ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 9
ಸಾರ
ದ್ವಂದ್ವ ಯುದ್ಧಗಳ ವರ್ಣನೆ (1-10). ಸಾತ್ಯಕಿ ಮತ್ತು ಕೇಕಯ ರಾಜಕುಮಾರರಾದ ವಿಂದಾನುವಿಂದರ ನಡುವೆ ಯುದ್ಧ; ಸಾತ್ಯಕಿಯಿಂದ ವಿಂದಾನುವಿಂದರ ವಧೆ (11-35).
08009001 ಸಂಜಯ ಉವಾಚ।
08009001a ತತಃ ಕರ್ಣೋ ಮಹೇಷ್ವಾಸಃ ಪಾಂಡವಾನಾಮನೀಕಿನೀಂ।
08009001c ಜಘಾನ ಸಮರೇ ಶೂರಃ ಶರೈಃ ಸನ್ನತಪರ್ವಭಿಃ।।
ಸಂಜಯನು ಹೇಳಿದನು: “ಅನಂತರ ಶೂರ ಮಹೇಷ್ವಾಸ ಕರ್ಣನು ಸನ್ನತಪರ್ವ ಶರಗಳಿಂದ ಸಮರದಲ್ಲಿ ಪಾಂಡವರ ಸೇನೆಯನ್ನು ಸಂಹರಿಸಿದನು.
08009002a ತಥೈವ ಪಾಂಡವಾ ರಾಜಂಸ್ತವ ಪುತ್ರಸ್ಯ ವಾಹಿನೀಂ।
08009002c ಕರ್ಣಸ್ಯ ಪ್ರಮುಖೇ ಕ್ರುದ್ಧಾ ವಿನಿಜಘ್ನುರ್ಮಹಾರಥಾಃ।।
ರಾಜನ್! ಹಾಗೆಯೇ ಮಹಾರಥ ಪಾಂಡವರು ಕೂಡ ಕ್ರುದ್ಧರಾಗಿ ಕರ್ಣನ ಎದಿರೇ ನಿನ್ನ ಮಗನ ಸೇನೆಯನ್ನು ಸಂಹರಿಸಿದರು.
08009003a ಕರ್ಣೋ ರಾಜನ್ಮಹಾಬಾಹುರ್ನ್ಯವಧೀತ್ಪಾಂಡವೀಂ ಚಮೂಂ।
08009003c ನಾರಾಚೈರರ್ಕರಶ್ಮ್ಯಾಭೈಃ ಕರ್ಮಾರಪರಿಮಾರ್ಜಿತೈಃ।।
ರಾಜನ್! ಮಹಾಬಾಹು ಕರ್ಣನು ಸೂರ್ಯನ ರಶ್ಮಿಗಳಂತೆ ತೀಕ್ಷ್ಣವಾಗಿದ್ದ, ಕಮ್ಮಾರನಲ್ಲಿ ತಯಾರಿಸಿದ್ದ ನಾರಾಚಗಳಿಂದ ಪಾಂಡವೀ ಸೇನೆಯನ್ನು ಹೊಡೆದನು.
08009004a ತತ್ರ ಭಾರತ ಕರ್ಣೇನ ನಾರಾಚೈಸ್ತಾಡಿತಾ ಗಜಾಃ।
08009004c ನೇದುಃ ಸೇದುಶ್ಚ ಮಂಲುಶ್ಚ ಬಭ್ರಮುಶ್ಚ ದಿಶೋ ದಶ।।
ಭಾರತ! ಅಲ್ಲಿ ಕರ್ಣನ ನಾರಾಚಗಳಿಂದ ಹೊಡೆಯಲ್ಪಟ್ಟ ಆನೆಗಳು ಅರಚುತ್ತಿದ್ದವು, ನಿಟ್ಟುಸಿರು ಬಿಡುತ್ತಿದ್ದವು, ನರಳುತ್ತಿದ್ದವು ಮತ್ತು ಹತ್ತೂ ದಿಕ್ಕುಗಳಲ್ಲಿ ಓಡಿ ಹೋಗುತ್ತಿದ್ದವು.
