031 ಕರ್ಣಶಲ್ಯಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ಕರ್ಣವಧ ಪರ್ವ

ಅಧ್ಯಾಯ 31

ಸಾರ

ಕರ್ಣನು ಪಾಂಡವ ಸೇನೆಯನ್ನು ಪ್ರವೇಶಿಸಿದುದು (1-4). ಧೃತರಾಷ್ಟ್ರನು ಯುದ್ಧದ ಕುರಿತು ಸಂಜಯನನ್ನು ಪ್ರಶ್ನಿಸಿದುದು (5-9). ಕುರು ಸೇನಾವ್ಯೂಹದ ವರ್ಣನೆ (10-27). ಅರ್ಜುನನೊಡನೆ ಯುಧಿಷ್ಠಿರನು ಅಂದಿನ ದಿನದ ಯುದ್ಧದ ಉಪಾಯವನ್ನು ಸೂಚಿಸುವುದು (28-35). ಶಲ್ಯನು ಕರ್ಣನಿಗೆ ಅರ್ಜುನನ ರಥವನ್ನು ತೋರಿಸುತ್ತಾ ಅವನೊಡನೆ ಯುದ್ಧಮಾಡುವಂತೆ ಹೇಳುವುದು (36-68).

08031001 ಸಂಜಯ ಉವಾಚ।
08031001a ತತಃ ಪರಾನೀಕಭಿದಂ ವ್ಯೂಹಮಪ್ರತಿಮಂ ಪರೈಃ।
08031001c ಸಮೀಕ್ಷ್ಯ ಕರ್ಣಃ ಪಾರ್ಥಾನಾಂ ಧೃಷ್ಟದ್ಯುಮ್ನಾಭಿರಕ್ಷಿತಂ।।
08031002a ಪ್ರಯಯೌ ರಥಘೋಷೇಣ ಸಿಂಹನಾದರವೇಣ ಚ।
08031002c ವಾದಿತ್ರಾಣಾಂ ಚ ನಿನದೈಃ ಕಂಪಯನ್ನಿವ ಮೇದಿನೀಂ।।

ಸಂಜಯನು ಹೇಳಿದನು: “ಅನಂತರ ಶತ್ರುಸೇನೆಯಿಂದ ಭೇದಿಸಲು ಅಸಾಧ್ಯವಾದ ಧೃಷ್ಟದ್ಯುಮ್ನನಿಂದ ರಕ್ಷಿತ ಪಾರ್ಥರ ಅಪ್ರತಿಮ ವ್ಯೂಹವನ್ನು ನೋಡಿ ಕರ್ಣನು ರಥಘೋಷ, ಸಿಂಹನಾದ ಮತ್ತು ವಾದ್ಯನಿನಾದಗಳೊಂದಿಗೆ ಮೇದಿನಿಯನ್ನು ನಡುಗಿಸುತ್ತಾ ಮುಂದುವರೆದನು.

08031003a ವೇಪಮಾನ ಇವ ಕ್ರೋಧಾದ್ಯುದ್ಧಶೌಂಡಃ ಪರಂತಪಃ।
08031003c ಪತಿವ್ಯೂಹ್ಯ ಮಹಾತೇಜಾ ಯಥಾವದ್ಭರತರ್ಷಭ।।
08031004a ವ್ಯಧಮತ್ಪಾಂಡವೀಂ ಸೇನಾಮಾಸುರೀಂ ಮಘವಾನಿವ।
08031004c ಯುಧಿಷ್ಠಿರಂ ಚಾಭಿಭವನ್ನಸಪವ್ಯಂ ಚಕಾರ ಹ।।

ಭರತರ್ಷಭ! ಕ್ರೋಧದಿಂದ ನಡುಗುತ್ತಾ ಯುದ್ಧಶೌಂಡ ಪರಂತಪ ಮಹಾತೇಜಸ್ವಿಯು ಯಥಾವತ್ತಾಗಿ ಪ್ರತಿವ್ಯೂಹವನ್ನು ರಚಿಸಿ ಅಸುರೀಸೇನೆಯನ್ನು ಮಘವಾನನು ಹೇಗೋ ಹಾಗೆ ಪಾಂಡವೀ ಸೇನೆಯನ್ನು ವಧಿಸುತ್ತಾ ಯುಧಿಷ್ಠಿರನನ್ನೂ ಗಾಯಗೊಳಿಸಿ ಅವನನ್ನು ತನ್ನ ಬಲಕ್ಕೆ ಮಾಡಿಕೊಂಡನು.”

08031005 ಧೃತರಾಷ್ಟ್ರ ಉವಾಚ।
08031005a ಕಥಂ ಸಂಜಯ ರಾಧೇಯಃ ಪ್ರತ್ಯವ್ಯೂಹತ ಪಾಂಡವಾನ್।
08031005c ಧೃಷ್ಟದ್ಯುಮ್ನಮುಖಾನ್ವೀರಾನ್ಭೀಮಸೇನಾಭಿರಕ್ಷಿತಾನ್।।

ಧೃತರಾಷ್ಟ್ರನು ಹೇಳಿದನು: “ಸಂಜಯ! ಭೀಮನಿಂದ ರಕ್ಷಿತ ಧೃಷ್ಟದ್ಯುಮ್ನನ ಸೇನಾಪತ್ಯದಲ್ಲಿದ್ದ ಪಾಂಡವ ವೀರರನ್ನು ರಾಧೇಯನು ಯಾವ ಪ್ರತಿವ್ಯೂಹದಿಂದ ಹೇಗೆ ಎದುರಿಸಿದನು?

08031006a ಕೇ ಚ ಪ್ರಪಕ್ಷೌ ಪಕ್ಷೌ ವಾ ಮಮ ಸೈನ್ಯಸ್ಯ ಸಂಜಯ।
08031006c ಪ್ರವಿಭಜ್ಯ ಯಥಾನ್ಯಾಯಂ ಕಥಂ ವಾ ಸಮವಸ್ಥಿತಾಃ।।

ಸಂಜಯ! ನನ್ನ ಸೈನ್ಯದ ಬಲ-ಎಡಭಾಗಗಳಲ್ಲಿ ಯಾರಿದ್ದರು? ಯಥಾನ್ಯಾಯವಾಗಿ ವಿಭಜನೆಗೊಂಡು ಹೇಗೆ ಮತ್ತು ಎಲ್ಲಿ ನಿಂತಿದ್ದರು?

08031007a ಕಥಂ ಪಾಂಡುಸುತಾಶ್ಚಾಪಿ ಪ್ರತ್ಯವ್ಯೂಹಂತ ಮಾಮಕಾನ್।
08031007c ಕಥಂ ಚೈತನ್ಮಹಾಯುದ್ಧಂ ಪ್ರಾವರ್ತತ ಸುದಾರುಣಂ।।

ಪಾಂಡುಸುತರೂ ಕೂಡ ಹೇಗೆ ನಮ್ಮವರಿಗೆ ಪ್ರತಿಯಾಗಿ ವ್ಯೂಹವನ್ನು ರಜಿಸಿದ್ದರು? ಆ ಸುದಾರುಣ ಮಹಾಯುದ್ಧವು ಹೇಗೆ ತಾನೇ ಪ್ರಾರಂಭವಾಯಿತು?

08031008a ಕ್ವ ಚ ಬೀಭತ್ಸುರಭವದ್ಯತ್ಕರ್ಣೋಽಯಾದ್ಯುಧಿಷ್ಠಿರಂ।
08031008c ಕೋ ಹ್ಯರ್ಜುನಸ್ಯ ಸಾನ್ನಿಧ್ಯೇ ಶಕ್ತೋಽಭ್ಯೇತುಂ ಯುಧಿಷ್ಠಿರಂ।।

ಕರ್ಣನು ಯುಧಿಷ್ಠಿರನೊಂದಿಗೆ ಯುದ್ಧಮಾಡುವಾಗ ಬೀಭತ್ಸುವು ಎಲ್ಲಿದ್ದನು? ಏಕೆಂದರೆ ಅರ್ಜುನನ ಸಾನ್ನಿಧ್ಯದಲ್ಲಿ ಯಾವ ಶತ್ರುವೂ ಯುಧಿಷ್ಠಿರನನ್ನು ಗಾಯಗೊಳಿಸಲು ಶಕ್ತನಿಲ್ಲ.

