012 ಅಶ್ವತ್ಥಾಮಪರಾಜಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ಕರ್ಣವಧ ಪರ್ವ

ಅಧ್ಯಾಯ 12

ಸಾರ

ಸಂಶಪ್ತಕರೊಡನೆ ಅರ್ಜುನನ ಯುದ್ಧ (1-16). ಅಶ್ವತ್ಥಾಮ-ಅರ್ಜುನರ ಕಡು ಯುದ್ಧ (17-68). ಕೃಷ್ಣಾರ್ಜುನರಿಗೇ ಜಯವು ಮೀಸಲಾಗಿದೆಯೆಂದು ನಿಶ್ಚಯಿಸಿ ಅಶ್ವತ್ಥಾಮನು ಯುದ್ಧದಿಂದ ಹಿಂದೆಸರಿದುದು (69-71).

08012001 ಧೃತರಾಷ್ಟ್ರ ಉವಾಚ।
08012001a ಯಥಾ ಸಂಶಪ್ತಕೈಃ ಸಾರ್ಧಮರ್ಜುನಸ್ಯಾಭವದ್ರಣಃ।
08012001c ಅನ್ಯೇಷಾಂ ಚ ಮದೀಯಾನಾಂ ಪಾಂಡವೈಸ್ತದ್ಬ್ರವೀಹಿ ಮೇ।।

ದೃತರಾಷ್ಟ್ರನು ಹೇಳಿದನು: “ಸಂಶಪ್ತಕರೊಡನೆ ಅರ್ಜುನನ ಯುದ್ಧವು ಹೇಗೆ ನಡೆಯಿತು ಮತ್ತು ನಮ್ಮ ಅನ್ಯರು ಮತ್ತು ಪಾಂಡವರೊಡನೆ ಯುದ್ಧವು ಹೇಗೆ ನಡೆಯಿತೆಂದು ನನಗೆ ಹೇಳು!”

08012002 ಸಂಜಯ ಉವಾಚ।
08012002a ಶೃಣು ರಾಜನ್ಯಥಾವೃತ್ತಂ ಸಂಗ್ರಾಮಂ ಬ್ರುವತೋ ಮಮ।
08012002c ವೀರಾಣಾಂ ಶತ್ರುಭಿಃ ಸಾರ್ಧಂ ದೇಹಪಾಪ್ಮಪ್ರಣಾಶನಂ।।

ಸಂಜಯನು ಹೇಳಿದನು: “ರಾಜನ್! ಶತ್ರುಗಳೊಡನೆ ದೇಹ, ಪಾಪ ಮತ್ತು ಪ್ರಾಣಗಳನ್ನು ನಾಶಗೊಳಿಸುವ ವೀರರ ಸಂಗ್ರಾಮವು ಹೇಗೆ ನಡೆಯಿತೆಂದು ನಾನು ಹೇಳುವುದನ್ನು ಕೇಳು.

08012003a ಪಾರ್ಥಃ ಸಂಶಪ್ತಕಗಣಂ ಪ್ರವಿಶ್ಯಾರ್ಣವಸಂನಿಭಂ।
08012003c ವ್ಯಕ್ಷೋಭಯದಮಿತ್ರಘ್ನೋ ಮಹಾವಾತ ಇವಾರ್ಣವಂ।।

ಅಮಿತ್ರಘ್ನ ಪಾರ್ಥನು ಸಾಗರಸನ್ನಿಭ ಸಂಶಪ್ತಕಗಣವನ್ನು ಪ್ರವೇಶಿಸಿ ಚಂಡಮಾರುತವು ಸಾಗರವನ್ನು ಅಲ್ಲೋಲಕಲ್ಲೋಲಗೊಳಿಸುವಂತೆ ಕ್ಷೋಭೆಗೊಳಿಸಿದನು.

08012004a ಶಿರಾಂಸ್ಯುನ್ಮಥ್ಯ ವೀರಾಣಾಂ ಶಿತೈರ್ಭಲ್ಲೈರ್ಧನಂಜಯಃ।
08012004c ಪೂರ್ಣಚಂದ್ರಾಭವಕ್ತ್ರಾಣಿ ಸ್ವಕ್ಷಿಭ್ರೂದಶನಾನಿ ಚ।
08012004e ಸಂತಸ್ತಾರ ಕ್ಷಿತಿಂ ಕ್ಷಿಪ್ರಂ ವಿನಾಲೈರ್ನಲಿನೈರಿವ।।

ಸುಂದರ ಕಣ್ಣುಗಳು, ಹುಬ್ಬು, ದಂತಪಂಗ್ತಿಗಳುಳ್ಳ ಪೂರ್ಣಚಂದ್ರದಂಥ ಮುಖವುಳ್ಳ ವೀರರ ಶಿರಗಳನ್ನು ನಿಶಿತ ಭಲ್ಲಗಳಿಂದ ಧನಂಜಯನು ಕತ್ತರಿಸಿ ನಾಳಗಳಿಲ್ಲದ ಕಮಲಗಳಂತೆ ಭೂಮಿಯ ಮೇಲೆ ಹರಡಿದನು.

08012005a ಸುವೃತ್ತಾನಾಯತಾನ್ಪುಷ್ಟಾಂಶ್ಚಂದನಾಗುರುಭೂಷಿತಾನ್।
08012005c ಸಾಯುಧಾನ್ಸತನುತ್ರಾಣಾನ್ಪಂಚಾಸ್ಯೋರಗಸಂನಿಭಾನ್।
08012005e ಬಾಹೂನ್ ಕ್ಷುರೈರಮಿತ್ರಾಣಾಂ ವಿಚಕರ್ತಾರ್ಜುನೋ ರಣೇ।।

ದುಂಡುದುಂಡಾಗಿರುವ ಹೂವು-ಚಂದನ-ಅಗರುಗಳಿಂದ ಭೂಷಿತಗೊಂಡಿದ್ದ, ಐದುಹೆಡೆಗಳ ಹಾವುಗಳಂತಿದ್ದ ಅಮಿತ್ರರ ಬಾಹುಗಳನ್ನು ಆಯುಧಗಳೊಂದಿಗೆ ಮತ್ತು ರಕ್ಷಣಾಚೀಲಗಳೊಂದಿಗೆ ಅರ್ಜುನನು ರಣದಲ್ಲಿ ಕ್ಷುರಗಳಿಂದ ಕತ್ತರಿಸಿದನು.

08012006a ಧುರ್ಯಾನ್ಧುರ್ಯತರಾನ್ಸೂತಾನ್ಧ್ವಜಾಂಶ್ಚಾಪಾನಿ ಸಾಯಕಾನ್।
08012006c ಪಾಣೀನರತ್ನೀನಸಕೃದ್ಭಲ್ಲೈಶ್ಚಿಚ್ಚೇದ ಪಾಂಡವಃ।।

ಕುದುರೆಗಳನ್ನೂ, ಕುದುರೆಗಳನ್ನು ಓಡಿಸುತ್ತಿದ್ದ ಸಾರಥಿಗಳನ್ನೂ, ಧ್ವಜಗಳನ್ನೂ, ಚಾಪಗಳನ್ನೂ, ಸಾಯಕಗಳನ್ನೂ, ರತ್ನದುಂಗುರಳನ್ನು ತೊಟ್ಟಿದ್ದ ಶತ್ರುಗಳ ಕೈಗಳನ್ನೂ ಪಾಂಡವನು ಭಲ್ಲಗಳಿಂದ ಕತ್ತರಿಸಿದನು.

08012007a ದ್ವಿಪಾನ್ ಹಯಾನ್ರಥಾಂಶ್ಚೈವ ಸಾರೋಹಾನರ್ಜುನೋ ರಣೇ।
08012007c ಶರೈರನೇಕಸಾಹಸ್ರೈ ರಾಜನ್ನಿನ್ಯೇ ಯಮಕ್ಷಯಂ।।

ರಾಜನ್! ಅರ್ಜುನನು ರಣದಲ್ಲಿ ಶರಗಳಿಂದ ಅನೇಕ ಸಾವಿರ ಆನೆಗಳನ್ನೂ, ಕುದುರೆಗಳನ್ನೂ, ರಥಗಳನ್ನೂ, ಅವುಗಳನ್ನೇರಿದವರೊಂದಿಗೆ ಯಮಕ್ಷಯಕ್ಕೆ ಕಳುಹಿಸಿದನು.

08012008a ತಂ ಪ್ರವೀರಂ ಪ್ರತೀಯಾತಾ ನರ್ದಮಾನಾ ಇವರ್ಷಭಾಃ।
08012008c ವಾಶಿತಾರ್ಥಮಭಿಕ್ರುದ್ಧಾ ಹುಂಕೃತ್ವಾ ಚಾಭಿದುದ್ರುವುಃ।
08012008e ನಿಘ್ನಂತಮಭಿಜಘ್ನುಸ್ತೇ ಶರೈಃ ಶೃಂಗೈರಿವರ್ಷಭಾಃ।।

ಗೂಳಿಯಂತೆ ಘೀಳಿಡುತ್ತಾ ಬರುತ್ತಿದ್ದ ಆ ಪ್ರವೀರನನ್ನು ಸಂಶಪ್ತಕರು ಹಸುಗಳೊಡನೆ ಸಂಗಮಾಡುವ ಇಚ್ಛೆಯಿಂದ ಗುರುಗುಟ್ಟುವ ಮದಿಸಿದ ಹೋರಿಗಳೋಪಾದಿಯಲ್ಲಿ ಗರ್ಜಿಸುತ್ತಾ ಸಂಹರಿಸುತ್ತಿದ್ದ ಅರ್ಜುನನನ್ನು ಮದಿಸಿದ ಹೋರಿಗಳು ಕೊಂಬುಗಳಿಂದ ಇರಿಯುವಂತೆ ಶರಗಳಿಂದ ಪ್ರಹರಿಸಿದರು.