08009005a ವಧ್ಯಮಾನೇ ಬಲೇ ತಸ್ಮಿನ್ಸೂತಪುತ್ರೇಣ ಮಾರಿಷ।
08009005c ನಕುಲೋಽಭ್ಯದ್ರವತ್ತೂರ್ಣಂ ಸೂತಪುತ್ರಂ ಮಹಾರಣೇ।।
ಮಾರಿಷ! ಸೂತಪುತ್ರನು ಆ ಸೇನೆಯನ್ನು ಹಾಗೆ ವಧಿಸುತ್ತಿರಲು ಮಹಾರಣದಲ್ಲಿ ನಕುಲನು ಕೂಡಲೇ ಸೂತಪುತ್ರನನ್ನು ಆಕ್ರಮಣಿಸಿದನು.
08009006a ಭೀಮಸೇನಸ್ತಥಾ ದ್ರೌಣಿಂ ಕುರ್ವಾಣಂ ಕರ್ಮ ದುಷ್ಕರಂ।
08009006c ವಿಂದಾನುವಿಂದೌ ಕೈಕೇಯೌ ಸಾತ್ಯಕಿಃ ಸಮವಾರಯತ್।।
ಹಾಗೆಯೇ ಭೀಮಸೇನನು ದುಷ್ಕರ ಕರ್ಮಗಳನ್ನೆಸಗುತ್ತಿದ್ದ ದ್ರೌಣಿಯನ್ನು ಮತ್ತು ಸಾತ್ಯಕಿಯು ಕೇಕಯ ವಿಂದಾನುವಿಂದರನ್ನು ಎದುರಿಸಿದರು.
08009007a ಶ್ರುತಕರ್ಮಾಣಮಾಯಾಂತಂ ಚಿತ್ರಸೇನೋ ಮಹೀಪತಿಃ।
08009007c ಪ್ರತಿವಿಂದ್ಯಂ ತಥಾ ಚಿತ್ರಶ್ಚಿತ್ರಕೇತನಕಾರ್ಮುಕಃ।।
08009008a ದುರ್ಯೋಧನಸ್ತು ರಾಜಾನಂ ಧರ್ಮಪುತ್ರಂ ಯುಧಿಷ್ಠಿರಂ।
08009008c ಸಂಶಪ್ತಕಗಣಾನ್ಕ್ರುದ್ಧೋ ಅಭ್ಯಧಾವದ್ಧನಂಜಯಃ।।
ಮುಂದುವರೆದು ಬರುತ್ತಿದ್ದ ಶ್ರುತಕರ್ಮನನ್ನು ಮಹೀಪತಿ ಚಿತ್ರಸೇನ, ವಿಚಿತ್ರ ಕೇತನ ಮತ್ತು ಧನುಸ್ಸುಗಳುಳ್ಳ ಚಿತ್ರನು ಪ್ರತಿವಿಂದ್ಯನನ್ನು, ದುರ್ಯೋಧನನು ಧರ್ಮಪುತ್ರ ರಾಜಾ ಯುಧಿಷ್ಠಿರನನ್ನು, ಮತ್ತು ಕ್ರುದ್ಧ ಧನಂಜಯನು ಸಂಶಪ್ತಕಗಣಗಳನ್ನು ಎದುರಿಸಿ ಯುದ್ಧಮಾಡಿದರು.
08009009a ಧೃಷ್ಟದ್ಯುಮ್ನಃ ಕೃಪಂ ಚಾಥ ತಸ್ಮಿನ್ವೀರವರಕ್ಷಯೇ।
08009009c ಶಿಖಂಡೀ ಕೃತವರ್ಮಾಣಂ ಸಮಾಸಾದಯದಚ್ಯುತಂ।।
ಆ ವೀರವರಕ್ಷಯ ಯುದ್ಧದಲ್ಲಿ ಧೃಷ್ಟದ್ಯುಮ್ನನು ಕೃಪನನ್ನು ಮತ್ತು ಅಚ್ಯುತ ಕೃತವರ್ಮನನ್ನು ಶಿಖಂಡಿಯು ಎದುರಿಸಿದರು.
