ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 18
ಸಾರ
ಉಲೂಕನಿಂದ ಯುಯುತ್ಸುವಿನ ಸೋಲು (1-11). ಕೌರವ ಶ್ರುತಕೀರ್ತಿ ಮತ್ತು ದ್ರೌಪದೇಯ ಶತಾನೀಕರ ಯುದ್ಧ (12-16). ಸುತಸೋಮ-ಶಕುನಿಯರ ಯುದ್ಧ; ಸುತಸೋಮನ ಸೋಲು (17-40). ಕೃಪ-ಧೃಷ್ಟದ್ಯುಮ್ನರ ಯುದ್ಧ; ದೃಷ್ಟದ್ಯುಮ್ನನ ಸೋಲು (41-60). ಕೃತವರ್ಮ-ಶಿಖಂಡಿಯರ ಯುದ್ಧ; ಶಿಖಂಡಿಯು ಮೂರ್ಛೆಹೋದುದು (61-76).
08018001 ಸಂಜಯ ಉವಾಚ।
08018001a ಯುಯುತ್ಸುಂ ತವ ಪುತ್ರಂ ತು ಪ್ರಾದ್ರವಂತಂ ಮಹದ್ಬಲಂ।
08018001c ಉಲೂಕೋಽಭ್ಯಪತತ್ತೂರ್ಣಂ ತಿಷ್ಠ ತಿಷ್ಠೇತಿ ಚಾಬ್ರವೀತ್।।
ಸಂಜಯನು ಹೇಳಿದನು: “ಮಹಾಸೇನೆಯನ್ನು ಓಡಿಹೋಗುವಂತೆ ಮಾಡುತ್ತಿದ್ದ ನಿನ್ನ ಪುತ್ರ ಯುಯುತ್ಸುವನ್ನು ಉಲೂಕನು ತಕ್ಷಣವೇ ಆಕ್ರಮಣಿಸಿ ನಿಲ್ಲು ನಿಲ್ಲೆಂದು ಹೇಳಿದನು.
08018002a ಯುಯುತ್ಸುಸ್ತು ತತೋ ರಾಜಂ ಶಿತಧಾರೇಣ ಪತ್ರಿಣಾ।
08018002c ಉಲೂಕಂ ತಾಡಯಾಮಾಸ ವಜ್ರೇಣೇಂದ್ರ ಇವಾಚಲಂ।।
ರಾಜನ್! ಆಗ ಯುಯುತ್ಸುವಾದರೋ ನಿಶಿತ ಬಾಣಗಳಿಂದ ಇಂದ್ರನು ವಜ್ರದಿಂದ ಪರ್ವತವನ್ನು ಹೊಡೆಯುವಂತೆ ಉಲೂಕನನ್ನು ಹೊಡೆದನು.
08018003a ಉಲೂಕಸ್ತು ತತಃ ಕ್ರುದ್ಧಸ್ತವ ಪುತ್ರಸ್ಯ ಸಂಯುಗೇ।
08018003c ಕ್ಷುರಪ್ರೇಣ ಧನುಶ್ಚಿತ್ತ್ವಾ ತಾಡಯಾಮಾಸ ಕರ್ಣಿನಾ।।
ಆಗ ಉಲೂಕನಾದರೋ ಸಂಯುಗದಲ್ಲಿ ನಿನ್ನ ಮಗನ ಮೇಲೆ ಕ್ರುದ್ಧನಾಗಿ ಕ್ಷುರಪ್ರದಿಂದ ಧನುಸ್ಸನ್ನು ಕತ್ತರಿಸಿ ಕರ್ಣಿಗಳಿಂದ ಹೊಡೆಯತೊಡಗಿದನು.
08018004a ತದಪಾಸ್ಯ ಧನುಶ್ಚಿನ್ನಂ ಯುಯುತ್ಸುರ್ವೇಗವತ್ತರಂ।
08018004c ಅನ್ಯದಾದತ್ತ ಸುಮಹಚ್ಚಾಪಂ ಸಂರಕ್ತಲೋಚನಃ।।
ಆಗ ಸಂರಕ್ತಲೋಚನನಾದ ಯುಯುತ್ಸುವು ತುಂಡಾದ ಧನುಸ್ಸನ್ನು ಎಸೆದು ಇನ್ನೊಂದು ವೇಗವತ್ತರ ಧನುಸ್ಸನ್ನು ತೆಗೆದುಕೊಂಡನು.
08018005a ಶಾಕುನಿಂ ಚ ತತಃ ಷಷ್ಟ್ಯಾ ವಿವ್ಯಾಧ ಭರತರ್ಷಭ।
08018005c ಸಾರಥಿಂ ತ್ರಿಭಿರಾನರ್ಚತ್ತಂ ಚ ಭೂಯೋ ವ್ಯವಿಧ್ಯತ।।
ಭರತರ್ಷಭ! ಅವನು ಶಕುನಿಯ ಮಗನನ್ನು ಅರವತ್ತು ಬಾಣಗಳಿಂದ ಹೊಡೆದನು. ಸಾರಥಿಯನ್ನು ಮೂರರಿಂದ ಹೊಡೆದು ಇನ್ನೊಮ್ಮೆ ಉಲೂಕನನ್ನು ಪ್ರಹರಿಸಿದನು.
08018006a ಉಲೂಕಸ್ತಂ ತು ವಿಂಶತ್ಯಾ ವಿದ್ಧ್ವಾ ಹೇಮವಿಭೂಷಿತೈಃ।
08018006c ಅಥಾಸ್ಯ ಸಮರೇ ಕ್ರುದ್ಧೋ ಧ್ವಜಂ ಚಿಚ್ಚೇದ ಕಾಂಚನಂ।।
ಉಲೂಕನಾದರೋ ಸಮರದಲ್ಲಿ ಕ್ರುದ್ಧನಾಗಿ ಯುಯುತ್ಸುವನ್ನು ಇಪ್ಪತ್ತು ಹೇಮಭೂಷಿತ ಬಾಣಗಳಿಂದ ಹೊಡೆದು ಅವನ ಕಾಂಚನಧ್ವಜವನ್ನು ತುಂಡರಿಸಿದನು.
08018007a ಸ ಚ್ಚಿನ್ನಯಷ್ಟಿಃ ಸುಮಹಾಂ ಶೀರ್ಯಮಾಣೋ ಮಹಾಧ್ವಜಃ।
08018007c ಪಪಾತ ಪ್ರಮುಖೇ ರಾಜನ್ಯುಯುತ್ಸೋಃ ಕಾಂಚನೋಜ್ಜ್ವಲಃ।।
ರಾಜನ್! ದಂಡವು ತುಂಡಾದ ಆ ಕಾಂಚನೋಜ್ವಲ ಮಹಾಧ್ವಜವು ಛಿನ್ನ-ಛಿನ್ನವಾಗಿ ಯುಯುತ್ಸುವಿನ ಎದುರಿನಲ್ಲಿಯೇ ಬಿದ್ದಿತು.
08018008a ಧ್ವಜಮುನ್ಮಥಿತಂ ದೃಷ್ಟ್ವಾ ಯುಯುತ್ಸುಃ ಕ್ರೋಧಮೂರ್ಚಿತಃ।
08018008c ಉಲೂಕಂ ಪಂಚಭಿರ್ಬಾಣೈರಾಜಘಾನ ಸ್ತನಾಂತರೇ।।
ಧ್ವಜವು ಧ್ವಂಸವಾದುದನ್ನು ನೋಡಿ ಕ್ರೋಧಮೂರ್ಛಿತನಾದ ಯುಯುತ್ಸುವು ಐದು ಬಾಣಗಳಿಂದ ಉಲೂಕನ ವಕ್ಷಸ್ಥಳಕ್ಕೆ ಹೊಡೆದನು.
08018009a ಉಲೂಕಸ್ತಸ್ಯ ಭಲ್ಲೇನ ತೈಲಧೌತೇನ ಮಾರಿಷ।
08018009c ಶಿರಶ್ಚಿಚ್ಚೇದ ಸಹಸಾ ಯಂತುರ್ಭರತಸತ್ತಮ।।
ಮಾರಿಷ! ರಥಸತ್ತಮ ಉಲೂಕನು ಒಮ್ಮೆಲೇ ತನ್ನ ತೈಲಧೌತ ಭಲ್ಲದಿಂದ ಯುಯುತ್ಸುವಿನ ಸಾರಥಿಯ ಶಿರವನ್ನು ಕತ್ತರಿಸಿದನು.
