016 ಸಂಕುಲಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ಕರ್ಣವಧ ಪರ್ವ

ಅಧ್ಯಾಯ 16

ಸಾರ

ಕರ್ಣನು ಪಾಂಡವಸೇನೆಯನ್ನು ಧ್ವಂಸಗೊಳಿಸಿದುದು (1-38).

08016001 ಧೃತರಾಷ್ಟ್ರ ಉವಾಚ।
08016001a ಪಾಂಡ್ಯೇ ಹತೇ ಕಿಮಕರೋದರ್ಜುನೋ ಯುಧಿ ಸಂಜಯ।
08016001c ಏಕವೀರೇಣ ಕರ್ಣೇನ ದ್ರಾವಿತೇಷು ಪರೇಷು ಚ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ಯುದ್ಧದಲ್ಲಿ ಪಾಂಡ್ಯನು ಹತನಾಗಲು ಏಕವೀರ ಕರ್ಣನಿಂದ ಶತ್ರುಗಳು ಓಡಿಹೋಗುತ್ತಿರಲು ಅರ್ಜುನನು ಏನು ಮಾಡಿದನು?

08016002a ಸಮಾಪ್ತವಿದ್ಯೋ ಬಲವಾನ್ಯುಕ್ತೋ ವೀರಶ್ಚ ಪಾಂಡವಃ।
08016002c ಸರ್ವಭೂತೇಷ್ವನುಜ್ಞಾತಃ ಶಂಕರೇಣ ಮಹಾತ್ಮನಾ।।

ಪಾಂಡವ ಅರ್ಜುನನು ವಿದ್ಯಾಸಂಪನ್ನನು, ಬಲವಾನನು, ಮತ್ತು ವೀರನು. ಮಹಾತ್ಮ ಶಂಕರನಿಂದಲೇ ಸರ್ವಭೂತಗಳಿಗೂ ಅಜೇಯನೆಂದು ಹೇಳಿಸಿಕೊಂಡಿರುವನು.

08016003a ತಸ್ಮಾನ್ಮಹದ್ಭಯಂ ತೀವ್ರಮಮಿತ್ರಘ್ನಾದ್ಧನಂಜಯಾತ್।
08016003c ಸ ಯತ್ತತ್ರಾಕರೋತ್ಪಾರ್ಥಸ್ತನ್ಮಮಾಚಕ್ಷ್ವ ಸಂಜಯ।।

ಆದುದರಿಂದಲೇ ಅಮಿತ್ರಘ್ನ ಧನಂಜಯನಿಂದಲೇ ನನಗೆ ತೀವ್ರವಾದ ಮಹಾಭಯವಾಗುತ್ತದೆ. ಆ ಪಾರ್ಥನು ಯಾವ ಪ್ರಯತ್ನವನ್ನು ಮಾಡಿದನೆಂದು ನನಗೆ ಹೇಳು ಸಂಜಯ!”

08016004 ಸಂಜಯ ಉವಾಚ।
08016004a ಹತೇ ಪಾಂಡ್ಯೇಽರ್ಜುನಂ ಕೃಷ್ಣಸ್ತ್ವರನ್ನಾಹ ವಚೋ ಹಿತಂ।
08016004c ಪಶ್ಯಾತಿಮಾನ್ಯಂ ರಾಜಾನಮಪಯಾತಾಂಶ್ಚ ಪಾಂಡವಾನ್।।

ಸಂಜಯನು ಹೇಳಿದನು: “ಅತಿಮಾನ್ಯ ಪಾಂಡ್ಯರಾಜನು ಕೆಳಗುರುಳಿಸಲ್ಪಡಲು ಕೃಷ್ಣನು ಅರ್ಜುನನಿಗೆ ಪಾಂಡವರಿಗೆ ಹಿತಕರವಾಗುವ ಈ ಮಾತುಗಳನ್ನಾಡಿದನು:

08016005a ಅಶ್ವತ್ಥಾಮ್ನಶ್ಚ ಸಂಕಲ್ಪಾದ್ಧತಾಃ ಕರ್ಣೇನ ಸೃಂಜಯಾಃ।
08016005c ತಥಾಶ್ವನರನಾಗಾನಾಂ ಕೃತಂ ಚ ಕದನಂ ಮಹತ್।।

“ಅಶ್ವತ್ಥಾಮನ ಸಂಕಲ್ಪದಂತೆ ಕರ್ಣನು ಸೃಂಜಯರನ್ನು ಸಂಹರಿಸಿ ಅಶ್ವ-ನರ-ಗಜಗಳ ಮಹಾ ಕದನವನ್ನೇ ಎಸಗಿದ್ದಾನೆ.”