08009010a ಶ್ರುತಕೀರ್ತಿಸ್ತಥಾ ಶಲ್ಯಂ ಮಾದ್ರೀಪುತ್ರಃ ಸುತಂ ತವ।
08009010c ದುಃಶಾಸನಂ ಮಹಾರಾಜ ಸಹದೇವಃ ಪ್ರತಾಪವಾನ್।।
ಮಹಾರಾಜ! ಹಾಗೆಯೇ ಶ್ರುತಕೀರ್ತಿಯು ಶಲ್ಯನನ್ನು, ಮತ್ತು ಪ್ರತಾಪವಾನ್ ಮಾದ್ರೀಪುತ್ರ ಸಹದೇವನು ನಿನ್ನ ಮಗ ದುಃಶಾಸನನನ್ನು ಎದುರಿಸಿ ಯುದ್ಧಮಾಡಿದರು.
08009011a ಕೇಕಯೌ ಸಾತ್ಯಕಿಂ ಯುದ್ಧೇ ಶರವರ್ಷೇಣ ಭಾಸ್ವತಾ।
08009011c ಸಾತ್ಯಕಿಃ ಕೇಕಯೌ ಚೈವ ಚಾದಯಾಮಾಸ ಭಾರತ।।
ಭಾರತ! ಕೇಕಯರಿಬ್ಬರೂ ಯುದ್ಧದಲ್ಲಿ ಕಾಂತಿಯುಳ್ಳ ಶರವರ್ಷಗಳಿಂದ ಸಾತ್ಯಕಿಯನ್ನೂ ಸಾತ್ಯಕಿಯು ಕೇಕಯರನ್ನೂ ಮುಚ್ಚಿಬಿಟ್ಟರು.
08009012a ತಾವೇನಂ ಭ್ರಾತರೌ ವೀರಂ ಜಘ್ನತುರ್ಹೃದಯೇ ಭೃಶಂ।
08009012c ವಿಷಾಣಾಭ್ಯಾಂ ಯಥಾ ನಾಗೌ ಪ್ರತಿನಾಗಂ ಮಹಾಹವೇ।।
ಮಹಾಹವದಲ್ಲಿ ಎರಡು ಆನೆಗಳು ಎದುರಾಳೀ ಆನೆಯನ್ನು ತಮ್ಮ ದಂತಗಳಿಂದ ಇರಿಯುವಂತೆ ಆ ಇಬ್ಬರು ಸಹೋದರರೂ ವೀರ ಸಾತ್ಯಕಿಯ ಹೃದಯಕ್ಕೆ ಅತ್ಯಂತ ಗಾಢವಾಗಿ ಪ್ರಹರಿಸಿದರು.
08009013a ಶರಸಂಭಿನ್ನವರ್ಮಾಣೌ ತಾವುಭೌ ಭ್ರಾತರೌ ರಣೇ।
08009013c ಸಾತ್ಯಕಿಂ ಸತ್ಯಕರ್ಮಾಣಂ ರಾಜನ್ವಿವ್ಯಧತುಃ ಶರೈಃ।।
ರಾಜನ್! ಶರಗಳಿಂದ ಅವರ ಕವಚಗಳು ಸೀಳಿಹೋಗಲು ಆ ಇಬ್ಬರು ಸಹೋದರರೂ ರಣದಲ್ಲಿ ಸತ್ಯಕರ್ಮಿ ಸಾತ್ಯಕಿಯನ್ನು ಶರಗಳಿಂದ ಪ್ರಹರಿಸಿದರು.
