ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 24
ಸಾರ
ದುರ್ಯೋಧನನು ಶಲ್ಯನಿಗೆ ತ್ರಿಪುರವಧೋಪಾಖ್ಯಾನವನ್ನು ಹೇಳಲು ಪ್ರಾರಂಭಿಸಿದುದು (1-3). ದೈತ್ಯ ತಾರಕನ ಮೂರು ಮಕ್ಕಳು – ತಾರಾಕ್ಷ, ಕಮಲಾಕ್ಷ ಮತ್ತು ವಿದ್ಯುನ್ಮಾಲೀ – ಇವರ ತಪಸ್ಸು, ಬ್ರಹ್ಮನಿಂದ ವರ (4-12). ಮಯನಿಂದ ತ್ರಿಪುರ ನಿರ್ಮಾಣ ಮತ್ತು ದೈತ್ಯರ ರಾಜ್ಯಭಾರ (13-22). ತಾರಕಾಕ್ಷನ ಮಗ ಹರಿಯು ಬ್ರಹ್ಮನಿಂದ ವರವನ್ನು ಪಡೆದು ಮೃತರನ್ನು ಜೀವಿಸಬಲ್ಲ ಒಂದು ಬಾವಿಯನ್ನು ತ್ರಿಪುರದಲ್ಲಿ ನಿರ್ಮಿಸಿದುದು (23-27). ದೈತ್ಯರು ಲೋಭ-ಮೋಹಗಳಿಗೊಳಗಾಗಿ ಎಲ್ಲೆಡೆ ತೊಂದರೆಯನ್ನುಂಟುಮಾಡಲು ದೇವತೆಗಳು ಬ್ರಹ್ಮನಲ್ಲಿ ಮೊರೆಯಿಟ್ಟಿದುದು (28-32). ಬ್ರಹ್ಮನ ಸೂಚನೆಯಂತೆ ದೇವತೆಗಳು ಶಿವನ ಶರಣು ಹೋಗಿ ಅವನನ್ನು ಸ್ತುತಿಸಿದುದು (33-51). “ಸುರಶತ್ರುಗಳಾದ ಆ ದೈತ್ಯರನ್ನು ನಾನೊಬ್ಬನೇ ಸಂಹರಿಸಲು ಶಕ್ಯನಿಲ್ಲ….ನನ್ನ ತೇಜೋಬಲದ ಅರ್ಧದಿಂದ ಅವರನ್ನು ಸಂಹರಿಸಿ!” ಎಂದು ಶಿವನು ಹೇಳಿದುದು (52-60). “ನಿನ್ನ ಅರ್ಧತೇಜಸ್ಸನ್ನೂ ಧರಿಸಲು ನಾವು ಶಕ್ಯರಿಲ್ಲ, ನೀನೇ ನಮ್ಮೆಲ್ಲರ ಬಲಗಳಿಂದ ಶತ್ರುಗಳನ್ನು ಸಂಹರಿಸು!” ಎಂದು ದೇವತೆಗಳು ಕೇಳಿಕೊಳ್ಳಲು ಶಿವನು ಒಪ್ಪಿ, ಬಲದಲ್ಲಿ ವೃದ್ಧಿಯಾಗಿ ಮಹಾದೇವನೆನಿಸಿಕೊಂಡಿದುದು (61-63). ದೇವತೆಗಳು ಶಿವನಿಗೆ ಯುದ್ಧರಥ ಮತ್ತು ಆಯುಧಗಳನ್ನು ಕಲ್ಪಿಸಿದುದು (64-92). “ನಿಮ್ಮಲ್ಲಿ ನನಗಿಂಥಲೂ ಶ್ರೇಷ್ಠನಾದವನನ್ನು ಸಾರಥಿಯನ್ನಾಗಿ ಮಾಡಿ!” ಎಂದು ಶಿವನು ದೇವತೆಗಳಿಗೆ ಹೇಳಲು, ಅವರು ಬ್ರಹ್ಮನನ್ನು ಸಾರಥಿಯಾಗಲು ಒಪ್ಪಿಸಿದುದು (93-108). ಮಹೇಶ್ವರನು ಕ್ರೋಧದಿಂದ ತ್ರಿಪುರವನ್ನು ಸುಟ್ಟುಹಾಕಿದುದು (109-123). ಬ್ರಹ್ಮನು ಶಿವನಿಗೆ ಹೇಗೋ ಹಾಗೆ ನೀನೂ ಕೂಡ ಕರ್ಣನಿಗೆ ಸಾರಥಿಯಾಗು ಎಂದು ದುರ್ಯೋಧನನು ಶಲ್ಯನಲ್ಲಿ ಕೇಳಿಕೊಳ್ಳುವುದು (124-128). ಜಮದಗ್ನಿಯ ಮಗ ರಾಮನು ಆಯುಧಗಳಿಗಾಗಿ ಶಿವನ ಕುರತು ತಪಸ್ಸನ್ನಾಚರಿಸುವುದು; ಶಿವನು ನೀನು ಪವಿತ್ರನಾದ ನಂತರ ಆಯುಧಗಳನ್ನು ಪಡೆಯುವೆಯೆಂದ ಹೇಳಿದುದು (129-141). ದೈತ್ಯರ ಬಾಧೆಯನ್ನು ತಾಳದೆ ದೇವತೆಗಳು ಪರಮೇಶ್ವರನನ್ನು ಮೊರೆಹೊಗಲು, ಅವನು ದೈತ್ಯರನ್ನು ಸೋಲಿಸಲು ರಾಮನಿಗೆ ಹೇಳುವುದು (142-146). “ಅಸ್ತ್ರವನ್ನೇ ತಿಳಿಯದಿರುವ ನಾನು ದೈತ್ಯರೊಡನೆ ಹೇಗೆ ಹೋರಾಡಲಿ?” ಎಂದು ರಾಮನು ಕೇಳಲು ಶಿವನು “ನನ್ನ ಅನುಧ್ಯಾನದಿಂದ ನೀನು ದಾನವರನ್ನು ಗೆಲ್ಲುತ್ತೀಯೆ!” ಎಂದು ಹರಸಿ ಕಳುಹಿಸಿದುದು (147-149). ರಾಮನು ತನ್ನ ಸ್ಪರ್ಷಸಮಾನ ಪ್ರಹಾರಗಳಿಂದಲೇ ದಾನವರನ್ನು ಸಂಹರಿಸಿದುದು (150-152). ಶಿವನು ಆಗ “ಶಸ್ತ್ರಗಳ ನಿಪಾತಗಳಿಂದ ನಿನ್ನ ಶರೀರದಲ್ಲಿ ಆಗಿರುವ ಗಾಯಗಳಿಂದ ಮನುಷ್ಯಸಂಬಧವಾದ ನಿನ್ನ ಕರ್ಮಗಳೆಲ್ಲವೂ ಕಳೆದುಹೋದವು! ಪವಿತ್ರನಾಗಿದ್ದೀಯೆ!” ಎಂದು ಹೇಳಿ ರಾಮನಿಗೆ ದಿವ್ಯಾಸ್ತ್ರಗಳನ್ನಿತ್ತುದು (153-158). ಕರ್ಣನಲ್ಲಿ ಸ್ವಲ್ಪವಾದರೂ ದೋಷಗಳಿದ್ದಿದ್ದರೆ ಪರಶರಾಮನು ಅವನಿಗೆ ಅಸ್ತ್ರವಿದ್ಯೆಯನ್ನು ನೀಡುತ್ತಿರಲಿಲ್ಲ ಎಂದು ದುರ್ಯೋಧನನು ಶಲ್ಯನಿಗೆ ಹೇಳಿದುದು (159-161).
08024001 ದುರ್ಯೋಧನ ಉವಾಚ।
08024001a ಭೂಯ ಏವ ತು ಮದ್ರೇಶ ಯತ್ತೇ ವಕ್ಷ್ಯಾಮಿ ತಚ್ಚೃಣು।
08024001c ಯಥಾ ಪುರಾ ವೃತ್ತಮಿದಂ ಯುದ್ಧೇ ದೇವಾಸುರೇ ವಿಭೋ।।
ದುರ್ಯೋಧನನು ಹೇಳಿದನು: “ಮದ್ರೇಶ! ವಿಭೋ! ಹಿಂದೆ ದೇವಾಸುರ ಯುದ್ಧದಲ್ಲಿ ನಡೆದುದನ್ನು ಯಥಾವತ್ತಾಗಿ ಹೇಳುತ್ತೇನೆ ಕೇಳು!
08024002a ಯದುಕ್ತವಾನ್ಪಿತುರ್ಮಹ್ಯಂ ಮಾರ್ಕಂಡೇಯೋ ಮಹಾನೃಷಿಃ।
08024002c ತದಶೇಷೇಣ ಬ್ರುವತೋ ಮಮ ರಾಜರ್ಷಿಸತ್ತಮ।
08024002e ತ್ವಂ ನಿಬೋಧ ನ ಚಾಪ್ಯತ್ರ ಕರ್ತವ್ಯಾ ತೇ ವಿಚಾರಣಾ।।
ಮಹಾನ್ ಋಷಿ ಮಾರ್ಕಂಡೇಯನು ನನ್ನ ತಂದೆಗೆ ಹೇಗೆ ಹೇಳಿದ್ದನೋ ಅದನ್ನು ಸಂಪೂರ್ಣವಾಗಿ ಹಾಗೆಯೇ ಹೇಳುತ್ತೇನೆ. ರಾಜರ್ಷಿಸತ್ತಮ! ಇದನ್ನು ಹಾಗೆಯೇ ಕೇಳು. ವಿಚಾರಮಾಡಬೇಡ!
08024003a ದೇವಾನಾಮಸುರಾಣಾಂ ಚ ಮಹಾನಾಸೀತ್ಸಮಾಗಮಃ।
08024003c ಬಭೂವ ಪ್ರಥಮೋ ರಾಜನ್ಸಂಗ್ರಾಮಸ್ತಾರಕಾಮಯಃ।
08024003e ನಿರ್ಜಿತಾಶ್ಚ ತದಾ ದೈತ್ಯಾ ದೈವತೈರಿತಿ ನಃ ಶ್ರುತಂ।।
ರಾಜನ್! ದೇವತೆಗಳ ಅಸುರರ ಮಹಾ ಸಮಾಗಮವಾಗಿತ್ತು. ಪ್ರಥಮವಾಗಿ ತಾರಕಾಮಯ ಸಂಗ್ರಾಮವು ನಡೆಯಿತು. ದೇವತೆಗಳಿಂದ ದೈತ್ಯರು ಸೋತರೆಂದು ನಾವು ಕೇಳಿದ್ದೇವೆ.
08024004a ನಿರ್ಜಿತೇಷು ಚ ದೈತ್ಯೇಷು ತಾರಕಸ್ಯ ಸುತಾಸ್ತ್ರಯಃ।
08024004c ತಾರಾಕ್ಷಃ ಕಮಲಾಕ್ಷಶ್ಚ ವಿದ್ಯುನ್ಮಾಲೀ ಚ ಪಾರ್ಥಿವ।।
08024005a ತಪ ಉಗ್ರಂ ಸಮಾಸ್ಥಾಯ ನಿಯಮೇ ಪರಮೇ ಸ್ಥಿತಾಃ।
08024005c ತಪಸಾ ಕರ್ಶಯಾಮಾಸುರ್ದೇಹಾನ್ಸ್ವಾಂ ಶತ್ರುತಾಪನ।।
ಪಾರ್ಥಿವ! ಶತ್ರುತಾಪನ! ದೈತ್ಯರು ಸೋಲಲು ತಾರಕನ ಮೂವರು ಮಕ್ಕಳು – ತಾರಾಕ್ಷ, ಕಮಲಾಕ್ಷ ಮತ್ತು ವಿದ್ಯುನ್ಮಾಲೀ- ಇವರು ಉಗ್ರ ತಪಸ್ಸನ್ನು ಕೈಗೊಂಡು ಪರಮ ನಿಯಮಗಳನ್ನು ಪಾಲಿಸುತ್ತಾ ತಮ್ಮ ದೇಹಗಳನ್ನು ತಪಸ್ಸಿನಿಂದ ಕೃಶಗೊಳಿಸತೊಡಗಿದರು.
08024006a ದಮೇನ ತಪಸಾ ಚೈವ ನಿಯಮೇನ ಚ ಪಾರ್ಥಿವ।
08024006c ತೇಷಾಂ ಪಿತಾಮಹಃ ಪ್ರೀತೋ ವರದಃ ಪ್ರದದೌ ವರಾನ್।।
ಪಾರ್ಥಿವ! ಅವರ ದಮ, ತಪಸ್ಸು, ನಿಯಮಗಳಿಂದ ವರದ ಪಿತಾಮಹನು ಪ್ರೀತನಾಗಿ ಅವರಿಗೆ ವರಗಳನ್ನಿತ್ತನು.
08024007a ಅವಧ್ಯತ್ವಂ ಚ ತೇ ರಾಜನ್ಸರ್ವಭೂತೇಷು ಸರ್ವದಾ।
08024007c ಸಹಿತಾ ವರಯಾಮಾಸುಃ ಸರ್ವಲೋಕಪಿತಾಮಹಂ।।
ರಾಜನ್! ಅವರು ಒಟ್ಟಿಗೇ ಸರ್ವಲೋಕಪಿತಾಮಹನಲ್ಲಿ ಸರ್ವಭೂತಗಳಿಂದ ಸರ್ವದಾ ಅವಧ್ಯತ್ವವನ್ನು ವರವನ್ನಾಗಿ ಕೇಳಿದರು.
08024008a ತಾನಬ್ರವೀತ್ತದಾ ದೇವೋ ಲೋಕಾನಾಂ ಪ್ರಭುರೀಶ್ವರಃ।
08024008c ನಾಸ್ತಿ ಸರ್ವಾಮರತ್ವಂ ಹಿ ನಿವರ್ತಧ್ವಮತೋಽಸುರಾಃ।
08024008e ವರಮನ್ಯಂ ವೃಣೀಧ್ವಂ ವೈ ಯಾದೃಶಂ ಸಂಪ್ರರೋಚತೇ।।
ಅವರಿಗೆ ದೇವ ಲೋಕಗಳ ಪ್ರಭು ಈಶ್ವರನು ಹೇಳಿದನು: “ಅಮರತ್ವವು ಎಲ್ಲರಿಗೂ ಇಲ್ಲ. ಆದುದರಿಂದ ಅಸುರರೇ. ಅದನ್ನು ಹಿಂದೆ ತೆಗೆದುಕೊಳ್ಳಿ. ನಿಮಗೆ ಇಷ್ಟವಾದ, ಇದಕ್ಕೆ ಸಮನಾದ ಬೇರೆ ವರವನ್ನು ಬೇಡಿಕೊಳ್ಳಿ.”
08024009a ತತಸ್ತೇ ಸಹಿತಾ ರಾಜನ್ಸಂಪ್ರಧಾರ್ಯಾಸಕೃದ್ಬಹು।
08024009c ಸರ್ವಲೋಕೇಶ್ವರಂ ವಾಕ್ಯಂ ಪ್ರಣಮ್ಯೈನಮಥಾಬ್ರುವನ್।।
ರಾಜನ್! ಅನಂತರ ಅವರು ಒಟ್ಟಿಗೇ ಬಹಳ ಸಮಾಲೋಚನೆಮಾಡಿ ಸರ್ವಲೋಕೇಶ್ವರನಿಗೆ ಈ ಪ್ರೀತಿಯ ಮಾತುಗಳನ್ನಾಡಿದರು:
08024010a ಅಸ್ಮಾಕಂ ತ್ವಂ ವರಂ ದೇವ ಪ್ರಯಚ್ಚೇಮಂ ಪಿತಾಮಹ।
08024010c ವಯಂ ಪುರಾಣಿ ತ್ರೀಣ್ಯೇವ ಸಮಾಸ್ಥಾಯ ಮಹೀಮಿಮಾಂ।
08024010e ವಿಚರಿಷ್ಯಾಮ ಲೋಕೇಽಸ್ಮಿಂಸ್ತ್ವತ್ಪ್ರಸಾದಪುರಸ್ಕೃತಾಃ।।
“ದೇವ! ಪಿತಾಮಹ! ನಾವು ನಿನ್ನಿಂದ ಈ ವರವನ್ನು ಕೇಳಿಕೊಳ್ಳುತ್ತಿದ್ದೇವೆ. ನಾವು ಮೂರು ಪುರಗಳನ್ನು ನಿರ್ಮಿಸಿ ಅವುಗಳಲ್ಲಿದ್ದುಕೊಂಡು ಈ ಮಹಿ-ಲೋಕಗಳನ್ನು ನಿನ್ನ ಪ್ರಸಾದದಿಂದ ಸುತ್ತುವರೆಯುತ್ತೇವೆ.
08024011a ತತೋ ವರ್ಷಸಹಸ್ರೇ ತು ಸಮೇಷ್ಯಾಮಃ ಪರಸ್ಪರಂ।
08024011c ಏಕೀಭಾವಂ ಗಮಿಷ್ಯಂತಿ ಪುರಾಣ್ಯೇತಾನಿ ಚಾನಘ।।
ಒಂದು ಸಾವಿರ ವರ್ಷಗಳು ಕಳೆದನಂತರ ನಾವು ಪರಸ್ಪರರನ್ನು ಒಟ್ಟಾಗಿ ಸೇರುತ್ತೇವೆ. ಅನಘ! ನಮ್ಮ ತ್ರಿಪುರಗಳೂ ಏಕೀಭಾವವನ್ನು ಹೊಂದುತ್ತವೆ.
08024012a ಸಮಾಗತಾನಿ ಚೈತಾನಿ ಯೋ ಹನ್ಯಾದ್ಭಗವಂಸ್ತದಾ।
08024012c ಏಕೇಷುಣಾ ದೇವವರಃ ಸ ನೋ ಮೃತ್ಯುರ್ಭವಿಷ್ಯತಿ।
08024012e ಏವಮಸ್ತ್ವಿತಿ ತಾನ್ದೇವಃ ಪ್ರತ್ಯುಕ್ತ್ವಾ ಪ್ರಾವಿಶದ್ದಿವಂ।।
ಭಗವನ್! ಅವುಗಳು ಒಂದಾದಾಗ ಒಂದೇ ಬಾಣದಿಂದ ದೇವವರನು ಹೊಡೆದರೆ ಅದೇ ನಮಗೆ ಮೃತ್ಯುವಾಗುತ್ತದೆ.” ಅವರಿಗೆ ಹಾಗೆಯೇ ಆಗಲೆಂದು ಹೇಳಿ ದೇವನು ಸ್ವರ್ಗಕ್ಕೆ ಹೊರಟುಹೋದನು.
