173 ವ್ಯಾಸವಾಕ್ಯೇ ಶತರುದ್ರೀಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ದ್ರೋಣ ಪರ್ವ

ನಾರಾಯಣಾಸ್ತ್ರಮೋಕ್ಷ ಪರ್ವ

ಅಧ್ಯಾಯ 173

ಸಾರ

ತಾನು ಶತ್ರುಗಳನ್ನು ಸಂಹರಿಸುತ್ತಿರುವಾಗ ಮುಂದೆ ಹೋಗಿ ಶತ್ರುಗಳನ್ನು ಸಂಹರಿಸುತ್ತಿದ್ದ ಅಗ್ನಿಯ ಪ್ರಭೆಯುಳ್ಳ ಪುರುಷನು ಯಾರೆಂದು ಅರ್ಜುನನು ವ್ಯಾಸನನ್ನು ಕೇಳಿದುದು (1-8). ಅವನು ಪರಶಿವ ರುದ್ರನೆಂದು ಹೇಳಿ ವ್ಯಾಸನು ಅರ್ಜುನನಿಗೆ ಶತರುದ್ರೀಯದ ಮೂಲಕ ಶಿವನ ಮಹಾತ್ಮೆಯನ್ನು ತಿಳಿಸಿದುದು (9-107).

07173001 ಧೃತರಾಷ್ಟ್ರ ಉವಾಚ।
07173001a ತಸ್ಮಿನ್ನತಿರಥೇ ದ್ರೋಣೇ ನಿಹತೇ ತತ್ರ ಸಂಜಯ।
07173001c ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವನ್ನತಃ ಪರಂ।।

ಧೃತರಾಷ್ಟ್ರನು ಹೇಳಿದನು: “ಸಂಜಯ! ಅಲ್ಲಿ ಆ ಅತಿರಥ ದ್ರೋಣನು ನಿಹತನಾಗಲು ಅನಂತರ ನನ್ನವರು ಮತ್ತು ಪಾಂಡವರು ಏನು ಮಾಡಿದರು?”

07173002 ಸಂಜಯ ಉವಾಚ।
07173002a ತಸ್ಮಿನ್ನತಿರಥೇ ದ್ರೋಣೇ ನಿಹತೇ ಪಾರ್ಷತೇನ ವೈ।
07173002c ಕೌರವೇಷು ಚ ಭಗ್ನೇಷು ಕುಂತೀಪುತ್ರೋ ಧನಂಜಯಃ।।
07173003a ದೃಷ್ಟ್ವಾ ಸುಮಹದಾಶ್ಚರ್ಯಮಾತ್ಮನೋ ವಿಜಯಾವಹಂ।
07173003c ಯದೃಚ್ಚಯಾಗತಂ ವ್ಯಾಸಂ ಪಪ್ರಚ್ಚ ಭರತರ್ಷಭ।।

ಸಂಜಯನು ಹೇಳಿದನು: “ಭರತರ್ಷಭ! ಪಾರ್ಷತನಿಂದ ಹಾಗೆ ದ್ರೋಣನು ಹತನಾಗಲು ಮತ್ತು ಕೌರವರು ಭಗ್ನರಾಗಲು ಕುಂತೀಪುತ್ರ ಧನಂಜಯನು ಯುದ್ಧದಲ್ಲಿ ತನಗಾದ ವಿಜಯದ ಕುರಿತು ಮಹಾ ಆಶ್ಚರ್ಯಚಕಿತನಾಗಿ ಅಲ್ಲಿಗೆ ಬಂದಿದ್ದ ವ್ಯಾಸನಲ್ಲಿ ಕೇಳಿದನು:

07173004a ಸಂಗ್ರಾಮೇ ನಿಘ್ನತಃ ಶತ್ರೂನ್ ಶರೌಘೈರ್ವಿಮಲೈರಹಂ।
07173004c ಅಗ್ರತೋ ಲಕ್ಷಯೇ ಯಾಂತಂ ಪುರುಷಂ ಪಾವಕಪ್ರಭಂ।।

“ಸಂಗ್ರಾಮದಲ್ಲಿ ವಿಮಲ ಶರಸಮೂಹಗಳಿಂದ ಶತ್ರುಗಳನ್ನು ಸಂಹರಿಸುತ್ತಿರುವಾಗ ಅಗ್ನಿಯ ಪ್ರಭೆಯುಳ್ಳ ಪುರುಷನೊಬ್ಬನು ಮುಂದೆ ಮುಂದೆ ಹೋಗುತ್ತಿರುವುದನ್ನು ಕಂಡೆನು.

07173005a ಜ್ವಲಂತಂ ಶೂಲಮುದ್ಯಮ್ಯ ಯಾಂ ದಿಶಂ ಪ್ರತಿಪದ್ಯತೇ।
07173005c ತಸ್ಯಾಂ ದಿಶಿ ವಿಶೀರ್ಯಂತೇ ಶತ್ರವೋ ಮೇ ಮಹಾಮುನೇ।।

ಮಹಾಮುನೇ! ಪ್ರಜ್ವಲಿಸುವ ಶೂಲವನ್ನೆತ್ತಿಕೊಂಡು ಅವನು ಯಾವ ದಿಕ್ಕಿನಲ್ಲಿ ಹೋಗುತ್ತಿದ್ದನೋ ಆ ದಿಕ್ಕಿನಲ್ಲಿ ನನ್ನ ಶತ್ರುಗಳು ವಿಧ್ವಂಸಿತರಾಗುತ್ತಿದ್ದರು.

07173006a ನ ಪದ್ಭ್ಯಾಂ ಸ್ಪೃಶತೇ ಭೂಮಿಂ ನ ಚ ಶೂಲಂ ವಿಮುಂಚತಿ।
07173006c ಶೂಲಾಚ್ಚೂಲಸಹಸ್ರಾಣಿ ನಿಷ್ಪೇತುಸ್ತಸ್ಯ ತೇಜಸಾ।।

ಅವನ ಕಾಲುಗಳು ಭೂಮಿಯನ್ನು ಸ್ಪರ್ಷಿಸುತ್ತಿರಲಿಲ್ಲ. ಶೂಲವನ್ನು ಅವನು ಕೈಯಿಂದ ಬಿಡುತ್ತಿರಲಿಲ್ಲ. ಆದರೆ ಅವನ ತೇಜಸ್ವೀ ಶೂಲದಿಂದ ಸಹಸ್ರಾರು ಶೂಲಗಳು ಹೊರಬಂದು ಶತ್ರುಗಳ ಮೇಲೆ ಬೀಳುತ್ತಿದ್ದವು.

07173007a ತೇನ ಭಗ್ನಾನರೀನ್ಸರ್ವಾನ್ಮದ್ಭಗ್ನಾನ್ಮನ್ಯತೇ ಜನಃ।
07173007c ತೇನ ದಗ್ಧಾನಿ ಸೈನ್ಯಾನಿ ಪೃಷ್ಠತೋಽನುದಹಾಮ್ಯಹಂ।।

ಶತ್ರುಗಳು ಅವನಿಂದಲೇ ನಾಶವಾಗುತ್ತಿದ್ದರು. ಆದರೆ ಜನರು ನನ್ನಿಂದ ನಾಶವಾದರೆಂದು ಭಾವಿಸುತ್ತಿದ್ದರು. ಅವನು ಸೇನೆಗಳನ್ನು ಸುಡುತ್ತಿದ್ದನು. ನಾನು ಅವನ ಹಿಂದೆ ಹಿಂದೆ ಹೋಗುತ್ತಿದ್ದೆ ಮಾತ್ರ.

07173008a ಭಗವಂಸ್ತನ್ಮಮಾಚಕ್ಷ್ವ ಕೋ ವೈ ಸ ಪುರುಷೋತ್ತಮಃ।
07173008c ಶೂಲಪಾಣಿರ್ಮಹಾನ್ ಕೃಷ್ಣ ತೇಜಸಾ ಸೂರ್ಯಸನ್ನಿಭಃ।।

ಭಗವನ್! ಆ ಶೂಲಪಾಣಿ, ಸೂರ್ಯಸನ್ನಿಭ ತೇಜಸ್ಸುಳ್ಳ ಕೃಷ್ಣವರ್ಣದ ಮಹಾನ್ ಪುರುಷೋತ್ತಮನು ಯಾರೆಂದು ನನಗೆ ಹೇಳು.”

07173009 ವ್ಯಾಸ ಉವಾಚ।
07173009a ಪ್ರಜಾಪತೀನಾಂ ಪ್ರಥಮಂ ತೈಜಸಂ ಪುರುಷಂ ವಿಭುಂ।
07173009c ಭುವನಂ ಭೂರ್ಭುವಂ ದೇವಂ ಸರ್ವಲೋಕೇಶ್ವರಂ ಪ್ರಭುಂ।।
07173010a ಈಶಾನಂ ವರದಂ ಪಾರ್ಥ ದೃಷ್ಟವಾನಸಿ ಶಂಕರಂ।

ವ್ಯಾಸನು ಹೇಳಿದನು: “ಪಾರ್ಥ! ಪ್ರಜಾಪತಿಗಳೆಲ್ಲರಿಗೂ ಮೊದಲಿಗ, ತೇಜಃಸ್ವರೂಪ, ಆದಿ ಪುರುಷ, ವಿಭು, ಭೂಲೋಕ-ಭುವರ್ಲೋಕ ಸದೃಶ, ಸಕಲ ಲೋಕಗಳಿಗೂ ಪ್ರಭು, ದೇವ, ಈಶಾನ ವರದ ಶಂಕರನನ್ನು ನೀನು ನೋಡಿರುವೆ.

07173010c ತಂ ಗಚ್ಚ ಶರಣಂ ದೇವಂ ಸರ್ವಾದಿಂ ಭುವನೇಶ್ವರಂ।।
07173011a ಮಹಾದೇವಂ ಮಹಾತ್ಮಾನಮೀಶಾನಂ ಜಟಿಲಂ ಶಿವಂ।
07173011c ತ್ರ್ಯಕ್ಷಂ ಮಹಾಭುಜಂ ರುದ್ರಂ ಶಿಖಿನಂ ಚೀರವಾಸಸಂ।
07173011e ದಾತಾರಂ ಚೈವ ಭಕ್ತಾನಾಂ ಪ್ರಸಾದವಿಹಿತಾನ್ವರಾನ್।।

ಆ ದೇವ, ಸರ್ವಾದಿ ಭುವನೇಶ್ವರ, ಮಹಾದೇವ, ಮಹಾತ್ಮ, ಈಶಾನ, ಜಟಿಲ, ಶಿವ, ತ್ರ್ಯಕ್ಷ, ಮಹಾಭುಜ, ರುದ್ರ, ಶಿಖಿ, ಚೀರವಾಸಸ, ಭಕ್ತರ ದಾತಾರ, ಪ್ರಸಾದವಾಗಿ ವರಗಳನ್ನು ನೀಡುವವನ ಶರಣು ಹೋಗು.