08009014a ತೌ ಸಾತ್ಯಕಿರ್ಮಹಾರಾಜ ಪ್ರಹಸನ್ಸರ್ವತೋದಿಶಂ।
08009014c ಚಾದಯಂ ಶರವರ್ಷೇಣ ವಾರಯಾಮಾಸ ಭಾರತ।।
ಮಹಾರಾಜ! ಭಾರತ! ಸಾತ್ಯಕಿಯಾದರೋ ಜೋರಾಗಿ ನಗುತ್ತಾ ಸರ್ವದಿಕ್ಕುಗಳನ್ನೂ ಶರವರ್ಷಗಳಿಂದ ಮುಸುಕಿ ಅವರಿಬ್ಬರನ್ನೂ ತಡೆದನು.
08009015a ವಾರ್ಯಮಾಣೌ ತತಸ್ತೌ ತು ಶೈನೇಯಶರವೃಷ್ಟಿಭಿಃ।
08009015c ಶೈನೇಯಸ್ಯ ರಥಂ ತೂರ್ಣಂ ಚಾದಯಾಮಾಸತುಃ ಶರೈಃ।।
ಶೈನೇಯನ ಶರವೃಷ್ಟಿಗಳಿಂದ ತಡೆಯಲ್ಪಟ್ಟ ಅವರಿಬ್ಬರೂ ಕೂಡಲೇ ಶೈನೇಯನ ರಥವನ್ನು ಶರಗಳಿಂದ ಮುಚ್ಚಿಬಿಟ್ಟರು.
08009016a ತಯೋಸ್ತು ಧನುಷೀ ಚಿತ್ರೇ ಚಿತ್ತ್ವಾ ಶೌರಿರ್ಮಹಾಹವೇ।
08009016c ಅಥ ತೌ ಸಾಯಕೈಸ್ತೀಕ್ಷ್ಣೈಶ್ಚಾದಯಾಮಾಸ ದುಃಸಹೈಃ।।
ಮಹಾಹವದಲ್ಲಿ ಶೌರಿಯು ಅವರಿಬ್ಬರ ಚಿತ್ರಿತ ಧನುಸ್ಸುಗಳನ್ನು ಕತ್ತರಿಸಿ ತೀಕ್ಷ್ಣ ದುಃಸಹ ಸಾಯಕಗಳಿಂದ ಅವರಿಬ್ಬರನ್ನೂ ಮುಚ್ಚಿಬಿಟ್ಟನು.
08009017a ಅಥಾನ್ಯೇ ಧನುಷೀ ಮೃಷ್ಟೇ ಪ್ರಗೃಹ್ಯ ಚ ಮಹಾಶರಾನ್।
08009017c ಸಾತ್ಯಕಿಂ ಪೂರಯಂತೌ ತೌ ಚೇರತುರ್ಲಘು ಸುಷ್ಠು ಚ।।
ಅವರು ಬೇರೆಯೇ ಧನುಸ್ಸುಗಳನ್ನು ಹಿಡಿದು ಮಹಾಶರಗಳಿಂದ ಸಾತ್ಯಕಿಯನ್ನು ಅಚ್ಛಾದಿಸುತ್ತಾ ರಣರಂಗದ ಸುತ್ತ ಶೀಘ್ರವಾಗಿ ಸುಂದರವಾಗಿ ಸಂಚರಿಸುತ್ತಿದ್ದರು.
08009018a ತಾಭ್ಯಾಂ ಮುಕ್ತಾ ಮಹಾಬಾಣಾಃ ಕಂಕಬರ್ಹಿಣವಾಸಸಃ।
08009018c ದ್ಯೋತಯಂತೋ ದಿಶಃ ಸರ್ವಾಃ ಸಂಪೇತುಃ ಸ್ವರ್ಣಭೂಷಣಾಃ।।
ಅವರಿಂದ ಪ್ರಯೋಗಿಸಲ್ಪಟ್ಟ ರಣಹದ್ದಿನ ಮತ್ತು ನವಿಲಿನ ಗರಿಗಳಿಂದ ಶೋಭಿತ ಸ್ವರ್ಣಭೂಷಣ ಮಹಾಬಾಣಗಳು ಎಲ್ಲದಿಕ್ಕುಗಳನ್ನೂ ಪ್ರಕಾಶಿಸುತ್ತಾ ಬೀಳುತ್ತಿದ್ದವು.
