011 ಅಶ್ವತ್ಥಾಮಭೀಮಸೇನಯೋರ್ಯುದ್ಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ಕರ್ಣವಧ ಪರ್ವ

ಅಧ್ಯಾಯ 11

ಸಾರ

ಅಶ್ವತ್ಥಾಮ-ಭೀಮಸೇನರ ನಡುವೆ ಘೋರ ಯುದ್ಧ (1-26). ಸಿದ್ಧರಿಂದ ಆ ಯುದ್ಧದ ಪ್ರಶಂಸೆ (27-32). ಪರಸ್ಪರರ ಆಘಾತದಿಂದ ಇಬ್ಬರೂ ತಮ್ಮ ತಮ್ಮ ರಥಗಳಲ್ಲಿ ಕುಸಿದು ಬಿದ್ದುದು (33-41).

08011001 ಸಂಜಯ ಉವಾಚ।
08011001a ಭೀಮಸೇನಂ ತತೋ ದ್ರೌಣೀ ರಾಜನ್ವಿವ್ಯಾಧ ಪತ್ರಿಣಾ।
08011001c ತ್ವರಯಾ ಪರಯಾ ಯುಕ್ತೋ ದರ್ಶಯನ್ನಸ್ತ್ರಲಾಘವಂ।।

ಸಂಜಯನು ಹೇಳಿದನು: “ರಾಜನ್! ಆಗ ದ್ರೌಣಿಯು ತ್ವರೆಮಾಡಿ ಪರಮ ಯುಕ್ತಿಯಿಂದ ಅಸ್ತ್ರಲಾಘವವನ್ನು ಪ್ರಧರ್ಶಿಸುತ್ತಾ ಭೀಮಸೇನನನ್ನು ಪತ್ರಿಗಳಿಂದ ಪ್ರಹರಿಸಿದನು.

08011002a ಅಥೈನಂ ಪುನರಾಜಘ್ನೇ ನವತ್ಯಾ ನಿಶಿತೈಃ ಶರೈಃ।
08011002c ಸರ್ವಮರ್ಮಾಣಿ ಸಂಪ್ರೇಕ್ಷ್ಯ ಮರ್ಮಜ್ಞೋ ಲಘುಹಸ್ತವತ್।।

ಕೂಡಲೇ ಪುನಃ ತೊಂಭತ್ತು ನಿಶಿತ ಶರಗಳಿಂದ ಆ ಮರ್ಮಘ್ನ ಲಘುಹಸ್ತನು ಭೀಮಸೇನನನ ಸರ್ವಮರ್ಮಗಳಿಗೆ ಗುರಿಯಿಟ್ಟು ಹೊಡೆದನು.

08011003a ಭೀಮಸೇನಃ ಸಮಾಕೀರ್ಣೋ ದ್ರೌಣಿನಾ ನಿಶಿತೈಃ ಶರೈಃ।
08011003c ರರಾಜ ಸಮರೇ ರಾಜನ್ರಶ್ಮಿವಾನಿವ ಭಾಸ್ಕರಃ।।

ರಾಜನ್! ದ್ರೌಣಿಯ ನಿಶಿತ ಶರಗಳಿಂದ ಸಮಾಕೀರ್ಣನಾದ ಭೀಮಸೇನನು ಸಮರದಲ್ಲಿ ಕಿರಣಗಳುಳ್ಳ ಭಾಸ್ಕರನಂತೆ ರಾರಾಜಿಸಿದನು.

08011004a ತತಃ ಶರಸಹಸ್ರೇಣ ಸುಪ್ರಯುಕ್ತೇನ ಪಾಂಡವಃ।
08011004c ದ್ರೋಣಪುತ್ರಮವಚ್ಚಾದ್ಯ ಸಿಂಹನಾದಮಮುಂಚತ।।

ಆಗ ಚೆನ್ನಾಗಿ ಪ್ರಹರಿಸಿದ ಸಹಸ್ರ ಶರಗಳಿಂದ ಪಾಂಡವನು ದ್ರೋಣಪುತ್ರನನ್ನು ಮುಚ್ಚಿ ಸಿಂಹನಾದಗೈದನು.

08011005a ಶರೈಃ ಶರಾಂಸ್ತತೋ ದ್ರೌಣಿಃ ಸಂವಾರ್ಯ ಯುಧಿ ಪಾಂಡವಂ।
08011005c ಲಲಾಟೇಽಭ್ಯಹನದ್ರಾಜನ್ನಾರಾಚೇನ ಸ್ಮಯನ್ನಿವ।।

ರಾಜನ್! ಯುದ್ಧದಲ್ಲಿ ಶರಗಳಿಂದ ಶರಗಳನ್ನು ನಾಶಗೊಳಿಸಿ ದ್ರೌಣಿಯು ನಗುತ್ತಿರುವನೋ ಎನ್ನುವಂತೆ ನಾರಾಚಗಳಿಂದ ಪಾಂಡವನ ಹಣೆಗೆ ಹೊಡೆದನು.