08018010a ಜಘಾನ ಚತುರೋಽಶ್ವಾಂಶ್ಚ ತಂ ಚ ವಿವ್ಯಾಧ ಪಂಚಭಿಃ।
08018010c ಸೋಽತಿವಿದ್ಧೋ ಬಲವತಾ ಪ್ರತ್ಯಪಾಯಾದ್ರಥಾಂತರಂ।।
ಅವನ ನಾಲ್ಕು ಕುದುರೆಗಳನ್ನೂ ಸಂಹರಿಸಿ ಅವನನ್ನು ಐದು ಬಾಣಗಳಿಂದ ಗಾಯಗೊಳಿಸಿದನು. ಹೀಗೆ ಬಲವತ್ತರವಾಗಿ ಪ್ರಹರಿಸಲ್ಪಟ್ಟ ಯುಯುತ್ಸುವು ಇನ್ನೊಂದು ರಥವನ್ನೇರಿ ಪಲಾಯನಮಾಡಿದನು.
08018011a ತಂ ನಿರ್ಜಿತ್ಯ ರಣೇ ರಾಜನ್ನುಲೂಕಸ್ತ್ವರಿತೋ ಯಯೌ।
08018011c ಪಾಂಚಾಲಾನ್ಸೃಂಜಯಾಂಶ್ಚೈವ ವಿನಿಘ್ನನ್ನಿಶಿತೈಃ ಶರೈಃ।।
ರಾಜನ್! ರಣದಲ್ಲಿ ಯುಯುತ್ಸುವನ್ನು ಜಯಿಸಿ ಉಲೂಕನು ತ್ವರೆಮಾಡಿ ನಿಶಿತ ಶರಗಳಿಂದ ಪಾಂಚಾಲರನ್ನು ಮತ್ತು ಸೃಂಜಯರನ್ನು ಸಂಹರಿಸುತ್ತಾ ಹೊರಟನು.
08018012a ಶತಾನೀಕಂ ಮಹಾರಾಜ ಶ್ರುತಕರ್ಮಾ ಸುತಸ್ತವ।
08018012c ವ್ಯಶ್ವಸೂತರಥಂ ಚಕ್ರೇ ನಿಮೇಷಾರ್ಧಾದಸಂಭ್ರಮಂ।।
ಮಹಾರಾಜ! ನಿನ್ನ ಮಗ ಶ್ರುತಕರ್ಮನು ಗಾಬರಿಗೊಳ್ಳದೇ ನಿಮಿಷಾರ್ಧದಲ್ಲಿ ಶತಾನೀಕನನ್ನು ಕುದುರೆಗಳು, ಸಾರಥಿ ಮತ್ತು ರಥಗಳಿಂದ ವಿಹೀನನನ್ನಾಗಿ ಮಾಡಿದನು.
08018013a ಹತಾಶ್ವೇ ತು ರಥೇ ತಿಷ್ಠಂ ಶತಾನೀಕೋ ಮಹಾಬಲಃ।
08018013c ಗದಾಂ ಚಿಕ್ಷೇಪ ಸಂಕ್ರುದ್ಧಸ್ತವ ಪುತ್ರಸ್ಯ ಮಾರಿಷ।।
ಮಾರಿಷ! ಮಹಾಬಲ ಶತಾನೀಕನು ಕುದುರೆಗಳು ಹತವಾಗಲು ರಥದಮೇಲೆಯೇ ನಿಂತು ಕ್ರುದ್ಧನಾಗಿ ನಿನ್ನ ಮಗನ ಮೇಲೆ ಗದೆಯನ್ನು ಎಸೆದನು.
08018014a ಸಾ ಕೃತ್ವಾ ಸ್ಯಂದನಂ ಭಸ್ಮ ಹಯಾಂಶ್ಚೈವ ಸಸಾರಥೀನ್।
08018014c ಪಪಾತ ಧರಣೀಂ ತೂರ್ಣಂ ದಾರಯಂತೀವ ಭಾರತ।।
ಭಾರತ! ಆ ಗದೆಯು ಶ್ರುತಕರ್ಮನು ರಥವನ್ನು ಕುದುರೆಗಳು ಮತ್ತು ಸಾರಥಿಯೊಂದಿಗೆ ಭಸ್ಮೀಭೂತವನ್ನಾಗಿ ಮಾಡಿ ಸೀಳಿಬಿಡುವುದೋ ಎನ್ನುವಂತೆ ಭೂಮಿಯ ಮೇಲೆ ಬಿದ್ದಿತು.
08018015a ತಾವುಭೌ ವಿರಥೌ ವೀರೌ ಕುರೂಣಾಂ ಕೀರ್ತಿವರ್ಧನೌ।
08018015c ಅಪಾಕ್ರಮೇತಾಂ ಯುದ್ಧಾರ್ತೌ ಪ್ರೇಕ್ಷಮಾಣೌ ಪರಸ್ಪರಂ।।
ಯುದ್ಧಾರ್ತಿಗಳಾಗಿದ್ದ ಆ ಇಬ್ಬರು ವಿರಥ ವೀರ ಕುರುಗಳ ಕೀರ್ತಿವರ್ಧನರು ಪರಸ್ಪರರನ್ನು ನೋಡುತ್ತಾ ಹಿಂದೆಸರಿದರು.
08018016a ಪುತ್ರಸ್ತು ತವ ಸಂಭ್ರಾಂತೋ ವಿವಿತ್ಸೋ ರಥಮಾವಿಶತ್।
08018016c ಶತಾನೀಕೋಽಪಿ ತ್ವರಿತಃ ಪ್ರತಿವಿಂದ್ಯರಥಂ ಗತಃ।।
ಸಂಭ್ರಾಂತನಾದ ನಿನ್ನ ಮಗನಾದರೋ ವಿವಿತ್ಸುವಿನ ರಥವನ್ನು ಏರಿದನು. ಶತಾನೀಕನೂ ಕೂಡ ತ್ವರೆಮಾಡಿ ಪ್ರತಿವಿಂದ್ಯನ ರಥಕ್ಕೆ ಹೋದನು.
08018017a ಸುತಸೋಮಸ್ತು ಶಕುನಿಂ ವಿವ್ಯಾಧ ನಿಶಿತೈಃ ಶರೈಃ।
08018017c ನಾಕಂಪಯತ ಸಂರಬ್ಧೋ ವಾರ್ಯೋಘ ಇವ ಪರ್ವತಂ।।
ಸುತಸೋಮನಾದರೋ ಶಕುನಿಯನ್ನು ನಿಶಿತ ಶರಗಳಿಂದ ಹೊಡೆದನು. ಆದರೂ ಭಿರುಗಾಳಿಯು ಪರ್ವತವನ್ನು ಹೇಗೆ ಅಲುಗಾಡಿಸುವುದಿಲ್ಲವೋ ಹಾಗೆ ಶಕುನಿಯು ಸಂರಬ್ಧನಾಗಿ ಕಂಪಿಸಲಿಲ್ಲ.
08018018a ಸುತಸೋಮಸ್ತು ತಂ ದೃಷ್ಟ್ವಾ ಪಿತುರತ್ಯಂತವೈರಿಣಂ।
08018018c ಶರೈರನೇಕಸಾಹಸ್ರೈಶ್ಚಾದಯಾಮಾಸ ಭಾರತ।।
ಭಾರತ! ತನ್ನ ತಂದೆಯ ಅತ್ಯಂತ ವೈರಿ ಶಕುನಿಯನ್ನು ನೋಡಿ ಸುತಸೋಮನಾದರೋ ಅನೇಕ ಸಹಸ್ರ ಶರಗಳಿಂದ ಅವನನ್ನು ಮುಸುಕಿದನು.
08018019a ತಾಂ ಶರಾಂ ಶಕುನಿಸ್ತೂರ್ಣಂ ಚಿಚ್ಚೇದಾನ್ಯೈಃ ಪತತ್ರಿಭಿಃ।
08018019c ಲಘ್ವಸ್ತ್ರಶ್ಚಿತ್ರಯೋಧೀ ಚ ಜಿತಕಾಶೀ ಚ ಸಂಯುಗೇ।।
ಸಂಯುಗದಲ್ಲಿ ಅಸ್ತ್ರಗಳಲ್ಲಿ ಹಸ್ತಲಾಘವವನ್ನು ಹೊಂದಿದ್ದ ಚಿತ್ರಯೋಧೀ ವಿಜಯಶ್ರೀಯಿಂದ ಸುಶೋಭಿತನಾಗಿದ್ದ ಶಕುನಿಯು ಆ ಶರಗಳನ್ನು ತಕ್ಷಣವೇ ಅನ್ಯ ಪತತ್ರಿಗಳಿಂದ ತುಂಡರಿಸಿದನು.