08009019a ಬಾಣಾಂದಕಾರಮಭವತ್ತಯೋ ರಾಜನ್ಮಹಾಹವೇ।
08009019c ಅನ್ಯೋನ್ಯಸ್ಯ ಧನುಶ್ಚೈವ ಚಿಚ್ಚಿದುಸ್ತೇ ಮಹಾರಥಾಃ।।
ರಾಜನ್! ಆ ಮಹಾಯುದ್ಧದಲ್ಲಿ ಬಾಣಗಳಿಂದ ಅಂಧಕಾರವು ಕವಿಯಲು ಆ ಮಹಾರಥರು ಅನ್ಯೋನ್ಯರ ಧನುಸ್ಸುಗಳನ್ನು ಕತ್ತರಿಸಿದರು.
08009020a ತತಃ ಕ್ರುದ್ಧೋ ಮಹಾರಾಜ ಸಾತ್ವತೋ ಯುದ್ಧದುರ್ಮದಃ।
08009020c ಧನುರನ್ಯತ್ಸಮಾದಾಯ ಸಜ್ಯಂ ಕೃತ್ವಾ ಚ ಸಂಯುಗೇ।
08009020e ಕ್ಷುರಪ್ರೇಣ ಸುತೀಕ್ಷ್ಣೇನ ಅನುವಿಂದಶಿರೋಽಹರತ್।।
ಮಹಾರಾಜ! ಆಗ ಕ್ರುದ್ಧನಾದ ಯುದ್ಧದುರ್ಮದ ಸಾತ್ವತನು ಅನ್ಯ ಧನುಸ್ಸನ್ನು ಎತ್ತಿಕೊಂಡು ಸಜ್ಜುಗೊಳಿಸಿ ಯುದ್ಧದಲ್ಲಿ ತೀಕ್ಷ್ಣ ಕ್ಷುರಪ್ರದಿಂದ ಅನುವಿಂದನ ಶಿರವನ್ನು ಅಪಹರಿಸಿದನು.
08009021a ತಚ್ಚಿರೋ ನ್ಯಪತದ್ಭೂಮೌ ಕುಂಡಲೋತ್ಪೀಡಿತಂ ಮಹತ್।
08009021c ಶಂಬರಸ್ಯ ಶಿರೋ ಯದ್ವನ್ನಿಹತಸ್ಯ ಮಹಾರಣೇ।
08009021e ಶೋಷಯನ್ಕೇಕಯಾನ್ಸರ್ವಾಂ ಜಗಾಮಾಶು ವಸುಂಧರಾಂ।।
ಅತ್ಯಂತ ಪೀಡಿತಗೊಂಡ ಕುಂಡಲಯುಕ್ತ ಆ ಶಿರವು ನಿಹಿತ ಶಂಬರನ ಶಿರದಂತೆ ಮಹಾರಣದಲ್ಲಿ ನೆಲದಮೇಲೆ ಬಿದ್ದು ಕೇಕಯರೆಲ್ಲರನ್ನೂ ಶೋಕಿಸಿತು. ಆ ಬಾಣವು ಭೂಮಿಯನ್ನು ಹೊಕ್ಕಿತು.