08011006a ಲಲಾಟಸ್ಥಂ ತತೋ ಬಾಣಂ ಧಾರಯಾಮಾಸ ಪಾಂಡವಃ।
08011006c ಯಥಾ ಶೃಂಗಂ ವನೇ ದೃಪ್ತಃ ಖಡ್ಗೋ ಧಾರಯತೇ ನೃಪ।।

ನೃಪ! ವನದಲ್ಲಿ ಮದಿಸಿದ ಖಡ್ಗಮೃಗವು ಕೋಡನ್ನು ಹೊತ್ತಿರುವಂತೆ ಆ ಬಾಣವು ಪಾಂಡವನ ಹಣೆಯನ್ನು ಹೊಕ್ಕಿ ನಿಂತಿತು.

08011007a ತತೋ ದ್ರೌಣಿಂ ರಣೇ ಭೀಮೋ ಯತಮಾನಂ ಪರಾಕ್ರಮೀ।
08011007c ತ್ರಿಭಿರ್ವಿವ್ಯಾಧ ನಾರಾಚೈರ್ಲಲಾಟೇ ವಿಸ್ಮಯನ್ನಿವ।।

ಆಗ ಪ್ರಯತ್ನಿಸುತ್ತಿದ್ದ ಪರಾಕ್ರಮೀ ಭೀಮನು ರಣದಲ್ಲಿ ನಸುನಗುತ್ತಿರುವವನಂತೆ ದ್ರೌಣಿಯ ಲಲಾಟಕ್ಕೆ ಮೂರು ನಾರಾಚಗಳಿಂದ ಹೊಡೆದನು.

08011008a ಲಲಾಟಸ್ಥೈಸ್ತತೋ ಬಾಣೈರ್ಬ್ರಾಹ್ಮಣಃ ಸ ವ್ಯರೋಚತ।
08011008c ಪ್ರಾವೃಷೀವ ಯಥಾ ಸಿಕ್ತಸ್ತ್ರಿಶೃಂಗಃ ಪರ್ವತೋತ್ತಮಃ।।

ಹಣೆಗೆ ಚುಚ್ಚಿಕೊಂಡಿದ್ದ ಬಾಣಗಳಿಂದ ಆ ಬ್ರಾಹ್ಮಣನು ವರ್ಷಾಕಾಲದಲ್ಲಿ ಮಳೆಯಿಂದ ತೋಯ್ದ ಮೂರು ಶಿಖರಗಳುಳ್ಳ ಉತ್ತಮ ಪರ್ವತದಂತೆಯೇ ವಿರಾಜಿಸಿದನು.

08011009a ತತಃ ಶರಶತೈರ್ದ್ರೌಣಿಮರ್ದಯಾಮಾಸ ಪಾಂಡವಃ।
08011009c ನ ಚೈನಂ ಕಂಪಯಾಮಾಸ ಮಾತರಿಶ್ವೇವ ಪರ್ವತಂ।।

ಆಗ ನೂರು ಶರಗಳಿಂದ ಪಾಂಡವನು ದ್ರೌಣಿಯನ್ನು ಪೀಡಿಸಿದನು. ಆದರೆ ಭಿರುಗಾಳಿಯು ಪರ್ವತವನ್ನು ಅಳ್ಳಾಡಿಸಲು ಸಾಧ್ಯವಾಗದಂತೆ ಅವನನ್ನು ಕಂಪಿಸಲು ಶಕ್ತನಾಗಲಿಲ್ಲ.

08011010a ತಥೈವ ಪಾಂಡವಂ ಯುದ್ಧೇ ದ್ರೌಣಿಃ ಶರಶತೈಃ ಶಿತೈಃ।
08011010c ನಾಕಂಪಯತ ಸಂಹೃಷ್ಟೋ ವಾರ್ಯೋಘ ಇವ ಪರ್ವತಂ।।

ಹಾಗೆಯೇ ಸಂಹೃಷ್ಟ ದ್ರೌಣಿಯು ಯುದ್ಧದಲ್ಲಿ ಪಾಂಡವನನ್ನು ನೂರು ಶರಗಳಿಂದ ಹೊಡೆದರೂ ಮಹಾಜಲಪ್ರವಾಹವು ಪರ್ವತವನ್ನು ಕದಲಿಸಲಾಗದಂತೆ ಅವನನ್ನು ಕದಲಿಸಲಾಗಲಿಲ್ಲ.