07173012a ತಸ್ಯ ತೇ ಪಾರ್ಷದಾ ದಿವ್ಯಾ ರೂಪೈರ್ನಾನಾವಿಧೈಃ ವಿಭೋಃ।
07173012c ವಾಮನಾ ಜಟಿಲಾ ಮುಂಡಾ ಹ್ರಸ್ವಗ್ರೀವಾ ಮಹೋದರಾಃ।।
07173013a ಮಹಾಕಾಯಾ ಮಹೋತ್ಸಾಹಾ ಮಹಾಕರ್ಣಾಸ್ತಥಾಪರೇ।
07173013c ಆನನೈರ್ವಿಕೃತೈಃ ಪಾದೈಃ ಪಾರ್ಥ ವೇಷೈಶ್ಚ ವೈಕೃತೈಃ।।

ಪಾರ್ಥ! ಆ ವಿಭುವಿನ ದಿವ್ಯ ಪಾರ್ಷದರು ನಾನಾ ವಿಧದ ದಿವ್ಯರೂಪಗಳನ್ನು ಹೊಂದಿರುವರು – ವಾಮನರು, ಜಟಾಧಾರಿಗಳು, ಬೋಳು ತಲೆಯವರು, ಮೋಟಾದ ಕುತ್ತಿಗೆಯುಳ್ಳವರು, ದೊಡ್ಡ ಹೊಟ್ಟೆಯಳ್ಳವರು, ದೊಡ್ಡ ದೇಹವುಳ್ಳವರು, ಮಹೋತ್ಸಾಹಿಗಳು, ಮಹಾಕಿವಿಯುಳ್ಳವರು ಮತ್ತು ಇತರರು ವಿಕಾರವಾದ ಮುಖವುಳ್ಳವರು, ಮತ್ತು ವಿಕಾರವಾದ ವೇಷಭೂಷಣಗಳನ್ನು ಧರಿಸಿರುವವರು.

07173014a ಈದೃಶೈಃ ಸ ಮಹಾದೇವಃ ಪೂಜ್ಯಮಾನೋ ಮಹೇಶ್ವರಃ।
07173014c ಸ ಶಿವಸ್ತಾತ ತೇಜಸ್ವೀ ಪ್ರಸಾದಾದ್ಯಾತಿ ತೇಽಗ್ರತಃ।

ಮಗೂ! ಇಂಥವರಿಂದ ಪೂಜಿಸಲ್ಪಟ್ಟ ಮಹಾದೇವ ಮಹೇಶ್ವರ ತೇಜಸ್ವೀ ಶಿವನೇ ನಿನ್ನ ಮುಂದೆ ಮುಂದೆ ಹೋಗುತ್ತಿದ್ದಾನೆ.

07173014e ತಸ್ಮಿನ್ಘೋರೇ ತದಾ ಪಾರ್ಥ ಸಂಗ್ರಾಮೇ ಲೋಮಹರ್ಷಣೇ।।
07173015a ದ್ರೋಣಕರ್ಣಕೃಪೈರ್ಗುಪ್ತಾಂ ಮಹೇಷ್ವಾಸೈಃ ಪ್ರಹಾರಿಭಿಃ।
07173015c ಕಸ್ತಾಂ ಸೇನಾಂ ತದಾ ಪಾರ್ಥ ಮನಸಾಪಿ ಪ್ರಧರ್ಷಯೇತ್।
07173015e ಋತೇ ದೇವಾನ್ಮಹೇಷ್ವಾಸಾದ್ಬಹುರೂಪಾನ್ಮಹೇಶ್ವರಾತ್।।

ಪಾರ್ಥ! ಆ ಘೋರ ರೋಮಾಂಚಕರ ಸಂಗ್ರಾಮದಲ್ಲಿ ಮಹೇಷ್ವಾಸ ಪ್ರಹಾರಿಗಳಾದ ದ್ರೋಣ-ಕರ್ಣ-ಕೃಪರಿಂದ ರಕ್ಷಿತರಾಗಿರುವ ಆ ಸೇನೆಯನ್ನು ದೇವ ಮಹೇಷ್ವಾಸ ಬಹುರೂಪೀ ಮಹೇಶ್ವರನಲ್ಲದೇ ಬೇರೆ ಯಾರು ತಾನೇ ಮನಸ್ಸಿನಲ್ಲಿಯಾದರೂ ಎದುರಿಸಲು ಸಾಧ್ಯವಾಗುತ್ತಿತ್ತು?

07173016a ಸ್ಥಾತುಮುತ್ಸಹತೇ ಕಶ್ಚಿನ್ನ ತಸ್ಮಿನ್ನಗ್ರತಃ ಸ್ಥಿತೇ।
07173016c ನ ಹಿ ಭೂತಂ ಸಮಂ ತೇನ ತ್ರಿಷು ಲೋಕೇಷು ವಿದ್ಯತೇ।।

ಅವನ ಮುಂದೆ ಬಂದ ಯಾರೂ ಅವನನ್ನು ಎದುರಿಸಲು ಮನಸ್ಸುಮಾಡಲಾರ. ಮೂರು ಲೋಕಗಳಲ್ಲಿಯೂ ಅವನ ಸಮನಾದುದು ಯಾವುದೂ ಇಲ್ಲ.

07173017a ಗಂಧೇನಾಪಿ ಹಿ ಸಂಗ್ರಾಮೇ ತಸ್ಯ ಕ್ರುದ್ಧಸ್ಯ ಶತ್ರವಃ।
07173017c ವಿಸಂಜ್ಞಾ ಹತಭೂಯಿಷ್ಠಾ ವೇಪಂತಿ ಚ ಪತಂತಿ ಚ।।

ಕ್ರುದ್ಧನಾಗಿರುವ ಅವನ ವಾಸನೆ ಬಂದರೂ ಸಾಕು ಶತ್ರುಗಳು ಮೂರ್ಛೆಹೋಗುತ್ತಾರೆ. ನಡುಗುತ್ತಾರೆ. ಮತ್ತು ಕೆಳಗೆ ಬೀಳುತ್ತಾರೆ.

07173018a ತಸ್ಮೈ ನಮಸ್ತು ಕುರ್ವಂತೋ ದೇವಾಸ್ತಿಷ್ಠಂತಿ ವೈ ದಿವಿ।
07173018c ಯೇ ಚಾನ್ಯೇ ಮಾನವಾ ಲೋಕೇ ಯೇ ಚ ಸ್ವರ್ಗಜಿತೋ ನರಾಃ।।

ಅವನಿಗೆ ನಮಸ್ಕರಿಸುವ ದೇವತೆಗಳು ದಿವದಲ್ಲಿಯೇ ಇರುತ್ತಾರೆ. ಮಾನವ ಲೋಕದಲ್ಲಿ ಕೂಡ ಹಾಗೆ ಮಾಡುವ ನರರು ಸ್ವರ್ಗವನ್ನು ಗೆಲ್ಲುತ್ತಾರೆ.

07173019a ಯೇ ಭಕ್ತಾ ವರದಂ ದೇವಂ ಶಿವಂ ರುದ್ರಮುಮಾಪತಿಂ।
07173019c ಇಹ ಲೋಕೇ ಸುಖಂ ಪ್ರಾಪ್ಯ ತೇ ಯಾಂತಿ ಪರಮಾಂ ಗತಿಂ।।

ಯಾವ ಭಕ್ತನು ವರದ ದೇವ ಶಿವ ರುದ್ರ ಉಮಾಪತಿಯನ್ನು ಉಪಾಸಿಸುತ್ತಾನೋ ಅವನು ಈ ಲೋಕದಲ್ಲಿ ಸುಖವನ್ನು ಹೊಂದುತ್ತಾನೆ ಮತ್ತು ಪರಮ ಗತಿಯನ್ನು ಪಡೆಯುತ್ತಾನೆ.

07173020a ನಮಸ್ಕುರುಷ್ವ ಕೌಂತೇಯ ತಸ್ಮೈ ಶಾಂತಾಯ ವೈ ಸದಾ।
07173020c ರುದ್ರಾಯ ಶಿತಿಕಂಠಾಯ ಕನಿಷ್ಠಾಯ ಸುವರ್ಚಸೇ।।
07173021a ಕಪರ್ದಿನೇ ಕರಾಲಾಯ ಹರ್ಯಕ್ಷ್ಣೇ ವರದಾಯ ಚ।

ಕೌಂತೇಯ! ಶಾಂತಸ್ವರೂಪ ಶಿತಿಕಂಠ, ಸೂಕ್ಷ್ಮಾತಿಸೂಕ್ಷ್ಮ, ಉತ್ತಮತೇಜೋವಿಶಿಷ್ಟ, ಜಟಾಜೂಟಧಾರಿ, ವಿಕರಾಲಸ್ವರೂಪ, ಕುಬೇರವರದನಿಗೆ ನೀನು ನಮಸ್ಕರಿಸು.

07173021c ಯಾಮ್ಯಾಯಾವ್ಯಕ್ತಕೇಶಾಯ ಸದ್ವೃತ್ತೇ ಶಂಕರಾಯ ಚ।।
07173022a ಕಾಮ್ಯಾಯ ಹರಿನೇತ್ರಾಯ ಸ್ಥಾಣವೇ ಪುರುಷಾಯ ಚ।
07173022c ಹರಿಕೇಶಾಯ ಮುಂಡಾಯ ಕೃಶಾಯೋತ್ತರಣಾಯ ಚ।।
07173023a ಭಾಸ್ಕರಾಯ ಸುತೀರ್ಥಾಯ ದೇವದೇವಾಯ ರಂಹಸೇ।

ಯಮನಿಗೆ ಅನುಕೂಲನಾದ ಕಾಲಸ್ವರೂಪ, ಅವ್ಯಕ್ತಸ್ವರೂಪದ, ಆಕಾಶವೇ ತಲೆಗೂದಲಾಗಿರುವ, ಸಧಾಚಾರಸಂಪನ್ನ, ಶಂಕರ, ಕಮನೀಯವಿಗ್ರಹ, ಪಿಂಗಳನೇತ್ರ, ಸ್ಥಾಣು, ಮಹಾಪುರುಷ, ಕಂದುಬಣ್ಣದ ಕೂದಲುಳ್ಳವ, ಮುಂಡ, ತಪಸ್ಸಿನಿಂದ ಕೃಶನಾಗಿರುವ, ಭವಸಾಗರವನ್ನು ದಾಟಿಸುವ, ಸೂರ್ಯಸ್ವರೂಪ, ಉತ್ತಮತೀರ್ಥ, ದೇವದೇವ, ವೇಗವಂತನಿಗೆ ನಮಸ್ಕರಿಸು.

07173023c ಬಹುರೂಪಾಯ ಶರ್ವಾಯ ಪ್ರಿಯಾಯ ಪ್ರಿಯವಾಸಸೇ।।
07173024a ಉಷ್ಣೀಷಿಣೇ ಸುವಕ್ತ್ರಾಯ ಸಹಸ್ರಾಕ್ಷಾಯ ಮೀಢುಷೇ।

ಬಹುರೂಪಿ, ಶರ್ವ, ಪ್ರಿಯ, ಸುಂದರ ಉಡುಗೆಗಳನ್ನು ತೊಟ್ಟ, ಶಿರಸ್ತ್ರಾಣವನ್ನು ಧರಿಸುವ, ಸುಂದರ ಮುಖವುಳ್ಳ, ಸಹಸ್ರಾಕ್ಷನಿಗೆ ಮತ್ತು ಮಳೆಗರೆಯುವವನಿಗೆ ನಮಸ್ಕರಿಸು.

07173024c ಗಿರಿಶಾಯ ಪ್ರಶಾಂತಾಯ ಪತಯೇ ಚೀರವಾಸಸೇ।।
07173025a ಹಿರಣ್ಯಬಾಹವೇ ಚೈವ ಉಗ್ರಾಯ ಪತಯೇ ದಿಶಾಂ।

ಪರ್ವತದಲ್ಲಿ ಮಲಗುವವನಿಗೆ, ಪರಮಶಾಂತನಿಗೆ, ಪತಿಗೆ, ನಾರುಮಡಿಯನ್ನುಟ್ಟವನಿಗೆ, ಹಿರಣ್ಯಬಾಹುವಿಗೆ, ಉಗ್ರನಿಗೆ ಮತ್ತು ದಿಕ್ಕುಗಳ ಅಧಿಪತಿಗೆ ನಮಸ್ಕರಿಸು.