08009022a ತಂ ದೃಷ್ಟ್ವಾ ನಿಹತಂ ಶೂರಂ ಭ್ರಾತಾ ತಸ್ಯ ಮಹಾರಥಃ।
08009022c ಸಜ್ಯಂ ಅನ್ಯದ್ಧನುಃ ಕೃತ್ವಾ ಶೈನೇಯಂ ಪ್ರತ್ಯವಾರಯತ್।।
ಶೂರ ಸಹೋದರನು ಹತನಾದುದನ್ನು ನೋಡಿ ಮಹಾರಥ ವಿಂದನು ಇನ್ನೊಂದು ಧನುಸ್ಸನ್ನೆತ್ತಿಕೊಂಡು ಶೈನೇಯನನ್ನು ಪ್ರತಿಯಾಗಿ ಹೊಡೆದನು.
08009023a ಸ ಶಕ್ತ್ಯಾ ಸಾತ್ಯಕಿಂ ವಿದ್ಧ್ವಾ ಸ್ವರ್ಣಪುಂಖೈಃ ಶಿಲಾಶಿತೈಃ।
08009023c ನನಾದ ಬಲವನ್ನಾದಂ ತಿಷ್ಠ ತಿಷ್ಠೇತಿ ಚಾಬ್ರವೀತ್।।
ಸ್ವರ್ಣಪುಂಖಗಳ ಶಿಲಾಶಿತ ಶಕ್ತಿಯಿಂದ ಸಾತ್ಯಕಿಯನ್ನು ಹೊಡೆದು ಅವನು ಜೋರಾಗಿ ಗರ್ಜಿಸಿ ನಿಲ್ಲು ನಿಲ್ಲೆಂದು ಹೇಳಿದನು.
08009024a ಸ ಸಾತ್ಯಕಿಂ ಪುನಃ ಕ್ರುದ್ಧಃ ಕೇಕಯಾನಾಂ ಮಹಾರಥಃ।
08009024c ಶರೈರಗ್ನಿಶಿಖಾಕಾರೈರ್ಬಾಹ್ವೋರುರಸಿ ಚಾರ್ದಯತ್।।
ಆ ಕ್ರುದ್ಧ ಕೇಕಯ ಮಹಾರಥನು ಪುನಃ ಸಾತ್ಯಕಿಯನ್ನು ಅಗ್ನಿಶಿಖೆಗಳ ಆಕಾರದ ಬಾಣಗಳಿಂದ ಅವನ ಎದೆಗೆ ಗುರಿಯಿಟ್ಟು ಹೊಡೆದನು.
08009025a ಸ ಶರೈಃ ಕ್ಷತಸರ್ವಾಂಗಃ ಸಾತ್ವತಃ ಸತ್ತ್ವಕೋವಿದಃ।
08009025c ರರಾಜ ಸಮರೇ ರಾಜನ್ಸಪತ್ರ ಇವ ಕಿಂಶುಕಃ।।
ರಾಜನ್! ಶರಗಳಿಂದ ಸರ್ವಾಂಗಗಳಲ್ಲಿ ಗಾಯಗೊಂಡ ಸತ್ತ್ವಕೋವಿದ ಸಾತ್ವತನು ಸಮರದಲ್ಲಿ ಹೂಬಿಟ್ಟ14 ಕಿಂಶುಕವೃಕ್ಷದಂತೆ ರಾರಾಜಿಸಿದನು.
08009026a ಸಾತ್ಯಕಿಃ ಸಮರೇ ವಿದ್ಧಃ ಕೇಕಯೇನ ಮಹಾತ್ಮನಾ।
08009026c ಕೇಕಯಂ ಪಂಚವಿಂಶತ್ಯಾ ವಿವ್ಯಾಧ ಪ್ರಹಸನ್ನಿವ।।
ಸಮರದಲ್ಲಿ ಕೇಕಯ ಮಹಾತ್ಮನಿಂದ ಪ್ರಹರಿಸಲ್ಪಟ್ಟ ಸಾತ್ಯಕಿಯು ಕೇಕಯನನ್ನು ನಸುನಗುತ್ತಾ ಇಪ್ಪತ್ತೈದು ಶರಗಳಿಂದ ಹೊಡೆದನು.
