ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 30
ಸಾರ
ಕರ್ಣನು ನಿದರ್ಶನಗಳನ್ನು ನೀಡುತ್ತಾ ಬಾಹ್ಲೀಕ-ಮದ್ರದೇಶದ ಜನರನ್ನು ಹೀಯಾಳಿಸಿದ್ದುದು (1-88).
08030001 ಸಂಜಯ ಉವಾಚ।
08030001a ತತಃ ಪುನರ್ಮಹಾರಾಜ ಮದ್ರರಾಜಮರಿಂದಮಂ।
08030001c ಅಭ್ಯಭಾಷತ ರಾಧೇಯಃ ಸನ್ನಿವಾರ್ಯೋತ್ತರಂ ವಚಃ।।
ಸಂಜಯನು ಹೇಳಿದನು: “ಮಹಾರಾಜ! ಉತ್ತರವಾಗಿ ಮಾತನಾಡುತ್ತಿದ್ದ ಅರಿಂದಮ ಮದ್ರರಾಜನನ್ನು ತಡೆದು ರಾಧೇಯನು ಪುನಃ ಮಾತನಾಡಿದನು:
08030002a ಯತ್ತ್ವಂ ನಿದರ್ಶನಾರ್ಥಂ ಮಾಂ ಶಲ್ಯ ಜಲ್ಪಿತವಾನಸಿ।
08030002c ನಾಹಂ ಶಕ್ಯಸ್ತ್ವಯಾ ವಾಚಾ ವಿಭೀಷಯಿತುಮಾಹವೇ।।
“ಶಲ್ಯ! ನಿದರ್ಶನಗಳನ್ನಿತ್ತು ಪ್ರಯತ್ನಪಟ್ಟು ನನ್ನನ್ನು ಹಳಿದು ಮಾತನಾಡುತ್ತಿದ್ದೀಯೆ! ನಿನ್ನ ಮಾತಿನಿಂದ ಯುದ್ಧದಲ್ಲಿ ನನ್ನನ್ನು ಹೆದರಿಸಲು ಶಕ್ಯವಿಲ್ಲ.
08030003a ಯದಿ ಮಾಂ ದೇವತಾಃ ಸರ್ವಾ ಯೋಧಯೇಯುಃ ಸವಾಸವಾಃ।
08030003c ತಥಾಪಿ ಮೇ ಭಯಂ ನ ಸ್ಯಾತ್ಕಿಮು ಪಾರ್ಥಾತ್ಸಕೇಶವಾತ್।।
ವಾಸವನೊಡಗೂಡಿ ಸರ್ವ ದೇವತೆಗಳೂ ನನ್ನೊಡನೆ ಯುದ್ಧಮಾಡಿದರೂ ಅದರಲ್ಲಿ ನನಗೆ ಭಯವಿಲ್ಲದಿರುವಾಗ ಇನ್ನು ಕೇಶವನೊಂದಿಗಿರುವ ಪಾರ್ಥನಿಂದ ಎಂಥಹ ಭಯ?
08030004a ನಾಹಂ ಭೀಷಯಿತುಂ ಶಕ್ಯೋ ವಾಮ್ಮಾತ್ರೇಣ ಕಥಂ ಚನ।
08030004c ಅನ್ಯಂ ಜಾನೀಹಿ ಯಃ ಶಕ್ಯಸ್ತ್ವಯಾ ಭೀಷಯಿತುಂ ರಣೇ।।
ಕೇವಲ ಮಾತಿನಿಂದ ನನ್ನನ್ನು ಹೆದರಿಸಲು ಎಂದೂ ಶಕ್ಯವಾಗಲಾರದು. ಹೀಗೆ ರಣದಲ್ಲಿ ನಿನ್ನಿಂದ ಬೆದರುವವರು ಬೇರೆ ಯಾರಾದರೂ ಇದ್ದರೆ ಅವರ ಬಳಿ ಹೋಗು!
08030005a ನೀಚಸ್ಯ ಬಲಮೇತಾವತ್ಪಾರುಷ್ಯಂ ಯತ್ತ್ವಮಾತ್ಥ ಮಾಂ।
08030005c ಅಶಕ್ತೋಽಸ್ಮದ್ಗುಣಾನ್ಪ್ರಾಪ್ತುಂ ವಲ್ಗಸೇ ಬಹು ದುರ್ಮತೇ।।
ದುರ್ಮತೇ! ಈ ರೀತಿಯ ಕಠೋರ ಮಾತುಗಳು ನೀಚನಿಗೇ ಬಲವನ್ನು ಕೊಡುವಂಥವು. ನನ್ನಲ್ಲಿರುವ ಸದ್ಗುಣಗಳನ್ನು ಪಡೆಯಲು ಅಸಮರ್ಥನಾಗಿರುವ ನೀನು ಬಹಳವಾಗಿ ಮಾತನಾಡುತ್ತಿರುವೆ!
08030006a ನ ಹಿ ಕರ್ಣಃ ಸಮುದ್ಭೂತೋ ಭಯಾರ್ಥಮಿಹ ಮಾರಿಷ।
08030006c ವಿಕ್ರಮಾರ್ಥಮಹಂ ಜಾತೋ ಯಶೋರ್ಥಂ ಚ ತಥೈವ ಚ।।
ಮಾರಿಷ! ಕರ್ಣನು ಹುಟ್ಟಿರುವುದು ಭಯಪಡುವುದಕ್ಕಲ್ಲ. ನಾನು ಹುಟ್ಟಿರುವುದು ವಿಕ್ರಮ-ಯಶಸ್ಸುಗಳಿಗಾಗಿ!
08030007a ಇದಂ ತು ಮೇ ತ್ವಮೇಕಾಗ್ರಃ ಶೃಣು ಮದ್ರಜನಾಧಿಪ।
08030007c ಸನ್ನಿಧೌ ಧೃತರಾಷ್ಟ್ರಸ್ಯ ಪ್ರೋಚ್ಯಮಾನಂ ಮಯಾ ಶ್ರುತಂ।।
ಮದ್ರಜನಾಧಿಪ! ಧೃತರಾಷ್ಟ್ರನ ಸನ್ನಿಧಿಯನ್ನು ಹೇಳಿದುದನ್ನು ಮತ್ತು ನಾನು ಕೇಳಿದುದನ್ನು ಏಕಾಗ್ರಚಿತ್ತನಾಗಿ ಕೇಳು.
08030008a ದೇಶಾಂಶ್ಚ ವಿವಿಧಾಂಶ್ಚಿತ್ರಾನ್ಪೂರ್ವವೃತ್ತಾಂಶ್ಚ ಪಾರ್ಥಿವಾನ್।
08030008c ಬ್ರಾಹ್ಮಣಾಃ ಕಥಯಂತಃ ಸ್ಮ ಧೃತರಾಷ್ಟ್ರಮುಪಾಸತೇ।।
ಬ್ರಾಹ್ಮಣರು ವಿವಿಧ ವಿಚಿತ್ರ ದೇಶಗಳು ಮತ್ತು ರಾಜರ ಪೂರ್ವವೃತ್ತಾಂತಗಳನ್ನು ಹೇಳುತ್ತಾ ಧೃತರಾಷ್ಟ್ರನನ್ನು ಉಪಾಸಿಸುತ್ತಿದ್ದರು.
08030009a ತತ್ರ ವೃದ್ಧಃ ಪುರಾವೃತ್ತಾಃ ಕಥಾಃ ಕಾಶ್ಚಿದ್ದ್ವಿಜೋತ್ತಮಃ।
08030009c ಬಾಹ್ಲೀಕದೇಶಂ ಮದ್ರಾಂಶ್ಚ ಕುತ್ಸಯನ್ವಾಕ್ಯಮಬ್ರವೀತ್।।
ಅಲ್ಲಿ ಪುರಾಣ ವೃತ್ತಾಂತಗಳನ್ನು ಹೇಳುತ್ತಿದ್ದ ಓರ್ವ ದ್ವಿಜೋತ್ತಮನು ಬಾಹ್ಲೀಕ ಮತ್ತು ಮದ್ರ ದೇಶಗಳನ್ನು ಹಳಿಯುತ್ತಾ ಈ ಮಾತುಗಳನ್ನಾಡಿದ್ದನು:
08030010a ಬಹಿಷ್ಕೃತಾ ಹಿಮವತಾ ಗಂಗಯಾ ಚ ತಿರಸ್ಕೃತಾಃ।
08030010c ಸರಸ್ವತ್ಯಾ ಯಮುನಯಾ ಕುರುಕ್ಷೇತ್ರೇಣ ಚಾಪಿ ಯೇ।।
08030011a ಪಂಚಾನಾಂ ಸಿಂದುಷಷ್ಠಾನಾಂ ನದೀನಾಂ ಯೇಽಮ್ತರಾಶ್ರಿತಾಃ।
08030011c ತಾನ್ಧರ್ಮಬಾಹ್ಯಾನಶುಚೀನ್ಬಾಹ್ಲೀಕಾನ್ಪರಿವರ್ಜಯೇತ್।।
“ಹಿಮಾಲಯ, ಗಂಗೆ, ಯಮುನಾ, ಸರಸ್ವತಿ ಮತ್ತು ಕುರುಕ್ಷೇತ್ರಗಳ ಗಡಿಗಳ ಹೊರಗಿರುವ ಮತ್ತು ಆರನೆಯದಾದ ಸಿಂಧು ಮತ್ತು ಐದು ನದಿಗಳ ಮಧ್ಯೆ ವಾಸಿಸುತ್ತಿರುವ ಬಾಹ್ಲೀಕರನ್ನು ಧರ್ಮಬಾಹಿರರೆಂದೂ ಅಶುಚಿಗಳೆಂದೂ ವರ್ಜಿಸಬೇಕು.
08030012a ಗೋವರ್ಧನೋ ನಾಮ ವಟಃ ಸುಭಾಂಡಂ ನಾಮ ಚತ್ವರಂ।
08030012c ಏತದ್ರಾಜಕುಲದ್ವಾರಮಾಕುಮಾರಃ ಸ್ಮರಾಮ್ಯಹಂ।।
ರಾಜಕುಲದ್ವಾರದಲ್ಲಿರುವ ಗೋವರ್ಧನ ಎಂಬ ವಟವೃಕ್ಷವನ್ನೂ ಸುಭಾಂಡ ಎನ್ನುವ ಚೌಕವನ್ನೂ ನಾನು ಬಾಲ್ಯದಿಂದ ಜ್ಞಾಪಕದಲ್ಲಿಟ್ಟುಕೊಂಡಿದ್ದೇನೆ.
