ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 28
ಸಾರ
ಕರ್ಣನು ಪರಶುರಾಮನು ತನಗಾಡಿದ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ತಾನು ಅರ್ಜುನನನ್ನು ಇಂದಿನ ಯುದ್ಧದಲ್ಲಿ ಪರಾಯಜಗೊಳಿಸುತ್ತೇನೆ ಎಂದು ಶಲ್ಯನಿಗೆ ಹೇಳಿದುದು (1-30). ಹಿಂದೆ ಬ್ರಾಹ್ಮಣನು ತನಗಿತ್ತ ಶಾಪದ ಕುರಿತು ಕರ್ಣನು ಶಲ್ಯನಿಗೆ ಹೇಳಿದುದು (31-40).
08028001 ಸಂಜಯ ಉವಾಚ।
08028001a ಮಾರಿಷಾಧಿರಥೇಃ ಶ್ರುತ್ವಾ ವಚೋ ಯುದ್ಧಾಭಿನಂದಿನಃ।
08028001c ಶಲ್ಯೋಽಬ್ರವೀತ್ಪುನಃ ಕರ್ಣಂ ನಿದರ್ಶನಮುದಾಹರನ್।।
ಸಂಜಯನು ಹೇಳಿದನು: “ಮಾರಿಷ! ಯುದ್ಧಾಭಿನಂದಿನ ಆಧಿರಥ ಕರ್ಣನ ಮಾತನ್ನು ಕೇಳಿ ಶಲ್ಯನು ಪುನಃ ಕರ್ಣನಿಗೆ ನಿದರ್ಶನಗಳನ್ನು ಉದಾಹರಿಸುತ್ತಾ ಹೇಳಿದನು:
08028002a ಯಥೈವ ಮತ್ತೋ ಮದ್ಯೇನ ತ್ವಂ ತಥಾ ನ ಚ ವಾ ತಥಾ।
08028002c ತಥಾಹಂ ತ್ವಾಂ ಪ್ರಮಾದ್ಯಂತಂ ಚಿಕಿತ್ಸಾಮಿ ಸುಹೃತ್ತಯಾ।।
“ಮದ್ಯದ ಮತ್ತಿನಲ್ಲಿರುವಂತೆ ತೋರುತ್ತಿದ್ದೀಯೆ. ಸ್ನೇಹಭಾವದಿಂದ ನಿನ್ನ ಆ ಪ್ರಮಾದವನ್ನು ಕೊನೆಗೊಳಿಸುವಂತೆ ನಿನಗೆ ಚಿಕಿತ್ಸೆಯನ್ನು ಮಾಡುತ್ತೇನೆ.
08028003a ಇಮಾಂ ಕಾಕೋಪಮಾಂ ಕರ್ಣ ಪ್ರೋಚ್ಯಮಾನಾಂ ನಿಬೋಧ ಮೇ।
08028003c ಶ್ರುತ್ವಾ ಯಥೇಷ್ಟಂ ಕುರ್ಯಾಸ್ತ್ವಂ ವಿಹೀನ ಕುಲಪಾಂಸನ।।
ಕುಲಪಾಂಸನ! ನೀಚ! ಕರ್ಣ! ನಾನು ಈಗ ಹೇಳಲಿರುವ ಕಾಗೆಯ ದೃಷ್ಟಾಂತವನ್ನು ಚೆನ್ನಾಗಿ ಕೇಳು. ಇದನ್ನು ಕೇಳಿದನಂತರ ನಿನಗಿಷ್ಟಬಂದಂತೆ ಮಾಡು!
08028004a ನಾಹಮಾತ್ಮನಿ ಕಿಂ ಚಿದ್ವೈ ಕಿಲ್ಬಿಷಂ ಕರ್ಣ ಸಂಸ್ಮರೇ।
08028004c ಯೇನ ತ್ವಂ ಮಾಂ ಮಹಾಬಾಹೋ ಹಂತುಮಿಚ್ಚಸ್ಯನಾಗಸಂ।।
ಕರ್ಣ! ಮಹಾಬಾಹೋ! ನಾನು ನಿನಗೆ ಯಾವುದೇ ರೀತಿಯ ಅಪರಾಧವನ್ನೆಸಗಿದುದೂ ನೆನಪಿಲ್ಲ. ನೀನು ಏಕೆ ಅನಪರಾಧಿಯಾಗಿರುವ ನನ್ನನ್ನು ಕೊಲ್ಲಲು ಬಯಸುತ್ತಿರುವೆ?
08028005a ಅವಶ್ಯಂ ತು ಮಯಾ ವಾಚ್ಯಂ ಬುಧ್ಯತಾಂ ಯದಿ ತೇ ಹಿತಂ।
08028005c ವಿಶೇಷತೋ ರಥಸ್ಥೇನ ರಾಜ್ಞಶ್ಚೈವ ಹಿತೈಷಿಣಾ।।
ರಥದಲ್ಲಿ ಸಾರಥಿಯಾಗಿ ಕುಳಿತಿರುವ ಹಿತೈಷಿಣಿ ರಾಜನಾದ ನಾನು ನಿನಗೆ ಹಿತವಾಗುವಂತೆ ತಿಳಿದುದ್ದನ್ನು ಹೇಳಬೇಕಾದುದು ಅವಶ್ಯಕವಾಗಿದೆ.
08028006a ಸಮಂ ಚ ವಿಷಮಂ ಚೈವ ರಥಿನಶ್ಚ ಬಲಾಬಲಂ।
08028006c ಶ್ರಮಃ ಖೇದಶ್ಚ ಸತತಂ ಹಯಾನಾಂ ರಥಿನಾ ಸಹ।।
08028007a ಆಯುಧಸ್ಯ ಪರಿಜ್ಞಾನಂ ರುತಂ ಚ ಮೃಗಪಕ್ಷಿಣಾಂ।
08028007c ಭಾರಶ್ಚಾಪ್ಯತಿಭಾರಶ್ಚ ಶಲ್ಯಾನಾಂ ಚ ಪ್ರತಿಕ್ರಿಯಾ।।
08028008a ಅಸ್ತ್ರಯೋಗಶ್ಚ ಯುದ್ಧಂ ಚ ನಿಮಿತ್ತಾನಿ ತಥೈವ ಚ।
08028008c ಸರ್ವಮೇತನ್ಮಯಾ ಜ್ಞೇಯಂ ರಥಸ್ಯಾಸ್ಯ ಕುಟುಂಬಿನಾ।
08028008e ಅತಸ್ತ್ವಾಂ ಕಥಯೇ ಕರ್ಣ ನಿದರ್ಶನಮಿದಂ ಪುನಃ।।
ಸಮ-ವಿಷಮ ಪ್ರದೇಶಗಳು, ರಥಿಗಳ ಬಲಾಬಲಗಳು, ಸತತವೂ ರಥಿಗಳ ಮತ್ತು ಕುದುರೆಗಳ ಶ್ರಮ ಮತ್ತು ಖೇದಗಳು, ಆಯುಧದ ಪರಿಜ್ಞಾನ, ಮೃಗಪಕ್ಷಿಗಳ ಸೂಚನೆಗಳ ಅರಿವು, ಭಾರ-ಅತಿಭಾರಗಳು, ಬಾಣಗಳಿಂದುಂಟಾದ ಗಾಯಗಳ ಚಿಕಿತ್ಸೆ, ಅಸ್ತ್ರಪ್ರಯೋಗ, ಯುದ್ಧ ನಿಮಿತ್ತಗಳು ಈ ಎಲ್ಲವನ್ನೂ ಚೆನ್ನಾಗಿ ತಿಳಿದುಕೊಂಡಿರುವ ನಾನು ರಥಕುಟುಂಬಕ್ಕೇ ಸೇರಿದವನು. ಕರ್ಣ! ಪುನಃ ನಿನಗೆ ನಿದರ್ಶನರೂಪಕವಾಗಿರುವ ಈ ಕಥೆಯನ್ನು ಹೇಳುತ್ತೇನೆ.
