಿತ್ರಂ ಮಹಾಬಲಂ।
08032003c ಅವ್ಯೂಹತಾರ್ಜುನೋ ವ್ಯೂಹಂ ಪುತ್ರಸ್ಯ ತವ ದುರ್ನಯೇ।।

ಸಂಜಯನು ಹೇಳಿದನು: “ನಿನ್ನ ಪುತ್ರನ ದುರ್ನೀತಿಯಿಂದಾಗಿ ರಚಿಸಿದ ವ್ಯೂಹಕ್ಕೆ ಪ್ರತಿಯಾಗಿ ಮಹಾಬಲ ಅರ್ಜುನನು ತನ್ನ ಸೇನೆಯನ್ನೂ ವ್ಯೂಹಕ್ರಮದಲ್ಲಿ ನಿಲ್ಲಿಸಿದನು.

08032004a ತತ್ಸಾದಿನಾಗಕಲಿಲಂ ಪದಾತಿರಥಸಂಕುಲಂ।
08032004c ಧೃಷ್ಟದ್ಯುಮ್ನಮುಖೈರ್ವ್ಯೂಢಮಶೋಭತ ಮಹದ್ಬಲಂ।।

ಕುದುರೆಸವಾರರು, ಗಜಸೈನಿಕರು, ಪದಾತಿಗಳು ಮತ್ತು ರಥಸಂಕುಲಗಳಿಂದ ಕೂಡಿದ್ದ ಮತ್ತು ಧೃಷ್ಟದ್ಯುಮ್ನನ ನಾಯಕತ್ವದಲ್ಲಿದ್ದ ಆ ಮಹಾಸೇನೆಯು ಶೋಭಿಸುತ್ತಿತ್ತು.

08032005a ಪಾರಾವತಸವರ್ಣಾಶ್ವಶ್ಚಂದ್ರಾದಿತ್ಯಸಮದ್ಯುತಿಃ।
08032005c ಪಾರ್ಷತಃ ಪ್ರಬಭೌ ಧನ್ವೀ ಕಾಲೋ ವಿಗ್ರಹವಾನಿವ।।

ಪಾರಿವಾಳಗಳ ಬಣ್ಣದ ಕುದುರೆಗಳನ್ನು ಹೊಂದಿದ್ದ, ಚಂದ್ರಾದಿತ್ಯ ಸಮದ್ಯುತಿ ಧನ್ವೀ ಪಾರ್ಷತ ಧೃಷ್ಟದ್ಯುಮ್ನನು ಮೂರ್ತಿಮತ್ತಾಗಿ ನಿಂತಿರುವ ಕಾಲನಂತೆಯೇ ಪ್ರಕಾಶಿಸುತ್ತಿದ್ದನು.

08032006a ಪಾರ್ಷತಂ ತ್ವಭಿ ಸಂತಸ್ಥುರ್ದ್ರೌಪದೇಯಾ ಯುಯುತ್ಸವಃ।
08032006c ಸಾನುಗಾ ಭೀಮವಪುಷಶ್ಚಂದ್ರಂ ತಾರಾಗಣಾ ಇವ।।

ಭಯಂಕರರಾಗಿ ಕಾಣುತ್ತಿದ್ದ ಯುದ್ಧೋತ್ಸುಕ ದ್ರೌಪದೇಯರು ಸೈನಿಕರೊಂದಿಗೆ ತಾರಾಗಣಗಳು ಚಂದ್ರನನ್ನು ಹೇಗೋ ಹಾಗೆ ಪಾರ್ಷತನನ್ನು ರಕ್ಷಿಸುತ್ತಿದ್ದರು.

08032007a ಅಥ ವ್ಯೂಢೇಷ್ವನೀಕೇಷು ಪ್ರೇಕ್ಷ್ಯ ಸಂಶಪ್ತಕಾನ್ರಣೇ।
08032007c ಕ್ರುದ್ಧೋಽರ್ಜುನೋಽಭಿದುದ್ರಾವ ವ್ಯಾಕ್ಷಿಪನ್ಗಾಂಡಿವಂ ಧನುಃ।।

ಹೀಗೆ ಸೇನೆಗಳನ್ನು ವ್ಯೂಹಕ್ರಮದಲ್ಲಿರಿಸಿ ಅರ್ಜುಜನು ರಣದಲ್ಲಿ ಸಂಶಪ್ತಕರನ್ನು ನೋಡಿ ಕ್ರುದ್ಧನಾಗಿ ಗಾಂಡೀವ ಧನುಸ್ಸನ್ನು ಟೇಂಕರಿಸುತ್ತಾ ಅವರನ್ನು ಆಕ್ರಮಣಿಸಿದನು.

08032008a ಅಥ ಸಂಶಪ್ತಕಾಃ ಪಾರ್ಥಮಭ್ಯಧಾವನ್ವಧೈಷಿಣಃ।
08032008c ವಿಜಯೇ ಕೃತಸಂಕಲ್ಪಾ ಮೃತ್ಯುಂ ಕೃತ್ವಾ ನಿವರ್ತನಂ।।

ಆಗ ಪಾರ್ಥನನ್ನು ವಧಿಸಲು ಬಯಸಿದ್ದ ಸಂಶಪ್ತಕರು ವಿಜಯದ ಸಂಕಲ್ಪದಿಂದ ಮೃತ್ಯುವನ್ನೇ ಹಿಂದಿರುಗುವ ಸ್ಥಾನವನ್ನಾಗಿ ಮಾಡಿಕೊಂಡು ಅವನನ್ನು ಮುತ್ತಿದರು.

08032009a ತದಶ್ವಸಂಘಬಹುಲಂ ಮತ್ತನಾಗರಥಾಕುಲಂ।
08032009c ಪತ್ತಿಮಚ್ಚೂರವೀರೌಘೈರ್ದ್ರುತಮರ್ಜುನಮಾದ್ರವತ್।।

ಅನೇಕ ಅಶ್ವಸಂಘಗಳನ್ನೂ, ಮದಿಸಿದ ಆನೆಗಳ ಸಂಕುಲಗಳನ್ನೂ, ಶೂರ ಪದಾತಿಸೈನಿಕರನ್ನೂ ಹೊಂದಿದ್ದ ಆ ಸೇನೆಯು ಅರ್ಜುನನನ್ನು ಆಕ್ರಮಣಿಸಿತು.

08032010a ಸ ಸಂಪ್ರಹಾರಸ್ತುಮುಲಸ್ತೇಷಾಮಾಸೀತ್ ಕಿರೀಟಿನಾ।
08032010c ತಸ್ಯೈವ ನಃ ಶ್ರುತೋ ಯಾದೃಂ ನಿವಾತಕವಚೈಃ ಸಹ।।

ನಿವಾತಕವಚರೊಡನೆ ಕಿರೀಟಿಯ ಯುದ್ಧವಾಯಿತೆಂದು ನಾವು ಏನನ್ನು ಕೇಳಿದ್ದೆವೋ ಅದರಂತೆ ಈಗ ಅವನ ಮತ್ತು ಸಂಶಪ್ತಕಸೇನೆಗಳ ನಡುವೆ ತುಮುಲ ಪ್ರಹಾರಗಳು ನಡೆದವು.

08032011a ರಥಾನಶ್ವಾನ್ ಧ್ವಜಾನ್ನಾಗಾನ್ಪತ್ತೀನ್ರಥಪತೀನಪಿ।
08032011c ಇಷೂನ್ಧನೂಂಷಿ ಖಡ್ಗಾಂಶ್ಚ ಚಕ್ರಾಣಿ ಚ ಪರಶ್ವಧಾನ್।।
08032012a ಸಾಯುಧಾನುದ್ಯತಾನ್ಬಾಹೂನುದ್ಯತಾನ್ಯಾಯುಧಾನಿ ಚ।
08032012c ಚಿಚ್ಚೇದ ದ್ವಿಷತಾಂ ಪಾರ್ಥಃ ಶಿರಾಂಸಿ ಚ ಸಹಸ್ರಶಃ।।

ಆಗ ಅರ್ಜುನನು ಸಹಸ್ರಾರು ಸಂಖ್ಯೆಗಳಲ್ಲಿ ಶತ್ರುಗಳ ರಥಗಳನ್ನೂ, ಕುದುರೆಗಳನ್ನೂ, ಧ್ವಜಗಳನ್ನೂ, ಆನೆಗಳನ್ನೂ, ಪದಾತಿಗಳನ್ನೂ, ರಥಪತಿಗಳನ್ನೂ, ಬಾಣಗಳನ್ನೂ, ಧನುಸ್ಸುಗಳನ್ನೂ, ಖಡ್ಗಗಳನ್ನೂ, ಚಕ್ರಗಳನ್ನೂ, ಪರಶ್ವಾಯುಧಗಳನ್ನೂ, ಆಯುಧಗಳನ್ನು ಮೇಲಿತ್ತಿದ್ದ ಬಾಹುಗಳನ್ನೂ, ಮೇಲೆತ್ತಿದ್ದ ಆಯುಧಗಳನ್ನೂ, ಶಿರಗಳನ್ನೂ ತುಂಡರಿಸಿದನು.