08030013a ಕಾರ್ಯೇಣಾತ್ಯರ್ಥಗಾಢೇನ ಬಾಹ್ಲೀಕೇಷೂಷಿತಂ ಮಯಾ।
08030013c ತತ ಏಷಾಂ ಸಮಾಚಾರಃ ಸಂವಾಸಾದ್ವಿದಿತೋ ಮಮ।।
ಯಾವುದೋ ಗೂಢ ಕಾರ್ಯಕ್ಕಾಗಿ ನಾನು ಬಾಹ್ಲೀಕರಲ್ಲಿ ಉಳಿದುಕೊಂಡಿದ್ದೆನು. ಆಗ ಅಲ್ಲಿ ಅವರೊಂದಿಗೆ ವ್ಯವಹರಿಸುತ್ತಾ ಅವರ ಸಮಾಚಾರಗಳೆಲ್ಲವನ್ನೂ ನಾನು ತಿಳಿದುಕೊಂಡೆನು.
08030014a ಶಾಕಲಂ ನಾಮ ನಗರಮಾಪಗಾ ನಾಮ ನಿಮ್ನಗಾ।
08030014c ಜರ್ತಿಕಾ ನಾಮ ಬಾಹ್ಲೀಕಾಸ್ತೇಷಾಂ ವೃತ್ತಂ ಸುನಿಂದಿತಂ।।
ಶಾಕಲವೆಂಬ ಹೆಸರಿನ ನಗರ, ಆಪಗಾ ಎಂಬ ಹೆಸರಿನ ನದಿಯ ಬಳಿಯಿರುವ ಜರ್ತಿಕಾ ಎಂಬ ಹೆಸರಿನ ಬಾಹ್ಲೀಕರ ನಡತೆಗಳು ಅತಿ ನಿಂದನೀಯವಾದವುಗಳು.
08030015a ಧಾನಾಗೌಡಾಸವೇ ಪೀತ್ವಾ ಗೋಮಾಂಸಂ ಲಶುನೈಃ ಸಹ।
08030015c ಅಪೂಪಮಾಂಸವಾಟ್ಯಾನಾಮಾಶಿನಃ ಶೀಲವರ್ಜಿತಾಃ।।
ಧಾನ್ಯ-ಬೆಲ್ಲಗಳಿಂದ ಮಾಡಿದ ಮದ್ಯವನ್ನು ಕುಡಿಯುತ್ತಾ, ಬೆಳ್ಳುಳ್ಳಿಯೊಂದಿಗೆ ಗೋಮಾಂಸವನ್ನು, ಅಪೂಪವನ್ನು, ಮಾಂಸವನ್ನು ಮತ್ತು ಯವಾನ್ನವನ್ನೂ ತಿನ್ನುವ ಅವರು ಶೀಲವರ್ಜಿತರು.
08030016a ಹಸಂತಿ ಗಾಂತಿ ನೃತ್ಯಂತಿ ಸ್ತ್ರೀಭಿರ್ಮತ್ತಾ ವಿವಾಸಸಃ।
08030016c ನಗರಾಗಾರವಪ್ರೇಷು ಬಹಿರ್ಮಾಲ್ಯಾನುಲೇಪನಾಃ।।
ಅಲ್ಲಿಯ ಸ್ತ್ರೀಯರು ನಗರ ದ್ವಾರಗಳಲ್ಲಿ, ಪ್ರಾಕಾರಗಳಲ್ಲಿ ಮಾಲೆ-ಗಂಧಗಳನ್ನು ಧರಿಸದೆಯೇ ಮತ್ತರಾಗಿ ನಗ್ನರಾಗಿ ನಗುತ್ತಾ, ಹಾಡುತ್ತಾ, ಕುಣಿಯುತ್ತಿರುತ್ತಾರೆ.
08030017a ಮತ್ತಾವಗೀತೈರ್ವಿವಿಧೈಃ ಖರೋಷ್ಟ್ರನಿನದೋಪಮೈಃ।
08030017c ಆಹುರನ್ಯೋನ್ಯಮುಕ್ತಾನಿ ಪ್ರಬ್ರುವಾಣಾ ಮದೋತ್ಕಟಾಃ।।
ಅಮಲಿನಲ್ಲಿರುವ ಮದೋತ್ಕಟೆಯರು ಕತ್ತೆ ಮತ್ತು ಒಂಟೆಗಳ ಕಿರುಚಾಟದ ಧ್ವನಿಯಲ್ಲಿ ವಿವಿಧ ಗೀತೆಗಳನ್ನು ಹಾಡುತ್ತಾ ಅನ್ಯೋನ್ಯರನ್ನು ಬಹಿರಂಗವಾಗಿ ಕರೆಯುತ್ತಿರುತ್ತಾರೆ.
08030018a ಹಾ ಹತೇ ಹಾ ಹತೇತ್ಯೇವ ಸ್ವಾಮಿಭರ್ತೃಹತೇತಿ ಚ।
08030018c ಆಕ್ರೋಶಂತ್ಯಃ ಪ್ರನೃತ್ಯಂತಿ ಮಂದಾಃ ಪರ್ವಸ್ವಸಂಯತಾಃ।।
“ಅಯ್ಯೋ! ಹತಳಾದೆ! ಅಯ್ಯೋ ಹತಳಾದೆ! ಸ್ವಾಮಿ ಅಥವಾ ಗಂಡನಿಂದ ಹತಳಾದೆ!” ಎಂದು ಕೂಗಿಕೊಳ್ಳುತ್ತಾ ಆ ಮಂದೆಯರು ಪರ್ವ-ಉತ್ಸವಗಳಲ್ಲಿ ನರ್ತಿಸುತ್ತಿರುತ್ತಾರೆ.
08030019a ತೇಷಾಂ ಕಿಲಾವಲಿಪ್ತಾನಾಂ ನಿವಸನ್ಕುರುಜಾಂಗಲೇ।
08030019c ಕಶ್ಚಿದ್ಬಾಹ್ಲೀಕಮುಖ್ಯಾನಾಂ ನಾತಿಹೃಷ್ಟಮನಾ ಜಗೌ।।
ಕುರುಜಾಂಗಲದಲ್ಲಿ ವಾಸಿಸುತ್ತಿದ್ದ ಯಾವನೋ ಒಬ್ಬ ಬಾಹ್ಲೀಕ ಮುಖ್ಯನು ಅತಿ ಸಂತೋಷವಿಲ್ಲದ ತನಗೆ ನಂಟಿದ್ದ ಸ್ತ್ರೀಯಳ ಕುರಿತು ಹೇಳುತ್ತಿದ್ದನು:
08030020a ಸಾ ನೂನಂ ಬೃಹತೀ ಗೌರೀ ಸೂಕ್ಷ್ಮಕಂಬಲವಾಸಿನೀ।
08030020c ಮಾಮನುಸ್ಮರತೀ ಶೇತೇ ಬಾಹ್ಲೀಕಂ ಕುರುವಾಸಿನಂ।।
“ಆ ಸೂಕ್ಷ್ಮವಸ್ತ್ರವನ್ನು ಧರಿಸಿರುವ ಎತ್ತರ ಶರೀರದ ಬಿಳಿಯಾಗಿರುವ ಅವಳು ಕುರುವಾಸಿಯಾಗಿರುವ ಈ ಬಾಹ್ಲೀಕನನ್ನು ನಿಜವಾಗಿಯೂ ಸ್ಮರಿಸಿಕೊಳ್ಳುತ್ತ ಮಲಗಿರಬಹುದು!
08030021a ಶತದ್ರುಕನದೀಂ ತೀರ್ತ್ವಾ ತಾಂ ಚ ರಮ್ಯಾಮಿರಾವತೀಂ।
08030021c ಗತ್ವಾ ಸ್ವದೇಶಂ ದ್ರಕ್ಷ್ಯಾಮಿ ಸ್ಥೂಲಶಂಖಾಃ ಶುಭಾಃ ಸ್ತ್ರಿಯಃ।।
ಶತದ್ರು25 ನದಿಯನ್ನು ಮತ್ತು ರಮ್ಯ ಇರಾವತೀ26 ನದಿಯನ್ನು ದಾಟಿ ನನ್ನ ದೇಶಕ್ಕೆ ಹೋಗಿ ಸ್ಥೂಲ ಜನನೇಂದ್ರಿಯವುಳ್ಳ ಸುಂದರ ಸ್ತ್ರೀಯನ್ನು ಯಾವಾಗ ನೋಡುತ್ತೇನೆ?
08030022a ಮನಹ್ಶಿಲೋಜ್ಜ್ವಲಾಪಾಂಗಾ ಗೌರ್ಯಸ್ತ್ರಿಕಕುದಾಂಜನಾಃ।
08030022c ಕೇವಲಾಜಿನಸಂವೀತಾಃ ಕೂರ್ದಂತ್ಯಃ ಪ್ರಿಯದರ್ಶನಾಃ।।
08030023a ಮೃದಂಗಾನಕಶಂಖಾನಾಂ ಮರ್ದಲಾನಾಂ ಚ ನಿಸ್ವನೈಃ।
ಯಾರ ಅಪಾಂಗಗಳು ಮಣಿಶಿಲಾಲೇಪನದಿಂದ ಉಜ್ವಲವಾಗಿ ಕಾಣುತ್ತವೆಯೋ, ಯಾರ ಎರಡು ಕಣ್ಣುಗಳೂ, ಲಲಾಟವೂ ಅಂಜನದಿಂದ ಸುಶೋಭಿತವಾಗಿವೆಯೋ, ಯಾರು ಕಂಬಲ-ಮೃಗಚರ್ಮಗಳನ್ನು ಧರಿಸಿರುವರೋ ಅಂತಹ ಗೌರಾಂಗ, ಪ್ರಿಯದರ್ಶನೆ ಸುಂದರಿಯರು ಭೇರೀ-ಮೃದಂಗ-ಶಂಖ-ಮರ್ದಲ ವಾದ್ಯಗಳ ಸಹಿತ ನೃತ್ಯಮಾಡುವುದನ್ನು ನಾನು ಯಾವಾಗ ನೋಡುವೆನು?
08030023c ಖರೋಷ್ಟ್ರಾಶ್ವತರೈಶ್ಚೈವ ಮತ್ತಾ ಯಾಸ್ಯಾಮಹೇ ಸುಖಂ।।
08030024a ಶಮೀಪೀಲುಕರೀರಾಣಾಂ ವನೇಷು ಸುಖವರ್ತ್ಮಸು।
ಮದೋನ್ಮತ್ತರಾದ ನಾವು ಕತ್ತೆ, ಒಂಟೆ ಮತ್ತು ಹೇಸರಗತ್ತೆಗಳ ಮೇಲೆ ಬನ್ನೀಮರ-ಗೋನುಮರ-ಬಿದಿರುಮೆಳೆಗಳ ಅರಣ್ಯಗಳಲ್ಲಿ ಯಾವಾಗ ಸುಖಪ್ರಯಾಣ ಮಾಡುತ್ತೇವೆ?
