003 ಧೃತರಾಷ್ಟ್ರಶೋಕಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಕರ್ಣ ಪರ್ವ

ಕರ್ಣವಧ ಪರ್ವ

ಅಧ್ಯಾಯ 3

ಸಾರ

ಕರ್ಣನ ಮರಣ ವಾರ್ತೆಯನ್ನು ತಿಳಿದ ಧೃತರಾಷ್ಟ್ರನು ಮೂರ್ಛೆಹೊಂದಿದುದು; ಸಂಜಯ-ವಿದುರರು ಅವನನ್ನು ಪುನಃ ಚೇತರಿಸಿದುದು (1-10). ಧೃತರಾಷ್ಟ್ರನು ಸಂಜಯನನ್ನು ಪುನಃ ಪ್ರಶ್ನಿಸಿದುದು (11-14).

08003001 ವೈಶಂಪಾಯನ ಉವಾಚ।
08003001a ಏತಚ್ಚ್ರುತ್ವಾ ಮಹಾರಾಜ ಧೃತರಾಷ್ಟ್ರೋಽಮ್ಬಿಕಾಸುತಃ।
08003001c ಶೋಕಸ್ಯಾಂತಮಪಶ್ಯನ್ವೈ ಹತಂ ಮತ್ವಾ ಸುಯೋಧನಂ।
08003001e ವಿಹ್ವಲಃ ಪತಿತೋ ಭೂಮೌ ನಷ್ಟಚೇತಾ ಇವ ದ್ವಿಪಃ।।

ವೈಶಂಪಾಯನನು ಹೇಳಿದನು: “ಮಹಾರಾಜ! ಇದನ್ನು ಕೇಳಿ ಅಂಬಿಕಾಸುತ ಧೃತರಾಷ್ಟ್ರನು ಶೋಕದ ಅಂತ್ಯವೇನೆನ್ನುವುದನ್ನೇ ಕಾಣದಾಗಿ, ಸುಯೋಧನನೇ ಹತನಾದನೆಂದು ತಿಳಿದು ವಿಹ್ವಲನಾಗಿ ಮೂರ್ಛೆಗೊಂಡ ಆನೆಯಂತೆ ನೆಲದ ಮೇಲೆ ಬಿದ್ದನು.

08003002a ತಸ್ಮಿನ್ನಿಪತಿತೇ ಭೂಮೌ ವಿಹ್ವಲೇ ರಾಜಸತ್ತಮೇ।
08003002c ಆರ್ತನಾದೋ ಮಹಾನಾಸೀತ್ ಸ್ತ್ರೀಣಾಂ ಭರತಸತ್ತಮ।।

ಭರತಸತ್ತಮ! ವಿಹ್ವಲ ರಾಜಸತ್ತಮನು ಹಾಗೆ ನೆಲದ ಮೇಲೆ ಬೀಳಲು ಸ್ತ್ರೀಯರ ಮಹಾ ಆರ್ತನಾದವುಂಟಾಯಿತು.

08003003a ಸ ಶಬ್ದಃ ಪೃಥಿವೀಂ ಸರ್ವಾಂ ಪೂರಯಾಮಾಸ ಸರ್ವಶಃ।
08003003c ಶೋಕಾರ್ಣವೇ ಮಹಾಘೋರೇ ನಿಮಗ್ನಾ ಭರತಸ್ತ್ರಿಯಃ।।

ಮಹಾಘೋರ ಶೋಕಾರ್ಣವದಲ್ಲಿ ಮುಳುಗುತ್ತಿದ್ದ ಆ ಭರತಸ್ತ್ರೀಯರ ಕೂಗು ಭೂಮಿಯ ಎಲ್ಲದಿಕ್ಕುಗಳನ್ನೂ ತುಂಬಿತು.

08003004a ರಾಜಾನಂ ಚ ಸಮಾಸಾದ್ಯ ಗಾಂದಾರೀ ಭರತರ್ಷಭ।
08003004c ನಿಃಸಂಜ್ಞಾ ಪತಿತಾ ಭೂಮೌ ಸರ್ವಾಣ್ಯಂತಃಪುರಾಣಿ ಚ।।

ಭರತರ್ಷಭ! ರಾಜನ ಬಳಿಬಂದ ಗಾಂಧಾರಿಯೂ ಮತ್ತು ಅಂತಃಪುರದ ಸರ್ವ ಸ್ತ್ರೀಯರೂ ಮೂರ್ಛೆತಪ್ಪಿ ಭೂಮಿಯ ಮೇಲೆ ಬಿದ್ದರು.

