029 ಕರ್ಣಶಲ್ಯಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ಕರ್ಣವಧ ಪರ್ವ

ಅಧ್ಯಾಯ 29

ಸಾರ

ಪರಶುರಾಮನು ತನಗಾಡಿದ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಕರ್ಣನು ತಾನು ಅರ್ಜುನನನ್ನು ಇಂದಿನ ಯುದ್ಧದಲ್ಲಿ ಪರಾಯಜಗೊಳಿಸುತ್ತೇನೆ ಎಂದು ಶಲ್ಯನಿಗೆ ಹೇಳಿದುದು (1-30). ಹಿಂದೆ ಬ್ರಾಹ್ಮಣನು ತನಗಿತ್ತ ಶಾಪದ ಕುರಿತು ಕರ್ಣನು ಶಲ್ಯನಿಗೆ ಹೇಳಿದುದು (31-40).

08029001 ಸಂಜಯ ಉವಾಚ।
08029001a ಮದ್ರಾಧಿಪಸ್ಯಾಧಿರಥಿಸ್ತದೈವಂ ವಚೋ ನಿಶಮ್ಯಾಪ್ರಿಯಮಪ್ರತೀತಃ।
08029001c ಉವಾಚ ಶಲ್ಯಂ ವಿದಿತಂ ಮಮೈತದ್ ಯಥಾವಿಧಾವರ್ಜುನವಾಸುದೇವೌ।।

ಸಂಜಯನು ಹೇಳಿದನು: “ಮದ್ರಾಧಿಪತಿಯ ಅಪ್ರಿಯಮಾತುಗಳನ್ನು ಕೇಳಿದ ಯುದ್ಧದಲ್ಲಿ ಹಿಮ್ಮೆಟ್ಟದಿರುವ ಆಧಿರಥಿಯು ಶಲ್ಯನಿಗೆ ಈ ಮಾತುಗಳನ್ನಾಡಿದನು: “ಅರ್ಜುನ-ವಾಸುದೇವರು ಎಂಥವರೆನ್ನುವುದು ನನಗೂ ತಿಳಿದಿದೆ.

08029002a ಶೌರೇ ರಥಂ ವಾಹಯತೋಽರ್ಜುನಸ್ಯ ಬಲಂ ಮಹಾಸ್ತ್ರಾಣಿ ಚ ಪಾಂಡವಸ್ಯ।
08029002c ಅಹಂ ವಿಜಾನಾಮಿ ಯಥಾವದದ್ಯ ಪರೋಕ್ಷಭೂತಂ ತವ ತತ್ತು ಶಲ್ಯ।।

ಶಲ್ಯ! ಅರ್ಜುನನ ರಥದ ಕುದುರೆಗಳನ್ನು ಓಡಿಸುವ ಶೌರಿಯ ಬಲವನ್ನೂ ಪಾಂಡವನಲ್ಲಿರುವ ಮಹಾಸ್ತ್ರಗಳನ್ನೂ ನಾನು ಯಥಾವತ್ತಾಗಿ ತಿಳಿದಿರುತ್ತೇನೆ. ಆದರೆ ಅವುಗಳನ್ನು ನೀನು ಪರೋಕ್ಷವಾಗಿ ಮಾತ್ರ ತಿಳಿದುಕೊಂಡು ನನಗಿಂದು ಹೇಳುತ್ತಿದ್ದೀಯೆ!

08029003a ತೌ ಚಾಪ್ರಧೃಷ್ಯೌ ಶಸ್ತ್ರಭೃತಾಂ ವರಿಷ್ಠೌ ವ್ಯಪೇತಭೀರ್ಯೋಧಯಿಷ್ಯಾಮಿ ಕೃಷ್ಣೌ।
08029003c ಸಂತಾಪಯತ್ಯಭ್ಯಧಿಕಂ ತು ರಾಮಾಚ್ ಚಾಪೋಽದ್ಯ ಮಾಂ ಬ್ರಾಹ್ಮಣಸತ್ತಮಾಚ್ಚ।।

ಅವರಿಬ್ಬರನ್ನೂ ಪ್ರತ್ಯಕ್ಷವಾಗಿ ತಿಳಿದಿಕೊಂಡಿರುವ ನಾನು ಶಸ್ತ್ರಭೃತರಲ್ಲಿ ವರಿಷ್ಠರಾದ ಅವರೊಂದಿಗೆ ಸ್ವಲ್ಪವೂ ಭೀತಿಯಿಲ್ಲದೇ ಹೋರಾಡುತ್ತೇನೆ. ಆದರೆ ಬ್ರಾಹ್ಮಣಸತ್ತಮ ರಾಮನು ಹೇಳಿದ ಮಾತುಗಳು ನನ್ನನ್ನು ಇಂದು ಅತ್ಯಂತ ಅಧಿಕವಾಗಿ ಪರಿತಾಪಗೊಳಿಸುತ್ತಿವೆ.

08029004a ಅವಾತ್ಸಂ ವೈ ಬ್ರಾಹ್ಮಣಚ್ಚದ್ಮನಾಹಂ ರಾಮೇ ಪುರಾ ದಿವ್ಯಮಸ್ತ್ರಂ ಚಿಕೀರ್ಷುಃ।
08029004c ತತ್ರಾಪಿ ಮೇ ದೇವರಾಜೇನ ವಿಘ್ನೋ ಹಿತಾರ್ಥಿನಾ ಫಲ್ಗುನಸ್ಯೈವ ಶಲ್ಯ।।

ಹಿಂದೆ ನಾನು ದಿವ್ಯಾಸ್ತ್ರಗಳನ್ನು ಬಯಸಿ ಬ್ರಾಹ್ಮಣನ ವೇಷದಲ್ಲಿ ರಾಮನೊಂದಿಗೆ ವಾಸಿಸುತ್ತಿದ್ದೆನು. ಶಲ್ಯ! ಅಲ್ಲಿಯೂ ಸಹ ಅರ್ಜುನನ ಹಿತಾರ್ಥಿ ದೇವರಾಜನಿಂದ ನನಗೆ ವಿಘ್ನವುಂಟಾಯಿತು.