08018020a ನಿವಾರ್ಯ ಸಮರೇ ಚಾಪಿ ಶರಾಂಸ್ತಾನ್ನಿಶಿತೈಃ ಶರೈಃ।
08018020c ಆಜಘಾನ ಸುಸಂಕ್ರುದ್ಧಃ ಸುತಸೋಮಂ ತ್ರಿಭಿಃ ಶರೈಃ।।
ಸಮರದಲ್ಲಿ ಆ ಶರಗಳನ್ನು ನಿಶಿತ ಶರಗಳಿಂದ ತಡೆದು ಸುಸಂಕ್ರುದ್ಧ ಶಕುನಿಯು ಸುತಸೋಮನನ್ನು ಮೂರು ಶರಗಳಿಂದ ಗಾಯಗೊಳಿಸಿದನು.
08018021a ತಸ್ಯಾಶ್ವಾನ್ಕೇತನಂ ಸೂತಂ ತಿಲಶೋ ವ್ಯಧಮಚ್ಚರೈಃ।
08018021c ಸ್ಯಾಲಸ್ತವ ಮಹಾವೀರ್ಯಸ್ತತಸ್ತೇ ಚುಕ್ರುಶುರ್ಜನಾಃ।।
ಆಗ ಮಹಾವೀರ್ಯ ನಿನ್ನ ಬಾವಮೈದುನನು ಶರಗಳಿಂದ ಸುತಸೋಮನ ಕುದುರೆಗಳು, ಧ್ವಜ ಮತ್ತು ಸೂತರನ್ನು ಎಳ್ಳಿನಷ್ಟು ನುಚ್ಚುನೂರುಮಾಡಿದನು. ಆಗ ಅಲ್ಲಿದ್ದ ಜನರು ಹರ್ಷಸೂಚಕವಾಗಿ ಕೂಗಿದರು.
08018022a ಹತಾಶ್ವೋ ವಿರಥಶ್ಚೈವ ಚಿನ್ನಧನ್ವಾ ಚ ಮಾರಿಷ।
08018022c ಧನ್ವೀ ಧನುರ್ವರಂ ಗೃಹ್ಯ ರಥಾದ್ಭೂಮಾವತಿಷ್ಠತ।।
ಮಾರಿಷ! ಹತಾಶ್ವನೂ ವಿರಥನೂ, ಚಿನ್ನಧನ್ವಿಯೂ ಆದ ಧನ್ವೀ ಸುತಸೋಮನು ಶ್ರೇಷ್ಠ ಧನುಸ್ಸನ್ನು ಹಿಡಿದು ರಥದಿಂದಿಳಿದು ಭೂಮಿಯ ಮೇಲೆ ನಿಂತನು.
08018022e ವ್ಯಸೃಜತ್ಸಾಯಕಾಂಶ್ಚೈವ ಸ್ವರ್ಣಪುಂಖಾಂ ಶಿಲಾಶಿತಾನ್।
08018023a ಚಾದಯಾಮಾಸುರಥ ತೇ ತವ ಸ್ಯಾಲಸ್ಯ ತಂ ರಥಂ।।
ಸ್ವರ್ಣಪುಂಖಗಳ ಶಿಲಾಶಿತ ಸಾಯಕಗಳನ್ನು ಪ್ರಯೋಗಿಸುತ್ತಾ ಅವನು ನಿನ್ನ ಬಾವನ ರಥವನ್ನೇ ಮುಚ್ಚಿಬಿಟ್ಟನು.
08018023c ಪತಂಗಾನಾಮಿವ ವ್ರಾತಾಃ ಶರವ್ರಾತಾ ಮಹಾರಥಂ।
08018024a ರಥೋಪಸ್ಥಾನ್ಸಮೀಕ್ಷ್ಯಾಪಿ ವಿವ್ಯಥೇ ನೈವ ಸೌಬಲಃ।।
08018024c ಪ್ರಮೃದ್ನಂಶ್ಚ ಶರಾಂಸ್ತಾಂಸ್ತಾಂ ಶರವ್ರಾತೈರ್ಮಹಾಯಶಾಃ।
ಮಿಡಿತೆಗಳೋಪಾದಿಯಲ್ಲಿ ಮಹಾರಥವನ್ನು ಸಮೀಪಿಸುತ್ತಿದ್ದ ಆ ಶರವ್ರಾತವನ್ನು ರಥದಲ್ಲಿ ಕುಳಿತಿದ್ದ ಸೌಬಲನು ನೋಡಿಯೂ ಕೂಡ ಸ್ವಲ್ಪವಾದರೂ ವ್ಯಥೆಪಡಲಿಲ್ಲ. ಮಹಾಯಶಸ್ವಿ ಶಕುನಿಯು ಆ ಶರಗಳ ಮಳೆಯನ್ನು ಶರಗಳಿಂದಲೇ ಧ್ವಂಸಗೊಳಿಸಿದನು.
08018025a ತತ್ರಾತುಷ್ಯಂತ ಯೋಧಾಶ್ಚ ಸಿದ್ಧಾಶ್ಚಾಪಿ ದಿವಿ ಸ್ಥಿತಾಃ।।
08018025c ಸುತಸೋಮಸ್ಯ ತತ್ಕರ್ಮ ದೃಷ್ಟ್ವಾಶ್ರದ್ಧೇಯಮದ್ಭುತಂ।
08018025e ರಥಸ್ಥಂ ನೃಪತಿಂ ತಂ ತು ಪದಾತಿಃ ಸನ್ನಯೋಧಯತ್।।
ಸುತಸೋಮನಾದರೋ ಪದಾತಿಯಾಗಿಯೇ ರಥಸ್ಥನಾಗಿದ್ದ ಆ ನೃಪತಿಯೊಡನೆ ಯುದ್ಧಮಾಡುತ್ತಿದ್ದನು. ಅವನ ಆ ನಂಬಲಸಾಧ್ಯ ಅದ್ಭುತ ಕೃತ್ಯವನ್ನು ನೋಡಿ ಇತರ ಯೋಧರೂ, ಆಕಾಶದಲ್ಲಿ ನೆರೆದಿದ್ದ ಸಿದ್ಧರೂ ಹರ್ಷಿತರಾದರು.
08018026a ತಸ್ಯ ತೀಕ್ಷ್ಣೈರ್ಮಹಾವೇಗೈರ್ಭಲ್ಲೈಃ ಸಂನತಪರ್ವಭಿಃ।
08018026c ವ್ಯಹನತ್ಕಾರ್ಮುಕಂ ರಾಜಾ ತೂಣೀರಂ ಚೈವ ಸರ್ವಶಃ।।
ಆ ಸಮಯದಲ್ಲಿ ರಾಜಾ ಶಕುನಿಯು ಮಹಾವೇಗದ ತೀಕ್ಷ್ಣ ಸನ್ನತಪರ್ತ ಭಲ್ಲಗಳಿಂದ ಸುತಸೋಮನ ಧನುಸ್ಸನ್ನೂ ಬತ್ತಳಿಕೆಯನ್ನೂ ಸಂಪೂರ್ಣವಾಗಿ ನಾಶಗೊಳಿಸಿದನು.
08018027a ಸ ಚ್ಚಿನ್ನಧನ್ವಾ ಸಮರೇ ಖಡ್ಗಮುದ್ಯಮ್ಯ ನಾನದನ್।
08018027c ವೈಡೂರ್ಯೋತ್ಪಲವರ್ಣಾಭಂ ಹಸ್ತಿದಂತಮಯತ್ಸರುಂ।।
ಧನುಸ್ಸು ತುಂಡಾದ ಸುತಸೋಮನು ವೈಡೂರ್ಯಮಣಿ ಮತ್ತು ನೀಲಕಮಲಗಳ ಬಣ್ಣದ ಆನೆಯ ದಂತದ ಹಿಡಿಯಿದ್ದ ಖಡ್ಗವನ್ನು ಮೇಲೆತ್ತಿ ಸಿಂಹನಾದಗೈದನು.