08016005e ಇತ್ಯಾಚಷ್ಟ ಸುದುರ್ಧರ್ಷೋ ವಾಸುದೇವಃ ಕಿರೀಟಿನೇ।।
08016006a ಏತಚ್ಚ್ರುತ್ವಾ ಚ ದೃಷ್ಟ್ವಾ ಚ ಭ್ರಾತುರ್ಘೋರಂ ಮಹದ್ಭಯಂ।
08016006c ವಾಹಯಾಶ್ವಾನ್ ಹೃಷೀಕೇಶ ಕ್ಷಿಪ್ರಮಿತ್ಯಾಹ ಪಾಂಡವಃ।।

ದುರ್ಧರ್ಷ ವಾಸುದೇವನು ಕಿರೀಟಿಗೆ ಇದನ್ನು ಹೇಳಲು, ಅದನ್ನು ಕೇಳಿದ ಮತ್ತು ನೋಡಿದ ಪಾಂಡವನು ಅಣ್ಣನಿಗೊದಗಿದ ಮಹಾ ಘೋರ ಭಯದಿಂದಾಗಿ “ಹೃಷೀಕೇಶ! ಕುದುರೆಗಳನ್ನು ಮುಂದೆ ನಡೆಸು!” ಎಂದನು.

08016007a ತತಃ ಪ್ರಾಯಾದ್ಧೃಷೀಕೇಶೋ ರಥೇನಾಪ್ರತಿಯೋಧಿನಾ।
08016007c ದಾರುಣಶ್ಚ ಪುನಸ್ತತ್ರ ಪ್ರಾದುರಾಸೀತ್ಸಮಾಗಮಃ।।

ಆಗ ಹೃಷೀಕೇಶನು ಅಪ್ರತಿಯೋಧೀ ರಥವನ್ನು ಮುಂದುವರೆಸಿದನು. ಪುನಃ ಅಲ್ಲಿ ದಾರುಣ ಸಂಗ್ರಾಮವು ಪ್ರಾರಂಭವಾಯಿತು.

08016008a ತತಃ ಪ್ರವವೃತೇ ಭೂಯಃ ಸಂಗ್ರಾಮೋ ರಾಜಸತ್ತಮ।
08016008c ಕರ್ಣಸ್ಯ ಪಾಂಡವಾನಾಂ ಚ ಯಮರಾಷ್ಟ್ರವಿವರ್ಧನಃ।।

ರಾಜಸತ್ತಮ! ಆಗ ಪುನಃ ಯಮರಾಷ್ಟ್ರವಿವರ್ಧನ ಸಂಗ್ರಾಮವು ಕರ್ಣ ಮತ್ತು ಪಾಂಡವರ ನಡುವೆ ಪ್ರಾರಂಭವಾಯಿತು.

08016009a ಧನೂಂಷಿ ಬಾಣಾನ್ಪರಿಘಾನಸಿತೋಮರಪಟ್ಟಿಶಾನ್।
08016009c ಮುಸಲಾನಿ ಭುಶುಂಡೀಶ್ಚ ಶಕ್ತಿ‌ಋಷ್ಟಿಪರಶ್ವಧಾನ್।।
08016010a ಗದಾಃ ಪ್ರಾಸಾನಸೀನ್ಕುಂತಾನ್ಭಿಂಡಿಪಾಲಾನ್ಮಹಾಂಕುಶಾನ್।
08016010c ಪ್ರಗೃಹ್ಯ ಕ್ಷಿಪ್ರಮಾಪೇತುಃ ಪರಸ್ಪರಜಿಗೀಷಯಾ।।

ಪರಸ್ಪರರನ್ನು ಸಂಹರಿಸಲು ಬಯಸಿದ ಅವರು ಧನುಸ್ಸು, ಬಾಣ, ಪರಿಘ, ಖಡ್ಗ, ತೋಮರ, ಪಟ್ಟಿಶ, ಮುಸಲ, ಭುಶುಂಡೀ, ಶಕ್ತಿ, ಋಷ್ಟಿ, ಪರಶು, ಗದ, ಪ್ರಾಸ, ಕುಂತ, ಭಿಂಡಿಪಾಲ ಮತ್ತು ಮಹಾ ಅಂಕುಶಗಳನ್ನು ಹಿಡಿದು ಎಸೆಯುತ್ತಿದ್ದರು.

