ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 23
ಸಾರ
ದುರ್ಯೋಧನನು ಶಲ್ಯನಿಗೆ ಕರ್ಣನ ಸಾರಥಿಯಾಗುವಂತೆ ಕೇಳಿಕೊಂಡಿದುದು (1-18). ಅದನ್ನು ಕೇಳಿ ಕುಪಿತನಾದ ಶಲ್ಯನು ರಾಜನಾದ ತಾನು ಸೂತಪುತ್ರ ಕರ್ಣನಿಗೆ ಸಾರಥಿಯಾಗುವುದಿಲ್ಲ ಎಂದು ಹೇಳಿ ಸಭೆಯಿಂದ ಹೊರಟು ಹೋದುದು (19-40). “ಕರ್ಣನು ನಿನಗಿಂಥಲೂ ಅಧಿಕನಲ್ಲ ಮತ್ತು ನೀನು ಕೃಷ್ಣನಿಗಿಂತಲೂ ಅಧಿಕ” ಎಂದು ಮುಂತಾಗಿ ಹೇಳಿ ದುರ್ಯೋಧನನು ಶಲ್ಯನನ್ನು ಕರ್ಣನ ಸಾರಥಿಯಾಗುವಂತೆ ಒತ್ತಾಯಿಸಿದುದು (41-50). “ಕರ್ಣನ ಬಳಿಯಿರುವಾಗ ನಾನು ಅವನೊಡನೆ ಇಷ್ಟಬಂದಂತೆ ಮಾತನಾಡುತ್ತೇನೆ” ಎಂಬ ನಿಬಂಧನೆಯೊಂದಿಗೆ ಶಲ್ಯನು ಕರ್ಣನ ಸಾರಥಿಯಾಗಲು ಒಪ್ಪಿಕೊಳ್ಳುವುದು (51-54).
08023001 ಸಂಜಯ ಉವಾಚ।
08023001a ಪುತ್ರಸ್ತವ ಮಹಾರಾಜ ಮದ್ರರಾಜಮಿದಂ ವಚಃ।
08023001c ವಿನಯೇನೋಪಸಂಗಂಯ ಪ್ರಣಯಾದ್ವಾಕ್ಯಮಬ್ರವೀತ್।।
ಸಂಜಯನು ಹೇಳಿದನು: “ಮಹಾರಾಜ! ನಿನ್ನ ಪುತ್ರನು ವಿನಯೋಪೇತನಾಗಿ ಬಳಿಸಾರಿ ಮದ್ರರಾಜನಿಗೆ ಪ್ರೀತಿಯಿಂದ ಈ ಮಾತುಗಳನ್ನಾಡಿದನು:
08023002a ಸತ್ಯವ್ರತ ಮಹಾಭಾಗ ದ್ವಿಷತಾಮಘವರ್ಧನ।
08023002c ಮದ್ರೇಶ್ವರ ರಣೇ ಶೂರ ಪರಸೈನ್ಯಭಯಂಕರ।।
08023003a ಶ್ರುತವಾನಸಿ ಕರ್ಣಸ್ಯ ಬ್ರುವತೋ ವದತಾಂ ವರ।
08023003c ಯಥಾ ನೃಪತಿಸಿಂಹಾನಾಂ ಮಧ್ಯೇ ತ್ವಾಂ ವರಯತ್ಯಯಂ।।
“ಸತ್ಯವ್ರತ! ಮಹಾಭಾಗ! ಶತ್ರುಗಳಿಗೆ ತಾಪವನ್ನು ಹೆಚ್ಚಿಸುವವನೇ! ಮದ್ರೇಶ್ವರ! ರಣಶೂರ! ಶತ್ರುಸೈನ್ಯಗಳ ಭಯಂಕರ! ಮಾತುಗಾರರಲ್ಲಿ ಶ್ರೇಷ್ಠ! ನೃಪತಿಸಿಂಹರ ಮಧ್ಯದಲ್ಲಿ ನಿನ್ನನ್ನು ಆರಿಸಿಕೊಂಡ ಕರ್ಣನಾಡಿದ ಈ ಮಾತನ್ನು ಕೇಳಿದ್ದೀಯೆ.
08023004a ತಸ್ಮಾತ್ಪಾರ್ಥವಿನಾಶಾರ್ಥಂ ಹಿತಾರ್ಥಂ ಮಮ ಚೈವ ಹಿ।
08023004c ಸಾರಥ್ಯಂ ರಥಿನಾಂ ಶ್ರೇಷ್ಠ ಸುಮನಾಃ ಕರ್ತುಮರ್ಹಸಿ।।
ರಥಿಗಳಲ್ಲಿ ಶ್ರೇಷ್ಠ! ಪಾರ್ಥರ ವಿನಾಶಕ್ಕಾಗಿ ಮತ್ತು ನನ್ನ ಹಿತಕ್ಕಾಗಿ ಒಳ್ಳೆಯ ಮನಸ್ಸಿನಿಂದ ನೀನು ಸಾರಥ್ಯವನ್ನು ಮಾಡಬೇಕು.
08023005a ಅಸ್ಯಾಭೀಶುಗ್ರಹೋ ಲೋಕೇ ನಾನ್ಯೋಽಸ್ತಿ ಭವತಾ ಸಮಃ।
08023005c ಸ ಪಾತು ಸರ್ವತಃ ಕರ್ಣಂ ಭವಾನ್ಬ್ರಹ್ಮೇವ ಶಂಕರಂ।।
ಕರ್ಣನ ಕುದುರೆಗಳ ಕಡಿವಾಣಗಳನ್ನು ಹಿಡಿಯಬಲ್ಲ, ನಿನಗೆ ಸರಿಸಾಟಿಯಾದ, ಇನ್ನೊಬ್ಬನು ಈ ಲೋಕದಲ್ಲಿಯೇ ಇಲ್ಲ. ಬ್ರಹ್ಮನು ಶಂಕರನನ್ನು ಹೇಗೋ ಹಾಗೆ ನೀನು ಕರ್ಣನನ್ನು ಸರ್ವತಃ ರಕ್ಷಿಸಬೇಕು.
08023006a ಪಾರ್ಥಸ್ಯ ಸಚಿವಃ ಕೃಷ್ಣೋ ಯಥಾಭೀಶುಗ್ರಹೋ ವರಃ।
08023006c ತಥಾ ತ್ವಮಪಿ ರಾಧೇಯಂ ಸರ್ವತಃ ಪರಿಪಾಲಯ।।
ಕಡಿವಾಣಗಳನ್ನು ಹಿಡಿಯುವವರಲ್ಲಿ ಶ್ರೇಷ್ಠ ಕೃಷ್ಣನು ಹೇಗೆ ಪಾರ್ಥನ ಸಚಿವನೋ ಹಾಗೆ ನೀನೂ ಕೂಡ ರಾಧೇಯನನ್ನು ಸರ್ವತಃ ಪರಿಪಾಲಿಸು.
