008 ಕ್ಷೇಮಧೂರ್ತಿವಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ಕರ್ಣವಧ ಪರ್ವ

ಅಧ್ಯಾಯ 8

ಸಾರ

ಯುದ್ಧವರ್ಣನೆ (1-24). ಕುಲೂತಾಧಿಪತಿ ಕ್ಷೇಮಧೂರ್ತಿ-ಭೀಮಸೇನರ ಯುದ್ಧ; ಕ್ಷೇಮಧೂರ್ತಿಯು ಭೀಮಸೇನನಿಂದ ಹತನಾದುದು (25-45).

08008001 ಸಂಜಯ ಉವಾಚ।
08008001a ತೇ ಸೇನೇಽನ್ಯೋನ್ಯಮಾಸಾದ್ಯ ಪ್ರಹೃಷ್ಟಾಶ್ವನರದ್ವಿಪೇ।
08008001c ಬೃಹತ್ಯೌ ಸಂಪ್ರಜಹ್ರಾತೇ ದೇವಾಸುರಚಮೂಪಮೇ।।

ಸಂಜಯನು ಹೇಳಿದನು: “ಅನ್ಯೋನ್ಯರನ್ನು ಎದುರಿಸಿದ ಆ ಸೇನೆಗಳ ಆನೆ-ಕುದುರೆ-ಪದಾತಿಗಳು ಪ್ರಹೃಷ್ಟರಾಗಿದ್ದರು. ದೇವಾಸುರರ ಸೇನೆಗಳಂತೆ ಬೆಳಗುತ್ತಿದ್ದ ಆ ಸೇನೆಗಳು ಅತಿ ವಿಶಾಲವಾಗಿದ್ದವು.

08008002a ತತೋ ಗಜಾ ರಥಾಶ್ಚಾಶ್ವಾಃ ಪತ್ತಯಶ್ಚ ಮಹಾಹವೇ।
08008002c ಸಂಪ್ರಹಾರಂ ಪರಂ ಚಕ್ರುರ್ದೇಹಪಾಪ್ಮಪ್ರಣಾಶನಂ।।

ಅನಂತರ ಆನೆಗಳು, ರಥಗಳು, ಕುದುರೆಗಳು ಮತ್ತು ಪದಾತಿಗಳು ಮಹಾಯುದ್ಧದಲ್ಲಿ ದೇಹ-ಪಾಪಗಳನ್ನು ನಾಶಗೊಳಿಸುವ ಪ್ರಹಾರಗಳನ್ನು ಶತ್ರುಗಳ ಮೇಲೆ ಪ್ರಹರಿಸಿದರು.

08008003a ಪೂರ್ಣಚಂದ್ರಾರ್ಕಪದ್ಮಾನಾಂ ಕಾಂತಿತ್ವಿಡ್ಗಂದತಃ ಸಮೈಃ।
08008003c ಉತ್ತಮಾಂಗೈರ್ನೃಸಿಂಹಾನಾಂ ನೃಸಿಂಹಾಸ್ತಸ್ತರುರ್ಮಹೀಂ।।

ಪೂರ್ಣಚಂದ್ರ, ಸೂರ್ಯ ಮತ್ತು ಪದ್ಮಗಳ ಕಾಂತಿಯಿಂದ ಸಮನಾಗಿ ಬೆಳಗುತ್ತಿದ್ದ ಎರಡೂ ಕಡೆಯ ನರಸಿಂಹರ ಶಿರಸ್ಸುಗಳು ರಣಭೂಮಿಯನ್ನು ತುಂಬಿಬಿಟ್ಟಿದ್ದವು.

08008004a ಅರ್ಧಚಂದ್ರೈಸ್ತಥಾ ಭಲ್ಲೈಃ ಕ್ಷುರಪ್ರೈರಸಿಪಟ್ಟಿಶೈಃ।
08008004c ಪರಶ್ವಧೈಶ್ಚಾಪ್ಯಕೃಂತನ್ನುತ್ತಮಾಂಗಾನಿ ಯುಧ್ಯತಾಂ।।

ಯುದ್ಧಮಾಡುತ್ತಿದ್ದ ಅವರು ಅರ್ಧಚಂದ್ರ, ಭಲ್ಲ, ಕ್ಷುರಪ್ರ, ಖಡ್ಗ, ಪಟ್ಟಿಷ ಮತ್ತು ಪರಶುಗಳಿಂದ ಇತರರ ಶಿರಗಳನ್ನು ಕತ್ತರಿಸುತ್ತಿದ್ದರು.

08008005a ವ್ಯಾಯತಾಯತಬಾಹೂನಾಂ ವ್ಯಾಯತಾಯತಬಾಹುಭಿಃ।
08008005c ವ್ಯಾಯತಾ ಬಾಹವಃ ಪೇತುಶ್ಚಿನ್ನಮುಷ್ಟ್ಯಾಯುಧಾಂಗದಾಃ।।

ದಪ್ಪ ಸುದೀರ್ಘ ಬಾಹುಗಳಿಂದ ಕತ್ತರಿಸಲ್ಪಟ್ಟ ದಷ್ಟಪುಷ್ಟ ನೀಳ ಬಾಹುಗಳು ಅಂಗದ-ಆಯುಧಗಳ ಸಮೇತ ರಣಾಂಗಣದಲ್ಲಿ ಬಿದ್ದಿದ್ದವು.

