ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ನಾರಾಯಣಾಸ್ತ್ರಮೋಕ್ಷ ಪರ್ವ
ಅಧ್ಯಾಯ 172
ಸಾರ
ಅರ್ಜುನ-ಅಶ್ವತ್ಥಾಮರ ಯುದ್ಧ; ಅಶ್ವತ್ಥಾಮನ ಆಗ್ನೇಯಾಸ್ತ್ರವನ್ನು ಅರ್ಜುನನು ಬ್ರಹ್ಮಾಸ್ತ್ರದಿಂದ ಪ್ರಶಮನಗೊಳಿಸಿದುದು; ಅಶ್ವತ್ಥಾಮನು ರಣದಿಂದ ವಿಮುಖನಾದುದು (1-42). ಅಶ್ವತ್ಥಾಮನು ವ್ಯಾಸನನ್ನು ಸಂದರ್ಶಿಸಿ ತನ್ನ ಅಸ್ತ್ರಗಳು ವ್ಯರ್ಥವಾದುದರ ಕಾರಣವನ್ನು ಕೇಳಲು ವ್ಯಾಸನು ಅವನಿಗೆ ಪರಶಿವನು ನಾರಾಯಣನಿಗಿತ್ತ ವರದ ಕುರಿತು ಹೇಳಿದುದು; ಕೌರವ ಸೇನೆಯು ರಣದಿಂದ ಹಿಂದಿರುಗಿದುದು (43-94).
07172001 ಸಂಜಯ ಉವಾಚ।
07172001a ತತ್ಪ್ರಭಗ್ನಂ ಬಲಂ ದೃಷ್ಟ್ವಾ ಕುಂತೀಪುತ್ರೋ ಧನಂಜಯಃ।
07172001c ನ್ಯವಾರಯದಮೇಯಾತ್ಮಾ ದ್ರೋಣಪುತ್ರವಧೇಪ್ಸಯಾ।।
ಸಂಜಯನು ಹೇಳಿದನು: “ಆಗ ಸೇನೆಯು ಭಗ್ನವಾಗುತ್ತಿದ್ದುದನ್ನು ನೋಡಿ ಅಮೇಯಾತ್ಮ ಕುಂತೀಪುತ್ರ ಧನಂಜಯನು ದ್ರೋಣಪುತ್ರನನ್ನು ವಧಿಸಲು ಇಚ್ಛಿಸಿ ಅವನನ್ನು ತಡೆದನು.
07172002a ತತಸ್ತೇ ಸೈನಿಕಾ ರಾಜನ್ನೈವ ತತ್ರಾವತಸ್ಥಿರೇ।
07172002c ಸಂಸ್ಥಾಪ್ಯಮಾನಾ ಯತ್ನೇನ ಗೋವಿಂದೇನಾರ್ಜುನೇನ ಚ।।
ರಾಜನ್! ಆಗ ಗೋವಿಂದ ಮತ್ತು ಅರ್ಜುನರು ತಮ್ಮ ಸೈನಿಕರನ್ನು ರಣದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿದ್ದರೂ ಅವರು ನಿಲ್ಲುತ್ತಿರಲಿಲ್ಲ.
07172003a ಏಕ ಏವ ತು ಬೀಭತ್ಸುಃ ಸೋಮಕಾವಯವೈಃ ಸಹ।
07172003c ಮತ್ಸ್ಯೈರನ್ಯೈಶ್ಚ ಸಂಧಾಯ ಕೌರವೈಃ ಸಂನ್ಯವರ್ತತ।।
ಆಗ ಬೀಭತ್ಸುವು ಒಬ್ಬನೇ ಉಳಿದ ಸೋಮಕರೊಂದಿಗೆ ಮತ್ಸ್ಯರನ್ನು ಮತ್ತು ಇತರರನ್ನು ಒಟ್ಟುಗೂಡಿಸಿಕೊಂಡು ಕೌರವರೊಂದಿಗೆ ಯುದ್ಧಮಾಡಲು ನಿಂತನು.
07172004a ತತೋ ದ್ರುತಮತಿಕ್ರಮ್ಯ ಸಿಂಹಲಾಂಗೂಲಕೇತನಂ।
07172004c ಸವ್ಯಸಾಚೀ ಮಹೇಷ್ವಾಸಮಶ್ವತ್ಥಾಮಾನಮಬ್ರವೀತ್।।
ಸಿಂಹದ ಬಾಲವನ್ನು ಧ್ವಜದ ಚಿಹ್ನೆಯನ್ನಾಗಿ ಹೊಂದಿದ್ದ ಮಹೇಷ್ವಾಸ ಅಶ್ವತ್ಥಾಮನನ್ನು ಬೇಗನೇ ಆಕ್ರಮಿಸಿ ಸವ್ಯಸಾಚಿಯು ಹೇಳಿದನು:
07172005a ಯಾ ಶಕ್ತಿರ್ಯಚ್ಚ ತೇ ವೀರ್ಯಂ ಯಜ್ಜ್ಞಾನಂ ಯಚ್ಚ ಪೌರುಷಂ।
07172005c ಧಾರ್ತರಾಷ್ಟ್ರೇಷು ಯಾ ಪ್ರೀತಿಃ ಪ್ರದ್ವೇಷೋಽಸ್ಮಾಸು ಯಶ್ಚ ತೇ।
07172005e ಯಚ್ಚ ಭೂಯೋಽಸ್ತಿ ತೇಜಸ್ತತ್ಪರಮಂ ಮಮ ದರ್ಶಯ।।
“ನಿನ್ನಲ್ಲಿ ಯಾವ ಶಕ್ತಿ-ವೀರ್ಯ-ಜ್ಞಾನ-ಪೌರುಷಗಳಿವೆಯೋ, ಧಾರ್ತರಾಷ್ಟ್ರರಲ್ಲಿ ಯಾವ ಪ್ರೀತಿಯೂ ನಮ್ಮ ಮೇಲೆ ಯಾವ ದ್ವೇಷವೂ ಇವೆಯೋ, ಮತ್ತು ನಿನ್ನಲ್ಲಿ ಯಾವ ಪರಮ ತೇಜಸ್ಸಿದೆಯೋ ಅದನ್ನು ನನಗೆ ತೋರಿಸು!
07172006a ಸ ಏವ ದ್ರೋಣಹಂತಾ ತೇ ದರ್ಪಂ ಭೇತ್ಸ್ಯತಿ ಪಾರ್ಷತಃ।
07172006c ಕಾಲಾನಲಸಮಪ್ರಖ್ಯೋ ದ್ವಿಷತಾಮಂತಕೋ ಯುಧಿ।
07172006e ಸಮಾಸಾದಯ ಪಾಂಚಾಲ್ಯಂ ಮಾಂ ಚಾಪಿ ಸಹಕೇಶವಂ।।
ದ್ರೋಣನನ್ನು ಸಂಹರಿಸಿದ ಆ ಪಾರ್ಷತನೇ ನಿನ್ನ ದರ್ಪವನ್ನು ಮುರಿಯುತ್ತಾನೆ. ಕಾಲಾಗ್ನಿಗೆ ಸಮನಾಗಿರುವ ಯುದ್ಧದಲ್ಲಿ ಶತ್ರುಗಳಿಗೆ ಅಂತಕನೆಂದು ಪ್ರಖ್ಯಾತನಾಗಿರುವ ಪಾಂಚಾಲ್ಯನನ್ನು ಮತ್ತು ಕೇಶವನೊಡನೆ ನನ್ನನ್ನೂ ಎದುರಿಸಿ ಯುದ್ಧಮಾಡು!””
07172007 ಧೃತರಾಷ್ಟ್ರ ಉವಾಚ।
07172007a ಆಚಾರ್ಯಪುತ್ರೋ ಮಾನಾರ್ಹೋ ಬಲವಾಂಶ್ಚಾಪಿ ಸಂಜಯ।
07172007c ಪ್ರೀತಿರ್ಧನಂಜಯೇ ಚಾಸ್ಯ ಪ್ರಿಯಶ್ಚಾಪಿ ಸ ವಾಸವೇಃ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ಆಚಾರ್ಯಪುತ್ರನಾದರೋ ಮಾನಾರ್ಹ ಮತ್ತು ಬಲಶಾಲಿ ಕೂಡ. ಧನಂಜಯನ ಮೇಲೆ ಇವನಿಗೆ ಪ್ರೀತಿಯಿದೆ. ಮತ್ತು ವಾಸವನಿಗೂ ಅವನ ಮೇಲೆ ಪ್ರೀತಿಯಿದೆ.
07172008a ನ ಭೂತಪೂರ್ವಂ ಬೀಭತ್ಸೋರ್ವಾಕ್ಯಂ ಪರುಷಮೀದೃಶಂ।
07172008c ಅಥ ಕಸ್ಮಾತ್ಸ ಕೌಂತೇಯಃ ಸಖಾಯಂ ರೂಕ್ಷಮಬ್ರವೀತ್।।
ಇದಕ್ಕೂ ಮೊದಲು ಈ ರೀತಿಯ ಕ್ರೂರಮಾತುಗಳನ್ನು ಬೀಭತ್ಸುವು ಅವನೊಡನೆ ಆಡಿರಲಿಲ್ಲ. ಈಗ ಹೇಗೆ ಆ ಕೌಂತೇಯನು ಸಖನೊಡನೆ ಕಠೋರವಾಗಿ ಮಾತನಾಡಿದನು?”
07172009 ಸಂಜಯ ಉವಾಚ।
07172009a ಯುವರಾಜೇ ಹತೇ ಚೈವ ವೃದ್ಧಕ್ಷತ್ರೇ ಚ ಪೌರವೇ।
07172009c ಇಷ್ವಸ್ತ್ರವಿಧಿಸಂಪನ್ನೇ ಮಾಲವೇ ಚ ಸುದರ್ಶನೇ।।
07172010a ಧೃಷ್ಟದ್ಯುಮ್ನೇ ಸಾತ್ಯಕೌ ಚ ಭೀಮೇ ಚಾಪಿ ಪರಾಜಿತೇ।
07172010c ಯುಧಿಷ್ಠಿರಸ್ಯ ತೈರ್ವಾಕ್ಯೈರ್ಮರ್ಮಣ್ಯಪಿ ಚ ಘಟ್ಟಿತೇ।।
07172011a ಅಂತರ್ಭೇದೇ ಚ ಸಂಜಾತೇ ದುಃಖಂ ಸಂಸ್ಮೃತ್ಯ ಚ ಪ್ರಭೋ।
07172011c ಅಭೂತಪೂರ್ವೋ ಬೀಭತ್ಸೋರ್ದುಃಖಾನ್ಮನ್ಯುರಜಾಯತ।।
ಸಂಜಯನು ಹೇಳಿದನು: “ಯುವರಾಜ, ಪೌರವ ವೃದ್ಧಕ್ಷತ್ರ ಮತ್ತು ಇಷ್ವಸ್ತ್ರವಿಧಿಸಂಪನ್ನನಾಗಿದ್ದ ಮಾಲವದ ಸುದರ್ಶನರು ಹತರಾಗಲು, ಮತ್ತು ಧೃಷ್ಟದ್ಯುಮ್ನ, ಸಾತ್ಯಕಿ ಮತ್ತು ಭೀಮನೂ ಕೂಡ ಪರಾಜಿತರಾಗಲು, ಯುಧಿಷ್ಠಿರನಾಡಿದ ಮಾತುಗಳು ಮರ್ಮಗಳನ್ನು ಭೇದಿಸಲು, ಮತ್ತು ತಮ್ಮಲ್ಲಿಯೇ ನಡೆದ ಅಂತರ್ಭೇದ ಇವೆಲ್ಲವುಗಳಿಂದ ಹುಟ್ಟಿದ ದುಃಖವನ್ನು ಅನುಭವಿಸುತ್ತಾ ಪ್ರಭೋ! ಬೀಭತ್ಸುವಿಗೆ ಅಭೂತಪೂರ್ವ ದುಃಖ ಮತ್ತು ಕೋಪಗಳೆರಡೂ ಆಗಿದ್ದವು.