08011011a ತಾವನ್ಯೋನ್ಯಂ ಶರೈರ್ಘೋರೈಶ್ಚಾದಯಾನೌ ಮಹಾರಥೌ।
08011011c ರಥಚರ್ಯಾಗತೌ ಶೂರೌ ಶುಶುಭಾತೇ ರಣೋತ್ಕಟೌ।।

ರಥದಲ್ಲಿ ಸಂಚರಿಸುತ್ತಿದ್ದ ಅವರಿಬ್ಬರು ಮಹಾರಥ ಶೂರ ರಣೋತ್ಕಟರು ಅನ್ಯೋನ್ಯರನ್ನು ಘೋರ ಶರಸಂಘಗಳಿಂದ ಮುಚ್ಚುತ್ತಾ ಶೋಭಿಸಿದರು.

08011012a ಆದಿತ್ಯಾವಿವ ಸಂದೀಪ್ತೌ ಲೋಕಕ್ಷಯಕರಾವುಭೌ।
08011012c ಸ್ವರಶ್ಮಿಭಿರಿವಾನ್ಯೋನ್ಯಂ ತಾಪಯಂತೌ ಶರೋತ್ತಮೈಃ।।

ಆದಿತ್ಯರಂತೆ ಬೆಳಗುತ್ತಿದ್ದ ಆ ಇಬ್ಬರು ಲೋಕಕ್ಷಯಕಾರಕರೂ ತಮ್ಮದೇ ರಶ್ಮಿಗಳಂತಿದ್ದ ಉತ್ತಮ ಶರಗಳಿಂದ ಅನ್ಯೋನ್ಯರನ್ನು ತಾಪಗೊಳಿಸುತ್ತಿದ್ದರು.

08011013a ಕೃತಪ್ರತಿಕೃತೇ ಯತ್ನಂ ಕುರ್ವಾಣೌ ಚ ಮಹಾರಣೇ।
08011013c ಕೃತಪ್ರತಿಕೃತೇ ಯತ್ನಂ ಚಕ್ರಾತೇ ತಾವಭೀತವತ್।।

ಮಾಡಿದುದಕ್ಕೆ ಪ್ರತೀಕಾರ ಮಾಡುವುದರಲ್ಲಿ ಪ್ರಯತ್ನಿಸುತ್ತಿದ್ದ ಅವರಿಬ್ಬರೂ ಅಭೀತರಾಗಿ ಮಹಾರಣದಲ್ಲಿ ಪ್ರತೀಕಾರಮಾಡುತ್ತಿದ್ದರು.

08011014a ವ್ಯಾಘ್ರಾವಿವ ಚ ಸಂಗ್ರಾಮೇ ಚೇರತುಸ್ತೌ ಮಹಾರಥೌ।
08011014c ಶರದಂಷ್ಟ್ರೌ ದುರಾಧರ್ಷೌ ಚಾಪವ್ಯಾತ್ತೌ ಭಯಾನಕೌ।।

ವ್ಯಾಘ್ರಗಳಂತೆ ಸಂಗ್ರಾಮದಲ್ಲಿ ಸಂಚರಿಸುತ್ತಿದ್ದ ಆ ಇಬ್ಬರು ಮಹಾರಥ ದುರಾಧರ್ಷರು ಶರಗಳೇ ಕೋರೆದಾಡೆಗಳಂತೆಯೂ ಧನುಸ್ಸೇ ಮುಖಗಳಂತಿದ್ದು ಭಯಾನಕರಾಗಿ ಕಾಣುತ್ತಿದ್ದರು.

08011015a ಅಭೂತಾಂ ತಾವದೃಶ್ಯೌ ಚ ಶರಜಾಲೈಃ ಸಮಂತತಃ।
08011015c ಮೇಘಜಾಲೈರಿವ ಚ್ಛನ್ನೌ ಗಗನೇ ಚಂದ್ರಭಾಸ್ಕರೌ।।

ಗಗನದಲ್ಲಿ ಮೇಘಜಾಲಗಳಿಂದ ಮುಚ್ಚಿಹೋದ ಚಂದ್ರ-ಭಾಸ್ಕರರಂತೆ ಅವರಿಬ್ಬರೂ ಎಲ್ಲಕಡೆ ಶರಜಾಲಗಳಿಂದ ಮುಚ್ಚಿ ಇತರರಿಗೆ ಅದೃಶ್ಯರಾಗಿದ್ದರು.

