ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 20
ಸಾರ
ಅಪರಾಹ್ಣದಲ್ಲಿ ನಡೆದ ಯುದ್ಧದ ಕುರಿತು ಧೃತರಾಷ್ಟ್ರನು ಸಂಜಯನನ್ನು ಪ್ರಶ್ನಿಸಿದುದು (1-5). ಯುಧಿಷ್ಠಿರ ದುರ್ಯೋಧನರ ಯುದ್ಧ; ಯುಧಿಷ್ಠಿರನು ದುರ್ಯೋಧನನನ್ನು ಮೂರ್ಛೆಗೊಳಿಸಿದುದು (6-32).
08020001 ಧೃತರಾಷ್ಟ್ರ ಉವಾಚ।
08020001a ಅತಿತೀವ್ರಾಣಿ ದುಃಖಾನಿ ದುಃಸಹಾನಿ ಬಹೂನಿ ಚ।
08020001c ತವಾಹಂ ಸಂಜಯಾಶ್ರೌಷಂ ಪುತ್ರಾಣಾಂ ಮಮ ಸಂಕ್ಷಯಂ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ನೀನು ಹೇಳುತ್ತಿರುವ ನನ್ನ ಮಕ್ಕಳ ನಾಶವನ್ನು ಕೇಳಿ ನನ್ನ ಅನೇಕ ದುಃಖಗಳು ಅತಿತೀವ್ರವೂ, ಸಹಿಸಲಸಾಧ್ಯವೂ ಆಗಿವೆ!
08020002a ತಥಾ ತು ಮೇ ಕಥಯಸೇ ಯಥಾ ಯುದ್ಧಂ ತು ವರ್ತತೇ।
08020002c ನ ಸಂತಿ ಸೂತ ಕೌರವ್ಯಾ ಇತಿ ಮೇ ನೈಷ್ಠಿಕೀ ಮತಿಃ।।
ಯುದ್ಧವು ಹೇಗೆ ನಡೆಯುತ್ತಿತ್ತೆಂದು ನೀನು ಹೇಳಿದುದರಿಂದ ಸೂತ! ಕೌರವ್ಯರು ಉಳಿಯಲಿಕ್ಕಿಲ್ಲ ಎಂದು ನನಗನ್ನಿಸುತ್ತಿದೆ.
08020003a ದುರ್ಯೋಧನಸ್ತು ವಿರಥಃ ಕೃತಸ್ತತ್ರ ಮಹಾರಣೇ।
08020003c ಧರ್ಮಪುತ್ರಃ ಕಥಂ ಚಕ್ರೇ ತಸ್ಮಿನ್ವಾ ನೃಪತಿಃ ಕಥಂ।।
ಮಹಾರಣದಲ್ಲಿ ದುರ್ಯೋಧನನನ್ನು ವಿರಥನನ್ನಾಗಿ ಮಾಡಿದ ಧರ್ಮಪುತ್ರನು ಹೇಗೆ ಯುದ್ಧಮಾಡಿದನು? ನೃಪತಿ ದುರ್ಯೋಧನನೂ ಹೇಗೆ ಯುದ್ಧಮಾಡಿದನು?
08020004a ಅಪರಾಹ್ಣೇ ಕಥಂ ಯುದ್ಧಂ ಅಭವಲ್ಲೋಮಹರ್ಷಣಂ।
08020004c ತನ್ಮಮಾಚಕ್ಷ್ವ ತತ್ತ್ವೇನ ಕುಶಲೋ ಹ್ಯಸಿ ಸಂಜಯ।।
ಸಂಜಯ! ಆ ಲೋಮಹರ್ಷಣ ಯುದ್ಧವು ಅಪರಾಹ್ಣದಲ್ಲಿ ಹೇಗೆ ನಡೆಯಿತು? ಅದನ್ನು ನನಗೆ ನಡೆದ ಹಾಗೆ ಹೇಳು. ಯುದ್ಧವನ್ನು ವರದಿಮಾಡುವಲ್ಲಿ ನೀನು ಕುಶಲನಾಗಿದ್ದೀಯೆ!”