08032013a ತಸ್ಮಿನ್ ಸೈನ್ಯೇ ಮಹಾವರ್ತೇ ಪಾತಾಲಾವರ್ತಸನ್ನಿಭೇ।
08032013c ನಿಮಗ್ನಂ ತಂ ರಥಂ ಮತ್ವಾ ನೇದುಃ ಸಂಶಪ್ತಕಾ ಮುದಾ।।

ಪಾತಾಳದ ಸುಳಿಯಂತಿದ್ದ ಆ ಸೇನೆಯ ಸುಳಿಯೊಳಗೆ ಸಿಲುಕಿದ್ದ ಅವನ ರಥವು ಮುಳುಗಿಹೋಯಿತೆಂದು ತಿಳಿದು ಸಂಶಪ್ತಕರು ಸಂತೋಷದಿಂದ ಸಿಂಹನಾದಗೈದರು.

08032014a ಸ ಪುರಸ್ತಾದರೀನ್ ಹತ್ವಾ ಪಶ್ಚಾರ್ಧೇನೋತ್ತರೇಣ ಚ।
08032014c ದಕ್ಷಿಣೇನ ಚ ಬೀಭತ್ಸುಃ ಕ್ರುದ್ಧೋ ರುದ್ರಃ ಪಶೂನಿವ।।

ಕ್ರುದ್ಧ ರುದ್ರನು ಪಶುಗಳನ್ನು ಹೇಗೋ ಹಾಗೆ ಬೀಭತ್ಸುವು ಪೂರ್ವದಿಕ್ಕಿನಲ್ಲಿದ್ದ ಶತ್ರುಗಳನ್ನು ಸಂಹರಿಸಿ, ಉತ್ತರ-ದಕ್ಷಿಣ-ಪಶ್ಚಿಮದಿಕ್ಕುಗಳಲ್ಲಿದ್ದವರನ್ನೂ ಸಂಹರಿಸಿದನು.

08032015a ಅಥ ಪಾಂಚಾಲಚೇದೀನಾಂ ಸೃಂಜಯಾನಾಂ ಚ ಮಾರಿಷ।
08032015c ತ್ವದೀಯೈಃ ಸಹ ಸಂಗ್ರಾಮ ಆಸೀತ್ಪರಮದಾರುಣಃ।।

ಮಾರಿಷ! ಅದೇ ಸಮಯದಲ್ಲಿ ನಿನ್ನವರೊಡನೆ ಪಾಂಚಾಲ-ಚೇದಿ-ಸೃಂಜಯರ ಪರಮದಾರುಣ ಸಂಗ್ರಾಮವು ನಡೆಯಿತು.

08032016a ಕೃಪಶ್ಚ ಕೃತವರ್ಮಾ ಚ ಶಕುನಿಶ್ಚಾಪಿ ಸೌಬಲಃ।
08032016c ಹೃಷ್ಟಸೇನಾಃ ಸುಸಂರಬ್ಧಾ ರಥಾನೀಕೈಃ ಪ್ರಹಾರಿಣಃ।।
08032017a ಕೋಸಲೈಃ ಕಾಶಿಮತ್ಸ್ಯೈಶ್ಚ ಕಾರೂಷೈಃ ಕೇಕಯೈರಪಿ।
08032017c ಶೂರಸೇನೈಃ ಶೂರವೀರೈರ್ಯುಯುಧುರ್ಯುದ್ಧದುರ್ಮದಾಃ।।

ಯುದ್ಧದುರ್ಮದ ಕೃಪ-ಕೃತವರ್ಮ-ಸೌಬಲ ಶಕುನಿಯರು ಹೃಷ್ಟರೂ ಕುಪಿತರೂ ಆಗಿದ್ದ ರಥಸೇನೆಗಳನ್ನು ಧ್ವಂಸಗೊಳಿಸಬಲ್ಲ ವೀರ ಸೇನೆಗಳೊಂದಿಗೆ ಕೋಸಲ-ಕಾಶಿ-ಮತ್ಸ್ಯ-ಕರೂಷ-ಕೇಕಯ-ಶೂರಸೇನೆಗಳೊಡನೆ ಯುದ್ಧದಲ್ಲಿ ತೊಡಗಿದರು.

08032018a ತೇಷಾಮಂತಕರಂ ಯುದ್ಧಂ ದೇಹಪಾಪ್ಮಪ್ರಣಾಶನಂ।
08032018c ಶೂದ್ರವಿಟ್ಕ್ಷತ್ರವೀರಾಣಾಂ ಧರ್ಮ್ಯಂ ಸ್ವರ್ಗ್ಯಂ ಯಶಸ್ಕರಂ।।

ಅವರ ಆ ಅಂತ್ಯಕರ ಯುದ್ಧವು ಶೂದ್ರ-ವೈಶ್ಯ-ಕ್ಷತ್ರಿಯ ವೀರರ ದೇಹ-ಪಾಪ-ಪ್ರಾಣಾಪಹಾರಕವೂ ಧರ್ಮಸಮ್ಮತವೂ ಸ್ವರ್ಗಪ್ರಾಪಕವೂ ಯಶಸ್ಕರವೂ ಆಗಿತ್ತು.

08032019a ದುರ್ಯೋಧನೋಽಪಿ ಸಹಿತೋ ಭ್ರಾತೃಭಿರ್ಭರತರ್ಷಭ।
08032019c ಗುಪ್ತಃ ಕುರುಪ್ರವೀರೈಶ್ಚ ಮದ್ರಾಣಾಂ ಚ ಮಹಾರಥೈಃ।।
08032020a ಪಾಂಡವೈಃ ಸಹಪಾಂಚಾಲೈಶ್ಚೇದಿಭಿಃ ಸಾತ್ಯಕೇನ ಚ।
08032020c ಯುಧ್ಯಮಾನಂ ರಣೇ ಕರ್ಣಂ ಕುರುವೀರೋಽಭ್ಯಪಾಲಯತ್।।

ಭರತರ್ಷಭ! ಸಹೋದರರಿಂದೊಡಗೂಡಿದ ಕುರುವೀರ ದುರ್ಯೋಧನನು ಕೂಡ ಕುರುಪ್ರವೀರರಿಂದ ಮತ್ತು ಮದ್ರ ಮಹಾರಥರಿಂದ ರಕ್ಷಿತನಾಗಿ, ಪಾಂಚಾಲ-ಚೇದಿಗಳೊಂದಿಗೆ ಮತ್ತು ಸಾತ್ಯಕಿ-ಪಾಂಡವರೊಂದಿಗೆ ರಣದಲ್ಲಿ ಯುದ್ಧಮಾಡುತ್ತಿದ್ದ ಕರ್ಣನನ್ನು ರಕ್ಷಿಸುತ್ತಿದ್ದನು.

08032021a ಕರ್ಣೋಽಪಿ ನಿಶಿತೈರ್ಬಾಣೈರ್ವಿನಿಹತ್ಯ ಮಹಾಚಮೂಂ।
08032021c ಪ್ರಮೃದ್ಯ ಚ ರಥಶ್ರೇಷ್ಠಾನ್ಯುಧಿಷ್ಠಿರಮಪೀಡಯತ್।।

ಕರ್ಣನಾದರೋ ನಿಶಿತಬಾಣಗಳಿಂದ ಮಹಾಸೇನೆಯನ್ನು ಸಂಹರಿಸಿ ರಥಶ್ರೇಷ್ಠರನ್ನು ಸದೆಬಡಿದು ಯುಧಿಷ್ಠಿರನನ್ನು ಪೀಡಿಸಿದನು.

08032022a ವಿಪತ್ರಾಯುಧದೇಹಾಸೂನ್ ಕೃತ್ವಾ ಶತ್ರೂನ್ಸಹಸ್ರಶಃ।
08032022c ಯುಕ್ತ್ವಾ ಸ್ವರ್ಗಯಶೋಭ್ಯಾಂ ಚ ಸ್ವೇಭ್ಯೋ ಮುದಮುದಾವಹತ್।।

ಕರ್ಣನು ಸಾವಿರಾರು ಶತ್ರುಗಳನ್ನು ಅಸ್ತ್ರ-ಆಯುಧ-ದೇಹ-ಪ್ರಾಣಗಳಿಂದ ವಿಹೀನರನ್ನಾಗಿಸಿ ಅವರಿಗೆ ಸ್ವರ್ಗ-ಯಶಸ್ಸುಗಳು ದೊರಕುವಂತೆ ಮಾಡಿ ತನ್ನವರಿಗೆ ಮಹಾನಂದವನ್ನುಂಟುಮಾಡಿದನು.