08023007a ಭೀಷ್ಮೋ ದ್ರೋಣಃ ಕೃಪಃ ಕರ್ಣೋ ಭವಾನ್ಭೋಜಶ್ಚ ವೀರ್ಯವಾನ್।
08023007c ಶಕುನಿಃ ಸೌಬಲೋ ದ್ರೌಣಿರಹಂ ಏವ ಚ ನೋ ಬಲಂ।
08023007e ಏಷಾಮೇವ ಕೃತೋ ಭಾಗೋ ನವಧಾ ಪೃತನಾಪತೇ।।
ಪೃತನಾಪತೇ! ಭೀಷ್ಮ, ದ್ರೋಣ, ಕೃಪ, ಕರ್ಣ, ನೀನು, ವೀರ್ಯವಾನ್ ಭೋಜ, ಸೌಬಲ, ಶಕುನಿ ಮತ್ತು ದ್ರೌಣಿ – ಈ ಒಂಭತ್ತು ಮಂದಿ ನಮ್ಮ ಬಲಶಾಲಿಗಳಲ್ಲಿ ಒಬ್ಬೊಬ್ಬರಿಗೆ ಒಂದೊಂದರಂತೆ ಪಾಂಡವ ಸೇನೆಯನ್ನು ಒಂಭತ್ತು ಪಾಲುಗಳನ್ನಾಗಿ ಮಾಡಿಕೊಂಡಿದ್ದೆವು.
08023008a ನೈವ ಭಾಗೋಽತ್ರ ಭೀಷ್ಮಸ್ಯ ದ್ರೋಣಸ್ಯ ಚ ಮಹಾತ್ಮನಃ।
08023008c ತಾಭ್ಯಾಮತೀತ್ಯ ತೌ ಭಾಗೌ ನಿಹತಾ ಮಮ ಶತ್ರವಃ।।
ಈಗ ಭೀಷ್ಮನ ಮತ್ತು ಮಹಾತ್ಮ ದ್ರೋಣನ ಭಾಗಗಳು ಉಳಿದಿಲ್ಲ. ಅವರಿಬ್ಬರೂ ತಮ್ಮ ತಮ್ಮ ಪಾಲುಗಳನ್ನೂ ಮೀರಿ ನನ್ನ ಶತ್ರುಗಳನ್ನು ಸಂಹರಿಸಿದ್ದಾರೆ.
08023009a ವೃದ್ಧೌ ಹಿ ತೌ ನರವ್ಯಾಘ್ರೌ ಚಲೇನ ನಿಹತೌ ಚ ತೌ।
08023009c ಕೃತ್ವಾ ನಸುಕರಂ ಕರ್ಮ ಗತೌ ಸ್ವರ್ಗಮಿತೋಽನಘ।।
ಅನಘ! ವೃದ್ಧರಾಗಿದ್ದ ಆ ಇಬ್ಬರು ನರವ್ಯಾಘ್ರರೂ ಛಲದಿಂದ ಸಂಹರಿಸಿ, ಅಸಾಧ್ಯಕರ್ಮಗಳನ್ನೆಸಗಿ ಸ್ವರ್ಗಕ್ಕೆ ಹೋದರು.
08023010a ತಥಾನ್ಯೇ ಪುರುಷವ್ಯಾಘ್ರಾಃ ಪರೈರ್ವಿನಿಹತಾ ಯುಧಿ।
08023010c ಅಸ್ಮದೀಯಾಶ್ಚ ಬಹವಃ ಸ್ವರ್ಗಾಯೋಪಗತಾ ರಣೇ।
08023010e ತ್ಯಕ್ತ್ವಾ ಪ್ರಾಣಾನ್ಯಥಾಶಕ್ತಿ ಚೇಷ್ಟಾಃ ಕೃತ್ವಾ ಚ ಪುಷ್ಕಲಾಃ।।
ಹಾಗೆಯೇ ಅನ್ಯ ಪುರುಷವ್ಯಾಘ್ರರೂ ಶತ್ರುಗಳಿಂದ ಯುದ್ಧದಲ್ಲಿ ಹತರಾದರು. ನಮ್ಮ ಕಡೆಯ ಅನೇಕರು ಯಥಾಶಕ್ತಿಯಾಗಿ ಅನೇಕ ಕಠಿಣ ಕರ್ಮಗಳನ್ನೆಸಗಿ ರಣದಲ್ಲಿ ಪ್ರಾಣಗಳನ್ನು ತ್ಯಜಿಸಿ ಸ್ವರ್ಗದ ಕಡೆ ಹೊರಟುಹೋಗಿದ್ದಾರೆ.
08023011a ಕರ್ಣೋ ಹ್ಯೇಕೋ ಮಹಾಬಾಹುರಸ್ಮತ್ಪ್ರಿಯಹಿತೇ ರತಃ।
08023011c ಭವಾಂಶ್ಚ ಪುರುಷವ್ಯಾಘ್ರ ಸರ್ವಲೋಕಮಹಾರಥಃ।
08023011e ತಸ್ಮಿಂ ಜಯಾಶಾ ವಿಪುಲಾ ಮಮ ಮದ್ರಜನಾಧಿಪ।।
ಪುರುಷವ್ಯಾಘ್ರ! ಮಹಾಬಾಹು ಕರ್ಣನೊಬ್ಬನೇ ಮತ್ತು ಸರ್ವಲೋಕಮಹಾರಥನಾದ ನೀನು ನನ್ನ ಪ್ರಿಯಹಿತಗಳಲ್ಲಿ ನಿರತನಾಗಿದ್ದೀರಿ. ಮದ್ರಜನಾಧಿಪ! ನನ್ನ ಜಯದ ಆಸೆಯು ವಿಪುಲವಾಗಿ ನಿನ್ನನ್ನವಲಂಬಿಸಿದೆ.