08008006a ತೈಃ ಸ್ಫುರದ್ಭಿರ್ಮಹೀ ಭಾತಿ ರಕ್ತಾಂಗುಲಿತಲೈಸ್ತದಾ।
08008006c ಗರುಡಪ್ರಹತೈರುಗ್ರೈಃ ಪಂಚಾಸ್ಯೈರಿವ ಪನ್ನಗೈಃ।।

ರಕ್ತಲೇಪಿತ ಅಂಗೈಗಳಿಂದಲೂ ಉಗುರುಗಳಿಂದಲೂ ಕೂಡಿದ್ದ ಆ ಬಾಹುಗಳು ಗರುಡನಿಂದ ಪ್ರಹರಿಸಲ್ಪಟ್ಟು ಭೂಮಿಯ ಮೇಲೆ ಬಿದ್ದಿದ್ದ ಐದು ಹೆಡೆಗಳ ಸರ್ಪಗಳಂತೆ ಕಾಣುತ್ತಿದ್ದವು.

08008007a ಹಯಸ್ಯಂದನನಾಗೇಭ್ಯಃ ಪೇತುರ್ವೀರಾ ದ್ವಿಷದ್ಧತಾಃ।
08008007c ವಿಮಾನೇಭ್ಯೋ ಯಥಾ ಕ್ಷೀಣೇ ಪುಣ್ಯೇ ಸ್ವರ್ಗಸದಸ್ತಥಾ।।

ಶತ್ರುಗಳಿಂದ ಹೊಡೆಯಲ್ಪಟ್ಟ ವೀರರು ಪುಣ್ಯಗಳು ಕ್ಷೀಣವಾಗಲು ವಿಮಾನಗಳಿಂದ ಬೀಳುವ ಸ್ವರ್ಗಸದಸ್ಯರಂತೆ ಆನೆ-ಕುದುರೆಗಳ ಭುಜಗಳ ಮೇಲಿಂದ ಕೆಳಕ್ಕೆ ಬೀಳುತ್ತಿದ್ದರು.

08008008a ಗದಾಭಿರನ್ಯೈರ್ಗುರ್ವೀಭಿಃ ಪರಿಘೈರ್ಮುಸಲೈರಪಿ।
08008008c ಪೋಥಿತಾಃ ಶತಶಃ ಪೇತುರ್ವೀರಾ ವೀರತರೈ ರಣೇ।।

ರಣದಲ್ಲಿ ವೀರ ಯೋಧರನ್ನು ಅವರಿಗಿಂತಲೂ ವೀರರಾದವರು ಭಾರ ಗದೆಗಳಿಂದಲೂ, ಮತ್ತು ಅನ್ಯ ಪರಿಘ-ಮುಸಲಗಳಿಂದಲೂ ಹೊಡೆದು ಕೆಳಕ್ಕೆ ಕೆಡವುತ್ತಿದ್ದರು.

08008009a ರಥಾ ರಥೈರ್ವಿನಿಹತಾ ಮತ್ತಾ ಮತ್ತೈರ್ದ್ವಿಪೈರ್ದ್ವಿಪಾಃ।
08008009c ಸಾದಿನಃ ಸಾದಿಭಿಶ್ಚೈವ ತಸ್ಮಿನ್ಪರಮಸಂಕುಲೇ।।

ಆ ಪರಮಸಂಕುಲದಲ್ಲಿ ರಥಗಳನ್ನು ರಥಗಳು ಧ್ವಂಸಮಾಡಿದವು. ಮದಿಸಿದ ಆನೆಗಳು ಮದಿಸಿದ ಆನೆಗಳನ್ನು ಮತ್ತು ಹಾಗೆಯೇ ಅಶ್ವಾರೋಹಿಗಳು ಅಶ್ವಾರೋಹಿಗಳನ್ನು ನಾಶಪಡಿಸಿದವು.

08008010a ರಥಾ ವರರಥೈರ್ನಾಗೈರಶ್ವಾರೋಹಾಶ್ಚ ಪತ್ತಿಭಿಃ।
08008010c ಅಶ್ವಾರೋಹೈಃ ಪದಾತಾಶ್ಚ ನಿಹತಾ ಯುಧಿ ಶೇರತೇ।।

ರಥಗಳು ಶ್ರೇಷ್ಠರಥಗಳಿಂದ, ಅಶ್ವಾರೋಹಿಗಳು ಮತ್ತು ಪದಾತಿಗಳು ಆನೆಗಳಿಂದ, ಪದಾತಿಗಳು ಅಶ್ವಾರೋಹಿಗಳಿಂದ ಸಂಹರಿಸಲ್ಪಟ್ಟು ಮಲಗಿದವು.

08008011a ರಥಾಶ್ವಪತ್ತಯೋ ನಾಗೈ ರಥೈರ್ನಾಗಾಶ್ಚ ಪತ್ತಯಃ।
08008011c ರಥಪತ್ತಿದ್ವಿಪಾಶ್ಚಾಶ್ವೈರ್ನೃಭಿಶ್ಚಾಶ್ವರಥದ್ವಿಪಾಃ।।

ಆನೆಗಳಿಂದ ರಥ-ಕುದುರೆ-ಪದಾತಿಗಳೂ, ರಥಗಳಿಂದ ಆನೆ-ಕುದುರೆ-ಪದಾತಿಗಳೂ, ರಥ-ಪದಾತಿ-ಆನೆ-ಕುದುರೆಗಳಿಂದ ಪದಾತಿ-ರಥ-ಆನೆ-ಕುದುರೆಗಳೂ ಹತವಾದವು.

