022 ಕರ್ಣದುರ್ಯೋಧನಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ಕರ್ಣವಧ ಪರ್ವ

ಅಧ್ಯಾಯ 22

ಸಾರ

ಧೃತರಾಷ್ಟ್ರನು ಅರ್ಜುನನ ಪರಾಕ್ರಮವನ್ನು ವರ್ಣಿಸುತ್ತಾ, ಯುದ್ಧದ ವಿವರಣೆಯನ್ನು ಮುಂದುವರಿಸುವಂತೆ ಸಂಜಯನನ್ನು ಕೇಳಿದುದು (1-4). ಹದಿನಾರನೆಯ ದಿನದ ರಾತ್ರಿ ಕೌರವರ ಮಂತ್ರಾಲೋಚನೆಯನ್ನು ಮಾಡಿ ಮರುದಿನ ಯುದ್ಧಭೂಮಿಗೆ ಹಿಂದಿರುಗಿದುದು (5-10). ಧೃತರಾಷ್ಟ್ರನ ಶೋಕ (11-23). ಹದಿನೇಳನೆಯ ದಿನದ ಬೆಳಿಗ್ಗೆ ಕರ್ಣನು ದುರ್ಯೋಧನನ ಬಳಿಸಾರಿ ಆ ದಿನ ತಾನು ಅರ್ಜುನನನ್ನು ಎದುರಿಸುವೆನೆಂದೂ, ಶಲ್ಯನು ತನಗೆ ಸಾರಥಿಯಾಗಬೇಕೆಂದು ಕೇಳಿಕೊಳ್ಳುವುದು (24-58). ದುರ್ಯೋಧನನು ಹಾಗೆಯೇ ಆಗುವಂತೆ ಮಾಡುತ್ತೇನೆಂದು ಹೇಳಿ ಶಲ್ಯನ ಬಳಿ ಹೋದುದು (59-61).

08022001 ಧೃತರಾಷ್ಟ್ರ ಉವಾಚ।
08022001a ಸ್ವೇನ ಚ್ಚಂದೇನ ನಃ ಸರ್ವಾನ್ನಾವಧೀದ್ವ್ಯಕ್ತಮರ್ಜುನಃ।
08022001c ನ ಹ್ಯಸ್ಯ ಸಮರೇ ಮುಚ್ಯೇತಾಂತಕೋಽಪ್ಯಾತತಾಯಿನಃ।।

ಧೃತರಾಷ್ಟ್ರನು ಹೇಳಿದನು: “ಅರ್ಜುನನು ತನ್ನ ಇಚ್ಛೆಯಿಂದಲೇ ನಮ್ಮವರೆಲ್ಲರನ್ನೂ ವಧಿಸಿದನೆನ್ನುವುದು ವ್ಯಕ್ತವಾಗಿದೆ. ಸಮರದಲ್ಲಿ ಆ ಆತತಾಯಿಯು ಅಂತಕನನ್ನೂ ಬಿಡುವುದಿಲ್ಲ!

08022002a ಪಾರ್ಥೋ ಹ್ಯೇಕೋಽಹರದ್ಭದ್ರಾಂ ಏಕಶ್ಚಾಗ್ನಿಮತರ್ಪಯತ್।
08022002c ಏಕಶ್ಚೇಮಾಂ ಮಹೀಂ ಜಿತ್ವಾ ಚಕ್ರೇ ಬಲಿಭೃತೋ ನೃಪಾನ್।।

ಏಕೆಂದರೆ ಅರ್ಜುನನು ಏಕಾಂಗಿಯಾಗಿಯೇ ಸುಭದ್ರೆಯನ್ನು ಅಪಹರಿಸಿದನು. ಏಕಾಂಗಿಯಾಗಿಯೇ ಅಗ್ನಿಯನ್ನು ತೃಪ್ತಿಪಡಿಸಿದನು. ಓರ್ವನಾಗಿಯೇ ಮಹಿಯನ್ನು ಗೆದ್ದು ನೃಪರು ಕಪ್ಪಗಳನ್ನು ನೀಡುವಂತೆ ಮಾಡಿದನು.

08022003a ಏಕೋ ನಿವಾತಕವಚಾನವಧೀದ್ದಿವ್ಯಕಾರ್ಮುಕಃ।
08022003c ಏಕಃ ಕಿರಾತರೂಪೇಣ ಸ್ಥಿತಂ ಶರ್ವಮಯೋಧಯತ್।।

ಆ ದಿವ್ಯಕಾರ್ಮುಕನು ಏಕಾಂಗಿಯಾಗಿಯೇ ನಿವಾತಕವಚರನ್ನು ವಧಿಸಿದನು. ಏಕಾಂಗಿಯಾಗಿಯ ಕಿರಾತರೂಪದಲ್ಲಿದ್ದ ಶರ್ವನೊಡನೆ ಹೋರಾಡಿದನು.

08022004a ಏಕೋಽಭ್ಯರಕ್ಷದ್ಭರತಾನೇಕೋ ಭವಮತೋಷಯತ್।
08022004c ತೇನೈಕೇನ ಜಿತಾಃ ಸರ್ವೇ ಮದೀಯಾ ಉಗ್ರತೇಜಸಃ।
08022004e ತೇ ನ ನಿಂದ್ಯಾಃ ಪ್ರಶಸ್ಯಾಶ್ಚ ಯತ್ತೇ ಚಕ್ರುರ್ಬ್ರವೀಹಿ ತತ್।।

ಏಕಾಂಗಿಯಾಗಿಯೇ ಅವನು ಭರತರನ್ನು ರಕ್ಷಿಸಿದನು. ಏಕಾಂಗಿಯಾಗಿಯೇ ಭವನನ್ನು ತೃಪ್ತಿಪಡಿಸಿದನು. ಆ ಉಗ್ರತೇಜಸ್ವಿಯೊಬ್ಬನಿಂದಲೇ ನನ್ನವರೆಲ್ಲರೂ ಸೋತರು. ನಿಂದ್ಯಾರ್ಹರಲ್ಲದ ಮತ್ತು ಪ್ರಶಂಸೆಗೆ ಪಾತ್ರರಾದ ಅವರು ಮುಂದೆ ಏನು ಮಾಡಿದರೆನ್ನುವುದನ್ನು ಹೇಳು!”

08022005 ಸಂಜಯ ಉವಾಚ।
08022005a ಹತಪ್ರಹತವಿಧ್ವಸ್ತಾ ವಿವರ್ಮಾಯುಧವಾಹನಾಃ।
08022005c ದೀನಸ್ವರಾ ದೂಯಮಾನಾ ಮಾನಿನಃ ಶತ್ರುಭಿರ್ಜಿತಾಃ।।
08022006a ಶಿಬಿರಸ್ಥಾಃ ಪುನರ್ಮಂತ್ರಂ ಮಂತ್ರಯಂತಿ ಸ್ಮ ಕೌರವಾಃ।
08022006c ಭಗ್ನದಂಷ್ಟ್ರಾ ಹತವಿಷಾಃ ಪದಾಕ್ರಾಂತಾ ಇವೋರಗಾಃ।।

ಸಂಜಯನು ಹೇಳಿದನು: “ಪ್ರಹಾರಗಳಿಂದ ಹತರಾಗಿ, ವಿಧ್ವಸ್ಥರಾಗಿದ್ದ, ಕವಚ-ಆಯುಧ-ವಾಹನಗಳಿಂದ ವಿಹೀನರಾಗಿದ್ದ, ಶತ್ರುಗಳಿಂದ ಸೋತಿದ್ದ ಮಾನಿನಿಗಳಾದ ಕೌರವರು, ಹಲ್ಲುಗಳು ಕಿತ್ತು ವಿಷವನ್ನು ಕಳೆದುಕೊಂಡ ಮತ್ತು ಕಾಲಿನಿಂದ ಮೆಟ್ಟಲ್ಪಟ್ಟ ಸರ್ಪಗಳಂತೆ, ಶಿಬಿರದಲ್ಲಿ ಕುಳಿತು ದೀನಸ್ವರದಲ್ಲಿ ಮಾತನಾಡಿಕೊಳ್ಳುತ್ತಾ ಮಂತ್ರಾಲೋಚನೆ ಮಾಡಿದರು.