08016011a ಬಾಣಜ್ಯಾತಲಶಬ್ದೇನ ದ್ಯಾಂ ದಿಶಃ ಪ್ರದಿಶೋ ವಿಯತ್।
08016011c ಪೃಥಿವೀಂ ನೇಮಿಘೋಷೇಣ ನಾದಯಂತೋಽಭ್ಯಯುಃ ಪರಾನ್।।

ಬಾಣ-ಶಿಂಜಿನಿ-ಧನುಸ್ಸುಗಳ ಶಬ್ಧದಿಂದ ಆಕಾಶ-ದಿಕ್ಕು-ಉಪದಿಕ್ಕುಗಳನ್ನು ಮೊಳಗಿಸುತ್ತಾ, ರಥಚಕ್ರಗಳ ಘೋಷದಿಂದ ಭೂಮಿಯನ್ನು ಮೊಳಗಿಸುತ್ತಾ, ಸಿಂಹನಾದಗೈಯುತ್ತಾ ಅವರು ಶತ್ರುಗಳ ಮೇಲೆ ಆಕ್ರಮಣಿಸಿದರು.

08016012a ತೇನ ಶಬ್ದೇನ ಮಹತಾ ಸಂಹೃಷ್ಟಾಶ್ಚಕ್ರುರಾಹವಂ।
08016012c ವೀರಾ ವೀರೈರ್ಮಹಾಘೋರಂ ಕಲಹಾಂತಂ ತಿತೀರ್ಷವಃ।।

ಆ ಮಹಾಘೋರ ಕಲಹದ ಕೊನೆಗಾಣಬೇಕೆಂಬ ಇಚ್ಛೆಯಿಂದ ವೀರರು ಆ ಮಹಾಶಬ್ಧದಿಂದ ಸಂಪ್ರಹೃಷ್ಟರಾಗಿ ವೀರತನದಿಂದ ಸಂಗ್ರಾಮವನ್ನು ನಡೆಸಿದರು.

08016013a ಜ್ಯಾತಲತ್ರಧನುಃಶಬ್ದಾಃ ಕುಂಜರಾಣಾಂ ಚ ಬೃಂಹಿತಂ।
08016013c ತಾಡಿತಾನಾಂ ಚ ಪತತಾಂ ನಿನಾದಃ ಸುಮಹಾನಭೂತ್।।

ಧನುಸ್ಸಿನ ಟೇಂಕಾರಗಳು, ಆನೆಗಳ ಘೀಳುಗಳು, ಹೊಡೆಯುವವರ ಮತ್ತು ಬೀಳುವವರ ನಿನಾದವು ಅತಿಯಾಗಿತ್ತು.

08016014a ಬಾಣಶಬ್ಧಾಂಶ್ಚ ವಿವಿಧಾಂ ಶೂರಾಣಾಮಭಿಗರ್ಜತಾಂ।
08016014c ಶ್ರುತ್ವಾ ಶಬ್ಧಂ ಭೃಶಂ ತ್ರೇಸುರ್ಜಘ್ನುರ್ಮಮ್ಲುಶ್ಚ ಭಾರತ।।

ಭಾರತ! ಬಾಣಗಳ ಶಬ್ಧಗಳು ಮತ್ತು ಶೂರರ ವಿವಿಧ ಗರ್ಜನೆಗಳ ಶಬ್ಧಗಳನ್ನು ಕೇಳಿ ಕೆಲವರು ನಡುಗಿ ಅಸುನೀಗಿದರು ಮತ್ತು ಕೆಲವರು ಮೂರ್ಛೆ ಹೋದರು.