08029005a ಕೃತೋಽವಭೇದೇನ ಮಮೋರುಮೇತ್ಯ ಪ್ರವಿಶ್ಯ ಕೀಟಸ್ಯ ತನುಂ ವಿರೂಪಾಂ।
08029005c ಗುರೋರ್ಭಯಾಚ್ಚಾಪಿ ನ ಚೇಲಿವಾನಹಂ ತಚ್ಚಾವಬುದ್ಧೋ ದದೃಶೇ ಸ ವಿಪ್ರಃ।।

ಅವನು ವಿರೂಪ ಕೀಟವಾಗಿ ನನ್ನ ತೊಡೆಯನ್ನೇರಿ ಕೊರೆದು ದೇಹವನ್ನು ಪ್ರವೇಶಿಸಿದ್ದನು. ಗುರುವಿನ ಭಯದಿಂದಾಗಿ ನಾನು ಆಗ ಸ್ವಲ್ಪವಾದರೂ ಕದಲಲೇ ಇಲ್ಲ. ಅನಂತರ ಎಚ್ಚರಗೊಂಡ ವಿಪ್ರ ರಾಮನು ಆ ದೃಶ್ಯವನ್ನು ಕಂಡನು.

08029006a ಪೃಷ್ಟಶ್ಚಾಹಂ ತಮವೋಚಂ ಮಹರ್ಷಿಂ ಸೂತೋಽಹಮಸ್ಮೀತಿ ಸ ಮಾಂ ಶಶಾಪ।
08029006c ಸೂತೋಪಧಾವಾಪ್ತಮಿದಂ ತ್ವಯಾಸ್ತ್ರಂ ನ ಕರ್ಮಕಾಲೇ ಪ್ರತಿಭಾಸ್ಯತಿ ತ್ವಾಂ।।

ನಾನು ಯಾರೆಂದು ಅವನು ಕೇಳಲು, ಸೂತನೆಂದು ನಾನು ಅವನಿಗೆ ಹೇಳಿದೆನು. ಆಗ ಆ ಮಹರ್ಷಿಯು ನನ್ನನ್ನು ಶಪಿಸಿದನು: “ಸೂತ! ವಂಚನೆಯಿಂದ ಪಡೆದುಕೊಂಡಿರುವ ಈ ಅಸ್ತ್ರವು ಕರ್ಮಕಾಲದಲ್ಲಿ ನಿನಗೆ ಹೊಳೆಯುವುದಿಲ್ಲ!

08029007a ಅನ್ಯತ್ರ ಯಸ್ಮಾತ್ತವ ಮೃತ್ಯುಕಾಲಾದ್ ಅಬ್ರಾಹ್ಮಣೇ ಬ್ರಹ್ಮ ನ ಹಿ ಧ್ರುವಂ ಸ್ಯಾತ್।
08029007c ತದದ್ಯ ಪರ್ಯಾಪ್ತಮತೀವ ಶಸ್ತ್ರಂ ಅಸ್ಮಿನ್ಸಂಗ್ರಾಮೇ ತುಮುಲೇ ತಾತ ಭೀಮೇ।।

ನಿನ್ನ ಮೃತ್ಯುಕಾಲದಲ್ಲಿಯೂ ನಿನಗಿದು ಸ್ಮರಣೆಗೆ ಬರುವುದಿಲ್ಲ. ಏಕೆಂದರೆ ಅಬ್ರಾಹ್ಮಣರಲ್ಲಿ ಈ ಬ್ರಹ್ಮಾಸ್ತ್ರವು ಶಾಶ್ವತವಾಗಿ ಇರುವುದಿಲ್ಲ.” ಅಯ್ಯಾ! ಇಂದಿನ ಈ ಭಯಂಕರ ತುಮುಲ ಸಂಗ್ರಾಮದಲ್ಲಿ ನನಗೆ ಆ ಶಸ್ತ್ರವು ದೊರಕದೆಯೂ ಇರಬಹುದು.

08029008a ಅಪಾಂ ಪತಿರ್ವೇಗವಾನಪ್ರಮೇಯೋ ನಿಮಜ್ಜಯಿಷ್ಯನ್ನಿವಹಾನ್ಪ್ರಜಾನಾಂ।
08029008c ಮಹಾನಗಂ ಯಃ ಕುರುತೇ ಸಮುದ್ರಂ ವೇಲೈವ ತಂ ವಾರಯತ್ಯಪ್ರಮೇಯಂ।।

ವೇಗವಾನ್ ಅಪ್ರಮೇಯ ವರುಣನು ಪ್ರಜೆಗಳನ್ನು ಮುಳುಗಿಸಲು ತನ್ನ ಅಲೆಗಳನ್ನೇ ಪ್ರಕಟಿಸುತ್ತಾನೆ. ಆದರೆ ಆ ಅಪ್ರಮೇಯ ಸಮುದ್ರದ ಅಲೆಗಳನ್ನು ಕೂಡ ತೀರವು ತಡೆಯುತ್ತದೆ.

08029009a ಪ್ರಮುಂಚಂತಂ ಬಾಣಸಂಘಾನಮೋಘಾನ್ ಮರ್ಮಚ್ಚಿದೋ ವೀರಹಣಃ ಸಪತ್ರಾನ್।
08029009c ಕುಂತೀಪುತ್ರಂ ಪ್ರತಿಯೋತ್ಸ್ಯಾಮಿ ಯುದ್ಧೇ ಜ್ಯಾಕರ್ಷಿಣಾಮುತ್ತಮಮದ್ಯ ಲೋಕೇ।।

ವೀರರನ್ನು ಸಂಹರಿಸಬಲ್ಲ, ಮರ್ಮವನ್ನು ಭೇದಿಸಬಲ್ಲ, ರೆಕ್ಕೆಗಳುಳ್ಳ ಅಮೋಘ ಬಾಣಸಂಘಗಳನ್ನು ಆಕರ್ಣಾಂತವಾಗಿ ಬಿಲ್ಲನ್ನು ಸೆಳೆದು ಬಿಡುವ ಲೋಕದಲ್ಲಿಯೇ ಉತ್ತಮನೆನಿಸಿಕೊಂಡಿರುವ ಕುಂತೀಪುತ್ರನನ್ನು ಇಂದು ನಾನು ಯುದ್ಧದಲ್ಲಿ ಎದುರಿಸುತ್ತೇನೆ.

