021 ಪ್ರಥಮಯುದ್ಧದಿವಸಾವಹಾರಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ಕರ್ಣವಧ ಪರ್ವ

ಅಧ್ಯಾಯ 21

ಸಾರ

ರಣಭೂಮಿಯ ವರ್ಣನೆ (1-6). ಕರ್ಣ-ಸಾತ್ಯಕಿಯರ ಯುದ್ಧ (7-12). ಅರ್ಜುನನು ಕೌರವ ಸೇನೆಯನ್ನು ನಾಶಪಡಿಸಿದುದು (13-17). ದುರ್ಯೋಧನನು ಅರ್ಜುನನನ್ನು ಎದುರಿಸಿಸಲು ಅಶ್ವತ್ಥಾಮ-ಕೃತವರ್ಮ-ಕರ್ಣರು ದುರ್ಯೋಧನನ ಸಹಾಯಕ್ಕೆ ಬಂದುದು (18-23). ಕರ್ಣನು ಪಾಂಡವ ಸೇನೆಯನ್ನು ಧ್ವಂಸಗೊಳಿಸಿದುದು (24-34). ಹದಿನಾರನೆಯ ದಿನದ ಯುದ್ಧ ಸಮಾಪ್ತಿ (35-42).

08021001 ಸಂಜಯ ಉವಾಚ।
08021001a ತತಃ ಕರ್ಣಂ ಪುರಸ್ಕೃತ್ಯ ತ್ವದೀಯಾ ಯುದ್ಧದುರ್ಮದಾಃ।
08021001c ಪುನರಾವೃತ್ಯ ಸಂಗ್ರಾಮಂ ಚಕ್ರುರ್ದೇವಾಸುರೋಪಮಂ।।

ಸಂಜಯನು ಹೇಳಿದನು: “ಆಗ ನಿನ್ನಕಡೆಯ ಯುದ್ಧದುರ್ಮದರು ಕರ್ಣನನ್ನು ಮುಂದೆಮಾಡಿಕೊಂಡು ಪುನಃ ಹಿಂದಿರುಗಿ ದೇವಾಸುರಸಮಾನ ಸಂಗ್ರಾಮವನ್ನು ನಡೆಸಿದರು.

08021002a ದ್ವಿರದರಥನರಾಶ್ವಶಂಖಶಬ್ದೈಃ ಪರಿಹೃಷಿತಾ ವಿವಿಧೈಶ್ಚ ಶಸ್ತ್ರಪಾತೈಃ।
08021002c ದ್ವಿರದರಥಪದಾತಿಸಾರ್ಥವಾಹಾಃ ಪರಿಪತಿತಾಭಿಮುಖಾಃ ಪ್ರಜಃರಿರೇ ತೇ।।

ಆನೆ-ರಥ-ಸೈನಿಕ-ಅಶ್ವ-ಶಂಖಗಳ ಶಬ್ಧಗಳಿಂದ ಹರ್ಷಿತರಾದ ಅವರು ರಥ-ಗಜ-ಅಶ್ವ-ಪದಾತಿ ಸೈನಿಕರು ಶತ್ರುಗಳನ್ನು ಎದುರಿಸಿ ವಿವಿಧ ಶಸ್ತ್ರಗಳನ್ನು ಪ್ರಯೋಗಿಸಿ ಪ್ರಹರಿಸಿದರು.

08021003a ಶರಪರಶುವರಾಸಿಪಟ್ಟಿಶೈರ್ ಇಷುಭಿರನೇಕವಿಧೈಶ್ಚ ಸಾದಿತಾಃ।
08021003c ದ್ವಿರದರಥಹಯಾ ಮಹಾಹವೇ ವರಪುರುಷೈಃ ಪುರುಷಾಶ್ಚ ವಾಹನೈಃ।।

ಆ ಮಹಾಯುದ್ಧದಲ್ಲಿ ಆನೆ-ರಥ-ಕುದುರೆಗಳನ್ನೇರಿದ ಶ್ರೇಷ್ಠ ಪುರುಷರು ಬಾಣ-ಪರಶು-ಖಡ್ಗ-ಪಟ್ಟಿಶಗಳಿಂದಲೂ ಅನೇಕ ವಿಧದ ಬಾಣಗಳಿಂದಲೂ ಪುರುಷರನ್ನು ಸಂಹರಿಸುತ್ತಿದ್ದರು.

08021004a ಕಮಲದಿನಕರೇಂದುಸಂನಿಭೈಃ ಸಿತದಶನೈಃ ಸುಮುಖಾಕ್ಷಿನಾಸಿಕೈಃ।
08021004c ರುಚಿರಮುಕುಟಕುಂಡಲೈರ್ಮಹೀ ಪುರುಷಶಿರೋಭಿರವಸ್ತೃತಾ ಬಭೌ।।

ಕಮಲ-ಸೂರ್ಯ-ಚಂದ್ರರ ಕಾಂತಿಗೆ ಸಮಾನ ಕಾಂತಿಯುಳ್ಳ ಬಿಳಿಯ ಹಲ್ಲುಗಳ ಸಾಲುಗಳಿಂದ, ಮೂಗು ಮತ್ತು ಕಣ್ಣುಗಳಿಂದ ಶೋಭಿಸುತ್ತಿದ್ದ ಸುಂದರ ಮುಖಗಳಿಂದ, ಸುಂದರ ಮುಕುಟ-ಕುಂಡಲಗಳಿಂದ ಕೂಡಿದ ಪುರುಷರ ಶಿರಗಳಿಂದ ರಣಭೂಮಿಯು ಶೋಭಿಸುತ್ತಿತ್ತು.