08018028a ಭ್ರಾಮ್ಯಮಾಣಂ ತತಸ್ತಂ ತು ವಿಮಲಾಂಬರವರ್ಚಸಂ।
08018028c ಕಾಲೋಪಮಂ ತತೋ ಮೇನೇ ಸುತಸೋಮಸ್ಯ ಧೀಮತಃ।।
ಶುದ್ಧ ಆಕಾಶದ ಕಾಂತಿಯಿದ್ದ ಆ ಖಡ್ಗವನ್ನು ತಿರುಗಿಸುತ್ತಿದ್ದ ಧೀಮತ ಸುತಸೋಮನನ್ನು ಶಕುನಿಯು ಕಾಲನೆಂದೇ ಭಾವಿಸಿದನು.
08018029a ಸೋಽಚರತ್ಸಹಸಾ ಖಡ್ಗೀ ಮಂಡಲಾನಿ ಸಹಸ್ರಶಃ।
08018029c ಚತುರ್ವಿಂಶನ್ಮಹಾರಾಜ ಶಿಕ್ಷಾಬಲಸಮನ್ವಿತಃ।।
ಮಹಾರಾಜ! ಶಿಕ್ಷಾಬಲಸಮನ್ವಿತ ಖಡ್ಗಧಾರೀ ಸುತಸೋಮನು ಹದಿನಾಲ್ಕು ಸಾವಿರ ಮಂಡಲಗಳಲ್ಲಿ ಸಂಚರಿಸುತ್ತಿದ್ದನು.
08018030a ಸೌಬಲಸ್ತು ತತಸ್ತಸ್ಯ ಶರಾಂಶ್ಚಿಕ್ಷೇಪ ವೀರ್ಯವಾನ್।
08018030c ತಾನಾಪತತ ಏವಾಶು ಚಿಚ್ಚೇದ ಪರಮಾಸಿನಾ।।
ವೀರ್ಯವಾನ್ ಸೌಬಲನಾದರೋ ಅವನ ಮೇಲೆ ಶರಗಳನ್ನು ಪ್ರಯೋಗಿಸಲು ಬೀಳುವುದರೊಳಗೇ ಸುತಸೋಮನು ಶ್ರೇಷ್ಠ ಖಡ್ಗದಿಂದ ಅವುಗಳನ್ನು ತುಂಡರಿಸಿದನು.
08018031a ತತಃ ಕ್ರುದ್ಧೋ ಮಹಾರಾಜ ಸೌಬಲಃ ಪರವೀರಹಾ।
08018031c ಪ್ರಾಹಿಣೋತ್ಸುತಸೋಮಸ್ಯ ಶರಾನಾಶೀವಿಷೋಪಮಾನ್।।
ಮಹಾರಾಜ! ಆಗ ಪರವೀರಹ ಸೌಬಲನು ಕ್ರುದ್ಧನಾಗಿ ಸುತಸೋಮನ ಮೇಲೆ ಸರ್ಪವಿಷಗಳಿಗೆ ಸಮಾನ ಶರಗಳನ್ನು ಪ್ರಯೋಗಿಸಿದನು.
08018032a ಚಿಚ್ಚೇದ ತಾಂಶ್ಚ ಖಡ್ಗೇನ ಶಿಕ್ಷಯಾ ಚ ಬಲೇನ ಚ।
08018032c ದರ್ಶಯಽಲ್ಲಾಘವಂ ಯುದ್ಧೇ ತಾರ್ಕ್ಷ್ಯವೀರ್ಯಸಮದ್ಯುತಿಃ।।
ಗರುಡನ ವೀರ್ಯ ಸಮದ್ಯುತಿ ಸುತಸೋಮನು ತನ್ನ ಶಿಕ್ಷಣ ಮತ್ತು ಬಲಗಳಿಂದ ಆ ಬಾಣಗಳನ್ನು ಖಡ್ಗದಿಂದ ತುಂಡರಿಸಿ ಯುದ್ಧದಲ್ಲಿ ತನ್ನ ಹಸ್ತಲಾಘವವನ್ನು ತೋರಿಸಿದನು.
08018033a ತಸ್ಯ ಸಂಚರತೋ ರಾಜನ್ಮಂಡಲಾವರ್ತನೇ ತದಾ।
08018033c ಕ್ಷುರಪ್ರೇಣ ಸುತೀಕ್ಷ್ಣೇನ ಖಡ್ಗಂ ಚಿಚ್ಚೇದ ಸುಪ್ರಭಂ।।
ರಾಜನ್! ಆಗ ಮಂಡಲಾವರ್ತದಲ್ಲಿ ಸಂಚರಿಸುತ್ತಿದ್ದ ಶಕುನಿಯು ತೀಕ್ಷ್ಣ ಕ್ಷುರಪ್ರದಿಂದ ಸುತಸೋಮನ ಸುಪ್ರಭ ಖಡ್ಗವನ್ನು ಕತ್ತರಿಸಿದನು.
08018034a ಸ ಚ್ಚಿನ್ನಃ ಸಹಸಾ ಭೂಮೌ ನಿಪಪಾತ ಮಹಾನಸಿಃ।
08018034c ಅವಶಸ್ಯ ಸ್ಥಿತಂ ಹಸ್ತೇ ತಂ ಖಡ್ಗಂ ಸತ್ಸರುಂ ತದಾ।।
ತುಂಡಾದ ಆ ಮಹಾಖಡ್ಗವು ಕೂಡಲೇ ಭೂಮಿಯ ಮೇಲೆ ಬಿದ್ದಿತು. ಆ ಖಡ್ಗದ ಸುಂದರ ಹಿಡಿಯು ಮಾತ್ರ ಸುತಸೋಮನ ಕೈಯಲ್ಲಿಯೇ ಉಳಿಯಿತು.
08018035a ಚಿನ್ನಮಾಜ್ಞಾಯ ನಿಸ್ತ್ರಿಂಶಮವಪ್ಲುತ್ಯ ಪದಾನಿ ಷಟ್।
08018035c ಪ್ರಾವಿಧ್ಯತ ತತಃ ಶೇಷಂ ಸುತಸೋಮೋ ಮಹಾರಥಃ।।
ತನ್ನ ಖಡ್ಗವು ತುಂಡಾಯಿತೆಂದು ತಿಳಿದ ಮಹಾರಥ ಸುತಸೋಮನು ಕೂಡಲೇ ಆರು ಹೆಜ್ಜೆ ಮುಂದೆ ಹೋಗಿ ತನ್ನ ಕೈಯಲ್ಲಿ ಉಳಿದಿದ್ದ ಆ ಖಡ್ಗದ ಅರ್ಧಭಾಗದಿಂದಲೇ ಶಕುನಿಯನ್ನು ಪ್ರಹರಿಸಿದನು.
08018036a ಸ ಚ್ಚಿತ್ತ್ವಾ ಸಗುಣಂ ಚಾಪಂ ರಣೇ ತಸ್ಯ ಮಹಾತ್ಮನಃ।
08018036c ಪಪಾತ ಧರಣೀಂ ತೂರ್ಣಂ ಸ್ವರ್ಣವಜ್ರವಿಭೂಷಿತಃ।।
ಸ್ವರ್ಣವಜ್ರವಿಭೂಷಿತ ಆ ಖಡ್ಗದ ತುಂಡು ಮಹಾತ್ಮ ಶಕುನಿಯ ಉತ್ತಮ ಚಾಪವನ್ನು ತುಂಡರಿಸಿ ತಕ್ಷಣವೇ ರಣಭೂಮಿಯ ಮೇಲೆ ಬಿದ್ದಿತು.
08018036E ಸುತಸೋಮಸ್ತತೋಽಗಚ್ಚಚ್ಚ್ರುತಕೀರ್ತೇರ್ಮಹಾರಥಂ।
08018037a ಸೌಬಲೋಽಪಿ ಧನುರ್ಗೃಹ್ಯ ಘೋರಮನ್ಯತ್ಸುದುಃಸಹಂ।।
08018037c ಅಭ್ಯಯಾತ್ಪಾಂಡವಾನೀಕಂ ನಿಘ್ನಂ ಶತ್ರುಗಣಾನ್ಬಹೂನ್।
ಆಗ ಸುತಸೋಮನು ಶ್ರುತಕೀರ್ತಿಯ ಮಹಾರಥವನ್ನು ಹತ್ತಿದನು. ಸೌಬಲನೂ ಕೂಡ ಇನ್ನೊಂದು ದುಃಸ್ಸಹ ಘೋರ ಧನುಸ್ಸನ್ನು ತೆಗೆದುಕೊಂಡು ಪಾಂಡವ ಸೇನೆಯನ್ನು ಹೊಕ್ಕು ಅನೇಕ ಶತ್ರುಗಳನ್ನು ಸಂಹರಿಸಿದನು.