08024013a ತೇ ತು ಲಬ್ಧವರಾಃ ಪ್ರೀತಾಃ ಸಂಪ್ರಧಾರ್ಯ ಪರಸ್ಪರಂ।
08024013c ಪುರತ್ರಯವಿಸೃಷ್ಟ್ಯರ್ಥಂ ಮಯಂ ವವ್ರುರ್ಮಹಾಸುರಂ।
08024013e ವಿಶ್ವಕರ್ಮಾಣಮಜರಂ ದೈತ್ಯದಾನವಪೂಜಿತಂ।।
ವರಗಳನ್ನು ಪಡೆದು ಪ್ರೀತರಾದ ಅವರು ಪರಸ್ಪರರಲ್ಲಿ ಸಮಾಲೋಚಿಸಿ ಮೂರು ಪುರಗಳನ್ನು ಸೃಷ್ಟಿಸಲೋಸುಗ ಅಜರ, ದೈತ್ಯದಾನವ ಪೂಜಿತ ವಿಶ್ವಕರ್ಮ ಮಹಾಸುರ ಮಯನನ್ನು ಆಮಂತ್ರಿಸಿದರು.
08024014a ತತೋ ಮಯಃ ಸ್ವತಪಸಾ ಚಕ್ರೇ ಧೀಮಾನ್ಪುರಾಣಿ ಹ।
08024014c ತ್ರೀಣಿ ಕಾಂಚನಂ ಏಕಂ ತು ರೌಪ್ಯಂ ಕಾರ್ಷ್ಣಾಯಸಂ ತಥಾ।।
ಆಗ ಧೀಮಾನ್ ಮಯನು ತನ್ನದೇ ತಪಸ್ಸಿನಿಂದ ಮೂರು ಪುರಗಳನ್ನು – ಒಂದು ಕಾಂಚನ ಪುರ, ಇನ್ನೊಂದು ಬೆಳ್ಳಿಯ ಪುರ ಮತ್ತು ಇನ್ನೊಂದು ಕಬ್ಬಿಣದ ಪುರವನ್ನು ರಚಿಸಿದನು.
08024015a ಕಾಂಚನಂ ದಿವಿ ತತ್ರಾಸೀದಂತರಿಕ್ಷೇ ಚ ರಾಜತಂ।
08024015c ಆಯಸಂ ಚಾಭವದ್ಭೂಮೌ ಚಕ್ರಸ್ಥಂ ಪೃಥಿವೀಪತೇ।।
ಪೃಥಿವೀಪತೇ! ಕಾಂಚನ ಪುರವು ದಿವಿಯಲ್ಲಿ, ಬೆಳ್ಳಿಯದು ಅಂತರಿಕ್ಷದಲ್ಲಿ ಮತ್ತು ಕಬ್ಬಿಣದು ಸುತ್ತುತ್ತಿರುವ ಚಕ್ರದ ಮಧ್ಯದಲ್ಲಿ ಭೂಮಿಯಮೇಲಿದ್ದಿತು.
08024016a ಏಕೈಕಂ ಯೋಜನಶತಂ ವಿಸ್ತಾರಾಯಾಮಸಮ್ಮಿತಂ।
08024016c ಗೃಹಾಟ್ಟಾಟ್ಟಾಲಕಯುತಂ ಬೃಹತ್ಪ್ರಾಕಾರತೋರಣಂ।।
ಒಂದೊಂದು ಪುರಗಳೂ ವಿಸ್ತಾರ ಆಯಾಮಗಳಲ್ಲಿ ನೂರು ನೂರು ಯೋಜನಗಳಷ್ಟಿದ್ದವು. ಹಲವಾರು ಉಪ್ಪರಿಗೆಗಳುಳ್ಳ ಮನೆಗಳಿಂದಲೂ, ಬೃಹದಾಕಾರದ ಪ್ರಾಕಾರಗಳಿಂದಲೂ ತೋರಣಗಳಿಂದವೂ ಕೂಡಿದ್ದವು.
08024017a ಗುಣಪ್ರಸವಸಂಬಾಧಮಸಂಬಾಧಮನಾಮಯಂ।
08024017c ಪ್ರಾಸಾದೈರ್ವಿವಿಧೈಶ್ಚೈವ ದ್ವಾರೈಶ್ಚಾಪ್ಯುಪಶೋಭಿತಂ।।
ವಿವಿದ ಕಟ್ಟಡಗಳಿಂದಲೂ ದ್ವಾರಗಳಿಂದಲೂ ಉಪಶೋಭಿತ ಆ ಪುರಗಳಲ್ಲಿ ವಿಶಾಲ ರಾಜಮಾರ್ಗಗಳಿಂದಾಗಿ ಇಕ್ಕಟ್ಟಾಗಿರಲಿಲ್ಲ.
08024018a ಪುರೇಷು ಚಾಭವನ್ರಾಜನ್ರಾಜಾನೋ ವೈ ಪೃಥಕ್ ಪೃಥಕ್।
08024018c ಕಾಂಚನಂ ತಾರಕಾಕ್ಷಸ್ಯ ಚಿತ್ರಮಾಸೀನ್ಮಹಾತ್ಮನಃ।
08024018e ರಾಜತಂ ಕಮಲಾಕ್ಷಸ್ಯ ವಿದ್ಯುನ್ಮಾಲಿನ ಆಯಸಂ।।
ರಾಜನ್! ಆ ಪುರಗಳಲ್ಲಿ ಬೇರೆ ಬೇರೆ ರಾಜರಿದ್ದರು. ವಿಚಿತ್ರ ಕಾಂಚನಪುರಕ್ಕೆ ಮಹಾತ್ಮ ತಾರಕಾಕ್ಷನು ರಾಜನಾಗಿದ್ದನು, ಬೆಳ್ಳಿಯ ಪುರಕ್ಕೆ ಕಮಲಾಕ್ಷ ಮತ್ತು ಉಕ್ಕಿನ ಪುರಕ್ಕೆ ವಿದ್ಯುನ್ಮಾಲಿಯು ರಾಜರಾಗಿದ್ದರು.
08024019a ತ್ರಯಸ್ತೇ ದೈತ್ಯರಾಜಾನಸ್ತ್ರೀಽಲ್ಲೋಕಾನಾಶು ತೇಜಸಾ।
08024019c ಆಕ್ರಮ್ಯ ತಸ್ಥುರ್ವರ್ಷಾಣಾಂ ಪೂಗಾನ್ನಾಮ ಪ್ರಜಾಪತಿಃ।।
ಆ ಮೂವರು ದೈತ್ಯ ರಾಜರೂ ತಮ್ಮ ಅಸ್ತ್ರತೇಜಸ್ಸಿನಿಂದ ಮೂರು ಲೋಕಗಳನ್ನೂ ಆಕ್ರಮಣಿಸಿ ಅಧಿಕಾರವನ್ನು ಸ್ಥಾಪಿಸಿ ಪ್ರಜಾಪತಿಯೇ ಯಾರೆನ್ನುವಂತೆ ಇದ್ದರು.
08024020a ತೇಷಾಂ ದಾನವಮುಖ್ಯಾನಾಂ ಪ್ರಯುತಾನ್ಯರ್ಬುದಾನಿ ಚ।
08024020c ಕೋಟ್ಯಶ್ಚಾಪ್ರತಿವೀರಾಣಾಂ ಸಮಾಜಗ್ಮುಸ್ತತಸ್ತತಃ।
08024020e ಮಹದೈಶ್ವರ್ಯಮಿಚ್ಚಂತಸ್ತ್ರಿಪುರಂ ದುರ್ಗಮಾಶ್ರಿತಾಃ।।
ಮಹದೈಶ್ವರ್ಯವನ್ನು ಮತ್ತು ಸುರಕ್ಷಿತ ಆಶ್ರಯವನ್ನು ಬಯಸಿದ ಕೋಟಿಗಟ್ಟಲೆ ದಾನವರು ಆ ದಾನವಮುಖ್ಯರ ಬಳಿ ಬಂದು ಸೇರಿಕೊಂಡರು.
08024021a ಸರ್ವೇಷಾಂ ಚ ಪುನಸ್ತೇಷಾಂ ಸರ್ವಯೋಗವಹೋ ಮಯಃ।
08024021c ತಮಾಶ್ರಿತ್ಯ ಹಿ ತೇ ಸರ್ವೇ ಅವರ್ತಂತಾಕುತೋಭಯಾಃ।।
ಅವರೆಲ್ಲರಿಗೂ ಪುನಃ ಮಯನು ಸರ್ವವಸ್ತುಗಳನ್ನೂ ಒದಗಿಸಿಕೊಟ್ಟನು. ಅವನನ್ನು ಆಶ್ರಯಿಸಿ ಸರ್ವರೂ ನಿರ್ಭಯರಾಗಿದ್ದರು.
08024022a ಯೋ ಹಿ ಯಂ ಮನಸಾ ಕಾಮಂ ದಧ್ಯೌ ತ್ರಿಪುರಸಂಶ್ರಯಃ।
08024022c ತಸ್ಮೈ ಕಾಮಂ ಮಯಸ್ತಂ ತಂ ವಿದಧೇ ಮಾಯಯಾ ತದಾ।।
ತ್ರಿಪುರಗಳಲ್ಲಿ ಆಶ್ರಯಪಡೆದಿದ್ದವರಲ್ಲಿ ಯಾರು ಏನನ್ನು ಮನಸ್ಸಿನಲ್ಲಿ ಬಯಸಿದರೂ ಅವೆಲ್ಲ ಕಾಮನೆಗಳನ್ನೂ ಮಯನು ತನ್ನ ಮಾಯೆಯಿಂದ ಕೊಡುತ್ತಿದ್ದನು.
08024023a ತಾರಕಾಕ್ಷಸುತಶ್ಚಾಸೀದ್ಧರಿರ್ನಾಮ ಮಹಾಬಲಃ।
08024023c ತಪಸ್ತೇಪೇ ಪರಮಕಂ ಯೇನಾತುಷ್ಯತ್ಪಿತಾಮಹಃ।।
ತಾರಕಾಕ್ಷನಿಗೆ ಹರಿ ಎಂಬ ಹೆಸರಿನ ಮಹಾಬಲ ಮಗನಿದ್ದನು. ಅವನು ಪರಮ ತಪಸ್ಸನ್ನು ತಪಿಸಿ ಪಿತಾಮಹನನ್ನು ತೃಪ್ತಿಗೊಳಿಸಿದನು.
08024024a ಸ ತುಷ್ಟಮವೃಣೋದ್ದೇವಂ ವಾಪೀ ಭವತು ನಃ ಪುರೇ।
08024024c ಶಸ್ತ್ರೈರ್ವಿನಿಹತಾ ಯತ್ರ ಕ್ಷಿಪ್ತಾಃ ಸ್ಯುರ್ಬಲವತ್ತರಾಃ।।
ಅವನು ತುಷ್ಟನಾದ ದೇವನಲ್ಲಿ ಈ ವರವನ್ನು ಕೇಳಿದನು: “ಶಸ್ತ್ರಗಳಿಂದ ಹತರಾದವನ್ನು ಎಲ್ಲಿ ಹಾಕಿದರೆ ಅವರು ಪುನಃ ಇನ್ನೂ ಹೆಚ್ಚಿನ ಬಲವುಳ್ಳವರಾಗಿ ಬದುಕುವರೋ ಅಂಥಹ ಒಂದು ಬಾವಿಯು ನಮ್ಮ ಪುರದಲ್ಲಿ ಇರಲಿ!”
08024025a ಸ ತು ಲಬ್ಧ್ವಾ ವರಂ ವೀರಸ್ತಾರಕಾಕ್ಷಸುತೋ ಹರಿಃ।
08024025c ಸಸೃಜೇ ತತ್ರ ವಾಪೀಂ ತಾಂ ಮೃತಾನಾಂ ಜೀವನೀಂ ಪ್ರಭೋ।।
ಪ್ರಭೋ! ಆ ವರವನ್ನು ಪಡೆದ ತಾರಕಾಸುತ ವೀರ ಹರಿಯು ಮೃತರನ್ನು ಜೀವಿತಗೊಳಿಸಬಲ್ಲ ಬಾವಿಯೊಂದನ್ನು ತನ್ನ ಪುರದಲ್ಲಿ ನಿರ್ಮಿಸಿದನು.
08024026a ಯೇನ ರೂಪೇಣ ದೈತ್ಯಸ್ತು ಯೇನ ವೇಷೇಣ ಚೈವ ಹ।
08024026c ಮೃತಸ್ತಸ್ಯಾಂ ಪರಿಕ್ಷಿಪ್ತಸ್ತಾದೃಶೇನೈವ ಜಜ್ಞಿವಾನ್।।
ಯಾವ ರೂಪದಲ್ಲಿಯೇ ಅಥವಾ ಯಾವ ವೇಷದಲ್ಲಿಯೇ ಸತ್ತಿರಲಿ ಮೃತನಾದವನನ್ನು ಆ ಬಾವಿಯಲ್ಲಿ ಹಾಕಿದೊಡನೆಯೇ ಅವನು ಅದೇ ರೂಪದಲ್ಲಿ ಬದುಕಿ ಬರುತ್ತಿದ್ದನು.
08024027a ತಾಂ ಪ್ರಾಪ್ಯ ತ್ರೈಪುರಸ್ಥಾಸ್ತು ಸರ್ವಾಽಲ್ಲೋಕಾನ್ಬಬಾಧಿರೇ।
08024027c ಮಹತಾ ತಪಸಾ ಸಿದ್ಧಾಃ ಸುರಾಣಾಂ ಭಯವರ್ಧನಾಃ।
08024027e ನ ತೇಷಾಮಭವದ್ರಾಜನ್ ಕ್ಷಯೋ ಯುದ್ಧೇ ಕಥಂ ಚನ।।
ಆ ಬಾವಿಯನ್ನು ಪಡೆದ ತ್ರಿಪುರವಾಸಿಗಳು ಸರ್ವಲೋಕಗಳನ್ನೂ ಬಾಧಿಸಿದರು. ಮಹಾತಪಸ್ಸುಗಳಿಂದ ಸಿದ್ಧಿಗಳನ್ನು ಪಡೆದ ಅವರು ಸುರರ ಭಯವನ್ನು ಹೆಚ್ಚಿಸಿದರು. ರಾಜನ್! ಯುದ್ಧದಲ್ಲಿ ಎಂದೂ ಅವರ ವಿನಾಶವಾಗುತ್ತಿರಲಿಲ್ಲ.
08024028a ತತಸ್ತೇ ಲೋಭಮೋಹಾಭ್ಯಾಮಭಿಭೂತಾ ವಿಚೇತಸಃ।
08024028c ನಿರ್ಹ್ರೀಕಾಃ ಸಂಸ್ಥಿತಿಂ ಸರ್ವೇ ಸ್ಥಾಪಿತಾಂ ಸಮಲೂಲುಪನ್।।
ಆಗ ಅವರು ಲೋಭ-ಮೋಹಗಳಿಗೊಳಗಾಗಿ ಬುದ್ಧಿಕಳೆದುಕೊಂಡರು. ನಿರ್ಲಜ್ಜರಾಗಿ ಎಲ್ಲೆಡೆಯೂ ಅನೇಕ ಪ್ರಕಾರದ ತೊಂದರೆಗಳನ್ನು ನೀಡತೊಡಗಿದರು.
08024029a ವಿದ್ರಾವ್ಯ ಸಗಣಾನ್ದೇವಾಂಸ್ತತ್ರ ತತ್ರ ತದಾ ತದಾ।
08024029c ವಿಚೇರುಃ ಸ್ವೇನ ಕಾಮೇನ ವರದಾನೇನ ದರ್ಪಿತಾಃ।।
ವರದಾನದಿಂದ ದರ್ಪಿತರಾದ ಅವರು ಅಲ್ಲಲ್ಲಿದ್ದ ದೇವತೆಗಳನ್ನು, ಅವರ ಗಣಗಳೊಂದಿಗೆ ಓಡಿಸಿ ತಮ್ಮ ಮನಸ್ಸಿಗೆ ಬಂದಂತೆ ಸಂಚರಿಸುತ್ತಿದ್ದರು.
08024030a ದೇವಾರಣ್ಯಾನಿ ಸರ್ವಾಣಿ ಪ್ರಿಯಾಣಿ ಚ ದಿವೌಕಸಾಂ।
08024030c ಋಷೀಣಾಮಾಶ್ರಮಾನ್ಪುಣ್ಯಾನ್ಯೂಪಾಂ ಜನಪದಾಂಸ್ತಥಾ।
08024030e ವ್ಯನಾಶಯಂತ ಮರ್ಯಾದಾ ದಾನವಾ ದುಷ್ಟಚಾರಿಣಃ।।
ಮರ್ಯಾದೆಗಳನ್ನು ಕಳೆದುಕೊಂಡ ದುಷ್ಟಚಾರೀ ದಾನವರು ದಿವೌಕಸರಿಗೆ ಪ್ರಿಯವಾದ ದೇವಾರಣ್ಯಗಳೆಲ್ಲವನ್ನೂ, ಪುಣ್ಯ ಋಷ್ಯಾಶ್ರಮಗಳನ್ನೂ, ಸುಂದರ ಜನಪದಗಳನ್ನೂ ನಾಶಗೊಳಿಸಿದರು.
08024031a ತೇ ದೇವಾಃ ಸಹಿತಾಃ ಸರ್ವೇ ಪಿತಾಮಹಮರಿಂದಮ।
08024031c ಅಭಿಜಗ್ಮುಸ್ತದಾಖ್ಯಾತುಂ ವಿಪ್ರಕಾರಂ ಸುರೇತರೈಃ।।
ಅರಿಂದಮ! ಆ ದೇವತೆಗಳೆಲ್ಲರೂ ಒಟ್ಟಾಗಿ ಸುರೇತರರು ಮಾಡಿದ ಅತ್ಯಾಚಾರಗಳ ಕುರಿತು ಹೇಳಲು ಪಿತಾಮಹನಲ್ಲಿಗೆ ಹೋದರು.
08024032a ತೇ ತತ್ತ್ವಂ ಸರ್ವಮಾಖ್ಯಾಯ ಶಿರಸಾಭಿಪ್ರಣಮ್ಯ ಚ।
08024032c ವಧೋಪಾಯಮಪೃಚ್ಚಂತ ಭಗವಂತಂ ಪಿತಾಮಹಂ।।
ಭಗವಂತ ಪಿತಾಮಹನಿಗೆ ಶಿರಸಾ ವಂದಿಸಿ ಎಲ್ಲವನ್ನೂ ತಿಳಿಸಿ, ಅವರ ವಧೆಯ ಉಪಾಯವನ್ನು ಕೇಳಿದರು.