08021005a ಪರಿಘಮುಸಲಶಕ್ತಿತೋಮರೈರ್ ನಖರಭುಶುಂಡಿಗದಾಶತೈರ್ದ್ರುತಾಃ।
08021005c ದ್ವಿರದನರಹಯಾಃ ಸಹಸ್ರಶೋ ರುಧಿರನದೀಪ್ರವಹಾಸ್ತದಾಭವನ್।।

ನೂರಾರು ಪರಿಘ, ಮುಸುಲ, ಶಕ್ತಿ, ತೋಮರ, ನಖರ, ಭುಶಂಡಿ ಮತ್ತು ಗದೆಗಳಿಂದ ಗಾಯಗೊಂಡ ಮನುಷ್ಯರು, ಆನೆಗಳು ಮತ್ತು ಕುದುರೆಗಳಿಂದಾಗಿ ರಣಭೂಮಿಯಲ್ಲಿ ರಕ್ತದ ಪ್ರವಾಹವೇ ಹರಿಯಿತು.

08021006a ಪ್ರಹತನರರಥಾಶ್ವಕುಂಜರಂ ಪ್ರತಿಭಯದರ್ಶನಮುಲ್ಬಣಂ ತದಾ।
08021006c ತದಹಿತನಿಹತಂ ಬಭೌ ಬಲಂ ಪಿತೃಪತಿರಾಷ್ಟ್ರಮಿವ ಪ್ರಜಾಕ್ಷಯೇ।।

ಜಜ್ಜಲ್ಪಟ್ಟಿದ್ದ ಮನುಷ್ಯರು, ರಥಗಳು, ಆನೆಗಳು ಮತ್ತು ಕುದುರೆಗಳು ನೋಡಲು ಅತಿ ಭಯಂಕರವಾಗಿ ಕಾಣುತ್ತಿದ್ದವು. ಶತ್ರುಗಳಿಂದ ಹತವಾಗಿದ್ದ ಆ ಸೇನೆಗಳಿಂದ ರಣಭೂಮಿಯು ಪ್ರಳಯಕಾಲದಲ್ಲಿನ ಯಮರಾಜ್ಯದಂತೆ ಕಾಣುತ್ತಿತ್ತು.

08021007a ಅಥ ತವ ನರದೇವ ಸೈನಿಕಾಸ್ ತವ ಚ ಸುತಾಃ ಸುರಸೂನುಸಂನಿಭಾಃ।
08021007c ಅಮಿತಬಲಪುರಹ್ಸರಾ ರಣೇ ಕುರುವೃಷಭಾಃ ಶಿನಿಪುತ್ರಮಭ್ಯಯುಃ।।

ನರದೇವ! ಅನಂತರ ನಿನ್ನ ಸೈನಿಕರು ಮತ್ತು ಸುರಪುತ್ರರಂತಿದ್ದ ಕುರುವೃಷಭ ನಿನ್ನ ಮಕ್ಕಳು ರಣದಲ್ಲಿ ಅಮಿತಬಲವನ್ನು ಮುಂದಿರಿಸಿಕೊಂಡು ಶಿನಿಯ ಮೊಮ್ಮಗನನ್ನು ಆಕ್ರಮಣಿಸಿದರು.

08021008a ತದತಿರುಚಿರಭೀಮಮಾಬಭೌ ಪುರುಷವರಾಶ್ವರಥದ್ವಿಪಾಕುಲಂ।
08021008c ಲವಣಜಲಸಮುದ್ಧತಸ್ವನಂ ಬಲಮಮರಾಸುರಸೈನ್ಯಸಂನಿಭಂ।।

ಅಮರಾಸುರ ಸೇನೆಗಳಂತಿದ್ದ, ಸಮುದ್ರದ ಭೋರ್ಗರೆಯಂತೆ ಗರ್ಜಿಸುತ್ತಿದ್ದ, ಶ್ರೇಷ್ಠ ನರ-ಅಶ್ವ-ರಥ-ಆನೆಗಳಿಂದ ಕೂಡಿದ ನಿನ್ನ ಸೇನೆಯು ರಕ್ತರಂಜಿತವಾಗಿಯೂ ಭಯಂಕರವಾಗಿಯೂ ಪ್ರಕಾಶಿಸುತ್ತಿತ್ತು.