08028009a ವೈಶ್ಯಃ ಕಿಲ ಸಮುದ್ರಾಂತೇ ಪ್ರಭೂತಧನಧಾನ್ಯವಾನ್।
08028009c ಯಜ್ವಾ ದಾನಪತಿಃ ಕ್ಷಾಂತಃ ಸ್ವಕರ್ಮಸ್ಥೋಽಭವಚ್ಚುಚಿಃ।।
08028010a ಬಹುಪುತ್ರಃ ಪ್ರಿಯಾಪತ್ಯಃ ಸರ್ವಭೂತಾನುಕಂಪಕಃ।
08028010c ರಾಜ್ಞೋ ಧರ್ಮಪ್ರಧಾನಸ್ಯ ರಾಷ್ಟ್ರೇ ವಸತಿ ನಿರ್ಭಯಃ।।
ಸಮುದ್ರತೀರದ ಧರ್ಮಪ್ರಧಾನ ರಾಜನ ರಾಷ್ಟ್ರದಲ್ಲಿ ಧನಧಾನ್ಯವಂತನಾದ, ಯಜ್ಞಗಳನ್ನಾಚರಿಸುವ ದಾನಪತಿ ಕ್ಷಾಂತ ಶುಚಿಯು ಸ್ವಕರ್ಮಗಳಲ್ಲಿ ನಿರತನಾಗಿದ್ದನು. ಅನೇಕ ಪುತ್ರರನ್ನು ಮತ್ತು ಪ್ರಿಯ ಪತ್ನಿಯನ್ನು ಹೊಂದಿದ್ದ ಆ ಸರ್ವಭೂತಾನುಕಂಪನನು ನಿರ್ಭಯನಾಗಿ ವಾಸಿಸುತ್ತಿದ್ದನು.
08028011a ಪುತ್ರಾಣಾಂ ತಸ್ಯ ಬಾಲಾನಾಂ ಕುಮಾರಾಣಾಂ ಯಶಸ್ವಿನಾಂ।
08028011c ಕಾಕೋ ಬಹೂನಾಮಭವದುಚ್ಚಿಷ್ಟಕೃತಭೋಜನಃ।।
ಅವನ ಯಶಸ್ವೀ ಬಾಲಕ ಕುಮಾರ ಪುತ್ರರು ತಿಂದು ಮಿಕ್ಕ ಅನ್ನವನ್ನೇ ಸೇವಿಸುತ್ತಾ ಜೀವಿಸುತ್ತಿದ್ದ ಕಾಗೆಯೊಂದು ಅಲ್ಲಿತ್ತು.
08028012a ತಸ್ಮೈ ಸದಾ ಪ್ರಯಚ್ಚಂತಿ ವೈಶ್ಯಪುತ್ರಾಃ ಕುಮಾರಕಾಃ।
08028012c ಮಾಂಸೋದನಂ ದಧಿ ಕ್ಷೀರಂ ಪಾಯಸಂ ಮಧುಸರ್ಪಿಷೀ।।
ಅದಕ್ಕೆ ಸದಾ ವೈಶ್ಯಪುತ್ರ ಕುಮಾರಕರು ಮಾಂಸ, ಅನ್ನ, ಮೊಸರು, ಹಾಲು, ಪಾಯಸ, ಜೇನುತುಪ್ಪ, ತುಪ್ಪ ಇವುಗಳನ್ನು ಕೊಡುತ್ತಿದ್ದರು.
08028013a ಸ ಚೋಚ್ಚಿಷ್ಟಭೃತಃ ಕಾಕೋ ವೈಶ್ಯಪುತ್ರೈಃ ಕುಮಾರಕೈಃ।
08028013c ಸದೃಶಾನ್ ಪಕ್ಷಿಣೋ ದೃಪ್ತಃ ಶ್ರೇಯಸಶ್ಚಾವಮನ್ಯತೇ।।
ವೈಶ್ಯಪುತ್ರ ಕುಮಾರಕರ ಉಚ್ಚಿಷ್ಟವನ್ನು ತಿಂದು ಕೊಬ್ಬಿಹೋಗಿದ್ದ ಆ ಕಾಗೆಯು ತನಗೆ ಸಮಾನ ಮತ್ತು ತನಗಿಂತಲೂ ಶ್ರೇಷ್ಠ ಪಕ್ಷಿಗಳನ್ನು ತಿರಸ್ಕಾರದಿಂದ ಕಾಣುತ್ತಿತ್ತು.
08028014a ಅಥ ಹಂಸಾಃ ಸಮುದ್ರಾಂತೇ ಕದಾ ಚಿದಭಿಪಾತಿನಃ।
08028014c ಗರುಡಸ್ಯ ಗತೌ ತುಲ್ಯಾಶ್ಚಕ್ರಾಂಗಾ ಹೃಷ್ಟಚೇತಸಃ।।
ಒಮ್ಮೆ ಆ ಸಮುದ್ರತೀರಕ್ಕೆ ಗರುಡನಂತೆಯೇ ಹಾರುತ್ತಿದ್ದ ಪ್ರಹೃಷ್ಟ ಹಂಸಗಳು ಹಾರಿ ಬಂದವು.
08028015a ಕುಮಾರಕಾಸ್ತತೋ ಹಂಸಾನ್ದೃಷ್ಟ್ವಾ ಕಾಕಮಥಾಬ್ರುವನ್।
08028015c ಭವಾನೇವ ವಿಶಿಷ್ಟೋ ಹಿ ಪತತ್ರಿಭ್ಯೋ ವಿಹಂಗಮ।।
ಆ ಹಂಸಗಳನ್ನು ನೋಡಿದ ಕುಮಾರರು ಕಾಗೆಗೆ “ವಿಹಂಗಮ! ಪಕ್ಷಿಗಳಲ್ಲೆಲ್ಲಾ ನೀನೇ ವಿಶಿಷ್ಟನಾಗಿದ್ದೀಯೆ!” ಎಂದು ಹೇಳಿದರು.
08028016a ಪ್ರತಾರ್ಯಮಾಣಸ್ತು ಸ ತೈರಲ್ಪಬುದ್ಧಿಭಿರಂಡಜಃ।
08028016c ತದ್ವಚಃ ಸತ್ಯಮಿತ್ಯೇವ ಮೌರ್ಖ್ಯಾದ್ದರ್ಪಾಚ್ಚ ಮನ್ಯತೇ।।
ಅಲ್ಪಬುದ್ಧಿಯ ಕುಮಾರರಿಂದ ಈ ರೀತಿ ಸುಳ್ಳಿನಿಂದ ವಂಚಿಸಲ್ಪಟ್ಟ ಕಾಗೆಯು ತನ್ನದೇ ಮೂರ್ಖತನ ಮತ್ತು ದರ್ಪದಿಂದ ಅವರ ಮಾತು ಸತ್ಯವೆಂದೇ ಭಾವಿಸಿಬಿಟ್ಟಿತು.
08028017a ತಾನ್ಸೋಽಭಿಪತ್ಯ ಜಿಜ್ಞಾಸುಃ ಕ ಏಷಾಂ ಶ್ರೇಷ್ಠಭಾಗಿತಿ।
08028017c ಉಚ್ಚಿಷ್ಟದರ್ಪಿತಃ ಕಾಕೋ ಬಹೂನಾಂ ದೂರಪಾತಿನಾಂ।।
ತಮ್ಮಲ್ಲಿ ಶ್ರೇಷ್ಠನು ಯಾರೆಂದು ತಿಳಿಯಲೋಸುಗ ಉಚ್ಚಿಷ್ಟದರ್ಪಿತ ಕಾಗೆಯು ಬಹುದೂರ ಹಾರಬಲ್ಲ ಆ ಪಕ್ಷಿಗಳಿದ್ದಲ್ಲಿಗೆ ಬಂದಿತು.