08012009a ತಸ್ಯ ತೇಷಾಂ ಚ ತದ್ಯುದ್ಧಮಭವಲ್ಲೋಮಹರ್ಷಣಂ।
08012009c ತ್ರೈಲೋಕ್ಯವಿಜಯೇ ಯಾದೃಗ್ದೈತ್ಯಾನಾಂ ಸಹ ವಜ್ರಿಣಾ।।

ಆಗ ಅವರ ನಡುವೆ ತ್ರೈಲೋಕ್ಯವಿಜಯದ ಸಮಯದಲ್ಲಿ ದೈತ್ಯರೊಂದಿಗೆ ವಜ್ರಿಯ ಯುದ್ಧವು ಹೇಗೆ ನಡೆಯಿತೋ ಹಾಗೆ ಲೋಮಹರ್ಷಣ ಯುದ್ಧವು ನಡೆಯಿತು.

08012010a ಅಸ್ತ್ರೈರಸ್ತ್ರಾಣಿ ಸಂವಾರ್ಯ ದ್ವಿಷತಾಂ ಸರ್ವತೋಽರ್ಜುನಃ।
08012010c ಇಷುಭಿರ್ಬಹುಭಿಸ್ತೂರ್ಣಂ ವಿದ್ಧ್ವಾ ಪ್ರಾಣಾನ್ರರಾಸ ಸಃ।।

ಅರ್ಜುನನು ಅಸ್ತ್ರಗಳನ್ನು ಅಸ್ತ್ರಗಳಿಂದಲೇ ತಡೆದು ಅನೇಕ ಬಾಣಗಳಿಂದ ಅವರನ್ನು ಎಲ್ಲಕಡೆಗಳಿಂದ ಹೊಡೆದು ಪ್ರಾಣಗಳನ್ನು ಅಪಹರಿಸಿದನು.

08012011a ಚಿನ್ನತ್ರಿವೇಣುಚಕ್ರಾಕ್ಷಾನ್ ಹತಯೋಧಾಶ್ವಸಾರಥೀನ್।
08012011c ವಿಧ್ವಸ್ತಾಯುಧತೂಣೀರಾನ್ಸಮುನ್ಮಥಿತಕೇತನಾನ್।।

ರಥಗಳ ತ್ರಿವೇಣು, ಚಕ್ರ ಮತ್ತು ಅಚ್ಚುಮರಗಳು ಭಿನ್ನ-ಭಿನ್ನವಾದವು. ರಥಗಳಲ್ಲಿದ್ದ ಕುದುರೆ-ಸಾರಥಿಗಳೂ ಹತರಾದರು. ರಥಗಳಲ್ಲಿದ್ದ ಆಯುಧಗಳೂ, ಬತ್ತಳಿಕೆಗಳೂ ಧ್ವಂಸವಾದವು. ಧ್ವಜದಂಡಗಳು ಕೆಳಗೆ ಬಿದ್ದವು.

08012012a ಸಂಚಿನ್ನಯೋಕ್ತ್ರರಶ್ಮೀಕಾನ್ವಿತ್ರಿವೇಣೂನ್ವಿಕೂಬರಾನ್।
08012012c ವಿಧ್ವಸ್ತಬಂದುರಯುಗಾನ್ವಿಶಸ್ತಾಯುಧಮಂಡಲಾನ್।
08012012e ರಥಾನ್ವಿಶಕಲೀಕುರ್ವನ್ಮಹಾಭ್ರಾಣೀವ ಮಾರುತಃ।।

ನೊಗದ ಹಗ್ಗಗಳೂ, ಕಡಿವಾಣಗಳೂ ಹರಿದುಹೋದವು. ಮೂಕಿಯ ಮರಗಳೇ ಇರಲಿಲ್ಲ. ನೊಗದ ಕೆಳಭಾಗದ ಮೂಕೀಕಂಬಗಳೂ ಕಳಚಿ ಬಿದ್ದಿದ್ದವು. ದೊಡ್ಡ ದೊಡ್ಡ ಮೇಘಗಳನ್ನು ಸುಂಟರಗಾಳಿಯು ಛಿದ್ರಗೊಳಿಸುವಂತೆ ಅರ್ಜುನನು ಸಂಶಪ್ತಕರ ರಥಗಳನ್ನು ಚೂರು-ಚೂರು ಮಾಡಿದನು.

08012013a ವಿಸ್ಮಾಪಯನ್ಪ್ರೇಕ್ಷಣೀಯಂ ದ್ವಿಷಾತಾಂ ಭಯವರ್ಧನಂ।
08012013c ಮಹಾರಥಸಹಸ್ರಸ್ಯ ಸಮಂ ಕರ್ಮಾರ್ಜುನೋಽಕರೋತ್।।

ನೋಡುವವರಿಗೆ ವಿಸ್ಮಯವನ್ನುಂಟುಮಾಡುವಂತೆ ಮತ್ತು ಶತ್ರುಗಳ ಭಯವನ್ನು ಹೆಚ್ಚಿಸುವಂತೆ ಅರ್ಜುನನು ಸಹಸ್ರಾರು ಮಹಾರಥಗಳನ್ನು ಸಮಮಾಡುವ ಕೃತ್ಯವನ್ನೆಸಗಿದನು.

08012014a ಸಿದ್ಧದೇವರ್ಷಿಸಂಘಾಶ್ಚ ಚಾರಣಾಶ್ಚೈವ ತುಷ್ಟುವುಃ।
08012014c ದೇವದುಂದುಭಯೋ ನೇದುಃ ಪುಷ್ಪವರ್ಷಾಣಿ ಚಾಪತನ್।
08012014e ಕೇಶವಾರ್ಜುನಯೋರ್ಮೂರ್ಧ್ನಿ ಪ್ರಾಹ ವಾಕ್ಚಾಶರೀರಿಣೀ।।

ಸಿದ್ಧ-ದೇವರ್ಷಿಸಂಘಗಳೂ, ಚಾರಣರೂ ಸಂತೋಷಗೊಂಡರು. ದೇವದುಂದುಭಿಗಳು ಮೊಳಗಿದವು. ಕೇಶವಾರ್ಜುನರ ನೆತ್ತಿಯ ಮೇಳೆ ಪುಷ್ಪವೃಷ್ಟಿಯಾಯಿತು. ಅಶರೀರವಾಣಿಯು ಹೀಗೆ ಹೇಳಿತು:

08012015a ಚಂದ್ರಾರ್ಕಾನಿಲವಹ್ನೀನಾಂ ಕಾಂತಿದೀಪ್ತಿಬಲದ್ಯುತೀಃ।
08012015c ಯೌ ಸದಾ ಬಿಭ್ರತುರ್ವೀರೌ ತಾವಿಮೌ ಕೇಶವಾರ್ಜುನೌ।।
08012016a ಬ್ರಹ್ಮೇಶಾನಾವಿವಾಜಯ್ಯೌ ವೀರಾವೇಕರಥೇ ಸ್ಥಿತೌ।
08012016c ಸರ್ವಭೂತವರೌ ವೀರೌ ನರನಾರಾಯಣಾವುಭೌ।।

“ಚಂದ್ರನ ಕಾಂತಿಯನ್ನೂ, ಅಗ್ನಿಯ ದೀಪ್ತಿಯನ್ನೂ, ವಾಯುವಿನ ಬಲವನ್ನೂ, ಸೂರ್ಯನ ತೇಜಸ್ಸನ್ನೂ ಹೊಂದಿರುವ ಒಂದೇ ರಥದಲ್ಲಿ ಕುಳಿತಿರುವ ಈ ವೀರ ಕೇಶವಾರ್ಜುನನು ಬ್ರಹ್ಮ-ರುದ್ರರಂತೆ ಎಲ್ಲರಿಂದಲೂ ಅಜೇಯರಾಗಿದ್ದಾರೆ. ಸರ್ವಭೂತಗಳಿಗೂ ಶ್ರೇಷ್ಠರಾದ ಈ ವೀರರು ನರ-ನಾರಾಯಣರೇ ಆಗಿದ್ದಾರೆ!”

08012017a ಇತ್ಯೇತನ್ಮಹದಾಶ್ಚರ್ಯಂ ದೃಷ್ಟ್ವಾ ಶ್ರುತ್ವಾ ಚ ಭಾರತ।
08012017c ಅಶ್ವತ್ಥಾಮಾ ಸುಸಂಯತ್ತಃ ಕೃಷ್ಣಾವಭ್ಯದ್ರವದ್ರಣೇ।।

ಭಾರತ! ಈ ಮಹದಾಶ್ಚರ್ಯವನ್ನು ನೋಡಿ ಮತ್ತು ಕೇಳಿದ ಅಶ್ವತ್ಥಾಮನು ಸರ್ವಸಿದ್ಧತೆಗಳನ್ನೂ ಮಾಡಿಕೊಂಡು ರಣದಲ್ಲಿ ಕೃಷ್ಣಾರ್ಜುನರೆಡೆಗೆ ಧಾವಿಸಿದನು.