08021009a ಸುರಪತಿಸಮವಿಕ್ರಮಸ್ತತಸ್ ತ್ರಿದಶವರಾವರಜೋಪಮಂ ಯುಧಿ।
08021009c ದಿನಕರಕಿರಣಪ್ರಭೈಃ ಪೃಷತ್ಕೈ ರವಿತನಯೋಽಭ್ಯಹನಚ್ಚಿನಿಪ್ರವೀರಂ।।

ಸುರಪತಿಸಮ ವಿಕ್ರಮಿ ರವಿತನಯನು ಯುದ್ಧದಲ್ಲಿ ದಿನಕರಕಿರಣಗಳ ಪ್ರಭೆಯುಳ್ಳ ಪೃಷತಗಳಿಂದ ಸುರರಾಜನ ಅನುಜ ವಿಷ್ಣುವಿನ ಸಮನಾಗಿದ್ದ ಶಿನಿಪ್ರವೀರನನ್ನು ಪ್ರಹರಿಸಿದನು.

08021010a ತಂ ಅಪಿ ಸರಥವಾಜಿಸಾರಥಿಂ ಶಿನಿವೃಷಭೋ ವಿವಿಧೈಃ ಶರೈಸ್ತ್ವರನ್।
08021010c ಭುಜಗವಿಷಸಮಪ್ರಭೈ ರಣೇ ಪುರುಷವರಂ ಸಮವಾಸ್ತೃಣೋತ್ತದಾ।।

ಶಿನಿವೃಷಭನೂ ಕೂಡ ರಣದಲ್ಲಿ ಸರ್ಪವಿಷಸಮಪ್ರಭೆಯುಳ್ಳ ವಿವಿಧ ಶರಗಳಿಂದ ತ್ವರೆಮಾಡಿ ಪುರುಷಶ್ರೇಷ್ಠ ಕರ್ಣನನ್ನು ಅವನ ರಥ-ಕುದುರೆಗಳು ಮತ್ತು ಸಾರಥಿಯರನ್ನೂ ಸೇರಿಸಿ, ಪ್ರಹರಿಸಿದನು.

08021011a ಶಿನಿವೃಷಭಶರಪ್ರಪೀಡಿತಂ ತವ ಸುಹೃದೋ ವಸುಷೇಣಂ ಅಭ್ಯಯುಃ।
08021011c ತ್ವರಿತಮತಿರಥಾ ರಥರ್ಷಭಂ ದ್ವಿರದರಥಾಶ್ವಪದಾತಿಭಿಃ ಸಹ।।

ಶಿನಿವೃಷಭನ ಶರಪೀಡಿತ ರಥರ್ಷಭ ವಸುಷೇಣನ ಬಳಿಗೆ ನಿನ್ನ ಸುಹೃದಯ ಅತಿರಥರು ಆನೆ-ರಥ-ಅಶ್ವ-ಪದಾತಿಗಳೊಂದಿಗೆ ಧಾವಿಸಿಬಂದರು.

08021012a ತಮುದಧಿನಿಭಮಾದ್ರವದ್ಬಲೀ ತ್ವರಿತತರೈಃ ಸಮಭಿದ್ರುತಂ ಪರೈಃ।
08021012c ದ್ರುಪದಸುತಸಖಸ್ತದಾಕರೋತ್ ಪುರುಷರಥಾಶ್ವಗಜಕ್ಷಯಂ ಮಹತ್।।

ಆಗ ಅತಿವೇಗಶಾಲಿಗಳಾದ ದ್ರುಪದಸುತ ಮತ್ತು ಅವನ ಸಖರು ಸಮುದ್ರದಂತಿದ್ದ ಶತ್ರು ಸೇನೆಯನ್ನು ಆಕ್ರಮಣಿಸಿ, ಮಹಾ ಪುರುಷ-ರಥ-ಅಶ್ವ-ಗಜಕ್ಷಯವನ್ನು ನಡೆಸಿದರು.

08021013a ಅಥ ಪುರುಷವರೌ ಕೃತಾಹ್ನಿಕೌ ಭವಮಭಿಪೂಜ್ಯ ಯಥಾವಿಧಿ ಪ್ರಭುಂ।
08021013c ಅರಿವಧಕೃತನಿಶ್ಚಯೌ ದ್ರುತಂ ತವ ಬಲಮರ್ಜುನಕೇಶವೌ ಸೃತೌ।।

ಅನಂತರ ಪುರುಷಶ್ರೇಷ್ಠ ಅರ್ಜುನ-ಕೇಶವರು ಆಹ್ನಿಕವನ್ನು ಪೂರೈಸಿ ಯಥಾವಿಧಿಯಾಗಿ ಪ್ರಭು ಭವನನ್ನು ಪೂಜಿಸಿ ಶತ್ರುವಧೆಗೈಯುವ ನಿಶ್ಚಯಮಾಡಿಕೊಂಡು ನಿನ್ನ ಸೇನೆಯ ಕಡೆ ಧಾವಿಸಿ ಬಂದರು.

08021014a ಜಲದನಿನದನಿಸ್ವನಂ ರಥಂ ಪವನವಿಧೂತಪತಾಕಕೇತನಂ।
08021014c ಸಿತಹಯಮುಪಯಾಂತಮಂತಿಕಂ ಹೃತಮನಸೋ ದದೃಶುಸ್ತದಾರಯಃ।।

ಗುಡುಗಿನಂತೆ ಶಬ್ಧಮಾಡುತ್ತಿದ್ದ, ಗಾಳಿಯಿಂದ ಬೀಸುತ್ತಿದ್ದ ಪಾತಕೆಗಳಿಂದ ಯುಕ್ತವಾದ, ಬಿಳಿಯ ಕುದುರೆಗಳು ಎಳೆದು ತರುತ್ತಿದ್ದ ಅವರ ರಥವು ಹತ್ತಿರಬರುತ್ತಿರುವುದನ್ನು ಶತ್ರುಗಳು ಉತ್ಸಾಹಶೂನ್ಯರಾಗಿ ನೋಡಿದರು.

