017 ಕರ್ಣಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ಕರ್ಣವಧ ಪರ್ವ

ಅಧ್ಯಾಯ 17

ಸಾರ

ಪಾಂಡವರು ತಮ್ಮ ಸೇನೆಯ ಮೇಲೆ ಆಕ್ರಮಣಮಾಡಿದ ಕೌರವರ ಗಜಸೇನೆಯನ್ನು ನಾಶಪಡಿಸಿದುದು (1-29). ದುಃಶಾಸನ-ಸಹದೇವರ ಯುದ್ಧ; ಸಹದೇವನು ದುಃಶಾಸನನನ್ನು ಮೂರ್ಛೆಗೊಳಿಸಿದುದು (30-47). ಕರ್ಣ-ನಕುಲರ ಯುದ್ಧ (48-88). ನಿರಾಯುಧನಾಗಿ ಪಲಾಯನ ಮಾಡುತ್ತಿದ್ದ ನಕುಲನನ್ನು ಕರ್ಣನು ತನ್ನ ಧನುಸ್ಸಿನಿಂದ ಎಳೆದು ನಿಲ್ಲಿಸಿ, ಅಪಮಾನಿಸಿ ಕಳುಹಿಸುವುದು (89-97). ಕರ್ಣನು ಪಾಂಚಾಲಸೇನೆಯನ್ನು ಧ್ವಂಸಗೊಳಿಸಿದುದು (98-120).

08017001 ಸಂಜಯ ಉವಾಚ।
08017001a ಹಸ್ತಿಭಿಸ್ತು ಮಹಾಮಾತ್ರಾಸ್ತವ ಪುತ್ರೇಣ ಚೋದಿತಾಃ।
08017001c ಧೃಷ್ಟದ್ಯುಮ್ನಂ ಜಿಘಾಂಸಂತಃ ಕ್ರುದ್ಧಾಃ ಪಾರ್ಷತಮಭ್ಯಯುಃ।।

ಸಂಜಯನು ಹೇಳಿದನು: “ನಿನ್ನ ಮಗನಿಂದ ಚೋದಿತ ಮಾವುತರು ತಮ್ಮ ಆನೆಗಳೊಂದಿಗೆ ಧೃಷ್ಟದ್ಯುಮ್ನನನ್ನು ಸಂಹರಿಸುವ ಇಚ್ಛೆಯಿಂದ ಪರಮಕ್ರುದ್ಧರಾಗಿ ಪಾರ್ಷತನನ್ನು ಆಕ್ರಮಣಿಸಿದರು.

08017002a ಪ್ರಾಚ್ಯಾಶ್ಚ ದಾಕ್ಷಿಣಾತ್ಯಾಶ್ಚ ಪ್ರವೀರಾ ಗಜಯೋಧಿನಃ।
08017002c ಅಂಗಾ ವಂಗಾಶ್ಚ ಪುಂಡ್ರಾಶ್ಚ ಮಾಗಧಾಸ್ತಾಮ್ರಲಿಪ್ತಕಾಃ।।
08017003a ಮೇಕಲಾಃ ಕೋಶಲಾ ಮದ್ರಾ ದಶಾರ್ಣಾ ನಿಷಧಾಸ್ತಥಾ।
08017003c ಗಜಯುದ್ಧೇಷು ಕುಶಲಾಃ ಕಲಿಂಗೈಃ ಸಹ ಭಾರತ।।
08017004a ಶರತೋಮರನಾರಾಚೈರ್ವೃಷ್ಟಿಮಂತ ಇವಾಂಬುದಾಃ।
08017004c ಸಿಷಿಚುಸ್ತೇ ತತಃ ಸರ್ವೇ ಪಾಂಚಾಲಾಚಲಮಾಹವೇ।।

ಭಾರತ! ಪೂರ್ವ ಮತ್ತು ದಕ್ಷಿಣ ದೇಶಗಳ ಶ್ರೇಷ್ಠ ಗಜಯೋಧರು, ಅಂಗ-ವಂಗ-ಪುಂಡ್ರ-ಮಾಗಧ-ತಾಮ್ರಲಿಪ್ತ-ಮೇಖಲ-ಕೋಶಲ-ಮದ್ರ-ದಶಾರ್ಣ-ನಿಷಧರು ಗಜಯುದ್ಧದಲ್ಲಿ ಕುಶಲರಾದ ಕಲಿಂಗರೊಂದಿಗೆ ಎಲ್ಲರೂ ಯುದ್ಧದಲ್ಲಿ ಶರ-ತೋಮರ-ನಾರಾಚಗಳಿಂದ ಮಳೆಸುರಿಸುವ ಮೋಡಗಳಂತೆ ಪಾಂಚಾಲಾಚಲವನ್ನು ತೋಯಿಸಿದರು.

08017005a ತಾನ್ಸಮ್ಮಿಮರ್ದಿಷುರ್ನಾಗಾನ್ ಪಾರ್ಷ್ಣ್ಯಂಗುಷ್ಠಾಂಕುಶೈರ್ಭೃಶಂ।
08017005c ಪೋಥಿತಾನ್ಪಾರ್ಷತೋ ಬಾಣೈರ್ನಾರಾಚೈಶ್ಚಾಭ್ಯವೀವೃಷತ್।।

ಶತ್ರುಗಳನ್ನು ಮರ್ದಿಸಲು ಮಾವುತರ ಹಿಮ್ಮಡಿ-ಹೆಬ್ಬರಳು ಮತ್ತು ಅಂಕುಶಗಳ ತಿವಿತದಿಂದ ಪ್ರಚೋದಿಸಲ್ಪಟ್ಟ ಆ ಆನೆಗಳನ್ನು ಪಾರ್ಷತನು ನಾರಾಚ ಬಾಣಗಳಿಂದ ಮುಚ್ಚಿಬಿಟ್ಟನು.

08017006a ಏಕೈಕಂ ದಶಭಿಃ ಷಡ್ಭಿರಷ್ಟಾಭಿರಪಿ ಭಾರತ।
08017006c ದ್ವಿರದಾನಭಿವಿವ್ಯಾಧ ಕ್ಷಿಪ್ತೈರ್ಗಿರಿನಿಭಾಂ ಶರೈಃ।
08017006e ಪ್ರಚ್ಚಾದ್ಯಮಾನೋ ದ್ವಿರದೈರ್ಮೇಘೈರಿವ ದಿವಾಕರಃ।।

ಗಿರಿಗಳಂತಿದ್ದ ಆ ಆನೆಗಳಲ್ಲಿ ಪ್ರತಿಯೊಂದನ್ನೂ ಹತ್ತು-ಆರು ಮತ್ತು ಎಂಟು ಬಾಣಗಳಿಂದ ಗಾಯಗೊಳಿಸಿ ಧೃಷ್ಟದ್ಯುಮ್ನನು ಮೇಘಗಳು ಸೂರ್ಯನನ್ನು ಮುಚ್ಚುವಂತೆ ಮುಚ್ಚಿಬಿಟ್ಟನು.

08017007a ಪರ್ಯಾಸುಃ ಪಾಂಡುಪಾಂಚಾಲಾ ನದಂತೋ ನಿಶಿತಾಯುಧಾಃ।
08017007c ತಾನ್ನಾಗಾನಭಿವರ್ಷಂತೋ ಜ್ಯಾತಂತ್ರೀಶರನಾದಿತೈಃ।।
08017008a ನಕುಲಃ ಸಹದೇವಶ್ಚ ದ್ರೌಪದೇಯಾಃ ಪ್ರಭದ್ರಕಾಃ।
08017008c ಸಾತ್ಯಕಿಶ್ಚ ಶಿಖಂಡೀ ಚ ಚೇಕಿತಾನಶ್ಚ ವೀರ್ಯವಾನ್।।

ಅವನನ್ನು ನೋಡಿದ ಪಾಂಡು-ಪಾಂಚಾಲರು – ನಕುಲ, ಸಹದೇವ, ದ್ರೌಪದೇಯರು, ಪ್ರಭದ್ರಕರು, ಸಾತ್ಯಕಿ, ಶಿಖಂಡಿ ಮತ್ತು ವೀರ್ಯವಾನ್ ಚೇಕಿತಾನರು – ಶಿಂಜಿನಿ ಮತ್ತು ಬಾಣಗಳ ಶಬ್ಧಗಳೊಂದಿಗೆ ಸಿಂಹನಾದಗೈಯುತ್ತಾ ಆ ಆನೆಗಳ ಮೇಲೆ ನಿಶಿತಾಯುಧಗಳ ಮಳೆಗಳನ್ನೇ ಸುರಿಸಿದರು.

08017009a ತೇ ಮ್ಲೇಚ್ಚೈಃ ಪ್ರೇಷಿತಾ ನಾಗಾ ನರಾನಶ್ವಾನ್ರಥಾನಪಿ।
08017009c ಹಸ್ತೈರಾಕ್ಷಿಪ್ಯ ಮಮೃದುಃ ಪದ್ಭಿಶ್ಚಾಪ್ಯತಿಮನ್ಯವಃ।।

ಮ್ಲೇಚ್ಛರಿಂದ ಕಳುಹಿಸಲ್ಪಟ್ಟ ಆ ಕುಪಿತ ಆನೆಗಳು ಮನುಷ್ಯರನ್ನು, ಕುದುರೆಗಳನ್ನು ಮತ್ತು ರಥಗಳನ್ನೂ ಕೂಡ ಸೊಂಡಿಲುಗಳಿಂದ ಮೇಲೆತ್ತಿ ಕಾಲಿನಿಂದ ತುಳಿಯುತ್ತಿದ್ದವು.

08017010a ಬಿಭಿದುಶ್ಚ ವಿಷಾಣಾಗ್ರೈಃ ಸಮಾಕ್ಷಿಪ್ಯ ಚ ಚಿಕ್ಷಿಪುಃ।
08017010c ವಿಷಾಣಲಗ್ನೈಶ್ಚಾಪ್ಯನ್ಯೇ ಪರಿಪೇತುರ್ವಿಭೀಷಣಾಃ।।

ದಂತಗಳ ಅಗ್ರಭಾಗದಿಂದ ಇರಿಯುತ್ತಿದ್ದವು. ಸೊಂಡಲಿಗೆ ಸುತ್ತಿಹಾಕಿ ಎಸೆಯುತ್ತಿದ್ದವು. ಅನ್ಯರು ದಂತಗಳ ಅಗ್ರಭಾಗಕ್ಕೆ ಸಿಕ್ಕಿಹಾಕಿಕೊಂಡು ಭಯಂಕರವಾಗಿ ಕೆಳಗೆ ಬೀಳುತ್ತಿದ್ದರು.

08017011a ಪ್ರಮುಖೇ ವರ್ತಮಾನಂ ತು ದ್ವಿಪಂ ವಂಗಸ್ಯ ಸಾತ್ಯಕಿಃ।
08017011c ನಾರಾಚೇನೋಗ್ರವೇಗೇನ ಭಿತ್ತ್ವಾ ಮರ್ಮಣ್ಯಪಾತಯತ್।।

ಆಗ ಸಾತ್ಯಕಿಯು ಎದುರಿದ್ದ ವಂಗದೇಶದ ಆನೆಯ ಮರ್ಮಸ್ಥಾನಗಳನ್ನು ಉಗ್ರವೇಗದ ನಾರಾಚಗಳಿಂದ ಸೀಳಿ ಕೆಳಕ್ಕುರುಳಿಸಿದನು.

08017012a ತಸ್ಯಾವರ್ಜಿತನಾಗಸ್ಯ ದ್ವಿರದಾದುತ್ಪತಿಷ್ಯತಃ।
08017012c ನಾರಾಚೇನಾಭಿನದ್ವಕ್ಷಃ ಸೋಽಪತದ್ಭುವಿ ಸಾತ್ಯಕೇಃ।।

ಆ ಆನೆಯನ್ನು ಬಿಟ್ಟು ಕೆಳಗೆ ಹಾರುತ್ತಿದ್ದ ವಂಗರಾಜನನ್ನು ಸಾತ್ಯಕಿಯು ನಾರಾಚದಿಂದ ಪ್ರಹರಿಸಿ ನೆಲಕ್ಕೆ ಕೆಡವಿದನು.

08017013a ಪುಂಡ್ರಸ್ಯಾಪತತೋ ನಾಗಂ ಚಲಂತಮಿವ ಪರ್ವತಂ।
08017013c ಸಹದೇವಃ ಪ್ರಯತ್ನಾತ್ತೈರ್ನಾರಾಚೈರ್ವ್ಯಹನತ್ತ್ರಿಭಿಃ।।

ಚಲಿಸುವ ಪರ್ವತದಂತೆ ತನ್ನ ಮೇಲೆ ಬೀಳುತ್ತಿದ್ದ ಪುಂಡ್ರನ ಆನೆಯನ್ನು ಸಹದೇವನು ಪ್ರಯತ್ನಪಟ್ಟು ಮೂರು ನಾರಾಚಗಳಿಂದ ಗಾಯಗೊಳಿಸಿದನು.