08003005a ತತಸ್ತಾಃ ಸಂಜಯೋ ರಾಜನ್ಸಮಾಶ್ವಾಸಯದಾತುರಾಃ।
08003005c ಮುಹ್ಯಮಾನಾಃ ಸುಬಹುಶೋ ಮುಂಚಂತ್ಯೋ ಮುಹುರ್ಮುಹುಃ।।

ರಾಜನ್! ಬಹಳವಾಗಿ ರೋದಿಸುತ್ತಾ ಪುನಃ ಪುನಃ ಮೂರ್ಛೆಹೋಗುತ್ತಿದ್ದ ಅವರನ್ನು ಸಂಜಯನು ಅನೇಕ ರೀತಿಯಲ್ಲಿ ಸಮಾಧಾನಗೊಳಿಸಲು ಪ್ರಯತ್ನಿಸಿದನು.

08003006c ಕದಲ್ಯ ಇವ ವಾತೇನ ಧೂಯಮಾನಾಃ ಸವಾರಿ ನೇತ್ರಜಂ।
08003006a ಸಮಾಶ್ವಸ್ತಾಃ ಸ್ತ್ರಿಯಸ್ತಾಸ್ತು ವೇಪಮಾನಾ ಮುಂತತಃ।।

ಸಮಾಧಾನಗೊಳಿಸಲ್ಪಡುತ್ತಿದ್ದರೂ ಕಣ್ಣೀರು ತುಂಬಿದ ಆ ಸ್ತ್ರೀಯರು ಭಿರುಗಾಳಿಗೆ ಸಿಲುಕಿದ ಬಾಳೆಯ ಗಿಡಗಳಂತೆ ನಡುಗಿ ತೂರಾಡುತ್ತಿದ್ದರು.

08003007a ರಾಜಾನಂ ವಿದುರಶ್ಚಾಪಿ ಪ್ರಜ್ಞಾಚಕ್ಷುಷಮೀಶ್ವರಂ।
08003007c ಆಶ್ವಾಸಯಾಮಾಸ ತದಾ ಸಿಂಚಂಸ್ತೋಯೇನ ಕೌರವಂ।।

ವಿದುರನೂ ಕೂಡ ನೀರನ್ನು ಸಿಂಪಡಿಸಿ ಪ್ರಜ್ಞಾಚಕ್ಷು ಈಶ್ವರ ರಾಜ ಕೌರವನನ್ನು ಸಮಾಧಾನಗೊಳಿಸತೊಡಗಿದನು.

08003008a ಸ ಲಬ್ಧ್ವಾ ಶನಕೈಃ ಸಂಜ್ಞಾಂ ತಾಶ್ಚ ದೃಷ್ಟ್ವಾ ಸ್ತ್ರಿಯೋ ನೃಪ।
08003008c ಉನ್ಮತ್ತ ಇವ ರಾಜಾ ಸ ಸ್ಥಿತಸ್ತೂಷ್ಣೀಂ ವಿಶಾಂ ಪತೇ।।

ವಿಶಾಂಪತೇ! ಮೆಲ್ಲನೆ ಎಚ್ಚೆತ್ತು ಸ್ತ್ರೀಯರನ್ನು ಕಂಡ ರಾಜಾ ನೃಪನು ಉನ್ಮತ್ತನಾದವನಂತೆ ಸುಮ್ಮನಾಗಿಯೇ ಕುಳಿತಿದ್ದನು.

08003009a ತತೋ ಧ್ಯಾತ್ವಾ ಚಿರಂ ಕಾಲಂ ನಿಃಶ್ವಸಂಶ್ಚ ಪುನಃ ಪುನಃ।
08003009c ಸ್ವಾನ್ಪುತ್ರಾನ್ಗರ್ಹಯಾಮಾಸ ಬಹು ಮೇನೇ ಚ ಪಾಂಡವಾನ್।।

ಅನಂತರ ತುಂಬಾ ಹೊತ್ತು ಯೋಚಿಸಿ ಪುನಃ ಪುನಃ ನಿಟ್ಟುಸಿರು ಬಿಡುತ್ತಾ ಅವನು ತನ್ನ ಮಕ್ಕಳನ್ನು ಬಹಳವಾಗಿ ನಿಂದಿಸಿದನು ಮತ್ತು ಪಾಂಡವರನ್ನು ಪ್ರಶಂಸಿಸಿದನು.

08003010a ಗರ್ಹಯಿತ್ವಾತ್ಮನೋ ಬುದ್ಧಿಂ ಶಕುನೇಃ ಸೌಬಲಸ್ಯ ಚ।
08003010c ಧ್ಯಾತ್ವಾ ಚ ಸುಚಿರಂ ಕಾಲಂ ವೇಪಮಾನೋ ಮುಹುರ್ಮುಹುಃ।।

ತನ್ನ ಮತ್ತು ಶಕುನಿ ಸೌಬಲನ ಬುದ್ಧಿಗಳನ್ನು ನಿಂದಿಸುತ್ತಿದ್ದನು. ತುಂಬಾಹೊತ್ತು ಯೋಚಿಸುತ್ತಿದ್ದು ಪುನಃ ಪುನಃ ನಡುಗುತ್ತಿದ್ದನು.