08029010a ಏವಂ ಬಲೇನಾತಿಬಲಂ ಮಹಾಸ್ತ್ರಂ ಸಮುದ್ರಕಲ್ಪಂ ಸುದುರಾಪಮುಗ್ರಂ।
08029010c ಶರೌಘಿಣಂ ಪಾರ್ಥಿವಾನ್ಮಜ್ಜಯಂತಂ ವೇಲೇವ ಪಾರ್ಥಮಿಷುಭಿಃ ಸಂಸಹಿಷ್ಯೇ।।

ಈ ರೀತಿ ಅತಿಬಲಶಾಲಿ ಮಹಾಸ್ತ್ರಗಳನ್ನು ತಿಳಿದ, ಸಮುದ್ರದಂತೆ ದುರ್ಲಂಘನೀಯ, ಶರೌಘಗಳಿಂದ ಪಾರ್ಥಿವರನ್ನು ಮಥಿಸುತ್ತಿರುವ ಪಾರ್ಥನೆಂಬ ಅಲೆಯನ್ನು ಬಾಣಗಳೆಂಬ ತೀರದಿಂದ ತಡೆಯುತ್ತೇನೆ.

08029011a ಅದ್ಯಾಹವೇ ಯಸ್ಯ ನ ತುಲ್ಯಮನ್ಯಂ ಮನ್ಯೇ ಮನುಷ್ಯಂ ಧನುರಾದದಾನಂ।
08029011c ಸುರಾಸುರಾನ್ವೈ ಯುಧಿ ಯೋ ಜಯೇತ ತೇನಾದ್ಯ ಮೇ ಪಶ್ಯ ಯುದ್ಧಂ ಸುಘೋರಂ।।

ಇಂದು ಯುದ್ಧದಲ್ಲಿ ಯಾರಸಮನಿಲ್ಲನೆಂದು ತಿಳಿದಿದ್ದಾರೋ, ಯಾರಂತೆ ಧನುಸ್ಸನ್ನು ಹಿಡಿಯುವ ಅನ್ಯ ಮನುಷ್ಯನೆಂದು ತಿಳಿದಿದ್ದಾರೋ, ಯಾರು ಯುದ್ಧದಲ್ಲಿ ಸುರಾಸುರರನ್ನೂ ಜಯಿಸಿದನೋ ಆ ಅರ್ಜುನನನ್ನು ನಾನು ಇಂದಿನ ಸುಘೋರ ಯುದ್ಧದಲ್ಲಿ ಎದುರಿಸಿಸುತ್ತೇನೆ. ನೋಡು!

08029012a ಅತಿಮಾನೀ ಪಾಂಡವೋ ಯುದ್ಧಕಾಮೋ ಅಮಾನುಷೈರೇಷ್ಯತಿ ಮೇ ಮಹಾಸ್ತ್ರೈಃ।
08029012c ತಸ್ಯಾಸ್ತ್ರಮಸ್ತ್ರೈರಭಿಹತ್ಯ ಸಂಖ್ಯೇ ಶರೋತ್ತಮೈಃ ಪಾತಯಿಷ್ಯಾಮಿ ಪಾರ್ಥಂ।।

ಅತಿಮಾನಿನಿ ಪಾಂಡವನು ಯುದ್ಧಕಾಮುಕನು. ನನ್ನ ಮೇಲೆ ಅಮಾನುಷ ಮಹಾಸ್ತ್ರಗಳನ್ನು ಪ್ರಯೋಗಿಸುತ್ತಾನೆ. ಯುದ್ಧದಲ್ಲಿ ಅವನ ಅಸ್ತ್ರಗಳನ್ನು ‌ಅಸ್ತ್ರಗಳಿಂದ ನಿರಸನಗೊಳಿಸಿ ಉತ್ತಮ ಶರಗಳಿಂದ ಪಾರ್ಥನನ್ನು ಕೆಡವುತ್ತೇನೆ.

08029013a ದಿವಾಕರೇಣಾಪಿ ಸಮಂ ತಪಂತಂ ಸಮಾಪ್ತರಶ್ಮಿಂ ಯಶಸಾ ಜ್ವಲಂತಂ।
08029013c ತಮೋನುದಂ ಮೇಘ ಇವಾತಿಮಾತ್ರೋ ಧನಂಜಯಂ ಚಾದಯಿಷ್ಯಾಮಿ ಬಾಣೈಃ।।

ದಿವಾಕರನಂತೆ ಎಲ್ಲ ದಿಕ್ಕುಗಳನ್ನೂ ಬಾಣಗಳೆಂಬ ಕಿರಣಗಳಿಂದ ಪರಿತಾಪಗೊಳಿಸುವ ಉಗ್ರ ಧನಂಜಯನನ್ನು ಉದಯನನ್ನು ಮೇಘಗಳು ಮುಚ್ಚಿಬಿಡುವಂತೆ ಬಾಣಗಳಿಂದ ಮುಚ್ಚಿಬಿಡುತ್ತೇನೆ!

08029014a ವೈಶ್ವಾನರಂ ಧೂಮಶಿಖಂ ಜ್ವಲಂತಂ ತೇಜಸ್ವಿನಂ ಲೋಕಮಿಮಂ ದಹಂತಂ।
08029014c ಮೇಘೋ ಭೂತ್ವಾ ಶರವರ್ಷೈರ್ಯಥಾಗ್ನಿಂ ತಥಾ ಪಾರ್ಥಂ ಶಮಯಿಷ್ಯಾಮಿ ಯುದ್ಧೇ।।

ಪ್ರಜ್ವಲಿಸುವ ಧೂಮಶಿಖ ವೈಶ್ವಾನರನಂತೆ ತೇಜಸ್ಸಿನಿಂದ ಈ ಲೋಕವನ್ನು ಸುಡುತ್ತಿರುವ ಪಾರ್ಥನನ್ನು ಯುದ್ಧದಲ್ಲಿ ಶರವರ್ಷಗಳಿಂದ ಮೇಘವು ಅಗ್ನಿಯನ್ನು ಹೇಗೋ ಹಾಗೆ ಶಾಂತಗೊಳಿಸುತ್ತೇನೆ.

