ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 2
ಸಾರ
ದ್ರೋಣನು ಹತನಾದ ನಂತರ ಕೌರವಸೇನೆಯನ್ನು ಶೋಕವು ಆವರಿಸಿದ್ದುದು (1-5). ದುರ್ಯೋಧನನು ಹತಾಶಗೊಂಡ ಸೇನೆಯನ್ನು ಕರ್ಣನ ಯುದ್ಧಕೌಶಲ್ಯವನ್ನು ಹೊಗಳುತ್ತಾ ಹುರಿದುಂಬಿಸಲು ಪ್ರಯತ್ನಿಸಿದುದು (6-16). ಕರ್ಣನ ಪರಾಕ್ರಮ ಮತ್ತು ಮರಣದ ಸಂಕ್ಷಿಪ್ತ ವರದಿ (17-20).
08002001 ಸಂಜಯ ಉವಾಚ।
08002001a ಹತೇ ದ್ರೋಣೇ ಮಹೇಷ್ವಾಸೇ ತವ ಪುತ್ರಾ ಮಹಾರಥಾಃ।
08002001c ಬಭೂವುರಾಶ್ವಸ್ತಮುಖಾ ವಿಷಣ್ಣಾ ಗತಚೇತಸಃ।।
ಸಂಜಯನು ಹೇಳಿದನು: “ಮಹೇಷ್ವಾಸ ದ್ರೋಣನು ಹತನಾಗಲು ನಿನ್ನ ಮಹಾರಥ ಪುತ್ರರು ಬಾಡಿದ ಮುಖವುಳ್ಳವರಾಗಿ ವಿಷಣ್ಣರಾಗಿ ಚೇತನವನ್ನೇ ಕಳೆದುಕೊಂಡರು.
08002002a ಅವಾಙ್ಮುಖಾಃ ಶಸ್ತ್ರಭೃತಃ ಸರ್ವ ಏವ ವಿಶಾಂ ಪತೇ।
08002002c ಅಪ್ರೇಕ್ಷಮಾಣಾಃ ಶೋಕಾರ್ತಾ ನಾಭ್ಯಭಾಷನ್ಪರಸ್ಪರಂ।।
ವಿಶಾಂಪತೇ! ಶೋಕಾರ್ತರಾಗಿ ತಲೆ ತಗ್ಗಿಸಿಕೊಂಡಿದ್ದ ಆ ಎಲ್ಲ ಶಸ್ತ್ರಭೃತರೂ ಪರಸ್ಪರರನ್ನು ನೋಡುತ್ತಲೂ ಇರಲಿಲ್ಲ ಮತ್ತು ಪರಸ್ಪರರೊಂದಿಗೆ ಮಾತನಾಡುತ್ತಲೂ ಇರಲಿಲ್ಲ.
08002003a ತಾನ್ದೃಷ್ಟ್ವಾ ವ್ಯಥಿತಾಕಾರಾನ್ಸೈನ್ಯಾನಿ ತವ ಭಾರತ।
08002003c ಊರ್ಧ್ವಮೇವಾಭ್ಯವೇಕ್ಷಂತ ದುಃಖತ್ರಸ್ತಾನ್ಯನೇಕಶಃ।।
ಭಾರತ! ಅವರನ್ನು ನೋಡಿ ನಿನ್ನ ಸೇನೆಗಳು ಕೂಡ ವ್ಯಥೆಗೊಂಡವು. ದುಃಖದಿಂದ ನಡುಗುತ್ತಾ ಮೇಲೆ ಆಕಾಶವನ್ನೇ ಮತ್ತೆ ಮತ್ತೆ ನೋಡುತ್ತಿದ್ದರು.
08002004a ಶಸ್ತ್ರಾಣ್ಯೇಷಾಂ ಚ ರಾಜೇಂದ್ರ ಶೋಣಿತಾಕ್ತಾನ್ಯಶೇಷತಃ।
08002004c ಪ್ರಾಭ್ರಶ್ಯಂತ ಕರಾಗ್ರೇಭ್ಯೋ ದೃಷ್ಟ್ವಾ ದ್ರೋಣಂ ನಿಪಾತಿತಂ।।
ರಾಜೇಂದ್ರ! ದ್ರೋಣನು ಕೆಳಗುರುಳಿದುದನ್ನು ನೋಡಿ ರಕ್ತದಿಂದ ಸಂಪೂರ್ಣ ತೋಯ್ದು ಹೋಗಿದ್ದ ಶಸ್ತ್ರಗಳು ಸೈನಿಕರ ಕೈಗಳಿಂದ ಕೆಳಗಿ ಜಾರಿ ಬಿದ್ದವು.