08008012a ರಥಾಶ್ವೇಭನರಾಣಾಂ ಚ ನರಾಶ್ವೇಭರಥೈಃ ಕೃತಂ।
08008012c ಪಾಣಿಪಾದೈಶ್ಚ ಶಸ್ತ್ರೈಶ್ಚ ರಥೈಶ್ಚ ಕದನಂ ಮಹತ್।।

ರಥ ಮತ್ತು ಕುದುರೆಗಳನ್ನೇರಿದ್ದ ಯೋಧರು ರಥ ಮತ್ತು ಕುದುರೆಗಳ ಮೇಲೆ ಏರಿದ್ದ ಯೋಧರನ್ನು ಕೈಗಳಿಂದಲೂ, ಶಸ್ತ್ರಗಳಿಂದಲೂ, ರಥಗಳಿಂದಲೂ ಹೊಡೆದು ಜೋರಾಗಿ ಕದನವಾಡುತ್ತಿದ್ದರು.

08008013a ತಥಾ ತಸ್ಮಿನ್ಬಲೇ ಶೂರೈರ್ವಧ್ಯಮಾನೇ ಹತೇಽಪಿ ಚ।
08008013c ಅಸ್ಮಾನಭ್ಯಾಗಮನ್ಪಾರ್ಥಾ ವೃಕೋದರಪುರೋಗಮಾಃ।।

ಹೀಗೆ ಶೂರರಿಂದ ವಧಿಸಲ್ಪಟ್ಟು ಹತರಾಗುತ್ತಿರಲು, ವೃಕೋದರನ ಮುಂದಾಳುತ್ವದಲ್ಲಿ ಪಾರ್ಥರು ನಮ್ಮ ಮೇಲೆ ಎರಗಿದರು.

08008014a ಧೃಷ್ಟದ್ಯುಮ್ನಃ ಶಿಖಂಡೀ ಚ ದ್ರೌಪದೇಯಾಃ ಪ್ರಭದ್ರಕಾಃ।
08008014c ಸಾತ್ಯಕಿಶ್ಚೇಕಿತಾನಶ್ಚ ದ್ರವಿಡೈಃ ಸೈನಿಕೈಃ ಸಹ।।
08008015a ಭೃತಾ ವಿತ್ತೇನ ಮಹತಾ ಪಾಂಡ್ಯಾಶ್ಚೌಡ್ರಾಃ ಸಕೇರಲಾಃ।
08008015c ವ್ಯೂಢೋರಸ್ಕಾ ದೀರ್ಘಭುಜಾಃ ಪ್ರಾಂಶವಃ ಪ್ರಿಯದರ್ಶನಾಃ।।

ಧೃಷ್ಟದ್ಯುಮ್ನ, ಶಿಖಂಡೀ, ದ್ರೌಪದೇಯರು, ಪ್ರಭದ್ರಕರು, ಸಾತ್ಯಕಿ, ಚೇಕಿತಾನರು ಮತ್ತು ವಿಶಾಲ‌ಎದೆಗಳ ದೀರ್ಘಬಾಹುಗಳ ವಿಶಾಲಕಣ್ಣುಗಳ ಸುಂದರ ದ್ರವಿಡ ಸೈನಿಕರೊಂದಿಗೆ, ಮಹಾ ವ್ಯೂಹದಲ್ಲಿದ್ದ ಪಾಂಡ್ಯರು, ಔಡ್ರರು, ಮತ್ತು ಕೇರಳರು ಭೀಮನನ್ನು ಹಿಂಬಾಲಿಸಿದ್ದರು.

08008016a ಆಪೀಡಿನೋ ರಕ್ತದಂತಾ ಮತ್ತಮಾತಂಗವಿಕ್ರಮಾಃ।
08008016c ನಾನಾವಿರಾಗವಸನಾ ಗಂದಚೂರ್ಣಾವಚೂರ್ಣಿತಾಃ।।

ಮತ್ತಮಾತಂಗದ ವಿಕ್ರಮಗಳುಳ್ಳ ಅವರು ಶಿರೋಭೂಷಣಗಳನ್ನೂ ಆಭರಣಗಳನ್ನೂ ತೊಟ್ಟಿದ್ದರು. ಅವರ ಹಲ್ಲುಗಳು ಕೆಂಪಾಗಿದ್ದವು, ಬಣ್ಣಬಣ್ಣದ ವಸ್ತ್ರಗಳನ್ನು ತೊಟ್ಟಿದ್ದರು. ಸುಗಂಧದ್ರವ್ಯಗಳನ್ನು ಶರೀರಗಳಿಗೆ ಲೇಪಿಸಿಕೊಂಡಿದ್ದರು.