08003011a ಸಂಸ್ತಭ್ಯ ಚ ಮನೋ ಭೂಯೋ ರಾಜಾ ಧೈರ್ಯಸಮನ್ವಿತಃ।
08003011c ಪುನರ್ಗಾವಲ್ಗಣಿಂ ಸೂತಂ ಪರ್ಯಪೃಚ್ಚತ ಸಂಜಯಂ।।

ಪುನಃ ಧೈರ್ಯವನ್ನು ತಂದುಕೊಂಡು ಮನಸ್ಸನ್ನು ಸ್ಥಿರವಾಗಿರಿಸಿಕೊಂಡು ಮತ್ತೆ ಗಾವಲ್ಗಣಿ ಸೂತ ಸಂಜಯನನ್ನು ಪ್ರಶ್ನಿಸಿದನು:

08003012a ಯತ್ತ್ವಯಾ ಕಥಿತಂ ವಾಕ್ಯಂ ಶ್ರುತಂ ಸಂಜಯ ತನ್ಮಯಾ।
08003012c ಕಚ್ಚಿದ್ದುರ್ಯೋಧನಃ ಸೂತ ನ ಗತೋ ವೈ ಯಮಕ್ಷಯಂ।
08003012e ಬ್ರೂಹಿ ಸಂಜಯ ತತ್ತ್ವೇನ ಪುನರುಕ್ತಾಂ ಕಥಾಮಿಮಾಂ।।

“ಸಂಜಯ! ನೀನು ಹೇಳಿದ ಮಾತುಗಳನ್ನು ನಾನು ಕೇಳಿಸಿಕೊಂಡೆನು. ಸೂತ! ದುರ್ಯೋಧನನು ಯಮಕ್ಷಯಕ್ಕೆ ಹೋಗಲಿಲ್ಲ ತಾನೇ? ಸಂಜಯ! ನೀನೀಗ ಹೇಳಿದ ವಿಷಯವನ್ನೇ ಪುನಃ ಯಥಾವತ್ತಾಗಿ ಹೇಳು!”

08003013a ಏವಮುಕ್ತೋಽಬ್ರವೀತ್ಸೂತೋ ರಾಜಾನಂ ಜನಮೇಜಯ।
08003013c ಹತೋ ವೈಕರ್ತನೋ ರಾಜನ್ಸಹ ಪುತ್ರೈರ್ಮಹಾರಥೈಃ।
08003013e ಭ್ರಾತೃಭಿಶ್ಚ ಮಹೇಷ್ವಾಸೈಃ ಸೂತಪುತ್ರೈಸ್ತನುತ್ಯಜೈಃ।।

ಜನಮೇಜಯ! ಇದನ್ನು ಕೇಳಿದ ಸೂತನು ರಾಜನಿಗೆ ಹೇಳಿದನು: “ರಾಜನ್! ಮಹಾರಥ ಮಕ್ಕಳೊಂದಿಗೆ, ಮಹೇಷ್ವಾಸ ಸಹೋದರರೊಂದಿಗೆ ಸೂತಪುತ್ರ ವೈಕರ್ತನನು ಹತನಾಗಿ ದೇಹವನ್ನು ತ್ಯಜಿಸಿದನು.

08003014a ದುಃಶಾಸನಶ್ಚ ನಿಹತಃ ಪಾಂಡವೇನ ಯಶಸ್ವಿನಾ।
08003014c ಪೀತಂ ಚ ರುಧಿರಂ ಕೋಪಾದ್ಭೀಮಸೇನೇನ ಸಂಯುಗೇ।।

ಯಶೋವಂತ ಪಾಂಡವ ಭೀಮಸೇನನು ಸಂಯುಗದಲ್ಲಿ ದುಃಶಾಸನನನ್ನೂ ಸಂಹರಿಸಿ ಕೋಪದಿಂದ ಅವನ ರಕ್ತವನ್ನೂ ಕುಡಿದನು.””

ಸಮಾಪ್ತಿ ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಧೃತರಾಷ್ಟ್ರಶೋಕೇ ತೃತೀಯೋಽಧ್ಯಾಯಃ।। ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಧೃತರಾಷ್ಟ್ರಶೋಕ ಎನ್ನುವ ಮೂರನೇ ಅಧ್ಯಾಯವು.