08023012a ಪಾರ್ಥಸ್ಯ ಸಮರೇ ಕೃಷ್ಣೋ ಯಥಾಭೀಶುವರಗ್ರಹಃ।
08023012c ತೇನ ಯುಕ್ತೋ ರಣೇ ಪಾರ್ಥೋ ರಕ್ಷ್ಯಮಾಣಶ್ಚ ಪಾರ್ಥಿವ।
08023012e ಯಾನಿ ಕರ್ಮಾಣಿ ಕುರುತೇ ಪ್ರತ್ಯಕ್ಷಾಣಿ ತಥೈವ ತೇ।।
ಪಾರ್ಥಿವ! ಸಮರದಲ್ಲಿ ಕೃಷ್ಣನು ಪಾರ್ಥನ ಕುದುರೆಗಳ ಕಡಿವಾಣಗಳನ್ನು ಹಿಡಿಯುವವನಾಗಿ, ಅವನಿಂದ ರಕ್ಷಿತನಾದ ಪಾರ್ಥನು ರಣದಲ್ಲಿ ಯಾವ ಯಾವ ಮಹಾದ್ಭುತ ಕರ್ಮಗಳನ್ನು ಮಾಡುತ್ತಿದ್ದಾನೆ ಎನ್ನುವುದನ್ನು ಪ್ರತ್ಯಕ್ಷವಾಗಿಯೇ ನೀನು ಕಂಡಿರುವೆ!
08023013a ಪೂರ್ವಂ ನ ಸಮರೇ ಹ್ಯೇವಮವಧೀದರ್ಜುನೋ ರಿಪೂನ್।
08023013c ಅಹನ್ಯಹನಿ ಮದ್ರೇಶ ದ್ರಾವಯನ್ದೃಶ್ಯತೇ ಯುಧಿ।।
ಮದ್ರೇಶ! ಹಿಂದೆ ಅರ್ಜುನನು ಸಮರದಲ್ಲಿ ಈ ರೀತಿ ಶತ್ರುಗಳನ್ನು ಸಂಹರಿಸುತ್ತಿರಲಿಲ್ಲ! ಈಗ ಯುದ್ಧದಲ್ಲಿ ಪ್ರತಿದಿನವೂ ಅವನು ಶತ್ರುಗಳನ್ನು ಓಡಿಸುತ್ತಿರುವುದು ಕಾಣುತ್ತಿದೆ.
08023014a ಭಾಗೋಽವಶಿಷ್ಟಃ ಕರ್ಣಸ್ಯ ತವ ಚೈವ ಮಹಾದ್ಯುತೇ।
08023014c ತಂ ಭಾಗಂ ಸಹ ಕರ್ಣೇನ ಯುಗಪನ್ನಾಶಯಾಹವೇ।।
ಮಹಾದ್ಯುತೇ! ನಾವು ಮಾಡಿಕೊಂಡಿದ್ದ ಪಾಲುಗಳಲ್ಲಿ ನಿನ್ನ ಮತ್ತು ಕರ್ಣನ ಪಾಲುಗಳು ಉಳಿದುಕೊಂಡಿವೆ. ಯುದ್ಧದಲ್ಲಿ ಕರ್ಣನೊಂದಿಗೆ ಒಟ್ಟಾಗಿ ನಿನ್ನ ಪಾಲಿನ ಭಾಗವನ್ನೂ ನಾಶಪಡಿಸು.
08023015a ಸೂರ್ಯಾರುಣೌ ಯಥಾ ದೃಷ್ಟ್ವಾ ತಮೋ ನಶ್ಯತಿ ಮಾರಿಷ।
08023015c ತಥಾ ನಶ್ಯಂತು ಕೌಂತೇಯಾಃ ಸಪಾಂಚಾಲಾಃ ಸಸೃಂಜಯಾಃ।।
ಮಾರಿಷ! ಸೂರ್ಯ ಮತ್ತು ಅರುಣರನ್ನು ನೋಡಿ ಕತ್ತಲೆಯು ಹೇಗೆ ನಾಶವಾಗುತ್ತದೆಯೋ ಹಾಗೆ ನಿಮ್ಮಿಬ್ಬರನ್ನು ನೋಡಿ ಪಾಂಚಾಲರು ಮತ್ತು ಸೃಂಜಯರೊಂದಿಗೆ ಕೌಂತೇಯರು ನಾಶವಾಗುತ್ತಾರೆ.
08023016a ರಥಾನಾಂ ಪ್ರವರಃ ಕರ್ಣೋ ಯತೄಣಾಂ ಪ್ರವರೋ ಭವಾನ್।
08023016c ಸಂನಿಪಾತಃ ಸಮೋ ಲೋಕೇ ಭವತೋರ್ನಾಸ್ತಿ ಕಶ್ಚನ।।
ಕರ್ಣನು ರಥಿಗಳಲ್ಲಿ ಶ್ರೇಷ್ಠನು. ನೀನು ಸಾರಥಿಗಳಲ್ಲಿ ಶ್ರೇಷ್ಠನು. ನಿಮ್ಮಿಬ್ಬರ ಜೋಡಿಯಂಥಹುದು ಲೋಕದಲ್ಲಿ ಎಂದೂ ಇರಲಿಲ್ಲ, ಮುಂದೆ ಇರಲಿಕ್ಕಿಲ್ಲ.
08023017a ಯಥಾ ಸರ್ವಾಸ್ವವಸ್ಥಾಸು ವಾರ್ಷ್ಣೇಯಃ ಪಾತಿ ಪಾಂಡವಂ।
08023017c ತಥಾ ಭವಾನ್ಪರಿತ್ರಾತು ಕರ್ಣಂ ವೈಕರ್ತನಂ ರಣೇ।।
ಸರ್ವಾವಸ್ಥೆಗಳಲ್ಲಿ ವಾರ್ಷ್ಣೇಯನು ಹೇಗೆ ಪಾಂಡವನನ್ನು ರಕ್ಷಿಸುತ್ತಿರುವನೋ ಹಾಗೆ ರಣದಲ್ಲಿ ನೀನು ವೈಕರ್ತನ ಕರ್ಣನನ್ನು ರಕ್ಷಿಸಬೇಕು.
08023018a ತ್ವಯಾ ಸಾರಥಿನಾ ಹ್ಯೇಷ ಅಪ್ರಧೃಷ್ಯೋ ಭವಿಷ್ಯತಿ।
08023018c ದೇವತಾನಾಮಪಿ ರಣೇ ಸಶಕ್ರಾಣಾಂ ಮಹೀಪತೇ।
08023018e ಕಿಂ ಪುನಃ ಪಾಂಡವೇಯಾನಾಂ ಮಾತಿಶಂಕೀರ್ವಚೋ ಮಮ।।
ನಿನ್ನ ಸಾರಥ್ಯದಿಂದ ಇವನು ಅಜೇಯನಾಗುತ್ತಾನೆ. ಮಹೀಪತೇ! ರಣದಲ್ಲಿ ಇವನು ಶಕ್ರನೊಡನೆ ಬಂದ ದೇವತೆಗಳನ್ನೂ ಎದುರಿಸಬಲ್ಲನು. ಇನ್ನು ಪಾಂಡವೇಯರ ವಿಷಯದಲ್ಲೇನು? ನನ್ನ ಈ ಮಾತಿನಲ್ಲಿ ಶಂಕೆಪಡದಿರು!”