08022007a ತಾನಬ್ರವೀತ್ತತಃ ಕರ್ಣಃ ಕ್ರುದ್ಧಃ ಸರ್ಪ ಇವ ಶ್ವಸನ್।
08022007c ಕರಂ ಕರೇಣಾಭಿಪೀಡ್ಯ ಪ್ರೇಕ್ಷಮಾಣಸ್ತವಾತ್ಮಜಂ।।

ಆಗ ಕ್ರುದ್ಧ ಸರ್ಪದಂತೆ ನಿಟ್ಟುಸಿರು ಬಿಡುತ್ತಾ ಕರ್ಣನು ಕೈಯಿಂದ ಕೈಯನ್ನು ಉಜ್ಜಿಕೊಳ್ಳುತ್ತಾ ನಿನ್ನ ಮಗನನ್ನು ನೋಡುತ್ತಾ ಅವರಿಗೆ ಹೇಳಿದನು:

08022008a ಯತ್ತೋ ದೃಢಶ್ಚ ದಕ್ಷಶ್ಚ ಧೃತಿಮಾನರ್ಜುನಃ ಸದಾ।
08022008c ಸ ಬೋಧಯತಿ ಚಾಪ್ಯೇನಂ ಪ್ರಾಪ್ತಕಾಲಮಧೋಕ್ಷಜಃ।।

“ಅರ್ಜುನನು ಸದಾ ಪ್ರಯತ್ನಶೀಲನು, ದೃಢನ, ದಕ್ಷನು ಮತ್ತು ಧೃತಿಮಾನನು. ಅಧೋಕ್ಷಜನೂ ಕೂಡ ಅವನಿಗೆ ಕಾಲಕ್ಕೆ ತಕ್ಕಂತೆ ಸಲಹೆಗಳನ್ನು ನೀಡುತ್ತಿದ್ದಾನೆ.

08022009a ಸಹಸಾಸ್ತ್ರವಿಸರ್ಗೇಣ ವಯಂ ತೇನಾದ್ಯ ವಂಚಿತಾಃ।
08022009c ಶ್ವಸ್ತ್ವಹಂ ತಸ್ಯ ಸಂಕಲ್ಪಂ ಸರ್ವಂ ಹಂತಾ ಮಹೀಪತೇ।।

ಮಹೀಪತೇ! ಅವನು ಅಸ್ತ್ರಗಳನ್ನು ಬಿಡುತ್ತಿರುವ ವೇಗದಿಂದಾಗಿ ಇಂದು ನಾವು ವಂಚಿತರಾದೆವು. ನಾಳೆ ನಾನು ಅವನ ಸಂಕಲ್ಪವೆಲ್ಲವನ್ನೂ ನಿರರ್ಥಕಗೊಳಿಸುತ್ತೇನೆ!”

08022010a ಏವಮುಕ್ತಸ್ತಥೇತ್ಯುಕ್ತ್ವಾ ಸೋಽನುಜಜ್ಞೇ ನೃಪೋತ್ತಮಾನ್।
08022010c ಸುಖೋಷಿತಾಸ್ತೇ ರಜನೀಂ ಹೃಷ್ಟಾ ಯುದ್ಧಾಯ ನಿರ್ಯಯುಃ।।

ಅದಕ್ಕೆ “ಹಾಗೆಯೇ ಆಗಲಿ!” ಎಂದು ಹೇಳಿ ದುರ್ಯೋಧನನು ನೃಪೋತ್ತಮರಿಗೆ ಅನುಮತಿಯನ್ನಿತ್ತನು. ರಾತ್ರಿಯನ್ನು ಸುಖವಾಗಿ ಕಳೆದು ಅವರು ಹೃಷ್ಟರಾಗಿ ಯುದ್ಧಕ್ಕೆ ಮರಳಿದರು.

08022011a ತೇಽಪಶ್ಯನ್ವಿಹಿತಂ ವ್ಯೂಹಂ ಧರ್ಮರಾಜೇನ ದುರ್ಜಯಂ।
08022011c ಪ್ರಯತ್ನಾತ್ಕುರುಮುಖ್ಯೇನ ಬೃಹಸ್ಪತ್ಯುಶನೋಮತಾತ್।।

ಬೃಹಸ್ಪತಿ ಮತ್ತು ಉಶನನ ಸಿದ್ಧಾಂತದಂತೆ ಕುರುಮುಖ್ಯ ಧರ್ಮರಾಜನು ಪ್ರಯತ್ನಪಟ್ಟು ರಚಿಸಿದ್ದ ದುರ್ಜಯ ವ್ಯೂಹವನ್ನು ಅವರು ನೋಡಿದರು.

08022012a ಅಥ ಪ್ರತೀಪಕರ್ತಾರಂ ಸತತಂ ವಿಜಿತಾತ್ಮನಾಂ।
08022012c ಸಸ್ಮಾರ ವೃಷಭಸ್ಕಂದಂ ಕರ್ಣಂ ದುರ್ಯೋಧನಸ್ತದಾ।।

ಕೂಡಲೇ ದುರ್ಯೋಧನನು ಸತತವೂ ತನಗೆ ವಿಜಯವನ್ನು ದೊರಕಿಸುವುದರಲ್ಲಿ ನಿರತನಾದ, ಶತ್ರುಗಳಿಗೆ ವಿರುದ್ಧವಾದುದನ್ನು ಮಾಡಬಲ್ಲ, ವೃಷಭಸ್ಕಂಧ ಕರ್ಣನನ್ನು ಸ್ಮರಿಸಿದನು.

08022013a ಪುರಂದರಸಮಂ ಯುದ್ಧೇ ಮರುದ್ಗಣಸಮಂ ಬಲೇ।
08022013c ಕಾರ್ತವೀರ್ಯಸಮಂ ವೀರ್ಯೇ ಕರ್ಣಂ ರಾಜ್ಞೋಽಗಮನ್ಮನಃ।
08022013e ಸೂತಪುತ್ರಂ ಮಹೇಷ್ವಾಸಂ ಬಂದುಮಾತ್ಯಯಿಕೇಷ್ವಿವ।।

ಯುದ್ಧದಲ್ಲಿ ಪುರಂದರನ ಸಮನಾಗಿದ್ದ, ಬಲದಲ್ಲಿ ಮರುದ್ಗಣಗಳ ಸಮನಾಗಿದ್ದ, ವೀರ್ಯದಲ್ಲಿ ಕಾರ್ತವೀರ್ಯನ ಸಮನಾಗಿದ್ದ ಮಹೇಷ್ವಾಸ ಸೂತ್ರಪುತ್ರ ಕರ್ಣನನ್ನು, ಅತ್ಯಂತ ಕಷ್ಟದಲ್ಲಿರುವವನು ಬಂಧುವನ್ನು ನೆನಪಿಸಿಕೊಳ್ಳುವಂತೆ, ರಾಜ ದುರ್ಯೋಧನನು ಮನಸ್ಸಿಗೆ ತಂದುಕೊಂಡನು.”