08031009a ಸರ್ವಭೂತಾನಿ ಯೋ ಹ್ಯೇಕಃ ಖಾಂಡವೇ ಜಿತವಾನ್ಪುರಾ।
08031009c ಕಸ್ತಮನ್ಯತ್ರ ರಾಧೇಯಾತ್ಪ್ರತಿಯುಧ್ಯೇಜ್ಜಿಜೀವಿಷುಃ।।

ರಾಧೇಯನನ್ನು ಬಿಟ್ಟು ಜೀವಿತವಾಗಿರ ಬಯಸುವ ಬೇರೆ ಯಾರು ತಾನೇ ಹಿಂದೆ ಖಾಂಡವದಲ್ಲಿ ಸರ್ವಭೂತಗಳನ್ನೂ ಏಕಾಂಗಿಯಾಗಿ ಗೆದ್ದವನೊಡನೆ ಯುದ್ಧಮಾಡಿಯಾನು?”

08031010 ಸಂಜಯ ಉವಾಚ।
08031010a ಶೃಣು ವ್ಯೂಹಸ್ಯ ರಚನಾಮರ್ಜುನಶ್ಚ ಯಥಾ ಗತಃ।
08031010c ಪರಿದಾಯ ನೃಪಂ ತೇಭ್ಯಃ ಸಂಗ್ರಾಮಶ್ಚಾಭವದ್ಯಥಾ।।

ಸಂಜಯನು ಹೇಳಿದನು: “ವ್ಯೂಹಗಳ ರಚನೆ, ಅರ್ಜುನನು ಎಲ್ಲಿ ಹೋಗಿದ್ದನು, ಎರಡೂ ಕಡೆಯ ನೃಪರು ಸುತ್ತುವರೆದು ಹೇಗೆ ಸಂಗ್ರಾಮವನ್ನು ನಡೆಸಿದರು ಎನ್ನುವುದನ್ನು ನಡೆದಂತೆ ಕೇಳು!

08031011a ಕೃಪಃ ಶಾರದ್ವತೋ ರಾಜನ್ಮಾಗಧಶ್ಚ ತರಸ್ವಿನಃ।
08031011c ಸಾತ್ವತಃ ಕೃತವರ್ಮಾ ಚ ದಕ್ಷಿಣಂ ಪಕ್ಷಮಾಶ್ರಿತಾಃ।।

ರಾಜನ್! ಕೃಪ ಶಾರದ್ವತ, ತರಸ್ವಿ ಮಾಗಧ, ಮತ್ತು ಸಾತ್ವತ ಕೃತವರ್ಮರು ಸೇನೆಯ ಎಡಭಾಗದಲ್ಲಿದ್ದರು.

08031012a ತೇಷಾಂ ಪ್ರಪಕ್ಷೇ ಶಕುನಿರುಲೂಕಶ್ಚ ಮಹಾರಥಃ।
08031012c ಸಾದಿಭಿರ್ವಿಮಲಪ್ರಾಸೈಸ್ತವಾನೀಕಮರಕ್ಷತಾಂ।।

ಅವರ ಬಲಭಾಗದಲ್ಲಿ ಮಹಾರಥ ಶಕುನಿ-ಉಲೂಕರು ಥಳಥಳಿಸುವ ಪ್ರಾಸಗಳನ್ನು ಹಿಡಿದಿದ್ದ ಕುದುರೆ ಸವಾರರೊಂದಿಗೆ ನಿನ್ನ ಸೇನೆಯನ್ನು ರಕ್ಷಿಸುತ್ತಿದ್ದರು.

08031013a ಗಾಂಧಾರಿಭಿರಸಂಭ್ರಾಂತೈಃ ಪಾರ್ವತೀಯೈಶ್ಚ ದುರ್ಜಯೈಃ।
08031013c ಶಲಭಾನಾಮಿವ ವ್ರಾತೈಃ ಪಿಶಾಚೈರಿವ ದುರ್ದೃಶೈಃ।।
08031014a ಚತುಸ್ತ್ರಿಂಶತ್ಸಹಸ್ರಾಣಿ ರಥಾನಾಮನಿವರ್ತಿನಾಂ।
08031014c ಸಂಶಪ್ತಕಾ ಯುದ್ಧಶೌಂಡಾ ವಾಮಂ ಪಾರ್ಶ್ವಮಪಾಲಯನ್।।
08031015a ಸಮುಚ್ಚಿತಾಸ್ತವ ಸುತೈಃ ಕೃಷ್ಣಾರ್ಜುನಜಿಘಾಂಸವಃ।

ಗಾಬರಿಗೊಳ್ಳದ ಗಾಂಧಾರ ಸೈನಿಕರೂ, ದುರ್ಜಯ ಪರ್ವತದೇಶದವರೂ, ಮಿಡತೆಗಳಂತೆ ರಾಶಿರಾಶಿಯಾಗಿ ಬರುತ್ತಿದ್ದ ಪಿಶಾಚಿಗಳಂತೆ ದುರ್ದರ್ಶರಾದ ಮೂವತ್ನಾಲ್ಕು ಸಾವಿರ ಯುದ್ಧಶೌಂಡ ಸಂಶಪ್ತಕ ರಥಿಗಳು ಕೃಷ್ಣಾರ್ಜುನರನ್ನು ಸಂಹರಿಸಲು ಬಯಸಿ ನಿನ್ನ ಮಕ್ಕಳೊಂದಿಗೆ ಕೂಡಿಕೊಂಡು ವ್ಯೂಹದ ಎಡಭಾಗವನ್ನು ರಕ್ಷಿಸುತ್ತಿದ್ದರು.

08031015c ತೇಷಾಂ ಪ್ರಪಕ್ಷಃ ಕಾಂಬೋಜಾಃ ಶಕಾಶ್ಚ ಯವನೈಃ ಸಹ।।
08031016a ನಿದೇಶಾತ್ಸೂತಪುತ್ರಸ್ಯ ಸರಥಾಃ ಸಾಶ್ವಪತ್ತಯಃ।
08031016c ಆಹ್ವಯಂತೋಽರ್ಜುನಂ ತಸ್ಥುಃ ಕೇಶವಂ ಚ ಮಹಾಬಲಂ।।

ಅವರ ಪ್ರಪಕ್ಷದಲ್ಲಿ ಶಕರು ಮತ್ತು ಯವನರೊಂದಿಗೆ ಕಾಂಬೋಜರು ಸೂತಪುತ್ರನ ನಿರ್ದೇಶನದಂತೆ ರಥ-ಕುದುರೆ-ಪಾದಾತಿಗಳೊಂದಿಗೆ ಮಹಾಬಲ ಅರ್ಜುನ-ಕೇಶವರನ್ನು ಆಹ್ವಾನಿಸುತ್ತಾ ನಿಂತಿದ್ದರು.

08031017a ಮಧ್ಯೇಸೇನಾಮುಖಂ ಕರ್ಣೋ ವ್ಯವಾತಿಷ್ಠತ ದಂಶಿತಃ।
08031017c ಚಿತ್ರವರ್ಮಾಂಗದಃ ಸ್ರಗ್ವೀ ಪಾಲಯನ್ಧ್ವಜಿನೀಮುಖಂ।।

ಸೇನೆಯ ಮಧ್ಯಭಾಗದಲ್ಲಿ ಚಿತ್ರಿತ ಕವಚವನ್ನೂ ಅಂಗದ-ಮಾಲೆಗಳನ್ನೂ ಧರಿಸಿದ್ದ ಕರ್ಣನು ಸೇನೆಯ ಮುಂಬಾಗವನ್ನು ರಕ್ಷಿಸುತ್ತಾ ನಿಂತಿದ್ದನು.