08012018a ಅಥ ಪಾಂಡವಮಸ್ಯಂತಂ ಯಮಕಾಲಾಂತಕಾಂ ಶರಾನ್।
08012018c ಸೇಷುಣಾ ಪಾಣಿನಾಹೂಯ ಹಸನ್ದ್ರೌಣಿರಥಾಬ್ರವೀತ್।।

ಕಾಲಾಂತಕ ಯಮನಂತೆ ಶರಗಳನ್ನು ಎರಚುತ್ತಿದ್ದ ಪಾಂಡವನನ್ನು ಬಾಣಸಹಿತ ಕೈಯಿಂದಲೇ ಆಹ್ವಾನಿಸಿ ದ್ರೌಣಿಯು ನಗುತ್ತಾ ಹೇಳಿದನು:

08012019a ಯದಿ ಮಾಂ ಮನ್ಯಸೇ ವೀರ ಪ್ರಾಪ್ತಮರ್ಹಮಿವಾತಿಥಿಂ।
08012019c ತತಃ ಸರ್ವಾತ್ಮನಾದ್ಯ ತ್ವಂ ಯುದ್ಧಾತಿಥ್ಯಂ ಪ್ರಯಚ್ಚ ಮೇ।।

“ವೀರ! ತಾನಾಗಿಯೇ ಬಂದಿರುವ ಯೋಗ್ಯ ಅತಿಥಿಯೆಂದು ನನ್ನನ್ನು ಭಾವಿಸಿದರೆ ಎಲ್ಲಾ ರೀತಿಯ ಯುದ್ಧಾತಿಥ್ಯವನ್ನು ನೀನು ನನಗೆ ಕೊಡಬಹುದು!”

08012020a ಏವಮಾಚಾರ್ಯಪುತ್ರೇಣ ಸಮಾಹೂತೋ ಯುಯುತ್ಸಯಾ।
08012020c ಬಹು ಮೇನೇಽರ್ಜುನೋಽತ್ಮಾನಮಿದಂ ಚಾಹ ಜನಾರ್ದನಂ।।

ಯುದ್ಧಾಸಕ್ತನಾಗಿದ್ದ ಆಚಾರ್ಯಪುತ್ರನಿಂದ ಹೀಗೆ ಆಹ್ವಾನಿಸಲ್ಪಟ್ಟ ಅರ್ಜುನನು ತನ್ನನ್ನೇ ಅಧಿಕನೆಂದು ಭಾವಿಸಿ ಜನಾರ್ದನನಿಗೆ ಹೇಳಿದನು:

08012021a ಸಂಶಪ್ತಕಾಶ್ಚ ಮೇ ವಧ್ಯಾ ದ್ರೌಣಿರಾಹ್ವಯತೇ ಚ ಮಾಂ।
08012021c ಯದತ್ರಾನಂತರಂ ಪ್ರಾಪ್ತಂ ಪ್ರಶಾಧಿ ತ್ವಂ ಮಹಾಭುಜ।।

“ಮಹಾಭುಜ! ಸಂಶಪ್ತಕರನ್ನು ನನಗೆ ವಧಿಸಬೇಕಾಗಿದೆ. ಆದರೆ ದ್ರೌಣಿಯು ನನ್ನನ್ನು ಆಹ್ವಾನಿಸುತ್ತಿದ್ದಾನೆ. ಈಗ ಮೊದಲು ನಾನು ಏನು ಮಾಡಬೇಕೆಂದು ನೀನೇ ಹೇಳು!”

08012022a ಏವಮುಕ್ತೋಽವಹತ್ಪಾರ್ಥಂ ಕೃಷ್ಣೋ ದ್ರೋಣಾತ್ಮಜಾಂತಿಕಂ।
08012022c ಜೈತ್ರೇಣ ವಿಧಿನಾಹೂತಂ ವಾಯುರಿಂದ್ರಮಿವಾಧ್ವರೇ।।

ಪಾರ್ಥನು ಹೀಗೆ ಹೇಳಲು ಕೃಷ್ಣನು ವಿಧಿವತ್ತಾಗಿ ಅಹ್ವಾನಿಸಲ್ಪಟ್ಟ ವಾಯು-ಇಂದ್ರರನ್ನು ಯಜ್ಞಕ್ಕೆ ಕೊಂಡೊಯ್ಯುವಂತೆ ಅವನನ್ನು ದ್ರೋಣಾತ್ಮಜನ ಬಳಿಗೆ ಕೊಂಡೊಯ್ದನು.

08012023a ತಮಾಮಂತ್ರ್ಯೈಕಮನಸಾ ಕೇಶವೋ ದ್ರೌಣಿಮಬ್ರವೀತ್।
08012023c ಅಶ್ವತ್ಥಾಮನ್ಸ್ಥಿರೋ ಭೂತ್ವಾ ಪ್ರಹರಾಶು ಸಹಸ್ವ ಚ।।

ಏಕಮನಸ್ಕನಾಗಿ ಕರೆಯುತ್ತಿದ್ದ ದ್ರೌಣಿಗೆ ಕೇಶವನು ಹೇಳಿದನು: “ಅಶ್ವತ್ಥಾಮನ್! ಸ್ಥಿರವಾಗಿ ಪ್ರಹರಿಸು ಮತ್ತು ಪ್ರಹರಗಳನ್ನು ಸಹಿಸಿಕೋ!

08012024a ನಿರ್ವೇಷ್ಟುಂ ಭರ್ತೃಪಿಂಡಂ ಹಿ ಕಾಲೋಽಯಮುಪಜೀವಿನಾಂ।
08012024c ಸೂಕ್ಷ್ಮೋ ವಿವಾದೋ ವಿಪ್ರಾಣಾಂ ಸ್ಥೂಲೌ ಕ್ಷಾತ್ರೌ ಜಯಾಜಯೌ।।

ಯಜಮಾನನನ್ನು ಆಶ್ರಯಿಸಿ ಜೀವಿಸುವವರಿಗೆ ಸ್ವಾಮಿಯ ಅನ್ನದ ಋಣವನ್ನು ತೀರಿಸುವ ಕಾಲವೀಗ ಸನ್ನಿಹಿತವಾಗಿದೆ. ಕ್ಷತ್ರಿಯರ ಜಯಾಪಜಯಗಳು ಸ್ಥೂಲರೂಪದ್ದು. ಆದರೆ ವೀರರ ಜಯಾಪಜಯಗಳು ಸೂಕ್ಷ್ಮವಾದುದು ಮತ್ತು ವಿವಾದಾತ್ಮಕವಾದುದು.

08012025a ಯಾಂ ನ ಸಂಕ್ಷಮಸೇ ಮೋಹಾದ್ದಿವ್ಯಾಂ ಪಾರ್ಥಸ್ಯ ಸತ್ಕ್ರಿಯಾಂ।
08012025c ತಾಮಾಪ್ತುಮಿಚ್ಚನ್ಯುಧ್ಯಸ್ವ ಸ್ಥಿರೋ ಭೂತ್ವಾದ್ಯ ಪಾಂಡವಂ।।

ಮೋಹದಿಂದ ನೀನು ಪಾರ್ಥನ ಯಾವ ದಿವ್ಯಾತಿಥ್ಯವನ್ನು ಬಯಸುತ್ತಿದ್ದೀಯೋ ಅದನ್ನು ಇಚ್ಛೆಯಿದ್ದಷ್ಟು ಪಡೆ. ಸ್ಥಿರನಾಗಿದ್ದುಕೊಂಡು ಇಂದು ಪಾಂಡವನೊಡನೆ ಯುದ್ಧಮಾಡು!”

08012026a ಇತ್ಯುಕ್ತೋ ವಾಸುದೇವೇನ ತಥೇತ್ಯುಕ್ತ್ವಾ ದ್ವಿಜೋತ್ತಮಃ।
08012026c ವಿವ್ಯಾಧ ಕೇಶವಂ ಷಷ್ಟ್ಯಾ ನಾರಾಚೈರರ್ಜುನಂ ತ್ರಿಭಿಃ।।

ವಾಸುದೇವನು ಹೀಗೆ ಹೇಳಲು ಹಾಗೆಯೇ ಆಗಲೆಂದು ಹೇಳಿ ದ್ವಿಜೋತ್ತಮನು ಕೇಶವನನ್ನು ಅರವತ್ತು ನಾರಾಚಗಳಿಂದಲೂ ಮತ್ತು ಅರ್ಜುನನನ್ನು ಮೂರರಿಂದಲೂ ಹೊಡೆದನು.

08012027a ತಸ್ಯಾರ್ಜುನಃ ಸುಸಂಕ್ರುದ್ಧಸ್ತ್ರಿಭಿರ್ಭಲ್ಲೈಃ ಶರಾಸನಂ।
08012027c ಚಿಚ್ಚೇದಾಥಾನ್ಯದಾದತ್ತ ದ್ರೌಣಿರ್ಘೋರತರಂ ಧನುಃ।।

ಅದರಿಂದ ಸಂಕೃದ್ಧನಾದ ಅರ್ಜುನನು ಮೂರು ಭಲ್ಲಗಳಿಂದ ಅವನ ಧನುಸ್ಸನ್ನು ಕತ್ತರಿಸಿದನು. ಆಗ ದ್ರೌಣಿಯು ಇನ್ನೂ ಹೆಚ್ಚಿನ ಘೋರತರ ಧನುಸ್ಸನ್ನು ಎತ್ತಿಕೊಂಡನು.