08017014a ವಿಪತಾಕಂ ವಿಯಂತಾರಂ ವಿವರ್ಮಧ್ವಜಜೀವಿತಂ।
08017014c ತಂ ಕೃತ್ವಾ ದ್ವಿರದಂ ಭೂಯಃ ಸಹದೇವೋಽಂಗಮಭ್ಯಗಾತ್।।

ಪುನಃ ಸಹದೇವನು ಆ ಆನೆಯನ್ನು ಪತಾಕೆ, ಮಾವುತ, ಕವಚ, ಧ್ವಜ ಮತ್ತು ಪ್ರಾಣಗಳಿಂದ ವಿಹೀನವನ್ನಾಗಿಸಿ ಅಂಗನ ಕಡೆ ಧಾವಿಸಿದನು.

08017015a ಸಹದೇವಂ ತು ನಕುಲೋ ವಾರಯಿತ್ವಾಂಗಮಾರ್ದಯತ್।
08017015c ನಾರಾಚೈರ್ಯಮದಂಡಾಭೈಸ್ತ್ರಿಭಿರ್ನಾಗಂ ಶತೇನ ಚ।।

ನಕುಲನಾದರೋ ಸಹದೇವನನ್ನು ತಡೆದು ತಾನೇ ಮೂರು ಯಮದಂಡ ಸದೃಶ ನಾರಾಚಗಳಿಂದ ಅಂಗನನ್ನು ಪ್ರಹರಿಸಿ, ಅವನ ಆನೆಯನ್ನು ನೂರು ಬಾಣಗಳಿಂದ ಹೊಡೆದನು.

08017016a ದಿವಾಕರಕರಪ್ರಖ್ಯಾನಂಗಶ್ಚಿಕ್ಷೇಪ ತೋಮರಾನ್।
08017016c ನಕುಲಾಯ ಶತಾನ್ಯಷ್ಟೌ ತ್ರಿಧೈಕೈಕಂ ತು ಸೋಽಚ್ಚಿನತ್।।

ಆಗ ಅಂಗನು ಸೂರ್ಯನ ಕಿರಣಗಳಿಗೆ ಸಮತೇಜಸ್ಸುಳ್ಳ ಎಂಟುನೂರು ತೋಮರಗಳನ್ನು ನಕುಲನ ಮೇಲೆ ಪ್ರಯೋಗಿಸಲು, ನಕುಲನು ಅವುಗಳ ಒಂದೊಂದನ್ನೇ ಮೂರು ಮೂರು ಭಾಗಗಳಾಗಿ ತುಂಡರಿಸಿದನು.

08017017a ತಥಾರ್ಧಚಂದ್ರೇಣ ಶಿರಸ್ತಸ್ಯ ಚಿಚ್ಚೇದ ಪಾಂಡವಃ।
08017017c ಸ ಪಪಾತ ಹತೋ ಮ್ಲೇಚ್ಚಸ್ತೇನೈವ ಸಹ ದಂತಿನಾ।।

ಕೂಡಲೇ ಪಾಂಡವ ನಕುಲನು ಅವನ ಶಿರವನ್ನು ಅರ್ಧಚಂದ್ರದಿಂದ ಕತ್ತರಿಸಲು ಆನೆಯೊಂದಿಗೆ ಆ ಮ್ಲೇಚ್ಛ‌ಅಂಗನು ಹತನಾಗಿ ಕೆಳಕ್ಕುರಿಳಿದನು.

08017018a ಆಚಾರ್ಯಪುತ್ರೇ ನಿಹತೇ ಹಸ್ತಿಶಿಕ್ಷಾವಿಶಾರದೇ।
08017018c ಅಂಗಾಃ ಕ್ರುದ್ಧಾ ಮಹಾಮಾತ್ರಾ ನಾಗೈರ್ನಕುಲಮಭ್ಯಯುಃ।।

ಹಸ್ತಿಶಿಕ್ಷಾವಿಶಾರದ ಆಚಾರ್ಯಪುತ್ರ ಅಂಗನು ಹತನಾಗಲು ಅಂಗದೇಶದ ಸೈನಿಕರು ಕ್ರುದ್ಧರಾಗಿ ಮಹಾಮಾತ್ರದ ಆನೆಗಳ ಸಂಕುಲಗಳೊಂದಿಗೆ ನಕುಲನನ್ನು ಆಕ್ರಮಣಿಸಿದರು.

08017019a ಚಲತ್ಪತಾಕೈಃ ಪ್ರಮುಖೈರ್ಹೇಮಕಕ್ಷ್ಯಾತನುಚ್ಚದೈಃ।
08017019c ಮಿಮರ್ದಿಶಂತಸ್ತ್ವರಿತಾಃ ಪ್ರದೀಪ್ತೈರಿವ ಪರ್ವತೈಃ।।

ಚಲಿಸುತ್ತಿರುವ ಪತಾಕೆಗಳಿಂದ ಮತ್ತು ಬಂಗಾರದ ಹಗ್ಗ ಮತ್ತು ಕವಚಗಳಿಂದ ಕೂಡಿ ಶತ್ರುಗಳನ್ನು ಧ್ವಂಸಮಾಡಲು ತ್ವರೆಮಾಡಿಬರುತ್ತಿದ್ದ ಆ ಪ್ರಮುಖ ಆನೆಗಳು ಉರಿಯುತ್ತಿರುವ ಪರ್ವತಗಳಂತೆ ತೋರುತ್ತಿದ್ದವು.

08017020a ಮೇಕಲೋತ್ಕಲಕಾಲಿಂಗಾ ನಿಷಾದಾಸ್ತಾಂರಲಿಪ್ತಕಾಃ।
08017020c ಶರತೋಮರವರ್ಷಾಣಿ ವಿಮುಂಚಂತೋ ಜಿಘಾಂಸವಃ।।

ನಕುಲನನ್ನು ಕೊಲ್ಲಲೋಸುಗ ಆ ಆನೆಗಳೊಂದಿಗೆ ಮೇಕಲೋತ್ಕಲ-ಕಲಿಂದ-ನಿಷಧ-ತಾಮ್ರಲಿಪ್ತ ಯೋಧರು ಶರ-ತೋಮರಗಳ ಮಳೆಯನ್ನೇ ಸುರಿಸುತ್ತಾ ಆಕ್ರಮಣಿಸಿದರು.

08017021a ತೈಶ್ಚಾದ್ಯಮಾನಂ ನಕುಲಂ ದಿವಾಕರಮಿವಾಂಬುದೈಃ।
08017021c ಪರಿ ಪೇತುಃ ಸುಸಂರಬ್ಧಾಃ ಪಾಂಡುಪಾಂಚಾಲಸೋಮಕಾಃ।।

ಮೋಡಗಳಿಂದ ದಿವಾಕರನು ಹೇಗೋ ಹಾಗೆ ಅವುಗಳಿಂದ ಅಚ್ಛಾದಿತನಾಗಿದ್ದ ನಕುಲನನ್ನು ನೋಡಿ ಪಾಂಡವ-ಪಾಂಚಾಲ-ಸೋಮಕ ಯೋಧರು ಕುಪಿತರಾಗಿ ಎದುರಾಳಿಗಳ ಮೇಲೆ ಎರಗಿದರು.

08017022a ತತಸ್ತದಭವದ್ಯುದ್ಧಂ ರಥಿನಾಂ ಹಸ್ತಿಭಿಃ ಸಹ।
08017022c ಸೃಜತಾಂ ಶರವರ್ಷಾಣಿ ತೋಮರಾಂಶ್ಚ ಸಹಸ್ರಶಃ।।

ಆಗ ಅಲ್ಲಿ ಸಹಸ್ರಾರು ಶರ-ತೋಮರಗಳ ಮಳೆಸುರಿಸುವ ರಥಿಗಳ ಮತ್ತು ಗಜಾರೂಢರ ನಡುವೆ ಯುದ್ಧವು ನಡೆಯಿತು.

08017023a ನಾಗಾನಾಂ ಪ್ರಸ್ಫುಟುಃ ಕುಂಭಾ ಮರ್ಮಾಣಿ ವಿವಿಧಾನಿ ಚ।
08017023c ದಂತಾಶ್ಚೈವಾತಿವಿದ್ಧಾನಾಂ ನಾರಾಚೈರ್ಭೂಷಣಾನಿ ಚ।।

ನಾರಾಚಗಳಿಂದ ಆನೆಗಳ ಕುಂಭಗಳು, ವಿವಿಧ ಕವಚಗಳು ಒಡೆದುಹೋದವು. ದಂತಗಳೂ ಆಭರಣಗಳೂ ತುಂಡಾದವು.

08017024a ತೇಷಾಮಷ್ಟೌ ಮಹಾನಾಗಾಂಶ್ಚತುಃಷಷ್ಟ್ಯಾ ಸುತೇಜನೈಃ।
08017024c ಸಹದೇವೋ ಜಘಾನಾಶು ತೇ ಪೇತುಃ ಸಹ ಸಾದಿಭಿಃ।।

ಅವುಗಳಲ್ಲಿ ಎಂಟು ಮಹಾಗಜಗಳನ್ನು ಅರವತ್ತೆಂಟು ಸುತೇಜಸ ಬಾಣಗಳಿಂದ ಸಹದೇವನು ಸಂಹರಿಸಲು ಅವು ಮಾವುತರೊಡನೆ ಕೆಳಕ್ಕುರುಳಿದವು.

08017025a ಅಂಜೋಗತಿಭಿರಾಯಮ್ಯ ಪ್ರಯತ್ನಾದ್ಧನುರುತ್ತಮಂ।
08017025c ನಾರಾಚೈರಹನನ್ನಾಗಾನ್ನಕುಲಃ ಕುರನಂದನ।।

ಕುರುನಂದನ ನಕುಲನೂ ಕೂಡ ತನ್ನ ಉತ್ತಮ ಧನುಸ್ಸನ್ನು ಬಗ್ಗಿಸಿ ವೇಗವಾಗಿ ಚಲಿಸುವ ನಾರಾಚಗಳಿಂದ ಅನೇಕ ಆನೆಗಳನ್ನು ಸಂಹರಿಸಿದನು.

08017026a ತತಃ ಶೈನೇಯಪಾಂಚಾಲ್ಯೌ ದ್ರೌಪದೇಯಾಃ ಪ್ರಭದ್ರಕಾಃ।
08017026c ಶಿಖಂಡೀ ಚ ಮಹಾನಾಗಾನ್ಸಿಷಿಚುಃ ಶರವೃಷ್ಟಿಭಿಃ।।

ಅನಂತರ ಧೃಷ್ಟದ್ಯುಮ್ನ-ಸಾತ್ಯಕಿಯರು, ದ್ರೌಪದೇಯರು, ಪ್ರಭದ್ರಕರು ಮತ್ತು ಶಿಖಂಡಿಯು ಮಹಾಗಜಗಳನ್ನು ಶರವೃಷ್ಟಿಗಳಿಂದ ಅಭಿಷೇಕಿಸಿದರು.

08017027a ತೇ ಪಾಂಡುಯೋಧಾಂಬುಧರೈಃ ಶತ್ರುದ್ವಿರದಪರ್ವತಾಃ।
08017027c ಬಾಣವರ್ಷೈರ್ಹತಾಃ ಪೇತುರ್ವಜ್ರವರ್ಷೈರಿವಾಚಲಾಃ।।

ಶತ್ರುಗಳ ಆ ಆನೆಗಳೆಂಬ ಪರ್ವತಗಳು ಪಾಂಡುಯೋಧರೆಂಬ ಮೇಘಗಳಿಂದ ಸುತ್ತುವರೆಯಲ್ಪಟ್ಟು, ಬಾಣಗಳ ಮಳೆಗಳಿಂದ ಹತಗೊಂಡು ವಜ್ರವೃಷ್ಟಿಗೆ ಗುರಿಯಾದ ಗಿರಿಗಳಂತೆ ಕೆಳಕ್ಕುರುಳಿದವು.

08017028a ಏವಂ ಹತ್ವಾ ತವ ಗಜಾಂಸ್ತೇ ಪಾಂಡುನರಕುಂಜರಾಃ।
08017028c ದ್ರುತಂ ಸೇನಾಮವೈಕ್ಷಂತ ಭಿನ್ನಕೂಲಾಮಿವಾಪಗಾಂ।।

ಹೀಗೆ ನಿನ್ನ ಆನೆಗಳನ್ನು ಸಂಹರಿಸಿದ ಆ ಪಾಂಡುನರಕುಂಜರರು ದಡವೊಡೆದ ನದಿಯಂತೆ ಹರಿದು ಓಡಿ ಹೋಗುತ್ತಿದ್ದ ನಿನ್ನ ಸೇನೆಗಳನ್ನು ನೋಡಿದರು.

08017029a ತೇ ತಾಂ ಸೇನಾಮವಾಲೋಕ್ಯ ಪಾಂಡುಪುತ್ರಸ್ಯ ಸೈನಿಕಾಃ।
08017029c ವಿಕ್ಷೋಭಯಿತ್ವಾ ಚ ಪುನಃ ಕರ್ಣಮೇವಾಭಿದುದ್ರುವುಃ।।

ಪಾಂಡುಪುತ್ರನ ಸೈನಿಕರು ನಿನ್ನ ಆ ಸೇನೆಯನ್ನು ನೋಡಿ ಸಂಪೂರ್ಣವಾಗಿ ಅದನ್ನು ಅಲ್ಲೋಲಕಲ್ಲೋಲಗೊಳಿಸಿ ಪುನಃ ಕರ್ಣನನ್ನೇ ಆಕ್ರಮಿಸಿದರು.