08031018a ರಕ್ಷ್ಯಮಾಣಃ ಸುಸಂರಬ್ಧೈಃ ಪುತ್ರೈಃ ಶಸ್ತ್ರಭೃತಾಂ ವರಃ।
08031018c ವಾಹಿನೀಪ್ರಮುಖಂ ವೀರಃ ಸಂಪ್ರಕರ್ಷನ್ನಶೋಭತ।।

ಕುಪಿತ ಪುತ್ರರಿಂದ ರಕ್ಷಿಸಲ್ಪಟ್ಟಿದ್ದ ಆ ಶಸ್ತ್ರಭೃತರಲ್ಲಿ ಶ್ರೇಷ್ಠ ಸೇನಾಪತಿ ವೀರ ಕರ್ಣನು ಸೇನೆಯನ್ನು ನಡೆಸುತ್ತಾ ಸುಶೋಭಿಸಿದನು.

08031019a ಅಯೋರತ್ನಿರ್ಮಹಾಬಾಹುಃ ಸೂರ್ಯವೈಶ್ವಾನರದ್ಯುತಿಃ।
08031019c ಮಹಾದ್ವಿಪಸ್ಕಂದಗತಃ ಪಿಂಗಲಃ ಪ್ರಿಯದರ್ಶನಃ।
08031019e ದುಃಶಾಸನೋ ವೃತಃ ಸೈನ್ಯೈಃ ಸ್ಥಿತೋ ವ್ಯೂಹಸ್ಯ ಪೃಷ್ಠತಃ।।

ಉಕ್ಕಿನಂಥಹ ಮಹಾಬಾಹುಗಳುಳ್ಳ ಸೂರ್ಯ-ಅಗ್ನಿಗಳ ತೇಜಸ್ಸುಳ್ಳ, ಕಂದು-ಹಳದೀ ಬಣ್ಣದ ಕಣ್ಣುಗಳುಳ್ಳ ನೋಡಲು ಸುಂದರನಾಗಿದ್ದ ದುಃಶಾಸನನು ಮಹಾಗಜದ ಭುಜದ ಮೇಲೆ ಕುಳಿತು ವ್ಯೂಹದ ಹಿಂಭಾಗವನ್ನು ರಕ್ಷಿಸುತ್ತಿದ್ದನು.

08031020a ತಮನ್ವಯಾನ್ಮಹಾರಾಜ ಸ್ವಯಂ ದುರ್ಯೋಧನೋ ನೃಪಃ।
08031020c ಚಿತ್ರಾಶ್ವೈಶ್ಚಿತ್ರಸಂನಾಹೈಃ ಸೋದರ್ಯೈರಭಿರಕ್ಷಿತಃ।।
08031021a ರಕ್ಷ್ಯಮಾಣೋ ಮಹಾವೀರ್ಯೈಃ ಸಹಿತೈರ್ಮದ್ರಕೇಕಯೈಃ।
08031021c ಅಶೋಭತ ಮಹಾರಾಜ ದೇವೈರಿವ ಶತಕ್ರತುಃ।।

ಮಹಾರಾಜ! ಅವನನ್ನು ಅನುಸರಿಸಿ ಸ್ವಯಂ ದುರ್ಯೋಧನ ನೃಪನು ವಿಚಿತ್ರ ಕುದುರೆಗಳು, ವಿಚಿತ್ರ ಸೇನೆಗಳು ಮತ್ತು ಸಹೋದರರಿಂದ ರಕ್ಷಿತನಾಗಿ ಮಹಾವೀರ್ಯ ಮದ್ರ್ಕಕ-ಕೇಕಯರಿಂದ ರಕ್ಷಿತನಾಗಿ ದೇವತೆಗಳಿಂದ ಸುತ್ತುವರೆಯಲ್ಪಟ್ಟ ಶತಕ್ರತುವಂತೆ ಶೋಭಿಸುತ್ತಾ ನಡೆದನು.

08031022a ಅಶ್ವತ್ಥಾಮಾ ಕುರೂಣಾಂ ಚ ಯೇ ಪ್ರವೀರಾ ಮಹಾರಥಾಃ।
08031022c ನಿತ್ಯಮತ್ತಾಶ್ಚ ಮಾತಂಗಾಃ ಶೂರೈರ್ಮ್ಲೇಚ್ಚೈರಧಿಷ್ಠಿತಾಃ।
08031022e ಅನ್ವಯುಸ್ತದ್ರಥಾನೀಕಂ ಕ್ಷರಂತ ಇವ ತೋಯದಾಃ।।

ಅಶ್ವತ್ಥಾಮ ಮತ್ತು ಕುರುಗಳ ಪ್ರಮುಖ ಮಹಾರಥರು ಹಾಗೂ ನಿತ್ಯಮತ್ತ ಆನೆಗಳು, ಶೂರ ಮ್ಲೇಚ್ಛರು ವರ್ಷಾಕಾಲದ ಮೋಡಗಳಂತೆ ಬಾಣಗಳ ಮಳೆಸುರಿಸುತ್ತಾ ರಥಸೇನೆಯನ್ನು ಅನುಸರಿಸಿ ಹೋಗುತ್ತಿದ್ದರು.

08031023a ತೇ ಧ್ವಜೈರ್ವೈಜಯಂತೀಭಿರ್ಜ್ವಲದ್ಭಿಃ ಪರಮಾಯುಧೈಃ।
08031023c ಸಾದಿಭಿಶ್ಚಾಸ್ಥಿತಾ ರೇಜುರ್ದ್ರುಮವಂತ ಇವಾಚಲಾಃ।।

ಆ ಮದಗಜಗಳು ವೈಜಯಂತಿಯಂತೆ ಹೊಳೆಯುತ್ತಿದ್ದ ಧ್ವಜಗಳಿಂದಲೂ ಪರಮಾಯುಧಗಳಿಂದಲೂ ಕುಳಿತಿದ್ದ ಮಾವುಟಿಗರಿಂದಲೂ ವೃಕ್ಷಗಳಿಂದ ಕೂಡಿದ ಪರ್ವತಗಳಂತೆ ಶೋಭಿಸುತ್ತಿದ್ದವು.

08031024a ತೇಷಾಂ ಪದಾತಿನಾಗಾನಾಂ ಪಾದರಕ್ಷಾಃ ಸಹಸ್ರಶಃ।
08031024c ಪಟ್ಟಿಶಾಸಿಧರಾಃ ಶೂರಾ ಬಭೂವುರನಿವರ್ತಿನಃ।।

ಆ ಆನೆಗಳ ಪಾದರಕ್ಷಕ, ಯುದ್ಧದಿಂದ ಹಿಂದಿರುಗದ, ಸಹಸ್ರಾರು ಶೂರ ಪದಾತಿಗಳು ಪಟ್ಟಿಷ-ಖಡ್ಗಗಳನ್ನು ಹಿಡಿದಿದ್ದರು.

08031025a ಸಾದಿಭಿಃ ಸ್ಯಂದನೈರ್ನಾಗೈರಧಿಕಂ ಸಮಲಂಕೃತೈಃ।
08031025c ಸ ವ್ಯೂಹರಾಜೋ ವಿಬಭೌ ದೇವಾಸುರಚಮೂಪಮಃ।।

ಅಧಿಕವಾಗಿ ಸಮಲಂಕೃತವಾಗಿದ್ದ, ಮಾವಟಿಗರು ಮತ್ತು ರಥಗಳಿಂದ ಕೂಡಿದ್ದ ಆ ವ್ಯೂಹರಾಜವು ದೇವಾಸುರರ ಸೇನೆಗಳಂತೆ ಕಾಣುತ್ತಿತ್ತು.