08018038a ತತ್ರ ನಾದೋ ಮಹಾನಾಸೀತ್ಪಾಂಡವಾನಾಂ ವಿಶಾಂ ಪತೇ।।
08018038c ಸೌಬಲಂ ಸಮರೇ ದೃಷ್ಟ್ವಾ ವಿಚರಂತಮಭೀತವತ್।
ವಿಶಾಂಪತೇ! ಆಗ ಸಮರದಲ್ಲಿ ಭೀತಿಯೇ ಇಲ್ಲದವನಂತೆ ಸಂಚರಿಸುತ್ತಿದ್ದ ಸೌಬಲನನ್ನು ನೋಡಿ ಪಾಂಡವರ ಕಡೆಯಲ್ಲಿ ಮಹಾ ಕೋಲಾಹಲವುಂಟಾಯಿತು.
08018039a ತಾನ್ಯನೀಕಾನಿ ದೃಪ್ತಾನಿ ಶಸ್ತ್ರವಂತಿ ಮಹಾಂತಿ ಚ।।
08018039c ದ್ರಾವ್ಯಮಾಣಾನ್ಯದೃಶ್ಯಂತ ಸೌಬಲೇನ ಮಹಾತ್ಮನಾ।
ಶಸ್ತ್ರಗಳನ್ನು ಹೊಂದಿದ್ದ ದರ್ಪಿತ ಪಾಂಡವರ ಮಹಾ ಸೇನೆಗಳು ಮಹಾತ್ಮ ಸೌಬಲನಿಂದ ಓಡಿಸಲ್ಪಡುತ್ತಿರುವುದನ್ನು ನಾವು ನೋಡಿದೆವು.
08018040a ಯಥಾ ದೈತ್ಯಚಮೂಂ ರಾಜನ್ದೇವರಾಜೋ ಮಮರ್ದ ಹ।।
08018040c ತಥೈವ ಪಾಂಡವೀಂ ಸೇನಾಂ ಸೌಬಲೇಯೋ ವ್ಯನಾಶಯತ್।
ರಾಜನ್! ದೈತ್ಯಸೇನೆಯನ್ನು ದೇವರಾಜನು ಹೇಗೆ ಮರ್ದಿಸಿದನೋ ಹಾಗೆ ಪಾಂಡವೀ ಸೇನೆಯು ಸೌಬಲನಿಂದ ನಾಶಗೊಂಡಿತು.
08018041a ಧೃಷ್ಟದ್ಯುಮ್ನಂ ಕೃಪೋ ರಾಜನ್ವಾರಯಾಮಾಸ ಸಂಯುಗೇ।।
08018041c ಯಥಾ ದೃಪ್ತಂ ವನೇ ನಾಗಂ ಶರಭೋ ವಾರಯೇದ್ಯುಧಿ।
ರಾಜನ್! ವನದಲ್ಲಿ ಶರಭವು ದರ್ಪಿತ ಆನೆಯನ್ನು ಹೊಡೆದಾಡಿ ತಡೆಯುವಂತೆ ಯುದ್ಧದಲ್ಲಿ ಕೃಪನು ಧೃಷ್ಟದ್ಯುಮ್ನನನ್ನು ತಡೆದನು.
08018042a ನಿರುದ್ಧಃ ಪಾರ್ಷತಸ್ತೇನ ಗೌತಮೇನ ಬಲೀಯಸಾ।।
08018042c ಪದಾತ್ಪದಂ ವಿಚಲಿತುಂ ನಾಶಕ್ನೋತ್ತತ್ರ ಭಾರತ।
ಭಾರತ! ಬಲಶಾಲಿ ಗೌತಮನಿಂದ ತಡೆಯಲ್ಪಟ್ಟ ಪಾರ್ಷತನಿಗೆ ಒಂದು ಹೆಜ್ಜೆಯನ್ನೂ ಮುಂದಿಡಲು ಸಾಧ್ಯವಾಗಲಿಲ್ಲ.
08018043a ಗೌತಮಸ್ಯ ವಪುರ್ದೃಷ್ಟ್ವಾ ಧೃಷ್ಟದ್ಯುಮ್ನರಥಂ ಪ್ರತಿ।।
08018043c ವಿತ್ರೇಸುಃ ಸರ್ವಭೂತಾನಿ ಕ್ಷಯಂ ಪ್ರಾಪ್ತಂ ಚ ಮೇನಿರೇ।
ಧೃಷ್ಟದ್ಯುಮ್ನನ ರಥದ ಬಳಿ ಗೌತಮನ ರೂಪವನ್ನು ಕಂಡು ಸರ್ವಭೂತಗಳೂ ಪ್ರಳಯವೇ ಪ್ರಾಪ್ತವಾಯಿತೋ ಎಂದುಕೊಂಡು ನಡುಗಿದವು.
08018044a ತತ್ರಾವೋಚನ್ವಿಮನಸೋ ರಥಿನಃ ಸಾದಿನಸ್ತಥಾ।।
08018044c ದ್ರೋಣಸ್ಯ ನಿಧನೇ ನೂನಂ ಸಂಕ್ರುದ್ಧೋ ದ್ವಿಪದಾಂ ವರಃ।
08018045a ಶಾರದ್ವತೋ ಮಹಾತೇಜಾ ದಿವ್ಯಾಸ್ತ್ರವಿದುದಾರಧೀಃ।।
08018045c ಅಪಿ ಸ್ವಸ್ತಿ ಭವೇದದ್ಯ ಧೃಷ್ಟದ್ಯುಮ್ನಸ್ಯ ಗೌತಮಾತ್।
ವಿಮನಸ್ಕರಾಗಿದ್ದ ರಥಿಗಳೂ ಕುದುರೆಸವಾರರೂ ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಿದ್ದರು: “ದ್ರೋಣನ ನಿಧನದಿಂದಾಗಿ ದ್ವಿಪದರಲ್ಲಿ ಶ್ರೇಷ್ಠ ಕೃಪನು ತುಂಬಾ ಸಂಕ್ರುದ್ಧನಾಗಿದ್ದಾನೆ. ಮಹಾತೇಜಸ್ವಿ, ದಿವ್ಯಾಸ್ತ್ರವಿದು, ಉದಾರಬುದ್ಧಿಯ ಶಾರದ್ವತ ಗೌತಮನಿಂದ ಇಂದು ಧೃಷ್ಟದ್ಯುಮ್ನನಿಗೆ ಒಳ್ಳೆಯದೇನಾದರೂ ಆಗಬಹುದೇ?
08018046a ಅಪೀಯಂ ವಾಹಿನೀ ಕೃತ್ಸ್ನಾ ಮುಚ್ಯೇತ ಮಹತೋ ಭಯಾತ್।।
08018046c ಅಪ್ಯಯಂ ಬ್ರಾಹ್ಮಣಃ ಸರ್ವಾನ್ನ ನೋ ಹನ್ಯಾತ್ಸಮಾಗತಾನ್।
ಈ ಸಂಪೂರ್ಣ ಸೇನೆಯು ಮಹಾಭಯದಿಂದ ಬಿಡುಗಡೆ ಹೊಂದಬಲ್ಲದೇ? ಈ ಬ್ರಾಹ್ಮಣನು ಸೇರಿರುವ ನಮ್ಮೆಲ್ಲರನ್ನೂ ಸಂಹರಿಸದೇ ಬಿಟ್ಟಾನೆಯೇ?
08018047a ಯಾದೃಶಂ ದೃಶ್ಯತೇ ರೂಪಂ ಅಂತಕಪ್ರತಿಮಂ ಭೃಶಂ।।
08018047c ಗಮಿಷ್ಯತ್ಯದ್ಯ ಪದವೀಂ ಭಾರದ್ವಾಜಸ್ಯ ಸಂಯುಗೇ।
ಅವನ ಈ ರೂಪವು ಅಂತಕನ ರೂಪದಂತೆಯೇ ತೋರುತ್ತಿದೆ. ಇಂದು ಕೃಪನೂ ಕೂಡ ಯುದ್ಧದಲ್ಲಿ ಭಾರದ್ವಾಜ ದ್ರೋಣನ ಪದವಿಯಲ್ಲಿ ಹೋಗುತ್ತಿದ್ದಾನೆ.