08009027a ಶತಚಂದ್ರಚಿತೇ ಗೃಹ್ಯ ಚರ್ಮಣೀ ಸುಭುಜೌ ತು ತೌ।
08009027c ವ್ಯರೋಚೇತಾಂ ಮಹಾರಂಗೇ ನಿಸ್ತ್ರಿಂಶವರಧಾರಿಣೌ।
08009027e ಯಥಾ ದೇವಾಸುರೇ ಯುದ್ಧೇ ಜಂಭಶಕ್ರೌ ಮಹಾಬಲೌ।।
ಉತ್ತಮ ಭುಜಗಳುಳ್ಳ ಅವರಿಬ್ಬರೂ ಶತಚಂದ್ರಚಿತ್ರಿತ ಗುರಾಣಿಗಳನ್ನು ಹಿಡಿದು ಖಡ್ಗಯುದ್ಧಕ್ಕೆ ಅಣಿಯಾಗಿ ಮಹಾರಣದಲ್ಲಿ ದೇವಾಸುರಯುದ್ಧದಲ್ಲಿ ಮಹಾಬಲ ಜಂಭಾಸುರ-ಶಕ್ರರಂತೆ ವಿರಾಜಿಸಿದರು.
08009028a ಮಂಡಲಾನಿ ತತಸ್ತೌ ಚ ವಿಚರಂತೌ ಮಹಾರಣೇ।
08009028c ಅನ್ಯೋನ್ಯಮಸಿಭಿಸ್ತೂರ್ಣಂ ಸಮಾಜಘ್ನತುರಾಹವೇ।।
ಮಹಾರಣದಲ್ಲಿ ಅವರಿಬ್ಬರೂ ಮಂಡಲಾಕಾರಗಳಲ್ಲಿ ತಿರುಗುತ್ತಿದ್ದು ಅನ್ಯೋನ್ಯರನ್ನು ಕೂಡಲೇ ಖಡ್ಗದಿಂದ ಸಂಹರಿಸಲು ಪ್ರಯತ್ನಿಸಿದರು.
08009029a ಕೇಕಯಸ್ಯ ತತಶ್ಚರ್ಮ ದ್ವಿಧಾ ಚಿಚ್ಚೇದ ಸಾತ್ವತಃ।
08009029c ಸಾತ್ಯಕೇಶ್ಚ ತಥೈವಾಸೌ ಚರ್ಮ ಚಿಚ್ಚೇದ ಪಾರ್ಥಿವಃ।।
ಆಗ ಸಾತ್ವತನು ಕೇಕಯನ ಗುರಾಣಿಯನ್ನು ಎರಡಾಗಿ ಕತ್ತರಿಸಿದನು. ಪಾರ್ಥಿವನೂ ಕೂಡ ಸಾತ್ಯಕಿಯ ಗುರಾಣಿಯನ್ನು ಕತ್ತರಿಸಿದನು.
08009030a ಚರ್ಮ ಚ್ಚಿತ್ತ್ವಾ ತು ಕೈಕೇಯಸ್ತಾರಾಗಣಶತೈರ್ವೃತಂ।
08009030c ಚಚಾರ ಮಂಡಲಾನ್ಯೇವ ಗತಪ್ರತ್ಯಾಗತಾನಿ ಚ।।
ನೂರಾರು ತಾರಾಗಣಗಳಿಂದ ಆವೃತಗೊಂಡಿದ್ದ ಆ ಗುರಾಣಿಯನ್ನು ತುಂಡರಿಸಿ ಕೇಕಯನು ಗತ-ಪ್ರತ್ಯಾಗತವೇ ಮೊದಲಾದ ಮಂಡಲಗಳಲ್ಲಿ ಸಂಚರಿಸತೊಡಗಿದನು.