07173025c ಪರ್ಜನ್ಯಪತಯೇ ಚೈವ ಭೂತಾನಾಂ ಪತಯೇ ನಮಃ।।
07173026a ವೃಕ್ಷಾಣಾಂ ಪತಯೇ ಚೈವ ಅಪಾಂ ಚ ಪತಯೇ ತಥಾ।

ಮೇಘಗಳ ಅಧಿಪತಿಗೆ, ಭೂತಗಳ ಪತಿಗೆ ನಮಸ್ಕಾರ. ವೃಕ್ಷಗಳ ಒಡೆಯನಿಗೆ ಮತ್ತು ನೀರಿನ ಒಡೆಯನಿಗೆ ನಮಸ್ಕಾರ.

07173026c ವೃಕ್ಷೈರಾವೃತಕಾಯಾಯ ಸೇನಾನ್ಯೇ ಮಧ್ಯಮಾಯ ಚ।।
07173027a ಸ್ರುವಹಸ್ತಾಯ ದೇವಾಯ ಧನ್ವಿನೇ ಭಾರ್ಗವಾಯ ಚ।
07173027c ಬಹುರೂಪಾಯ ವಿಶ್ವಸ್ಯ ಪತಯೇ ಚೀರವಾಸಸೇ।।
07173028a ಸಹಸ್ರಶಿರಸೇ ಚೈವ ಸಹಸ್ರನಯನಾಯ ಚ।
07173028c ಸಹಸ್ರಬಾಹವೇ ಚೈವ ಸಹಸ್ರಚರಣಾಯ ಚ।।

ವೃಕ್ಷಗಳಿಂದ ಆವೃತ ಶರೀರವುಳ್ಳವನಿಗೆ, ಸೇನಾನಿಗೆ, ಮಧ್ಯಮನಿಗೆ, ಕೈಯಲ್ಲಿ ಸ್ರುವವನ್ನು ಹಿಡಿದಿರುವವನಿಗೆ, ದೇವನಿಗೆ, ಧನ್ವಿಗೆ, ಭಾರ್ಗವನಿಗೆ, ಬಹೂರೂಪನಿಗೆ, ವಿಶ್ವದ ಪತಿಗೆ, ಚೀರವಾಸಸನಿಗೆ, ಸಹಸ್ರ ಶಿರಸನಿಗೆ, ಸಹಸ್ರನಯನನಿಗೆ, ಸಹಸ್ರಬಾಹುವಿಗೆ ಮತ್ತು ಸಹಸ್ರ ಚರಣನಿಗೆ ನಮಸ್ಕಾರ.

07173029a ಶರಣಂ ಪ್ರಾಪ್ಯ ಕೌಂತೇಯ ವರದಂ ಭುವನೇಶ್ವರಂ।
07173029c ಉಮಾಪತಿಂ ವಿರೂಪಾಕ್ಷಂ ದಕ್ಷಯಜ್ಞನಿಬರ್ಹಣಂ।
07173029e ಪ್ರಜಾನಾಂ ಪತಿಮವ್ಯಗ್ರಂ ಭೂತಾನಾಂ ಪತಿಮವ್ಯಯಂ।।
07173030a ಕಪರ್ದಿನಂ ವೃಷಾವರ್ತಂ ವೃಷನಾಭಂ ವೃಷಧ್ವಜಂ।
07173030c ವೃಷದರ್ಪಂ ವೃಷಪತಿಂ ವೃಷಶೃಂಗಂ ವೃಷರ್ಷಭಂ।।
07173031a ವೃಷಾಂಕಂ ವೃಷಭೋದಾರಂ ವೃಷಭಂ ವೃಷಭೇಕ್ಷಣಂ।
07173031c ವೃಷಾಯುಧಂ ವೃಷಶರಂ ವೃಷಭೂತಂ ಮಹೇಶ್ವರಂ।।

ಕೌಂತೇಯ! ವರದನ, ಭುವನೇಶ್ವರನ, ಉಮಾಪತಿಯ, ವಿರೂಪಾಕ್ಷನ, ದಕ್ಷಯಜ್ಞನಿಬರ್ಹಣನ, ಪ್ರಜೆಗಳ ಪತಿ, ಅವ್ಯಗ್ರ, ಭೂತಗಳ ಪತಿ, ಅವ್ಯಯ, ಕಪರ್ದಿ, ವೃಷಾವರ್ತ, ವೃಷನಾಭ, ವೃಷಧ್ವಜ, ವೃಷದರ್ಪ, ವೃಷಪತಿ, ವೃಷಶೃಂಗ, ವೃಷರ್ಷಭ, ವೃಷಾಂಕ, ವೃಷಭೋದಾರ, ವೃಷಭ, ವೃಷಭೇಕ್ಷಣ, ವೃಷಾಯುಧ, ವೃಷಶರ, ವೃಷಭೂತ ಮಹೇಶ್ವರನ ಶರಣು ಹೋಗು.

07173032a ಮಹೋದರಂ ಮಹಾಕಾಯಂ ದ್ವೀಪಿಚರ್ಮನಿವಾಸಿನಂ।
07173032c ಲೋಕೇಶಂ ವರದಂ ಮುಂಡಂ ಬ್ರಹ್ಮಣ್ಯಂ ಬ್ರಾಹ್ಮಣಪ್ರಿಯಂ।।
07173033a ತ್ರಿಶೂಲಪಾಣಿಂ ವರದಂ ಖಡ್ಗಚರ್ಮಧರಂ ಪ್ರಭುಂ।
07173033c ಪಿನಾಕಿನಂ ಖಂಡಪರಶುಂ ಲೋಕಾನಾಂ ಪತಿಮೀಶ್ವರಂ।
07173033e ಪ್ರಪದ್ಯೇ ಶರಣಂ ದೇವಂ ಶರಣ್ಯಂ ಚೀರವಾಸಸಂ।।

ಮಹೋದರ, ಮಹಾಕಾಯ, ದ್ವೀಪಿ, ಚರ್ಮನಿವಾಸಿ, ಲೋಕೇಶ, ವರದ, ಮುಂಡ, ಬ್ರಹ್ಮಣ್ಯ, ಬ್ರಾಹ್ಮಣಪ್ರಿಯ, ತ್ರಿಶೂಲಪಾಣಿ, ವರದ, ಖಡ್ಗಚರ್ಮಧರ, ಪ್ರಭು, ಪಿನಾಕಿ, ಖಂಡಪರಶು, ಲೋಕಪತಿ, ಈಶ್ವರ, ದೇವ, ಶರಣ್ಯ, ಚೀರವಾಸಸನ ಶರಣು ಹೋಗು.

07173034a ನಮಸ್ತಸ್ಮೈ ಸುರೇಶಾಯ ಯಸ್ಯ ವೈಶ್ರವಣಃ ಸಖಾ।
07173034c ಸುವಾಸಸೇ ನಮೋ ನಿತ್ಯಂ ಸುವ್ರತಾಯ ಸುಧನ್ವಿನೇ।।
07173035a ಸ್ರುವಹಸ್ತಾಯ ದೇವಾಯ ಸುಖಧನ್ವಾಯ ಧನ್ವಿನೇ।
07173035c ಧನ್ವಂತರಾಯ ಧನುಷೇ ಧನ್ವಾಚಾರ್ಯಾಯ ಧನ್ವಿನೇ।।

ಸುರೇಶನಿಗೆ, ವೈಶ್ರವಣನ ಸಖನಿಗೆ, ಉತ್ತಮ ವಸ್ತ್ರವನ್ನು ಧರಿಸಿರುವವನಿಗೆ, ನಿತ್ಯನಿಗೆ, ಸುವ್ರತನಿಗೆ, ಸುಧನ್ವಿಗೆ ನಮಸ್ಕಾರ. ಸ್ರುವವನ್ನು ಹಿಡಿದಿರುವವನಿಗೆ, ದೇವನಿಗೆ, ಸುಖಧನ್ವಿಗೆ, ಧನ್ವಿಗೆ, ಧನ್ವಂತರಿಗೆ, ಧನುಷಿಗೆ, ಧನ್ವಾಚಾರ್ಯನಿಗೆ, ಧನ್ವಿಗೆ ನಮಸ್ಕಾರ.

07173036a ಉಗ್ರಾಯುಧಾಯ ದೇವಾಯ ನಮಃ ಸುರವರಾಯ ಚ।
07173036c ನಮೋಽಸ್ತು ಬಹುರೂಪಾಯ ನಮಶ್ಚ ಬಹುಧನ್ವಿನೇ।।

ಉಗ್ರಾಯುಧ, ದೇವ, ಸುರವರನಿಗೆ ನಮಸ್ಕಾರ. ಬಹುರೂಪಿಗೆ ನಮಸ್ಕಾರ. ಬಹುಧನ್ವಿಗೆ ನಮಸ್ಕಾರ.

07173037a ನಮೋಽಸ್ತು ಸ್ಥಾಣವೇ ನಿತ್ಯಂ ಸುವ್ರತಾಯ ಸುಧನ್ವಿನೇ।
07173037c ನಮೋಽಸ್ತು ತ್ರಿಪುರಘ್ನಾಯ ಭಗಘ್ನಾಯ ಚ ವೈ ನಮಃ।।

ಸ್ಥಾಣುವೇ, ಸುವ್ರತನೇ, ಸುಧನ್ವಿಯೇ, ನಿತ್ಯನೇ, ನಿನಗೆ ನಮಸ್ಕಾರ. ತ್ರಿಪುರಘ್ನನೇ, ಭಗಘ್ನನೇ ನಿನಗೆ ನಮೋನಮ.

07173038a ವನಸ್ಪತೀನಾಂ ಪತಯೇ ನರಾಣಾಂ ಪತಯೇ ನಮಃ।
07173038c ಅಪಾಂ ಚ ಪತಯೇ ನಿತ್ಯಂ ಯಜ್ಞಾನಾಂ ಪತಯೇ ನಮಃ।।

ವನಸ್ಪತಿಗಳ ಒಡೆಯನಿಗೆ ನಮಸ್ಕಾರ. ನರರ ಪತಿಗೆ ನಮಸ್ಕಾರ. ಅಪಾಂಪತಿಗೆ ನಮಸ್ಕಾರ. ನಿತ್ಯನಿಗೆ ಮತ್ತು ಯಜ್ಞಪತಿಗೆ ನಮಸ್ಕಾರ.

07173039a ಪೂಷ್ಣೋ ದಂತವಿನಾಶಾಯ ತ್ರ್ಯಕ್ಷಾಯ ವರದಾಯ ಚ।
07173039c ನೀಲಕಂಠಾಯ ಪಿಂಗಾಯ ಸ್ವರ್ಣಕೇಶಾಯ ವೈ ನಮಃ।।

ಪೂಷನ ಹಲ್ಲುಗಳನ್ನು ಮುರಿದವನಿಗೆ, ಮುಕ್ಕಣ್ಣನಿಗೆ, ವರದನಿಗೆ, ನೀಲಕಂಠನಿಗೆ, ಪಿಂಗಲನಿಗೆ, ಸ್ವರ್ಣಕೇಶನಿಗೆ ನಮಸ್ಕಾರ.

07173040a ಕರ್ಮಾಣಿ ಚೈವ ದಿವ್ಯಾನಿ ಮಹಾದೇವಸ್ಯ ಧೀಮತಃ।
07173040c ತಾನಿ ತೇ ಕೀರ್ತಯಿಷ್ಯಾಮಿ ಯಥಾಪ್ರಜ್ಞಂ ಯಥಾಶ್ರುತಂ।।

ಧೀಮತ ಮಹಾದೇವನ ದಿವ್ಯಕರ್ಮಗಳ ಕುರಿತು ತಿಳಿದಷ್ಟು ಮತ್ತು ಕೇಳಿದಷ್ಟನ್ನು ವರ್ಣಿಸುತ್ತೇನೆ.