08012028a ಸಜ್ಯಂ ಕೃತ್ವಾ ನಿಮೇಷಾತ್ತದ್ವಿವ್ಯಾಧಾರ್ಜುನಕೇಶವೌ।
08012028c ತ್ರಿಭಿಃ ಶರೈರ್ವಾಸುದೇವಂ ಸಹಸ್ರೇಣ ಚ ಪಾಂಡವಂ।।

ಕಣ್ಣುಮುಚ್ಚಿ ತೆರೆಯುವುದರೊಳಗ ಧನುಸ್ಸಿಗೆ ಶಿಂಜನಿಯನ್ನು ಬಿಗಿದು ಮೂರು ಬಾಣಗಳಿಂದ ಅರ್ಜುನ-ಕೇಶವರನ್ನು ಹೊಡೆದನು. ಮತ್ತೆ ಮೂರು ಬಾಣಗಳಿಂದ ವಾಸುದೇವನನ್ನೂ, ಸಾವಿರದಿಂದ ಪಾಂಡವನನ್ನೂ ಹೊಡೆದನು.

08012029a ತತಃ ಶರಸಹಸ್ರಾಣಿ ಪ್ರಯುತಾನ್ಯರ್ಬುದಾನಿ ಚ।
08012029c ಸಸೃಜೇ ದ್ರೌಣಿರಾಯಸ್ತಃ ಸಂಸ್ತಭ್ಯ ಚ ರಣೇಽರ್ಜುನಂ।।

ಅನಂತರ ದ್ರೌಣಿಯು ರಣದಲ್ಲಿ ಸಹಸ್ರಾರು ಲಕ್ಷೋಪಲಕ್ಷ ಬಾಣಗಳನ್ನು ಸತತವಾಗಿ ಬಿಟ್ಟು ಅರ್ಜುನನನ್ನು ಅಳ್ಳಾಡದಂತೆ ಮಾಡಿದನು.

08012030a ಇಷುಧೇರ್ಧನುಷೋ ಜ್ಯಾಯಾ ಅಂಗುಲೀಭ್ಯಶ್ಚ ಮಾರಿಷ।
08012030c ಬಾಹ್ವೋಃ ಕರಾಭ್ಯಾಮುರಸೋ ವದನಘ್ರಾಣನೇತ್ರತಃ।।
08012031a ಕರ್ಣಾಭ್ಯಾಂ ಶಿರಸೋಽಮ್ಗೇಭ್ಯೋ ಲೋಮವರ್ತ್ಮಭ್ಯ ಏವ ಚ।
08012031c ರಥಧ್ವಜೇಭ್ಯಶ್ಚ ಶರಾ ನಿಷ್ಪೇತುರ್ಬ್ರಹ್ಮವಾದಿನಃ।।

ಮಾರಿಷ! ಆಗ ಬಾಣಗಳು ಆ ಬ್ರಹ್ಮವಾದಿನಿಯ ಧನುಸ್ಸಿನಿಂದ, ಶಿಂಜನಿಯಿಂದ, ಬೆರಳುಗಳಿಂದ, ಬಾಹುಗಳಿಂದ, ಕೈಗಳಿಂದ, ಎದೆಯಿಂದ, ಮುಖದಿಂದ, ಮೂಗಿನಿಂದ, ಕಿವಿಗಳಿಂದ, ಶಿರಸ್ಸಿನಿಂದ, ಮತ್ತು ಇತರ ಅಂಗಗಳಿಂದ, ಕೂದಲುಗಳಿಂದ, ಕವಚದಿಂದ, ರಥಧ್ವಜದಿಂದ ಸತತವಾಗಿ ಅರ್ಜುನನ ಮೇಲೆ ಬೀಳುತ್ತಿದ್ದವು.

08012032a ಶರಜಾಲೇನ ಮಹತಾ ವಿದ್ಧ್ವಾ ಕೇಶವಪಾಂಡವೌ।
08012032c ನನಾದ ಮುದಿತೋ ದ್ರೌಣಿರ್ಮಹಾಮೇಘೌಘನಿಸ್ವನಃ।।

ಮಹಾಶರಜಾಲಗಳಿಂದ ಕೇಶವ-ಪಾಂಡವರನ್ನು ಹೊಡೆದು ಮುದಿತನಾದ ದ್ರೌಣಿಯು ಮಹಾಮೇಘವು ಗುಡುಗುವಂತೆ ಜೋರಾಗಿ ಗರ್ಜಿಸಿದನು.

08012033a ತಸ್ಯ ನಾನದತಃ ಶ್ರುತ್ವಾ ಪಾಂಡವೋಽಚ್ಯುತಮಬ್ರವೀತ್।
08012033c ಪಶ್ಯ ಮಾಧವ ದೌರಾತ್ಮ್ಯಂ ದ್ರೋಣಪುತ್ರಸ್ಯ ಮಾಂ ಪ್ರತಿ।।

ಅವನ ಆ ನಿನಾದವನ್ನು ಕೇಳಿ ಪಾಂಡವನು ಅಚ್ಯುತನಿಗೆ ಹೇಳಿದನು: “ಮಾಧವ! ನನ್ನ ಕುರಿತು ದ್ರೋಣಪುತ್ರನು ತೋರಿಸಿದ ದೌರಾತ್ಮವನ್ನು ನೋಡು!

08012034a ವಧಪ್ರಾಪ್ತೌ ಮನ್ಯತೇ ನೌ ಪ್ರವೇಶ್ಯ ಶರವೇಶ್ಮನಿ।
08012034c ಏಷೋಽಸ್ಯ ಹನ್ಮಿ ಸಂಕಲ್ಪಂ ಶಿಕ್ಷಯಾ ಚ ಬಲೇನ ಚ।।

ಶರಗೃಹದಲ್ಲಿ ಇರಿಸಿರುವ ಇವನು ನಾವಿಬ್ಬರೂ ಸತ್ತುಹೋದೆವೆಂದೇ ಭಾವಿಸಿದ್ದಾನೆ. ನನ್ನ ಶಿಕ್ಷಣ ಮತ್ತು ಬಲಗಳಿಂದ ಇವನ ಸಂಕಲ್ಪವನ್ನು ನಾಶಗೊಳಿಸುತ್ತೇನೆ.”

08012035a ಅಶ್ವತ್ಥಾಮ್ನಃ ಶರಾನಸ್ತಾಂಶ್ಚಿತ್ತ್ವೈಕೈಕಂ ತ್ರಿಧಾ ತ್ರಿಧಾ।
08012035c ವ್ಯಧಮದ್ಭರತಶ್ರೇಷ್ಠೋ ನೀಹಾರಮಿವ ಮಾರುತಃ।।

ಆ ಭರತಶ್ರೇಷ್ಠನು ಅಶ್ವತ್ಥಾಮನು ಬಿಟ್ಟ ಎಲ್ಲ ಬಾಣಗಳನ್ನೂ ಮೂರು ಮೂರು ತುಂಡುಗಳನ್ನಾಗಿ ಕತ್ತರಿಸಿ, ಗಾಳಿಯು ಮಂಜನ್ನು ಕರಗಿಸುವಂತೆ ನಿರಸನಗೊಳಿಸಿದನು.

08012036a ತತಃ ಸಂಶಪ್ತಕಾನ್ಭೂಯಃ ಸಾಶ್ವಸೂತರಥದ್ವಿಪಾನ್।
08012036c ಧ್ವಜಪತ್ತಿಗಣಾನುಗ್ರೈರ್ಬಾಣೈರ್ವಿವ್ಯಾಧ ಪಾಂಡವಃ।।

ಅನಂತರ ಪಾಂಡವನು ಬಾಣಗಳಿಂದ ಅಶ್ವ-ಸೂತ-ರಥ-ಆನೆಗಳಿಂದ ಮತ್ತು ಧ್ವಜ-ಪದಾತಿಗಣಗಳಿಂದ ಕೂಡಿದ್ದ ಸಂಶಪ್ತಕರನ್ನು ಪುನಃ ಗಾಯಗೊಳಿಸಿದನು.

08012037a ಯೇ ಯೇ ದದೃಶಿರೇ ತತ್ರ ಯದ್ಯದ್ರೂಪಂ ಯಥಾ ಯಥಾ।
08012037c ತೇ ತೇ ತತ್ತಚ್ಚರೈರ್ವ್ಯಾಪ್ತಂ ಮೇನಿರೇಽತ್ಮಾನಮೇವ ಚ।।

ಅಲ್ಲಿ ಯಾರ್ಯಾರು ಯಾವಯಾವ ರೂಪಗಳನ್ನು ಧರಿಸಿದ್ದರೋ ಅವರೆಲ್ಲರೂ ಆಯಾ ಶರಗಳ ರೂಪಗಳನ್ನು ತಾಳಿ ತಾವೂ ಶರಗಳೂ ಒಂದೇ ಎನ್ನುವಂತೆ ಕಂಡುಬಂದರು.

