ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 19
ಸಾರ
ಅರ್ಜುನನು ತ್ರಿಗರ್ತಸೇನೆಯನ್ನು ನಾಶಗೊಳಿಸಿದುದು (1-35). ಯುಧಿಷ್ಠಿರ-ದುರ್ಯೋಧನರ ಯುದ್ಧ; ದುರ್ಯೋಧನನ ಸೋಲು (36-42). ಕುರು-ಪಾಂಡವ ಸೇನೆಗಳ ನಾಶದ ವರ್ಣನೆ (43-75).
08019001 ಸಂಜಯ ಉವಾಚ।
08019001a ಶ್ವೇತಾಶ್ವೋಽಪಿ ಮಹಾರಾಜ ವ್ಯಧಮತ್ತಾವಕಂ ಬಲಂ।
08019001c ಯಥಾ ವಾಯುಃ ಸಮಾಸಾದ್ಯ ತೂಲರಾಶಿಂ ಸಮಂತತಃ।।
ಸಂಜಯನು ಹೇಳಿದನು: “ಮಹಾರಾಜ! ಭಿರುಗಾಳಿಯು ಹತ್ತಿಯ ರಾಶಿಯನ್ನು ಎಲ್ಲಕಡೆ ಚದುರಿಸಿ ಹಾಳುಮಾಡುವಂತೆ ಶ್ವೇತಾಶ್ವನು ನಿನ್ನ ಸೇನೆಯನ್ನು ಧ್ವಂಸಗೊಳಿಸುತ್ತಿದ್ದನು.
08019002a ಪ್ರತ್ಯುದ್ಯಯುಸ್ತ್ರಿಗರ್ತಾಸ್ತಂ ಶಿಬಯಃ ಕೌರವೈಃ ಸಹ।
08019002c ಶಾಲ್ವಾಃ ಸಂಶಪ್ತಕಾಶ್ಚೈವ ನಾರಾಯಣಬಲಂ ಚ ಯತ್।।
ತ್ರಿಗರ್ತರು, ಶಿಬಿಗಳು, ಕೌರವರು, ಶಾಲ್ವರು, ಸಂಶಪ್ತಕರು ಮತ್ತು ನಾರಾಯಣ ಸೇನೆಗಳು ಒಟ್ಟಿಗೇ ಅವನನ್ನು ಎದುರಿಸಿ ಯುದ್ಧಮಾಡಿದರು.
08019003a ಸತ್ಯಸೇನಃ ಸತ್ಯಕೀರ್ತಿರ್ಮಿತ್ರದೇವಃ ಶ್ರುತಂಜಯಃ।
08019003c ಸೌಶ್ರುತಿಶ್ಚಿತ್ರಸೇನಶ್ಚ ಮಿತ್ರವರ್ಮಾ ಚ ಭಾರತ।।
08019004a ತ್ರಿಗರ್ತರಾಜಃ ಸಮರೇ ಭ್ರಾತೃಭಿಃ ಪರಿವಾರಿತಃ।
08019004c ಪುತ್ರೈಶ್ಚೈವ ಮಹೇಷ್ವಾಸೈರ್ನಾನಾಶಸ್ತ್ರಧರೈರ್ಯುಧಿ।।
ಭಾರತ! ತ್ರಿಗರ್ತರಾಜನು ಸತ್ಯಸೇನ, ಸತ್ಯಕೀರ್ತಿ, ಮಿತ್ರದೇವ, ಶ್ರುತಂಜಯ, ಸೌಶ್ರುತಿ, ಚಿತ್ರಸೇನ ಮತ್ತು ಮಿತ್ರವರ್ಮರೆಂಬ ಸಹೋದರರೊಂದಿಗೆ ಮತ್ತು ಯುದ್ಧದಲ್ಲಿ ನಾನಾ ಶಸ್ತ್ರಗಳನ್ನು ಧರಿಸಿದ್ದ ಮಹೇಷ್ವಾಸ ಪುತ್ರರೊಂದಿಗೆ ಕದನವಾಡುತ್ತಿದ್ದನು.
08019005a ತೇ ಸೃಜಂತಃ ಶರವ್ರಾತಾನ್ಕಿರಂತೋಽರ್ಜುನಮಾಹವೇ।
08019005c ಅಭ್ಯದ್ರವಂತ ಸಮರೇ ವಾರ್ಯೋಘಾ ಇವ ಸಾಗರಂ।।
ಅವರು ಸಮುದ್ರವನ್ನು ಮುತ್ತಿಡುವ ಚಂಡಮಾರುತದಂತೆ ಶರಗಳ ಭಿರುಗಾಳಿಯನ್ನೇ ಎರಚುತ್ತಾ ಯುದ್ಧದಲ್ಲಿ ಅರ್ಜುನನನ್ನು ಆಕ್ರಮಣಿಸಿದರು.
08019006a ತೇ ತ್ವರ್ಜುನಂ ಸಮಾಸಾದ್ಯ ಯೋಧಾಃ ಶತಸಹಸ್ರಶಃ।
08019006c ಅಗಚ್ಚನ್ವಿಲಯಂ ಸರ್ವೇ ತಾರ್ಕ್ಷ್ಯಂ ದೃಷ್ಟ್ವೇವ ಪನ್ನಗಾಃ।।
ನೂರು ಸಾವಿರ ಸಂಖ್ಯೆಗಳಲ್ಲಿದ್ದ ಆ ಯೋಧರು ಎಲ್ಲರೂ ಅರ್ಜುನನನ್ನು ಎದುರಿಸಿ ಗರುಡನನ್ನು ನೋಡಿದ ಸರ್ಪಗಳು ಬಿಲವನ್ನು ಹೊಗುವಂತೆ ಯಮನ ಆಲಯಕ್ಕೆ ತೆರಳಿದರು.
08019007a ತೇ ವಧ್ಯಮಾನಾಃ ಸಮರೇ ನಾಜಹುಃ ಪಾಂಡವಂ ತದಾ।
08019007c ದಹ್ಯಮಾನಾ ಯಥಾ ರಾಜಂ ಶಲಭಾ ಇವ ಪಾವಕಂ।।
ರಾಜನ್! ಅಗ್ನಿಯಿಂದ ಸುಡಲ್ಪಡುತ್ತಿದ್ದರೂ ಪತಂಗದ ಹುಳುಗಳು ಅಗ್ನಿಯನ್ನೇ ಹೊಗುವಂತೆ ಸಮರದಲ್ಲಿ ವಧಿಸಲ್ಪಡುತ್ತಿದ್ದ ಅವರು ಪಾಂಡವ ಅರ್ಜುನನನ್ನು ಬಿಟ್ಟು ಓಡಿ ಹೋಗಲಿಲ್ಲ.
08019008a ಸತ್ಯಸೇನಸ್ತ್ರಿಭಿರ್ಬಾಣೈರ್ವಿವ್ಯಾಧ ಯುಧಿ ಪಾಂಡವಂ।
08019008c ಮಿತ್ರದೇವಸ್ತ್ರಿಷಷ್ಟ್ಯಾ ಚ ಚಂದ್ರದೇವಶ್ಚ ಸಪ್ತಭಿಃ।।
08019009a ಮಿತ್ರವರ್ಮಾ ತ್ರಿಸಪ್ತತ್ಯಾ ಸೌಶ್ರುತಿಶ್ಚಾಪಿ ಪಂಚಭಿಃ।
08019009c ಶತ್ರುಂಜಯಶ್ಚ ವಿಂಶತ್ಯಾ ಸುಶರ್ಮಾ ನವಭಿಃ ಶರೈಃ।।
ಯುದ್ಧದಲ್ಲಿ ಪಾಂಡವ ಅರ್ಜುನನನ್ನು ಸತ್ಯಸೇನನು ಮೂರು ಬಾಣಗಳಿಂದ ಹೊಡೆದನು. ಮಿತ್ರದೇವನು ಅರವತ್ಮೂರು, ಚಂದ್ರದೇವನು ಏಳು, ಮಿತ್ರವರ್ಮನು ಎಪ್ಪತ್ಮೂರು, ಸೌಶ್ರುತಿಯು ಐದು, ಶತ್ರುಂಜಯನು ಇಪ್ಪತ್ತು ಮತ್ತು ಸುಶರ್ಮನು ಒಂಭತ್ತು ಶರಗಳಿಂದ ಅವನನ್ನು ಹೊಡೆದರು.