08021015a ಅಥ ವಿಸ್ಫಾರ್ಯ ಗಾಂಡೀವಂ ರಣೇ ನೃತ್ಯನ್ನಿವಾರ್ಜುನಃ।
08021015c ಶರಸಂಬಾಧಮಕರೋತ್ಖಂ ದಿಶಃ ಪ್ರದಿಶಸ್ತಥಾ।।

ಅನಂತರ ಅರ್ಜುನನು ರಣದಲ್ಲಿ ನರ್ತಿಸುತ್ತಿರುವನೋ ಎನ್ನುವಂತೆ ಗಾಂಡೀವವನ್ನು ಟೇಂಕರಿಸಿ ಶರಸಾಲುಗಳಿಂದ ಆಕಾಶವನ್ನೂ, ದಿಕ್ಕು-ಉಪದಿಕ್ಕುಗಳನ್ನೂ ತುಂಬಿಸಿದನು.

08021016a ರಥಾನ್ವಿಮಾನಪ್ರತಿಮಾನ್ಸಜ್ಜಯಂತ್ರಾಯುಧಧ್ವಜಾನ್।
08021016c ಸಸಾರಥೀಂಸ್ತದಾ ಬಾಣೈರಭ್ರಾಣೀವಾನಿಲೋಽವಧೀತ್।।

ಬಿರುಗಾಳಿಯು ಮೇಘಮಂಡಲವನ್ನು ಚದುರಿಸಿಬಿಡುವಂತೆ ಅವನು ಬಾಣಗಳಿಂದ ವಿಮಾನದಂತಿರುವ ರಥಗಳನ್ನು, ಅವುಗಳ ಯಂತ್ರ, ಆಯುಧ, ಧ್ವಜಗಳೊಂದಿಗೆ ಮತ್ತು ಸಾರಥಿಗಳೊಂದಿಗೆ ದಿಕ್ಕಾಪಾಲಾಗಿ ಮಾಡಿದನು.

08021017a ಗಜಾನ್ಗಜಪ್ರಯಂತ್ರ್ಯಂಚ ವೈಜಯಂತ್ಯಾಯುಧಧ್ವಜಾನ್।
08021017c ಸಾದಿನೋಽಶ್ವಾಂಶ್ಚ ಪತ್ತೀಂಶ್ಚ ಶರೈರ್ನಿನ್ಯೇ ಯಮಕ್ಷಯಂ।।

ಅರ್ಜುನನು ಪತಾಕೆ-ಆಯುಧ-ಧ್ವಜ ಸಹಿತ ಆನೆಗಳನ್ನು, ಮಾವುತರನ್ನು, ಕುದುರೆಗಳನ್ನೂ, ಕುದುರೆಸವಾರರನ್ನೂ ಬಾಣಗಳಿಂದ ಯಮಕ್ಷಯಕ್ಕೆ ಕಳುಹಿಸಿದನು.

08021018a ತಂ ಅಂತಕಮಿವ ಕ್ರುದ್ಧಮನಿವಾರ್ಯಂ ಮಹಾರಥಂ।
08021018c ದುರ್ಯೋಧನೋಽಭ್ಯಯಾದೇಕೋ ನಿಘ್ನನ್ಬಾಣೈಃ ಪೃಥಗ್ವಿಧೈಃ।।

ಅಂತಕನಂತೆ ಕ್ರುದ್ಧ ತಡೆಯಲಸಾಧ್ಯ ಆ ಮಹಾರಥನನ್ನು ದುರ್ಯೋಧನನು ಓರ್ವನೇ ವಿವಿಧ ಬಾಣಗಳಿಂದ ಪ್ರಹರಿಸಿ ಆಕ್ರಮಣಿಸಿದನು.

08021019a ತಸ್ಯಾರ್ಜುನೋ ಧನುಃ ಸೂತಂ ಕೇತುಂ ಅಶ್ವಾಂಶ್ಚ ಸಾಯಕೈಃ।
08021019c ಹತ್ವಾ ಸಪ್ತಭಿರೇಕೈಕಂ ಚತ್ರಂ ಚಿಚ್ಚೇದ ಪತ್ರಿಣಾ।।

ಅರ್ಜುನನು ಅವನ ಧನುಸ್ಸನ್ನೂ, ಸೂತನನ್ನೂ, ಕೇತುವನ್ನೂ, ಕುದುರೆಗಳನ್ನೂ ಏಳು ಸಾಯಕಗಳಿಂದ ನಾಶಗೊಳಿಸಿ ಒಂದೇ ಒಂದು ಪತ್ರಿಯಿಂದ ಅವನ ಚತ್ರವನ್ನೂ ತುಂಡರಿಸಿದನು.