08022014 ಧೃತರಾಷ್ಟ್ರ ಉವಾಚ।
08022014a ಯದ್ವೋಽಗಮನ್ಮನೋ ಮಂದಾಃ ಕರ್ಣಂ ವೈಕರ್ತನಂ ತದಾ।
08022014c ಅಪ್ಯದ್ರಾಕ್ಷತ ತಂ ಯೂಯಂ ಶೀತಾರ್ತಾ ಇವ ಭಾಸ್ಕರಂ।।

ಧೃತರಾಷ್ಟ್ರನು ಹೇಳಿದನು: “ಛಳಿಯಿಂದ ಪೀಡಿತರಾಗಿರುವವರು ಭಾಸ್ಕರನ ಕಡೆ ನೋಡುವಂತೆ ಆ ಮಂದರ ಮನಸ್ಸು ವೈಕರ್ತನ ಕರ್ಣನೆಡೆಗೆ ಹೋಯಿತೇ?

08022015a ಕೃತೇಽವಹಾರೇ ಸೈನ್ಯಾನಾಂ ಪ್ರವೃತ್ತೇ ಚ ರಣೇ ಪುನಃ।
08022015c ಕಥಂ ವೈಕರ್ತನಃ ಕರ್ಣಸ್ತತ್ರಾಯುಧ್ಯತ ಸಂಜಯ।
08022015e ಕಥಂ ಚ ಪಾಂಡವಾಃ ಸರ್ವೇ ಯುಯುಧುಸ್ತತ್ರ ಸೂತಜಂ।।

ಸಂಜಯ! ಸೇನೆಗಳನ್ನು ಹಿಂದೆ ತೆಗೆದುಕೊಂಡು ಪುನಃ ರಣದಲ್ಲಿ ಯುದ್ಧಕ್ಕೆ ಬಂದಿರುವ ವೈಕರ್ತನ ಕರ್ಣನು ಅಲ್ಲಿ ಹೇಗೆ ಯುದ್ಧಮಾಡಿದನು? ಪಾಂಡವರೆಲ್ಲರೂ ಅಲ್ಲಿ ಸೂತಜನೊಡನೆ ಹೇಗೆ ಯುದ್ಧಮಾಡಿದರು?

08022016a ಕರ್ಣೋ ಹ್ಯೇಕೋ ಮಹಾಬಾಹುರ್ಹನ್ಯಾತ್ಪಾರ್ಥಾನ್ಸಸೋಮಕಾನ್।
08022016c ಕರ್ಣಸ್ಯ ಭುಜಯೋರ್ವೀರ್ಯಂ ಶಕ್ರವಿಷ್ಣುಸಮಂ ಮತಂ।
08022016e ತಥಾಸ್ತ್ರಾಣಿ ಸುಘೋರಾಣಿ ವಿಕ್ರಮಶ್ಚ ಮಹಾತ್ಮನಃ।।
08022017a ದುರ್ಯೋಧನಂ ತದಾ ದೃಷ್ಟ್ವಾ ಪಾಂಡವೇನ ಭೃಶಾರ್ದಿತಂ।
08022017c ಪರಾಕ್ರಾಂತಾನ್ಪಾಂಡುಸುತಾನ್ದೃಷ್ಟ್ವಾ ಚಾಪಿ ಮಹಾಹವೇ।।

ಮಹಾಬಾಹು ಕರ್ಣನೊಬ್ಬನೇ ಸೋಮಕರೊಂದಿಗೆ ಪಾರ್ಥರನ್ನು ಸಂಹರಿಸಬಲ್ಲನು. ಕರ್ಣನ ಭುಜವೀರ್ಯವು ಶಕ್ರ ಮತ್ತು ವಿಷ್ಣುವಿನ ಭುಜವೀರ್ಯಕ್ಕೆ ಸಮನಾಗಿದೆ. ಹಾಗೆಯೇ ಆ ಮಹಾತ್ಮನ ಅಸ್ತ್ರಗಳೂ ವಿಕ್ರಮವೂ ಅತ್ಯಂತ ಘೋರವಾದುದು ಎಂದು ತಿಳಿದುಕೊಂಡಿದ್ದ, ಪಾಂಡವರಿಂದ ಅತ್ಯಂತ ಪೀಡಿತನಾಗಿದ್ದ ದುರ್ಯೋಧನನನ್ನು ನೋಡಿ, ಮತ್ತು ಮಹಾಹವದಲ್ಲಿ ಪರಾಕ್ರಾಂತರಾದ ಪಾಂಡುಸುತರನ್ನು ನೋಡಿ ಕರ್ಣನೇನು ಮಾಡಿದನು?

08022018a ಕರ್ಣಮಾಶ್ರಿತ್ಯ ಸಂಗ್ರಾಮೇ ದರ್ಪೋ ದುರ್ಯೋಧನೇ ಪುನಃ।
08022018c ಜೇತುಮುತ್ಸಹತೇ ಪಾರ್ಥಾನ್ಸಪುತ್ರಾನ್ಸಹಕೇಶವಾನ್।।

ಸಂಗ್ರಾಮದಲ್ಲಿ ಕರ್ಣನನ್ನು ಆಶ್ರಯಿಸಿ ದರ್ಪಿ ದುರ್ಯೋಧನನು ಪುನಃ ಕೇಶವನೊಟ್ಟಿಗಿರುವ ಪಾರ್ಥರನ್ನು ಅವರ ಪುತ್ರರೊಂದಿಗೆ ಜಯಿಸಲು ಉತ್ಸಾಹಹೊಂದಿರುವನಲ್ಲ!

08022019a ಅಹೋ ಬತ ಮಹದ್ದುಃಖಂ ಯತ್ರ ಪಾಂಡುಸುತಾನ್ರಣೇ।
08022019c ನಾತರದ್ರಭಸಃ ಕರ್ಣೋ ದೈವಂ ನೂನಂ ಪರಾಯಣಂ।
08022019e ಅಹೋ ದ್ಯೂತಸ್ಯ ನಿಷ್ಠೇಯಂ ಘೋರಾ ಸಂಪ್ರತಿ ವರ್ತತೇ।।

ರಭಸಯುಕ್ತ ಕರ್ಣನೂ ಕೂಡ ರಣದಲ್ಲಿ ಪಾಂಡುಸುತರನ್ನು ದಾಟಲು ಅಸಮರ್ಥನಾದನೆಂದರೆ ಇದಕ್ಕಿಂತಲೂ ಮಹಾದುಃಖವು ಬೇರೆ ಏನಿದೆ? ನಿಶ್ಚಯವಾಗಿಯೂ ದೈವವೇ ಎಲ್ಲವಕ್ಕೂ ಆಶ್ರಯವಾಗಿದೆ. ಅಯ್ಯೋ! ದ್ಯೂತದಲ್ಲಿ ನಿಷ್ಠೆಯನ್ನಿಟ್ಟುದುದಕ್ಕಾಗಿಯೇ ಈ ರೀತಿ ನಡೆಯುತ್ತಿದೆ!

08022020a ಅಹೋ ದುಃಖಾನಿ ತೀವ್ರಾಣಿ ದುರ್ಯೋಧನಕೃತಾನ್ಯಹಂ।
08022020c ಸಹಿಷ್ಯಾಮಿ ಸುಘೋರಾಣಿ ಶಲ್ಯಭೂತಾನಿ ಸಂಜಯ।।

ಸಂಜಯ! ದುರ್ಯೋಧನನು ಮಾಡಿದುದರಿಂದುಂಟಾದ ತೀವ್ರವಾದ ಘೋರವಾದ ಮುಳ್ಳುಗಳಂತೆ ಚುಚ್ಚುತ್ತಿರುವ ದುಃಖಗಳನ್ನು ಸಹಿಸಿಕೊಂಡಿದ್ದೇನೆ.