08016015a ತೇಷಾಂ ನಾನದ್ಯತಾಂ ಚೈವ ಶಸ್ತ್ರವೃಷ್ಟಿಂ ಚ ಮುಂಚತಾಂ।
08016015c ಬಹೂಆಧಿರಥಿಃ ಕರ್ಣಃ ಪ್ರಮಮಾಥ ರಣೇಷುಭಿಃ।।

ರಣದಲ್ಲಿ ಹಾಗೆ ಸಿಂಹನಾದಗೈಯುತ್ತಾ ಶಸ್ತ್ರವೃಷ್ಟಿಯನ್ನು ಸುರಿಸುತ್ತಿದ್ದ ಅನೇಕ ಸೈನಿಕರನ್ನು ಆಧಿರಥಿ ಕರ್ಣನು ಬಾಣಗಳಿಂದ ಸದೆಬಡಿದನು.

08016016a ಪಂಚ ಪಾಂಚಾಲವೀರಾಣಾಂ ರಥಾನ್ದಶ ಚ ಪಂಚ ಚ।
08016016c ಸಾಶ್ವಸೂತಧ್ವಜಾನ್ಕರ್ಣಃ ಶರೈರ್ನಿನ್ಯೇ ಯಮಕ್ಷಯಂ।।

ಕರ್ಣನು ಶರಗಳಿಂದ ಅಶ್ವ-ಸೂತ-ಧ್ವಜಗಳೊಂದಿಗೆ ಪಾಂಚಾಲ ವೀರರ ಐದು, ನಂತರ ಹತ್ತು ಮತ್ತು ಐದು ರಥಗಳನ್ನು ಯಮಕ್ಷಯಕ್ಕೆ ಕಳುಹಿಸಿದನು.

08016017a ಯೋಧಮುಖ್ಯಾ ಮಹಾವೀರ್ಯಾಃ ಪಾಂಡೂನಾಂ ಕರ್ಣಮಾಹವೇ।
08016017c ಶೀಘ್ರಾಸ್ತ್ರಾ ದಿವಮಾವೃತ್ಯ ಪರಿವವ್ರುಃ ಸಮಂತತಃ।।

ಮಹಾವೀರ್ಯ ಪಾಂಡವ ಯೋಧಮುಖ್ಯರು ರಣದಲ್ಲಿ ಶೀಘ್ರವಾಗಿ ಅಸ್ತ್ರಗಳಿಂದ ಆಕಾಶವನ್ನು ಮುಚ್ಚುತ್ತಾ ಕರ್ಣನನ್ನು ಎಲ್ಲಕಡೆಗಳಿಂದ ಸುತ್ತುವರೆದರು.

08016018a ತತಃ ಕರ್ಣೋ ದ್ವಿಷತ್ಸೇನಾಂ ಶರವರ್ಷೈರ್ವಿಲೋಡಯನ್।
08016018c ವಿಜಗಾಹೇಽಮ್ಡಡಜಾಪೂರ್ಣಾಂ ಪದ್ಮಿನೀಮಿವ ಯೂಥಪಃ।।

ಆಗ ಕರ್ಣನು ಶರವರ್ಷಗಳಿಂದ ಅಲ್ಲೋಲಕಲ್ಲೋಲಗೊಳಿಸುತ್ತಾ ಕಮಲ-ಪಕ್ಷಿಗಳಿಂದ ಕೂಡಿದ ಸರೋವರವನ್ನು ಸಲಗವು ಹೇಗೋ ಹಾಗೆ ಶತ್ರುಸೇನೆಯನ್ನು ಹೊಕ್ಕನು.

08016019a ದ್ವಿಷನ್ಮಧ್ಯಮವಸ್ಕಂದ್ಯ ರಾಧೇಯೋ ಧನುರುತ್ತಮಂ।
08016019c ವಿಧುನ್ವಾನಃ ಶಿತೈರ್ಬಾಣೈಃ ಶಿರಾಂಸ್ಯುನ್ಮಥ್ಯ ಪಾತಯತ್।।

ಶತ್ರುಸೇನೆಯ ಮಧ್ಯಹೋಗಿ ರಾಧೇಯನು ಉತ್ತಮ ಧನುಸ್ಸನ್ನು ಟೇಂಕರಿಸುತ್ತಾ ನಿಶಿತ ಬಾಣಗಳಿಂದ ಶಿರಗಳನ್ನು ಕತ್ತರಿಸುತ್ತಾ ಬೀಳಿಸುತ್ತಿದ್ದನು.