08028018a ತೇಷಾಂ ಯಂ ಪ್ರವರಂ ಮೇನೇ ಹಂಸಾನಾಂ ದೂರಪಾತಿನಾಂ।
08028018c ತಮಾಹ್ವಯತ ದುರ್ಬುದ್ಧಿಃ ಪತಾಮ ಇತಿ ಪಕ್ಷಿಣಂ।।
ಅವುಗಳಲ್ಲಿ ಯಾವುದನ್ನು ಶ್ರೇಷ್ಠವೆಂದು ಆರಿಸಿಕೊಂಡಿತೋ ಅದರ ಬಳಿಹೋಗಿ ದುರ್ಬುದ್ಧಿ ಕಾಗೆಯು “ನಾವಿಬ್ಬರೂ ಹಾರೋಣ!” ಎಂದು ಹಾರುವ ಸ್ಪರ್ಧೆಗೆ ಕರೆಯಿತು.
08028019a ತಚ್ಚ್ರುತ್ವಾ ಪ್ರಾಹಸನ್ ಹಂಸಾ ಯೇ ತತ್ರಾಸನ್ಸಮಾಗತಾಃ।
08028019c ಭಾಷತೋ ಬಹು ಕಾಕಸ್ಯ ಬಲಿನಃ ಪತತಾಂ ವರಾಃ।
08028019e ಇದಮೂಚುಶ್ಚ ಚಕ್ರಾಂಗಾ ವಚಃ ಕಾಕಂ ವಿಹಂಗಮಾಃ।।
ಬಹಳವಾಗಿ ಮಾತನಾಡುತ್ತಿದ್ದ ಆ ಕಾಗೆಯ ಮಾತನ್ನು ಕೇಳಿ ಅಲ್ಲಿ ಸೇರಿದ್ದ ಬಲಶಾಲಿ ಪಕ್ಷಿಶ್ರೇಷ್ಠ ಹಂಸಗಳೆಲ್ಲವೂ ನಕ್ಕವು. ಆ ಚಕ್ರಾಂಗ ಪಕ್ಷಿಗಳು ಕಾಗೆಗೆ ಈ ರೀತಿ ಹೇಳಿದವು:
08028020a ವಯಂ ಹಂಸಾಶ್ಚರಾಮೇಮಾಂ ಪೃಥಿವೀಂ ಮಾನಸೌಕಸಃ।
08028020c ಪಕ್ಷಿಣಾಂ ಚ ವಯಂ ನಿತ್ಯಂ ದೂರಪಾತೇನ ಪೂಜಿತಾಃ।।
“ನಾವು ಮಾನಸಸರೋವರದಲ್ಲಿ ವಾಸಿಸುವ ಹಂಸಗಳು. ಪೃಥ್ವಿಯಲ್ಲಿ ಸಂಚರಿಸುತ್ತಿರುತ್ತೇವೆ. ಬಹಳ ದೂರದವರೆಗೆ ಹಾರಿಹೋಗಬಲ್ಲ ಸಾಮರ್ಥ್ಯವಿರುವುದರಿಂದಲೇ ನಿತ್ಯವೂ ನಮ್ಮನ್ನು ಪಕ್ಷಿಗಳಲ್ಲಿಯೇ ಶ್ರೇಷ್ಠರೆಂಬ ಮಾನ್ಯತೆಯಿದೆ.
08028021a ಕಥಂ ನು ಹಂಸಂ ಬಲಿನಂ ವಜ್ರಾಂಗಂ ದೂರಪಾತಿನಂ।
08028021c ಕಾಕೋ ಭೂತ್ವಾ ನಿಪತನೇ ಸಮಾಹ್ವಯಸಿ ದುರ್ಮತೇ।
08028021e ಕಥಂ ತ್ವಂ ಪತನಂ ಕಾಕ ಸಹಾಸ್ಮಾಭಿರ್ಬ್ರವೀಷಿ ತತ್।।
ದುರ್ಮತಿ ಕಾಗೆಯೇ! ಬಲಿಷ್ಟ ವಜ್ರಾಂಗ ಮತ್ತು ದೂರಹಾರಬಲ್ಲ ಹಂಸದೊಂದಿಗೆ ನೀನು ಹೇಗೆ ಸ್ಪರ್ಧಿಸುವೆ? ಕಾಗೆಯಾಗಿದ್ದುಕೊಂಡು ನಮ್ಮೊಡನೆ ಹಾರುವುದಕ್ಕೆ ಹೇಗೆ ಕರೆಯುತ್ತಿರುವೆ? ನಮ್ಮೊಡನೆ ನೀನು ಹೇಗೆ ಹಾರುವೆಯೆನ್ನುವುದನ್ನಾದರೂ ಮೊದಲು ಹೇಳು.”
08028022a ಅಥ ಹಂಸವಚೋ ಮೂಢಃ ಕುತ್ಸಯಿತ್ವಾ ಪುನಃ ಪುನಃ।
08028022c ಪ್ರಜಗಾದೋತ್ತರಂ ಕಾಕಃ ಕತ್ಥನೋ ಜಾತಿಲಾಘವಾತ್।।
ಹಂಸಗಳ ಆ ಮಾತನ್ನು ಪುನಃ ಪುನಃ ನಿಂದನೆಮಾಡುತ್ತಾ ಮೂಢ ಕಾಗೆಯು ತನ್ನ ಜಾತಿಗತ ಲಘುತ್ವದಿಂದ ತನ್ನ ಬಲದ ವಿಷಯದಲ್ಲಿ ಕೊಚ್ಚಿಕೊಳ್ಳುತ್ತಾ ಹೀಗೆ ಉತ್ತರಿಸಿತು:
08028023a ಶತಮೇಕಂ ಚ ಪಾತಾನಾಂ ಪತಿತಾಸ್ಮಿ ನ ಸಂಶಯಃ।
08028023c ಶತಯೋಜನಮೇಕೈಕಂ ವಿಚಿತ್ರಂ ವಿವಿಧಂ ತಥಾ।।
“ನೂರೊಂದು ಪಾತ18ಗಳಲ್ಲಿ ಹಾರಬಲ್ಲೆ ಎನ್ನುವುದರಲ್ಲಿ ಸಂಶಯವಿಲ್ಲ! ಒಂದೊಂದು ನೂರು ಯೋಜನವನ್ನೂ ವಿವಿಧ ವಿಚಿತ್ರ ಗತಿಯಲ್ಲಿ ಹಾರಬಲ್ಲೆ!
08028024a ಉಡ್ಡೀನಮವಡೀನಂ ಚ ಪ್ರಡೀನಂ ಡೀನಮೇವ ಚ।
08028024c ನಿಡೀನಮಥ ಸಂಡೀನಂ ತಿರ್ಯಕ್ಚಾತಿಗತಾನಿ ಚ।।
08028025a ವಿಡೀನಂ ಪರಿಡೀನಂ ಚ ಪರಾಡೀನಂ ಸುಡೀನಕಂ।
08028025c ಅತಿಡೀನಂ ಮಹಾಡೀನಂ ನಿಡೀನಂ ಪರಿಡೀನಕಂ।।
08028026a ಗತಾಗತಪ್ರತಿಗತಾ ಬಹ್ವೀಶ್ಚ ನಿಕುಡೀನಿಕಾಃ।
08028026c ಕರ್ತಾಸ್ಮಿ ಮಿಷತಾಂ ವೋಽದ್ಯ ತತೋ ದ್ರಕ್ಷ್ಯಥ ಮೇ ಬಲಂ।।
ಉಡ್ಡೀನ (ಮೇಲಕ್ಕೆ ಹಾರುವುದು), ಅವಡೀನ (ಕೆಳಕ್ಕೆ ಹಾರುವುದು), ಪ್ರಡೀನ (ನಾಲ್ಕು ದಿಕ್ಕುಗಳಿಗೂ ಹಾರುವುದು), ಡೀನ (ಸಾಧಾರಣವಾಗಿ ಹಾರುವುದು), ನಿಡೀನ (ನಿಧಾನವಾಗಿ ಹಾರುವುದು), ಸಂಡೀನ (ಲಲಿತಗತಿಯಿಂದ ಹಾರುವುದು), ತಿರ್ಯಗ್ಡೀನ (ಅಡ್ಡವಾಗಿ ಹಾರುವುದು), ವಿಡೀನ (ಮತ್ತೊಂದು ಪಕ್ಷಿಯು ಹಾರುತ್ತಿರುವಂತೆಯೇ ಹಾರುವುದು), ಪರಿಡೀನ (ಹತ್ತು ದಿಕ್ಕುಗಳಲ್ಲಿಯೂ ಹಾರುವುದು), ಪರಾಡೀನ (ಹಿಂದಕ್ಕೆ ಹಾರುವುದು), ಸುಡೀನ (ಸ್ವರ್ಗದ ಕಡೆ ಹಾರುವುದು), ಅತಿಡೀನ (ಪ್ರಚಂಡವಾಗಿ ಹಾರುವುದು), ಮಹಾಡೀನ (ಬಹಳ ವೇಗವಾಗಿ ಹಾರುವುದು), ನಿಡೀನ (ರೆಕ್ಕೆಗಳನ್ನು ಅಲ್ಲಾಡಿಸದೆಯೇ ಹಾರುವುದು), ಪರಿಡೀನ, ಗತ (ಯಾವುದೋ ಲಕ್ಷ್ಯವನ್ನು ಗುರಿಯಿಟ್ಟು ಹಾರುವುದು), ಆಗತ (ಲಕ್ಷ್ಯವನ್ನು ತಲುಪಿ ಪುನಃ ಹೊರಟಿದ್ದ ಸ್ಥಳಕ್ಕೇ ಹಿಂದಿರುಗುವುದು), ಪ್ರತಿಗತ (ಹೊರಳಿಕೊಂಡು ಬರುವುದು), ಬಹ್ವಿ ಮತ್ತು ನಿಕೂಡೀನಿಕ – ಇವೆಲ್ಲವುಗಳನ್ನೂ ನೀವು ನೋಡುತ್ತಿದ್ದಂತೆಯೇ ಮಾಡಬಲ್ಲೆ! ಇಂದು ನನ್ನ ಬಲವನ್ನು ನೋಡಿವಿರಂತೆ!”