08021020a ನವಮಂ ಚ ಸಮಾಸಾದ್ಯ ವ್ಯಸೃಜತ್ಪ್ರತಿಘಾತಿನಂ।
08021020c ದುರ್ಯೋಧನಾಯೇಷುವರಂ ತಂ ದ್ರೌಣಿಃ ಸಪ್ತಧಾಚ್ಚಿನತ್।।

ದುರ್ಯೋಧನನನ್ನು ಸಂಹರಿಸಲು ಅವನು ಒಂಭತ್ತನೆಯ ಶ್ರೇಷ್ಠ ಬಾಣವೊಂದನ್ನು ತೆಗೆದು ಪ್ರಹರಿಸಲು ದ್ರೌಣಿಯು ಅದನ್ನು ಏಳು ಭಾಗಗಳನ್ನಾಗಿ ತುಂಡರಿಸಿದನು.

08021021a ತತೋ ದ್ರೌಣೇರ್ಧನುಶ್ಚಿತ್ತ್ವಾ ಹತ್ವಾ ಚಾಶ್ವವರಾಂ ಶರೈಃ।
08021021c ಕೃಪಸ್ಯಾಪಿ ತಥಾತ್ಯುಗ್ರಂ ಧನುಶ್ಚಿಚ್ಚೇದ ಪಾಂಡವಃ।।

ಆಗ ಪಾಂಡವ ಅರ್ಜುನನು ದ್ರೌಣಿಯ ಧನುಸ್ಸನ್ನು ತುಂಡರಿಸಿ ಮತ್ತು ಶ್ರೇಷ್ಠ ಕುದುರೆಗಳನ್ನು ಬಾಣಗಳಿಂದ ಸಂಹರಿಸಿ ಕೃಪನ ಉಗ್ರ ಧನುಸ್ಸನ್ನೂ ತುಂಡರಿಸಿದನು.

08021022a ಹಾರ್ದಿಕ್ಯಸ್ಯ ಧನುಶ್ಚಿತ್ತ್ವಾ ಧ್ವಜಂ ಚಾಶ್ವಂ ತಥಾವಧೀತ್।
08021022c ದುಃಶಾಸನಸ್ಯೇಷುವರಂ ಚಿತ್ತ್ವಾ ರಾಧೇಯಮಭ್ಯಯಾತ್।।

ಹಾರ್ದಿಕ್ಯನ ಧನುಸ್ಸು ಧ್ವಜಗಳನ್ನು ತುಂಡರಿಸಿ, ಅಶ್ವಗಳನ್ನು ಸಂಹರಿಸಿ, ದುಃಶಾಸನನ ಬಿಲ್ಲನ್ನು ಕತ್ತರಿಸಿಸಿ ಅರ್ಜುನನು ರಾಧೇಯನನ್ನು ಆಕ್ರಮಣಿಸಿದನು.

08021023a ಅಥ ಸಾತ್ಯಕಿಮುತ್ಸೃಜ್ಯ ತ್ವರನ್ಕರ್ಣೋಽರ್ಜುನಂ ತ್ರಿಭಿಃ।
08021023c ವಿದ್ಧ್ವಾ ವಿವ್ಯಾಧ ವಿಂಶತ್ಯಾ ಕೃಷ್ಣಂ ಪಾರ್ಥಂ ಪುನಸ್ತ್ರಿಭಿಃ।।

ಕೂಡಲೇ ಕರ್ಣನು ತ್ವರೆಮಾಡಿ ಸಾತ್ಯಕಿಯನ್ನು ಬಿಟ್ಟು ಮೂರು ಶರಗಳಿಂದ ಅರ್ಜುನನನ್ನು ಹೊಡೆದು, ಇಪ್ಪತ್ತರಿಂದ ಮತ್ತು ಪುನಃ ಮೂರು ಶರಗಳಿಂದ ಕೃಷ್ಣ-ಪಾರ್ಥರನ್ನು ಹೊಡೆದನು.

08021024a ಅಥ ಸಾತ್ಯಕಿರಾಗತ್ಯ ಕರ್ಣಂ ವಿದ್ಧ್ವಾ ಶಿತೈಃ ಶರೈಃ।
08021024c ನವತ್ಯಾ ನವಭಿಶ್ಚೋಗ್ರೈಃ ಶತೇನ ಪುನರಾರ್ದಯತ್।।

ಕೂಡಲೇ ಸಾತ್ಯಕಿಯು ಬಂದು ಕರ್ಣನನ್ನು ನಿಶಿತ ಶರಗಳಿಂದ ಹೊಡೆದು ಪುನಃ ಅವನನ್ನು ನೂರಾ ತೊಂಭತ್ತೊಂಭತ್ತು ಉಗ್ರ ಶರಗಳಿಂದ ಪ್ರಹರಿಸಿದನು.