08012038a ತೇ ಗಾಂಡೀವಪ್ರಣುದಿತಾ ನಾನಾರೂಪಾಃ ಪತತ್ರಿಣಃ।
08012038c ಕ್ರೋಶೇ ಸಾಗ್ರೇ ಸ್ಥಿತಾನ್ ಘ್ನಂತಿ ದ್ವಿಪಾಂಶ್ಚ ಪುರುಷಾನ್ರಣೇ।।

ಗಾಂಡೀವದಿಂದ ಕಳುಹಿಸಲ್ಪಟ್ಟ ನಾನಾರೂಪದ ಆ ಪತತ್ರಿಗಳು ಎದಿರು ರಣದಲ್ಲಿ ಒಂದು ಕ್ರೋಶದೂರದಲ್ಲಿ ನಿಂತಿದ್ದ ಆನೆ-ಪುರುಷರನ್ನೂ ಸಂಹರಿಸುತ್ತಿದ್ದವು.

08012039a ಭಲ್ಲೈಶ್ಚಿನ್ನಾಃ ಕರಾಃ ಪೇತುಃ ಕರಿಣಾಂ ಮದಕರ್ಷಿಣಾಂ।
08012039c ಚಿನ್ನಾ ಯಥಾ ಪರಶುಭಿಃ ಪ್ರವೃದ್ಧಾಃ ಶರದಿ ದ್ರುಮಾಃ।।

ಅವನ ಭಲ್ಲಗಳಿಂದ ಕತ್ತರಿಸಿ ಕೆಳಗುರುಳುತ್ತಿದ್ದ ಮದಭರಿತ ಆನೆಗಳ ಸೊಂಡಿಲುಗಳು ಅರಣ್ಯದಲ್ಲಿ ಕೊಡಲಿಗಳಿಂದ ಕತ್ತರಿಸಿ ಬೀಳಿಸಲ್ಪಡುವ ಬೆಳೆದ ಮರಗಳಂತೆ ತೋರುತ್ತಿದ್ದವು.

08012040a ಪಶ್ಚಾತ್ತು ಶೈಲವತ್ಪೇತುಸ್ತೇ ಗಜಾಃ ಸಹ ಸಾದಿಭಿಃ।
08012040c ವಜ್ರಿವಜ್ರಪ್ರಮಥಿತಾ ಯಥೈವಾದ್ರಿಚಯಾಸ್ತಥಾ।।

ಅನಂತರ ಇಂದ್ರನ ವಜ್ರಾಯುಧದಿಂದ ಪ್ರಹೃತಗೊಂಡ ಪರ್ವತಗಳು ಕೆಳಗೆ ಉರುಳಿ ಬೀಳುತ್ತಿದ್ದಂತೆ ಸೊಂಡಿಲುಗಳನ್ನು ಕಳೆದುಕೊಂಡ ಪರ್ವತೋಪಮ ಆನೆಗಳು ಸವಾರರೊಂದಿಗೆ ಕೆಳಗೆ ಬೀಳುತ್ತಿದ್ದವು.

08012041a ಗಂದರ್ವನಗರಾಕಾರಾನ್ವಿಧಿವತ್ಕಲ್ಪಿತಾನ್ರಥಾನ್।
08012041c ವಿನೀತಜವನಾನ್ಯುಕ್ತಾನಾಸ್ಥಿತಾನ್ಯುದ್ಧದುರ್ಮದಾನ್।।
08012042a ಶರೈರ್ವಿಶಕಲೀಕುರ್ವನ್ನಮಿತ್ರಾನಭ್ಯವೀವೃಷತ್।
08012042c ಅಲಂಕೃತಾನಶ್ವಸಾದೀನ್ಪತ್ತೀಂಶ್ಚಾಹನ್ಧನಂಜಯಃ।।

ಗಂಧರ್ವನಗರಗಳಂತಿದ್ದ ವಿಧಿವತ್ತಾಗಿ ಸಜ್ಜುಗೊಳಿಸಿದ್ದ ವಿನೀತ ವೇಗದ ಕುದುರೆಗಳನ್ನು ಕಟ್ಟಿದ್ದ ಯುದ್ಧದುರ್ಮದ ಯೋಧರಿಂದ ಕೂಡಿದ್ದ ರಥಗಳನ್ನು ಧನಂಜಯನು ಶರಗಳಿಂದ ಪುಡಿಪುಡಿ ಮಾಡುತ್ತಾ ಶತ್ರುಗಳ ಮೇಲೆ ಬಾಣಗಳ ಮಳೆಯನ್ನು ಕರೆದು ಅಲಂಕೃತ ಕುದುರೆಗಳು ಮತ್ತು ಸವಾರರನ್ನು, ಪದಾತಿಗಳನ್ನು ಸಂಹರಿಸಿದನು.

08012043a ಧನಂಜಯಯುಗಾಂತಾರ್ಕಃ ಸಂಶಪ್ತಕಮಹಾರ್ಣವಂ।
08012043c ವ್ಯಶೋಷಯತ ದುಃಶೋಷಂ ತೀವ್ರೈಃ ಶರಗಭಸ್ತಿಭಿಃ।।

ಯುಗಾಂತಸೂರ್ಯನಂತಿದ್ದ ಧನಂಜಯನು ತೀವ್ರ ಶರಪ್ರಖರ ಕಿರಣಗಳಿಂದ ಶೋಷಿಸಲು ಅಸಾಧ್ಯವಾದ ಸಂಶಪ್ತಕ ಮಹಾಸಮುದ್ರವನ್ನು ಬತ್ತಿಸಿಬಿಟ್ಟನು.

08012044a ಪುನರ್ದ್ರೌಣಿಮಹಾಶೈಲಂ ನಾರಾಚೈಃ ಸೂರ್ಯಸನ್ನಿಭೈಃ।
08012044c ನಿರ್ಬಿಭೇದ ಮಹಾವೇಗೈಸ್ತ್ವರನ್ವಜ್ರೀವ ಪರ್ವತಂ।।

ಪುನಃ ಮಹಾಶೈಲದಂತಿದ್ದ ದ್ರೌಣಿಯನ್ನು ಸೂರ್ಯಸನ್ನಿಭ ನಾರಾಚಗಳಿಂದ ವಜ್ರಿಯು ಪರ್ವತವನ್ನು ಹೇಗೋ ಹಾಗೆ ಮಹಾವೇಗದಿಂದ ತ್ವರೆಮಾಡಿ ಭೇಧಿಸಿದನು.

08012045a ತಮಾಚಾರ್ಯಸುತಃ ಕ್ರುದ್ಧಃ ಸಾಶ್ವಯಂತಾರಮಾಶುಗೈಃ।
08012045c ಯುಯುತ್ಸುರ್ನಾಶಕದ್ಯೋದ್ಧುಂ ಪಾರ್ಥಸ್ತಾನಂತರಾಚ್ಚಿನತ್।।

ಅದರಿಂದ ಕ್ರುದ್ಧನಾದ ಆಚಾರ್ಯಸುತನು ನಾಶಕ ಯುದ್ಧಮಾಡಲು ಉತ್ಸುಕನಾಗಿ ಆಶುಗಗಳಿಂದ ಅಶ್ವ-ಸಾರಥಿಗಳೊಂದಿಗೆ ಅವನನ್ನು ಹೊಡೆಯಲು ಪಾರ್ಥನು ಅವುಗಳನ್ನು ಮಧ್ಯದಲ್ಲಿಯೇ ತುಂಡರಿಸಿದನು.

08012046a ತತಃ ಪರಮಸಂಕ್ರುದ್ಧಃ ಕಾಂಡಕೋಶಾನವಾಸೃಜತ್।
08012046c ಅಶ್ವತ್ಥಾಮಾಭಿರೂಪಾಯ ಗೃಹಾನತಿಥಯೇ ಯಥಾ।।

ಮನೆಗೆ ಬಂದ ಅತಿಥಿಯ ಮೇಲೆ ತನ್ನ ಸರ್ವಸ್ವವನ್ನೂ ಸುರಿಯುವಂತೆ ಪರಮಸಂಕ್ರುದ್ಧ ಅಶ್ವತ್ಥಾಮನು ಸಕಲಮಹಾಸ್ತ್ರಗಳನ್ನೂ ಅರ್ಜುನನ ಮೇಲೆ ಸುರಿದನು.

08012047a ಅಥ ಸಂಶಪ್ತಕಾಂಸ್ತ್ಯಕ್ತ್ವಾ ಪಾಂಡವೋ ದ್ರೌಣಿಮಭ್ಯಯಾತ್।
08012047c ಅಪಾಂಕ್ತೇಯಮಿವ ತ್ಯಕ್ತ್ವಾ ದಾತಾ ಪಾಂಕ್ತೇಯಮರ್ಥಿನಂ।।

ಆಗ ಅಪಾಂಕ್ತೇಯರನ್ನು ಬಿಟ್ಟು ಪಂಕ್ತಿಪಾವನ ಆರ್ಥಿಗೆ ದಾನನೀಡುವವನಂತೆ ಪಾಂಡವನು ಸಂಶಪ್ತಕರನ್ನು ಬಿಟ್ಟು ದ್ರೌಣಿಯನ್ನು ಆಕ್ರಮಣಿಸಿದನು.