08024033a ಶ್ರುತ್ವಾ ತದ್ಭಗವಾನ್ದೇವೋ ದೇವಾನಿದಮುವಾಚ ಹ।
08024033c ಅಸುರಾಶ್ಚ ದುರಾತ್ಮಾನಸ್ತೇ ಚಾಪಿ ವಿಬುಧದ್ವಿಷಃ।
08024033e ಅಪರಾಧ್ಯಂತಿ ಸತತಂ ಯೇ ಯುಷ್ಮಾನ್ಪೀಡಯಂತ್ಯುತ।।
ಅದನ್ನು ಕೇಳಿದ ಭಗವಾನ್ ದೇವನು ದೇವತೆಗಳಿಗೆ ಹೇಳಿದನು: “ಆ ದುರಾತ್ಮ ಅಸುರರು ಬ್ರಹ್ಮದ್ವೇಷಿಗಳು ಕೂಡ. ನಿಮ್ಮನ್ನು ಪೀಡಿಸುವ ಅವರು ಸತತವೂ ಅಪರಾಧಗಳನ್ನೆಸಗುತ್ತಿದ್ದಾರೆ.
08024034a ಅಹಂ ಹಿ ತುಲ್ಯಃ ಸರ್ವೇಷಾಂ ಭೂತಾನಾಂ ನಾತ್ರ ಸಂಶಯಃ।
08024034c ಅಧಾರ್ಮಿಕಾಸ್ತು ಹಂತವ್ಯಾ ಇತ್ಯಹಂ ಪ್ರಬ್ರವೀಮಿ ವಃ।।
ನನಗೆ ಸರ್ವಭೂತಗಳೂ ಸಮ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ಅಧರ್ಮಿಗಳನ್ನು ಸಂಹರಿಸಬೇಕು ಎಂದು ನಾನು ಹೇಳಿಕೊಳ್ಳುತ್ತಾ ಬಂದಿದ್ದೇನೆ.
08024035a ತೇ ಯೂಯಂ ಸ್ಥಾಣುಮೀಶಾನಂ ಜಿಷ್ಣುಮಕ್ಲಿಷ್ಟಕಾರಿಣಂ।
08024035c ಯೋದ್ಧಾರಂ ವೃಣುತಾದಿತ್ಯಾಃ ಸ ತಾನ್ ಹಂತಾ ಸುರೇತರಾನ್।।
ಆದಿತ್ಯರೇ! ಸ್ಥಾಣು ಜಿಷ್ಣು ಅಕ್ಲಿಷ್ಟಕರ್ಮಿ ಈಶಾನನನ್ನು ನಿಮ್ಮ ಯೋಧನನ್ನಾಗಿ ಆರಿಸಿಕೊಳ್ಳಿ. ಅವನು ಆ ಸುರೇತರರನ್ನು ಸಂಹರಿಸುತ್ತಾನೆ.”
08024036a ಇತಿ ತಸ್ಯ ವಚಃ ಶ್ರುತ್ವಾ ದೇವಾಃ ಶಕ್ರಪುರೋಗಮಾಃ।
08024036c ಬ್ರಹ್ಮಾಣಮಗ್ರತಃ ಕೃತ್ವಾ ವೃಷಾಂಕಂ ಶರಣಂ ಯಯುಃ।।
ಅವನ ಈ ಮಾತನ್ನು ಕೇಳಿ ಶಕ್ರನ ನಾಯಕತ್ವದಲ್ಲಿದ್ದ ದೇವತೆಗಳು ಬ್ರಹ್ಮನನ್ನು ಮುಂದೆಮಾಡಿಕೊಂಡು ವೃಷಾಂಕನ ಶರಣು ಹೋದರು.
08024037a ತಪಃ ಪರಂ ಸಮಾತಸ್ಥುರ್ಗೃಣಂತೋ ಬ್ರಹ್ಮ ಶಾಶ್ವತಂ।
08024037c ಋಷಿಭಿಃ ಸಹ ಧರ್ಮಜ್ಞಾ ಭವಂ ಸರ್ವಾತ್ಮನಾ ಗತಾಃ।।
ಆ ಧರ್ಮಜ್ಞರು ಋಷಿಗಳೊಂದಿಗೆ ಪರಮ ತಪಸ್ಸನ್ನಾಚರಿಸಿ ಆ ಬ್ರಹ್ಮ, ಶಾಶ್ವತ, ಸರ್ವಾತ್ಮ ಭವನಿಗೆ ಶರಣು ಹೋದರು.
08024038a ತುಷ್ಟುವುರ್ವಾಗ್ಭಿರರ್ಥ್ಯಾಭಿರ್ಭಯೇಷ್ವಭಯಕೃತ್ತಮಂ।
08024038c ಸರ್ವಾತ್ಮಾನಂ ಮಹಾತ್ಮಾನಂ ಯೇನಾಪ್ತಂ ಸರ್ವಮಾತ್ಮನಾ।।
08024039a ತಪೋವಿಶೇಷೈರ್ಬಹುಭಿರ್ಯೋಗಂ ಯೋ ವೇದ ಚಾತ್ಮನಃ।
08024039c ಯಃ ಸಾಂಖ್ಯಮಾತ್ಮನೋ ವೇದ ಯಸ್ಯ ಚಾತ್ಮಾ ವಶೇ ಸದಾ।।
08024040a ತೇ ತಂ ದದೃಶುರೀಶಾನಂ ತೇಜೋರಾಶಿಮುಮಾಪತಿಂ।
08024040c ಅನನ್ಯಸದೃಶಂ ಲೋಕೇ ವ್ರತವಂತಮಕಲ್ಮಷಂ।।
ಸ್ತುತಿ-ಪೂಜೆಗಳಿಗೆ ಸಂತುಷ್ಟನಾಗುವ, ಮಹಾ ಭಯದಲ್ಲಿಯೂ ಅಭಯಪ್ರದನಾಗಿರುವ, ಸರ್ವಾತ್ಮ, ಮಹಾತ್ಮ, ಸರ್ವದಲ್ಲಿಯೂ ತನ್ನನ್ನು ವ್ಯಾಪಿಸಿಕೊಂಡಿರುವ, ಅನೇಕ ವಿಶೇಷ ತಪಸ್ಸುಗಳಿಂದ ಯೋಗಯುಕ್ತನಾಗಿರುವ, ಅತ್ಮನನ್ನು ತಿಳಿದುಕೊಂಡಿರುವ, ಸಾಂಖ್ಯವನ್ನು ತಿಳಿದುಕೊಂಡಿರುವ, ತನ್ನ ಆತ್ಮವನ್ನು ವಶದಲ್ಲಿಟ್ಟುಕೊಂಡಿರುವ, ತೇಜೋರಾಶಿಯಾದ, ಲೋಕದಲ್ಲಿ ಅನನ್ಯಸದೃಶನಾದ, ವ್ರತವಂತನಾದ, ಅಕಲ್ಮಷನಾದ, ಆ ಈಶಾನ ಉಮಾಪತಿಯನ್ನು ಅವರು ನೋಡಿದರು.
08024041a ಏಕಂ ಚ ಭಗವಂತಂ ತೇ ನಾನಾರೂಪಮಕಲ್ಪಯನ್।
08024041c ಆತ್ಮನಃ ಪ್ರತಿರೂಪಾಣಿ ರೂಪಾಣ್ಯಥ ಮಹಾತ್ಮನಿ।
08024041e ಪರಸ್ಪರಸ್ಯ ಚಾಪಶ್ಯನ್ಸರ್ವೇ ಪರಮವಿಸ್ಮಿತಾಃ।।
ಆ ಒಬ್ಬನೇ ಭಗವಂತನನ್ನು ಅವರು ನಾನಾರೂಪಗಳಲ್ಲಿ ಕಲ್ಪಿಸಿಕೊಂಡರು. ಆ ಮಹಾತ್ಮರು ತಮ್ಮ ತಮ್ಮಲ್ಲಿಯೇ ಅವನ ಪ್ರತಿಬಿಂಬರೂಪಗಳನ್ನು ಕಂಡರು ಮತ್ತು ಪರಸ್ವರರಲ್ಲಿಯೂ ಅವನನ್ನು ಕಂಡು ಎಲ್ಲರೂ ಪರಮ ವಿಸ್ಮಿತರಾದರು.
08024042a ಸರ್ವಭೂತಮಯಂ ಚೇಶಂ ತಮಜಂ ಜಗತಃ ಪತಿಂ।
08024042c ದೇವಾ ಬ್ರಹ್ಮರ್ಷಯಶ್ಚೈವ ಶಿರೋಭಿರ್ಧರಣೀಂ ಗತಾಃ।।
ದೇವತೆಗಳು ಮತ್ತು ಬ್ರಹ್ಮರ್ಷಿಗಳು ಆ ಸರ್ವಭೂತಮಯ ಈಶ ಅಜ ಜಗತ್ಪತಿಯನ್ನು ನೋಡಿ ಶಿರಗಳನ್ನು ಭೂಮಿಯಮೇಲಿಟ್ಟು ನಮಸ್ಕರಿಸಿದರು.
08024043a ತಾನ್ಸ್ವಸ್ತಿವಾಕ್ಯೇನಾಭ್ಯರ್ಚ್ಯ ಸಮುತ್ಥಾಪ್ಯ ಚ ಶಂಕರಃ।
08024043c ಬ್ರೂತ ಬ್ರೂತೇತಿ ಭಗವಾನ್ಸ್ಮಯಮಾನೋಽಭ್ಯಭಾಷತ।।
ಸ್ವಸ್ತಿವಾಕ್ಯಗಳಿಂದ ಅವರನ್ನು ಮೇಲೆಬ್ಬಿಸಿ ಭಗವಾನ್ ಶಂಕರನು ನಸುನಗುತ್ತಾ “ಹೇಳಿ! ಹೇಳಿ!” ಎಂದು ನುಡಿದನು.
08024044a ತ್ರ್ಯಂಬಕೇಣಾಭ್ಯನುಜ್ಞಾತಾಸ್ತತಸ್ತೇಽಸ್ವಸ್ಥಚೇತಸಃ।
08024044c ನಮೋ ನಮಸ್ತೇಽಸ್ತು ವಿಭೋ ತತ ಇತ್ಯಬ್ರುವನ್ಭವಂ।।
ತ್ರ್ಯಂಬಕನಿಂದ ಅಪ್ಪಣೆಪಡೆದ ಆ ಅಸ್ವಸ್ಥಚೇತಸರು “ನಮೋ ನಮಸ್ತೇಸ್ತು!” ಎಂದು ಭವನಿಗೆ ಹೇಳಿದರು.
08024045a ನಮೋ ದೇವಾತಿದೇವಾಯ ಧನ್ವಿನೇ ಚಾತಿಮನ್ಯವೇ।
08024045c ಪ್ರಜಾಪತಿಮಖಘ್ನಾಯ ಪ್ರಜಾಪತಿಭಿರೀಡ್ಯಸೇ।।
“ದೇವಾತಿದೇವನಿಗೆ, ಧನ್ವಿಗೆ, ಅತಿಮನ್ಯುವಿಗೆ, ಪ್ರಜಾಪತಿ ಯಜ್ಞನಾಶನಿಗೆ, ಪ್ರಜಾಪತಿಯಿಂದಲೂ ಸ್ತುತಿಸಲ್ಪಡುವವನಿಗೆ ನಮಸ್ಕಾರ!
08024046a ನಮಃ ಸ್ತುತಾಯ ಸ್ತುತ್ಯಾಯ ಸ್ತೂಯಮಾನಾಯ ಮೃತ್ಯವೇ।
08024046c ವಿಲೋಹಿತಾಯ ರುದ್ರಾಯ ನೀಲಗ್ರೀವಾಯ ಶೂಲಿನೇ।।
08024047a ಅಮೋಘಾಯ ಮೃಗಾಕ್ಷಾಯ ಪ್ರವರಾಯುಧಯೋಧಿನೇ।
08024047c ದುರ್ವಾರಣಾಯ ಶುಕ್ರಾಯ ಬ್ರಹ್ಮಣೇ ಬ್ರಹ್ಮಚಾರಿಣೇ।।
08024048a ಈಶಾನಾಯಾಪ್ರಮೇಯಾಯ ನಿಯಂತ್ರೇ ಚರ್ಮವಾಸಸೇ।
08024048c ತಪೋನಿತ್ಯಾಯ ಪಿಂಗಾಯ ವ್ರತಿನೇ ಕೃತ್ತಿವಾಸಸೇ।।
08024049a ಕುಮಾರಪಿತ್ರೇ ತ್ರ್ಯಕ್ಷಾಯ ಪ್ರವರಾಯುಧಧಾರಿಣೇ।
08024049c ಪ್ರಪನ್ನಾರ್ತಿವಿನಾಶಾಯ ಬ್ರಹ್ಮದ್ವಿಟ್ಸಂಘಘಾತಿನೇ।।
ಸ್ತುತ, ಸ್ತುತ್ಯ, ಸ್ತೂಯಮಾನ, ಮೃತ್ಯು, ವಿಲೋಹಿತ, ರುದ್ರ, ನೀಲಗ್ರೀವ, ಶೂಲಿ, ಅಮೋಘ, ಮೃಗಾಕ್ಷ, ಪ್ರವರಾಯುಧಯೋಧಿನಿ, ದುರ್ವಾರ್ಣ, ಶುಕ್ರ, ಬ್ರಹ್ಮ, ಬ್ರಹ್ಮಚಾರಿಣಿ, ಈಶಾನ, ಅಪ್ರಮೇಯ, ನಿಯಂತ್ರಿ, ಚರ್ಮವಾಸಸ, ತಪೋನಿತ್ಯ, ಪಿಂಗ, ವ್ರತಿ, ಕೃತ್ತಿವಾಸಸ, ಕುಮಾರಪಿತು, ತ್ರ್ಯಕ್ಷ, ಪ್ರವರಾಯುಧಧಾರಿಣಿ, ಪ್ರಪನ್ನರ ದುಃಖವನ್ನು ವಿನಾಶಗೊಳಿಸುವವ, ಬ್ರಹ್ಮದ್ವೇಷಿಗಳ ಸಮೂಹ ವಿಧ್ವಂಸಕ - ನಿನಗೆ ನಮಸ್ಕಾರ.
08024050a ವನಸ್ಪತೀನಾಂ ಪತಯೇ ನರಾಣಾಂ ಪತಯೇ ನಮಃ।
08024050c ಗವಾಂ ಚ ಪತಯೇ ನಿತ್ಯಂ ಯಜ್ಞಾನಾಂ ಪತಯೇ ನಮಃ।।
ವನಸ್ಪತಿಗಳ ಪತಿ ಮತ್ತು ನರರ ಪತಿಗೆ ನಮಸ್ಕಾರ. ಗೋಪತಿಗೆ, ನಿತ್ಯನಿಗೆ, ಯಜ್ಞಪತಿಗೆ ನಮಸ್ಕಾರ.
08024051a ನಮೋಽಸ್ತು ತೇ ಸಸೈನ್ಯಾಯ ತ್ರ್ಯಂಬಕಾಯೋಗ್ರತೇಜಸೇ।
08024051c ಮನೋವಾಕ್ಕರ್ಮಭಿರ್ದೇವ ತ್ವಾಂ ಪ್ರಪನ್ನಾನ್ಭಜಸ್ವ ನಃ।।
ಸೇನಾಸಹಿತನಾದ ನಿನಗೆ ನಮಸ್ಕಾರ! ಉಗ್ರತೇಜಸ್ವಿ, ತ್ರ್ಯಂಬಕನಿಗೆ ನಮಸ್ಕಾರ! ಮನಸ್ಸು, ಮಾತು ಮತ್ತು ಕರ್ಮಗಳಿಂದ ನಿನ್ನನ್ನು ಭಜಿಸುವ ನಮ್ಮನ್ನು ಕಾಪಾಡು!”
08024052a ತತಃ ಪ್ರಸನ್ನೋ ಭಗವಾನ್ಸ್ವಾಗತೇನಾಭಿನಂದ್ಯ ತಾನ್।
08024052c ಪ್ರೋವಾಚ ವ್ಯೇತು ವಸ್ತ್ರಾಸೋ ಬ್ರೂತ ಕಿಂ ಕರವಾಣಿ ವಃ।।
ಆಗ ಪ್ರಸನ್ನನಾದ ಭಗವಾನನು ಅವರನ್ನು ಸ್ವಾಗತದೊಂದಿಗೆ ಅಭಿನಂದಿಸಿ “ನಿಮ್ಮ ಭಯವನ್ನು ದೂರಮಾಡಲು ನಾನೇನು ಮಾಡಬೇಕೆಂದು ಹೇಳಿ!” ಎಂದು ಕೇಳಿದನು.
08024053a ಪಿತೃದೇವರ್ಷಿಸಂಘೇಭ್ಯೋ ವರೇ ದತ್ತೇ ಮಹಾತ್ಮನಾ।
08024053c ಸತ್ಕೃತ್ಯ ಶಂಕರಂ ಪ್ರಾಹ ಬ್ರಹ್ಮಾ ಲೋಕಹಿತಂ ವಚಃ।।
ಆ ಮಹಾತ್ಮನು ಪಿತೃ-ದೇವ ಸಂಘಗಳಿಗೆ ವರವನ್ನು ನೀಡಲು, ಬ್ರಹ್ಮನು ಶಂಕರನನ್ನು ಸತ್ಕರಿಸಿ ಲೋಕಹಿತವಾದ ಈ ಮಾತನ್ನಾಡಿದನು:
08024054a ತವಾತಿಸರ್ಗಾದ್ದೇವೇಶ ಪ್ರಾಜಾಪತ್ಯಮಿದಂ ಪದಂ।
08024054c ಮಯಾಧಿತಿಷ್ಠತಾ ದತ್ತೋ ದಾನವೇಭ್ಯೋ ಮಹಾನ್ವರಃ।।
“ದೇವೇಶ! ನಿನ್ನ ಆದೇಶದಂತೆ ಈ ಪ್ರಜಾಪತಿ ಪದವನ್ನು ವಹಿಸಿಕೊಂಡಿರುವ ನಾನು ದಾನವರಿಗೆ ಮಹಾ ವರವನ್ನು ನೀಡಿದೆನು.