08030024c ಅಪೂಪಾನ್ಸಕ್ತುಪಿಂಡೀಶ್ಚ ಖಾದಂತೋ ಮಥಿತಾನ್ವಿತಾಃ।।
08030025a ಪಥಿಷು ಪ್ರಬಲಾ ಭೂತ್ವಾ ಕದಾಸಮೃದಿತೇಽಧ್ವನಿ।
08030025c ಖಲೋಪಹಾರಂ ಕುರ್ವಾಣಾಸ್ತಾಡಯಿಷ್ಯಾಮ ಭೂಯಸಃ।।
ಮಜ್ಜಿಗೆಯಿಂದ ಮಾಡಿದ ಕಚ್ಚಾಯಗಳನ್ನೂ ಹಿಟ್ಟಿನುಂಡೆಗಳನ್ನೂ ತಿನ್ನುತ್ತಾ ಬಲಿಷ್ಠರಾಗಿ ಹಾದಿಯಲ್ಲಿ ಸಿಕ್ಕುವ ಹಾದಿಗರ ಮೇಲೆ ಬೀಳುತ್ತಾ ಅವರ ಬಟ್ಟೆ-ಬರೆಗಳನ್ನು ದೋಚಿಕೊಂಡು ಅವರಿಗೆ ಯಾವಾಗ ಪೆಟ್ಟುಗಳನ್ನು ಕೊಡುವೆವು?”
08030026a ಏವಂ ಹೀನೇಷು ವ್ರಾತ್ಯೇಷು ಬಾಹ್ಲೀಕೇಷು ದುರಾತ್ಮಸು।
08030026c ಕಶ್ಚೇತಯಾನೋ ನಿವಸೇನ್ಮುಹೂರ್ತಮಪಿ ಮಾನವಃ।।
ಇಂತಹ ಹೀನ ವರ್ತನೆಗಳಿರುವ ದುರಾತ್ಮ ಬಾಹ್ಲೀಕರೊಂದಿಗೆ ಬುದ್ಧಿಯಿರುವ ಯಾವ ಮನುಷ್ಯನು ತಾನೇ ಒಂದು ಮುಹೂರ್ತಕಾಲವಾದರೂ ವಾಸಿಸಿರಬಲ್ಲನು?”
08030027a ಈದೃಶಾ ಬ್ರಾಹ್ಮಣೇನೋಕ್ತಾ ಬಾಹ್ಲೀಕಾ ಮೋಘಚಾರಿಣಃ।
08030027c ಯೇಷಾಂ ಷಡ್ಭಾಗಹರ್ತಾ ತ್ವಮುಭಯೋಃ ಶುಭಪಾಪಯೋಃ।।
ನಿರರ್ಥಕ ಆಚಾರ-ವಿಚಾರಗಳುಳ್ಳ ಬಾಹ್ಲೀಕರ ಕುರಿತು ಈ ರೀತಿಯಾಗಿ ಬ್ರಾಹ್ಮಣನು ಹೇಳಿದ್ದನು. ಅವರ ಪಾಪ-ಪುಣ್ಯಗಳ ಆರನೆಯ ಒಂದು ಭಾಗಕ್ಕೆ ಅವರ ರಾಜನಾಗಿರುವ ನೀನು ಅರ್ಹನಾಗಿರುವೆ!
08030028a ಇತ್ಯುಕ್ತ್ವಾ ಬ್ರಾಹ್ಮಣಃ ಸಾಧುರುತ್ತರಂ ಪುನರುಕ್ತವಾನ್।
08030028c ಬಾಹ್ಲೀಕೇಷ್ವವಿನೀತೇಷು ಪ್ರೋಚ್ಯಮಾನಂ ನಿಬೋಧತ।।
ಹೀಗೆ ಹೇಳಿದ ನಂತರವೂ ಆ ಬ್ರಾಹ್ಮಣನು ಉದ್ಧತರಾದ ಬಾಹ್ಲೀಕರ ಕುರಿತು ಇನ್ನೂ ಅನೇಕ ವಿಷಯಗಳನ್ನು ಹೇಳಿದನು. ಅವುಗಳನ್ನು ಹೇಳುತ್ತೇನೆ. ಕೇಳು.
08030029a ತತ್ರ ಸ್ಮ ರಾಕ್ಷಸೀ ಗಾತಿ ಸದಾ ಕೃಷ್ಣಚತುರ್ದಶೀಂ।
08030029c ನಗರೇ ಶಾಕಲೇ ಸ್ಫೀತೇ ಆಹತ್ಯ ನಿಶಿ ದುಂದುಭಿಂ।।
“ಅಲ್ಲಿ ಶಾಕಲನಗರದಲ್ಲಿರುವ ರಾಕ್ಷಸಿಯೋರ್ವಳು ಕೃಷ್ಣಪಕ್ಷದ ಚತುರ್ದರ್ಶಿಯ ರಾತ್ರಿ ಸದಾ ದುಂದುಭಿಯನ್ನು ಬಾರಿಸುತ್ತಾ ಹೀಗೆ ಹಾಡುತ್ತಿರುತ್ತಾಳೆ:
08030030a ಕದಾ ವಾ ಘೋಷಿಕಾ ಗಾಥಾಃ ಪುನರ್ಗಾಸ್ಯಂತಿ ಶಾಕಲೇ।
08030030c ಗವ್ಯಸ್ಯ ತೃಪ್ತಾ ಮಾಂಸಸ್ಯ ಪೀತ್ವಾ ಗೌಡಂ ಮಹಾಸವಂ।।
08030031a ಗೌರೀಭಿಃ ಸಹ ನಾರೀಭಿರ್ಬೃಹತೀಭಿಃ ಸ್ವಲಂಕೃತಾಃ।
08030031c ಪಲಾಂಡುಗಂಡೂಷಯುತಾನ್ಖಾದಂತೇ ಚೈಡಕಾನ್ಬಹೂನ್।।
“ನಾನು ವಸ್ತ್ರಾಲಂಕಾರಭೂಷಿತೆಯಾಗಿ ಗೋಮಾಂಸವನ್ನು ತಿಂದು ಬೆಲ್ಲದಿಂದ ಮಾಡಿದ ಸುರೆಯನ್ನು ಕುಡಿದು ತೃಪ್ತಳಾಗಿ, ಸ್ಥೂಲಕಾಯರಾದ ಹೊಂಬಣ್ಣದ ಸ್ತ್ರೀಯರೊಂದಿಗೆ ಬೊಗಸೆ ಈರುಳ್ಳಿಯೊಡನೆ ಕುರಿಮಾಂಸವನ್ನು ತಿನ್ನುತ್ತಾ ಈ ಶಾಕಲನಗರದಲ್ಲಿ ಬಾಹ್ಲೀಕರ ಗೀತೆಯನ್ನು ಪುನಃ ಎಂದು ಹಾಡುತ್ತೇನೆ?”
08030032a ವಾರಾಹಂ ಕೌಕ್ಕುಟಂ ಮಾಂಸಂ ಗವ್ಯಂ ಗಾರ್ದಭಮೌಷ್ಟ್ರಕಂ।
08030032c ಐಡಂ ಚ ಯೇ ನ ಖಾದಂತಿ ತೇಷಾಂ ಜನ್ಮ ನಿರರ್ಥಕಂ।।
“ಹಂದಿ, ಕೋಳಿ, ಹಸು, ಕತ್ತೆ, ಒಂಟೆ, ಕುರಿ – ಇವುಗಳ ಮಾಂಸವನ್ನು ತಿನ್ನದಿರುವವರ ಜನ್ಮವು ವ್ಯರ್ಥವೇ ಸರಿ!”
08030033a ಇತಿ ಗಾಯಂತಿ ಯೇ ಮತ್ತಾಃ ಶೀಧುನಾ ಶಾಕಲಾವತಃ।
08030033c ಸಬಾಲವೃದ್ಧಾಃ ಕೂರ್ದಂತಸ್ತೇಷು ವೃತ್ತಂ ಕಥಂ ಭವೇತ್।।
ಹೀಗೆ ಶಾಕಲಪುರವಾಸಿ ಅಬಾಲವೃದ್ಧರೂ ನರನಾರಿಯರೂ ಮದಿರೆಯ ಅಮಲಿನಲ್ಲಿ ಕೂಗಿ ಹಾಡುತ್ತಿರುತ್ತಾರೆ. ಅಂಥವರಲ್ಲಿ ಧರ್ಮವು ಹೇಗೆ ತಾನೆ ಇರಬಲ್ಲದು?”
08030034a ಇತಿ ಶಲ್ಯ ವಿಜಾನೀಹಿ ಹಂತ ಭೂಯೋ ಬ್ರವೀಮಿ ತೇ।
08030034c ಯದನ್ಯೋಽಪ್ಯುಕ್ತವಾನಸ್ಮಾನ್ಬ್ರಾಹ್ಮಣಃ ಕುರುಸಂಸದಿ।।
ಶಲ್ಯ! ಇದನ್ನು ಅರ್ಥಮಾಡಿಕೋ! ಇನ್ನೂ ಇದೆ. ಕುರುಸಂಸದಿಯಲ್ಲಿ ನಮಗೆ ಅನ್ಯ ಬ್ರಾಹ್ಮಣನು ಹೇಳಿದುದನ್ನೂ ನಿನಗೆ ಹೇಳುತ್ತೇನೆ.
08030035a ಪಂಚ ನದ್ಯೋ ವಹಂತ್ಯೇತಾ ಯತ್ರ ಪೀಲುವನಾನ್ಯಪಿ।
08030035c ಶತದ್ರುಶ್ಚ ವಿಪಾಶಾ ಚ ತೃತೀಯೇರಾವತೀ ತಥಾ।
08030035e ಚಂದ್ರಭಾಗಾ ವಿತಸ್ತಾ ಚ ಸಿಂದುಷಷ್ಠಾ ಬಹಿರ್ಗತಾಃ।।
08030036a ಆರಟ್ಟಾ ನಾಮ ತೇ ದೇಶಾ ನಷ್ಟಧರ್ಮಾನ್ನ ತಾನ್ ವ್ರಜೇತ್।
“ಶತದ್ರು, ವಿಪಾಶಾ, ಇರಾವತೀ, ಚಂದ್ರಭಾಗಾ, ವಿತಸ್ತಾ ಈ ಐದು ನದಿಗಳೂ ಸಿಂಧೂ ನದಿಯೊಡನೆ ಹರಿಯುತ್ತವೆ. ಆ ಅರಟ್ಟ ಎಂಬ ದೇಶದಲ್ಲಿ ಧರ್ಮಗಳು ನಷ್ಟವಾಗಿಹೋಗಿದೆ. ಅವುಗಳನ್ನು ತ್ಯಜಿಸಬೇಕು.