08011016a ಪ್ರಕಾಶೌ ಚ ಮುಹೂರ್ತೇನ ತತ್ರೈವಾಸ್ತಾಮರಿಂದಮೌ।
08011016c ವಿಮುಕ್ತೌ ಮೇಘಜಾಲೇನ ಶಶಿಸೂರ್ಯೌ ಯಥಾ ದಿವಿ।।

ಕ್ಷಣಮಾತ್ರದಲ್ಲಿ ಆ ಅರಿಂದಮರು ಮೇಘಜಾಲಗಳಿಂದ ವಿಮುಕ್ತರಾಗಿ ದಿವಿಯಲ್ಲಿರುವ ಶಶಿ-ಸೂರ್ಯರಂತೆ ಪುನಃ ಪ್ರಕಾಶಿಸುತ್ತಿದ್ದರು.

08011017a ಅಪಸವ್ಯಂ ತತಶ್ಚಕ್ರೇ ದ್ರೌಣಿಸ್ತತ್ರ ವೃಕೋದರಂ।
08011017c ಕಿರಂ ಶರಶತೈರುಗ್ರೈರ್ಧಾರಾಭಿರಿವ ಪರ್ವತಂ।।

ಆಗ ಅಲ್ಲಿ ದ್ರೌಣಿಯು ವೃಕೋದರನನ್ನು ಬಲಭಾಗಕ್ಕೆ ಮಾಡಿಕೊಂಡು ಮಳೆಯ ಧಾರೆಯು ಪರ್ವತವನ್ನು ಹೇಗೋ ಹಾಗೆ ನೂರು ಉಗ್ರ ಬಾಣಗಳಿಂದ ಮುಚ್ಚಿಬಿಟ್ಟನು.

08011018a ನ ತು ತನ್ಮಮೃಷೇ ಭೀಮಃ ಶತ್ರೋರ್ವಿಜಯಲಕ್ಷಣಂ।
08011018c ಪ್ರತಿಚಕ್ರೇ ಚ ತಂ ರಾಜನ್ಪಾಂಡವೋಽಪ್ಯಪಸವ್ಯತಃ।।

ಶತ್ರುವಿನ ಆ ವಿಜಯಲಕ್ಷಣವನ್ನು ಭೀಮನು ಸಹಿಸಿಕೊಳ್ಳಲಿಲ್ಲ. ರಾಜನ್! ಪಾಂಡವನೂ ಕೂಡ ತಿರುಗಿ ಅವನನ್ನು ಬಲಭಾಗಕ್ಕೆ ಮಾಡಿಕೊಂಡನು.

08011019a ಮಂಡಲಾನಾಂ ವಿಭಾಗೇಷು ಗತಪ್ರತ್ಯಾಗತೇಷು ಚ।
08011019c ಬಭೂವ ತುಮುಲಂ ಯುದ್ಧಂ ತಯೋಸ್ತತ್ರ ಮಹಾಮೃಧೇ।।

ಮಹಾಮೃಧದಲ್ಲಿ ಮಂಡಲಗಳನ್ನು ವಿಭಾಗಿಸಿಕೊಂಡು ಗತ-ಪ್ರತ್ಯಾಗತರಾಗಿ ಅವರಿಬ್ಬರ ನಡುವೆ ತುಮುಲ ಯುದ್ಧವು ನಡೆಯಿತು.

08011020a ಚರಿತ್ವಾ ವಿವಿಧಾನ್ಮಾರ್ಗಾನ್ಮಂಡಲಂ ಸ್ಥಾನಮೇವ ಚ।
08011020c ಶರೈಃ ಪೂರ್ಣಾಯತೋತ್ಸೃಷ್ಟೈರನ್ಯೋನ್ಯಮಭಿಜಘ್ನತುಃ।।

ಮಂಡಲ-ಸ್ಥಾನ ಮೊದಲಾದ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಾ ಅವರಿಬ್ಬರೂ ಪೂರ್ಣವಾಗಿ ಸೆಳೆದುಬಿಟ್ಟ ಶರಗಳಿಂದ ಅನ್ಯೋನ್ಯರನ್ನು ಪ್ರಹರಿಸಿದರು.