08024055a ತಾನತಿಕ್ರಾಂತಮರ್ಯಾದಾನ್ನಾನ್ಯಃ ಸಂಹರ್ತುಮರ್ಹತಿ।
08024055c ತ್ವಾಮೃತೇ ಭೂತಭವ್ಯೇಶ ತ್ವಂ ಹ್ಯೇಷಾಂ ಪ್ರತ್ಯರಿರ್ವಧೇ।।
ಮರ್ಯಾದೆಗಳನ್ನು ಅತಿಕ್ರಮಿಸಿರುವ ಅವರನ್ನು ಸಂಹರಿಸಬೇಕಾಗಿದೆ. ಭೂತಭವ್ಯೇಶ! ನಿನ್ನನ್ನು ಬಿಟ್ಟು ಬೇರೆ ಯಾರೂ ಅವರನ್ನು ಕೊಲ್ಲಲಾರರು. ಆದುದರಿಂದ ನೀನೇ ಅವರ ಶತ್ರುವಾಗಿ ಅವರನ್ನು ವಧಿಸು!
08024056a ಸ ತ್ವಂ ದೇವ ಪ್ರಪನ್ನಾನಾಂ ಯಾಚತಾಂ ಚ ದಿವೌಕಸಾಂ।
08024056c ಕುರು ಪ್ರಸಾದಂ ದೇವೇಶ ದಾನವಾಂ ಜಹಿ ಶೂಲಭೃತ್।।
ದೇವ! ಶರಣುಬಂದು ಬೇಡುತ್ತಿರುವ ದಿವೌಕಸರಿಗೆ ನೀನು ಕೃಪೆತೋರಿಸು! ದೇವೇಶ! ಶೂಲಧಾರೀ! ದಾನವರನ್ನು ಸಂಹರಿಸು!”
08024057 ಶ್ರೀಭಗವಾನುವಾಚ।
08024057a ಹಂತವ್ಯಾಃ ಶತ್ರವಃ ಸರ್ವೇ ಯುಷ್ಮಾಕಮಿತಿ ಮೇ ಮತಿಃ।
08024057c ನ ತ್ವೇಕೋಽಹಂ ವಧೇ ತೇಷಾಂ ಸಮರ್ಥೋ ವೈ ಸುರದ್ವಿಷಾಂ।।
ಶ್ರೀ ಭಗವಾನನು ಹೇಳಿದನು: “ನಿಮ್ಮ ಶತ್ರುಗಳೆಲ್ಲರನ್ನೂ ಸಂಹರಿಸಬೇಕೆಂಬುದೇ ನನ್ನ ಅಭಿಪ್ರಾಯ. ಆದರೆ ಸುರಶತ್ರುಗಳಾದ ಅವರನ್ನು ನಾನೊಬ್ಬನೇ ವಧಿಸಲು ಸಮರ್ಥನಿಲ್ಲ.
08024058a ತೇ ಯೂಯಂ ಸಹಿತಾಃ ಸರ್ವೇ ಮದೀಯೇನಾಸ್ತ್ರತೇಜಸಾ।
08024058c ಜಯಧ್ವಂ ಯುಧಿ ತಾಂ ಶತ್ರೂನ್ಸಂಘಾತೋ ಹಿ ಮಹಾಬಲಃ।।
ನೀವೆಲ್ಲರೂ ಒಟ್ಟಾಗಿ ನನ್ನ ಅಸ್ತ್ರತೇಜಸ್ಸಿನಿಂದ ಯುದ್ಧದಲ್ಲಿ ಆ ಶತ್ರುಗಳನ್ನು ಜಯಿಸಿ. ಏಕೆಂದರೆ ಒಗ್ಗಟ್ಟಿನಲ್ಲಿಯೇ ಮಹಾಬಲವಿದೆ.”
08024059 ದೇವಾ ಊಚುಃ।
08024059a ಅಸ್ಮತ್ತೇಜೋಬಲಂ ಯಾವತ್ತಾವದ್ದ್ವಿಗುಣಂ ಏವ ಚ।
08024059c ತೇಷಾಮಿತಿ ಹ ಮನ್ಯಾಮೋ ದೃಷ್ಟತೇಜೋಬಲಾ ಹಿ ತೇ।।
ದೇವತೆಗಳು ಹೇಳಿದರು: “ನಮ್ಮ ತೇಜೋಬಲಕ್ಕಿಂತಲೂ ಎರಡು ಪಟ್ಟು ಅವರದ್ದು ಎಂದು ನಮಗೂ ಅನ್ನಿಸುತ್ತಿದೆ. ಏಕೆಂದರೆ ಅವರ ತೇಜೋಬಲವನ್ನು ನಾವು ನೋಡಿದ್ದೇವೆ.”
08024060 ಭಗವಾನುವಾಚ।
08024060a ವಧ್ಯಾಸ್ತೇ ಸರ್ವತಃ ಪಾಪಾ ಯೇ ಯುಷ್ಮಾಸ್ವಪರಾಧಿನಃ।
08024060c ಮಮ ತೇಜೋಬಲಾರ್ಧೇನ ಸರ್ವಾಂಸ್ತಾನ್ಘ್ನತ ಶಾತ್ರವಾನ್।।
ಭಗವಾನನು ಹೇಳಿದನು: “ನಿಮ್ಮಮೇಲೆ ಅಪರಾಧಗಳನ್ನೆಸಗಿರುವ ಆ ಪಾಪಿಗಳು ಸರ್ವತಾ ವಧ್ಯರು. ನನ್ನ ತೇಜೋಬಲದ ಅರ್ಧದಿಂದ ಆ ಎಲ್ಲ ಶತ್ರುಗಳನ್ನೂ ಸಂಹರಿಸಿರಿ!”
08024061 ದೇವಾ ಊಚುಃ।
08024061a ಬಿಭರ್ತುಂ ತೇಜಸೋಽರ್ಧಂ ತೇ ನ ಶಕ್ಷ್ಯಾಮೋ ಮಹೇಶ್ವರ।
08024061c ಸರ್ವೇಷಾಂ ನೋ ಬಲಾರ್ಧೇನ ತ್ವಮೇವ ಜಹಿ ಶಾತ್ರವಾನ್।।
ದೇವತೆಗಳು ಹೇಳಿದರು: “ಮಹೇಶ್ವರ! ನಿನ್ನ ಅರ್ಧತೇಜಸ್ಸನ್ನೂ ಧರಿಸಲು ನಾವು ಶಕ್ಯರಿಲ್ಲ. ಆದುದರಿಂದ ನೀನೇ ನಮ್ಮೆಲ್ಲರ ಬಲದಿಂದ ಶತ್ರುಗಳನ್ನು ಸಂಹರಿಸು!””
08024062 ದುರ್ಯೋಧನ ಉವಾಚ।
08024062a ತತಸ್ತಥೇತಿ ದೇವೇಶಸ್ತೈರುಕ್ತೋ ರಾಜಸತ್ತಮ।
08024062c ಅರ್ಧಮಾದಾಯ ಸರ್ವೇಭ್ಯಸ್ತೇಜಸಾಭ್ಯಧಿಕೋಽಭವತ್।।
ದುರ್ಯೋಧನನು ಹೇಳಿದನು: “ರಾಜಸತ್ತಮ! ಹಾಗೆಯೇ ಆಗಲೆಂದು ಹೇಳಿ ದೇವೇಶನು ಅವರೆಲ್ಲರ ತೇಜಸ್ಸಿನ ಅರ್ಧವನ್ನು ಪಡೆದು ತೇಜಸ್ಸಿನಲ್ಲಿ ಅಧಿಕನಾದನು.
08024063a ಸ ತು ದೇವೋ ಬಲೇನಾಸೀತ್ಸರ್ವೇಭ್ಯೋ ಬಲವತ್ತರಃ।
08024063c ಮಹಾದೇವ ಇತಿ ಖ್ಯಾತಸ್ತದಾಪ್ರಭೃತಿ ಶಂಕರಃ।।
ಆಗ ಆ ದೇವನು ಬಲದಲ್ಲಿ ಎಲ್ಲರಿಗಿಂತ ಹೆಚ್ಚು ಬಲವಂತನಾದನು. ಅಂದಿನಿಂದ ಶಂಕರನು ಮಹಾದೇವ ಎಂದು ಖ್ಯಾತನಾದನು.
08024064a ತತೋಽಬ್ರವೀನ್ಮಹಾದೇವೋ ಧನುರ್ಬಾಣಧರಸ್ತ್ವಹಂ।
08024064c ಹನಿಷ್ಯಾಮಿ ರಥೇನಾಜೌ ತಾನ್ರಿಪೂನ್ವೈ ದಿವೌಕಸಃ।।
ಆಗ ಮಹಾದೇವನು ಹೇಳಿದನು: “ದಿವೌಕಸರೇ! ಧನುರ್ಬಾಣಗಳನ್ನು ಹಿಡಿದು ರಥವನ್ನೇರಿ ಆ ರಿಪುಗಳನ್ನು ಸಂಹರಿಸುತ್ತೇನೆ.
08024065a ತೇ ಯೂಯಂ ಮೇ ರಥಂ ಚೈವ ಧನುರ್ಬಾಣಂ ತಥೈವ ಚ।
08024065c ಪಶ್ಯಧ್ವಂ ಯಾವದದ್ಯೈತಾನ್ಪಾತಯಾಮಿ ಮಹೀತಲೇ।।
ಯಾವುದರಿಂದ ನಾನು ಆ ದೈತ್ಯರನ್ನು ಮಹೀತಲಕ್ಕೆ ಬೀಳಿಸಬಲ್ಲೆನೋ ಅಂತಹ ರಥವನ್ನೂ, ಧನುರ್ಬಾಣಗಳನ್ನೂ ಹುಡುಕಿರಿ!”
08024066 ದೇವಾ ಊಚುಃ।
08024066a ಮೂರ್ತಿಸರ್ವಸ್ವಮಾದಾಯ ತ್ರೈಲೋಕ್ಯಸ್ಯ ತತಸ್ತತಃ।
08024066c ರಥಂ ತೇ ಕಲ್ಪಯಿಷ್ಯಾಮ ದೇವೇಶ್ವರ ಮಹೌಜಸಂ।।
ದೇವತೆಗಳು ಹೇಳಿದರು: “ದೇವೇಶ್ವರ! ತ್ರೈಲೋಕ್ಯಗಳಲ್ಲಿ ಅಲ್ಲಲ್ಲಿರುವ ಮೂರ್ತಿಗಳೆಲ್ಲವನ್ನೂ ಒಂದುಗೂಡಿಸಿ ನಿನಗೋಸ್ಕರ ಈ ಮಹೌಜಸ ರಥವನ್ನು ನಿರ್ಮಿಸಿದ್ದೇವೆ.
08024067a ತಥೈವ ಬುದ್ಧ್ಯಾ ವಿಹಿತಂ ವಿಶ್ವಕರ್ಮಕೃತಂ ಶುಭಂ।
08024067c ತತೋ ವಿಬುಧಶಾರ್ದೂಲಾಸ್ತಂ ರಥಂ ಸಮಕಲ್ಪಯನ್।।
ಈ ಶುಭ ರಥವು ವಿಶ್ವಕರ್ಮನ ಬುದ್ಧಿಯಿಂದ ರಚಿಸಲ್ಪಟ್ಟಿದೆ.” ಹೀಗೆ ವಿಬುಧಶಾರ್ದೂಲರು ಆ ರಥವನ್ನು ನಿರ್ಮಿಸಿದರು.
08024068a ವಂದುರಂ ಪೃಥಿವೀಂ ದೇವೀಂ ವಿಶಾಲಪುರಮಾಲಿನೀಂ।
08024068c ಸಪರ್ವತವನದ್ವೀಪಾಂ ಚಕ್ರುರ್ಭೂತಧರಾಂ ತದಾ।।
ವಿಶಾಲ ಪುರಮಾಲೆಗಳಿಂದ ಅಲಂಕೃತ, ಪರ್ವತ-ವನ-ದ್ವೀಪಸಂಪನ್ನಳಾದ ಸರ್ವಭೂತಗಳನ್ನು ಧರಿಸಿದ್ದ ಪೃಥ್ವೀ ದೇವಿಯನ್ನೇ ಅವರು ರಥವನ್ನಾಗಿ ಕಲ್ಪಿಸಿಕೊಟ್ಟರು.
08024069a ಮಂದರಂ ಪರ್ವತಂ ಚಾಕ್ಷಂ ಜಂಘಾಸ್ತಸ್ಯ ಮಹಾನದೀಃ।
08024069c ದಿಶಶ್ಚ ಪ್ರದಿಶಶ್ಚೈವ ಪರಿವಾರಂ ರಥಸ್ಯ ಹಿ।।
ಮಂದರ ಪರ್ವತವು ಅದರ ಅಚ್ಚುಮರವಾಗಿತ್ತು. ಮಹಾನದಿಯು ಅದರ ತಳಭಾಗವಾಗಿತ್ತು. ದಿಕ್ಕುಗಳು ಮತ್ತು ಉಪದಿಕ್ಕುಗಳು ಆ ರಥದ ಪರಿವಾರಗಳಾಗಿದ್ದವು.
08024070a ಅನುಕರ್ಷಾನ್ ಗ್ರಹಾನ್ದೀಪ್ತಾನ್ವರೂಥಂ ಚಾಪಿ ತಾರಕಾಃ।
08024070c ಧರ್ಮಾರ್ಥಕಾಮಸಂಯುಕ್ತಂ ತ್ರಿವೇಣುಂ ಚಾಪಿ ಬಂದುರಂ।
08024070e ಓಷಧೀರ್ವಿವಿಧಾಸ್ತತ್ರ ನಾನಾಪುಷ್ಪಫಲೋದ್ಗಮಾಃ।।
ಬೆಳಗುತ್ತಿದ್ದ ಗ್ರಹಗಳು ಅನುಕರ್ಷಗಳಾಗಿದ್ದವು. ನಕ್ಷತ್ರಗಳು ವರೂಥವಾಗಿದ್ದವು. ಧರ್ಮ-ಅರ್ಥ-ಕಾಮಗಳು ಒಂದಾಗಿ ತ್ರಿವೇಣಿಗಳಾಗಿ ಬಂಧಿಸಲ್ಪಟ್ಟಿದ್ದವು. ವಿವಿಧ ಔಷಧಿಗಳು ಮತ್ತು ನಾನಾ ಪುಷ್ಪ-ಫಲಗಳು ಉದ್ಗಮಗಳಾಗಿದ್ದವು.
08024071a ಸೂರ್ಯಾಚಂದ್ರಮಸೌ ಕೃತ್ವಾ ಚಕ್ರೇ ರಥವರೋತ್ತಮೇ।
08024071c ಪಕ್ಷೌ ಪೂರ್ವಾಪರೌ ತತ್ರ ಕೃತೇ ರಾತ್ರ್ಯಹನೀ ಶುಭೇ।।
ಸೂರ್ಯ-ಚಂದ್ರರು ಆ ಉತ್ತಮ ರಥದ ಚಕ್ರಗಳಾಗಿದ್ದವು. ಶುಭ ರಾತ್ರಿ ಮತ್ತು ಹಗಲುಗಳು ಅದರ ಪೂರ್ವ ಮತ್ತು ಪಶ್ಚಿಮ ಪಕ್ಷಗಳಾಗಿದ್ದವು.
08024072a ದಶ ನಾಗಪತೀನೀಷಾಂ ಧೃತರಾಷ್ಟ್ರಮುಖಾನ್ದೃಢಾಂ।
08024072c ದ್ಯಾಮ್ಯುಗಂ ಯುಗಚರ್ಮಾಣಿ ಸಂವರ್ತಕಬಲಾಹಕಾನ್।।
ಧೃತರಾಷ್ಟ್ರನೇ ಮೊದಲಾದ ಹತ್ತು ನಾಗಪತಿಗಳು ಅದರ ದೃಢ ಈಷಾದಂಡಗಳಾಗಿದ್ದವು. ಎರಡು ಯುಗಗಳು ಮತ್ತು ಸಂವರ್ತಕ ಬಲಾಹಕಗಳು ರಥಚರ್ಮಗಳಾಗಿದ್ದವು.
08024073a ಶಮ್ಯಾಂ ಧೃತಿಂ ಚ ಮೇಧಾಂ ಚ ಸ್ಥಿತಿಂ ಸನ್ನತಿಮೇವ ಚ।
08024073c ಗ್ರಹನಕ್ಷತ್ರತಾರಾಭಿಶ್ಚರ್ಮ ಚಿತ್ರಂ ನಭಸ್ತಲಂ।।
ಸಂಧ್ಯಾ, ಧೃತಿ, ಮೇಧಾ, ಸ್ಥಿತಿ, ಸನ್ನತಿ, ಗ್ರಹ-ನಕ್ಷತ್ರ-ತಾರೆಗಳಿಂದ ಚಿತ್ರಿತ ಆಕಾಶವನ್ನೇ ರಥಕ್ಕೆ ಚರ್ಮದ ಹೊದಿಕೆಯನ್ನಾಗಿ ಹೊದಿಸಿದ್ದರು.
08024074a ಸುರಾಂಬುಪ್ರೇತವಿತ್ತಾನಾಂ ಪತೀಽಲ್ಲೋಕೇಶ್ವರಾನ್ ಹಯಾನ್।
08024074c ಸಿನೀವಾಲೀಮನುಮತಿಂ ಕುಹೂಂ ರಾಕಾಂ ಚ ಸುವ್ರತಾಂ।
08024074e ಯೋಕ್ತ್ರಾಣಿ ಚಕ್ರುರ್ವಾಹಾನಾಂ ರೋಹಕಾಂಶ್ಚಾಪಿ ಕಂಟಕಂ।।
ಸುರರು, ನೀರು, ಪ್ರೇತ ಮತ್ತು ವಿತ್ತಗಳ ಒಡೆಯರಾದ ಇಂದ್ರ, ವರುಣ, ಯಮ ಮತ್ತು ಕುಬೇರ – ಈ ಲೋಕೇಶ್ವರರನ್ನು ಕುದುರೆಗಳನ್ನಾಗಿ ಕಟ್ಟಲಾಗಿತ್ತು. ಸಿನೀವಾಲೀ, ಅನುಮತಿ, ಕುಹೂ ಮತ್ತು ಸುವ್ರತ ರಾಕಾರನ್ನು ಕುದುರೆಗಳ ಕಡಿವಾಣಗಳನ್ನಾಗಿಯೂ ರೋಹಕರನ್ನು (ದೊಡ್ಡ ದೇವತೆಗಳನ್ನು) ಕಡಿವಾಣಗಳಲ್ಲಿರುವ ಮುಳ್ಳುಗಳನ್ನಾಗಿ ಕಲ್ಪಿಸಿದರು.