08030036c ವ್ರಾತ್ಯಾನಾಂ ದಾಸಮೀಯಾನಾಂ ವಿದೇಹಾನಾಮಯಜ್ವನಾಂ।।
08030037a ನ ದೇವಾಃ ಪ್ರತಿಗೃಹ್ಣಂತಿ ಪಿತರೋ ಬ್ರಾಹ್ಮಣಾಸ್ತಥಾ।
08030037c ತೇಷಾಂ ಪ್ರನಷ್ಟಧರ್ಮಾಣಾಂ ಬಾಹ್ಲೀಕಾನಾಮಿತಿ ಶ್ರುತಿಃ।।
ಸಂಸ್ಕಾರಹೀನರಾದ, ಅನೈತಿಕ ಮಾರ್ಗದಿಂದ ಹುಟ್ಟಿದ, ಯಜ್ಞಾದಿಕರ್ಮಗಳನ್ನು ಮಾಡದಿರುವ, ಪ್ರಣಷ್ಟ ಧರ್ಮಕರ್ಮಗಳಿರುವ ಬಾಹ್ಲೀಕರು ನೀಡುವ ಹವ್ಯಕವ್ಯಗಳನ್ನು ಪಿತೃಗಳಾಗಲೀ, ಬ್ರಾಹ್ಮಣರಾಗಲೀ ಸ್ವೀಕರಿಸುವುದಿಲ್ಲವೆಂದು ನಾವು ಕೇಳಿದ್ದೇವೆ.”
08030038a ಬ್ರಾಹ್ಮಣೇನ ತಥಾ ಪ್ರೋಕ್ತಂ ವಿದುಷಾ ಸಾಧುಸಂಸದಿ।
08030038c ಕಾಷ್ಠಕುಂಡೇಷು ಬಾಹ್ಲೀಕಾ ಮೃಣ್ಮಯೇಷು ಚ ಭುಂಜತೇ।
08030038e ಸಕ್ತುವಾಟ್ಯಾವಲಿಪ್ತೇಷು ಶ್ವಾದಿಲೀಢೇಷು ನಿರ್ಘೃಣಾಃ।।
08030039a ಆವಿಕಂ ಚೌಷ್ಟ್ರಿಕಂ ಚೈವ ಕ್ಷೀರಂ ಗಾರ್ದಭಮೇವ ಚ।
08030039c ತದ್ವಿಕಾರಾಂಶ್ಚ ಬಾಹ್ಲೀಕಾಃ ಖಾದಂತಿ ಚ ಪಿಬಂತಿ ಚ।।
ಸಾಧುಸಂಸದಿಯಲ್ಲಿ ಬ್ರಾಹ್ಮಣನೊಬ್ಬನು ಈ ರೀತಿ ಹೇಳಿದ್ದನು: “ದಯಾಹೀನ ಬಾಹ್ಲೀಕರು ಹಿಟ್ಟು-ಮದ್ಯಗಳಿಂದ ದೂಷಿತವಾಗಿರುವ, ನಾಯಿನೆಕ್ಕಿರುವ ಮರದ ಮರಿಗೆಗಳಲ್ಲಿಯೂ ಮಣ್ಣಿನ ಶರಾವೆಗಳಲ್ಲಿಯೂ ಊಟ ಮಾಡುತ್ತಾರೆ. ಕುರಿ, ಒಂಟೆ, ಮತ್ತು ಕತ್ತೆಗಳ ಹಾಲನ್ನು ಕುಡಿಯುತ್ತಾರೆ. ಆ ಹಾಲಿನಿಂದಾದ ಮೊಸರು-ಬೆಣ್ಣೆ-ತುಪ್ಪಗಳನ್ನೂ ತಿನ್ನುತ್ತಾರೆ ಮತ್ತು ಕುಡಿಯುತ್ತಾರೆ.
08030040a ಪುತ್ರಸಂಕರಿಣೋ ಜಾಲ್ಮಾಃ ಸರ್ವಾನ್ನಕ್ಷೀರಭೋಜನಾಃ।
08030040c ಆರಟ್ಟಾ ನಾಮ ಬಾಹ್ಲೀಕಾ ವರ್ಜನೀಯಾ ವಿಪಶ್ಚಿತಾ।।
ಸಂಕರ ಜಾತಿಯ ಮಕ್ಕಳುಳ್ಳ, ಸಕಲರ ಆಹಾರವನ್ನೂ ತಿನ್ನುವ, ಎಲ್ಲ ಪ್ರಾಣಿಗಳ ಹಾಲನ್ನೂ ಕುಡಿಯುವ ನೀಚ ಅರಟ್ಟ ಎಂಬ ಹೆಸರಿನ ಬಾಹ್ಲೀಕರನ್ನು ವಿಧ್ವಾಂಸನಾದವನು ವರ್ಜಿಸಬೇಕು.”
08030041a ಉತ ಶಲ್ಯ ವಿಜಾನೀಹಿ ಹಂತ ಭೂಯೋ ಬ್ರವೀಮಿ ತೇ।
08030041c ಯದನ್ಯೋಽಪ್ಯುಕ್ತವಾನ್ಸಭ್ಯೋ ಬ್ರಾಹ್ಮಣಃ ಕುರುಸಂಸದಿ।।
ಶಲ್ಯ! ಇದನ್ನು ಅರ್ಥಮಾಡಿಕೋ! ಇನ್ನೂ ಇದೆ. ಕುರುಸಂಸದಿಯಲ್ಲಿ ನಮಗೆ ಅನ್ಯ ಬ್ರಾಹ್ಮಣನು ಹೇಳಿದುದನ್ನೂ ನಿನಗೆ ಹೇಳುತ್ತೇನೆ.
08030042a ಯುಗಂಧರೇ ಪಯಃ ಪೀತ್ವಾ ಪ್ರೋಷ್ಯ ಚಾಪ್ಯಚ್ಯುತಸ್ಥಲೇ।
08030042c ತದ್ವದ್ಭೂತಿಲಯೇ ಸ್ನಾತ್ವಾ ಕಥಂ ಸ್ವರ್ಗಂ ಗಮಿಷ್ಯತಿ।।
“ಯುಗಂಧರೆ27ಯಲ್ಲಿ ಹಾಲುಕುಡಿದು, ಅಚ್ಯುತಸ್ಥಳ28ದಲ್ಲಿ ಉಳಿದು, ಭೂತಿಲಯ29ದಲ್ಲಿ ಸ್ನಾನಮಾಡಿದವನು ಹೇಗೆ ತಾನೇ ಸ್ವರ್ಗಕ್ಕೆ ಹೋಗುತ್ತಾನೆ?
08030043a ಪಂಚ ನದ್ಯೋ ವಹಂತ್ಯೇತಾ ಯತ್ರ ನಿಃಸ್ತೃತ್ಯ ಪರ್ವತಾತ್।
08030043c ಆರಟ್ಟಾ ನಾಮ ಬಾಹ್ಲೀಕಾ ನ ತೇಷ್ವಾರ್ಯೋ ದ್ವ್ಯಹಂ ವಸೇತ್।।
ಪರ್ವತದಿಂದ ಹರಿದುಬರುವ ಐದು ನದಿಗಳು ಎಲ್ಲಿ ಹರಿಯುತ್ತವೆಯೋ ಅಲ್ಲಿ ಅರಟ್ಟ ಎಂಬ ಹೆಸರಿನ ಬಾಹ್ಲೀಕರಿದ್ದಾರೆ. ಆರ್ಯರಾದವರು ಅವರೊಡನೆ ಎರಡು ದಿವಸಗಳು ಸಹ ತಂಗಬಾರದು.
08030044a ಬಹಿಶ್ಚ ನಾಮ ಹ್ಲೀಕಶ್ಚ ವಿಪಾಶಾಯಾಂ ಪಿಶಾಚಕೌ।
08030044c ತಯೋರಪತ್ಯಂ ಬಾಹ್ಲೀಕಾ ನೈಷಾ ಸೃಷ್ಟಿಃ ಪ್ರಜಾಪತೇಃ।।
08030045a ಕಾರಸ್ಕರಾನ್ಮಹಿಷಕಾನ್ಕಲಿಂಗಾನ್ಕೀಕಟಾಟವೀನ್।
08030045c ಕರ್ಕೋಟಕಾನ್ವೀರಕಾಂಶ್ಚ ದುರ್ಧರ್ಮಾಂಶ್ಚ ವಿವರ್ಜಯೇತ್।।
ವಿಪಾಶಾ ನದಿಯಲ್ಲಿ ಬಹಿ ಮತ್ತು ಹ್ಲೀಕ ಎಂಬ ಹೆಸರಿನ ಎರಡು ಪಿಶಾಚಿಗಳಿವೆ. ಅವರ ಸಂತಾನವೇ ಬಾಹ್ಲೀಕರು. ಇವರು ಪ್ರಜಾಪತಿಯ ಸೃಷ್ಟಿಗೆ ಸೇರಿದವರಿಲ್ಲ. ಧರ್ಮದೂಷಿತವಾದ ಕಾರಸ್ಕರ, ಮಹಿಷಕ, ಕಲಿಂಗ, ಕೀಕಟಾಟ, ಕರ್ಕೋಟಕ ಮತ್ತು ವೀರಕರನ್ನು ವಿವರ್ಜಿಸಬೇಕು.
08030046a ಇತಿ ತೀರ್ಥಾನುಸರ್ತಾರಂ ರಾಕ್ಷಸೀ ಕಾ ಚಿದಬ್ರವೀತ್।
08030046c ಏಕರಾತ್ರಾ ಶಮೀಗೇಹೇ ಮಹೋಲೂಖಲಮೇಖಲಾ।।
ದೊಡ್ಡ ಮರದ ಕಾಂಡದಂತಹ ಸೊಂಟದ ರಾಕ್ಷಸಿಯೊಬ್ಬಳು ತೀರ್ಥಯಾತ್ರೆಗೆ ಹೊರಟಿದ್ದವನ ಮನೆಯಲ್ಲಿ ಒಂದು ರಾತ್ರಿ ತಂಗಿದ್ದು ಅವನೊಡನೆ ಈ ಮಾತನ್ನು ಹೇಳಿದ್ದಳು:
08030047a ಆರಟ್ಟಾ ನಾಮ ತೇ ದೇಶಾ ಬಾಹ್ಲೀಕಾ ನಾಮ ತೇ ಜನಾಃ।
08030047c ವಸಾತಿಸಿಂದುಸೌವೀರಾ ಇತಿ ಪ್ರಾಯೋ ವಿಕುತ್ಸಿತಾಃ।।
“ಸಿಂಧು-ಸೌವೀರಗಳ ನಡುವೆ ವಾಸಿಸುವ ಅರಟ್ಟಾ ಹೆಸರಿನ ದೇಶದಲ್ಲಿರುವ ಬಾಹ್ಲೀಕರೆಂಬ ಹೆಸರಿನ ಜನಾಂಗವು ಹೀನವಾದುದು!””