08022021a ಸೌಬಲಂ ಚ ತಥಾ ತಾತ ನೀತಿಮಾನಿತಿ ಮನ್ಯತೇ।
08022021c ಕರ್ಣಸ್ಯ ರಭಸೋ ನಿತ್ಯಂ ರಾಜಾ ತಂ ಚಾಪ್ಯನುವ್ರತಃ।।

ಅಯ್ಯಾ! ಸದಾ ಅವನು ಸೌಬಲನನ್ನು ನೀತಿವಂತನೆಂದು ತಿಳಿದುಕೊಂಡಿದ್ದನು. ರಭಸನಾದ ಕರ್ಣನನ್ನು ರಾಜನು ನಿತ್ಯವೂ ಅನುಸರಿಸುತ್ತಿದ್ದನು.

08022022a ಯುದ್ಧೇಷು ನಾಮ ದಿವ್ಯೇಷು ವರ್ತಮಾನೇಷು ಸಂಜಯ।
08022022c ಅಶ್ರೌಷಂ ನಿಹತಾನ್ಪುತ್ರಾನ್ನಿತ್ಯಮೇವ ಚ ನಿರ್ಜಿತಾನ್।।

ಸಂಜಯ! ನಡೆಯುತ್ತಿರುವ ಈ ದೈವನಿಶ್ಚಿತ ಯುದ್ಧದಲ್ಲಿ ನಾನು ನಿತ್ಯವೂ ನನ್ನ ಪುತ್ರರು ಸೋತು ಹತರಾಗುತ್ತಿರುವುದನ್ನು ಕೇಳುತ್ತಿದ್ದೇನೆ.

08022023a ನ ಪಾಂಡವಾನಾಂ ಸಮರೇ ಕಶ್ಚಿದಸ್ತಿ ನಿವಾರಕಃ।
08022023c ಸ್ತ್ರೀಮಧ್ಯಮಿವ ಗಾಹಂತಿ ದೈವಂ ಹಿ ಬಲವತ್ತರಂ।।

ಪಾಂಡವರಾದರೋ ಸ್ತ್ರೀಯರ ಮಧ್ಯೆ ತಡೆಯುವವರು ಯಾರೂ ಇಲ್ಲದಿರುವಂತೆ ಹೋಗುತ್ತಿದ್ದಾರೆ! ದೈವವೇ ಬಲವತ್ತರವಾದುದು!”

08022024 ಸಂಜಯ ಉವಾಚ।
08022024a ಅತಿಕ್ರಾಂತಂ ಹಿ ಯತ್ಕಾರ್ಯಂ ಪಶ್ಚಾಚ್ಚಿಂತಯತೀತಿ ಚ।
08022024c ತಚ್ಚಾಸ್ಯ ನ ಭವೇತ್ಕಾರ್ಯಂ ಚಿಂತಯಾ ಚ ವಿನಶ್ಯತಿ।।

ಸಂಜಯನು ಹೇಳಿದನು: “ಮನುಷ್ಯನು ಹಿಂದೆ ನಡೆದುಹೋದ ಕಾರ್ಯದ ಕುರಿತು ಚಿಂತಿಸುತ್ತಾ ಕುಳಿತರೆ ಅವನ ಈಗಿನ ಕಾರ್ಯವೂ ಕೈಗೂಡುವುದಿಲ್ಲ ಮತ್ತು ಚಿಂತೆಯಿಂದ ಅವನೇ ನಾಶಹೊಂದುತ್ತಾನೆ.

08022025a ತದಿದಂ ತವ ಕಾರ್ಯಂ ತು ದೂರಪ್ರಾಪ್ತಂ ವಿಜಾನತಾ।
08022025c ನ ಕೃತಂ ಯತ್ತ್ವಯಾ ಪೂರ್ವಂ ಪ್ರಾಪ್ತಾಪ್ರಾಪ್ತವಿಚಾರಣೇ।।

ನಿನ್ನ ಆ ಕಾರ್ಯಗಳು ದೂರದಲ್ಲಿ ದೊರಕಿಸುವ ಪರಿಣಾಮಗಳ ಕುರಿತು ನಿನಗೆ ತಿಳಿದಿರಲೇ ಇರಲಿಲ್ಲ ಎಂದೇನಿಲ್ಲ. ಏನಾಗುತ್ತದೆ ಏನಾಗುವುದಿಲ್ಲ ಎಂದು ವಿಚಾರಿಸದೆಯೇ ನೀನು ಹಿಂದೆ ಅವುಗಳನ್ನು ಮಾಡಿರಲಿಲ್ಲ.

08022026a ಉಕ್ತೋಽಸಿ ಬಹುಧಾ ರಾಜನ್ಮಾ ಯುಧ್ಯಸ್ವೇತಿ ಪಾಂಡವೈಃ।
08022026c ಗೃಹ್ಣೀಷೇ ನ ಚ ತನ್ಮೋಹಾತ್ಪಾಂಡವೇಷು ವಿಶಾಂ ಪತೇ।।

ವಿಶಾಂಪತೇ! ರಾಜನ್! ಪಾಂಡವರೇ ಯುದ್ಧಮಾಡುವುದು ಬೇಡ ಎಂದು ನಿನಗೆ ಅನೇಕ ಬಾರಿ ಹೇಳಿದ್ದರು. ಆದರೆ ಮಕ್ಕಳ ಮೇಲಿನ ಮೋಹದಿಂದಾಗಿ ನೀನು ಪಾಂಡವರ ಮಾತನ್ನು ಅಂಗೀಕರಿಸಲಿಲ್ಲ.

08022027a ತ್ವಯಾ ಪಾಪಾನಿ ಘೋರಾಣಿ ಸಮಾಚೀರ್ಣಾನಿ ಪಾಂಡುಷು।
08022027c ತ್ವತ್ಕೃತೇ ವರ್ತತೇ ಘೋರಃ ಪಾರ್ಥಿವಾನಾಂ ಜನಕ್ಷಯಃ।।

ಪಾಂಡವರ ಮೇಲೆ ನೀನು ಅನೇಕ ಘೋರ ಪಾಪಗಳನ್ನೆಸಗಿದ್ದೀಯೆ. ನೀನು ಮಾಡಿದವುಗಳಿಂದಾಗಿ ಈಗ ಪಾರ್ಥಿವರ ಈ ಘೋರ ಜನಕ್ಷಯವು ನಡೆಯುತ್ತಿದೆ.

08022028a ತತ್ತ್ವಿದಾನೀಮತಿಕ್ರಮ್ಯ ಮಾ ಶುಚೋ ಭರತರ್ಷಭ।
08022028c ಶೃಣು ಸರ್ವಂ ಯಥಾವೃತ್ತಂ ಘೋರಂ ವೈಶಸಮಚ್ಯುತ।।

ಭರತರ್ಷಭ! ಆದುದರಿಂದ ಈಗ ನೀನು ನಡೆದುಹೋದುದರ ಕುರಿತು ಸ್ಮರಿಸಿಕೊಂಡು ಶೋಕಿಸಬೇಡ! ಅಚ್ಯುತ! ಈ ಘೋರವಾದ ಯುದ್ಧದಕುರಿತು ಅದು ನಡೆದ ಹಾಗೆ ಎಲ್ಲವನ್ನೂ ಕೇಳು!