08021025a ತತಃ ಪ್ರವೀರಾಃ ಪಾಂಡೂನಾಂ ಸರ್ವೇ ಕರ್ಣಮಪೀಡಯನ್।
08021025c ಯುಧಾಮನ್ಯುಃ ಶಿಖಂಡೀ ಚ ದ್ರೌಪದೇಯಾಃ ಪ್ರಭದ್ರಕಾಃ।।
08021026a ಉತ್ತಮೌಜಾ ಯುಯುತ್ಸುಶ್ಚ ಯಮೌ ಪಾರ್ಷತ ಏವ ಚ।
08021026c ಚೇದಿಕಾರೂಷಮತ್ಸ್ಯಾನಾಂ ಕೇಕಯಾನಾಂ ಚ ಯದ್ಬಲಂ।
08021026e ಚೇಕಿತಾನಶ್ಚ ಬಲವಾನ್ಧರ್ಮರಾಜಶ್ಚ ಸುವ್ರತಃ।।

ಆಗ ಪಾಂಡವ ಪ್ರವೀರರೆಲ್ಲರೂ ಕರ್ಣನನ್ನು ಪೀಡಿಸತೊಡಗಿದರು: ಯುಧಾಮನ್ಯು, ಶಿಖಂಡೀ, ದ್ರೌಪದೇಯರು, ಪ್ರಭದ್ರಕರು, ಉತ್ತಮೌಜ, ಯುಯುತ್ಸು, ಯಮಳರು, ಪಾರ್ಷತ, ಚೇದಿ-ಕರೂಷ-ಮತ್ಯ್ಸರು, ಕೇಕಯರು, ಬಲವಾನ್ ಚೇಕಿತಾನರು, ಮತ್ತು ಸುವ್ರತ ಧರ್ಮರಾಜ.

08021027a ಏತೇ ರಥಾಶ್ವದ್ವಿರದೈಃ ಪತ್ತಿಭಿಶ್ಚೋಗ್ರವಿಕ್ರಮೈಃ।
08021027c ಪರಿವಾರ್ಯ ರಣೇ ಕರ್ಣಂ ನಾನಾಶಸ್ತ್ರೈರವಾಕಿರನ್।
08021027e ಭಾಷಂತೋ ವಾಗ್ಭಿರುಗ್ರಾಭಿಃ ಸರ್ವೇ ಕರ್ಣವಧೇ ವೃತಾಃ।।

ಉಗ್ರವಿಕ್ರಮ ರಥ-ಅಶ್ವ-ಗಜ-ಪದಾತಿಸೇನೆಗಳೊಡನೆ ಇವರುಗಳು ರಣದಲ್ಲಿ ಕರ್ಣನನ್ನು ಸುತ್ತುವರೆದು ನಾನಾ ಶಸ್ತ್ರಗಳಿಂದ ಮುಚ್ಚಿಬಿಟ್ಟರು. ಎಲ್ಲರೂ ಕರ್ಣನ ವಧೆಯನ್ನೇ ಉದ್ದೇಶವನ್ನಾಗಿಟ್ಟುಕೊಂಡು ಉಗ್ರ ಮಾತುಗಳನ್ನಾಡುತ್ತಾ ಸುತ್ತುವರೆದರು.

08021028a ತಾಂ ಶಸ್ತ್ರವೃಷ್ಟಿಂ ಬಹುಧಾ ಚಿತ್ತ್ವಾ ಕರ್ಣಃ ಶಿತೈಃ ಶರೈಃ।
08021028c ಅಪೋವಾಹ ಸ್ಮ ತಾನ್ಸರ್ವಾನ್ದ್ರುಮಾನ್ಭಂಕ್ತ್ವೇವ ಮಾರುತಃ।।

ಅವರ ಆ ಶಸ್ತ್ರವೃಷ್ಟಿಯನ್ನು ನಿಶಿತ ಶರಗಳಿಂದ ಚೂರು ಚೂರಾಗಿ ಮಾಡಿ ಕರ್ಣನು ಭಿರುಗಾಳಿಯು ಮರಗಳನ್ನು ಬುಡಮೇಲಾಗಿ ಕಿತ್ತೆಸೆಯುವಂತೆ ಅವರೆಲ್ಲರನ್ನೂ ಬೀಳಿಸಿದನು.

08021029a ರಥಿನಃ ಸಮಹಾಮಾತ್ರಾನ್ಗಜಾನಶ್ವಾನ್ಸಸಾದಿನಃ।
08021029c ಶರವ್ರಾತಾಂಶ್ಚ ಸಂಕ್ರುದ್ಧೋ ನಿಘ್ನನ್ಕರ್ಣೋ ವ್ಯದೃಶ್ಯತ।।

ಸಂಕ್ರುದ್ಧನಾದ ಕರ್ಣನು ರಥಿಗಳನ್ನೂ, ಮಹಾಗಾತ್ರದ ಆನೆಗಳನ್ನೂ, ಸವಾರರೊಂದಿಗೆ ಕುದುರೆಗಳನ್ನೂ, ಶರವ್ರಾತಗಳನ್ನೂ ನಾಶಗೊಳಿಸುತ್ತಿರುವುದು ಕಾಣುತ್ತಿತ್ತು.

08021030a ತದ್ವಧ್ಯಮಾನಂ ಪಾಂಡೂನಾಂ ಬಲಂ ಕರ್ಣಾಸ್ತ್ರತೇಜಸಾ।
08021030c ವಿಶಸ್ತ್ರಕ್ಷತದೇಹಂ ಚ ಪ್ರಾಯ ಆಸೀತ್ಪರಾಙ್ಮುಖಂ।।

ಕರ್ಣನ ಅಸ್ತ್ರತೇಜಸ್ಸಿನಿಂದ ವಧಿಸಲ್ಪಡುತ್ತಿರುವ ಪಾಂಡವರ ಸೇನೆಯ ದೇಹಗಳು ತುಂಡಾಗಿ ನಾಶಗೊಂಡಿದವು. ಪ್ರಾಯಶಃ ಪರಾಙ್ಮುಖರಾದರು.