08008017a ಬದ್ಧಾಸಯಃ ಪಾಶಹಸ್ತಾ ವಾರಣಪ್ರತಿವಾರಣಾಃ।
08008017c ಸಮಾನಮೃತ್ಯವೋ ರಾಜನ್ನನೀಕಸ್ಥಾಃ ಪರಸ್ಪರಂ।।

ರಾಜನ್! ಖಡ್ಗಗಳನ್ನು ಸೊಂಟಕ್ಕೆ ಬಿಗಿದು ಕೊಂಡಿದ್ದರು. ಕೈಗಳಲ್ಲಿ ಪಾಶಗಳನ್ನು ಹಿಡಿದಿದ್ದರು. ಆನೆಗಳನ್ನೂ ತಡೆದು ನಿಲ್ಲಿಸಬಲ್ಲ ಅವರು ಸಮಾನಮೃತ್ಯುವನ್ನು ಬಯಸಿ ಪರಸ್ಪರರಿಂದ ಅಗಲದೇ ಒಟ್ಟಾಗಿಯೇ ಇರುತ್ತಿದ್ದರು.

08008018a ಕಲಾಪಿನಶ್ಚಾಪಹಸ್ತಾ ದೀರ್ಘಕೇಶಾಃ ಪ್ರಿಯಾಹವಾಃ।
08008018c ಪತ್ತಯಃ ಸಾತ್ಯಕೇರಂದ್ರಾ ಘೋರರೂಪಪರಾಕ್ರಮಾಃ।।

ನವಿಲುಗರಿಗಳಿಂದ ತಲೆಗಳನ್ನು ಅಲಂಕರಸಿಕೊಂಡಿದ್ದರು. ಚಾಪಗಳನ್ನು ಹಿಡಿದಿದ್ದರು. ನೀಳಕೂದಲಿನ, ಪ್ರಿಯವಾಗಿ ಮಾತನಾಡುತ್ತಿದ್ದ ಆ ಪದಾತಿ-ಕುದುರೆ ಸವಾರರು ಪರಾಕ್ರಮದಲ್ಲಿ ಘೋರರೂಪಿಗಳಾಗಿದ್ದರು.

08008019a ಅಥಾಪರೇ ಪುನಃ ಶೂರಾಶ್ಚೇದಿಪಾಂಚಾಲಕೇಕಯಾಃ।
08008019c ಕರೂಷಾಃ ಕೋಸಲಾಃ ಕಾಶ್ಯಾ ಮಾಗಧಾಶ್ಚಾಪಿ ದುದ್ರುವುಃ।।

ಇವರಲ್ಲದೇ ಶೂರರಾದ ಚೇದಿ, ಪಾಂಚಾಲ, ಕೇಕಯ, ಕರೂಷ, ಕೋಸಲ, ಕಾಶಿ, ಮಾಗಧ ಸೇನೆಗಳೂ ನಮ್ಮ ಮೇಲೆ ಆಕ್ರಮಣಮಾಡಿದವು.

08008020a ತೇಷಾಂ ರಥಾಶ್ಚ ನಾಗಾಶ್ಚ ಪ್ರವರಾಶ್ಚಾಪಿ ಪತ್ತಯಃ।
08008020c ನಾನಾವಿಧರವೈರ್ಹೃಷ್ಟಾ ನೃತ್ಯಂತಿ ಚ ಹಸಂತಿ ಚ।।

ಅವರ ರಥಗಳು, ಆನೆಗಳು, ಕುದುರೆಗಳು ಮತ್ತು ಪದಾತಿಗಳು ಹರ್ಷದಿಂದ ನಾನವಿಧವಾಗಿ ಕೂಗಿ ನಗುತ್ತಾ ಕುಣಿಯುತ್ತಿದ್ದವು.

08008021a ತಸ್ಯ ಸೈನ್ಯಸ್ಯ ಮಹತೋ ಮಹಾಮಾತ್ರವರೈರ್ವೃತಃ।
08008021c ಮಧ್ಯಂ ವೃಕೋದರೋಽಭ್ಯಾಗಾತ್ತ್ವದೀಯಂ ನಾಗಧೂರ್ಗತಃ।।

ಅಂತಹ ವಿಶಾಲ ಸೈನ್ಯದ ಮಧ್ಯದಲ್ಲಿ ವೃಕೋದರನು ಆನೆಯ ಮೇಲೆ ಕುಳಿತು ಅನೇಕ ಮಹಾಗಾತ್ರದ ಶ್ರೇಷ್ಠ ಆನೆಗಳಿಂದ ಪರಿವೃತನಾಗಿ ನಿನ್ನ ಸೈನ್ಯದಕಡೆ ಧಾವಿಸುತ್ತಿದ್ದನು.

08008022a ಸ ನಾಗಪ್ರವರೋಽತ್ಯುಗ್ರೋ ವಿಧಿವತ್ಕಲ್ಪಿತೋ ಬಭೌ।
08008022c ಉದಯಾದ್ರ್ಯಗ್ರ್ಯಭವನಂ ಯಥಾಭ್ಯುದಿತಭಾಸ್ಕರಂ।।

ವಿಧಿವತ್ತಾಗಿ ಸಜ್ಜಾಗಿದ್ದ ಆ ಉಗ್ರ ಶ್ರೇಷ್ಠ ಆನೆಯು ಸೂರ್ಯನಿಂದ ಕೂಡಿದ ಉದಯಾಚಲದ ಉಚ್ಛ ಶಿಖರದಂತೆ ಪ್ರಕಾಶಿಸುತ್ತಿತ್ತು.