08017030a ಸಹದೇವಂ ತತಃ ಕ್ರುದ್ಧಂ ದಹಂತಂ ತವ ವಾಹಿನೀಂ।
08017030c ದುಃಶಾಸನೋ ಮಹಾರಾಜ ಭ್ರಾತಾ ಭ್ರಾತರಮಭ್ಯಯಾತ್।।

ಮಹಾರಾಜ! ಕ್ರುದ್ಧನಾಗಿ ನಿನ್ನ ವಾಹಿನಿಯನ್ನು ಸುಡುತ್ತಿದ್ದ ಭ್ರಾತಾ ಸಹದೇವನನ್ನು ಭ್ರಾತಾ ದುಃಶಾಸನನು ಎದುರಿಸಿದನು.

08017031a ತೌ ಸಮೇತೌ ಮಹಾಯುದ್ಧೇ ದೃಷ್ಟ್ವಾ ತತ್ರ ನರಾಧಿಪಾಃ।
08017031c ಸಿಂಹನಾದರವಾಂಶ್ಚಕ್ರುರ್ವಾಸಾಂಸ್ಯಾದುಧುವುಶ್ಚ ಹ।।

ಮಹಾಯುದ್ಧದಲ್ಲಿ ಅವರಿಬ್ಬರೂ ತೊಡಗಿರುವುದನ್ನು ನೋಡಿ ಅಲ್ಲಿದ್ದ ನರಾಧಿಪರು ತಮ್ಮ ಅಂಗವಸ್ತ್ರಗಳನ್ನು ಮೇಲಕ್ಕೆ ಹಾರಿಸಿ ಸಿಂಹನಾದಗೈದರು.

08017032a ತತೋ ಭಾರತ ಕ್ರುದ್ಧೇನ ತವ ಪುತ್ರೇಣ ಧನ್ವಿನಾ।
08017032c ಪಾಂಡುಪುತ್ರಸ್ತ್ರಿಭಿರ್ಬಾಣೈರ್ವಕ್ಷಸ್ಯಭಿಹತೋ ಬಲೀ।।

ಭಾರತ! ಆಗ ನಿನ್ನ ಪುತ್ರ ಬಲಶಾಲಿ ಧನ್ವಿಯು ಕ್ರುದ್ಧನಾಗಿ ಪಾಂಡುಪುತ್ರನ ವಕ್ಷಸ್ಥಳವನ್ನು ಮೂರು ಬಾಣಗಳಿಂದ ಹೊಡೆದನು.

08017033a ಸಹದೇವಸ್ತತೋ ರಾಜನ್ನಾರಾಚೇನ ತವಾತ್ಮಜಂ।
08017033c ವಿದ್ಧ್ವಾ ವಿವ್ಯಾಧ ಸಪ್ತತ್ಯಾ ಸಾರಥಿಂ ಚ ತ್ರಿಭಿಸ್ತ್ರಿಭಿಃ।।

ರಾಜನ್! ಸಹದೇವನು ಆಗ ನಾರಾಚದಿಂದ ನಿನ್ನ ಮಗನನ್ನು ಹೊಡೆದು ಪುನಃ ಎಪ್ಪತ್ತರಿಂದ ನಿನ್ನ ಮಗನನ್ನೂ ಮತ್ತು ಮೂರರಿಂದ ಅವನ ಸಾರಥಿಯನ್ನೂ ಹೊಡೆದನು.

08017034a ದುಃಶಾಸನಸ್ತದಾ ರಾಜಂಶ್ಚಿತ್ತ್ವಾ ಚಾಪಂ ಮಹಾಹವೇ।
08017034c ಸಹದೇವಂ ತ್ರಿಸಪ್ತತ್ಯಾ ಬಾಹ್ವೋರುರಸಿ ಚಾರ್ದಯತ್।।

ರಾಜನ್! ಆಗ ದುಃಶಾಸನನು ಮಹಾಯುದ್ಧದಲ್ಲಿ ಸಹದೇವನ ಚಾಪವನ್ನು ಕತ್ತರಿಸಿ ಅವನ ಬಾಹು-ಎದೆಗಳಿಗೆ ಎಪ್ಪತ್ಮೂರು ಬಾಣಗಳಿಂದ ಹೊಡೆದನು.

08017035a ಸಹದೇವಸ್ತತಃ ಕ್ರುದ್ಧಃ ಖಡ್ಗಂ ಗೃಹ್ಯ ಮಹಾಹವೇ।
08017035c ವ್ಯಾವಿಧ್ಯತ ಯುಧಾಂ ಶ್ರೇಷ್ಠಃ ಶ್ರೀಮಾಂಸ್ತವ ಸುತಂ ಪ್ರತಿ।।

ಆಗ ಯೋಧಶ್ರೇಷ್ಠ ಶ್ರೀಮಾನ್ ಸಹದೇವನು ಕ್ರುದ್ಧನಾಗಿ ಮಹಾಯುದ್ದದಲ್ಲಿ ಖಡ್ಗವನ್ನು ಹಿಡಿದು ತಿರುಗಿಸಿ ನಿನ್ನ ಮಗನ ಕಡೆ ಎಸೆದನು.

08017036a ಸಮಾರ್ಗಣಗಣಂ ಚಾಪಂ ಚಿತ್ತ್ವಾ ತಸ್ಯ ಮಹಾನಸಿಃ।
08017036c ನಿಪಪಾತ ತತೋ ಭೂಮೌ ಚ್ಯುತಃ ಸರ್ಪ ಇವಾಂಬರಾತ್।।

ಆ ಮಹಾಖಡ್ಗವು ಅವನ ಧನುರ್ಬಾಣ-ಶಿಂಜಿನಿಗಳನ್ನು ಕತ್ತರಿಸಿ ಅಂಬರದಿಂದ ಚ್ಯುತಗೊಂಡು ಬೀಳುವ ಸರ್ಪದಂತೆ ಭೂಮಿಯ ಮೇಲೆ ಬಿದ್ದಿತು.

08017037a ಅಥಾನ್ಯದ್ಧನುರಾದಾಯ ಸಹದೇವಃ ಪ್ರತಾಪವಾನ್।
08017037c ದುಃಶಾಸನಾಯ ಚಿಕ್ಷೇಪ ಬಾಣಮಂತಕರಂ ತತಃ।।

ಅನಂತರ ಪ್ರತಾಪವಾನ್ ಸಹದೇವನು ಇನ್ನೊಂದು ಧನುಸ್ಸನ್ನೆತ್ತಿಕೊಂಡು ದುಃಶಾಸನನ ಮೇಲೆ ಅಂತಕರ ಬಾಣವನ್ನು ಪ್ರಯೋಗಿಸಿದನು.

08017038a ತಮಾಪತಂತಂ ವಿಶಿಖಂ ಯಮದಂಡೋಪಮತ್ವಿಷಂ।
08017038c ಖಡ್ಗೇನ ಶಿತಧಾರೇಣ ದ್ವಿಧಾ ಚಿಚ್ಚೇದ ಕೌರವಃ।।

ಮೇಲೆ ಬೀಳುತ್ತಿದ್ದ ಆ ಯಮದಂಡದ ಕಾಂತಿಯನ್ನು ಹೊಂದಿದ್ದ ವಿಶಿಖವನ್ನು ಕೌರವನು ಹರಿತ ಖಡ್ಗದಿಂದ ಎರಡು ಭಾಗಗಳಾಗಿ ಕತ್ತರಿಸಿದನು.

08017039a ತಮಾಪತಂತಂ ಸಹಸಾ ನಿಸ್ತ್ರಿಂಶಂ ನಿಶಿತೈಃ ಶರೈಃ।
08017039c ಪಾತಯಾಮಾಸ ಸಮರೇ ಸಹದೇವೋ ಹಸನ್ನಿವ।।

ತನ್ನ ಮೇಲೆ ಬೀಳಲಿದ್ದ ಆ ಖಡ್ಗವನ್ನು ಸಮರದಲ್ಲಿ ಸಹದೇವನು ನಸುನಗುತ್ತಲೇ ನಿಶಿತ ಶರಗಳಿಂದ ಕೂಡಲೇ ಕತ್ತರಿಸಿ ಕೆಡವಿದನು.

08017040a ತತೋ ಬಾಣಾಂಶ್ಚತುಃಷಷ್ಟಿಂ ತವ ಪುತ್ರೋ ಮಹಾರಣೇ।
08017040c ಸಹದೇವರಥೇ ತೂರ್ಣಂ ಪಾತಯಾಮಾಸ ಭಾರತ।।

ಭಾರತ! ಆಗ ಆ ಮಹಾರಣದಲ್ಲಿ ನಿನ್ನ ಪುತ್ರನು ಬೇಗನೇ ಸಹದೇವನ ರಥದ ಮೇಲೆ ಅರವತ್ನಾಲ್ಕು ಬಾಣಗಳನ್ನು ಎರಚಿದನು.

08017041a ತಾಂ ಶರಾನ್ಸಮರೇ ರಾಜನ್ವೇಗೇನಾಪತತೋ ಬಹೂನ್।
08017041c ಏಕೈಕಂ ಪಂಚಭಿರ್ಬಾಣೈಃ ಸಹದೇವೋ ನ್ಯಕೃಂತತ।।

ರಾಜನ್! ಸಮರದಲ್ಲಿ ವೇಗದಿಂದ ಬೀಳುತ್ತಿದ್ದ ಆ ಅನೇಕ ಶರಗಳಲ್ಲಿ ಒಂದೊಂದನ್ನೂ ಸಹದೇವನು ಐದೈದು ಬಾಣಗಳಿಂದ ಕತ್ತರಿಸಿದನು.

08017042a ಸ ನಿವಾರ್ಯ ಮಹಾಬಾಣಾಂಸ್ತವ ಪುತ್ರೇಣ ಪ್ರೇಷಿತಾನ್।
08017042c ಅಥಾಸ್ಮೈ ಸುಬಹೂನ್ಬಾಣಾನ್ಮಾದ್ರೀಪುತ್ರಃ ಸಮಾಚಿನೋತ್।।

ನಿನ್ನ ಪುತ್ರನು ಕಳುಹಿಸಿದ ಮಹಾಬಾಣಗಳೆಲ್ಲವನ್ನೂ ತಡೆದು ಮಾದ್ರೀಪುತ್ರನು ಅವನ ಮೇಲೆ ಅನೇಕ ಬಾಣಗಳನ್ನು ಸುರಿಸಿದನು.

08017043a ತತಃ ಕ್ರುದ್ಧೋ ಮಹಾರಾಜ ಸಹದೇವಃ ಪ್ರತಾಪವಾನ್।
08017043c ಸಮಾಧತ್ತ ಶರಂ ಘೋರಂ ಮೃತ್ಯುಕಾಲಾಂತಕೋಪಮಂ।
08017043e ವಿಕೃಷ್ಯ ಬಲವಚ್ಚಾಪಂ ತವ ಪುತ್ರಾಯ ಸೋಽಸೃಜತ್।।

ಮಹಾರಾಜ! ಆಗ ಪ್ರತಾಪವಾನ್ ಸಹದೇವನು ಕ್ರುದ್ಧನಾಗಿ ಮೃತ್ಯುಕಾಲಾಂತಕನಂತಿರುವ ಘೋರ ಶರವನ್ನು ತೆಗೆದುಕೊಂಡು ಚಾಪವನ್ನು ಬಲದಿಂದ ಎಳೆದು ನಿನ್ನ ಮಗನ ಮೇಲೆ ಪ್ರಯೋಗಿಸಿದನು.

08017044a ಸ ತಂ ನಿರ್ಭಿದ್ಯ ವೇಗೇನ ಭಿತ್ತ್ವಾ ಚ ಕವಚಂ ಮಹತ್।
08017044c ಪ್ರಾವಿಶದ್ಧರಣೀಂ ರಾಜನ್ವಲ್ಮೀಕಮಿವ ಪನ್ನಗಃ।
08017044e ತತಃ ಸ ಮುಮುಹೇ ರಾಜಂಸ್ತವ ಪುತ್ರೋ ಮಹಾರಥಃ।।

ರಾಜನ್! ಅದು ವೇಗದಿಂದ ಅವನ ಮಹಾ ಕವಚವನ್ನು ಭೇದಿಸಿ ಸರ್ಪವು ಬಿಲವನ್ನು ಹೊಗುವಂತೆ ಧರಣಿಯನ್ನು ಬೇದಿಸಿ ಹೊಕ್ಕಿತು. ರಾಜನ್! ಆಗ ನಿನ್ನ ಮಹಾರಥ ಪುತ್ರನು ಮೂರ್ಛಿತನಾದನು.

08017045a ಮೂಢಂ ಚೈನಂ ಸಮಾಲಕ್ಷ್ಯ ಸಾರಥಿಸ್ತ್ವರಿತೋ ರಥಂ।
08017045c ಅಪೋವಾಹ ಭೃಶಂ ತ್ರಸ್ತೋ ವಧ್ಯಮಾನಂ ಶಿತೈಃ ಶರೈಃ।।

ಅವನು ಮೂರ್ಛಿತನಾದುದನ್ನು ನೋಡಿ ಅವನ ಸಾರಥಿಯು ನಿಶಿತಶರಗಳಿಂದ ಪ್ರಹರಿಸಲ್ಪಟ್ಟು ಭಯಭೀತನಾಗಿ ತ್ವರೆಮಾಡಿ ರಥವನ್ನು ದೂರಕ್ಕೆ ಕೊಂಡೊಯ್ದನು.