08011021a ಅನ್ಯೋನ್ಯಸ್ಯ ವಧೇ ಯತ್ನಂ ಚಕ್ರತುಸ್ತೌ ಮಹಾರಥೌ।
08011021c ಈಷತುರ್ವಿರಥಂ ಚೈವ ಕರ್ತುಮನ್ಯೋನ್ಯಮಾಹವೇ।।

ಆಹವದಲ್ಲಿ ಆ ಇಬ್ಬರು ಮಹಾರಥರೂ ಅನ್ಯೋನ್ಯರನ್ನು ವಧಿಸಲು ಪ್ರಯತ್ನಿಸಿದರು ಮತ್ತು ಅನ್ಯೋನ್ಯರನ್ನು ವಿರಥರನ್ನಾಗಿ ಮಾಡಲು ಪ್ರಯತ್ನಿಸಿದರು.

08011022a ತತೋ ದ್ರೌಣಿರ್ಮಹಾಸ್ತ್ರಾಣಿ ಪ್ರಾದುಶ್ಚಕ್ರೇ ಮಹಾರಥಃ।
08011022c ತಾನ್ಯಸ್ತ್ರೈರೇವ ಸಮರೇ ಪ್ರತಿಜಘ್ನೇಽಸ್ಯ ಪಾಂಡವಃ।।

ಆಗ ಸಮರದಲ್ಲಿ ಮಹಾರಥ ದ್ರೌಣಿಯು ಮಹಾಸ್ತ್ರಗಳನ್ನು ಪ್ರಯೋಗಿಸತೊಡಗಿದನು. ಪಾಂಡವನು ಅವುಗಳನ್ನು ಅಸ್ತ್ರಗಳಿಂದಲೇ ನಾಶಗೊಳಿಸಿದನು.

08011023a ತತೋ ಘೋರಂ ಮಹಾರಾಜ ಅಸ್ತ್ರಯುದ್ಧಮವರ್ತತ।
08011023c ಗ್ರಹಯುದ್ಧಂ ಯಥಾ ಘೋರಂ ಪ್ರಜಾಸಂಹರಣೇ ಅಭೂತ್।।

ಮಹಾರಾಜ! ಆಗ ಪ್ರಜಾಸಂಹರಣದಲ್ಲಿ ನಡೆಯುವ ಘೋರ ಗ್ರಹಯುದ್ಧದಂತೆ ಘೋರ ಅಸ್ತ್ರಯುದ್ಧವು ನಡೆಯಿತು.

08011024a ತೇ ಬಾಣಾಃ ಸಮಸಜ್ಜಂತ ಕ್ಷಿಪ್ತಾಸ್ತಾಭ್ಯಾಂ ತು ಭಾರತ।
08011024c ದ್ಯೋತಯಂತೋ ದಿಶಃ ಸರ್ವಾಸ್ತಚ್ಚ ಸೈನ್ಯಂ ಸಮಂತತಃ।।

ಭಾರತ! ಅವರು ಪ್ರಯೋಗಿಸುತ್ತಿದ್ದ ಬಾಣಗಳು ದಿಕ್ಕುಗಳನ್ನು ಬೆಳಗಿಸುತ್ತಾ ಸೈನ್ಯಗಳ ಸುತ್ತಲೂ ಬೀಳುತ್ತಿದ್ದವು.

08011025a ಬಾಣಸಂಘಾವೃತಂ ಘೋರಮಾಕಾಶಂ ಸಮಪದ್ಯತ।
08011025c ಉಲ್ಕಾಪಾತಕೃತಂ ಯದ್ವತ್ಪ್ರಜಾನಾಂ ಸಂಕ್ಷಯೇ ನೃಪ।।

ನೃಪ! ಪ್ರಜಾಸಂಕ್ಷಯದಲ್ಲಿ ಉಲ್ಕಾಪಾತಗಳಾಗುವಂತೆ ಅವರ ಬಾಣಸಂಘಗಳಿಂದ ಆವೃತ ಆಕಾಶವು ಘೋರವಾಗಿ ಕಂಡಿತು.

08011026a ಬಾಣಾಭಿಘಾತಾತ್ಸಂಜಜ್ಞೇ ತತ್ರ ಭಾರತ ಪಾವಕಃ।
08011026c ಸವಿಸ್ಫುಲಿಂಗೋ ದೀಪ್ತಾರ್ಚಿಃ ಸೋಽದಹದ್ವಾಹಿನೀದ್ವಯಂ।।

ಭಾರತ! ಅಲ್ಲಿ ಬಾಣಗಳ ಆಘಾತದಿಂದ ಬೆಂಕಿಯು ಹುಟ್ಟಿಕೊಂಡು ಕಿಡಿ-ಜ್ವಾಲೆಗಳಿಂದ ಕೂಡಿದ ಅದು ಎರಡೂ ಸೇನೆಗಳನ್ನು ಸುಡತೊಡಗಿತು.