08030048a ಉತ ಶಲ್ಯ ವಿಜಾನೀಹಿ ಹಂತ ಭೂಯೋ ಬ್ರವೀಮಿ ತೇ।
08030048c ಉಚ್ಯಮಾನಂ ಮಯಾ ಸಂಯಕ್ತದೇಕಾಗ್ರಮನಾಃ ಶೃಣು।।
ಶಲ್ಯ! ಇದನ್ನು ಅರ್ಥಮಾಡಿಕೋ! ಇನ್ನೂ ಇದೆ. ನಿನಗೆ ಹೇಳುತ್ತೇನೆ. ನಾನು ಹೇಳುವುದನ್ನು ಸಂಪೂರ್ಣವಾಗಿ ಏಕಾಗ್ರಮನಸ್ಕನಾಗಿ ಕೇಳು!
08030049a ಬ್ರಾಹ್ಮಣಃ ಶಿಲ್ಪಿನೋ ಗೇಹಮಭ್ಯಗಚ್ಚತ್ಪುರಾತಿಥಿಃ।
08030049c ಆಚಾರಂ ತತ್ರ ಸಂಪ್ರೇಕ್ಷ್ಯ ಪ್ರೀತಃ ಶಿಲ್ಪಿನಮಬ್ರವೀತ್।।
ಹಿಂದೆ ಓರ್ವ ಬ್ರಾಹ್ಮಣನು ಶಿಲ್ಪಿಯ ಮನೆಗೆ ಅತಿಥಿಯಾಗಿ ಬಂದಿದ್ದನು. ಅಲ್ಲಿಯ ಆಚಾರವನ್ನು ನೋಡಿ ಪ್ರೀತನಾಗಿ ಅವನು ಶಿಲ್ಪಿಗೆ ಹೇಳಿದನು:
08030050a ಮಯಾ ಹಿಮವತಃ ಶೃಂಗಮೇಕೇನಾಧ್ಯುಷಿತಂ ಚಿರಂ।
08030050c ದೃಷ್ಟಾಶ್ಚ ಬಹವೋ ದೇಶಾ ನಾನಾಧರ್ಮಸಮಾಕುಲಾಃ।।
“ನಾನು ಬಹಳಕಾಲ ಹಿಮಾಲಯ ಶಿಖರದಲ್ಲಿ ಏಕಾಂಗಿಯಾಗಿ ವಾಸಿಸಿದ್ದೆನು. ಮತ್ತು ಅನೇಕ ದೇಶಗಳನ್ನೂ, ನಾನಾ ಧರ್ಮಗಳನ್ನು ಅನುಸರಿಸುವವರನ್ನೂ ನೋಡಿದ್ದೇನೆ.
08030051a ನ ಚ ಕೇನ ಚ ಧರ್ಮೇಣ ವಿರುಧ್ಯಂತೇ ಪ್ರಜಾ ಇಮಾಃ।
08030051c ಸರ್ವೇ ಹಿ ತೇಽಬ್ರುವನ್ಧರ್ಮಂ ಯಥೋಕ್ತಂ ವೇದಪಾರಗೈಃ।।
ಇವುಗಳಲ್ಲಿ ಯಾವುದರಲ್ಲಿಯೂ ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಪ್ರಜೆಗಳಿಲ್ಲ. ವೇದಪಾರಗರು ಹೇಳಿರುವ ಧರ್ಮವನ್ನೇ ಅವರೆಲ್ಲರೂ ಅನುಸರಿಸುತ್ತಾರೆ.
08030052a ಅಟತಾ ತು ಸದಾ ದೇಶಾನ್ನಾನಾಧರ್ಮಸಮಾಕುಲಾನ್।
08030052c ಆಗಚ್ಚತಾ ಮಹಾರಾಜ ಬಾಹ್ಲೀಕೇಷು ನಿಶಾಮಿತಂ।।
ನಾನಾ ಧರ್ಮಾಚರಣೆಗಳುಳ್ಳ ದೇಶಗಳಲ್ಲಿ ಸಂಚರಿಸುತ್ತಾ ನಾನು ಬಾಹ್ಲೀಕ ದೇಶಕ್ಕೆ ಬಂದೆನು. ಮಹಾರಾಜ! ಅಲ್ಲಿಯ ಈ ವಿಷಯವನ್ನು ಕೇಳು!
08030053a ತತ್ರೈವ ಬ್ರಾಹ್ಮಣೋ ಭೂತ್ವಾ ತತೋ ಭವತಿ ಕ್ಷತ್ರಿಯಃ।
08030053c ವೈಶ್ಯಃ ಶೂದ್ರಶ್ಚ ಬಾಹ್ಲೀಕಸ್ತತೋ ಭವತಿ ನಾಪಿತಃ।।
08030054a ನಾಪಿತಶ್ಚ ತತೋ ಭೂತ್ವಾ ಪುನರ್ಭವತಿ ಬ್ರಾಹ್ಮಣಃ।
08030054c ದ್ವಿಜೋ ಭೂತ್ವಾ ಚ ತತ್ರೈವ ಪುನರ್ದಾಸೋಽಪಿ ಜಾಯತೇ।।
ಅಲ್ಲಿ ಮೊದಲು ಬ್ರಾಹ್ಮಣನಾಗಿದ್ದವನು ಅನಂತರ ಕ್ಷತ್ರಿಯನಾಗುತ್ತಾನೆ. ಅನಂತರ ವೈಶ್ಯನಾಗುತ್ತಾನೆ ಮತ್ತು ಶೂದ್ರನೂ ಆಗುತ್ತಾನೆ. ಅನಂತರ ನಾಪಿತನಾಗಿ ಪುನಃ ಬ್ರಾಹ್ಮಣನೂ ಆಗುತ್ತಾನೆ. ಬ್ರಾಹ್ಮಣನಾಗಿದ್ದವನು ಅಲ್ಲಿಯೇ ಪುನಃ ದಾಸನೂ ಆಗುತ್ತಾನೆ30.
08030055a ಭವತ್ಯೇಕಃ ಕುಲೇ ವಿಪ್ರಃ ಶಿಷ್ಟಾನ್ಯೇ ಕಾಮಚಾರಿಣಃ।
08030055c ಗಾಂಧಾರಾ ಮದ್ರಕಾಶ್ಚೈವ ಬಾಹ್ಲೀಕಾಃ ಕೇಽಪ್ಯಚೇತಸಃ।।
ಒಂದೇ ಕುಲದಲ್ಲಿ ವಿಪ್ರರೂ ಉಳಿದ ಅನ್ಯರು ಕಾಮಚಾರಿಗಳೂ ಆಗಿರಬಹುದು. ಗಾಂಧಾರ, ಮದ್ರಕ ಮತ್ತು ಬಾಹ್ಲೀಕರು ಸಾಮಾನ್ಯವಾಗಿ ಅಲ್ಪಚೇತಸರು (ದಡ್ಡ ಬುದ್ಧಿಯುಳ್ಳವರು).
08030056a ಏತನ್ಮಯಾ ಶ್ರುತಂ ತತ್ರ ಧರ್ಮಸಂಕರಕಾರಕಂ।
08030056c ಕೃತ್ಸ್ನಾಮಟಿತ್ವಾ ಪೃಥಿವೀಂ ಬಾಹ್ಲೀಕೇಷು ವಿಪರ್ಯಯಃ।।
ಆ ದೇಶವೇ ಧರ್ಮಸಂಕರ ಕಾರಕವಾದುದು ಎಂದು ಕೇಳಿದೆನು. ಇಡೀ ಪೃಥ್ವಿಯನ್ನು ತಿರುಗಾಡಿದರೂ ಬಾಹ್ಲೀಕದಲ್ಲಿ ಮಾತ್ರ ಈ ವಿಪರ್ಯಾಸವನ್ನು ಕಾಣಬಹುದು.”
08030057a ಉತ ಶಲ್ಯ ವಿಜಾನೀಹಿ ಹಂತ ಭೂಯೋ ಬ್ರವೀಮಿ ತೇ।
08030057c ಯದಪ್ಯನ್ಯೋಽಬ್ರವೀದ್ವಾಕ್ಯಂ ಬಾಹ್ಲೀಕಾನಾಂ ವಿಕುತ್ಸಿತಂ।।
ಶಲ್ಯ! ಇದನ್ನು ಅರ್ಥಮಾಡಿಕೋ! ಇನ್ನೂ ಇದೆ. ಬಾಹ್ಲೀಕರನ್ನು ಹೀಗಳೆಯುವ ಇನ್ನೊಬ್ಬನು ಹೇಳಿದ ಮಾತನ್ನು ನಿನಗೆ ಹೇಳುತ್ತೇನೆ.