08029015a ಪ್ರಮಾಥಿನಂ ಬಲವಂತಂ ಪ್ರಹಾರಿಣಂ ಪ್ರಭಂಜನಂ ಮಾತರಿಶ್ವಾನಮುಗ್ರಂ।
08029015c ಯುದ್ಧೇ ಸಹಿಷ್ಯೇ ಹಿಮವಾನಿವಾಚಲೋ ಧನಂಜಯಂ ಕ್ರುದ್ಧಮಮೃಷ್ಯಮಾಣಂ।।

ವೃಕ್ಷಗಳನ್ನೇ ಬುಡದೊಂದಿಗೆ ಕಿತ್ತು ಬಿಸಾಡುವ ವೇಗ ಉಗ್ರ ಚಂಡಮಾರುತವನ್ನು ಹಿಮವತ್ಪರ್ವತವು ಹೇಗೆ ಸಹಿಸಿಕೊಳ್ಳುವುದೋ ಹಾಗೆ ಕ್ರುದ್ಧನಾದ, ಶತ್ರುಸೈನ್ಯಗಳನ್ನು ಮಥಿಸುವ, ಬಲವಂತ ಪ್ರಹಾರಿ, ಮತ್ತು ಅಸಹನಶಾಲಿ ಧನಂಜಯನನ್ನು ನಾನು ಯುದ್ಧದಲ್ಲಿ ಎದುರಿಸುತ್ತೇನೆ.

08029016a ವಿಶಾರದಂ ರಥಮಾರ್ಗೇಷ್ವಸಕ್ತಂ ಧುರ್ಯಂ ನಿತ್ಯಂ ಸಮರೇಷು ಪ್ರವೀರಂ।
08029016c ಲೋಕೇ ವರಂ ಸರ್ವಧನುರ್ಧರಾಣಾಂ ಧನಂಜಯಂ ಸಂಯುಗೇ ಸಂಸಹಿಷ್ಯೇ।।

ರಥಮಾರ್ಗಗಳಲ್ಲಿ ವಿಶಾರದನಾಗಿರುವ, ನಿತ್ಯವೂ ಸಮರಗಳಲ್ಲಿ ಹೊಣೆಯನ್ನು ಹೊರುವ, ಲೋಕದ ಸರ್ವ ಧನುರ್ಧರರಲ್ಲಿ ಶ್ರೇಷ್ಠನಾದ ಶಕ್ತಿಶಾಲಿ ಧನಂಜಯನನ್ನು ಇಂದು ಯುದ್ಧದಲ್ಲಿ ಸಂಧಿಸುತ್ತೇನೆ.

08029017a ಅದ್ಯಾಹವೇ ಯಸ್ಯ ನ ತುಲ್ಯಮನ್ಯಂ ಮಧ್ಯೇಮನುಷ್ಯಂ ಧನುರಾದದಾನಂ।
08029017c ಸರ್ವಾಮಿಮಾಂ ಯಃ ಪೃಥಿವೀಂ ಸಹೇತ ತಥಾ ವಿದ್ವಾನ್ಯೋತ್ಸ್ಯಮಾನೋಽಸ್ಮಿ ತೇನ।।

ಧನುಸ್ಸನ್ನು ಹಿಡಿಯುವುದರಲ್ಲಿ ಯಾರ ಸಮನು ಮನುಷ್ಯರ ಮಧ್ಯದಲ್ಲಿ ಇಲ್ಲವೋ ಅಂತಹ ಅರ್ಜುನನನ್ನು ಮತ್ತು ಈ ಸರ್ವ ಪೃಥ್ವಿಯನ್ನು ಯಾರು ಗೆದ್ದಿರುವನೋ ಆ ವಿದ್ವಾನ್ ಅರ್ಜುನನನ್ನು ಇಂದು ಯುದ್ಧದಲ್ಲಿ ಹೋರಾಡುತ್ತೇನೆ.

08029018a ಯಃ ಸರ್ವಭೂತಾನಿ ಸದೇವಕಾನಿ ಪ್ರಸ್ಥೇಽಜಯತ್ಖಾಂಡವೇ ಸವ್ಯಸಾಚೀ।
08029018c ಕೋ ಜೀವಿತಂ ರಕ್ಷಮಾಣೋ ಹಿ ತೇನ ಯುಯುತ್ಸತೇ ಮಾಂ ಋತೇ ಮಾನುಷೋಽನ್ಯಃ।।

ಖಾಂಡವಪ್ರಸ್ಥದಲ್ಲಿ ದೇವತೆಗಳೂ ಸೇರಿ ಎಲ್ಲ ಪ್ರಾಣಿಗಳನ್ನೂ ಜಯಿಸಿದ ಸವ್ಯಸಾಚಿಯೊಡನೆ ನನ್ನೊಬ್ಬನನ್ನು ಬಿಟ್ಟು ಜೀವವನ್ನು ರಕ್ಷಿಸಿಕೊಳ್ಳುವ ಯಾವ ಮನುಷ್ಯನು ತಾನೇ ಯುದ್ಧಮಾಡಬಲ್ಲನು?

08029019a ಅಹಂ ತಸ್ಯ ಪೌರುಷಂ ಪಾಂಡವಸ್ಯ ಬ್ರೂಯಾಂ ಹೃಷ್ಟಃ ಸಮಿತೌ ಕ್ಷತ್ರಿಯಾಣಾಂ।
08029019c ಕಿಂ ತ್ವಂ ಮೂರ್ಖಃ ಪ್ರಭಷನ್ಮೂಢಚೇತಾ ಮಾಮವೋಚಃ ಪೌರುಷಮರ್ಜುನಸ್ಯ।।

ಆ ಪಾಂಡವನ ಪುರುಷವನ್ನು ನಾನೇ ಕ್ಷತ್ರಿಯರ ಸಮಿತಿಗಳಲ್ಲಿ ಹೃಷ್ಟನಾಗಿ ವರ್ಣಿಸಬಲ್ಲೆ22. ಮೂರ್ಖ ಮೂಢಚೇತನನಾದ ನೀನು ನನಗೇಕೆ ಅರ್ಜುನನ ಪೌರುಷದ ಕುರಿತು ಹೇಳುತ್ತಿರುವೆ23?