08002005a ತಾನಿ ಬದ್ಧಾನ್ಯನಿಷ್ಟಾನಿ ಲಂಬಮಾನಾನಿ ಭಾರತ।
08002005c ಅದೃಶ್ಯಂತ ಮಹಾರಾಜ ನಕ್ಷತ್ರಾಣಿ ಯಥಾ ದಿವಿ।।
ಭಾರತ! ಮಹಾರಾಜ! ಅವರು ಕಟ್ಟಿಕೊಂಡಿದ್ದ ಆಯುಧಗಳೂ ಅನಿಷ್ಟರೀತಿಯಲ್ಲಿ ಜೋಲಾಡುತ್ತಾ ಆಕಾಶದಲ್ಲಿರುವ ನಕ್ಷತ್ರಗಳಂತೆ ಕಾಣುತ್ತಿದ್ದವು.
08002006a ತಥಾರ್ತಂ ಸ್ತಿಮಿತಂ ದೃಷ್ಟ್ವಾ ಗತಸತ್ತ್ವಮಿವ ಸ್ಥಿತಂ।
08002006c ಸ್ವಂ ಬಲಂ ತನ್ಮಹಾರಾಜ ರಾಜಾ ದುರ್ಯೋಧನೋಽಬ್ರವೀತ್।।
ಮಹಾರಾಜ! ಹೀಗೆ ಆರ್ತರಾಗಿ ಸತ್ತ್ವವನ್ನೇ ಕಳೆದುಕೊಂಡವರಂತೆ ಸ್ತಬ್ಧವಾಗಿ ನಿಂತಿರುವ ತನ್ನ ಸೇನೆಯನ್ನು ನೋಡಿ ರಾಜಾ ದುರ್ಯೋಧನನು ಅವರಿಗೆ ಹೇಳಿದನು:
08002007a ಭವತಾಂ ಬಾಹುವೀರ್ಯಂ ಹಿ ಸಮಾಶ್ರಿತ್ಯ ಮಯಾ ಯುಧಿ।
08002007c ಪಾಂಡವೇಯಾಃ ಸಮಾಹೂತಾ ಯುದ್ಧಂ ಚೇದಂ ಪ್ರವರ್ತಿತಂ।।
“ಯುದ್ಧದಲ್ಲಿ ನಿಮ್ಮ ಬಾಹುವೀರ್ಯವನ್ನೇ ಆಶ್ರಯಿಸಿ ನಾನು ಪಾಂಡವರನ್ನು ಯುದ್ಧಕ್ಕೆ ಆಹ್ವಾನಿಸಿದ್ದೆನು. ಅದೇ ಯುದ್ಧವು ಈಗಲೂ ನಡೆಯುತ್ತಿದೆ.
08002008a ತದಿದಂ ನಿಹತೇ ದ್ರೋಣೇ ವಿಷಣ್ಣಮಿವ ಲಕ್ಷ್ಯತೇ।
08002008c ಯುಧ್ಯಮಾನಾಶ್ಚ ಸಮರೇ ಯೋಧಾ ವಧ್ಯಂತಿ ಸರ್ವತಃ।।
ಈಗ ದ್ರೋಣನು ಹತನಾದುದರಿಂದ ನೀವು ವಿಷಣ್ಣರಾಗಿರುವಂತೆ ತೋರುತ್ತಿರುವಿರಿ. ಸಮರದಲ್ಲಿ ಯುದ್ಧಮಾಡುವಾಗ ಸಾಮಾನ್ಯವಾಗಿ ಯೋಧರ ವಧೆಯಾಗುತ್ತಲೇ ಇರುತ್ತದೆ.
08002009a ಜಯೋ ವಾಪಿ ವಧೋ ವಾಪಿ ಯುಧ್ಯಮಾನಸ್ಯ ಸಂಯುಗೇ।
08002009c ಭವೇತ್ಕಿಮತ್ರ ಚಿತ್ರಂ ವೈ ಯುಧ್ಯಧ್ವಂ ಸರ್ವತೋಮುಖಾಃ।।
ರಣದಲ್ಲಿ ಯುದ್ಧಮಾಡುವವನಿಗೆ ಜಯವಾಗಲೀ ವಧೆಯಾಗಲೀ ಆಗಿಯೇ ಆಗುತ್ತದೆ. ಅದರಲ್ಲಿ ವಿಚಿತ್ರವಾದುದೇನಿದೆ? ಎಲ್ಲಕಡೆಗಳಿಂದ ಶತ್ರುಗಳನ್ನು ಮುತ್ತಿ ಯುದ್ಧಮಾಡಿ!