07173041a ನ ಸುರಾ ನಾಸುರಾ ಲೋಕೇ ನ ಗಂಧರ್ವಾ ನ ರಾಕ್ಷಸಾಃ।
07173041c ಸುಖಮೇಧಂತಿ ಕುಪಿತೇ ತಸ್ಮಿನ್ನಪಿ ಗುಹಾಗತಾಃ।।

ಇವನು ಕುಪಿತನಾದರೆ ಲೋಕದಲ್ಲಿ ಸುರರಾಗಲೀ, ಅಸುರರಾಗಲೀ, ಗಂಧರ್ವರಾಗಲೀ, ರಾಕ್ಷಸರಾಗಲೀ, ಅವರು ಗುಹೆಗಳನ್ನು ಸೇರಿದರೂ, ಸುಖದಿಂದಿರಲಾರರು.

07173042a ವಿವ್ಯಾಧ ಕುಪಿತೋ ಯಜ್ಞಂ ನಿರ್ಭಯಸ್ತು ಭವಸ್ತದಾ।
07173042c ಧನುಷಾ ಬಾಣಮುತ್ಸೃಜ್ಯ ಸಘೋಷಂ ವಿನನಾದ ಚ।।

ಹಿಂದೆ ಭವನು ನಿರ್ಭಯನಾಗಿ ಕುಪಿತನಾಗಿ ಧನುಸ್ಸಿನಿಂದ ಬಾಣಗಳನ್ನು ಪ್ರಯೋಗಿಸಿ ಜೋರಾಗಿ ಗರ್ಜಿಸುತ್ತಾ ಯಜ್ಞವನ್ನೇ ಧ್ವಂಸಮಾಡಿದ್ದನು.

07173043a ತೇ ನ ಶರ್ಮ ಕುತಃ ಶಾಂತಿಂ ಲೇಭಿರೇ ಸ್ಮ ಸುರಾಸ್ತದಾ।
07173043c ವಿದ್ರುತೇ ಸಹಸಾ ಯಜ್ಞೇ ಕುಪಿತೇ ಚ ಮಹೇಶ್ವರೇ।।

ಮಹೇಶ್ವರನು ಯಜ್ಞದಲ್ಲಿ ಕುಪಿತನಾಗಿರಲು ಸುರರು ಎಲ್ಲಿಯೂ ಶಾಂತಿ ಮತ್ತು ರಕ್ಷಣೆಯನ್ನು ಪಡೆಯದೇ ಒಮ್ಮಿಂದೊಮ್ಮೆಲೇ ಅಲ್ಲಿಂದ ಓಡಿ ಹೋಗಿದ್ದರು.

07173044a ತೇನ ಜ್ಯಾತಲಘೋಷೇಣ ಸರ್ವೇ ಲೋಕಾಃ ಸಮಾಕುಲಾಃ।
07173044c ಬಭೂವುರ್ವಶಗಾಃ ಪಾರ್ಥ ನಿಪೇತುಶ್ಚ ಸುರಾಸುರಾಃ।।

ಅವನ ಧನುಸ್ಸಿನ ಟೇಂಕಾರಘೋಷದಿಂದ ಸರ್ವ ಲೋಕಗಳೂ ವ್ಯಾಕುಲಗೊಂಡವು. ಅದರ ವಶಕ್ಕೆ ಬಂದ ಸುರಾಸುರರು ಕೆಳಗುರುಳಿದರು.

07173045a ಆಪಶ್ಚುಕ್ಷುಭಿರೇ ಸರ್ವಾಶ್ಚಕಂಪೇ ಚ ವಸುಂಧರಾ।
07173045c ಪರ್ವತಾಶ್ಚ ವ್ಯಶೀರ್ಯಂತ ದಿಶೋ ನಾಗಾಶ್ಚ ಮೋಹಿತಾಃ।।

ಸರ್ವ ಸಮುದ್ರಗಳೂ ಉಕ್ಕಿಬಂದವು. ಭೂಮಿಯು ನಡುಗಿತು. ಪರ್ವತಗಳು ಸೀಳಿದವು. ಮತ್ತು ದಿಗ್ಗಜಗಳು ಭ್ರಾಂತಗೊಂಡವು.

07173046a ಅಂಧಾಶ್ಚ ತಮಸಾ ಲೋಕಾ ನ ಪ್ರಕಾಶಂತ ಸಂವೃತಾಃ।
07173046c ಜಘ್ನಿವಾನ್ಸಹ ಸೂರ್ಯೇಣ ಸರ್ವೇಷಾಂ ಜ್ಯೋತಿಷಾಂ ಪ್ರಭಾಃ।।

ಅಂಧಕಾರವು ತುಂಬಿ ಲೋಕಗಳು ಕಾಣದಂತಾದವು. ಅವನು ಸೂರ್ಯನೊಂದಿಗೆ ಎಲ್ಲ ನಕ್ಷತ್ರಗಳ ಪ್ರಭೆಯನ್ನೂ ನಷ್ಟಗೊಳಿಸಿದ್ದನು.

07173047a ಚುಕ್ರುಶುರ್ಭಯಭೀತಾಶ್ಚ ಶಾಂತಿಂ ಚಕ್ರುಸ್ತಥೈವ ಚ।
07173047c ಋಷಯಃ ಸರ್ವಭೂತಾನಾಮಾತ್ಮನಶ್ಚ ಸುಖೈಷಿಣಃ।।

ಭಯಭೀತ ಋಷಿಗಳು ಸರ್ವಭೂತಗಳ ಮತ್ತು ತಮ್ಮ ಸುಖವನ್ನು ಬಯಸಿ ಶಾಂತಿಮಾಡತೊಡಗಿದರು.

07173048a ಪೂಷಾಣಮಭ್ಯದ್ರವತ ಶಂಕರಃ ಪ್ರಹಸನ್ನಿವ।
07173048c ಪುರೋಡಾಶಂ ಭಕ್ಷಯತೋ ದಶನಾನ್ವೈ ವ್ಯಶಾತಯತ್।।

ಶಂಕರನು ಪುರೋಡಾಶವನ್ನು ಭಕ್ಷಿಸುತ್ತಿದ್ದ ಪೂಷನನ್ನು ಆಕ್ರಮಿಸಿ ಅಟ್ಟಹಾಸದಿಂದ ನಗುತ್ತಾ ಅವನ ಹಲ್ಲುಗಳೆಲ್ಲವನ್ನೂ ಕಿತ್ತುಬಿಟ್ಟನು.

07173049a ತತೋ ನಿಶ್ಚಕ್ರಮುರ್ದೇವಾ ವೇಪಮಾನಾ ನತಾಃ ಸ್ಮ ತಂ।
07173049c ಪುನಶ್ಚ ಸಂದಧೇ ದೀಪ್ತಂ ದೇವಾನಾಂ ನಿಶಿತಂ ಶರಂ।।

ಆಗ ದೇವತೆಗಳು ನಡುಗುತ್ತಾ ತಲೆತಗ್ಗಿಸಿಕೊಂಡು ಯಜ್ಞಶಾಲೆಯಿಂದ ಹೊರಬಂದಿದ್ದರು. ಪುನಃ ಶಂಕರನು ದೇವತೆಗಳ ಮೇಲೆ ಗುರಿಯಿಟ್ಟು ಉರಿಯುತ್ತಿರುವ ನಿಶಿತ ಶರವನ್ನು ಧನುಸ್ಸಿಗೆ ಹೂಡಿದನು.

07173050a ರುದ್ರಸ್ಯ ಯಜ್ಞಭಾಗಂ ಚ ವಿಶಿಷ್ಟಂ ತೇ ನ್ವಕಲ್ಪಯನ್।
07173050c ಭಯೇನ ತ್ರಿದಶಾ ರಾಜನ್ ಶರಣಂ ಚ ಪ್ರಪೇದಿರೇ।।

ರಾಜನ್! ತ್ರಿದಶರು ಭಯದಿಂದ ವಿಶಿಷ್ಟ ಯಜ್ಞಭಾಗವನ್ನು ರುದ್ರನಿಗೆ ಕಲ್ಪಿಸಿ ಅವನಿಗೆ ಶರಣು ಹೊಕ್ಕರು.

07173051a ತೇನ ಚೈವಾತಿಕೋಪೇನ ಸ ಯಜ್ಞಃ ಸಂಧಿತಸ್ತದಾ।
07173051c ಯತ್ತಾಶ್ಚಾಪಿ ಸುರಾ ಆಸನ್ಯತ್ತಾಶ್ಚಾದ್ಯಾಪಿ ತಂ ಪ್ರತಿ।।

ಶಂಕರನ ಕೋಪವು ಶಾಂತವಾದನಂತರವೇ ಆ ಯಜ್ಞವು ಪೂರ್ಣಗೊಂಡಿತು. ಆಗ ಶಂಕರನ ಕುರಿತು ಹೇಗೆ ಭಯಪಟ್ಟಿದ್ದರೋ ಹಾಗೆ ಈಗಲೂ ಕೂಡ ಅವನ ಕುರಿತು ಸುರರು ಭಯದಿಂದಿದ್ದಾರೆ.

07173052a ಅಸುರಾಣಾಂ ಪುರಾಣ್ಯಾಸಂಸ್ತ್ರೀಣಿ ವೀರ್ಯವತಾಂ ದಿವಿ।
07173052c ಆಯಸಂ ರಾಜತಂ ಚೈವ ಸೌವರ್ಣಮಪರಂ ಮಹತ್।।

ಹಿಂದೆ ದಿವಿಯಲ್ಲಿ ವೀರ್ಯವಂತ ಅಸುರರ ಮೂರು ಮಹಾ ಪುರಗಳಿದ್ದವು – ಉಕ್ಕಿನದು, ಬೆಳ್ಳಿಯದು ಮತ್ತು ಇನ್ನೊಂದು ಬಂಗಾರದ್ದು.

07173053a ಆಯಸಂ ತಾರಕಾಕ್ಷಸ್ಯ ಕಮಲಾಕ್ಷಸ್ಯ ರಾಜತಂ।
07173053c ಸೌವರ್ಣಂ ಪರಮಂ ಹ್ಯಾಸೀದ್ವಿದ್ಯುನ್ಮಾಲಿನ ಏವ ಚ।।

ಉಕ್ಕಿನದು ತಾರಕಾಕ್ಷನದಾಗಿತ್ತು, ಬೆಳ್ಳಿಯದು ಕಮಲಾಕ್ಷನದು, ಮತ್ತು ಪರಮ ಸುವರ್ಣಮಯವಾದುದು ವಿದ್ಯುನ್ಮಾಲಿನಿಯದಾಗಿತ್ತು.

07173054a ನ ಶಕ್ತಸ್ತಾನಿ ಮಘವಾನ್ಭೇತ್ತುಂ ಸರ್ವಾಯುಧೈರಪಿ।
07173054c ಅಥ ಸರ್ವೇಽಮರಾ ರುದ್ರಂ ಜಗ್ಮುಃ ಶರಣಮರ್ದಿತಾಃ।।

ಸರ್ವಾಯುಧಗಳಿಂದಲೂ ಇಂದ್ರನು ಇದನ್ನು ಭೇದಿಸಲು ಶಕ್ತನಾಗಲಿಲ್ಲ. ಆಗ ಸೋತ ಅಮರರೆಲ್ಲರೂ ರುದ್ರನಿಗೆ ಶರಣು ಹೋದರು.

07173055a ತೇ ತಮೂಚುರ್ಮಹಾತ್ಮಾನಂ ಸರ್ವೇ ದೇವಾಃ ಸವಾಸವಾಃ।
07173055c ರುದ್ರ ರೌದ್ರಾ ಭವಿಷ್ಯಂತಿ ಪಶವಃ ಸರ್ವಕರ್ಮಸು।
07173055e ನಿಪಾತಯಿಷ್ಯಸೇ ಚೈನಾನಸುರಾನ್ಭುವನೇಶ್ವರ।।

ಎಲ್ಲ ದೇವತೆಗಳೂ ಒಂದಾಗಿ ಆ ಮಹಾತ್ಮನಿಗೆ ಹೇಳಿದರು: “ರುದ್ರ! ಭುವನೇಶ್ವರ! ಈ ಅಸುರರನ್ನು ಸಂಹರಿಸಿದರೆ ಸರ್ವ ಕರ್ಮಗಳಲ್ಲಿ ಕಟ್ಟುವ ಪಶುವು ರುದ್ರನದಾಗುತ್ತದೆ.”