08008023a ತಸ್ಯಾಯಸಂ ವರ್ಮವರಂ ವರರತ್ನವಿಭೂಷಿತಂ।
08008023c ತಾರೋದ್ಭಾಸಸ್ಯ ನಭಸಃ ಶಾರದಸ್ಯ ಸಮತ್ವಿಷಂ।।

ಶ್ರೇಷ್ಠ ರತ್ನಗಳಿಂದ ವಿಭೂಷಿತಗೊಂಡಿದ್ದ ಆ ಮಹಾಗಜದ ಲೋಹಮಯ ಕವಚವು ನಕ್ಷತ್ರಗಳಿಂದ ಕೂಡಿದ ಶರತ್ಕಾಲದ ಅಕಾಶದಂತೆ ಹೊಳೆಯುತ್ತಿತ್ತು.

08008024a ಸ ತೋಮರಪ್ರಾಸಕರಶ್ಚಾರುಮೌಲಿಃ ಸ್ವಲಂಕೃತಃ।
08008024c ಚರನ್ಮಧ್ಯಂದಿನಾರ್ಕಾಭಸ್ತೇಜಸಾ ವ್ಯದಹದ್ರಿಪೂನ್।।

ಸುಂದರ ಮುಕುಟದಿಂದಲೂ ಆಭರಣಗಳಿಂದಲೂ ಸಮಲಂಕೃತ ಭೀಮಸೇನನು ಕೈಯಲ್ಲಿ ತೋಮರ ಪ್ರಾಸಗಳನ್ನು ಹಿಡಿದು ಮಧ್ಯಾಹ್ನದ ಸೂರ್ಯನಂತೆ ಶತ್ರುಗಳನ್ನು ದಹಿಸುತ್ತಾ ಚಲಿಸುತ್ತಿದ್ದನು.

08008025a ತಂ ದೃಷ್ಟ್ವಾ ದ್ವಿರದಂ ದೂರಾತ್ ಕ್ಷೇಮಧೂರ್ತಿರ್ದ್ವಿಪಸ್ಥಿತಃ।
08008025c ಆಹ್ವಯಾನೋಽಭಿದುದ್ರಾವ ಪ್ರಮನಾಃ ಪ್ರಮನಸ್ತರಂ।।

ದೂರದಿಂದಲೇ ಆ ಆನೆಯನ್ನು ನೋಡಿ ಆನೆಯ ಮೇಲಿದ್ದ ಕ್ಷೇಮಧೂರ್ತಿಯು ಉತ್ಸಾಹದಿಂದ ಕೂಗುತ್ತಾ ಭೀಮನನ್ನು ಯುದ್ಧಕ್ಕೆ ಆಹ್ವಾನಿಸುತ್ತಾ ಆಕ್ರಮಣಿಸಿದನು.

08008026a ತಯೋಃ ಸಮಭವದ್ಯುದ್ಧಂ ದ್ವಿಪಯೋರುಗ್ರರೂಪಯೋಃ।
08008026c ಯದೃಚ್ಚಯಾ ದ್ರುಮವತೋರ್ಮಹಾಪರ್ವತಯೋರಿವ।।

ವೃಕ್ಷಗಳಿಂದ ತುಂಬಿದ್ದ ಎರಡು ಪರ್ವತಗಳ ಮಧ್ಯೆ ದೈವೀ ಸಂಘಟನೆಯಿಂದ ಸಂಘರ್ಷವಾಗುವ ರೀತಿಯಲ್ಲಿ ಅವರಿಬ್ಬರ ಆ ಎರಡು ಉಗ್ರರೂಪೀ ಆನೆಗಳ ಮಧ್ಯೆ ಯುದ್ಧವು ನಡೆಯಿತು.

08008027a ಸಂಸಕ್ತನಾಗೌ ತೌ ವೀರೌ ತೋಮರೈರಿತರೇತರಂ।
08008027c ಬಲವತ್ಸೂರ್ಯರಶ್ಮ್ಯಾಭೈರ್ಭಿತ್ತ್ವಾ ಭಿತ್ತ್ವಾ ವಿನೇದತುಃ।।

ಎರಡು ಆನೆಗಳೂ ಸೆಣಸಾಡುತ್ತಿರಲು ಅವರಿಬ್ಬರು ವೀರರು ಸೂರ್ಯರಶ್ಮಿಗೆ ಸಮಾನ ಕಾಂತಿಗಳುಳ್ಳ ತೋಮರಗಳಿಂದ ಅನ್ಯೋನ್ಯರನ್ನು ಬಲವನ್ನುಪಯೋಗಿಸಿ ಹೊಡೆದು ಸಿಂಹನಾದಗೈದರು.