08024075a ಕರ್ಮ ಸತ್ಯಂ ತಪೋಽರ್ಥಶ್ಚ ವಿಹಿತಾಸ್ತತ್ರ ರಶ್ಮಯಃ।
08024075c ಅಧಿಷ್ಠಾನಮ್ಮನಸ್ತ್ವಾಸೀತ್ಪರಿರಥ್ಯಂ ಸರಸ್ವತೀ।।
ಕರ್ಮ, ಸತ್ಯ, ತಪಸ್ಸು ಮತ್ತು ಅರ್ಥಗಳು ಕಡಿವಾಣಗಳಲ್ಲಿದ್ದವು. ಮನಸ್ಸು ಅದರ ಅಧಿಷ್ಠಾನವಾಗಿತ್ತು ಮತ್ತು ಸರಸ್ವತಿಯು ರಥದ ದಾರಿಯಾಗಿ ಪರಿಣಮಿಸಿತು.
08024076a ನಾನಾವರ್ಣಾಶ್ಚ ಚಿತ್ರಾಶ್ಚ ಪತಾಕಾಃ ಪವನೇರಿತಾಃ।
08024076c ವಿದ್ಯುದಿಂದ್ರಧನುರ್ನದ್ಧಂ ರಥಂ ದೀಪ್ತಂ ವ್ಯದೀಪಯತ್।।
ನಾನಾವರ್ಣಗಳ ಚಿತ್ರ-ವಿಚಿತ್ರ ಪತಾಕೆಗಳು ಗಾಳಿಯಲ್ಲಿ ಪರಪರನೆ ಹಾರಾಡುತ್ತಿದ್ದವು. ಮಿಂಚು ಮತ್ತು ಕಾಮನಬಿಲ್ಲುಗಳು ರಥವನ್ನು ಬೆಳಗಿಸಿದವು.
08024077a ಏವಂ ತಸ್ಮಿನ್ಮಹಾರಾಜ ಕಲ್ಪಿತೇ ರಥಸತ್ತಮೇ।
08024077c ದೇವೈರ್ಮನುಜಶಾರ್ದೂಲ ದ್ವಿಷತಾಮಭಿಮರ್ದನೇ।
08024078a ಸ್ವಾನ್ಯಾಯುಧಾನಿ ಮುಖ್ಯಾನಿ ನ್ಯದಧಾಚ್ಚಂಕರೋ ರಥೇ।
ಮಹಾರಾಜ! ಮನುಜಶಾರ್ದೂಲ! ಹೀಗೆ ಶತ್ರುಗಳನ್ನು ಸಂಹರಿಸಲು ದೇವತೆಗಳು ಉತ್ತಮ ರಥವನ್ನು ಸಿದ್ಧಗೊಳಿಸಲು ಶಂಕರನು ಆ ರಥದಲ್ಲಿ ತನ್ನ ಮುಖ್ಯ ಆಯುಧಗಳನ್ನು ಇರಿಸಿದನು.
08024078c ರಥಯಷ್ಟಿಂ ವಿಯತ್ಕೃಷ್ಟಾಂ ಸ್ಥಾಪಯಾಮಾಸ ಗೋವೃಷಂ।।
08024079a ಬ್ರಹ್ಮದಂಡಃ ಕಾಲದಂಡೋ ರುದ್ರದಂಡಸ್ತಥಾ ಜ್ವರಃ।
08024079c ಪರಿಸ್ಕಂದಾ ರಥಸ್ಯಾಸ್ಯ ಸರ್ವತೋದಿಶಮುದ್ಯತಾಃ।।
ಆಕಾಶವನ್ನೇ ರಥಯಷ್ಟಿಯನ್ನಾಗಿಸಿ ಅದರಲ್ಲಿ ನಂದಿಯನ್ನು ಸ್ಥಾಪಿಸಿದನು. ಬ್ರಹ್ಮದಂಡ, ಕಾಲದಂಡ, ರುದ್ರದಂಡ ಮತ್ತು ಜ್ವರಗಳು ಆ ರಥದ ಪಾರ್ಶ್ವರಕ್ಷಕರಾಗಿ ಆಯುಧಗಳನ್ನು ಮೇಲೆತ್ತಿ ನಿಂತವು.
08024080a ಅಥರ್ವಾಂಗಿರಸಾವಾಸ್ತಾಂ ಚಕ್ರರಕ್ಷೌ ಮಹಾತ್ಮನಃ।
08024080c ಋಗ್ವೇದಃ ಸಾಮವೇದಶ್ಚ ಪುರಾಣಂ ಚ ಪುರಹ್ಸರಾಃ।।
ಆ ಮಹಾತ್ಮನ ಚಕ್ರರಕ್ಷಕರಾಗಿ ಅಥರ್ವ ಮತ್ತು ಆಂಗಿರಸರಿದ್ದರು. ಋಗ್ವೇದ, ಸಾಮವೇದ ಮತ್ತು ಪುರಾಣಗಳು ಮುಂದೆಹೋಗುವ ಯೋಧರಾಗಿದ್ದವು.
08024081a ಇತಿಹಾಸಯಜುರ್ವೇದೌ ಪೃಷ್ಠರಕ್ಷೌ ಬಭೂವತುಃ।
08024081c ದಿವ್ಯಾ ವಾಚಶ್ಚ ವಿದ್ಯಾಶ್ಚ ಪರಿಪಾರ್ಶ್ವಚರಾಃ ಕೃತಾಃ।।
ಇತಿಹಾಸ ಯಜುರ್ವೇದಗಳು ರಥದ ಹಿಂಬಾಗದ ರಕ್ಷಕರಾಗಿದ್ದರು. ದಿವ್ಯವಾಣಿ ಮತ್ತು ವಿದ್ಯೆಗಳು ರಥದ ಪರಿಪಾರ್ಶ್ವಚರರಾಗಿದ್ದರು.
08024082a ತೋತ್ತ್ರಾದಯಶ್ಚ ರಾಜೇಂದ್ರ ವಷಟ್ಕಾರಸ್ತಥೈವ ಚ।
08024082c ಓಂಕಾರಶ್ಚ ಮುಖೇ ರಾಜನ್ನತಿಶೋಭಾಕರೋಽಭವತ್।।
ರಾಜನ್! ರಾಜೇಂದ್ರ! ಸ್ತೋತ್ರ, ಕವಚ, ವಷಟ್ಕಾರ, ಓಂಕಾರಗಳು ರಥದ ಮುಖಭಾಗದಲ್ಲಿದ್ದು ಶೋಭಾಯಮಾನಗೊಳಿಸಿದವು.
08024083a ವಿಚಿತ್ರಂ ಋತುಭಿಃ ಷಡ್ಭಿಃ ಕೃತ್ವಾ ಸಂವತ್ಸರಂ ಧನುಃ।
08024083c ತಸ್ಮಾನೄಣಾಂ ಕಾಲರಾತ್ರಿರ್ಜ್ಯಾ ಕೃತಾ ಧನುಷೋಽಜರಾ।।
ಆರು ಋತುಗಳ ಸಂವತ್ಸರದಿಂದ ವಿಚಿತ್ರ ಧನುಸ್ಸನ್ನು ಮಾಡಿಕೊಂಡು ಆ ಅಜರನು ಮನುಷ್ಯರ ಕಾಲರಾತ್ರಿಯನ್ನು ಧನುಸ್ಸಿನ ಶಿಂಜಿನಿಯನ್ನಾಗಿ ಮಾಡಿಕೊಂಡನು.
08024084a ಇಷುಶ್ಚಾಪ್ಯಭವದ್ವಿಷ್ಣುರ್ಜ್ವಲನಃ ಸೋಮ ಏವ ಚ।
08024084c ಅಗ್ನೀಷೋಮೌ ಜಗತ್ಕೃತ್ಸ್ನಂ ವೈಷ್ಣವಂ ಚೋಚ್ಯತೇ ಜಗತ್।।
ವಿಷ್ಣು, ಅಗ್ನಿ ಮತ್ತು ಸೋಮರು ಬಾಣಗಳಾದರು. ಅಗ್ನಿ-ಸೋಮರಿಂದಲೇ ಇಡೀ ಜಗತ್ತಿದೆಯೆಂದೂ, ಜಗತ್ತು ವೈಷ್ಣವವೆಂದೂ ಹೇಳುತ್ತಾರೆ.
08024085a ವಿಷ್ಣುಶ್ಚಾತ್ಮಾ ಭಗವತೋ ಭವಸ್ಯಾಮಿತತೇಜಸಃ।
08024085c ತಸ್ಮಾದ್ಧನುರ್ಜ್ಯಾಸಂಸ್ಪರ್ಶಂ ನ ವಿಷೇಹುರ್ಹರಸ್ಯ ತೇ।।
ಅಮಿತತೇಜಸ್ವಿ ಭಗವಂತ ವಿಷ್ಣುವೇ ಭವನ ಆತ್ಮಸ್ವರೂಪನು. ಆದುದರಿಂದ ಅವರು ಹರನ ಧನುಸ್ಸು-ಮೌರ್ವಿಗಳ ಸ್ಪರ್ಷವನ್ನೂ ಸಹಿಸಿಕೊಳ್ಳಲಾರದಾಗಿದ್ದರು.
08024086a ತಸ್ಮಿಂ ಶರೇ ತಿಗ್ಮಮನ್ಯುರ್ಮುಮೋಚಾವಿಷಹಂ ಪ್ರಭುಃ।
08024086c ಭೃಗ್ವಂಗಿರೋಮನ್ಯುಭವಂ ಕ್ರೋಧಾಗ್ನಿಮತಿದುಃಸಹಂ।।
ಆ ಶರದಲ್ಲಿ ಪ್ರಭುವು ತನ್ನ ಸುತೀಕ್ಷ್ಣ ಕೋಪವನ್ನು ಭೃಗು-ಅಂಗಿರಸರ ಕೋಪದಿಂದ ಹುಟ್ಟಿದ ಅತಿದುಃಸ್ಸಹ ಕ್ರೋಧಾಗ್ನಿಯನ್ನೂ ಸಂಸ್ಥಾಪಿಸಿದನು.
08024087a ಸ ನೀಲಲೋಹಿತೋ ಧೂಮ್ರಃ ಕೃತ್ತಿವಾಸಾ ಭಯಂಕರಃ।
08024087c ಆದಿತ್ಯಾಯುತಸಂಕಾಶಸ್ತೇಜೋಜ್ವಾಲಾವೃತೋ ಜ್ವಲನ್।।
ಆ ನೀಲಲೋಹಿತ, ಧೂಮ್ರ, ಕೃತ್ತಿವಾಸಾ, ಭಯಂಕರನು ಸಹಸ್ರ ಆದಿತ್ಯರ ತೇಜೋಜ್ವಲಗಳಿಂದ ಆವೃತನಾಗಿ ಪ್ರಜ್ವಲಿಸಿದನು.
08024088a ದುಶ್ಚ್ಯಾವಶ್ಚ್ಯಾವನೋ ಜೇತಾ ಹಂತಾ ಬ್ರಹ್ಮದ್ವಿಷಾಂ ಹರಃ।
08024088c ನಿತ್ಯಂ ತ್ರಾತಾ ಚ ಹಂತಾ ಚ ಧರ್ಮಾಧರ್ಮಾಶ್ರಿತಾಂ ಜನಾನ್।।
ಅಳ್ಳಾಡಿಸುವುದಕ್ಕೆ ಅಸಾಧ್ಯವಾಗಿರುವವರನ್ನೂ ಅಳ್ಳಾಡಿಸಿಬಿಡುವ, ಬ್ರಹ್ಮದ್ವೇಷಿಗಳನ್ನು ಜಯಿಸಿ ಸಂಹರಿಸುವ ಹರನು ಅಧರ್ಮಾಶ್ರಿತ ಜನರನ್ನು ಸಂಹರಿಸಿ ನಿತ್ಯವೂ ಧರ್ಮವನ್ನು ರಕ್ಷಿಸುತ್ತಾನೆ.
08024089a ಪ್ರಮಾಥಿಭಿರ್ಘೋರರೂಪೈರ್ಭೀಮೋದಗ್ರೈರ್ಗಣೈರ್ವೃತಃ।
08024089c ವಿಭಾತಿ ಭಗವಾನ್ ಸ್ಥಾಣುಸ್ತೈರೇವಾತ್ಮಗುಣೈರ್ವೃತಃ।।
ಘೋರರೂಪೀ ಭಯಂಕರ ಉಗ್ರ ಪ್ರಮಾಥಿಗಣಗಳಿಂದ ಆವೃತನಾಗಿ ಅವರ ಆತ್ಮಗುಣಗಳಿಂದ ಆವೃತನಾಗಿ ಭಗವಾನ್ ಸ್ಥಾಣುವು ಪ್ರಕಾಶಿಸಿದನು.
08024090a ತಸ್ಯಾಂಗಾನಿ ಸಮಾಶ್ರಿತ್ಯ ಸ್ಥಿತಂ ವಿಶ್ವಮಿದಂ ಜಗತ್।
08024090c ಜಂಗಮಾಜಂಗಮಂ ರಾಜಂ ಶುಶುಭೇಽದ್ಭುತದರ್ಶನಂ।।
ರಾಜನ್! ಈ ವಿಶ್ವ-ಜಗತ್ತೆಲ್ಲವೂ, ಜಂಗಮಾಜಂಗಮಗಳೆಲ್ಲವೂ ಆ ಅದ್ಭುತದರ್ಶನನ ಅಂಗಗಳನ್ನು ಸಮಾಶ್ರಯಿಸಿ ಶೋಭಿಸಿದವು.
08024091a ದೃಷ್ಟ್ವಾ ತು ತಂ ರಥಂ ದಿವ್ಯಂ ಕವಚೀ ಸ ಶರಾಸನೀ।
08024091c ಬಾಣಮಾದತ್ತ ತಂ ದಿವ್ಯಂ ಸೋಮವಿಷ್ಣ್ವಗ್ನಿಸಂಭವಂ।।
ಆ ದಿವ್ಯರಥವನ್ನು ನೋಡಿ ಕವಚ-ಧನುಸ್ಸುಗಳನ್ನು ಹಿಡಿದಿದ್ದ ಶಿವನು ಸೋಮ-ವಿಷ್ಣು-ಅಗ್ನಿಸಂಭವ ಬಾಣವನ್ನು ತೆಗೆದುಕೊಂಡನು.
08024092a ತಸ್ಯ ವಾಜಾಂಸ್ತತೋ ದೇವಾಃ ಕಲ್ಪಯಾಂ ಚಕ್ರಿರೇ ವಿಭೋಃ।
08024092c ಪುಣ್ಯಗಂದವಹಂ ರಾಜಂ ಶ್ವಸನಂ ರಾಜಸತ್ತಮ।।
ರಾಜನ್! ರಾಜಸತ್ತಮ! ಆಗ ವಿಭು ದೇವತೆಗಳು ವಾಯುವನ್ನು ಪುಣ್ಯಗಂಧಯುಕ್ತ ಗಾಳಿಯನ್ನು ಬೀಸಲು ನಿಯುಕ್ತಗೊಳಿಸಿದರು.
08024093a ತಮಾಸ್ಥಾಯ ಮಹಾದೇವಸ್ತ್ರಾಸಯನ್ದೈವತಾನ್ಯಪಿ।
08024093c ಆರುರೋಹ ತದಾ ಯತ್ತಃ ಕಂಪಯನ್ನಿವ ರೋದಸೀ।।
ಆಗ ಮಹಾದೇವನು ದೇವತೆಗಳನ್ನೂ ಭಯಗೊಳಿಸುತ್ತಾ ಭೂಮಿಯನ್ನು ನಡುಗಿಸುತ್ತಾ ರಥವನ್ನೇರಿದನು.
08024094a ಸ ಶೋಭಮಾನೋ ವರದಃ ಖಡ್ಗೀ ಬಾಣೀ ಶರಾಸನೀ।
08024094c ಹಸನ್ನಿವಾಬ್ರವೀದ್ದೇವೋ ಸಾರಥಿಃ ಕೋ ಭವಿಷ್ಯತಿ।।
ಖಡ್ಗ, ಬಾಣ, ಧನುಸ್ಸುಗಳನ್ನು ಧರಿಸಿ ಶೋಭಾಯಮಾನನಾಗಿದ್ದ ಆ ವರದನು ನಸುನಗುತ್ತಾ ಸಾರಥಿಯು ಯಾರಾಗುತ್ತಾನೆ ಎಂದು ದೇವತೆಗಳನ್ನು ಕೇಳಿದನು.
08024095a ತಂ ಅಬ್ರುವನ್ದೇವಗಣಾ ಯಂ ಭವಾನ್ಸನ್ನಿಯೋಕ್ಷ್ಯತೇ।
08024095c ಸ ಭವಿಷ್ಯತಿ ದೇವೇಶ ಸಾರಥಿಸ್ತೇ ನ ಸಂಶಯಃ।।
ದೇವಗಣಗಳು ಅವನಿಗೆ ಹೇಳಿದರು: “ದೇವೇಶ! ಯಾರನ್ನು ನೀನು ನಿಯೋಜಿಸುತ್ತೀಯೋ ಅವನೇ ನಿನಗೆ ಸಾರಥಿಯಾಗುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.”
08024096a ತಾನಬ್ರವೀತ್ಪುಪುನರ್ದೇವೋ ಮತ್ತಃ ಶ್ರೇಷ್ಠತರೋ ಹಿ ಯಃ।
08024096c ತಂ ಸಾರಥಿಂ ಕುರುಧ್ವಂ ಮೇ ಸ್ವಯಂ ಸಂಚಿಂತ್ಯ ಮಾಚಿರಂ।।
ದೇವನು ಅವರಿಗೆ ಪುನಃ ಹೇಳಿದನು: “ನಿಮ್ಮಲ್ಲಿ ನನಗಿಂತಲೂ ಶ್ರೇಷ್ಠತರನಾದವನನ್ನು ನನ್ನ ಸಾರಥಿಯನ್ನಾಗಿ ಮಾಡಿ. ತಡಮಾಡಬೇಡಿ!”