08016020a ಚರ್ಮವರ್ಮಾಣಿ ಸಂಚಿಂದ್ಯ ನಿರ್ವಾಪಮಿವ ದೇಹಿನಾಂ।
08016020c ವಿಷೇಹುರ್ನಾಸ್ಯ ಸಂಪರ್ಕಂ ದ್ವಿತೀಯಸ್ಯ ಪತತ್ರಿಣಃ।।

ಉಸಿರಿಲ್ಲದ ಶರೀರಗಳಿಂದಲೋ ಎನ್ನುವಂತೆ ಸೈನಿಕರ ಕವಚ-ಗುರಾಣಿಗಳನ್ನು ತುಂಡರಿಸುವ ಕರ್ಣನ ಎರಡನೆಯ ಬಾಣವನ್ನು ಯಾರಿಗೂ ಸಹಿಸಿಕೊಳ್ಳಲಾಗುತ್ತಿರಲಿಲ್ಲ.

08016021a ವರ್ಮದೇಹಾಸುಮಥನೈರ್ಧನುಷಃ ಪ್ರಚ್ಯುತೈಃ ಶರೈಃ।
08016021c ಮೌರ್ವ್ಯಾ ತಲತ್ರೈರ್ನ್ಯವಧೀತ್ಕಶಯಾ ವಾಜಿನೋ ಯಥಾ।।

ಚಾವಟಿಯಿಂದ ಕುದುರೆಯನ್ನು ಹೊಡೆಯುವ ಹಾಗೆ ಅವನು ಧನುಸ್ಸಿನ ಶಿಂಜನಿಯಿಂದ ಪ್ರಯೋಗಿಸಿದ ಶರಗಳಿಂದ ಕವಚಗಳೊಂದಿಗೆ ಶರೀರಗಳನ್ನು ಮಥಿಸಿ ಸಂಹರಿಸಿದನು.

08016022a ಪಾಂಡುಸೃಂಜಯಪಾಂಚಾಲಾಂ ಶರಗೋಚರಮಾನಯತ್।
08016022c ಮಮರ್ದ ಕರ್ಣಸ್ತರಸಾ ಸಿಂಹೋ ಮೃಗಗಣಾನಿವ।।

ಸಿಂಹವು ಮೃಗಗಣಗಳನ್ನು ಕೂಡಲೇ ಕೊಲ್ಲುವಂತೆ ಕರ್ಣನು ತನ್ನ ಶರಕ್ಕೆ ಗೋಚರರಾದ ಪಾಂಡು-ಸೃಂಜಯ-ಪಾಂಚಾಲರನ್ನು ಸಂಹರಿಸಿದನು.

08016023a ತತಃ ಪಾಂಚಾಲಪುತ್ರಾಶ್ಚ ದ್ರೌಪದೇಯಾಶ್ಚ ಮಾರಿಷ।
08016023c ಯಮೌ ಚ ಯುಯುಧಾನಶ್ಚ ಸಹಿತಾಃ ಕರ್ಣಮಭ್ಯಯುಃ।।

ಮಾರಿಷ! ಆಗ ಪಾಂಚಾಲಪುತ್ರರು, ದ್ರೌಪದೇಯರು, ನಕುಲ-ಸಹದೇವರು ಮತ್ತು ಯುಯುಧಾನ ಸಾತ್ಯಕಿಯರು ಒಟ್ಟಿಗೇ ಕರ್ಣನನ್ನು ಆಕ್ರಮಣಿಸಿದರು.

08016024a ವ್ಯಾಯಚ್ಚಮಾನಾಃ ಸುಭೃಶಂ ಕುರುಪಾಂಡವಸೃಂಜಯಾಃ।
08016024c ಪ್ರಿಯಾನಸೂನ್ರಣೇ ತ್ಯಕ್ತ್ವಾ ಯೋಧಾ ಜಗ್ಮುಃ ಪರಸ್ಪರಂ।।

ಪರಿಶ್ರಮದಿಂದ ಹೋರಾಡುತ್ತಿದ್ದ ಕುರು-ಪಾಂಡವ-ಸೃಂಜಯ ಯೋಧರು ರಣದಲ್ಲಿ ತಮ್ಮ ಪ್ರಿಯ ಜೀವಗಳ ಮೇಲಿನ ಆಸೆಯನ್ನೂ ತೊರೆದು ಪರಸ್ಪರರ ಮೇಲೆ ಎರಗಿದರು.