08008028a ವ್ಯಪಸೃತ್ಯ ತು ನಾಗಾಭ್ಯಾಂ ಮಂಡಲಾನಿ ವಿಚೇರತುಃ।
08008028c ಪ್ರಗೃಹ್ಯ ಚೈವ ಧನುಷೀ ಜಘ್ನತುರ್ವೈ ಪರಸ್ಪರಂ।।

ಆನೆಗಳನ್ನು ಹಿಂದೆ ಸರಿಸಿಕೊಂಡು ಇಬ್ಬರೂ ಮಂಡಲಾಕಾರವಾಗಿ ತಿರುಗತೊಡಗಿದರು. ಇಬ್ಬರೂ ಧನುಸ್ಸುಗಳನ್ನು ಹಿಡಿದು ಪರಸ್ಪರರನ್ನು ಪ್ರಹರಿಸತೊಡಗಿದರು.

08008029a ಕ್ಷ್ವೇಡಿತಾಸ್ಫೋಟಿತರವೈರ್ಬಾಣಶಬ್ದೈಶ್ಚ ಸರ್ವಶಃ।
08008029c ತೌ ಜನಾನ್ ಹರ್ಷಯಿತ್ವಾ ಚ ಸಿಂಹನಾದಾನ್ಪ್ರಚಕ್ರತುಃ।।

ಅವರಿಬ್ಬರೂ ಚಪ್ಪಾಳೆಗಳಿಂದಲೂ, ಟೇಂಕಾರಗಳಿಂದಲೂ, ಬಾಣಗಳ ಶಬ್ಧಗಳಿಂದಲೂ ಸುತ್ತಲಿದ್ದ ಜನರನ್ನು ಹರ್ಷಗೊಳಿಸುತ್ತಾ ಸಿಂಹನಾದಗೈದರು.

08008030a ಸಮುದ್ಯತಕರಾಭ್ಯಾಂ ತೌ ದ್ವಿಪಾಭ್ಯಾಂ ಕೃತಿನಾವುಭೌ।
08008030c ವಾತೋದ್ಧೂತಪತಾಕಾಭ್ಯಾಂ ಯುಯುಧಾತೇ ಮಹಾಬಲೌ।।

ಗಾಳಿಯಿಂದ ಪರಪರನೆ ಹಾರಾಡುತ್ತಿದ್ದ ಪತಾಕೆಗಳಿಂದ ಕೂಡಿದ ಮತ್ತು ಸೊಂಡಿಲುಗಳನ್ನು ಮೇಲಕ್ಕೆತ್ತಿದ್ದ ಮಹಾ ಗಜಗಳನ್ನು ಬಳಸಿ ಆ ಇಬ್ಬರು ಮಹಾಬಲರೂ ಯುದ್ಧಮಾಡುತ್ತಿದ್ದರು.

08008031a ತಾವನ್ಯೋನ್ಯಸ್ಯ ಧನುಷೀ ಚಿತ್ತ್ವಾನ್ಯೋನ್ಯಂ ವಿನೇದತುಃ।
08008031c ಶಕ್ತಿತೋಮರವರ್ಷೇಣ ಪ್ರಾವೃಣ್ಮೇಘಾವಿವಾಂಬುಭಿಃ।।

ವರ್ಷಾಕಾಲದ ಮೇಘಗಳು ಮಳೆಗರೆಯುವಂತೆ ಅವರು ಶಕ್ತಿ-ತೋಮರವರ್ಷಗಳಿಂದ ಪರಸ್ಪರರ ಧನುಸ್ಸುಗಳನ್ನು ತುಂಡರಿಸಿ ಗರ್ಜಿಸಿದರು.

08008032a ಕ್ಷೇಮಧೂರ್ತಿಸ್ತದಾ ಭೀಮಂ ತೋಮರೇಣ ಸ್ತನಾಂತರೇ।
08008032c ನಿರ್ಬಿಭೇದ ತು ವೇಗೇನ ಷಡ್ಭಿಶ್ಚಾಪ್ಯಪರೈರ್ನದನ್।।

ಆಗ ಕ್ಷೇಮಧೂರ್ತಿಯು ತೋಮರದಿಂದ ಭೀಮನ ವಕ್ಷಸ್ಥಳಕ್ಕೆ ಹೊಡೆದು ನಂತರ ವೇಗದಿಂದ ಇನ್ನೂ ಆರು ತೋಮರಗಳಿಂದ ಹೊಡೆದು ಗರ್ಜಿಸಿದನು.

08008033a ಸ ಭೀಮಸೇನಃ ಶುಶುಭೇ ತೋಮರೈರಂಗಮಾಶ್ರಿತೈಃ।
08008033c ಕ್ರೋಧದೀಪ್ತವಪುರ್ಮೇಘೈಃ ಸಪ್ತಸಪ್ತಿರಿವಾಂಶುಮಾನ್।।

ಅಂಗಗಳಲ್ಲಿ ತೋಮರಗಳು ಅಂಟಿಕೊಂಡಿರಲು ಕ್ರೋಧದೀಪ್ತನಾದ ಭೀಮಸೇನನು ಮೇಘಗಳಿಂದ ಮುಚ್ಚಲ್ಪಟ್ಟ ಏಳು ಕುದುರೆಗಳ ರಥದ ಮೇಲೆ ಕುಳಿತಿದ್ದ ಸೂರ್ಯನಂತೆ ಶೋಭಿಸಿದನು.