08024097a ಏತಚ್ಚ್ರುತ್ವಾ ತತೋ ದೇವಾ ವಾಕ್ಯಮುಕ್ತಂ ಮಹಾತ್ಮನಾ।
08024097c ಗತ್ವಾ ಪಿತಾಮಹಂ ದೇವಂ ಪ್ರಸಾದ್ಯೈವಂ ವಚೋಽಬ್ರುವನ್।।
ಮಹಾತ್ಮನಾದ ಅವನ ಆ ಮಾತನ್ನು ಕೇಳಿ ದೇವತೆಗಳು ಪಿತಾಮಹನಲ್ಲಿಗೆ ಹೋಗಿ ದೇವನನ್ನು ಸ್ತುತಿಸಿ ಅವನಿಗೆ ಹೇಳಿದರು:
08024098a ದೇವ ತ್ವಯೇದಂ ಕಥಿತಂ ತ್ರಿದಶಾರಿನಿಬರ್ಹಣಂ।
08024098c ತಥಾ ಚ ಕೃತಮಸ್ಮಾಭಿಃ ಪ್ರಸನ್ನೋ ವೃಷಭಧ್ವಜಃ।।
“ದೇವ! ತ್ರಿದಶರ ಶತ್ರುಗಳನ್ನು ನಾಶಗೊಳಿಸಲು ನೀನು ಹೇಳಿದಂತೆಯೇ ನಾವು ಮಾಡಿದ್ದೇವೆ. ವೃಷಭದ್ವಜನು ನಮ್ಮ ಮೇಲೆ ಪ್ರಸನ್ನನಾಗಿದ್ದಾನೆ.
08024099a ರಥಶ್ಚ ವಿಹಿತೋಽಸ್ಮಾಭಿರ್ವಿಚಿತ್ರಾಯುಧಸಂವೃತಃ।
08024099c ಸಾರಥಿಂ ತು ನ ಜಾನೀಮಃ ಕಃ ಸ್ಯಾತ್ತಸ್ಮಿನ್ರಥೋತ್ತಮೇ।।
ವಿಚಿತ್ರ ಆಯುಧಗಳಿಂದ ಕೂಡಿರುವ ರಥವನ್ನೂ ನಾವು ಸಜ್ಜುಗೊಳಿಸಿದ್ದೇವೆ. ಆದರೆ ಆ ಉತ್ತಮ ರಥದಲ್ಲಿ ಸಾರಥಿಯು ಯಾರಾಗಬಲ್ಲರೆಂದು ನಮಗೆ ತಿಳಿದಿಲ್ಲ.
08024100a ತಸ್ಮಾದ್ವಿಧೀಯತಾಂ ಕಶ್ಚಿತ್ಸಾರಥಿರ್ದೇವಸತ್ತಮ।
08024100c ಸಫಲಾಂ ತಾಂ ಗಿರಂ ದೇವ ಕರ್ತುಮರ್ಹಸಿ ನೋ ವಿಭೋ।।
ಆದುದರಿಂದ ದೇವಸತ್ತಮ! ಯಾರಾದರೂ ಸಾರಥಿಯನ್ನು ನಿಯೋಜಿಸಬೇಕು. ವಿಭೋ! ದೇವ! ನಮಗೆ ನೀನು ನೀಡಿದ ವಚನವನ್ನು ಸಫಲಗೊಳಿಸಿಕೊಡಬೇಕು!
08024101a ಏವಮಸ್ಮಾಸು ಹಿ ಪುರಾ ಭಗವನ್ನುಕ್ತವಾನಸಿ।
08024101c ಹಿತಂ ಕರ್ತಾಸ್ಮಿ ಭವತಾಮಿತಿ ತತ್ಕರ್ತುಮರ್ಹಸಿ।।
ಭಗವನ್! “ನಿಮಗೆ ಹಿತವಾದುದನ್ನು ಮಾಡುತ್ತೇನೆ!” ಎಂದು ನೀನು ನಮಗೆ ಹಿಂದೆ ಹೇಳಿದ್ದೆ. ಅದನ್ನು ನೀನು ಮಾಡಿಕೊಡಬೇಕು!
08024102a ಸ ದೇವ ಯುಕ್ತೋ ರಥಸತ್ತಮೋ ನೋ ದುರಾವರೋ ದ್ರಾವಣಃ ಶಾತ್ರವಾಣಾಂ।
08024102c ಪಿನಾಕಪಾಣಿರ್ವಿಹಿತೋಽತ್ರ ಯೋದ್ಧಾ ವಿಭೀಷಯನ್ದಾನವಾನುದ್ಯತೋಽಸೌ।।
ನಮ್ಮ ಶತ್ರುಗಳನ್ನು ಪಲಾಯನಗೊಳಿಸಬಲ್ಲ, ಶತ್ರುಗಳಿಗೆ ದುರ್ಗಮವಾದ ಆ ಉತ್ತಮ ರಥದಲ್ಲಿ ಕುಳಿತು ಯೋದ್ಧಾ ಪಿನಾಕಪಾಣಿಯು ದಾನವರನ್ನು ಭಯಗೊಳಿಸುತ್ತಾ ಯುದ್ಧೋನ್ನತನಾಗಿದ್ದಾನೆ.
08024103a ತಥೈವ ವೇದಾಶ್ಚತುರೋ ಹಯಾಗ್ರ್ಯಾ ಧರಾ ಸಶೈಲಾ ಚ ರಥೋ ಮಹಾತ್ಮನ್।
08024103c ನಕ್ಷತ್ರವಂಶೋಽನುಗತೋ ವರೂಥೇ ಯಸ್ಮಿನ್ಯೋದ್ಧಾ ಸಾರಥಿನಾಭಿರಕ್ಷ್ಯಃ।।
ಮಹಾತ್ಮನ್! ಸಶೈಲ ಧರಣಿಯೇ ರಥವಾಗಿದೆ. ನಾಲ್ಕು ವೇದಗಳು ಕುದುರೆಗಳಾಗಿವೆ. ಸಾರಥಿಯಿಂದ ರಕ್ಷಿತನಾದ ಯೋಧನಿರುವ ಆ ರಥಕ್ಕೆ ನಕ್ಷತ್ರವಂಶಗಳೇ ವರೂಥಗಳಾಗಿ ಹಿಂಬಾಲಿಸುತ್ತವೆ.
08024104a ತತ್ರ ಸಾರಥಿರೇಷ್ಟವ್ಯಃ ಸರ್ವೈರೇತೈರ್ವಿಶೇಷವಾನ್।
08024104c ತತ್ಪ್ರತಿಷ್ಠೋ ರಥೋ ದೇವ ಹಯಾ ಯೋದ್ಧಾ ತಥೈವ ಚ।
08024104e ಕವಚಾನಿ ಚ ಶಸ್ತ್ರಾಣಿ ಕಾರ್ಮುಕಂ ಚ ಪಿತಾಮಹ।।
ದೇವ! ಪಿತಾಮಹ! ಇತರರಿಗಿಂತಲೂ ಸರ್ವಶ್ರೇಷ್ಠನಾದ ಸಾರಥಿಯು ಆ ಪ್ರತಿಷ್ಠ ರಥಕ್ಕೆ, ಕುದುರೆಗಳಿಗೆ, ಯೋದ್ಧನಿಗೆ, ಕವಚ, ಶಸ್ತ್ರಗಳು ಮತ್ತು ಕಾರ್ಮುಕಗಳಿಗೆ ಬೇಕಾಗಿದೆ.
08024105a ತ್ವಾಂ ಋತೇ ಸಾರಥಿಂ ತತ್ರ ನಾನ್ಯಂ ಪಶ್ಯಾಮಹೇ ವಯಂ।
08024105c ತ್ವಂ ಹಿ ಸರ್ವೈರ್ಗುಣೈರ್ಯುಕ್ತೋ ದೇವತಾಭ್ಯೋಽಧಿಕಃ ಪ್ರಭೋ।
08024105e ಸಾರಥ್ಯೇ ತೂರ್ಣಮಾರೋಹ ಸಂಯಚ್ಚ ಪರಮಾನ್ ಹಯಾನ್।।
ನಿನ್ನನ್ನು ಬಿಟ್ಟು ಬೇರೆ ಯಾವ ಸಾರಥಿಯೂ ನಮಗೆ ಕಾಣುವುದಿಲ್ಲ. ಪ್ರಭೋ! ಸರ್ವಗುಣಯುಕ್ತನಾದ ನೀನೇ ದೇವತೆಗಳಿಗೂ ಅಧಿಕನಾಗಿರುವೆ. ಬೇಗನೆ ಸಾರಥ್ಯವನ್ನು ವಹಿಸಿಕೊಂಡು ಆ ಉತ್ತಮ ಕುದುರೆಗಳನ್ನು ನಿಯಂತ್ರಿಸು.”
08024106a ಇತಿ ತೇ ಶಿರಸಾ ನತ್ವಾ ತ್ರಿಲೋಕೇಶಂ ಪಿತಾಮಹಂ।
08024106c ದೇವಾಃ ಪ್ರಸಾದಯಾಮಾಸುಃ ಸಾರಥ್ಯಾಯೇತಿ ನಃ ಶ್ರುತಂ।।
ಹೀಗೆ ತ್ರಿಲೋಕೇಶ ಪಿತಾಮಹನಿಗೆ ಶಿರಬಾಗಿ ನಮಸ್ಕರಿಸಿ ದೇವತೆಗಳು ಸಾರಥಿಯಾಗಲು ಅವನನ್ನು ಒಪ್ಪಿಸಿದರು.
08024107 ಬ್ರಹ್ಮೋವಾಚ।
08024107a ನಾತ್ರ ಕಿಂ ಚಿನ್ಮೃಷಾ ವಾಕ್ಯಂ ಯದುಕ್ತಂ ವೋ ದಿವೌಕಸಃ।
08024107c ಸಂಯಚ್ಚಾಮಿ ಹಯಾನೇಷ ಯುಧ್ಯತೋ ವೈ ಕಪರ್ದಿನಃ।।
ಬ್ರಹ್ಮನು ಹೇಳಿದನು: “ದಿವೌಕಸರೇ! ನೀವು ಹೇಳಿದ ಮಾತಿನಲ್ಲಿ ಸ್ವಲ್ಪವೂ ಸುಳ್ಳಿಲ್ಲ! ಕಪರ್ದಿನಿಯು ಯುದ್ಧಮಾಡುವಾಗ ನಾನು ಕುದುರೆಗಳನ್ನು ನಿಯಂತ್ರಿಸುತ್ತೇನೆ.”
08024108a ತತಃ ಸ ಭಗವಾನ್ದೇವೋ ಲೋಕಸ್ರಷ್ಟಾ ಪಿತಾಮಹಃ।
08024108c ಸಾರಥ್ಯೇ ಕಲ್ಪಿತೋ ದೇವೈರೀಶಾನಸ್ಯ ಮಹಾತ್ಮನಃ।।
ಆಗ ಲೋಕಸ್ರಷ್ಟಾ ಭಗವಾನ್ ದೇವ ಪಿತಾಮಹನು ದೇವತೆಗಳಿಂದ ಮಹಾತ್ಮ ಈಶಾನನ ಸಾರಥಿಯಾಗಿ ಕಲ್ಪಿತನಾದನು.
08024109a ತಸ್ಮಿನ್ನಾರೋಹತಿ ಕ್ಷಿಪ್ರಂ ಸ್ಯಂದನಂ ಲೋಕಪೂಜಿತೇ।
08024109c ಶಿರೋಭಿರಗಮಂಸ್ತೂರ್ಣಂ ತೇ ಹಯಾ ವಾತರಂಹಸಃ।।
ಆ ಲೋಕಪೂಜಿತ ರಥದಲ್ಲಿ ಅವನು ಬೇಗನೇ ಹತ್ತಿ ಕುಳಿತುಕೊಳ್ಳಲು ವಾಯುವಿನ ವೇಗಯುಕ್ತ ಕುದುರೆಗಳು ಕೂಡಲೇ ಮುಗ್ಗರಿಸಿದವು.
08024110a ಮಹೇಶ್ವರೇ ತ್ವಾರುಹತಿ ಜಾನುಭ್ಯಾಮಗಮನ್ಮಹೀಂ।
08024111a ಅಭೀಶೂನ್ ಹಿ ತ್ರಿಲೋಕೇಶಃ ಸಂಗೃಹ್ಯ ಪ್ರಪಿತಾಮಹಃ।
08024111c ತಾನಶ್ವಾಂಶ್ಚೋದಯಾಮಾಸ ಮನೋಮಾರುತರಂಹಸಃ।।
ಮಹಿಯನ್ನು ಕಾಲುಗುರಿನಿಂದ ಮೆಟ್ಟಿ ಮಹೇಶ್ವರನು ಮೇಲೇರಲು ತ್ರಿಲೋಕೇಶ ಪ್ರಪಿತಾಮಹನು ಕಡಿವಾಣಗಳನ್ನು ಹಿಡಿದುಕೊಂಡು ಆ ಮನೋಮಾರುತಹಂಸಗಳಂತೆ ಓಡುವ ಕುದುರೆಗಳನ್ನು ಪ್ರಚೋದಿಸಿದನು.
08024112a ತತೋಽಧಿರೂಢೇ ವರದೇ ಪ್ರಯಾತೇ ಚಾಸುರಾನ್ಪ್ರತಿ।
08024112c ಸಾಧು ಸಾಧ್ವಿತಿ ವಿಶ್ವೇಶಃ ಸ್ಮಯಮಾನೋಽಭ್ಯಭಾಷತ।।
ಆ ವರದನು ರಥಾಧಿರೂಢನಾಗಿ ಅಸುರರ ಕಡೆ ಹೊರಡಲು ವಿಶ್ವೇಶನು ನಸುನಗುತ್ತಾ “ಸಾಧು! ಸಾಧು!” ಎಂದು ಹೊಗಳಿದನು.
08024113a ಯಾಹಿ ದೇವ ಯತೋ ದೈತ್ಯಾಶ್ಚೋದಯಾಶ್ವಾನತಂದ್ರಿತಃ।
08024113c ಪಶ್ಯ ಬಾಹ್ವೋರ್ಬಲಂ ಮೇಽದ್ಯ ನಿಘ್ನತಃ ಶಾತ್ರವಾನ್ರಣೇ।।
“ದೇವ! ಸಾವಧಾನವಾಗಿ ಕುದುರೆಗಳನ್ನು ದೈತ್ಯರಿರುವಲ್ಲಿಗೆ ಕೊಂಡೊಯ್ಯಿ. ರಣದಲ್ಲಿ ಶತ್ರುಗಳನ್ನು ಸಂಹರಿಸುವ ನನ್ನ ಬಾಹುಬಲವನ್ನು ಇಂದು ನೋಡು!”
08024114a ತತಸ್ತಾಂಶ್ಚೋದಯಾಮಾಸ ವಾಯುವೇಗಸಮಾಂ ಜವೇ।
08024114c ಯೇನ ತತ್ತ್ರಿಪುರಂ ರಾಜನ್ದೈತ್ಯದಾನವರಕ್ಷಿತಂ।।
ರಾಜನ್! ಆಗ ಅವನು ವೇಗದಲ್ಲಿ ವಾಯುವೇಗಸಮನಾದ ಆ ಅಶ್ವಗಳನ್ನು ದೈತ್ಯದಾನವರಿಂದ ರಕ್ಷಿತ ತ್ರಿಪುರದ ಕಡೆಗೆ ನಡೆಸಿದನು.
08024115a ಅಥಾಧಿಜ್ಯಂ ಧನುಃ ಕೃತ್ವಾ ಶರ್ವಃ ಸಂಧಾಯ ತಂ ಶರಂ।
08024115c ಯುಕ್ತ್ವಾ ಪಾಶುಪತಾಸ್ತ್ರೇಣ ತ್ರಿಪುರಂ ಸಮಚಿಂತಯತ್।।
ಕೂಡಲೆ ಶರ್ವನು ಧನುಸ್ಸಿಗೆ ಹೆದೆಯನ್ನೇರಿಸಿ ಆ ಶರವನ್ನು ಹೂಡಿ ಪಾಶುಪತಾಸ್ತ್ರವನ್ನು ಅನುಸಂಧಾನಮಾಡಿ ತ್ರಿಪುರವನ್ನು ನೆನೆಸಿಕೊಂಡನು.
08024116a ತಸ್ಮಿನ್ ಸ್ಥಿತೇ ತದಾ ರಾಜನ್ ಕ್ರುದ್ಧೇ ವಿಧೃತಕಾರ್ಮುಕೇ।
08024116c ಪುರಾಣಿ ತಾನಿ ಕಾಲೇನ ಜಗ್ಮುರೇಕತ್ವತಾಂ ತದಾ।।
ರಾಜನ್! ಹಾಗೆ ಧನುಸ್ಸನ್ನು ಎಳೆದು ಕ್ರುದ್ಧನಾಗಿ ಅವನು ನಿಂತಿರಲು ಕಾಲಾಂತರದಲ್ಲಿ ಆ ಪುರಗಳು ಒಂದೇ ಸಾಲಿನಲ್ಲಿ ಬಂದವು.
08024117a ಏಕೀಭಾವಂ ಗತೇ ಚೈವ ತ್ರಿಪುರೇ ಸಮುಪಾಗತೇ।
08024117c ಬಭೂವ ತುಮುಲೋ ಹರ್ಷೋ ದೈವತಾನಾಂ ಮಹಾತ್ಮನಾಂ।।
ತ್ರಿಪುರಗಳು ಒಂದೇ ಸಾಲಿನಲ್ಲಿ ಬಂದು ಸೇರಲು ಮಹಾತ್ಮ ದೇವತೆಗಳಲ್ಲಿ ತುಮುಲ ಹರ್ಷೋದ್ಗಾರವಾಯಿತು.
08024118a ತತೋ ದೇವಗಣಾಃ ಸರ್ವೇ ಸಿದ್ಧಾಶ್ಚ ಪರಮರ್ಷಯಃ।
08024118c ಜಯೇತಿ ವಾಚೋ ಮುಮುಚುಃ ಸಂಸ್ತುವಂತೋ ಮುದಾನ್ವಿತಾಃ।।
ಆಗ ದೇವಗಣಗಳೆಲ್ಲವೂ, ಸಿದ್ಧ-ಪರಮ ಋಷಿಗಳೂ ಮುದಾನ್ವಿತರಾಗಿ “ಜಯ! ಜಯ!” ಎಂದು ಉದ್ಗರಿಸಿದರು.
08024119a ತತೋಽಗ್ರತಃ ಪ್ರಾದುರಭೂತ್ತ್ರಿಪುರಂ ಜಘ್ನುಷೋಽಸುರಾನ್।
08024119c ಅನಿರ್ದೇಶ್ಯೋಗ್ರವಪುಷೋ ದೇವಸ್ಯಾಸಹ್ಯತೇಜಸಃ।।
ಆಗ ಅಸುರರನ್ನು ಸಂಹರಿಸುತ್ತಿದ್ದ ಅವರ್ಣನೀಯ, ಉಗ್ರರೂಪೀ, ಸಹಿಸಲಸಾಧ್ಯ ತೇಜಸ್ಸಿನಿಂದ ಕೂಡಿದ್ದ ದೇವನ ಎದುರಿಗೆ ತ್ರಿಪುರಗಳು ಒಟ್ಟಿಗೇ ಪ್ರಕಟವಾದವು.