08028027a ಏವಮುಕ್ತೇ ತು ಕಾಕೇನ ಪ್ರಹಸ್ಯೈಕೋ ವಿಹಂಗಮಃ।
08028027c ಉವಾಚ ಹಂಸಸ್ತಂ ಕಾಕಂ ವಚನಂ ತನ್ನಿಬೋಧ ಮೇ।।
ಕಾಗೆಯು ಹೀಗೆ ಹೇಳಲು, ಅವುಗಳಲ್ಲಿಯ ಒಂದು ಹಂಸವು ನಗುತ್ತಾ ಹೇಳಿತು. ಆ ಹಂಸವು ಕಾಗೆಗೆ ಹೇಳಿದುದನ್ನು ಹೇಳುತ್ತೇನೆ. ಕೇಳು.
08028028a ಶತಮೇಕಂ ಚ ಪಾತಾನಾಂ ತ್ವಂ ಕಾಕ ಪತಿತಾ ಧ್ರುವಂ।
08028028c ಏಕಮೇವ ತು ಯೇ ಪಾತಂ ವಿದುಃ ಸರ್ವೇ ವಿಹಂಗಮಾಃ।।
“ಕಾಗೆಯೇ! ನೀನು ನೂರಾಒಂದು ಪತನಕ್ರಮಗಳನ್ನೂ ಬಲ್ಲೆ ಎನ್ನುವುದು ನಿಶ್ಚಯವಾದುದು. ಏಕೆಂದರೆ ಎಲ್ಲ ಪಕ್ಷಿಗಳೂ ಒಂದೇ ಪತನಕ್ರಮವನ್ನು ಅನುಸರಿಸುತ್ತವೆ19.
08028029a ತಮಹಂ ಪತಿತಾ ಕಾಕ ನಾನ್ಯಂ ಜಾನಾಮಿ ಕಂ ಚನ।
08028029c ಪತ ತ್ವಮಪಿ ರಕ್ತಾಕ್ಷ ಯೇನ ವಾ ತೇನ ಮನ್ಯಸೇ।।
ಕಾಗೆಯೇ! ಅದೇ ಪತನಕ್ರಮವನ್ನು ನಾನೂ ಕೂಡ ಅನುಸರಿಸುತ್ತೇನೆ. ಬೇರೆ ಯಾವುದೂ ನನಗೆ ತಿಳಿದಿಲ್ಲ. ರಕ್ತಾಕ್ಷ! ನಿನಗೆ ಇಷ್ಟವಾಗಿರುವ ಯಾವುದಾದರೂ ಪತನಕ್ರಮವನ್ನುಸರಿಸಿ ಹಾರು!”
08028030a ಅಥ ಕಾಕಾಃ ಪ್ರಜಹಸುರ್ಯೇ ತತ್ರಾಸನ್ಸಮಾಗತಾಃ।
08028030c ಕಥಮೇಕೇನ ಪಾತೇನ ಹಂಸಃ ಪಾತಶತಂ ಜಯೇತ್।।
“ಒಂದೇ ಪಾತದಿಂದ ಈ ಹಂಸವು ನೂರುಪಾತನ ಕ್ರಮಗಳನ್ನು ತಿಳಿದಿರುವ ಕಾಗೆಯನ್ನು ಜಯಿಸೀತು!” ಎಂದು ಅಲ್ಲಿ ಸೇರಿದ್ದ ಇತರ ಕಾಗೆಗಳೂ ಅಪಹಾಸ್ಯಮಾಡಿದವು.
08028031a ಏಕೇನೈವ ಶತಸ್ಯೈಕಂ ಪಾತೇನಾಭಿಭವಿಷ್ಯತಿ।
08028031c ಹಂಸಸ್ಯ ಪತಿತಂ ಕಾಕೋ ಬಲವಾನಾಶುವಿಕ್ರಮಃ।।
“ಶೀಘ್ರವಾಗಿ ಹಾರಬಲ್ಲ ಈ ಬಲಿಷ್ಠ ಕಾಗೆಯು ನೂರರಲ್ಲಿ ಒಂದೇ ಪತನಕ್ರಮದಿಂದ ಹಂಸವನ್ನು ಉರುಳಿಸಿಬಿಡುತ್ತದೆ!”
08028032a ಪ್ರಪೇತತುಃ ಸ್ಪರ್ಧಯಾಥ ತತಸ್ತೌ ಹಂಸವಾಯಸೌ।
08028032c ಏಕಪಾತೀ ಚ ಚಕ್ರಾಂಗಃ ಕಾಕಃ ಪಾತಶತೇನ ಚ।।
ಅನಂತರ ಆ ಹಂಸ-ವಾಯಸಗಳು ಸ್ಪರ್ಧೆಗೆ ಇಳಿದರು: ಚಕ್ರಾಂಗವು ಒಂದೇ ಪತನಕ್ರಮವನ್ನು ಬಳಸಿತು ಮತ್ತು ಕಾಗೆಯು ನೂರು ಪತನಕ್ರಮವನ್ನು ಬಳಸಿತು.
08028033a ಪೇತಿವಾನಥ ಚಕ್ರಾಂಗಃ ಪೇತಿವಾನಥ ವಾಯಸಃ।
08028033c ವಿಸಿಸ್ಮಾಪಯಿಷುಃ ಪಾತೈರಾಚಕ್ಷಾಣೋಽತ್ಮನಃ ಕ್ರಿಯಾಂ।।
ಚಕ್ರಾಂಗ ಹಂಸವು ಹಾರಿತು. ಆಗ ಕಾಗೆಯೂ ಕೂಡ ನೋಡುವವರನ್ನು ವಿಸ್ಮಯಗೊಳಿಸಲು ತನಗೆ ತಿಳಿದಿದ್ದ ಎಲ್ಲ ಪತನ ಕ್ರಮಗಳನ್ನು ತೋರಿಸುತ್ತಾ ಹಾರಿತು.
08028034a ಅಥ ಕಾಕಸ್ಯ ಚಿತ್ರಾಣಿ ಪತಿತಾನೀತರಾಣಿ ಚ।
08028034c ದೃಷ್ಟ್ವಾ ಪ್ರಮುದಿತಾಃ ಕಾಕಾ ವಿನೇದುರಥ ತೈಃ ಸ್ವರೈಃ।।
ಕಾಗೆಯ ವಿಚಿತ್ರ ಪತನಕ್ರಮಗಳನ್ನು ನೋಡಿ ಮುದಿತರಾದ ಕಾಗೆಗಳು ಜೋರು ಸ್ವರಮಾಡಿ ಅದನ್ನು ಪ್ರೋತ್ಸಾಹಿಸುತ್ತಿದ್ದವು.