08016025a ಸುಸಂನದ್ಧಾಃ ಕವಚಿನಃ ಸಶಿರಸ್ತ್ರಾಣಭೂಷಣಾಃ।
08016025c ಗದಾಭಿರ್ಮುಸಲೈಶ್ಚಾನ್ಯೇ ಪರಿಘೈಶ್ಚ ಮಹಾರಥಾಃ।।
08016026a ಸಮಭ್ಯಧಾವಂತ ಭೃಶಂ ದೇವಾ ದಂಡೈರಿವೋದ್ಯತೈಃ।
08016026c ನದಂತಶ್ಚಾಹ್ವಯಂತಶ್ಚ ಪ್ರವಲ್ಗಂತಶ್ಚ ಮಾರಿಷ।।

ಮಾರಿಷ! ಸುಸನ್ನದ್ಧ ಕವಚಧಾರೀ ಶಿರಸ್ತ್ರಾಣ-ಭೂಷಣಧಾರೀ ಮಹಾರಥರು ಗರ್ಜಿಸುತ್ತಾ, ಕರೆಯುತ್ತಾ ಮತ್ತು ಕುಪ್ಪಳಿಸುತ್ತಾ ಕಾಲದಂಡಗಳಂಥಹ ಗದೆ-ಮುಸಲ-ಪರಿಘ ಮತ್ತು ಅನ್ಯ ಆಯುಧಗಳನ್ನು ಮೇಲೆತ್ತಿ ಆಕ್ರಮಣಿಸುತ್ತಿದ್ದರು.

08016027a ತತೋ ನಿಜಘ್ನುರನ್ಯೋನ್ಯಂ ಪೇತುಶ್ಚಾಹವತಾಡಿತಾಃ।
08016027c ವಮಂತೋ ರುಧಿರಂ ಗಾತ್ರೈರ್ವಿಮಸ್ತಿಷ್ಕೇಕ್ಷಣಾ ಯುಧಿ।।

ಆಗ ಅನ್ಯೋನ್ಯರನ್ನು ಹೊಡೆದು ಕೆಳಗುರುಳಿಸಲು ಅವರು ಶರೀರರಿಂದ ರಕ್ತವನ್ನು ಕಾರುತ್ತಾ ಮೆದುಳು ಕಣ್ಣುಗಳನ್ನು ಕಳೆದುಕೊಂಡು ಯುದ್ಧದಲ್ಲಿ ಬೀಳುತ್ತಿದ್ದರು.

08016028a ದಂತಪೂರ್ಣೈಃ ಸರುಧಿರೈರ್ವಕ್ತ್ರೈರ್ದಾಡಿಮಸಂನಿಭೈಃ।
08016028c ಜೀವಂತ ಇವ ಚಾಪ್ಯೇತೇ ತಸ್ಥುಃ ಶಸ್ತ್ರೋಪಬೃಂಹಿತಾಃ।।

ಶಸ್ತ್ರಗಳಿಂದ ಎಲ್ಲಾಕಡೆ ಚುಚ್ಚಲ್ಪಟ್ಟ ಕೆಲವರು ಜೀವವಿಲ್ಲದಿದ್ದರೂ ರಕ್ತದಿಂದ ತೋಯ್ದು ದಾಳಿಂಬೇಹಣ್ಣಿನಂತಹ ಹಲ್ಲುಗಳಿಂದ ಹೊಳೆಯುತ್ತಾ ಜೀವಂತವಿದ್ದಾರೋ ಎನ್ನುವಂತೆ ನಿಂತಿದ್ದರು.

08016029a ಪರಸ್ಪರಂ ಚಾಪ್ಯಪರೇ ಪಟ್ಟಿಶೈರಸಿಭಿಸ್ತಥಾ।
08016029c ಶಕ್ತಿಭಿರ್ಭಿಂಡಿಪಾಲೈಶ್ಚ ನಖರಪ್ರಾಸತೋಮರೈಃ।।
08016030a ತತಕ್ಷುಶ್ಚಿಚ್ಚಿದುಶ್ಚಾನ್ಯೇ ಬಿಭಿದುಶ್ಚಿಕ್ಷಿಪುಸ್ತಥಾ।
08016030c ಸಂಚಕರ್ತುಶ್ಚ ಜಘ್ನುಶ್ಚ ಕ್ರುದ್ಧಾ ನಿರ್ಬಿಭಿದುಶ್ಚ ಹ।।