08018048a ಆಚಾರ್ಯಃ ಕ್ಷಿಪ್ರಹಸ್ತಶ್ಚ ವಿಜಯೀ ಚ ಸದಾ ಯುಧಿ।।
08018048c ಅಸ್ತ್ರವಾನ್ವೀರ್ಯಸಂಪನ್ನಃ ಕ್ರೋಧೇನ ಚ ಸಮನ್ವಿತಃ।
08018049a ಪಾರ್ಷತಶ್ಚ ಭೃಶಂ ಯುದ್ಧೇ ವಿಮುಖೋಽದ್ಯಾಪಿ ಲಕ್ಷ್ಯತೇ।।
08018049c ಇತ್ಯೇವಂ ವಿವಿಧಾ ವಾಚಸ್ತಾವಕಾನಾಂ ಪರೈಃ ಸಹ।
ಆಚಾರ್ಯನು ಕ್ಷಿಪ್ರಹಸ್ತನು. ಯುದ್ಧದಲ್ಲಿ ಸದಾ ವಿಜಯಗಳಿಸುವವನು. ಅಸ್ತ್ರವಾನನೂ ವೀರ್ಯಸಂಪನ್ನನೂ ಆದ ಇವನು ಕ್ರೋಧಸಮನ್ವಿತನಾಗಿದ್ದಾನೆ. ಈ ಯುದ್ಧದಲ್ಲಿ ಪಾರ್ಷತನು ವಿಮುಖನಾಗುತ್ತಾನೆ ಎಂದೇ ಕಂಡುಬರುತ್ತಿದೆ!” ಹೀಗೆ ವಿವಿಧ ರೀತಿಯಲ್ಲಿ ನಿನ್ನವರು ಮತ್ತು ಶತ್ರುಗಳು ಮಾತನಾಡಿಕೊಳ್ಳುತ್ತಿದ್ದರು.
08018050a ವಿನಿಃಶ್ವಸ್ಯ ತತಃ ಕ್ರುದ್ಧಃ ಕೃಪಃ ಶಾರದ್ವತೋ ನೃಪ।।
08018050c ಪಾರ್ಷತಂ ಚಾದಯಾಮಾಸ ನಿಶ್ಚೇಷ್ಟಂ ಸರ್ವಮರ್ಮಸು।
ನೃಪ! ಆಗ ಕೋಪದಿಂದ ನಿಟ್ಟುಸಿರು ಬಿಡುತ್ತಾ ಶಾರದ್ವತ ಕೃಪನು ಪಾರ್ಷತನನ್ನು ಎಲ್ಲ ಕಡೆಗಳಿಂದ ಪ್ರಹರಿಸಿ ನಿಶ್ಚೇಷ್ಟನನ್ನಾಗಿಸಿದನು.
08018051a ಸ ವಧ್ಯಮಾನಃ ಸಮರೇ ಗೌತಮೇನ ಮಹಾತ್ಮನಾ।।
08018051c ಕರ್ತವ್ಯಂ ನ ಪ್ರಜಾನಾತಿ ಮೋಹಿತಃ ಪರಮಾಹವೇ।
ಸಮರದಲ್ಲಿ ಮಹಾತ್ಮ ಗೌತಮನಿಂದ ವಧಿಸಲ್ಪಡುತ್ತಿದ್ದ ಧೃಷ್ಟದ್ಯುಮ್ನನು ಮೋಹಿತನಾಗಿ ಯುದ್ದದಲ್ಲಿ ಏನು ಮಾಡಬೇಕೆನ್ನುವುದನ್ನೇ ತಿಳಿಯದಾದನು.
08018052a ತಮಬ್ರವೀತ್ತತೋ ಯಂತಾ ಕಚ್ಚಿತ್ ಕ್ಷೇಮಂ ನು ಪಾರ್ಷತ।।
08018052c ಈದೃಶಂ ವ್ಯಸನಂ ಯುದ್ಧೇ ನ ತೇ ದೃಷ್ಟಂ ಕದಾ ಚನ।
ಆಗ ಅವನ ಸಾರಥಿಯು ಅವನನ್ನು ಪ್ರಶ್ನಿಸಿದನು: “ಪಾರ್ಷತ! ಏನು ಕ್ಷೇಮದಿಂದಿರುವೆಯಾ? ಯುದ್ಧದಲ್ಲಿ ನೀನು ಈ ರೀತಿ ವ್ಯಸನದಲ್ಲಿರುವುದನ್ನು ನಾನು ಇದೂವರೆಗೂ ನೋಡಿರಲಿಲ್ಲ!
08018053a ದೈವಯೋಗಾತ್ತು ತೇ ಬಾಣಾ ನಾತರನ್ಮರ್ಮಭೇದಿನಃ।।
08018053c ಪ್ರೇಷಿತಾ ದ್ವಿಜಮುಖ್ಯೇನ ಮರ್ಮಾಣ್ಯುದ್ದಿಶ್ಯ ಸರ್ವಶಃ।
ದ್ವಿಜಮುಖ್ಯನು ನಿನ್ನ ಮರ್ಮಗಳನ್ನೇ ಗುರಿಯಿಟ್ಟು ಪ್ರಯೋಗಿಸಿದ ಮರ್ಮಭೇದಿ ಬಾಣಗಳು ದೈವಯೋಗದಿಂದ ನಿನ್ನ ಮರ್ಮಗಳ ಮೇಲೆ ಬೀಳಲಿಲ್ಲ.
08018054a ವ್ಯಾವರ್ತಯೇ ತತ್ರ ರಥಂ ನದೀವೇಗಮಿವಾರ್ಣವಾತ್।।
08018054c ಅವಧ್ಯಂ ಬ್ರಾಹ್ಮಣಂ ಮನ್ಯೇ ಯೇನ ತೇ ವಿಕ್ರಮೋ ಹತಃ।
ವೇಗವಾಗಿ ಸಾಗರದ ಕಡೆ ಹರಿಯುತ್ತಿರುವ ನದಿಯನ್ನು ಹಿಂದೆ ಸರಿಸುವಂತೆ ನಿನ್ನ ರಥವನ್ನು ನಾನು ಬೇಗ ಹಿಂದಿರುಗಿಸುತ್ತೇನೆ. ನಿನ್ನ ವಿಕ್ರಮವನ್ನು ಕುಂದಿಸಿರುವ ಈ ಬ್ರಾಹ್ಮಣನು ಅವಧ್ಯನೆಂದು ನನಗನ್ನಿಸುತದೆ.”
08018055a ಧೃಷ್ಟದ್ಯುಮ್ನಸ್ತತೋ ರಾಜಂ ಶನಕೈರಬ್ರವೀದ್ವಚಃ।।
08018055c ಮುಹ್ಯತೇ ಮೇ ಮನಸ್ತಾತ ಗಾತ್ರೇ ಸ್ವೇದಶ್ಚ ಜಾಯತೇ।
ರಾಜನ್! ಆಗ ಧೃಷ್ಟದ್ಯುಮ್ನನು ಮೆಲ್ಲನೇ ಈ ಮಾತುಗಳನ್ನಾಡಿದನು: “ಅಯ್ಯಾ! ನನ್ನ ಮನಸ್ಸು ಭ್ರಮೆಗೊಂಡಿದೆ. ಶರೀರವು ಬೆವರುತ್ತಿದೆ.
08018056a ವೇಪಥುಂ ಚ ಶರೀರೇ ಮೇ ರೋಮಹರ್ಷಂ ಚ ಪಶ್ಯ ವೈ।।
08018056c ವರ್ಜಯನ್ಬ್ರಾಹ್ಮಣಂ ಯುದ್ಧೇ ಶನೈರ್ಯಾಹಿ ಯತೋಽಚ್ಯುತಃ।
08018057a ಅರ್ಜುನಂ ಭೀಮಸೇನಂ ವಾ ಸಮರೇ ಪ್ರಾಪ್ಯ ಸಾರಥೇ।।
08018057c ಕ್ಷೇಮಮದ್ಯ ಭವೇದ್ಯಂತರಿತಿ ಮೇ ನೈಷ್ಠಿಕೀ ಮತಿಃ।
ಶರೀರವು ನಡುಗುತ್ತಿದೆ. ರೋಮಹರ್ಷಣವಾಗುತ್ತಿರುವುದನ್ನೂ ನೋಡು. ಸಾರಥೇ! ಅಚ್ಯುತ! ಯುದ್ಧದಲ್ಲಿ ಈ ಬ್ರಾಹ್ಮಣನನ್ನು ಬಿಟ್ಟು ನಿಧಾನವಾಗಿ ನನ್ನನ್ನು ಅರ್ಜುನ ಅಥವಾ ಭೀಮಸೇನನು ಯುದ್ಧಮಾಡುತ್ತಿರುವಲ್ಲಿಗೆ ಕರೆದುಕೊಂಡು ಹೋಗು! ಇದೇ ಇಂದು ನನಗೆ ಕ್ಷೇಮವನ್ನುಂಟುಮಾಡುತ್ತದೆ ಎಂದು ನನ್ನ ದೃಢ ನಂಬಿಕೆಯಾಗಿದೆ.”