08032023 ಧೃತರಾಷ್ಟ್ರ ಉವಾಚ।
08032023a ಯತ್ತತ್ ಪ್ರವಿಶ್ಯ ಪಾರ್ಥಾನಾಂ ಸೇನಾಂ ಕುರ್ವಂ ಜನಕ್ಷಯಂ।
08032023c ಕರ್ಣೋ ರಾಜಾನಮಭ್ಯರ್ಚ್ಚತ್ತನ್ ಮಮಾಚಕ್ಷ್ವ ಸಂಜಯ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ಕರ್ಣನು ಪಾರ್ಥರ ಸೇನೆಯನ್ನು ಪ್ರವೇಶಿಸಿ ಜನಕ್ಷಯಗೈದು ಹೇಗೆ ರಾಜಾ ಯುಧಿಷ್ಠಿರನನ್ನು ಆಕ್ರಮಣಿಸಿದನು ಎನ್ನುವುದನ್ನು ನನಗೆ ಹೇಳು!

08032024a ಕೇ ಚ ಪ್ರವೀರಾಃ ಪಾರ್ಥಾನಾಂ ಯುಧಿ ಕರ್ಣಮವಾರಯನ್।
08032024c ಕಾಂಶ್ಚ ಪ್ರಮಥ್ಯಾಧಿರಥಿರ್ಯುಧಿಷ್ಠಿರಮಪೀಡಯತ್।।

ಯುದ್ಧದಲ್ಲಿ ಪಾರ್ಥರ ಯಾರ್ಯಾರು ಪ್ರವೀರರು ಕರ್ಣನನ್ನು ತಡೆದರು? ಯಾರನ್ನು ಸದೆಬಡಿದು ಆಧಿರಥಿಯು ಯುಧಿಷ್ಠಿರನನ್ನು ಪೀಡಿಸಿದನು?”

08032025 ಸಂಜಯ ಉವಾಚ।
08032025a ಧೃಷ್ಟದ್ಯುಮ್ನಮುಖಾನ್ಪಾರ್ಥಾನ್ದೃಷ್ಟ್ವಾ ಕರ್ಣೋ ವ್ಯವಸ್ಥಿತಾನ್।
08032025c ಸಮಭ್ಯಧಾವತ್ತ್ವರಿತಃ ಪಾಂಚಾಲಾಂ ಶತ್ರುಕರ್ಶನಃ।।

ಸಂಜಯನು ಹೇಳಿದನು: “ಧೃಷ್ಟದ್ಯುಮ್ನನ ನಾಯಕತ್ವದಲ್ಲಿ ವ್ಯವಸ್ಥಿತರಾಗಿದ್ದ ಪಾರ್ಥರನ್ನು ನೋಡಿ ಶತ್ರುಕರ್ಶನ ಕರ್ಣನು ತ್ವರೆಮಾಡಿ ಪಾಂಚಾಲರನ್ನು ಆಕ್ರಮಣಿಸಿದನು.

08032026a ತಂ ತೂರ್ಣಮಭಿಧಾವಂತಂ ಪಾಂಚಾಲಾ ಜಿತಕಾಶಿನಃ।
08032026c ಪ್ರತ್ಯುದ್ಯಯುರ್ಮಹಾರಾಜ ಹಂಸಾ ಇವ ಮಹಾರ್ಣವಂ।।

ಮಹಾರಾಜ! ವಿಜಯಾಕಾಂಕ್ಷಿ ಪಾಂಚಾಲರು ವೇಗದಲ್ಲಿ ಬರುತ್ತಿದ್ದ ಕರ್ಣನನ್ನು ಸಾಗರವನ್ನು ಸೇರುವ ಹಂಸಗಳಂತೆ ರಭಸದಿಂದ ಆಕ್ರಮಣಿಸಿದರು.

08032027a ತತಃ ಶಂಖಸಹಸ್ರಾಣಾಂ ನಿಸ್ವನೋ ಹೃದಯಂಗಮಃ।
08032027c ಪ್ರಾದುರಾಸೀದುಭಯತೋ ಭೇರೀಶಬ್ದಶ್ಚ ದಾರುಣಃ।।

ಆಗ ಸಹಸ್ರಾರು ಶಂಖಗಳ ಹೃದಯಂಗಮ ಧ್ವನಿಯುಂಟಾಯಿತು. ಎರಡೂ ಕಡೆಗಳಿಂದ ಭೇರಿಗಳ ದಾರುಣ ಶಬ್ಧವು ಕೇಳಿಬಂದಿತು.

08032028a ನಾನಾವಾದಿತ್ರನಾದಶ್ಚ ದ್ವಿಪಾಶ್ವರಥನಿಸ್ವನಃ।
08032028c ಸಿಂಹನಾದಶ್ಚ ವೀರಾಣಾಮಭವದ್ದಾರುಣಸ್ತದಾ।।

ಆಗ ನಾನಾ ವಾದ್ಯಗಳ ನಾದಗಳು, ಆನೆ-ಕುದುರೆ-ರಥಗಳ ನಿಸ್ವನಗಳು, ವೀರರ ಸಿಂಹನಾದಗಳು ದಾರುಣವಾಗಿದ್ದವು.

08032029a ಸಾದ್ರಿದ್ರುಮಾರ್ಣವಾ ಭೂಮಿಃ ಸವಾತಾಂಬುದಮಂಬರಂ।
08032029c ಸಾರ್ಕೇಂದುಗ್ರಹನಕ್ಷತ್ರಾ ದ್ಯೌಶ್ಚ ವ್ಯಕ್ತಂ ವ್ಯಘೂರ್ಣತ।।

ಪರ್ವತ-ವೃಕ್ಷ-ಸಾಗರಗಳಿಂದ ಕೂಡಿದ ಭೂಮಿ, ಗಾಳಿ-ಮೇಘಗಳಿಂದ ಕೂಡಿದ ಆಕಾಶ ಮತ್ತು ಸೂರ್ಯ-ಚಂದ್ರ-ಗ್ರಹ-ನಕ್ಷತ್ರಗಳಿಂದ ಕೂಡಿದ ಆಕಾಶ ಎಲ್ಲವೂ ತಿರುಗುತ್ತಿರುವವೋ ಎನ್ನುವಂತೆ ಕಾಣುತ್ತಿತ್ತು.

08032030a ಅತಿ ಭೂತಾನಿ ತಂ ಶಬ್ದಂ ಮೇನಿರೇಽತಿ ಚ ವಿವ್ಯಥುಃ।
08032030c ಯಾನಿ ಚಾಪ್ಲವಸತ್ತ್ವಾನಿ ಪ್ರಾಯಸ್ತಾನಿ ಮೃತಾನಿ ಚ।।

ಆ ಶಬ್ಧವನ್ನು ಕೇಳಿದ ಸರ್ವಭೂತಗಳೂ ವ್ಯಥೆಗೊಂಡವು. ಅಲ್ಪಸತ್ತ್ವವುಳ್ಳ ಪ್ರಾಣಿಗಳು ಅದನ್ನು ಕೇಳಿ ಪ್ರಾಯಶಃ ಸತ್ತೇ ಹೋದವು.

08032031a ಅಥ ಕರ್ಣೋ ಭೃಶಂ ಕ್ರುದ್ಧಃ ಶೀಘ್ರಮಸ್ತ್ರಮುದೀರಯನ್।
08032031c ಜಘಾನ ಪಾಂಡವೀಂ ಸೇನಾಮಾಸುರೀಂ ಮಘವಾನಿವ।।

ಆಗ ಕರ್ಣನು ಅತಿಕುಪಿತನಾಗಿ ಶೀಘ್ರವಾಗಿ ಅಸ್ತ್ರಗಳನ್ನು ಪ್ರಯೋಗಿಸಿ ಪಾಂಡವ ಸೇನೆಯನ್ನು ಇಂದ್ರನು ಅಸುರೀ ಸೇನೆಯನ್ನು ಹೇಗೋ ಹಾಗೆ ಸಂಹರಿಸಿದನು.

08032032a ಸ ಪಾಂಡವರಥಾಂಸ್ತೂರ್ಣಂ ಪ್ರವಿಶ್ಯ ವಿಸೃಜಂ ಶರಾನ್।
08032032c ಪ್ರಭದ್ರಕಾಣಾಂ ಪ್ರವರಾನಹನತ್ ಸಪ್ತಸಪ್ತತಿಂ।।

ಅವನ ವೇಗದಿಂದ ಪಾಂಡವ ರಥಸೇನೆಯನ್ನು ಪ್ರವೇಶಿಸಿ, ಶರಗಳನ್ನು ಪ್ರಯೋಗಿಸುತ್ತಾ ಎಪ್ಪತ್ತೇಳು ಪ್ರಭದ್ರಕ ವೀರರನ್ನು ಸಂಹರಿಸಿದನು.