07173056a ಸ ತಥೋಕ್ತಸ್ತಥೇತ್ಯುಕ್ತ್ವಾ ದೇವಾನಾಂ ಹಿತಕಾಮ್ಯಯಾ।
07173056c ಅತಿಷ್ಠತ್ಸ್ಥಾಣುಭೂತಃ ಸ ಸಹಸ್ರಂ ಪರಿವತ್ಸರಾನ್।।

ದೇವತೆಗಳ ಹಿತವನ್ನು ಬಯಸಿ ಹಾಗೆಯೇ ಆಗಲೆಂದು ಅವರಿಗೆ ಹೇಳಿ ಅವನು ಒಂದು ಸಾವಿರ ವರ್ಷಗಳು ಅಚಲನಾಗಿ (ಸ್ಥಾಣುವಾಗಿ) ನಿಂತಿದ್ದನು.

07173057a ಯದಾ ತ್ರೀಣಿ ಸಮೇತಾನಿ ಅಂತರಿಕ್ಷೇ ಪುರಾಣಿ ವೈ।
07173057c ತ್ರಿಪರ್ವಣಾ ತ್ರಿಶಲ್ಯೇನ ತೇನ ತಾನಿ ಬಿಭೇದ ಸಃ।।

ಯಾವಾಗ ಆ ಮೂರೂ ಪುರಗಳೂ ಅಂತರಿಕ್ಷದಲ್ಲಿ ಒಟ್ಟಾಗಿ ಸೇರಿದವೋ ಆಗ ಅವನು ಮೂರು ಪರ್ವಗಳಿದ್ದ ಮೂರು ಮೊನೆಗಳಿದ್ದ ಬಾಣದಿಂದ ಅವನ್ನು ಭೇದಿಸಿದನು.

07173058a ಪುರಾಣಿ ನ ಚ ತಂ ಶೇಕುರ್ದಾನವಾಃ ಪ್ರತಿವೀಕ್ಷಿತುಂ।
07173058c ಶರಂ ಕಾಲಾಗ್ನಿಸಂಯುಕ್ತಂ ವಿಷ್ಣುಸೋಮಸಮಾಯುತಂ।।

ಕಾಲಾಗ್ನಿಸಂಯುಕ್ತ ಮತ್ತು ವಿಷ್ಣು-ಸೋಮ ಸಮಾಯುತ ಶರವನ್ನು ನೋಡಲು ದಾನವರ ಆ ಪುರಗಳು ಶಕ್ತರಾಗಲಿಲ್ಲ.

07173059a ಬಾಲಮಂಕಗತಂ ಕೃತ್ವಾ ಸ್ವಯಂ ಪಂಚಶಿಖಂ ಪುನಃ।
07173059c ಉಮಾ ಜಿಜ್ಞಾಸಮಾನಾ ವೈ ಕೋಽಯಮಿತ್ಯಬ್ರವೀತ್ಸುರಾನ್।।

ಉಮೆಯು ಪಂಚಶಿಖೆಗಳಿಂದ ಕೂಡಿದ್ದ ಬಾಲಕನನ್ನು ತನ್ನ ತೊಡೆಯಮೇಲಿರಿಸಿಕೊಂಡು “ಇವನ್ಯಾರೆಂದು ನಿಮಗೆ ತಿಳಿದಿದೆಯೇ?” ಎಂದು ಸುರರನ್ನು ಪ್ರಶ್ನಿಸಿದಳು.

07173060a ಬಾಹುಂ ಸವಜ್ರಂ ಶಕ್ರಸ್ಯ ಕ್ರುದ್ಧಸ್ಯಾಸ್ತಂಭಯತ್ಪ್ರಭುಃ।
07173060c ಸ ಏಷ ಭಗವಾನ್ದೇವಃ ಸರ್ವಲೋಕೇಶ್ವರಃ ಪ್ರಭುಃ।।

ಈ ಪ್ರಭುವು ವಜ್ರವನ್ನು ಹಿಡಿದಿದ್ದ ಶಕ್ರನ ಬಾಹುವನ್ನು ಕ್ರೋಧದಿಂದ ಸ್ತಂಭನಗೊಳಿಸಿದ್ದನು. ಅವನೇ ಈ ಸರ್ವಲೋಕೇಶ್ವರ, ಪ್ರಭು, ದೇವ, ಭಗವಾನನು.

07173061a ನ ಸಂಬುಬುಧಿರೇ ಚೈನಂ ದೇವಾಸ್ತಂ ಭುವನೇಶ್ವರಂ।
07173061c ಸಪ್ರಜಾಪತಯಃ ಸರ್ವೇ ಬಾಲಾರ್ಕಸದೃಶಪ್ರಭಂ।।

ಆ ಪ್ರಜಾಪತಿ, ಬಾಲಾರ್ಕಸದೃಶ ಪ್ರಭು ಭುವನೇಶ್ವರನನ್ನು ದೇವತೆಗಳೆಲ್ಲರೂ ಮೊದಲು ಗುರುತಿಸಲಾರದೇ ಹೋದರು.

07173062a ಅಥಾಭ್ಯೇತ್ಯ ತತೋ ಬ್ರಹ್ಮಾ ದೃಷ್ಟ್ವಾ ಚ ಸ ಮಹೇಶ್ವರಂ।
07173062c ಅಯಂ ಶ್ರೇಷ್ಠ ಇತಿ ಜ್ಞಾತ್ವಾ ವವಂದೇ ತಂ ಪಿತಾಮಹಃ।।

ಆಗ ಪಿತಾಮಹ ಬ್ರಹ್ಮನು ಅವನನ್ನು ನೋಡಿ ಅವನೇ ಮಹೇಶ್ವರನೆಂದೂ ಶ್ರೇಷ್ಠನೆಂದೂ ತಿಳಿದು ಅವನಿಗೆ ವಂದಿಸಿದನು.

07173063a ತತಃ ಪ್ರಸಾದಯಾಮಾಸುರುಮಾಂ ರುದ್ರಂ ಚ ತೇ ಸುರಾಃ।
07173063c ಅಭವಚ್ಚ ಪುನರ್ಬಾಹುರ್ಯಥಾಪ್ರಕೃತಿ ವಜ್ರಿಣಃ।।

ಅನಂತರ ಸುರರು ಉಮೆಯನ್ನೂ ರುದ್ರನನ್ನೂ ಪ್ರಸನ್ನಗೊಳಿಸಿದರು. ವಜ್ರಾಯುಧಸಹಿತವಾಗಿ ಸ್ತಂಭಿತವಾಗಿದ್ದ ಇಂದ್ರನ ಬಾಹುವು ಮೊದಲಿನಂತೆಯೇ ಚಲಿಸತೊಡಗಿತು.

07173064a ತೇಷಾಂ ಪ್ರಸನ್ನೋ ಭಗವಾನ್ಸಪತ್ನೀಕೋ ವೃಷಧ್ವಜಃ।
07173064c ದೇವಾನಾಂ ತ್ರಿದಶಶ್ರೇಷ್ಠೋ ದಕ್ಷಯಜ್ಞವಿನಾಶನಃ।।

ಪತ್ನಿಯೊಂದಿಗೆ ಭಗವಾನ್ ವೃಷಧ್ವಜ ದಕ್ಷಯಜ್ಞವಿನಾಶಕ, ತ್ರಿದಶಶ್ರೇಷ್ಠನು ಆ ದೇವತೆಗಳ ಮೇಲೆ ಪ್ರಸನ್ನನಾದನು.

07173065a ಸ ವೈ ರುದ್ರಃ ಸ ಚ ಶಿವಃ ಸೋಽಗ್ನಿಃ ಶರ್ವಃ ಸ ಸರ್ವವಿತ್।
07173065c ಸ ಚೇಂದ್ರಶ್ಚೈವ ವಾಯುಶ್ಚ ಸೋಽಶ್ವಿನೌ ಸ ಚ ವಿದ್ಯುತಃ।।
07173066a ಸ ಭವಃ ಸ ಚ ಪರ್ಜನ್ಯೋ ಮಹಾದೇವಃ ಸ ಚಾನಘಃ।
07173066c ಸ ಚಂದ್ರಮಾಃ ಸ ಚೇಶಾನಃ ಸ ಸೂರ್ಯೋ ವರುಣಶ್ಚ ಸಃ।।
07173067a ಸ ಕಾಲಃ ಸೋಽಂತಕೋ ಮೃತ್ಯುಃ ಸ ಯಮೋ ರಾತ್ರ್ಯಹಾನಿ ಚ।
07173067c ಮಾಸಾರ್ಧಮಾಸಾ ಋತವಃ ಸಂಧ್ಯೇ ಸಂವತ್ಸರಶ್ಚ ಸಃ।।
07173068a ಸ ಚ ಧಾತಾ ವಿಧಾತಾ ಚ ವಿಶ್ವಾತ್ಮಾ ವಿಶ್ವಕರ್ಮಕೃತ್।
07173068c ಸರ್ವಾಸಾಂ ದೇವತಾನಾಂ ಚ ಧಾರಯತ್ಯವಪುರ್ವಪುಃ।।
07173069a ಸರ್ವೈರ್ದೇವೈಃ ಸ್ತುತೋ ದೇವಃ ಸೈಕಧಾ ಬಹುಧಾ ಚ ಸಃ।
07173069c ಶತಧಾ ಸಹಸ್ರಧಾ ಚೈವ ತಥಾ ಶತಸಹಸ್ರಧಾ।।

ಅವನೇ ರುದ್ರ, ಅವನೇ ಶಿವ, ಅವನೇ ಅಗ್ನಿ, ಶರ್ವ ಮತ್ತು ಎಲ್ಲವನ್ನೂ ತಿಳಿದವನು. ಅವನೇ ಇಂದ್ರ, ವಾಯು, ಅಶ್ವಿನಿಯರು ಮತ್ತು ಮಿಂಚು. ಅವನೇ ಭವ, ಪರ್ಜನ್ಯ, ಮಹಾದೇವ ಮತ್ತು ಅನಘ. ಅವನೇ ಚಂದ್ರಮ, ಈಶಾನ, ಸೂರ್ಯ ಮತ್ತು ವರುಣನೂ ಕೂಡ. ಅವನೇ ಕಾಲ, ಅವನೇ ಅಂತಕ, ಮೃತ್ಯು, ಮತ್ತು ಯಮ. ಅವನೇ ರಾತ್ರಿ-ಹಗಲುಗಳು, ಮಾಸ-ಪಕ್ಷಗಳು, ಋತುಗಳು, ಸಂಧ್ಯಗಳು ಮತ್ತು ಸವತ್ಸರಗಳು ಕೂಡ. ಅವನೇ ಧಾತಾ, ವಿಧಾತಾ, ವಿಶ್ವಾತ್ಮ ಮತ್ತು ವಿಶ್ವಕರ್ಮಕೃತ್. ಎಲ್ಲ ದೇವತೆಗಳ ಶರೀರವನ್ನೂ ಅವನೇ ಧರಿಸುತ್ತಾನೆ. ಎಲ್ಲ ದೇವತೆಗಳೂ ಅವನನ್ನು ಸದಾಕಾಲದಲ್ಲಿಯೂ ಸ್ತುತಿಸುತ್ತಿರುತ್ತಾರೆ. ಅವನು ಏಕರೂಪನೂ, ಬಹುರೂಪನೂ ಆಗಿದ್ದಾನೆ, ನೂರಾರು, ಸಾವಿರಾರು, ಲಕ್ಷೋಪಲಕ್ಷ ರೂಪಗಳಿಂದ ಅವನು ವಿರಾಜಿಸುತ್ತಾನೆ.