07172012a ತಸ್ಮಾದನರ್ಹಮಶ್ಲೀಲಮಪ್ರಿಯಂ ದ್ರೌಣಿಮುಕ್ತವಾನ್।
07172012c ಮಾನ್ಯಮಾಚಾರ್ಯತನಯಂ ರೂಕ್ಷಂ ಕಾಪುರುಷೋ ಯಥಾ।।
ಈ ಕಾರಣದಿಂದಲೇ ಆಚಾರ್ಯತನಯನು ಕ್ರೂರನೋ ಮತ್ತು ಹೇಡಿಯೋ ಎನ್ನುವಂತೆ ಅನರ್ಹರೀತಿಯಲ್ಲಿ ಅಶ್ಲೀಲವಾದ ಮತ್ತು ಅಪ್ರಿಯವಾದ ಮಾತುಗಳನ್ನು ಅವನು ದ್ರೌಣಿಗೆ ಹೇಳಿದನು.
07172013a ಏವಮುಕ್ತಃ ಶ್ವಸನ್ಕ್ರೋಧಾನ್ಮಹೇಷ್ವಾಸತಮೋ ನೃಪ।
07172013c ಪಾರ್ಥೇನ ಪರುಷಂ ವಾಕ್ಯಂ ಸರ್ವಮರ್ಮಘ್ನಯಾ ಗಿರಾ।
07172013e ದ್ರೌಣಿಶ್ಚುಕೋಪ ಪಾರ್ಥಾಯ ಕೃಷ್ಣಾಯ ಚ ವಿಶೇಷತಃ।।
ನೃಪ! ಪಾರ್ಥನ ಕಠೋರ ಮಾತನ್ನು ಸರ್ವಮರ್ಮಗಳನ್ನೂ ಭೇದಿಸುವಂತಹ ದಾಟಿಯಲ್ಲಿ ಹೇಳಿದುದನ್ನು ಕೇಳಿದ ಮಹೇಷ್ವಾಸತಮ ಅಶ್ವತ್ಥಾಮನು ಕ್ರೋಧದಿಂದ ಸುದೀರ್ಘವಾಗಿ ನಿಟ್ಟುಸಿರುಬಿಟ್ಟನು. ಪಾರ್ಥನಮೇಲೆ ಮತ್ತು ವಿಶೇಷವಾಗಿ ಕೃಷ್ಣನ ಮೇಲೆ ದ್ರೌಣಿಯು ಕುಪಿತನಾದನು.
07172014a ಸ ತು ಯತ್ತೋ ರಥೇ ಸ್ಥಿತ್ವಾ ವಾರ್ಯುಪಸ್ಪೃಶ್ಯ ವೀರ್ಯವಾನ್।
07172014c ದೇವೈರಪಿ ಸುದುರ್ಧರ್ಷಮಸ್ತ್ರಮಾಗ್ನೇಯಮಾದದೇ।।
ಆಗ ಆ ವೀರ್ಯವಾನನು ಪ್ರಯತ್ನಿಸಿ ರಥದಲ್ಲಿ ಕುಳಿತು ಆಚಮನ ಮಾಡಿ ದೇವತೆಗಳಿಗೂ ದುರ್ಧರ್ಷ ಆಗ್ನೇಯಾಸ್ತ್ರವನ್ನು ಪ್ರಕಟಿಸಿದನು.
07172015a ದೃಶ್ಯಾದೃಶ್ಯಾನರಿಗಣಾನುದ್ದಿಶ್ಯಾಚಾರ್ಯನಂದನಃ।
07172015c ಸೋಽಭಿಮಂತ್ರ್ಯ ಶರಂ ದೀಪ್ತಂ ವಿಧೂಮಮಿವ ಪಾವಕಂ।
07172015e ಸರ್ವತಃ ಕ್ರೋಧಮಾವಿಶ್ಯ ಚಿಕ್ಷೇಪ ಪರವೀರಹಾ।।
ಪರವೀರಹ ಆಚಾರ್ಯನಂದನನು ಕಾಣುತ್ತಿದ್ದ ಮತ್ತು ಕಾಣಿಸದಿದ್ದ ಶತ್ರುಗಣಗಳನ್ನು ಉದ್ದೇಶಿಸಿ, ಹೊಗೆಯಿಲ್ಲದ ಪಾವಕನಂತೆ ಉರಿಯುತ್ತಿದ್ದ ಶರವನ್ನು ಅಭಿಮಂತ್ರಿಸಿ, ಕ್ರೋಧಾವೇಶಗೊಂಡು ಎಲ್ಲೆಡೆಯಲ್ಲಿ ಪ್ರಯೋಗಿಸಿದನು.
07172016a ತತಸ್ತುಮುಲಮಾಕಾಶೇ ಶರವರ್ಷಮಜಾಯತ।
07172016c ವವುಶ್ಚ ಶಿಶಿರಾ ವಾತಾಃ ಸೂರ್ಯೋ ನೈವ ತತಾಪ ಚ।।
ಆಗ ಆಕಾಶದಲ್ಲಿ ತುಮುಲದೊಡನೆ ಶರವರ್ಷವುಂಟಾಯಿತು. ತಣ್ಣನೆಯ ಗಾಳಿಯು ಬೀಸತೊಡಗಿತು. ಸೂರ್ಯನೂ ಸುಡಲಿಲ್ಲ.
07172017a ಚುಕ್ರುಶುರ್ದಾನವಾಶ್ಚಾಪಿ ದಿಕ್ಷು ಸರ್ವಾಸು ಭೈರವಂ।
07172017c ರುಧಿರಂ ಚಾಪಿ ವರ್ಷಂತೋ ವಿನೇದುಸ್ತೋಯದಾಂಬರೇ।।
ಎಲ್ಲ ದಿಕ್ಕುಗಳಲ್ಲಿಯೂ ದಾನವರೂ ಕೂಡ ಭೈರವವಾಗಿ ಕೂಗಿಕೊಂಡರು. ಅಂಬರದಲ್ಲಿ ಮೋಡಗಳು ಗುಡುಗಿದವು. ರಕ್ತದ ಮಳೆಯು ಸುರಿಯಿತು.
07172018a ಪಕ್ಷಿಣಃ ಪಶವೋ ಗಾವೋ ಮುನಯಶ್ಚಾಪಿ ಸುವ್ರತಾಃ।
07172018c ಪರಮಂ ಪ್ರಯತಾತ್ಮಾನೋ ನ ಶಾಂತಿಮುಪಲೇಭಿರೇ।।
ಪಕ್ಷಿ-ಪಶು-ಗೋವುಗಳು ಮತ್ತು ಸುವ್ರತ ಮುನಿಗಳು ಕೂಡ ಪರಮ ಪ್ರಯತ್ನಮಾಡಿಯೂ ಶಾಂತಿಯನ್ನು ಪಡೆಯಲಾರದಾದರು.
07172019a ಭ್ರಾಂತಸರ್ವಮಹಾಭೂತಮಾವರ್ಜಿತದಿವಾಕರಂ।
07172019c ತ್ರೈಲೋಕ್ಯಮಭಿಸಂತಪ್ತಂ ಜ್ವರಾವಿಷ್ಟಮಿವಾತುರಂ।।
ಸರ್ವಮಹಾಭೂತಗಳೂ ಭ್ರಾಂತಗೊಂಡವು. ದಿವಾಕರನೂ ಇರುವಲ್ಲಿಯೇ ಗರಗರನೆ ತಿರುಗುತ್ತಿರುವಂತೆ ತೋರಿದನು. ಮೂರುಲೋಕದವರೂ ಜ್ವರದಿಂದ ಪೀಡಿತರಾದವರಂತೆ ಪರಿತಪಿಸಿದರು.
07172020a ಶರತೇಜೋಽಭಿಸಂತಪ್ತಾ ನಾಗಾ ಭೂಮಿಶಯಾಸ್ತಥಾ।
07172020c ನಿಃಶ್ವಸಂತಃ ಸಮುತ್ಪೇತುಸ್ತೇಜೋ ಘೋರಂ ಮುಮುಕ್ಷವಃ।।
ಆ ಶರದ ತೇಜಸ್ಸಿನಿಂದ ಸಂತಪ್ತರಾಗಿ ಭೂಮಿಯ ಮೇಲೆ ಮಲಗಿದ್ದ ನಾಗಗಳು ಭುಸುಗುಟ್ಟುತ್ತಾ ಘೋರ ತೇಜಸ್ಸಿನಿಂದ ಮುಕ್ತಿಪಡೆಯಲೋಸುಗ ಪುನಃ ಪುನಃ ಮೇಲೆ ಹಾರುತ್ತಿದ್ದವು.
07172021a ಜಲಜಾನಿ ಚ ಸತ್ತ್ವಾನಿ ದಹ್ಯಮಾನಾನಿ ಭಾರತ।
07172021c ನ ಶಾಂತಿಮುಪಜಗ್ಮುರ್ಹಿ ತಪ್ಯಮಾನೈರ್ಜಲಾಶಯೈಃ।।
ಭಾರತ! ಜಲಚರ ಪ್ರಾಣಿಗಳು ಮತ್ತು ಸಸ್ಯಗಳು ಕುದಿಯುತ್ತಿರುವ ಜಲಾಶಯಗಳಲ್ಲಿ ಬೆಂದು ಚಡಪಡಿಸುತ್ತಿದ್ದವು.
07172022a ದಿಶಃ ಖಂ ಪ್ರದಿಶಶ್ಚೈವ ಭುವಂ ಚ ಶರವೃಷ್ಟಯಃ।
07172022c ಉಚ್ಚಾವಚಾ ನಿಪೇತುರ್ವೈ ಗರುಡಾನಿಲರಂಹಸಃ।।
ದಿಕ್ಕು-ಉಪದಿಕ್ಕುಗಳಿಂದ, ಆಕಾಶ-ಭುವನಗಳಿಂದ ಗರುಡನ ಮತ್ತು ಚಂಡಮಾರುತದ ವೇಗದಲ್ಲಿ ಶರವೃಷ್ಟಿಗಳು ಬೀಳತೊಡಗಿದವು.