08030058a ಸತೀ ಪುರಾ ಹೃತಾ ಕಾ ಚಿದರಟ್ಟಾ ಕಿಲ ದಸ್ಯುಭಿಃ।
08030058c ಅಧರ್ಮತಶ್ಚೋಪಯಾತಾ ಸಾ ತಾನಭ್ಯಶಪತ್ತತಃ।।
“ಹಿಂದೊಮ್ಮೆ ದರೋಡೆಕೋರರು ಅರಟ್ಟ ದೇಶದಿಂದ ಸಾಧ್ವಿಯೊಬ್ಬಳನ್ನು ಅಪಹರಿಸಿಕೊಂಡು ಹೋಗಿ ಅಧರ್ಮತಃ ಅವಳೊಂದಿಗೆ ಕೂಡಿದರು. ಅದರಿಂದ ಕುಪಿತಳಾದ ಅವಳು ಅವರನ್ನು ಶಪಿಸಿದಳು:
08030059a ಬಾಲಾಂ ಬಂದುಮತೀಂ ಯನ್ಮಾಮಧರ್ಮೇಣೋಪಗಚ್ಚಥ।
08030059c ತಸ್ಮಾನ್ನಾರ್ಯೋ ಭವಿಷ್ಯಂತಿ ಬಂದಕ್ಯೋ ವೈ ಕುಲೇಷು ವಃ।
08030059e ನ ಚೈವಾಸ್ಮಾತ್ಪ್ರಮೋಕ್ಷ್ಯಧ್ವಂ ಘೋರಾತ್ಪಾಪಾನ್ನರಾಧಮಾಃ।।
“ಇನ್ನೂ ಬಾಲಕಿಯಾಗಿರುವ, ಬಂಧು-ಬಾಂಧವರನ್ನು ಹೊಂದಿರುವ ನನ್ನನ್ನು ಅಪಹರಿಸಿ ಅಧರ್ಮದಿಂದ ನನ್ನೊಡನೆ ಸೇರಿದುದಕ್ಕಾಗಿ ಇನ್ನು ಮುಂದೆ ನಿಮ್ಮ ಕುಲದಲ್ಲಿ ಹುಟ್ಟುವ ಸ್ತ್ರೀಯರೆಲ್ಲರೂ ವ್ಯಭಿಚಾರಿಣಿಯರಾಗುತ್ತಾರೆ. ನರಾಧಮರೇ! ಈ ಘೋರ ಪಾಪದಿಂದ ನಿಮಗೆ ಮುಕ್ತಿಯೇ ಇಲ್ಲ!””
08030060a ಕುರವಃ ಸಹಪಾಂಚಾಲಾಃ ಶಾಲ್ವಾ ಮತ್ಸ್ಯಾಃ ಸನೈಮಿಷಾಃ।
08030060c ಕೋಸಲಾಃ ಕಾಶಯೋಽಮ್ಗಾಶ್ಚ ಕಲಿಂಗಾ ಮಗಧಾಸ್ತಥಾ।।
08030061a ಚೇದಯಶ್ಚ ಮಹಾಭಾಗಾ ಧರ್ಮಂ ಜಾನಂತಿ ಶಾಶ್ವತಂ।
08030061c ನಾನಾದೇಶೇಷು ಸಂತಶ್ಚ ಪ್ರಾಯೋ ಬಾಹ್ಯಾ ಲಯಾದೃತೇ।।
ಬಹುಷಃ ಬಾಹ್ಲೀಕವನ್ನು ಬಿಟ್ಟು ಬೇರೆ ಎಲ್ಲ ನಾನಾ ದೇಶಗಳಲ್ಲಿಯೂ – ಕುರುಗಳು, ಪಾಂಚಾಲರು, ಶಾಲ್ವರು, ಮತ್ಸ್ಯರು, ನೈಮಿಷರು, ಕೋಸಲರು, ಕಾಶಿದೇಶೀಯರು, ಅಂಗರು, ಕಳಿಂಗರು, ಮಗಧರು, ಚೇದಿದೇಶೀಯರು ಮಹಾಭಾಗರು ಮತ್ತು ಶಾಶ್ವತ ಧರ್ಮವನ್ನು ತಿಳಿದವರು.
08030062a ಆ ಮತ್ಸ್ಯೇಭ್ಯಃ ಕುರುಪಾಂಚಾಲದೇಶ್ಯಾ ಆ ನೈಮಿಷಾಚ್ಚೇದಯೋ ಯೇ ವಿಶಿಷ್ಟಾಃ।।
08030062c ಧರ್ಮಂ ಪುರಾಣಮುಪಜೀವಂತಿ ಸಂತೋ ಮದ್ರಾನೃತೇ ಪಂಚನದಾಂಶ್ಚ ಜಿಹ್ಮಾನ್।
ಮತ್ಸ್ಯದೇಶದಿಂದ ಹಿಡಿದು ಕುರುಪಾಂಚಾಲ ದೇಶದ ವರೆಗೂ, ನೈಮಿಷಾರಣ್ಯದಿಂದ ಹಿಡಿದು ಚೇದಿ ದೇಶದ ವರೆಗೂ ಇರುವ ದೇಶಗಳಲ್ಲಿ ವಾಸಿಸುವ ಜನರು, - ಮದ್ರದೇಶದವರು ಮತ್ತು ಪಂಚನದ ದೇಶದವರನ್ನು ಬಿಟ್ಟು – ಸಂತರಾಗಿದ್ದು ಪುರಾಣ ಧರ್ಮದಂತೆ ಜೀವನ ನಡೆಸುತ್ತಾರೆ.
08030063a ಏವಂ ವಿದ್ವನ್ಧರ್ಮಕಥಾಂಶ್ಚ ರಾಜಂಸ್ ತೂಷ್ಣೀಂಭೂತೋ ಜಡವಚ್ಚಲ್ಯ ಭೂಯಾಃ।।
08030063c ತ್ವಂ ತಸ್ಯ ಗೋಪ್ತಾ ಚ ಜನಸ್ಯ ರಾಜಾ ಷಡ್ಭಾಗಹರ್ತಾ ಶುಭದುಷ್ಕೃತಸ್ಯ।
ರಾಜನ್! ನೀನು ಆ ಜನರ ರಕ್ಷಕ ಮತ್ತು ರಾಜನಾಗಿದ್ದುಕೊಂಡು ಅವರ ಶುಭ-ದುಷ್ಕೃತಗಳಲ್ಲಿ ಆರನೆಯ ಒಂದು ಭಾಗಕ್ಕೆ ಅರ್ಹನಾಗಿರುವೆ. ಶಲ್ಯ! ಇದನ್ನು ತಿಳಿದು ಧರ್ಮದ ವಿಷಯದಲ್ಲಿ ಬೇರೆ ಯಾವ ಮಾತನ್ನೂ ಆಡದೇ ಜಡನಾಗಿ ಸುಮ್ಮನಿದ್ದುಬಿಡು!
08030064a ಅಥ ವಾ ದುಷ್ಕೃತಸ್ಯ ತ್ವಂ ಹರ್ತಾ ತೇಷಾಮರಕ್ಷಿತಾ।
08030064c ರಕ್ಷಿತಾ ಪುಣ್ಯಭಾಗ್ರಾಜಾ ಪ್ರಜಾನಾಂ ತ್ವಂ ತ್ವಪುಣ್ಯಭಾಕ್।।
ಅಥವಾ ಅವರನ್ನು ರಕ್ಷಿಸದೇ ಇರುವ ನೀನು ಕೇವಲ ಅವರ ದುಷ್ಕೃತಗಳಿಗೆ ಭಾಗಿಯಾಗುವೆ. ಪ್ರಜೆಗಳನ್ನು ರಕ್ಷಿಸುವವನಿಗೆ ಮಾತ್ರ ಅವರ ಪುಣ್ಯಗಳ ಭಾಗವು ದೊರೆಯುತ್ತದೆ. ಆದರೆ ನೀನು ಆ ಪುಣ್ಯಗಳ ಭಾಗಧಾರಿಯಲ್ಲ!
08030065a ಪೂಜ್ಯಮಾನೇ ಪುರಾ ಧರ್ಮೇ ಸರ್ವದೇಶೇಷು ಶಾಶ್ವತೇ।
08030065c ಧರ್ಮಂ ಪಾಂಚನದಂ ದೃಷ್ಟ್ವಾ ಧಿಗಿತ್ಯಾಹ ಪಿತಾಮಹಃ।।
ಹಿಂದೆ ಸರ್ವದೇಶಗಳಲ್ಲಿ ಶಾಶ್ವತವಾಗಿರುವ ಧರ್ಮವನ್ನು ಗೌರವಿಸುತ್ತಾ ಪಿತಾಮಹನು ಪಾಂಚನದ ದೇಶಗಳ ಧರ್ಮವನ್ನು ನೋಡಿ ಧಿಕ್ಕಾರ ಎಂದಿದ್ದನು.
08030066a ವ್ರಾತ್ಯಾನಾಂ ದಾಶಮೀಯಾನಾಂ ಕೃತೇಽಪ್ಯಶುಭಕರ್ಮಣಾಂ।
08030066c ಇತಿ ಪಾಂಚನದಂ ಧರ್ಮಮವಮೇನೇ ಪಿತಾಮಹಃ।
08030066e ಸ್ವಧರ್ಮಸ್ಥೇಷು ವರ್ಣೇಷು ಸೋಽಪ್ಯೇತಂ ನಾಭಿಪೂಜಯೇತ್।।
ಅಶುಭ ಕರ್ಮಗಳನ್ನು ಮಾಡುವ ಇವರು ಸಂಸ್ಕಾರ ಹೀನರು ಎಂದು ಪಾಂಚನದರ ಧರ್ಮವನ್ನು ಪಿತಾಮಹನು ಅವಮಾನಿಸಿದ್ದನು.
08030067a ಉತ ಶಲ್ಯ ವಿಜಾನೀಹಿ ಹಂತ ಭೂಯೋ ಬ್ರವೀಮಿ ತೇ।
08030067c ಕಲ್ಮಾಷಪಾದಃ ಸರಸಿ ನಿಮಜ್ಜನ್ರಾಕ್ಷಸೋಽಬ್ರವೀತ್।।
ಶಲ್ಯ! ಇದನ್ನು ಅರ್ಥಮಾಡಿಕೋ. ಇನ್ನೂ ಇದೆ. ನಿನಗೆ ಹೇಳುತ್ತೇನೆ! ಕಲ್ಮಾಷಪಾದನು ರಾಕ್ಷಸನಾಗಿದ್ದಾಗ ಸರೋವರವೊಂದರಲ್ಲಿ ಮುಳುಗಿ ಹೀಗೆ ಹೇಳಿದ್ದನು:
08030068a ಕ್ಷತ್ರಿಯಸ್ಯ ಮಲಂ ಭೈಕ್ಷಂ ಬ್ರಾಹ್ಮಣಸ್ಯಾನೃತಂ ಮಲಂ।
08030068c ಮಲಂ ಪೃಥಿವ್ಯಾ ಬಾಹ್ಲೀಕಾಃ ಸ್ತ್ರೀಣಾಂ ಮದ್ರಸ್ತ್ರಿಯೋ ಮಲಂ।।
“ಕ್ಷತ್ರಿಯನಿಗೆ ಭಿಕ್ಷಾವೃತ್ತಿಯು ಹೊಲಸು. ಬ್ರಾಹ್ಮಣನಿಗೆ ಸುಳ್ಳು ಹೇಳುವುದು ಹೊಲಸು. ಪೃಥ್ವಿಯಲ್ಲಿ ಬಾಹ್ಲೀಕರು ಹೊಲಸು ಜನರು. ಮತ್ತು ಸ್ತ್ರೀಯರಲ್ಲಿ ಮದ್ರ ಸ್ತ್ರೀಯರು ದೋಷಯುಕ್ತರು.”