ಕ್ರುದ್ಧ ಯೋಧರು ಪರಸ್ಪರರನ್ನು ಪಟ್ಟಿಶ, ಖಡ್ಗ, ಶಕ್ತಿ, ಭಿಂಡಿಪಾಲ, ನಖರ, ಪ್ರಾಸ ಮತ್ತು ತೋಮರಗಳಿಂದ ಕತ್ತರಿಸುತ್ತಿದ್ದರು, ದೂರಕ್ಕೆಸೆಯುತ್ತಿದ್ದರು, ತುಂಡು ತುಂಡು ಮಾಡುತ್ತಿದ್ದರು ಹಾಗೂ ಸಂಹರಿಸುತ್ತಿದ್ದರು.

08016031a ಪೇತುರನ್ಯೋನ್ಯನಿಹತಾ ವ್ಯಸವೋ ರುಧಿರೋಕ್ಷಿತಾಃ।
08016031c ಕ್ಷರಂತಃ ಸ್ವರಸಂ ರಕ್ತಂ ಪ್ರಕೃತಾಶ್ಚಂದನಾ ಇವ।।

ಚಂದನವೃಕ್ಷವು ಕತ್ತರಿಸಿದಾಗ ಕೆಂಪುಬಣ್ಣದ ರಸವನ್ನು ಸುರಿಸುವಂತೆ ಅನ್ಯೋನ್ಯರಿಂದ ಕಡಿಯಲ್ಪಟ್ಟವರು ರಕ್ತವನ್ನು ಸುರಿಸುತ್ತಾ ಕೆಳಗುರುಳುತ್ತಿದ್ದರು.

08016032a ರಥೈ ರಥಾ ವಿನಿಹತಾ ಹಸ್ತಿನಶ್ಚಾಪಿ ಹಸ್ತಿಭಿಃ।
08016032c ನರಾ ನರವರೈಃ ಪೇತುರಶ್ವಾಶ್ಚಾಶ್ವೈಃ ಸಹಸ್ರಶಃ।।

ಸಹಸ್ರಾರು ಸಂಖ್ಯೆಗಳಲ್ಲಿ ರಥಗಳು ರಥಗಳಿಂದಲೂ, ಆನೆಗಳು ಆನೆಗಳಿಂದಲೂ, ಮನುಷ್ಯರು ನರಶ್ರೇಷ್ಠರಿಂದಲೂ, ಕುದುರೆಗಳು ಕುದುರೆಗಳೂ ಹತಗೊಂಡು ಕೆಳಗುರುಳಿತ್ತಿದ್ದವು.

08016033a ಧ್ವಜಾಃ ಶಿರಾಂಸಿ ಚ್ಚತ್ರಾಣಿ ದ್ವಿಪಹಸ್ತಾ ನೃಣಾಂ ಭುಜಾಃ।
08016033c ಕ್ಷುರೈರ್ಭಲ್ಲಾರ್ಧಚಂದ್ರೈಶ್ಚ ಚಿನ್ನಾಃ ಶಸ್ತ್ರಾಣಿ ತತ್ಯಜುಃ।।

ಧ್ವಜಗಳು, ಶಿರಸ್ಸುಗಳು, ಛತ್ರಗಳು, ಆನೆಯ ಸೊಂಡಿಲುಗಳು, ಮನುಷ್ಯರ ಭುಜಗಳು, ಕ್ಷುರ-ಭಲ್ಲ-ಅರ್ಧಚಂದ್ರ ಶಸ್ತ್ರಗಳು ತುಂಡಾಗಿ ಬಿದ್ದಿದ್ದವು.

08016034a ನರಾಂಶ್ಚ ನಾಗಾಂಶ್ಚ ರಥಾನ್ ಹಯಾನ್ಮಮೃದುರಾಹವೇ।
08016034c ಅಶ್ವಾರೋಹೈರ್ಹತಾಃ ಶೂರಾಶ್ಚಿನ್ನಹಸ್ತಾಶ್ಚ ದಂತಿನಃ।।

ಯುದ್ಧದಲ್ಲಿ ನರರು, ಆನೆಗಳು, ರಥಗಳು, ಕುದುರೆಗಳು ಸದೆಬಡಿಯುತ್ತಿದ್ದವು. ಸಹಸ್ರಾರು ಆನೆಗಳು ಶೂರರು ಅಶ್ವಾರೋಹಿಗಳಿಂದ ತಮ್ಮ ಕೈ-ಸೊಂಡಿಲುಗಳನ್ನು ಕಳೆದುಕೊಂಡರು.