07173070a ಈದೃಶಃ ಸ ಮಹಾದೇವೋ ಭೂಯಶ್ಚ ಭಗವಾನಜಃ।
07173070c ನ ಹಿ ಸರ್ವೇ ಮಯಾ ಶಕ್ಯಾ ವಕ್ತುಂ ಭಗವತೋ ಗುಣಾಃ।।

ಆ ಮಹಾದೇವನು ಈ ತರಹದವನು. ಅವನು ಹುಟ್ಟಿಲ್ಲದ ಭಗವಾನನು. ಆ ಭಗವಂತನ ಎಲ್ಲ ಗುಣಗಳನ್ನೂ ವರ್ಣಿಸಲು ನನಗೆ ಶಕ್ಯವಿಲ್ಲ.

07173071a ಸರ್ವೈರ್ಗ್ರಹೈರ್ಗೃಹೀತಾನ್ವೈ ಸರ್ವಪಾಪಸಮನ್ವಿತಾನ್।
07173071c ಸ ಮೋಚಯತಿ ಸುಪ್ರೀತಃ ಶರಣ್ಯಃ ಶರಣಾಗತಾನ್।।

ಸರ್ವಗ್ರಹಗಳ ಬಾಧೆಯಿಂದ ಪೀಡಿತರಾದವರು ಮತ್ತು ಸರ್ವ ಪಾಪಗಳಿಂದ ಕೂಡಿದವರೂ ಸಹ ಶರಣುಹೋದರೆ ಆ ಶರಣ್ಯನು ಸುಪ್ರೀತನಾಗಿ ಅವರನ್ನು ಬಾಧೆಗಳಿಂದ ಮತ್ತು ಪಾಪಗಳಿಂದ ವಿಮೋಚನೆಯನ್ನು ನೀಡುತ್ತಾನೆ.

07173072a ಆಯುರಾರೋಗ್ಯಮೈಶ್ವರ್ಯಂ ವಿತ್ತಂ ಕಾಮಾಂಶ್ಚ ಪುಷ್ಕಲಾನ್।
07173072c ಸ ದದಾತಿ ಮನುಷ್ಯೇಭ್ಯಃ ಸ ಚೈವಾಕ್ಷಿಪತೇ ಪುನಃ।।

ಮನುಷ್ಯರಿಗೆ ಅವನು ಆಯುರಾರೋಗ್ಯ ಐಶ್ವರ್ಯಗಳನ್ನು, ಪುಷ್ಕಲ ಕಾಮಗಳನ್ನೂ ವಿತ್ತವನ್ನೂ ನೀಡುತ್ತಾನೆ ಮತ್ತು ಪುನಃ ಅವುಗಳನ್ನು ಕಳೆಯುತ್ತಾನೆ.

07173073a ಸೇಂದ್ರಾದಿಷು ಚ ದೇವೇಷು ತಸ್ಯ ಚೈಶ್ವರ್ಯಮುಚ್ಯತೇ।
07173073c ಸ ಚೈವ ವ್ಯಾಹೃತೇ ಲೋಕೇ ಮನುಷ್ಯಾಣಾಂ ಶುಭಾಶುಭೇ।।

ಇಂದ್ರಾದಿ ದೇವತೆಗಳಲ್ಲಿರುವ ಐಶ್ವರ್ಯವೆಲ್ಲವೂ ಅವನದೇ ಐಶ್ವರ್ಯವೆಂದು ಹೇಳುತ್ತಾರೆ. ಲೋಕದಲ್ಲಿ ಮನುಷ್ಯರ ಶುಭಾಶುಭಗಳನ್ನೂ ಅವನೇ ನಡೆಸುತ್ತಾನೆ.

07173074a ಐಶ್ವರ್ಯಾಚ್ಚೈವ ಕಾಮಾನಾಮೀಶ್ವರಃ ಪುನರುಚ್ಯತೇ।
07173074c ಮಹೇಶ್ವರಶ್ಚ ಭೂತಾನಾಂ ಮಹತಾಮೀಶ್ವರಶ್ಚ ಸಃ।।

ಐಶ್ವರ್ಯಗಳದ್ದಲ್ಲದೇ ಅವನನ್ನು ಕಾಮಗಳ ಈಶ್ವರನೆಂದೂ ಪುನಃ ಕರೆಯುತ್ತಾರೆ. ಇರುವವುಗಳ ಮಹೇಶ್ವರನಾಗಿರುವ ಅವನು ಮಹತ್ತಿನ ಈಶ್ವರನೂ ಕೂಡ.

07173075a ಬಹುಭಿರ್ಬಹುಧಾ ರೂಪೈರ್ವಿಶ್ವಂ ವ್ಯಾಪ್ನೋತಿ ವೈ ಜಗತ್।
07173075c ಅಸ್ಯ ದೇವಸ್ಯ ಯದ್ವಕ್ತ್ರಂ ಸಮುದ್ರೇ ತದತಿಷ್ಠತ।।

ಅನೇಕ ವಿವಿಧರೂಪಗಳಲ್ಲಿ ಇವನು ಜಗತ್ತನೇ ವ್ಯಾಪಿಸಿದ್ದಾನೆ. ಆ ದೇವನ ಮುಖವು ಸಮುದ್ರದಲ್ಲಿ ಅಧಿಷ್ಠಾನಗೊಂಡಿದೆ.

07173076a ಏಷ ಚೈವ ಶ್ಮಶಾನೇಷು ದೇವೋ ವಸತಿ ನಿತ್ಯಶಃ।
07173076c ಯಜಂತ್ಯೇನಂ ಜನಾಸ್ತತ್ರ ವೀರಸ್ಥಾನ ಇತೀಶ್ವರಂ।।

ಈ ದೇವನೇ ಶ್ಮಶಾನಗಳಲ್ಲಿ ನಿತ್ಯವೂ ವಾಸಿಸುತ್ತಾನೆ. ಅಲ್ಲಿ ಆ ಈಶ್ವರನನ್ನು ಜನರು ವೀರಸ್ಥಾನನೆಂದು ಯಾಜಿಸುತ್ತಾರೆ.

07173077a ಅಸ್ಯ ದೀಪ್ತಾನಿ ರೂಪಾಣಿ ಘೋರಾಣಿ ಚ ಬಹೂನಿ ಚ।
07173077c ಲೋಕೇ ಯಾನ್ಯಸ್ಯ ಕುರ್ವಂತಿ ಮನುಷ್ಯಾಃ ಪ್ರವದಂತಿ ಚ।।

ಇವನಿಗೆ ಅನೇಕ ದೇದೀಪ್ಯಮಾನ ಘೋರ ರೂಪಗಳಿವೆ. ಲೋಕದಲ್ಲಿ ಮನುಷ್ಯರು ಇವುಗಳನ್ನು ಪೂಜಿಸುತ್ತಾರೆ ಮತ್ತು ಪ್ರಾರ್ಥಿಸುತ್ತಾರೆ.

07173078a ನಾಮಧೇಯಾನಿ ಲೋಕೇಷು ಬಹೂನ್ಯತ್ರ ಯಥಾರ್ಥವತ್।
07173078c ನಿರುಚ್ಯಂತೇ ಮಹತ್ತ್ವಾಚ್ಚ ವಿಭುತ್ವಾತ್ಕರ್ಮಭಿಸ್ತಥಾ।।

ಅವನ ಮಹತ್ತ್ವತೆಗೆ, ಒಡೆತನಕ್ಕೆ ಮತ್ತು ಕರ್ಮಭಿಗಳಿಗೆ ತಕ್ಕುದಾದ ಅನೇಕ ನಾಮಧೇಯಗಳು ಲೋಕಗಳಲ್ಲಿ ಅವನಿಗಿವೆ.

07173079a ವೇದೇ ಚಾಸ್ಯ ಸಮಾಮ್ನಾತಂ ಶತರುದ್ರೀಯಮುತ್ತಮಂ।
07173079c ನಾಮ್ನಾ ಚಾನಂತರುದ್ರೇತಿ ಉಪಸ್ಥಾನಂ ಮಹಾತ್ಮನಃ।।

ವೇದಗಳಲ್ಲಿ ಇವನನ್ನು ಉತ್ತಮ ಶತರುದ್ರೀಯದಿಂದಲೂ ಮತ್ತು ಮಹಾತ್ಮರು ಇವನನ್ನು ಅನಂತರುದ್ರ ಎಂಬ ಹೆಸರಿನಿಂದಲೂ ಉಪಸ್ಥಾನ ಮಾಡುತ್ತಾರೆ.

07173080a ಸ ಕಾಮಾನಾಂ ಪ್ರಭುರ್ದೇವೋ ಯೇ ದಿವ್ಯಾ ಯೇ ಚ ಮಾನುಷಾಃ।
07173080c ಸ ವಿಭುಃ ಸ ಪ್ರಭುರ್ದೇವೋ ವಿಶ್ವಂ ವ್ಯಾಪ್ನುವತೇ ಮಹತ್।।

ದೇವತೆಗಳ ಮತ್ತು ಮನುಷ್ಯರ ಕಾಮೋಪಭೋಗಗಳಿಗೆ ಮಹೇಶ್ವರನೇ ಪ್ರಭುವಾಗಿದ್ದಾನೆ. ಮಹಾವಿಶ್ವವನ್ನೇ ವ್ಯಾಪಿಸಿರುವ ಅವನೇ ಪ್ರಭೂ, ದೇವ ಮತ್ತು ವಿಭು.

07173081a ಜ್ಯೇಷ್ಠಂ ಭೂತಂ ವದಂತ್ಯೇನಂ ಬ್ರಾಹ್ಮಣಾ ಮುನಯಸ್ತಥಾ।
07173081c ಪ್ರಥಮೋ ಹ್ಯೇಷ ದೇವಾನಾಂ ಮುಖಾದಸ್ಯಾನಲೋಽಭವತ್।।

ಬ್ರಾಹ್ಮಣರು ಮತ್ತು ಮುನಿಗಳು ಇವನನ್ನು ಜ್ಯೇಷ್ಠಭೂತನೆಂದು ಕರೆಯುತ್ತಾರೆ. ದೇವತೆಗಳೆಲ್ಲರಿಗೂ ಇವನು ಪ್ರಥಮನು. ಇವನ ಮುಖದಿಂದಲೇ ಅಗ್ನಿಯು ಹುಟ್ಟಿದನು.

07173082a ಸರ್ವಥಾ ಯತ್ಪಶೂನ್ಪಾತಿ ತೈಶ್ಚ ಯದ್ರಮತೇ ಪುನಃ।
07173082c ತೇಷಾಮಧಿಪತಿರ್ಯಚ್ಚ ತಸ್ಮಾತ್ಪಶುಪತಿಃ ಸ್ಮೃತಃ।।

ಎಲ್ಲ ಪ್ರಾಣಿಗಳನ್ನು ಸರ್ವಥಾ ಪರಿಪಾಲಿಸುವುದರಿಂದಲೂ, ಅವುಗಳೊಡನೆ ಕ್ರೀಡಿಸುತ್ತಿರುವುದರಿಂದಲೂ ಮತ್ತು ಅವುಗಳಿಗೆ ಅಧಿಪತಿಯಾಗಿರುವುದರಿಂದಲೂ ಇವನು ಪಶುಪತಿಯೆಂದು ತಿಳಿಯಲ್ಪಟ್ಟಿದ್ದಾನೆ.