08009031a ತಂ ಚರಂತಂ ಮಹಾರಂಗೇ ನಿಸ್ತ್ರಿಂಶವರಧಾರಿಣಂ।
08009031c ಅಪಹಸ್ತೇನ ಚಿಚ್ಚೇದ ಶೈನೇಯಸ್ತ್ವರಯಾನ್ವಿತಃ।।
ಮಹಾರಣದಲ್ಲಿ ಶ್ರೇಷ್ಠಖಡ್ಗವನ್ನು ಧರಿಸಿ ಸಂಚರಿಸುತ್ತಿದ್ದ ಅವನನ್ನು ಶೈನೇಯನು ತ್ವರೆಮಾಡಿ ಬಲಗೈಯಿಂದ ತುಂಡರಿಸಿದನು.
08009032a ಸವರ್ಮಾ ಕೇಕಯೋ ರಾಜನ್ದ್ವಿಧಾ ಚಿನ್ನೋ ಮಹಾಹವೇ।
08009032c ನಿಪಪಾತ ಮಹೇಷ್ವಾಸೋ ವಜ್ರನುನ್ನ ಇವಾಚಲಃ।।
ರಾಜನ್! ಮಹಾಹವದಲ್ಲಿ ಕವಚದೊಂದಿಗೆ ಎರಡಾಗಿ ತುಂಡರಿಸಲ್ಪಟ್ಟ ಮಹೇಷ್ವಾಸ ಕೇಕಯನು ವಜ್ರದಿಂದ ಪುಡಿಮಾಡಲ್ವಟ್ಟ ಪರ್ವತದಂತೆ ಬಿದ್ದನು.
08009033a ತಂ ನಿಹತ್ಯ ರಣೇ ಶೂರಃ ಶೈನೇಯೋ ರಥಸತ್ತಮಃ।
08009033c ಯುಧಾಮನ್ಯೋ ರಥಂ ತೂರ್ಣಮಾರುರೋಹ ಪರಂತಪಃ।।
ಅವನನ್ನು ರಣದಲ್ಲಿ ಸಂಹರಿಸಿ ರಥಸತ್ತಮ ಶೂರ ಶೈನೇಯ ಪರಂತಪ ಯುಧಾಮನ್ಯುವು ಬೇಗನೇ ರಥವನ್ನೇರಿದನು.
08009034a ತತೋಽನ್ಯಂ ರಥಮಾಸ್ಥಾಯ ವಿಧಿವತ್ಕಲ್ಪಿತಂ ಪುನಃ।
08009034c ಕೇಕಯಾನಾಂ ಮಹತ್ಸೈನ್ಯಂ ವ್ಯಧಮತ್ಸಾತ್ಯಕಿಃ ಶರೈಃ।।
ವಿಧಿವತ್ತಾಗಿ ಕಲ್ಪಿಸಿದ್ದ ಆ ಅನ್ಯ ರಥವನ್ನೇರಿ ಸಾತ್ಯಕಿಯು ಶರಗಳಿಂದ ಕೇಕಯರ ಮಹಾ ಸೇನೆಯನ್ನು ವಧಿಸಿದನು.
08009035a ಸಾ ವಧ್ಯಮಾನಾ ಸಮರೇ ಕೇಕಯಸ್ಯ ಮಹಾಚಮೂಃ।
08009035c ತಮುತ್ಸೃಜ್ಯ ರಥಂ ಶತ್ರುಂ ಪ್ರದುದ್ರಾವ ದಿಶೋ ದಶ।।
ಸಮರದಲ್ಲಿ ವಧಿಸಲ್ಪಡುತ್ತಿರುವ ಕೇಕಯರ ಮಹಾಸೇನೆಯು ಶತ್ರುರಥವನ್ನು ಬಿಟ್ಟು ಹತ್ತು ದಿಕ್ಕುಗಳಲ್ಲಿ ಓಡಿಹೋಯಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ವಿಂದಾನುವಿಂದವಧೇ ನವಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ವಿಂದಾನುವಿಂದವಧ ಎನ್ನುವ ಒಂಭತ್ತನೇ ಅಧ್ಯಾಯವು.