08011027a ತತ್ರ ಸಿದ್ಧಾ ಮಹಾರಾಜ ಸಂಪತಂತೋಽಬ್ರುವನ್ವಚಃ।
08011027c ಅತಿ ಯುದ್ಧಾನಿ ಸರ್ವಾಣಿ ಯುದ್ಧಂ ಏತತ್ತತೋಽಧಿಕಂ।।

ಮಹಾರಾಜ! ಅಲ್ಲಿ ಸಿದ್ಧರು ಈ ಮಾತುಗಳನ್ನು ಆಡತೊಡಗಿದರು: “ಎಲ್ಲ ಯುದ್ಧಗಳಲ್ಲಿ ಈ ಯುದ್ಧವು ಅಧಿಕವಾಗಿದೆ.

08011028a ಸರ್ವಯುದ್ಧಾನಿ ಚೈತಸ್ಯ ಕಲಾಂ ನಾರ್ಹಂತಿ ಷೋಡಶೀಂ।
08011028c ನೈತಾದೃಶಂ ಪುನರ್ಯುದ್ಧಂ ನ ಭೂತಂ ನ ಭವಿಷ್ಯತಿ।।

ಎಲ್ಲ ಯುದ್ಧಗಳೂ ಇದರ ಹದಿನಾರನೆಯ ಒಂದು ಭಾಗಕ್ಕೂ ಸಾಟಿಯಾಗಲಾರವು. ಇಂತಹ ಯುದ್ಧವು ಪುನಃ ನಡೆಯಲಾರದು ಮತ್ತು ಈ ಹಿಂದೆ ನಡೆದಿರಲಿಲ್ಲ!

08011029a ಅಹೋ ಜ್ಞಾನೇನ ಸಂಯುಕ್ತಾವುಭೌ ಚೋಗ್ರಪರಾಕ್ರಮೌ।
08011029c ಅಹೋ ಭೀಮೇ ಬಲಂ ಭೀಮಂ ಏತಯೋಶ್ಚ ಕೃತಾಸ್ತ್ರತಾ।।

ಆಹಾ! ಇಬ್ಬರು ಉಗ್ರಪರಾಕ್ರಮಿಗಳೂ ಸಂಪೂರ್ಣವಾಗಿ ತಿಳಿದುಕೊಂಡಿದ್ದಾರೆ. ಆಹಾ! ಭೀಮನು ಭಯಂಕರ ಬಲವುಳ್ಳವನು. ಇನ್ನೊಬ್ಬನು ಅಸ್ತ್ರಗಳಲ್ಲಿ ಪಳಗಿದವನು.

08011030a ಅಹೋ ವೀರ್ಯಸ್ಯ ಸಾರತ್ವಮಹೋ ಸೌಷ್ಠವಮೇತಯೋಃ।
08011030c ಸ್ಥಿತಾವೇತೌ ಹಿ ಸಮರೇ ಕಾಲಾಂತಕಯಮೋಪಮೌ।।

ಆಹಾ! ಇವರಲ್ಲಿ ವೀರ್ಯದ ಸಾರತ್ವಗಳಿವೆ. ಆಹಾ! ಇಬ್ಬರಲ್ಲೂ ಶರೀರಸೌಷ್ಟವವಿದೆ. ಸಮರದಲ್ಲಿ ಇಬ್ಬರೂ ಕಾಲಾಂತಕಯಮರಂತೆ ನಿಂತಿದ್ದಾರೆ!

08011031a ರುದ್ರೌ ದ್ವಾವಿವ ಸಂಭೂತೌ ಯಥಾ ದ್ವಾವಿವ ಭಾಸ್ಕರೌ।
08011031c ಯಮೌ ವಾ ಪುರುಷವ್ಯಾಘ್ರೌ ಘೋರರೂಪಾವಿಮೌ ರಣೇ।।

ರಣದಲ್ಲಿ ಈ ಪುರುಷವ್ಯಾಘ್ರರಿಬ್ಬರೂ ಇಬ್ಬರು ರುದ್ರರಂತೆಯೂ, ಇಬ್ಬರು ಭಾಸ್ಕರರಂತೆಯೂ ಅಥವಾ ಇಬ್ಬರು ಯಮರಂತೆಯೂ ಘೋರರಾಗಿ ಕಾಣುತ್ತಿದ್ದಾರೆ!”