08017046a ಪರಾಜಿತ್ಯ ರಣೇ ತಂ ತು ಪಾಂಡವಃ ಪಾಂಡುಪೂರ್ವಜ।
08017046c ದುರ್ಯೋಧನಬಲಂ ಹೃಷ್ಟಃ ಪ್ರಾಮಥದ್ವೈ ಸಮಂತತಃ।।

ಪಾಂಡುಪೂರ್ವಜ! ರಣದಲ್ಲಿ ದುರ್ಯೋಧನನ ಬಲವನ್ನು ಪರಾಜಯಗೊಳಿಸಿ ಪ್ರಹೃಷ್ಟನಾದ ಪಾಂಡವನು ಎಲ್ಲಕಡೆಗಳಿಂದಲೂ ಸೈನಿಕರನ್ನು ಸದೆಬಡಿದನು.

08017047a ಪಿಪೀಲಿಕಾಪುಟಂ ರಾಜನ್ಯಥಾಮೃದ್ನಾನ್ನರೋ ರುಷಾ।
08017047c ತಥಾ ಸಾ ಕೌರವೀ ಸೇನಾ ಮೃದಿತಾ ತೇನ ಭಾರತ।।

ಭಾರತ! ರಾಜನ್! ರೋಷಗೊಂಡ ಮನುಷ್ಯನು ಕೆಂಜಿಗಗಳಿರುವ ಎಲೆಗಳ ಗೂಡನ್ನು ನೆಲಕ್ಕೆ ತಿಕ್ಕಿ ಹಾಕುವಂತೆ ಸಹದೇವನು ಕೌರವೀ ಸೇನೆಯನ್ನು ನಾಶಗೊಳಿಸಿದನು.

08017048a ನಕುಲಂ ರಭಸಂ ಯುದ್ಧೇ ದಾರಯಂತಂ ವರೂಥಿನೀಂ।
08017048c ಕರ್ಣೋ ವೈಕರ್ತನೋ ರಾಜನ್ವಾರಯಾಮಾಸ ವೈ ತದಾ।।

ರಾಜನ್! ಯುದ್ಧದಲ್ಲಿ ರಭಸವಾಗಿ ಸೇನೆಗಳನ್ನು ಸೀಳುತ್ತಿದ್ದ ನಕುಲನನ್ನು ವೈಕರ್ತನ ಕರ್ಣನು ತಡೆದನು.

08017049a ನಕುಲಶ್ಚ ತದಾ ಕರ್ಣಂ ಪ್ರಹಸನ್ನಿದಮಬ್ರವೀತ್।
08017049c ಚಿರಸ್ಯ ಬತ ದೃಷ್ಟೋಽಹಂ ದೈವತೈಃ ಸೌಮ್ಯಚಕ್ಷುಷಾ।।

ಆಗ ನಕುಲನು ಕರ್ಣನಿಗೆ ನಗುತ್ತಾ ಹೇಳಿದನು: “ಬಹಳಕಾಲದ ನಂತರ ನಾನು ದೇವತೆಗಳ ಸೌಮ್ಯದೃಷ್ಟಿಗೆ ಪಾತ್ರನಾಗಿದ್ದೇನೆ!

08017050a ಯಸ್ಯ ಮೇ ತ್ವಂ ರಣೇ ಪಾಪ ಚಕ್ಷುರ್ವಿಷಯಮಾಗತಃ।
08017050c ತ್ವಂ ಹಿ ಮೂಲಮನರ್ಥಾನಾಂ ವೈರಸ್ಯ ಕಲಹಸ್ಯ ಚ।।

ರಣದಲ್ಲಿ ಪಾಪಿ ನಿನ್ನನ್ನು ನೋಡುತ್ತಿದ್ದೇನಲ್ಲ! ಏಕೆಂದರೆ ನೀನೇ ಈ ವೈರ, ಕಲಹ ಮತ್ತು ಅನರ್ಥಗಳಿಗೆ ಮೂಲ ಕಾರಣನು.

08017051a ತ್ವದ್ದೋಷಾತ್ಕುರವಃ ಕ್ಷೀಣಾಃ ಸಮಾಸಾದ್ಯ ಪರಸ್ಪರಂ।
08017051c ತ್ವಾಮದ್ಯ ಸಮರೇ ಹತ್ವಾ ಕೃತಕೃತ್ಯೋಽಸ್ಮಿ ವಿಜ್ವರಃ।।

ನಿನ್ನ ದೋಷಗಳಿಂದಲೇ ಕುರುಗಳು ಪರಸ್ಪರರೊಡನೆ ಹೊಡೆದಾಡಿ ಕ್ಷೀಣರಾಗುತ್ತಿದ್ದಾರೆ! ಇಂದು ನಿನ್ನನ್ನು ಸಮರದಲ್ಲಿ ಸಂಹರಿಸಿ ವಿಜ್ವರನೂ ಕೃತಕೃತ್ಯನೂ ಆಗುತ್ತೇನೆ!”

08017052a ಏವಮುಕ್ತಃ ಪ್ರತ್ಯುವಾಚ ನಕುಲಂ ಸೂತನಂದನಃ।
08017052c ಸದೃಶಂ ರಾಜಪುತ್ರಸ್ಯ ಧನ್ವಿನಶ್ಚ ವಿಶೇಷತಃ।।

ಹೀಗೆ ಹೇಳಿದ ನಕುಲನಿಗೆ ಸೂತನಂದನನು ಉತ್ತರಿಸಿದನು: “ನೀನು ಹೇಳಿದುದು ರಾಜಪುತ್ರನಿಗೂ ಅದರಲ್ಲೂ ವಿಶೇಷವಾಗಿ ನಿನ್ನಂಥ ಧನ್ವಿಗೆ ತಕ್ಕುದಾಗಿದೆ.

08017053a ಪ್ರಹರಸ್ವ ರಣೇ ಬಾಲ ಪಶ್ಯಾಮಸ್ತವ ಪೌರುಷಂ।
08017053c ಕರ್ಮ ಕೃತ್ವಾ ರಣೇ ಶೂರ ತತಃ ಕತ್ಥಿತುಮರ್ಹಸಿ।।

ಬಾಲಕನೇ! ಪ್ರಹರಿಸು! ರಣದಲ್ಲಿ ನಿನ್ನ ಪೌರುಷವನ್ನು ನಾನು ನೋಡುತ್ತೇನೆ! ಶೂರ! ರಣದಲ್ಲಿ ಕರ್ಮಗಳನ್ನೆಸಗಿ ನಂತರ ಕೊಚ್ಚಿಕೊಳ್ಳುವಿಯಂತೆ!

08017054a ಅನುಕ್ತ್ವಾ ಸಮರೇ ತಾತ ಶೂರಾ ಯುಧ್ಯಂತಿ ಶಕ್ತಿತಃ।
08017054c ಸ ಯುಧ್ಯಸ್ವ ಮಯಾ ಶಕ್ತ್ಯಾ ವಿನೇಷ್ಯೇ ದರ್ಪಮದ್ಯ ತೇ।।

ಅಯ್ಯಾ! ಶೂರರಾದವರು ಏನನ್ನೂ ಮಾತನಾಡದೇ ಸಮರದಲ್ಲಿ ಶಕ್ತಿಯನ್ನುಪಯೋಗಿಸಿ ಯುದ್ಧಮಾಡುತ್ತಾರೆ. ನೀನೂ ಕೂಡ ನನ್ನೊಡನೆ ಶಕ್ತಿಯನ್ನು ಬಳಸಿ ಯುದ್ಧಮಾಡು. ಇಂದು ನಿನ್ನ ದರ್ಪವನ್ನು ನಾಶಗೊಳಿಸುತ್ತೇನೆ!”

08017055a ಇತ್ಯುಕ್ತ್ವಾ ಪ್ರಾಹರತ್ತೂರ್ಣಂ ಪಾಂಡುಪುತ್ರಾಯ ಸೂತಜಃ।
08017055c ವಿವ್ಯಾಧ ಚೈನಂ ಸಮರೇ ತ್ರಿಸಪ್ತತ್ಯಾ ಶಿಲೀಮುಖೈಃ।।

ಹೀಗೆ ಹೇಳಿ ಸಮರದಲ್ಲಿ ತಕ್ಷಣವೇ ಸೂತಜನು ಪಾಂಡುಪುತ್ರನನ್ನು ಎಪ್ಪತ್ಮೂರು ಶಿಲೀಮುಖಗಳಿಂದ ಅವನನ್ನು ಗಾಯಗೊಳಿಸಿದನು.

08017056a ನಕುಲಸ್ತು ತತೋ ವಿದ್ಧಃ ಸೂತಪುತ್ರೇಣ ಭಾರತ।
08017056c ಅಶೀತ್ಯಾಶೀವಿಷಪ್ರಖ್ಯೈಃ ಸೂತಪುತ್ರಮವಿಧ್ಯತ।।

ಭಾರತ! ಸೂತಪುತ್ರನಿಂದ ಗಾಯಗೊಂಡ ನಕುಲನಾದರೋ ಸರ್ಪವಿಷೋಪಮ ಎಂಭತ್ತು ಬಾಣಗಳಿಂದ ಸೂತಪುತ್ರನನ್ನು ಹೊಡೆದನು.

08017057a ತಸ್ಯ ಕರ್ಣೋ ಧನುಶ್ಚಿತ್ತ್ವಾ ಸ್ವರ್ಣಪುಂಖೈಃ ಶಿಲಾಶಿತೈಃ।
08017057c ತ್ರಿಂಶತಾ ಪರಮೇಷ್ವಾಸಃ ಶರೈಃ ಪಾಂಡವಮಾರ್ದಯತ್।।

ಆಗ ಪರಮೇಷ್ವಾಸ ಕರ್ಣನು ಸ್ವರ್ಣಪುಂಖ ಶಿಲಾಶಿತಗಳಿಂದ ನಕುಲನ ಧನುಸ್ಸನ್ನು ಕತ್ತರಿಸಿ ಮೂವತ್ತು ಬಾಣಗಳಿಂದ ಪಾಂಡವನನ್ನು ಹೊಡೆದನು.

08017058a ತೇ ತಸ್ಯ ಕವಚಂ ಭಿತ್ತ್ವಾ ಪಪುಃ ಶೋಣಿತಮಾಹವೇ।
08017058c ಆಶೀವಿಷಾ ಯಥಾ ನಾಗಾ ಭಿತ್ತ್ವಾ ಗಾಂ ಸಲಿಲಂ ಪಪುಃ।।

ವಿಷದ ಹಲ್ಲುಗಳುಳ್ಳ ಸರ್ಪಗಳು ಭೂಮಿಯನ್ನು ಕೊರೆದು ನೀರನ್ನು ಕುಡಿಯುವಂತೆ ಆ ಬಾಣಗಳು ನಕುಲನ ಕವಚವನ್ನು ಭೇದಿಸಿ ಶರೀರವನ್ನು ಹೊಕ್ಕು ರಕ್ತವನ್ನು ಕುಡಿದವು.

08017059a ಅಥಾನ್ಯದ್ಧನುರಾದಾಯ ಹೇಮಪೃಷ್ಠಂ ದುರಾಸದಂ।
08017059c ಕರ್ಣಂ ವಿವ್ಯಾಧ ವಿಂಶತ್ಯಾ ಸಾರಥಿಂ ಚ ತ್ರಿಭಿಃ ಶರೈಃ।।

ಕೂಡಲೇ ನಕುಲನು ಇನ್ನೊಂದು ಬಂಗಾರದ ಹಿಂಭಾಗವುಳ್ಳ ದುರಾಸದ ಧನುಸ್ಸನ್ನು ಎತ್ತಿಕೊಂಡು ಕರ್ಣನನ್ನು ಇಪ್ಪತ್ತು ಬಾಣಗಳಿಂದಲೂ ಅವನ ಸಾರಥಿಯನ್ನು ಮೂರರಿಂದಲೂ ಹೊಡೆದನು.

08017060a ತತಃ ಕ್ರುದ್ಧೋ ಮಹಾರಾಜ ನಕುಲಃ ಪರವೀರಹಾ।
08017060c ಕ್ಷುರಪ್ರೇಣ ಸುತೀಕ್ಷ್ಣೇನ ಕರ್ಣಸ್ಯ ಧನುರಚ್ಚಿನತ್।।

ಮಹಾರಾಜ! ಆಗ ಪರವೀರಹ ನಕುಲನು ಕ್ರುದ್ಧನಾಗಿ ತೀಕ್ಷ್ಣ ಕ್ಷುರಪ್ರದಿಂದ ಕರ್ಣನ ಧನುಸ್ಸನ್ನು ಕತ್ತರಿಸಿದನು.

08017061a ಅಥೈನಂ ಚಿನ್ನಧನ್ವಾನಂ ಸಾಯಕಾನಾಂ ಶತೈಸ್ತ್ರಿಭಿಃ।
08017061c ಆಜಘ್ನೇ ಪ್ರಹಸನ್ವೀರಃ ಸರ್ವಲೋಕಮಹಾರಥಂ।।

ಕೂಡಲೇ ನಗುತ್ತಾ ಆ ವೀರನು ಧನುಸ್ಸು ತುಂಡಾಗಿದ್ದ ಸರ್ವಲೋಕಮಹಾರಥ ಕರ್ಣನನ್ನು ಮುನ್ನೂರು ಸಾಯಕಗಳಿಂದ ಪ್ರಹರಿಸಿದನು.