08030069a ನಿಮಜ್ಜಮಾನಮುದ್ಧೃತ್ಯ ಕಶ್ಚಿದ್ರಾಜಾ ನಿಶಾಚರಂ।
08030069c ಅಪೃಚ್ಚತ್ತೇನ ಚಾಖ್ಯಾತಂ ಪ್ರೋಕ್ತವಾನ್ಯನ್ನಿಬೋಧ ತತ್।।
ಮುಳುಗುತ್ತಿದ್ದ ಅವನನ್ನು ಮೇಲಕ್ಕೆತ್ತಿ ಓರ್ವ ನಿಶಾಚರನು ಕೇಳಲು ಅವನು ಹೇಳಿದುದನ್ನು ಕೇಳು:
08030070a ಮಾನುಷಾಣಾಂ ಮಲಂ ಮ್ಲೇಚ್ಚಾ ಮ್ಲೇಚ್ಚಾನಾಂ ಮೌಷ್ಟಿಕಾ ಮಲಂ।
08030070c ಮೌಷ್ಟಿಕಾನಾಂ ಮಲಂ ಶಂಡಾಃ ಶಂಡಾನಾಂ ರಾಜಯಾಜಕಾಃ।।
08030071a ರಾಜಯಾಜಕಯಾಜ್ಯಾನಾಂ ಮದ್ರಕಾಣಾಂ ಚ ಯನ್ಮಲಂ।
08030071c ತದ್ಭವೇದ್ವೈ ತವ ಮಲಂ ಯದ್ಯಸ್ಮಾನ್ನ ವಿಮುಂಚಸಿ।।
“ಮನುಷ್ಯರಲ್ಲಿ ಮ್ಲೇಚ್ಛರು ಹೊಲಸರು. ಮ್ಲೇಚ್ಛರಲ್ಲಿ ಹೆಂಡವನ್ನು ಮಾರುವವನು ಅಥವಾ ಇಳಿಸುವವನು ಹೊಲಸು. ಹೆಂಡಮಾರುವವರಲ್ಲಿ ನಪುಂಸಕರು ಹೊಲಸು. ನಪುಂಸಕರಲ್ಲಿ ರಾಜಪುರೋಹಿತರು ಹೊಲಸು. ನೀನೇನಾದರೂ ನನ್ನನ್ನು ಉದ್ಧರಿಸದಿದ್ದರೆ ಅಂತಹ ರಾಜಪುರೋಹಿತರಿಗೂ, ಕ್ಷತಿಯನನ್ನೇ ಪುರೋಹಿತನನ್ನಾಗಿ ಇಟ್ಟುಕೊಂಡವರಿಗೂ, ಮದ್ರಕರಿಗೂ ಇರುವ ಮಹಾದೋಷಗಳು ನಿನ್ನದಾಗುವವು.”
08030072a ಇತಿ ರಕ್ಷೋಪಸೃಷ್ಟೇಷು ವಿಷವೀರ್ಯಹತೇಷು ಚ।
08030072c ರಾಕ್ಷಸಂ ಭೇಷಜಂ ಪ್ರೋಕ್ತಂ ಸಂಸಿದ್ಧಂ ವಚನೋತ್ತರಂ।।
ರಾಕ್ಷಸರ ಉಪದ್ರವವಿರುವವರಿಗೆ ಮತ್ತು ವಿಷದಿಂದ ವೀರ್ಯವು ಹತವಾಗಿರುವವರಿಗೆ ರಾಕ್ಷಸರ ಉಪದ್ರವವನ್ನು ತಪ್ಪಿಸಿಕೊಳ್ಳಲು ಮತ್ತು ವಿಷದ ಪ್ರಭಾವವನ್ನು ಹೋಗಲಾಡಿಸಲು ರಾಕ್ಷಸಭೈಷಜವೆಂಬ ಈ ಸಿದ್ಧವಚನವಿದೆ:
08030073a ಬ್ರಾಹ್ಮಂ ಪಾಂಚಾಲಾಃ ಕೌರವೇಯಾಃ ಸ್ವಧರ್ಮಃ ಸತ್ಯಂ ಮತ್ಸ್ಯಾಃ ಶೂರಸೇನಾಶ್ಚ ಯಜ್ಞಃ।
08030073c ಪ್ರಾಚ್ಯಾ ದಾಸಾ ವೃಷಲಾ ದಾಕ್ಷಿಣಾತ್ಯಾಃ ಸ್ತೇನಾ ಬಾಹ್ಲೀಕಾಃ ಸಂಕರಾ ವೈ ಸುರಾಷ್ಟ್ರಾಃ।।
“ಪಾಂಚಾಲರು ಬ್ರಹ್ಮಕರ್ಮ ಮಾಡುವವರು. ಕೌರವೇಯರು ಸ್ವಧರ್ಮನಿರತರು. ಮತ್ಸ್ಯರು ಸತ್ಯವಾದಿಗಳು. ಶೂರಸೇನರು ಯಾಜ್ಞಿಕರು. ಪೂರ್ವದೇಶದವರು ದಾಸರು ಮತ್ತು ದಕ್ಷಿಣದೇಶದವರು ವೃಷಲರು. ಬಾಹ್ಲೀಕ ದೇಶದವರು ಕಳ್ಳರು ಮತ್ತು ಸೌರಾಷ್ಟ್ರದವರು ವರ್ಣಸಂಕರರು.
08030074a ಕೃತಘ್ನತಾ ಪರವಿತ್ತಾಪಹಾರಃ ಸುರಾಪಾನಂ ಗುರುದಾರಾವಮರ್ಶಃ।
08030074c ಯೇಷಾಂ ಧರ್ಮಸ್ತಾನ್ಪ್ರತಿ ನಾಸ್ತ್ಯಧರ್ಮ ಆರಟ್ಟಕಾನ್ಪಾಂಚನದಾನ್ಧಿಗಸ್ತು।।
ಕೃತಘ್ನತೆ, ಪರರ ವಿತ್ತವನ್ನು ಅಪಹರಿಸುವುದು, ಸುರಾಪಾನ, ಗುರುಪತ್ನಿಯರೊಡನೆ ಸಮಾಗಮ ಮತ್ತು ಕಠೋರವಾಗಿರುವುದು ಇವುಗಳು ಯಾರ ಧರ್ಮವಾಗಿವೆಯೋ ಅಂತಹ ಪಂಚನದ ದೇಶದ ಅರಟ್ಟಕರಿಗೆ ಅಧರ್ಮವೆಂಬುದೇ ಇಲ್ಲ. ಅವರಿಗೆ ಧಿಕ್ಕಾರವಿರಲಿ!
08030075a ಆ ಪಾಂಚಾಲೇಭ್ಯಃ ಕುರವೋ ನೈಮಿಷಾಶ್ಚ ಮತ್ಸ್ಯಾಶ್ಚೈವಾಪ್ಯಥ ಜಾನಂತಿ ಧರ್ಮಂ।
08030075c ಕಲಿಂಗಕಾಶ್ಚಾಂಗಕಾ ಮಾಗಧಾಶ್ಚ ಶಿಷ್ಟಾನ್ಧರ್ಮಾನುಪಜೀವಂತಿ ವೃದ್ಧಾಃ।।
ಪಾಂಚಾಲ, ಕೌರವ, ನೈಮಿಷ, ಮತ್ತು ಮತ್ಸ್ಯದೇಶಗಳ ಜನರು ಧರ್ಮವನ್ನು ತಿಳಿದವರು. ಕಲಿಂಗರು, ಅಂಗರು, ಮತ್ತು ಮಾಗಧರ ವೃದ್ಧರು ಶಿಷ್ಟಾಚಾರ ಧರ್ಮಾಚಾರಗಳಿಂದ ಜೀವನ ನಡೆಸುತ್ತಾರೆ.
08030076a ಪ್ರಾಚೀಂ ದಿಶಂ ಶ್ರಿತಾ ದೇವಾ ಜಾತವೇದಃಪುರೋಗಮಾಃ।
08030076c ದಕ್ಷಿಣಾಂ ಪಿತರೋ ಗುಪ್ತಾಂ ಯಮೇನ ಶುಭಕರ್ಮಣಾ।।
08030077a ಪ್ರತೀಚೀಂ ವರುಣಃ ಪಾತಿ ಪಾಲಯನ್ನಸುರಾನ್ಬಲೀ।
08030077c ಉದೀಚೀಂ ಭಗವಾನ್ಸೋಮೋ ಬ್ರಹ್ಮಣ್ಯೋ ಬ್ರಾಹ್ಮಣೈಃ ಸಹ।।
ಜಾತವೇದನೇ ಮೊದಲಾದ ದೇವತೆಗಳು ಪೂರ್ವದಿಕ್ಕನ್ನು ಆಶ್ರಯಿಸಿದ್ದಾರೆ. ಯಮನಿಂದ ರಕ್ಷಿಸಲ್ಪಟ್ಟಿರುವ ಶುಭಕರ್ಮಿ ಪಿತೃಗಳು ದಕ್ಷಿಣದಿಕ್ಕನ್ನು ಆಶ್ರಯಿಸಿದ್ದಾರೆ. ಅಸುರರನ್ನು ಪಾಲಿಸುತ್ತಾ ಬಲಶಾಲೀ ವರುಣನು ಪಶ್ಚಿಮ ದಿಕ್ಕನ್ನು ಪಾಲಿಸುತ್ತಾನೆ. ಬ್ರಹ್ಮಣ್ಯ ಭಗವಾನ್ ಸೋಮನು ಬ್ರಾಹ್ಮಣರೊಂದಿಗೆ ಉತ್ತರ ದಿಕ್ಕನ್ನು ರಕ್ಷಿಸುತ್ತಾನೆ.
08030078a ರಕ್ಷಹ್ಪಿಶಾಚಾನ್ ಹಿಮವಾನ್ಗುಹ್ಯಕಾನ್ಗಂಧಮಾದನಃ।
08030078c ಧ್ರುವಃ ಸರ್ವಾಣಿ ಭೂತಾನಿ ವಿಷ್ಣುರ್ಲೋಕಾಂ ಜನಾರ್ದನಃ।।
ಪಿಶಾಚಿಗಳು ಹಿಮವತ್ಪರ್ವತವನ್ನೂ ಗುಹ್ಯಕರು ಗಂಧಮಾದನಪರ್ವತವನ್ನೂ ರಕ್ಷಿಸುತ್ತಾರೆ. ಲೋಕದಲ್ಲಿರುವ ಸರ್ವ ಭೂತಗಳನ್ನೂ ನಿಶ್ಚಯವಾಗಿ ಜನಾರ್ದನ ವಿಷ್ಣುವು ರಕ್ಷಿಸುತ್ತಾನೆ.