08019010a ಶತ್ರುಂಜಯಂ ಚ ರಾಜಾನಂ ಹತ್ವಾ ತತ್ರ ಶಿಲಾಶಿತೈಃ।
08019010c ಸೌಶ್ರುತೇಃ ಸಶಿರಸ್ತ್ರಾಣಂ ಶಿರಃ ಕಾಯಾದಪಾಹರತ್।
08019010e ತ್ವರಿತಶ್ಚಂದ್ರದೇವಂ ಚ ಶರೈರ್ನಿನ್ಯೇ ಯಮಕ್ಷಯಂ।।
ಆಗ ಅರ್ಜುನನು ಶಿಲಾಶಿತ ಶರಗಳಿಂದ ರಾಜ ಶತ್ರುಂಜಯನನ್ನು ಸಂಹರಿಸಿ, ಕಿರೀಟದೊಂದಿಗೆ ಸುಶ್ರುತನ ಶಿರವನ್ನು ಕಾಯದಿಂದ ಅಪಹರಿಸಿದನು. ನಂತರ ತ್ವರೆಮಾಡಿ ಶರಗಳಿಂದ ಚಂದ್ರದೇವನನ್ನು ಯಮಕ್ಷಯಕ್ಕೆ ಕಳುಹಿಸಿದನು.
08019011a ಅಥೇತರಾನ್ಮಹಾರಾಜ ಯತಮಾನಾನ್ಮಹಾರಥಾನ್।
08019011c ಪಂಚಭಿಃ ಪಂಚಭಿರ್ಬಾಣೈರೇಕೈಕಂ ಪ್ರತ್ಯವಾರಯತ್।।
ಮಹಾರಾಜ! ನಂತರ ಅವನು ಪ್ರಯತ್ನಪಡುತ್ತಿದ್ದ ಮಹಾರಥರು ಒಬ್ಬೊಬ್ಬರನ್ನೂ ಐದು ಐದು ಬಾಣಗಳಿಂದ ಹೊಡೆದು ತಡೆದನು.
08019012a ಸತ್ಯಸೇನಸ್ತು ಸಂಕ್ರುದ್ಧಸ್ತೋಮರಂ ವ್ಯಸೃಜನ್ಮಹತ್।
08019012c ಸಮುದ್ದಿಶ್ಯ ರಣೇ ಕೃಷ್ಣಂ ಸಿಂಹನಾದಂ ನನಾದ ಚ।।
ಸತ್ಯಸೇನನನಾದರೋ ಸಂಕ್ರುದ್ದನಾಗಿ ಮಹಾ ತೋಮರವನ್ನು ರಣದಲ್ಲಿ ಕೃಷ್ಣನನ್ನೇ ಗುರಿಯಿಟ್ಟು ಪ್ರಯೋಗಿಸಿ ಸಿಂಹನಾದಗೈದನು.
08019013a ಸ ನಿರ್ಭಿದ್ಯ ಭುಜಂ ಸವ್ಯಂ ಮಾಧವಸ್ಯ ಮಹಾತ್ಮನಃ।
08019013c ಅಯಸ್ಮಯೋ ಮಹಾಚಂಡೋ ಜಗಾಮ ಧರಣೀಂ ತದಾ।।
ಉಕ್ಕಿನಿಂದ ಮಾಡಲ್ಪಟ್ಟಿದ್ದ ಆ ಮಹಾಚಂಡ ತೋಮರವು ಮಹಾತ್ಮ ಮಾದವನ ಎಡಭುಜವನ್ನು ಗಾಯಗೊಳಿಸಿ ಭೂಮಿಯ ಮೇಲೆ ಬಿದ್ದಿತು.
08019014a ಮಾಧವಸ್ಯ ತು ವಿದ್ಧಸ್ಯ ತೋಮರೇಣ ಮಹಾರಣೇ।
08019014c ಪ್ರತೋದಃ ಪ್ರಾಪತದ್ಧಸ್ತಾದ್ರಶ್ಮಯಶ್ಚ ವಿಶಾಂ ಪತೇ।।
ವಿಶಾಂಪತೇ! ಗಾಯಗೊಂಡ ಕೃಷ್ಣನ ಕೈಗಳಿಂದ ಮಹಾರಣದಲ್ಲಿ ಚಾವಟಿ ಮತ್ತು ಕಡಿವಾಣಗಳು ಜಾರಿ ಕೆಳಕ್ಕೆ ಬಿದ್ದವು.
08019015a ಸ ಪ್ರತೋದಂ ಪುನರ್ಗೃಹ್ಯ ರಶ್ಮೀಂಶ್ಚೈವ ಮಹಾಯಶಾಃ।
08019015c ವಾಹಯಾಮಾಸ ತಾನಶ್ವಾನ್ಸತ್ಯಸೇನರಥಂ ಪ್ರತಿ।।
ಮಹಾಯಶಸ್ವಿ ಕೃಷ್ಣನು ಪುನಃ ಚಾವಟಿ ಮತ್ತು ಕಡಿವಾಣಗಳನ್ನು ಹಿಡಿದು ಆ ಅಶ್ವಗಳನ್ನು ಸತ್ಯಸೇನನ ರಥದ ಕಡೆ ಓಡಿಸಿದನು.
08019016a ವಿಷ್ವಕ್ಸೇನಂ ತು ನಿರ್ಭಿನ್ನಂ ಪ್ರೇಕ್ಷ್ಯ ಪಾರ್ಥೋ ಧನಂಜಯಃ।
08019016c ಸತ್ಯಸೇನಂ ಶರೈಸ್ತೀಕ್ಷ್ಣೈರ್ದಾರಯಿತ್ವಾ ಮಹಾಬಲಃ।।
08019017a ತತಃ ಸುನಿಶಿತೈರ್ಬಾಣೈ ರಾಜ್ಞಸ್ತಸ್ಯ ಮಹಚ್ಚಿರಃ।
08019017c ಕುಂಡಲೋಪಚಿತಂ ಕಾಯಾಚ್ಚಕರ್ತ ಪೃತನಾಂತರೇ।।
ಮಹಾಬಲ ಪಾರ್ಥ ಧನಂಜಯನು ಗಾಯಗೊಂಡಿದ್ದ ವಿಷ್ವಕ್ಸೇನನನ್ನು ನೋಡಿ ಸತ್ಯಸೇನನನ್ನು ತೀಕ್ಷ್ಣ ಶರಗಳಿಂದ ಗಾಯಗೊಳಿಸಿದನು. ನಂತರ ಅವನ ಸೇನೆಯ ಮಧ್ಯಭಾಗದಲ್ಲಿಯೇ ನಿಶಿತ ಬಾಣಗಳಿಂದ ಕುಂಡಲಗಳಿಂದ ಶೋಭಿಸುತ್ತಿದ್ದ ರಾಜನ ಮಹಾಶಿರವನ್ನು ದೇಹದಿಂದ ಕತ್ತರಿಸಿದನು.
08019018a ತಂ ನಿಹತ್ಯ ಶಿತೈರ್ಬಾಣೈರ್ಮಿತ್ರವರ್ಮಾಣಮಾಕ್ಷಿಪತ್।
08019018c ವತ್ಸದಂತೇನ ತೀಕ್ಷ್ಣೇನ ಸಾರಥಿಂ ಚಾಸ್ಯ ಮಾರಿಷ।।
ಮಾರಿಷ! ಅವನನ್ನು ಸಂಹರಿಸಿ ಅರ್ಜುನನು ನಿಶಿತ ಬಾಣಗಳಿಂದ ಮಿತ್ರವರ್ಮನನ್ನು ಮುಚ್ಚಿ ತೀಕ್ಷ್ಣ ವತ್ಸದಂತದಿಂದ ಅವನ ಸಾರಥಿಯನ್ನು ಸಂಹರಿಸಿದನು.
08019019a ತತಃ ಶರಶತೈರ್ಭೂಯಃ ಸಂಶಪ್ತಕಗಣಾನ್ವಶೀ।
08019019c ಪಾತಯಾಮಾಸ ಸಂಕ್ರುದ್ಧಃ ಶತಶೋಽಥ ಸಹಸ್ರಶಃ।।
ಪುನಃ ಸಂಕ್ರುದ್ಧನಾದ ಅವನು ನೂರಾರು ಶರಗಳಿಂದ ಸಂಶಪ್ತಕ ಗಣಗಳನ್ನು ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಉರುಳಿಸಿದನು.
08019020a ತತೋ ರಜತಪುಂಖೇನ ರಾಜ್ಞಃ ಶೀರ್ಷಂ ಮಹಾತ್ಮನಃ।
08019020c ಮಿತ್ರದೇವಸ್ಯ ಚಿಚ್ಚೇದ ಕ್ಷುರಪ್ರೇಣ ಮಹಾಯಶಾಃ।
08019020e ಸುಶರ್ಮಾಣಂ ಚ ಸಂಕ್ರುದ್ಧೋ ಜತ್ರುದೇಶೇ ಸಮಾರ್ದಯತ್।।
ಆ ಮಹಾಯಶಸ್ವಿಯು ರಜತಪುಂಖದ ಕ್ಷುರಪ್ರದಿಂದ ಮಹಾತ್ಮ ಮಿತ್ರದೇವ ರಾಜನ ಶಿರವನ್ನು ತುಂಡರಿಸಿದನು. ಸಂಕ್ರುದ್ಧನಾಗಿ ಸುಶರ್ಮನನ್ನು ಕೂಡ ವಕ್ಷಸ್ಥಳದಲ್ಲಿ ಹೊಡೆದನು.
08019021a ತತಃ ಸಂಶಪ್ತಕಾಃ ಸರ್ವೇ ಪರಿವಾರ್ಯ ಧನಂಜಯಂ।
08019021c ಶಸ್ತ್ರೌಘೈರ್ಮಮೃದುಃ ಕ್ರುದ್ಧಾ ನಾದಯಂತೋ ದಿಶೋ ದಶ।।
ಆಗ ಕ್ರುದ್ಧ ಸಂಶಪ್ತಕರೆಲ್ಲರೂ ಧನಂಜಯನನ್ನು ಸುತ್ತುವರೆದು ಹತ್ತು ದಿಕ್ಕುಗಳೂ ಮೊಳಗುವಂತೆ ಸಿಂಹನಾದಗೈಯುತ್ತಾ ಶಸ್ತ್ರಗಳ ಮಳೆಯನ್ನೇ ಸುರಿಸಿದರು.
08019022a ಅಭ್ಯರ್ದಿತಸ್ತು ತೈರ್ಜಿಷ್ಣುಃ ಶಕ್ರತುಲ್ಯಪರಾಕ್ರಮಃ।
08019022c ಐಂದ್ರಮಸ್ತ್ರಮಮೇಯಾತ್ಮಾ ಪ್ರಾದುಶ್ಚಕ್ರೇ ಮಹಾರಥಃ।
08019022e ತತಃ ಶರಸಹಸ್ರಾಣಿ ಪ್ರಾದುರಾಸನ್ವಿಶಾಂ ಪತೇ।।
ಅವರಿಂದ ಹಾಗೆ ಪೀಡಿಸಲ್ಪಟ್ಟ ಶಕ್ರತುಲ್ಯ ಪರಾಕ್ರಮಿ ಮಹಾರಥ ಅಮೇಯಾತ್ಮ ಅರ್ಜುನನು ಐಂದ್ರಾಸ್ತ್ರವನ್ನು ಪ್ರಕಟಿಸಿದನು. ವಿಶಾಂಪತೇ! ಅದರಿಂದ ಸಹಸ್ರಾರು ಬಾಣಗಳು ಪ್ರಾದುರ್ಭವಿಸಿದವು.
08019023a ಧ್ವಜಾನಾಂ ಚಿದ್ಯಮಾನಾನಾಂ ಕಾರ್ಮುಕಾಣಾಂ ಚ ಸಂಯುಗೇ।
08019023c ರಥಾನಾಂ ಸಪತಾಕಾನಾಂ ತೂಣೀರಾಣಾಂ ಶರೈಃ ಸಹ।।
08019024a ಅಕ್ಷಾಣಾಮಥ ಯೋಕ್ತ್ರಾಣಾಂ ಚಕ್ರಾಣಾಂ ರಶ್ಮಿಭಿಃ ಸಹ।
08019024c ಕೂಬರಾಣಾಂ ವರೂಥಾನಾಂ ಪೃಷತ್ಕಾನಾಂ ಚ ಸಂಯುಗೇ।।
08019025a ಅಶ್ಮನಾಂ ಪತತಾಂ ಚೈವ ಪ್ರಾಸಾನಾಂ ಋಷ್ಟಿಭಿಃ ಸಹ।
08019025c ಗದಾನಾಂ ಪರಿಘಾಣಾಂ ಚ ಶಕ್ತೀನಾಂ ತೋಮರೈಃ ಸಹ।।
08019026a ಶತಘ್ನೀನಾಂ ಸಚಕ್ರಾಣಾಂ ಭುಜಾನಾಮೂರುಭಿಃ ಸಹ।
08019026c ಕಂಟಸೂತ್ರಾಂಗದಾನಾಂ ಚ ಕೇಯೂರಾಣಾಂ ಚ ಮಾರಿಷ।।
08019027a ಹಾರಾಣಾಂ ಅಥ ನಿಷ್ಕಾಣಾಂ ತನುತ್ರಾಣಾಂ ಚ ಭಾರತ।
08019027c ಚತ್ರಾಣಾಂ ವ್ಯಜನಾನಾಂ ಚ ಶಿರಸಾಂ ಮುಕುಟೈಃ ಸಹ।
08019027e ಅಶ್ರೂಯತ ಮಹಾಂ ಶಬ್ದಸ್ತತ್ರ ತತ್ರ ವಿಶಾಂ ಪತೇ।।
ಮಾರಿಷ! ಭಾರತ! ವಿಶಾಂಪತೇ! ಕೂಡಲೇ ಯುದ್ಧದಲ್ಲಿ ಕತ್ತರಿಸಲ್ಪಡುತ್ತಿದ್ದ ಧ್ವಜಗಳ, ಧನುಸ್ಸುಗಳ, ಪತಾಕೆಗಳೊಂದಿಗೆ ರಥಗಳ, ಶರಗಳೊಂದಿಗೆ ತುಂಡಾಗುತ್ತಿದ್ದ ಬತ್ತಳಿಕೆಗಳ, ರಥದ ನೊಗಗಳ, ತೋಳುಮರಗಳ, ಚಕ್ರಗಳ ಶಬ್ಧಗಳು ಕೇಳಿಬಂದವು. ಕಲ್ಲುಗಳು ಬೀಳುವ, ಪ್ರಾಸ-ಋಷ್ಟಿಗಳು ಬೀಳುವ, ಗದ-ಪರಿಘ-ಶಕ್ತಿ-ತೋಮರಳು ಬೀಳುವ, ಶತಘ್ನಿ-ಚಕ್ರಗಳು ಬೀಳುವ, ತೋಳು-ತೊಡೆಗಳು ಬೀಳುವ, ಕಂಟಸೂತ್ರ-ಅಂಗದ-ಕೇಯೂರಗಳು ಬೀಳುವ, ಹಾರ-ಕಿರೀಟ-ಕವಚಗಳು ಬೀಳುವ, ಚತ್ರ-ಚಾಮರಗಳು ಬೀಳುವ, ಮುಕುಟಗಳೊಂದಿಗೆ ಶಿರಗಳು ಬೀಳುವ ಮಹಾ ಶಬ್ಧಗಳು ಅಲ್ಲಲ್ಲಿ ಕೇಳಿಬಂದವು.
08019028a ಸಕುಂಡಲಾನಿ ಸ್ವಕ್ಷೀಣಿ ಪೂರ್ಣಚಂದ್ರನಿಭಾನಿ ಚ।
08019028c ಶಿರಾಂಸ್ಯುರ್ವ್ಯಾನದೃಶ್ಯಂತ ತಾರಾಗಣ ಇವಾಂಬರೇ।।
ಆಕಾಶದಲ್ಲಿ ಹಾರಿ ಬೀಳುತ್ತಿದ್ದ ಸುಂದರ ಕುಂಡಲಗಳು ಮತ್ತು ಕಣ್ಣುಗಳಿಂದ ಪೂರ್ಣಚಂದ್ರನಂತೆ ಹೊಳೆಯುತ್ತಿದ್ದ ಶಿರಸ್ಸುಗಳು ಆಕಾಶದಲ್ಲಿ ರಾರಾಜಿಸುವ ನಕ್ಷತ್ರಗಳಂತೆ ತೋರಿದವು.