08029020a ಅಪ್ರಿಯೋ ಯಃ ಪರುಷೋ ನಿಷ್ಠುರೋ ಹಿ ಕ್ಷುದ್ರಃ ಕ್ಷೇಪ್ತಾ ಕ್ಷಮಿಣಶ್ಚಾಕ್ಷಮಾವಾನ್।
08029020c ಹನ್ಯಾಮಹಂ ತಾದೃಶಾನಾಂ ಶತಾನಿ ಕ್ಷಮಾಮಿ ತ್ವಾಂ ಕ್ಷಮಯಾ ಕಾಲಯೋಗಾತ್।।

ಅಪ್ರಿಯನೂ, ನಿಷ್ಠುರನೂ, ಕ್ಷುದ್ರನೂ, ಕ್ಷಮಾಶೂನ್ಯನೂ, ಕ್ಷಮಾವಂತರನ್ನು ನಿಂದಿಸುವನೂ ಆದ ಪುರುಷನನ್ನು ಮತ್ತು ಅವನಂತಿರುವ ನೂರಾರು ಜನರನ್ನು ನಾನು ಸಂಹರಿಸಿಬಿಡುತ್ತೇನೆ. ಆದರೆ ಕಾಲವಶದಿಂದ ನಿನ್ನನ್ನು ನಾನು ಕ್ಷಮಿಸುತ್ತಿದ್ದೇನೆ.

08029021a ಅವೋಚಸ್ತ್ವಂ ಪಾಂಡವಾರ್ಥೇಽಪ್ರಿಯಾಣಿ ಪ್ರಧರ್ಷಯನ್ಮಾಂ ಮೂಢವತ್ಪಾಪಕರ್ಮನ್।
08029021c ಮಯ್ಯಾರ್ಜವೇ ಜಿಹ್ಮಗತಿರ್ಹತಸ್ತ್ವಂ ಮಿತ್ರದ್ರೋಹೀ ಸಪ್ತಪದಂ ಹಿ ಮಿತ್ರಂ।।

ಪಾಪಕರ್ಮಿಯೇ! ಪಾಂಡವನಿಗೋಸ್ಕರವಾಗಿಯೇ ನೀನು ನನ್ನೊಡನೆ ಈ ರೀತಿ ಮಾತನಾಡಿ ನಿನ್ನ ಮೂಢತನವನ್ನು ಪ್ರದರ್ಶಿಸುತ್ತಿರುವೆ! ನನ್ನೊಡನೆ ಸರಳತೆಯಿಂದ ವರ್ತಿಸಬೇಕಾಗಿರುವ ನೀನು ಕುಟಿಲತನದಿಂದ ವರ್ತಿಸುತ್ತಿರುವೆ. ಏಳು ಹೆಜ್ಜೆಗಳು ಜೊತೆಯಲ್ಲಿ ನಡೆದರೆ ಪರಸ್ಪರ ಮೈತ್ರಿಯು ಬೆಳೆಯುವುದೆಂಬುದನ್ನು ಮಿತ್ರದ್ರೋಹಿಯಾದ ನೀನು ಇಂದು ಸುಳ್ಳನ್ನಾಗಿಸಿರುವೆ!

08029022a ಕಾಲಸ್ತ್ವಯಂ ಮೃತ್ಯುಮಯೋಽತಿದಾರುಣೋ ದುರ್ಯೋಧನೋ ಯುದ್ಧಮುಪಾಗಮದ್ಯತ್।
08029022c ತಸ್ಯಾರ್ಥಸಿದ್ಧಿಮಭಿಕಾಂಕ್ಷಮಾಣಸ್ ತಮಭ್ಯೇಷ್ಯೇ ಯತ್ರ ನೈಕಾಂತ್ಯಮಸ್ತಿ।।

ಅತಿದಾರುಣ ಮೃತ್ಯುಮಯ ಕಾಲವು ಬಂದೊದಗಿದೆ. ದುರ್ಯೋಧನನೂ ಯುದ್ಧಭೂಮಿಗೆ ಆಗಮಿಸಿದ್ದಾನೆ. ಅವನ ಅರ್ಥಸಿದ್ಧಿಯಾಗಲೆಂದು ನನ್ನ ಮನೋಕಾಂಕ್ಷೆಯಾದರೆ, ನಿನ್ನ ಮನಸ್ಸು ಬೇರೆ ಯಾವುದರಲ್ಲಿಯೋ ತೊಡಗಿರುವುದಂತೆ ಮಾತನಾಡುತ್ತಿದ್ದೀಯೆ!

08029023a ಮಿತ್ರಂ ಮಿದೇರ್ನಂದತೇಃ ಪ್ರೀಯತೇರ್ವಾ ಸಂತ್ರಾಯತೇರ್ಮಾನದ ಮೋದತೇರ್ವಾ।
08029023c ಬ್ರವೀತಿ ತಚ್ಚಾಮುತ ವಿಪ್ರಪೂರ್ವಾತ್ ತಚ್ಚಾಪಿ ಸರ್ವಂ ಮಮ ದುರ್ಯೋಧನೇಽಸ್ತಿ।।

ಮಾನದ! ಮಿದ, ನಂದ, ಪ್ರೀ, ತ್ರಾ, ಮಿ24 ಅಥವಾ ಮುದ್ ಧಾತುಗಳಿಂದ ನಿಪಾತನದ ಮೂಲಕ ಮಿತ್ರ ಶಬ್ಧದ ಸಿದ್ಧಿಯಾಗುತ್ತದೆ ಎಂದು ಹಿಂದೆ ವಿಪ್ರರು ಹೇಳಿರುತ್ತಾರೆ. ಈ ಶಬ್ಧದ ಸಂಪೂರ್ಣ ಅರ್ಥವು ನನಗೆ ಮತ್ತು ದುರ್ಯೋಧನನಿಗೆ ತಿಳಿದಿವೆ.