08011032a ಶ್ರೂಯಂತೇ ಸ್ಮ ತದಾ ವಾಚಃ ಸಿದ್ಧಾನಾಂ ವೈ ಮುಹುರ್ಮುಹುಃ।
08011032c ಸಿಂಹನಾದಶ್ಚ ಸಂಜಜ್ಞೇ ಸಮೇತಾನಾಂ ದಿವೌಕಸಾಂ।
08011032e ಅದ್ಭುತಂ ಚಾಪ್ಯಚಿಂತ್ಯಂ ಚ ದೃಷ್ಟ್ವಾ ಕರ್ಮ ತಯೋರ್ಮೃಧೇ।।

ಹೀಗೆ ಮಾತನಾಡಿಕೊಳ್ಳುತ್ತಿದ್ದ ಸಿದ್ಧರ ಮಾತುಗಳು ಪುನಃ ಪುನಃ ಕೇಳಿಬರುತ್ತಿತ್ತು. ಯುದ್ಧದಲ್ಲಿ ಅವರಿಬ್ಬರ ಅದ್ಭುತ ಅಚಿಂತ್ಯ ಕರ್ಮಗಳನ್ನು ನೋಡಿ ಸೇರಿದ್ದ ದಿವೌಕಸರ ಸಿಂಹನಾದಗಳೂ ಕೇಳಿಬರುತ್ತಿದ್ದವು.

08011033a ತೌ ಶೂರೌ ಸಮರೇ ರಾಜನ್ಪರಸ್ಪರಕೃತಾಗಸೌ।
08011033c ಪರಸ್ಪರಮುದೈಕ್ಷೇತಾಂ ಕ್ರೋಧಾದುದ್ವೃತ್ಯ ಚಕ್ಷುಷೀ।।

ರಾಜನ್! ಸಮರದಲ್ಲಿ ಪರಸ್ಪರಾಪರಾಧಿಗಳಾಗಿದ್ದ ಆ ಇಬ್ಬರು ಶೂರರೂ ಕ್ರೋಧದಿಂದ ಕಣ್ಣುಗಳನ್ನು ಮೇಲೆತ್ತಿ ಪರಸ್ಪರರನ್ನು ದುರುಗುಟ್ಟಿ ನೋಡುತ್ತಿದ್ದರು.

08011034a ಕ್ರೋಧರಕ್ತೇಕ್ಷಣೌ ತೌ ತು ಕ್ರೋಧಾತ್ಪ್ರಸ್ಫುರಿತಾಧರೌ।
08011034c ಕ್ರೋಧಾತ್ಸಂದಷ್ಟದಶನೌ ಸಂದಷ್ಟದಶನಚ್ಚದೌ।।

ಕ್ರೋಧದಿಂದ ಕಣ್ಣುಗಳು ಕೆಂಪಾಗಿದ್ದವು ಮತ್ತು ಕ್ರೋಧದಿಂದ ಅವರ ತುಟಿಗಳು ಅದುರುತ್ತಿದ್ದವು. ಕ್ರೋಧದಿಂದ ಕಟಕಟನೆ ಹಲ್ಲುಕಡಿಯುತ್ತಿದ್ದರು ಮತ್ತು ಅವುಡುಗಳನ್ನು ಕಚ್ಚುತ್ತಿದ್ದರು.

08011035a ಅನ್ಯೋನ್ಯಂ ಚಾದಯಂತೌ ಸ್ಮ ಶರವೃಷ್ಟ್ಯಾ ಮಹಾರಥೌ।
08011035c ಶರಾಂಬುಧಾರೌ ಸಮರೇ ಶಸ್ತ್ರವಿದ್ಯುತ್ಪ್ರಕಾಶಿನೌ।।

ಇಬ್ಬರು ಮಹಾರಥರೂ ಶರವೃಷ್ಟಿಯಿಂದ ಅನ್ಯೋನ್ಯರನ್ನು ಮುಚ್ಚುತ್ತಿದ್ದರು. ಸಮರದಲ್ಲಿ ಶರಗಳ ಮಳೆಸುರಿಸಿ ಶಸ್ತ್ರಗಳಿಂದ ಮಿಂಚುಗಳನ್ನು ಪ್ರಕಟಿಸುತ್ತಿದ್ದರು.

08011036a ತಾವನ್ಯೋನ್ಯಂ ಧ್ವಜೌ ವಿದ್ಧ್ವಾ ಸಾರಥೀ ಚ ಮಹಾರಥೌ।
08011036c ಅನ್ಯೋನ್ಯಸ್ಯ ಹಯಾನ್ವಿದ್ಧ್ವಾ ಬಿಭಿದಾತೇ ಪರಸ್ಪರಂ।।

ಆ ಮಹಾರಥರಿಬ್ಬರೂ ಅನ್ಯೋನ್ಯರ ಧ್ವಜಗಳನ್ನು ಮತ್ತು ಸಾರಥಿಯರನ್ನು ಹೊಡೆದು ಅನ್ಯೋನ್ಯರ ಕುದುರೆಗಳನ್ನು ಹೊಡೆದು ಪರಸ್ಪರರನ್ನು ಪ್ರಹರಿಸಿದರು.