07172023a ತೈಃ ಶರೈರ್ದ್ರೋಣಪುತ್ರಸ್ಯ ವಜ್ರವೇಗಸಮಾಹಿತೈಃ।
07172023c ಪ್ರದಗ್ಧಾಃ ಶತ್ರವಃ ಪೇತುರಗ್ನಿದಗ್ಧಾ ಇವ ದ್ರುಮಾಃ।।
ದ್ರೋಣಪುತ್ರನ ಆ ವಜ್ರವೇಗಸಮಾಹಿತ ಶರಗಳಿಂದ ಸುಟ್ಟ ಶತ್ರುಗಳು ಕಾಡ್ಗಿಚ್ಚಿನಿಂದ ಸುಟ್ಟ ಮರಗಳಂತೆ ಕೆಳಗುರುಳಿದರು.
07172024a ದಹ್ಯಮಾನಾ ಮಹಾನಾಗಾಃ ಪೇತುರುರ್ವ್ಯಾಂ ಸಮಂತತಃ।
07172024c ನದಂತೋ ಭೈರವಾನ್ನಾದಾಂ ಜಲದೋಪಮನಿಸ್ವನಾನ್।।
ದಹಿಸುತ್ತಿರುವ ಮಹಾನಾಗಗಳು ಗುಡುಗಿನಂತೆ ಭೈರವವಾಗಿ ಭುಸುಗುಡುತ್ತಾ ಆಕಾಶದ ಎಲ್ಲಕಡೆಗಳಿಂದ ಬೀಳತೊಡಗಿದವು.
07172025a ಅಪರೇ ಪ್ರದ್ರುತಾಸ್ತತ್ರ ದಹ್ಯಮಾನಾ ಮಹಾಗಜಾಃ।
07172025c ತ್ರೇಸುಸ್ತಥಾಪರೇ ಘೋರೇ ವನೇ ದಾವಾಗ್ನಿಸಂವೃತಾಃ।।
ಘೋರ ವನದಲ್ಲಿ ದಾವಾಗ್ನಿಯಿಂದ ಸುತ್ತುವರೆಯಲ್ಪಟ್ಟವರಂತೆ ಹತ್ತಿ ಉರಿಯುತ್ತಿದ್ದ ಅನೇಕ ಮಹಾಗಜಗಳು ಎಲ್ಲಕಡೆಗಳಲ್ಲಿ ಓಡತೊಡಗಿದವು.
07172026a ದ್ರುಮಾಣಾಂ ಶಿಖರಾಣೀವ ದಾವದಗ್ಧಾನಿ ಮಾರಿಷ।
07172026c ಅಶ್ವವೃಂದಾನ್ಯದೃಶ್ಯಂತ ರಥವೃಂದಾನಿ ಚಾಭಿಭೋ।
07172026e ಅಪತಂತ ರಥೌಘಾಶ್ಚ ತತ್ರ ತತ್ರ ಸಹಸ್ರಶಃ।।
ಮಾರಿಷ! ವಿಭೋ! ಅಶ್ವವೃಂದಗಳು ಮತ್ತು ರಥವೃಂದಗಳು ಉರಿಯುತ್ತಿರುವ ಮರಗಳ ಶಿಖರಗಳಂತೆ ಕಾಣುತ್ತಿದ್ದವು. ಅಲ್ಲಲ್ಲಿ ಸಹಸ್ರಾರು ರಥಗಳ ಗುಂಪುಗಳೂ ಸುಟ್ಟು ಬೀಳುತ್ತಿದ್ದವು.
07172027a ತತ್ಸೈನ್ಯಂ ಭಗವಾನಗ್ನಿರ್ದದಾಹ ಯುಧಿ ಭಾರತ।
07172027c ಯುಗಾಂತೇ ಸರ್ವಭೂತಾನಿ ಸಂವರ್ತಕ ಇವಾನಲಃ।।
ಭಾರತ! ಯುಗಾಂತದಲ್ಲಿ ಸರ್ವಭೂತಗಳನ್ನು ಸಂವರ್ತಕ ಅಗ್ನಿಯು ಸುಡುವಂತೆ ಭಗವಾನ್ ಅಗ್ನಿಯು ಯುದ್ಧದಲ್ಲಿ ಆ ಸೈನ್ಯವನ್ನು ಸುಟ್ಟನು.
07172028a ದೃಷ್ಟ್ವಾ ತು ಪಾಂಡವೀಂ ಸೇನಾಂ ದಹ್ಯಮಾನಾಂ ಮಹಾಹವೇ।
07172028c ಪ್ರಹೃಷ್ಟಾಸ್ತಾವಕಾ ರಾಜನ್ಸಿಂಹನಾದಾನ್ವಿನೇದಿರೇ।।
ರಾಜನ್! ಪಾಂಡವೀ ಸೇನೆಯು ಆ ಮಹಾರಣದಲ್ಲಿ ಹಾಗೆ ಸುಡುತ್ತಿರುವುದನ್ನು ನೋಡಿ ಪ್ರಹೃಷ್ಟರಾದ ನಿಮ್ಮವರು ಸಿಂಹನಾದಗೈದರು.
07172029a ತತಸ್ತೂರ್ಯಸಹಸ್ರಾಣಿ ನಾನಾಲಿಂಗಾನಿ ಭಾರತ।
07172029c ತೂರ್ಣಮಾಜಘ್ನಿರೇ ಹೃಷ್ಟಾಸ್ತಾವಕಾ ಜಿತಕಾಶಿನಃ।।
ಭಾರತ! ಆಗ ಜಯವನ್ನು ಬಯಸಿದ್ದ ನಿನ್ನವರು ಹೃಷ್ಟರಾಗಿ ತಕ್ಷಣವೇ ನಾನಾರೀತಿಯ ಮಂಗಳ ವಾದ್ಯಗಳನ್ನು ಬಾರಿಸತೊಡಗಿದರು.
07172030a ಕೃತ್ಸ್ನಾ ಹ್ಯಕ್ಷೌಹಿಣೀ ರಾಜನ್ಸವ್ಯಸಾಚೀ ಚ ಪಾಂಡವಃ।
07172030c ತಮಸಾ ಸಂವೃತೇ ಲೋಕೇ ನಾದೃಶ್ಯತ ಮಹಾಹವೇ।।
ರಾಜನ್! ಲೋಕವೆಲ್ಲವೂ ಕತ್ತಲೆಯಿಂದ ಆವೃತವಾಗಿದ್ದ ಆ ಮಹಾಯುದ್ಧದಲ್ಲಿ ಅಕ್ಷೌಹಿಣಿ ಸೇನೆಯೂ ಪಾಂಡವ ಸವ್ಯಸಾಚಿಯೂ ಕಾಣದಂತಾದರು.
07172031a ನೈವ ನಸ್ತಾದೃಶಂ ರಾಜನ್ದೃಷ್ಟಪೂರ್ವಂ ನ ಚ ಶ್ರುತಂ।
07172031c ಯಾದೃಶಂ ದ್ರೋಣಪುತ್ರೇಣ ಸೃಷ್ಟಮಸ್ತ್ರಮಮರ್ಷಿಣಾ।।
ರಾಜನ್! ಅಸಹನಶೀಲ ದ್ರೋಣಪುತ್ರನು ಸೃಷ್ಟಿಸಿದ ಅಂತಹ ಅಸ್ತ್ರವನ್ನು ನಾವು ಇದರ ಮೊದಲು ಕಂಡಿರಲಿಲ್ಲ. ಅದರ ಕುರಿತು ಕೇಳಿಯೂ ಇರಲಿಲ್ಲ.
07172032a ಅರ್ಜುನಸ್ತು ಮಹಾರಾಜ ಬ್ರಾಹ್ಮಮಸ್ತ್ರಮುದೈರಯತ್।
07172032c ಸರ್ವಾಸ್ತ್ರಪ್ರತಿಘಾತಾಯ ವಿಹಿತಂ ಪದ್ಮಯೋನಿನಾ।।
ಮಹಾರಾಜ! ಅರ್ಜುನನಾದರೋ ಸರ್ವಾಸ್ತ್ರಗಳನ್ನೂ ಶಮನಗೊಳಿಸುವುದಕ್ಕಾಗಿ ಪದ್ಮಯೋನಿಯಿಂದ ವಿಹಿತವಾಗಿದ್ದ ಬ್ರಹ್ಮಾಸ್ತ್ರವನ್ನು ಪ್ರಕಟಿಸಿದನು.
07172033a ತತೋ ಮುಹೂರ್ತಾದಿವ ತತ್ತಮೋ ವ್ಯುಪಶಶಾಮ ಹ।
07172033c ಪ್ರವವೌ ಚಾನಿಲಃ ಶೀತೋ ದಿಶಶ್ಚ ವಿಮಲಾಭವನ್।।
ಕ್ಷಣದಲ್ಲಿಯೇ ಆ ಕತ್ತಲೆಯು ಹೋಗಿ ಶೀತಲ ಗಾಳಿಯು ಬೀಸತೊಡಗಿತು. ದಿಕ್ಕುಗಳು ನಿರ್ಮಲವಾದವು.
07172034a ತತ್ರಾದ್ಭುತಮಪಶ್ಯಾಮ ಕೃತ್ಸ್ನಾಮಕ್ಷೌಹಿಣೀಂ ಹತಾಂ।
07172034c ಅನಭಿಜ್ಞೇಯರೂಪಾಂ ಚ ಪ್ರದಗ್ಧಾಮಸ್ತ್ರಮಾಯಯಾ।।
ಅಲ್ಲಿ ಒಂದು ಅದ್ಭುತವನ್ನು ನೋಡಿದೆವು, ಅಸ್ತ್ರದ ಮಾಯೆಯಿಂದ ದಗ್ಧರಾಗಿ ಹೋಗಿ ಹತವಾಗಿದ್ದ ಎಲ್ಲ ಅಕ್ಷೌಹಿಣೀ ಸೇನೆಯನ್ನು ಗುರುತಿಸಲೂ ಸಾಧ್ಯವಾಗುತ್ತಿರಲಿಲ್ಲ.
07172035a ತತೋ ವೀರೌ ಮಹೇಷ್ವಾಸೌ ವಿಮುಕ್ತೌ ಕೇಶವಾರ್ಜುನೌ।
07172035c ಸಹಿತೌ ಸಂಪ್ರದೃಶ್ಯೇತಾಂ ನಭಸೀವ ತಮೋನುದೌ।।
ಆಗ ಕತ್ತಲೆಯನ್ನು ಹೋಗಲಾಡಿಸಲು ಉದಯಿಸುವ ಸೂರ್ಯಚಂದ್ರರಂತೆ ಮಹೇಷ್ವಾಸ ವೀರ ಕೇಶವಾರ್ಜುನರು ಒಟ್ಟಿಗೇ ವಿಮುಕ್ತರಾಗಿ ಕಾಣತೊಡಗಿದರು.
07172036a ಸಪತಾಕಧ್ವಜಹಯಃ ಸಾನುಕರ್ಷವರಾಯುಧಃ।
07172036c ಪ್ರಬಭೌ ಸ ರಥೋ ಮುಕ್ತಸ್ತಾವಕಾನಾಂ ಭಯಂಕರಃ।।
ನಿನ್ನವರಿಗೆ ಭಯಂಕರವಾಗಿದ್ದ ಅವರು ಪತಾಕ-ಧ್ವಜ-ಕುದುರೆಗಳಿಂದ ಯುಕ್ತವಾಗಿದ್ದ ರಥದಲ್ಲಿ ಶ್ರೇಷ್ಠ ಆಯುಧಗಳನ್ನು ಸೆಳೆಯುತ್ತಾ, ಅಸ್ತ್ರದಿಂದ ವಿಮುಕ್ತರಾಗಿ ಕಾಣಿಸಿಕೊಂಡರು.