08020005 ಸಂಜಯ ಉವಾಚ।
08020005a ಸಂಸಕ್ತೇಷು ಚ ಸೈನ್ಯೇಷು ಯುಧ್ಯಮಾನೇಷು ಭಾಗಶಃ।
08020005c ರಥಮನ್ಯಂ ಸಮಾಸ್ಥಾಯ ಪುತ್ರಸ್ತವ ವಿಶಾಂ ಪತೇ।।
ಸಂಜಯನು ಹೇಳಿದನು: “ವಿಶಾಂಪತೇ! ಭಾಗಶಃ ಸೇನೆಗಳು ಯುದ್ಧದಲ್ಲಿ ತೊಡಗಿರಲು ನಿನ್ನ ಮಗನು ಇನ್ನೊಂದು ರಥವನ್ನು ಏರಿದನು.
08020006a ಕ್ರೋಧೇನ ಮಹತಾವಿಷ್ಟಃ ಸವಿಷೋ ಭುಜಗೋ ಯಥಾ।
08020006c ದುರ್ಯೋಧನಸ್ತು ದೃಷ್ಟ್ವಾ ವೈ ಧರ್ಮರಾಜಂ ಯುಧಿಷ್ಠಿರಂ।
08020006e ಉವಾಚ ಸೂತ ತ್ವರಿತಂ ಯಾಹಿ ಯಾಹೀತಿ ಭಾರತ।।
ಭಾರತ! ವಿಷಭರಿತ ಸರ್ಪದಂತೆ ಮಹಾ ಕ್ರೋಧದಿಂದ ಆವಿಷ್ಟನಾದ ದುರ್ಯೋಧನನು ಧರ್ಮರಾಜ ಯುಧಿಷ್ಠಿರನನ್ನು ನೋಡಿ ಸೂತನಿಗೆ ಹೇಳಿದನು: “ಬೇಗ ಹೋಗು! ಹೋಗು!
08020007a ಅತ್ರ ಮಾಂ ಪ್ರಾಪಯ ಕ್ಷಿಪ್ರಂ ಸಾರಥೇ ಯತ್ರ ಪಾಂಡವಃ।
08020007c ಧ್ರಿಯಮಾಣೇನ ಚತ್ರೇಣ ರಾಜಾ ರಾಜತಿ ದಂಶಿತಃ।।
ಸಾರಥೇ! ಶ್ವೇತ ಚತ್ರದಡಿಯಲ್ಲಿ ಕವಚಧರಿಸಿ ನಿಂತಿರುವ ರಾಜ ಪಾಂಡವನಿರುವಲ್ಲಿಗೆ ಬೇಗನೆ ನನ್ನನ್ನು ಕೊಂಡೊಯ್ಯಿ!”
08020008a ಸ ಸೂತಶ್ಚೋದಿತೋ ರಾಜ್ಞಾ ರಾಜ್ಞಃ ಸ್ಯಂದನಮುತ್ತಮಂ।
08020008c ಯುಧಿಷ್ಠಿರಸ್ಯಾಭಿಮುಖಂ ಪ್ರೇಷಯಾಮಾಸ ಸಂಯುಗೇ।।
ಸಂಯುಗದಲ್ಲಿ ರಾಜನಿಂದ ಹಾಗೆ ಪ್ರಚೋದಿಸಲ್ಪಟ್ಟ ಸೂತನು ರಾಜನ ಉತ್ತಮ ರಥವನ್ನು ಯುಧಿಷ್ಠಿರನ ಎದುರಾಗಿ ಕೊಂಡೊಯ್ದನು.
08020009a ತತೋ ಯುಧಿಷ್ಠಿರಃ ಕ್ರುದ್ಧಃ ಪ್ರಮತ್ತ ಇವ ಸದ್ಗವಃ।
08020009c ಸಾರಥಿಂ ಚೋದಯಾಮಾಸ ಯಾಹಿ ಯತ್ರ ಸುಯೋಧನಃ।।
ಆಗ ಯುಧಿಷ್ಠಿರನು ಮದಿಸಿದ ಸಲಗದಂತೆ ಕ್ರುದ್ಧನಾಗಿ ಸುಯೋಧನನಿರುವಲ್ಲಿಗೆ ಹೋಗು ಎಂದು ಸಾರಥಿಯನ್ನು ಪ್ರಚೋದಿಸಿದನು.