08032033a ತತಃ ಸುಪುಂಖೈರ್ನಿಶಿತೈ ರಥಶ್ರೇಷ್ಠೋ ರಥೇಷುಭಿಃ।
08032033c ಅವಧೀತ್ ಪಂಚವಿಂಶತ್ಯಾ ಪಾಂಚಾಲಾನ್ ಪಂಚವಿಂಶತಿಂ।।

ಅನಂತರ ಆ ರಥಶ್ರೇಷ್ಠನು ಸುಂದರ ಪುಂಖಗಳುಳ್ಳ ಇಪ್ಪತ್ತೈದು ನಿಶಿತ ಬಾಣಗಳಿಂದ ಇಪ್ಪತ್ತೈದು ಪಾಂಚಾಲರನ್ನು ವಧಿಸಿದನು.

08032034a ಸುವರ್ಣಪುಂಖೈರ್ನಾರಾಚೈಃ ಪರಕಾಯವಿದಾರಣೈಃ।
08032034c ಚೇದಿಕಾನವಧೀದ್ವೀರಃ ಶತಶೋಽಥ ಸಹಸ್ರಶಃ।।

ಆ ವೀರನು ಸುವರ್ಣಪುಂಖಗಳುಳ್ಳ ಶತ್ರುಗಳ ದೇಹವನ್ನು ಸೀಳಬಲ್ಲ ನಾರಾಚಗಳಿಂದ ನೂರಾರು ಸಹಸ್ರಾರು ಚೇದಿವೀರರನ್ನು ಸಂಹರಿಸಿದನು.

08032035a ತಂ ತಥಾ ಸಮರೇ ಕರ್ಮ ಕುರ್ವಾಣಮತಿಮಾನುಷಂ।
08032035c ಪರಿವವ್ರುರ್ಮಹಾರಾಜ ಪಾಂಚಾಲಾನಾಂ ರಥವ್ರಜಾಃ।।

ಮಹಾರಾಜ! ಆ ಸಮರದಲ್ಲಿ ಅತಿಮಾನುಷ ಕರ್ಮಗಳನ್ನೆಸಗುತ್ತಿದ್ದ ಕರ್ಣನನ್ನು ಪಾಂಚಾಲರ ರಥಗುಂಪುಗಳು ಸುತ್ತುವರೆದವು.

08032036a ತತಃ ಸಂಧಾಯ ವಿಶಿಖಾನ್ಪಂಚ ಭಾರತ ದುಃಸಹಾನ್।
08032036c ಪಾಂಚಾಲಾನವಧೀತ್ಪಂಚ ಕರ್ಣೋ ವೈಕರ್ತನೋ ವೃಷಃ।।

ಭಾರತ! ಆಗ ವೈಕರ್ತನ ವೃಷ ಕರ್ಣನು ಐದು ಸಹಿಸಲಸಾಧ್ಯ ವಿಶಿಖಗಳನ್ನು ಹೂಡಿ ಐವರು ಪಾಂಚಾಲರನ್ನು ವಧಿಸಿದನು.

08032037a ಭಾನುದೇವಂ ಚಿತ್ರಸೇನಂ ಸೇನಾಬಿಂದುಂ ಚ ಭಾರತ।
08032037c ತಪನಂ ಶೂರಸೇನಂ ಚ ಪಾಂಚಾಲಾನವಧೀದ್ರಣೇ।।

ಭಾರತ! ಭಾನುದೇವ, ಚಿತ್ರಸೇನ, ಸೇನಾಬಿಂದು, ತಪನ ಮತ್ತು ಶೂರಸೇನ – ಈ ಐವರು ಪಾಂಚಾಲರನ್ನು ಅವನು ರಣದಲ್ಲಿ ಸಂಹರಿಸಿದನು.

08032038a ಪಾಂಚಾಲೇಷು ಚ ಶೂರೇಷು ವಧ್ಯಮಾನೇಷು ಸಾಯಕೈಃ।
08032038c ಹಾಹಾಕಾರೋ ಮಹಾನಾಸೀತ್ಪಾಂಚಾಲಾನಾಂ ಮಹಾಹವೇ।।

ಸಾಯಕಗಳಿಂದ ಪಾಂಚಾಲ ಶೂರರು ವಧಿಸಲ್ಪಡಲು ಮಹಾಹವದಲ್ಲಿ ಪಾಂಚಾಲರ ಮಹಾ ಹಾಹಾಕಾರವುಂಟಾಯಿತು.

08032039a ತೇಷಾಂ ಸಂಕೀರ್ಯಮಾಣಾನಾಂ ಹಾಹಾಕಾರಕೃತಾ ದಿಶಃ।
08032039c ಪುನರೇವ ಚ ತಾನ್ಕರ್ಣೋ ಜಘಾನಾಶು ಪತತ್ರಿಭಿಃ।।

ಹಾಹಾಕಾರಮಾಡುತ್ತಾ ದಿಕ್ಕುಗಳಲ್ಲಿ ಸೇರುತ್ತಿದ್ದ ಅವರನ್ನು ಕರ್ಣನು ಪುನಃ ಪತತ್ರಿಭಿಗಳಿಂದ ಸಂಹರಿಸಿದನು.

08032040a ಚಕ್ರರಕ್ಷೌ ತು ಕರ್ಣಸ್ಯ ಪುತ್ರೌ ಮಾರಿಷ ದುರ್ಜಯೌ।
08032040c ಸುಷೇಣಃ ಸತ್ಯಸೇನಶ್ಚ ತ್ಯಕ್ತ್ವಾ ಪ್ರಾಣಾನಯುಧ್ಯತಾಂ।।

ಮಾರಿಷ! ಕರ್ಣನ ಪುತ್ರರಾದ ಸುಷೇಣ-ಸತ್ಯಸೇನರು ಅವನ ಚಕ್ರರಕ್ಷಕರಾಗಿದ್ದು, ಪ್ರಾಣಗಳನ್ನೂ ಪಣವನ್ನಾಗಿಟ್ಟು ಹೋರಾಡುತ್ತಿದ್ದರು.

08032041a ಪೃಷ್ಠಗೋಪಸ್ತು ಕರ್ಣಸ್ಯ ಜ್ಯೇಷ್ಠಃ ಪುತ್ರೋ ಮಹಾರಥಃ।
08032041c ವೃಷಸೇನಃ ಸ್ವಯಂ ಕರ್ಣಂ ಪೃಷ್ಠತಃ ಪರ್ಯಪಾಲಯತ್।।

ಕರ್ಣನ ಹಿಂಭಾಗದ ರಕ್ಷಕನಾಗಿದ್ದ ಅವನ ಜ್ಯೇಷ್ಠ ಪುತ್ರ ಮಹಾರಥ ವೃಷಸೇನನು ಸ್ವಯಂ ಕರ್ಣನನ್ನು ಹಿಂದಿನಿಂದ ರಕ್ಷಿಸುತ್ತಿದ್ದನು.

08032042a ಧೃಷ್ಟದ್ಯುಮ್ನಃ ಸಾತ್ಯಕಿಶ್ಚ ದ್ರೌಪದೇಯಾ ವೃಕೋದರಃ।
08032042c ಜನಮೇಜಯಃ ಶಿಖಂಡೀ ಚ ಪ್ರವೀರಾಶ್ಚ ಪ್ರಭದ್ರಕಾಃ।।
08032043a ಚೇದಿಕೇಕಯಪಾಂಚಾಲಾ ಯಮೌ ಮತ್ಸ್ಯಾಶ್ಚ ದಂಶಿತಾಃ।
08032043c ಸಮಭ್ಯಧಾವನ್ರಾಧೇಯಂ ಜಿಘಾಂಸಂತಃ ಪ್ರಹಾರಿಣಃ।।

ಆಗ ಪ್ರಹಾರಿಗಳೂ ಕವಚಧಾರಿಗಳೂ ಆದ ಧೃಷ್ಟದ್ಯುಮ್ನ, ಸಾತ್ಯಕಿ, ದ್ರೌಪದೇಯರು, ವೃಕೋದರ, ಜನಮೇಜಯ, ಶಿಖಂಡೀ ಮತ್ತು ಪ್ರಭದ್ರಕ ಪ್ರವೀರರು, ಚೇದಿ-ಕೇಕಯ-ಪಾಂಚಾಲರು, ನಕುಲ-ಸಹದೇವರು ಮತ್ತು ಮತ್ಸ್ಯರು ರಾಧೇಯನನ್ನು ಕೊಲ್ಲಲು ಬಯಸಿ ಅವನನ್ನು ಸುತ್ತುವರೆದರು.

08032044a ತ ಏನಂ ವಿವಿಧೈಃ ಶಸ್ತ್ರೈಃ ಶರಧಾರಾಭಿರೇವ ಚ।
08032044c ಅಭ್ಯವರ್ಷನ್ವಿಮೃದ್ನಂತಃ ಪ್ರಾವೃಷೀವಾಂಬುದಾ ಗಿರಿಂ।।

ಮೋಡಗಳು ಗಿರಿಯನ್ನು ಮಳೆಯಿಂದ ಹೇಗೋ ಹಾಗೆ ಅವರು ಕರ್ಣನ ಮೇಲೆ ವಿವಿಧ ಶಸ್ತ್ರಗಳು ಮತ್ತು ಶರಧಾರೆಗಳನ್ನು ಸುರಿಸಿ ಅಭಿಷೇಚಿಸಿದರು.

