ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 25
ಸಾರ
“ಹಿತವನ್ನು ಬಯಸಿ ನಾನು ಕರ್ಣನಿಗೆ ಹೇಳುವ ಪ್ರಿಯ ಮತ್ತು ಅಪ್ರಿಯ ಮಾತುಗಳೆಲ್ಲವನ್ನೂ ನೀನು, ಕರ್ಣ ಮತ್ತು ಎಲ್ಲರೂ ಕ್ಷಮಿಸಬೇಕು!” ಎಂದು ಹೇಳಿ ಶಲ್ಯನು ಕರ್ಣನ ಸಾರಥಿಯಾಗಲು ಒಪ್ಪಿಕೊಂಡಿದುದು (1-6). ಕರ್ಣನಲ್ಲಿ ಶಲ್ಯನು ತನ್ನ ಕುಶಲತೆಯ ಬಗ್ಗೆ ಹೇಳಿಕೊಳ್ಳುವುದು (7-11).
08025001 ದುರ್ಯೋಧನ ಉವಾಚ।
08025001a ಏವಂ ಸ ಭಗವಾನ್ದೇವಃ ಸರ್ವಲೋಕಪಿತಾಮಹಃ।
08025001c ಸಾರಥ್ಯಮಕರೋತ್ತತ್ರ ಯತ್ರ ರುದ್ರೋಽಭವದ್ರಥೀ।।
ದುರ್ಯೋಧನನು ಹೇಳಿದನು: “ಹೀಗೆ ರುದ್ರನು ರಥಿಯಾಗಿರುವಾಗ ಸರ್ವಲೋಕಪಿತಾಮಹ ದೇವ ಭಗವಾನ್ ಬ್ರಹ್ಮನು ಸಾರಥ್ಯವನ್ನು ಮಾಡಿದನು.
08025002a ರಥಿನಾಭ್ಯಧಿಕೋ ವೀರಃ ಕರ್ತವ್ಯೋ ರಥಸಾರಥಿಃ।
08025002c ತಸ್ಮಾತ್ತ್ವಂ ಪುರುಷವ್ಯಾಘ್ರ ನಿಯಚ್ಚ ತುರಗಾನ್ಯುಧಿ।।
ರಥಿಗಿಂತಲೂ ಅಧಿಕ ವೀರನು ರಥಸಾರಥಿಯಾಗುವುದು ಕರ್ತವ್ಯ. ಆದುದರಿಂದ ಪುರುಷವ್ಯಾಘ್ರ! ನೀನು ಯುದ್ಧದಲ್ಲಿ ತುರಗಗಳನ್ನು ನಿಯಂತ್ರಿಸು!””
08025003 ಸಂಜಯ ಉವಾಚ।
08025003a ತತಃ ಶಲ್ಯಃ ಪರಿಷ್ವಜ್ಯ ಸುತಂ ತೇ ವಾಕ್ಯಮಬ್ರವೀತ್।
08025003c ದುರ್ಯೋಧನಮಮಿತ್ರಘ್ನಃ ಪ್ರೀತೋ ಮದ್ರಾಧಿಪಸ್ತದಾ।।
ಸಂಜಯನು ಹೇಳಿದನು: “ಆಗ ಅಮಿತ್ರಘ್ನ ಮದ್ರಾಧಿಪ ಶಲ್ಯನು ಪ್ರೀತನಾಗಿ ನಿನ್ನ ಮಗ ದುರ್ಯೋಧನನನ್ನು ಬಿಗಿದಪ್ಪಿ ಹೀಗೆ ಹೇಳಿದನು:
08025004a ಏವಂ ಚೇನ್ಮನ್ಯಸೇ ರಾಜನ್ಗಾಂಧಾರೇ ಪ್ರಿಯದರ್ಶನ।
08025004c ತಸ್ಮಾತ್ತೇ ಯತ್ಪ್ರಿಯಂ ಕಿಂ ಚಿತ್ತತ್ಸರ್ವಂ ಕರವಾಣ್ಯಹಂ।।
“ಪ್ರಿಯದರ್ಶನ! ಗಾಂಧಾರೇ! ರಾಜನ್! ನೀನು ಏನನ್ನು ಬಯಸುತ್ತೀಯೋ ಮತ್ತು ನಿನಗೆ ಪ್ರಿಯವಾದುದು ಏನಿದೆಯೋ ಅವೆಲ್ಲವನ್ನೂ ನಾನು ಮಾಡುತ್ತೇನೆ.