08020010a ತೌ ಸಮಾಜಗ್ಮತುರ್ವೀರೌ ಭ್ರಾತರೌ ರಥಸತ್ತಮೌ।
08020010c ಸಮೇತ್ಯ ಚ ಮಹಾವೀರ್ಯೌ ಸನ್ನದ್ಧೌ ಯುದ್ಧದುರ್ಮದೌ।
08020010e ತತಕ್ಷತುರ್ಮಹೇಷ್ವಾಸೌ ಶರೈರನ್ಯೋನ್ಯಮಾಹವೇ।।
ಅವರಿಬ್ಬರು ವೀರ ಮಹಾವೀರ್ಯ ಯುದ್ಧದುರ್ಮದ ರಥಸತ್ತಮ ಮಹೇಷ್ವಾಸ ಸಹೋದರರು ಯುದ್ಧದಲ್ಲಿ ಸಂಘರ್ಷಿಸಿ ಶರಗಳಿಂದ ಅನ್ಯೋನ್ಯರನ್ನು ಗಾಯಗೊಳಿಸಿದರು.
08020011a ತತೋ ದುರ್ಯೋಧನೋ ರಾಜಾ ಧರ್ಮಶೀಲಸ್ಯ ಮಾರಿಷ।
08020011c ಶಿಲಾಶಿತೇನ ಭಲ್ಲೇನ ಧನುಶ್ಚಿಚ್ಚೇದ ಸಂಯುಗೇ।
08020011e ತಂ ನಾಮೃಷ್ಯತ ಸಂಕ್ರುದ್ಧೋ ವ್ಯವಸಾಯಂ ಯುಧಿಷ್ಠಿರಃ।।
ಮಾರಿಷ! ಆಗ ರಾಜಾ ದುರ್ಯೋಧನನು ಸಂಯುಗದಲ್ಲಿ ಧರ್ಮಶೀಲನ ಧನುಸ್ಸನ್ನು ಶಿಲಾಶಿತ ಭಲ್ಲದಿಂದ ತುಂಡರಿಸಿದನು. ಆ ಕೃತ್ಯವನ್ನು ಸಂಕ್ರುದ್ಧನಾದ ಯುಧಿಷ್ಠಿರನು ಸಹಿಸಿಕೊಳ್ಳಲಿಲ್ಲ.
08020012a ಅಪವಿಧ್ಯ ಧನುಶ್ಚಿನ್ನಂ ಕ್ರೋಧಸಂರಕ್ತಲೋಚನಃ।
08020012c ಅನ್ಯತ್ ಕಾರ್ಮುಕಮಾದಾಯ ಧರ್ಮಪುತ್ರಶ್ಚಮೂಮುಖೇ।।
ಕ್ರೋಧದಿಂದ ಕಣ್ಣುಗಳನ್ನು ಕೆಂಪುಮಾಡಿಕೊಂಡು ಧರ್ಮಪುತ್ರನು ತುಂಡಾದ ಧನುಸ್ಸನ್ನು ಸೇನಾಮುಖದಲ್ಲಿ ಎಸೆದು ಇನ್ನೊಂದು ಧನುಸ್ಸನ್ನು ಎತ್ತಿಕೊಂಡನು.
08020013a ದುರ್ಯೋಧನಸ್ಯ ಚಿಚ್ಚೇದ ಧ್ವಜಂ ಕಾರ್ಮುಕಮೇವ ಚ।
08020013c ಅಥಾನ್ಯದ್ಧನುರಾದಾಯ ಪ್ರತ್ಯವಿಧ್ಯತ ಪಾಂಡವಂ।।
ಅವನು ದುರ್ಯೋಧನನ ಧ್ವಜ ಮತ್ತು ಧನುಸ್ಸುಗಳನ್ನು ತುಂಡರಿಸಿದನು. ದುರ್ಯೋಧನನಾದರೋ ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಪಾಂಡವನಿಗೆ ತಿರುಗಿ ಹೊಡೆದನು.