08008034a ತತೋ ಭಾಸ್ಕರವರ್ಣಾಭಂ ಅಂಜೋಗತಿಮಯಸ್ಮಯಂ।
08008034c ಸಸರ್ಜ ತೋಮರಂ ಭೀಮಃ ಪ್ರತ್ಯಮಿತ್ರಾಯ ಯತ್ನವಾನ್।।

ಆಗ ಭೀಮನು ಭಾಸ್ಕರನ ವರ್ಣದಂತೆ ಹೊಳೆಯುತ್ತಿದ್ದ, ಶೀಘ್ರಗತಿಯ ಲೋಹಮಯ ತೋಮರವನ್ನು ಶತ್ರುವಿನ ಮೇಲೆ ಪ್ರತಿಯಾಗಿ ಪ್ರಯತ್ನಪಟ್ಟು ಪ್ರಯೋಗಿಸಿದನು.

08008035a ತತಃ ಕುಲೂತಾಧಿಪತಿಶ್ಚಾಪಮಾಯಮ್ಯ ಸಾಯಕೈಃ।
08008035c ದಶಭಿಸ್ತೋಮರಂ ಚಿತ್ತ್ವಾ ಶಕ್ತ್ಯಾ ವಿವ್ಯಾಧ ಪಾಂಡವಂ।।

ಆಗ ಕುಲೂತಾಧಿಪತಿ ಕ್ಷೇಮಧೂರ್ತಿಯು ಚಾಪವನ್ನು ಬಗ್ಗಿಸಿ ಹೆದೆಯೇರಿಸಿ ಸಾಯಕಗಳಿಂದ ಆ ತೋಮರವನ್ನು ಹತ್ತು ಭಾಗಗಳನ್ನಾಗಿ ತುಂಡರಿಸಿ ಪಾಂಡವ ಭೀಮನನ್ನು ಶಕ್ತಿಯಿಂದ ಪ್ರಹರಿಸಿದನು.

08008036a ಅಥ ಕಾರ್ಮುಕಮಾದಾಯ ಮಹಾಜಲದನಿಸ್ವನಂ।
08008036c ರಿಪೋರಭ್ಯರ್ದಯನ್ನಾಗಮುನ್ಮದಃ ಪಾಂಡವಃ ಶರೈಃ।।

ಕೂಡಲೇ ಪಾಂಡವನು ಮಹಾಮೇಘದ ಗರ್ಜನೆಯುಳ್ಳ ಕಾರ್ಮುಕವನ್ನು ಎತ್ತಿಕೊಂಡು ಶರಗಳಿಂದ ಶತ್ರುವಿನ ಆನೆಯನ್ನು ಪ್ರಹರಿಸಿದನು.

08008037a ಸ ಶರೌಘಾರ್ದಿತೋ ನಾಗೋ ಭೀಮಸೇನೇನ ಸಂಯುಗೇ।
08008037c ನಿಗೃಹ್ಯಮಾಣೋ ನಾತಿಷ್ಠದ್ವಾತಧ್ವಸ್ತ ಇವಾಂಬುದಃ।।

ಸಂಯುಗದಲ್ಲಿ ಭೀಮಸೇನನ ಶರಗಳಿಂದ ಪೀಡಿತ ಆ ಆನೆಯು ನಿಯಂತ್ರಿಸಲ್ಪಟ್ಟರೂ ಭಿರುಗಾಳಿಯಿಂದ ತೂರಲ್ಪಟ್ಟ ಮೇಘದಂತೆ ಓಡಿಹೋಯಿತು.

08008038a ತಾಮಭ್ಯಧಾವದ್ದ್ವಿರದಂ ಭೀಮಸೇನಸ್ಯ ನಾಗರಾಟ್।
08008038c ಮಹಾವಾತೇರಿತಂ ಮೇಘಂ ವಾತೋದ್ಧೂತ ಇವಾಂಬುದಃ।।

ಭಿರುಗಾಳಿಯಿಂದ ಒಯ್ಯಲ್ಪಡುವ ಮೇಘವನ್ನು ಭಿರುಗಾಳಿಯಿಂದ ಎಬ್ಬಿಸಲ್ಪಟ್ಟ ಮತ್ತೊಂದು ಮೇಘವು ಅನುಸರಿಸಿ ಹೋಗುವಂತೆ ಓಡಿಹೋಗುತ್ತಿದ್ದ ಆ ಆನೆಯನ್ನು ಭೀಮಸೇನನ ಆನೆಯು ಹಿಂಬಾಲಿಸಿತು.

08008039a ಸಂನಿವರ್ತ್ಯಾತ್ಮನೋ ನಾಗಂ ಕ್ಷೇಮಧೂರ್ತಿಃ ಪ್ರಯತ್ನತಃ।
08008039c ವಿವ್ಯಾಧಾಭಿದ್ರುತಂ ಬಾಣೈರ್ಭೀಮಸೇನಂ ಸಕುಂಜರಂ।।

ತನ್ನ ಆನೆಯನ್ನು ಪ್ರಯತ್ನತಃ ನಿಲ್ಲಿಸಿ ಕ್ಷೇಮಧೂರ್ತಿಯು ಬಾಣಗಳಿಂದ ಬೆನ್ನಟ್ಟಿ ಬರುತ್ತಿದ್ದ ಭೀಮಸೇನನನ್ನು ಅವನ ಆನೆಯೊಂದಿಗೆ ಹೊಡೆದನು.