07173083a ನಿತ್ಯೇನ ಬ್ರಹ್ಮಚರ್ಯೇಣ ಲಿಂಗಮಸ್ಯ ಯದಾ ಸ್ಥಿತಂ।
07173083c ಮಹಯಂತಿ ಚ ಲೋಕಾಶ್ಚ ಮಹೇಶ್ವರ ಇತಿ ಸ್ಮೃತಃ।।

ಇವನ ದಿವ್ಯಲಿಂಗವು ನಿತ್ಯವೂ ಬ್ರಹ್ಮಚರ್ಯದಲ್ಲಿ ಸ್ಥಿತವಾಗಿರುವುದರಿಂದ ಮತ್ತು ಇವನು ಲೋಕಗಳ ಮಹತ್ವನಾಗಿರುವುದರಿಂದ ಮಹೇಶ್ವರನೆಂದು ಕರೆಯಲ್ಪಟ್ಟಿದ್ದಾನೆ.

07173084a ಋಷಯಶ್ಚೈವ ದೇವಾಶ್ಚ ಗಂಧರ್ವಾಪ್ಸರಸಸ್ತಥಾ।
07173084c ಲಿಂಗಮಸ್ಯಾರ್ಚಯಂತಿ ಸ್ಮ ತಚ್ಚಾಪ್ಯೂರ್ಧ್ವಂ ಸಮಾಸ್ಥಿತಂ।।

ಮೇಲ್ಮುಖವಾಗಿ ಪ್ರತಿಷ್ಠಿತವಾಗಿರುವ ಇವನ ಲಿಂಗವನ್ನು ಋಷಿಗಳು, ದೇವತೆಗಳೂ, ಗಂಧರ್ವ-ಅಪ್ಸರೆಯರೂ ಅರ್ಚಿಸುತ್ತಾರೆ.

07173085a ಪೂಜ್ಯಮಾನೇ ತತಸ್ತಸ್ಮಿನ್ಮೋದತೇ ಸ ಮಹೇಶ್ವರಃ।
07173085c ಸುಖೀ ಪ್ರೀತಶ್ಚ ಭವತಿ ಪ್ರಹೃಷ್ಟಶ್ಚೈವ ಶಂಕರಃ।।

ಹಾಗಿರುವ ಅವನನ್ನು ಪೂಜಿಸಿದರೆ ಮಹೇಶ್ವರ ಶಂಕರನು ಸಂತೋಷಪಡುತ್ತಾನೆ, ಸುಖಿಯಾಗುತ್ತಾನೆ, ಪರಮ ಪ್ರೀತನಾಗುತ್ತಾನೆ ಮತ್ತು ಪ್ರಹೃಷ್ಟನಾಗುತ್ತಾನೆ.

07173086a ಯದಸ್ಯ ಬಹುಧಾ ರೂಪಂ ಭೂತಭವ್ಯಭವತ್ಸ್ಥಿತಂ।
07173086c ಸ್ಥಾವರಂ ಜಂಗಮಂ ಚೈವ ಬಹುರೂಪಸ್ತತಃ ಸ್ಮೃತಃ।।

ಭೂತ-ಭವ್ಯ-ಭವಿಷ್ಯತ್ತುಗಳಲ್ಲಿರುವ ಸ್ಥಾವರ ಮತ್ತು ಚಲಿಸುತ್ತಿರುವ ಅನೇಕ ರೂಪಗಳಿರುವ ಇವನನ್ನು ಬಹುರೂಪನೆಂದು ಕರೆಯುತ್ತಾರೆ.

07173087a ಏಕಾಕ್ಷೋ ಜಾಜ್ವಲನ್ನಾಸ್ತೇ ಸರ್ವತೋಕ್ಷಿಮಯೋಽಪಿ ವಾ।
07173087c ಕ್ರೋಧಾದ್ಯಶ್ಚಾವಿಶಲ್ಲೋಕಾಂಸ್ತಸ್ಮಾಚ್ಚರ್ವ ಇತಿ ಸ್ಮೃತಃ।।

ಎಲ್ಲಕಡೆಗಳಲ್ಲಿ ಕಣ್ಣುಗಳಿದ್ದರೂ ಇವನ ಒಂದು ಕಣ್ಣು ಜ್ವಾಜಲ್ಯಮಾನವಾಗಿದ್ದು ಕ್ರೋಧಾಗ್ನಿಯು ಎಲ್ಲ ಲೋಕಗಳನ್ನೂ ವ್ಯಾಪಿಸುವುದರಿಂದ ಇವನನ್ನು ಶರ್ವ‌ಎಂದೂ ಕರೆಯುತ್ತಾರೆ.

07173088a ಧೂಮ್ರಂ ರೂಪಂ ಚ ಯತ್ತಸ್ಯ ಧೂರ್ಜಟಿಸ್ತೇನ ಉಚ್ಯತೇ।
07173088c ವಿಶ್ವೇ ದೇವಾಶ್ಚ ಯತ್ತಸ್ಮಿನ್ವಿಶ್ವರೂಪಸ್ತತಃ ಸ್ಮೃತಃ।।

ಧೂಮ್ರವರ್ಣದವನಾಗಿರುವುದರಿಂದ ಇವನನ್ನು ಧೂರ್ಜಟಿಯೆಂದು ಕರೆಯುತ್ತಾರೆ. ಇವನಲ್ಲಿ ವಿಶ್ವೇದೇವರು ಸ್ಥಿತರಾಗಿರುವುದರಿಂದ ವಿಶ್ವರೂಪನೆಂದೂ ಕರೆಯಲ್ಪಡುತ್ತಾನೆ.

07173089a ತಿಸ್ರೋ ದೇವೀರ್ಯದಾ ಚೈವ ಭಜತೇ ಭುವನೇಶ್ವರಃ।
07173089c ದ್ಯಾಮಪಃ ಪೃಥಿವೀಂ ಚೈವ ತ್ರ್ಯಂಬಕಶ್ಚ ತತಃ ಸ್ಮೃತಃ।।

ಈ ಭುವನೇಶ್ವರನು ದ್ಯೌ, ಆಪ ಮತ್ತು ಪೃಥ್ವಿ ಎಂಬ ಮೂರು ದೇವಿಯರನ್ನು ಪ್ರೀತಿಸುತ್ತಾನಾದುದರಿಂದ ತ್ರ್ಯಂಬಕನೆಂದು ಕರೆಯಲ್ಪಟ್ಟಿದ್ದಾನೆ.

07173090a ಸಮೇಧಯತಿ ಯನ್ನಿತ್ಯಂ ಸರ್ವಾರ್ಥಾನ್ಸರ್ವಕರ್ಮಸು।
07173090c ಶಿವಮಿಚ್ಚನ್ಮನುಷ್ಯಾಣಾಂ ತಸ್ಮಾದೇಶ ಶಿವಃ ಸ್ಮೃತಃ।।

ಮನುಷ್ಯರ ಸರ್ವಕರ್ಮಗಳಲ್ಲಿ ಸರ್ವಸಾಧನೆಗಳನ್ನು ಮತ್ತು ಫಲಗಳನ್ನು ವೃದ್ಧಿಸುವವನಾದುದರಿಂದ ಇವನು ಶಿವನೆಂದು ಕರೆಯಲ್ಪಟ್ಟಿದ್ದಾನೆ.

07173091a ಸಹಸ್ರಾಕ್ಷೋಽಯುತಾಕ್ಷೋ ವಾ ಸರ್ವತೋಕ್ಷಿಮಯೋಽಪಿ ವಾ।
07173091c ಯಚ್ಚ ವಿಶ್ವಂ ಮಹತ್ಪಾತಿ ಮಹಾದೇವಸ್ತತಃ ಸ್ಮೃತಃ।।

ಅವನು ಸಹಸ್ರಾಕ್ಷನಾಗಿರಲಿ, ದಶಸಹಸ್ರಾಕ್ಷನಾಗಿರಲಿ, ನಖ-ಶಿಖಾಂತವಾಗಿ ಕಣ್ಣುಗಳಿಂದಲೇ ಕೂಡಿರಲಿ – ಈ ಮಹಾ ವಿಶ್ವವನ್ನೇ ಯಾರು ನೋಡುತ್ತಾ ಪಾಲಿಸುವನೋ ಅವನು ಮಹಾದೇವನಾದನು.

07173092a ದಹತ್ಯೂರ್ಧ್ವಂ ಸ್ಥಿತೋ ಯಚ್ಚ ಪ್ರಾಣೋತ್ಪತ್ತಿಸ್ಥಿತಶ್ಚ ಯತ್।
07173092c ಸ್ಥಿತಲಿಂಗಶ್ಚ ಯನ್ನಿತ್ಯಂ ತಸ್ಮಾತ್ ಸ್ಥಾಣುರಿತಿ ಸ್ಮೃತಃ।।

ಊರ್ಧ್ವನಾಗಿ ನಿಂತಿರುವುದರಿಂದ, ಪ್ರಾಣೋತ್ಪತ್ತಿಗೆ ನಿಂತಿರುವುದರಿಂದ, ನಿತ್ಯವೂ ಲಿಂಗರೂಪದಲ್ಲಿರುವುದರಿಂದ ಅವನು ಸ್ಥಾಣುವೆನಿಸಿಕೊಂಡನು.

07173093a ವಿಷಮಸ್ಥಃ ಶರೀರೇಷು ಸಮಶ್ಚ ಪ್ರಾಣಿನಾಮಿಹ।
07173093c ಸ ವಾಯುರ್ವಿಷಮಸ್ಥೇಷು ಪ್ರಾಣಾಪಾನಶರೀರಿಷು।।

ಪ್ರಾಣಿಗಳ ಶರೀರಗಳಲ್ಲಿ ವಿಷಮಸ್ಥನಾಗಿದ್ದರೂ ಸಮನಾಗಿರುವ ಇವನು ಪ್ರಾಣಾಪಾನ ವಾಯುವಾಗಿ ಶರೀರಗಳಲ್ಲಿ ವಿಷಮರೂಪದಲ್ಲಿರುತ್ತಾನೆ.

07173094a ಪೂಜಯೇದ್ವಿಗ್ರಹಂ ಯಸ್ತು ಲಿಂಗಂ ವಾಪಿ ಸಮರ್ಚಯೇತ್।
07173094c ಲಿಂಗಂ ಪೂಜಯಿತಾ ನಿತ್ಯಂ ಮಹತೀಂ ಶ್ರಿಯಮಶ್ನುತೇ।।

ಇವನ ವಿಗ್ರಹವನ್ನಾಗಲೀ ಲಿಂಗವನ್ನಾಗಲೀ ಪೂಜಿಸಬೇಕು. ನಿತ್ಯವೂ ಲಿಂಗವನ್ನು ಪೂಜಿಸಿದವನು ಮಹತ್ತರ ಸಂಪತ್ತನ್ನು ಪಡೆಯುತ್ತಾನೆ.

07173095a ಊರುಭ್ಯಾಮರ್ಧಮಾಗ್ನೇಯಂ ಸೋಮಾರ್ಧಂ ಚ ಶಿವಾ ತನುಃ।
07173095c ಆತ್ಮನೋಽರ್ಧಂ ಚ ತಸ್ಯಾಗ್ನಿಃ ಸೋಮೋಽರ್ಧಂ ಪುನರುಚ್ಯತೇ।।

ಅವನ ತೊಡೆಗಳ ಕೆಳಗಿನ ಅರ್ಧಭಾಗವನ್ನು ಆಗ್ನೇಯ ಶರೀರವೆಂದೂ ಮೇಲಿನ ಅರ್ಧಭಾಗವನ್ನು ಸೋಮ ಅಥವಾ ಮಂಗಳ ಶರೀರವೆಂದು ಹೇಳುತ್ತಾರೆ. ಇತರರು ಅವನ ದೇಹದ ಬಲಗಡೆಯ ಅರ್ಧಭಾಗವನ್ನು ಆಗ್ನೇಯ ಶರೀರವೆಂದೂ ಎಡಗಡೆಯ ಅರ್ಧಭಾಗವನ್ನು ಸೋಮಶರೀರವೆಂದೂ ಹೇಳುತ್ತಾರೆ.