07172037a ತತಃ ಕಿಲಕಿಲಾಶಬ್ದಃ ಶಂಖಭೇರೀರವೈಃ ಸಹ।
07172037c ಪಾಂಡವಾನಾಂ ಪ್ರಹೃಷ್ಟಾನಾಂ ಕ್ಷಣೇನ ಸಮಜಾಯತ।।
ಆಗ ತಕ್ಷಣವೇ ಪ್ರಹೃಷ್ಟ ಪಾಂಡವರ ಕಡೆಯಲ್ಲಿ ಕಿಲಕಿಲ ಶಬ್ಧವೂ ಶಂಖಭೇರಿಗಳ ನಿನಾದವೂ ಕೇಳಿಬಂದಿತು.
07172038a ಹತಾವಿತಿ ತಯೋರಾಸೀತ್ಸೇನಯೋರುಭಯೋರ್ಮತಿಃ।
07172038c ತರಸಾಭ್ಯಾಗತೌ ದೃಷ್ಟ್ವಾ ವಿಮುಕ್ತೌ ಕೇಶವಾರ್ಜುನೌ।।
07172039a ತಾವಕ್ಷತೌ ಪ್ರಮುದಿತೌ ದಧ್ಮತುರ್ವಾರಿಜೋತ್ತಮೌ।
07172039c ದೃಷ್ಟ್ವಾ ಪ್ರಮುದಿತಾನ್ಪಾರ್ಥಾಂಸ್ತ್ವದೀಯಾ ವ್ಯಥಿತಾಭವನ್।।
ಅವರಿಬ್ಬರೂ ಹತರಾದರೆಂದೇ ಎರಡು ಸೇನೆಗಳು ತಿಳಿದುಕೊಂಡಿದ್ದವು. ಆದರೆ ಸ್ವಲ್ಪವೂ ಗಾಯಗೊಳ್ಳದೇ ವಿಮುಕ್ತರಾಗಿ ಪ್ರಮುದಿತರಾಗಿ ಉತ್ತಮ ಶಂಖಗಳನ್ನು ಊದುತ್ತಾ ಒಮ್ಮೆಲೇ ಕಾಣಿಸಿಕೊಂಡ ಕೇಶವಾರ್ಜುನರಿಬ್ಬರನ್ನೂ ನೋಡಿ ಪಾರ್ಥರು ಮುದಿತರಾದರು ಮತ್ತು ನಿನ್ನವರು ವ್ಯಥಿತರಾದರು.
07172040a ವಿಮುಕ್ತೌ ಚ ಮಹಾತ್ಮಾನೌ ದೃಷ್ಟ್ವಾ ದ್ರೌಣಿಃ ಸುದುಃಖಿತಃ।
07172040c ಮುಹೂರ್ತಂ ಚಿಂತಯಾಮಾಸ ಕಿಂ ತ್ವೇತದಿತಿ ಮಾರಿಷ।।
ಮಾರಿಷ! ವಿಮುಕ್ತರಾದ ಅವರಿಬ್ಬರು ಮಹಾತ್ಮರನ್ನೂ ಕಂಡು ದ್ರೌಣಿಯು ತುಂಬಾ ದುಃಖಿತನಾಗಿ ಇದೇನೆಂದು ಮುಹೂರ್ತಕಾಲ ಚಿಂತಿಸತೊಡಗಿದನು.
07172041a ಚಿಂತಯಿತ್ವಾ ತು ರಾಜೇಂದ್ರ ಧ್ಯಾನಶೋಕಪರಾಯಣಃ।
07172041c ನಿಃಶ್ವಸನ್ದೀರ್ಘಮುಷ್ಣಂ ಚ ವಿಮನಾಶ್ಚಾಭವತ್ತದಾ।।
ರಾಜೇಂದ್ರ! ಧ್ಯಾನಶೋಕಪರಾಯಣನಾದ ಅವನು ಚಿಂತಿಸುತ್ತಾ ದೀರ್ಘ ಬಿಸಿ ನಿಟ್ಟುಸಿರು ಬಿಡುತ್ತಾ ವಿಮನಸ್ಕನಾದನು.
07172042a ತತೋ ದ್ರೌಣಿರ್ಧನುರ್ನ್ಯಸ್ಯ ರಥಾತ್ಪ್ರಸ್ಕಂದ್ಯ ವೇಗಿತಃ।
07172042c ಧಿಗ್ಧಿಕ್ಸರ್ವಮಿದಂ ಮಿಥ್ಯೇತ್ಯುಕ್ತ್ವಾ ಸಂಪ್ರಾದ್ರವದ್ರಣಾತ್।।
ಆಗ ದ್ರೌಣಿಯು ಧನುಸ್ಸನ್ನು ಕೆಳಗಿಟ್ಟು ರಥದಿಂದ ಕೆಳಕ್ಕೆ ಹಾರಿ “ಇವೆಲ್ಲವೂ ಸುಳ್ಳು! ಧಿಕ್ಕಾರ! ಧಿಕ್ಕಾರ!” ಎಂದು ಹೇಳುತ್ತಾ ರಣದಿಂದ ವೇಗವಾಗಿ ಓಡಿಹೋದನು.
07172043a ತತಃ ಸ್ನಿಗ್ಧಾಂಬುದಾಭಾಸಂ ವೇದವ್ಯಾಸಮಕಲ್ಮಷಂ।
07172043c ಆವಾಸಂ ಚ ಸರಸ್ವತ್ಯಾಃ ಸ ವೈ ವ್ಯಾಸಂ ದದರ್ಶ ಹ।।
ಆಗ ದಟ್ಟ ಕಾಲಮೇಘದಂತೆ ಕಾಣುತ್ತಿದ್ದ ಅಕಲ್ಮಷ ಸರಸ್ವತೀ ತೀರದಲ್ಲಿ ವಾಸಿಸುತ್ತಿದ್ದ ವೇದಗಳನ್ನು ವಿಂಗಡಿಸಿದ ವ್ಯಾಸನನ್ನು ಕಂಡನು.
07172044a ತಂ ದ್ರೌಣಿರಗ್ರತೋ ದೃಷ್ಟ್ವಾ ಸ್ಥಿತಂ ಕುರುಕುಲೋದ್ವಹ।
07172044c ಸನ್ನಕಂಠೋಽಬ್ರವೀದ್ವಾಕ್ಯಮಭಿವಾದ್ಯ ಸುದೀನವತ್।।
ಕುರುಕುಲೋದ್ಧಹ! ತನ್ನ ಮುಂದೆ ನಿಂತಿರುವ ಅವನನ್ನು ನೋಡಿ ದ್ರೌಣಿಯು ದೀನನಾಗಿ ನಮಸ್ಕರಿಸಿ ಗದ್ಗದ ಧ್ವನಿಯಲ್ಲಿ ಈ ಮಾತನ್ನಾಡಿದನು:
07172045a ಭೋ ಭೋ ಮಾಯಾ ಯದೃಚ್ಚಾ ವಾ ನ ವಿದ್ಮಃ ಕಿಮಿದಂ ಭವೇತ್।
07172045c ಅಸ್ತ್ರಂ ತ್ವಿದಂ ಕಥಂ ಮಿಥ್ಯಾ ಮಮ ಕಶ್ಚ ವ್ಯತಿಕ್ರಮಃ।।
“ಭೋ! ಭೋ! ಇದು ಮಾಯೆಯೋ ದೈವೇಚ್ಛೆಯೋ ಏನೆಂದು ಅರ್ಥವಾಗುತ್ತಿಲ್ಲ. ಈ ಅಸ್ತ್ರವು ಹೇಗೆ ಈ ರೀತಿಯಲ್ಲಿ ಸುಳ್ಳಾಯಿತು? ಇದರಲ್ಲಿ ನನ್ನದೇನಾದರೂ ದೋಷವಿದೆಯೇ?
07172046a ಅಧರೋತ್ತರಮೇತದ್ವಾ ಲೋಕಾನಾಂ ವಾ ಪರಾಭವಃ।
07172046c ಯದಿಮೌ ಜೀವತಃ ಕೃಷ್ಣೌ ಕಾಲೋ ಹಿ ದುರತಿಕ್ರಮಃ।।
ಇದರ ಪ್ರಭಾವವು ತಲೆಕೆಳಗಾಯಿತೇ? ಲೋಕಗಳ ಪರಾಭವವೆಂದು ಸಿದ್ಧವಾಗಿದೆಯೇ? ಈ ಇಬ್ಬರು ಕೃಷ್ಣರೂ ಜೀವಿಸಿದ್ದಾರೆಂದರೆ ಕಾಲವನ್ನು ಅತಿಕ್ರಮಿಸಲು ಸಾಧ್ಯವಿಲ್ಲವೆನಿಸುತ್ತಿದೆ.
07172047a ನಾಸುರಾಮರಗಂಧರ್ವಾ ನ ಪಿಶಾಚಾ ನ ರಾಕ್ಷಸಾಃ।
07172047c ನ ಸರ್ಪಯಕ್ಷಪತಗಾ ನ ಮನುಷ್ಯಾಃ ಕಥಂ ಚನ।।
07172048a ಉತ್ಸಹಂತೇಽನ್ಯಥಾ ಕರ್ತುಮೇತದಸ್ತ್ರಂ ಮಯೇರಿತಂ।
07172048c ತದಿದಂ ಕೇವಲಂ ಹತ್ವಾ ಯುಕ್ತಾಮಕ್ಷೌಹಿಣೀಂ ಜ್ವಲತ್।।
ನಾನು ಪ್ರಯೋಗಿಸಿದ ಈ ಅಸ್ತ್ರವನ್ನು ಅಸುರ-ಅಮರ-ಗಂಧರ್ವ-ಪಿಶಾಚ-ರಾಕ್ಷಸರಾಗಲೀ, ಸರ್ಪ-ಯಕ್ಷ-ಪಕ್ಷಿಗಳಾಗಲೀ ಮತ್ತು ಮನುಷ್ಯರಾಗಲೀ ಎಂದೂ ಅಸಫಲಗೊಳಿಸಲು ಸಮರ್ಥರಿಲ್ಲ. ಹಾಗಿರುವಾಗ ಅದು ಒಂದು ಅಕ್ಷೌಹಿಣೀ ಸೇನೆಯನ್ನು ಮಾತ್ರ ದಹಿಸಿ ಉಪಶಮನಗೊಂಡಿತು.
07172049a ಕೇನೇಮೌ ಮರ್ತ್ಯಧರ್ಮಾಣೌ ನಾವಧೀತ್ಕೇಶವಾರ್ಜುನೌ।
07172049c ಏತತ್ಪ್ರಬ್ರೂಹಿ ಭಗವನ್ಮಯಾ ಪೃಷ್ಟೋ ಯಥಾತಥಂ।।
ಆದರೂ ಇದು ಮರ್ತ್ಯರ ಧರ್ಮವನ್ನು ಹೊಂದಿರುವ ಕೇಶವಾರ್ಜುನರನ್ನು ಏಕೆ ವಧಿಸಲಿಲ್ಲ? ಭಗವನ್! ನಾನು ಕೇಳುವ ಈ ಪ್ರಶ್ನೆಗೆ ಯಥಾವತ್ತಾಗಿ ಉತ್ತರಿಸಿರಿ!”