08021031a ಅಥ ಕರ್ಣಾಸ್ತ್ರಮಸ್ತ್ರೇಣ ಪ್ರತಿಹತ್ಯಾರ್ಜುನಃ ಸ್ವಯಂ।
08021031c ದಿಶಃ ಖಂ ಚೈವ ಭೂಮಿಂ ಚ ಪ್ರಾವೃಣೋಚ್ಚರವೃಷ್ಟಿಭಿಃ।।

ಕೂಡಲೆ ಸ್ವಯಂ ಅರ್ಜುನನು ಕರ್ಣನ ಅಸ್ತ್ರಗಳನ್ನು ಅಸ್ತ್ರಗಳಿಂದ ನಾಶಗೊಳಿಸಿದನು ಮತ್ತು ಶರವೃಷ್ಟಿಯಿಂದ ಆಕಾಶ, ದಿಕ್ಕುಗಳು ಮತ್ತು ಭೂಮಿಯನ್ನು ತುಂಬಿಸಿಬಿಟ್ಟನು.

08021032a ಮುಸಲಾನೀವ ನಿಷ್ಪೇತುಃ ಪರಿಘಾ ಇವ ಚೇಷವಃ।
08021032c ಶತಘ್ನ್ಯ ಇವ ಚಾಪ್ಯನ್ಯೇ ವಜ್ರಾಣ್ಯುಗ್ರಾಣಿ ವಾಪರೇ।।

ಅವನ ಬಾಣಗಳು ಮುಸಲಗಳಂತೆ, ಶತ್ರಘ್ನಗಳಂತೆ ಮತ್ತು ಇನ್ನು ಉಳಿದವು ಉಗ್ರ ವಜ್ರಗಳಂತೆ ಬೀಳುತ್ತಿದ್ದವು.

08021033a ತೈರ್ವಧ್ಯಮಾನಂ ತತ್ಸೈನ್ಯಂ ಸಪತ್ತ್ಯಶ್ವರಥದ್ವಿಪಂ।
08021033c ನಿಮೀಲಿತಾಕ್ಷಮತ್ಯರ್ಥಮುದಭ್ರಾಮ್ಯತ್ಸಮಂತತಃ।।

ಅವುಗಳಿಂದ ವಧಿಸಲ್ಪಡುತ್ತಿರುವ ಪದಾತಿ-ಅಶ್ವ-ರಥ-ಗಜಗಳಿಂದೊಡಗೂಡಿದ ಆ ಸೈನ್ಯವು ಕಣ್ಣುಮುಚ್ಚಿ ಗಟ್ಟಿಯಾಗಿ ಕೂಗುತ್ತಾ ಚಡಪಡಿಸತೊಡಗಿತು.

08021034a ನಿಷ್ಕೈವಲ್ಯಂ ತದಾ ಯುದ್ಧಂ ಪ್ರಾಪುರಶ್ವನರದ್ವಿಪಾಃ।
08021034c ವಧ್ಯಮಾನಾಃ ಶರೈರನ್ಯೇ ತದಾ ಭೀತಾಃ ಪ್ರದುದ್ರುವುಃ।।

ಶರಗಳಿಂದ ವಧಿಸಲ್ಪಡುತ್ತಿರುವ ಅಶ್ವ-ನರ-ಗಜಗಳು ಯುದ್ಧದಲ್ಲಿ ನಿಶ್ಚಿತ ಕೈವಲ್ಯವನ್ನು ಪಡೆದರು. ಅನ್ಯರು ಭೀತರಾಗಿ ಪಲಾಯನಗೈದರು.

08021035a ಏವಂ ತೇಷಾಂ ತದಾ ಯುದ್ಧೇ ಸಂಸಕ್ತಾನಾಂ ಜಯೈಷಿಣಾಂ।
08021035c ಗಿರಿಮಸ್ತಂ ಸಮಾಸಾದ್ಯ ಪ್ರತ್ಯಪದ್ಯತ ಭಾನುಮಾನ್।।

ಈ ರೀತಿ ಜಯೈಷಿಗಳು ಯುದ್ಧದಲ್ಲಿ ತೊಡಗಿರಲು ಭಾನುಮತನು ಅಸ್ತಾಚಲವನ್ನು ಸೇರಿ ಕಾಣದಂತಾದನು.

08021036a ತಮಸಾ ಚ ಮಹಾರಾಜ ರಜಸಾ ಚ ವಿಶೇಷತಃ।
08021036c ನ ಕಿಂ ಚಿತ್ಪ್ರತ್ಯಪಶ್ಯಾಮ ಶುಭಂ ವಾ ಯದಿ ವಾಶುಭಂ।।

ಮಹಾರಾಜ! ಕತ್ತಲೆಯಿಂದ ಮತ್ತು ವಿಶೇಷವಾದ ಧೂಳಿನಿಂದಾಗಿ ಅಲ್ಲಿ ಶುಭಾಶುಭವಾದ ಏನೂ ಕಾಣದಂತಾಯಿತು.