08016035a ಸಪತಾಕಾ ಧ್ವಜಾಃ ಪೇತುರ್ವಿಶೀರ್ಣಾ ಇವ ಪರ್ವತಾಃ।
08016035c ಪತ್ತಿಭಿಶ್ಚ ಸಮಾಪ್ಲುತ್ಯ ದ್ವಿರದಾಃ ಸ್ಯಂದನಾಸ್ತಥಾ।।

ಸೀಳಿಹೋದ ಪರ್ವತಗಳಂತೆ ಪತಾಕೆ-ಧ್ವಜಗಳ ಸಹಿತವಾಗಿ ಪದಾತಿಗಳು, ಅನೆಗಳು ಮತ್ತು ರಥಗಳು ಕೆಳಗುರುಳಿದವು.

08016036a ಪ್ರಹತಾ ಹನ್ಯಮಾನಾಶ್ಚ ಪತಿತಾಶ್ಚೈವ ಸರ್ವಶಃ।
08016036c ಅಶ್ವಾರೋಹಾಃ ಸಮಾಸಾದ್ಯ ತ್ವರಿತಾಃ ಪತ್ತಿಭಿರ್ಹತಾಃ।
08016036e ಸಾದಿಭಿಃ ಪತ್ತಿಸಂಘಾಶ್ಚ ನಿಹತಾ ಯುಧಿ ಶೇರತೇ।।

ಪ್ರಹರಿಸಿ ಸಂಹರಿಸುವವರು ಕೂಡ ಎಲ್ಲ ಕಡೆ ಬೀಳುತ್ತಿದ್ದರು. ಅಶ್ವಾರೋಹಿಗಳು ತ್ವರೆಮಾಡಿ ಪದಾತಿಗಳನ್ನು ಸಂಹರಿಸುತ್ತಿದ್ದರು. ಪದಾತಿ ಸಂಘಗಳೂ ಅಶ್ವಾರೋಹಿಗಳನ್ನು ಕೊಂದು ರಣದಲ್ಲಿ ಮಲಗಿಸುತ್ತಿದ್ದರು.

08016037a ಮೃದಿತಾನೀವ ಪದ್ಮಾನಿ ಪ್ರಮ್ಲಾನಾ ಇವ ಚ ಸ್ರಜಃ।
08016037c ಹತಾನಾಂ ವದನಾನ್ಯಾಸನ್ಗಾತ್ರಾಣಿ ಚ ಮಹಾಮತೇ।।

ಮಹಾಮತೇ! ಹತರಾಗಿ ಕೆಳಗೆ ಬಿದ್ದಿರುವ ಯೋಧರ ಮುಖಗಳೂ ದೇಹಗಳೂ ಹೊಸಕಿದ ಕಮಲಗಳಂತೆ ಮತ್ತು ಬಾಡಿಹೋದ ಹಾರಗಳಂತೆ ಕಾಣುತ್ತಿದ್ದವು.

08016038a ರೂಪಾಣ್ಯತ್ಯರ್ಥಕಾಂಯಾನಿ ದ್ವಿರದಾಶ್ವನೃಣಾಂ ನೃಪ।
08016038c ಸಮುನ್ನಾನೀವ ವಸ್ತ್ರಾಣಿ ಪ್ರಾಪುರ್ದುರ್ದರ್ಶತಾಂ ಪರಂ।।

ನೃಪ! ಆನೆ, ಕುದುರೆ ಮತ್ತು ಮನುಷ್ಯರ ಅತ್ಯಂತ ಸುಂದರ ರೂಪಗಳು ಆ ಸಮಯದಲ್ಲಿ ಕೆಸರಿನಲ್ಲಿ ಬಿದ್ದ ವಸ್ತ್ರಗಳಂತೆ ಕಣ್ಣಿಂದ ನೋಡಲಾರದಷ್ಟು ವಿಕಾರವಾಗಿದ್ದವು.”

ಸಮಾಪ್ತಿ ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಷೋಡಶೋಽಧ್ಯಾಯಃ।। ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ಹದಿನಾರನೇ ಅಧ್ಯಾಯವು.