08032045a ಪಿತರಂ ತು ಪರೀಪ್ಸಂತಃ ಕರ್ಣಪುತ್ರಾಃ ಪ್ರಹಾರಿಣಃ।
08032045c ತ್ವದೀಯಾಶ್ಚಾಪರೇ ರಾಜನ್ವೀರಾ ವೀರಾನವಾರಯನ್।।

ರಾಜನ್! ತಂದೆಯನ್ನು ರಕ್ಷಿಸಲೋಸುಗ ಪ್ರಹಾರಿಗಳಾದ ವೀರ ಕರ್ಣಪುತ್ರರು ನಿನ್ನಕಡೆಯ ಇತರರೊಂದಿಗೆ ವೀರರನ್ನು ತಡೆದರು.

08032046a ಸುಷೇಣೋ ಭೀಮಸೇನಸ್ಯ ಚಿತ್ತ್ವಾ ಭಲ್ಲೇನ ಕಾರ್ಮುಕಂ।
08032046c ನಾರಾಚೈಃ ಸಪ್ತಭಿರ್ವಿದ್ಧ್ವಾ ಹೃದಿ ಭೀಮಂ ನನಾದ ಹ।।

ಸುಷೇಣನು ಭಲ್ಲದಿಂದ ಭೀಮಸೇನನ ಧನುಸ್ಸನ್ನು ಕತ್ತರಿಸಿ, ಏಳು ನಾರಾಚಗಳಿಂದ ಭೀಮನ ಎದೆಗೆ ಹೊಡೆದು ಸಿಂಹನಾದಗೈದನು.

08032047a ಅಥಾನ್ಯದ್ಧನುರಾದಾಯ ಸುದೃಢಂ ಭೀಮವಿಕ್ರಮಃ।
08032047c ಸಜ್ಯಂ ವೃಕೋದರಃ ಕೃತ್ವಾ ಸುಷೇಣಸ್ಯಾಚ್ಚಿನದ್ಧನುಃ।।

ಕೂಡಲೇ ಭೀಮವಿಕ್ರಮ ವೃಕೋದರನು ಇನ್ನೊಂದು ದೃಢ ಧನುಸ್ಸನ್ನು ಎತ್ತಿಕೊಂಡು ಸಜ್ಜುಗೊಳಿಸಿ ಸುಷೇಣನ ಧನುಸ್ಸನ್ನು ತುಂಡರಿಸಿದನು.

08032048a ವಿವ್ಯಾಧ ಚೈನಂ ನವಭಿಃ ಕ್ರುದ್ಧೋ ನೃತ್ಯನ್ನಿವೇಷುಭಿಃ।
08032048c ಕರ್ಣಂ ಚ ತೂರ್ಣಂ ವಿವ್ಯಾಧ ತ್ರಿಸಪ್ತತ್ಯಾ ಶಿತೈಃ ಶರೈಃ।।

ಕೂಡಲೇ ಭೀಮನು ಕ್ರುದ್ಧನಾಗಿ ನರ್ತಿಸುತ್ತಿರುವನೋ ಎನ್ನುವಂತೆ ಕರ್ಣನನ್ನು ಎಪ್ಪತ್ಮೂರು ಬಾಣಗಳಿಂದ ಪ್ರಹರಿಸಿದನು.

08032049a ಸತ್ಯಸೇನಂ ಚ ದಶಭಿಃ ಸಾಶ್ವಸೂತಧ್ವಜಾಯುಧಂ।
08032049c ಪಶ್ಯತಾಂ ಸುಹೃದಾಂ ಮಧ್ಯೇ ಕರ್ಣಪುತ್ರಮಪಾತಯತ್।।

ಸುಹೃದಯರ ಮಧ್ಯದಲ್ಲಿ ಅವರು ನೋಡುತ್ತಿರುವಂತೆಯೇ ಭೀಮನು ಹತ್ತು ಬಾಣಗಳಿಂದ ಕುದುರೆ-ಸಾರಥಿ-ಧ್ವಜ-ಆಯುಧಗಳೊಡನೆ ಕರ್ಣಪುತ್ರ ಸತ್ಯಸೇನನನ್ನು ಬೀಳಿಸಿದನು.

08032050a ಕ್ಷುರಪ್ರಣುನ್ನಂ ತತ್ತಸ್ಯ ಶಿರಶ್ಚಂದ್ರನಿಭಾನನಂ।
08032050c ಶುಭದರ್ಶನಮೇವಾಸೀನ್ನಾಲಭ್ರಷ್ಟಮಿವಾಂಬುಜಂ।।

ಕ್ಷುರದಿಂದ ಕತ್ತರಿಸಲ್ಪಟ್ಟ ಅವನ ಚಂದ್ರನಿಭಾನನ ಶಿರವು ನಾಳದಿಂದ ಬೇರ್ಪಡಿಸಲ್ಪಟ್ಟ ಕಮಲದಂತೆ ಸುಂದರವಾಗಿ ಕಾಣುತ್ತಿತ್ತು.

08032051a ಹತ್ವಾ ಕರ್ಣಸುತಂ ಭೀಮಸ್ತಾವಕಾನ್ಪುನರಾರ್ದಯತ್।
08032051c ಕೃಪಹಾರ್ದಿಕ್ಯಯೋಶ್ಚಿತ್ತ್ವಾ ಚಾಪೇ ತಾವಪ್ಯಥಾರ್ದಯತ್।।

ಕರ್ಣಸುತನನ್ನು ಸಂಹರಿಸಿ ಭೀಮನು ಪುನಃ ನಿನ್ನವರನ್ನು ಆಕ್ರಮಣಿಸಿದನು. ಕೃಪ ಮತ್ತು ಹಾರ್ದಿಕ್ಯರ ಬಿಲ್ಲುಗಳನ್ನು ತುಂಡರಿಸಿ ಅವರನ್ನು ಪುನಃ ಪ್ರಹರಿಸಿದನು.

08032052a ದುಃಶಾಸನಂ ತ್ರಿಭಿರ್ವಿದ್ಧ್ವಾ ಶಕುನಿಂ ಷಡ್ಭಿರಾಯಸೈಃ।
08032052c ಉಲೂಕಂ ಚ ಪತತ್ರಿಂ ಚ ಚಕಾರ ವಿರಥಾವುಭೌ।।

ದುಃಶಾಸನನ್ನು ಮೂರು ಬಾಣಗಳಿಂದ ಮತ್ತು ಶಕುನಿಯನ್ನು ಆರು ಆಯಸಗಳಿಂದ ಹೊಡೆದು ಉಲೂಕ ಮತ್ತು ಪತತ್ರಿಯರನ್ನು ವಿರಥರನ್ನಾಗಿಸಿದನು.

08032053a ಹೇ ಸುಷೇಣ ಹತೋಽಸೀತಿ ಬ್ರುವನ್ನಾದತ್ತ ಸಾಯಕಂ।
08032053c ತಮಸ್ಯ ಕರ್ಣಶ್ಚಿಚ್ಚೇದ ತ್ರಿಭಿಶ್ಚೈನಮತಾಡಯತ್।।

“ಹೇ ಸುಷೇಣ! ನೀನೀಗ ಹತನಾದೆ!” ಎಂದು ಹೇಳುತ್ತಾ ಭೀಮನು ಸಾಯಕವನ್ನು ಹಿಡಿದು ಪ್ರಯೋಗಿಸಲು ಕರ್ಣನು ಅದನ್ನು ತುಂಡರಿಸಿ ಮೂರು ಬಾಣಗಳಿಂದ ಭೀಮನನ್ನು ಹೊಡೆದನು.

08032054a ಅಥಾನ್ಯಮಪಿ ಜಗ್ರಾಹ ಸುಪರ್ವಾಣಂ ಸುತೇಜನಂ।
08032054c ಸುಷೇಣಾಯಾಸೃಜದ್ಭೀಮಸ್ತಮಪ್ಯಸ್ಯಾಚ್ಚಿನದ್ವೃಷಃ।।

ಆಗ ಭೀಮನು ಇನ್ನೊಂದು ಸುಪರ್ವಣ ಸುತೇಜನ ಬಾಣವನ್ನು ತೆಗೆದು ಸುಷೇಣನ ಮೇಲೆ ಪ್ರಯೋಗಿಸಲು ವೃಷ ಕರ್ಣನು ಅದನ್ನೂ ತುಂಡರಿಸಿದನು.