08022029a ಪ್ರಭಾತಾಯಾಂ ರಜನ್ಯಾಂ ತು ಕರ್ಣೋ ರಾಜಾನಮಭ್ಯಯಾತ್।
08022029c ಸಮೇತ್ಯ ಚ ಮಹಾಬಾಹುರ್ದುರ್ಯೋಧನಮಭಾಷತ।।

ರಾತ್ರಿಕಳೆದು ಬೆಳಗಾಗಲು ಮಹಾಬಾಹು ಕರ್ಣನು ಸಮಾಲೋಚನೆಗೆಂದು ರಾಜ ದುರ್ಯೋಧನನಲ್ಲಿಗೆ ಬಂದು ಹೀಗೆ ಹೇಳಿದನು:

08022030a ಅದ್ಯ ರಾಜನ್ಸಮೇಷ್ಯಾಮಿ ಪಾಂಡವೇನ ಯಶಸ್ವಿನಾ।
08022030c ಹನಿಷ್ಯಾಮಿ ಚ ತಂ ವೀರಂ ಸ ವಾ ಮಾಂ ನಿಹನಿಷ್ಯತಿ।।

“ರಾಜನ್! ಇಂದು ನಾನು ಯಶಸ್ವಿ ಪಾಂಡವನನ್ನು ಎದುರಿಸುತ್ತೇನೆ. ಆ ವೀರನನ್ನು ಸಂಹರಿಸುತ್ತೇನೆ ಅಥವಾ ಅವನು ನನ್ನನ್ನು ಸಂಹರಿಸುತ್ತಾನೆ.

08022031a ಬಹುತ್ವಾನ್ಮಮ ಕಾರ್ಯಾಣಾಂ ತಥಾ ಪಾರ್ಥಸ್ಯ ಪಾರ್ಥಿವ।
08022031c ನಾಭೂತ್ಸಮಾಗಮೋ ರಾಜನ್ಮಮ ಚೈವಾರ್ಜುನಸ್ಯ ಚ।।

ಪಾರ್ಥಿವ! ಇದೂವರೆಗೆ ನನಗೆ ಮತ್ತು ಪಾರ್ಥನಿಗೆ ಅನೇಕ ಕಾರ್ಯಗಳಿದ್ದವು. ರಾಜನ್! ಆದುದರಿಂದ ನನ್ನ ಮತ್ತು ಅರ್ಜುನನ ಸಮಾಗಮವಾಗಲಿಲ್ಲ.

08022032a ಇದಂ ತು ಮೇ ಯಥಾಪ್ರಜ್ಞಂ ಶೃಣು ವಾಕ್ಯಂ ವಿಶಾಂ ಪತೇ।
08022032c ಅನಿಹತ್ಯ ರಣೇ ಪಾರ್ಥಂ ನಾಹಮೇಷ್ಯಾಮಿ ಭಾರತ।।

ವಿಶಾಂಪತೇ! ಪ್ರಜ್ಞೆಗೆ ಬಂದಂತೆ ನಾನು ಹೇಳುವ ಈ ಮಾತನ್ನು ಕೇಳು. ಭಾರತ! ರಣದಲ್ಲಿ ಪಾರ್ಥನನ್ನು ಸಂಹರಿಸದೆಯೇ ನಾನು ಹಿಂದಿರುಗುವುದಿಲ್ಲ!

08022033a ಹತಪ್ರವೀರೇ ಸೈನ್ಯೇಽಸ್ಮಿನ್ಮಯಿ ಚೈವ ಸ್ಥಿತೇ ಯುಧಿ।
08022033c ಅಭಿಯಾಸ್ಯತಿ ಮಾಂ ಪಾರ್ಥಃ ಶಕ್ರಶಕ್ತ್ಯಾ ವಿನಾಕೃತಂ।।

ಸೇನೆಯಲ್ಲಿನ ಪ್ರಮುಖರು ಹತರಾಗಿ ಹೋಗಿರುವುದರಿಂದ ಮತ್ತು ನನ್ನಲ್ಲಿ ಶಕ್ರನಿತ್ತ ಶಕ್ತಿಯು ಈಗ ಇಲ್ಲವಾಗಿರುವುದರಿಂದ ಪಾರ್ಥನು ಇಂದು ನನ್ನನ್ನೇ ಎದುರಿಸಿ ಯುದ್ಧಮಾಡುವವನಿದ್ದಾನೆ.

08022034a ತತಃ ಶ್ರೇಯಸ್ಕರಂ ಯತ್ತೇ ತನ್ನಿಬೋಧ ಜನೇಶ್ವರ।
08022034c ಆಯುಧಾನಾಂ ಚ ಯದ್ವೀರ್ಯಂ ದ್ರವ್ಯಾಣಾಮರ್ಜುನಸ್ಯ ಚ।।

ಜನೇಶ್ವರ! ಆದುದರಿಂದ ಶ್ರೇಯಸ್ಕರವಾದ ಏನನ್ನು ನಾನು ಹೇಳುವವನಿದ್ದೇನೋ ಅದನ್ನು ಕೇಳು. ಆಯುಧ, ವೀರ್ಯ ಮತ್ತು ದ್ರವ್ಯಗಳಲ್ಲಿ ನಾನು ಮತ್ತು ಅರ್ಜುನರು ಸಮನಾಗಿದ್ದೇವೆ.

08022035a ಕಾಯಸ್ಯ ಮಹತೋ ಭೇದೇ ಲಾಘವೇ ದೂರಪಾತನೇ।
08022035c ಸೌಷ್ಠವೇ ಚಾಸ್ತ್ರಯೋಗೇ ಚ ಸವ್ಯಸಾಚೀ ನ ಮತ್ಸಮಃ।।

ಆದರೆ ದೊಡ್ಡ ಕಾಯಗಳುಳ್ಳವುಗಳನ್ನು ಹೊಡೆಯುವುದರಲ್ಲಿ, ದೂರ ಬಾಣಪ್ರಯೋಗಮಾಡುವುದರಲ್ಲಿ, ಯುದ್ಧಕೌಶಲದಲ್ಲಿ, ದಿವ್ಯಾಸ್ತ್ರಪ್ರಯೋಗಗಳಲ್ಲಿ ಸವ್ಯಸಾಚಿಯು ನನ್ನ ಸಮನಲ್ಲ.

08022036a ಸರ್ವಾಯುಧಮಹಾಮಾತ್ರಂ ವಿಜಯಂ ನಾಮ ತದ್ಧನುಃ।
08022036c ಇಂದ್ರಾರ್ಥಮಭಿಕಾಮೇನ ನಿರ್ಮಿತಂ ವಿಶ್ವಕರ್ಮಣಾ।।

ಸರ್ವ ಆಯುಧಗಳಲ್ಲಿ ಮಹಾಮಾತ್ರವೆಂದೆನಿಸಿಕೊಂಡಿರುವ ವಿಜಯ ಎಂಬ ಹೆಸರಿನ ನನ್ನ ಈ ಧನುಸ್ಸನ್ನು ವಿಶ್ವಕರ್ಮನು ಇಂದ್ರನಿಗೆ ಪ್ರಿಯವನ್ನುಂಟುಮಾಡಲು ಬಯಸಿಯೇ ನಿರ್ಮಿಸಿದ್ದನು.

08022037a ಯೇನ ದೈತ್ಯಗಣಾನ್ರಾಜಂ ಜಿತವಾನ್ವೈ ಶತಕ್ರತುಃ।
08022037c ಯಸ್ಯ ಘೋಷೇಣ ದೈತ್ಯಾನಾಂ ವಿಮುಹ್ಯಂತಿ ದಿಶೋ ದಶ।
08022037e ತದ್ಭಾರ್ಗವಾಯ ಪ್ರಾಯಚ್ಚಚ್ಚಕ್ರಃ ಪರಮಸಮ್ಮತಂ।।

ರಾಜನ್! ಇದರಿಂದಲೇ ಶತಕ್ರತುವು ದೈತ್ಯಗಣಗಳನ್ನು ಜಯಿಸಿದನು. ಇದರ ಘೋಷದಿಂದ ದೈತ್ಯರಿಗೆ ದಿಕ್ಕುಗಳೇ ತೋಚುತ್ತಿರಲಿಲ್ಲ. ಪರಮಸಮ್ಮತವಾದ ಇದನ್ನು ಶಕ್ರನು ಭಾರ್ಗವನಿಗೆ ನೀಡಿದನು.