08023019a ದುರ್ಯೋಧನವಚಃ ಶ್ರುತ್ವಾ ಶಲ್ಯಃ ಕ್ರೋಧಸಮನ್ವಿತಃ।
08023019c ತ್ರಿಶಿಖಾಂ ಭ್ರುಕುಟೀಂ ಕೃತ್ವಾ ಧುನ್ವನ್ ಹಸ್ತೌ ಪುನಃ ಪುನಃ।।
ದುರ್ಯೋಧನನ ಮಾತನ್ನು ಕೇಳಿ ಶಲ್ಯನು ಕ್ರೋಧಸಮನ್ವಿತನಾಗಿ, ಹುಬ್ಬುಗಳನ್ನು ಗಂಟಿಕ್ಕೆ, ಕೈಗಳೆರಡನ್ನು ಪುನಃ ಪುನಃ ಕೊಡವಿದನು.
08023020a ಕ್ರೋಧರಕ್ತೇ ಮಹಾನೇತ್ರೇ ಪರಿವರ್ತ್ಯ ಮಹಾಭುಜಃ।
08023020c ಕುಲೈಶ್ವರ್ಯಶ್ರುತಿಬಲೈರ್ದೃಪ್ತಃ ಶಲ್ಯೋಽಬ್ರವೀದಿದಂ।।
ಕೆಂಪಾದ ಕಣ್ಣುಗಳನ್ನು ತಿರುಗಿಸುತ್ತಾ, ಕುಲ-ಐಶ್ವರ್ಯ-ವಿದ್ಯೆ-ಬಲಗಳಿಂದ ದರ್ಪಿತನಾಗಿದ್ದ ಮಹಾಭುಜ ಶಲ್ಯನು ಈ ಮಾತುಗಳನ್ನಾಡಿದನು:
08023021a ಅವಮನ್ಯಸೇ ಮಾಂ ಗಾಂದಾರೇ ಧ್ರುವಂ ಮಾಂ ಪರಿಶಂಕಸೇ।
08023021c ಯನ್ಮಾಂ ಬ್ರವೀಷಿ ವಿಸ್ರಬ್ಧಂ ಸಾರಥ್ಯಂ ಕ್ರಿಯತಾಮಿತಿ।।
“ಗಾಂಧಾರೇ! ಸ್ವಲ್ಪವೂ ಪರಿಶಂಕಿಸದೇ ವಿಸ್ತಬ್ಧನಾಗಿ ಸಾರಥ್ಯವನ್ನು ಮಾಡು ಎಂದು ನನಗೆ ಹೇಳಿ ನನ್ನನ್ನು ಅಪಮಾನಿಸುತ್ತಿರುವೆ!
08023022a ಅಸ್ಮತ್ತೋಽಭ್ಯಧಿಕಂ ಕರ್ಣಂ ಮನ್ಯಮಾನಃ ಪ್ರಶಂಸಸಿ।
08023022c ನ ಚಾಹಂ ಯುಧಿ ರಾಧೇಯಂ ಗಣಯೇ ತುಲ್ಯಮಾತ್ಮನಾ।।
ಕರ್ಣನು ನನಗಿಂತಲೂ ಅಧಿಕನೆಂದು ತಿಳಿದು ಅವನನ್ನು ಪ್ರಶಂಸಿಸುತ್ತಿದ್ದೀಯೆ! ಆದರೆ ಯುದ್ಧದಲ್ಲಿ ರಾಧೇಯನು ನನ್ನ ಸಮಾನನೆಂದು ನಾನು ಒಪ್ಪಿಕೊಳ್ಳುವುದಿಲ್ಲ!
08023023a ಆದಿಶ್ಯತಾಮಭ್ಯಧಿಕೋ ಮಮಾಂಶಃ ಪೃಥಿವೀಪತೇ।
08023023c ತಂ ಅಹಂ ಸಮರೇ ಹತ್ವಾ ಗಮಿಷ್ಯಾಮಿ ಯಥಾಗತಂ।।
ಪೃಥಿವೀಪತೇ! ನನಗೆ ಶತ್ರುಸೇನೆಯ ಹೆಚ್ಚಿನ ಪಾಲನ್ನೇ ವಹಿಸಿಕೊಡು. ಸಮರದಲ್ಲಿ ನಾನು ಆ ಭಾಗವನ್ನು ಸಂಹರಿಸಿ ಎಲ್ಲಿಂದ ಬಂದಿದ್ದೆನೋ ಅಲ್ಲಿಗೆ ಹೊರಟುಹೋಗುತ್ತೇನೆ.
08023024a ಅಥ ವಾಪ್ಯೇಕ ಏವಾಹಂ ಯೋತ್ಸ್ಯಾಮಿ ಕುರುನಂದನ।
08023024c ಪಶ್ಯ ವೀರ್ಯಂ ಮಮಾದ್ಯ ತ್ವಂ ಸಂಗ್ರಾಮೇ ದಹತೋ ರಿಪೂನ್।।
ಅಥವಾ ಕುರುನಂದನ! ನಾನೊಬ್ಬನೇ ಯುದ್ಧಮಾಡುತ್ತೇನೆ. ಸಂಗ್ರಾಮದಲ್ಲಿ ಶತ್ರುಗಳನ್ನು ಸುಡುವ ನನ್ನ ವೀರ್ಯವನ್ನು ಇಂದು ನೋಡು!
08023025a ನ ಚಾಭಿಕಾಮಾನ್ಕೌರವ್ಯ ವಿಧಾಯ ಹೃದಯೇ ಪುಮಾನ್।
08023025c ಅಸ್ಮದ್ವಿಧಃ ಪ್ರವರ್ತೇತ ಮಾ ಮಾ ತ್ವಮತಿಶಂಕಿಥಾಃ।।
ಕೌರವ್ಯ! ನನ್ನಂಥಹ ಪುರುಷರು ಹೃದಯದಲ್ಲಿ ಆಸೆಗಳನ್ನಿಟ್ಟುಕೊಂಡು ಯುದ್ಧದಲ್ಲಿ ತೊಡಗುವುದಿಲ್ಲ. ನನ್ನ ಮೇಲೆ ಅಧಿಕ ಶಂಕೆಪಡಬೇಡ!
08023026a ಯುಧಿ ಚಾಪ್ಯವಮಾನೋ ಮೇ ನ ಕರ್ತವ್ಯಃ ಕಥಂ ಚನ।
08023026c ಪಶ್ಯ ಹೀಮೌ ಮಮ ಭುಜೌ ವಜ್ರಸಂಹನನೋಪಮೌ।।
ಯುದ್ಧದಲ್ಲಿ ನನ್ನನ್ನು ಅಪಮಾನಗೊಳಿಸುವ ಕೆಲಸವನ್ನೆಂದೂ ಮಾಡಬೇಡ! ವಜ್ರಸಂಹನದಂತಿರುವ ನನ್ನ ಈ ಭುಜಗಳನ್ನಾದರೂ ನೀನು ನೋಡು!