08024120a ಸ ತದ್ವಿಕೃಷ್ಯ ಭಗವಾನ್ದಿವ್ಯಂ ಲೋಕೇಶ್ವರೋ ಧನುಃ।
08024120c ತ್ರೈಲೋಕ್ಯಸಾರಂ ತಮಿಷುಂ ಮುಮೋಚ ತ್ರಿಪುರಂ ಪ್ರತಿ।
08024120e ತತ್ಸಾಸುರಗಣಂ ದಗ್ಧ್ವಾ ಪ್ರಾಕ್ಷಿಪತ್ಪಶ್ಚಿಮಾರ್ಣವೇ।।
ಭಗವಾನ್ ಲೋಕೇಶ್ವರನು ಆ ಧನುಸ್ಸನ್ನು ಸೆಳೆದು ತ್ರೈಲೋಕ್ಯಸಾರವಾಗಿದ್ದ ಆ ಬಾಣವನ್ನು ತ್ರಿಪುರದ ಕಡೆ ಪ್ರಯೋಗಿಸಿದನು. ಅದು ಅಲ್ಲಿರುವ ಅಸುರಗಣಗಳೊಂದಿಗೆ ತ್ರಿಪುರಗಳನ್ನು ಸುಟ್ಟು ಪಶ್ಚಿಪಸಮುದ್ರದಲ್ಲಿ ಹಾಕಿಬಿಟ್ಟಿತು.
08024121a ಏವಂ ತತ್ತ್ರಿಪುರಂ ದಗ್ಧಂ ದಾನವಾಶ್ಚಾಪ್ಯಶೇಷತಃ।
08024121c ಮಹೇಶ್ವರೇಣ ಕ್ರುದ್ಧೇನ ತ್ರೈಲೋಕ್ಯಸ್ಯ ಹಿತೈಷಿಣಾ।।
ಹೀಗೆ ದಾನವರ್ಯಾರನ್ನೂ ಉಳಿಸದೇ ತ್ರೈಲೋಕ್ಯದ ಹಿತೈಷಿಣಿಯಾದ ಮಹೇಶ್ವರನು ಕ್ರೋಧದಿಂದ ಆ ತ್ರಿಪುರಗಳನ್ನು ಸುಟ್ಟುಹಾಕಿದನು.
08024122a ಸ ಚಾತ್ಮಕ್ರೋಧಜೋ ವಹ್ನಿರ್ಹಾಹೇತ್ಯುಕ್ತ್ವಾ ನಿವಾರಿತಃ।
08024122c ಮಾ ಕಾರ್ಷೀರ್ಭಸ್ಮಸಾಲ್ಲೋಕಾನಿತಿ ತ್ರ್ಯಕ್ಷೋಽಬ್ರವೀಚ್ಚ ತಂ।।
ಆತ್ಮಕ್ರೋಧದಿಂದ ಹುಟ್ಟಿದ ಅಗ್ನಿಯನ್ನೂ ಅವನು ಹಾಹಾ ಎಂದು ಪ್ರಶಮನಗೊಳಿಸಿ, ಅದಕ್ಕೆ “ಲೋಕಗಳನ್ನೆಲ್ಲ ಭಸ್ಮೀಕೃತವನ್ನಾಗಿಸಬೇಡ!” ಎಂದನು.
08024123a ತತಃ ಪ್ರಕೃತಿಮಾಪನ್ನಾ ದೇವಾ ಲೋಕಾಸ್ತಥರ್ಷಯಃ।
08024123c ತುಷ್ಟುವುರ್ವಾಗ್ಭಿರರ್ಥ್ಯಾಭಿಃ ಸ್ಥಾಣುಮಪ್ರತಿಮೌಜಸಂ।।
ಆಗ ಪ್ರಕೃತಿಯನ್ನೂ ಸೇರಿ ದೇವತೆಗಳೂ, ಮೂರು ಲೋಕಗಳೂ, ಋಷಿಗಳೂ ಸಂತೋಷಗೊಂಡು ಅಮಿತ ತೇಜಸ್ವಿ ಸ್ಥಾಣುವನ್ನು ಸ್ತುತಿಗಳಿಂದ ಸ್ತೋತ್ರಮಾಡಿದರು.
08024124a ತೇಽನುಜ್ಞಾತಾ ಭಗವತಾ ಜಗ್ಮುಃ ಸರ್ವೇ ಯಥಾಗತಂ।
08024124c ಕೃತಕಾಮಾಃ ಪ್ರಸನ್ನೇನ ಪ್ರಜಾಪತಿಮುಖಾಃ ಸುರಾಃ।।
ಭಗವಂತನ ಅನುಜ್ಞೆಯನ್ನು ಪಡೆದು ಪ್ರಜಾಪತಿಯ ನಾಯಕತ್ವದಲ್ಲಿದ್ದ ಸುರರು ಎಲ್ಲರೂ ಬಯಸಿದುದು ಆಯಿತೆಂದು ಪ್ರಸನ್ನರಾಗಿ ಎಲ್ಲಿಂದ ಬಂದಿದ್ದರೋ ಅಲ್ಲಿಗೆ ತೆರಳಿದರು.
08024125a ಯಥೈವ ಭಗವಾನ್ಬ್ರಹ್ಮಾ ಲೋಕಧಾತಾ ಪಿತಾಮಹಃ।
08024125c ಸಮ್ಯಚ್ಚ ತ್ವಂ ಹಯಾನಸ್ಯ ರಾಧೇಯಸ್ಯ ಮಹಾತ್ಮನಃ।।
ಲೋಕಧಾತಾ ಪಿತಾಮಹ ಭಗವಾನ್ ಬ್ರಹ್ಮನು ಹೇಗೋ ಹಾಗೆ ನೀನು ಮಹಾತ್ಮ ರಾಧೇಯನ ಕುದುರೆಗಳನ್ನು ನಡೆಸು.
08024126a ತ್ವಂ ಹಿ ಕೃಷ್ಣಾಚ್ಚ ಕರ್ಣಾಚ್ಚ ಫಲ್ಗುನಾಚ್ಚ ವಿಶೇಷತಃ।
08024126c ವಿಶಿಷ್ಟೋ ರಾಜಶಾರ್ದೂಲ ನಾಸ್ತಿ ತತ್ರ ವಿಚಾರಣಾ।।
ರಾಜಶಾರ್ದೂಲ! ಏಕೆಂದರೆ ನೀನು ಕೃಷ್ಣನಿಗೂ ಕರ್ಣನಿಗೂ ವಿಶೇಷವಾಗಿ ಫಲ್ಗುನನಿಗೂ ವಿಶಿಷ್ಟನಾದವನು. ಅದರಲ್ಲಿ ವಿಚಾರಮಾಡುವಂಥದೇನೂ ಇಲ್ಲ.
08024127a ಯುದ್ಧೇ ಹ್ಯಯಂ ರುದ್ರಕಲ್ಪಸ್ತ್ವಂ ಚ ಬ್ರಹ್ಮಸಮೋಽನಘ।
08024127c ತಸ್ಮಾಚ್ಚಕ್ತೌ ಯುವಾಂ ಜೇತುಂ ಮಚ್ಚತ್ರೂಂಸ್ತಾವಿವಾಸುರಾನ್।।
ಯುದ್ಧದಲ್ಲಿ ಈ ಕರ್ಣನು ರುದ್ರಕಲ್ಪನು. ಅನಘ! ನೀನು ಬ್ರಹ್ಮನಿಗೆ ಸಮನಾಗಿರುವೆ. ಅವರಿಬ್ಬರೂ ಹೇಗೆ ಅಸುರರನ್ನು ಗೆದ್ದರೋ ಹಾಗೆ ನೀವಿಬ್ಬರೂ ನನ್ನ ಶತ್ರುಗಳನ್ನು ಗೆಲ್ಲಲು ಶಕ್ಯರಾಗಿರುವಿರಿ.
08024128a ಯಥಾ ಶಲ್ಯಾದ್ಯ ಕರ್ಣೋಽಯಂ ಶ್ವೇತಾಶ್ವಂ ಕೃಷ್ಣಸಾರಥಿಂ।
08024128c ಪ್ರಮಥ್ಯ ಹನ್ಯಾತ್ಕೌಂತೇಯಂ ತಥಾ ಶೀಘ್ರಂ ವಿಧೀಯತಾಂ।
08024128e ತ್ವಯಿ ಕರ್ಣಶ್ಚ ರಾಜ್ಯಂ ಚ ವಯಂ ಚೈವ ಪ್ರತಿಷ್ಠಿತಾಃ।।
ಶಲ್ಯ! ಇಂದು ಈ ಕರ್ಣನು ಹೇಗೆ ಕೃಷ್ಣನು ಸಾರಥಿಯಾಗಿರುವ ಶ್ವೇತಾಶ್ವ ಕೌಂತೇಯನನ್ನು ಸದೆಬಡಿದು ಕೊಲ್ಲುವನೋ ಹಾಗೆ ನೀನೂ ಕೂಡ ಶೀಘ್ರವಾಗಿ ಕಾರ್ಯವನ್ನು ಕೈಗೊಳ್ಳಬೇಕಾಗಿದೆ. ರಾಜ್ಯ ಮತ್ತು ನಾವೆಲ್ಲರೂ ನೀನು ಮತ್ತು ಕರ್ಣರನ್ನೇ ಅವಲಂಬಿಸಿದ್ದೇವೆ.
08024129a ಇಮಂ ಚಾಪ್ಯಪರಂ ಭೂಯ ಇತಿಹಾಸಂ ನಿಬೋಧ ಮೇ।
08024129c ಪಿತುರ್ಮಮ ಸಕಾಶೇ ಯಂ ಬ್ರಾಹ್ಮಣಃ ಪ್ರಾಹ ಧರ್ಮವಿತ್।।
ನನ್ನ ತಂದೆಯಲ್ಲಿ ಧರ್ಮವಿದು ಬ್ರಾಹ್ಮಣನೋರ್ವನು ಹೇಳಿದ ಇನ್ನೊಂದು ಇತಿಹಾಸವಿದೆ ಅದನ್ನು ಕೇಳು.
08024130a ಶ್ರುತ್ವಾ ಚೈತದ್ವಚಶ್ಚಿತ್ರಂ ಹೇತುಕಾರ್ಯಾರ್ಥಸಂಹಿತಂ।
08024130c ಕುರು ಶಲ್ಯ ವಿನಿಶ್ಚಿತ್ಯ ಮಾ ಭೂದತ್ರ ವಿಚಾರಣಾ।।
ಶಲ್ಯ! ಕಾರ್ಯ-ಕಾರಣ-ಪ್ರಯೋಜನಗಳಿಂದ ಕೂಡಿದ ಈ ವಿಚಿತ್ರ ವಚನವನ್ನು ಕೇಳಿ ನಿಶ್ಚಯಮಾಡು. ಪುನಃ ಪುನಃ ಯೋಚಿಸಬೇಡ.
08024131a ಭಾರ್ಗವಾಣಾಂ ಕುಲೇ ಜಾತೋ ಜಮದಗ್ನಿರ್ಮಹಾತಪಾಃ।
08024131c ತಸ್ಯ ರಾಮೇತಿ ವಿಖ್ಯಾತಃ ಪುತ್ರಸ್ತೇಜೋಗುಣಾನ್ವಿತಃ।।
ಭಾರ್ಗವರ ಕುಲದಲ್ಲಿ ಮಹಾತಪಸ್ವಿ ಜಮದಗ್ನಿಯು ಜನಿಸಿದನು. ಅವನ ತೇಜೋಗುಣಾನ್ವಿತ ಮಗನು ರಾಮನೆಂದು ವಿಖ್ಯಾತನಾದನು.
08024132a ಸ ತೀವ್ರಂ ತಪ ಆಸ್ಥಾಯ ಪ್ರಸಾದಯಿತವಾನ್ಭವಂ।
08024132c ಅಸ್ತ್ರಹೇತೋಃ ಪ್ರಸನ್ನಾತ್ಮಾ ನಿಯತಃ ಸಂಯತೇಂದ್ರಿಯಃ।।
ಅಸ್ತ್ರಗಳಿಗೋಸ್ಕರವಾಗಿ ಅವನು ಪ್ರಸನ್ನಾತ್ಮನಾಗಿ, ನಿಯತಾತ್ಮನಾಗಿ ಮತ್ತು ಇಂದ್ರಿಯಗಳನ್ನು ಸಂಯಮದಲ್ಲಿರಿಸಿಕೊಂಡು ತೀವ್ರ ತಪಸ್ಸನ್ನಾಚರಿಸಿ ಭವನನ್ನು ತೃಪ್ತಿಗೊಳಿಸಿದನು.
08024133a ತಸ್ಯ ತುಷ್ಟೋ ಮಹಾದೇವೋ ಭಕ್ತ್ಯಾ ಚ ಪ್ರಶಮೇನ ಚ।
08024133c ಹೃದ್ಗತಂ ಚಾಸ್ಯ ವಿಜ್ಞಾಯ ದರ್ಶಯಾಮಾಸ ಶಂಕರಃ।।
ಅವನ ಭಕ್ತಿ ಮತ್ತು ಸಂಯಮಗಳಿಗೆ ಮೆಚ್ಚಿದ ಮಹಾದೇವ ಶಂಕರನು ಅವನ ಹೃದಯದಲ್ಲಿರುವುದನ್ನು ತಿಳಿದು ಪ್ರತ್ಯಕ್ಷನಾದನು.
08024134 ಈಶ್ವರ ಉವಾಚ।
08024134a ರಾಮ ತುಷ್ಟೋಽಸ್ಮಿ ಭದ್ರಂ ತೇ ವಿದಿತಂ ಮೇ ತವೇಪ್ಸಿತಂ।
08024134c ಕುರುಷ್ವ ಪೂತಮಾತ್ಮಾನಂ ಸರ್ವಮೇತದವಾಪ್ಸ್ಯಸಿ।।
ಈಶ್ವರನು ಹೇಳಿದನು: “ರಾಮ! ಸಂತುಷ್ಟನಾಗಿದ್ದೇನೆ. ನಿನಗೆ ಮಂಗಳವಾಗಲಿ! ನೀನು ಬಯಸಿರುವುದು ನನಗೆ ತಿಳಿದಿದೆ. ನಿನ್ನನ್ನು ಪರಿಶುದ್ಧಗೊಳಿಸಿಕೋ! ಬಯಸಿದುದೆಲ್ಲವನ್ನೂ ಪಡೆದುಕೊಳ್ಳುವೆ!
08024135a ದಾಸ್ಯಾಮಿ ತೇ ತದಾಸ್ತ್ರಾಣಿ ಯದಾ ಪೂತೋ ಭವಿಷ್ಯಸಿ।
08024135c ಅಪಾತ್ರಮಸಮರ್ಥಂ ಚ ದಹಂತ್ಯಸ್ತ್ರಾಣಿ ಭಾರ್ಗವ।।
ಭಾರ್ಗವ! ನೀನು ಪವಿತ್ರನಾದಾಗ ನಾನು ನಿನಗೆ ಆ ಅಸ್ತ್ರಗಳನ್ನು ನೀಡುತ್ತೇನೆ. ಅಸ್ತ್ರಗಳು ಅಪಾತ್ರನನ್ನು ಮತ್ತು ಅಸಮರ್ಥನನ್ನು ಸುಟ್ಟುಬಿಡುತ್ತವೆ.”
08024136a ಇತ್ಯುಕ್ತೋ ಜಾಮದಗ್ನ್ಯಸ್ತು ದೇವದೇವೇನ ಶೂಲಿನಾ।
08024136c ಪ್ರತ್ಯುವಾಚ ಮಹಾತ್ಮಾನಂ ಶಿರಸಾವನತಃ ಪ್ರಭುಂ।।
ದೇವದೇವ ಶೂಲಿಯು ಹೀಗೆ ಹೇಳಲು ಜಾಮದಗ್ನಿ ರಾಮನು ಮಹಾತ್ಮ ಪ್ರಭುವಿಗೆ ಶಿರಸಾವಹಿಸಿ ಪ್ರತ್ಯುತ್ತರಿಸಿದನು:
08024137a ಯದಾ ಜಾನಾಸಿ ದೇವೇಶ ಪಾತ್ರಂ ಮಾಮಸ್ತ್ರಧಾರಣೇ।
08024137c ತದಾ ಶುಶ್ರೂಷತೇಽಸ್ತ್ರಾಣಿ ಭವಾನ್ಮೇ ದಾತುಮರ್ಹತಿ।।
“ದೇವೇಶ! ನಾನು ಅಸ್ತ್ರಧಾರಣೆಗೆ ಪಾತ್ರನೆಂದು ನಿನಗೆ ಎಂದು ಅನಿಸುತ್ತದೆಯೋ ಆಗಲೇ ನೀನು ನಿನ್ನ ಶುಶ್ರೂಷಣೆಯಲ್ಲಿ ನಿರತನಾದ ನನಗೆ ದಯಪಾಲಿಸಬೇಕು!””
08024138 ದುರ್ಯೋಧನ ಉವಾಚ।
08024138a ತತಃ ಸ ತಪಸಾ ಚೈವ ದಮೇನ ನಿಯಮೇನ ಚ।
08024138c ಪೂಜೋಪಹಾರಬಲಿಭಿರ್ಹೋಮಮಂತ್ರಪುರಸ್ಕೃತೈಃ।।
08024139a ಆರಾಧಯಿತವಾಂ ಶರ್ವಂ ಬಹೂನ್ವರ್ಷಗಣಾಂಸ್ತದಾ।
08024139c ಪ್ರಸನ್ನಶ್ಚ ಮಹಾದೇವೋ ಭಾರ್ಗವಸ್ಯ ಮಹಾತ್ಮನಃ।।
ದುರ್ಯೋಧನನು ಹೇಳಿದನು: “ಆಗ ಅವನು ತಪಸ್ಸು, ದಮ, ನಿಯಮ, ಪೂಜನ, ಉಪಾಹಾರ, ಬಲಿ, ಹೋಮ, ಮತ್ತು ಮಂತ್ರಾದಿಗಳಿಂದ ಶರ್ವನನ್ನು ಅನೇಕ ವರ್ಷಗಳವರೆಗೆ ಆರಾಧಿಸಿದನು. ಮಹಾತ್ಮ ಭಾರ್ಗವನ ಮೇಲೆ ಮಹಾದೇವನು ಪ್ರಸನ್ನನಾದನು.