07173096a ತೈಜಸೀ ಮಹತೀ ದೀಪ್ತಾ ದೇವೇಭ್ಯಶ್ಚ ಶಿವಾ ತನುಃ।
07173096c ಭಾಸ್ವತೀ ಮಾನುಷೇಷ್ವಸ್ಯ ತನುರ್ಘೋರಾಗ್ನಿರುಚ್ಯತೇ।।

ಅವನ ಮಂಗಳ ಶರೀರವು ಅತ್ಯಂತಕಾಂತಿಯಿಂದ ಬೆಳಗುತ್ತಿದ್ದು ದೇವತೆಗಳಿಗೆ ಸೇರಿರುತ್ತದೆ. ಹೊಳೆಯುವ ಆಗ್ನೇಯ ಶರೀರವು ಘೋರವಾದುದು ಎಂದು ಮನುಷ್ಯರಲ್ಲಿ ಹೇಳುತ್ತಾರೆ.

07173097a ಬ್ರಹ್ಮಚರ್ಯಂ ಚರತ್ಯೇಷ ಶಿವಾ ಯಾಸ್ಯ ತನುಸ್ತಯಾ।
07173097c ಯಾಸ್ಯ ಘೋರತರಾ ಮೂರ್ತಿಃ ಸರ್ವಾನತ್ತಿ ತಯೇಶ್ವರಃ।।

ಅವನ ಮಂಗಳ ಶರೀರದಿಂದ ಅವನು ಬ್ರಹ್ಮಚರ್ಯವನ್ನು ಪಾಲಿಸುತ್ತಾನೆ. ಅವನ ಘೋರತರ ಶರೀರದಿಂದ ಈಶ್ವರನು ಸರ್ವಗಳನ್ನೂ ನಾಶಗೊಳಿಸುತ್ತಾನೆ.

07173098a ಯನ್ನಿರ್ದಹತಿ ಯತ್ತೀಕ್ಷ್ಣೋ ಯದುಗ್ರೋ ಯತ್ಪ್ರತಾಪವಾನ್।
07173098c ಮಾಂಸಶೋಣಿತಮಜ್ಜಾದೋ ಯತ್ತತೋ ರುದ್ರ ಉಚ್ಯತೇ।।

ಆ ಪ್ರತಾಪವಾನನು ಉಗ್ರನಾಗಿ ತೀಕ್ಷ್ಣನಾಗಿ ಸುಟ್ಟ ರಕ್ತ-ಮಾಂಸ-ಮಜ್ಜೆಗಳನ್ನು ಭಕ್ಷಿಸುವುದರಿಂದ ಅವನನ್ನು ರುದ್ರನೆಂದು ಕರೆಯುತ್ತಾರೆ.

07173099a ಏಷ ದೇವೋ ಮಹಾದೇವೋ ಯೋಽಸೌ ಪಾರ್ಥ ತವಾಗ್ರತಃ।
07173099c ಸಂಗ್ರಾಮೇ ಶಾತ್ರವಾನ್ನಿಘ್ನಂಸ್ತ್ವಯಾ ದೃಷ್ಟಃ ಪಿನಾಕಧೃಕ್।।

ಪಾರ್ಥ! ಸಂಗ್ರಾಮದಲ್ಲಿ ನಿನ್ನ ಮುಂದಿನಿಂದ ಶತ್ರುಗಳನ್ನು ಸಂಹರಿಸುತ್ತಾ ಹೋಗುತ್ತಿದ್ದವನು ಪಿನಾಕಪಾಣಿ ಈ ಮಹಾದೇವನೇ ಆಗಿದ್ದಾನೆ. ಅವನನ್ನೇ ನೀಡು ನೋಡಿರುವೆ.

07173100a ಏಷ ವೈ ಭಗವಾನ್ದೇವಃ ಸಂಗ್ರಾಮೇ ಯಾತಿ ತೇಽಗ್ರತಃ।
07173100c ಯೇನ ದತ್ತಾನಿ ತೇಽಸ್ತ್ರಾಣಿ ಯೈಸ್ತ್ವಯಾ ದಾನವಾ ಹತಾಃ।।

ಸಂಗ್ರಾಮದಲ್ಲಿ ನಿನ್ನ ಮುಂದೆಮುಂದೆ ಹೋಗುತ್ತಿದ್ದ ನಿನಗೆ ಅಸ್ತ್ರಗಳನ್ನು ದಯಪಾಲಿಸಿದ್ದ ಭಗವಾನ ದೇವನಿಂದಲೇ ಈ ದಾನವರು ಹತರಾದರು.

07173101a ಧನ್ಯಂ ಯಶಸ್ಯಮಾಯುಷ್ಯಂ ಪುಣ್ಯಂ ವೇದೈಶ್ಚ ಸಂಜ್ಞಿತಂ।
07173101c ದೇವದೇವಸ್ಯ ತೇ ಪಾರ್ಥ ವ್ಯಾಖ್ಯಾತಂ ಶತರುದ್ರಿಯಂ।।

ಪಾರ್ಥ! ನಾನು ಈಗ ಹೇಳಿದ ದೇವದೇವನ ಶತರುದ್ರೀಯವು ಧನ್ಯವಾದುದು, ಯಶಸ್ಸನ್ನೂ ಆಯುಸ್ಸನ್ನೂ ನೀಡುವಂತಹುದು, ಪುಣ್ಯಕರವಾದುದು ಮತ್ತು ವೇದಗಳಲ್ಲಿ ಸೂಚಿಸಲ್ಪಟ್ಟಿರುವುದು.

07173102a ಸರ್ವಾರ್ಥಸಾಧಕಂ ಪುಣ್ಯಂ ಸರ್ವಕಿಲ್ಬಿಷನಾಶನಂ।
07173102c ಸರ್ವಪಾಪಪ್ರಶಮನಂ ಸರ್ವದುಃಖಭಯಾಪಹಂ।।

ಇದು ಸರ್ವಾರ್ಥಸಾಧಕವಾದುದು. ಸರ್ವ ಕಿಲ್ಬಿಷಗಳನ್ನು ನಾಶಪಡಿಸುವ ಪುಣ್ಯಕಾರಕವು. ಸರ್ವಪಾಪಗಳನ್ನು ಪ್ರಶಮನಗೊಳಿಸುವಂತಹುದು ಮತ್ತು ಸರ್ವ ದುಃಖ ಭಯಗಳನ್ನು ಕಳೆಯುವಂತಹುದು.

07173103a ಚತುರ್ವಿಧಮಿದಂ ಸ್ತೋತ್ರಂ ಯಃ ಶೃಣೋತಿ ನರಃ ಸದಾ।
07173103c ವಿಜಿತ್ಯ ಸರ್ವಾಂ ಶತ್ರೂನ್ಸ ರುದ್ರಲೋಕೇ ಮಹೀಯತೇ।।

ಈ ಚತುರ್ವಿಧ ಸ್ತೋತ್ರವನ್ನು ಯಾವ ನರನು ಸದಾ ಕೇಳುತ್ತಾನೋ ಅವನು ಸರ್ವಶತ್ರುಗಳನ್ನೂ ಗೆದ್ದು ರುದ್ರಲೋಕದಲ್ಲಿ ಮೆರೆಯುತ್ತಾನೆ.

07173104a ಚರಿತಂ ಮಹಾತ್ಮನೋ ದಿವ್ಯಂ ಸಾಂಗ್ರಾಮಿಕಮಿದಂ ಶುಭಂ।
07173104c ಪಠನ್ವೈ ಶತರುದ್ರೀಯಂ ಶೃಣ್ವಂಶ್ಚ ಸತತೋತ್ಥಿತಃ।।
07173105a ಭಕ್ತೋ ವಿಶ್ವೇಶ್ವರಂ ದೇವಂ ಮಾನುಷೇಷು ತು ಯಃ ಸದಾ।
07173105c ವರಾನ್ಸ ಕಾಮಾಽಲ್ಲಭತೇ ಪ್ರಸನ್ನೇ ತ್ರ್ಯಂಬಕೇ ನರಃ।।

ಮಹಾತ್ಮ ಶಂಕರನ ಈ ಚರಿತ್ರೆಯು ಸಂಗ್ರಾಮಕಾಲದಲ್ಲಿ ಸದಾ ವಿಜಯವನ್ನು ತರುತ್ತದೆ. ಮನುಷ್ಯರಲ್ಲಿ ಯಾರು ಈ ಶತರುದ್ರೀಯವನ್ನು ಸದಾ ಓದುತ್ತಾರೋ, ಕೇಳುತ್ತಾರೋ ಮತ್ತು ಆ ದೇವ ವಿಶ್ವೇಶ್ವರನನ್ನು ಭಜಿಸುತ್ತಾರೋ ಅವರಿಗೆ ತ್ರ್ಯಂಬಕನು ಪ್ರಸನ್ನನಾಗಿ ಆಸೆಗಳನ್ನು ಒದಗಿಸಿಕೊಡುತ್ತಾನೆ.

07173106a ಗಚ್ಚ ಯುಧ್ಯಸ್ವ ಕೌಂತೇಯ ನ ತವಾಸ್ತಿ ಪರಾಜಯಃ।
07173106c ಯಸ್ಯ ಮಂತ್ರೀ ಚ ಗೋಪ್ತಾ ಚ ಪಾರ್ಶ್ವತಸ್ತೇ ಜನಾರ್ದನಃ।।

ಕೌಂತೇಯ! ಹೋಗು! ಯುದ್ಧಮಾಡು! ಯಾರ ಮಂತ್ರಿ, ರಕ್ಷಕ ಮತ್ತು ಜೊತೆಗಾರನು ಜನಾರ್ದನನೋ ಅಂತಹ ನಿನಗೆ ಪರಾಜಯವಾಗಲಾರದು!””

07173107 ಸಂಜಯ ಉವಾಚ।
07173107a ಏವಮುಕ್ತ್ವಾರ್ಜುನಂ ಸಂಖ್ಯೇ ಪರಾಶರಸುತಸ್ತದಾ।
07173107c ಜಗಾಮ ಭರತಶ್ರೇಷ್ಠ ಯಥಾಗತಮರಿಂದಮ।।

ಸಂಜಯನು ಹೇಳಿದನು: “ಭರತಶ್ರೇಷ್ಠ! ಅರಿಂದಮ! ರಣದಲ್ಲಿ ಅರ್ಜುನನಿಗೆ ಹೀಗೆ ಹೇಳಿ ಪರಾಶರಸುತನು ಎಲ್ಲಿಗೆ ಹೋಗಬೇಕಿತ್ತೋ ಅಲ್ಲಿಗೆ ಹೊರಟುಹೋದನು.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ದ್ರೋಣಪರ್ವಣಿ ನಾರಾಯಣಾಸ್ತ್ರಮೋಕ್ಷಣಪರ್ವಣಿ ವ್ಯಾಸವಾಕ್ಯೇ ಶತರುದ್ರೀಯೇ ತ್ರಿಸಪ್ತತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವದಲ್ಲಿ ನಾರಾಯಣಾಸ್ತ್ರಮೋಕ್ಷಣಪರ್ವದಲ್ಲಿ ವ್ಯಾಸವಾಕ್ಯೇ ಶತರುದ್ರೀಯ ಎನ್ನುವ ನೂರಾಎಪ್ಪತ್ಮೂರನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ದ್ರೋಣಪರ್ವಣಿ ನಾರಾಯಣಾಸ್ತ್ರಮೋಕ್ಷಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವದಲ್ಲಿ ನಾರಾಯಣಾಸ್ತ್ರಮೋಕ್ಷಪರ್ವವು.
ಇತಿ ಶ್ರೀ ಮಹಾಭಾರತೇ ದ್ರೋಣಪರ್ವ ಃ।
ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-7/18, ಉಪಪರ್ವಗಳು-72/100, ಅಧ್ಯಾಯಗಳು-1150/1995, ಶ್ಲೋಕಗಳು-41322/73784.