08023027a ಧನುಃ ಪಶ್ಯ ಚ ಮೇ ಚಿತ್ರಂ ಶರಾಂಶ್ಚಾಶೀವಿಷೋಪಮಾನ್।
08023027c ರಥಂ ಪಶ್ಯ ಚ ಮೇ ಕ್ಷ್ಲಪ್ತಂ ಸದಶ್ವೈರ್ವಾತವೇಗಿತೈಃ।
08023027e ಗದಾಂ ಚ ಪಶ್ಯ ಗಾಂದಾರೇ ಹೇಮಪಟ್ಟವಿಭೂಷಿತಾಂ।।
ಗಾಂಧಾರೇ! ಚಿತ್ರಿತವಾಗಿರುವ ನನ್ನ ಧನುಸ್ಸನ್ನು ಮತ್ತು ಸರ್ಪವಿಷಗಳಂತಿರುವ ನನ್ನ ಬಾಣಗಳನ್ನೂ ನೋಡು! ಗಾಳಿಯ ವೇಗದಲ್ಲಿ ಹೋಗುವ ಕುದುರೆಗಳುಳ್ಳ ನನ್ನ ಈ ಸುಂದರ ರಥವನ್ನೂ ನೋಡು! ಹೇಮಪಟ್ಟಿಗಳಿಂದ ವಿಭೂಷಿತವಾದ ನನ್ನ ಈ ಗದೆಯನ್ನೂ ನೋಡು!
08023028a ದಾರಯೇಯಂ ಮಹೀಂ ಕ್ರುದ್ಧೋ ವಿಕಿರೇಯಂ ಚ ಪರ್ವತಾನ್।
08023028c ಶೋಷಯೇಯಂ ಸಮುದ್ರಾಂಶ್ಚ ತೇಜಸಾ ಸ್ವೇನ ಪಾರ್ಥಿವ।।
ಪಾರ್ಥಿವ! ಕ್ರುದ್ಧನಾದರೆ ಈ ಭೂಮಿಯನ್ನು ಸೀಳಿಯೇನು! ಪರ್ವತಗಳನ್ನು ಪುಡಿಪುಡಿಮಾಡಿಯೇನು! ನನ್ನ ತೇಜಸ್ಸಿನಿಂದ ಸಮುದ್ರಗಳನ್ನೂ ಒಣಗಿಸಬಲ್ಲೆನು!
08023029a ತನ್ಮಾಮೇವಂವಿಧಂ ಜಾನನ್ಸಮರ್ಥಮರಿನಿಗ್ರಹೇ।
08023029c ಕಸ್ಮಾದ್ಯುನಕ್ಷಿ ಸಾರಥ್ಯೇ ನ್ಯೂನಸ್ಯಾಧಿರಥೇರ್ನೃಪ।।
ನೃಪ! ಅರಿನಿಗ್ರಹದಲ್ಲಿ ಸಮರ್ಥನಾದ ನನ್ನ ಈ ರೀತಿಯ ಪರಾಕ್ರಮವನ್ನು ತಿಳಿದೂ ನೀನು ನೀಚ ಅಧಿರಥನ ಸಾರಥ್ಯಕ್ಕೆ ನನ್ನನ್ನು ಏಕೆ ನಿಯೋಜಿಸುತ್ತಿರುವೆ?
08023030a ನ ನಾಮ ಧುರಿ ರಾಜೇಂದ್ರ ಪ್ರಯೋಕ್ತುಂ ತ್ವಮಿಹಾರ್ಹಸಿ।
08023030c ನ ಹಿ ಪಾಪೀಯಸಃ ಶ್ರೇಯಾನ್ಭೂತ್ವಾ ಪ್ರೇಷ್ಯತ್ವಮುತ್ಸಹೇ।।
ರಾಜೇಂದ್ರ! ಈ ಕೀಳು ವೃತ್ತಿಯಲ್ಲಿ ನನ್ನನ್ನು ತೊಡಗಿಸುವುದು ನಿನಗೆ ಖಂಡಿತವಾಗಿಯೂ ಯೋಗ್ಯವೆನಿಸುವುದಿಲ್ಲ. ಶ್ರೇಯಾವಂತನಾಗಿದ್ದುಕೊಂಡು ನಾನು ಇಂತಹ ಪಾಪಿ ಪುರುಷನ ಸೇವೆಮಾಡಲು ಇಷ್ಟಪಡುವುದಿಲ್ಲ.
08023031a ಯೋ ಹ್ಯಭ್ಯುಪಗತಂ ಪ್ರೀತ್ಯಾ ಗರೀಯಾಂಸಂ ವಶೇ ಸ್ಥಿತಂ।
08023031c ವಶೇ ಪಾಪೀಯಸೋ ಧತ್ತೇ ತತ್ಪಾಪಮಧರೋತ್ತರಂ।।
ಪ್ರೀತಿಯಿಂದ ಬಂದು ಆಜ್ಞಾಧಾರಕನಾಗಿರುವ ಹಿರಿಯನಾದವನನ್ನು ಪಾಪಿಯ ವಶದಲ್ಲಿ ಕೊಡುವವನಿಗೆ ಉಚ್ಚನನ್ನು ನೀಚನನ್ನಾಗಿಯೂ ನೀಚನನ್ನು ಉಚ್ಚನನ್ನಾಗಿಯೂ ಮಾಡುವವನಿಗೆ ದೊರೆಯುವ ಮಹಾ ಪಾಪವು ದೊರೆಯುತ್ತದೆ.
08023032a ಬ್ರಾಹ್ಮಣಾ ಬ್ರಹ್ಮಣಾ ಸೃಷ್ಟಾ ಮುಖಾತ್ ಕ್ಷತ್ರಮಥೋರಸಃ।
08023032c ಊರುಭ್ಯಾಮಸೃಜದ್ವೈಶ್ಯಾಂ ಶೂದ್ರಾನ್ಪದ್ಭ್ಯಾಮಿತಿ ಶ್ರುತಿಃ।
08023032e ತೇಭ್ಯೋ ವರ್ಣವಿಶೇಷಾಶ್ಚ ಪ್ರತಿಲೋಮಾನುಲೋಮಜಾಃ।।
08023033a ಅಥಾನ್ಯೋನ್ಯಸ್ಯ ಸಂಯೋಗಾಚ್ಚಾತುರ್ವರ್ಣ್ಯಸ್ಯ ಭಾರತ।
ಬ್ರಹ್ಮನು ಬ್ರಾಹ್ಮಣರನ್ನು ತನ್ನ ಮುಖದಿಂದಲೂ, ಕ್ಷತ್ರಿಯರನ್ನು ಭುಜಗಳಿಂದಲೂ, ವೈಶ್ಯರನ್ನು ತೊಡೆಗಳಿಂದಲೂ ಮತ್ತು ಶೂದ್ರರನ್ನು ಪಾದಗಳಿಂದಲೂ ಸೃಷ್ಟಿಸಿದನೆಂದು ಶೃತಿಯಿದೆ. ಭಾರತ! ಈ ನಾಲ್ಕು ವರ್ಣಗಳ ಪರಸ್ಪರ ಸಂಕರದಿಂದ ಅನುಲೋಮ-ವಿಲೋಮ ವರ್ಣಗಳ ಉತ್ಪತ್ತಿಯಾಗುತ್ತದೆ.