08030079a ಇಂಗಿತಜ್ಞಾಶ್ಚ ಮಗಧಾಃ ಪ್ರೇಕ್ಷಿತಜ್ಞಾಶ್ಚ ಕೋಸಲಾಃ।
08030079c ಅರ್ಧೋಕ್ತಾಃ ಕುರುಪಾಂಚಾಲಾಃ ಶಾಲ್ವಾಃ ಕೃತ್ಸ್ನಾನುಶಾಸನಾಃ।
08030079e ಪಾರ್ವತೀಯಾಶ್ಚ ವಿಷಮಾ ಯಥೈವ ಗಿರಯಸ್ತಥಾ।।
ಮಗಧರು ಇಂಗಿತದಿಂದ ಮತ್ತು ಕೋಸಲರು ದೃಷ್ಟಿಮಾತ್ರದಿಂದ ತಿಳಿದುಕೊಳ್ಳಬಲ್ಲರು. ಕುರು-ಪಾಂಚಾಲರು ಅರ್ಧಮಾತಿನಿಂದಲೇ ಸಂಪೂರ್ಣ ವಿಷಯವನ್ನು ಗ್ರಹಿಸಿಕೊಂಡುಬಿಡುತ್ತಾರೆ. ಶಾಲ್ವದೇಶದವರು ವಿಷಯವನ್ನು ಸಂಪೂರ್ಣವಾಗಿ ಹೇಳಿದನಂತರವೇ ಗ್ರಹಿಸಿಕೊಳ್ಳಬಲ್ಲರು. ಆದರೆ ಪರ್ವತದೇಶದವರು ವಿಷಯವನ್ನು ಸಂಪೂರ್ಣವಾಗಿ ಹೇಳಿದಾಗಲೂ ಗ್ರಹಿಸಲಾರರು.
08030080a ಸರ್ವಜ್ಞಾ ಯವನಾ ರಾಜಂ ಶೂರಾಶ್ಚೈವ ವಿಶೇಷತಃ।
08030080c ಮ್ಲೇಚ್ಚಾಃ ಸ್ವಸಂಜ್ಞಾನಿಯತಾ ನಾನುಕ್ತ ಇತರೋ ಜನಃ।।
08030081a ಪ್ರತಿರಬ್ಧಾಸ್ತು ಬಾಹ್ಲೀಕಾ ನ ಚ ಕೇ ಚನ ಮದ್ರಕಾಃ।
ರಾಜನ್! ಯವನರು ಸರ್ವಜ್ಞರೂ, ವಿಶೇಷವಾಗಿ ಶೂರರೂ ಆಗಿದ್ದಾರೆ. ಮ್ಲೇಚ್ಛರು ತಮ್ಮದನ್ನು ಚೆನ್ನಾಗಿ ತಿಳಿದುಕೊಂಡವರಾಗಿದ್ದುಕೊಂಡು ಇತರ ಜನರಲ್ಲಿ ಅನುರಕ್ತಿಯನ್ನು ಹೊಂದಿರುವವರಲ್ಲ. ಬಾಹ್ಲೀಕರು ಹೇಳಿದುದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಮತ್ತು ಕೆಲವು ಮದ್ರಕರಿಗೆ ಏನೂ ತಿಳಿಯುವುದಿಲ್ಲ.
08030081c ಸ ತ್ವಮೇತಾದೃಶಃ ಶಲ್ಯ ನೋತ್ತರಂ ವಕ್ತುಮರ್ಹಸಿ।।
08030082a ಏತಜ್ಞಾತ್ವಾ ಜೋಷಮಾಸ್ಸ್ವ ಪ್ರತೀಪಂ ಮಾ ಸ್ಮ ವೈ ಕೃಥಾಃ।
08030082c ಸ ತ್ವಾಂ ಪೂರ್ವಮಹಂ ಹತ್ವಾ ಹನಿಷ್ಯೇ ಕೇಶವಾರ್ಜುನೌ।।
ಶಲ್ಯ! ಅಂಥವನಾಗಿರುವ ನೀನು ನನಗೆ ಯಾವ ಉತ್ತರವನ್ನೂ ಕೊಡಬೇಕಾಗಿಲ್ಲ. ಇದನ್ನು ತಿಳಿದುಕೊಂಡು ಪುನಃ ಪ್ರತಿಕೂಲ ಮಾತುಗಳನ್ನು ಆಡಬೇಡ! ನಿನ್ನನ್ನೇ ಮೊದಲು ಸಂಹರಿಸಿ ನಂತರ ಕೇಶವಾರ್ಜುನರನ್ನು ಸಂಹರಿಸುವಂತಾಗದಿರಲಿ!”
08030083 ಶಲ್ಯ ಉವಾಚ।
08030083a ಆತುರಾಣಾಂ ಪರಿತ್ಯಾಗಃ ಸ್ವದಾರಸುತವಿಕ್ರಯಃ।
08030083c ಅಂಗೇಷು ವರ್ತತೇ ಕರ್ಣ ಯೇಷಾಮಧಿಪತಿರ್ಭವಾನ್।।
ಶಲ್ಯನು ಹೇಳಿದನು: “ಕರ್ಣ! ನೀನು ಅಧಿಪತಿಯಾಗಿರುವ ಅಂಗದೇಶದಲ್ಲಿ ರೋಗಿಗಳನ್ನು ಪರಿತ್ಯಜಿಸುತ್ತಾರೆ ಮತ್ತು ತಮ್ಮ ಪತ್ನಿ-ಮಕ್ಕಳನ್ನು ಮಾರುತ್ತಾರೆ.
08030084a ರಥಾತಿರಥಸಂಖ್ಯಾಯಾಂ ಯತ್ತ್ವಾ ಭೀಷ್ಮಸ್ತದಾಬ್ರವೀತ್।
08030084c ತಾನ್ವಿದಿತ್ವಾತ್ಮನೋ ದೋಷಾನ್ನಿರ್ಮನ್ಯುರ್ಭವ ಮಾ ಕ್ರುಧಃ।।
ರಥಾತಿರಥರನ್ನು ಎಣಿಸುವಾಗ ಭೀಷ್ಮನು ಹೇಳಿದ ನಿನ್ನಲ್ಲಿರುವ ದೋಷಗಳನ್ನು ತಿಳಿದುಕೊಂಡು ಶಾಂತನಾಗು. ಕ್ರೋಧಿಸಬೇಡ.
08030085a ಸರ್ವತ್ರ ಬ್ರಾಹ್ಮಣಾಃ ಸಂತಿ ಸಂತಿ ಸರ್ವತ್ರ ಕ್ಷತ್ರಿಯಾಃ।
08030085c ವೈಶ್ಯಾಃ ಶೂದ್ರಾಸ್ತಥಾ ಕರ್ಣ ಸ್ತ್ರಿಯಃ ಸಾಧ್ವ್ಯಶ್ಚ ಸುವ್ರತಾಃ।।
ಕರ್ಣ! ಎಲ್ಲ ಕಡೆಗಳಲ್ಲಿ ಬ್ರಾಹ್ಮಣರಿರುತ್ತಾರೆ. ಎಲ್ಲಕಡೆ ಕ್ಷತ್ರಿಯರೂ, ಹಾಗೆ ವೈಶ್ಯರು, ಶೂದ್ರರು, ಮತ್ತು ಸಾಧು ಸುವ್ರತ ಸ್ತ್ರೀಯರೂ ಇರುತ್ತಾರೆ.
08030086a ರಮಂತೇ ಚೋಪಹಾಸೇನ ಪುರುಷಾಃ ಪುರುಷೈಃ ಸಹ।
08030086c ಅನ್ಯೋನ್ಯಮವತಕ್ಷಂತೋ ದೇಶೇ ದೇಶೇ ಸಮೈಥುನಾಃ।।
ದೇಶ ದೇಶಗಳಲ್ಲಿಯೂ ಪುರುಷರು ಪುರುಷರೊಂದಿಗೆ ಉಪಹಾಸ್ಯ ಮಾಡುತ್ತಾ, ಕಚ್ಚಾಡುತ್ತಾ, ಸ್ತ್ರೀಯರೊಂದಿಗೆ ರಮಿಸುತ್ತಾರೆ.
08030087a ಪರವಾಚ್ಯೇಷು ನಿಪುಣಃ ಸರ್ವೋ ಭವತಿ ಸರ್ವದಾ।
08030087c ಆತ್ಮವಾಚ್ಯಂ ನ ಜಾನೀತೇ ಜಾನನ್ನಪಿ ವಿಮುಹ್ಯತಿ।।
ಮತ್ತೊಬ್ಬರ ದೋಷಕಥನದಲ್ಲಿ ಎಲ್ಲರೂ ಯಾವಾಗಲೂ ನಿಪುಣರಾಗಿಯೇ ಇರುತ್ತಾರೆ. ತಮ್ಮಲ್ಲಿರುವ ದೋಷಗಳನ್ನು ತಿಳಿದುಕೊಳ್ಳುವುದೇ ಇಲ್ಲ. ಒಂದುವೇಳೆ ತಿಳಿದುಕೊಂಡರೂ ತಿಳಿಯದವರಂತೆಯೇ ನಡೆದುಕೊಳ್ಳುತ್ತಾರೆ.””
08030088 ಸಂಜಯ ಉವಾಚ।
08030088a ಕರ್ಣೋಽಪಿ ನೋತ್ತರಂ ಪ್ರಾಹ ಶಲ್ಯೋಽಪ್ಯಭಿಮುಖಃ ಪರಾನ್।
08030088c ಪುನಃ ಪ್ರಹಸ್ಯ ರಾಧೇಯಃ ಪುನರ್ಯಾಹೀತ್ಯಚೋದಯತ್।।
ಸಂಜಯನು ಹೇಳಿದನು: “ಕರ್ಣನಾದರೋ ಉತ್ತರವನ್ನು ನೀಡಲಿಲ್ಲ. ಶಲ್ಯನೂ ಕೂಡ ಶತ್ರುಗಳನ್ನು ಎದುರಿಸಿ ನಡೆದನು. ರಾಧೇಯನು ನಸುನಗುತ್ತಾ “ಮುಂದೆ ಹೋಗು!” ಎಂದು ಶಲ್ಯನನ್ನು ಪ್ರಚೋದಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಕರ್ಣಶಲ್ಯಸಂವಾದೇ ತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಕರ್ಣಶಲ್ಯಸಂವಾದ ಎನ್ನುವ ಮೂವತ್ತನೇ ಅಧ್ಯಾಯವು.