08020014a ತಾವನ್ಯೋನ್ಯಂ ಸುಸಂರಬ್ಧೌ ಶರವರ್ಷಾಣ್ಯಮುಂಚತಾಂ।
08020014c ಸಿಂಹಾವಿವ ಸುಸಂಕ್ರುದ್ಧೌ ಪರಸ್ಪರಜಿಗೀಷಯಾ।।
ಪರಸ್ಪರರನ್ನು ಗೆಲ್ಲಲು ಬಯಸಿ ಕ್ರುದ್ಧ ಸಿಂಹಗಳಂತೆ ರೋಷಗೊಂಡ ಅವರಿಬ್ಬರು ಅನ್ಯೋನ್ಯರ ಮೇಲೆ ಶರವರ್ಷಗಳನ್ನು ಸುರಿಸಿದರು.
08020015a ಅನ್ಯೋನ್ಯಂ ಜಘ್ನತುಶ್ಚೈವ ನರ್ದಮಾನೌ ವೃಷಾವಿವ।
08020015c ಅನ್ಯೋನ್ಯಂ ಪ್ರೇಕ್ಷಮಾಣೌ ಚ ಚೇರತುಸ್ತೌ ಮಹಾರಥೌ।।
ಗೂಳಿಗಳಂತೆ ಗರ್ಜಿಸುತ್ತಾ ಅನ್ಯೋನ್ಯರನ್ನು ಪ್ರಹರಿಸುತ್ತಿದ್ದ ಆ ಮಹಾರಥರಿಬ್ಬರೂ ಪರಸ್ಪರರನ್ನು ದುರುಗುಟ್ಟಿ ನೋಡುತ್ತಾ ಸುತ್ತುತ್ತಿದ್ದರು.
08020016a ತತಃ ಪೂರ್ಣಾಯತೋತ್ಸೃಷ್ಟೈರನ್ಯೋನ್ಯಂ ಸುಕೃತವ್ರಣೌ।
08020016c ವಿರೇಜತುರ್ಮಹಾರಾಜ ಪುಷ್ಪಿತಾವಿವ ಕಿಂಶುಕೌ।।
ಮಹಾರಾಜ! ಕಿವಿಯ ತುದಿಯವರೆಗೂ ಸೆಳೆದು ಬಿಡುತ್ತಿದ್ದ ಬಾಣಗಳಿಂದ ಅನ್ಯೋನ್ಯರನ್ನು ಬಹಳವಾಗಿ ಗಾಯಗೊಳಿಸಿದ ಅವರಿಬ್ಬರೂ ಹೂಬಿಟ್ಟ ಮುತ್ತುಗದ ಮರಗಳಂತೆ ರಾರಾಜಿಸುತ್ತಿದ್ದರು.
08020017a ತತೋ ರಾಜನ್ಪ್ರತಿಭಯಾನ್ಸಿಂಹನಾದಾನ್ಮುಹುರ್ಮುಹುಃ।
08020017c ತಲಯೋಶ್ಚ ತಥಾ ಶಬ್ದಾನ್ಧನುಷೋಶ್ಚ ಮಹಾಹವೇ।।
ರಾಜನ್! ಮಹಾಯುದ್ಧದಲ್ಲಿ ಅವರಿಬ್ಬರೂ ಮತ್ತೆ ಮತ್ತೆ ಸಿಂಹನಾದಗೈಯುತ್ತಾ ಅನ್ಯೋನ್ಯರನ್ನು ಬೆದರಿಸುತ್ತಿದ್ದರು. ಚಪ್ಪಾಳೆಗಳನ್ನು ತಟ್ಟುತ್ತಾ ಧನುಸ್ಸನ್ನು ಟೇಂಕರಿಸಿ ಶಬ್ಧಮಾಡುತ್ತಿದ್ದರು.
08020018a ಶಂಖಶಬ್ದರವಾಂಶ್ಚೈವ ಚಕ್ರತುಸ್ತೌ ರಥೋತ್ತಮೌ।
08020018c ಅನ್ಯೋನ್ಯಂ ಚ ಮಹಾರಾಜ ಪೀಡಯಾಂ ಚಕ್ರತುರ್ಭೃಶಂ।।
ಆ ರಥಸತ್ತಮರಿಬ್ಬರೂ ಶಂಖಗಳನ್ನು ಊದಿ ಶಬ್ಧಮಾಡುತ್ತಿದ್ದರು. ಮಹಾರಾಜ! ಅನ್ಯೋನ್ಯರನ್ನು ಬಹಳವಾಗಿ ಪೀಡಿಸುತ್ತಿದ್ದರು.