08023033c ಗೋಪ್ತಾರಃ ಸಂಗ್ರಹೀತಾರೋ ದಾತಾರಃ ಕ್ಷತ್ರಿಯಾಃ ಸ್ಮೃತಾಃ।।
08023034a ಯಾಜನಾಧ್ಯಾಪನೈರ್ವಿಪ್ರಾ ವಿಶುದ್ಧೈಶ್ಚ ಪ್ರತಿಗ್ರಹೈಃ।
08023034c ಲೋಕಸ್ಯಾನುಗ್ರಹಾರ್ಥಾಯ ಸ್ಥಾಪಿತಾ ಬ್ರಹ್ಮಣಾ ಭುವಿ।।
ಕ್ಷತ್ರಿಯರು ರಕ್ಷಕರೆಂದೂ, ಕಪ್ಪು-ಕಾಣಿಕೆಗಳ ಸಂಗ್ರಹೀತಾರರೆಂದೂ, ದಾನ-ಧರ್ಮಗಳನ್ನು ಮಾಡುವವರೆಂದೂ ವಿಹಿತವಾಗಿದೆ. ಯಜ್ಞಮಾಡಿಸುವರು, ಅಧ್ಯಾಪನೆ ಮಾಡುವವರು ಮತ್ತು ವಿಶುದ್ಧ ದಾನಗಳನ್ನು ಸ್ವೀಕರಿಸುವವರು ವಿಪ್ರರು. ಲೋಕಗಳ ಅನುಗ್ರಹಕ್ಕಾಗಿ ಬ್ರಹ್ಮನು ಇದನ್ನು ಭುವಿಯಲ್ಲಿ ಸ್ಥಾಪಿಸಿದನು.
08023035a ಕೃಷಿಶ್ಚ ಪಾಶುಪಾಲ್ಯಂ ಚ ವಿಶಾಂ ದಾನಂ ಚ ಸರ್ವಶಃ।
08023035c ಬ್ರಹ್ಮಕ್ಷತ್ರವಿಶಾಂ ಶೂದ್ರಾ ವಿಹಿತಾಃ ಪರಿಚಾರಕಾಃ।।
ಕೃಷಿ, ಪಶುಪಾಲನೆ ಮತ್ತು ದಾನಗಳು ವೈಶ್ಯರಿಗೆ, ಮತ್ತು ಬ್ರಾಹ್ಮಣ-ಕ್ಷತ್ರಿಯ-ವೈಶ್ಯರೆಲ್ಲರ ಸೇವೆಗಳು ಶೂದ್ರರಿಗೆ ವಿಹಿತವಾಗಿವೆ.
08023036a ಬ್ರಹ್ಮಕ್ಷತ್ರಸ್ಯ ವಿಹಿತಾಃ ಸೂತಾ ವೈ ಪರಿಚಾರಕಾಃ।
08023036c ನ ವಿಟ್ಶೂದ್ರಸ್ಯ ತತ್ರೈವ ಶೃಣು ವಾಕ್ಯಂ ಮಮಾನಘ।।
ಬ್ರಾಹ್ಮಣ-ಕ್ಷತ್ರಿಯರಿಗೆ ಸೂತರು ಪರಿಚಾರಕರೆಂದು ವಿಹಿತವಾಗಿದೆ. ಇದಕ್ಕೆ ವಿರುದ್ಧವಾದುದು ಎಲ್ಲಿಯೂ ಇಲ್ಲ. ಅನಘ! ನನ್ನ ಈ ಮಾತನ್ನು ಕೇಳು!
08023037a ಸೋಽಹಂ ಮೂರ್ಧಾವಸಿಕ್ತಃ ಸನ್ರಾಜರ್ಷಿಕುಲಸಂಭವಃ।
08023037c ಮಹಾರಥಃ ಸಮಾಖ್ಯಾತಃ ಸೇವ್ಯಃ ಸ್ತವ್ಯಶ್ಚ ಬಂದಿನಾಂ।।
08023038a ಸೋಽಹಂ ಏತಾದೃಶೋ ಭೂತ್ವಾ ನೇಹಾರಿಕುಲಮರ್ದನ।
08023038c ಸೂತಪುತ್ರಸ್ಯ ಸಂಗ್ರಾಮೇ ಸಾರಥ್ಯಂ ಕರ್ತುಮುತ್ಸಹೇ।।
ನಾನಾದರೋ ರಾಜರ್ಷಿಕುಲದಲ್ಲಿ ಹುಟ್ಟಿ ಪಟ್ಟಾಭಿಷಿಕ್ತನಾಗಿದ್ದೇನೆ. ಮಹಾರಥನೆಂದು ಪ್ರಸಿದ್ಧನಾಗಿದ್ದೇನೆ. ವಂದಿಮಾಗಧರ ಸೇವೆ-ಸ್ತುತಿಗಳಿಗೆ ಪಾತ್ರನಾಗಿದ್ದೇನೆ. ಇಂತಹ ಅರಿಕುಲಮರ್ಧನನಾಗಿರುವ ನಾನು ಸಂಗ್ರಾಮದಲ್ಲಿ ಸೂತಪುತ್ರನ ಸಾರಥ್ಯವನ್ನು ಮಾಡುವುದಿಲ್ಲ.
08023039a ಅವಮಾನಮಹಂ ಪ್ರಾಪ್ಯ ನ ಯೋತ್ಸ್ಯಾಮಿ ಕಥಂ ಚನ।
08023039c ಆಪೃಚ್ಚ್ಯ ತ್ವಾದ್ಯ ಗಾಂದಾರೇ ಗಮಿಷ್ಯಾಮಿ ಯಥಾಗತಂ।।
ಅಪಮಾನಿತನಾಗಿ ನಾನು ಎಂದೂ ಯುದ್ಧಮಾಡುವುದಿಲ್ಲ. ಗಾಂಧಾರೇ! ಅಪ್ಪಣೆಕೊಡು. ಇಂದೇ ನಾನು ನನ್ನ ದೇಶಕ್ಕೆ ಹೊರಟುಹೋಗುತ್ತೇನೆ!”