08025005a ಯತ್ರಾಸ್ಮಿ ಭರತಶ್ರೇಷ್ಠ ಯೋಗ್ಯಃ ಕರ್ಮಣಿ ಕರ್ಹಿ ಚಿತ್।
08025005c ತತ್ರ ಸರ್ವಾತ್ಮನಾ ಯುಕ್ತೋ ವಕ್ಷ್ಯೇ ಕಾರ್ಯಧುರಂ ತವ।।
ಭರತಶ್ರೇಷ್ಠ! ನಾನು ಎಲ್ಲಿ ಯಾವ ಕಾರ್ಯಕ್ಕೆ ಯೋಗ್ಯನಾಗಿರುವೆನೋ ಆ ಕಾರ್ಯವನ್ನೇ ನೀನು ನನಗೆ ಯೋಜಿಸಿದ ನಂತರ ಆದನ್ನು ನಾನು ಸಂಪೂರ್ಣಮನಸ್ಸಿನಿಂದ ಮಾಡುತ್ತೇನೆಂದು ಮಾತುಕೊಡುತ್ತೇನೆ.
08025006a ಯತ್ತು ಕರ್ಣಮಹಂ ಬ್ರೂಯಾಂ ಹಿತಕಾಮಃ ಪ್ರಿಯಾಪ್ರಿಯಂ।
08025006c ಮಮ ತತ್ಕ್ಷಮತಾಂ ಸರ್ವಂ ಭವಾನ್ಕರ್ಣಶ್ಚ ಸರ್ವಶಃ।।
ಹಿತವನ್ನು ಬಯಸಿ ನಾನು ಕರ್ಣನಿಗೆ ಹೇಳುವ ಪ್ರಿಯ ಮತ್ತು ಅಪ್ರಿಯ ಮಾತುಗಳನ್ನು ಎಲ್ಲವನ್ನೂ ನೀನು, ಕರ್ಣ ಮತ್ತು ಎಲ್ಲರೂ ಕ್ಷಮಿಸಬೇಕು!”
08025007 ಕರ್ಣ ಉವಾಚ।
08025007a ಈಶಾನಸ್ಯ ಯಥಾ ಬ್ರಹ್ಮಾ ಯಥಾ ಪಾರ್ಥಸ್ಯ ಕೇಶವಃ।
08025007c ತಥಾ ನಿತ್ಯಂ ಹಿತೇ ಯುಕ್ತೋ ಮದ್ರರಾಜ ಭಜಸ್ವ ನಃ।।
ಕರ್ಣನು ಹೇಳಿದನು: “ಮದ್ರರಾಜ! ಈಶಾನನಿಗೆ ಬ್ರಹ್ಮನು ಹೇಗೋ ಮತ್ತು ಪಾರ್ಥನಿಗೆ ಕೇಶವನು ಹೇಗೋ ಹಾಗೆ ನೀನು ನಿತ್ಯವೂ ನನ್ನ ಹಿತದಲ್ಲಿ ಯುಕ್ತನಾಗಿ ಸಂತೋಷಗೊಳಿಸು!”