07172050 ವ್ಯಾಸ ಉವಾಚ।
07172050a ಮಹಾಂತಮೇತಮರ್ಥಂ ಮಾಂ ಯಂ ತ್ವಂ ಪೃಚ್ಚಸಿ ವಿಸ್ಮಯಾತ್।
07172050c ತತ್ಪ್ರವಕ್ಷ್ಯಾಮಿ ತೇ ಸರ್ವಂ ಸಮಾಧಾಯ ಮನಃ ಶೃಣು।।
ವ್ಯಾಸನು ಹೇಳಿದನು: “ವಿಸ್ಮಯದಿಂದ ನೀನು ಕೇಳುವ ಈ ಮಹಾಅರ್ಥವೆಲ್ಲವನ್ನೂ ನಾನು ನಿನಗೆ ಹೇಳುತ್ತೇನೆ. ಮನಸ್ಸನ್ನು ಸಮಾಧಾನಗೊಳಿಸಿಕೊಂಡು ಕೇಳು!
07172051a ಯೋಽಸೌ ನಾರಾಯಣೋ ನಾಮ ಪೂರ್ವೇಷಾಮಪಿ ಪೂರ್ವಜಃ।
07172051c ಅಜಾಯತ ಚ ಕಾರ್ಯಾರ್ಥಂ ಪುತ್ರೋ ಧರ್ಮಸ್ಯ ವಿಶ್ವಕೃತ್।।
ನಮ್ಮ ಪೂರ್ವಜರಿಗೂ ಪೂರ್ವಜನಾದ, ವಿಶ್ವಕ್ಕೇ ಕಾರಣನಾದ ನಾರಾಯಣನೆಂಬ ಹೆಸರಿನ ಭಗವಂತನು ವಿಶೇಷಕಾರ್ಯಾರ್ಥವಾಗಿ ಒಮ್ಮೆ ಧರ್ಮನ ಪುತ್ರನಾಗಿ ಜನಿಸಿದನು.
07172052a ಸ ತಪಸ್ತೀವ್ರಮಾತಸ್ಥೇ ಮೈನಾಕಂ ಗಿರಿಮಾಸ್ಥಿತಃ।
07172052c ಊರ್ಧ್ವಬಾಹುರ್ಮಹಾತೇಜಾ ಜ್ವಲನಾದಿತ್ಯಸನ್ನಿಭಃ।।
ಪ್ರಜ್ವಲಿಸುತ್ತಿರುವ ಸೂರ್ಯನ ಕಾಂತಿಯನ್ನು ಹೊಂದಿದ್ದ ಆ ಮಹಾತೇಜಸ್ವಿಯು ಮೈನಾಕ ಪರ್ವತದಲ್ಲಿ ನಿಂತು ಬಾಹುಗಳನ್ನು ಮೇಲೆತ್ತಿ ತೀವ್ರ ತಪಸ್ಸಿನಲ್ಲಿ ತೊಡಗಿದನು.
07172053a ಷಷ್ಟಿಂ ವರ್ಷಸಹಸ್ರಾಣಿ ತಾವಂತ್ಯೇವ ಶತಾನಿ ಚ।
07172053c ಅಶೋಷಯತ್ತದಾತ್ಮಾನಂ ವಾಯುಭಕ್ಷೋಽಂಬುಜೇಕ್ಷಣಃ।।
ಆ ಅಂಬುಜಾಕ್ಷನು ಅರವತ್ತು ಸಾವಿರ ವರ್ಷಗಳ ಪರ್ಯಂತ ವಾಯುವನ್ನೇ ಸೇವಿಸುತ್ತಾ ತನ್ನ ಶರೀರವನ್ನು ಕೃಶಗೊಳಿಸಿದನು.
07172054a ಅಥಾಪರಂ ತಪಸ್ತಪ್ತ್ವಾ ದ್ವಿಸ್ತತೋಽನ್ಯತ್ಪುನರ್ಮಹತ್।
07172054c ದ್ಯಾವಾಪೃಥಿವ್ಯೋರ್ವಿವರಂ ತೇಜಸಾ ಸಮಪೂರಯತ್।।
ಅದಕ್ಕೂ ದ್ವಿಗುಣಕಾಲ ಪುನಃ ಮಹಾತಪಸ್ಸನ್ನಾಚರಿಸಿ ಅವನು ತನ್ನ ತೇಜಸ್ಸಿನ ಅಗ್ನಿಯಿಂದ ಭೂಮಿ ಆಕಾಶಗಳ ಮಧ್ಯಭಾಗವನ್ನು ತುಂಬಿಸಿದನು.
07172055a ಸ ತೇನ ತಪಸಾ ತಾತ ಬ್ರಹ್ಮಭೂತೋ ಯದಾಭವತ್।
07172055c ತತೋ ವಿಶ್ವೇಶ್ವರಂ ಯೋನಿಂ ವಿಶ್ವಸ್ಯ ಜಗತಃ ಪತಿಂ।।
07172056a ದದರ್ಶ ಭೃಶದುರ್ದರ್ಶಂ ಸರ್ವದೇವೈರಪೀಶ್ವರಂ।
07172056c ಅಣೀಯಸಾಮಣೀಯಾಂಸಂ ಬೃಹದ್ಭ್ಯಶ್ಚ ಬೃಹತ್ತರಂ।।
ಮಗೂ! ಅವನು ಹಾಗೆ ತಪಸ್ಸಿನಿಂದ ಬ್ರಹ್ಮಭೂತನಾಗಿರಲು ವಿಶ್ವದ ಯೋನಿ, ಜಗತ್ತಿನ ಒಡೆಯ, ಅತಿ ದುರ್ಧರ್ಶ, ಸರ್ವದೇವತೆಗಳಿಗೂ ಈಶ್ವರ, ಅಣುಗಳಿಗೂ ಅಣು, ದೊಡ್ಡವುಗಳಿಗೂ ದೊಡ್ಡವನಾದ ವಿಶ್ವೇಶ್ವರನ್ನು ಕಂಡನು.
07172057a ರುದ್ರಮೀಶಾನಂ ಋಷಭಂ ಚೇಕಿತಾನಮಜಂ ಪರಂ।
07172057c ಗಚ್ಚತಸ್ತಿಷ್ಠತೋ ವಾಪಿ ಸರ್ವಭೂತಹೃದಿ ಸ್ಥಿತಂ।।
07172058a ದುರ್ವಾರಣಂ ದುರ್ದೃಶಂ ತಿಗ್ಮಮನ್ಯುಂ ಮಹಾತ್ಮಾನಂ ಸರ್ವಹರಂ ಪ್ರಚೇತಸಂ।
07172058c ದಿವ್ಯಂ ಚಾಪಮಿಷುಧೀ ಚಾದದಾನಂ ಹಿರಣ್ಯವರ್ಮಾಣಮನಂತವೀರ್ಯಂ।।
07172059a ಪಿನಾಕಿನಂ ವಜ್ರಿಣಂ ದೀಪ್ತಶೂಲಂ ಪರಶ್ವಧಿಂ ಗದಿನಂ ಸ್ವಾಯತಾಸಿಂ।
07172059c ಸುಭ್ರುಂ ಜಟಾಮಂಡಲಚಂದ್ರಮೌಲಿಂ ವ್ಯಾಘ್ರಾಜಿನಂ ಪರಿಘಂ ದಂಡಪಾಣಿಂ।।
07172060a ಶುಭಾಂಗದಂ ನಾಗಯಜ್ಞೋಪವೀತಿಂ ವಿಶ್ವೈರ್ಗಣೈಃ ಶೋಭಿತಂ ಭೂತಸಂಘೈಃ।
07172060c ಏಕೀಭೂತಂ ತಪಸಾಂ ಸನ್ನಿಧಾನಂ ವಯೋತಿಗೈಃ ಸುಷ್ಟುತಮಿಷ್ಟವಾಗ್ಭಿಃ।।
07172061a ಜಲಂ ದಿವಂ ಖಂ ಕ್ಷಿತಿಂ ಚಂದ್ರಸೂರ್ಯೌ ತಥಾ ವಾಯ್ವಗ್ನೀ ಪ್ರತಿಮಾನಂ ಜಗಚ್ಚ।
07172061c ನಾಲಂ ದ್ರಷ್ಟುಂ ಯಮಜಂ ಭಿನ್ನವೃತ್ತಾ ಬ್ರಹ್ಮದ್ವಿಷಘ್ನಮಮೃತಸ್ಯ ಯೋನಿಂ।।
07172062a ಯಂ ಪಶ್ಯಂತಿ ಬ್ರಾಹ್ಮಣಾಃ ಸಾಧುವೃತ್ತಾಃ ಕ್ಷೀಣೇ ಪಾಪೇ ಮನಸಾ ಯೇ ವಿಶೋಕಾಃ।
07172062c ಸ ತನ್ನಿಷ್ಠಸ್ತಪಸಾ ಧರ್ಮಮೀಡ್ಯಂ ತದ್ಭಕ್ತ್ಯಾ ವೈ ವಿಶ್ವರೂಪಂ ದದರ್ಶ।
ರುದ್ರ, ಈಶಾನ, ಋಷಭ, ಚೇಕಿತಾನ, ಅಜ, ಪರಮ, ಅಲ್ಲಿನಿಂತಿದ್ದರೂ ಸರ್ವಭೂತಗಳ ಹೃದಯಗಳಲ್ಲಿ ಸ್ಥಿತನಾಗಿರುವ, ದುರ್ವಾರಣ, ದುರ್ದೃಶ, ತಿಗ್ಮಮನ್ಯು, ಮಹಾತ್ಮ, ಸರ್ವಹರ, ಪ್ರಚೇತಸ, ದಿವ್ಯ ಚಾಪಬಾಣಗಳನ್ನು ಹಿಡಿದಿರುವ, ಬಂಗಾರದ ಕವಚವನ್ನು ಧರಿಸಿದ್ದ, ಅನಂತವೀರ್ಯ, ಪಿನಾಕ-ವಜ್ರ-ಉರಿಯುತ್ತಿರುವ ಶೂಲ-ಪರಶು-ಗದೆ ಮತ್ತು ಖಡ್ಗಗಳನ್ನು ಧರಿಸಿದ್ದ, ಸುಂದರ ಹುಬ್ಬುಗಳುಳ್ಳ, ಜಟಾಮಂಡಲ, ಚಂದ್ರಮೌಳಿ, ವ್ಯಾಘ್ರಾಜಿನ, ಪರಿಘ-ದಂಡಗಳನ್ನು ಕೈಗಳಲ್ಲಿ ಹಿಡಿದಿದ್ದ, ಶುಭ ಅಂಗದವನ್ನು ಧರಿಸಿದ್ದ, ನಾಗಯಜ್ಞೋಪವೀತ, ವಿಶ್ವೇದೇವರ ಗಣಗಳಿಂದಲೂ ಭೂತಗಣಗಳಿಂದಲೂ ಶೋಭಿತ, ತಪಸ್ವಿಗಳಿಗೆ ಒಬ್ಬನೇ ಸನ್ನಿಧಾನ, ವೃದ್ಧರಿಂದ ಪ್ರಿಯವಾಗಿ ಸ್ತುತಿಸಲ್ಪಡುವ, ನೀರು-ನಾಕ-ಆಕಾಶ-ಭೂಮಿ-ಚಂದ್ರ-ಸೂರ್ಯ ಹಾಗೆಯೇ ಜಗತ್ತು-ವಾಯು-ಅಗ್ನಿಗಳನ್ನೂ ಮೀರಿದ, ಬ್ರಹ್ಮದ್ವೇಷಿಗಳ ವಿನಾಶಕ, ಅಮೃತತ್ವಕ್ಕೆ ಕಾರಣ, ದುರಾಚಾರಿಗಳಿಗೆ ಕಾಣಿಸದ, ಸಾಧುವೃತ್ತರಾದ ಬ್ರಾಹ್ಮಣರು ಪಾಪವನ್ನು ಕಳೆದುಕೊಂಡು ವಿಶೋಕ ಮನಸ್ಸಿನಲ್ಲಿ ಕಾಣಬಲ್ಲ, ಆ ಧರ್ಮ ಪರಮೇಶ್ವರ ವಿಶ್ವರೂಪನನ್ನು ತನ್ನ ಭಕ್ತಿಯಿಂದ ಅವನು ನೋಡಿದನು.