08020019a ತತೋ ಯುಧಿಷ್ಠಿರೋ ರಾಜಾ ತವ ಪುತ್ರಂ ತ್ರಿಭಿಃ ಶರೈಃ।
08020019c ಆಜಘಾನೋರಸಿ ಕ್ರುದ್ಧೋ ವಜ್ರವೇಗೋ ದುರಾಸದಃ।।
ಆಗ ರಾಜಾ ಯುಧಿಷ್ಠಿರನು ಕ್ರುದ್ಧನಾಗಿ ವಜ್ರವೇಗವುಳ್ಳ ಮೂರು ದುರಾಸದ ಶರಗಳಿಂದ ನಿನ್ನ ಮಗನ ಎದೆಗೆ ಹೊಡೆದನು.
08020020a ಪ್ರತಿವಿವ್ಯಾಧ ತಂ ತೂರ್ಣಂ ತವ ಪುತ್ರೋ ಮಹೀಪತಿಂ।
08020020c ಪಂಚಭಿರ್ನಿಶಿತೈರ್ಬಾಣೈರ್ಹೇಮಪುಂಖೈಃ ಶಿಲಾಶಿತೈಃ।।
ಅದಕ್ಕೆ ಪ್ರತಿಯಾಗಿ ಕೂಡಲೇ ನಿನ್ನ ಮಗನು ಐದು ಶಿಲಾಶಿತ ಹೇಮಪುಂಖ ನಿಶಿತ ಬಾಣಗಳಿಂದ ಮಹೀಪತಿಯನ್ನು ಹೊಡೆದನು.
08020021a ತತೋ ದುರ್ಯೋಧನೋ ರಾಜಾ ಶಕ್ತಿಂ ಚಿಕ್ಷೇಪ ಭಾರತ।
08020021c ಸರ್ವಪಾರಶವೀಂ ತೀಕ್ಷ್ಣಾಂ ಮಹೋಲ್ಕಾಪ್ರತಿಮಾಂ ತದಾ।।
ಭಾರತ! ಆಗ ರಾಜಾ ದುರ್ಯೋಧನನು ಮಹಾ ಉಲ್ಕೆಯಂತಿದ್ದ ತೀಕ್ಷ್ಣವಾದ ಸಂಪೂರ್ಣ ಉಕ್ಕಿನಿಂದ ಮಾಡಿದ್ದ ಶಕ್ತ್ಯಾಯುಧವನ್ನು ಪ್ರಯೋಗಿಸಿದನು.
08020022a ತಾಮಾಪತಂತೀಂ ಸಹಸಾ ಧರ್ಮರಾಜಃ ಶಿಲಾಶಿತೈಃ।
08020022c ತ್ರಿಭಿಶ್ಚಿಚ್ಚೇದ ಸಹಸಾ ತಂ ಚ ವಿವ್ಯಾಧ ಸಪ್ತಭಿಃ।।
ಒಮ್ಮೆಲೇ ಬೀಳುತ್ತಿದ್ದ ಆ ಶಕ್ತಿಯನ್ನು ಧರ್ಮರಾಜನು ಒಮ್ಮೆಲೇ ಶಿಲಾಶಿತ ಬಾಣಗಳಿಂದ ತುಂಡರಿಸಿ, ದುರ್ಯೋಧನನನ್ನು ಏಳರಿಂದ ಹೊಡೆದನು.
08020023a ನಿಪಪಾತ ತತಃ ಸಾಥ ಹೇಮದಂಡಾ ಮಹಾಘನಾ।
08020023c ನಿಪತಂತೀ ಮಹೋಲ್ಕೇವ ವ್ಯರಾಜಚ್ಚಿಖಿಸಂನಿಭಾ।।
ಹೇಮದಂಡದ ಆ ಮಹಾಘನ ಶಕ್ತ್ಯಾಯುಧವು ಕೆಳಗೆ ಬಿದ್ದಿತು. ಕೆಳಗೆ ಬೀಳುತ್ತಿದ್ದ ಅದು ಶಿಖಿಯಿಂದ ಉತ್ಪನ್ನವಾದ ಮಹಾ ಉಲ್ಕೆಯಂತೆ ವಿರಾಜಿಸಿತು.