08031026a ಬಾರ್ಹಸ್ಪತ್ಯಃ ಸುವಿಹಿತೋ ನಾಯಕೇನ ವಿಪಶ್ಚಿತಾ।
08031026c ನೃತ್ಯತೀವ ಮಹಾವ್ಯೂಹಃ ಪರೇಷಾಮಾದಧದ್ಭಯಂ।।

ಬೃಹಸ್ಪತಿಯ ಹೇಳಿಕೆಯಂತೆಯೇ ನಾಯಕನಿಂದ ರಚಿಸಲ್ಪಟ್ಟ ಆ ಮಹಾವ್ಯೂಹವು ನರ್ತಿಸುತ್ತಿರುವಂತೆ ಕಾಣುತ್ತಿದ್ದು ಶತ್ರುಗಳಲ್ಲಿ ಭಯವನ್ನುಂಟುಮಾಡುತ್ತಿತ್ತು.

08031027a ತಸ್ಯ ಪಕ್ಷಪ್ರಪಕ್ಷೇಭ್ಯೋ ನಿಷ್ಪತಂತಿ ಯುಯುತ್ಸವಃ।
08031027c ಪತ್ತ್ಯಶ್ವರಥಮಾತಂಗಾಃ ಪ್ರಾವೃಷೀವ ಬಲಾಹಕಾಃ।।

ಅದರ ಪಕ್ಷ-ಪ್ರಪಕ್ಷಗಳಲ್ಲಿದ್ದ ಯುದ್ಧೋತ್ಸಾಹೀ ಅಶ್ವ-ರಥ-ಆನೆಗಳು ಮಳೆಗಾಲದ ಮೋಡಗಳು ಮಳೆಗರೆಯುವಂತೆ ಶತ್ರುಸೇನೆಗಳ ಮೇಲೆ ಬೀಳುತ್ತಿದ್ದವು.

08031028a ತತಃ ಸೇನಾಮುಖೇ ಕರ್ಣಂ ದೃಷ್ಟ್ವಾ ರಾಜಾ ಯುಧಿಷ್ಠಿರಃ।
08031028c ಧನಂಜಯಮಮಿತ್ರಘ್ನಮೇಕವೀರಮುವಾಚ ಹ।।

ಸೇನಾಮುಖದಲ್ಲಿ ಕರ್ಣನನ್ನು ನೋಡಿ ರಾಜಾ ಯುಧಿಷ್ಠಿರನು ಅಮಿತ್ರಘ್ನ ಏಕವೀರ ಧನಂಜಯನಿಗೆ ಇಂತೆಂದನು:

08031029a ಪಶ್ಯಾರ್ಜುನ ಮಹಾವ್ಯೂಹಂ ಕರ್ಣೇನ ವಿಹಿತಂ ರಣೇ।
08031029c ಯುಕ್ತಂ ಪಕ್ಷೈಃ ಪ್ರಪಕ್ಷೈಶ್ಚ ಸೇನಾನೀಕಂ ಪ್ರಕಾಶತೇ।।

“ಅರ್ಜುನ! ರಣದಲ್ಲಿ ಕರ್ಣನಿಂದ ರಚಿಸಲ್ಪಟ್ಟ ಪಕ್ಷ ಪ್ರಪಕ್ಷಗಳಲ್ಲಿ ಸೇನೆಗಳ ಗುಂಪುಗಳಿಂದ ಪ್ರಕಾಶಿಸುವ ಮಹಾವ್ಯೂಹವನ್ನು ನೋಡು!

08031030a ತದೇತದ್ವೈ ಸಮಾಲೋಕ್ಯ ಪ್ರತ್ಯಮಿತ್ರಂ ಮಹದ್ಬಲಂ।
08031030c ಯಥಾ ನಾಭಿಭವತ್ಯಸ್ಮಾಂಸ್ತಥಾ ನೀತಿರ್ವಿಧೀಯತಾಂ।।

ಅಮಿತ್ರರ ಈ ಮಹಾಬಲವನ್ನು ಚೆನ್ನಾಗಿ ನೋಡಿ ಅವರಿಗೆ ಪ್ರತಿಯಾಗಿ ಯಾವುದು ಸರಿಯಾದುದೋ ಅದನ್ನು ಆಲೋಚಿಸಿ ಯುದ್ಧ ನೀತಿಯನ್ನು ಬಳಸುವವನಾಗು!”

08031031a ಏವಮುಕ್ತೋಽರ್ಜುನೋ ರಾಜ್ಞಾ ಪ್ರಾಂಜಲಿರ್ನೃಪಮಬ್ರವೀತ್।
08031031c ಯಥಾ ಭವಾನಾಹ ತಥಾ ತತ್ಸರ್ವಂ ನ ತದನ್ಯಥಾ।।
08031032a ಯಸ್ತ್ವಸ್ಯ ವಿಹಿತೋ ಘಾತಸ್ತಂ ಕರಿಷ್ಯಾಮಿ ಭಾರತ।
08031032c ಪ್ರಧಾನವಧ ಏವಾಸ್ಯ ವಿನಾಶಸ್ತಂ ಕರೋಮ್ಯಹಂ।।

ರಾಜನು ಹೀಗೆ ಹೇಳಲು ಅರ್ಜುನನು ಅಂಜಲೀ ಬದ್ಧನಾಗಿ ನೃಪನಿಗೆ ಹೇಳಿದನು: “ನೀನು ಹೇಳಿದುದೆಲ್ಲವೂ ಸರಿಯೇ! ಸುಳ್ಳಲ್ಲ! ಭಾರತ! ನೀನು ಯಾರನ್ನು ಸಂಹರಿಸಬೇಕೆಂದು ವಹಿಸಿಕೊಡುತ್ತೀಯೋ ಅದನ್ನೇ ನಾನು ಮಾಡುತ್ತೇನೆ. ಪ್ರಧಾನವಾಗಿ ಯಾರ ವಧೆಮಾಡಬೇಕೋ ಅದನ್ನು ನಾನು ಮಾಡುತ್ತೇನೆ.”

08031033 ಯುಧಿಷ್ಠಿರ ಉವಾಚ।
08031033a ತಸ್ಮಾತ್ತ್ವಮೇವ ರಾಧೇಯಂ ಭೀಮಸೇನಃ ಸುಯೋಧನಂ।
08031033c ವೃಷಸೇನಂ ಚ ನಕುಲಃ ಸಹದೇವೋಽಪಿ ಸೌಬಲಂ।।
08031034a ದುಃಶಾಸನಂ ಶತಾನೀಕೋ ಹಾರ್ದಿಕ್ಯಂ ಶಿನಿಪುಂಗವಃ।
08031034c ಧೃಷ್ಟದ್ಯುಮ್ನಸ್ತಥಾ ದ್ರೌಣಿಂ ಸ್ವಯಮ್ಯಾಸ್ಯಾಮ್ಯಹಂ ಕೃಪಂ।।

ಯುಧಿಷ್ಠಿರನು ಹೇಳಿದನು: “ನೀನು ರಾಧೇಯನನ್ನು, ಭೀಮಸೇನನು ಸುಯೋಧನನನ್ನು, ನಕುಲನು ವೃಷಸೇನನನ್ನು, ಸಹದೇವನು ಸೌಬಲನನ್ನು, ಶತಾನೀಕನು ದುಃಶಾಸನನನ್ನು, ಶಿನಿಪುಂಗವ ಸಾತ್ಯಕಿಯು ಹಾರ್ದಿಕ್ಯ ಕೃತವರ್ಮನನ್ನು, ಹಾಗೆಯೇ ಧೃಷ್ಟದ್ಯುಮ್ನನು ದ್ರೌಣಿಯನ್ನು ಮತ್ತು ಸ್ವಯಂ ನಾನು ಕೃಪನನ್ನು ಹೋರಾಡೋಣ.