08032055a ಪುನಃ ಕರ್ಣಸ್ತ್ರಿಸಪ್ತತ್ಯಾ ಭೀಮಸೇನಂ ರಥೇಷುಭಿಃ।
08032055c ಪುತ್ರಂ ಪರೀಪ್ಸನ್ವಿವ್ಯಾಧ ಕ್ರೂರಂ ಕ್ರೂರೈರ್ಜಿಘಾಂಸಯಾ।।

ಪುತ್ರನನ್ನು ರಕ್ಷಿಸಲೋಸುಗ ಮತ್ತು ಕ್ರೂರ ಭೀಮಸೇನನನ್ನು ವಧಿಸಲು ಬಯಸಿದ ಕರ್ಣನು ಪುನಃ ಎಪ್ಪತ್ಮೂರು ಕ್ರೂರ ರಥೇಷುಗಳಿಂದ ಪ್ರಹರಿಸಿದನು.

08032056a ಸುಷೇಣಸ್ತು ಧನುರ್ಗೃಹ್ಯ ಭಾರಸಾಧನಮುತ್ತಮಂ।
08032056c ನಕುಲಂ ಪಂಚಭಿರ್ಬಾಣೈರ್ಬಾಹ್ವೋರುರಸಿ ಚಾರ್ದಯತ್।।

ಸುಷೇಣನಾದರೋ ಭಾರವನ್ನು ಹೊರಬಲ್ಲ ಉತ್ತಮ ಧನುಸ್ಸನ್ನು ಹಿಡಿದು ನಕುಲನ ಎದೆಗೆ ಐದು ಬಾಣಗಳಿಂದ ಪ್ರಹರಿಸಿದನು.

08032057a ನಕುಲಸ್ತಂ ತು ವಿಂಶತ್ಯಾ ವಿದ್ಧ್ವಾ ಭಾರಸಹೈರ್ದೃಢೈಃ।
08032057c ನನಾದ ಬಲವನ್ನಾದಂ ಕರ್ಣಸ್ಯ ಭಯಮಾದಧತ್।।

ನಕುಲನ ಅವನನ್ನು ಎಪ್ಪತ್ತು ಭಾರವನ್ನು ಸಹಿಸಬಲ್ಲ ದೃಢ ಬಾಣಗಳಿಂದ ಹೊಡೆದು ಜೋರಾಗಿ ಗರ್ಜಿಸಿದನು. ಅದು ಕರ್ಣನಿಗೂ ಭಯವನ್ನುಂಟುಮಾಡಿತು.

08032058a ತಂ ಸುಷೇಣೋ ಮಹಾರಾಜ ವಿದ್ಧ್ವಾ ದಶಭಿರಾಶುಗೈಃ।
08032058c ಚಿಚ್ಚೇದ ಚ ಧನುಃ ಶೀಘ್ರಂ ಕ್ಷುರಪ್ರೇಣ ಮಹಾರಥಃ।।

ಮಹಾರಾಜ! ಮಹಾರಥ ಸುಷೇಣನು ಹತ್ತು ಆಶುಗಗಳಿಂದ ನಕುಲನನ್ನು ಹೊಡೆದು ಶೀಘ್ರವಾಗಿ ಕ್ಷುರಪ್ರದಿಂದ ಅವನ ಧನುಸ್ಸನ್ನು ತುಂಡರಿಸಿದನು.

08032059a ಅಥಾನ್ಯದ್ಧನುರಾದಾಯ ನಕುಲಃ ಕ್ರೋಧಮೂರ್ಚ್ಚಿತಃ।
08032059c ಸುಷೇಣಂ ಬಹುಭಿರ್ಬಾಣೈರ್ವಾರಯಾಮಾಸ ಸಂಯುಗೇ।।

ಕೂಡಲೇ ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ನಕುಲನು ಕ್ರೋಧಮೂರ್ಛಿತನಾಗಿ ಸುಷೇಣನನ್ನು ಅನೇಕ ಬಾಣಗಳಿಂದ ಸಂಯುಗದಲ್ಲಿ ತಡೆದನು.

08032060a ಸ ತು ಬಾಣೈರ್ದಿಶೋ ರಾಜನ್ನಾಚ್ಚಾದ್ಯ ಪರವೀರಹಾ।
08032060c ಆಜಘ್ನೇ ಸಾರಥಿಂ ಚಾಸ್ಯ ಸುಷೇಣಂ ಚ ತತಸ್ತ್ರಿಭಿಃ।
08032060e ಚಿಚ್ಚೇದ ಚಾಸ್ಯ ಸುದೃಢಂ ಧನುರ್ಭಲ್ಲೈಸ್ತ್ರಿಭಿಸ್ತ್ರಿಧಾ।।

ರಾಜನ್! ಆ ಪರವೀರಹನು ಬಾಣಗಳಿಂದ ದಿಕ್ಕುಗಳನ್ನು ಆಚ್ಛಾದಿಸಿ, ಮೂರು ಬಾಣಗಳಿಂದ ಸುಷೇಣನನ್ನೂ ಅವನ ಸಾರಥಿಯನ್ನೂ ಪ್ರಹರಿಸಿ, ಸುದೃಢ ಭಲ್ಲದಿಂದ ಅವನ ಧನುಸ್ಸನ್ನು ಮೂರು ಭಾಗಗಳನ್ನಾಗಿ ತುಂಡರಿಸಿದನು.

08032061a ಅಥಾನ್ಯದ್ಧನುರಾದಾಯ ಸುಷೇಣಃ ಕ್ರೋಧಮೂರ್ಚಿತಃ।
08032061c ಅವಿಧ್ಯನ್ನಕುಲಂ ಷಷ್ಟ್ಯಾ ಸಹದೇವಂ ಚ ಸಪ್ತಭಿಃ।।

ಆಗ ಕ್ರೋಧಮೂರ್ಛಿತ ಸುಷೇಣನು ಇನ್ನೊಂದು ಧನುಸ್ಸನ್ನೆತ್ತಿಕೊಂಡು ಆರು ಬಾಣಗಳಿಂದ ನಕುಲನನ್ನು ಮತ್ತು ಏಳರಿಂದ ಸಹದೇವನನ್ನು ಪ್ರಹರಿಸಿದನು.

08032062a ತದ್ಯುದ್ಧಂ ಸುಮಹದ್ಘೋರಮಾಸೀದ್ದೇವಾಸುರೋಪಮಂ।
08032062c ನಿಘ್ನತಾಂ ಸಾಯಕೈಸ್ತೂರ್ಣಮನ್ಯೋನ್ಯಸ್ಯ ವಧಂ ಪ್ರತಿ।।

ದೇವಾಸುರರ ಯುದ್ಧದಂತಿದ್ದ ಆ ಯುದ್ಧವು ಮಹಾ ಘೋರವಾಗಿತ್ತು. ಅನ್ಯೋನ್ಯರನ್ನು ವಧಿಸಲೋಸುಗ ವೇಗವಾಗಿ ಸಾಯಕಗಳನ್ನು ಪ್ರಯೋಗಿಸಲಾಗುತ್ತಿತ್ತು.

08032063a ಸಾತ್ಯಕಿರ್ವೃಷಸೇನಸ್ಯ ಹತ್ವಾ ಸೂತಂ ತ್ರಿಭಿಃ ಶರೈಃ।
08032063c ಧನುಶ್ಚಿಚ್ಚೇದ ಭಲ್ಲೇನ ಜಘಾನಾಶ್ವಾಂಶ್ಚ ಸಪ್ತಭಿಃ।
08032063e ಧ್ವಜಮೇಕೇಷುಣೋನ್ಮಥ್ಯ ತ್ರಿಭಿಸ್ತಂ ಹೃದ್ಯತಾಡಯತ್।।

ಸಾತ್ಯಕಿಯು ಮೂರು ಶರಗಳಿಂದ ವೃಷಸೇನನ ಸಾರಥಿಯನ್ನು ಸಂಹರಿಸಿ, ಭಲ್ಲದಿಂದ ಅವನ ಧನುಸ್ಸನ್ನು ತುಂಡರಿಸಿದನು ಮತ್ತು ಏಳು ಬಾಣಗಳಿಂದ ಅವನ ಕುದುರೆಗಳನ್ನು ಹೊಡೆದನು. ಒಂದು ಬಾಣದಿಂದ ಧ್ವಜವನ್ನು ಕಿತ್ತುಹಾರಿಸಿದನು ಮತ್ತು ಮೂರು ಬಾಣಗಳಿಂದ ಅವನ ಎದೆಗೆ ಹೊಡೆದನು.

08032064a ಅಥಾವಸನ್ನಃ ಸ್ವರಥೇ ಮುಹೂರ್ತಾತ್ಪುನರುತ್ಥಿತಃ।
08032064c ಅಥೋ ಜಿಘಾಂಸುಃ ಶೈನೇಯಂ ಖಡ್ಗಚರ್ಮಭೃದಭ್ಯಯಾತ್।।

ಆಗ ವೃಷಸೇನನು ತನ್ನ ರಥದಲ್ಲಿಯೇ ಮುಹೂರ್ತಕಾಲ ಕುಸಿದುಬಿದ್ದನು. ಪುನಃ ಎಚ್ಚೆತ್ತು ಶೈನೇಯನನ್ನು ಕೊಲ್ಲಲು ಬಯಸಿ ಕತ್ತಿ-ಗುರಾಣಿಗಳನ್ನು ಹಿಡಿದು ಅವನ ಮೇಲೆ ಎರಗಿದನು.