08019029a ಸುಸ್ರಗ್ವೀಣಿ ಸುವಾಸಾಂಸಿ ಚಂದನೇನೋಕ್ಷಿತಾನಿ ಚ।
08019029c ಶರೀರಾಣಿ ವ್ಯದೃಶ್ಯಂತ ಹತಾನಾಂ ಚ ಮಹೀತಲೇ।
08019029e ಗಂದರ್ವನಗರಾಕಾರಂ ಘೋರಮಾಯೋಧನಂ ತದಾ।।
ಹತರಾಗಿ ಬಿದ್ದಿದ್ದ ಚಂದನ ಲೇಪಿತ ಶರೀರಗಳಿಂದ, ಸುಂದರ ಹಾರಗಳಿಂದ, ಮತ್ತು ಸುಂದರ ವಸ್ತ್ರಗಳಿಂದ ರಣಭೂಮಿಯು ಗಂಧರ್ವನಗರಿಯಂತೆ ಘೋರವಾಗಿ ಕಾಣುತ್ತಿತ್ತು.
08019030a ನಿಹತೈ ರಾಜಪುತ್ರೈಶ್ಚ ಕ್ಷತ್ರಿಯೈಶ್ಚ ಮಹಾಬಲೈಃ।
08019030c ಹಸ್ತಿಭಿಃ ಪತಿತೈಶ್ಚೈವ ತುರಗೈಶ್ಚಾಭವನ್ಮಹೀ।
08019030e ಅಗಮ್ಯಮಾರ್ಗಾ ಸಮರೇ ವಿಶೀರ್ಣೈರಿವ ಪರ್ವತೈಃ।।
ಚೂರಾದ ಪರ್ವತಗಳಂತೆ ಹತರಾಗಿ ಬಿದ್ದಿದ್ದ ಮಹಾಬಲ ಕ್ಷತ್ರಿಯ ರಾಜಪುತ್ರರು, ಆನೆಗಳು, ಮತ್ತು ಕುದುರೆಗಳಿಂದಾಗಿ ರಣಭೂಮಿಯು ಅಗಮ್ಯವಾಗಿ ಕಾಣುತ್ತಿತ್ತು.
08019031a ನಾಸೀಚ್ಚಕ್ರಪಥಶ್ಚೈವ ಪಾಂಡವಸ್ಯ ಮಹಾತ್ಮನಃ।
08019031c ನಿಘ್ನತಃ ಶಾತ್ರವಾನ್ಭಲ್ಲೈರ್ಹಸ್ತ್ಯಶ್ವಂ ಚಾಮಿತಂ ಮಹತ್।।
ಅಮಿತ ಸಂಖ್ಯೆಗಳಲ್ಲಿ ಶತ್ರುಗಳನ್ನೂ ಆನೆಗಳನ್ನೂ ಭಲ್ಲಗಳಿಂದ ಸಂಹರಿಸುತ್ತಿದ್ದ ಮಹಾತ್ಮ ಪಾಂಡವನ ರಥಚಕ್ರವು ಹೋಗಲೂ ದಾರಿಯಿಲ್ಲದಂತಾಯಿತು.
08019032a ಆ ತುಂಬಾದವಸೀದಂತಿ ರಥಚಕ್ರಾಣಿ ಮಾರಿಷ।
08019032c ರಣೇ ವಿಚರತಸ್ತಸ್ಯ ತಸ್ಮಿಽಲ್ಲೋಹಿತಕರ್ದಮೇ।।
ಮಾರಿಷ! ರಕ್ತದ ಕೆಸರಿನಿಂದ ಕೂಡಿದ್ದ ಆ ರಣಾಂಗಣದಲ್ಲಿ ಸಂಚರಿಸುತ್ತಿದ್ದ ಅರ್ಜುನನ ರಥಚಕ್ರಗಳು ಕೆಸರಿನಲ್ಲಿ ಹೂತುಕೊಂಡವು.
08019033a ಸೀದಮಾನಾನಿ ಚಕ್ರಾಣಿ ಸಮೂಹುಸ್ತುರಗಾ ಭೃಶಂ।
08019033c ಶ್ರಮೇಣ ಮಹತಾ ಯುಕ್ತಾ ಮನೋಮಾರುತರಂಹಸಃ।।
ಹುಗಿದುಹೋಗಿದ್ದ ಚಕ್ರಗಳು ಕುದುರೆಗಳನ್ನು ಬಹಳ ಆಯಾಸಗೊಳಿಸುತ್ತಿದ್ದವು. ಮನಸ್ಸು ಮತ್ತು ವಾಯುಗಳ ವೇಗವುಳ್ಳ ಆ ಕುದುರೆಗಳು ಮಹಾ ಪ್ರಯತ್ನಪಟ್ಟು ಹೋಗುತ್ತಿದ್ದವು.
08019034a ವಧ್ಯಮಾನಂ ತು ತತ್ಸೈನ್ಯಂ ಪಾಂಡುಪುತ್ರೇಣ ಧನ್ವಿನಾ।
08019034c ಪ್ರಾಯಶೋ ವಿಮುಖಂ ಸರ್ವಂ ನಾವತಿಷ್ಠತ ಸಂಯುಗೇ।।
ಧನ್ವಿ ಪಾಂಡುಪುತ್ರನಿಂದ ವಧಿಸಲ್ಪಟ್ಟ ಆ ಸೈನದಲ್ಲಿ ಅಳಿದುಳಿದ ಎಲ್ಲರೂ ಅಲ್ಲಿ ನಿಲ್ಲದೇ ಪ್ರಾಯಶಃ ವಿಮುಖರಾಗಿದ್ದರು.
08019035a ತಾಂ ಜಿತ್ವಾ ಸಮರೇ ಜಿಷ್ಣುಃ ಸಂಶಪ್ತಕಗಣಾನ್ಬಹೂನ್।
08019035c ರರಾಜ ಸ ಮಹಾರಾಜ ವಿಧೂಮೋಽಗ್ನಿರಿವ ಜ್ವಲನ್।।
ಮಹಾರಾಜ! ಸಮರದಲ್ಲಿ ಆ ಅನೇಕ ಸಂಶಪ್ತಕ ಗಣಗಳನ್ನು ಗೆದ್ದು ಜಿಷ್ಣು ಅರ್ಜುನನು ಹೊಗೆಯಿಲ್ಲದ ಅಗ್ನಿಯಂತೆ ಪ್ರಜ್ವಲಿಸಿ ರಾರಾಜಿಸಿದನು.
08019036a ಯುಧಿಷ್ಠಿರಂ ಮಹಾರಾಜ ವಿಸೃಜಂತಂ ಶರಾನ್ಬಹೂನ್।
08019036c ಸ್ವಯಂ ದುರ್ಯೋಧನೋ ರಾಜಾ ಪ್ರತ್ಯಗೃಹ್ಣಾದಭೀತವತ್।।
ಮಹಾರಾಜ! ಅನೇಕ ಶರಗಳನ್ನು ಪ್ರಯೋಗಿಸುತ್ತಿದ್ದ ಯುಧಿಷ್ಠಿರನನ್ನು ಸ್ವಯಂ ರಾಜಾ ದುರ್ಯೋಧನನು ನಿರ್ಭಯನಾಗಿ ಎದುರಿಸಿದನು.
08019037a ತಮಾಪತಂತಂ ಸಹಸಾ ತವ ಪುತ್ರಂ ಮಹಾಬಲಂ।
08019037c ಧರ್ಮರಾಜೋ ದ್ರುತಂ ವಿದ್ಧ್ವಾ ತಿಷ್ಠ ತಿಷ್ಠೇತಿ ಚಾಬ್ರವೀತ್।।
ತನ್ನ ಮೇಲೆ ಒಮ್ಮಿಂದೊಮ್ಮೆಲೇ ಆಕ್ರಮಣಿಸಿದ ನಿನ್ನ ಮಹಾಬಲ ಪುತ್ರನನ್ನು ಬೇಗನೆ ಬಾಣಗಳಿಂದ ಹೊಡೆದು ಧರ್ಮರಾಜನು “ನಿಲ್ಲು! ನಿಲ್ಲು!” ಎಂದು ಹೇಳಿದನು.