08031035a ದ್ರೌಪದೇಯಾ ಧಾರ್ತರಾಷ್ಟ್ರಾಂ ಶಿಷ್ಟಾನ್ಸಹ ಶಿಖಂಡಿನಾ।
08031035c ತೇ ತೇ ಚ ತಾಂಸ್ತಾನಹಿತಾನಸ್ಮಾಕಂ ಘ್ನಂತು ಮಾಮಕಾಃ।।

ದ್ರೌಪದೇಯರು ಶಿಖಂಡಿಯೊಡಗೂಡಿ ಉಳಿದಿರುವ ಧಾರ್ತರಾಷ್ಟ್ರರೊಡನೆ ಯುದ್ಧಮಾಡಲಿ. ಹೀಗೆ ನಮ್ಮಕಡೆಯವರು ಶತ್ರುಸೇನೆಗಳೊಡನೆ ಯುದ್ಧಮಾಡಿ ಶತ್ರುಗಳನ್ನು ಸಂಹರಿಸಲಿ!””

08031036 ಸಂಜಯ ಉವಾಚ।
08031036a ಇತ್ಯುಕ್ತೋ ಧರ್ಮರಾಜೇನ ತಥೇತ್ಯುಕ್ತ್ವಾ ಧನಂಜಯಃ।
08031036c ವ್ಯಾದಿದೇಶ ಸ್ವಸೈನ್ಯಾನಿ ಸ್ವಯಂ ಚಾಗಾಚ್ಚಮೂಮುಖಂ।।

ಸಂಜಯನು ಹೇಳಿದನು: “ಧರ್ಮರಾಜನು ಹೀಗೆ ಹೇಳಲು ಧನಂಜಯನು ಹಾಗೆಯೇ ಆಗಲೆಂದು ಹೇಳಿ ತನ್ನ ಸೇನೆಗಳಿಗೆ ಆದೇಶವನ್ನಿತ್ತು ವ್ಯೂಹದ ಅಗ್ರಭಾಗದಲ್ಲಿ ತಾನೇ ಉಪಸ್ಥಿತನಾದನು.

08031037a ಅಥ ತಂ ರಥಮಾಯಾಂತಂ ದೃಷ್ಟ್ವಾತ್ಯದ್ಭುತದರ್ಶನಂ।
08031037c ಉವಾಚಾಧಿರಥಿಂ ಶಲ್ಯಃ ಪುನಸ್ತಂ ಯುದ್ಧದುರ್ಮದಂ।।

ಅದ್ಭುತವಾಗಿ ಕಾಣುತ್ತಿದ್ದ ಅರ್ಜುನನ ರಥವು ಬರುತ್ತಿರುವುದನ್ನು ಕಂಡು ಶಲ್ಯನು ಯುದ್ಧದುರ್ಮದ ಆಧಿರಥಿ ಕರ್ಣನಿಗೆ ಪುನಃ ಹೇಳಿದನು:

08031038a ಅಯಂ ಸ ರಥ ಆಯಾತಿ ಶ್ವೇತಾಶ್ವಃ ಕೃಷ್ಣಸಾರಥಿಃ।
08031038c ನಿಘ್ನನ್ನಮಿತ್ರಾನ್ಕೌಂತೇಯೋ ಯಂ ಯಂ ತ್ವಂ ಪರಿಪೃಚ್ಚಸಿ।।

“ಯಾರನ್ನು ನೀನು ಎಲ್ಲಿದ್ದಾನೆಂದು ಕೇಳುತ್ತಿದ್ದೆಯೋ ಆ ಶ್ವೇತಾಶ್ವ ಕೃಷ್ಣಸಾರಥಿ ಕೌಂತೇಯನು ಶತ್ರುಗಳನ್ನು ಸಂಹರಿಸಿ ಇಗೋ ಇಲ್ಲಿಗೇ ಬರುತ್ತಿದ್ದಾನೆ.

08031039a ಶ್ರೂಯತೇ ತುಮುಲಃ ಶಬ್ದೋ ರಥನೇಮಿಸ್ವನೋ ಮಹಾನ್।
08031039c ಏಷ ರೇಣುಃ ಸಮುದ್ಭೂತೋ ದಿವಮಾವೃತ್ಯ ತಿಷ್ಠತಿ।।

ಅವರ ರಥಚಕ್ರಗಳು ಅತಿದೊಡ್ಡ ತುಮುಲ ಶಬ್ಧವನ್ನುಂಟುಮಾಡುತ್ತಿದೆ. ರಥಚಲನದಿಂದ ಮೇಲೆದ್ದ ಧೂಳು ಆಕಾಶವನ್ನೂ ಆವರಿಸಿ ನಿಂತಿದೆ.

08031040a ಚಕ್ರನೇಮಿಪ್ರಣುನ್ನಾ ಚ ಕಂಪತೇ ಕರ್ಣ ಮೇದಿನೀ।
08031040c ಪ್ರವಾತ್ಯೇಷ ಮಹಾವಾಯುರಭಿತಸ್ತವ ವಾಹಿನೀಂ।
08031040e ಕ್ರವ್ಯಾದಾ ವ್ಯಾಹರಂತ್ಯೇತೇ ಮೃಗಾಃ ಕುರ್ವಂತಿ ಭೈರವಂ।।

ಕರ್ಣ! ರಥಚಕ್ರಗಳ ಸಂಘಟ್ಟನೆಯಿಂದ ಮೇದಿನಿಯೂ ಕಂಪಿಸುತ್ತಿದೆ. ನಿನ್ನ ಸೇನೆಯ ಸುತ್ತಲೂ ಚಂಡಮಾರುತವು ಬೀಸುತ್ತಿದೆ. ಮಾಂಸಾಶೀ ಮೃಗಗಳು ಸುತ್ತಾಡುತ್ತಿವೆ. ಮೃಗಗಳು ಭೈರವ ಕೂಗನ್ನು ಕೂಗುತ್ತಿವೆ.

08031041a ಪಶ್ಯ ಕರ್ಣ ಮಹಾಘೋರಂ ಭಯದಂ ಲೋಮಹರ್ಷಣಂ।
08031041c ಕಬಂಧಂ ಮೇಘಸಂಕಾಶಂ ಭಾನುಮಾವೃತ್ಯ ಸಂಸ್ಥಿತಂ।।

ಕರ್ಣ! ಮಹಾಘೋರ, ಭಯಂಕರ, ಲೋಮಹರ್ಷಣ, ಮೇಘಸಂಕಾಶ ಕಬಂಧ ಕೇತುಗ್ರಹವು ಸೂರ್ಯನನ್ನು ಆವರಿಸಿ ನಿಂತಿದೆ!

08031042a ಪಶ್ಯ ಯೂಥೈರ್ಬಹುವಿಧೈರ್ಮೃಗಾಣಾಂ ಸರ್ವತೋದಿಶಂ।
08031042c ಬಲಿಭಿರ್ದೃಪ್ತಶಾರ್ದೂಲೈರಾದಿತ್ಯೋಽಭಿನಿರೀಕ್ಷ್ಯತೇ।।

ಅಲ್ಲಿ ನೋಡು! ನಾಲ್ಕು ದಿಕ್ಕುಗಳಲ್ಲಿಯೂ ಬಹುವಿಧದ ಮೃಗ ಸಮೂಹಗಳು, ಬಲಶಾಲೀ ಮದಿಸಿದ ಹುಲಿಗಳೂ ಸೂರ್ಯನನ್ನೇ ದಿಟ್ಟಿಸಿ ನೋಡುತ್ತಿವೆ!

08031043a ಪಶ್ಯ ಕಂಕಾಂಶ್ಚ ಗೃಧ್ರಾಂಶ್ಚ ಸಮವೇತಾನ್ಸಹಸ್ರಶಃ।
08031043c ಸ್ಥಿತಾನಭಿಮುಖಾನ್ ಘೋರಾನನ್ಯೋನ್ಯಮಭಿಭಾಷತಃ।।

ಸಹಸ್ರಾರು ಘೋರ ರಣಹದ್ದುಗಳೂ ಹದ್ದುಗಳೂ ಒಂದೇ ಕಡೆ ಸೇರಿ ಪರಸ್ಪರರನ್ನು ವೀಕ್ಷಿಸುತ್ತಾ ಕೂಗುತ್ತಿವೆ!