08020024a ಶಕ್ತಿಂ ವಿನಿಹತಾಂ ದೃಷ್ಟ್ವಾ ಪುತ್ರಸ್ತವ ವಿಶಾಂ ಪತೇ।
08020024c ನವಭಿರ್ನಿಶಿತೈರ್ಭಲ್ಲೈರ್ನಿಜಘಾನ ಯುಧಿಷ್ಠಿರಂ।।
ವಿಶಾಂಪತೇ! ಶಕ್ತಿಯು ನಾಶವಾದುದನ್ನು ನೋಡಿದ ನಿನ್ನ ಮಗನು ಒಂಭತ್ತು ನಿಶಿತ ಭಲ್ಲಗಳಿಂದ ಯುಧಿಷ್ಠಿರನನ್ನು ಹೊಡೆದನು.
08020025a ಸೋಽತಿವಿದ್ಧೋ ಬಲವತಾಮಗ್ರಣೀಃ ಶತ್ರುತಾಪನಃ।
08020025c ದುರ್ಯೋಧನಂ ಸಮುದ್ದಿಶ್ಯ ಬಾಣಂ ಜಗ್ರಾಹ ಸತ್ವರಃ।।
ಶತ್ರುತಾಪನ ಅಗ್ರಣಿ ಯುಧಿಷ್ಠಿರನು ಆ ಬಲಶಾಲಿಯಿಂದ ಅತಿಯಾಗಿ ಗಾಯಗೊಂಡನು. ಅವನು ಬಾಣವೊಂದನ್ನು ಹಿಡಿದು ದುರ್ಯೋಧನನಿಗೆ ಗುರಿಯಿಟ್ಟನು.
08020026a ಸಮಾಧತ್ತ ಚ ತಂ ಬಾಣಂ ಧನುಷ್ಯುಗ್ರಂ ಮಹಾಬಲಃ।
08020026c ಚಿಕ್ಷೇಪ ಚ ತತೋ ರಾಜಾ ರಾಜ್ಞಃ ಕ್ರುದ್ಧಃ ಪರಾಕ್ರಮೀ।।
ಆ ಉಗ್ರ ಬಾಣವನ್ನು ಧನುಸ್ಸಿಗೆ ಹೂಡಿ ಕ್ರುದ್ಧನಾದ ಪರಾಕ್ರಮೀ ಮಹಾಬಲ ರಾಜನು ರಾಜನ ಮೇಲೆ ಪ್ರಯೋಗಿಸಿದನು.
08020027a ಸ ತು ಬಾಣಃ ಸಮಾಸಾದ್ಯ ತವ ಪುತ್ರಂ ಮಹಾರಥಂ।
08020027c ವ್ಯಮೋಹಯತ ರಾಜಾನಂ ಧರಣೀಂ ಚ ಜಗಾಮ ಹ।।
ಆ ಬಾಣವು ನಿನ್ನ ಮಹಾರಥ ಪುತ್ರನಿಗೆ ತಾಗಿ, ರಾಜನನ್ನು ಮೂರ್ಛೆಗೊಳಿಸಿ, ಭೂಮಿಯನ್ನು ಸೀಳಿ ಹೊಕ್ಕಿಕೊಂಡಿತು.
08020028a ತತೋ ದುರ್ಯೋಧನಃ ಕ್ರುದ್ಧೋ ಗದಾಮುದ್ಯಂಯ ವೇಗಿತಃ।
08020028c ವಿಧಿತ್ಸುಃ ಕಲಹಸ್ಯಾಂತಮಭಿದುದ್ರಾವ ಪಾಂಡವಂ।।
ಆಗ ದುರ್ಯೋಧನನು ಕ್ರುದ್ಧನಾಗಿ ಕಲಹವನ್ನು ಕೊನೆಗೊಳಿಸಬೇಕೆಂದು ಬಯಸಿ ಗದೆಯನ್ನು ಮೇಲೆತ್ತಿಕೊಂಡು ವೇಗದಿಂದ ಪಾಂಡವನ ಕಡೆ ಧಾವಿಸಿ ಎರಗಿದನು.