08022038a ತದ್ದಿವ್ಯಂ ಭಾರ್ಗವೋ ಮಹ್ಯಮದದಾದ್ಧನುರುತ್ತಮಂ।
08022038c ಯೇನ ಯೋತ್ಸ್ಯೇ ಮಹಾಬಾಹುಮರ್ಜುನಂ ಜಯತಾಂ ವರಂ।
08022038e ಯಥೇಂದ್ರಃ ಸಮರೇ ಸರ್ವಾನ್ದೈತೇಯಾನ್ವೈ ಸಮಾಗತಾನ್।।

ಆ ದಿವ್ಯ ಉತ್ತಮ ಧನುಸ್ಸನ್ನು ಭಾರ್ಗವನು ನನಗೆ ನೀಡಿದನು. ಸಮರದಲ್ಲಿ ಕೂಡಿ ಬಂದಿದ್ದ ಸರ್ವ ದೈತ್ಯರನ್ನೂ ಯಾವುದನ್ನು ಹಿಡಿದು ಎದುರಿಸಿದ್ದನೋ ಅದೇ ಧನುಸ್ಸಿನಿಂದ ನಾನು ಗೆಲ್ಲುವವರಲ್ಲಿ ಶ್ರೇಷ್ಠ ಮಹಾಬಾಹು ಅರ್ಜುನನೊಡನೆ ಯುದ್ಧಮಾಡುತ್ತೇನೆ.

08022039a ಧನುರ್ಘೋರಂ ರಾಮದತ್ತಂ ಗಾಂಡೀವಾತ್ತದ್ವಿಶಿಷ್ಯತೇ।
08022039c ತ್ರಿಹ್ಸಪ್ತಕೃತ್ವಃ ಪೃಥಿವೀ ಧನುಷಾ ತೇನ ನಿರ್ಜಿತಾ।।

ಪರಶುರಾಮದತ್ತ ಧನುಸ್ಸು ಘೋರವಾದುದು; ಗಾಂಡೀವಕ್ಕಿಂತಲೂ ವಿಶೇಷವಾದುದು! ಈ ಧನುಸ್ಸಿನಿಂದಲೇ ರಾಮನು ಪೃಥ್ವಿಯನ್ನು ೨೧ ಬಾರಿ ಜಯಿಸಿದ್ದನು.

08022040a ಧನುಷೋ ಯಸ್ಯ ಕರ್ಮಾಣಿ ದಿವ್ಯಾನಿ ಪ್ರಾಹ ಭಾರ್ಗವಃ।
08022040c ತದ್ರಾಮೋ ಹ್ಯದದಾನ್ಮಹ್ಯಂ ಯೇನ ಯೋತ್ಸ್ಯಾಮಿ ಪಾಂಡವಂ।।

ಯಾವ ಧನುಸ್ಸಿನ ದಿವ್ಯ ಕರ್ಮಗಳನ್ನು ಭಾರ್ಗವನು ಹೇಳಿ ನನಗೆ ದಯಪಾಲಿಸಿದ್ದನೋ ಅದೇ ಧನುಸ್ಸಿನಿಂದಲೇ ನಾನು ಪಾಂಡವ ಅರ್ಜುನನೊಡನೆ ಯುದ್ಧಮಾಡುತ್ತೇನೆ.

08022041a ಅದ್ಯ ದುರ್ಯೋಧನಾಹಂ ತ್ವಾಂ ನಂದಯಿಷ್ಯೇ ಸಬಾಂಧವಂ।
08022041c ನಿಹತ್ಯ ಸಮರೇ ವೀರಮರ್ಜುನಂ ಜಯತಾಂ ವರಂ।।

ದುರ್ಯೋಧನ! ಇಂದು ಸಮರದಲ್ಲಿ ನಾನು ಗೆಲ್ಲುವವರಲ್ಲಿ ಶ್ರೇಷ್ಠ ವೀರ ಅರ್ಜುನನನ್ನು ಸಂಹರಿಸಿ ಬಾಂಧವರೊಂದಿಗೆ ನಿನ್ನನ್ನು ಸಂತೋಷಗೊಳಿಸುತ್ತೇನೆ!

08022042a ಸಪರ್ವತವನದ್ವೀಪಾ ಹತದ್ವಿಡ್ಭೂಃ ಸಸಾಗರಾ।
08022042c ಪುತ್ರಪೌತ್ರಪ್ರತಿಷ್ಠಾ ತೇ ಭವಿಷ್ಯತ್ಯದ್ಯ ಪಾರ್ಥಿವ।।

ಪಾರ್ಥಿವ! ಇಂದು ಈ ಭೂಮಿಯು ಪರ್ವತ-ವನ-ದ್ವೀಪಗಳು ಮತ್ತು ಸಾಗರಗಳೊಂದಿಗೆ ನಿನ್ನ ಪುತ್ರ ಪೌತ್ರರಲ್ಲಿ ಪ್ರತಿಷ್ಠಳಾಗಿರುತ್ತಾಳೆ!

08022043a ನಾಸಾಧ್ಯಂ ವಿದ್ಯತೇ ಮೇಽದ್ಯ ತ್ವತ್ಪ್ರಿಯಾರ್ಥಂ ವಿಶೇಷತಃ।
08022043c ಸಂಯಗ್ಧರ್ಮಾನುರಕ್ತಸ್ಯ ಸಿದ್ಧಿರಾತ್ಮವತೋ ಯಥಾ।।

ಉತ್ತಮ ಧರ್ಮದಲ್ಲಿಯೇ ಅನುರಕ್ತನಾಗಿರುವವನಿಗೆ ಆತ್ಮಸಿದ್ಧಿಯಾಗಿರುವವನು ಹೇಗೋ ಹಾಗೆ ಇಂದು ನಾನು ವಿಶೇಷವಾಗಿ ನಿನ್ನ ಪ್ರೀತಿಗೋಸ್ಕರ ಮಾಡುವವುಗಳಲ್ಲಿ ಅಸಾಧ್ಯವೆನ್ನುವುದೇ ಇಲ್ಲವೆಂದು ತಿಳಿ.

08022044a ನ ಹಿ ಮಾಂ ಸಮರೇ ಸೋಢುಂ ಸ ಶಕ್ತೋಽಗ್ನಿಂ ತರುರ್ಯಥಾ।
08022044c ಅವಶ್ಯಂ ತು ಮಯಾ ವಾಚ್ಯಂ ಯೇನ ಹೀನೋಽಸ್ಮಿ ಫಲ್ಗುನಾತ್।।

ಹುಲ್ಲುಮೆದೆಯು ಅಗ್ನಿಯನ್ನು ಹೇಗೋ ಹಾಗೆ ಸಮರದಲ್ಲಿ ನನ್ನನ್ನು ಅರ್ಜುನನು ಸಹಿಸಿಕೊಳ್ಳಲಾರ. ಫಲ್ಗುನನಿಗಿಂತ ಯಾವುದರಲ್ಲಿ ನಾನು ಕಡಿಮೆ ಎನ್ನುವುದನ್ನು ಕೂಡ ಹೇಳುವುದು ಇಲ್ಲಿ ಅವಶ್ಯಕವಾಗಿದೆ.

08022045a ಜ್ಯಾ ತಸ್ಯ ಧನುಷೋ ದಿವ್ಯಾ ತಥಾಕ್ಷಯ್ಯೌ ಮಹೇಷುಧೀ।
08022045c ತಸ್ಯ ದಿವ್ಯಂ ಧನುಃ ಶ್ರೇಷ್ಠಂ ಗಾಂಡೀವಮಜರಂ ಯುಧಿ।।

ಅವನ ಧನುಸ್ಸಿನ ಮೌರ್ವಿ ಮತ್ತು ಅಕ್ಷಯ ಬತ್ತಳಿಕೆಗಳು ದಿವ್ಯವಾದವುಗಳು. ಅವನ ಧಿವ್ಯ ಶ್ರೇಷ್ಠ ಗಾಂಡಿವ ಧನುಸ್ಸು ಯುದ್ಧದಲ್ಲಿ ಅಜರವಾದುದು.