08023040a ಏವಮುಕ್ತ್ವಾ ನರವ್ಯಾಘ್ರಃ ಶಲ್ಯಃ ಸಮಿತಿಶೋಭನಃ।
08023040c ಉತ್ಥಾಯ ಪ್ರಯಯೌ ತೂರ್ಣಂ ರಾಜಮಧ್ಯಾದಮರ್ಷಿತಃ।।
ಹೀಗೆ ಹೇಳಿ ನರವ್ಯಾಘ್ರ, ಸಮಿತಿಶೋಭನ ಶಲ್ಯನು ಮೇಲೆದ್ದು ರಾಜಮಧ್ಯದಿಂದ ಬೇಗನೇ ಹೊರಟುಹೋದನು.
08023041a ಪ್ರಣಯಾದ್ಬಹುಮಾನಾಚ್ಚ ತಂ ನಿಗೃಹ್ಯ ಸುತಸ್ತವ।
08023041c ಅಬ್ರವೀನ್ಮಧುರಂ ವಾಕ್ಯಂ ಸಾಮ ಸರ್ವಾರ್ಥಸಾಧಕಂ।।
ನಿನ್ನ ಮಗನು ಅವನ ಮೇಲಿನ ಪ್ರೀತಿಯಿಂದಲೂ ಗೌರವದಿಂದಲೂ ಅವನನ್ನು ತಡೆದು ವಿನೀತನಾಗಿ ಸರ್ವಾರ್ಥಸಾಧಕವಾದ ಈ ಮಧುರ ಮತ್ತು ಸೌಮ್ಯ ಮಾತುಗಳನ್ನಾಡಿದನು:
08023042a ಯಥಾ ಶಲ್ಯ ತ್ವಮಾತ್ಥೇದಮೇವಮೇತದಸಂಶಯಂ।
08023042c ಅಭಿಪ್ರಾಯಸ್ತು ಮೇ ಕಶ್ಚಿತ್ತಂ ನಿಬೋಧ ಜನೇಶ್ವರ।।
“ಶಲ್ಯ! ಜನೇಶ್ವರ! ಇದರ ಕುರಿತು ನೀನು ತಿಳಿದುಕೊಂಡಿರುವುದೇ ಸರಿ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ನನ್ನ ಈ ಒಂದು ಅಭಿಪ್ರಾಯವನ್ನೂ ಕೇಳು.
08023043a ನ ಕರ್ಣೋಽಭ್ಯಧಿಕಸ್ತ್ವತ್ತಃ ಶಂಕೇ ನೈವ ಕಥಂ ಚನ।
08023043c ನ ಹಿ ಮದ್ರೇಶ್ವರೋ ರಾಜಾ ಕುರ್ಯಾದ್ಯದನೃತಂ ಭವೇತ್।।
ಕರ್ಣನು ನಿನಗಿಂತಲೂ ಅಧಿಕನಲ್ಲ ಎನ್ನುವುದರಲ್ಲಿ ಯಾವುದೇ ರೀತಿಯ ಶಂಕೆಯೂ ಇಲ್ಲ. ರಾಜಾ ಮದ್ರೇಶ್ವರನು ಇದನ್ನು ಸುಳ್ಳಾಗಿಸುವ ಕಾರ್ಯವೇನನ್ನೂ ಮಾಡಲಾರನು ಎನ್ನುವುದೂ ನಿಶ್ಚಯವಾದುದೇ.
08023044a ಋತಮೇವ ಹಿ ಪೂರ್ವಾಸ್ತೇ ವಹಂತಿ ಪುರುಷೋತ್ತಮಾಃ।
08023044c ತಸ್ಮಾದಾರ್ತಾಯನಿಃ ಪ್ರೋಕ್ತೋ ಭವಾನಿತಿ ಮತಿರ್ಮಮ।।
ನಿನ್ನ ಪೂರ್ವಜ ಪುರುಷೋತ್ತಮರೆಲ್ಲರೂ ಸತ್ಯವನ್ನೇ ಹೇಳುತ್ತಿದ್ದರು. ಆದುದರಿಂದಲೇ ನಿನ್ನನ್ನು ಆರ್ತಾಯನಿ ಎಂದು ಕರೆಯುತ್ತಾರೆಂದು ನನ್ನ ಅನಿಸಿಕೆ.
08023045a ಶಲ್ಯಭೂತಶ್ಚ ಶತ್ರೂಣಾಂ ಯಸ್ಮಾತ್ತ್ವಂ ಭುವಿ ಮಾನದ।
08023045c ತಸ್ಮಾಚ್ಚಲ್ಯೇತಿ ತೇ ನಾಮ ಕಥ್ಯತೇ ಪೃಥಿವೀಪತೇ।।
ಮಾನದ! ಪೃಥಿವೀಪತೇ! ಶತ್ರುಗಳಿಗೆ ನೀನು ಮುಳ್ಳಂತಿರುವೆಯಾದುದರಿಂದ ನಿನ್ನನ್ನು ಭುವಿಯಲ್ಲಿ ಶಲ್ಯ ಎಂದು ಕರೆಯುತ್ತಾರೆ.
08023046a ಯದೇವ ವ್ಯಾಹೃತಂ ಪೂರ್ವಂ ಭವತಾ ಭೂರಿದಕ್ಷಿಣ।
08023046c ತದೇವ ಕುರು ಧರ್ಮಜ್ಞ ಮದರ್ಥಂ ಯದ್ಯದುಚ್ಯಸೇ।।
ಭೂರಿದಕ್ಷಿಣ! ಧರ್ಮಜ್ಞ! ನನಗೋಸ್ಕರವಾಗಿ ಹಿಂದೆ ನೀನು ಹೇಳಿದಂತೆ ಮತ್ತು ಈಗ ನೀನು ಹೇಳುವಂತೆಯೇ ಮಾಡು!
08023047a ನ ಚ ತ್ವತ್ತೋ ಹಿ ರಾಧೇಯೋ ನ ಚಾಹಮಪಿ ವೀರ್ಯವಾನ್।
08023047c ವೃಣೀಮಸ್ತ್ವಾಂ ಹಯಾಗ್ರ್ಯಾಣಾಂ ಯಂತಾರಮಿತಿ ಸಂಯುಗೇ।।
ವೀರ್ಯವಾನ್! ನಿನಗೆ ಸಮನಾಗಿ ರಾಧೇಯನೂ ಇಲ್ಲ. ನಾನೂ ಕೂಡ ನಿನ್ನ ಸಮನಿಲ್ಲ. ಆದುದರಿಂದಲೇ ಸಂಗ್ರಾಮದಲ್ಲಿ ಅಶ್ವವಿಧ್ಯೆಯಲ್ಲಿ ಅಗ್ರಗಣ್ಯನಾಗಿರುವ ನಿನ್ನನ್ನೇ ಸಾರಥಿಯನ್ನಾಗಿ ಆರಿಸಿದ್ದೇನೆ.