08019038a ಸಾ ಚ ತಂ ಪ್ರತಿವಿವ್ಯಾಧ ನವಭಿರ್ನಿಶಿತೈಃ ಶರೈಃ।
08019038c ಸಾರಥಿಂ ಚಾಸ್ಯ ಭಲ್ಲೇನ ಭೃಶಂ ಕ್ರುದ್ಧೋಽಭ್ಯತಾಡಯತ್।।
ದುರ್ಯೋಧನನು ತುಂಬಾ ಕ್ರೋಧಿತನಾಗಿ ಯುಧಿಷ್ಠಿರನನ್ನು ಒಂಭತ್ತು ನಿಶಿತ ಶರಗಳಿಂದ ಮತ್ತು ಅವನ ಸಾರಥಿಯನ್ನು ಭಲ್ಲದಿಂದ ಹೊಡೆದನು.
08019039a ತತೋ ಯುಧಿಷ್ಠಿರೋ ರಾಜಾ ಹೇಮಪುಂಖಾಂ ಶಿಲೀಮುಖಾನ್।
08019039c ದುರ್ಯೋಧನಾಯ ಚಿಕ್ಷೇಪ ತ್ರಯೋದಶ ಶಿಲಾಶಿತಾನ್।।
ಆಗ ರಾಜಾ ಯುಧಿಷ್ಠಿರನು ದುರ್ಯೋಧನನ ಮೇಲೆ ಹದಿಮೂರು ಶಿಲಾಶಿತ ಶಿಲೀಮುಖ ಹೇಮಪುಂಖಗಳುಳ್ಳ ಬಾಣಗಳನ್ನು ಪ್ರಯೋಗಿಸಿದನು.
08019040a ಚತುರ್ಭಿಶ್ಚತುರೋ ವಾಹಾಂಸ್ತಸ್ಯ ಹತ್ವಾ ಮಹಾರಥಃ।
08019040c ಪಂಚಮೇನ ಶಿರಃ ಕಾಯಾತ್ಸಾರಥೇಸ್ತು ಸಮಾಕ್ಷಿಪತ್।।
ಆ ಮಹಾರಥನು ನಾಲ್ಕು ಬಾಣಗಳಿಂದ ಅವನ ನಾಲ್ಕು ಕುದುರೆಗಳನ್ನು ಸಂಹರಿಸಿ ಐದನೆಯ ಬಾಣದಿಂದ ಸಾರಥಿಯ ಶಿರವನ್ನು ಕಾಯದಿಂದ ಬೇರ್ಪಡಿಸಿ ಕೆಡವಿದನು.
08019041a ಷಷ್ಠೇನ ಚ ಧ್ವಜಂ ರಾಜ್ಞಃ ಸಪ್ತಮೇನ ಚ ಕಾರ್ಮುಕಂ।
08019041c ಅಷ್ಟಮೇನ ತಥಾ ಖಡ್ಗಂ ಪಾತಯಾಮಾಸ ಭೂತಲೇ।
08019041e ಪಂಚಭಿರ್ನೃಪತಿಂ ಚಾಪಿ ಧರ್ಮರಾಜೋಽರ್ದಯದ್ಭೃಶಂ।।
ಆರನೆಯದರಿಂದ ರಾಜ ಯುಧಿಷ್ಠಿರನು ದುರ್ಯೋಧನನ ಧ್ವಜವನ್ನು, ಏಳನೆಯದರಿಂದ ಧನುಸ್ಸನ್ನೂ, ಎಂಟನೆಯದರಿಂದ ಖಡ್ಗವನ್ನೂ ಭೂಮಿಯ ಮೇಲೆ ಕೆಡವಿಸಿದನು. ನಂತರ ಐದು ಬಾಣಗಳಿಂದ ಧರ್ಮರಾಜನು ನೃಪತಿ ದುರ್ಯೋಧನನನ್ನು ಜೋರಾಗಿ ಗಾಯಗೊಳಿಸಿದನು.
08019042a ಹತಾಶ್ವಾತ್ತು ರಥಾತ್ತಸ್ಮಾದವಪ್ಲುತ್ಯ ಸುತಸ್ತವ।
08019042c ಉತ್ತಮಂ ವ್ಯಸನಂ ಪ್ರಾಪ್ತೋ ಭೂಮಾವೇವ ವ್ಯತಿಷ್ಠತ।।
ನಿನ್ನ ಮಗನು ಕುದುರೆಗಳು ಸತ್ತುಹೋಗಿದ್ದ ರಥದಿಂದ ಕೆಳಕ್ಕೆ ಹಾರಿ ಉತ್ತಮ ವ್ಯಸನವನ್ನು ಪಡೆದು ಭೂಮಿಯ ಮೇಲೆಯೇ ನಿಂತುಕೊಂಡನು.
08019043a ತಂ ತು ಕೃಚ್ಚ್ರಗತಂ ದೃಷ್ಟ್ವಾ ಕರ್ಣದ್ರೌಣಿಕೃಪಾದಯಃ।
08019043c ಅಭ್ಯವರ್ತಂತ ಸಹಿತಾಃ ಪರೀಪ್ಸಂತೋ ನರಾಧಿಪಂ।।
ಹಾಗೆ ಅವನು ಕಷ್ಟಕ್ಕೀಡಾದುದನ್ನು ನೋಡಿ ಕರ್ಣ-ಅಶ್ವತ್ಥಾಮ-ಕೃಪಾದಿಗಳು ಒಂದಾಗಿ ನರಾಧಿಪನನ್ನು ರಕ್ಷಿಸಲು ಧಾವಿಸಿ ಬಂದರು.
08019044a ಅಥ ಪಾಂಡುಸುತಾಃ ಸರ್ವೇ ಪರಿವಾರ್ಯ ಯುಧಿಷ್ಠಿರಂ।
08019044c ಅಭ್ಯಯುಃ ಸಮರೇ ರಾಜಂಸ್ತತೋ ಯುದ್ಧಮವರ್ತತ।।
ರಾಜನ್! ಕೂಡಲೇ ಪಾಂಡುಸುತರೆಲ್ಲರೂ ಯುಧಿಷ್ಠಿರನನ್ನು ಸುತ್ತುವರೆದು ಅವನನ್ನೇ ಅನುಸರಿಸಿ ಯುದ್ಧದಲ್ಲಿ ತೊಡಗಿದರು.
08019045a ಅಥ ತೂರ್ಯಸಹಸ್ರಾಣಿ ಪ್ರಾವಾದ್ಯಂತ ಮಹಾಮೃಧೇ।
08019045c ಕ್ಷ್ವೇಡಾಃ ಕಿಲಕಿಲಾಶಬ್ದಾಃ ಪ್ರಾದುರಾಸನ್ಮಹೀಪತೇ।
08019045e ಯದಭ್ಯಗಚ್ಚನ್ಸಮರೇ ಪಾಂಚಾಲಾಃ ಕೌರವೈಃ ಸಹ।।
ಮಹೀಪತೇ! ಕೂಡಲೇ ಆ ಮಹಾಯುದ್ಧದಲ್ಲಿ ಸಹಸ್ರಾರು ರಣವಾದ್ಯಗಳು ಮೊಳಗಿದವು. ರಣಾಂಗಣದ ಸುತ್ತಲೂ ಕಿಲಾಕಿಲಾ ಶಬ್ಧವು ಕೇಳಿಬಂದಿತು. ಸಮರದಲ್ಲಿ ಪಾಂಚಾಲರು ಕೌರವರೊಂದಿಗೆ ಯುದ್ಧದಲ್ಲಿ ತೊಡಗಿದರು.
08019046a ನರಾ ನರೈಃ ಸಮಾಜಗ್ಮುರ್ವಾರಣಾ ವರವಾರಣೈಃ।
08019046c ರಥಾಶ್ಚ ರಥಿಭಿಃ ಸಾರ್ಧಂ ಹಯಾಶ್ಚ ಹಯಸಾದಿಭಿಃ।।
ಪದಾತಿಗಳು ಪದಾತಿಗಳೊಡನೆಯೂ, ಆನೆಗಳು ಆನೆಗಳೊಡನೆಯೂ, ರಥಗಳು ರಥಗಳೊಡನೆಯೂ, ಕುದುರೆಗಳು ಇತರ ಕುರುರೆಸವಾರರೊಂದಿಗೂ ಹೋರಾಡಿದರು.