08022046a ವಿಜಯಂ ಚ ಮಹದ್ದಿವ್ಯಂ ಮಮಾಪಿ ಧನುರುತ್ತಮಂ।
08022046c ತತ್ರಾಹಮಧಿಕಃ ಪಾರ್ಥಾದ್ಧನುಷಾ ತೇನ ಪಾರ್ಥಿವ।।

ಪಾರ್ಥಿವ! ನನ್ನಲ್ಲಿ ಕೂಡ ಮಹಾದಿವ್ಯ ಉತ್ತಮ ವಿಜಯ ಧನುಸ್ಸಿದೆ. ಧನುಸ್ಸಿನ ವಿಷಯದಲ್ಲಿ ನಾನು ಪಾರ್ಥನಿಗಿಂತ ಅಧಿಕನಾಗಿದ್ದೇನೆ.

08022047a ಮಯಾ ಚಾಭ್ಯಧಿಕೋ ವೀರಃ ಪಾಂಡವಸ್ತನ್ನಿಬೋಧ ಮೇ।
08022047c ರಶ್ಮಿಗ್ರಾಹಶ್ಚ ದಾಶಾರ್ಹಃ ಸರ್ವಲೋಕನಮಸ್ಕೃತಃ।।
08022048a ಅಗ್ನಿದತ್ತಶ್ಚ ವೈ ದಿವ್ಯೋ ರಥಃ ಕಾಂಚನಭೂಷಣಃ।
08022048c ಅಚ್ಚೇದ್ಯಃ ಸರ್ವತೋ ವೀರ ವಾಜಿನಶ್ಚ ಮನೋಜವಾಃ।
08022048e ಧ್ವಜಶ್ಚ ದಿವ್ಯೋ ದ್ಯುತಿಮಾನ್ವಾನರೋ ವಿಸ್ಮಯಂಕರಃ।।
08022049a ಕೃಷ್ಣಶ್ಚ ಸ್ರಷ್ಟಾ ಜಗತೋ ರಥಂ ತಮಭಿರಕ್ಷತಿ।
08022049c ಏಭಿರ್ದ್ರವ್ಯೈರಹಂ ಹೀನೋ ಯೋದ್ಧುಮಿಚ್ಚಾಮಿ ಪಾಂಡವಂ।।

ವೀರ ಪಾಂಡವನು ನನಗಿಂತಲೂ ಯಾವುದರಲ್ಲಿ ಅಧಿಕ ಎನ್ನುವುದನ್ನು ಕೇಳು. ಸರ್ವಲೋಕನಮಸ್ಕೃತ ದಾಶಾರ್ಹನು ಅವನ ರಥದ ಕುದುರೆಗಳ ಕಡಿವಾಣಗಳನ್ನು ಹಿಡಿದಿದ್ದಾನೆ. ಅವನ ಆ ಕಾಂಚನಭೂಷಣ ದಿವ್ಯ ರಥವು ಅಗ್ನಿದತ್ತವಾದುದು. ವೀರ! ಅವನ ರಥದ ಯಾವುದೇ ಭಾಗವನ್ನಾಗಲೀ ತುಂಡುಮಾಡಲು ಸಾಧ್ಯವಿಲ್ಲವು. ಅವನ ಕುದುರೆಗಳು ಮನಸ್ಸಿನಷ್ಟೇ ವೇಗವುಳ್ಳವುಗಳು. ದಿವ್ಯ ದ್ಯುತಿಮಾನ ವಿಸ್ಮಯಂಕರ ವಾನರನೇ ಅವನ ಧ್ವಜದಲ್ಲಿದ್ದಾನೆ. ಜಗತ್ತಿನ ಸೃಷ್ಟಾ ಕೃಷ್ಣನೇ ಅವನ ರಥವನ್ನು ರಕ್ಷಿಸುತ್ತಿದ್ದಾನೆ. ಇಂತಹ ದ್ರವ್ಯಗಳಿಂದ ನಾನು ಹೀನನಾಗಿದ್ದರೂ ಪಾಂಡವನೊಡನೆ ಯುದ್ಧಮಾಡಲು ಬಯಸುತ್ತೇನೆ.

08022050a ಅಯಂ ತು ಸದೃಶೋ ವೀರಃ ಶಲ್ಯಃ ಸಮಿತಿಶೋಭನಃ।
08022050c ಸಾರಥ್ಯಂ ಯದಿ ಮೇ ಕುರ್ಯಾದ್ಧ್ರುವಸ್ತೇ ವಿಜಯೋ ಭವೇತ್।।

ಈ ಸಮಿತಿಶೋಭನ ವೀರ ಶಲ್ಯನು ಕೃಷ್ಣನ ಸದೃಶನಾಗಿದ್ದಾನೆ. ಒಂದುವೇಳೆ ಅವನು ನನ್ನ ಸಾರಥ್ಯವನ್ನು ಮಾಡಿದರೆ ನನಗೆ ವಿಜಯವಾಗುತ್ತದೆಯೆನ್ನುವುದು ನಿಶ್ಚಯ!

08022051a ತಸ್ಯ ಮೇ ಸಾರಥಿಃ ಶಲ್ಯೋ ಭವತ್ವಸುಕರಃ ಪರೈಃ।
08022051c ನಾರಾಚಾನ್ಗಾರ್ಧ್ರಪತ್ರಾಂಶ್ಚ ಶಕಟಾನಿ ವಹಂತು ಮೇ।।

ಶತ್ರುಗಳಿಂದ ಜಯಿಸಲು ಸುಲಭಸಾಧ್ಯನಲ್ಲದ ಆ ಶಲ್ಯನು ನನ್ನ ಸಾರಥಿಯಾಗಲಿ. ರಣಹದ್ದಿನ ಗರಿಗಳನ್ನು ಕೂಡಿದ ನಾರಾಚಗಳನ್ನು ತುಂಬಿಸಿದ ಬಂಡಿಗಳು ನನ್ನ ಹಿಂದೆ ಬರಲಿ.

08022052a ರಥಾಶ್ಚ ಮುಖ್ಯಾ ರಾಜೇಂದ್ರ ಯುಕ್ತಾ ವಾಜಿಭಿರುತ್ತಮೈಃ।
08022052c ಆಯಾಂತು ಪಶ್ಚಾತ್ಸತತಂ ಮಾಮೇವ ಭರತರ್ಷಭ।।

ರಾಜೇಂದ್ರ! ಭರತರ್ಷಭ! ಉತ್ತಮ ಕುದುರೆಗಳನ್ನು ಕಟ್ಟಿದ ರಥಗಳು ನನ್ನ ಹಿಂದೆಯೇ ಸತತವಾಗಿ ಬರುತ್ತಿರಲಿ.

08022053a ಏವಮಭ್ಯಧಿಕಃ ಪಾರ್ಥಾದ್ಭವಿಷ್ಯಾಮಿ ಗುಣೈರಹಂ।
08022053c ಶಲ್ಯೋ ಹ್ಯಭ್ಯಧಿಕಃ ಕೃಷ್ಣಾದರ್ಜುನಾದಧಿಕೋ ಹ್ಯಹಂ।।

ಹೀಗೆ ನಾನು ಗುಣಗಳಲ್ಲಿ ಪಾರ್ಥನಿಗಿಂತ ಅಧಿಕನಾಗುವೆನು. ನಾನು ಅರ್ಜುನನಿಗಿಂತ ಅಧಿಕನಾಗಿರುವುದಕ್ಕಿಂತ ಶಲ್ಯನು ಕೃಷ್ಣನಿಗೆ ಅಧಿಕನಾಗಿರುವನು.