08012048a ತತಃ ಸಮಭವದ್ಯುದ್ಧಂ ಶುಕ್ರಾಂಗಿರಸವರ್ಚಸೋಃ।
08012048c ನಕ್ಷತ್ರಂ ಅಭಿತೋ ವ್ಯೋಮ್ನಿ ಶುಕ್ರಾಂಗಿರಸಯೋರಿವ।।

ಆಗ ಆಕಾಶದಲ್ಲಿ ಶುಕ್ರ-ಆಂಗೀರಸ ಅಥವಾ ಬೃಹಸ್ಪತಿ ನಕ್ಷತ್ರಗಳ ನಡುವೆ ನಡೆಯುವ ಯುದ್ಧದಂತೆ ಶುಕ್ರ-ಆಂಗಿರಸ ವರ್ಚಸ್ಸಿನ ಅವರಿಬ್ಬರ ನಡುವೆ ಯುದ್ಧವು ನಡೆಯಿತು.

08012049a ಸಂತಾಪಯಂತಾವನ್ಯೋನ್ಯಂ ದೀಪ್ತೈಃ ಶರಗಭಸ್ತಿಭಿಃ।
08012049c ಲೋಕತ್ರಾಸಕರಾವಾಸ್ತಾಂ ವಿಮಾರ್ಗಸ್ಥೌ ಗ್ರಹಾವಿವ।।

ವಕ್ರಗತಿಯಲ್ಲಿ ಸಂಚರಿಸುವ ಗ್ರಹಗಳಂತೆ ಅನ್ಯೋನ್ಯರನ್ನು ಪ್ರದೀಪ್ತಶರಕಿರಣಗಳಿಂದ ಸಂತಾಪಗೊಳಿಸುತ್ತಿರುವ ಅವರಿಬ್ಬರು ಲೋಕಗಳಿಗೇ ಭಯವನ್ನುಂಟುಮಾಡುತ್ತಿದ್ದರು.

08012050a ತತೋಽವಿಧ್ಯದ್ಭ್ರುವೋರ್ಮಧ್ಯೇ ನಾರಾಚೇನಾರ್ಜುನೋ ಭೃಶಂ।
08012050c ಸ ತೇನ ವಿಬಭೌ ದ್ರೌಣಿರೂರ್ಧ್ವರಶ್ಮಿರ್ಯಥಾ ರವಿಃ।।

ಆಗ ಅರ್ಜುನನು ನಾರಾಚದಿಂದ ಅವನ ಹುಬ್ಬುಗಳ ಮಧ್ಯೆ ಜೋರಾಗಿ ಹೊಡೆದನು. ಅದರಿಂದ ದ್ರೌಣಿಯು ಊರ್ಧ್ವರಶ್ಮಿ ಸೂರ್ಯನಂತೆ ಪ್ರಕಾಶಿಸಿದನು.

08012051a ಅಥ ಕೃಷ್ಣೌ ಶರಶತೈರಶ್ವತ್ಥಾಂನಾರ್ದಿತೌ ಭೃಶಂ।
08012051c ಸರಶ್ಮಿಜಾಲನಿಕರೌ ಯುಗಾಂತಾರ್ಕಾವಿವಾಸತುಃ।।

ಕೂಡಲೇ ಅಶ್ವತ್ಥಾಮನು ಕೃಷ್ಣರೀರ್ವರನ್ನೂ ನೂರು ಬಾಣಗಳಿಂದ ಚೆನ್ನಾಗಿ ಹೊಡೆದನು. ಆಗ ಅವರು ರಶ್ಮಿಜಾಲಗಳಿಂದ ಪ್ರಖರಗೊಂಡ ಯುಗಾಂತದ ಸೂರ್ಯರಂತೆ ಪ್ರಕಾಶಿಸಿದರು.

08012052a ತತೋಽರ್ಜುನಃ ಸರ್ವತೋಧಾರಮಸ್ತ್ರಂ ಅವಾಸೃಜದ್ವಾಸುದೇವಾಭಿಗುಪ್ತಃ।
08012052c ದ್ರೌಣಾಯನಿಂ ಚಾಭ್ಯಹನತ್ಪೃಷತ್ಕೈರ್ ವಜ್ರಾಗ್ನಿವೈವಸ್ವತದಂಡಕಲ್ಪೈಃ।।

ಆಗ ವಾಸುದೇವ ರಕ್ಷಿತ ಅರ್ಜುನನು ಸರ್ವತೋಧಾರಾಸ್ತ್ರವನ್ನು ಪ್ರಯೋಗಿಸಿದನು. ಪುನಃ ದ್ರೌಣಾಯನಿಯನ್ನು ವಜ್ರಾಯುಧ, ಅಗ್ನಿ ಮತ್ತು ಯಮದಂಡಗಳಿಗೆ ಸಮಾನ ಪೃಷತ್ಕಗಳಿಂದ ಪ್ರಹರಿಸಿದನು.

08012053a ಸ ಕೇಶವಂ ಚಾರ್ಜುನಂ ಚಾತಿತೇಜಾ ವಿವ್ಯಾಧ ಮರ್ಮಸ್ವತಿರೌದ್ರಕರ್ಮಾ।
08012053c ಬಾಣೈಃ ಸುಮುಕ್ತೈರತಿತೀವ್ರವೇಗೈರ್ ಯೈರಾಹತೋ ಮೃತ್ಯುರಪಿ ವ್ಯಥೇತ।।

ಆ ಅತಿತೇಜಸ್ವಿ ರೌದ್ರಕರ್ಮಿಯು ಕೇಶವ ಮತ್ತು ಅರ್ಜುನರ ಮರ್ಮಸ್ಥಾನಗಳಿಗೆ ಮೃತ್ಯುವೂ ವ್ಯಥೆಗೊಳ್ಳುವ ಉತ್ತಮವಾಗಿ ಪ್ರಯೋಗಿಸಿದ ಅತಿತೀವ್ರವೇಗಗಳ ಬಾಣಗಳಿಂದ ಹೊಡೆದನು.

08012054a ದ್ರೌಣೇರಿಷೂನರ್ಜುನಃ ಸಂನಿವಾರ್ಯ ವ್ಯಾಯಚ್ಚತಸ್ತದ್ದ್ವಿಗುಣೈಃ ಸುಪುಂಖೈಃ।
08012054c ತಂ ಸಾಶ್ವಸೂತಧ್ವಜಂ ಏಕವೀರಂ ಆವೃತ್ಯ ಸಂಶಪ್ತಕಸೈನ್ಯಮಾರ್ಚತ್।।

ಅರ್ಜುನನು ದ್ರೌಣಿಯ ಬಾಣಗಳನ್ನು ತಡೆದು ಅವನ ಬಾಣಗಳಿಗಿಂತಲೂ ಎರಡುಪಟ್ಟು ಗುಣಗಳುಳ್ಳ ಸುಂದರ ರೆಕ್ಕೆಗಳ ಬಾಣಗಳಿಂದ ಕೌರವರ ಏಕೈಕ ವೀರನಾಗಿದ್ದ ಅವನನ್ನು ಕುದುರೆಗಳು, ಸಾರಥಿ ಮತ್ತು ಧ್ವಜಗಳೊಂದಿಗೆ ಮುಚ್ಚಿ, ಸಂಶಪ್ತಕ ಸೈನ್ಯವನ್ನು ಆವರಿಸಿ ಆಕ್ರಮಣಿಸಿದನು.

08012055a ಧನೂಂಷಿ ಬಾಣಾನಿಷುಧೀರ್ಧನುರ್ಜ್ಯಾಃ ಪಾಣೀನ್ಭುಜಾನ್ಪಾಣಿಗತಂ ಚ ಶಸ್ತ್ರಂ।
08012055c ಚತ್ರಾಣಿ ಕೇತೂಂಸ್ತುರಗಾನಥೈಷಾಂ ವಸ್ತ್ರಾಣಿ ಮಾಲ್ಯಾನ್ಯಥ ಭೂಷಣಾನಿ।।
08012056a ಚರ್ಮಾಣಿ ವರ್ಮಾಣಿ ಮನೋರಥಾಂಶ್ಚ ಪ್ರಿಯಾಣಿ ಸರ್ವಾಣಿ ಶಿರಾಂಸಿ ಚೈವ।
08012056c ಚಿಚ್ಚೇದ ಪಾರ್ಥೋ ದ್ವಿಷತಾಂ ಪ್ರಮುಕ್ತೈರ್ ಬಾಣೈಃ ಸ್ಥಿತಾನಾಮಪರಾಙ್ಮುಖಾನಾಂ।।

ಪರಾಙ್ಮುಖರಾಗದೇ ನಿಂತಿದ್ದ ಶತ್ರುಗಳ ಧನುಸ್ಸುಗಳನ್ನೂ, ಬಾಣಗಳನ್ನೂ, ಬತ್ತಳಿಕೆಗಳನ್ನೂ, ಶಿಂಜಿನಿಗಳನ್ನೂ, ಕೈಗಳನ್ನೂ, ಭುಜಗಳನ್ನೂ, ಕೈಗಳಲ್ಲಿ ಹಿಡಿದಿದ್ದ ಶಸ್ತ್ರಗಳನ್ನೂ, ಚತ್ರಗಳನ್ನೂ, ಧ್ವಜಗಳನ್ನೂ, ಕುದುರೆಗಳನ್ನೂ, ವಸ್ತ್ರಗಳನ್ನೂ, ಮಾಲೆಗಳನ್ನೂ, ಭೂಷಣಗಳನ್ನೂ, ಗುರಾಣಿಗಳನ್ನೂ, ಕವಚಗಳನ್ನೂ, ಮನೋರಥಗಳನ್ನೂ, ಸರ್ವರ ಸುಂದರ ಶಿರಗಳನ್ನೂ ಕೂಡ ಪಾರ್ಥನು ಬಾಣಗಳನ್ನು ಪ್ರಯೋಗಿಸಿ ಕತ್ತರಿಸಿದನು.