08017062a ಕರ್ಣಮಭ್ಯರ್ದಿತಂ ದೃಷ್ಟ್ವಾ ಪಾಂಡುಪುತ್ರೇಣ ಮಾರಿಷ।
08017062c ವಿಸ್ಮಯಂ ಪರಮಂ ಜಗ್ಮೂ ರಥಿನಃ ಸಹ ದೈವತೈಃ।।

ಮಾರಿಷ! ಪಾಂಡುಪುತ್ರನು ಕರ್ಣನನ್ನು ಹೀಗೆ ಗಾಯಗೊಳಿಸಿದುದನ್ನು ನೋಡಿ ದೇವತೆಗಳೊಂದಿಗೆ ರಥಿಗಳೆಲ್ಲರೂ ಪರಮ ವಿಸ್ಮಿತರಾದರು.

08017063a ಅಥಾನ್ಯದ್ಧನುರಾದಾಯ ಕರ್ಣೋ ವೈಕರ್ತನಸ್ತದಾ।
08017063c ನಕುಲಂ ಪಂಚಭಿರ್ಬಾಣೈರ್ಜತ್ರುದೇಶೇ ಸಮಾರ್ದಯತ್।।

ಕೂಡಲೇ ವೈಕರ್ತನ ಕರ್ಣನು ಇನ್ನೊಂದು ಧನುಸ್ಸನ್ನು ಎತ್ತಿಕೊಂಡು ಐದು ಬಾಣಗಳಿಂದ ನಕುಲನ ಕೊರಳಿಗೆ ಹೊಡೆದನು.

08017064a ಉರಃಸ್ಥೈರಥ ತೈರ್ಬಾಣೈರ್ಮಾದ್ರೀಪುತ್ರೋ ವ್ಯರೋಚತ।
08017064c ಸ್ವರಶ್ಮಿಭಿರಿವಾದಿತ್ಯೋ ಭುವನೇ ವಿಸೃಜನ್ಪ್ರಭಾಂ।।

ಆದಿತ್ಯನು ತನ್ನ ರಶ್ಮಿಗಳಿಂದ ಪ್ರಭೆಸೂಸಿ ಭುವನಗಳನ್ನು ಬೆಳಗುವಂತೆ ಮಾದ್ರೀಪುತ್ರನು ಕೊರಳಿಗೆ ನಾಟಿದ ಆ ಬಾಣಗಳಿಂದ ಪ್ರಕಾಶಿಸಿದನು.

08017065a ನಕುಲಸ್ತು ತತಃ ಕರ್ಣಂ ವಿದ್ಧ್ವಾ ಸಪ್ತಭಿರಾಯಸೈಃ।
08017065c ಅಥಾಸ್ಯ ಧನುಷಃ ಕೋಟಿಂ ಪುನಶ್ಚಿಚ್ಚೇದ ಮಾರಿಷ।।

ಮಾರಿಷ! ಆಗ ನಕುಲನು ಕರ್ಣನನ್ನು ಏಳು ಆಯಸಗಳನ್ನು ಪ್ರಹರಿಸಿ ಅವನ ಧನುಸ್ಸಿನ ಅಗ್ರಭಾಗವನ್ನು ಪುನಃ ಕತ್ತರಿಸಿದನು.

08017066a ಸೋಽನ್ಯತ್ಕಾರ್ಮುಕಮಾದಾಯ ಸಮರೇ ವೇಗವತ್ತರಂ।
08017066c ನಕುಲಸ್ಯ ತತೋ ಬಾಣೈಃ ಸರ್ವತೋಽವಾರಯದ್ದಿಶಃ।।

ಕರ್ಣನಾದರೋ ಸಮರದಲ್ಲಿ ಇನ್ನೂ ವೇಗವತ್ತರವಾದ ಬೇರೊಂದು ಕಾರ್ಮುಕವನ್ನು ತೆಗೆದುಕೊಂಡು ನಕುಲನ ಸುತ್ತಲೂ ಬಾಣಗಳನ್ನು ಸುರಿಸಿ ದಿಕ್ಕುಗಳನ್ನು ಮುಚ್ಚಿದನು.

08017067a ಸಂಚಾದ್ಯಮಾನಃ ಸಹಸಾ ಕರ್ಣಚಾಪಚ್ಯುತೈಃ ಶರೈಃ।
08017067c ಚಿಚ್ಚೇದ ಸ ಶರಾಂಸ್ತೂರ್ಣಂ ಶರೈರೇವ ಮಹಾರಥಃ।।

ಕರ್ಣನ ಚಾಪದಿಂದ ಹೊರಟ ಶರಗಳಿಂದ ಮುಸುಕಲ್ಪಟ್ಟ ಮಹಾರಥ ನಕುಲನು ಶೀಘ್ರವಾಗಿ ಆ ಶರಗಳನ್ನು ಶರಗಳಿಂದಲೇ ತುಂಡರಿಸಿದನು.

08017068a ತತೋ ಬಾಣಮಯಂ ಜಾಲಂ ವಿತತಂ ವ್ಯೋಂನ್ಯದೃಶ್ಯತ।
08017068c ಖದ್ಯೋತಾನಾಂ ಗಣೈರೇವ ಸಂಪತದ್ಭಿರ್ಯಥಾ ನಭಃ।।

ಆಕಾಶದಲ್ಲಿ ಹಾರಾಡುತ್ತಿರುವ ಮಿಣುಕುಹುಳುಗಳ ಜಾಲಗಳಂತೆ ಹಾರಾಡುತ್ತಿದ್ದ ಬಾಣಗಳಿಂದ ತುಂಬಿದ ಜಾಲಗಳುಳ್ಳಂತೆ ಆಕಾಶವು ಕಂಡಿತು.

08017069a ತೈರ್ವಿಮುಕ್ತೈಃ ಶರಶತೈಶ್ಚಾದಿತಂ ಗಗನಂ ತದಾ।
08017069c ಶಲಭಾನಾಂ ಯಥಾ ವ್ರಾತೈಸ್ತದ್ವದಾಸೀತ್ಸಮಾಕುಲಂ।।

ಅವರಿಬ್ಬರ ಬಿಲ್ಲುಗಳಿಂದ ಚ್ಯುತವಾದ ನೂರಾರು ಬಾಣಗಳು ಮಿಡಿತೆಹುಳುಗಳ ಸಮೂಹಗಳು ಆಕಾಶವನ್ನು ಮುಚ್ಚಿವವೋ ಎನ್ನುವಂತೆ ತೋರುತ್ತಿದ್ದವು.

08017070a ತೇ ಶರಾ ಹೇಮವಿಕೃತಾಃ ಸಂಪತಂತೋ ಮುಹುರ್ಮುಹುಃ।
08017070c ಶ್ರೇಣೀಕೃತಾ ಅಭಾಸಂತ ಹಂಸಾಃ ಶ್ರೇಣೀಗತಾ ಇವ।।

ಬಾರಿಬಾರಿಗೂ ಬಿಲ್ಲುಗಳಿಂದ ಸಾಲುಸಾಲಾಗಿ ಹೊರಡುತ್ತಿದ್ದ ಸುವರ್ಣಮಯ ಬಾಣಗಳು ಸಾಲುಸಾಲಾಗಿ ಹಾರುತ್ತಿರುವ ಕ್ರೌಂಚಪಕ್ಷಿಗಳಂತೆ ಕಾಣುತ್ತಿದ್ದವು.

08017071a ಬಾಣಜಾಲಾವೃತೇ ವ್ಯೋಮ್ನಿ ಚಾದಿತೇ ಚ ದಿವಾಕರೇ।
08017071c ಸಮಸರ್ಪತ್ತತೋ ಭೂತಂ ಕಿಂ ಚಿದೇವ ವಿಶಾಂ ಪತೇ।।

ವಿಶಾಂಪತೇ! ಆಕಾಶವು ಬಾಣಜಾಲಗಳಿಂದ ಮುಚ್ಚಿಹೋಗಲು, ದಿವಾಕರನು ಮುಚ್ಚಿಹೋಗಲು, ಆಕಾಶದಿಂದ ಭೂಮಿಯ ಮೇಲೆ ಏನೊಂದೂ ಬೀಳುತ್ತಿರಲಿಲ್ಲ.

08017072a ನಿರುದ್ಧೇ ತತ್ರ ಮಾರ್ಗೇ ತು ಶರಸಂಘೈಃ ಸಮಂತತಃ।
08017072c ವ್ಯರೋಚತಾಂ ಮಹಾಭಾಗೌ ಬಾಲಸೂರ್ಯಾವಿವೋದಿತೌ।।

ಶರಸಂಘಗಳಿಂದ ಸುತ್ತಲಿನ ಎಲ್ಲ ಮಾರ್ಗಗಳೂ ತಡೆಯಲ್ಪಟ್ಟಿರಲು ಆ ಇಬ್ಬರು ಮಹಾಭಾಗರೂ ಉದಯಿಸುತ್ತಿರುವ ಬಾಲಸೂರ್ಯರಂತೆ ವಿರಾಜಿಸಿದರು.

08017073a ಕರ್ಣಚಾಪಚ್ಯುತೈರ್ಬಾಣೈರ್ವಧ್ಯಮಾನಾಸ್ತು ಸೋಮಕಾಃ।
08017073c ಅವಾಲೀಯಂತ ರಾಜೇಂದ್ರ ವೇದನಾರ್ತಾಃ ಶರಾರ್ದಿತಾಃ।।

ರಾಜೇಂದ್ರ! ಕರ್ಣನ ಚಾಪದಿಂದ ಚ್ಯುತಗೊಂಡ ಬಾಣಗಳಿಂದ ಪ್ರಹರಿಸಲ್ಪಟ್ಟ ಸೋಮಕರು ಶರಾರ್ದಿತರಾಗಿ ವೇದನೆಯಿಂದ ಆರ್ತರಾಗಿ ನರಳುತ್ತಿದ್ದರು.

08017074a ನಕುಲಸ್ಯ ತಥಾ ಬಾಣೈರ್ವಧ್ಯಮಾನಾ ಚಮೂಸ್ತವ।
08017074c ವ್ಯಶೀರ್ಯತ ದಿಶೋ ರಾಜನ್ವಾತನುನ್ನಾ ಇವಾಂಬುದಾಃ।।

ರಾಜನ್! ಹಾಗೆಯೇ ನಕುಲನ ಬಾಣಗಳಿಂದ ವಧಿಸಲ್ಪಡುತ್ತಿದ್ದ ನಿನ್ನ ಸೇನೆಯು ಭಿರುಗಾಳಿಗೆ ಸಿಲುಕಿದ ಮೋಡಗಳಂತೆ ದಿಕ್ಕಾಪಾಲಾಗಿ ಚದುರಿಹೋಯಿತು.

08017075a ತೇ ಸೇನೇ ವಧ್ಯಮಾನೇ ತು ತಾಭ್ಯಾಂ ದಿವ್ಯೈರ್ಮಹಾಶರೈಃ।
08017075c ಶರಪಾತಮಪಕ್ರಮ್ಯ ತತಃ ಪ್ರೇಕ್ಷಕವತ್ ಸ್ಥಿತೇ।।

ಅವರಿಬ್ಬರ ದಿವ್ಯ ಮಹಾಶರಗಳಿಂದ ಪೀಡಿಸಲ್ಪಟ್ಟ ಎರಡೂ ಸೇನೆಗಳೂ ಬಾಣಗಳು ಬೀಳುವ ಪ್ರದೇಶವನ್ನು ಬಿಟ್ಟು ದೂರ ನಿಂತು ಯುದ್ಧವನ್ನು ನೋಡತೊಡಗಿದವು.

08017076a ಪ್ರೋತ್ಸಾರಿತೇ ಜನೇ ತಸ್ಮಿನ್ಕರ್ಣಪಾಂಡವಯೋಃ ಶರೈಃ।
08017076c ವಿವ್ಯಾಧಾತೇ ಮಹಾತ್ಮಾನಾವನ್ಯೋನ್ಯಂ ಶರವೃಷ್ಟಿಭಿಃ।।

ಜನರು ಕರ್ಣ ಮತ್ತು ಪಾಂಡವನ ಶರಗಳಿಂದ ದೂರ ನಿಲ್ಲಲಾಗಿ ಆ ಇಬ್ಬರು ಮಹಾತ್ಮರೂ ಪರಸ್ಪರರನ್ನು ಶರವೃಷ್ಟಿಗಳಿಂದ ಮುಚ್ಚಿದರು.

08017077a ನಿದರ್ಶಯಂತೌ ತ್ವಸ್ತ್ರಾಣಿ ದಿವ್ಯಾನಿ ರಣಮೂರ್ಧನಿ।
08017077c ಚಾದಯಂತೌ ಚ ಸಹಸಾ ಪರಸ್ಪರವಧೈಷಿಣೌ।।

ರಣಮೂರ್ಧನಿಯಲ್ಲಿ ತಮ್ಮ ತಮ್ಮ ದಿವ್ಯಾಸ್ತ್ರಗಳನ್ನು ಪ್ರದರ್ಶಿಸುತ್ತಾ ಪರಸ್ಪರರನ್ನು ವಧಿಸಲಿಚ್ಛಿಸಿ ಪರಸ್ಪರರನ್ನು ಬಾಣಗಳಿಂದ ಆಚ್ಛಾದಿಸಿದರು.