08028035a ಹಂಸಾಂಶ್ಚಾವಹಸಂತಿ ಸ್ಮ ಪ್ರಾವದನ್ನಪ್ರಿಯಾಣಿ ಚ।
08028035c ಉತ್ಪತ್ಯೋತ್ಪತ್ಯ ಚ ಪ್ರಾಹುರ್ಮುಹೂರ್ತಮಿತಿ ಚೇತಿ ಚ।।
ಅಪ್ರಿಯವಾಗಿ ಮಾತನಾಡಿ ಹಂಸವನ್ನು ಅಪಹಾಸ್ಯಮಾಡುತ್ತಿದ್ದವು. ಅಲ್ಲಿಂದಿಲ್ಲಿಗೆ ಹಾರುತ್ತಾ ಹಂಸವು ನಿಧಾನವಾಯಿತೆಂದು ಹೇಳುತ್ತಿದ್ದವು.
08028036a ವೃಕ್ಷಾಗ್ರೇಭ್ಯಃ ಸ್ಥಲೇಭ್ಯಶ್ಚ ನಿಪತಂತ್ಯುತ್ಪತಂತಿ ಚ।
08028036c ಕುರ್ವಾಣಾ ವಿವಿಧಾನ್ರಾವಾನಾಶಂಸಂತಸ್ತದಾ ಜಯಂ।।
ಮರಗಳಿಂದ ಕೆಳಕ್ಕೆ ಮತ್ತು ನೆಲದಿಂದ ಮೇಲಕ್ಕೆ ಹಾರುತ್ತಿದ್ದವು ಮತ್ತು ವಿವಿಧವಾಗಿ ಕೂಗುತ್ತಾ ಕಾಗೆಗೆ ಜಯಕಾರಹಾಕುತ್ತಿದ್ದವು.
08028037a ಹಂಸಸ್ತು ಮೃದುಕೇನೈವ ವಿಕ್ರಾಂತುಮುಪಚಕ್ರಮೇ।
08028037c ಪ್ರತ್ಯಹೀಯತ ಕಾಕಾಚ್ಚ ಮುಹೂರ್ತಮಿವ ಮಾರಿಷ।।
ಹಂಸವಾದರೋ ಮೃದುಗತಿಯೊಂದರಲ್ಲಿಯೇ ಹಾರಲು ತೊಡಗಿತು. ಮಾರಿಷ! ಕ್ಷಣಕಾಲ ಕಾಗೆಯೇ ಮುಂದೆಯಿದ್ದಂತೆ ತೋರಿತು!
08028038a ಅವಮನ್ಯ ರಯಂ ಹಂಸಾನಿದಂ ವಚನಮಬ್ರವೀತ್।
08028038c ಯೋಽಸಾವುತ್ಪತಿತೋ ಹಂಸಃ ಸೋಽಸಾವೇವ ಪ್ರಹೀಯತೇ।।
ಹಂಸದ ಹಾರುವಿಕೆಯನ್ನು ಅಪಹಾಸ್ಯಮಾಡುತ್ತ “ಸ್ಪರ್ಧಿಸಲು ಹಾರಿಹೋದ ನಿಮ್ಮ ಈ ಹಂಸವು ಹಿಂದೆಯೇ ಉಳಿದುಕೊಂಡಿದೆ!” ಎಂದು ಕೂಗಿ ಹಂಸಗಳಿಗೆ ಕಾಗೆಗಳು ಹೇಳಿದವು.
08028039a ಅಥ ಹಂಸಃ ಸ ತಚ್ಚ್ರುತ್ವಾ ಪ್ರಾಪತತ್ಪಶ್ಚಿಮಾಂ ದಿಶಂ।
08028039c ಉಪರ್ಯುಪರಿ ವೇಗೇನ ಸಾಗರಂ ವರುಣಾಲಯಂ।।
ಅದನ್ನು ಕೇಳಿದ ಹಂಸವು ವೇಗದಿಂದ ಪಶ್ಚಿಮ ದಿಕ್ಕಿನಲ್ಲಿ ಮೇಲೆ ಮೇಲೆ ಹಾರಿ ವರುಣಾಲಯ ಸಾಗರವನ್ನು ತಲುಪಿ ಅದರ ಮೇಲೆ ಹಾರತೊಡಗಿತು.
08028040a ತತೋ ಭೀಃ ಪ್ರಾವಿಶತ್ಕಾಕಂ ತದಾ ತತ್ರ ವಿಚೇತಸಂ।
08028040c ದ್ವೀಪದ್ರುಮಾನಪಶ್ಯಂತಂ ನಿಪತಂತಂ ಶ್ರಮಾನ್ವಿತಂ।
08028040e ನಿಪತೇಯಂ ಕ್ವ ನು ಶ್ರಾಂತ ಇತಿ ತಸ್ಮಿಂ ಜಲಾರ್ಣವೇ।।
ಆಗ ಕಾಗೆಯನ್ನು ಭಯವು ಪ್ರವೇಶಿಸಿತು. ಶ್ರಮಾನ್ವಿತ ಕಾಗೆಯು ವಿಚೇತಸನಾಗಿ ಇಳಿಯಲು ಆ ಜಲಾರ್ಣವದಲ್ಲಿ ಯಾವ ದ್ವೀಪ-ಮರಗಳನ್ನೂ ಕಾಣದೇ ವಿಶ್ರಾಂತಿಗೆ ಎಲ್ಲಿ ಇಳಿಯಲಿ ಎಂದು ಯೋಚಿಸತೊಡಗಿತು.
08028041a ಅವಿಷಹ್ಯಃ ಸಮುದ್ರೋ ಹಿ ಬಹುಸತ್ತ್ವಗಣಾಲಯಃ।
08028041c ಮಹಾಭೂತಶತೋದ್ಭಾಸೀ ನಭಸೋಽಪಿ ವಿಶಿಷ್ಯತೇ।।
“ಬಹುಸತ್ತ್ವಗಣಾಲಯವಾಗಿರುವ ಈ ಸಮುದ್ರವನ್ನು ದಾಟಲು ಅಸಾಧ್ಯ. ನೂರಾರು ಮಹಾಪ್ರಾಣಿಗಳು ಈ ನೀರಿನಲ್ಲಿವೆ ಮತ್ತು ಇದು ಆಕಾಶಕ್ಕಿಂತಲೂ ದೊಡ್ಡದಾಗಿ ತೋರುತ್ತಿದೆ!”
08028042a ಗಾಂಭೀರ್ಯಾದ್ಧಿ ಸಮುದ್ರಸ್ಯ ನ ವಿಶೇಷಃ ಕುಲಾಧಮ।
08028042c ದಿಗಂಬರಾಂಭಸಾಂ ಕರ್ಣ ಸಮುದ್ರಸ್ಥಾ ಹಿ ದುರ್ಜಯಾಃ।
08028042e ವಿದೂರಪಾತಾತ್ತೋಯಸ್ಯ ಕಿಂ ಪುನಃ ಕರ್ಣ ವಾಯಸಃ।।
ಕುಲಾಧಮ ಕರ್ಣ! ದಿಕ್ಕುಗಳಲ್ಲೆಲ್ಲಾ ನೀರನ್ನೇ ತುಂಬಿಸಿಕೊಂಡಿರುವ ಸಮುದ್ರದ ವಿಶೇಷ ಗಾಂಬೀರ್ಯವನ್ನು ಸಮುದ್ರದಲ್ಲಿರುವವರಿಗೇ ತಿಳಿದುಕೊಳ್ಳಲು ಅಸಾಧ್ಯ! ಕರ್ಣ! ಸ್ವಲ್ಪವೇ ದೂರ ಹಾರಿರುವ ಕಾಗೆಗೆ ತಾನೇ ಹೇಗೆ ಅದು ತಿಳಿಯಬೇಕು?