08031044a ಸಿತಾಶ್ಚಾಶ್ವಾಃ ಸಮಾಯುಕ್ತಾಸ್ತವ ಕರ್ಣ ಮಹಾರಥೇ।
08031044c ಪ್ರದರಾಃ ಪ್ರಜ್ವಲಂತ್ಯೇತೇ ಧ್ವಜಶ್ಚೈವ ಪ್ರಕಂಪತೇ।।

ಕರ್ಣ! ನಿನ್ನ ಮಹಾರಥದ ಮೇಲೆ ಹಾರಿಸಿರುವ ಬಣ್ಣ-ಬಣ್ಣದ ಶ್ರೇಷ್ಠ ಚಾಮರಗಳು ಇದ್ದಕ್ಕಿದ್ದಂತೆಯೇ ಪ್ರಜ್ವಲಿಸುತ್ತಿವೆ. ಧ್ವಜವೂ ಕಂಪಿಸುತ್ತಿದೆ.

08031045a ಉದೀರ್ಯತೋ ಹಯಾನ್ಪಶ್ಯ ಮಹಾಕಾಯಾನ್ಮಹಾಜವಾನ್।
08031045c ಪ್ಲವಮಾನಾನ್ದರ್ಶನೀಯಾನಾಕಾಶೇ ಗರುಡಾನಿವ।।

ಆಕಾಶದಲ್ಲಿ ಗರುಡನಂತೆ ಹಾರಿಹೋಗುವ ಮಹಾಕಾಯದ ಮಹಾವೇಗದ ನಿನ್ನ ಕುದುರೆಗಳು ಥರಥರನೆ ನಡುಗುತ್ತಿರುವುದನ್ನು ನೋಡು!

08031046a ಧ್ರುವಮೇಷು ನಿಮಿತ್ತೇಷು ಭೂಮಿಮಾವೃತ್ಯ ಪಾರ್ಥಿವಾಃ।
08031046c ಸ್ವಪ್ಸ್ಯಂತಿ ನಿಹತಾಃ ಕರ್ಣ ಶತಶೋಽಥ ಸಹಸ್ರಶಃ।।

ಕರ್ಣ! ಇಂತಹ ನಿಮಿತ್ತಗಳು ಕಾಣುತ್ತಿರಲು ನಿಶ್ಚಯವಾಗಿಯೂ ಇಂದು ನೂರಾರು ಸಹಸ್ರಾರು ಪಾರ್ಥಿವರು ಹತರಾಗಿ ಭೂಮಿಯ ಮೇಲೆ ಮಲಗುತ್ತಾರೆ!

08031047a ಶಂಖಾನಾಂ ತುಮುಲಃ ಶಬ್ಧಃ ಶ್ರೂಯತೇ ಲೋಮಹರ್ಷಣಃ।
08031047c ಆನಕಾನಾಂ ಚ ರಾಧೇಯ ಮೃದಂಗಾನಾಂ ಚ ಸರ್ವಶಃ।।

ರಾಧೇಯ! ಎಲ್ಲೆಡೆಯಲ್ಲಿಯೂ ಶಂಖ, ಅನಕ ಮತ್ತು ಮೃದಂಗಗಳ ಲೋಮಹರ್ಷಣ ತುಮುಲ ಶಬ್ಧಗಳು ಕೇಳಿಬರುತ್ತಿವೆ!

08031048a ಬಾಣಶಬ್ದಾನ್ಬಹುವಿಧಾನ್ನರಾಶ್ವರಥನಿಸ್ವನಾನ್।
08031048c ಜ್ಯಾತಲತ್ರೇಷುಶಬ್ಧಾಂಶ್ಚ ಶೃಣು ಕರ್ಣ ಮಹಾತ್ಮನಾಂ।।

ಕರ್ಣ! ಬಾಣಗಳ ಶಬ್ಧವನ್ನೂ, ಬಹುವಿಧದ ನರ-ಅಶ್ವ-ರಥಗಳ ಶಬ್ಧಗಳನ್ನೂ, ಮಹಾತ್ಮರ ಧನುಸ್ಸಿನ ಟೇಂಕಾರ ಮತ್ತು ಚಪ್ಪಾಳೆಯ ಶಬ್ಧಗಳನ್ನೂ ಕೇಳು!

08031049a ಹೇಮರೂಪ್ಯಪ್ರಮೃಷ್ಟಾನಾಂ ವಾಸಸಾಂ ಶಿಲ್ಪಿನಿರ್ಮಿತಾಃ।
08031049c ನಾನಾವರ್ಣಾ ರಥೇ ಭಾಂತಿ ಶ್ವಸನೇನ ಪ್ರಕಂಪಿತಾಃ।।

ಅವನ ರಥದ ಧ್ವಜದಂಡಗಳ ಮೇಲೆ ಸುವರ್ಣ-ರಜತಗಳಿಂದ ಚಿತ್ರಿತ ಬಟ್ಟೆಗಳಿಂದ ಶಿಲ್ಪಿಗಳು ನಿರ್ಮಿಸಿದ ನಾನಾವರ್ಣಗಳ ಪತಾಕೆಗಳು ಗಾಳಿಯಲ್ಲಿ ಹಾರಾಡಿ ಬಹಳವಾಗಿ ಪ್ರಕಾಶಿಸುತ್ತಿವೆ!

08031050a ಸಹೇಮಚಂದ್ರತಾರಾರ್ಕಾಃ ಪತಾಕಾಃ ಕಿಂಕಿಣೀಯುತಾಃ।
08031050c ಪಶ್ಯ ಕರ್ಣಾರ್ಜುನಸ್ಯೈತಾಃ ಸೌದಾಮಿನ್ಯ ಇವಾಂಬುದೇ।।

ಕರ್ಣ! ಬಂಗಾರದ ಚಂದ್ರ, ನಕ್ಷತ್ರ ಮತ್ತು ಸೂರ್ಯರಿರುವ ಕಿಂಕಿಣೀಯುಕ್ತ ಅರ್ಜುನನ ಪತಾಕೆಗಳು ಮೋಡಗಳ ಮಿಂಚಿನಂತೆ ರಾರಾಜಿಸುತ್ತಿರುವುದನ್ನು ನೋಡು!

08031051a ಧ್ವಜಾಃ ಕಣಕಣಾಯಂತೇ ವಾತೇನಾಭಿಸಮೀರಿತಾಃ।
08031051c ಸಪತಾಕಾ ರಥಾಶ್ಚಾಪಿ ಪಾಂಚಾಲಾನಾಂ ಮಹಾತ್ಮನಾಂ।।

ಗಾಳಿಗೆ ಸಿಲುಕಿದ ಅವನ ಧ್ವಜಗಳು ಕಣ-ಕಣ ಶಬ್ಧಮಾಡುತ್ತಿವೆ. ಪತಾಕೆಗಳುಳ್ಳ ಆ ರಥಗಳು ಮಹಾತ್ಮ ಪಾಂಚಾಲರದ್ದು.

08031052a ನಾಗಾಶ್ವರಥಪತ್ತ್ಯೌಘಾಂಸ್ತಾವಕಾನ್ಸಮಭಿಘ್ನತಃ।
08031052c ಧ್ವಜಾಗ್ರಂ ದೃಶ್ಯತೇ ತ್ವಸ್ಯ ಜ್ಯಾಶಬ್ದಶ್ಚಾಪಿ ಶ್ರೂಯತೇ।।

ನಿನ್ನ ಕಡೆಯ ಆನೆ-ಕುದುರೆ-ರಥ-ಪದಾತಿಗಳ ಗುಂಪುಗಳನ್ನು ಸಂಹರಿಸುತ್ತಿರುವ ಅವನ ಧ್ವಜಾಗ್ರವು ಕಾಣಿಸುತ್ತಿದೆ. ಧನುಸ್ಸಿನ ಟೇಂಕಾರವೂ ಕೇಳಿಸುತ್ತಿದೆ.