08017078a ನಕುಲೇನ ಶರಾ ಮುಕ್ತಾಃ ಕಂಕಬರ್ಹಿಣವಾಸಸಃ।
08017078c ತೇ ತು ಕರ್ಣಮವಚ್ಚಾದ್ಯ ವ್ಯತಿಷ್ಠಂತ ಯಥಾ ಪರೇ।।

ನಕುಲನು ಪ್ರಯೋಗಿಸಿದ ರಣಹದ್ದು ಮತ್ತು ನವಿಲುಗಳ ಗರಿಗಳಿಂದ ಕೂಡಿದ ಬಾಣಗಳು ಕರ್ಣನನ್ನು ಆಚ್ಛಾದಿಸಿ ಆಕಾಶದಲ್ಲಿಯೇ ನಿಂತುಬಿಡುತ್ತಿದ್ದವು.

08017079a ಶರವೇಶ್ಮಪ್ರವಿಷ್ಟೌ ತೌ ದದೃಶಾತೇ ನ ಕೈಶ್ಚನ।
08017079c ಚಂದ್ರಸೂರ್ಯೌ ಯಥಾ ರಾಜಂಶ್ಚಾದ್ಯಮಾನೌ ಜಲಾಗಮೇ।।

ರಾಜನ್! ಮಳೆಗಾಲದ ಪ್ರಾರಂಭದಲ್ಲಿ ಸೂರ್ಯಚಂದ್ರರು ಮೋಡಗಳಿಂದ ಮುಸುಕಿಕೊಂಡ ಹಾಗೆ ಶರಗಳಿಂದಲೇ ನಿರ್ಮಿತ ಮನೆಗಳನ್ನು ಪ್ರವೇಶಿಸಿದ ಅವರಿಬ್ಬರು ಯಾರಿಗೂ ಕಾಣುತ್ತಿರಲಿಲ್ಲ.

08017080a ತತಃ ಕ್ರುದ್ಧೋ ರಣೇ ಕರ್ಣಃ ಕೃತ್ವಾ ಘೋರತರಂ ವಪುಃ।
08017080c ಪಾಂಡವಂ ಚಾದಯಾಮಾಸ ಸಮಂತಾಚ್ಚರವೃಷ್ಟಿಭಿಃ।।

ಆಗ ರಣದಲ್ಲಿ ಕರ್ಣನು ಕ್ರುದ್ಧನಾಗಿ ಮುಖವನ್ನು ಘೋರತರವಾಗಿಸಿಕೊಂಡು ಪಾಂಡವನನ್ನು ಎಲ್ಲಕಡೆಗಳಿಂದ ಶರವೃಷ್ಟಿಗಳಿಂದ ಮುಚ್ಚಿಬಿಟ್ಟನು.

08017081a ಸ ಚ್ಚಾದ್ಯಮಾನಃ ಸಮರೇ ಸೂತಪುತ್ರೇಣ ಪಾಂಡವಃ।
08017081c ನ ಚಕಾರ ವ್ಯಥಾಂ ರಾಜನ್ಭಾಸ್ಕರೋ ಜಲದೈರ್ಯಥಾ।।

ರಾಜನ್! ಮೋಡಗಳಿಂದ ಮುಸುಕಲ್ಪಟ್ಟ ಭಾಸ್ಕರನು ಹೇಗೋ ಹಾಗೆ ಸಮರದಲ್ಲಿ ಸೂತಪುತ್ರನಿಂದ ಮುಸುಕಲ್ಪಟ್ಟ ಪಾಂಡವನು ಸ್ವಲ್ಪವೂ ವ್ಯಥೆಪಡಲಿಲ್ಲ.

08017082a ತತಃ ಪ್ರಹಸ್ಯಾಧಿರಥಿಃ ಶರಜಾಲಾನಿ ಮಾರಿಷ।
08017082c ಪ್ರೇಷಯಾಮಾಸ ಸಮರೇ ಶತಶೋಽಥ ಸಹಸ್ರಶಃ।।

ಮಾರಿಷ! ಆಧಿರಥಿಯು ಗಹಗಹಿಸಿ ನಗುತ್ತಾ ನೂರಾರು ಸಾವಿರಾರು ಶರಜಾಲಗಳನ್ನು ಸಮರದಲ್ಲಿ ಪ್ರಯೋಗಿಸತೊಡಗಿದನು.

08017083a ಏಕಚ್ಚಾಯಮಭೂತ್ಸರ್ವಂ ತಸ್ಯ ಬಾಣೈರ್ಮಹಾತ್ಮನಃ।
08017083c ಅಭ್ರಚ್ಚಾಯೇವ ಸಂಜಜ್ಞೇ ಸಂಪತದ್ಭಿಃ ಶರೋತ್ತಮೈಃ।।

ಆ ಮಹಾತ್ಮನ ಬಾಣಗಳಿಂದ ಎಲ್ಲವು ಅಂಧಕಾರಮಯವಾಯಿತು. ಸತತವಾಗಿ ಬೀಳುತ್ತಿದ್ದ ಆ ಉತ್ತಮ ಶರಗಳಿಂದಾಗಿ ಮೋಡಗಳೇ ಕವಿದಂತೆ ತೋರುತ್ತಿತ್ತು.

08017084a ತತಃ ಕರ್ಣೋ ಮಹಾರಾಜ ಧನುಶ್ಚಿತ್ತ್ವಾ ಮಹಾತ್ಮನಃ।
08017084c ಸಾರಥಿಂ ಪಾತಯಾಮಾಸ ರಥನೀಡಾದ್ಧಸನ್ನಿವ।।

ಮಹಾರಾಜ! ಆಗ ಮಹಾತ್ಮ ಕರ್ಣನು ನಸುನಗುತ್ತಾ ನಕುಲನ ಧನುಸ್ಸನ್ನು ಕತ್ತರಿಸಿ ರಥಪೀಠದಿಂದ ಅವನ ಸಾರಥಿಯನ್ನು ಕೆಡವಿದನು.

08017085a ತಥಾಶ್ವಾಂಶ್ಚತುರಶ್ಚಾಸ್ಯ ಚತುರ್ಭಿರ್ನಿಶಿತೈಃ ಶರೈಃ।
08017085c ಯಮಸ್ಯ ಸದನಂ ತೂರ್ಣಂ ಪ್ರೇಷಯಾಮಾಸ ಭಾರತ।।

ಭಾರತ! ಆಗ ಅವನು ನಾಲ್ಕು ನಿಶಿತ ಶರಗಳಿಂದ ನಕುಲನ ನಾಲ್ಕು ಕುದುರೆಗಳನ್ನು ಬೇಗನೇ ಯಮಸದನಕ್ಕೆ ಕಳುಹಿಸಿದನು.

08017086a ಅಥಾಸ್ಯ ತಂ ರಥಂ ತೂರ್ಣಂ ತಿಲಶೋ ವ್ಯಧಮಚ್ಚರೈಃ।
08017086c ಪತಾಕಾಂ ಚಕ್ರರಕ್ಷೌ ಚ ಧ್ವಜಂ ಖಡ್ಗಂ ಚ ಮಾರಿಷ।
08017086e ಶತಚಂದ್ರಂ ತತಶ್ಚರ್ಮ ಸರ್ವೋಪಕರಣಾನಿ ಚ।।

ಕೊನೆಗೆ ನಕುಲನ ರಥವನ್ನು ತಕ್ಷಣವೇ ಶರಗಳಿಂದ ಹೊಡೆದು ಎಳ್ಳಿನ ಕಾಳುಗಳಷ್ಟು ನುಚ್ಚುನೂರು ಮಾಡಿಬಿಟ್ಟನು. ಅವನ ಪತಾಕೆಯನ್ನೂ, ಇಬ್ಬರು ಚಕ್ರರಕ್ಷಕರನ್ನೂ, ಧ್ವಜ, ಖಡ್ಗ, ಶತಚಂದ್ರಗಳಿರುವ ಅವನ ಕವಚ ಮತ್ತು ಸರ್ವ ಉಪಕರಣಗಳನ್ನು ಕೂಡ ಧ್ವಂಸಮಾಡಿದನು.

08017087a ಹತಾಶ್ವೋ ವಿರಥಶ್ಚೈವ ವಿವರ್ಮಾ ಚ ವಿಶಾಂ ಪತೇ।
08017087c ಅವತೀರ್ಯ ರಥಾತ್ತೂರ್ಣಂ ಪರಿಘಂ ಗೃಹ್ಯ ವಿಷ್ಠಿತಃ।।

ವಿಶಾಂಪತೇ! ಕುದುರೆ, ರಥ ಮತ್ತು ಕವಚಗಳನ್ನು ಕಳೆದುಕೊಂಡ ನಕುಲನು ಕೂಡಲೆ ರಥದಿಂದ ಇಳಿದು ಪರಿಘವನ್ನು ಹಿಡಿದು ನಿಂತನು.

08017088a ತಮುದ್ಯತಂ ಮಹಾಘೋರಂ ಪರಿಘಂ ತಸ್ಯ ಸೂತಜಃ।
08017088c ವ್ಯಹನತ್ಸಾಯಕೈ ರಾಜಂ ಶತಶೋಽಥ ಸಹಸ್ರಶಃ।।

ರಾಜನ್! ಅವನು ಹಿಡಿದಿದ್ದ ಆ ಮಹಾಘೋರ ಪರಿಘವನ್ನು ಸೂತಜನು ಸಾಯಕಗಳಿಂದ ನೂರಾರು ಸಹಸ್ರಾರು ತುಂಡುಗಳನ್ನಾಗಿಸಿ ನಾಶಗೊಳಿಸಿದನು.

08017089a ವ್ಯಾಯುಧಂ ಚೈನಮಾಲಕ್ಷ್ಯ ಶರೈಃ ಸಂನತಪರ್ವಭಿಃ।
08017089c ಆರ್ದಯದ್ಬಹುಶಃ ಕರ್ಣೋ ನ ಚೈನಂ ಸಮಪೀಡಯತ್।।

ನಿರಾಯುಧನಾದ ನಕುಲನನ್ನು ನೋಡಿ ಕರ್ಣನು ಸನ್ನತಪರ್ವ ಶರಗಳಿಂದ ಬಹಳವಾಗಿ ಪ್ರಹರಿಸಿದನು. ಆದರೂ ಅವನು ಅವನನ್ನು ಹೆಚ್ಚಾಗಿ ಪೀಡಿಸಲಿಲ್ಲ.

08017090a ಸ ವಧ್ಯಮಾನಃ ಸಮರೇ ಕೃತಾಸ್ತ್ರೇಣ ಬಲೀಯಸಾ।
08017090c ಪ್ರಾದ್ರವತ್ಸಹಸಾ ರಾಜನ್ನಕುಲೋ ವ್ಯಾಕುಲೇಂದ್ರಿಯಃ।।

ರಾಜನ್! ಸಮರದಲ್ಲಿ ತನಗಿಂತ ಹೆಚ್ಚು ಕೃತಾಸ್ತ್ರನೂ ಬಲಶಾಲಿಯೂ ಆದ ಕರ್ಣನಿಂದ ಪ್ರಹರಿಸಲ್ಪಟ್ಟ ನಕುಲನು ವ್ಯಾಕುಲನಾಗಿ ಕೂಡಲೇ ಪಲಾಯನಗೈದನು.

08017091a ತಮಭಿದ್ರುತ್ಯ ರಾಧೇಯಃ ಪ್ರಹಸನ್ವೈ ಪುನಃ ಪುನಃ।
08017091c ಸಜ್ಯಮಸ್ಯ ಧನುಃ ಕಂಟೇ ಸೋಽವಾಸೃಜತ ಭಾರತ।।

ಭಾರತ! ಅವನನ್ನು ಬೆನ್ನಟ್ಟಿ ಹೋಗಿ ರಾಧೇಯನು ಪುನಃ ಪುನಃ ನಗುತ್ತಾ ಮೌರ್ವಿಯಿಂದ ಕೂಡಿದ್ದ ಧನುಸ್ಸನ್ನೇ ನಕುಲನ ಕೊರಳಿಗೆ ಹಾಕಿದನು.

08017092a ತತಃ ಸ ಶುಶುಭೇ ರಾಜನ್ಕಂಟಾಸಕ್ತಮಹಾಧನುಃ।
08017092c ಪರಿವೇಷಮನುಪ್ರಾಪ್ತೋ ಯಥಾ ಸ್ಯಾದ್ವ್ಯೋಮ್ನಿ ಚಂದ್ರಮಾಃ।
08017092e ಯಥೈವ ಚ ಸಿತೋ ಮೇಘಃ ಶಕ್ರಚಾಪೇನ ಶೋಭಿತಃ।।

ರಾಜನ್! ಕುತ್ತಿಗೆಯಲ್ಲಿ ಕರ್ಣನ ಮಹಾಧನುಸ್ಸನ್ನು ಧರಿಸಿದ್ದ ನಕುಲನು ಆಕಾಶದಲ್ಲಿ ಪರಿಧಿಯ ಪ್ರಭೆಯಿಂದ ಕೂಡಿದ ಚಂದ್ರನಂತೆಯೂ ಕಾಮನಬಿಲ್ಲಿನಿಂದ ಶೋಭಿತ ಮೇಘದಂತೆಯೂ ಕಾಣಿಸಿದನು.