08028043a ಅಥ ಹಂಸೋಽಭ್ಯತಿಕ್ರಮ್ಯ ಮುಹೂರ್ತಮಿತಿ ಚೇತಿ ಚ।
08028043c ಅವೇಕ್ಷಮಾಣಸ್ತಂ ಕಾಕಂ ನಾಶಕ್ನೋದ್ವ್ಯಪಸರ್ಪಿತುಂ।
08028043e ಅತಿಕ್ರಮ್ಯ ಚ ಚಕ್ರಾಂಗಃ ಕಾಕಂ ತಂ ಸಮುದೈಕ್ಷತ।।
ಮುಹೂರ್ತಕಾಲದಲ್ಲಿಯೇ ಕಾಗೆಯನ್ನು ದಾಟಿ ಹೋಗಿದ್ದ ಚಕ್ರಾಂಗ ಹಂಸವು ಕಾಗೆಯು ಹಿಂದೆ ಬರುತ್ತಿರುವುದನ್ನು ಕಾಣದೇ ಹೋದಾಗ ಹಿಂದಿರುಗಲು ಕಾಗೆಗೆ ಶಕ್ಯವಾಗಲಾರದು ಎಂದು ತಿಳಿದು ಕಾಗೆಯ ನಿರೀಕ್ಷಣೆಯಲ್ಲಿ ಆಕಾಶದಲ್ಲಿಯೇ ಕಾಯತೊಡಗಿತು20.
08028044a ತಂ ತಥಾ ಹೀಯಮಾನಂ ಚ ಹಂಸೋ ದೃಷ್ಟ್ವಾಬ್ರವೀದಿದಂ।
08028044c ಉಜ್ಜಿಹೀರ್ಷುರ್ನಿಮಜ್ಜಂತಂ ಸ್ಮರನ್ಸತ್ಪುರುಷವ್ರತಂ।।
ಕಾಗೆಯು ನಿಃಶಕ್ತನಾಗುತ್ತಿರುವುದನ್ನು ಕಂಡ ಹಂಸವು ಸತ್ಪುರುಷರು ನಡೆದುಕೊಳ್ಳಬೇಕಾದ ರೀತಿಯನ್ನು ಸ್ಮರಿಸಿಕೊಂಡು21 ಮುಳುಗುತ್ತಿದ್ದ ಕಾಗೆಯನ್ನು ಮೇಲೆತ್ತಬೇಕೆಂದು ನಿಶ್ಚಯಿಸಿ ಹೇಳಿತು:
08028045a ಬಹೂನಿ ಪತನಾನಿ ತ್ವಮಾಚಕ್ಷಾಣೋ ಮುಹುರ್ಮುಹುಃ।
08028045c ಪತಸ್ಯವ್ಯಾಹರಂಶ್ಚೇದಂ ನ ನೋ ಗುಹ್ಯಂ ಪ್ರಭಾಷಸೇ।।
“ಪದೇ ಪದೇ ನೀನು ಅನೇಕ ಪತನಕ್ರಮಗಳ ಬಗ್ಗೆ ಮಾತನಾಡುತ್ತಿದ್ದೆ. ಆದರೆ ಈ ರೀತಿಯ ಪತನಕ್ರಮವನ್ನು ಮಾತ್ರ ರಹಸ್ಯವಾಗಿಟ್ಟುಕೊಂಡು ನಮಗೆ ಹೇಳಲೇ ಇಲ್ಲ!
08028046a ಕಿಂ ನಾಮ ಪತನಂ ಕಾಕ ಯತ್ತ್ವಂ ಪತಸಿ ಸಾಂಪ್ರತಂ।
08028046c ಜಲಂ ಸ್ಪೃಶಸಿ ಪಕ್ಷಾಭ್ಯಾಂ ತುಂಡೇನ ಚ ಪುನಃ ಪುನಃ।।
ಕಾಗೆಯೇ! ನೀನು ಈಗ ಕಷ್ಟಪಟ್ಟು ಹಾರುತ್ತಾ ರೆಕ್ಕೆಗಳಿಂದ ಮತ್ತು ಪುನಃ ಪುನಃ ಕೊಕ್ಕೆಯಿಂದ ನೀರನ್ನು ಸ್ಪರ್ಷಿಸುತ್ತಿರುವ ನಿನ್ನ ಈ ಪತನ ಕ್ರಮದ ಹೆಸರೇನು?”
08028047a ಸ ಪಕ್ಷಾಭ್ಯಾಂ ಸ್ಪೃಶನ್ನಾರ್ತಸ್ತುಂಡೇನ ಜಲಮಾರ್ಣವೇ।
08028047c ಕಾಕೋ ದೃಢಂ ಪರಿಶ್ರಾಂತಃ ಸಹಸಾ ನಿಪಪಾತ ಹ।।
ಕಾಗೆಯು ರೆಕ್ಕೆಗಳೆರಡರಿಂದ ಮತ್ತು ಕೊಕ್ಕಿನಿಂದ ಸಮುದ್ರದ ನೀರನ್ನು ಮುಟ್ಟುತ್ತಿತ್ತು. ತುಂಬಾ ಬಳಲಿದ್ದ ಕಾಗೆಯು ಒಮ್ಮೆಲೇ ನೀರಿನೊಳಗೆ ಬಿದ್ದಿತು ಕೂಡ.
08028048 ಹಂಸ ಉವಾಚ।
08028048a ಶತಮೇಕಂ ಚ ಪಾತಾನಾಂ ಯತ್ಪ್ರಭಾಷಸಿ ವಾಯಸ।
08028048c ನಾನಾವಿಧಾನೀಹ ಪುರಾ ತಚ್ಚಾನೃತಮಿಹಾದ್ಯ ತೇ।।
ಹಂಸವು ಹೇಳಿತು: “ಕಾಗೆಯೇ! ನೂರಾ ಒಂದು ಪತನಕ್ರಮಗಳನ್ನು ತಿಳಿದಿದ್ದೆಯೆಂದು ಕೊಚ್ಚಿಕೊಳ್ಳುತ್ತಿದ್ದೆ! ಹಿಂದೆ ನಾನಾವಿಧದಲ್ಲಿ ಮಾತನಾಡಿದುದು ಅನೃತವಾಯಿತೇ?”
08028049 ಕಾಕ ಉವಾಚ।
08028049a ಉಚ್ಚಿಷ್ಟದರ್ಪಿತೋ ಹಂಸ ಮನ್ಯೇಽತ್ಮಾನಂ ಸುಪರ್ಣವತ್।
08028049c ಅವಮನ್ಯ ಬಹೂಂಶ್ಚಾಹಂ ಕಾಕಾನನ್ಯಾಂಶ್ಚ ಪಕ್ಷಿಣಃ।
08028049e ಪ್ರಾಣೈರ್ಹಂಸ ಪ್ರಪದ್ಯೇ ತ್ವಾಂ ದ್ವೀಪಾಂತಂ ಪ್ರಾಪಯಸ್ವ ಮಾಂ।।
ಕಾಗೆಯು ಹೇಳಿತು: “ಹಂಸ! ಉಚ್ಚಿಷ್ಟವನ್ನು ತಿಂದು ಕೊಬ್ಬಿದ್ದ ನಾನು ನನ್ನನ್ನು ಗರುಡನೆಂದೇ ತಿಳಿದುಕೊಂಡು ಅನೇಕ ಕಾಗೆಗಳನ್ನು ಮತ್ತು ಇತರ ಪಕ್ಷಿಗಳನ್ನು ಅಪಮಾನಿಸಿದ್ದೇನೆ. ಪ್ರಾಣಗಳೊಂದಿಗೆ ನಿನ್ನಲ್ಲಿಗೆ ಶರಣು ಬಂದಿದ್ದೇನೆ. ನನ್ನನ್ನು ದ್ವೀಪದ ತೀರಕ್ಕೆ ತಲುಪಿಸು!