08018058a ತತಃ ಪ್ರಾಯಾನ್ಮಹಾರಾಜ ಸಾರಥಿಸ್ತ್ವರಯನ್ ಹಯಾನ್।।
08018058c ಯತೋ ಭೀಮೋ ಮಹೇಷ್ವಾಸೋ ಯುಯುಧೇ ತವ ಸೈನಿಕೈಃ।
ಮಹಾರಾಜ! ಆಗ ಸಾರಥಿಯು ತ್ವರೆಯಾಗಿ ಕುದುರೆಗಳನ್ನು ಮಹೇಷ್ವಾಸ ಭೀಮನು ನಿನ್ನ ಸೈನಿಕರೊಂದಿಗೆ ಯುದ್ಧಮಾಡುತ್ತಿರುವಲ್ಲಿಗೆ ತಲುಪಿಸಿದನು.
08018059a ಪ್ರದ್ರುತಂ ತು ರಥಂ ದೃಷ್ಟ್ವಾ ಧೃಷ್ಟದ್ಯುಮ್ನಸ್ಯ ಮಾರಿಷ।।
08018059c ಕಿರಂ ಶರಶತಾನ್ಯೇವ ಗೌತಮೋಽನುಯಯೌ ತದಾ।
ಮಾರಿಷ! ಹಾಗೆ ಓಡಿ ಹೋಗುತ್ತಿರುವ ಧೃಷ್ಟದ್ಯುಮ್ನನ ರಥವನ್ನು ನೋಡಿ ಗೌತಮನು ನೂರಾರು ಶರಗಳನ್ನು ಎರಚುತ್ತಾ ಅವನನ್ನೇ ಹಿಂಬಾಲಿಸಿ ಹೋದನು.
08018060a ಶಂಖಂ ಚ ಪೂರಯಾಮಾಸ ಮುಹುರ್ಮುಹುರರಿಂದಮಃ।।
08018060c ಪಾರ್ಷತಂ ಪ್ರಾದ್ರವದ್ಯಂತಂ ಮಹೇಂದ್ರ ಇವ ಶಂಬರಂ।
ಮಹೇಂದ್ರನು ಶಂಬರನನ್ನು ಹೇಗೋ ಹಾಗೆ ಪಾರ್ಷತನನ್ನು ಬೆನ್ನಟ್ಟಿ ಹೋಗಿ ಅರಿಂದಮ ಕೃಪನು ಪುನಃ ಪುನಃ ಶಂಖವನ್ನು ಮೊಳಗಿಸಿದನು.
08018061a ಶಿಖಂಡಿನಂ ತು ಸಮರೇ ಭೀಷ್ಮಮೃತ್ಯುಂ ದುರಾಸದಂ।।
08018061c ಹಾರ್ದಿಕ್ಯೋ ವಾರಯಾಮಾಸ ಸ್ಮಯನ್ನಿವ ಮುಹುರ್ಮುಹುಃ।
ಪುನಃ ಪುನಃ ನಗುತ್ತಿರುವನೋ ಎಂದು ತೋರುತ್ತಾ ಹಾರ್ದಿಕ್ಯನು ಸಮರದಲ್ಲಿ ಭೀಷ್ಮನ ಮೃತ್ಯು ದುರಾಸದ ಶಿಖಂಡಿಯನ್ನು ತಡೆದನು.
08018062a ಶಿಖಂಡೀ ಚ ಸಮಾಸಾದ್ಯ ಹೃದಿಕಾನಾಂ ಮಹಾರಥಂ।।
08018062c ಪಂಚಭಿರ್ನಿಶಿತೈರ್ಭಲ್ಲೈರ್ಜತ್ರುದೇಶೇ ಸಮಾರ್ದಯತ್।
ಮಹಾರಥ ಹಾರ್ದಿಕ್ಯನನ್ನು ಎದುರಿಸಿ ಶಿಖಂಡಿಯು ಐದು ನಿಶಿತ ಭಲ್ಲಗಳಿಂದ ಅವನ ಜತ್ರುಪ್ರದೇಶವನ್ನು ಪ್ರಹರಿಸಿದನು.
08018063a ಕೃತವರ್ಮಾ ತು ಸಂಕ್ರುದ್ಧೋ ಭಿತ್ತ್ವಾ ಷಷ್ಟಿಭಿರಾಶುಗೈಃ।।
08018063c ಧನುರೇಕೇನ ಚಿಚ್ಚೇದ ಹಸನ್ರಾಜನ್ಮಹಾರಥಃ।
ರಾಜನ್! ಮಹಾರಥ ಕೃತವರ್ಮನಾದರೋ ಸಂಕ್ರುದ್ಧನಾಗಿ ಅರವತ್ತು ಬಾಣಗಳಿಂದ ಹೊಡೆದು ಒಂದೇ ಬಾಣದಿಂದ ನಗುತ್ತಾ ಅವನ ಧನುಸ್ಸನ್ನು ಕತ್ತರಿಸಿದನು.
08018064a ಅಥಾನ್ಯದ್ಧನುರಾದಾಯ ದ್ರುಪದಸ್ಯಾತ್ಮಜೋ ಬಲೀ।।
08018064c ತಿಷ್ಠ ತಿಷ್ಠೇತಿ ಸಂಕ್ರುದ್ಧೋ ಹಾರ್ದಿಕ್ಯಂ ಪ್ರತ್ಯಭಾಷತ।
ಬಲಶಾಲೀ ದ್ರುಪದಾತ್ಮಜನಾದರೋ ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಸಂಕ್ರುದ್ಧನಾಗಿ ಹಾರ್ದಿಕ್ಯನಿಗೆ ನಿಲ್ಲು ನಿಲ್ಲೆಂದು ಕೂಗಿ ಹೇಳಿದನು.
08018065a ತತೋಽಸ್ಯ ನವತಿಂ ಬಾಣಾನ್ರುಕ್ಮಪುಂಖಾನ್ಸುತೇಜನಾನ್।।
08018065c ಪ್ರೇಷಯಾಮಾಸ ರಾಜೇಂದ್ರ ತೇಽಸ್ಯಾಭ್ರಶ್ಯಂತ ವರ್ಮಣಃ।
ರಾಜೇಂದ್ರ! ಅವನು ರುಕ್ಮಪುಂಖಗಳ ಸುತೇಜಯುಕ್ತ ತೊಂಭತ್ತು ಬಾಣಗಳನ್ನು ಕೃತವರ್ಮನ ಮೇಲೆ ಪ್ರಯೋಗಿಸಿದನು. ಅವು ಅವನ ಕವಚಕ್ಕೆ ತಾಗಿ ಕೆಳಗೆ ಬಿದ್ದವು.
08018066a ವಿತಥಾಂಸ್ತಾನ್ಸಮಾಲಕ್ಷ್ಯ ಪತಿತಾಂಶ್ಚ ಮಹೀತಲೇ।।
08018066c ಕ್ಷುರಪ್ರೇಣ ಸುತೀಕ್ಷ್ಣೇನ ಕಾರ್ಮುಕಂ ಚಿಚ್ಚಿದೇ ಬಲೀ।
ಅವೆಲ್ಲವೂ ವ್ಯರ್ಥವಾಗಿ ಭೂಮಿಯ ಮೇಲೆ ಬಿದ್ದುದನ್ನು ನೋಡಿದ ಬಲಶಾಲಿ ಶಿಖಂಡಿಯು ತೀಕ್ಷ್ಣ ಕ್ಷುರಪ್ರದಿಂದ ಕೃತವರ್ಮನ ಧನುಸ್ಸನ್ನು ತುಂಡರಿಸಿದನು.
08018067a ಅಥೈನಂ ಚಿನ್ನಧನ್ವಾನಂ ಭಗ್ನಶೃಂಗಮಿವರ್ಷಭಂ।।
08018067c ಅಶೀತ್ಯಾ ಮಾರ್ಗಣೈಃ ಕ್ರುದ್ಧೋ ಬಾಹ್ವೋರುರಸಿ ಚಾರ್ದಯತ್।
ಧನುಸ್ಸು ತುಂಡಾಗಿ ಕೋಡುಗಳು ತುಂಡಾಗಿದ್ದ ಹೋರಿಯಂತೆ ಕಾಣುತ್ತಿದ್ದ ಕೃತವರ್ಮನ ತೋಳುಗಳು ಮತ್ತು ಎದೆಗೆ ಕ್ರುದ್ಧನಾದ ಶಿಖಂಡಿಯು ಎಂಭತ್ತು ಮಾರ್ಗಣಗಳಿಂದ ಪ್ರಹರಿಸಿದನು.