08017093a ತಮಬ್ರವೀತ್ತದಾ ಕರ್ಣೋ ವ್ಯರ್ಥಂ ವ್ಯಾಹೃತವಾನಸಿ।
08017093c ವದೇದಾನೀಂ ಪುನರ್ಹೃಷ್ಟೋ ವಧ್ಯಂ ಮಾಂ ತ್ವಂ ಪುನಃ ಪುನಃ।।

ಆಗ ಅವನಿಗೆ ಕರ್ಣನು ಹೇಳಿದನು: “ವ್ಯರ್ಥವಾಗಿ ಕೊಚ್ಚಿಕೊಂಡೆಯಲ್ಲವೇ? ನನ್ನಿಂದ ಪುನಃ ಪುನಃ ಪ್ರಹೃತನಾಗುತ್ತಿರುವ ನೀನು ಈಗಲೂ ಹೃಷ್ಟನಾಗಿರುವೆಯಾ ಹೇಳು!

08017094a ಮಾ ಯೋತ್ಸೀರ್ಗುರುಭಿಃ ಸಾರ್ಧಂ ಬಲವದ್ಭಿಶ್ಚ ಪಾಂಡವ।
08017094c ಸದೃಶೈಸ್ತಾತ ಯುಧ್ಯಸ್ವ ವ್ರೀಡಾಂ ಮಾ ಕುರು ಪಾಂಡವ।
08017094e ಗೃಹಂ ವಾ ಗಚ್ಚ ಮಾದ್ರೇಯ ಯತ್ರ ವಾ ಕೃಷ್ಣಫಲ್ಗುನೌ।।

ಪಾಂಡವ! ನಿನಗಿಂತಲೂ ಹಿರಿಯರೊಂದಿಗೆ ಮತ್ತು ಬಲವಂತರೊಂದಿಗೆ ಯುದ್ಧಮಾಡಬೇಡ! ಅಯ್ಯಾ! ನಿನ್ನಂತೆಯೇ ಇರುವವರೊಡನೆ ಮಾತ್ರ ಯುದ್ಧಮಾಡು. ಪಾಂಡವ! ನಾಚಿಕೊಳ್ಳಬೇಡ! ಮಾದ್ರೇಯ! ಮನೆಗಾದರೂ ಹೋಗು ಅಥವಾ ಕೃಷ್ಣ-ಪಲ್ಗುನರಿರುವಲ್ಲಿಗಾದರೂ ಹೋಗು!”

08017095a ಏವಮುಕ್ತ್ವಾ ಮಹಾರಾಜ ವ್ಯಸರ್ಜಯತ ತಂ ತತಃ।
08017095c ವಧಪ್ರಾಪ್ತಂ ತು ತಂ ರಾಜನ್ನಾವಧೀತ್ಸೂತನಂದನಃ।
08017095e ಸ್ಮೃತ್ವಾ ಕುಂತ್ಯಾ ವಚೋ ರಾಜಂಸ್ತತ ಏನಂ ವ್ಯಸರ್ಜಯತ್।।

ಮಹಾರಾಜ! ರಾಜನ್! ಹೀಗೆ ಹೇಳಿ ಕರ್ಣನು ಅವನನ್ನು ಬಿಟ್ಟುಬಿಟ್ಟನು. ರಾಜನ್! ವಧಿಸಲು ಅವಕಾಶವಿದ್ದರೂ ಸೂತನಂದನನು ಅವನನ್ನು ವಧಿಸಲಿಲ್ಲ. ಕುಂತಿಗೆ ಕೊಟ್ಟ ಮಾತನ್ನು ಸ್ಮರಿಸಿಕೊಂಡು ಅವನನ್ನು ಹಾಗೆಯೇ ಬಿಟ್ಟು ಬಿಟ್ಟನು.

08017096a ವಿಸೃಷ್ಟಃ ಪಾಂಡವೋ ರಾಜನ್ಸೂತಪುತ್ರೇಣ ಧನ್ವಿನಾ।
08017096c ವ್ರೀಡನ್ನಿವ ಜಗಾಮಾಥ ಯುಧಿಷ್ಠಿರರಥಂ ಪ್ರತಿ।।

ರಾಜನ್! ಸೂತಪುತ್ರನಿಂದ ಬಿಡುಗಡೆಹೊಂದಿದ ಪಾಂಡವನು ನಾಚಿಕೆಗೊಂಡವನಾಗಿ ಯುಧಿಷ್ಠಿರನ ರಥದ ಕಡೆ ಹೋದನು.

08017097a ಆರುರೋಹ ರಥಂ ಚಾಪಿ ಸೂತಪುತ್ರಪ್ರತಾಪಿತಃ।
08017097c ನಿಃಶ್ವಸನ್ದುಃಖಸಂತಪ್ತಃ ಕುಂಭೇ ಕ್ಷಿಪ್ತ ಇವೋರಗಃ।।

ಅವನ ರಥವನ್ನೇರಿ ಸೂತಪುತ್ರನ ಪ್ರತಾಪಕ್ಕೆ ಸಿಲುಕಿದ್ದ ನಕುಲನು ಮಡಿಕೆಯಲ್ಲಿಟ್ಟಿದ್ದ ಸರ್ಪದಂತೆ ದುಃಖಸಂತಪ್ತನಾಗಿ ನಿಟ್ಟುಸಿರುಬಿಡುತ್ತಿದ್ದನು.

08017098a ತಂ ವಿಸೃಜ್ಯ ರಣೇ ಕರ್ಣಃ ಪಾಂಚಾಲಾಂಸ್ತ್ವರಿತೋ ಯಯೌ।
08017098c ರಥೇನಾತಿಪತಾಕೇನ ಚಂದ್ರವರ್ಣಹಯೇನ ಚ।।

ರಣದಲ್ಲಿ ನಕುಲನನ್ನು ಬಿಟ್ಟು ಚಂದ್ರವರ್ಣದ ಕುದುರೆಗಳು ಮತ್ತು ಎತ್ತರದಲ್ಲಿ ಹಾರಾಡುತ್ತಿದ್ದ ಪತಾಕೆಗಳಿದ್ದ ರಥದಲ್ಲಿ ಕುಳಿತು ಕರ್ಣನು ತ್ವರೆಮಾಡಿ ಪಾಂಚಾಲರಿದ್ದಲ್ಲಿಗೆ ಬಂದನು.

08017099a ತತ್ರಾಕ್ರಂದೋ ಮಹಾನಾಸೀತ್ಪಾಂಡವಾನಾಂ ವಿಶಾಂ ಪತೇ।
08017099c ದೃಷ್ಟ್ವಾ ಸೇನಾಪತಿಂ ಯಾಂತಂ ಪಾಂಚಾಲಾನಾಂ ರಥವ್ರಜಾನ್।।

ವಿಶಾಂಪತೇ! ಸೇನಾಪತಿಯು ಪಾಂಚಾಲರ ರಥಸಮೂಹಗಳ ಕಡೆ ಹೋದುದನ್ನು ನೋಡಿ ಪಾಂಡವರ ಸೇನೆಯಲ್ಲಿ ಮಹಾ ಆಕ್ರಂದನವುಂಟಾಯಿತು.

08017100a ತತ್ರಾಕರೋನ್ಮಹಾರಾಜ ಕದನಂ ಸೂತನಂದನಃ।
08017100c ಮಧ್ಯಂ ಗತೇ ದಿನಕರೇ ಚಕ್ರವತ್ಪ್ರಚರನ್ಪ್ರಭುಃ।।

ಮಹಾರಾಜ! ದಿನಕರನು ನಡುನೆತ್ತಿಗೆ ಬರಲಾಗಿ ಪ್ರಭು ಸೂತನಂದನನು ಅಲ್ಲಿ ಚಕ್ರದಂತೆಯೇ ಸಂಚರಿಸುತ್ತಾ ಕದನವನ್ನಾಡಿದನು.

08017101a ಭಗ್ನಚಕ್ರೈ ರಥೈಃ ಕೇ ಚಿಚ್ಚಿನ್ನಧ್ವಜಪತಾಕಿಭಿಃ।
08017101c ಸಸೂತೈರ್ಹತಸೂತೈಶ್ಚ ಭಗ್ನಾಕ್ಷೈಶ್ಚೈವ ಮಾರಿಷ।
08017101e ಹ್ರಿಯಮಾಣಾನಪಶ್ಯಾಮ ಪಾಂಚಾಲಾನಾಂ ರಥವ್ರಜಾನ್।।

ಮಾರಿಷ! ಕೆಲವು ರಥಗಳ ಚಕ್ರಗಳು ಮುರಿದವು. ಕೆಲವರ ಧ್ವಜ-ಪತಾಕೆಗಳು ಮುರಿದವು. ಕುದುರೆಗಳೂ ಸಾರಥಿಗಳೂ ಹತರಾದರು. ಅಚ್ಚುಮರಗಳು ಮುರಿದುಬಿದ್ದವು. ಹೀಗೆ ಪಾಂಚಾಲರ ರಥಸಮೂಹವು ನಾಶಗೊಂಡಿದುದನ್ನು ನಾವು ನೋಡಿದೆವು.

08017102a ತತ್ರ ತತ್ರ ಚ ಸಂಭ್ರಾಂತಾ ವಿಚೇರುರ್ಮತ್ತಕುಂಜರಾಃ।
08017102c ದವಾಗ್ನಿನಾ ಪರೀತಾಂಗಾ ಯಥೈವ ಸ್ಯುರ್ಮಹಾವನೇ।।

ಮಹಾವನದಲ್ಲಿ ದವಾಗ್ನಿಯಿಂದ ಸುಡಲ್ಪಡುತ್ತಿರುವರೋ ಎನ್ನುವಂತೆ ಮದಿಸಿದ ಆನೆಗಳು ಅಲ್ಲಲ್ಲಿ ಸಂಭ್ರಾಂತಗೊಂಡು ಓಡುತ್ತಿದ್ದವು.

08017103a ಭಿನ್ನಕುಂಭಾ ವಿರುಧಿರಾಶ್ಚಿನ್ನಹಸ್ತಾಶ್ಚ ವಾರಣಾಃ।
08017103c ಭಿನ್ನಗಾತ್ರವರಾಶ್ಚೈವ ಚ್ಚಿನ್ನವಾಲಾಶ್ಚ ಮಾರಿಷ।
08017103e ಚಿನ್ನಾಭ್ರಾಣೀವ ಸಂಪೇತುರ್ವಧ್ಯಮಾನಾ ಮಹಾತ್ಮನಾ।।

ಮಾರಿಷ! ಕುಂಭಗಳೊಡೆದು ಮತ್ತು ಸೊಂಡಿಲುಗಳು ಕತ್ತರಿಸಲ್ಪಟ್ಟು ಆನೆಗಳು ರಕ್ತವನ್ನು ಸುರಿಸುತ್ತಿದ್ದವು. ಮಹಾತ್ಮ ಕರ್ಣನಿಂದ ವಧಿಸಲ್ಪಡುತ್ತಿದ್ದ ಆ ಆನೆಗಳ ಅಂಗಾಂಗಗಳೂ ಸೊಂಡಿಲುಗಳೂ ತುಂಡಾಗಿ ಚದುರಿಹೋದ ಮೋಡಗಳಂತೆ ಕೆಳಗೆ ಬೀಳುತ್ತಿದ್ದವು.

08017104a ಅಪರೇ ತ್ರಾಸಿತಾ ನಾಗಾ ನಾರಾಚಶತತೋಮರೈಃ।
08017104c ತಮೇವಾಭಿಮುಖಾ ಯಾಂತಿ ಶಲಭಾ ಇವ ಪಾವಕಂ।।

ಇತರ ಆನೆಗಳು ನೂರಾರು ನಾರಾಚ-ತೋಮರಗಳಿಂದ ಪೀಡಿತಗೊಂಡು ದೀಪದ ಹುಳುಗಳು ಬೆಂಕಿಯಲ್ಲಿ ಬೀಳುವಂತೆ ಕರ್ಣನನ್ನೇ ಎದುರಿಸಿ ಬಂದು ಬೀಳುತ್ತಿದ್ದವು.

08017105a ಅಪರೇ ನಿಷ್ಟನಂತಃ ಸ್ಮ ವ್ಯದೃಶ್ಯಂತ ಮಹಾದ್ವಿಪಾಃ।
08017105c ಕ್ಷರಂತಃ ಶೋಣಿತಂ ಗಾತ್ರೈರ್ನಗಾ ಇವ ಜಲಪ್ಲವಂ।।

ಇನ್ನು ಇತರ ಮಹಾಗಜಗಳು ಜೋರಾಗಿ ಕೂಗಿಕೊಳ್ಳುತ್ತಾ ಪರ್ವತಗಳು ನೀರನ್ನು ಸ್ರವಿಸುವಂತೆ ರಕ್ತವನ್ನು ಸುರಿಸುತ್ತಾ ಓಡಿ ಹೋಗುತ್ತಿದ್ದವು.