08020029a ತಮಾಲಕ್ಷ್ಯೋದ್ಯತಗದಂ ದಂಡಹಸ್ತಮಿವಾಂತಕಂ।
08020029c ಧರ್ಮರಾಜೋ ಮಹಾಶಕ್ತಿಂ ಪ್ರಾಹಿಣೋತ್ತವ ಸೂನವೇ।
08020029e ದೀಪ್ಯಮಾನಾಂ ಮಹಾವೇಗಾಂ ಮಹೋಲ್ಕಾಂ ಜ್ವಲಿತಾಮಿವ।।
ದಂಡವನ್ನು ಹಿಡಿದ ಅಂತಕನಂತೆ ಗದೆಯನ್ನು ಮೇಲೆತ್ತಿ ಬರುತ್ತಿದ್ದ ನಿನ್ನ ಮಗನನ್ನು ನೋಡಿ ಧರ್ಮರಾಜನು ಮಹಾವೇಗವುಳ್ಳ, ಮಹಾ ಉಲ್ಕೆಯಂತೆ ಉರಿದು ಬೆಳಗುತ್ತಿದ್ದ ಮಹಾಶಕ್ತಿಯನ್ನು ಪ್ರಯೋಗಿಸಿದನು.
08020030a ರಥಸ್ಥಃ ಸ ತಯಾ ವಿದ್ಧೋ ವರ್ಮ ಭಿತ್ತ್ವಾ ಮಹಾಹವೇ।
08020030c ಭೃಶಂ ಸಂವಿಗ್ನಹೃದಯಃ ಪಪಾತ ಚ ಮುಮೋಹ ಚ।।
ಮಹಾಯುದ್ಧದಲ್ಲಿ ಅದು ರಥಸ್ಥ ದುರ್ಯೋಧನ ಕವಚವನ್ನು ಸೀಳಿ ಗಾಯಗೊಳಿಸಿತು. ಅದರಿಂದ ತುಂಬಾ ಸಂವಿಗ್ನ ಹೃದಯನಾದ ಅವನು ಕೆಳಗೆ ಬಿದ್ದು ಮೂರ್ಛಿತನಾದನು.
08020031a ತತಸ್ತ್ವರಿತಮಾಗತ್ಯ ಕೃತವರ್ಮಾ ತವಾತ್ಮಜಂ।
08020031c ಪ್ರತ್ಯಪದ್ಯತ ರಾಜಾನಂ ಮಗ್ನಂ ವೈ ವ್ಯಸನಾರ್ಣವೇ।।
ಆಗ ವ್ಯಸನಸಮುದ್ರದಲ್ಲಿ ಮುಳುಗಿಹೋಗಿದ್ದ ನಿನ್ನ ಮಗ ರಾಜನ ಬಳಿಗೆ ತ್ವರೆಮಾಡಿ ಕೃತವರ್ಮನು ಸಮೀಪಿಸಿದನು.
08020032a ಭೀಮೋಽಪಿ ಮಹತೀಂ ಗೃಹ್ಯ ಗದಾಂ ಹೇಮಪರಿಷ್ಕೃತಾಂ।
08020032c ಅಭಿದುದ್ರಾವ ವೇಗೇನ ಕೃತವರ್ಮಾಣಮಾಹವೇ।
08020032e ಏವಂ ತದಭವದ್ಯುದ್ಧಂ ತ್ವದೀಯಾನಾಂ ಪರೈಃ ಸಹ।।
ಭೀಮನೂ ಕೂಡ ಹೇಮಪರಿಷ್ಕೃತ ಮಹಾಗದೆಯನ್ನು ಹಿಡಿದು ವೇಗದಿಂದ ಯುದ್ಧದಲ್ಲಿ ಕೃತವರ್ಮನನ್ನು ಆಕ್ರಮಣಿಸಿದನು. ಹೀಗೆ ಶತ್ರುಗಳೊಡನೆ ನಿನ್ನವರ ಯುದ್ಧವು ನಡೆಯಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಇಪ್ಪತ್ತನೇ ಅಧ್ಯಾಯವು.