08028050a ಯದ್ಯಹಂ ಸ್ವಸ್ತಿಮಾನ್ ಹಂಸ ಸ್ವದೇಶಂ ಪ್ರಾಪ್ನುಯಾಂ ಪುನಃ।
08028050c ನ ಕಂ ಚಿದವಮನ್ಯೇಯಮಾಪದೋ ಮಾಂ ಸಮುದ್ಧರ।।
ಹಂಸ! ಒಂದುವೇಳೆ ನಾನು ಕ್ಷೇಮವಾಗಿ ಸ್ವದೇಶಕ್ಕೆ ಪುನಃ ತೆರಳಿದರೆ ನಾನು ಇನ್ನು ಮುಂದೆ ಯಾರನ್ನೂ ಅಪಮಾನಿಸುವುದಿಲ್ಲ! ಈ ಆಪತ್ತಿನಿಂದ ನನ್ನನ್ನು ಉದ್ಧರಿಸು!”
08028051a ತಮೇವಂವಾದಿನಂ ದೀನಂ ವಿಲಪಂತಮಚೇತನಂ।
08028051c ಕಾಕ ಕಾಕೇತಿ ವಾಶಂತಂ ನಿಮಜ್ಜಂತಂ ಮಹಾರ್ಣವೇ।।
08028052a ತಥೈತ್ಯ ವಾಯಸಂ ಹಂಸೋ ಜಲಕ್ಲಿನ್ನಂ ಸುದುರ್ದಶಂ।
08028052c ಪದ್ಭ್ಯಾಮುತ್ಕ್ಷಿಪ್ಯ ವೇಪಂತಂ ಪೃಷ್ಠಮಾರೋಪಯಚ್ಚನೈಃ।।
ಹೀಗೆ ಹೇಳಿ ಮಹಾಸಾಗರದಲ್ಲಿ ಮುಳುಗಿಹೋಗುತ್ತಿದ್ದ ದೀನ, ಶಕ್ತಿಯಿಲ್ಲದೇ ಕಾ ಕಾ ಎಂದು ಕೂಗುತ್ತಾ ಕಾಗೆಯು ನೀರಿನಲ್ಲಿ ನರಳುತ್ತಿರುವುದನ್ನು ಸಹಿಸಿಕೊಳ್ಳಲಾಗದೇ ಹಂಸವು ನಡುಗುತ್ತಿದ್ದ ಕಾಗೆಯನ್ನು ಕಾಲುಗಳಿಂದ ಹಿಡಿದು ಮೇಲೆತ್ತಿ ಮೆಲ್ಲನೆ ತನ್ನ ಬೆನ್ನಮೇಲೆ ಹಾಕಿಕೊಂಡಿತು.
08028053a ಆರೋಪ್ಯ ಪೃಷ್ಠಂ ಕಾಕಂ ತಂ ಹಂಸಃ ಕರ್ಣ ವಿಚೇತಸಂ।
08028053c ಆಜಗಾಮ ಪುನರ್ದ್ವೀಪಂ ಸ್ಪರ್ಧಯಾ ಪೇತತುರ್ಯತಃ।।
ಕರ್ಣ! ಬಳಲಿ ಮೂರ್ಛೆಹೋಗಿದ್ದ ಆ ಕಾಗೆಯನ್ನು ಬೆನ್ನಿನಮೇಲಿರಿಸಿಕೊಂಡು ಹಂಸವು ಸ್ಪರ್ಧೆಗಾಗಿ ಎಲ್ಲಿಂದ ಹಾರಿದ್ದರೋ ಆ ದ್ವೀಪಕ್ಕೆ ಪುನಃ ಬಂದಿತು.
08028054a ಸಂಸ್ಥಾಪ್ಯ ತಂ ಚಾಪಿ ಪುನಃ ಸಮಾಶ್ವಾಸ್ಯ ಚ ಖೇಚರಂ।
08028054c ಗತೋ ಯಥೇಪ್ಸಿತಂ ದೇಶಂ ಹಂಸೋ ಮನ ಇವಾಶುಗಃ।।
ಕಾಗೆಯನ್ನು ಅಲ್ಲಿಗೆ ತಂದಿರಿಸಿ ಆರೈಕೆಮಾಡಿ ಪಕ್ಷಿ ಹಂಸವು ಮನೋವೇಗದಲ್ಲಿ ತನಗಿಷ್ಟವಾದ ಪ್ರದೇಶಕ್ಕೆ ಹೊರಟುಹೋಯಿತು.
08028055a ಉಚ್ಚಿಷ್ಟಭೋಜನಾತ್ಕಾಕೋ ಯಥಾ ವೈಶ್ಯಕುಲೇ ತು ಸಃ।
08028055c ಏವಂ ತ್ವಮುಚ್ಚಿಷ್ಟಭೃತೋ ಧಾರ್ತರಾಷ್ಟ್ರೈರ್ನ ಸಂಶಯಃ।
08028055e ಸದೃಶಾಂ ಶ್ರೇಯಸಶ್ಚಾಪಿ ಸರ್ವಾನ್ಕರ್ಣಾತಿಮನ್ಯಸೇ।।
ಕರ್ಣ! ವೈಶ್ಯಕುಲದವರ ಉಚ್ಛಿಷ್ಟಭೋಜನವನ್ನುಂಡ ಆ ಕಾಗೆಯಂತೆ ನೀನೂ ಕೂಡ ಧಾರ್ತರಾಷ್ಟ್ರರ ಎಂಜಲೂಟವನ್ನು ಉಂಡು ನಿನಗೆ ಸಮನಾದವರ ಮತ್ತು ಶ್ರೇಷ್ಠರಾದವರೆಲ್ಲರನ್ನೂ ಅಪಮಾನಗೊಳಿಸುತ್ತಿರುವೆ!
08028056a ದ್ರೋಣದ್ರೌಣಿಕೃಪೈರ್ಗುಪ್ತೋ ಭೀಷ್ಮೇಣಾನ್ಯೈಶ್ಚ ಕೌರವೈಃ।
08028056c ವಿರಾಟನಗರೇ ಪಾರ್ಥಮೇಕಂ ಕಿಂ ನಾವಧೀಸ್ತದಾ।।
ಅಂದು ವಿರಾಟನಗರದಲ್ಲಿ ದ್ರೋಣ-ದ್ರೌಣಿ-ಕೃಪ-ಭೀಷ್ಮ ಮತ್ತು ಅನ್ಯ ಕೌರವರಿಂದ ರಕ್ಷಿತನಾಗಿದ್ದಾಗಲೂ, ಒಂಟಿಗನಾಗಿದ್ದ ಪಾರ್ಥನನ್ನು ನೀನು ಏಕೆ ಸಂಹರಿಸಲಿಲ್ಲ?
08028057a ಯತ್ರ ವ್ಯಸ್ತಾಃ ಸಮಸ್ತಾಶ್ಚ ನಿರ್ಜಿತಾಃ ಸ್ಥ ಕಿರೀಟಿನಾ।
08028057c ಸೃಗಾಲಾ ಇವ ಸಿಂಹೇನ ಕ್ವ ತೇ ವೀರ್ಯಮಭೂತ್ತದಾ।।
ಅಂದು ಕಿರೀಟಿಯು ಸಿಂಹವು ಗುಳ್ಳೇನರಿಯನ್ನು ಭಯಪಡಿಸುವಂತೆ ಏಕಾಂಗಿಯಾಗಿ ನಿಮ್ಮೆಲ್ಲರನ್ನೂ ಪ್ರತ್ಯೇಕವಾಗಿ ಮತ್ತು ಸಾಮೂಹಿಕವಾಗಿ ಚದುರಿಸಿ ಪರಾಜಯಗೊಳಿಸುವಾಗ ನಿನ್ನ ವೀರ್ಯವು ಎಲ್ಲಿಗೆ ಹೋಗಿತ್ತು?
08028058a ಭ್ರಾತರಂ ಚ ಹತಂ ದೃಷ್ಟ್ವಾ ನಿರ್ಜಿತಃ ಸವ್ಯಸಾಚಿನಾ।
08028058c ಪಶ್ಯತಾಂ ಕುರುವೀರಾಣಾಂ ಪ್ರಥಮಂ ತ್ವಂ ಪಲಾಯಥಾಃ।।
ವಿಜಯಿ ಸವ್ಯಸಾಚಿಯು ನಿನ್ನ ಸಹೋದರನನ್ನು ಸಂಹರಿಸಿದುದನ್ನು ನೋಡಿಯೂ ಕೂಡ ಕುರುವೀರರು ನೋಡುತ್ತಿದ್ದಂತೆಯೇ ಮೊದಲು ಪಲಾಯನಮಾಡಿದವನು ನೀನೇ ಅಲ್ಲವೇ?