08018068a ಕೃತವರ್ಮಾ ತು ಸಂಕ್ರುದ್ಧೋ ಮಾರ್ಗಣೈಃ ಕೃತವಿಕ್ಷತಃ।।
08018068c ಧನುರನ್ಯತ್ಸಮಾದಾಯ ಸಮಾರ್ಗಣಗಣಂ ಪ್ರಭೋ।
08018068e ಶಿಖಂಡಿನಂ ಬಾಣವರೈಃ ಸ್ಕಂದದೇಶೇಽಭ್ಯತಾಡಯತ್।।
ಪ್ರಭೋ! ಮಾರ್ಗಣಗಳಿಂದ ಕ್ಷತವಿಕ್ಷತನಾದ ಕೃತವರ್ಮನಾದರೋ ಕ್ರುದ್ಧನಾಗಿ ಮಾರ್ಗಣಗಣಗಳಿಂದ ಕೂಡಿದ್ದ ಇನ್ನೊಂದು ಧನುಸ್ಸನ್ನು ತೆಗೆದುಕೊಂಡು ಶ್ರೇಷ್ಠ ಬಾಣಗಳಿಂದ ಶಿಖಂಡಿಯ ಹೆಗಲಿಗೆ ಹೊಡೆದನು.
08018069a ಸ್ಕಂದದೇಶೇ ಸ್ಥಿತೈರ್ಬಾಣೈಃ ಶಿಖಂಡೀ ಚ ರರಾಜ ಹ।
08018069c ಶಾಖಾಪ್ರತಾನೈರ್ವಿಮಲೈಃ ಸುಮಹಾನ್ಸ ಯಥಾ ದ್ರುಮಃ।।
ಹೆಗಲಿನ ಮೇಲೆ ಚುಚ್ಚಿಕೊಂಡಿದ್ದ ಬಾಣಗಳಿಂದ ಶಿಖಂಡಿಯು ಕವಲೊಡೆದ ರೆಂಬೆಗಳಿಂದ ಕೂಡಿದ ಮಹಾ ವೃಕ್ಷದಂತೆ ರಾರಾಜಿಸಿದನು.
08018070a ತಾವನ್ಯೋನ್ಯಂ ಭೃಶಂ ವಿದ್ಧ್ವಾ ರುಧಿರೇಣ ಸಮುಕ್ಷಿತೌ।
08018070c ಅನ್ಯೋನ್ಯಶೃಂಗಾಭಿಹತೌ ರೇಜತುರ್ವೃಷಭಾವಿವ।।
ಅನ್ಯೋನ್ಯರನ್ನು ಚೆನ್ನಾಗಿ ಪ್ರಹರಿಸಿ ರಕ್ತವನ್ನು ಸುರಿಸುತ್ತಿದ್ದ ಅವರಿಬ್ಬರೂ ಅನ್ಯೋನ್ಯರನ್ನು ಕೋಡುಗಳಿಂದ ತಿವಿದು ಹೋರಾಡುತ್ತಿರುವ ಹೋರಿಗಳಂತೆ ರಾರಾಜಿಸಿದರು.
08018071a ಅನ್ಯೋನ್ಯಸ್ಯ ವಧೇ ಯತ್ನಂ ಕುರ್ವಾಣೌ ತೌ ಮಹಾರಥೌ।
08018071c ರಥಾಭ್ಯಾಂ ಚೇರತುಸ್ತತ್ರ ಮಂಡಲಾನಿ ಸಹಸ್ರಶಃ।।
ಅನ್ಯೋನ್ಯರ ವಧೆಗೆ ಪ್ರಯತ್ನಿಸುತ್ತಾ ಆ ಇಬ್ಬರು ಮಹಾರಥರೂ ರಥಗಳಲ್ಲಿ ಸಹಸ್ರಾರು ಮಂಡಲಗಳಲ್ಲಿ ಸಂಚರಿಸುತ್ತಿದ್ದರು.
08018072a ಕೃತವರ್ಮಾ ಮಹಾರಾಜ ಪಾರ್ಷತಂ ನಿಶಿತೈಃ ಶರೈಃ।
08018072c ರಣೇ ವಿವ್ಯಾಧ ಸಪ್ತತ್ಯಾ ಸ್ವರ್ಣಪುಂಖೈಃ ಶಿಲಾಶಿತೈಃ।।
ಮಹಾರಾಜ! ಕೃತವರ್ಮನು ರಣದಲ್ಲಿ ಪಾರ್ಷತನನ್ನು ಎಪ್ಪತ್ತು ಸ್ವರ್ಣಪುಂಖಗಳ ಶಿಲಾಶಿತ ನಿಶಿತ ಶರಗಳಿಂದ ಹೊಡೆದನು.
08018073a ತತೋಽಸ್ಯ ಸಮರೇ ಬಾಣಂ ಭೋಜಃ ಪ್ರಹರತಾಂ ವರಃ।
08018073c ಜೀವಿತಾಂತಕರಂ ಘೋರಂ ವ್ಯಸೃಜತ್ತ್ವರಯಾನ್ವಿತಃ।।
ಆಗ ಸಮರದಲ್ಲಿ ಪ್ರಹರಿಗಳಲ್ಲಿ ಶ್ರೇಷ್ಠ ಭೋಜನು ತ್ವರೆಮಾಡಿ ಜೀವಿತಾಂತಕರವಾದ ಘೋರ ಬಾಣವನ್ನು ಶಿಖಂಡಿಯ ಮೇಲೆ ಪ್ರಯೋಗಿಸಿದನು.
08018074a ಸ ತೇನಾಭಿಹತೋ ರಾಜನ್ಮೂರ್ಚಾಮಾಶು ಸಮಾವಿಶತ್।
08018074c ಧ್ವಜಯಷ್ಟಿಂ ಚ ಸಹಸಾ ಶಿಶ್ರಿಯೇ ಕಶ್ಮಲಾವೃತಃ।।
ರಾಜನ್! ಅದರಿಂದ ಪ್ರಹರಿಸಲ್ಪಟ್ಟ ಶಿಖಂಡಿಯು ಮೂರ್ಛಿತನಾದನು. ಮೂರ್ಛಿತನಾಗಿ ಅವನು ಧ್ವಜದಂಡದ ಆಶ್ರಯವನ್ನು ಪಡೆದು ಒರಗಿ ಕುಳಿತುಕೊಂಡನು.
08018075a ಅಪೋವಾಹ ರಣಾತ್ತಂ ತು ಸಾರಥೀ ರಥಿನಾಂ ವರಂ।
08018075c ಹಾರ್ದಿಕ್ಯಶರಸಂತಪ್ತಂ ನಿಃಶ್ವಸಂತಂ ಪುನಃ ಪುನಃ।।
ಹಾರ್ದಿಕ್ಯನ ಶರದಿಂದ ಸಂತಪ್ತನಾಗಿ ಪುನಃ ಪುನಃ ನಿಟ್ಟುಸಿರು ಬಿಡುತ್ತಿದ್ದ ಆ ರಥಿಗಳಲ್ಲಿ ಶ್ರೇಷ್ಠ ಶಿಖಂಡಿಯನ್ನು ಅವನ ಸಾರಥಿಯು ರಣದಿಂದ ದೂರ ಕೊಂಡೊಯ್ದನು.
08018076a ಪರಾಜಿತೇ ತತಃ ಶೂರೇ ದ್ರುಪದಸ್ಯ ಸುತೇ ಪ್ರಭೋ।
08018076c ಪ್ರಾದ್ರವತ್ಪಾಂಡವೀ ಸೇನಾ ವಧ್ಯಮಾನಾ ಸಮಂತತಃ।।
ಪ್ರಭೋ! ದ್ರುಪದನ ಶೂರ ಸುತನು ಹೀಗೆ ಪರಾಜಿತನಾಗಲು ವಧಿಸಲ್ಪಡುತ್ತಿರುವ ಪಾಂಡವೀ ಸೇನೆಯು ಎಲ್ಲ ಕಡೆ ಪಲಾಯನಗೈಯಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಅಷ್ಠಾದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಹದಿನೆಂಟನೇ ಅಧ್ಯಾಯವು.