08029024a ಶತ್ರುಃ ಶದೇಃ ಶಾಸತೇಃ ಶಾಯತೇರ್ವಾ ಶೃಣಾತೇರ್ವಾ ಶ್ವಯತೇರ್ವಾಪಿ ಸರ್ಗೇ।
08029024c ಉಪಸರ್ಗಾದ್ಬಹುಧಾ ಸೂದತೇಶ್ಚ ಪ್ರಾಯೇಣ ಸರ್ವಂ ತ್ವಯಿ ತಚ್ಚ ಮಹ್ಯಂ।।

ಶದ್, ಶಾಸ್, ಶೋ, ಶೃ, ಶ್ರಸ್ ಅಥವ್ವಾ ಷದ್ ಮತ್ತು ನಾನಾಪ್ರಕಾರದ ಉಪಸರ್ಗಗಳಿಂದ ಯುಕ್ತವಾದ ಸೂದ್ ಧಾತುಗಳಿಂದ ಶತ್ರು ಶಬ್ಧದ ಸಿದ್ಧಿಯಾಗುತ್ತದೆ. ನನ್ನ ವಿಷಯದಲ್ಲಿ ಈ ಎಲ್ಲ ಧಾತುಗಳ ತಾತ್ಪರ್ಯವನ್ನೂ ನೀನು ಪ್ರಾಯಶಃ ಉಪಯೋಗಿಸುತ್ತಿರುವೆ.

08029025a ದುರ್ಯೋಧನಾರ್ಥಂ ತವ ಚಾಪ್ರಿಯಾರ್ಥಂ ಯಶೋರ್ಥಮಾತ್ಮಾರ್ಥಮಪೀಶ್ವರಾರ್ಥಂ।
08029025c ತಸ್ಮಾದಹಂ ಪಾಂಡವವಾಸುದೇವೌ ಯೋತ್ಸ್ಯೇ ಯತ್ನಾತ್ಕರ್ಮ ತತ್ಪಶ್ಯ ಮೇಽದ್ಯ।।

ದುರ್ಯೋಧನನಿಗೆ ಪ್ರಿಯವನ್ನುಂಟುಮಾಡಲು ಮತ್ತು ನಿನಗೆ ಅಪ್ರಿಯವಾದುದನ್ನು ಮಾಡಲು, ನನ್ನ ಯಶಕ್ಕಾಗಿ ಮತ್ತು ಈಶ್ವರನಿಗಾಗಿ ನಾನು ಪಾಂಡವ-ವಾಸುದೇವರನ್ನು ಹೋರಾಡುತ್ತೇನೆ. ನನ್ನ ಯುದ್ಧಕರ್ಮವನ್ನು ಇಂದು ನೀನು ನೋಡು!

08029026a ಅಸ್ತ್ರಾಣಿ ಪಶ್ಯಾದ್ಯ ಮಮೋತ್ತಮಾನಿ ಬ್ರಾಹ್ಮಾಣಿ ದಿವ್ಯಾನ್ಯಥ ಮಾನುಷಾಣಿ।
08029026c ಆಸಾದಯಿಷ್ಯಾಮ್ಯಹಮುಗ್ರವೀರ್ಯಂ ದ್ವಿಪೋತ್ತಮಂ ಮತ್ತಮಿವಾಭಿಮತ್ತಃ।।

ಇಂದು ನನ್ನ ಉತ್ತಮ ಬ್ರಹ್ಮಾಸ್ತ್ರಗಳನ್ನೂ, ದಿವ್ಯಾಸ್ತ್ರ ಮಾನುಷ್ಯಾಸ್ತ್ರಗಳನ್ನೂ ನೋಡು! ಮದಿಸಿದ ಆನೆಯು ಇನ್ನೂ ಹೆಚ್ಚು ಮದದಿಂದ ಕೂಡಿದ ಆನೆಯೊಂದಿಗೆ ಸೆಣಸಾಡುವಂತೆ ಉಗ್ರವೀರ್ಯ ಅರ್ಜುನನನೊಡನೆ ಯುದ್ಧಮಾಡುತ್ತೇನೆ.

08029027a ಅಸ್ತ್ರಂ ಬ್ರಾಹ್ಮಂ ಮನಸಾ ತದ್ಧ್ಯಜಯ್ಯಂ ಕ್ಷೇಪ್ಸ್ಯೇ ಪಾರ್ಥಾಯಾಪ್ರತಿಮಂ ಜಯಾಯ।
08029027c ತೇನಾಪಿ ಮೇ ನೈವ ಮುಚ್ಯೇತ ಯುದ್ಧೇ ನ ಚೇತ್ಪತೇದ್ವಿಷಮೇ ಮೇಽದ್ಯ ಚಕ್ರಂ।।

ಅಜೇಯವೂ ಅಪ್ರತಿಮವೂ ಆದ ಬ್ರಹ್ಮಾಸ್ತ್ರವನ್ನು ಮನಸ್ಸಿನಲ್ಲಿಯೇ ಸ್ಮರಿಸಿ ಜಯಕ್ಕಾಗಿ ಪಾರ್ಥನ ಮೇಲೆ ಪ್ರಯೋಗಿಸುತ್ತೇನೆ. ಇಂದು ಯುದ್ಧದಲ್ಲಿ ನನ್ನ ರಥದ ಚಕ್ರವು ಹಳ್ಳದಲ್ಲಿ ಬೀಳದೆಯೇ ಹೋದರೆ ಅರ್ಜುನನು ಅದರಿಂದ ತಪ್ಪಿಸಿಕೊಳ್ಳಲಾರನು.