07172062e ದೃಷ್ಟ್ವಾ ಚೈನಂ ವಾಮ್ಮನೋಬುದ್ಧಿದೇಹೈಃ ಸಂಹೃಷ್ಟಾತ್ಮಾ ಮುಮುದೇ ದೇವದೇವಂ।।
ಆ ದೇವದೇವನನ್ನು ನೋಡಿ ಸಂಹೃಷ್ಟಾತ್ಮನಾದ ಅವನು ತನ್ನ ವಾಕ್-ಮನೋ-ಬುದ್ಧಿ-ದೇಹಗಳಿಂದ ಮುದಿತನಾದನು.
07172063a ಅಕ್ಷಮಾಲಾಪರಿಕ್ಷಿಪ್ತಂ ಜ್ಯೋತಿಷಾಂ ಪರಮಂ ನಿಧಿಂ।
07172063c ತತೋ ನಾರಾಯಣೋ ದೃಷ್ಟ್ವಾ ವವಂದೇ ವಿಶ್ವಸಂಭವಂ।।
ರುದ್ರಾಕ್ಷಮಾಲೆಗಳಿಂದ ವಿಭೂಷಿತ ಬೆಳಕಿನ ಆ ಪರಮನಿಧಿಯನ್ನು ಕಂಡು ನಾರಾಯಣನು ಆ ವಿಶ್ವಸಂಭವನಿಗೆ ನಮಸ್ಕರಿಸಿದನು.
07172064a ವರದಂ ಪೃಥುಚಾರ್ವಂಗ್ಯಾ ಪಾರ್ವತ್ಯಾ ಸಹಿತಂ ಪ್ರಭುಂ।
07172064c ಅಜಮೀಶಾನಮವ್ಯಗ್ರಂ ಕಾರಣಾತ್ಮಾನಮಚ್ಯುತಂ।।
07172065a ಅಭಿವಾದ್ಯಾಥ ರುದ್ರಾಯ ಸದ್ಯೋಽಂಧಕನಿಪಾತಿನೇ।
07172065c ಪದ್ಮಾಕ್ಷಸ್ತಂ ವಿರೂಪಾಕ್ಷಮಭಿತುಷ್ಟಾವ ಭಕ್ತಿಮಾನ್।।
ಹೃಷ್ಟಪುಷ್ಟ ಪಾರ್ವತಿಯ ಜೊಗೆತಿದ್ದ ವರದ ಪ್ರಭು ಅಜ ಈಶಾನ ಅವ್ಯಗ್ರ ತನಗೆ ತಾನೇ ಕಾರಣ ಅಚ್ಯುತ ಮತ್ತು ಅಂಧಕನನ್ನು ಸಂಹರಿಸಿದ ರುದ್ರನಿಗೆ ನಮಸ್ಕರಿಸಿ ಪದ್ಮಾಕ್ಷ ವಿರೂಪಾಕ್ಷನನ್ನು ಭಕ್ತಿಯಿಂದ ಸ್ತುತಿಸಿದನು:
07172066a ತ್ವತ್ಸಂಭೂತಾ ಭೂತಕೃತೋ ವರೇಣ್ಯ ಗೋಪ್ತಾರೋಽದ್ಯ ಭುವನಂ ಪೂರ್ವದೇವಾಃ।
07172066c ಆವಿಶ್ಯೇಮಾಂ ಧರಣೀಂ ಯೇಽಭ್ಯರಕ್ಷನ್ ಪುರಾ ಪುರಾಣಾಂ ತವ ದೇವ ಸೃಷ್ಟಿಂ।।
“ಆದಿದೇವ! ದೇವ! ಭೂತಕೃತ! ವರೇಣ್ಯ! ಇಂದು ಈ ಭುವನವನ್ನು ರಕ್ಷಿಸುವ ಪೂರ್ವದೇವರು ನಿನ್ನಿಂದಲೇ ಹುಟ್ಟಿದರು. ಈ ಧರಣಿಯನ್ನು ರಕ್ಷಿಸುವ ಪುರಾಣರೂ ಕೂಡ ಹಿಂದೆ ನಿನ್ನಿಂದಲೇ ಸೃಷ್ಟಿಸಲ್ಪಟ್ಟರು.
07172067a ಸುರಾಸುರಾನ್ನಾಗರಕ್ಷಃಪಿಶಾಚಾನ್ ನರಾನ್ಸುಪರ್ಣಾನಥ ಗಂಧರ್ವಯಕ್ಷಾನ್।
07172067c ಪೃಥಗ್ವಿಧಾನ್ಭೂತಸಂಘಾಂಶ್ಚ ವಿಶ್ವಾಂಸ್ ತ್ವತ್ಸಂಭೂತಾನ್ವಿದ್ಮ ಸರ್ವಾಂಸ್ತಥೈವ।
ಸುರ-ಅಸುರ-ನಾಗ-ರಾಕ್ಷಸ-ಪಿಶಾಚರು, ನರರು, ಸುಪರ್ಣರು ಮತ್ತು ಗಂಧರ್ವ-ಯಕ್ಷರು, ವಿಶ್ವದಲ್ಲಿರುವ ಪ್ರತ್ಯೇಕ ಭೂತಸಂಘಗಳು ನಿನ್ನಿಂದಲೇ ಹುಟ್ಟಿರುವವು ಎಂದು ಸರ್ವರಿಗೂ ತಿಳಿದಿದೆ.
07172067e ಐಂದ್ರಂ ಯಾಮ್ಯಂ ವಾರುಣಂ ವೈತ್ತಪಾಲ್ಯಂ ಮೈತ್ರಂ ತ್ವಾಷ್ಟ್ರಂ ಕರ್ಮ ಸೌಮ್ಯಂ ಚ ತುಭ್ಯಂ।।
07172068a ರೂಪಂ ಜ್ಯೋತಿಃ ಶಬ್ದ ಆಕಾಶವಾಯುಃ ಸ್ಪರ್ಶಃ ಸ್ವಾದ್ಯಂ ಸಲಿಲಂ ಗಂಧ ಉರ್ವೀ।
07172068c ಕಾಮೋ ಬ್ರಹ್ಮಾ ಬ್ರಹ್ಮ ಚ ಬ್ರಾಹ್ಮಣಾಶ್ಚ ತ್ವತ್ಸಂಭೂತಂ ಸ್ಥಾಸ್ನು ಚರಿಷ್ಣು ಚೇದಂ।।
ಆದುದರಿಂದ ಇಂದ್ರ, ಯಮ, ವರುಣ, ಕುಬೇರ, ಮಿತ್ರ, ತ್ವಷ್ಟ ಮತ್ತು ಚಂದ್ರರ ಕರ್ಮಗಳು ನಿನ್ನವೇ ಆಗಿವೆ. ಶಬ್ಧ-ಸ್ಪರ್ಶ-ರೂಪ-ರಸ-ಗಂಧಗಳೂ, ಆಕಾಶ-ವಾಯು-ನೀರು-ತೇಜಸ್ಸುಗಳೂ, ಭೂಮಿ, ಕಾಮ, ಬ್ರಹ್ಮ, ವೇದ, ಬ್ರಾಹ್ಮಣರೂ ಮತ್ತು ಸ್ಥಾವರ-ಜಂಗಮಗಳೂ ನಿನ್ನಿಂದಲೇ ಹುಟ್ಟಿವೆ.
07172069a ಅದ್ಭ್ಯಃ ಸ್ತೋಕಾ ಯಾಂತಿ ಯಥಾ ಪೃಥಕ್ತ್ವಂ ತಾಭಿಶ್ಚೈಕ್ಯಂ ಸಂಕ್ಷಯೇ ಯಾಂತಿ ಭೂಯಃ।
07172069c ಏವಂ ವಿದ್ವಾನ್ಪ್ರಭವಂ ಚಾಪ್ಯಯಂ ಚ ಹಿತ್ವಾ ಭೂತಾನಾಂ ತತ್ರ ಸಾಯುಜ್ಯಮೇತಿ।।
ನೀರು ಪ್ರತ್ಯೇಕ ಪ್ರತ್ಯೇಕ ಆವಿಯ ತುಂತುರಾಗಿ ಹೇಗೆ ಪ್ರಳಯ ಕಾಲದಲ್ಲಿ ಪುನಃ ಒಂದಾಗಿ ನೀರೇ ಆಗುತ್ತದೆಯೋ ಹಾಗೆ ಸಕಲ ಪ್ರಾಣಿಗಳೂ ನಿನ್ನಿಂದಲೇ ಹೊರಟು ನಿನ್ನಲ್ಲಿಯೇ ಸೇರಿಕೊಳ್ಳುತ್ತವೆ ಎಂದು ತಿಳಿದ ವಿದ್ವಾಂಸನು ಸಾಯುಜ್ಯವನ್ನು ಹೊಂದುತ್ತಾನೆ.
07172070a ದಿವ್ಯಾವೃತೌ ಮಾನಸೌ ದ್ವೌ ಸುಪರ್ಣಾವ್ ಅವಾಕ್ಶಾಖಃ ಪಿಪ್ಪಲಃ ಸಪ್ತ ಗೋಪಾಃ।
07172070c ದಶಾಪ್ಯನ್ಯೇ ಯೇ ಪುರಂ ಧಾರಯಂತಿ ತ್ವಯಾ ಸೃಷ್ಟಾಸ್ತೇ ಹಿ ತೇಭ್ಯಃ ಪರಸ್ತ್ವಂ।
ದಿವ್ಯ ಸುಂದರ ರೆಕ್ಕೆಗಳುಳ್ಳ ಎರಡು ಮನಸ್ಸಿನ ಪಕ್ಷಿಗಳನ್ನು ರಕ್ಷಿಸುವ ವೇದಗಳೇ ರೆಂಬೆಗಳಾಗಿರುವ ಆ ಏಳು ಅಶ್ವತ್ಥವೃಕ್ಷಗಳಿಗೆ ಆಧಾರಭೂತಗಳಾದ ಹತ್ತು ಪುರಗಳನ್ನು ನೀನೇ ಸೃಷ್ಟಿಸಿರುವೆ. ಆದರೂ ಇವುಗಳಿಂದ ನೀನು ಬೇರೆಯಾಗಿರುವೆ!