08024140a ಅಬ್ರವೀತ್ತಸ್ಯ ಬಹುಶೋ ಗುಣಾನ್ದೇವ್ಯಾಃ ಸಮೀಪತಃ।
08024140c ಭಕ್ತಿಮಾನೇಷ ಸತತಂ ಮಯಿ ರಾಮೋ ದೃಢವ್ರತಃ।।
ಶಂಕರನು ದೇವಿಯ ಸಮೀಪದಲ್ಲಿಯೇ “ದೃಢವ್ರತನಾದ ಈ ರಾಮನಿಗೆ ನನ್ನಲ್ಲಿ ಸತತ ಭಕ್ತಿಯಿದೆ!” ಎಂದು ರಾಮನ ಅನೇಕ ಗುಣಗಳನ್ನು ವರ್ಣಿಸಿದನು.
08024141a ಏವಂ ತಸ್ಯ ಗುಣಾನ್ಪ್ರೀತೋ ಬಹುಶೋಽಕಥಯತ್ಪ್ರಭುಃ।
08024141c ದೇವತಾನಾಂ ಪಿತೄಣಾಂ ಚ ಸಮಕ್ಷಮರಿಸೂದನಃ।।
ಈ ರೀತಿಯ ಅವನ ಗುಣಗಳನ್ನು ಸಂತೋಷಗೊಂಡ ಅರಿಸೂದನ ಪ್ರಭುವು ಅನೇಕ ಬಾರಿ ದೇವತೆಗಳು ಮತ್ತು ಪಿತೃಗಳ ಸಮಕ್ಷಮದಲ್ಲಿ ಹೇಳಿದನು.
08024142a ಏತಸ್ಮಿನ್ನೇವ ಕಾಲೇ ತು ದೈತ್ಯಾ ಆಸನ್ಮಹಾಬಲಾಃ।
08024142c ತೈಸ್ತದಾ ದರ್ಪಮೋಹಾಂದೈರಬಾಧ್ಯಂತ ದಿವೌಕಸಃ।।
ಇದೇ ಸಮಯದಲ್ಲಿ ದೈತ್ಯರು ಮಹಾಬಲಶಾಲಿಗಳಾದರು. ಅವರು ದರ್ಪಮೋಹಗಳಿಂದ ದಿವೌಕಸರನ್ನು ಬಾಧಿಸುತ್ತಿದ್ದರು.
08024143a ತತಃ ಸಂಭೂಯ ವಿಬುಧಾಸ್ತಾನ್ ಹಂತುಂ ಕೃತನಿಶ್ಚಯಾಃ।
08024143c ಚಕ್ರುಃ ಶತ್ರುವಧೇ ಯತ್ನಂ ನ ಶೇಕುರ್ಜೇತುಮೇವ ತೇ।।
ಆಗ ದೇವತೆಗಳೆಲ್ಲರೂ ಒಟ್ಟಾಗಿ ಅವರನ್ನು ಸಂಹರಿಸಲು ನಿಶ್ಚಯಿಸಿ ಶತ್ರುವಧೆಗಾಗಿ ಬಹಳ ಪ್ರಯತ್ನನಡೆಸಿದರು. ಆದರೆ ಅವರನ್ನು ಗೆಲ್ಲರು ಸಾಧ್ಯವಾಗಲಿಲ್ಲ.
08024144a ಅಭಿಗಮ್ಯ ತತೋ ದೇವಾ ಮಹೇಶ್ವರಮಥಾಬ್ರುವನ್।
08024144c ಪ್ರಸಾದಯಂತಸ್ತಂ ಭಕ್ತ್ಯಾ ಜಹಿ ಶತ್ರುಗಣಾನಿತಿ।।
ಆಗ ದೇವತೆಗಳು ಮಹೇಶ್ವರನಲ್ಲಿಗೆ ಹೋಗಿ ಅವನನ್ನು ಭಕ್ತಿಯಿಂದ ಪ್ರಸನ್ನಗೊಳಿಸಿ ಶತ್ರುಗಣಗಳನ್ನು ಸಂಹರಿಸೆಂದು ಕೇಳಿಕೊಂಡರು.
08024145a ಪ್ರತಿಜ್ಞಾಯ ತತೋ ದೇವೋ ದೇವತಾನಾಂ ರಿಪುಕ್ಷಯಂ।
08024145c ರಾಮಂ ಭಾರ್ಗವಮಾಹೂಯ ಸೋಽಭ್ಯಭಾಷತ ಶಂಕರಃ।।
ಶತ್ರುಗಳ ಕ್ಷಯವಾಗುವುದೆಂದು ದೇವತೆಗಳಿಗೆ ಪ್ರತಿಜ್ಞೆಮಾಡಿ ದೇವ ಶಂಕರನು ಭಾರ್ಗವ ರಾಮನನ್ನು ಕರೆದು ಹೀಗೆ ಹೇಳಿದನು:
08024146a ರಿಪೂನ್ಭಾರ್ಗವ ದೇವಾನಾಂ ಜಹಿ ಸರ್ವಾನ್ಸಮಾಗತಾನ್।
08024146c ಲೋಕಾನಾಂ ಹಿತಕಾಮಾರ್ಥಂ ಮತ್ಪ್ರೀತ್ಯರ್ಥಂ ತಥೈವ ಚ।।
“ಭಾರ್ಗವ! ಒಂದಾಗಿರುವ ದೇವತೆಗಳ ರಿಪುಗಳೆಲ್ಲರನ್ನೂ ಸಂಹರಿಸು! ಲೋಕಗಳ ಕಾಮಾರ್ಥಹಿತಕ್ಕಾಗಿ ಮತ್ತು ನನ್ನ ಪ್ರೀತಿಗಾಗಿ ಈ ಕೆಲಸವನ್ನು ಮಾಡು!”
08024147 ರಾಮ ಉವಾಚ।
08024147a ಅಕೃತಾಸ್ತ್ರಸ್ಯ ದೇವೇಶ ಕಾ ಶಕ್ತಿರ್ಮೇ ಮಹೇಶ್ವರ।
08024147c ನಿಹಂತುಂ ದಾನವಾನ್ಸರ್ವಾನ್ಕೃತಾಸ್ತ್ರಾನ್ಯುದ್ಧದುರ್ಮದಾನ್।।
ರಾಮನು ಹೇಳಿದನು: “ದೇವೇಶ! ಮಹೇಶ್ವರ! ಅಸ್ತ್ರವಿದ್ಯೆಯನ್ನೇ ತಿಳಿಯದಿರುವ ನನಗೆ ಕೃತಾಸ್ತ್ರರೂ ಯುದ್ಧದುರ್ಮದರೂ ಆದ ದಾನವರೆಲ್ಲರನ್ನೂ ಸಂಹರಿಸಲು ಹೇಗೆ ಸಾಧ್ಯ?”
08024148 ಈಶ್ವರ ಉವಾಚ।
08024148a ಗಚ್ಚ ತ್ವಂ ಮದನುಧ್ಯಾನಾನ್ನಿಹನಿಷ್ಯಸಿ ದಾನವಾನ್।
08024148c ವಿಜಿತ್ಯ ಚ ರಿಪೂನ್ಸರ್ವಾನ್ಗುಣಾನ್ಪ್ರಾಪ್ಸ್ಯಸಿ ಪುಷ್ಕಲಾನ್।।
ಈಶ್ವರನು ಹೇಳಿದನು: “ಹೋಗು! ನನ್ನ ಅನುಧ್ಯಾನದಿಂದ ನೀನು ದಾನವರನ್ನು ಸಂಹರಿಸುತ್ತೀಯೆ. ಆ ರಿಪುಗಳೆಲ್ಲರನ್ನೂ ಜಯಿಸಿ ಪುಷ್ಕಲ ಗುಣಗಳನ್ನೂ ಪಡೆಯುವೆ!””
08024149 ದುರ್ಯೋಧನ ಉವಾಚ।
08024149a ಏತಚ್ಚ್ರುತ್ವಾ ಚ ವಚನಂ ಪ್ರತಿಗೃಹ್ಯ ಚ ಸರ್ವಶಃ।
08024149c ರಾಮಃ ಕೃತಸ್ವಸ್ತ್ಯಯನಃ ಪ್ರಯಯೌ ದಾನವಾನ್ಪ್ರತಿ।।
ದುರ್ಯೋಧನನು ಹೇಳಿದನು: “ಅವನ ಈ ಮಾತನ್ನು ಕೇಳಿ ಎಲ್ಲವನ್ನೂ ಸ್ವೀಕರಿಸಿ ರಾಮನು ಸ್ವಸ್ತಿವಾಚನಗಳನ್ನು ಮಾಡಿಸಿಕೊಂಡು ದಾನವರಿದ್ದಲ್ಲಿಗೆ ಹೋದನು.
08024150a ಅವಧೀದ್ದೇವಶತ್ರೂಂಸ್ತಾನ್ಮದದರ್ಪಬಲಾನ್ವಿತಾನ್।
08024150c ವಜ್ರಾಶನಿಸಮಸ್ಪರ್ಶೈಃ ಪ್ರಹಾರೈರೇವ ಭಾರ್ಗವಃ।।
ಭಾರ್ಗವನು ಮದದರ್ಪಬಲಾನ್ವಿತ ದೇವಶತ್ರುಗಳನ್ನು ವಜ್ರಾಯುಧ ಸ್ಪರ್ಷಕ್ಕೆ ಸಮಾನ ಪ್ರಹಾರಗಳಿಂದಲೇ ವಧಿಸಿದನು.
08024151a ಸ ದಾನವೈಃ ಕ್ಷತತನುರ್ಜಾಮದಗ್ನ್ಯೋ ದ್ವಿಜೋತ್ತಮಃ।
08024151c ಸಂಸ್ಪೃಷ್ಟಃ ಸ್ಥಾಣುನಾ ಸದ್ಯೋ ನಿರ್ವ್ರಣಃ ಸಮಜಾಯತ।।
ದ್ವಿಜೋತ್ತಮ ಜಾಮದಗ್ನನ ದೇಹವನ್ನು ದಾನವರು ಗಾಯಗೊಳಿಸಿದ್ದರು. ಸ್ಥಾಣುವು ಅವನನ್ನು ಸ್ಪರ್ಶಿಸಿದ ಮಾತ್ರದಿಂದ ಅವನು ಗಾಯಗಳಿಲ್ಲದವನಾದನು.
08024152a ಪ್ರೀತಶ್ಚ ಭಗವಾನ್ದೇವಃ ಕರ್ಮಣಾ ತೇನ ತಸ್ಯ ವೈ।
08024152c ವರಾನ್ಪ್ರಾದಾದ್ಬ್ರಹ್ಮವಿದೇ ಭಾರ್ಗವಾಯ ಮಹಾತ್ಮನೇ।।
ಅವನ ಕರ್ಮಗಳಿಂದ ಪ್ರೀತನಾದ ಭಗವಾನನು ಆ ಮಹಾತ್ಮ ಬ್ರಹ್ಮವಿದು ಭಾರ್ಗವನಿಗೆ ವರಗಳನ್ನಿತ್ತನು.
08024153a ಉಕ್ತಶ್ಚ ದೇವದೇವೇನ ಪ್ರೀತಿಯುಕ್ತೇನ ಶೂಲಿನಾ।
08024153c ನಿಪಾತಾತ್ತವ ಶಸ್ತ್ರಾಣಾಂ ಶರೀರೇ ಯಾಭವದ್ರುಜಾ।।
08024154a ತಯಾ ತೇ ಮಾನುಷಂ ಕರ್ಮ ವ್ಯಪೋಢಂ ಭೃಗುನಂದನ।
08024154c ಗೃಹಾಣಾಸ್ತ್ರಾಣಿ ದಿವ್ಯಾನಿ ಮತ್ಸಕಾಶಾದ್ಯಥೇಪ್ಸಿತಂ।।
ಪ್ರೀತಿಯುಕ್ತ ದೇವದೇವ ಶೂಲಿಯು ಹೇಳಿದನು: “ಭೃಗುನಂದನ! ಶಸ್ತ್ರಗಳ ನಿಪಾತಗಳಿಂದ ನಿನ್ನ ಶರೀರದಲ್ಲಿ ಆಗಿರುವ ಗಾಯಗಳಿಂದ ಮನುಷ್ಯಸಂಬಧವಾದ ನಿನ್ನ ಕರ್ಮಗಳೆಲ್ಲವೂ ಕಳೆದುಹೋದವು (ನೀನೀಗ ಪೂತನಾಗಿ ದೇವಸದೃಶನಾಗಿರುವೆ!). ನಿನ್ನ ಇಚ್ಛೆಯಂತೆಯೇ ನನ್ನಿಂದ ದಿವ್ಯಾಸ್ತ್ರಗಳನ್ನು ಸ್ವೀಕರಿಸು!”
08024155a ತತೋಽಸ್ತ್ರಾಣಿ ಸಮಸ್ತಾನಿ ವರಾಂಶ್ಚ ಮನಸೇಪ್ಸಿತಾನ್।
08024155c ಲಬ್ಧ್ವಾ ಬಹುವಿಧಾನ್ರಾಮಃ ಪ್ರಣಮ್ಯ ಶಿರಸಾ ಶಿವಂ।।
08024156a ಅನುಜ್ಞಾಂ ಪ್ರಾಪ್ಯ ದೇವೇಶಾಚ್ಜಗಾಮ ಸ ಮಹಾತಪಾಃ।
ಆಗ ಮನಸ್ಸಿನಲ್ಲಿ ಬಯಸಿದ ಬಹುವಿಧದ ಅಸ್ತ್ರಗಳನ್ನೂ ವರಗಳನ್ನೂ ಪಡೆದ ಆ ಮಹಾತಪಸ್ವಿ ರಾಮನು ಶಿವನಿಗೆ ಶಿರಸಾ ಪ್ರಣಾಮಮಾಡಿ ದೇವೇಶನ ಅನುಜ್ಞೆಯನ್ನು ಪಡೆದು ಹೊರಟುಹೋದನು.
08024156c ಏವಮೇತತ್ಪುರಾವೃತ್ತಂ ತದಾ ಕಥಿತವಾನೃಷಿಃ।।
08024157a ಭಾರ್ಗವೋಽಪ್ಯದದಾತ್ಸರ್ವಂ ಧನುರ್ವೇದಂ ಮಹಾತ್ಮನೇ।
08024157c ಕರ್ಣಾಯ ಪುರುಷವ್ಯಾಘ್ರ ಸುಪ್ರೀತೇನಾಂತರಾತ್ಮನಾ।।
ಆಗ ಋಷಿಯು ಹೇಳಿದ್ದಂತೆ ಇದು ಹಿಂದೆ ನಡೆದ ವಿಷಯ. ಪುರುಷವ್ಯಾಘ್ರ! ಭಾರ್ಗವನು ಸರ್ವ ಧನುರ್ವೇದವನ್ನು ಮಹಾತ್ಮ ಕರ್ಣನ ಮೇಲೆ ಸುಪ್ರೀತನಾಗಿ ಅಂತರಾತ್ಮದಿಂದ ಅವನಿಗೆ ದಯಪಾಲಿಸಿದನು.
08024158a ವೃಜಿನಂ ಹಿ ಭವೇತ್ಕಿಂ ಚಿದ್ಯದಿ ಕರ್ಣಸ್ಯ ಪಾರ್ಥಿವ।
08024158c ನಾಸ್ಮೈ ಹ್ಯಸ್ತ್ರಾಣಿ ದಿವ್ಯಾನಿ ಪ್ರಾದಾಸ್ಯದ್ಭೃಗುನಂದನಃ।।
ಪಾರ್ಥಿವ! ಕರ್ಣನಲ್ಲಿ ಸ್ವಲ್ಪವಾದರೂ ದೋಷಗಳಿದ್ದಿದ್ದರೆ ಭೃಗುನಂದನನು ಅವನಿಗೆ ಅ ದಿವ್ಯಾಸ್ತ್ರಗಳನ್ನು ದಯಪಾಲಿಸುತ್ತಿರಲಿಲ್ಲ.
08024159a ನಾಪಿ ಸೂತಕುಲೇ ಜಾತಂ ಕರ್ಣಂ ಮನ್ಯೇ ಕಥಂ ಚನ।
08024159c ದೇವಪುತ್ರಮಹಂ ಮನ್ಯೇ ಕ್ಷತ್ರಿಯಾಣಾಂ ಕುಲೋದ್ಭವಂ।।
ಕರ್ಣನು ಸೂತಕುಲದಲ್ಲಿ ಹುಟ್ಟಿದವನೆಂದು ನಾನು ಎಂದೂ ಭಾವಿಸುವುದಿಲ್ಲ. ಅವನು ಕ್ಷತ್ರಿಯ ಕುಲದಲ್ಲಿ ಜನಿಸಿದ ದೇವಪುತ್ರನೆಂದೇ ತಿಳಿಯುತ್ತೇನೆ.
08024160a ಸಕುಂಡಲಂ ಸಕವಚಂ ದೀರ್ಘಬಾಹುಂ ಮಹಾರಥಂ।
08024160c ಕಥಮಾದಿತ್ಯಸದೃಶಂ ಮೃಗೀ ವ್ಯಾಘ್ರಂ ಜನಿಷ್ಯತಿ।।
ಕುಂಡಲ, ಕವಚಗಳಿಂದ ಹುಟ್ಟಿದ ಆದಿತ್ಯಸದೃಶನಾದ ಈ ದೀರ್ಘಬಾಹು ಮಹಾರಥ ವ್ಯಾಘ್ರದಂತಿರುವವನು ಜಿಂಕೆಯಲ್ಲಿ ಹೇಗೆ ಹುಟ್ಟಿಯಾನು?
08024161a ಪಶ್ಯ ಹ್ಯಸ್ಯ ಭುಜೌ ಪೀನೌ ನಾಗರಾಜಕರೋಪಮೌ।
08024161c ವಕ್ಷಃ ಪಶ್ಯ ವಿಶಾಲಂ ಚ ಸರ್ವಶತ್ರುನಿಬರ್ಹಣಂ।।
ಅವನ ಭುಜಗಳನ್ನು ನೋಡು. ಗಜರಾಜನ ಸೊಂಡಿಲಿನಂತೆ ದಪ್ಪವಾಗಿವೆ! ಸರ್ವಶತ್ರುಗಳನ್ನೂ ಸಂಹರಿಸಬಲ್ಲ ಅವನ ವಿಶಾಲ ವಕ್ಷಃಸ್ಥಳವನ್ನು ನೋಡು!”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ತ್ರಿಪುರವಧೋಪಾಖ್ಯಾನೇ ಚತುರ್ವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ತ್ರಿಪುರವಧೋಪಾಖ್ಯಾನ ಎನ್ನುವ ಇಪ್ಪತ್ನಾಲ್ಕನೇ ಅಧ್ಯಾಯವು.