08029028a ವೈವಸ್ವತಾದ್ದಂಡಹಸ್ತಾದ್ವರುಣಾದ್ವಾಪಿ ಪಾಶಿನಃ।
08029028c ಸಗದಾದ್ವಾ ಧನಪತೇಃ ಸವಜ್ರಾದ್ವಾಪಿ ವಾಸವಾತ್।।
08029029a ನಾನ್ಯಸ್ಮಾದಪಿ ಕಸ್ಮಾಚ್ಚಿದ್ಬಿಭಿಮೋ ಹ್ಯಾತತಾಯಿನಃ।
08029029c ಇತಿ ಶಲ್ಯ ವಿಜಾನೀಹಿ ಯಥಾ ನಾಹಂ ಬಿಭೇಮ್ಯಭೀಃ।।

ದಂಡಪಾಣಿ ವೈವಸ್ವತ ಯಮನಿಗಾಗಲೀ, ಪಾಶವನ್ನು ಹಿಡಿದ ವರುಣನಿಗಾಗಲೇ, ಗದಾಧರ ಧನಪತಿ ಕುಬೇರನಿಗಾಗಲೀ, ವಜ್ರದೊಂದಿಗೆ ವಾಸವನಿಗಾಗಲೀ ಮತ್ತು ಇತರ ಅನ್ಯ ಶತ್ರುಗಳಿಗಾಗಲೀ ನಾನು ಭಯಪಡುವವನಲ್ಲ. ಶಲ್ಯ! ಇದನ್ನು ಚೆನ್ನಾಗಿ ತಿಳಿದುಕೋ! ಅವರಿಬ್ಬರಲ್ಲಿಯೂ ನನಗೆ ಭಯವಿಲ್ಲ!

08029030a ತಸ್ಮಾದ್ಭಯಂ ನ ಮೇ ಪಾರ್ಥಾನ್ನಾಪಿ ಚೈವ ಜನಾರ್ದನಾತ್।
08029030c ಅದ್ಯ ಯುದ್ಧಂ ಹಿ ತಾಭ್ಯಾಂ ಮೇ ಸಂಪರಾಯೇ ಭವಿಷ್ಯತಿ।।

ಪಾರ್ಥನಿಗಾಗಲೀ ಜನಾರ್ದನಿಗಾಗಲೀ ನಾನು ಹೆದರುವುದಿಲ್ಲ. ಅವರಿಬ್ಬರೊಡನೆ ನನ್ನ ಯುದ್ಧವು ಇಂದು ನಡೆದೇ ನಡೆಯುತ್ತದೆ.

08029031a ಶ್ವಭ್ರೇ ತೇ ಪತತಾಂ ಚಕ್ರಮಿತಿ ಮೇ ಬ್ರಾಹ್ಮಣೋಽವದತ್।
08029031c ಯುಧ್ಯಮಾನಸ್ಯ ಸಂಗ್ರಾಮೇ ಪ್ರಾಪ್ತಸ್ಯೈಕಾಯನೇ ಭಯಂ।।

“ಸಂಗ್ರಾಮದಲ್ಲಿ ಯುದ್ಧಮಾಡುತ್ತಿರುವಾಗ ಭಯಂಕರ ಪರಿಸ್ಥಿತಿಯು ಬಂದೊದಗಿದಾಗ ನಿನ್ನ ರಥಚಕ್ರವು ಹಳ್ಳದಲ್ಲಿ ಬೀಳಲಿ!” ಎಂದು ನನಗೆ ಓರ್ವ ಬ್ರಾಹ್ಮಣನು ಹೇಳಿದ್ದನು.

08029032a ತಸ್ಮಾದ್ಬಿಭೇಮಿ ಬಲವದ್ಬ್ರಾಹ್ಮಣವ್ಯಾಹೃತಾದಹಂ।
08029032c ಏತೇ ಹಿ ಸೋಮರಾಜಾನ ಈಶ್ವರಾಃ ಸುಖದುಃಖಯೋಃ।।

ಬ್ರಾಹ್ಮಣನ ಆ ಬಲಶಾಲಿ ಪ್ರಹರಕ್ಕೆ ನಾನು ಭಯಪಟ್ಟಿದ್ದೇನೆ. ಚಂದ್ರನನ್ನೇ ರಾಜನನ್ನಾಗಿ ಪಡೆದಿರುವ ಬ್ರಾಹ್ಮಣರು ಶಾಪಾನುಗ್ರಹಗಳಿಂದ ಇತರರ ಸುಖದುಃಖಗಳಿಗೆ ಈಶ್ವರಪ್ರಾಯರಾಗಿರುತ್ತಾರೆ.

08029033a ಹೋಮಧೇನ್ವಾ ವತ್ಸಮಸ್ಯ ಪ್ರಮತ್ತ ಇಷುಣಾಹನಂ।
08029033c ಚರಂತಮಜನೇ ಶಲ್ಯ ಬ್ರಾಹ್ಮಣಾತ್ತಪಸೋ ನಿಧೇಃ।।

ಶಲ್ಯ! ನಿರ್ಜನ ವನದಲ್ಲಿ ತಿರುಗಾಡುತ್ತಿರುವಾಗ ಪ್ರಮತ್ತನಾಗಿ ತಪಸ್ಸೇ ನಿಧಿಯಾಗಿದ್ದ ಆ ಬ್ರಾಹ್ಮಣನ ಹೋಮಧೇನುವಿನ ಕರುವನ್ನು ಬಾಣದಿಂದ ನಾನು ಸಂಹರಿಸಿದ್ದೆ.

08029034a ಈಷಾದಂತಾನ್ಸಪ್ತಶತಾನ್ದಾಸೀದಾಸಶತಾನಿ ಚ।
08029034c ದದತೋ ದ್ವಿಜಮುಖ್ಯಾಯ ಪ್ರಸಾದಂ ನ ಚಕಾರ ಮೇ।।

ಏಳುನೂರು ಆನೆಗಳನ್ನೂ ನೂರಾರು ದಾಸಿ-ದಾಸರನ್ನೂ ಆ ದ್ವಿಜಮುಖ್ಯನಿಗೆ ಕೊಟ್ಟರೂ ಅವನು ನನ್ನ ಮೇಲೆ ಪ್ರಸನ್ನನಾಗಲಿಲ್ಲ.

08029035a ಕೃಷ್ಣಾನಾಂ ಶ್ವೇತವತ್ಸಾನಾಂ ಸಹಸ್ರಾಣಿ ಚತುರ್ದಶ।
08029035c ಆಹರನ್ನ ಲಭೇ ತಸ್ಮಾತ್ಪ್ರಸಾದಂ ದ್ವಿಜಸತ್ತಮಾತ್।।

ಬಿಳಿಯ ಕರುಗಳಿದ್ದ ಹದಿನಾಲ್ಕು ಸಾವಿರ ಕಪ್ಪು ಬಣ್ಣದ ಹಸುಗಳನ್ನು ಕೊಟ್ಟರೂ ಆ ದ್ವಿಜಸತ್ತಮನ ಅನುಗ್ರಹವು ದೊರಕಲಿಲ್ಲ.