08019047a ದ್ವಂದ್ವಾನ್ಯಾಸನ್ಮಹಾರಾಜ ಪ್ರೇಕ್ಷಣೀಯಾನಿ ಸಂಯುಗೇ।
08019047c ವಿಸ್ಮಾಪನಾನ್ಯಚಿಂತ್ಯಾನಿ ಶಸ್ತ್ರವಂತ್ಯುತ್ತಮಾನಿ ಚ।।
ಮಹಾರಾಜ! ಆ ಸಮರದಲ್ಲಿ ವಿಸ್ಮಯಕಾರಕ, ಯೋಚಿಸಲೂ ಅಸಾಧ್ಯವಾದ, ಉತ್ತಮ ಶಸ್ತ್ರಗಳನ್ನುಪಯೋಗಿಸಿದ ಪ್ರೇಕ್ಷಣೀಯ ದ್ವಂದ್ವಯುದ್ಧಗಳು ನಡೆದವು.
08019048a ಅಯುಧ್ಯಂತ ಮಹಾವೇಗಾಃ ಪರಸ್ಪರವಧೈಷಿಣಃ।
08019048c ಅನ್ಯೋನ್ಯಂ ಸಮರೇ ಜಘ್ನುರ್ಯೋಧವ್ರತಮನುಷ್ಠಿತಾಃ।
08019048e ನ ಹಿ ತೇ ಸಮರಂ ಚಕ್ರುಃ ಪೃಷ್ಠತೋ ವೈ ಕಥಂ ಚನ।।
ಪರಸ್ಪರರನ್ನು ವಧಿಸಲು ಬಯಸಿ ಯೋಧವ್ರತವನ್ನು ಅನುಷ್ಠಾನಗೈಯುತ್ತಿರುವ ಅವರು ಸಮರದಲ್ಲಿ ಅತ್ಯಂತವೇಗವಾಗಿ ಅನ್ಯೋನ್ಯರನ್ನು ಸಂಹರಿಸುತ್ತಿದ್ದರು. ಯಾವುದೇ ಕಾರಣಕ್ಕೂ ಅವರು ಯುದ್ಧದಲ್ಲಿ ಬೆನ್ನುತೋರಿಸುತ್ತಿರಲಿಲ್ಲ.
08019049a ಮುಹೂರ್ತಮೇವ ತದ್ಯುದ್ಧಮಾಸೀನ್ಮಧುರದರ್ಶನಂ।
08019049c ತತ ಉನ್ಮತ್ತವದ್ರಾಜನ್ನಿರ್ಮರ್ಯಾದಮವರ್ತತ।।
ರಾಜನ್! ಮುಹೂರ್ತಕಾಲ ಮಾತ್ರ ಆ ಯುದ್ಧವು ನೋಡಲು ಮಧುರವಾಗಿತ್ತು. ಆದರೆ ಕೂಡಲೇ ಅದು ಮರ್ಯಾದೆಗಳಿಲ್ಲದೇ ಉನ್ಮತ್ತರು ಯುದ್ಧಮಾಡುತ್ತಿರುವರೋ ಎನ್ನುವಂತೆ ಪರಿಣಮಿಸಿತು.
08019050a ರಥೀ ನಾಗಂ ಸಮಾಸಾದ್ಯ ವಿಚರನ್ರಣಮೂರ್ಧನಿ।
08019050c ಪ್ರೇಷಯಾಮಾಸ ಕಾಲಾಯ ಶರೈಃ ಸನ್ನತಪರ್ವಭಿಃ।।
ರಣಮೂರ್ಧನಿಯಲ್ಲಿ ರಥಸೇನಾನಿಗಳು ಗಜಸೇನಾನಿಗಳನ್ನು ಎದುರಿಸಿ ಸನ್ನತಪರ್ವ ಶರಗಳಿಂದ ಕಾಲನಿಗೆ ಕಳುಹಿಸತೊಡಗಿದರು.
08019051a ನಾಗಾ ಹಯಾನ್ಸಮಾಸಾದ್ಯ ವಿಕ್ಷಿಪಂತೋ ಬಹೂನಥ।
08019051c ದ್ರಾವಯಾಮಾಸುರತ್ಯುಗ್ರಾಸ್ತತ್ರ ತತ್ರ ತದಾ ತದಾ।।
ಅನೇಕ ಆನೆಗಳು ಕುದುರೆಗಳನ್ನು ಆಕ್ರಮಿಸಿ ನಾಶಗೊಳಿಸುತ್ತಿದ್ದವು. ಅಲ್ಲಲ್ಲಿ ಆಗಾಗ ಕುದುರೆಗಳು ಉಗ್ರವಾಗಿ ಓಡಿಹೋಗುತ್ತಿದ್ದವು.
08019052a ವಿದ್ರಾವ್ಯ ಚ ಬಹೂನಶ್ವಾನ್ನಾಗಾ ರಾಜನ್ಬಲೋತ್ಕಟಾಃ।
08019052c ವಿಷಾಣೈಶ್ಚಾಪರೇ ಜಘ್ನುರ್ಮಮೃದುಶ್ಚಾಪರೇ ಭೃಶಂ।।
ರಾಜನ್! ಅನೇಕ ಬಲೋತ್ಕಟ ಆನೆಗಳು ಕುದುರೆಗಳನ್ನು ಆಕ್ರಮಿಸಿ ಅವುಗಳನ್ನು ದಂತಗಳಿಂದ ಸೀಳಿದವು ಮತ್ತು ಇತರ ಕುದುರೆಗಳನ್ನು ಕಾಲಿನಿಂದ ತುಳಿದು ಜಜ್ಜಿದವು.
08019053a ಸಾಶ್ವಾರೋಹಾಂಶ್ಚ ತುರಗಾನ್ವಿಷಾಣೈರ್ಬಿಭಿದೂ ರಣೇ।
08019053c ಅಪರಾಂಶ್ಚಿಕ್ಷಿಪುರ್ವೇಗಾತ್ಪ್ರಗೃಹ್ಯಾತಿಬಲಾಸ್ತಥಾ।।
ಅವುಗಳು ಅಶ್ವಾರೋಹಿಗಳನ್ನು ಮತ್ತು ಅಶ್ವಗಳನ್ನು ರಣದಲ್ಲಿ ದಂತಗಳಿಂದ ಸೀಳುತ್ತಿದ್ದವು. ಇತರ ಆನೆಗಳು ಅವುಗಳನ್ನು ವೇಗದಿಂದ ಮೇಲೆತ್ತಿ ಅತಿ ದೂರದ ವರೆಗೆ ಎಸೆಯುತ್ತಿದ್ದವು.
08019054a ಪಾದಾತೈರಾಹತಾ ನಾಗಾ ವಿವರೇಷು ಸಮಂತತಃ।
08019054c ಚಕ್ರುರಾರ್ತಸ್ವರಂ ಘೋರಂ ವ್ಯದ್ರವಂತ ದಿಶೋ ದಶ।।
ಪದಾತಿಗಳಿಂದ ಹೊಡೆಯಲ್ಪಟ್ಟ ಆನೆಗಳು ಘೀಳಿಡುತ್ತಾ ಸುತ್ತಲೂ ಓಡಿಹೋಗುತ್ತಿದ್ದವು. ಹತ್ತು ದಿಕ್ಕುಗಳಲ್ಲಿ ಓಡುತ್ತಿದ್ದ ಆನೆಗಳು ಘೋರವಾಗಿ ಆರ್ತಸ್ವರಗೈಯುತ್ತಿದ್ದವು.
08019055a ಪದಾತೀನಾಂ ತು ಸಹಸಾ ಪ್ರದ್ರುತಾನಾಂ ಮಹಾಮೃಧೇ।
08019055c ಉತ್ಸೃಜ್ಯಾಭರಣಂ ತೂರ್ಣಮವಪ್ಲುತ್ಯ ರಣಾಜಿರೇ।।
ಮಹಾರಣದಲ್ಲಿ ಓಡಿಹೋಗುತ್ತಿದ್ದ ಆನೆಗಳಿಂದ ಕಾಲಿಗೆ ಸಿಲುಕಿದ ಪದಾತಿಗಳು ಆಭರಣಗಳನ್ನೂ ಕೂಡಲೇ ಕಳಚಿ ಎಸೆದು ಹಾರಿಕೊಂಡು ಓಡಿ ಹೋಗುತ್ತಿದ್ದರು.