08025008 ಶಲ್ಯ ಉವಾಚ।
08025008a ಆತ್ಮನಿಂದಾತ್ಮಪೂಜಾ ಚ ಪರನಿಂದಾ ಪರಸ್ತವಃ।
08025008c ಅನಾಚರಿತಮಾರ್ಯಾಣಾಂ ವೃತ್ತಮೇತಚ್ಚತುರ್ವಿಧಂ।।
ಶಲ್ಯನು ಹೇಳಿದನು: “ತನ್ನನ್ನು ತಾನೇ ನಿಂದಿಸಿಕೊಳ್ಳುವುದು, ತನ್ನನ್ನು ತಾನೇ ಹೊಗಳಿಕೊಳ್ಳುವುದು, ಇತರರನ್ನು ನಿಂದಿಸುವುದು ಮತ್ತು ಇತರರನ್ನು ಹೊಗಳುವುದು ಇವು ನಾಲ್ಕು ಆರ್ಯರು ಆಚರಿಸಬಾರದಂತಹ ವ್ಯವಹಾರಗಳು.
08025009a ಯತ್ತು ವಿದ್ವನ್ಪ್ರವಕ್ಷ್ಯಾಮಿ ಪ್ರತ್ಯಯಾರ್ಥಮಹಂ ತವ।
08025009c ಆತ್ಮನಃ ಸ್ತವಸಂಯುಕ್ತಂ ತನ್ನಿಬೋಧ ಯಥಾತಥಂ।।
ಇದನ್ನು ತಿಳಿದಿದ್ದರೂ, ನಿನಗೆ ವಿಶ್ವಾಸವುಂಟಾಗಲೆಂಬ ಕಾರಣದಿಂದ, ಸ್ವಪ್ರಶಂಸಾರೂಪವಾದ ಮಾತುಗಳನ್ನು ಹೇಳುತ್ತೇನೆ. ಕೇಳು.
08025010a ಅಹಂ ಶಕ್ರಸ್ಯ ಸಾರಥ್ಯೇ ಯೋಗ್ಯೋ ಮಾತಲಿವತ್ಪ್ರಭೋ।
08025010c ಅಪ್ರಮಾದಪ್ರಯೋಗಾಚ್ಚ ಜ್ಞಾನವಿದ್ಯಾಚಿಕಿತ್ಸಿತೈಃ।।
ಪ್ರಭೋ! ಪ್ರಮಾದಗೊಳ್ಳದಿರುವುದು, ಅಶ್ವಸಂಚಾಲಜ್ಞಾನ, ವಿದ್ಯೆ ಮತ್ತು ಚಿಕಿತ್ಸೆ ಇವುಗಳಲ್ಲಿ ಶಕ್ರನ ಸಾರಥಿ ಮಾತಲಿಯಷ್ಟೇ ನಾನು ಯೋಗ್ಯ ಸಾರಥಿಯು.
08025011a ತತಃ ಪಾರ್ಥೇನ ಸಂಗ್ರಾಮೇ ಯುಧ್ಯಮಾನಸ್ಯ ತೇಽನಘ।
08025011c ವಾಹಯಿಷ್ಯಾಮಿ ತುರಗಾನ್ವಿಜ್ವರೋ ಭವ ಸೂತಜ।।
ಅನಘ! ಸೂತಜ! ಸಂಗ್ರಾಮದಲ್ಲಿ ಪಾರ್ಥನೊಡನೆ ನೀನು ಯುದ್ಧಮಾಡುವಾಗ ನಿನ್ನ ಕುದುರೆಗಳನ್ನು ನಾನು ನಡೆಸುತ್ತೇನೆ. ನಿನ್ನ ಆತಂಕವನ್ನು ದೂರಮಾಡು!”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಶಲ್ಯಸಾರಥ್ಯಸ್ವೀಕಾರೇ ಪಂಚವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಶಲ್ಯಸಾರಥ್ಯಸ್ವೀಕಾರ ಎನ್ನುವ ಇಪ್ಪತ್ತೈದನೇ ಅಧ್ಯಾಯವು.