08002010a ಪಶ್ಯಧ್ವಂ ಚ ಮಹಾತ್ಮಾನಂ ಕರ್ಣಂ ವೈಕರ್ತನಂ ಯುಧಿ।
08002010c ಪ್ರಚರಂತಂ ಮಹೇಷ್ವಾಸಂ ದಿವ್ಯೈರಸ್ತ್ರೈರ್ಮಹಾಬಲಂ।।
ಯುದ್ಧದಲ್ಲಿ ದಿವ್ಯಾಸ್ತ್ರಗಳೊಂದಿಗೆ ಸಂಚರಿಸುತ್ತಿರುವ ಮಹೇಷ್ವಾಸ ಮಹಾಬಲ ಮಹಾತ್ಮ ವೈಕರ್ತನ ಕರ್ಣನನ್ನು ನೋಡಿ!
08002011a ಯಸ್ಯ ವೈ ಯುಧಿ ಸಂತ್ರಾಸಾತ್ಕುಂತೀಪುತ್ರೋ ಧನಂಜಯಃ।
08002011c ನಿವರ್ತತೇ ಸದಾಮರ್ಷಾತ್ಸಿಂಹಾತ್ ಕ್ಷುದ್ರಮೃಗೋ ಯಥಾ।।
ಇವನಿಂದ ಯುದ್ಧದಲ್ಲಿ ಭಯಗೊಂಡ ಕುಂತೀಪುತ್ರ ಧನಂಜಯನು ಕ್ಷುದ್ರಮೃಗವೊಂದು ಸಿಂಹದಿಂದ ಹಿಂದೆ ಸರಿಯುವಂತೆ ಹಿಂದೆ ಸರಿಯುತ್ತಾನೆ.
08002012a ಯೇನ ನಾಗಾಯುತಪ್ರಾಣೋ ಭೀಮಸೇನೋ ಮಹಾಬಲಃ।
08002012c ಮಾನುಷೇಣೈವ ಯುದ್ಧೇನ ತಾಮವಸ್ಥಾಂ ಪ್ರವೇಶಿತಃ।।
ಇವನು ಸಾವಿರ ಆನೆಗಳ ಬಲವಿರುವ ಮಹಾಬಲ ಭೀಮಸೇನನನ್ನು ಕೂಡ ಮಾನುಷ ಯುದ್ಧದಿಂದಲೇ ದುರವಸ್ಥೆಗೆ ಈಡುಮಾಡುವವನಿದ್ದಾನೆ.
08002013a ಯೇನ ದಿವ್ಯಾಸ್ತ್ರವಿಚ್ಚೂರೋ ಮಾಯಾವೀ ಸ ಘಟೋತ್ಕಚಃ।
08002013c ಅಮೋಘಯಾ ರಣೇ ಶಕ್ತ್ಯಾ ನಿಹತೋ ಭೈರವಂ ನದನ್।।
08002014a ತಸ್ಯ ದುಷ್ಪಾರವೀರ್ಯಸ್ಯ ಸತ್ಯಸಂಧಸ್ಯ ಧೀಮತಃ।
08002014c ಬಾಹ್ವೋರ್ದ್ರವಿಣಮಕ್ಷಯ್ಯಮದ್ಯ ದ್ರಕ್ಷ್ಯಥ ಸಂಯುಗೇ।।
ಮಾಯಾವೀ ಘಟೋತ್ಕಚನನ್ನು ರಣದಲ್ಲಿ ದಿವ್ಯಾಸ್ತ್ರ ಶಕ್ತಿಯಿಂದ ಸಂಹರಿಸಿ ಭೈರವವಾಗಿ ಕೂಗಿದ ಶೂರ ವೀರ ಸತ್ಯಸಂಧ ಧೀಮತ ಕರ್ಣನ ಬಾಹುಗಳ ಅಕ್ಷಯ್ಯ ಬಲವನ್ನು ಇಂದು ಯುದ್ಧದಲ್ಲಿ ನೋಡುವಿರಿ!
08002015a ದ್ರೋಣಪುತ್ರಸ್ಯ ವಿಕ್ರಾಂತಂ ರಾಧೇಯಸ್ಯೈವ ಚೋಭಯೋಃ।
08002015c ಪಾಂಡುಪಾಂಚಾಲಸೈನ್ಯೇಷು ದ್ರಕ್ಷ್ಯಥಾಪಿ ಮಹಾತ್ಮನೋಃ।।
ಮಹಾತ್ಮರೇ! ಪಾಂಡು-ಪಾಂಚಾಲ ಸೇನೆಗಳ ಮೇಲೆ ದ್ರೋಣಪುತ್ರ ಮತ್ತು ರಾಧೇಯರಿಬ್ಬರೂ ತಮ್ಮ ವಿಕ್ರಾಂತವನ್ನು ಪ್ರಯೋಗಿಸುವುದನ್ನು ನೀವು ನೋಡಲಿರುವಿರಿ.