08022054a ಯಥಾಶ್ವಹೃದಯಂ ವೇದ ದಾಶಾರ್ಹಃ ಪರವೀರಹಾ।
08022054c ತಥಾ ಶಲ್ಯೋಽಪಿ ಜಾನೀತೇ ಹಯಾನಾಂ ವೈ ಮಹಾರಥಃ।।

ಹೇಗೆ ಪರವೀರಹ ದಾಶಾರ್ಹನು ಅಶ್ವಹೃದಯವನ್ನು ತಿಳಿದುಕೊಂಡಿರುವನೋ ಹಾಗೆ ಮಹಾರಥ ಶಲ್ಯನೂ ಕೂಡ ಕುದುರೆಗಳನ್ನು ತಿಳಿದಿದ್ದಾನೆ.

08022055a ಬಾಹುವೀರ್ಯೇ ಸಮೋ ನಾಸ್ತಿ ಮದ್ರರಾಜಸ್ಯ ಕಶ್ಚನ।
08022055c ತಥಾಸ್ತ್ರೈರ್ಮತ್ಸಮೋ ನಾಸ್ತಿ ಕಶ್ಚಿದೇವ ಧನುರ್ಧರಃ।।

ಮದ್ರರಾಜನ ಬಾಹುವೀರ್ಯಕ್ಕೆ ಸಮನಾದವನು ಯಾರೂ ಇಲ್ಲ. ಹಾಗೆಯೇ ಅಸ್ತ್ರಗಳಲ್ಲಿ ನನ್ನ ಸಮನಾದ ಧನುರ್ಧರನು ಎಲ್ಲಿಯೂ ಇಲ್ಲ.

08022056a ತಥಾ ಶಲ್ಯಸಮೋ ನಾಸ್ತಿ ಹಯಯಾನೇ ಹ ಕಶ್ಚನ।
08022056c ಸೋಽಯಮಭ್ಯಧಿಕಃ ಪಾರ್ಥಾದ್ಭವಿಷ್ಯತಿ ರಥೋ ಮಮ।।

ಕುದುರೆಯನ್ನು ಓಡಿಸುವುದರಲ್ಲಿ ಶಲ್ಯನಿಗೆ ಸಮನಾದವನು ಯಾರೂ ಇಲ್ಲ. ಆದುದರಿಂದ ಅವನು ನನ್ನ ರಥವನ್ನು ಓಡಿಸುವವನಾದರೆ ನನ್ನ ರಥವು ಪಾರ್ಥನ ರಥಕ್ಕಿಂತ ಅಧಿಕವಾಗುವುದು.

08022057a ಏತತ್ಕೃತಂ ಮಹಾರಾಜ ತ್ವಯೇಚ್ಚಾಮಿ ಪರಂತಪ।
08022057c ಏವಂ ಕೃತೇ ಕೃತಂ ಮಹ್ಯಂ ಸರ್ವಕಾಮೈರ್ಭವಿಷ್ಯತಿ।।

ಪರಂತಪ! ಮಹಾರಾಜ! ನನ್ನ ಈ ಒಂದು ಕೆಲಸವನ್ನು ಮಾಡಿಕೊಡಬೇಕೆಂದು ಬಯಸುತ್ತೇನೆ. ಇದೊಂದನ್ನು ಮಾಡಿದರೆ ನನ್ನ ಸರ್ವಕಾಮಗಳನ್ನೂ ಸಫಲಗೊಳಿಸಿದಂತಾಗುತ್ತದೆ.

08022058a ತತೋ ದ್ರಷ್ಟಾಸಿ ಸಮರೇ ಯತ್ಕರಿಷ್ಯಾಮಿ ಭಾರತ।
08022058c ಸರ್ವಥಾ ಪಾಂಡವಾನ್ಸರ್ವಾಂ ಜೇಷ್ಯಾಮ್ಯದ್ಯ ಸಮಾಗತಾನ್।।

ಭಾರತ! ಆಗ ನಾನು ಸಮರದಲ್ಲಿ ಏನು ಮಾಡಬಲ್ಲೆ ಎನ್ನುವುದನ್ನು ನಿನಗೆ ತೋರಿಸುತ್ತೇನೆ. ಇಂದು ಸರ್ವಥಾ ಸೇರಿರುವ ಪಾಂಡವರೆಲ್ಲರನ್ನೂ ಯುದ್ಧದಲ್ಲಿ ಜಯಿಸುತ್ತೇನೆ.”

08022059 ದುರ್ಯೋಧನ ಉವಾಚ।
08022059a ಸರ್ವಮೇತತ್ಕರಿಷ್ಯಾಮಿ ಯಥಾ ತ್ವಂ ಕರ್ಣ ಮನ್ಯಸೇ।
08022059c ಸೋಪಾಸಂಗಾ ರಥಾಃ ಸಾಶ್ವಾ ಅನುಯಾಸ್ಯಂತಿ ಸೂತಜ।।

ದುರ್ಯೋಧನನು ಹೇಳಿದನು: “ಕರ್ಣ! ನೀನು ಬಯಸಿರುವಂತೆ ಎಲ್ಲವನ್ನೂ ಮಾಡುತ್ತೇನೆ. ಸೂತಜ! ಕುದುರೆಗಳೊಂದಿಗೆ ಸಜ್ಜಾಗಿದ್ದ ರಥಗಳು ನಿನ್ನನ್ನು ಅನುಸರಿಸಿ ಬರುತ್ತವೆ.

08022060a ನಾರಾಚಾನ್ಗಾರ್ಧ್ರಪಕ್ಷಾಂಶ್ಚ ಶಕಟಾನಿ ವಹಂತು ತೇ।
08022060c ಅನುಯಾಸ್ಯಾಮ ಕರ್ಣ ತ್ವಾಂ ವಯಂ ಸರ್ವೇ ಚ ಪಾರ್ಥಿವಾಃ।।

ಕರ್ಣ! ಗಾರ್ಧ್ರಪಕ್ಷಗಳ ನಾರಾಚಗಳನ್ನು ಹೊತ್ತ ಬಂಡಿಗಳು ಮತ್ತು ನಾವೆಲ್ಲ ಸರ್ವ ಪಾರ್ಥಿವರೂ ನಿನ್ನನ್ನು ಅನುಸರಿಸಿ ಬರುತ್ತೇವೆ!””

08022061 ಸಂಜಯ ಉವಾಚ।
08022061a ಏವಮುಕ್ತ್ವಾ ಮಹಾರಾಜ ತವ ಪುತ್ರಾಃ ಪ್ರತಾಪವಾನ್।
08022061c ಅಭಿಗಮ್ಯಾಬ್ರವೀದ್ರಾಜಾ ಮದ್ರರಾಜಮಿದಂ ವಚಃ।।

ಸಂಜಯನು ಹೇಳಿದನು: “ಮಹಾರಾಜ! ನಿನ್ನ ಮಗ ಪ್ರತಾಪವಾನನು ಹೀಗೆ ಹೇಳಿ ರಾಜ ಮದ್ರರಾಜನಲ್ಲಿಗೆ ಹೋಗಿ ಅವನಿಗೆ ಹೀಗೆ ಹೇಳಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಕರ್ಣದುರ್ಯೋಧನಸಂವಾದೇ ದ್ವಾವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಕರ್ಣದುರ್ಯೋಧನಸಂವಾದ ಎನ್ನುವ ಇಪ್ಪತ್ತೆರಡನೇ ಅಧ್ಯಾಯವು.