08032065a ತಸ್ಯ ಚಾಪ್ಲವತಃ ಶೀಘ್ರಂ ವೃಷಸೇನಸ್ಯ ಸಾತ್ಯಕಿಃ।
08032065c ವರಾಹಕರ್ಣೈರ್ದಶಭಿರವಿಧ್ಯದಸಿಚರ್ಮಣೀ।।

ವೃಷಸೇನನು ಮುಂದೆ ಹಾರಿಬರುತ್ತಿರಲು ಸಾತ್ಯಕಿಯು ಶೀಘ್ರವಾಗಿ ಹತ್ತು ವರಾಹಕರ್ಣ ಶರಗಳಿಂದ ಅವನ ಖಡ್ಗ-ಗುರಾಣಿಗಳನ್ನು ತುಂಡರಿಸಿದನು.

08032066a ದುಃಶಾಸನಸ್ತು ತಂ ದೃಷ್ಟ್ವಾ ವಿರಥಂ ವ್ಯಾಯುಧಂ ಕೃತಂ।
08032066c ಆರೋಪ್ಯ ಸ್ವರಥೇ ತೂರ್ಣಮಪೋವಾಹ ರಥಾಂತರಂ।।

ವೃಷಸೇನನು ವಿರಥನೂ ನಿರಾಯುಧನೂ ಆದುದನ್ನು ನೋಡಿದ ದುಃಶಾಸನನು ಶೀಘ್ರವಾಗಿ ಅವನನ್ನು ತನ್ನ ರಥದಲ್ಲಿ ಏರಿಸಿಕೊಂಡು ಅಲ್ಲಿಂದ ಹೊರಟುಹೋದನು.

08032067a ಅಥಾನ್ಯಂ ರಥಮಾಸ್ಥಾಯ ವೃಷಸೇನೋ ಮಹಾರಥಃ।
08032067c ಕರ್ಣಸ್ಯ ಯುಧಿ ದುರ್ಧರ್ಷಃ ಪುನಃ ಪೃಷ್ಠಮಪಾಲಯತ್।।

ಮಹಾರಥ ದುರ್ಧರ್ಷ ವೃಷಸೇನನು ಇನ್ನೊಂದು ರಥದಲ್ಲಿ ಕುಳಿತು ಪುನಃ ಯುದ್ಧದಲ್ಲಿ ಕರ್ಣನ ಹಿಂಭಾಗವನ್ನು ರಕ್ಷಿಸತೊಡಗಿದನು.

08032068a ದುಃಶಾಸನಂ ತು ಶೈನೇಯೋ ನವೈರ್ನವಭಿರಾಶುಗೈಃ।
08032068c ವಿಸೂತಾಶ್ವರಥಂ ಕೃತ್ವಾ ಲಲಾಟೇ ತ್ರಿಭಿರಾರ್ಪಯತ್।।

ಶೈನೇಯನಾದರೋ ಒಂಭತ್ತು ಹೊಸ ಆಶುಗಗಳಿಂದ ದುಃಶಾಸನನನ್ನು ಸಾರಥಿಯಿಲ್ಲದಂತೆಯೂ ವಿರಥನನ್ನಾಗಿಯೂ ಮಾಡಿ ಅವನ ಹಣೆಗೆ ಮೂರು ಬಾಣಗಳನ್ನು ಪ್ರಯೋಗಿಸಿದನು.

08032069a ಸ ತ್ವನ್ಯಂ ರಥಮಾಸ್ಥಾಯ ವಿಧಿವತ್ಕಲ್ಪಿತಂ ಪುನಃ।
08032069c ಯುಯುಧೇ ಪಾಂಡುಭಿಃ ಸಾರ್ಧಂ ಕರ್ಣಸ್ಯಾಪ್ಯಾಯಯನ್ಬಲಂ।।

ದುಃಶಾಸನನು ವಿಧಿವತ್ತಾಗಿ ಸಜ್ಜಾಗಿದ್ದ ಇನ್ನೊಂದು ರಥವನ್ನೇರಿ ಪುನಃ ಕರ್ಣನ ಬಲವನ್ನು ವೃದ್ಧಿಸುತ್ತಾ ಪಾಂಡವರೊಂದಿಗೆ ಹೋರಾಡಿದನು.

08032070a ಧೃಷ್ಟದ್ಯುಮ್ನಸ್ತತಃ ಕರ್ಣಮವಿಧ್ಯದ್ದಶಭಿಃ ಶರೈಃ।
08032070c ದ್ರೌಪದೇಯಾಸ್ತ್ರಿಸಪ್ತತ್ಯಾ ಯುಯುಧಾನಸ್ತು ಸಪ್ತಭಿಃ।।
08032071a ಭೀಮಸೇನಶ್ಚತುಃಷಷ್ಟ್ಯಾ ಸಹದೇವಶ್ಚ ಪಂಚಭಿಃ।
08032071c ನಕುಲಸ್ತ್ರಿಂಶತಾ ಬಾಣೈಃ ಶತಾನೀಕಶ್ಚ ಸಪ್ತಭಿಃ।
08032071e ಶಿಖಂಡೀ ದಶಭಿರ್ವೀರೋ ಧರ್ಮರಾಜಃ ಶತೇನ ತು।।

ಅನಂತರ ಧೃಷ್ಟದ್ಯುಮ್ನನು ಹತ್ತು, ದ್ರೌಪದೇಯರು ಎಪ್ಪತ್ಮೂರು, ಯುಯುಧಾನನು ಏಳು, ಭೀಮಸೇನನು ಅರವತ್ನಾಲ್ಕು, ಸಹದೇವನು ಏಳು, ನಕುಲನು ಮೂವತ್ತು, ಶತಾನೀಕನು ಏಳು, ವೀರ ಶಿಖಂಡಿಯು ಹತ್ತು ಮತ್ತು ಧರ್ಮರಾಜನು ನೂರು ಬಾಣಗಳಿಂದ ಕರ್ಣನನ್ನು ಪ್ರಹರಿಸಿದರು.

08032072a ಏತೇ ಚಾನ್ಯೇ ಚ ರಾಜೇಂದ್ರ ಪ್ರವೀರಾ ಜಯಗೃದ್ಧಿನಃ।
08032072c ಅಭ್ಯರ್ದಯನ್ಮಹೇಷ್ವಾಸಂ ಸೂತಪುತ್ರಂ ಮಹಾಮೃಧೇ।।

ರಾಜೇಂದ್ರ! ಜಯಕ್ಕೆ ಆಸೆಪಡುತ್ತಿದ್ದ ಇವರು ಮತ್ತು ಅನ್ಯ ಪ್ರವೀರರು ಅ ಮಹಾಯುದ್ಧದಲ್ಲಿ ಮಹೇಷ್ವಾಸ ಸೂತಪುತ್ರನನ್ನು ಪ್ರಹರಿಸಿದರು.

08032073a ತಾನ್ಸೂತಪುತ್ರೋ ವಿಶಿಖೈರ್ದಶಭಿರ್ದಶಭಿಃ ಶಿತೈಃ।
08032073c ರಥೇ ಚಾರು ಚರನ್ವೀರಃ ಪ್ರತ್ಯವಿಧ್ಯದರಿಂದಮಃ।।

ಅದಕ್ಕೆ ಪ್ರತಿಯಾಗಿ ಅರಿಂದಮ ವೀರ ಸೂತಪುತ್ರನು ಸುಂದರ ರಥದಲ್ಲಿ ಸಂಚರಿಸುತ್ತಾ ಹತ್ತು ಹತ್ತು ನಿಶಿತ ವಿಶಿಖಗಳಿಂದ ಅವರೆಲ್ಲರನ್ನೂ ಹೊಡೆದನು.

08032074a ತತ್ರಾಸ್ತ್ರವೀರ್ಯಂ ಕರ್ಣಸ್ಯ ಲಾಘವಂ ಚ ಮಹಾತ್ಮನಃ।
08032074c ಅಪಶ್ಯಾಮ ಮಹಾರಾಜ ತದದ್ಭುತಮಿವಾಭವತ್।।

ಮಹಾರಾಜ! ಅಲ್ಲಿ ಮಹಾತ್ಮ ಕರ್ಣನ ಅಸ್ತ್ರವೀರ್ಯವನ್ನೂ ಹಸ್ತಲಾಘವವನ್ನೂ ನೋಡಿದೆವು. ಅದೊಂದು ಅದ್ಭುತವೇ ಆಗಿತ್ತು.