08019056a ನಿಮಿತ್ತಂ ಮನ್ಯಮಾನಾಸ್ತು ಪರಿಣಮ್ಯ ಮಹಾಗಜಾಃ।
08019056c ಜಗೃಹುರ್ಬಿಭಿದುಶ್ಚೈವ ಚಿತ್ರಾಣ್ಯಾಭರಣಾನಿ ಚ।।
ಆ ಆಭರಣಗಳನ್ನು ತಮ್ಮ ಮೇಲೆ ಪ್ರಯೋಗಿಸುತ್ತಿದ್ದಾರೆಂದು ಭಾವಿಸಿ ಮಹಾಗಜಗಳು ಆ ಚಿತ್ರ ಆಭರಣಗಳನ್ನು ತುಳಿದು ಪುಡಿ ಪುಡಿ ಮಾಡುತ್ತಿದ್ದವು.
08019057a ಪ್ರತಿಮಾನೇಷು ಕುಂಭೇಷು ದಂತವೇಷ್ಟೇಷು ಚಾಪರೇ।
08019057c ನಿಗೃಹೀತಾ ಭೃಶಂ ನಾಗಾಃ ಪ್ರಾಸತೋಮರಶಕ್ತಿಭಿಃ।।
ಇತರ ಪದಾತಿಗಳು ಪ್ರಾಸ-ತೋಮರ-ಶಕ್ತಿಗಳಿಂದ ಆನೆಗಳ ಕುಂಭಸ್ಥಳಗಳನ್ನೂ, ದಂತಗಳನ್ನೂ ಹಿಡಿದು ತಿವಿಯುತ್ತಿದ್ದರು.
08019058a ನಿಗೃಹ್ಯ ಚ ಗದಾಃ ಕೇ ಚಿತ್ಪಾರ್ಶ್ವಸ್ಥೈರ್ಭೃಶದಾರುಣೈಃ।
08019058c ರಥಾಶ್ವಸಾದಿಭಿಸ್ತತ್ರ ಸಂಭಿನ್ನಾ ನ್ಯಪತನ್ಭುವಿ।।
ಪಕ್ಕದಲ್ಲಿದ್ದ ರಥಿಗಳು ಮತ್ತು ಅಶ್ವಾರೂಢರು ಕೆಲವರು ಗದೆಗಳನ್ನು ಹಿಡಿದು ಆನೆಗಳ ಪಕ್ಕೆಗಳನ್ನು ತುಂಬಾ ದಾರುಣವಾಗಿ ಹೊಡೆಯಲು ಅವು ಒಡೆದು ಭೂಮಿಯ ಮೇಲೆ ಬೀಳುತ್ತಿದ್ದವು.
08019059a ಸರಥಂ ಸಾದಿನಂ ತತ್ರ ಅಪರೇ ತು ಮಹಾಗಜಾಃ।
08019059c ಭೂಮಾವಮೃದ್ನನ್ವೇಗೇನ ಸವರ್ಮಾಣಂ ಪತಾಕಿನಂ।।
ಇತರ ಮಹಾಗಜಗಳು ಕವಚ ಮತ್ತು ಪತಾಕೆಗಳೊಂದಿಗೆ ರಥ ಮತ್ತು ಅಶ್ವಾರೋಹಿಗಳನ್ನು ಮೇಲೆತ್ತಿ ಭೂಮಿಯ ಮೇಲೆ ವೇಗದಿಂದ ಎಸೆಯುತ್ತಿದ್ದವು.
08019060a ರಥಂ ನಾಗಾಃ ಸಮಾಸಾದ್ಯ ಧುರಿ ಗೃಹ್ಯ ಚ ಮಾರಿಷ।
08019060c ವ್ಯಾಕ್ಷಿಪನ್ಸಹಸಾ ತತ್ರ ಘೋರರೂಪೇ ಮಹಾಮೃಧೇ।।
ಮಾರಿಷ! ಆ ಘೋರರೂಪದ ಮಹಾಯುದ್ಧದಲ್ಲಿ ಆನೆಗಳು ರಥವನ್ನು ಆಕ್ರಮಣಿಸಿ ಸೊಂಡಿಲಿನಿಂದ ಮೇಲೆತ್ತಿ ಕೂಡಲೇ ಎಸೆಯುತ್ತಿದ್ದವು.
08019061a ನಾರಾಚೈರ್ನಿಹತಶ್ಚಾಪಿ ನಿಪಪಾತ ಮಹಾಗಜಃ।
08019061c ಪರ್ವತಸ್ಯೇವ ಶಿಖರಂ ವಜ್ರಭಗ್ನಂ ಮಹೀತಲೇ।।
ಮಹಾಗಜಗಳೂ ಕೂಡ ನಾರಾಚಗಳಿಂದ ವಧಿಸಲ್ಪಟ್ಟು ವಜ್ರದಿಂದ ಭಗ್ನವಾದ ಪರ್ವತ ಶಿಖರಗಳಂತೆ ಮಹೀತಲದಲ್ಲಿ ಬೀಳುತ್ತಿದ್ದವು.
08019062a ಯೋಧಾ ಯೋಧಾನ್ಸಮಾಸಾದ್ಯ ಮುಷ್ಟಿಭಿರ್ವ್ಯಹನನ್ಯುಧಿ।
08019062c ಕೇಶೇಷ್ವನ್ಯೋನ್ಯಮಾಕ್ಷಿಪ್ಯ ಚಿಚ್ಚಿದುರ್ಬಿಭಿದುಃ ಸಹ।।
ಯೋಧರು ಯೋಧರನ್ನು ಯುದ್ಧದಲ್ಲಿ ಎದುರಿಸಿ ಅನ್ಯೋನ್ಯರ ಕೂದಲುಗಳನ್ನು ಎಳೆದು ಮುಷ್ಟಿಗಳಿಂದ ಹೊಡೆದು ಕೆಳಗೆ ಬೀಳಿಸುತ್ತಿದ್ದರು.
08019063a ಉದ್ಯಮ್ಯ ಚ ಭುಜಾವನ್ಯೋ ನಿಕ್ಷಿಪ್ಯ ಚ ಮಹೀತಲೇ।
08019063c ಪದಾ ಚೋರಃ ಸಮಾಕ್ರಮ್ಯ ಸ್ಫುರತೋ ವ್ಯಹನಚ್ಚಿರಃ।।
ಇತರರು ಎರಡು ಭುಜಗಳನ್ನೂ ಮೇಲೆತ್ತಿ ಭೂಮಿಯ ಮೇಲೆ ಬೀಳಿಸುತ್ತಿದ್ದರು. ಚಡಪಡಿಸುತ್ತಿದ್ದವರ ಎದೆಯಮೇಲೆ ಕಾಲಿಟ್ಟು ತಲೆಗಳನ್ನು ಕತ್ತರಿಸುತ್ತಿದ್ದರು.
08019064a ಮೃತಮನ್ಯೋ ಮಹಾರಾಜ ಪದ್ಭ್ಯಾಂ ತಾಡಿತವಾಂಸ್ತದಾ।
08019064c ಜೀವತಶ್ಚ ತಥೈವಾನ್ಯಃ ಶಸ್ತ್ರಂ ಕಾಯೇ ನ್ಯಮಜ್ಜಯತ್।।
ಮಹಾರಾಜ! ಅನ್ಯರು ಮೃತರಾದವರನ್ನು ಕಾಲುಗಳಿಂದ ಒದೆದು ತುಳಿಯುತ್ತಿದ್ದರು. ಇನ್ನೂ ಕೆಲವರು ಜೀವವಿದ್ದವರ ಶರೀರಗಳಲ್ಲಿ ಆಯುಧಗಳನ್ನು ನಾಟಿಸಿ ಕೊಲ್ಲುತ್ತಿದ್ದರು.
08019065a ಮುಷ್ಟಿಯುದ್ಧಂ ಮಹಚ್ಚಾಸೀದ್ಯೋಧಾನಾಂ ತತ್ರ ಭಾರತ।
08019065c ತಥಾ ಕೇಶಗ್ರಹಶ್ಚೋಗ್ರೋ ಬಾಹುಯುದ್ಧಂ ಚ ಕೇವಲಂ।।
ಭಾರತ! ಅಲ್ಲಿ ಯೋಧರ ಮಹಾ ಮುಷ್ಟಿಯುದ್ಧವೂ ನಡೆಯಿತು. ಹಾಗೆಯೇ ಕೇಶಗಳನ್ನು ಹಿಡಿದು ಕೇವಲ ಉಗ್ರ ಬಾಹುಯುದ್ಧಗಳೂ ನಡೆದವು.