08012057a ಸುಕಲ್ಪಿತಾಃ ಸ್ಯಂದನವಾಜಿನಾಗಾಃ ಸಮಾಸ್ಥಿತಾಃ ಕೃತಯತ್ನೈರ್ನೃವೀರೈಃ।
08012057c ಪಾರ್ಥೇರಿತೈರ್ಬಾಣಗಣೈರ್ನಿರಸ್ತಾಸ್ ತೈರೇವ ಸಾರ್ಧಂ ನೃವರೈರ್ನಿಪೇತುಃ।।

ಸುಕಲ್ಪಿತವಾಗಿದ್ದ ರಥಕುದುರೆಗಳು ಮತ್ತು ಪ್ರಯತ್ನಪಟ್ಟು ಅವುಗಳಲ್ಲಿ ಸಮಾಸ್ಥಿತರಾಗಿದ್ದ ನರವೀರರು ನರವೀರ ಪಾರ್ಥನ ಬಾಣಗಣಗಳಿಗೆ ಹೆದರಿಯೇ ರಥಕುದುರೆಗಳೊಂದಿಗೆ ಕೆಳಗುರುಳಿದರು.

08012058a ಪದ್ಮಾರ್ಕಪೂರ್ಣೇಂದುಸಮಾನನಾನಿ ಕಿರೀಟಮಾಲಾಮುಕುಟೋತ್ಕಟಾನಿ।
08012058c ಭಲ್ಲಾರ್ಧಚಂದ್ರಕ್ಷುರಹಿಂಸಿತಾನಿ ಪ್ರಪೇತುರುರ್ವ್ಯಾಂ ನೃಶಿರಾಂಸ್ಯಜಸ್ರಂ।।

ಕಮಲ ಸೂರ್ಯ ಮತ್ತು ಪೂರ್ಣಚಂದ್ರರ ಸಮಾನ ಮುಖಗಳುಳ್ಳ, ಕಿರೀಟ ಮಾಲೆ ಮುಕುಟಗಳಿಂದ ವಿಭೂಷಿತ ನರರ ಶಿರಗಳು ಅರ್ಜುನನ ಭಲ್ಲ, ಅರ್ಧಚಂದ್ರ ಮತ್ತು ಕ್ಷುರಗಳಿಂದ ಕತ್ತರಿಸಲ್ಪಟ್ಟು ಭೂಮಿಯ ಮೇಲೆ ಉರುಳಿದವು.

08012059a ಅಥ ದ್ವಿಪೈರ್ದೇವಪತಿದ್ವಿಪಾಭೈರ್ ದೇವಾರಿದರ್ಪೋಲ್ಬಣಮನ್ಯುದರ್ಪೈಃ।
08012059c ಕಲಿಂಗವಂಗಾಂಗನಿಷಾದವೀರಾ ಜಿಘಾಂಸವಃ ಪಾಂಡವಮಭ್ಯಧಾವನ್।।

ಆಗ ದೇವಪತಿಯ ಐರಾವತದಂತಿದ್ದ ಆನೆಗಳಿಂದ ಕೂಡಿದ ಕಲಿಂಗ, ವಂಗ ಮತ್ತು ನಿಷಾದ ವೀರರು ದೇವಾರಿಗಳ ದರ್ಪವನ್ನು ಅಡಗಿಸಿದ ಪಾಂಡವನನ್ನು ಸಂಹರಿಸಲು ಅವನನ್ನು ಆಕ್ರಮಣಿಸಿದರು.

08012060a ತೇಷಾಂ ದ್ವಿಪಾನಾಂ ವಿಚಕರ್ತ ಪಾರ್ಥೋ ವರ್ಮಾಣಿ ಮರ್ಮಾಣಿ ಕರಾನ್ನಿಯಂತೄನ್।
08012060c ಧ್ವಜಾಃ ಪತಾಕಾಶ್ಚ ತತಃ ಪ್ರಪೇತುರ್ ವಜ್ರಾಹತಾನೀವ ಗಿರೇಃ ಶಿರಾಂಸಿ।।

ಪಾರ್ಥನು ಅವರ ಆನೆಗಳನ್ನೂ, ಕವಚಗಳನ್ನೂ, ಮರ್ಮಗಳನ್ನೂ, ಕೈಗಳನ್ನೂ, ಧ್ವಜಗಳನ್ನೂ, ಪತಾಕೆಗಳನ್ನೂ ಕತ್ತರಿಸಲು, ಅವರ ಶಿರಗಳು ವಜ್ರದಿಂದ ಪ್ರಹಾರಿಸಲ್ಪಟ್ಟ ಗಿರಿಗಳಂತೆ ಕೆಳಗುರುಳಿದವು.

08012061a ತೇಷು ಪ್ರರುಗ್ಣೇಷು ಗುರೋಸ್ತನೂಜಂ ಬಾಣೈಃ ಕಿರೀಟೀ ನವಸೂರ್ಯವರ್ಣೈಃ।
08012061c ಪ್ರಚ್ಚಾದಯಾಮಾಸ ಮಹಾಭ್ರಜಾಲೈರ್ ವಾಯುಃ ಸಮುದ್ಯುಕ್ತಮಿವಾಂಶುಮಂತಂ।।

ಅವರು ಹತರಾಗಿ ಹೋಗಲು ವಾಯುವು ಉದಯಿಸುತ್ತಿರುವ ಸೂರ್ಯನ ಬಣ್ಣದ ಕಿರಣಗಳನ್ನು ಮಹಾಮೋಡಗಳಿಂದ ಮುಸುಕುವಂತೆ ಅರ್ಜುನನು ಅಂಶುಮಂತ ಗುರುಪುತ್ರ ಅಶ್ವತ್ಥಾಮನನ್ನು ಬಾಣಗಳಿಂದ ಮುಸುಕಿದನು.

08012062a ತತೋಽರ್ಜುನೇಷೂನಿಷುಭಿರ್ನಿರಸ್ಯ ದ್ರೌಣಿಃ ಶರೈರರ್ಜುನವಾಸುದೇವೌ।
08012062c ಪ್ರಚ್ಚಾದಯಿತ್ವ ದಿವಿ ಚಂದ್ರಸೂರ್ಯೌ ನನಾದ ಸೋಽಮ್ಭೋದ ಇವಾತಪಾಂತೇ।।

ಆಗ ದ್ರೌಣಿಯು ಅರ್ಜುನನ ಬಾಣಗಳನ್ನು ಬಾಣಗಳಿಂದಲೇ ನಿರಸನಗೊಳಿಸಿ ವರ್ಷಾಕಾಲದ ಕಾರ್ಮುಗಿಲು ಚಂದ್ರ-ಸೂರ್ಯರನ್ನು ಮುಚ್ಚಿ ಗರ್ಜಿಸುವಂತೆ ಅರ್ಜುನ-ವಾಸುದೇವರನ್ನು ಬಾಣಗಳಿಂದ ಮುಸುಕಿ ಗರ್ಜಿಸಿದನು.

08012063a ತಂ ಅರ್ಜುನಸ್ತಾಂಶ್ಚ ಪುನಸ್ತ್ವದೀಯಾನ್ ಅಭ್ಯರ್ದಿತಸ್ತೈರವಿಕೃತ್ತಶಸ್ತ್ರೈಃ।
08012063c ಬಾಣಾಂದಕಾರಂ ಸಹಸೈವ ಕೃತ್ವಾ ವಿವ್ಯಾಧ ಸರ್ವಾನಿಷುಭಿಃ ಸುಪುಂಖೈಃ।।

ಅವುಗಳನ್ನು ಅಸ್ತ್ರಗಳನ್ನು ತುಂಡರಿಸಿ ಅರ್ಜುನನು ಒಡನೆಯೇ ಪುನಃ ನಿಮ್ಮವರಲ್ಲಿ ಬಾಣಾಂಧಕಾರವನ್ನು ನಿರ್ಮಿಸಿ ಎಲ್ಲರನ್ನೂ ಸುಂದರ ಪುಂಖಗಳುಳ್ಳ ಬಾಣಗಳಿಂದ ಪ್ರಹರಿಸಿದನು.

08012064a ನಾಪ್ಯಾದದತ್ಸಂದಧನ್ನೈವ ಮುಂಚನ್ ಬಾಣಾನ್ರಣೇಽದೃಶ್ಯತ ಸವ್ಯಸಾಚೀ।
08012064c ಹತಾಂಶ್ಚ ನಾಗಾಂಸ್ತುರಗಾನ್ಪದಾತೀನ್ ಸಂಸ್ಯೂತದೇಹಾನ್ದದೃಶೂ ರಥಾಂಶ್ಚ।।

ರಣದಲ್ಲಿ ಸವ್ಯಸಾಚಿಯು ಬತ್ತಳಿಕೆಯಿಂದ ಬಾಣಗಳನ್ನು ತೆಗೆದುಕೊಳ್ಳುವುದಾಗಲೀ ಧನುಸ್ಸಿನಲ್ಲಿ ಅನುಸಂಧಾನ ಮಾಡುವುದಾಗಲೀ ಶತ್ರುಗಳ ಮೇಲೆ ಅವುಗಳನ್ನು ಬಿಡುವುದಾಗಲೀ ಕಾಣುತ್ತಲೇ ಇರಲಿಲ್ಲ. ಅವನ ಬಾಣಗಳಿಂದ ಹತಗೊಂಡು ನೇಯಲ್ಪಟ್ಟ ಆನೆಗಳು, ಕುದುರೆಗಳು ಮತ್ತು ಪದಾತಿಗಳ ದೇಹಗಳೂ ರಥಗಳೂ ಮಾತ್ರವೇ ಕಾಣುತ್ತಿದ್ದವು.