08031053a ಅದ್ಯ ದ್ರಷ್ಟಾಸಿ ತಂ ವೀರಂ ಶ್ವೇತಾಶ್ವಂ ಕೃಷ್ಣಸಾರಥಿಂ।
08031053c ನಿಘ್ನಂತಂ ಶಾತ್ರವಾನ್ಸಂಖ್ಯೇ ಯಂ ಕರ್ಣ ಪರಿಪೃಚ್ಚಸಿ।।

ಕರ್ಣ! ನೀನು ಎಲ್ಲಿರುವನೆಂದು ಕೇಳುತ್ತಿದ್ದ ಆ ವೀರ ಶ್ವೇತಾಶ್ವ ಕೃಷ್ಣಸಾರಥಿ, ಯುದ್ಧದಲ್ಲಿ ಶತ್ರುಗಳನ್ನು ಸಂಹರಿಸುತ್ತಿರುವ ಅರ್ಜುನನನ್ನೇ ನೀನು ಇಂದು ನೋಡುವೆ!

08031054a ಅದ್ಯ ತೌ ಪುರುಷವ್ಯಾಘ್ರೌ ಲೋಹಿತಾಕ್ಷೌ ಪರಂತಪೌ।
08031054c ವಾಸುದೇವಾರ್ಜುನೌ ಕರ್ಣ ದ್ರಷ್ಟಾಸ್ಯೇಕರಥಸ್ಥಿತೌ।।

ಕರ್ಣ! ಇಂದು ಒಂದೇ ರಥದಲ್ಲಿ ಕುಳಿತಿರುವ ಆ ಇಬ್ಬರು ಪುರುಷವ್ಯಾಘ್ರ, ಲೋಹಿತಾಕ್ಷ, ಪರಂತಪ ವಾಸುದೇವ-ಅರ್ಜುನರನ್ನು ನೀನು ನೋಡುವೆ!

08031055a ಸಾರಥಿರ್ಯಸ್ಯ ವಾರ್ಷ್ಣೇಯೋ ಗಾಂಡೀವಂ ಯಸ್ಯ ಕಾರ್ಮುಕಂ।
08031055c ತಂ ಚೇದ್ಧಂತಾಸಿ ರಾಧೇಯ ತ್ವಂ ನೋ ರಾಜಾ ಭವಿಷ್ಯಸಿ।।

ರಾಧೇಯ! ಯಾರ ಸಾರಥಿಯು ವಾರ್ಷ್ಣೇಯನೋ ಮತ್ತು ಯಾರ ಧನುಸ್ಸು ಗಾಂಡೀವವೋ ಆ ಅರ್ಜುನನನ್ನು ನೀನು ಸಂಹರಿಸಿದೆಯಾದರೆ ನೀನೇ ನಮಗೆ ರಾಜನಾಗುವೆ!

08031056a ಏಷ ಸಂಶಪ್ತಕಾಹೂತಸ್ತಾನೇವಾಭಿಮುಖೋ ಗತಃ।
08031056c ಕರೋತಿ ಕದನಂ ಚೈಷಾಂ ಸಂಗ್ರಾಮೇ ದ್ವಿಷತಾಂ ಬಲೀ।
08031056e ಇತಿ ಬ್ರುವಾಣಂ ಮದ್ರೇಶಂ ಕರ್ಣಃ ಪ್ರಾಹಾತಿಮನ್ಯುಮಾನ್।।

ಸಂಶಪ್ತಕರಿಂದ ಆಹ್ವಾನಿತರಾಗಿ ಅವರನ್ನೇ ಎದುರಿಸಿ ಅವನು ಹೋಗಿದ್ದನು. ಬಲಿಷ್ಠ ಅರ್ಜುನನು ಸಂಗ್ರಾಮದಲ್ಲಿ ಶತ್ರುಗಳೊಡನೆ ಕದನವಾಡುತ್ತಾನೆ!” ಹೀಗೆ ಹೇಳುತ್ತಿರುವ ಮದ್ರೇಶನಿಗೆ ಕರ್ಣನು ಕೋಪಗೊಂಡು ಇಂತೆಂದನು:

08031057a ಪಶ್ಯ ಸಂಶಪ್ತಕೈಃ ಕ್ರುದ್ಧೈಃ ಸರ್ವತಃ ಸಮಭಿದ್ರುತಃ।
08031057c ಏಷ ಸೂರ್ಯ ಇವಾಂಭೋದೈಶ್ಚನ್ನಃ ಪಾರ್ಥೋ ನ ದೃಶ್ಯತೇ।
08031057e ಏತದಂತೋಽರ್ಜುನಃ ಶಲ್ಯ ನಿಮಗ್ನಃ ಶೋಕಸಾಗರೇ।।

“ನೋಡು! ಕ್ರುದ್ಧ ಸಂಶಪ್ತಕರು ಅವನನ್ನು ಎಲ್ಲಕಡೆಗಳಿಂದ ಮುತ್ತಿಗೆ ಹಾಕಿದ್ದಾರೆ! ಮೋಡಗಳಿಂದ ಮುಸುಕಲ್ಪಟ್ಟ ಸೂರ್ಯನಂತೆ ಪ್ರಾರ್ಥನು ಕಾಣುತ್ತಲೇ ಇಲ್ಲ! ಶಲ್ಯ! ಇದೇ ಅರ್ಜುನನ ಅಂತ್ಯವೆಂದು ಸೇನೆಗಳು ಶೋಕಸಾಗರದಲ್ಲಿ ಮುಳುಗಿವೆ!”

08031058 ಶಲ್ಯ ಉವಾಚ।
08031058a ವರುಣಂ ಕೋಽಮ್ಭಸಾ ಹನ್ಯಾದಿಂದನೇನ ಚ ಪಾವಕಂ।
08031058c ಕೋ ವಾನಿಲಂ ನಿಗೃಹ್ಣೀಯಾತ್ಪಿಬೇದ್ವಾ ಕೋ ಮಹಾರ್ಣವಂ।।

ಶಲ್ಯನು ಹೇಳಿದನು: “ವರುಣನನ್ನು ನೀರಿನಿಂದ ಅಥವಾ ಇಂಧನದಿಂದ ಪಾವಕನನ್ನು ಯಾರುತಾನೇ ನಾಶಗೊಳಿಸಬಲ್ಲರು? ಯಾರುತಾನೇ ವಾಯುವನ್ನು ಬಂಧಿಸಬಲ್ಲರು ಅಥವಾ ಮಹಾರ್ಣವವನ್ನು ಯಾರುತಾನೇ ಕುಡಿದುಬಿಡಬಲ್ಲರು?

08031059a ಈದೃಗ್ರೂಪಮಹಂ ಮನ್ಯೇ ಪಾರ್ಥಸ್ಯ ಯುಧಿ ನಿಗ್ರಹಂ।
08031059c ನ ಹಿ ಶಕ್ಯೋಽರ್ಜುನೋ ಜೇತುಂ ಸೇಂದ್ರೈಃ ಸರ್ವೈಃ ಸುರಾಸುರೈಃ।।

ಯುದ್ಧದಲ್ಲಿ ಪಾರ್ಥನನ್ನು ನಿಗ್ರಹಿಸುವುದೂ ಇದೇ ರೀತಿಯದೆಂದು ನನಗನ್ನಿಸುತ್ತದೆ. ಇಂದ್ರನ ಸಹಿತರಾಗಿ ಸುರಾಸುರರೆಲ್ಲರಿಗೂ ಅರ್ಜುನನನ್ನು ಗೆಲ್ಲಲು ಶಕ್ಯವಿಲ್ಲ.