08023048a ಯಥಾ ಹ್ಯಭ್ಯಧಿಕಂ ಕರ್ಣಂ ಗುಣೈಸ್ತಾತ ಧನಂಜಯಾತ್।
08023048c ವಾಸುದೇವಾದಪಿ ತ್ವಾಂ ಚ ಲೋಕೋಽಯಮಿತಿ ಮನ್ಯತೇ।।
ಕರ್ಣನು ಹೇಗೆ ಗುಣದಲ್ಲಿ ಧನಂಜಯನಿಗಿಂತ ಅಧಿಕನೋ ಹಾಗೆಯೇ ನೀನೂ ಕೂಡ ವಾಸುದೇವನಿಗಿಂತಲೂ ಅಧಿಕನೆಂದು ಲೋಕವು ಮನ್ನಿಸುತ್ತದೆ.
08023049a ಕರ್ಣೋ ಹ್ಯಭ್ಯಧಿಕಃ ಪಾರ್ಥಾದಸ್ತ್ರೈರೇವ ನರರ್ಷಭ।
08023049c ಭವಾನಪ್ಯಧಿಕಃ ಕೃಷ್ಣಾದಶ್ವಯಾನೇ ಬಲೇ ತಥಾ।।
ನರರ್ಷಭ! ಅಸ್ತ್ರಗಳಲ್ಲಿ ಕರ್ಣನು ಹೇಗೆ ಪಾರ್ಥನಿಗಿಂತಲೂ ಅಧಿಕನೋ ಹಾಗೆ ನೀನೂ ಕೂಡ ಅಶ್ವಯಾನದಲ್ಲಿ ಕೃಷ್ಣನಿಗಿಂತಲೂ ಅಧಿಕ ಬಲಶಾಲಿಯಾಗಿರುವೆ.
08023050a ಯಥಾಶ್ವಹೃದಯಂ ವೇದ ವಾಸುದೇವೋ ಮಹಾಮನಾಃ।
08023050c ದ್ವಿಗುಣಂ ತ್ವಂ ತಥಾ ವೇತ್ಥ ಮದ್ರರಾಜ ನ ಸಂಶಯಃ।।
ಮದ್ರರಾಜ! ಅಶ್ವಹೃದಯವನ್ನು ಎಷ್ಟು ಮಹಾಮನಸ್ವಿ ವಾಸುದೇವನು ತಿಳಿದಿರುವನೋ ಅದಕ್ಕೂ ಎರಡು ಗುಣ ಹೆಚ್ಚು ನಿನಗೆ ತಿಳಿದಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.”
08023051 ಶಲ್ಯ ಉವಾಚ।
08023051a ಯನ್ಮಾ ಬ್ರವೀಷಿ ಗಾಂದಾರೇ ಮಧ್ಯೇ ಸೈನ್ಯಸ್ಯ ಕೌರವ।
08023051c ವಿಶಿಷ್ಟಂ ದೇವಕೀಪುತ್ರಾತ್ಪ್ರೀತಿಮಾನಸ್ಮ್ಯಹಂ ತ್ವಯಿ।।
ಶಲ್ಯನು ಹೇಳಿದನು: “ಗಾಂಧಾರೇ! ಕೌರವ! ಸೈನ್ಯದ ಮಧ್ಯದಲ್ಲಿ ನಾನು ದೇವಕೀಪುತ್ರನಿಗಿಂತಲೂ ವಿಶಿಷ್ಟನೆಂದು ಹೇಳಿದುದಕ್ಕೆ ನಾನು ನಿನ್ನ ಮೇಲೆ ಪ್ರೀತನಾಗಿದ್ದೇನೆ.
08023052a ಏಷ ಸಾರಥ್ಯಮಾತಿಷ್ಠೇ ರಾಧೇಯಸ್ಯ ಯಶಸ್ವಿನಃ।
08023052c ಯುಧ್ಯತಃ ಪಾಂಡವಾಗ್ರ್ಯೇಣ ಯಥಾ ತ್ವಂ ವೀರ ಮನ್ಯಸೇ।।
ವೀರ! ನೀನು ಇಚ್ಛಿಸಿರುವಂತೆ ಪಾಂಡವಾಗ್ರನೊಡನೆ ಯುದ್ಧಮಾಡುವ ಯಶಸ್ವಿ ರಾಧೇಯನ ಸಾರಥ್ಯವನ್ನು ವಹಿಸಿಕೊಳ್ಳುತ್ತೇನೆ.
08023053a ಸಮಯಶ್ಚ ಹಿ ಮೇ ವೀರ ಕಶ್ಚಿದ್ವೈಕರ್ತನಂ ಪ್ರತಿ।
08023053c ಉತ್ಸೃಜೇಯಂ ಯಥಾಶ್ರದ್ಧಮಹಂ ವಾಚೋಽಸ್ಯ ಸನ್ನಿಧೌ।।
ವೀರ! ಆದರೆ ನನ್ನದೊಂದು ನಿಬಂಧನೆಯಿದೆ. ನಾನು ವೈಕರ್ತನನ ಬಳಿಯಿರುವಾಗ ನಾನು ಅವನೊಡನೆ ನನಗೆ ಇಷ್ಟವಾದಂತೆ ಮಾತನಾಡುತ್ತೇನೆ!””
08023054 ಸಂಜಯ ಉವಾಚ।
08023054a ತಥೇತಿ ರಾಜನ್ಪುತ್ರಸ್ತೇ ಸಹ ಕರ್ಣೇನ ಭಾರತ।
08023054c ಅಬ್ರವೀನ್ಮದ್ರರಾಜಸ್ಯ ಸುತಂ ಭರತಸತ್ತಮ।।
ಭಾರತ! ರಾಜನ್! ಭರತಸತ್ತಮ! ಹಾಗೆಯೇ ಆಗಲೆಂದು ಕರ್ಣನೊಡನೆ ನಿನ್ನ ಮಗನೂ ಮದ್ರರಾಜಸುತನಿಗೆ ಹೇಳಿದರು.
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಶಲ್ಯಸಾರಥ್ಯೇ ತ್ರಯೋವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಶಲ್ಯಸಾರಥ್ಯ ಎನ್ನುವ ಇಪ್ಪತ್ಮೂರನೇ ಅಧ್ಯಾಯವು.