08011037a ತತಃ ಕ್ರುದ್ಧೌ ಮಹಾರಾಜ ಬಾಣೌ ಗೃಹ್ಯ ಮಹಾಹವೇ।
08011037c ಉಭೌ ಚಿಕ್ಷಿಪತುಸ್ತೂರ್ಣಮನ್ಯೋನ್ಯಸ್ಯ ವಧೈಷಿಣೌ।।

ಮಹಾರಾಜ! ಆಗ ಕ್ರುದ್ಧರಾದ ಮತ್ತು ಅನ್ಯೋನ್ಯರನ್ನು ವಧಿಸಲಿಚ್ಛಿಸುತ್ತಿದ್ದ ಅವರಿಬ್ಬರೂ ಮಹಾಹವದಲ್ಲಿ ಬಾಣಗಳನ್ನು ಹಿಡಿದು ಕೂಡಲೇ ಅನ್ಯೋನ್ಯರಮೇಲೆ ಎಸೆದರು.

08011038a ತೌ ಸಾಯಕೌ ಮಹಾರಾಜ ದ್ಯೋತಮಾನೌ ಚಮೂಮುಖೇ।
08011038c ಆಜಘ್ನಾತೇ ಸಮಾಸಾದ್ಯ ವಜ್ರವೇಗೌ ದುರಾಸದೌ।।

ಮಹಾರಾಜ! ವಜ್ರವೇಗದ ದುರಾಸದ ಆ ಎರಡು ಸಾಯಕಗಳೂ ಉರಿಯುತ್ತಾ ಅವರಿಬ್ಬರನ್ನೂ ಪ್ರಹರಿಸಿತು.

08011039a ತೌ ಪರಸ್ಪರವೇಗಾಚ್ಚ ಶರಾಭ್ಯಾಂ ಚ ಭೃಶಾಹತೌ।
08011039c ನಿಪೇತತುರ್ಮಹಾವೀರೌ ಸ್ವರಥೋಪಸ್ಥಯೋಸ್ತದಾ।।

ಪರಸ್ಪರರ ಆ ಶರಗಳ ವೇಗದಿಂದ ತುಂಬಾ ಗಾಯಗೊಂಡ ಇಬ್ಬರು ಮಹಾವೀರರೂ ತಮ್ಮ ರಥಗಳಲ್ಲಿಯೇ ಕುಸಿದು ಬಿದ್ದರು.

08011040a ತತಸ್ತು ಸಾರಥಿರ್ಜ್ಞಾತ್ವಾ ದ್ರೋಣಪುತ್ರಮಚೇತನಂ।
08011040c ಅಪೋವಾಹ ರಣಾದ್ರಾಜನ್ಸರ್ವಕ್ಷತ್ರಸ್ಯ ಪಶ್ಯತಃ।।

ರಾಜನ್! ದ್ರೋಣಪುತ್ರನು ಅಚೇತನನಾದುದನ್ನು ತಿಳಿದ ಅವನ ಸಾರಥಿಯು ಅವನನ್ನು ಸರ್ವಕ್ಷತ್ರಿಯರೂ ನೋಡುತ್ತಿದ್ದಂತೆ ರಣದಿಂದ ಆಚೆ ಕೊಂಡೊಯ್ದನು.

08011041a ತಥೈವ ಪಾಂಡವಂ ರಾಜನ್ವಿಹ್ವಲಂತಂ ಮುಹುರ್ಮುಹುಃ।
08011041c ಅಪೋವಾಹ ರಥೇನಾಜೌ ಸಾರಥಿಃ ಶತ್ರುತಾಪನಂ।।

ಹಾಗೆಯೇ ಪುನಃ ಪುನಃ ವಿಹ್ವಲಿಸುತ್ತಿದ್ದ ಶತ್ರುತಾಪನ ಪಾಂಡವನನ್ನು ಕೂಡ ಅವನ ಸಾರಥಿಯು ರಥದಿಂದ ಆಚೆ ಕೊಂಡೊಯ್ದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಅಶ್ವತ್ಥಾಮಭೀಮಸೇನಯೋರ್ಯುದ್ಧೇ ಏಕಾದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಅಶ್ವತ್ಥಾಮಭೀಮಸೇನಯೋರ್ಯುದ್ಧ ಎನ್ನುವ ಹನ್ನೊಂದನೇ ಅಧ್ಯಾಯವು.