08017106a ಉರಶ್ಚದೈರ್ವಿಮುಕ್ತಾಶ್ಚ ವಾಲಬಂದೈಶ್ಚ ವಾಜಿನಃ।
08017106c ರಾಜತೈಶ್ಚ ತಥಾ ಕಾಂಸ್ಯೈಃ ಸೌವರ್ಣೈಶ್ಚೈವ ಭೂಷಣೈಃ।।

ಕುದುರೆಗಳ ಎದೆಮುಚ್ಚುವ ಕವಚಗಳು, ಬಾಲಬಂಧಗಳು, ಬೆಳ್ಳಿ-ಕಂಚು-ಸುವರ್ಣಗಳಿಂದ ಮಾಡಿದ ಭೂಷಣಗಳು ತುಂಡಾಗಿ ಬಿದ್ದಿದ್ದವು.

08017107a ಹೀನಾ ಆಸ್ತರಣೈಶ್ಚೈವ ಖಲೀನೈಶ್ಚ ವಿವರ್ಜಿತಾಃ।
08017107c ಚಾಮರೈಶ್ಚ ಕುಥಾಭಿಶ್ಚ ತೂಣೀರೈಃ ಪತಿತೈರಪಿ।।

ಕುದುರೆಗಳ ಕಡಿವಾಣಗಳೇ ಇರಲಿಲ್ಲ. ಕುದುರೆಗಳ ಮೇಲಿದ್ದ ಚಾಮರಗಳೂ, ರತ್ನಗಂಬಳಿಗಳೂ, ಬತ್ತಳಿಕೆಗಳೂ ಕೆಳಗೆ ಬಿದ್ದುಹೋಗಿದ್ದವು.

08017108a ನಿಹತೈಃ ಸಾದಿಭಿಶ್ಚೈವ ಶೂರೈರಾಹವಶೋಭಿಭಿಃ।
08017108c ಅಪಶ್ಯಾಮ ರಣೇ ತತ್ರ ಭ್ರಾಂಯಮಾಣಾನ್ ಹಯೋತ್ತಮಾನ್।।

ಯುದ್ಧಶೋಭನ ಶೂರ ಕುದುರೆಸವಾರರೂ ಹತರಾಗಿದ್ದರು. ಅಲ್ಲಿ ರಣದಲ್ಲಿ ಉತ್ತಮ ಕುದುರೆಗಳು ಸುತ್ತಲೂ ತಿರುಗಾಡುತ್ತಿರುವುದನ್ನು ನೋಡಿದೆವು.

08017109a ಪ್ರಾಸೈಃ ಖಡ್ಗೈಶ್ಚ ಸಂಸ್ಯೂತಾನೃಷ್ಟಿಭಿಶ್ಚ ನರಾಧಿಪ।
08017109c ಹಯಯೋಧಾನಪಶ್ಯಾಮ ಕಂಚುಕೋಷ್ಣೀಷಧಾರಿಣಃ।।

ನರಾಧಿಪ! ಕವಚ ಉಷ್ಣೀಷಗಳನ್ನು ಧರಿಸಿದ್ದ ಕುದುರೆಯೋಧರು ಪ್ರಾಸ, ಖಡ್ಗ, ಋಷ್ಟಿ ಇವೇ ಮೊದಲಾದ ಆಯುಧಗಳಿಂದ ವಿಹೀನರಾಗಿ ಬೀಳುತ್ತಿರುವುದನ್ನು ಕಂಡೆವು.

08017110a ರಥಾನ್ ಹೇಮಪರಿಷ್ಕಾರಾನ್ಸುಯುಕ್ತಾಂ ಜವನೈರ್ಹಯೈಃ।
08017110c ಭ್ರಮಮಾಣಾನಪಶ್ಯಾಮ ಹತೇಷು ರಥಿಷು ದ್ರುತಂ।।

ರಥಿಗಳು ಹತರಾಗಿ ವೇಗವಾಗಿ ಹೋಗುವ ಕುದುರೆಗಳನ್ನು ಕಟ್ಟಲ್ಪಟ್ಟು ಅಲ್ಲಲ್ಲಿ ತಿರುಗುತ್ತಿದ್ದ ಹೇಮಭೂಷಿತ ರಥಗಳನ್ನು ನಾವು ನೋಡಿದೆವು.

08017111a ಭಗ್ನಾಕ್ಷಕೂಬರಾನ್ಕಾಂಶ್ಚಿಚ್ಚಿನ್ನಚಕ್ರಾಂಶ್ಚ ಮಾರಿಷ।
08017111c ವಿಪತಾಕಾಧ್ವಜಾಂಶ್ಚಾನ್ಯಾಂ ಚಿನ್ನೇಷಾಯುಗಬಂದುರಾನ್।।

ಮಾರಿಷ! ಅವುಗಳ ಅಚ್ಚುಮರಗಳು ಮತ್ತು ಮೂಕಿಗಳು ಮುರಿದುಹೋಗಿದ್ದವು. ಕೆಲವು ರಥಗಳ ಚಕ್ರಗಳೂ ಮುರಿದಿದ್ದವು. ಪತಾಕೆ-ಧ್ವಜಗಳಿಲ್ಲದೇ ಸುಂದರ ಈಷಾದಂಡಗಳು ಮುರಿದುಹೋಗಿದ್ದ ಅನೇಕ ರಥಗಳನ್ನು ಕಂಡೆವು.

08017112a ವಿಹೀನಾನ್ರಥಿನಸ್ತತ್ರ ಧಾವಮಾನಾನ್ಸಮಂತತಃ।
08017112c ಸೂರ್ಯಪುತ್ರಶರೈಸ್ತ್ರಸ್ತಾನಪಶ್ಯಾಮ ವಿಶಾಂ ಪತೇ।।
08017113a ವಿಶಸ್ತ್ರಾಂಶ್ಚ ತಥೈವಾನ್ಯಾನ್ಸಶಸ್ತ್ರಾಂಶ್ಚ ಬಹೂನ್ ಹತಾನ್।
08017113c ತಾವಕಾಂ ಜಾಲಸಂಚನ್ನಾನುರೋಘಂಟಾವಿಭೂಷಿತಾನ್।।

ವಿಶಾಂಪತೇ! ಸೂರ್ಯಪುತ್ರನ ಶರಗಳಿಂದ ಪೀಡಿತ ರಥಿಗಳು ರಥಗಳಿಂದ ವಿಹೀನರಾಗಿ, ಶಸ್ತ್ರಗಳನ್ನು ಕಳೆದುಕೊಂಡು, ಅನ್ಯರು ಶಸ್ತ್ರಗಳೊಂದಿಗೆ ಹತರಾಗಿ, ನಕ್ಷತ್ರಜಾಲಗಳ ಚಿಹ್ನೆಗಳುಳ್ಳ ಪತಾಕೆಗಳಿಂದ ಮತ್ತು ಉತ್ತಮ ಘಂಟೆಗಳಿಂದ ಸುಶೋಭಿತ ರಥಗಳಲ್ಲಿ ಎಲ್ಲಕಡೆ ಓಡಿ ಹೋಗುತ್ತಿರುವುದನ್ನು ನಾವು ನೋಡಿದೆವು.

08017114a ನಾನಾವರ್ಣವಿಚಿತ್ರಾಭಿಃ ಪತಾಕಾಭಿರಲಂಕೃತಾನ್।
08017114c ಪದಾತೀನನ್ವಪಶ್ಯಾಮ ಧಾವಮಾನಾನ್ಸಮಂತತಃ।।

ನಾನಾವರ್ಣದ ವಿಚಿತ್ರ ಪತಾಕೆಗಳಿಂದ ಅಲಂಕೃತರಾದ ಪದಾತಿಗಳು ಎಲ್ಲ ಕಡೆ ಓಡಿಹೋಗುತ್ತಿರುವುದನ್ನು ನಾವು ನೋಡಿದೆವು.

08017115a ಶಿರಾಂಸಿ ಬಾಹೂನೂರೂಂಶ್ಚ ಚಿನ್ನಾನನ್ಯಾಂಸ್ತಥಾ ಯುಧಿ।
08017115c ಕರ್ಣಚಾಪಚ್ಯುತೈರ್ಬಾಣೈರಪಶ್ಯಾಮ ವಿನಾಕೃತಾನ್।।

ಯುದ್ಧದಲ್ಲಿ ಕರ್ಣನ ಧನುಸ್ಸಿನಿಂದ ಹೊರಟ ಬಾಣಗಳಿಂದ ತುಂಡಾಗಿ ಬೀಳುತ್ತಿದ್ದ ಅನೇಕ ಶಿರಗಳನ್ನೂ, ಬಾಹುಗಳನ್ನೂ, ತೊಡೆಗಳನ್ನೂ ಮತ್ತು ಕತ್ತರಿಸಲ್ಪಟ್ಟ ಇತರ ಅಂಗಾಂಗಗಳನ್ನು ನಾವು ಅಲ್ಲಿ ಕಂಡೆವು.

08017116a ಮಹಾನ್ವ್ಯತಿಕರೋ ರೌದ್ರೋ ಯೋಧಾನಾಮನ್ವದೃಶ್ಯತ।
08017116c ಕರ್ಣಸಾಯಕನುನ್ನಾನಾಂ ಹತಾನಾಂ ನಿಶಿತೈಃ ಶರೈಃ।।

ಕರ್ಣನ ನಿಶಿತ ಸಾಯಕ ಶರಗಳಿಂದ ಹತರಾಗುತ್ತಿದ್ದ ಯೋಧರು ರೌದ್ರರಾಗಿ ಮಹಾ ಭಯಂಕರರಾಗಿ ಕಾಣುತ್ತಿದ್ದರು.

08017117a ತೇ ವಧ್ಯಮಾನಾಃ ಸಮರೇ ಸೂತಪುತ್ರೇಣ ಸೃಂಜಯಾಃ।
08017117c ತಮೇವಾಭಿಮುಖಾ ಯಾಂತಿ ಪತಂಗಾ ಇವ ಪಾವಕಂ।।

ದೀಪದ ಹುಳುಗಳು ಬೆಂಕಿಯಲ್ಲಿ ಬೀಳುವಂತೆ ಸಮರದಲ್ಲಿ ಸೂತಪುತ್ರನಿಂದ ವಧಿಸಲ್ಪಡುತ್ತಿದ್ದ ಸೃಂಜಯರು ಅವನಿಗೇ ಅಭಿಮುಖರಾಗಿ ಬಂದು ಬೀಳುತ್ತಿದ್ದರು.

08017118a ತಂ ದಹಂತಮನೀಕಾನಿ ತತ್ರ ತತ್ರ ಮಹಾರಥಂ।
08017118c ಕ್ಷತ್ರಿಯಾ ವರ್ಜಯಾಮಾಸುರ್ಯುಗಾಂತಾಗ್ನಿಮಿವೋಲ್ಬಣಂ।।

ಅಲ್ಲಲ್ಲಿ ಸೇನೆಗಳನ್ನು ಸುಡುತ್ತಿದ್ದ ಆ ಮಹಾರಥ ಕರ್ಣನನ್ನು ಯುಗಾಂತ ಕಾಲದಲ್ಲಿ ಪ್ರಚಂಡ ಅಗ್ನಿಯಿಂದ ಪ್ರಾಣಿಗಳು ದೂರವಿರುವಂತೆ ಕ್ಷತ್ರಿಯರು ಬಿಟ್ಟು ದೂರಸರಿಯುತ್ತಿದ್ದರು.

08017119a ಹತಶೇಷಾಸ್ತು ಯೇ ವೀರಾಃ ಪಾಂಚಾಲಾನಾಂ ಮಹಾರಥಾಃ।
08017119c ತಾನ್ಪ್ರಭಗ್ನಾನ್ದ್ರುತಾನ್ಕರ್ಣಃ ಪೃಷ್ಠತೋ ವಿಕಿರಂ ಶರೈಃ।
08017119e ಅಭ್ಯಧಾವತ ತೇಜಸ್ವೀ ವಿಶೀರ್ಣಕವಚಧ್ವಜಾನ್।।

ಹತರಾಗದೇ ಉಳಿದು ಓಡಿ ಹೋಗುತ್ತಿದ್ದ ಮಹಾರಥ ಪಾಂಚಾಲ ವೀರರನ್ನು ತೇಜಸ್ವೀ ಕರ್ಣನು ಬೆನ್ನಟ್ಟಿ ಹೋಗಿ ಶರಗಳನ್ನು ಎರಚಿ ಅವರ ಕವಚ-ಧ್ವಜಗಳನ್ನು ಕತ್ತರಿಸಿ ಹಾಕಿದನು.

08017120a ತಾಪಯಾಮಾಸ ತಾನ್ಬಾಣೈಃ ಸೂತಪುತ್ರೋ ಮಹಾರಥಃ।
08017120c ಮಧ್ಯಂದಿನಮನುಪ್ರಾಪ್ತೋ ಭೂತಾನೀವ ತಮೋನುದಃ।।

ಮಹಾರಥ ಸೂತಪುತ್ರನು ಮಧ್ಯಾಹ್ನದ ಸಮಯದಲ್ಲಿ ಸೂರ್ಯನು ಭೂತಗಳನ್ನು ಹೇಗೆ ಪರಿತಪಿಸುತ್ತಾನೋ ಹಾಗೆ ಅವರನ್ನು ಬಾಣಗಳಿಂದ ಪರಿತಾಪಗೊಳಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಕರ್ಣಯುದ್ಧೇ ಸಪ್ತದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಕರ್ಣಯುದ್ಧ ಎನ್ನುವ ಹದಿನೇಳನೇ ಅಧ್ಯಾಯವು.