08019066a ಸಮಾಸಕ್ತಸ್ಯ ಚಾನ್ಯೇನ ಅವಿಜ್ಞಾತಸ್ತಥಾಪರಃ।
08019066c ಜಹಾರ ಸಮರೇ ಪ್ರಾಣಾನ್ನಾನಾಶಸ್ತ್ರೈರನೇಕಧಾ।।
ಇನ್ನೊಬ್ಬರೊಡನೆ ಯುದ್ಧದಲ್ಲಿ ಸಮಾಸಕ್ತರಾಗಿದ್ದಾಗ ಇತರರು ತಿಳಿಸದೆಯೇ ನಾನಾ ಶಸ್ತ್ರಗಳಿಂದ ಸಮರದಲ್ಲಿ ಬಹಳಷ್ಟು ಜನರನ್ನು ವಧಿಸಿದರು.
08019067a ಸಂಸಕ್ತೇಷು ಚ ಯೋಧೇಷು ವರ್ತಮಾನೇ ಚ ಸಂಕುಲೇ।
08019067c ಕಬಂದಾನ್ಯುತ್ಥಿತಾನಿ ಸ್ಮ ಶತಶೋಽಥ ಸಹಸ್ರಶಃ।।
ಹೀಗೆ ಪರಸ್ಪರರನ್ನು ಹತ್ತಿಕೊಂಡು ಸಂಕುಲ ಯುದ್ಧವು ನಡೆಯುತ್ತಿರಲು ನೂರಾರು ಸಹಸ್ರಾರು ಕಬಂಧಗಳು ಮೇಲೆ ಎದ್ದು ನಿಂತವು.
08019068a ಲೋಹಿತೈಃ ಸಿಚ್ಯಮಾನಾನಿ ಶಸ್ತ್ರಾಣಿ ಕವಚಾನಿ ಚ।
08019068c ಮಹಾರಂಗಾನುರಕ್ತಾನಿ ವಸ್ತ್ರಾಣೀವ ಚಕಾಶಿರೇ।।
ರಕ್ತದಿಂದ ತೋಯ್ದುಹೋಗಿದ್ದ ಶಸ್ತ್ರಗಳು ಮತ್ತು ಕವಚಗಳು ಕೂಡ ರಕ್ತದಿಂದ ಕೆಂಪುಬಣ್ಣವನ್ನು ತಳೆದಿದ್ದ ವಸ್ತ್ರಗಳಂತೆಯೇ ತೋರಿದವು.
08019069a ಏವಮೇತನ್ಮಹಾಯುದ್ಧಂ ದಾರುಣಂ ಭೃಶಸಂಕುಲಂ।
08019069c ಉನ್ಮತ್ತರಂಗಪ್ರತಿಮಂ ಶಬ್ದೇನಾಪೂರಯಜ್ಜಗತ್।।
ಹೀಗೆ ಅತ್ಯಂತ ದಾರುಣ ಸಂಕುಲ ಮಹಾಯುದ್ಧವು ನಡೆಯುತ್ತಿರಲು ಹುಚ್ಚೆದ್ದ ರಂಗಮಂಚದಂತೆ ಶಬ್ಧಗಳಿಂದ ಜಗತ್ತೇ ತುಂಬಿಕೊಂಡಿತು.
08019070a ನೈವ ಸ್ವೇ ನ ಪರೇ ರಾಜನ್ವಿಜ್ಞಾಯಂತೇ ಶರಾತುರಾಃ।
08019070c ಯೋದ್ಧವ್ಯಮಿತಿ ಯುಧ್ಯಂತೇ ರಾಜಾನೋ ಜಯಗೃದ್ಧಿನಃ।।
ರಾಜನ್! ಯುದ್ಧಮಾಡಬೇಕೆಂದು ಯುದ್ಧಮಾಡುತ್ತಿದ್ದ ಜಯಾಭಿಲಾಷೀ ರಾಜರು ಶರಾತುರರಾಗಿ ನಮ್ಮವರು ಯಾರು ಮತ್ತು ಶತ್ರುಗಳು ಯಾರು ಎನ್ನುವುದನ್ನು ತಿಳಿದುಕೊಳ್ಳದೇ ಯುದ್ಧಮಾಡುತ್ತಿದ್ದರು.
08019071a ಸ್ವಾನ್ಸ್ವೇ ಜಘ್ನುರ್ಮಹಾರಾಜ ಪರಾಂಶ್ಚೈವ ಸಮಾಗತಾನ್।
08019071c ಉಭಯೋಃ ಸೇನಯೋರ್ವೀರೈರ್ವ್ಯಾಕುಲಂ ಸಮಪದ್ಯತ।।
ಮಹಾರಾಜ! ನಮ್ಮವರು ನಮ್ಮವರನ್ನೇ ಸಂಹರಿಸುತ್ತಿದ್ದರು. ಎದುರಾದ ಶತ್ರುಗಳನ್ನು ಕೂಡ ಸಂಹರಿಸುತ್ತಿದ್ದರು. ಎರಡೂ ಸೇನೆಗಳ ವೀರರಲ್ಲಿ ಒಂದು ತರಹದ ವ್ಯಾಕುಲತೆಯು ಹುಟ್ಟಿಕೊಂಡಿತು.
08019072a ರಥೈರ್ಭಗ್ನೈರ್ಮಹಾರಾಜ ವಾರಣೈಶ್ಚ ನಿಪಾತಿತೈಃ।
08019072c ಹಯೈಶ್ಚ ಪತಿತೈಸ್ತತ್ರ ನರೈಶ್ಚ ವಿನಿಪಾತಿತೈಃ।।
08019073a ಅಗಮ್ಯರೂಪಾ ಪೃಥಿವೀ ಮಾಂಸಶೋಣಿತಕರ್ದಮಾ।
08019073c ಕ್ಷಣೇನಾಸೀನ್ಮಹಾರಾಜ ಕ್ಷತಜೌಘಪ್ರವರ್ತಿನೀ।।
ಮಹಾರಾಜ! ಭಗ್ನರಥಗಳಿಂದ, ಕೆಳಗುರುಳಿದ ಆನೆಗಳಿಂದ, ಬಿದ್ದ ಕುದುರೆಗಳಿಂದ, ಉರುಳಿಸಲ್ಪಟ್ಟ ಪದಾತಿಗಳಿಂದ ಮತ್ತು ಮಾಂಸ-ರಕ್ತಗಳ ಕೆಸರಿನಿಂದ ರಣಭೂಮಿಯು ಅಗಮ್ಯವಾಗಿ ಪರಿಣಮಿಸಿತು. ಮಹಾರಾಜ! ಕ್ಷಣದಲ್ಲಿಯೇ ರಕ್ತದ ನದಿಯು ಹರಿಯತೊಡಗಿತು.
08019074a ಪಾಂಚಾಲಾನವಧೀತ್ಕರ್ಣಸ್ತ್ರಿಗರ್ತಾಂಶ್ಚ ಧನಂಜಯಃ।
08019074c ಭೀಮಸೇನಃ ಕುರೂನ್ರಾಜನ್ ಹಸ್ತ್ಯನೀಕಂ ಚ ಸರ್ವಶಃ।।
ರಾಜನ್! ಪಾಂಚಾಲರನ್ನು ಕರ್ಣನೂ, ತ್ರಿಗರ್ತರನ್ನು ಧನಂಜಯನೂ ಮತ್ತು ಕುರುಗಳನ್ನೂ ಅವರ ಗಜಸೇನೆಗಳನ್ನೂ ಭೀಮಸೇನನು ಸರ್ವಶಃ ವಧಿಸಿದರು.
08019075a ಏವಮೇಷ ಕ್ಷಯೋ ವೃತ್ತಃ ಕುರುಪಾಂಡವಸೇನಯೋಃ।
08019075c ಅಪರಾಹ್ಣೇ ಮಹಾರಾಜ ಕಾಂಕ್ಷಂತ್ಯೋರ್ವಿಪುಲಂ ಜಯಂ।।
ಮಹಾರಾಜ! ಈ ರೀತಿ ಅಪರಾಹ್ಣದಲ್ಲಿ ವಿಪುಲ ಜಯವನ್ನು ಬಯಸುತ್ತಿದ್ದ ಕುರು-ಪಾಂಡವಸೇನೆಗಳ ನಾಶವು ನಡೆಯಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಏಕೋನವಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಹತ್ತೊಂಭತ್ತನೇ ಅಧ್ಯಾಯವು.