08012065a ಸಂಧಾಯ ನಾರಾಚವರಾನ್ದಶಾಶು ದ್ರೌಣಿಸ್ತ್ವರನ್ನೇಕಮಿವೋತ್ಸಸರ್ಜ।
08012065c ತೇಷಾಂ ಚ ಪಂಚಾರ್ಜುನಮಭ್ಯವಿಧ್ಯನ್ ಪಂಚಾಚ್ಯುತಂ ನಿರ್ಬಿಭಿದುಃ ಸುಮುಕ್ತಾಃ।।

ಆಗ ದ್ರೌಣಿಯು ಹತ್ತು ಶ್ರೇಷ್ಠ ನಾರಾಚಗಳನ್ನು ಒಂದೇ ಬಾಣದಂತೆ ಧನುಸ್ಸಿನಲ್ಲಿ ಯೋಜಿಸಿ ಒಂದೇ ಬಾರಿಗೆ ಪ್ರಹರಿಸಿದನು. ಚೆನ್ನಾಗಿ ಪ್ರಯೋಗಿಸಲ್ಪಟ್ಟ ಅವುಗಳಲ್ಲಿ ಐದು ಅರ್ಜುನನನ್ನೂ ಐದು ಅಚ್ಯುತನನ್ನೂ ಹೊಡೆದು ಗಾಯಗೊಳಿಸಿದವು.

08012066a ತೈರಾಹತೌ ಸರ್ವಮನುಷ್ಯಮುಖ್ಯಾವ್ ಅಸೃಕ್ಕ್ಷರಂತೌ ಧನದೇಂದ್ರಕಲ್ಪೌ।
08012066c ಸಮಾಪ್ತವಿದ್ಯೇನ ಯಥಾಭಿಭೂತೌ ಹತೌ ಸ್ವಿದೇತೌ ಕಿಮು ಮೇನಿರೇಽನ್ಯೇ।।

ಕುಬೇರ ಮತ್ತು ಇಂದ್ರರಂತೆ ಸರ್ವಮನುಷ್ಯರ ಮುಖ್ಯರಾಗಿದ್ದ ಅವರು ಅಶ್ವತ್ಥಾಮನ ಬಾಣಗಳಿಂದ ಬಹಳವಾಗಿ ಗಾಯಗೊಂಡರು. ಧನುರ್ವಿದ್ಯೆಯ ಪಾರವನ್ನು ಕಂಡಿರುವ ದ್ರೌಣಿಯಿಂದ ಆ ಅವಸ್ಥೆಗೊಳಗಾದ ಅವರಿಬ್ಬರೂ ಹತರಾದರೆಂದೇ ಅನ್ಯರು ಭಾವಿಸಿದರು.

08012067a ಅಥಾರ್ಜುನಂ ಪ್ರಾಹ ದಶಾರ್ಹನಾಥಃ ಪ್ರಮಾದ್ಯಸೇ ಕಿಂ ಜಹಿ ಯೋಧಮೇತಂ।
08012067c ಕುರ್ಯಾದ್ಧಿ ದೋಷಂ ಸಮುಪೇಕ್ಷಿತೋಽಸೌ ಕಷ್ಟೋ ಭವೇದ್ವ್ಯಾಧಿರಿವಾಕ್ರಿಯಾವಾನ್।।

ಆಗ ದಶಾರ್ಹನಾಥನು ಅರ್ಜುನನಿಗೆ ಹೀಗೆ ಹೇಳಿದನು: “ಏಕೆ ಪ್ರಮಾದಕ್ಕೊಳಗಾಗಿದ್ದೀಯೆ? ಈ ಯೋಧನನ್ನು ಸಂಹರಿಸು! ಇವನನ್ನು ಈಗಲೂ ಉಪೇಕ್ಷಿಸಿದರೆ ಇವನು ಇನ್ನೂ ಅನೇಕ ದೋಷಗಳನ್ನೆಸಗುವನು. ವ್ಯಾಧಿಗೆ ಉಪಚಾರವನ್ನು ಸಮಯದಲ್ಲಿ ಮಾಡದಿದ್ದರೆ ಆಗುವಂತೆ ಮುಂದೆ ನಮಗೆ ಕಷ್ಟವಾಗುವುದು!”

08012068a ತಥೇತಿ ಚೋಕ್ತ್ವಾಚ್ಯುತಮಪ್ರಮಾದೀ ದ್ರೌಣಿಂ ಪ್ರಯತ್ನಾದಿಷುಭಿಸ್ತತಕ್ಷ।
08012068c ಚಿತ್ತ್ವಾಶ್ವರಶ್ಮೀಂಸ್ತುರಗಾನವಿಧ್ಯತ್ ತೇ ತಂ ರಣಾದೂಹುರತೀವ ದೂರಂ।।

ಹಾಗೆಯೇ ಆಗಲೆಂದು ಅಚ್ಯುತನಿಗೆ ಹೇಳಿ ಪ್ರಮಾದರಹಿತ ಅರ್ಜುನನು ಪ್ರಯತ್ನಪಟ್ಟು ದ್ರೌಣಿಯನ್ನು ಬಾಣಗಳಿಂದ ಗಾಯಗೊಳಿಸಿದನು ಮತ್ತು ಅವನ ಕುದುರೆಗಳ ಕಡಿವಾಣಗಳನ್ನು ಕತ್ತರಿಸಿ ಕುದುರೆಗಳು ಅವನನ್ನು ರಣದಿಂದ ಅತೀವ ದೂರಕ್ಕೆ ಒಯ್ಯುವಂತೆ ಮಾಡಿದನು.

08012069a ಆವೃತ್ಯ ನೇಯೇಷ ಪುನಸ್ತು ಯುದ್ಧಂ ಪಾರ್ಥೇನ ಸಾರ್ಧಂ ಮತಿಮಾನ್ವಿಮೃಶ್ಯ।
08012069c ಜಾನಂ ಜಯಂ ನಿಯತಂ ವೃಷ್ಣಿವೀರೇ ಧನಂಜಯೇ ಚಾಂಗಿರಸಾಂ ವರಿಷ್ಠಃ।।

ವೃಷ್ಣಿವೀರ ಮತ್ತು ಧನಂಜಯರಲ್ಲಿ ಜಯವು ನಿಯತವಾಗಿದೆಯೆಂದು ವಿಮರ್ಶಿಸಿ ನಿರ್ಧರಿಸಿದ ಮತಿವಂತ ಆಂಗಿರಸ ವರಿಷ್ಠ ಅಶ್ವತ್ಥಾಮನು ಪುನಃ ಪಾರ್ಥನೊಂದಿಗೆ ಯುದ್ಧಮಾಡುವುದು ಸರಿಯಲ್ಲವೆಂದು ತಿಳಿದುಕೊಂಡನು.

08012070a ಪ್ರತೀಪಕಾಯೇ ತು ರಣಾದಶ್ವತ್ಥಾಮ್ನಿ ಹೃತೇ ಹಯೈಃ।
08012070c ಮಂತ್ರೌಷಧಿಕ್ರಿಯಾದಾನೈರ್ವ್ಯಾಧೌ ದೇಹಾದಿವಾಹೃತೇ।।
08012071a ಸಂಶಪ್ತಕಾನಭಿಮುಖೌ ಪ್ರಯಾತೌ ಕೇಶವಾರ್ಜುನೌ।
08012071c ವಾತೋದ್ಧೂತಪತಾಕೇನ ಸ್ಯಂದನೇನೌಘನಾದಿನಾ।।

ಮಂತ್ರೌಷಧಿಕ್ರಿಯೆಗಳಿಂದ ದೇಹದ ವ್ಯಾಧಿಗಳು ಪರಿಹಾರವಾಗುವಂತೆ ಪ್ರತಿಕೂಲಕಾರಿ ಅಶ್ವತ್ಥಾಮನು ತನ್ನ ಕುದುರೆಗಳಿಂದಲೇ ದೂರಕ್ಕೊಯ್ಯಲ್ಪಡಲು ಕೇಶವಾರ್ಜುನರು ಗಾಳಿಯಿಂದ ಹಾರಾಡುತ್ತಿದ್ದ ಪತಾಕೆಯುಳ್ಳ ಮತ್ತು ಜಲಪ್ರವಾಹದ ಶಬ್ಧದಂತೆ ಶಬ್ಧಮಾಡುತ್ತಿದ್ದ ರಥದಲ್ಲಿ ಸಂಶಪ್ತಕರಿಗೆ ಅಭಿಮುಖವಾಗಿ ತೆರಳಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಅಶ್ವತ್ಥಾಮಪರಾಜಯೇ ದ್ವಾದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಅಶ್ವತ್ಥಾಮಪರಾಜಯ ಎನ್ನುವ ಹನ್ನೆರಡನೇ ಅಧ್ಯಾಯವು.