08021037a ತೇ ತ್ರಸಂತೋ ಮಹೇಷ್ವಾಸಾ ರಾತ್ರಿಯುದ್ಧಸ್ಯ ಭಾರತ।
08021037c ಅಪಯಾನಂ ತತಶ್ಚಕ್ರುಃ ಸಹಿತಾಃ ಸರ್ವವಾಜಿಭಿಃ।।

ಭಾರತ! ರಾತ್ರಿಯುದ್ಧಕ್ಕೆ ಹೆದರಿದ್ದ ಆ ಮಹೇಷ್ವಾಸರು ಸರ್ವವಾಹನಗಳೊಂದಿಗೆ ಹಿಂದೆಸರಿಯಲು ಪ್ರಾರಂಭಿಸಿದರು.

08021038a ಕೌರವೇಷು ಚ ಯಾತೇಷು ತದಾ ರಾಜನ್ದಿನಕ್ಷಯೇ।
08021038c ಜಯಂ ಸುಮನಸಃ ಪ್ರಾಪ್ಯ ಪಾರ್ಥಾಃ ಸ್ವಶಿಬಿರಂ ಯಯುಃ।।
08021039a ವಾದಿತ್ರಶಬ್ದೈರ್ವಿವಿಧೈಃ ಸಿಂಹನಾದೈಶ್ಚ ನರ್ತಿತೈಃ।
08021039c ಪರಾನವಹಸಂತಶ್ಚ ಸ್ತುವಂತಶ್ಚಾಚ್ಯುತಾರ್ಜುನೌ।।

ರಾಜನ್! ಆ ದಿನಕ್ಷಯದಲ್ಲಿ ಕೌರವರು ಹೊರಟುಹೋಗಲು ಜಯವನ್ನು ಗಳಿಸಿ ಸುಮನಸ್ಕರಾದ ಪಾರ್ಥರು ವಿವಿಧ ಮಂಗಳವಾದ್ಯಗಳನ್ನು ನುಡಿಸುತ್ತಾ, ಸಿಂಹನಾದಗಳಿಂದ ನರ್ತಿಸುತ್ತಾ, ಶತ್ರುಗಳನ್ನು ಹಾಸ್ಯಮಾಡುತ್ತಾ, ಕೃಷ್ಣಾರ್ಜುನರನ್ನು ಸ್ತುತಿಸುತ್ತಾ ತಮ್ಮ ಶಿಬಿರಕ್ಕೆ ತೆರಳಿದರು.

08021040a ಕೃತೇಽವಹಾರೇ ತೈರ್ವೀರೈಃ ಸೈನಿಕಾಃ ಸರ್ವ ಏವ ತೇ।
08021040c ಆಶಿಷಃ ಪಾಂಡವೇಯೇಷು ಪ್ರಾಯುಜ್ಯಂತ ನರೇಶ್ವರಾಃ।।

ಆ ವೀರರಿಂದ ಹಿಂದೆಕರೆಸಲ್ಪಟ್ಟ ಸೈನಿಕರು ಮತ್ತು ನರೇಶ್ವರರೆಲ್ಲರೂ ಪಾಂಡವೇಯರನ್ನು ಆಶೀರ್ವದಿಸಿ ವಿಶ್ರಮಿಸಿದರು.

08021041a ತತಃ ಕೃತೇಽವಹಾರೇ ಚ ಪ್ರಹೃಷ್ಟಾಃ ಕುರುಪಾಂಡವಾಃ।
08021041c ನಿಶಾಯಾಂ ಶಿಬಿರಂ ಗತ್ವಾ ನ್ಯವಿಶಂತ ನರೇಶ್ವರಾಃ।।

ಹಿಂದೆಸರಿದ ಕುರುಪಾಂಡವ ನರೇಶ್ವರರು ಪ್ರಹೃಷ್ಟರಾಗಿ ಶಿಬಿರಗಳಿಗೆ ತೆರಳಿ ರಾತ್ರಿಯನ್ನು ಕಳೆದರು.

08021042a ಯಕ್ಷರಕ್ಷಹ್ಪಿಶಾಚಾಶ್ಚ ಶ್ವಾಪದಾನಿ ಚ ಸಂಘಶಃ।
08021042c ಜಗ್ಮುರಾಯೋಧನಂ ಘೋರಂ ರುದ್ರಸ್ಯಾನರ್ತನೋಪಮಂ।।

ರುದ್ರನ ಕ್ರೀಡಾಸ್ಥಳದಂತಿರುವ ಘೋರ ರಣಭೂಮಿಗೆ ಯಕ್ಷ-ರಾಕ್ಷಸ-ಪಿಶಾಚಿ ಗಣಗಳು ಹೋಗಿ ಸೇರಿಕೊಂಡವು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಪ್ರಥಮಯುದ್ಧದಿವಸಾವಹಾರೇ ಏಕವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಪ್ರಥಮಯುದ್ಧದಿವಸಾವಹಾರ ಎನ್ನುವ ಇಪ್ಪತ್ತೊಂದನೇ ಅಧ್ಯಾಯವು.