08028059a ತಥಾ ದ್ವೈತವನೇ ಕರ್ಣ ಗಂದರ್ವೈಃ ಸಮಭಿದ್ರುತಃ।
08028059c ಕುರೂನ್ಸಮಗ್ರಾನುತ್ಸೃಜ್ಯ ಪ್ರಥಮಂ ತ್ವಂ ಪಲಾಯಥಾಃ।।
ಕರ್ಣ! ಹಾಗೆಯೇ ದ್ವೈತವನದಲ್ಲಿ ಗಂಧರ್ವರು ಆಕ್ರಮಿಸಿದಾಗ ಎಲ್ಲ ಕುರುಗಳನ್ನೂ ಬಿಟ್ಟು ಮೊದಲು ಪಲಾಯನಮಾಡಿದವನು ನೀನೇ ಅಲ್ಲವೇ?
08028060a ಹತ್ವಾ ಜಿತ್ವಾ ಚ ಗಂದರ್ವಾಂಶ್ಚಿತ್ರಸೇನಮುಖಾನ್ರಣೇ।
08028060c ಕರ್ಣ ದುರ್ಯೋಧನಂ ಪಾರ್ಥಃ ಸಭಾರ್ಯಂ ಸಮಮೋಚಯತ್।।
ಕರ್ಣ! ರಣದಲ್ಲಿ ಚಿತ್ರಸೇನನೇ ಮುಖ್ಯನಾಗಿದ್ದ ಗಂಧರ್ವಸೇನೆಯನ್ನು ಸಂಹರಿಸಿ ಗೆದ್ದು ಪಾರ್ಥನು ಪತ್ನಿಯೊಡನೆ ದುರ್ಯೋಧನನನ್ನು ಬಿಡುಗಡೆಗೊಳಿಸಿದ್ದನು.
08028061a ಪುನಃ ಪ್ರಭಾವಃ ಪಾರ್ಥಸ್ಯ ಪುರಾಣಃ ಕೇಶವಸ್ಯ ಚ।
08028061c ಕಥಿತಃ ಕರ್ಣ ರಾಮೇಣ ಸಭಾಯಾಂ ರಾಜಸಂಸದಿ।।
ಕರ್ಣ! ಪುರಾಣಪುರುಷರಾದ ಪಾರ್ಥ-ಕೇಶವರ ಪ್ರಭಾವವನ್ನು ರಾಜಸಂಸದಿಯಲ್ಲಿ ಸಭೆಯಲ್ಲಿ ಪರಶುರಾಮನೇ ಪುನಃ ವರ್ಣಿಸಿದ್ದನು.
08028062a ಸತತಂ ಚ ತದಶ್ರೌಷೀರ್ವಚನಂ ದ್ರೋಣಭೀಷ್ಮಯೋಃ।
08028062c ಅವಧ್ಯೌ ವದತೋಃ ಕೃಷ್ಣೌ ಸನ್ನಿಧೌ ವೈ ಮಹೀಕ್ಷಿತಾಂ।।
ಮಹೀಕ್ಷಿತರ ಸನ್ನಿಧಿಯಲ್ಲಿ ದ್ರೋಣ-ಭೀಷ್ಮರೂ ಕೂಡ ಕೃಷ್ಣಾರ್ಜುನರು ಅವಧ್ಯರು ಎಂದು ಸತತವೂ ಹೇಳುತ್ತಿದ್ದುದನ್ನು ನೀನೂ ಕೇಳಿರುವೆ.
08028063a ಕಿಯಂತಂ ತತ್ರ ವಕ್ಷ್ಯಾಮಿ ಯೇನ ಯೇನ ಧನಂಜಯಃ।
08028063c ತ್ವತ್ತೋಽತಿರಿಕ್ತಃ ಸರ್ವೇಭ್ಯೋ ಭೂತೇಭ್ಯೋ ಬ್ರಾಹ್ಮಣೋ ಯಥಾ।।
ಏನೇನನ್ನು ಮಾಡುವುದರಲ್ಲಿ ಧನಂಜಯನು ನಿನಗಿಂತಲೂ ಅತಿರಿಕ್ತ ಎನ್ನುವುದನ್ನು ನಾನು ನಿನಗೆ ಹೇಳುತ್ತಿದ್ದೇನೆ. ಸರ್ವಪ್ರಾಣಿಗಳಲ್ಲಿಯೂ ಬ್ರಾಹ್ಮಣನು ಹೇಗೆ ಶ್ರೇಷ್ಠನೋ ಹಾಗೆ ಅರ್ಜುನನು ನಿನಗಿಂತಲೂ ಅಧಿಕನು.
08028064a ಇದಾನೀಮೇವ ದ್ರಷ್ಟಾಸಿ ಪ್ರಧನೇ ಸ್ಯಂದನೇ ಸ್ಥಿತೌ।
08028064c ಪುತ್ರಂ ಚ ವಸುದೇವಸ್ಯ ಪಾಂಡವಂ ಚ ಧನಂಜಯಂ।।
ಈಗಲೇ ನೀನು ಪ್ರಧಾನ ರಥದಲ್ಲಿ ಕುಳಿತಿರುವ ವಸುದೇವನ ಪುತ್ರ ಮತ್ತು ಪಾಂಡವ ಧನಂಜಯರನ್ನು ನೋಡುವಿಯಂತೆ!
08028065a ದೇವಾಸುರಮನುಷ್ಯೇಷು ಪ್ರಖ್ಯಾತೌ ಯೌ ನರರ್ಷಭೌ।
08028065c ಪ್ರಕಾಶೇನಾಭಿವಿಖ್ಯಾತೌ ತ್ವಂ ತು ಖದ್ಯೋತವನ್ನೃಷು।।
ದೇವಾಸುರ ಮನುಷ್ಯರಲ್ಲಿ ಪ್ರಖ್ಯಾತರಾದ ಈ ನರರ್ಷಭರಿಬ್ಬರೂ ಪ್ರಕಾಶದಲ್ಲಿ ಸೂರ್ಯಚಂದ್ರರಿಗೆ ಸಮಾನರಾದವರೆಂದು ವಿಖ್ಯಾತರಾಗಿದ್ದಾರೆ. ಅವರನ್ನು ಅಪಮಾನಗೊಳಿಸಬೇಡ.
08028066a ಏವಂ ವಿದ್ವಾನ್ಮಾವಮಂಸ್ಥಾಃ ಸೂತಪುತ್ರಾಚ್ಯುತಾರ್ಜುನೌ।
08028066c ನೃಸಿಂಹೌ ತೌ ನರಶ್ವಾ ತ್ವಂ ಜೋಷಮಾಸ್ಸ್ವ ವಿಕತ್ಥನ।।
ಸೂತಪುತ್ರ! ಅಚ್ಯುತ-ಅರ್ಜುನರು ಈ ರೀತಿ ನರಸಿಂಹರೆಂದು ತಿಳಿದು ಅವರನ್ನು ಮಾತುಗಳಿಂದ ಅವಮಾನಿಸಬೇಡ. ಕೊಚ್ಚಿಕೊಳ್ಳುವುದನ್ನು ನಿಲ್ಲಿಸಿ ಸುಮ್ಮನಾಗು!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಕರ್ಣಶಲ್ಯಸಂವಾದೇ ಹಂಸಕಾಕೀಯೋಪಾಖ್ಯಾನೇ ಅಷ್ಠವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಕರ್ಣಶಲ್ಯಸಂವಾದೇ ಹಂಸಕಾಕೀಯೋಪಾಖ್ಯಾನ ಎನ್ನುವ ಇಪ್ಪತ್ತೆಂಟನೇ ಅಧ್ಯಾಯವು.