08002016a ಸರ್ವ ಏವ ಭವಂತಶ್ಚ ಶೂರಾಃ ಪ್ರಾಜ್ಞಾಃ ಕುಲೋದ್ಗತಾಃ।
08002016c ಶೀಲವಂತಃ ಕೃತಾಸ್ತ್ರಾಶ್ಚ ದ್ರಕ್ಷ್ಯಥಾದ್ಯ ಪರಸ್ಪರಂ।।
ನೀವೆಲ್ಲರೂ ಶೂರರು, ಪ್ರಾಜ್ಞರು, ಉತ್ತಮ ಕುಲದಲ್ಲಿ ಉದ್ಭವಿಸಿದವರು. ಶೀಲವಂತರು ಮತ್ತು ಕೃತಾಸ್ತ್ರರು. ಪರಸ್ಪರರನ್ನು ರಕ್ಷಿಸಲು ಸಮರ್ಥರು.”
08002017a ಏವಮುಕ್ತೇ ಮಹಾರಾಜ ಕರ್ಣೋ ವೈಕರ್ತನೋ ನೃಪಃ।
08002017c ಸಿಂಹನಾದಂ ವಿನದ್ಯೋಚ್ಚೈಃ ಪ್ರಾಯುಧ್ಯತ ಮಹಾಬಲಃ।।
ಮಹಾರಾಜ! ನೃಪನು ಹೀಗೆ ಹೇಳಲು ಮಹಾಬಲ ವೈಕರ್ತನ ಕರ್ಣನು ಜೋರಾಗಿ ಸಿಂಹನಾದಗೈದನು ಮತ್ತು ಯುದ್ಧವನ್ನು ಪ್ರಾರಂಭಿಸಿದನು.
08002018a ಸ ಸೃಂಜಯಾನಾಂ ಸರ್ವೇಷಾಂ ಪಾಂಚಾಲಾನಾಂ ಚ ಪಶ್ಯತಾಂ।
08002018c ಕೇಕಯಾನಾಂ ವಿದೇಹಾನಾಮಕರೋತ್ಕದನಂ ಮಹತ್।।
ಎಲ್ಲರೂ ನೋಡುತ್ತಿದ್ದಂತೆಯೇ ಅವನು ಸೃಂಜಯ-ಪಾಂಚಾಲ-ಕೇಕಯರು ಮತ್ತು ವಿದೇಹದವರೊಂದಿಗೆ ಮಹಾ ಕದನವನ್ನು ನಡೆಸಿದನು.
08002019a ತಸ್ಯೇಷುಧಾರಾಃ ಶತಶಃ ಪ್ರಾದುರಾಸಂ ಶರಾಸನಾತ್।
08002019c ಅಗ್ರೇ ಪುಂಖೇ ಚ ಸಂಸಕ್ತಾ ಯಥಾ ಭ್ರಮರಪಂಕ್ತಯಃ।।
ಅವನ ಧನುಸ್ಸಿನಿಂದ ಒಂದರ ಅಗ್ರಭಾಗವು ಇನ್ನೊಂದರ ಪುಂಖಗಳಿಗೆ ಅಂಟಿಕೊಂಡು ದುಂಬಿಗಳ ಸಾಲಿನಂತೆ ನೂರಾರು ಬಾಣಗಳು ಹೊರಬರುತ್ತಿದ್ದವು.
08002020a ಸ ಪೀಡಯಿತ್ವಾ ಪಾಂಚಾಲಾನ್ಪಾಂಡವಾಂಶ್ಚ ತರಸ್ವಿನಃ।
08002020c ಹತ್ವಾ ಸಹಸ್ರಶೋ ಯೋಧಾನರ್ಜುನೇನ ನಿಪಾತಿತಃ।।
ಅವನು ಸಹಸ್ರಾರು ಯೋಧರನ್ನು ಸಂಹರಿಸಿ ತರಸ್ವಿಗಳಾಗಿದ್ದ ಪಾಂಚಾಲ-ಪಾಂಡವರನ್ನು ಬಹಳವಾಗಿ ಪೀಡಿಸಿ, ಅರ್ಜುನನಿಂದ ಹತನಾದನು.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಜಯವಾಕ್ಯೇ ದ್ವಿತೀಯೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಜಯವಾಕ್ಯ ಎನ್ನುವ ಎರಡನೇ ಅಧ್ಯಾಯವು.