08008040a ತತಃ ಸಾಧುವಿಸೃಷ್ಟೇನ ಕ್ಷುರೇಣ ಪುರುಷರ್ಷಭಃ।
08008040c ಚಿತ್ತ್ವಾ ಶರಾಸನಂ ಶತ್ರೋರ್ನಾಗಮಾಮಿತ್ರಮಾರ್ದಯತ್।।

ಆಗ ಪುರುಷರ್ಷಭ ಭೀಮನು ಚೆನ್ನಾಗಿ ಪ್ರಹರಿಸಿದ ಕ್ಷುರದಿಂದ ಶತ್ರುವಿನ ಧನುಸ್ಸನ್ನು ತುಂಡರಿಸಿ ಅವನ ಆನೆಯನ್ನೂ ಗಾಯಗೊಳಿಸಿದನು.

08008041a ತತಃ ಖಜಾಕಯಾ ಭೀಮಂ ಕ್ಷೇಮಧೂರ್ತಿಃ ಪರಾಭಿನತ್।
08008041c ಜಘಾನ ಚಾಸ್ಯ ದ್ವಿರದಂ ನಾರಾಚೈಃ ಸರ್ವಮರ್ಮಸು।।

ಆಗ ಕ್ಷೇಮಧೂರಿಯು ಪರಮ ಕ್ರುದ್ಧನಾಗಿ ನಾರಾಚಗಳಿಂದ ಶತ್ರುವಿನ ಸರ್ವ ಮರ್ಮಗಳನ್ನೂ ಆನೆಯನ್ನೂ ಪ್ರಹರಿಸಿದನು.

08008042a ಪುರಾ ನಾಗಸ್ಯ ಪತನಾದವಪ್ಲುತ್ಯ ಸ್ಥಿತೋ ಮಹೀಂ।
08008042c ಭೀಮಸೇನೋ ರಿಪೋರ್ನಾಗಂ ಗದಯಾ ಸಮಪೋಥಯತ್।।

ತನ್ನ ಆನೆಯು ಕೆಳಕ್ಕೆ ಬೀಳುವುದರೊಳಗೇ ಭೀಮಸೇನನು ಕೆಳಕ್ಕೆ ಧುಮುಕಿ ನೆಲದಮೇಲೆ ಸ್ಥಿರನಾಗಿ ನಿಂತು, ಶತ್ರುವಿನ ಆನೆಯನ್ನು ಗದೆಯಿಂದ ಅಪ್ಪಳಿಸಿ ಸಂಹರಿಸಿದನು.

08008043a ತಸ್ಮಾತ್ಪ್ರಮಥಿತಾನ್ನಾಗಾತ್ ಕ್ಷೇಮಧೂರ್ತಿಮವದ್ರುತಂ।
08008043c ಉದ್ಯತಾಸಿಮುಪಾಯಾಂತಂ ಗದಯಾಹನ್ವೃಕೋದರಃ।।

ಆ ಆನೆಯಿಂದ ಕೆಳಕ್ಕೆ ಹಾರಿ ಖಡ್ಗವನ್ನೆತ್ತಿ ಓಡಿ ಬರುತ್ತಿದ್ದ ಕ್ಷೇಮಧೂರ್ತಿಯನ್ನು ವೃಕೋದರನು ಅದೇ ಗದೆಯಿಂದ ಸಂಹರಿಸಿದನು.

08008044a ಸ ಪಪಾತ ಹತಃ ಸಾಸಿರ್ವ್ಯಸುಃ ಸ್ವಮಭಿತೋ ದ್ವಿಪಂ।
08008044c ವಜ್ರಪ್ರರುಗ್ಣಂ ಅಚಲಂ ಸಿಂಹೋ ವಜ್ರಹತೋ ಯಥಾ।।

ಖಡ್ಗದ ಸಮೇತವಾಗಿಯೇ ತನ್ನ ಆನೆಯ ಬಳಿಯೇ ಬಿದ್ದು, ವಜ್ರದಿಂದ ಪ್ರಹರಿಸಲ್ಪಟ್ಟ ಗಿರಿಯ ಮೇಲಿದ್ದ ಮತ್ತು ವಜ್ರದಿಂದ ಹತವಾದ ಸಿಂಹದಂತೆ ಅವನು ಅಸುನೀಗಿದನು.

08008045a ನಿಹತಂ ನೃಪತಿಂ ದೃಷ್ಟ್ವಾ ಕುಲೂತಾನಾಂ ಯಶಸ್ಕರಂ।
08008045c ಪ್ರಾದ್ರವದ್ವ್ಯಥಿತಾ ಸೇನಾ ತ್ವದೀಯಾ ಭರತರ್ಷಭ।।

ಭರತರ್ಷಭ! ಯಶಸ್ಕರ ಕುಲೂತರ ನೃಪತಿಯು ಹತನಾದುದನ್ನು ನೋಡಿ ನಿನ್ನ ಸೇನೆಯು ವ್ಯಥಿತಗೊಂಡು ಓಡಿಹೋಯಿತು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಕ್ಷೇಮಧೂರ್ತಿವಧೇ ಅಷ್ಠಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಕ್ಷೇಮಧೂರ್ತಿವಧ ಎನ್ನುವ ಎಂಟನೇ ಅಧ್ಯಾಯವು.