08031060a ಅಥೈವಂ ಪರಿತೋಷಸ್ತೇ ವಾಚೋಕ್ತ್ವಾ ಸುಮನಾ ಭವ।
08031060c ನ ಸ ಶಕ್ಯೋ ಯುಧಾ ಜೇತುಮನ್ಯಂ ಕುರು ಮನೋರಥಂ।।

ಅಥವಾ ಅವನನ್ನು ಗೆಲ್ಲುತ್ತೇನೆ ಎಂದು ಹೇಳುವುದರಿಂದಲೇ ನಿನಗೆ ಸಂತೋಷವಾಗುವುದಾದರೆ ಹಾಗೆ ಹೇಳಿ ಸಂತೋಷಪಡು! ಯುದ್ಧದಲ್ಲಿ ಇವನನ್ನು ಗೆಲ್ಲಲು ಶಕ್ಯವಿಲ್ಲ. ನಿನ್ನ ಮನೋರಥವನ್ನು ಬದಲಾಯಿಸಿಕೋ!

08031061a ಬಾಹುಭ್ಯಾಮುದ್ಧರೇದ್ಭೂಮಿಂ ದಹೇತ್ಕ್ರುದ್ಧ ಇಮಾಃ ಪ್ರಜಾಃ।
08031061c ಪಾತಯೇತ್ತ್ರಿದಿವಾದ್ದೇವಾನ್ಯೋಽರ್ಜುನಂ ಸಮರೇ ಜಯೇತ್।।

ಅರ್ಜುನನನ್ನು ಯಾರು ಸಮರದಲ್ಲಿ ಜಯಿಸಬಲ್ಲನೋ ಅವನು ಎರಡೂ ಬಾಹುಗಳಿಂದಲೇ ಭೂಮಿಯನ್ನು ಎತ್ತಬಲ್ಲನು. ಕ್ರುದ್ಧನಾಗಿ ಇರುವವುಗಳೆಲ್ಲವನ್ನೂ ದಹಿಸಬಲ್ಲನು. ಮತ್ತು ಸ್ವರ್ಗದಿಂದ ದೇವತೆಗಳನ್ನು ಬೀಳಿಸಬಲ್ಲನು.

08031062a ಪಶ್ಯ ಕುಂತೀಸುತಂ ವೀರಂ ಭೀಮಮಕ್ಲಿಷ್ಟಕಾರಿಣಂ।
08031062c ಪ್ರಭಾಸಂತಂ ಮಹಾಬಾಹುಂ ಸ್ಥಿತಂ ಮೇರುಮಿವಾಚಲಂ।।

ಭಯಂಕರ, ಅಕ್ಲಿಷ್ಟಕಾರಿ, ಮೇರು ಪರ್ವತದಂತೆ ಅಚಲನಾಗಿ ಪ್ರಕಾಶಿಸುತ್ತಿರುವ ಮಹಾಬಾಹು ಕುಂತೀಸುತ ವೀರನನ್ನು ನೋಡು!

08031063a ಅಮರ್ಷೀ ನಿತ್ಯಸಂರಬ್ಧಶ್ಚಿರಂ ವೈರಮನುಸ್ಮರನ್।
08031063c ಏಷ ಭೀಮೋ ಜಯಪ್ರೇಪ್ಸುರ್ಯುಧಿ ತಿಷ್ಠತಿ ವೀರ್ಯವಾನ್।।

ಅಸಹನಶೀಲ, ನಿತ್ಯಕೋಪಿಷ್ಟ, ವಿಜಯೇಚ್ಛು ವೀರ್ಯವಾನ್ ಭೀಮನು ಇಗೋ ಹಿಂದಿನ ವೈರವನ್ನು ನೆನಪಿಸಿಕೊಳ್ಳುತ್ತಾ ಯುದ್ಧಕ್ಕೆ ನಿಂತಿದ್ದಾನೆ!

08031064a ಏಷ ಧರ್ಮಭೃತಾಂ ಶ್ರೇಷ್ಠೋ ಧರ್ಮರಾಜೋ ಯುಧಿಷ್ಠಿರಃ।
08031064c ತಿಷ್ಠತ್ಯಸುಕರಃ ಸಂಖ್ಯೇ ಪರೈಃ ಪರಪುರಂಜಯಃ।।

ಇಗೋ! ಶತ್ರುಗಳನ್ನು ನಾಶಗೊಳಿಸುವ ಪರಪುರಂಜಯ ಧರ್ಮಭೃತರಲ್ಲಿ ಶ್ರೇಷ್ಠ ಧರ್ಮರಾಜ ಯುಧಿಷ್ಠಿರನು ಯುದ್ಧಕ್ಕೆ ಅಣಿಯಾಗಿ ನಿಂತಿದ್ದಾನೆ!

08031065a ಏತೌ ಚ ಪುರುಷವ್ಯಾಘ್ರಾವಶ್ವಿನಾವಿವ ಸೋದರೌ।
08031065c ನಕುಲಃ ಸಹದೇವಶ್ಚ ತಿಷ್ಠತೋ ಯುಧಿ ದುರ್ಜಯೌ।।

ಇಗೋ! ಅಶ್ವಿನಿಗಳಂತಿರುವ ನಕುಲ ಸಹದೇವ ಸೋದರರಿಬ್ಬರು ದುರ್ಜಯ ಪುರುಷವ್ಯಾಘ್ರರೂ ಯುದ್ಧಕ್ಕೆ ನಿಂತಿದ್ದಾರೆ!

08031066a ದೃಶ್ಯಂತ ಏತೇ ಕಾರ್ಷ್ಣೇಯಾಃ ಪಂಚ ಪಂಚಾಚಲಾ ಇವ।
08031066c ವ್ಯವಸ್ಥಿತಾ ಯೋತ್ಸ್ಯಮಾನಾಃ ಸರ್ವೇಽರ್ಜುನಸಮಾ ಯುಧಿ।।

ಯುದ್ಧದಲ್ಲಿ ಅರ್ಜುನನಿಗೆ ಸಮನಾದ ಕೃಷ್ಣೆಯ ಎಲ್ಲ ಐವರು ಮಕ್ಕಳೂ ಐದು ಪರ್ವತಗಳಂತೆ ಯುದ್ಧಕ್ಕೆ ಅಣಿಯಾಗಿ ನಿಂತಿರುವುದು ಕಾಣುತ್ತಿದೆ!

08031067a ಏತೇ ದ್ರುಪದಪುತ್ರಾಶ್ಚ ಧೃಷ್ಟದ್ಯುಮ್ನಪುರೋಗಮಾಃ।
08031067c ಹೀನಾಃ ಸತ್ಯಜಿತಾ ವೀರಾಸ್ತಿಷ್ಠಂತಿ ಪರಮೌಜಸಃ।।

ಇಗೋ! ಧೃಷ್ಟದ್ಯುಮ್ನನ ನೇತೃತ್ವದಲ್ಲಿ ದ್ರುಪದನ ಸತ್ಯಜಿತ, ಪರಮೌಜಸ ವೀರ ಪುತ್ರರೂ ನಿಂತಿದ್ದಾರೆ!”

08031068a ಇತಿ ಸಂವದತೋರೇವ ತಯೋಃ ಪುರುಷಸಿಂಹಯೋಃ।
08031068c ತೇ ಸೇನೇ ಸಮಸಜ್ಜೇತಾಂ ಗಂಗಾಯಮುನವದ್ಭೃಶಂ।।

ಆ ಇಬ್ಬರು ಪುರುಷಸಿಂಹರೂ ಹೀಗೆ ಮಾತನಾಡಿಕೊಳ್ಳುತ್ತಿರಲು ಆ ಎರಡು ಸೇನೆಗಳೂ ಗಂಗೆ-ಯಮುನೆಯರಂತೆ ವೇಗದಿಂದ ಪರಸ್ಪರರೊಡನೆ ಸಮ್ಮಿಳಿತವಾದವು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಕರ್ಣಶಲ್ಯಸಂವಾದೇ ಏಕತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಕರ್ಣಶಲ್ಯಸಂವಾದ ಎನ್ನುವ ಮೂವತ್ತೊಂದನೇ ಅಧ್ಯಾಯವು.