08029036a ಋದ್ಧಂ ಗೇಹಂ ಸರ್ವಕಾಮೈರ್ಯಚ್ಚ ಮೇ ವಸು ಕಿಂ ಚನ।
08029036c ತತ್ಸರ್ವಮಸ್ಮೈ ಸತ್ಕೃತ್ಯ ಪ್ರಯಚ್ಚಾಮಿ ನ ಚೇಚ್ಚತಿ।।

ಸತ್ಕರಿಸಿ ಸರ್ವಕಾಮಗಳಿಂದ ಸಂಪನ್ನವಾಗಿದ್ದ ಮನೆಯನ್ನೂ ನನ್ನಲ್ಲಿದ್ದ ಎಲ್ಲ ಸಂಪತ್ತನ್ನೂ ಕೊಟ್ಟರೂ ಅವನು ಅವುಗಳನ್ನು ಬಯಸಲಿಲ್ಲ.

08029037a ತತೋಽಬ್ರವೀನ್ಮಾಂ ಯಾಚಂತಮಪರಾದ್ಧಂ ಪ್ರಯತ್ನತಃ।
08029037c ವ್ಯಾಹೃತಂ ಯನ್ಮಯಾ ಸೂತ ತತ್ತಥಾ ನ ತದನ್ಯಥಾ।।

ಪ್ರಯತ್ನಪಟ್ಟು ನನ್ನ ಅಪರಾಧಕ್ಕೆ ಕ್ಷಮೆಯನ್ನು ಬೇಡುತ್ತಿದ್ದ ನನಗೆ “ಸೂತ! ನಾನು ಹೇಳಿದಂತೆಯೇ ನಡೆಯುತ್ತದೆ. ಬೇರೆ ರೀತಿಯಲ್ಲಿ ನಡೆಯುವುದು ಸಾಧ್ಯವೇ ಇಲ್ಲ!” ಎಂದು ಹೇಳಿ ಬಿಟ್ಟನು.

08029038a ಅನೃತೋಕ್ತಂ ಪ್ರಜಾ ಹನ್ಯಾತ್ತತಃ ಪಾಪಮವಾಪ್ನುಯಾತ್।
08029038c ತಸ್ಮಾದ್ಧರ್ಮಾಭಿರಕ್ಷಾರ್ಥಂ ನಾನೃತಂ ವಕ್ತುಮುತ್ಸಹೇ।।

“ಅಸತ್ಯವನ್ನಾಡುವುದು ಪ್ರಜೆಗಳನ್ನು ನಾಶಗೊಳಿಸುತ್ತದೆ ಮತ್ತು ಪಾಪವನ್ನೂ ಕೊಡುತ್ತದೆ. ಆದುದರಿಂದ ಧರ್ಮರಕ್ಷಣಾರ್ಥವಾಗಿ ಸುಳ್ಳನ್ನು ಹೇಳಬಾರದು.

08029039a ಮಾ ತ್ವಂ ಬ್ರಹ್ಮಗತಿಂ ಹಿಂಸ್ಯಾಃ ಪ್ರಾಯಶ್ಚಿತ್ತಂ ಕೃತಂ ತ್ವಯಾ।
08029039c ಮದ್ವಾಕ್ಯಂ ನಾನೃತಂ ಲೋಕೇ ಕಶ್ಚಿತ್ಕುರ್ಯಾತ್ಸಮಾಪ್ನುಹಿ।।

ಬ್ರಾಹ್ಮಣರಿಗೆ ಪ್ರಾಪ್ತವಾಗಬಲ್ಲ ಉತ್ತಮ ಗತಿಯನ್ನು ಲೋಭಗೊಳಿಸಿ ನಾಶಗೊಳಿಸಬೇಡ. ನೀನು ಪ್ರಾಯಶ್ಚಿತ್ತವನ್ನು ಮಾಡಿಕೊಂಡಾಗಿದೆ. ನನ್ನ ಮಾತನ್ನು ಸುಳ್ಳನ್ನಾಗಿಸಲು ಲೋಕದಲ್ಲಿ ಸಾಧ್ಯವಿಲ್ಲ. ನಾನು ಹೇಳಿದುದನ್ನು ನೀನು ಪಡೆದೇ ಪಡೆಯುತ್ತೀಯೆ.”

08029040a ಇತ್ಯೇತತ್ತೇ ಮಯಾ ಪ್ರೋಕ್ತಂ ಕ್ಷಿಪ್ತೇನಾಪಿ ಸುಹೃತ್ತಯಾ।
08029040c ಜಾನಾಮಿ ತ್ವಾಧಿಕ್ಷಿಪಂತಂ ಜೋಷಮಾಸ್ಸ್ವೋತ್ತರಂ ಶೃಣು।।

ನೀನು ನನ್ನನ್ನು ನಿಂದಿಸುತ್ತಿರುವೆಯಾದರೂ ನಿನ್ನ ಮೇಲಿನ ಸುಹೃದ್ಭಾವದಿಂದ ನಾನು ನಿನಗೆ ಇದನ್ನು ಹೇಳಿರುವೆನು. ಆದರೂ ನೀನು ನನ್ನನ್ನು ನಿಂದಿಸುತ್ತಲೇ ಇರುವೆ ಎನ್ನುವುದನ್ನೂ ತಿಳಿದುಕೊಂಡಿದ್ದೇನೆ. ನೀನಾಡಿದುದಕ್ಕೆ ಉತ್ತರವನ್ನೂ ಕೊಡುತ್ತೇನೆ. ಕೇಳು.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಕರ್ಣಶಲ್ಯಸಂವಾದೇ ಏಕೋನತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಕರ್ಣಶಲ್ಯಸಂವಾದ ಎನ್ನುವ ಇಪ್ಪತ್ತೊಂಭತ್ತನೇ ಅಧ್ಯಾಯವು.