07172070e ಭೂತಂ ಭವ್ಯಂ ಭವಿತಾ ಚಾಪ್ಯಧೃಷ್ಯಂ ತ್ವತ್ಸಂಭೂತಾ ಭುವನಾನೀಹ ವಿಶ್ವಾ।।
07172071a ಭಕ್ತಂ ಚ ಮಾಂ ಭಜಮಾನಂ ಭಜಸ್ವ ಮಾ ರೀರಿಷೋ ಮಾಮಹಿತಾಹಿತೇನ।
ಎದುರಿಸಲಸಾಧ್ಯವಾದ ಭೂತ-ವರ್ತಮಾನ-ಭವಿಷ್ಯಗಳು, ವಿಶ್ವಗಳು ಮತ್ತು ಈ ಭುವನವು ನಿನ್ನಿಂದಲೇ ಹುಟ್ಟಿರುವವು. ನಿನ್ನನ್ನು ಭಜಿಸುತ್ತಿರುವ ಈ ಭಕ್ತ ನನ್ನನ್ನು ಪರಿಪಾಲಿಸು. ಹಿತ-ಅಹಿತ ಇಚ್ಛೆಗಳಿಂದ ನನ್ನನ್ನು ಹಿಂಸಿಸಬೇಡ!
07172071c ಆತ್ಮಾನಂ ತ್ವಾಮಾತ್ಮನೋಽನನ್ಯಭಾವೋ ವಿದ್ವಾನೇವಂ ಗಚ್ಚತಿ ಬ್ರಹ್ಮ ಶುಕ್ರಂ।।
07172072a ಅಸ್ತೌಷಂ ತ್ವಾಂ ತವ ಸಮ್ಮಾನಮಿಚ್ಚನ್ ವಿಚಿನ್ವನ್ವೈ ಸವೃಷಂ ದೇವವರ್ಯ।
07172072c ಸುದುರ್ಲಭಾನ್ದೇಹಿ ವರಾನ್ಮಮೇಷ್ಟಾನ್ ಅಭಿಷ್ಟುತಃ ಪ್ರತಿಕಾರ್ಷೀಶ್ಚ ಮಾ ಮಾಂ।।
ಆತ್ಮಸ್ವರೂಪನಾದ ನಿನ್ನನ್ನು ತನಗಿಂತಲೂ ಬೇರೆಯಲ್ಲವನೆಂದು ತಿಳಿದುಕೊಂಡ ವಿಧ್ವಾಂಸನು ವಿಶುದ್ಧ ಬ್ರಹ್ಮನನ್ನು ಹೊಂದುತ್ತಾನೆ. ನಿನ್ನನ್ನು ಸಮ್ಮಾನಿಸಲಿಚ್ಛಿಸಿ ನಾನು ಸ್ತುತಿಸುತ್ತಿದ್ದೇನೆ. ದೇವವರ್ಯ! ನಿನ್ನನ್ನು ಬಹಳ ಕಾಲದಿಂದ ಅನ್ವೇಷಿಸುತ್ತಿದ್ದೆ. ನನ್ನಿಂದ ಸ್ತುತನಾದ ನೀನು ಮಾಯೆಯನ್ನು ದೂರಗೊಳಿಸಿ ನನಗೆ ಇಷ್ಟವಾದ ಬೇರೆ ಯಾರಿಂದಲೂ ಪಡೆದುಕೊಳ್ಳಲು ಅಸಾಧ್ಯ ವರವನ್ನು ದಯಪಾಲಿಸು!”
07172073a ತಸ್ಮೈ ವರಾನಚಿಂತ್ಯಾತ್ಮಾ ನೀಲಕಂಠಃ ಪಿನಾಕಧೃಕ್।
07172073c ಅರ್ಹತೇ ದೇವಮುಖ್ಯಾಯ ಪ್ರಾಯಚ್ಚದೃಷಿಸಂಸ್ತುತಃ।।
ಋಷಿಯಿಂದ ಸಂಸ್ತುತನಾದ ಅಚಿಂತ್ಯಾತ್ಮ, ನೀಲಕಂಠ, ಪಿನಾಕಧಾರಿಯು ದೇವಮುಖ್ಯನಿಗೆ ಅರ್ಹವಾದ ವರವನ್ನಿತ್ತನು.
07172074 ನೀಲಕಂಠ ಉವಾಚ।
07172074a ಮತ್ಪ್ರಸಾದಾನ್ಮನುಷ್ಯೇಷು ದೇವಗಂಧರ್ವಯೋನಿಷು।
07172074c ಅಪ್ರಮೇಯಬಲಾತ್ಮಾ ತ್ವಂ ನಾರಾಯಣ ಭವಿಷ್ಯಸಿ।।
ನೀಲಕಂಠನು ಹೇಳಿದನು: “ನಾರಾಯಣ! ನನ್ನ ಪ್ರಸಾದದಿಂದ ಮನುಷ್ಯರಲ್ಲಿ, ದೇವಗಂಧರ್ವಯೋನಿಗಳಲ್ಲಿ ನೀನು ಅಪ್ರಮೇಯ ಬಲಾನ್ವಿತನಾಗುವೆ!
07172075a ನ ಚ ತ್ವಾ ಪ್ರಸಹಿಷ್ಯಂತಿ ದೇವಾಸುರಮಹೋರಗಾಃ।
07172075c ನ ಪಿಶಾಚಾ ನ ಗಂಧರ್ವಾ ನ ನರಾ ನ ಚ ರಾಕ್ಷಸಾಃ।।
07172076a ನ ಸುಪರ್ಣಾಸ್ತಥಾ ನಾಗಾ ನ ಚ ವಿಶ್ವೇ ವಿಯೋನಿಜಾಃ।
07172076c ನ ಕಶ್ಚಿತ್ತ್ವಾಂ ಚ ದೇವೋಽಪಿ ಸಮರೇಷು ವಿಜೇಷ್ಯತಿ।।
07172077a ನ ಶಸ್ತ್ರೇಣ ನ ವಜ್ರೇಣ ನಾಗ್ನಿನಾ ನ ಚ ವಾಯುನಾ।
07172077c ನಾರ್ದ್ರೇಣ ನ ಚ ಶುಷ್ಕೇಣ ತ್ರಸೇನ ಸ್ಥಾವರೇಣ ವಾ।।
ದೇವಾಸುರರು, ಮಹೋರಗಗಳು, ಪಿಶಾಚರು, ಗಂಧರ್ವರು, ನರರು, ರಾಕ್ಷಸರು, ಪಕ್ಷಿಗಳು, ನಾಗಗಳು ಮತ್ತು ವಿಶ್ವದಲ್ಲಿಯ ಇತರ ಪಶು-ಪ್ರಾಣಿಗಳೂ ನಿನ್ನ ರಭಸವನ್ನು ತಡೆಯಲಾರರು. ನಿನ್ನನ್ನು ಸಮರದಲ್ಲಿ ಎಂದೂ ದೇವತೆಗಳು – ಶಸ್ತ್ರಗಳಿಂದಾಗಲೀ, ವಜ್ರದಿಂದಾಗಲೀ, ಅಗ್ನಿ-ವಾಯು-ವಾರುಣಾಸ್ತ್ರಗಳಿಂದಾಗಲೀ, ಒಣಗಿರುವುದರಿಂದಾಗಲೀ, ಸ್ಥಾವರ-ಜಂಗಮಗಳಿಂದಲೂ - ಜಯಿಸಲಾರರು.
07172078a ಕಶ್ಚಿತ್ತವ ರುಜಂ ಕರ್ತಾ ಮತ್ಪ್ರಸಾದಾತ್ಕಥಂ ಚನ।
07172078c ಅಪಿ ಚೇತ್ಸಮರಂ ಗತ್ವಾ ಭವಿಷ್ಯಸಿ ಮಮಾಧಿಕಃ।।
ನೀನು ಸಮರಕ್ಕೆ ಹೋಗಿ ನನ್ನನ್ನೇ ಎದುರಿಸಿದರೂ, ನನ್ನ ಪ್ರಸಾದದಿಂದ, ನನಗಿಂತ ನೀನೇ ಅಧಿಕಬಲಶಾಲಿಯಾಗಿರುವೆ!””
07172079 ವ್ಯಾಸ ಉವಾಚ।
07172079a ಏವಮೇತೇ ವರಾ ಲಬ್ಧಾಃ ಪುರಸ್ತಾದ್ವಿದ್ಧಿ ಶೌರಿಣಾ।
07172079c ಸ ಏಷ ದೇವಶ್ಚರತಿ ಮಾಯಯಾ ಮೋಹಯಂ ಜಗತ್।।
ವ್ಯಾಸನು ಹೇಳಿದನು: “ಈ ರೀತಿ ಹಿಂದೆ ಶೌರಿಯಿಂದ ಈ ವರವನ್ನು ಪಡೆದ ಇದೇ ದೇವನು ಜಗತ್ತನ್ನು ಮಾಯೆಯಿಂದ ಮೋಹಗೊಳಿಸುತ್ತಿರುವನು.
07172080a ತಸ್ಯೈವ ತಪಸಾ ಜಾತಂ ನರಂ ನಾಮ ಮಹಾಮುನಿಂ।
07172080c ತುಲ್ಯಮೇತೇನ ದೇವೇನ ತಂ ಜಾನೀಹ್ಯರ್ಜುನಂ ಸದಾ।।
ಅವನದೇ ತಪಸ್ಸಿನಿಂದ ಹುಟ್ಟಿದ ನರನೆಂಬ ಹೆಸರಿನ ಮಹಾಮುನಿಯು, ಸದಾ ಆ ದೇವನಿಗೆ ಸಮನಾಗಿರುವ ಅರ್ಜುನನು.
07172081a ತಾವೇತೌ ಪೂರ್ವದೇವಾನಾಂ ಪರಮೋಪಚಿತಾವೃಷೀ।
07172081c ಲೋಕಯಾತ್ರಾವಿಧಾನಾರ್ಥಂ ಸಂಜಾಯೇತೇ ಯುಗೇ ಯುಗೇ।।
ಇವರಿಬ್ಬರು ಋಷಿಗಳೂ ಪೂರ್ವದೇವರಿಗಿಂತಲೂ ಅಧಿಕರು. ಲೋಕಯಾತ್ರೆಯನ್ನು ಸಾಗಿಸಲು ಇವರು ಯುಗಯುಗದಲ್ಲಿ ಅವತರಿಸುತ್ತಾರೆ.
07172082a ತಥೈವ ಕರ್ಮಣಃ ಕೃತ್ಸ್ನಂ ಮಹತಸ್ತಪಸೋಽಪಿ ಚ।
07172082c ತೇಜೋಮನ್ಯುಶ್ಚ ವಿದ್ವಂಸ್ತ್ವಂ ಜಾತೋ ರೌದ್ರೋ ಮಹಾಮತೇ।।
ಮಹಾಮತೇ! ನೀನೂ ಕೂಡ ಹಾಗೆಯೇ ಎಲ್ಲ ಕರ್ಮಗಳನ್ನೂ ಮಾಡಿ, ಮಹಾ ತಪಸ್ಸನ್ನು ಗೈದು ತೇಜಸ್ಸು ಮತ್ತು ಕೋಪಗಳಲ್ಲಿ ರೌದ್ರನಾಗಿ ಜನಿಸಿರುವೆ.