08032075a ನ ಹ್ಯಾದದಾನಂ ದದೃಶುಃ ಸಂದಧಾನಂ ಚ ಸಾಯಕಾನ್।
08032075c ವಿಮುಂಚಂತಂ ಚ ಸಂರಂಭಾದ್ದದೃಶುಸ್ತೇ ಮಹಾರಥಂ।।

ಆ ಮಹಾರಥನು ಬಾಣಗಳನ್ನು ತೆಗೆದುಕೊಳ್ಳುವುದಾಗಲೀ, ಧನುಸ್ಸಿಗೆ ಹೂಡಿದುದಾಗಲೀ, ಮತ್ತು ಬಾಣಪ್ರಯೋಗಿಸಿದುದಾಗಲೀ ಯಾರಿಗೂ ಕಾಣಿಸುತ್ತಿರಲಿಲ್ಲ.

08032076a ದ್ಯೌರ್ವಿಯದ್ಭೂರ್ದಿಶಶ್ಚಾಶು ಪ್ರಣುನ್ನಾ ನಿಶಿತೈಃ ಶರೈಃ।
08032076c ಅರುಣಾಭ್ರಾವೃತಾಕಾರಂ ತಸ್ಮಿನ್ದೇಶೇ ಬಭೌ ವಿಯತ್।।

ಆಕಾಶ-ಭೂಮಿ-ದಿಕ್ಕುಗಳೆಲ್ಲವೂ ಅವನ ನಿಶಿತ ಬಾಣಗಳಿಂದ ತುಂಬಿಹೋದವು. ಆ ಪ್ರದೇಶವು ಅರುಣೋದಯಕಾಲದಂತೆ ಕೆಂಪಾಗಿ ಕಾಣುತ್ತಿತ್ತು.

08032077a ನೃತ್ಯನ್ನಿವ ಹಿ ರಾಧೇಯಶ್ಚಾಪಹಸ್ತಃ ಪ್ರತಾಪವಾನ್।
08032077c ಯೈರ್ವಿದ್ಧಃ ಪ್ರತ್ಯವಿಧ್ಯತ್ತಾನೇಕೈಕಂ ತ್ರಿಗುಣೈಃ ಶರೈಃ।।

ಪ್ರತಾಪವಾನ್ ರಾಧೇಯನು ಚಾಪವನ್ನು ಹಿಡಿದು ನರ್ತಿಸುತ್ತಿರುವನೋ ಎನ್ನುವಂತೆ ತೋರುತ್ತಿದ್ದನು. ಅವನನ್ನು ಪ್ರಹರಿಸಿದ ಪ್ರತಿಯೊಬ್ಬನನ್ನೂ ಕರ್ಣನು ಅವರು ಬಿಟ್ಟ ಶರಗಳಿಗಿಂತ ಮೂರುಪಟ್ಟು ಶರಗಳಿಂದ ಪ್ರಹರಿಸುತ್ತಿದ್ದನು.

08032078a ದಶಭಿರ್ದಶಭಿಶ್ಚೈನಾನ್ಪುನರ್ವಿದ್ಧ್ವಾ ನನಾದ ಹ।
08032078c ಸಾಶ್ವಸೂತಧ್ವಜಚ್ಚತ್ರಾಸ್ತತಸ್ತೇ ವಿವರಂ ದದುಃ।।

ಪುನಃ ಕರ್ಣನು ಹತ್ತು ಹತ್ತು ಬಾಣಗಳಿಂದ ಅವರ ಕುದುರೆ-ಸಾರಥಿ-ಧ್ವಜ-ಚತ್ರಗಳನ್ನು ಪ್ರಹರಿಸಿ ಜೋರಾಗಿ ಸಿಂಹನಾದಗೈದನು. ಆಗ ಅವರು ಅವನಿಗೆ ಮುಂದೆ ಹೋಗಲು ದಾರಿಕೊಟ್ಟರು.

08032079a ತಾನ್ಪ್ರಮೃದ್ನನ್ಮಹೇಷ್ವಾಸಾನ್ರಾಧೇಯಃ ಶರವೃಷ್ಟಿಭಿಃ।
08032079c ರಾಜಾನೀಕಮಸಂಬಾಧಂ ಪ್ರಾವಿಶಚ್ಚತ್ರುಕರ್ಶನಃ।।

ಶರವೃಷ್ಟಿಗಳಿಂದ ಆ ಮಹೇಷ್ವಾಸರನ್ನು ಸದೆಬಡಿದು ಶತ್ರುಕರ್ಶನ ರಾಧೇಯನು ರಾಜಾ ಯುಧಿಷ್ಠಿರನ ಸೇನೆಯನ್ನು ಪ್ರವೇಶಿಸಿದನು.

08032080a ಸ ರಥಾಂಸ್ತ್ರಿಶತಾನ್ ಹತ್ವಾ ಚೇದೀನಾಮನಿವರ್ತಿನಾಂ।
08032080c ರಾಧೇಯೋ ನಿಶಿತೈರ್ಬಾಣೈಸ್ತತೋಽಭ್ಯಾರ್ಚ್ಚದ್ಯುಧಿಷ್ಠಿರಂ।।

ಆ ರಾಧೇಯನು ಹಿಂದಿರುಗದಿದ್ದ ಚೇದಿಗಳ ಮುನ್ನೂರು ರಥಗಳನ್ನು ನಾಶಗೊಳಿಸಿ ನಿಶಿತ ಬಾಣಗಳಿಂದ ಯುಧಿಷ್ಠಿರನನ್ನು ಪ್ರಹರಿಸಿದನು.

08032081a ತತಸ್ತೇ ಪಾಂಡವಾ ರಾಜಂ ಶಿಖಂಡೀ ಚ ಸಸಾತ್ಯಕಿಃ।
08032081c ರಾಧೇಯಾತ್ಪರಿರಕ್ಷಂತೋ ರಾಜಾನಂ ಪರ್ಯವಾರಯನ್।।

ರಾಜನ್! ಆಗ ಪಾಂಡವನನ್ನು ರಾಧೇಯನಿಂದ ರಕ್ಷಿಸಲೋಸುಗ ಸಾತ್ಯಕಿಯೊಡನೆ ಶಿಖಂಡಿಯು ರಾಜನನ್ನು ಸುತ್ತುವರೆದರು.

08032082a ತಥೈವ ತಾವಕಾಃ ಸರ್ವೇ ಕರ್ಣಂ ದುರ್ವಾರಣಂ ರಣೇ।
08032082c ಯತ್ತಾಃ ಸೇನಾಮಹೇಷ್ವಾಸಾಃ ಪರ್ಯರಕ್ಷಂತ ಸರ್ವಶಃ।।

ಹಾಗೆಯೇ ನಿನ್ನಕಡೆಯ ಮಹೇಷ್ವಾಸರ ಸೇನೆಗಳೂ ರಣದಲ್ಲಿ ತಡೆಯಲಸಾಧ್ಯ ಕರ್ಣನನ್ನು ಪ್ರಯತ್ನಮಾಡಿ ಎಲ್ಲಕಡೆಗಳಿಂದಲೂ ರಕ್ಷಿಸುತ್ತಿದ್ದವು.

08032083a ನಾನಾವಾದಿತ್ರಘೋಷಾಶ್ಚ ಪ್ರಾದುರಾಸನ್ವಿಶಾಂ ಪತೇ।
08032083c ಸಿಂಹನಾದಶ್ಚ ಸಂಜಜ್ಞೇ ಶೂರಾಣಾಮನಿವರ್ತಿನಾಂ।।

ವಿಶಾಂಪತೇ! ನಾನಾ ವಾದ್ಯಗಳು ಮೊಳಗಿದವು. ಗರ್ಜನೆಗಳು ಕೇಳಿಬಂದವು. ಹಿಂದಿರುಗದಿದ್ದ ಶೂರರು ಸಿಂಹನಾದಗೈದರು.

08032084a ತತಃ ಪುನಃ ಸಮಾಜಗ್ಮುರಭೀತಾಃ ಕುರುಪಾಂಡವಾಃ।
08032084c ಯುಧಿಷ್ಠಿರಮುಖಾಃ ಪಾರ್ಥಾಃ ಸೂತಪುತ್ರಮುಖಾ ವಯಂ।।

ನಂತರ ಪುನಃ ಅಭೀತ ಕುರು-ಪಾಂಡವರ ನಡುವೆ - ಯುಧಿಷ್ಠಿರನ ನಾಯಕತ್ವದಲ್ಲಿದ್ದ ಪಾರ್ಥರು ಮತ್ತು ಸೂತಪುತ್ರನ ನಾಯಕತ್ವದಲ್ಲಿದ್ದ ನಮ್ಮವರ ನಡುವೆ ಯುದ್ಧವು ನಡೆಯಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ದ್ವಾತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಮೂವತ್ತೆರಡನೇ ಅಧ್ಯಾಯವು.