07172083a ಸ ಭವಾನ್ದೇವವತ್ಪ್ರಾಜ್ಞೋ ಜ್ಞಾತ್ವಾ ಭವಮಯಂ ಜಗತ್।
07172083c ಅವಾಕರ್ಷಸ್ತ್ವಮಾತ್ಮಾನಂ ನಿಯಮೈಸ್ತತ್ಪ್ರಿಯೇಪ್ಸಯಾ।।
ದೇವತೆಯಂತೆ ನೀನು ಪ್ರಾಜ್ಞನಾಗಿ ಜಗತ್ತು ಭವಮಯವೆಂದು ತಿಳಿದು ಅವನನ್ನು ಪ್ರೀತಿಗೊಳಿಸಲು ನಿಯಮಗಳಿಂದ ನಿನ್ನನ್ನು ಕೃಶಗೊಳಿಸಿದ್ದೆ.
07172084a ಶುಭಮೌರ್ವಂ ನವಂ ಕೃತ್ವಾ ಮಹಾಪುರುಷವಿಗ್ರಹಂ।
07172084c ಈಜಿವಾಂಸ್ತ್ವಂ ಜಪೈರ್ಹೋಮೈರುಪಹಾರೈಶ್ಚ ಮಾನದ।।
ಮಾನದ! ನೀನು ಆ ಮಹಾಪುರುಷನ ಉಜ್ವಲ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹೋಮ-ಜಪ-ಉಪಹಾರಗಳಿಂದ ಆರಾಧಿಸುತ್ತಿದ್ದೆ.
07172085a ಸ ತಥಾ ಪೂಜ್ಯಮಾನಸ್ತೇ ಪೂರ್ವದೇವೋಽಪ್ಯತೂತುಷತ್।
07172085c ಪುಷ್ಕಲಾಂಶ್ಚ ವರಾನ್ಪ್ರಾದಾತ್ತವ ವಿದ್ವನ್ ಹೃದಿ ಸ್ಥಿತಾನ್।।
ಹಾಗೆ ನಿನ್ನ ಹೃದಯದಲ್ಲಿದ್ದುಕೊಂಡು ನಿನ್ನಿಂದ ತಿಳಿಯಲ್ಪಟ್ಟು ಪೂಜಿಸಲ್ಪಟ್ಟ ಆ ಪೂರ್ವದೇವನು ತೃಪ್ತನಾಗಿ ನಿನಗೆ ಪುಷ್ಕಲ ವರಗಳನ್ನು ಇತ್ತಿದ್ದನು.
07172086a ಜನ್ಮಕರ್ಮತಪೋಯೋಗಾಸ್ತಯೋಸ್ತವ ಚ ಪುಷ್ಕಲಾಃ।
07172086c ತಾಭ್ಯಾಂ ಲಿಂಗೇಽರ್ಚಿತೋ ದೇವಸ್ತ್ವಯಾರ್ಚಾಯಾಂ ಯುಗೇ ಯುಗೇ।।
ಹೀಗೆ ನಿನ್ನಲ್ಲಿ ಮತ್ತು ಅವರಲ್ಲಿ ಜನ್ಮಕರ್ಮತಪೋಯೋಗಗಳು ಸಮೃದ್ಧವಾಗಿವೆ. ಯುಗ ಯುಗದಲ್ಲಿ ಅವರು ಲಿಂಗವನ್ನು ಅರ್ಚಿಸಲು ನೀನು ಅವನ ಮೂರ್ತಿಯನ್ನು ಅರ್ಚಿಸಿದೆ.
07172087a ಸರ್ವರೂಪಂ ಭವಂ ಜ್ಞಾತ್ವಾ ಲಿಂಗೇ ಯೋಽರ್ಚಯತಿ ಪ್ರಭುಂ।
07172087c ಆತ್ಮಯೋಗಾಶ್ಚ ತಸ್ಮಿನ್ವೈ ಶಾಸ್ತ್ರಯೋಗಾಶ್ಚ ಶಾಶ್ವತಾಃ।।
ಸರ್ವವೂ ಭವನ ರೂಪವೆಂದೇ ಭಾವಿಸಿ ಯಾರು ಪ್ರಭುವನ್ನು ಲಿಂಗರೂಪದಲ್ಲಿ ಅರ್ಚಿಸುತ್ತಾರೋ ಅವರಲ್ಲಿ ಆತ್ಮಯೋಗಗಳೂ, ಶಾಸ್ತ್ರಯೋಗಗಳೂ ಶಾಶ್ವತವಾಗಿ ನೆಲೆಸಿರುತ್ತವೆ.
07172088a ಏವಂ ದೇವಾ ಯಜಂತೋ ಹಿ ಸಿದ್ಧಾಶ್ಚ ಪರಮರ್ಷಯಃ।
07172088c ಪ್ರಾರ್ಥಯಂತಿ ಪರಂ ಲೋಕೇ ಸ್ಥಾನಮೇವ ಚ ಶಾಶ್ವತಂ।।
ಈ ರೀತಿಯಾಗಿ ದೇವತೆಗಳೂ, ಸಿದ್ಧರೂ, ಪರಮ ಋಷಿಗಳೂ ಶಾಶ್ವತವಾದ ಪರಮ ಲೋಕಗಳಲ್ಲಿ ಸ್ಥಾನಕ್ಕೋಸ್ಕರವಾಗಿ ಅವನನ್ನು ಪ್ರಾರ್ಥಿಸುತ್ತಾರೆ.
07172089a ಸ ಏಷ ರುದ್ರಭಕ್ತಶ್ಚ ಕೇಶವೋ ರುದ್ರಸಂಭವಃ।
07172089c ಕೃಷ್ಣ ಏವ ಹಿ ಯಷ್ಟವ್ಯೋ ಯಜ್ಞೈಶ್ಚೈಷ ಸನಾತನಃ।।
ಕೇಶವನು ರುದ್ರಭಕ್ತನು ಮತ್ತು ರುದ್ರಸಂಭವನು. ಸನಾತನ ಕೃಷ್ಣನನ್ನೇ ಯಜ್ಞಗಳಲ್ಲಿ ಯಾಜಿಸಬೇಕು.
07172090a ಸರ್ವಭೂತಭವಂ ಜ್ಞಾತ್ವಾ ಲಿಂಗೇಽರ್ಚಯತಿ ಯಃ ಪ್ರಭುಂ।
07172090c ತಸ್ಮಿನ್ನಭ್ಯಧಿಕಾಂ ಪ್ರೀತಿಂ ಕರೋತಿ ವೃಷಭಧ್ವಜಃ।।
ಸರ್ವಭೂತಗಳೂ ಭವನೆಂದೇ ತಿಳಿದು ಯಾರು ಪ್ರಭುವನ್ನು ಲಿಂಗರೂಪದಲ್ಲಿ ಅರ್ಚಿಸುತ್ತಾರೋ ಅವರನ್ನು ವೃಷಭಧ್ವಜನು ಅಧಿಕವಾಗಿ ಪ್ರೀತಿಸುತ್ತಾನೆ.””
07172091 ಸಂಜಯ ಉವಾಚ।
07172091a ತಸ್ಯ ತದ್ವಚನಂ ಶ್ರುತ್ವಾ ದ್ರೋಣಪುತ್ರೋ ಮಹಾರಥಃ।
07172091c ನಮಶ್ಚಕಾರ ರುದ್ರಾಯ ಬಹು ಮೇನೇ ಚ ಕೇಶವಂ।।
ಸಂಜಯನು ಹೇಳಿದನು: “ಅವನ ಆ ಮಾತನ್ನು ಕೇಳಿ ಮಹಾರಥ ದ್ರೋಣಪುತ್ರನು ರುದ್ರನಿಗೆ ನಮಸ್ಕರಿಸಿದನು ಮತ್ತು ಕೇಶವನು ಅಧಿಕನೆಂದು ಒಪ್ಪಿಕೊಂಡನು.
07172092a ಹೃಷ್ಟಲೋಮಾ ಚ ವಶ್ಯಾತ್ಮಾ ನಮಸ್ಕೃತ್ಯ ಮಹರ್ಷಯೇ।
07172092c ವರೂಥಿನೀಮಭಿಪ್ರೇತ್ಯ ಅವಹಾರಮಕಾರಯತ್।।
ರೋಮಾಂಚಿತನಾಗಿ ಮಹರ್ಷಿಗೆ ನಮಸ್ಕರಿಸಿ ಜಿತೇಂದ್ರಿಯ ಅಶ್ವತ್ಥಾಮನು ಸೇನೆಯನ್ನು ನೋಡಿ ಹಿಂದಿರುಗುವಂತೆ ಸೂಚಿಸಿದನು.
07172093a ತತಃ ಪ್ರತ್ಯವಹಾರೋಽಭೂತ್ಪಾಂಡವಾನಾಂ ವಿಶಾಂ ಪತೇ।
07172093c ಕೌರವಾಣಾಂ ಚ ದೀನಾನಾಂ ದ್ರೋಣೇ ಯುಧಿ ನಿಪಾತಿತೇ।।
ವಿಶಾಂಪತೇ! ಆಗ ಯುದ್ಧದಲ್ಲಿ ದ್ರೋಣನು ಕೆಳಗುರುಳಲು ಪಾಂಡವರ ಮತ್ತು ದೀನ ಕೌರವರ ಸೇನೆಗಳು ತಮ್ಮ ತಮ್ಮ ಡೇರೆಗಳಿಗೆ ಹಿಂದಿರುಗಿದವು.
07172094a ಯುದ್ಧಂ ಕೃತ್ವಾ ದಿನಾನ್ಪಂಚ ದ್ರೋಣೋ ಹತ್ವಾ ವರೂಥಿನೀಂ।
07172094c ಬ್ರಹ್ಮಲೋಕಂ ಗತೋ ರಾಜನ್ಬ್ರಾಹ್ಮಣೋ ವೇದಪಾರಗಃ।।
ರಾಜನ್! ವೇದಪಾರಗ ಬ್ರಾಹ್ಮಣ ದ್ರೋಣನು ಐದು ದಿನಗಳು ಯುದ್ಧಮಾಡಿ ಸೇನೆಗಳನ್ನು ಸಂಹರಿಸಿ ಬ್ರಹ್ಮಲೋಕಕ್ಕೆ ಹೋದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣಪರ್ವಣಿ ನಾರಾಯಣಾಸ್ತ್ರಮೋಕ್ಷಣಪರ್ವಣಿ ವ್ಯಾಸವಾಕ್ಯೇ ಶತರುದ್ರೀಯೇ ದ್ವಿಸಪ್ತತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣಪರ್ವದಲ್ಲಿ ನಾರಾಯಣಾಸ್ತ್ರಮೋಕ್ಷಣಪರ್ವದಲ್ಲಿ ವ್ಯಾಸವಾಕ್ಯೇ ಶತರುದ್ರೀಯ ಎನ್ನುವ ನೂರಾಎಪ್ಪತ್ತೆರಡನೇ ಅಧ್ಯಾಯವು.